Monday, August 25, 2014

ಆಸ್ಟ್ರೇಲಿಯಾ ದೇಶದ ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪನೆಗೆಂದು ಹೋಗುತ್ತಿರುವ ಶ್ರೀ ಸಾಯಿಬಾಬಾರವರ ಅಮೃತ ಶಿಲೆಯ ಮೂರ್ತಿಗಳಿಗೆ ಸಾಯಿಬಾಬಾ ಸಂಸ್ಥಾನದ ವತಿಯಿಂದ ವಿಶೇಷ ಪೂಜೆ - ಕೃಪೆ: ಸಾಯಿಅಮೃತಧಾರಾ.ಕಾಂ

ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಎಲ್ಲಾ ಕಡೆಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿವೆ. ಅಂತೆಯೇ ಇದೇ ತಿಂಗಳ 24ನೇ ಆಗಸ್ಟ್  2014, ಭಾನುವಾರದಂದು ಆಸ್ಟ್ರೇಲಿಯಾ ದೇಶದ ಪರ್ತ್ ಮತ್ತು ಕ್ಯಾನ್ ಬೆರಾದ ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪನೆಗೆಂದು ಹೋಗುತ್ತಿರುವ ಶ್ರೀ ಸಾಯಿಬಾಬಾರವರ ಅಮೃತ ಶಿಲೆಯ ಮೂರ್ತಿಗಳಿಗೆ ಸಾಯಿಬಾಬಾ ಸಂಸ್ಥಾನದ ವತಿಯಿಂದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. 

ದಿನ ಕಳೆದಂತೆ ಶ್ರೀ ಸಾಯಿಬಾಬಾರವರು ಪ್ರಪಂಚದ ಎಲ್ಲಾ ಕಡೆಗಳಲ್ಲಿ ಬಹಳವೇ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ ಎಂಬುದು ತಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾಗಿ ಅವರ ಮಂದಿರಗಳು ವಿಶ್ವದ ಎಲ್ಲೆಡೆ ತಲೆಯೆತ್ತುತ್ತಿವೆ. ಪ್ರಪಂಚದ ಎಲ್ಲಾ ಭಾಗಗಳ ಭಕ್ತರೂ ತಮ್ಮ ತಮ್ಮ ದೇಶಗಳಲ್ಲಿ ಪ್ರತಿಷ್ಟಾಪನೆ ಮಾಡುವುದಕ್ಕೆ ಮುಂಚಿತವಾಗಿ ಭಾರತದ ಜೈಪುರದಿಂದ ವಿಗ್ರಹವನ್ನು ಶಿರಡಿಗೆ ತಂದು ವಿಧಿವತ್ತಾಗಿ ವಿಗ್ರಹಕ್ಕೆ ಪೂಜೆಯನ್ನು ಮಾಡಿಸಿಕೊಂಡು ನಂತರ ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ತಿರುಪತಿಯ ಡಾ.ರಘುನಾಥ ರೆಡ್ಡಿಯವರು ಪರ್ತ್ ನ ಸಾಯಿ ಮಂದಿರದ ಅಧ್ಯಕ್ಷರಾದ ಶ್ರೀ.ಸಾಯಿ ಕೃಷ್ಣ ತುಳಸಿಯೊಂದಿಗೆ  ಹಾಗೂ ಕ್ಯಾನ್ ಬೆರಾದ ಸಾಯಿ ಮಂದಿರದ ಅಧ್ಯಕ್ಷೆ ಶ್ರೀಮತಿ.ಕೆ.ಅನಿತಾರವರು ಜೈಪುರದಿಂದ ವಿಗ್ರಹಗಳೊಂದಿಗೆ ಬಂದು ಶಿರಡಿಯಲ್ಲಿ ಪೂಜೆಯನ್ನು ಮಾಡಿಸಿದರು. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ನ ಆಕ್ಲೆಂಡ್ ಸಾಯಿ ಮಂದಿರದ ಶ್ರೀ.ಭಾಸ್ಕರ್ ರೆಡ್ಡಿಯವರು ಕೂಡ ಉಪಸ್ಥಿತರಿದ್ದರು. ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ಪರವಾಗಿ ಗಣ್ಯರನ್ನು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಸ್ವಾಗತಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಭಾಸ್ಕರ ರೆಡ್ಡಿಯವರು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಸಾಯಿ ಮಂದಿರದ ಉದ್ಘಾಟನೆಯಾಯಿತು. ಶಿರಡಿಯಂತೆ ಅಲ್ಲಿ ಕೂಡ ನಿಯಮಿತವಾಗಿ ಪೂಜೆ, ಆರತಿಗಳು ಪ್ರತಿನಿತ್ಯ ನಡೆಯುತ್ತಿದ್ದು ಸಾವಿರಾರು ಮಂದಿ ಭಕ್ತರನ್ನು ಆಕರ್ಷಿಸುತ್ತಿದೆ. ಮಂದಿರದಲ್ಲಿ ಅನ್ನದಾನ, ರಕ್ತದಾನ ಶಿಬಿರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದ ಪರ್ತ್  ಮತ್ತು ಕ್ಯಾನ್ ಬೆರಾದಲ್ಲಿ ತಲೆ ಎತ್ತುತ್ತಿರುವ ಮಂದಿರಗಳು ಸಹ ಸಾವಿರಾರು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂದೇಹವಿಲ್ಲ  ಎಂದು ನುಡಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ. ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ ಪ್ರಥಮ ಆವೃತ್ತಿಯ ಪ್ರಥಮ ಪ್ರತಿಯನ್ನು ಪಡೆದ ಮಹಾನ್ ಸಾಯಿ ಭಕ್ತೆ ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ

ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ ಪ್ರಥಮ ಆವೃತ್ತಿಯ ಪ್ರಥಮ ಪ್ರತಿಯನ್ನು ಪಡೆದ ಮಹಾನ್ ಸಾಯಿ ಭಕ್ತೆ  ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ಮಾತಾಜಿಯವರು ಇದೇ ತಿಂಗಳ  25ನೇ ಆಗಸ್ಟ್ 2014, ಸೋಮವಾರ ದಂದು ಬೆಳಿಗ್ಗೆ 11:05 ಕ್ಕೆ ಸಿಕಂದರಾಬಾದ್ನ ಓಲ್ಡ್ ಆಲ್ವಾಲ್ ನ ಮಂದಿರ ಮತ್ತು ಸ್ವಗೃಹದಲ್ಲಿ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮಾತಾಜಿಯವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಶ್ರೀ.ಪ್ರಕಾಶ್ ಎಂಬ  ಮಗ, ಶ್ರೀಮತಿ.ಲಲಿತಾ ಎಂಬ  ಮಗಳು, ಅನೇಕ ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ. 


ಮಾತಾಜಿಯವರು 17ನೇ ಆಗಸ್ಟ್ 1923  ಜನಿಸಿದರು.  ಇವರು ತಮ್ಮ ಜೀವನದುದ್ದಕ್ಕೂ ಸಾಯಿ ತತ್ವವನ್ನು ಪಾಲಿಸಿದ್ದಷ್ಟೇ ಅಲ್ಲದೇ ತಮ್ಮ ಬಳಿ ಬರುತ್ತಿದ್ದ ಅಸಂಖ್ಯಾತ ಸಾಯಿ ಭಕ್ತರಿಗೆ ಬೋಧಿಸುತ್ತಿದ್ದರು.ಇವರು 2004ನೇ ಇಸವಿಯಲ್ಲಿ ಸಿಕಂದರಾಬಾದ್ ನ ಓಲ್ಡ್ ಆಲ್ವಾಲ್ ಪ್ರದೇಶದಲ್ಲಿ ಧ್ಯಾನ ಮಂದಿರ ಹಾಗೂ ಸಾಯಿ ಮಂದಿರವನ್ನು ಪ್ರಾರಂಭಿಸಿದರು. ತಮ್ಮ ಬಳಿ ಪ್ರತಿನಿತ್ಯ ಬರುತ್ತಿದ್ದ ಭಕ್ತರಿಗೆ ಅವರು "ಬಾಬಾರವರಲ್ಲಿ ನಂಬಿಕೆಯಿಡಿ. ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಯಾರೊಡನೆಯೂ ಬೇಡದ ವಿಷಯಗಳ  ಚರ್ಚೆ ಮಾಡಬೇಡಿ.  ನಿಮ್ಮ ತೊಂದರೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಹೋಗಬೇಡಿ. ಅದರ ಬದಲಿಗೆ ನಿಮಗೆ ಸಮಯ ಸಿಕ್ಕಾಗಲೆಲ್ಲಾ ನೀವು ಎಲ್ಲಿದ್ದರೂ ಸರಿಯೇ ಸದಾ ಸಾಯಿಬಾಬಾರವರಿಗೆ ಮಾನಸ ಪೂಜೆಯನ್ನು ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ" ಎಂದು ಬೋಧಿಸುತ್ತಿದ್ದರು. ತಮ್ಮ ಭಕ್ತರ ಅನುಭವಗಳನ್ನು ಅವರು "ಸಾಯಿ ಲೀಲಮ್ಮ - ಭಕ್ತರ ಅನುಭವಗಳು" ಎಂಬ ಪುಸ್ತಕದಲ್ಲಿ  ಹಂಚಿಕೊಂಡಿದ್ದರು. ಆ ಪುಸ್ತಕದಲ್ಲಿ ಅವರು ಶ್ರೀ ಸಾಯಿಬಾಬಾರವರಿಗೆ  ಮಾನಸ ಪೂಜೆಯನ್ನು ಸಲ್ಲಿಸುವುದು ಹೇಗೆ ಎಂದು ತಿಳಿಸಿದ್ದರು. ತಮ್ಮ ಭಕ್ತರ ಕಷ್ಟಗಳನ್ನು ಅವರು ತಮ್ಮ ಮೇಲೆ ಎಳೆದುಕೊಂಡು ಅದನ್ನು ಬಾಬಾರವರ ಬಳಿ ತಿಳಿಸಿ ಅವರ ಕಷ್ಟಗಳನ್ನು ನಿವಾರಿಸುತ್ತಿದ್ದರು 

ಪರಮ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಸಾಯಿಬಾಬಾರವರ ಅಶೀರ್ವಾದದಿಂದ 1922ನೇ ಇಸವಿಯಿಂದ 1929ನೇ ಇಸವಿಯ ನಡುವೆ ದಿವಂಗತ ಶ್ರೀ.ಗೋವಿಂದ ರಘುನಾಥ್ ದಾಭೋಲ್ಕರ್ ರವರು ಪ್ರಪ್ರಥಮ ಬಾರಿಗೆ ಮರಾಠಿ ಓವಿ ಶೈಲಿಯಲ್ಲಿ ರಚಿಸಿದರು. ಈ ಮಹಾನ್ ಗ್ರಂಥವನ್ನು ಶ್ರೀ ಸಾಯಿಬಾಬಾ ಸಂಸ್ಥಾನವು 30ನೇ ಅಕ್ಟೋಬರ್ 1930 ರಂದು ಲೋಕಾರ್ಪಣೆ ಮಾಡಿತು.  ನಂತರ ಅದರ ಸಂಕ್ಷಿಪ್ತ ಆವೃತ್ತಿಯನ್ನು ಅಂಗ್ಲ ಭಾಷೆಗೆ ಶ್ರೀ.ನಾಗೇಶ್ ವಾಸುದೇವ್ ಗುಣಾಜಿಯವರು ಅನುವಾದ ಮಾಡಿ ಪ್ರಕಟಿಸಿದರು. ಶ್ರೀ.ಗುಣಾಜಿಯವರ ಈ ಅಂಗ್ಲ ಶ್ರೀ ಸಾಯಿ ಸಚ್ಚರಿತೆಯು ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿದ್ದು  ಈಗ ಇತಿಹಾಸ.  ಶ್ರೀ.ಗುಣಾಜಿಯವರ ಈ ಅಂಗ್ಲ ಶ್ರೀ ಸಾಯಿ ಸಚ್ಚರಿತೆಯು ಮೊದಲಿಗೆ ತೆಲುಗು ಭಾಷೆಯಲ್ಲಿ ದಿವಂಗತ ಶ್ರೀ.ಪ್ರತ್ತಿ ನಾರಾಯಣ ರಾವ್ ರವರಿಂದ ಅನುವಾದಗೊಂಡಿತು. ಸಂಕ್ಷಿಪ್ತ ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ  ಮೊದಲ ಆವೃತ್ತಿಯ ಮೊದಲ ಪ್ರತಿಯನ್ನು 19ನೇ ಮೇ 1953 ರಂದು ಶಿರಡಿಯ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಹಾನ್ ಸಾಯಿ ಭಕ್ತೆಯಾದ  ಶ್ರೀಮತಿ.ದುಕ್ಕಿ ಸಾಯಿ ಲೀಲಮ್ಮ ಅವರಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನೀಡಲಾಯಿತು. 

ಶ್ರೀ ದುಕ್ಕಿ ಸಾಯಿ ಲೀಲಮ್ಮನವರ ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆಂದು ಇಂದು ಮತ್ತು ನಾಳೆ ಇರಿಸಲಾಗುತ್ತದೆ ಹಾಗೂ 27ನೇ ಆಗಸ್ಟ್ 2014, ಬುಧವಾರದಂದು ಅವರ ಅಂತ್ಯಕ್ರಿಯೆಯನ್ನು  ನಡೆಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ. 

ಸಾಯಿಅಮೃತಧಾರಾ.ಕಾಂ ಮತ್ತು ಅದರದೇ  ಕನ್ನಡ ಬ್ಲಾಗ್ ಆದ ಸಾಯಿಅಮೃತವಾಣಿ.ಕಾಂ ನ   ತಂಡದ ಎಲ್ಲಾ ಸದಸ್ಯರುಗಳು ಮೃತರ ಕುಟುಂಬಕ್ಕೆ ಶ್ರೀ ದುಕ್ಕಿ ಸಾಯಿ ಲೀಲಮ್ಮನವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ  ನೀಡಲೆಂದು ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರೀ ಸಾಯಿಬಾಬಾರವರನ್ನು ಪ್ರಾರ್ಥಿಸುತ್ತದೆ. 

ಶ್ರೀಮತಿ ದುಕ್ಕಿ ಲೀಲಮ್ಮನವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯಲಿಚ್ಚಿಸುವ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ: 

ನಂ.52, ಮಂದಿರ ನಗರ ಹೌಸಿಂಗ್ ಕಾಲೋನಿ, 
ಓಲ್ಡ್ ಆಲ್ವಾಲ್, ಮಂದಿರಾ ನಗರ, 
ಫಾದರ್ ಬಾಲಯ್ಯ  ನಗರ, 
ಸಿಕಂದರಾಬಾದ್. 

ಕನ್ನಡ ಅನುವಾದ; ಶ್ರೀಕಂಠ ಶರ್ಮ 

Sunday, August 24, 2014

ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ 19ನೇ ರ‍್ಯಾಂಕ್ ಗಳಿಸಿದ ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ-ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ಶೈಕ್ಷಣಿಕ ಪ್ಯಾಕೇಜ್ ನ ಅಡಿಯಲ್ಲಿ ನಡೆಸಲಾಗುತ್ತಿರುವ ಶ್ರೀ ಸಾಯಿಬಾಬಾ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಯಾದ ಶ್ರೀ.ಸಾಯಿಪ್ರಕಾಶ್ ಸುಭಾಷ್ ಕೈರ್ನಾರ್ ಇತ್ತೀಚಿಗಷ್ಟೇ ಪೂರ್ಣಗೊಂಡ "4ನೇ ತರಗತಿಗೆ ನಡೆಸಲಾಗುವ ಪ್ರಾಥಮಿಕ ವಿದ್ಯಾರ್ಥಿವೇತನ ಪರೀಕ್ಷೆ" ಯಲ್ಲಿ  19ನೇ ರ‍್ಯಾಂಕ್ ಗಳಿಸುವ ಮೂಲಕ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿದ್ದಾನೆ ಎಂದು ಇದೇ ತಿಂಗಳ ಶನಿವಾರ, 23ನೇ ಆಗಸ್ಟ್ 2014 ರಂದು ಶ್ರೀ ಸಾಯಿಬಾಬಾ ಸಂಸ್ಥಾನವು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 


ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ 65 ಪ್ರತಿಶತ ಅಂಕಗಳನ್ನು ಗಳಿಸಬೇಕೆಂಬ ಕಠಿಣ ನಿಯಮವನ್ನು ವಿಧಿಸಲಾಗಿತ್ತು. ಶ್ರೀ ಸಾಯಿಬಾಬಾ ಆಂಗ್ಲ ಮಾಧ್ಯಮ ಶಾಲೆಯ ಕೇವಲ ಇಬ್ಬರು ವಿದ್ಯಾರ್ಥಿಗಳಾದ ಶ್ರೀ.ಸಾಯಿಪ್ರಕಾಶ್ ಸುಭಾಷ್ ಕೈರ್ನಾರ್ (19ನೇ  ರ‍್ಯಾಂಕ್) ಮತ್ತು ಶ್ರೀ.ಸಾನಿಯಾ ಕರೀಂ ಪಠಾಣ್ ( 29ನೇ ರ‍್ಯಾಂಕ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಗಳಿಸಿದರು. ಹಾಗಾಗಿ, ಪರಂಪರೆಯಂತೆ ವಿದ್ಯಾರ್ಥಿವೇತನ ಪರೀಕ್ಷೆಗಳಲ್ಲಿ ಸಂಸ್ಥಾನದ ಶಾಲೆಯ ವಿದ್ಯಾರ್ಥಿಗಳ  ಯಶೋಗಾಥೆಯು ಎಂದಿನಂತೆ ಈ ವರ್ಷವೂ ಮುಂದುವರಿಯಿತು. ಈ ವಿದ್ಯಾರ್ಥಿಗಳ ಯಶಸ್ಸಿಗೆ ಗುರುಗಳಾದ ಕುಮಾರಿ.ಜಯಂತಿ ಬೋಧಕ್ ಮತ್ತು ಶ್ರೀಮತಿ.ನೀತಾ ಪರದೇಶಿಯವರುಗಳು ನೀಡಿದ ಮಾರ್ಗದರ್ಶನ ಕಾರಣವಾಗಿರುತ್ತದೆ. 

ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ ಕುಲಕರ್ಣಿ, ಸದಸ್ಯರೂ ಮತ್ತು ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳೂ ಹಾಗೂ ಶಾಲೆಯ  ಪ್ರಾಂಶುಪಾಲರಾದ ಶ್ರೀಮತಿ.ಇನಾಮದಾರ್ ರವರುಗಳು ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೇ ಮುಂದಿನ ವರ್ಷದ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೂ ಸಹ ಶುಭ ಹಾರೈಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, August 21, 2014

ಟಿವಿಎಸ್ ಸಮೂಹ ಸಂಸ್ಥೆಯ ವತಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ನ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಟಿವಿಎಸ್ ಸಮೂಹ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ.ಜೆ.ಕೃಷ್ಣಕುಮಾರ್ ರವರು ಇದೇ ತಿಂಗಳ 21ನೇ ಆಗಸ್ಟ್  2014, ಗುರುವಾರ ದಂದುತಮ್ಮ ಸಂಸ್ಥೆಯ ಹೊಸ ಉತ್ಪನ್ನವಾದ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ನ ಕೀಲಿಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ವಿ.ಗಮೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಟಿವಿಎಸ್ ಸಮೂಹ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶ್ರೀ.ಅನುರಾಗ್ ಸಿಂಗ್ ಮತ್ತು ಶ್ರೀ.ವೀರೇಂದ್ರ ಭಂಡಾರ್ಕರ್ ರವರುಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 


Monday, August 18, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದಹಿ ಹಂಡಿ ಕಾರ್ಯಕ್ರಮದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಇದೇ ತಿಂಗಳ 18ನೇ ಆಗಸ್ಟ್ 2014, ಸೋಮವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನವು ಸಮಾಧಿ ಮಂದಿರದ ಆವರಣದಲ್ಲಿ  ದಹಿ ಹಂಡಿ ಕಾರ್ಯಕ್ರಮವನ್ನು ಆಯೋಜಿಸಿತ್ತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧ್ಯಕ್ಷೆ ಶ್ರೀಮತಿ. ಅರುಂಧತಿ ಭಟ್ಟಾಚಾರ್ಯ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧ್ಯಕ್ಷೆಯಾದ ಶ್ರೀಮತಿ. ಅರುಂಧತಿ ಭಟ್ಟಾಚಾರ್ಯ ರವರು ಇದೇ ತಿಂಗಳ 18ನೇ ಆಗಸ್ಟ್ 2014, ಸೋಮವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಸಂಸತ್ ಸದಸ್ಯ ಶ್ರೀ ಸಂಜಯ್ ರಾವತ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಸಂಸತ್ ಸದಸ್ಯರಾದ  ಶ್ರೀ ಸಂಜಯ್ ರಾವತ್ ರವರು ಇದೇ ತಿಂಗಳ 17ನೇ ಆಗಸ್ಟ್ 2014, ಭಾನುವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, August 16, 2014

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 15ನೇ ಆಗಸ್ಟ್  2014, ಶುಕ್ರವಾರ ದಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವೈಭವವಾಗಿ ಆಚರಿಸಿತು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಶಿರಡಿ ಸಾಯಿಬಾಬಾರವರ ಮೇಲೆ ರಚಿಸಲಾದ ಹೊಸ ಆಂಗ್ಲ ಪುಸ್ತಕ "ಬಾಬಾ: ದಿ ಡಿವೋಟೀಸ್ ಕ್ವೆಶ್ಚನ್ಸ್" ಬಿಡುಗಡೆ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ  ಶಿರಡಿ ಸಾಯಿಬಾಬಾರವರ ಮೇಲೆ ಡಾ.ಸಿ.ಬಿ.ಸತ್ಪತಿಯವರು ರಚಿಸಿರುವ ಹೊಸ ಆಂಗ್ಲ ಪುಸ್ತಕ "ಬಾಬಾ: ದಿ ಡಿವೋಟೀಸ್ ಕ್ವೆಶ್ಚನ್ಸ್" ಬಿಡುಗಡೆ   ಸಮಾರಂಭವು ಪವಿತ್ರ ಕೃಷ್ಣ ಜನ್ಮಾಷ್ಟಮಿಯ ದಿನವಾದ 17ನೇ ಆಗಸ್ಟ್  2014, ಭಾನುವಾರದಂದು ಸಂಜೆ 6:30 ಕ್ಕೆ "ಸಾಯಿ ಕಾ ಆಂಗನ್", ಈ-ಬ್ಲಾಕ್ ಹತ್ತಿರ, ಸುಶಾಂತ ಲೋಕ್, ಗುರ್ ಗಾಂವ್ ನಲ್ಲಿ  ನಡೆಯಲಿದೆ ಎಂದು ಸ್ಟರ್ಲಿಂಗ್ ಪ್ರಕಾಶನ ಸಂಸ್ಥೆಯ  ಶ್ರೀಮತಿ.ರಾಖಿ ಕರಣ್ ರವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, August 1, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಎರಡು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 31ನೇ ಜುಲೈ 2014, ಗುರುವಾರ ದಂದು ಸಮಾಧಿ ಮಂದಿರದ ಸಭಾಂಗಣದಲ್ಲಿ ಇತ್ತೀಚಿಗೆ ಸೇವೆಯಿಂದ ನಿವೃತ್ತರಾದ ಸಾಯಿಬಾಬಾ ಸಂಸ್ಥಾನದ ಎರಡು ಅಧಿಕಾರಿಗಳನ್ನು ಸನ್ಮಾನಿಸಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಮಾತನಾಡುತ್ತಾ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಹಲವಾರು ವರ್ಷಗಳ ಕಾಲ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಶ್ರೀ.ಅಪ್ಪಾ ಸಾಹೇಬ್ ಕೋತೆ ಹಾಗೂ ಶ್ರೀ.ರಾಮದಾಸ ಕೋತೆಯವರ ಅತ್ಯಮೂಲ್ಯವಾದ ಸೇವೆಯನ್ನು ಕೊಂಡಾಡಿದರು. 


ಈ ಸಂದರ್ಭದಲ್ಲಿ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ವಿ.ಗಮೆ, ಶ್ರೀ.ಎಸ್.ಎನ್.ಗರ್ಕಲ್, ಶ್ರೀ.ಟಿ.ಡಿ.ಉಗಲೆ, ಶ್ರೀ.ಯು.ಪಿ.ಗೋಂಡ್ಕರ್,ಶ್ರೀ.ದಿಲೀಪ್ ಉಗಲೆ ಆದಿಸಿಂಹ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರೂ ಹಾಗೂ ಅಧಿಕಾರಿಗಳೂ ಉಪಸ್ಥಿತರಿದ್ದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ.ಶಿಂಧೆಯವರು ಹೇಗೆ ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಅನ್ನದಾನಕ್ಕೆ ಹೆಚ್ಚಿನ ಮಹತ್ವ ನೀಡಿದರೆಂಬ ವಿಷಯವನ್ನು ಶ್ರೀ ಸಾಯಿ ಸಚ್ಚರಿತ್ರೆಯ 37ನೇ ಅಧ್ಯಾಯದಲ್ಲಿ ವಿಶೇಷವಾಗಿ ತಿಳಿಸಲಾಗಿದೆ. ಅದನ್ನು ಶ್ರೀ ಸಾಯಿಬಾಬಾ ಸಂಸ್ಥಾನವು ಮುಂದುವರಿಸಿಕೊಂಡು ಬಂದಿರುತ್ತದೆ. ಇಂದು ಶಿರಡಿಯ ಶ್ರೀ ಸಾಯಿಬಾಬಾ  ಪ್ರಸಾದಾಲಯದ ಕೀರ್ತಿಯು ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಹರಡಿರುತ್ತದೆ. ಹಾಗೆಯೇ, ಶ್ರೀ.ಅಪ್ಪ ಸಾಹೇಬ್ ಕೋತೆಯವರು ಮತ್ತು ಶ್ರೀ.ರಾಮದಾಸ್ ಕೋತೆಯವರು ತಮ್ಮ ಸೇವಾವಧಿಯ ಕಾಲದಲ್ಲಿ  ಅತ್ಯಂತ ಹೆಚ್ಚಿನ ಶ್ರಮವಹಿಸಿ ಶ್ರೀ ಸಾಯಿಬಾಬಾ ಸಂಸ್ಥಾನದ ಏಳಿಗೆಗಾಗಿ ಹಗಲಿರುಳೂ ಕಾರ್ಯ ನಿರ್ವಹಿಸುವುದರ  ಮೂಲಕ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿಗಳಿಗೆ ಅವರು ತೋರಿಸುತ್ತಿದ್ದ ಗೌರವ ಹಾಗೂ ಅವರ ಸ್ನೇಹ ಮನೋಭಾವ ಇತರ ಸಿಬ್ಬಂದಿ ವರ್ಗಕ್ಕೆ ಮಾದರಿಯಾಗಿದೆ ಎಂದು ಹೇಳಬೇಕು. ಈ ಇಬ್ಬರು ಸಿಬ್ಬಂದಿಗಳು ತಾವು ಕಾರ್ಯ ನಿರ್ವಹಿಸಿದ ಸಂಸ್ಥಾನದ ಎಲ್ಲಾ ವಿಭಾಗಗಳಲ್ಲೂ ಬಹಳ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಎಂದು ನಿವೃತ್ತ ಅಧಿಕಾರಿಗಳನ್ನು ಮನಸಾರೆ ಕೊಂಡಾಡಿದರು. ಅಲ್ಲದೇ, ಸಂಸ್ಥಾನದ ಅಧಿಕಾರಿಗಳು ನಿವೃತ್ತರಾದ ನಂತರ ಅವರುಗಳಿಗೆ ಪಿಂಚಣಿ ನೀಡುವ ಸಲುವಾಗಿ ಪಿಂಚಣಿ ಯೋಜನೆಯ ಅಗತ್ಯವಿದೆ ಎಂದೂ  ಹಾಗೂ ಅದಕ್ಕೆ ಸಂಬಂಧಪಟ್ಟ ವಿಭಾಗವು ಅತಿ ಶೀಘ್ರದಲ್ಲಿಯೇ ಸಂಸ್ಥಾನದ ಆಡಳಿತ ಮಂಡಳಿಯ ಮುಂದೆ  ಈ ವಿಷಯವನ್ನು ಪ್ರಸ್ತಾಪಿಸಬೇಕಿದೆ ಎಂಬ ಅಂಶವನ್ನು ಒತ್ತಿ ಹೇಳಿದರು. 

ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಕೋತೆ,ಶ್ರೀ.ರಾಮದಾಸ ಕೋತೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ಎನ್.ಗರ್ಕಲ್, ಶ್ರೀ.ಟಿ.ಡಿ.ಉಗಲೆ, ಪ್ರಾಂಶುಪಾಲರಾದ ಶ್ರೀ.ಪಟಾಣಿ, ಶ್ರೀ ಸಾಯಿಬಾಬಾ ಸಂಸ್ಥಾನದ ನೌಕರರ ಸಂಘದ ಅಧ್ಯಕ್ಷರಾದ ಶ್ರೀ.ರಾಜೇಂದ್ರ ಜಗ್ತಪ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ಹಾಗೂ ಶ್ರೀ.ಚಿತ್ರೆಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮನಿರ್ವಹಣೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ಡಿ.ಸಬಲೆಯವರು ನಡೆಸಿಕೊಟ್ಟರು. (ಮರಾಠಿಯಿಂದ ಆಂಗ್ಲ ಭಾಷೆಗೆ ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ