Saturday, January 15, 2011

ಶಿರಡಿ ಸಾಯಿಬಾಬಾರವರ ಪಾದಧೂಳಿಯಿಂದ ಪವಿತ್ರವಾದ ಸ್ಥಳ - ರಹತಾ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾರವರು ತಮ್ಮ ಜೀವಿತ ಕಾಲದಲ್ಲಿ ಶಿರಡಿ ಗ್ರಾಮಕ್ಕೆ ಸಮೀಪದಲ್ಲಿದ್ದ ರಹತಾ ಮತ್ತು ನೀಂಗಾವ್  ಎಂಬ ಎರಡು ಸ್ಥಳಗಳಿಗೆ ಮಾತ್ರ ತೆರಳಿದ್ದರು. ಈ ಎರಡು ಹಳ್ಳಿಗಳಿಂದ ಆಚೆ ಎಲ್ಲಿಯೂ ಹೋಗಿರಲಿಲ್ಲ. (ಸಾಯಿ ಸಚ್ಚರಿತೆ 8ನೇ ಅಧ್ಯಾಯ). ಸಾಯಿಬಾಬಾರವರು ರಹತಾ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಸಾಯಿಭಕ್ತರು ಸಂಗೀತ ಮತ್ತು ವಾದ್ಯಗಳೊಂದಿಗೆ ರಹತಾ ಗ್ರಾಮದ ಹೊರಭಾಗದಲ್ಲಿದ್ದ "ಕಮಾನು" ಬಳಿ ಇವರನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು ಮತ್ತು ಅಲ್ಲಿಂದ ಸಾಯಿಬಾಬಾರವರು ವಾಪಸ್ ಶಿರಡಿಗೆ ಹೊರಡುವಾಗ ಮೆರವಣಿಗೆಯಲ್ಲಿ ಕರೆದುಕೊಂಡು ಕಮಾನಿನ ಬಳಿ ಬಂದು ಬೀಳ್ಕೊಡುತ್ತಿದ್ದರು.

ರಹತಾದ ಹೊರಭಾಗದಲ್ಲಿರುವ ಕಮಾನು 

ಕುಶಾಲಚಂದ್ ಮನೆ

ಸಾಯಿಬಾಬಾರವರಿಗೆ ರಹತಾದ ಚಂದ್ರಭಾನು ಸೇಟ್ ಎಂದರೆ ಬಹಳ ಪ್ರೀತಿ ಮತ್ತು ಆದರ. ಚಂದ್ರಭಾನುರವರ ಕಾಲಾನಂತರ ಅವರ ಸೋದರಿಯ ಮಗನಾದ ಕುಶಾಲಚಂದ್ ರವರನ್ನು ಅದೇ ರೀತಿ ಪ್ರೀತಿಸುತ್ತಿದ್ದರು ಮತ್ತು ಅವರ ಯೋಗಕ್ಷೇಮವನ್ನು ಕುರಿತು ಹಗಲು ರಾತ್ರಿ ಚಿಂತಿಸುತ್ತಿದ್ದರು. ಬಾಬಾರವರು ಸಾಮಾನ್ಯವಾಗಿ ಶಿರಡಿಯನ್ನು ಬಿತ್ತು ಎಲ್ಲೂ ಹೋಗುತ್ತಿರಲಿಲ್ಲ. ಆದರೆ, ಆಗಾಗ್ಗೆ ರಹತಾಕ್ಕೆ ಕುಶಾಲಚಂದ್ ರವರ ಮನೆಗೆ ಬಂದು ಸ್ವಲ್ಪಕಾಲ ಕಳೆದು ಶಿರಡಿಗೆ ವಾಪಸ್ ಹಿಂತಿರುಗುತ್ತಿದ್ದರು.  ಸಾಯಿಬಾಬಾರವರು ರಹತಾ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಸಾಯಿಭಕ್ತರು ಸಂಗೀತ ಮತ್ತು ವಾದ್ಯಗಳೊಂದಿಗೆ ರಹತಾ ಗ್ರಾಮದ ಹೊರಭಾಗದಲ್ಲಿದ್ದ "ಕಮಾನು" ಬಳಿ ಇವರನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಕುಶಾಲಚಂದ್ ಸಾಯಿಬಾಬಾರವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರನ್ನು ಕುಳ್ಳಿರಿಸಿ, ಭೋಜನವನ್ನು ನೀಡಿ ಆದರಾತಿಥ್ಯ ಮಾಡುತ್ತಿದ್ದರು. ನಂತರ ಸ್ವಲ್ಪ ಕಾಲದವರೆಗೆ ಅವರಿಬ್ಬರೂ ಆರಾಮವಾಗಿ ಮತ್ತು ಸಂತೋಷದಿಂದ ಮಾತನಾಡುತ್ತಾ ಕುಳಿತಿರುತ್ತಿದ್ದರು. ನಂತರ ಸಾಯಿಬಾಬಾರವರು ಕುಶಾಲಚಂದ್ ರವರಿಂದ ಬೀಳ್ಕೊಂಡು ವಾಪಸ್ ಶಿರಡಿಗೆ ಹೊರಡುತ್ತಿದ್ದರು. ಸಾಯಿಬಾಬಾರವರು ವಾಪಸ್ ಶಿರಡಿಗೆ ಹೊರಡುವಾಗ ಪುನಃ ಅವರ ಭಕ್ತರು ಸಾಯಿಬಾಬಾರವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಕಮಾನಿನ ಬಳಿ ಬಂದು ಬೀಳ್ಕೊಡುತ್ತಿದ್ದರು. (ಸಾಯಿ ಸಚ್ಚರಿತೆ ಅಧ್ಯಾಯ 8). 

ಬೆಳಗಿನ ಜಾವದ ಕನಸು ಸಾಮಾನ್ಯವಾಗಿ ನನಸಾಗುವುದೆಂದು ಕೆಲವರ ನಂಬಿಕೆ. ಆದರೆ ಸಾಯಿಬಾಬಾರವರ ಕನಸುಗಳಿಗೆ ಕಾಲದ ಪರಿಮಿತಿ ಇರಲಿಲ್ಲ. ಸಾಯಿಬಾಬಾರವರು ಒಮ್ಮೆ ಕಾಕಾಸಾಹೇಬ ದೀಕ್ಷಿತ್ ರವರನ್ನು ಕುರಿತು ರಹತಾದ ಕುಶಾಲಚಂದ್ ರವರನ್ನು ನೋಡಿ ಬಹಳ ದಿನಗಳಾದವು ಎಂದು ಹೇಳಿ ಅವರನ್ನು ಶಿರಡಿಗೆ ಕರೆತರುವಂತೆ ಆಜ್ಞಾಪಿಸಿದರು. ಸಾಯಿಬಾಬಾರವರ ಆಜ್ಞೆಯಂತೆ ಕಾಕಾಸಾಹೇಬರು ಟಾಂಗಾ ಮಾಡಿಕೊಂಡು ರಹತಾಕ್ಕೆ ಹೋಗಿ ಕುಶಾಲಚಂದ್ ರವರಿಗೆ ಸಾಯಿಬಾಬಾರವರ ಸಂದೇಶವನ್ನು ತಿಳಿಸಿದರು. ಇದನ್ನು ಕೇಳಿ ಕುಶಾಲಚಂದ್ ರವರು ಅಚ್ಚರಿಗೊಂಡರು. ಆಗ ತಾನೇ ಊಟಮಾಡಿ ಮಲಗಿದಾಗ ಬಾಬಾ ಕುಶಾಲಚಂದ್ ರವರ ಕನಸಿನಲ್ಲಿ ಕಾಣಿಸಿಕೊಂಡು "ಶಿರಡಿಗೆ ಬಾ" ಎಂದರು ಎಂದು ತಮಗೆ ಬಿದ್ದ ಕನಸನ್ನು ವಿವರಿಸಿದರು. "ನನ್ನ ಬಳಿ ಕುದುರೆ ಇರಲಿಲ್ಲ. ಆದ್ದರಿಂದ ಬಾಬಾರವರಿಗೆ ವಿಷಯವನ್ನು ತಿಳಿಸಿ ಬರಲು ನನ್ನ ಮಗನನ್ನು ಕಳುಹಿಸಿದ್ದೇನೆ" ಎಂದು ಹೇಳಿದರು. ಆಗ ಕಾಕಾಸಾಹೇಬ್ ದೀಕ್ಷಿತ್ ರವರು "ನಿಮ್ಮನ್ನು ಕರೆದುಕೊಂಡು ಹೋಗಲೆಂದೇ ನಾನು ಈಗ ಬಂದಿದ್ದೇನೆ" ಎಂದು ತಿಳಿಸಿ ಸಾಯಿಬಾಬಾರವರು ತಮಗೆ ಆಜ್ಞೆ ಮಾಡಿದ್ದನ್ನು ತಿಳಿಸಿ ಹೇಳಿದರು. ನಂತರ ಅವರಿಬ್ಬರೂ ಶಿರಡಿಗೆ ಬಂದರು. ಕುಶಾಲಚಂದ್ ರವರ ಮೇಲೆ ಸಾಯಿಬಾಬಾರವರಿಗೆ ಇದ್ದ ಅಪರಿಮಿತ ಪ್ರೀತಿಯನ್ನು ಈ ಘಟನೆ ನಿರೂಪಿಸುತ್ತದೆ (ಸಾಯಿ ಸಚ್ಚರಿತೆ 30ನೇ ಅಧ್ಯಾಯ).

 ಕುಶಾಲಚಂದ್ ರವರ ಮನೆ 

 ಕುಶಾಲಚಂದ್ ರವರ ಮನೆಯಲ್ಲಿ ಬಾಬಾರವರು ಕುಳಿತುಕೊಳ್ಳುತ್ತಿದ್ದ ಸ್ಥಳ ದ್ವಾರಕಾಮಾಯಿಯನ್ನು ನೆನಪಿಸುತ್ತದೆ!!!!!!


ಈದ್ಗಾ

ಕುಶಾಲಚಂದ್ ರವರ ಮನೆಯಿಂದ ಸ್ವಲ್ಪವೇ ದೂರದಲ್ಲಿ ಈ ಈದ್ಗಾ ಮೈದಾನವಿದೆ.   ಅಹಮದ್ ನಗರದಿಂದ ಜವಾಹರ್ ಆಲಿ ಎಂಬ ಫಕೀರನು ತನ್ನ ಶಿಷ್ಯವೃಂದದೊಡನೆ ಶಿರಡಿಗೆ ಬಂದು ಅಲ್ಲಿಯ ವೀರಭದ್ರಸ್ವಾಮಿ ದೇವಸ್ಥಾನದ ಹತ್ತಿರವಿದ್ದ ದೊಡ್ಡ ಕೊಠಡಿಯೊಂದರಲ್ಲಿ ಬಿಡಾರ ಹೂಡಿದ್ದನು. ಅವನು ಒಳ್ಳೆಯ ವಿದ್ವಾಂಸನಾಗಿದ್ದನು ಮತ್ತು ತನ್ನ ಮಧುರವಾದ ಕಂಠದಿಂದ ಕುರಾನ್ ನ ಭಾಗಗಳನ್ನು ಕಂಠಪಾಠ ಮಾಡಿದ ಹಾಗೆ ಹೇಳುತ್ತಿದ್ದನು. ಆದುದರಿಂದ ಹಳ್ಳಿಯ ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಜನರ ಸಹಾಯದಿಂದ ವೀರಭದ್ರಸ್ವಾಮಿ ದೇವಸ್ಥಾನದ ಎದುರಿನಲ್ಲಿ ಈದ್ಗಾ (ಮಹಮ್ಮದೀಯರು ಎದುರಿನಲ್ಲಿ ಕುಳಿತು ಪ್ರಾರ್ಥನೆ ಮಾಡುವ ಗೋಡೆ) ಕಟ್ಟಿಸಲು ಪ್ರಯತ್ನಿಸಿದನು. ಈ ವಿಷಯದಲ್ಲಿ ಕೆಲವರೊಡನೆ ಮನಸ್ತಾಪವಾದ್ದರಿಂದ ಅವನು ಶಿರಡಿಯನ್ನು ಬಿಟ್ಟು ರಹತಾಕ್ಕೆ ಹೋಗಿ ನೆಲೆಸಬೇಕಾಯಿತು. ಆಗಾಗ್ಗೆ ಅವನು ಶಿರಡಿಗೆ ಬಂದು ಬಾಬಾರವರೊಡನೆ ಮಸೀದಿಯಲ್ಲಿ ತಂಗುತ್ತಿದ್ದನು. ಜನರನು ಇದನ್ನು ನೋಡಿ ಬಾಬಾ ಅವನ ಶಿಷ್ಯರೆಂದು ಭಾವಿಸಿದ್ದರು. ಆದರೆ ಅವರಿಗೆ ಇದು ಆಕ್ಷೇಪಣೆಯಾಗಿ ಕಂಡು ಬರಲಿಲ್ಲ. ಸ್ವಲ್ಪ ದಿನಗಳ ನಂತರ ಗುರು ಮತ್ತು ಶಿಷ್ಯರಿಬ್ಬರೂ ರಹತಾಕ್ಕೆ ಹೋಗಿ ನೆಲೆಸಬೇಕೆಂದು ತೀರ್ಮಾನಿಸಿದರು. ಗುರುವಿಗೆ ಶಿಷ್ಯನ ಯೋಗ್ಯತೆ ತಿಳಿದಿರಲಿಲ್ಲ. ಆದರೆ, ಶಿಷ್ಯನಿಗೆ ಮಾತ್ರ ಗುರುವಿನ ಯೋಗ್ಯತೆ ತಿಳಿದಿತ್ತು. ಆದರೂ ಕೂಡ ಶಿಷ್ಯನು ಗುರುವನ್ನು ಕೀಳಾಗಿ ಕಾಣುತ್ತಿರಲಿಲ್ಲ. ಶಿಷ್ಯನು ಗುರುವಿನ ಎಲ್ಲಾ ಕೆಲಸಗಳನ್ನು ಅತ್ಯಂತ ಜಾಗರೂಕತೆಯಿಂದ ವೀಕ್ಷಿಸುತ್ತಿದ್ದನು. ಶಿಷ್ಯನು ಅನೇಕ ಸಲ ರಹತಾಕ್ಕೆ ಹೋಗುತ್ತಿದ್ದನು. ಗುರುಶಿಷ್ಯರ ಮುಖ್ಯ ವಾಸಸ್ಥಾನ ರಹತಾ ಆಗಿತ್ತು. ಶಿರಡಿಯ ಸಾಯಿಬಾಬಾರವರ ಭಕ್ತರಿಗೆ ಇದು ಸಮ್ಮತವಾಗಿರಲಿಲ್ಲ. ಆದ್ದರಿಂದ ಅವರೆಲ್ಲರೂ ಬಾಬಾರವರಲ್ಲಿಗೆ ಗುಂಪು ಕಟ್ಟಿಕೊಂಡು ಹೊರಟರು. ಬಾಬಾ ಅವರನ್ನು ಈದ್ಗಾ ಹತ್ತಿರ ಸಂದರ್ಶಿಸಿದಾಗ ಅವರು "ನನ್ನ ಫಕೀರನು ಬಹಳ ಕೋಪಿಷ್ಠ. ಅವನು ಬರುವುದರೊಳಗಾಗಿ ಹಿಂತಿರುಗಿ" ಎಂದು ಹೇಳಿದರು. ಅಷ್ಟರಲ್ಲಿ ಆ ಫಕೀರನು ಹಿಂತಿರುಗಿದನು. ಮಾತುಕತೆಗಳಾದವು. ಆಗ ಗುರು ಮತ್ತು ಶಿಷ್ಯ ಇಬ್ಬರೂ ಕೂಡ ಶಿರಡಿಗೆ ಹಿಂತಿರುಗಬೇಕೆಂದು ತೀರ್ಮಾನವಾಯಿತು. ಆದ್ದರಿಂದ ಅವರಿಬ್ಬರೂ ಶಿರಡಿಗೆ ಹಿಂತಿರುಗಿದರು. ಕೆಲವು ದಿನಗಳ ನಂತರ ಶಿರಡಿಯ ದೇವಿದಾಸ ಎಂಬುವನಿಂದ ಫಕೀರನು ಸೋಲಿಸಲ್ಪಟ್ಟು ಶಿರಡಿಯನ್ನು ಬಿಟ್ಟು ಓಡಿ ಹೋದನು. ಬಿಜಾಪುರಕ್ಕೆ ಹೋಗಿ ಕೆಲವು ದಿನಗಳ ನಂತರ ಶಿರಡಿಗೆ ಬಂದು ಬಾಬಾರವರ ಮುಂದೆ ಧ್ಯಾನ ಮಾಡತೊಡಗಿದನು. "ನಾನು ಗುರು, ಬಾಬಾರವರು ನನ್ನ ಶಿಷ್ಯ" ಎಂಬ ದುರಭಿಮಾನ ಫಕೀರನನ್ನು ಬಿಟ್ಟು ಓಡಿತು. ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟುಕೊಂಡನು. ಬಾಬಾರವರು ಅವರನ್ನು ಪ್ರೀತಿ, ವಿಶ್ವಾಸ ಮತ್ತು ಗೌರವಗಳಿಂದ ಸತ್ಕರಿಸಿದರು (ಸಾಯಿ ಸಚ್ಚರಿತೆ ಅಧ್ಯಾಯ 5).

ಹಳೆಯ ಈದ್ಗಾ 

ಮಾರುತಿ ಮಂದಿರ

ಲಕ್ಷ್ಮಣ್ ಗೋವಿಂದ್ ಮುಂಗಿ ಯವರು 1890 ರಲ್ಲಿ ಮೊದಲ ಬಾರಿಗೆ ಸಾಯಿಬಾಬಾರವರ ದರ್ಶನ ಮಾಡಿದಾಗ ಸಾಯಿಬಾಬಾರವರು ರಹತಾದ ಮಾರುತಿ ಮಂದಿರದಲ್ಲಿ ತಂಗಿದ್ದರು ಎಂದು ಹೇಳುತ್ತಾರೆ. ಮುಂಗಿಯವರು ತಮ್ಮ ಮದುವೆಯ ಸಲುವಾಗಿ ಸಾಯಿಬಾಬಾರವರನ್ನು ಹಣದ ಸಹಾಯ ಮಾಡಿರೆಂದು ಕೇಳಲು ರಹತಾಕ್ಕೆ ಹೋಗಿದ್ದಾಗ ಸಾಯಿಯವರು ತಮ್ಮ ಲೀಲೆಯಿಂದ ಹಣದ ಸಹಾಯ ಮಾಡಿದುದಾಗಿ ಇವರು ಹೇಳುತ್ತಾರೆ. 

ಹಳೆಯ ಮಾರುತಿ ಮಂದಿರವನ್ನು ಜೀರ್ಣೋದ್ದಾರ ಮಾಡಲಾಗಿದ್ದು ಈಗ ಸಾಯಿಭಕ್ತರು ರಹತಾಕ್ಕೆ ಹೋದರೆ ಹೊಸದಾದ ಮಾರುತಿ ಮಂದಿರವನ್ನು, ಆಳೆತ್ತರದ ಮಾರುತಿಯ ವಿಗ್ರಹವನ್ನು ನೋಡಬಹುದು. ಹಳೆಯ ವಿಗ್ರಹಗಳನ್ನು ಕೂಡ ಇದೇ ದೇವಾಲಯದ ಒಳಗಡೆ ನೋಡಬಹುದು. 

ರಹತಾದ ಮಾರುತಿ ಮಂದಿರದ ಹೊರನೋಟ 

 ಹಳೆಯ ಮಾರುತಿ,ಈಶ್ವರ ಮತ್ತು ನಂದಿಯ ವಿಗ್ರಹಗಳು 


 ಹೊಸದಾದ ಮಾರುತಿಯ ಆಳೆತ್ತರದ ವಿಗ್ರಹ 

ಪವಿತ್ರ ಅಮೃತಶಿಲೆಯ ಪಾದುಕೆಗಳು

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment