Sunday, January 23, 2011

ಸಾಯಿಬಾಬಾರವರ ಪಾದಧೂಳಿಯಿಂದ ಪವಿತ್ರವಾದ ಸ್ಥಳ - ನೀಮಗಾವ್ - ಕೃಪೆ: ಸಾಯಿಅಮೃತಧಾರಾ.ಕಾಂ

ಸಾಯಿಬಾಬಾರವರು ತಮ್ಮ ಜೀವಿತ ಕಾಲದಲ್ಲಿ  ಶಿರಡಿಯಿಂದ ಕೇವಲ 3 ಕಿಲೋಮೀಟರ್ ಗಳ ದೂರವಿದ್ದ ನೀಮಗಾವ್ ಗೆ ಅನೇಕ ಬಾರಿ ಹೋಗಿ ಬರುತ್ತಿದ್ದರೆಂದು ಸಾಯಿ ಸಚ್ಚರಿತೆಯಲ್ಲಿ ಉಲ್ಲೇಖಿಸಲಾಗಿದೆ. ಅದರ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ.

ನಾನಾ ಸಾಹೇಬ್ ಡೆನ್ಗ್ಲೆಯವರ ಮನೆ:

ನಾನಾ ಸಾಹೇಬ್ ಡೆನ್ಗ್ಲೆಯವರು ಸಾಯಿಬಾಬಾರವರಿಗೆ ನಿದ್ರೆ ಮಾಡಲು ಅನುಕೂಲವಾಗುವಂತೆ ಮರದ ಹಲಿಗೆಯನ್ನು ತಂದು ಕೊಟ್ಟರು. ನಾನಾ ಸಾಹೇಬ್ ಡೆನ್ಗ್ಲೆಯವರು ಸಾಯಿಬಾಬಾರವರ ಪೂಜೆಯನ್ನು ಮಾಡಲು ಅನೇಕ ಬಾರಿ ಪ್ರಯತ್ನ ಪಟ್ಟರು. ಆದರೆ ಸಾಯಿಬಾಬಾರವರು ಅದಕ್ಕೆ ಅನುಮತಿ ನೀಡದೆ ದ್ವಾರಕಾಮಾಯಿಯಲ್ಲಿದ್ದ ಮರದ ಕಂಭಕ್ಕೆ ಪೂಜಿಸುವಂತೆ ಹೇಳಿದರು. ಈಗ ಆ ಕಂಭಕ್ಕೆ ಕೆಂಪು ಬಣ್ಣವನ್ನು ಬಳಿಯಲಾಗಿದೆ. ದಾಸಗಣುರವರು ತಮ್ಮ ಭಕ್ತ ಲೀಲಾಮೃತದ ೩೧ ನೇ ಅಧ್ಯಾಯದಲ್ಲಿ ಸಾಯಿಬಾಬಾರವರು ನೀರಿನಿಂದ ದೀಪ ಉರಿಸಿದ ಬಗ್ಗೆ ವಿವರಣೆ ನೀಡಿದ್ದಾರೆ. ಅದು ಹೀಗಿದೆ. ಒಮ್ಮೆ ಶಿರಡಿಯ ಗಾಣಿಗರು ಬಾಬಾರವರಿಗೆ ದೀಪವನ್ನು ಹಚ್ಚಲು ಎಣ್ಣೆಯನ್ನು ಕೊಡಲಿಲ್ಲ.  ಅಲ್ಲದೇ ಸಾಯಿಬಾಬಾರವರ ಹಿಂದೆಯೇ ಮಸೀದಿಗೆ ತೆರಳಿ ಬಚ್ಚಿಟ್ಟುಕೊಂಡು ಮುಂದೆ ಏನು ನಡೆಯುತ್ತದೆ ಎಂಬ ಕುತೂಹಲದಿಂದ ನೋಡುತ್ತಿದ್ದರು. ಬಾಬಾರವರು ತಲೆಯನ್ನೇ ಕೆಡಿಸಿಕೊಳ್ಳದೆ ಬರಿಯ ನೀರನ್ನೇ ಹಣತೆಯಲ್ಲಿ ಹಾಕಿದರು. ಇದನ್ನು ನೋಡಿದ ವರ್ತಕರು ಬಾಬಾರವರಿಗೆ ಹುಚ್ಚು ಹಿಡಿದಿದೆ ಎಂದು ತಿಳಿದುಕೊಂಡರು. ಆದರೆ ನಾನಾ ಸಾಹೇಬ್ ಡೆನ್ಗ್ಲೆ ಅದಕ್ಕೆ ಒಪ್ಪದೇ, "ಇವರ ಶಕ್ತಿಯನ್ನು ಶ್ರೀಹರಿ ಮಾತ್ರ ಅಳೆಯಲು ಸಾಧ್ಯ. ವಜ್ರವು ಕಸದ ರಾಶಿಯಲ್ಲಿ ಬಿದ್ದಿದ್ದರೆ ಅದನ್ನು ಕಲ್ಲು ಎಂದು ಕರೆಯಲು ಸಾಧ್ಯವೇ?" ಎಂದು ನುಡಿದರು. ಸಾಯಿಯವರು ಬರಿಯ ನೀರಿನಿಂದಲೇ ದೀಪವನ್ನು ಹಚ್ಚಿ ಇಡೀ ರಾತ್ರಿಯೆಲ್ಲ ಅವುಗಳು ಉರಿಯುವಂತೆ ಮಾಡಿದರು. ಇದನ್ನು ಕಂಡು ಆಶ್ಚರ್ಯಗೊಂಡ ನಾನಾ ಸಾಹೇಬ್ ಡೆನ್ಗ್ಲೆಯವರು ಬಾಬಾರವರ ಪಾದಪದ್ಮಗಳಿಗೆ ಶರಣಾದರು. ನಂತರ ಸಾಯಿಬಾಬಾರವರ ಅನನ್ಯ ಭಕ್ತರಾದರು. ಕೆಳಗೆ ಚಿತ್ರದಲ್ಲಿ ನೋಡುವ ಈ ನೀಮಗಾವ್ ನ ಮನೆಯಲ್ಲಿ ನಾನಾ ಸಾಹೇಬ್ ಡೆನ್ಗ್ಲೆ ಮತ್ತು ಅವರ ಸಹೋದರ ಬಾಳಾ ಸಾಹೇಬ್ ಡೆನ್ಗ್ಲೆಯವರು ವಾಸವಾಗಿದ್ದರು. ಇದು ಶಿರಡಿಯಿಂದ 3 ಕಿಲೋಮೀಟರ್ ದೂರದಲ್ಲಿ ಕೊಪರ್ಗಾವ್ ಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಸಾಯಿಬಾಬಾರವರು ಶಿರಡಿಯನ್ನು ಬಿಟ್ಟು ಹೋಗುತ್ತಿದ್ದುದು ಬಹಳ ಅಪರೂಪ. ಆದರೆ, ಕೆಲವು ದಿನ ಮಧ್ಯಾನ್ಹದ ವೇಳೆ ನೀಮಗಾವ್ ನಲ್ಲಿದ್ದ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಗೆ ಹೋಗುತ್ತಿದ್ದರು. ಬಾಳಾ ಸಾಹೇಬ್ ಡೆನ್ಗ್ಲೆ ಯವರ ತಮ್ಮನಾದ ನಾನಾ ಸಾಹೇಬ್ ಡೆನ್ಗ್ಲೆ ಯವರಿಗೆ ಎರಡನೇ ಮದುವೆಯಾದರೂ ಕೂಡ  ಮಕ್ಕಳಿರಲಿಲ್ಲ. ಸಾಯಿಬಾಬಾರವರ ಆಶೀರ್ವಾದದಿಂದ ಅವರಿಗೆ ಮಗನು ಹುಟ್ಟಿದನು. ಆ ಕ್ಷಣದಿಂದ ನಾನಾ ಸಾಹೇಬ್ ಡೆನ್ಗ್ಲೆಸಾಯಿಬಾಬಾರವರ ಅನನ್ಯ ಭಕ್ತನಾದನು. ಸಾಯಿಬಾಬಾರವರ ಈ ಲೀಲೆ ಎಲ್ಲೆಡೆ ಹಬ್ಬಿ ಸಾಯಿಬಾಬಾರವರ ಬಳಿ ಅನೇಕ ಜನರು ಹುಡುಕಿಕೊಂಡು ಬರುವಂತೆ ಆಯಿತು. ಅಷ್ಟೇ ಅಲ್ಲದೇ, ನಾನಾ ಸಾಹೇಬ್ ಚಂದೋರ್ಕರ್ ಮತ್ತು ಕೇಶವ ಚಿದಂಬರ ಮುಂತಾದವರು ಸಾಯಿಬಾಬಾರವರ ಬಳಿ ಬರುವಂತೆ ಮಾಡಿತು (ಸಾಯಿ ಸಚ್ಚರಿತ್ರೆ 5ನೇ ಅಧ್ಯಾಯ). ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆತನ ಬಹಳ ಹೆಸರುವಾಸಿಯಾಗಿತ್ತು. ಏಕೆಂದರೆ, ನಾನಾ ಸಾಹೇಬ್ ಡೆನ್ಗ್ಲೆ ಯವರ ಮುತ್ತಾತನವರಾದ ಶ್ರೀ.ತ್ರಯಂಬಕ ಡೆನ್ಗ್ಲೆ ಯವರು ಸುಮಾರು ಕ್ರಿ.ಶ.1800 ರಲ್ಲಿ ಪೇಶ್ವೆಯಾಗಿದ್ದು ಸುಮಾರು 20000 ಪದಾತಿ ಸೈನ್ಯವನ್ನು ಹೊಂದಿದ್ದರು ಮತ್ತು ಅವರ ಶೌರ್ಯಕ್ಕೆ ಊರಿನ ಜನರಿಂದ ಸನ್ಮಾನಿತರಾಗಿದ್ದರು. 

ನಾನಾ ಸಾಹೇಬ್ ಡೆನ್ಗ್ಲೆಯವರ ಮನೆಯ ಹೆಬ್ಬಾಗಿಲು:

ಈ ಹೆಬ್ಬಾಗಿಲುಗಳು ನಾನಾ ಸಾಹೇಬ್ ಡೆನ್ಗ್ಲೆ ಯವರ ಕೋಟೆಗೆ ಮುಖ್ಯದ್ವಾರವಾಗಿತ್ತು. ಆದರೆ ಈಗ  ಇವು ಅವನತಿಯ ಸ್ಥಿತಿಯಲ್ಲಿವೆ. ಈ ತರಹದ ಎರಡು ಬಾಗಿಲುಗಳು ಇದ್ದು ಸಾಯಿಬಾಬಾರವರು ಬಂದಾಗ ಅವು ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತಿದವೆಂದು ಮತ್ತು ಬಾಬಾರವರನ್ನು ಸ್ವಾಗತಿಸುತ್ತಿದವೆಂದು ತಿಳಿದುಬಂದಿದೆ. ಇದರಿಂದ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಯವರಿಗೆ ಆಶ್ಚರ್ಯವಾಗಿ ತಮ್ಮ ಮನೆಗೆ ಒಬ್ಬ ಮಹಾ ಸತ್ಪುರುಷ ಬಂದಿರುವನೆಂದು ಅರ್ಥವಾಯಿತೆಂದು ತಿಳಿದುಬಂದಿದೆ. 

ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಪವಿತ್ರ ಸ್ಥಳ:

ಸಾಯಿಬಾಬಾರವರು ನೀಮಗಾವ್ ಗೆ ಬಂದಾಗ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಯ ಒಳಗಡೆ ಹೋಗುತ್ತಿರಲಿಲ್ಲವೆಂದು ಮತ್ತು  ಮನೆಯ ಹೊರಭಾಗದಲ್ಲಿದ್ದ ಖಾಲಿ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದರೆಂದು ಬಾಳಾ ಸಾಹೇಬ್ ಡೆನ್ಗ್ಲೆ ಯವರ ವಂಶಸ್ಥರಾದ ಶ್ರೀ.ವಸಂತ್ ರಾವ್ ರವರು ಹೇಳುತ್ತಾರೆ. ಅದರ ಗುರುತಿಗೊಸ್ಕರ ಆ ಜಾಗದಲ್ಲಿ ಪವಿತ್ರ ತುಳಸಿ ಬೃಂದಾವನವನ್ನು ಇರಿಸಿದ್ದರು. ಆದರೆ ಈಗ ಆ ಜಾಗದಲ್ಲಿ ತುಳಸಿ ಬೃಂದಾವನ ಕಾಣಿಸುವುದಿಲ್ಲ. ಅದರ ಗುರುತಿಗೊಸ್ಕರ ಒಂದು ಕಲ್ಲನ್ನು ಅಲ್ಲಿ ಇರಿಸಲಾಗಿದೆ. ಅದರ ಚಿತ್ರವನ್ನು ಈ ಕೆಳಗೆ ಸಾಯಿಭಕ್ತರ ಅನುಕೂಲಕ್ಕಾಗಿ ಕೊಡಲಾಗಿದೆ. 


ಪವಿತ್ರ ಬೇವಿನ ಮರ:

ಈ ಪವಿತ್ರ ಮರವು ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿದೆ. ಈ ಬೇವಿನ ಮರವು ಸಾಯಿಬಾಬಾರವರು ಮಹಾಸಮಾಧಿಯಾದ 20 ವರ್ಷಗಳ ಬಳಿಕ ತನ್ನಷ್ಟಕ್ಕೆ ತಾನೇ ಉದ್ಭವವಾಯಿತೆಂದು ತಿಳಿದುಬಂದಿದೆ. ಇದರ ಕೊಂಬೆಗಳು ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಕಡೆಗೆ ಬೆಳೆಯುತ್ತಿದ್ದು ಇದರ ಎಲೆಗಳು ಸದಾ ಹಸಿರಾಗಿರುವುದಷ್ಟೇ ಅಲ್ಲದೇ ಬಹಳ ಸಿಹಿಯಾಗಿರುವುದು. 

ಸಾಯಿಬಾಬಾ ದೇವಾಲಯ:

ಸಾಯಿಬಾಬಾರವರು ನೀಮಗಾವ್ ಗೆ ಬಂದ ನೆನಪಿಗೊಸ್ಕರವಾಗಿ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಯ ಪಕ್ಕದಲ್ಲಿ ಈ ಭವ್ಯವಾದ ಸಾಯಿಬಾಬಾರವರ ಮಂದಿರವನ್ನು ನಿರ್ಮಿಸಲಾಗುತ್ತಿದೆ. 


ಖಂಡೋಬ ಮಂದಿರ: 

ಈ ಮಂದಿರವು ನೀಮಗಾವ್ ನ ಹೊರಭಾಗದಲ್ಲಿ ಪ್ರಾರಂಭದಲ್ಲಿಯೇ ಇದೆ. ಈ ಮಂದಿರದ ಒಳಗಡೆ ಸಾಯಿಬಾಬಾರವರು ಬಂದು ಕುಳಿತುಕೊಳ್ಳುತ್ತಿದ್ದ ಸ್ಥಳವಿದ್ದು ಅದರ ನೆನಪಿಗಾಗಿ ಗ್ರಾಮಸ್ಥರು ಆ ಜಾಗದಲ್ಲಿ ಸಾಯಿಬಾಬಾರವರ ವಿಗ್ರಹವನ್ನು ಮತ್ತು ಪವಿತ್ರ ಪಾದುಕೆಗಳನ್ನು ಸ್ಥಾಪಿಸಿದ್ದಾರೆ. 


ಚಾವಡಿ: 

ಇದು ಖಂಡೋಬ ಮಂದಿರದ ಪಕ್ಕದಲ್ಲಿ ಇದೆ. ಈಗ ಇದು ಶಿಥಿಲಾವಸ್ಥೆಯಲ್ಲಿದೆ . ಸಾಯಿಬಾಬಾರವರು ಈ ಸ್ಥಳದಲ್ಲಿ  ಸ್ವಲ್ಪ ಕಾಲ ನಡೆದಾಡುತ್ತಿದ್ದರೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಒಂದು ಶಿಲಾಶಾಸನವಿದ್ದು ಅದು ಕ್ರಿ.ಶ.1209 ಇಸವಿಗೆ ಸೇರಿದ್ದಾಗಿರುತ್ತದೆ. 




ಕ್ರಿ.ಶ.1209 ಕ್ಕೆ ಸೇರಿದ ಶಿಲಾಶಾಸನ

ಪವಿತ್ರ ಕೊಳ: 

ಈ ಕೊಳವು ನೀಮಗಾವ್ ನ ಹೊರಭಾಗದಲ್ಲಿ ಖಂಡೋಬ ಮಂದಿರದಿಂದ ಸ್ವಲ್ಪವೇ ದೂರದಲ್ಲಿರುತ್ತದೆ. ಇದರಲ್ಲಿ ಮೆಟ್ಟಿಲುಗಳನ್ನು ನಾವು ಕಾಣಬಹುದು. ಸಾಯಿಬಾಬಾರವರು ಈ ಕೊಳದಿಂದ ನೀರನ್ನು ತೆಗೆದುಕೊಂಡು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಖಂಡೋಬ ಮಂದಿರಕ್ಕೆ ಹೋಗುತ್ತಿದ್ದರೆಂದು ಹೇಳಲಾಗುತ್ತದೆ. ಈ ಕೊಳದ ಪಕ್ಕದಲ್ಲಿ ಬಾಬಾರವರು ಕೈಕಾಲು ತೊಳೆದುಕೊಳ್ಳುತ್ತಿದ್ದ ಸ್ಥಳವಿರುತ್ತದೆ. ಅಲ್ಲದೇ, ಈ ಕೊಳದಲ್ಲಿರುವ ಮೆಟ್ಟಿಲುಗಳನ್ನು ಇಳಿದರೆ ಸುರಂಗ ಮಾರ್ಗವಿದ್ದು ಆ ಸುರಂಗ ಮಾರ್ಗವು ಶಿರಡಿಗೆ ಸಮೀಪದಲ್ಲಿರುವ ರೂಯಿ ಎಂಬಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ಸ್ಥಳವನ್ನು ನೀಮಗಾವ್ ನ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಶತ್ರುಗಳ ಆಕ್ರಮಣವಾದಾಗ ಬಚ್ಚಿಟ್ಟುಕೊಳ್ಳಲು ಉಪಯೋಗಿಸುತ್ತಿದ್ದರೆಂದು ತಿಳಿದುಬಂದಿದೆ. ಸಾಯಿಬಾಬಾರವರ ಸ್ಪರ್ಶದಿಂದ ಈ ಕೊಳವು ಸದಾ ನೀರಿನಿಂದ ತುಂಬಿರುತ್ತಿದ್ದು ಆ ನೀರು ನೀಮಗಾವ್ ನ ಗ್ರಾಮದ ಜನರಿಗೆಲ್ಲ ಸಾಕಾಗುತ್ತಿತ್ತು ಎಂದು ತಿಳಿದುಬಂದಿದೆ. ಆದರೆ ಈ ಕೊಳವನ್ನು ಈಗ ಯಾರು ಉಪಯೋಗಿಸುತ್ತಿಲ್ಲ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment