Monday, August 29, 2011

ಸಾಯಿ ಮಹಾಭಕ್ತ ಪುರುಷೋತ್ತಮ ಆರ್.ಅವಸ್ಥೆ - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಪುರುಷೋತ್ತಮ ಆರ್.ಅವಸ್ಥೆ ಬಿ.ಎ., ಎಲ್.ಎಲ್.ಬಿ.ಪದವೀಧರರು. ಇವರು ಗ್ವಾಲಿಯರ್ ನ ನಿವೃತ್ತ ನ್ಯಾಯಾಧೀಶರು. ಇವರು ಓರ್ವ ಮಹಾನ್ ಸಾಯಿ ಭಕ್ತರು. ಇವರ ಸಹಾಯವಿಲ್ಲದಿದ್ದರೆ ಪರಮ ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರು ಬಾಬಾರವರ ಪ್ರಚಾರ ಕಾರ್ಯವನ್ನು ಸಮರ್ಪಕವಾಗಿ ಸಾಧಿಸಲಾಗುತ್ತಿರಲಿಲ್ಲ. ಶ್ರೀ.ಅವಸ್ಥೆಯವರು ಒಂದು ಶಾಸ್ತ್ರೀಯ ಕುಟುಂಬದಲ್ಲಿ 1870 ನೇ ಇಸವಿಯಲ್ಲಿ ಜನ್ಮ ತಾಳಿದರು. ಅವರು ಧಾರ್ಮಿಕ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ತಮ್ಮ 6 ನೇ ವಯಸ್ಸಿನಲ್ಲಿಯೇ "ದೇವ ಮಾಮಲ್ತೆದಾರ್" (ಶ್ರೀ.ಯಶವಂತ ರಾವ್ ಭಾಸ್ಕರ ಸತಾರಾಂ ಮಾಮಲ್ತೆದಾರ್) ರವರ ಸಂಪರ್ಕವನ್ನು ಬೆಳೆಸಿದ್ದರು. ಅವಸ್ಥೆಯವರು ದೇವ ಮಾಮಲ್ತೆದಾರ್ ಅವರನ್ನು ಗುರುವಾಗಿ ಸ್ವೀಕರಿಸಿದ್ದರು. ದೇವ ಮಾಮಲ್ತೆದಾರ್ ರವರು ನಿವೃತ್ತಿಯಾದ ಮೇಲೆ ಧಾರ್ಮಿಕ ಜೀವನವನ್ನು ನಡೆಸುತ್ತಾ ವೃದ್ದರು ಮತ್ತು ಯುವಕರನ್ನು ಪ್ರೇರೇಪಿಸುತ್ತಿದ್ದರು. ಅವಸ್ಥೆಯವರಿಗೆ ದೇವ ಮಾಮಲ್ತೆದಾರ್ ರವರಲ್ಲಿ ಆಸಕ್ತಿ ಉಂಟಾಗಿ 1887-1890 ರಲ್ಲಿ ಅಂದರೆ 17-20 ನೇ ವಯಸ್ಸಿನಲ್ಲಿ ತಂದೆಯೊಡಗೂಡಿ ಅನೇಕ ಸಾರಿ ಅವರ ದರ್ಶನ ಪಡೆದು ಧಾರ್ಮಿಕ ಪ್ರಭಾವಕ್ಕೆ ಒಳಗಾದರು. ಇದು ಒಳ್ಳೆಯ ತಳಹದಿಗೆ ನಾಂದಿಯಾಯಿತು. ಅವರು ಕಾಲೇಜ್ ವಿದ್ಯಾಭ್ಯಾಸದ ನಂತರ ಜಾನ್ ಸ್ಟುವರ್ಟ್ ಮಿಲ್ ಮತ್ತು ಸ್ಪೆನ್ಸರ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದರು. ಪಾಶ್ಚಿಮಾತ್ಯ ದೇಶಗಳ ನಾಸ್ತಿಕ ತತ್ವಗಳು ಅವರ ಮನಸ್ಸನ್ನು ಆಕರ್ಷಿಸಿ ಅವರು ಅಹಂಕಾರ ಸ್ವಭಾವವನ್ನು ಬೆಳೆಸಿಕೊಂಡರು. ಅವರು ಒಳ್ಳೆಯ ತರ್ಕವಾದಿಯಾಗಿ, ವಾಗ್ಮಿಯಾಗಿ ಹೆಚ್ಚು ಹಣವನ್ನು ಸಂಪಾದಿಸುವ ಕಡೆ ತಮ್ಮ ಗಮನವನ್ನು ಹರಿಸಿದರು. ದೇವ ಮಾಮಲ್ತೆದಾರ್ ರವರ ಪ್ರಭಾವ ಅವರಿಂದ ಸ್ವಲ್ಪ ದೂರವಾದಂತಿತ್ತು. ಅವರ ಅದೃಷ್ಟವೋ ಎಂಬಂತೆ 1889 ರಲ್ಲಿ ಅವರ 19ನೇ ವಯಸ್ಸಿನಲ್ಲಿ ಅಂಗಡಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಂದು ಭಗವದ್ಗೀತೆಯ ಚಿಕ್ಕ ಪ್ರತಿಯನ್ನು 1/2 ಆಣೆಗೆ ಕೊಂಡುಕೊಂಡು ಕಿಸೆಯಲ್ಲಿ ಭದ್ರವಾಗಿಟ್ಟುಕೊಂಡರು ಮತ್ತು ತಮ್ಮ ವಿರಾಮದ ಸಮಯದಲ್ಲಿ ಪ್ರತಿದಿನ ಭಗವದ್ಗೀತೆ ಓದುವ ಅಭ್ಯಾಸ ಮಾಡಿಕೊಂಡರು. ಇದು ಅವರ ಕೊನೆಯ ದಿನಗಳ ಭವಿಷ್ಯಕ್ಕೆ ಒಳ್ಳೆಯದನ್ನು ಮಾಡಿತು. ಅವರು ನಾಸ್ತಿಕರಾಗಿ ಸುಮಾರು 8 ವರ್ಷಗಳು ಕಳೆದರು. ಏಕೆಂದರೆ ಅವರು ತುಂಬು ಯೌವನದಲ್ಲಿದ್ದರು. ಆಗಲೂ ಕೂಡ ಅವರಿಗೆ ತಮ್ಮ ನಾಸ್ತಿಕತ್ವಕ್ಕೆ ಹೊಡೆತ ಬಿದ್ದಿತು. ಇದು ಗಣನೀಯವಾಗಿತ್ತು. ಅವರು ಒಮ್ಮೆ ಭಗವದ್ಗೀತೆಯ ಯಾವುದೋ ಒಂದು ಪುಟವನ್ನು ತೆಗೆದು ಓದಿದರು. ಅದರಲ್ಲಿ ದೇವರಿಂದ ದೂರವಾಗಿ ಮಾಯೆಯ ಹಿಡಿತದಲ್ಲಿ ಸಿಕ್ಕಿಕೊಂಡು ದೈವತ್ವ ಉಂಟಾಗಿ ಭಯ ಉಂಟಾಗುವ ಸ್ಥಿತಿಯ ಬಗ್ಗೆ ತಿಳಿಸಲಾಗಿತ್ತು. ಇನ್ನೊಂದು ಸಂದರ್ಭದಲ್ಲಿ ಅವರು ಓರ್ವ ದಕ್ಷಿಣ ಭಾರತದ ಮಹಿಳೆ ಶ್ರೀರಾಮನ ಚಿತ್ರಪಟದ ಮುಂದೆ ಕುಳಿತು ಮೀರಾಬಾಯಿ, ಮುಕ್ತಾಬಾಯಿ ಮತ್ತು ಇತರ ಮಹಾಭಕ್ತರುಗಳು ಶ್ರೀರಾಮನ ಬಗ್ಗೆ ಹಾಡಿದ ಭಕ್ತಿ ಗೀತೆಗಳನ್ನು ಆಕೆ ಹಾಡುತ್ತಿರುವುದನ್ನು ಕೇಳಿದರು.  ಶ್ರೀ.ಅವಸ್ಥೆಯವರು ಆ ಮಹಿಳೆಯ ಹಾಡಿನಿಂದ ಪ್ರಭಾವಿತರಾಗಿ ಆಕೆಯ ಭಕ್ತಿಗೆ ಮನಸೋತರು. ಮತ್ತೊಂದು ಬಾರಿ, ಅವರು ತಮ್ಮ ಸಹೋದರರೊಂದಿಗೆ ದೇವರ ಅಸ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಅವರ ಸೋದರ ಮಾವ ಶ್ರೀ. ಬಲರಾಮ ಬವಲಾ ಥಾಕೂರ್ ದಾಸ್ ಅವರು ಜಡ್ಜ್ ಆಗಿ ಆರಿಸಲ್ಪಟ್ಟರು. ಚರ್ಚೆ ಬಿರುಸಾಗಿ ನಡೆಯುತ್ತಿತ್ತು ಮತ್ತು ಯಾರೊಬ್ಬರೂ ತೀರ್ಪುಗಾರನ ನಿರ್ಣಯವನ್ನು ಒಪ್ಪದೇ ವಾದ ವಿವಾದ ಮಾಡುತ್ತಲೇ ಇದ್ದರು. ಶ್ರೀ.ಅವಸ್ಥೆಯವರು ಕೀರ್ತನೆ ಮತ್ತು ಪುರಾಣಗಳಲ್ಲಿ ನಂಬಿಕೆ ಇದ್ದ ಒಬ್ಬ ನಿರ್ಣಾಯಕರನ್ನು ಸಂಧಿಸಿ ಸಂತರುಗಳು ನಿಜವಾಗಿ ಪ್ರಾಮಾಣಿಕರಾಗಿದ್ದರೆ ಅದನ್ನು ನನಗೆ ನಿರೂಪಿಸಿ ಎಂದು ಕೇಳಿಕೊಂಡರು. ಆಗ ಅವರ ಸೋದರಮಾವ ಅವಸ್ಥೆ ಅವರನ್ನು ದೇವಸ್ಥಾನದಲ್ಲಿದ್ದ ಶ್ರೀರಾಮನ ಪ್ರತಿಮೆ ಮುಂದೆ ನಿಲ್ಲಿಸಿದರು ಮತ್ತು ಅವರು ಪವಿತ್ರ ಗ್ರಂಥಗಳಲ್ಲಿ ಉತ್ತಮವಾಗಿರುವ ಎಲ್ಲವನ್ನೂ ಸಂಪೂರ್ಣವಾಗಿ ನಂಬಿ ಅವಸ್ಥೆಯವರು ಓರ್ವ ಸಂತನನ್ನು ಭೇಟಿಯಾಗಿ ಅವರಿಂದ ನೇರವಾದ ಅನುಭವ ಪಡೆದು ಅವರನ್ನು ತನ್ನ ಗುರುವೆಂದು ಸ್ವೀಕರಿಸಲು ಸಿದ್ಧ ಎಂದು ಮಾತು ಕೊಡಲು ಹೇಳಿದರು. ಆಲ್ಲದೆ, ಅವರ ಸೋದರಮಾವ ಪಾಲುಸ್ ನ ದೊಂಡಿ ಬುವಾ, ಫಲ್ಟಾನ್ ನ ಹರಿ ಮಹಾರಾಜ್, ಕೊಲ್ಹಾಪುರದ ಕುಂಬಾರ ಸ್ವಾಮಿ ಅವರುಗಳನ್ನು ಹೆಸರಿಸಿದರು. ಅಲ್ಲದೆ, ಅವರ ಸೋದರ ಮಾವ ಈ ಮೇಲೆ ತಿಳಿಸಿದ ಸಂತರುಗಳನ್ನು ದರ್ಶಿಸಿ ಅವರುಗಳನ್ನು ಪರೀಕ್ಷಿಸಿ ಖಾತ್ರಿ ಮಾಡುವೆನು ಎಂದು ಇವರಿಂದ ಭಾಷೆ ತೆಗೆದುಕೊಂಡರು.

 ಅದೃಷ್ಟವಶಾತ್, ಶ್ರೀ.ಅವಸ್ಥೆಯವರು ಈ ಮೇಲೆ ತಿಳಿಸಿದ ಎಲ್ಲಾ ಸಂತರುಗಳ ದರ್ಶನ ಮಾಡಿದರು. ಶ್ರೀ.ಅವಸ್ಥೆಯವರು ಬೆಸಂತ್ ಮತ್ತು ರಿಚರ್ಡ್ಸನ್ ಅವರ ತತ್ವಜ್ಞಾನದ ಉಪನ್ಯಾಸಗಳನ್ನು ಕೇಳಿ ತತ್ವಜ್ಞಾನದ ಮತ್ತು ಧರ್ಮದ ಪುಸ್ತಕಗಳನ್ನು ಓದಿದರು. ಆಗ ಪುಣೆಯಲ್ಲಿ 1896ರ ಕೊನೆಯಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಹರಡಿ ಅನೇಕ ಸಾವು ನೋವುಗಳಾಗಿ ಇವರಿಗೆ ಧರ್ಮ ಮತ್ತು ದೇವರೆಡೆಗೆ ಹೋಗಲು ಅನುವಾಯಿತು. ಅವರು ಮಹಾರಾಷ್ಟ್ರದ ಸಂತರಾದ ಜ್ಞಾನೇಶ್ವರ, ನಾಮದೇವ, ತುಕಾರಾಮ, ರಾಮದಾಸ ಮತ್ತು ಇನ್ನು ಅನೇಕ ಸಂತರುಗಳ ಜೀವನ ಚರಿತ್ರೆಯನ್ನು ಓದಿದರು. ಅವರು ತಾರಗಾವ್ ನಲ್ಲಿದ್ದ ಚಿಕ್ಕಪ್ಪನ ಮನೆಗೆ ಹೋಗಿ ಕೃಷ್ಣನ ಪವಿತ್ರ ಗ್ರಂಥಗಳನ್ನು ಓದಿದರು. ದೊಂಡಿಬುವಾ ಅವರ ಬಗ್ಗೆ ವಿಚಾರಿಸಿ ಪಾಲುಸ್ ಗೆ ಹೇಗೆ ಹೋಗಬೇಕೆಂದು ತಿಳಿದುಕೊಂಡರು. ಅವರು ಪಾಲುಸ್ ನ ದೊಂಡಿಬುವಾ ದರ್ಶನ ಪಡೆದರು ಮತ್ತು ಅವರನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ಆದರೆ, ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಲು ಸಿದ್ಧರಿರಲಿಲ್ಲ. ಅಂತೆಯೇ, ದೊಂಡಿಬುವಾರವರು ಕೂಡ "ತಾವು ಯಾರಿಗೂ ಗುರುವಾಗಲು ಇಷ್ಟ ಪಡುವುದಿಲ್ಲ" ಎಂದರು. ಆದರೂ ಅವರು ಅವಸ್ಥೆಯವರನ್ನು ಆಶೀರ್ವದಿಸಿದರು.

ಮುಂದೆ ಇವರು ಬ್ರಾಹ್ಮಣ ಕುಲಕ್ಕೆ ಸೇರಿದ ಸಂತ ಪರಮಹಂಸರವರನ್ನು ಭೇಟಿ ಮಾಡಿದರು ಮತ್ತು ಅವರಲ್ಲಿ ಬ್ರಹ್ಮಜ್ನಾನದ ಬಗ್ಗೆ ಪ್ರಶ್ನೆಯನ್ನು ಮಾಡಿದರು. ಆಗ ಪರಮಹಂಸರು ಅವಸ್ಥೆಯವರನ್ನು ಕೆಳಗೆ ಮಲಗಲು ಹೇಳಿ ತಾವು ಪಕ್ಕದಲ್ಲಿ ಮಲಗಿ "ಹೆದರಬೇಡ" ಎಂದರು. ಆದರೆ, ಆ ಸಂತ ಅವರ ಕೊರಳಿಗೆ ಕೈ ಹಾಕಿದಾಗ ಅವರ ಗಂಟಲು ಕಟ್ಟಿತು. ಅವಸ್ಥೆ ಹೆದರಿದರು ಮತ್ತು ಅವರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಆ ಸಂತರು "ನೀನೊಬ್ಬ ಹೇಡಿ. ಇಲ್ಲಿಂದ ಹೊರಟುಹೋಗು. ನೀನು ಬ್ರಹ್ಮನನ್ನು ತಿಳಿಯಲಾರೆ" ಎಂದರು.

ಮುಂದೆ ಅವಸ್ಥೆಯವರು ಸತಾರಾದ ದೇವಿ ಬುವಾರವರ ಬಳಿಗೆ ಬಂದರು. ಅನಂತರ ಅವರು ಪೂನಾದ ಸೋಮೇಶ್ವರ ದೇವಸ್ಥಾನದ ಧರ್ಮಶಾಲೆಯಲ್ಲಿ ತಂಗಿದ್ದ ವೃದ್ಧ ಮಹಿಳೆಯನ್ನು ಸಂಧಿಸಲು ಬಂದರು. ಅವರು ತಮ್ಮ ಸ್ನೇಹಿತರೊಂದಿಗೆ ಆ ಮಹಿಳೆಯನ್ನು ಭೇಟಿಯಾದರು. ಅವರು ಇವರಿಗೆ "ಪಂಚಾಕ್ಷರಿ" ಮಂತ್ರವನ್ನು ಉಪದೇಶಿಸಿದರು ಮತ್ತು ತಾನು ಅವಸ್ಥೆಯ ಗುರುವಾಗುವುದಿಲ್ಲ ಎಂದು ತಿಳಿಸಿದಳು. ಅವಸ್ಥೆಯವರಿಗೆ ಪಂಚಾಕ್ಷರಿ ಮಂತ್ರ ದೀಕ್ಷೆಯಾಗಿದ್ದು 1898 ರಲ್ಲಿ. ಇವರು ಶ್ರೀರಾಮನ ದರ್ಶನವನ್ನು 1912 ರಲ್ಲಿ ಪಡೆದರು. 1914 ರಲ್ಲಿ ಇವರು ಪಂಡರಾಪುರಕ್ಕೆ ಹೋಗಿ ಆ ಮಹಿಳಾ ಗುರುವಿಗೆ ಮಾತು ಕೊಟ್ಟಂತೆ ಪಂಡರೀನಾಥನ ದರ್ಶನ ಮಾಡಬೇಕೆಂದುಕೊಂಡರು. ಆಗ ಸಾಯಿಬಾಬಾರವರ ಭಕ್ತರಾದ ನ್ಯಾಯಮೂರ್ತಿ ರೀಗಿಯವರು ಇವರ ಬಳಿ ಬಂದು ಇವರ ಪಂಡರಾಪುರದ ಯಾತ್ರೆಯ ವಿಷಯವನ್ನು ತಿಳಿದು ಅವರಿಗೆ ಶಿರಡಿಯಲ್ಲಿ ನಿಲ್ಲಬೇಕೆಂದು ಹೇಳಿದರು. ಏಕೆಂದರೆ ಶಿರಡಿಯು ಇಂದೂರಿನಿಂದ ಪಂಡರಾಪುರಕ್ಕೆ ಹೋಗುವ ಮಾರ್ಗದಲ್ಲಿ ಇರುತ್ತದೆ. ಅವಸ್ಥೆಯವರು ರೀಗೆ ಸಮೇತರಾಗಿ ಶಿರಡಿಗೆ ಹೋಗುವುದಾಗಿ ಮಾತು ನೀಡಿದರು. 1914ನೇ ಕ್ರಿಸ್ ಮಸ್ ದಿನದಂದು ಪ್ರಯಾಣ ಹೊರಟರು. ಆಗ ಇವರಿಗೆ ಮಹೂನಲ್ಲಿ ಪ್ರಯಾಣಕ್ಕೆ ತಡೆಯುಂಟಾಯಿತು. ಟ್ರೈನನ್ನು ಮಿಲಿಟರಿ ವಶಕ್ಕೆ ತೆಗೆದುಕೊಂಡ ಮಿಲಿಟರಿ ಕಮಾಂಡರ್ ಅವಸ್ಥೆ ಮತ್ತು ರೀಗೆಯವರಿಗೆ ತಮ್ಮ ಡಬ್ಬಿಯಲ್ಲಿಯೇ ಕುಳಿತು ಪ್ರಯಾಣವನ್ನು ಮುಂದುವರಿಸುವಂತೆ ಹೇಳಿದರು. ರೀಗೆಯವರು ಪ್ರಯಾಣದ ಉದ್ದಕ್ಕೂ ಸಾಯಿಬಾಬಾರವರನ್ನು ಕುರಿತು ಹಾಡುತ್ತಾ ಶಿರಡಿಯನ್ನು ತಲುಪಿದರು. ಅವರುಗಳು ಶ್ರೀಮತಿ.ರಾಧಾಕೃಷ್ಣ ಆಯಿಯವರನ್ನು ಸಂಧಿಸಿ ಅಲ್ಲಿ ತಂಗಿದರು. ರಾಧಾಕೃಷ್ಣ ಆಯಿ ಅವರುಗಳಿಗೆ ಸದ್ಗುರುವಾಗಿ ಕಂಡರು. ಅವಳು ಅವರ ಮಹಿಳಾ ಗುರುವಿನಲ್ಲಿ ನಡೆದ ಸಂಗತಿಯನ್ನು ನೆನಪು ಬರುವಂತೆ ಮಾಡಿದರು ಮತ್ತು ಅವಸ್ಥೆಯವರನ್ನು ಒಬ್ಬ ಅಸಾಧಾರಣ ಮನುಷ್ಯ ಎಂದು ಗುರುತಿಸಿದರು. ಅವರು ರಾಧಾಕೃಷ್ಣ ಆಯಿಯನ್ನು ತಮ್ಮ ಮಹಿಳಾ ಗುರುವಿನ ಸಹೋದರಿ ಎಂದು ಭಾವಿಸಲು ಒಪ್ಪಿದರು. ಆದರೆ ಅವಳಿಗೆ ಬದಲಾಗಿ ಅಲ್ಲ ಎಂದು ಕೂಡ ತಿಳಿಸಿದರು. ಆಗ ಆಯಿಯವರು "ನಾನು ಸತ್ತರೂ ನೀನು ಒಪ್ಪಲಾರೆಯಾ" ಎಂದು ಕೇಳಿದರು. ಅವರು "ಇಲ್ಲ" ಎಂದರು. ಆ ಕ್ಷಣವೇ ಆಯಿಯವರು ಸತ್ತಂತೆ ಕೂಗಿಕೊಂಡರು ಮತ್ತು ನೆಲದ ಮೇಲೆ ಸತ್ತಂತೆ ಮಲಗಿದರು. ಅವರು ಮೊದಲಿಗೆ ಗುರುವನ್ನು ಸಂಧಿಸಿದಾಗಲೂ ಇದೇ ರೀತಿ ಆಗಿತ್ತು. ಅವರಿಗೆ ಎನೂ ತೋಚದೆ ಅವಳ ಹತ್ತಿರ ಹೋಗಿ ಅವಳ ತಲೆಯನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡು ಅಳಲು ಪ್ರಾರಂಭಿಸಿದರು. ಅವಳನ್ನು ಪುನರ್ಜೀವಗೊಳಿಸಲು ಪಂಚಾಕ್ಷರಿ ಮಂತ್ರವನ್ನು ಜೋರಾಗಿ ಹೇಳಲು ಪ್ರಾರಂಭಿಸಿದರು. ಅವಳು ಬದುಕಿದರೆ ತಮ್ಮ 16 ವರ್ಷಗಳು ಜಪಿಸಿದ ಮಂತ್ರದಿಂದ ಗಳಿಸಿದ ಪುಣ್ಯವನ್ನು ಧಾರೆಯೆರೆಯುವಂತೆ ಪ್ರಾರ್ಥಿಸಿದರು. ಆ ಕೂಡಲೆ ಆಯಿಯವರು ಎದ್ದು ಕುಳಿತರು ಮತ್ತು "ನೀನು ಹೋಗಿ ನಿನ್ನ ಕೆಲಸ ನೋಡು" ಎಂದು ಹೇಳಿದಳು. ತಮ್ಮ ಗುರುಗಳು ಮಂತ್ರವನ್ನು ಜೋರಾಗಿ ಉಚ್ಚರಿಸಬೇಡವೆಂದು ಹೇಳಿದ್ದನ್ನು ತಾವು ಪಾಲಿಸದಿದ್ದಕ್ಕಾಗಿ ವ್ಯಥೆಪಟ್ಟುಕೊಂಡರು. ಅವರ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಮಂತ್ರವನ್ನು ಪುನರುಚ್ಚಾರಣೆ ಮಾಡುತ್ತಲೇ ಇದ್ದರು. ಒಂದೆರಡು ನಿಮಿಷದ ನಂತರ ಆಯಿಯವರು ಅವರಿಗೆ ಮಂತ್ರೋಚ್ಚಾರಣೆ ನಿಲ್ಲಿಸೆಂದರು ಮತ್ತು ಮಲಗಿಕೊಂಡು ನಿದ್ರೆ ಮಾಡಲು ಹೇಳಿದರು. ಅವರು ಆಯಿಯವರು ಆದೇಶವನ್ನು ಪಾಲಿಸಿದರು. ಮರುದಿನವೂ ಇದೇ ತರಹದ ಅನುಭವವಾಯಿತು. ಕೊನೆಯ ದಿನ ಅವರು ಶಿರಡಿಗೆ ಬಂದಿದ್ದೇ ತಪ್ಪಾಯಿತೆಂದು ತಿಳಿದರು. ತಮ್ಮ ಗುರುವಿನ ಸಲಹೆಯನ್ನು ಪಾಲಿಸದೇ ಇದ್ದುದ್ದಕ್ಕಾಗಿ ವ್ಯಥೆಪಟ್ಟರು. ಅವರ ಗುರುವು "ನೀನು ಯಾವ ಸಂತನ ಬಳಿಗೂ ಹೋಗಬೇಡ. ಅವರು ನಿನ್ನನ್ನು ಪೀಡಿಸುವರು" ಎಂದಿದ್ದರು. ಆಗ ಅವಸ್ಥೆಯವರು ತಾವು ಶಿರಡಿಯಲ್ಲಿ ಇರುವುದರಿಂದ ತೊಂದರೆ ಆಗಿ ಮಂತ್ರಶಕ್ತಿ ಕಳೆದು ಹೋಗುವುದೆಂದು ಭಾವಿಸಿದರು. ಈ ಮನೋಭಾವದಲ್ಲಿ ಅವರು ಸಾಯಿಯವರು ರಾಧಾಕೃಷ್ಣ ಆಯಿ ಮತ್ತು ಇತರ ಭಕ್ತರನ್ನು ಈ ಮಾರ್ಗಕ್ಕೆಳೆದು, ಈ ಶಿರಡಿಯ ವೃದ್ಧ ಫಕೀರ ತಾನೇ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆಂದು ಭಾವಿಸಿದರು. ಕೂಡಲೆ ಅವರು ಸಾಯಿಯವರ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕೆಂದು "ಶ್ರೀರಾಮ್, ಶ್ರೀರಾಮ್" ಎಂದು ನಾಮಜಪವನ್ನು ಮುಂದುವರಿಸಿದರು. ಆಯಿ ಮತ್ತು ರೀಗೆಯವರು ಬಾಬಾರವರ ಬಳಿಗೆ ಬಂದು ಅವಸ್ಥೆಯವರನ್ನು ಈ ಸ್ಥಿತಿಯಿಂದ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡರು. ಇಡೀ ರಾತ್ರಿ ಈ ರೀತಿ ಇದ್ದ ಅವಸ್ಥೆಯವರಿಗೆ ಬೆಳಗಾಗುತ್ತಲೇ ಚಾವಡಿಯಿಂದ ಬಾಬಾರವರು "ಅಲ್ಲಾ ಮಾಲಿಕ್" ಎಂದು ಮೃದುವಾಗಿ ಹೇಳಿದ ಧ್ವನಿ ಕೇಳಿಸಿತು. ಸಾಯಿಯವರ ಆ ಧ್ವನಿಯನ್ನು ಕೇಳಿ ಅವರ ಹುಚ್ಚುತನ ಹೊರಟುಹೋಯಿತು. ಅವರು ಮಾನಸಿಕವಾಗಿ ಬಾಬಾರವರಲ್ಲಿ ಕ್ಷಮೆ ಯಾಚಿಸಿದರು. ಬಾಬಾರವರು ರೀಗೆ ಅವರನ್ನು ಕರೆಸಿ ಅವಸ್ಥೆಯನ್ನು ಶಿರಡಿಯಿಂದ ಅಂದೇ ಕರೆದುಕೊಂಡು ಹೋಗಲು ಹೇಳಿದರು. ಟಾಂಗಾವನ್ನು ತರಿಸಿ ರೀಗೆ ಮತ್ತು ಅವಸ್ಥೆ ಶಿರಡಿಯಿಂದ ಹೊರಟರು. ಆ ಹಳ್ಳಿಯ ದ್ವಾರದಲ್ಲಿ ಬಾಬಾರವರಿಗೆ ನಮಸ್ಕರಿಸಿ ಅವರು ಹೊರಡಲು ಆಶೀರ್ವಾದ ಪಡೆದರು. ದಾರಿಯುದ್ದಕ್ಕೂ ಅವಸ್ಥೆಯವರಿಗೆ ಪ್ರತಿಯೊಂದು ಗಂಡು ಪಕ್ಷಿಯೂ, ಪ್ರಾಣಿಯೂ ಬಾಬಾರವರಂತೆ ಕಂಡುಬಂದಿತು. ಪ್ರತಿಯೊಂದು ಹೆಣ್ಣು ಪಕ್ಷಿಯೂ, ಪ್ರಾಣಿಯೂ ರಾಧಾಕೃಷ್ಣ ಆಯಿಯವರಂತೆ ಕಂಡು ಬಂದಿತು. ಆವರು ಲೇಂಡಿ ತಲುಪುವ ತನಕ ಈ ತರಹ ಅನುಭವವಾಯಿತು. ಇದಾದ ನಂತರ ಅವರ ಮಂತ್ರ ಶಕ್ತಿ ಅವರನ್ನು ಬಿಟ್ಟಿತು. ಅವರು ತಮ್ಮ ಸ್ನೇಹಿತನ ತೊಡೆಯ ಮೇಲೆ ಸಮಾಧಾನವಾಗಿ ಮಲಗಿದರು ಮತ್ತು ಕ್ಷೇಮವಾಗಿ ಮನೆಯನ್ನು ಸೇರಿದರು.

ಶಿರಡಿಗೆ ಬಂದ ಮೇಲಿನಿಂದ ಅವರಿಗೆ ಪಂಡರಾಪುರಕ್ಕೆ ಹೋಗುವ ಆಸೆ ಹೊರಟುಹೋಯಿತು. ಈ ಘಟನೆಯಾದ ನಂತರದಿಂದ ಅವಸ್ಥೆಯವರು ಶಿರಡಿಗೆ ತಮ್ಮ ಕುಟುಂಬ ಸಮೇತರಾಗಿ ಬಾಬಾರವರ ಮಹಾಸಮಾಧಿಯ ತನಕವೂ ವರ್ಷಕ್ಕೆ 2-3 ಬಾರಿ ಬರುತ್ತಿದ್ದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, August 27, 2011

ಸಾಯಿ ಮಹಾಭಕ್ತ  - ಮೋರೆಶ್ವರ್ ಡಬ್ಲ್ಯೂ.ಪ್ರಧಾನ್  - ಕೃಪೆ: ಸಾಯಿಅಮೃತಧಾರಾ.ಕಾಂ



ಮೋರೆಶ್ವರ್ ಡಬ್ಲ್ಯೂ.ಪ್ರಧಾನ್ ರವರು ಕೆಲವು ಕಾಲ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ನಾನಾ ಸಾಹೇಬ್ ಚಂದೋರ್ಕರ್ ರವರ ಪ್ರಚೋದನೆ ಮೇರೆಗೆ ಸಾಯಿಬಾಬಾರವರ ಬಳಿಗೆ ಬಂದರು .ಒಮ್ಮೆ ಪ್ರಧಾನ್ ರವರ ಬಂಧುಗಳು ಮೇ 1910 ರಲ್ಲಿ ಚಂದೋರ್ಕರ್ ರವರ ಹತ್ತಿರ ಮಾತನಾಡುತ್ತಾ ಇದ್ದರು. ಆಗ ಮೋರೆಶ್ವರ್ ರವರ ಸಹೋದರ ಅಕ್ಕಲಕೋಟೆ ಮಹಾರಾಜರಂತೆ ಈಗ ಯಾರಾದರೂ ಸಂತರು ಇದ್ದಾರೆಯೇ ಎಂದು ಕೇಳಲು ಚಂದೋರ್ಕರ್ ರವರು ಶಿರಡಿಯಲ್ಲಿ ಸಾಯಿಬಾಬಾ ಎಂಬ ಮಹಾತ್ಮರಿದ್ದಾರೆ. ಅಲ್ಲಿಯವರೆಗೆ ಇವರ ಬಂಧುಗಳು ಸಾಯಿಯವರ ಹೆಸರನ್ನೇ ಕೇಳಿರಲಿಲ್ಲ. ಚಂದೋರ್ಕರ್ ರವರು ಶಿರಡಿಯು ಅಹಮದ್ ನಗರ ಜಿಲ್ಲೆಯ ಕೋಪರ್ ಗಾವ್ ತಾಲ್ಲೂಕಿನಿಂದ 10 ಕಿಲೋಮೀಟರ್ ದೂರದಲ್ಲಿ ದೌಂಡ್ ಮನಮಾಡ್ ದಾರಿಯಲ್ಲಿ ಇರುವುದಾಗಿ ಹೇಳಿ ಸಾಯಿಬಾಬಾರವರ ಶಕ್ತಿ, ದಯೆ, ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ವಿವರ ನೀಡಿದರು. ಈ ಮಾತನ್ನು ಕೇಳಿದ ಮರುದಿನವೇ 14 ಜನಗಳು ಶಿರಡಿಗೆ ಪ್ರಯಾಣ ಬೆಳೆಸಿದರು. ಆದರೆ ಆ ಗುಂಪಿನಲ್ಲಿ ಪ್ರಧಾನ್ ಇರಲಿಲ್ಲ. ಅವರೆಲ್ಲ ಸಾಯಿಬಾಬಾರವರ ದರ್ಶನ ಮಾಡಿ ಬರುವಾಗ ತಮ್ಮ ಜೊತೆ ಸಾಯಿಯವರ ಚಿತ್ರಪಟ, ದಾಸಗಣು ರವರ ಲೀಲಾಮೃತ (ಅಧ್ಯಾಯ 31 - ಸಾಯಿಯವರ ಜೀವನ ಮತ್ತು ಪವಾಡ) ಪುಸ್ತಕವನ್ನು ತೆಗೆದುಕೊಂಡು ಬಂದರು. ಆ ಪುಸ್ತಕವನ್ನು ಓದಿದ ಮೇಲೆ ಪ್ರಧಾನ್ ರವರ ಅನುಮಾನಗಳೆಲ್ಲವೂ ದೂರವಾಗಿ ಸಾಯಿಬಾಬಾರವರ ಪರಮ ಭಕ್ತರಾದರು. ಅವರ ಪತ್ನಿ ಇನ್ನು ಹೆಚ್ಚಿನ ಪರಮಭಕ್ತಳಾದಳು. ಆ ಕೂಡಲೇ ಅವರು ಶಿರಡಿಗೆ ಹೋಗುವ ನಿರ್ಧಾರ ಮಾಡಿದರು. 

ಇವರ ಬಂಧುಗಳು ಶಿರಡಿಯಿಂದ ಬಂದ 15 ದಿನಗಳ ನಂತರ ಪ್ರಧಾನ್ ರವರು ತಮ್ಮ ಪತ್ನಿ ಮತ್ತು ತಮ್ಮ ಮಕ್ಕಳಾದ ಬಾಬು ಮತ್ತು ಖಾಪು ಅವರ ಜೊತೆಗೂಡಿ ಶಿರಡಿಗೆ ಹೊರಟರು. ಅವರು ಬಾಬಾರವರಿಗೆ ಕೊಡಲು ಸ್ವಲ್ಪ ಚಿನ್ನದ ಸವರನ್ ಗಳನ್ನು ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದರು. ಇವರೆಲ್ಲ ಶಿರಡಿಗೆ ಆಗಮಿಸಿದಾಗ ಬಾಬಾರವರು ಲೇಂಡಿ ತೋಟದ ದಾರಿಯಲ್ಲಿ ನಿಂತು ಇವರ ಬರುವಿಗಾಗಿ ಕಾಯುತ್ತಿದ್ದರು. ಕೂಡಲೇ ಪ್ರಧಾನ್ ಕುಟುಂಬದವರು ಗಾಡಿಯಿಂದ ಇಳಿದು ಸಾಯಿಬಾಬಾರವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.  ಆ ಸಮಯದಲ್ಲಿ ರಾವ್ ಬಹದ್ದೂರ್ ಸಾಥೆ ಮತ್ತು ಮೊದಲನೇ ತರಗತಿ ಸಬ್ ಜಡ್ಜ್ ನೂಲ್ಕರ್ ರವರು ಅಲ್ಲಿದ್ದರು. ಅವರನ್ನೆಲ್ಲ ಭೇಟಿ ಮಾಡಿ ಎಲ್ಲರೊಂದಿಗೆ ಮಸೀದಿಯೊಳಗೆ ಹೋದರು. ಪ್ರಧಾನ್ ರವರು ತಾವು ಬಾಬಾರವರಿಗೆ ಕೊಡಲು ತಂದಿದ್ದ ವಸ್ತುಗಳನ್ನು ಕೊಡಲು ಇಚ್ಚಿಸಿದರು. ಆದರೆ ಬಾಬಾರವರು ಇವರನ್ನು ಆಗಲೇ ಪರೀಕ್ಷೆ ಮಾಡಲು ಆರಂಭಿಸಿದ್ದರು. ಬಾಬಾರವರು ಇವರಿಂದ ದಕ್ಷಿಣೆ ಕೇಳಿದರು. ಪ್ರಧಾನ್ ರವರು ಬಾಬಾರವರಿಗೆ 20 ರುಪಾಯಿಗಳನ್ನು ಕೊಡಬೇಕೆಂದು ಅಂದುಕೊಂಡಿದ್ದರು. ಆದರೆ ಅದಕ್ಕೆ ಬದಲಾಗಿ ಅವರು ಬಾಬಾರವರಿಗೆ ಚಿನ್ನದ ನಾಣ್ಯ ನೀಡಿದರು. ಬಾಬಾರವರು ಅದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಅದೇನೆಂದು ಮತ್ತು ಅದ ಬೆಲೆ ಏನೆಂದು ಕೇಳಲು ನೂಲ್ಕರ್ ರವರು ಅದು ಚಿನ್ನವೆಂದು ಮತ್ತು ಅದರ ಬೆಲೆ 15 ರುಪಾಯಿಗಳೆಂದು ತಿಳಿಸಿದರು. ಬಾಬಾರವರು ಆ ಚಿನ್ನದ ನಾಣ್ಯವನ್ನು ಪ್ರಧಾನ್ ರವರಿಗೆ ಹಿಂತಿರುಗಿಸಿ ಅದು ತಮಗೆ ಬೇಡವೆಂದು ಪ್ರಧಾನ್ ರವರಿಗೆ ಹಿಂತಿರುಗಿಸಿ ಅವರಿಂದ 15 ರುಪಾಯಿ ದಕ್ಷಿಣೆ ಕೇಳಿದರು. ಪ್ರಧಾನ್ ರವರು ಬಾಬಾರವರಿಂದ ಸ್ಪರ್ಷಿಸಲ್ಪಟ್ಟ ಚಿನ್ನದ ನಾಣ್ಯವನ್ನು ಸಂತೋಷದಿಂದ ವಾಪಸ್ ಪಡೆದು ಬಾಬಾರವರಿಗೆ 15 ರುಪಾಯಿಗಳನ್ನು ಕೊಟ್ಟರು. ಬಾಬಾರವರು ಆ ಹಣವನ್ನು ಎಣಿಸುವ ಹಾಗೆ ಮಾಡಿ ಅದರಲ್ಲಿ 10 ರುಪಾಯಿಗಳಿವೆ ಎಂದು ಎಂದು ಹೇಳಿ ಮತ್ತೆ 5 ರುಪಾಯಿಗಳನ್ನು ಕೇಳಿದರು. ಪ್ರಧಾನ್ ರವರಿಗೆ ಬಾಬಾರವರು ತಮ್ಮನ್ನು ಪರೀಕ್ಷಿಸುತ್ತಿರುವ ವಿಷಯ ತಿಳಿಯಿತು ಮತ್ತು ತಾವು 20 ರುಪಾಯಿ ದಕ್ಷಿಣೆ ಕೊಡುತ್ತೇನೆಂದು ಅಂದುಕೊಂಡಿದ್ದರಿಂದ ಮರು ಮಾತನಾಡದೆ ಪುನಃ 5 ರುಪಾಯಿಗಳನ್ನು ಕೊಟ್ಟರು. ಆಗ ಪ್ರಧಾನ್ ರವರು ತಾವು 20 ರುಪಾಯಿ ಕೊಡಬೇಕೆಂದಿದ್ದೆ. ಬಾಬಾರವರು ಅಷ್ಟೇ ಹಣವನ್ನು ತೆಗೆದುಕೊಂಡರು. ಹೆಚ್ಚಿಗೆ ಕೇಳಲೇ ಇಲ್ಲ. ಬಾಬಾರವರ ವೈರಾಗ್ಯ, ಹಣದ ಮೇಲಿನ ತಾತ್ಸಾರ ಇದರಿಂದ ಸ್ಪಷ್ಟವಾಯಿತು. ಅಲ್ಲದೇ, ಬಾಬಾರವರು ಭಕ್ತರನ್ನು ಪರೀಕ್ಷಿಸುವ ವಿಧಾನವೂ ಸ್ಪಷ್ಟವಾಗಿತ್ತು. 

ಬಾಬಾರವರು ಅವರುಗಳಿಗೆ ತಮ್ಮಲ್ಲಿ ನಂಬಿಕೆ ಬರುವಂತೆ ಮಾಡಲು ತಮ್ಮ ಅಂತರ್ ಜ್ಞಾನದಿಂದ ಮತ್ತು ಪವಾಡಗಳ ಮುಖಾಂತರ ಸಹಾಯ ಮಾಡುತ್ತಿದ್ದರು. ಇನ್ನೊಂದು ಸಂದರ್ಭದಲ್ಲಿ ಅವರು ಬಾಬಾರವರನ್ನು ಭೇಟಿ ಮಾಡಿದಾಗ ಅವರನ್ನು ಭಾವ್ ಎಂದು ಸಂಬೋಧಿಸಿ "ಇನ್ನು 2-4 ದಿನಗಳಲ್ಲಿ ಎಲ್ಲಾ ಸರಿಹೋಗುತ್ತದೆ" ಎಂದಷ್ಟೇ ಹೇಳಿ ಅವರಿಗೆ ಉಧಿಯನ್ನು ನೀಡಿದರು. ಪ್ರಧಾನ್ ರವರು ಮಸೀದಿಯಿಂದ ಹಿಂತಿರುಗಿದರು. ಪ್ರಧಾನ್ ರವರು 8 ದಿನಗಳು ಶಿರಡಿಯಲ್ಲಿದ್ದರು. ಆ ಸಮಯದಲ್ಲಿ ಬಾಬಾರವರಿಗೆ ಪ್ರತ್ಯೇಕವಾದ ಔತಣವನ್ನು ಏರ್ಪಡಿಸಿ ಬಾಬಾರವರನ್ನು ಯಾವ ಅಡಿಗೆ ಮಾಡಿಸಲಿ, ಯಾರನ್ನು ಆಹ್ವಾನಿಸಲಿ ಎಂದು ಕೇಳಿದರು. ಬಾಬಾ ಅವರು "ಒಬ್ಬಟ್ಟು ಔತಣವಿರಲಿ, ಬಾಬು ಮತ್ತು ದಾದಾ ಕೇಳ್ಕರ್ ಅವರ ಸೋದರಳಿಯನನ್ನು ಆಹ್ವಾನಿಸು. ನಾನೂ ಬರುತ್ತೇನೆ" ಎಂದರು. ಮರುದಿನ ಊಟದ ಸಮಯದಲ್ಲಿ ಎಲ್ಲರಿಗೂ ಬಡಿಸಿದರು ಮತ್ತು ಒಂದು ಎಲೆಯನ್ನು ಬಾಬಾ ಅವರಿಗೆ ಮೀಸಲಾಗಿಟ್ಟರು ಮತ್ತು ಇತರೆ ಪದಾರ್ಥಗಳನ್ನು ಇಡಲಾಯಿತು. ಒಂದು ಕಾಗೆ ಬಂದು ಒಬ್ಬಟ್ಟನ್ನು ಮಾತ್ರ ತೆಗೆದುಕೊಂಡು ಹೋಯಿತು. ಅವರುಗಳು "ಬಾಬಾರವರೇ ಕಾಗೆ ಮತ್ತು ತಮಗೆ ಇಷ್ಟವಾದ ಒಬ್ಬಟ್ಟನ್ನು ತೆಗೆದುಕೊಂಡರು" ಎಂದರು.

ಆ ದಿನ ಸಾಯಂಕಾಲ ಬಾಬಾರವರು ತಮ್ಮ ಅಂತರ್ಜ್ಞಾನದ ಬಗ್ಗೆ ಸುಳಿವು ಕೊಟ್ಟರು. ಬಾಬಾರವರು ತಮ್ಮ ಒಂದು ಕಡೆ ಕಾಲನ್ನು ಮುಟ್ಟಿಕೊಂಡು ಈ ದೇಹದ ಭಾಗವೆಲ್ಲಾ ಬಹಳ ನೋವಾಗುತ್ತಿದೆ ಎಂದರು. ಬಾಬಾರವರು ಆರೋಗ್ಯವಾಗಿರುವಂತೆ ಕಂಡರು. ಪ್ರಧಾನ್ ರವರಿಗೆ ಬಾಬಾರವರ ಮಾತಿನ ಅರ್ಥ ತಿಳಿಯಲಿಲ್ಲ. ಅವರು ಮುಂಬೈಗೆ ಹಿಂತಿರುಗಿದ ನಂತರ ಬಾಬಾರವರ ಮಾತಿನ ಅರ್ಥ ತಿಳಿಯಿತು. ಅವರು ಶಿರಡಿಯಲ್ಲಿದ್ದಾಗ ಒಂದು ಗುರುವಾರ, ಪ್ರಧಾನ್ ರವರು ಬಾಬಾ ಅಡಿಗೆ ಮಾಡುತ್ತಿದ್ದುದನ್ನು ನೋಡಿದರು. ಅವರು ಎಲ್ಲರನ್ನೂ ಕಳುಹಿಸಿ ಮಸೀದಿಯಲ್ಲಿ ಒಬ್ಬರೇ ಹಂಡೆಯಲ್ಲಿ ಬೇಯಿಸುತ್ತಿದ್ದರು. ಪ್ರಧಾನ್, ಬಾಪು ಮತ್ತು ಬಾಬು ಒಳಗೆ ಹೋದರು. ಬಾಬಾ ಅವರುಗಳನ್ನು ಸ್ವಾಗತಿಸಿದರು. ಇವರನ್ನು ಮಾತ್ರವೇ ಖಾಸಗಿಯಾಗಿ ಭೇಟಿ ಮಾಡಿ ಇತರರನ್ನು ಕಳುಹಿಸಿದರು. ಬಾಬಾರವರು ಏನೋ ಹಾಡುತ್ತಿರುವುದನ್ನು ಕಂಡು ಬಂದು ಪ್ರಧಾನ್ ಅವರು ಅದನ್ನು ಗ್ರಹಿಸಿದರು. ಬಾಬಾರವರು "ಶ್ರೀರಾಮ್ ಜಯರಾಂ, ಜಯ ಜಯ ರಾಮ್" ಎಂದು ಹಾಡುತ್ತಿದ್ದರು. ಕೂಡಲೇ ಪ್ರಧಾನ್ ರವರು ಉದ್ವೇಗದಿಂದ ಬಾಬಾರವರ ಪಾದಗಳಲ್ಲಿ ತಮ್ಮ ಶಿರವನ್ನು ಇರಿಸಿದರು. ಈ ಪದಗಳು ಗುರುಮಂತ್ರವಾಗಿದ್ದು ಅವರ ಕುಲಗುರು ಹರಿಬುವ ಈ ಮಂತ್ರವನ್ನು ಪ್ರಧಾನ್ ರವರಿಗೆ ಹೇಳಿಕೊಟ್ಟಿದ್ದರು. ಅವರು ಈ ಮಂತ್ರವನ್ನು ಮರೆತಿದ್ದರು. ಬಾಬಾರವರ ದಯೆಯಿಂದ ಅವರಿಗೆ ಗುರುಮಂತ್ರವನ್ನು ಪುನಃ ಹೇಳಿ ಜ್ಞಾಪಿಸಿ ಅವರ ಆಧ್ಯಾತ್ಮಿಕ ಉನ್ನತಿಗೆ ಅನುವು ಮಾಡಿಕೊಟ್ಟರು. ಈ ತರಹ ಆಳವಾದ ಬಾಬಾರವರ ಪ್ರೇಮದಿಂದ ಪ್ರಧಾನ್ ರವರು ಬಾಬಾರವರನ್ನು ಮೆಚ್ಚಿದರು. ಹಂಡೆಯಲ್ಲಿದ್ದ ಪದಾರ್ಥಗಳು ಕುದಿಯುತ್ತಿರುವಾಗ ಬಾಬಾರವರು ತಮ್ಮ ಇಡೀ ಕೈಯನ್ನು ಸ್ಪೂನ್ ಅಥವಾ ಸೌಟು ಇಲ್ಲದೇ ಕಲಸುತ್ತಿದ್ದುದು, ಅವರ ಕೈಗಳು ಸುಡುವುದಾಗಲೀ, ಊದಿಕೊಂಡಾಗಲೀ ಆಗಲಿಲ್ಲ. ಆಗ ಬಾಬಾರವರು ಕೂಡಲೇ ಪ್ರಧಾನ್ ಅವರನ್ನು ಮತ್ತು ಇಬ್ಬರು ಹುಡುಗರನ್ನು ಕರೆದುಕೊಂಡು ಲೇಂಡಿಬಾಗ್ ಕಡೆ ನಡೆದರು. ಸಾಮಾನ್ಯವಾಗಿ ಆ ಸಮಯದಲ್ಲಿ ಬಾಬಾ ಲೇಂಡಿಬಾಗ್ ಗೆ ಹೋಗುತ್ತಿರಲಿಲ್ಲ. ಆದರೆ, ಇವುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಗುಂಡಿಗಳನ್ನು ತೋಡಿ ಕೆಲವು ಕಾಳುಗಳನ್ನು ಪ್ರಧಾನ್ ರವರಿಗೆ ಕೊಟ್ಟು ಆ ಗುಂಡಿಯಲ್ಲಿ ಬಿತ್ತಲು ಹೇಳಿದರು. ಅನಂತರ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಯಿತು. ಬಾಬಾರವರು ಪ್ರಧಾನ್ ರವರಿಗೆ ಅದಕ್ಕೆ ನೀರು ಹಾಕಲು ಹೇಳಿದರು. ಅನಂತರ ಎಲ್ಲರೂ ಮಸೀದಿಗೆ ಹಿಂತಿರುಗಿದರು. ಇದರ ವೈಶಿಷ್ಟ್ಯತೆ ಏನೆಂದರೆ 7-8 ವರ್ಷದ ನಂತರ ಈ ಲೇಂಡಿಬಾಗ್ ನ್ನು ಪ್ರಧಾನ್ ರವರು 1500 ರುಪಾಯಿಗಳನ್ನು ಕೊಟ್ಟು ಅದನ್ನು ಸಾಯಿಬಾಬಾ ಸಂಸ್ಥಾನಕ್ಕೆಂದು ಕೊಂಡುಕೊಂಡರು. ಬಾಬಾರವರು, ಪ್ರಧಾನ್ ರವರು ಇದನ್ನು ಕ್ರಯ ಮಾಡಿ ತೆಗೆದುಕೊಂಡು ಸಂಸ್ಥಾನಕ್ಕೆ ಸಹಾಯ ಮಾಡುತ್ತಾರೆ ಎಂಬುದನ್ನು ಮುಂಚೆಯೇ ಈ ರೀತಿಯಲ್ಲಿ ಗುರುತಿಸಿದ್ದರು.  ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಬಾಬು ಚಂದೋರ್ಕರ್ ಅವರು ಬಾಬಾರವರ ಪಾದ ಪದ್ಮಗಳಲ್ಲಿ ಒಂದು ತಟ್ಟೆಯನ್ನು ಇಟ್ಟು ಅವುಗಳನ್ನು ನೀರಿನಿಂದ ತೊಳೆದು ಪಾದ ತೀರ್ಥವನ್ನು ಮನೆಗೆ ಕೊಂಡೊಯ್ದರು. ಈ ಪದ್ದತಿ ಇರಲಿಲ್ಲ. ಅಲ್ಲಿಯ ತನಕ ಉಧಿಯನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ಪಾದ ತೀರ್ಥವು ಆರತಿ ಸಮಯದಲ್ಲಿ ಮಾತ್ರ ಕೊಡುತ್ತಿದ್ದು ಮನೆಗೆ ತೆಗೆದುಕೊಂಡು ಹೋಗುವ ಪದ್ದತಿ ಇರಲಿಲ್ಲ. ಪ್ರಧಾನ್ ರವರೂ ಸಹ ಸ್ವಲ್ಪ ಪಾದ ತೀರ್ಥವನ್ನು ಮನೆಗೆ ಕೊಂಡೊಯ್ದರು. ಅವರಿಗೆ ಅದೃಷ್ಟವಶಾತ್ ಪಂಜಾಬ್ ಮೇಲ್ ಗೆ ಟಿಕೇಟು ದೊರೆತು ಮನೆಗೆ ಬಂದರು. ಅವರು ಮನೆಗೆ 4-5 ಗಂಟೆ ಮುಂಚಿತವಾಗಿ ಬಂದದ್ದು ಒಳ್ಳೆಯದಾಯ್ತು. ಏಕೆಂದರೆ, ಅವರ ತಾಯಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವುದು ಅವರಿಗೆ ತಿಳಿಯಿತು. ಅವಳಿಗೆ ಬಾಬಾ ಹೇಳಿದಂತೆ ಒಂದು ಪಾರ್ಶ್ವದಲ್ಲಿ ಬಹಳ ನೋವಾಗಿತ್ತು. ಬಾಬಾರವರು ಶಿರಡಿಯಲ್ಲಿ ತಮ್ಮ ಒಂದು ಪಾರ್ಶ್ವ ಬಹಳ ನೋಯುತ್ತಿದೆ ಎಂಬುದು ಅವಳ ನೋವಿಗೆ ಆದರೆ ಬಾಬಾರವರಿಗಲ್ಲ ಮತ್ತು ಪ್ರಧಾನ್ ರವರು ಬೇಗನೆ ಬರಲು ಅವಕಾಶ ಮಾಡಿದ್ದು ಅವರ ಅದೃಷ್ಟ. ಅಂದರೆ ಸಕಾಲದಲ್ಲಿ ಬಾಬಾ ಪಾದತೀರ್ಥವನ್ನು ತಂದು ತಮ್ಮ ತಾಯಿಗೆ ಕುಡಿಸಿದರು. ಅವರ ಸಂಬಂಧಿಕರು ಅವರ ತಾಯಿಯ ಖಾಯಿಲೆ ಸ್ಥಿತಿಯನ್ನು ಪ್ರಧಾನ್ ರವರಿಗೆ ತಿಳಿಸುವುದೋ, ಬೇಡವೋ ಎಂದು ಯೋಚಿಸುತ್ತಿರುವಷ್ಟರಲ್ಲಿ  ಅಂತರ್ ಜ್ಞಾನಿಯಾದ ಬಾಬಾರವರು ಇದನ್ನು ಅರಿತು ಸರಿಯಾದ ಸಮಯಕ್ಕೆ ಹಿಂತಿರುಗಿ ಬರುವಂತೆ ಮಾಡಿದರು. ವೈದ್ಯರು ರೋಗಿಗೆ ಜ್ವರ ಜಾಸ್ತಿಯಾಗಿರುವುದನ್ನು, ಮಲಬದ್ಧತೆಯನ್ನು ಮತ್ತು ಚಡಪಡಿಸುವಿಕೆಯನ್ನು ನೋಡಿ ಆಪತ್ತಿದೆ ಎಂದು ಹೇಳಿದರು. ಆದರೆ ರಾತ್ರಿ ಹೊತ್ತಿಗೆ ಮಲವಿಸರ್ಜನೆ ಆಗಿ ಪರಿಸ್ಥಿತಿ ಸುಧಾರಿಸಿದೆ ಎಂದರು. ಬೆಳಿಗ್ಗೆ 4:30 ಗಂಟೆಯಲ್ಲಿ ಪ್ರಧಾನ್ ರವರು ಮನೆಗೆ ಬಂದರು. ಕೂಡಲೇ ಅವರಿಗೆ ಬಾಬಾರವರ ತೀರ್ಥವನ್ನು ಕೊಟ್ಟರು. ನಿದ್ರೆ ಬಂದಿತು. ಸ್ವಲ್ಪ ಹೊತ್ತಿನ ನಂತರ ಮಲವಿಸರ್ಜನೆಯಾಯಿತು. ಜ್ವರ ಇಳಿಮುಖವಾಯಿತು. ವೈದ್ಯರು ಬಂದು ಪರಿಸ್ಥಿತಿ ಸುಧಾರಿಸಿದೆ ಎಂದರು. ಬಾಬಾರವರು ಪ್ರಧಾನ್ ರವರ ತಾಯಿಗೆ ಎಲ್ಲಾ ಅನುಕೂಲವನ್ನು ನಿಯೋಜಿಸಿದರು. ಇನ್ನೇನು ನಾಲ್ಕು ದಿನಗಳಲ್ಲಿ ಸರಿಹೋಗುತ್ತದೆ ಎಂದು ಬಾಬಾ ಹೇಳಿದರು. ನಿಜವಾಗಿ ಎರಡು ದಿನಗಳೊಳಗೆ ಪ್ರಧಾನ್ ತಾಯಿ ಗುಣವಾದರು. ಬಾಬಾರವರ ಅಂತರ್ ಜ್ಞಾನ ಮತ್ತು ಅವರ ತಾಯಿಗೆ ಮಾಡಿದ ಸಹಾಯ, ಇವುಗಳು ಪ್ರಧಾನ್ ರವರಿಗೆ ಬಾಬಾರವರಲ್ಲಿ ಭಕ್ತಿ ಹೆಚ್ಚಾಗಲು ಕಾರಣವಾದವು ಮತ್ತು ಪ್ರಧಾನ್ ರವರ ಇಡೀ ಕುಟುಂಬವೇ ಬಾಬಾರವರ ಆಶೀರ್ವಾದ ಪಡೆದರು.

ಒಂದು ದಿನ ರಾತ್ರಿ ದಾಸಗಣೂರವರು ಪ್ರಧಾನ್ ರ ತಾಯಿಯ ಊರಿನಲ್ಲಿ ಕೀರ್ತನೆ ಮಾಡುತ್ತಿದ್ದರು. ಇದಾದ ನಂತರ ದಾಸಗಣೂರವರು ಪ್ರಧಾನ್ ರವರ ಸ್ವಂತ ಸ್ಥಳವಾದ ಸಂತಾಕ್ರೂಜ್ ಗೆ ಹೋಗಿ ಅಲ್ಲಿ 2 ರಿಂದ 5 ಗಂಟೆಯ ತನಕ ಕೀರ್ತನೆ ಮಾಡಿದರು. ಅದನ್ನು ಕೇಳುತ್ತಾ ಅವರ ಪತ್ನಿಗೆ ಶಿರಡಿಗೆ ಹೋಗಬೇಕೆಂಬ ಇಚ್ಛೆ ಆಯಿತು. ಬಾಬಾರವರು ಅವಳ ಕನಸಿನಲ್ಲಿ ಕಾಣಿಸಿಕೊಂಡು ಅವಳ ಆಸೆ ಇನ್ನೂ ಜಾಸ್ತಿಯಾಯಿತು. ಆದರೆ ಅವಳು ಹೊರಟರೆ ಅವಳ ನಾದಿನಿಗೆ ಹೆರಿಗೆ ದಿನವಾದ್ದರಿಂದ ತೊಂದರೆಯಾಗುವುದರಲ್ಲಿತ್ತು. ಹೇಗಾದರೂ ಆಗಲಿ ಎಂದು ಇಬ್ಬರೂ ಪ್ರಧಾನ್ ಅವರೊಡಗೂಡಿ ಶಿರಡಿಗೆ ಹೊರಟರು. ಚಂದೋರ್ಕರ್ ರವರು ಪ್ರಧಾನ್ ಅವರನ್ನು ಕೋಪರ್ ಗಾವ್ ರೈಲ್ವೆ ನಿಲ್ದಾಣದಲ್ಲಿ ಬರಮಾಡಿಕೊಂಡರು. ಆಗ ಚಂದೋರ್ಕರ್ ಅವರಿಗೆ ಆಗಾಗ್ಗೆ ಜ್ವರ ಬರುತ್ತಿತ್ತು. ಅವರು ಕೋಪರ್ ಗಾವ್ ನಲ್ಲಿ ಸೇರಿ ಶಿರಡಿಗೆ ಹೊರಡುವ ಸಮಯ ಜ್ವರ ಬರುವುದಾಗಿತ್ತು. ಆದ್ದರಿಂದ ಶಿರಡಿಯಿಂದ ಬರುವ ಮೊದಲೇ ಬಾಬಾರವರು ಅನುಮತಿ ನೀಡಿದ್ದರು. ಆಗ ಕೋಪರ್ ಗಾವ್ ಗೆ ಬಂದು ಜ್ವರ ತಪ್ಪಿಸಿಕೊಂಡರು. ಅವರಿಗೆ ಮುಂದೆ ಜ್ವರ ಬರಲೇ ಇಲ್ಲ.

 ಅವರುಗಳು ದ್ವಾರಕಾಮಾಯಿಗೆ ಬಂದು ಸಾಯಿಬಾಬಾರವರಿಗೆ ನಮಸ್ಕಾರಗಳನ್ನು ಸಲ್ಲಿಸಿದಾಗ, ಸಾಯಿಬಾಬಾರವರು ಅವರೆಲ್ಲ ಯೋಗಕ್ಷೇಮವನ್ನು ವಿಚಾರಿಸಿದರು. ಹೀಗೆ ವಿಚಾರ ಮಾಡುತ್ತಾ  ಇದ್ದಾಗ ಪ್ರಧಾನ್ ರವರ ಹೆಂಡತಿಯ ಕಡೆ ತಿರುಗಿ " ಅತಿ ಶೀಘ್ರದಲ್ಲಿಯೇ ಇವಳು ನನ್ನ ಬಾಬುವಿನ ತಾಯಿಯಾಗುತ್ತಾಳೆ" ಎಂದು ನುಡಿದರು. ಆಗ, ಅಲ್ಲಿಯೇ ಇದ್ದ ಶ್ಯಾಮರವರು ಸಾಯಿಬಾಬಾರವರು ಪ್ರಧಾನ್ ರವರ ಅತ್ತಿಗೆಯನ್ನು ಕುರಿತು ಈ ಮಾತನ್ನು ಹೇಳಿದರೇ ಎಂದು ಕೇಳಲು, ಬಾಬಾರವರು "ಇಲ್ಲಾ, ನಾನು ಹೇಳಿದ್ದು ಈ ಮಹಿಳೆಯ ಬಗ್ಗೆ" ಎಂದು ಪ್ರಧಾನ್ ರವರ ಹೆಂಡತಿಯ ಕಡೆ ಬೆರಳು ತೋರಿಸಿ ಹೇಳಿದರು. 

ಸಾಯಿಬಾಬಾರವರು ನುಡಿದಂತೆ ಸರಿಯಾಗಿ 12 ತಿಂಗಳುಗಳ ಒಳಗೆ ಪ್ರಧಾನ್ ರವರ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ "ಬಾಬು" ಎಂದು ನಾಮಕರಣ ಮಾಡಲಾಯಿತು. ಮಗುವನ್ನು ಶಿರಡಿಗೆ ಕರೆದುಕೊಂಡು ಹೋದಾಗ ಬಾಬಾರವರು ಮಗುವನ್ನು ಎತ್ತಿಕೊಂಡು "ಬಾಬು ಎಲ್ಲಿಗೆ ಹೋಗಿದ್ದೆ? ನಿನಗೆ ನನ್ನಿಂದ ತೊಂದರೆ ಆಯಿತೇ? ಬೇಸರ ಆಯಿತೇ" ಎಂದರು. 

ಬಾಬಾರವರು ಅಗಾಗ್ಗೆ ಪ್ರಧಾನ್ ರವರಿಗೆ ತಮ್ಮ ಅತಿಮಾನುಷ ಶಕ್ತಿಯನ್ನು ತೋರಿದ್ದರು. ಮೊದಲನೆ ಸಾರಿ ಶಿರಡಿಗೆ ಬಂದಾಗ ಅವರು ಶಿರಡಿಯಿಂದ ಮರಳಿ ಹೋಗುವಾಗ ಮಳೆಗಾಳಿ ಬಲವಾಗಿತ್ತು. ಸುಮಾರು ಕಾಲು ಗಂಟೆ ಕಾಲ ಮಳೆ ಸುರಿಯುತ್ತಿತ್ತು. ಅದು ಮುಂದುವರಿದಿದ್ದರೆ ಶಿರಡಿ ಕೊಪರ್ ಗಾವ್ ನ ನಡುವೆ ಇದ್ದ ಹಳ್ಳಿಯಲ್ಲಿ ನೀರಿನ ಪ್ರವಾಹ ಬಂದು (ಆಗ ಸೇತುವೆ ಇರಲಿಲ್ಲ) ಅವರುಗಳು ಕೋಪರ್ ಗಾವ್ ರೈಲ್ವೆ ನಿಲ್ದಾಣ ತಲುಪಲಾಗದೆ ಮುಂಬೈಗೆ ಹೋಗುವ ಹಾಗಿರಲಿಲ್ಲ. ಅದ್ದರಿಂದ ಬಾಬಾರವರು ಅನುಮತಿ ನೀಡಲಾರರು ಎಂದು ಹೆದರಿದ್ದರು. ಆದರೆ ಬಾಬಾರವರ ಬಳಿ ಹೋಗಿ ಅನುಮತಿ ಬೇಡಿದಾಗ ಬಾಬಾರವರು ಆಕಾಶವನ್ನು ನೋಡಿ "ಓ ದೇವರೇ, ಈ ಮಳೆಯನ್ನು ನಿಲ್ಲಿಸು. ನನ್ನ ಮಕ್ಕಳು ಮನೆ ಸೇರಬೇಕು. ಅವರು ಕಷ್ಟವಿಲ್ಲದೆ ಹಿಂತಿರುಗಲಿ" ಎಂದರು. ಬಾಬಾ ಹಾಗೆ ಹೇಳುತ್ತಿದ್ದಂತೆಯೇ ಮಳೆ ನಿಧಾನವಾಯಿತು ಮತ್ತು ಕಡಿಮೆಯಾಯಿತು. ಪ್ರಧಾನ್ ಅವರು ಶಿರಡಿಯಿಂದ ಕೋಪರ್ ಗಾವ್ ಗೆ ಯಾವ ಅಡೆ ತಡೆಯಿಲ್ಲದೆ ಸೇರಿ ಪಂಜಾಬ್ ಮೇಲ್ ಹಿಡಿದು (ಸ್ವಲ್ಪ ಉಧಿ ತೀರ್ಥ ತಮ್ಮ ತಾಯಿಗೋಸ್ಕರ ತೆಗೆದುಕೊಂಡು) ಹೊರಟರು. ಈ ತರಹ ಸಹಾಯವನ್ನು ಬಾಬಾರವರು ತಮ್ಮ ಶಕ್ತಿಯನ್ನು ಪಂಚಭೂತಗಳ ಮೇಲೆ ಉಪಯೋಗಿಸಿ ಮಾಡಿದುದು ದೈವೀಕವೆ. ಈ ಸಂದರ್ಭದಲ್ಲಿ ಬಾಬಾರವರು ನಾನು ನಿಮ್ಮೊಡನೆ ಇರುವೆ ಎಂದರು. ಅಂದರೆ ಅವರ ಪ್ರಯಾಣ ಸುಖಮಯವಾಗಲೆಂದು ಅವರ ಭಾವಾರ್ಥವಾಗಿತ್ತು. ಅದರಂತೆ ಅವರ ಪ್ರಯಾಣ ಸುಖಪ್ರದವಾಗಿತ್ತು. ಅವರು ಹಿಂತಿರುಗಿದಾಗ ರಾತ್ರಿಯೇ ಅವರ ನಾದಿನಿಯ ಕನಸಿನಲ್ಲಿ ಒರ್ವ ಫಕೀರ ಕಫ್ನಿ ಧರಿಸಿ ಒಂದು ಟವಲ್ ಅನ್ನು ತಲೆಗೆ ಹೊದ್ದು ಬಾಬಾ ಅವರಂತೆಯೆ ಮನೆಯಲ್ಲಿರುವ ಹಾಗೆ ಕಾಣಿಸಿದರು. ಇದು ಬಾಬಾರವರು ಪ್ರಧಾನ್ ರವರಿಗೆ ನಾನು ನಿಮ್ಮೊಡನೆ ಇರುವೆ ಎಂದು ಹೇಳಿದ ಮಾತು ಸತ್ಯವಾಯಿತು ಎಂದು ತಿಳಿದುಬಂದಿತು. ಬಾಬಾರವರಿಗೆ ಬಾಬು ಎಂದರೆ ಬಹಳ ಅಚ್ಚು ಮೆಚ್ಚು. ಅವನ ಮೊದಲನೇ ಹುಟ್ಟಿದ ಹಬ್ಬಕ್ಕೆ ಶಿರಡಿಗೆ ಕರೆದುಕೊಂಡು ಬಂದಾಗ ಬಾಬಾರವರು ಎರಡು ರುಪಾಯಿ ಬರ್ಫಿಯನ್ನು ತಂದು ಎಲ್ಲರಿಗೂ ಹಂಚಿದರು. ಆಗ ಬಾಬಾರವರು ಈ ಮಗುವಿಗೆ ತಮ್ಮ ತಂಗಿ ಯಾರೂ ಇಲ್ಲವೆ ಎಂದು ಕೇಳಿದರು. ಶ್ರೀಮತಿ ಪ್ರಧಾನ್ ರವರು ನೀವು ಬಾಬು ಒಬ್ಬನನ್ನೆ ಕೊಟ್ಟಿದ್ದೀರಿ ಎಂದು ಉತ್ತರಿಸಿದರು. ಆದರೆ ಬಾಬಾರವರ ನುಡಿಗಳು ಬಹಳ ವಿಶೇಷವಾಗಿತ್ತು. ಬಾಬುವಿನ ಅನಂತರದಲ್ಲಿ ಪ್ರಧಾನ್ ಅವರಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಸಹಾ ಆಯಿತು. ಬಾಬುವಿನ ಹುಟ್ಟಿದ ಹಬ್ಬವನ್ನು ನೆರವೇರಿಸಲು ಪ್ರಧಾನ್ ರವರು ಶ್ಯಾಮಾರವರಿಗೆ ಒಂದು ಔತಣಕೂಟ ಏರ್ಪಡಿಸಿದ್ದರು ಮತ್ತು ಎಲ್ಲರನ್ನೂ ಆಹ್ವಾನಿಸಿದ್ದರು. ಅಂದು ಗುರುವಾರ. ಬಾಪು ಸಾಹೇಬ್ ಬೂಟಿಯವರು ಗುರುವಾರವಾದ್ದರಿಂದ ಹೊರಗಡೆ ಊಟ ಮಾಡುವುದಿಲ್ಲವಾದ್ದರಿಂದ ಬರುವುದಕ್ಕೆ ಆಗುವುದಿಲ್ಲ ಎಂದರು. ಅವರು ಆ ದಿನ ಬಾಬಾರವರ ಬಳಿಗೆ ಹೋದಾಗ ಬಾಬಾರವರು "ನೀನು ಊಟಕ್ಕೆ ಪ್ರಧಾನ್ ರವರ ಮನೆಗೆ ಹೋಗಿದ್ದೆಯಾ?" ಎಂದು ಕೇಳಿದರು. ಬೂಟಿ ಸಾಹೇಬರು "ಈ ದಿನ ಗುರುವಾರ" ಎಂದರು. ಬಾಬಾ "ಆದರೇನು?" ಎಂದರು. ಆಗ ಬೂಟಿಯವರು "ನಾನು ಗುರುವಾರದ ದಿನ ಹೊರಗಡೆ ಊಟ ಮಾಡುವುದಿಲ್ಲ. ಅದು ನನ್ನ ನಿಯಮ" ಎಂದರು. ಅದಕ್ಕೆ ಬಾಬಾರವರು "ಯಾರನ್ನು ಒಲಿಸಿಕೊಳ್ಳಲು" ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಬೂಟಿಯವರು "ನಿಮ್ಮನ್ನು ಒಲಿಸಿಕೊಳ್ಳಲು" ಎಂದು ಉತ್ತರಿಸಿದರು. ಅದಕ್ಕೆ ಬಾಬಾರವರು "ಹಾಗಾದರೆ ನಾನು ಹೇಳುತ್ತೇನೆ, ನೀನು ಈಗ ಹೋಗಿ ಪ್ರಧಾನ್ ಮನೆಯಲ್ಲಿ ಊಟ ಮಾಡಿ ಬಾ" ಎಂದರು. ಆಗ ಮಧ್ಯಾನ್ಹ ನಾಲ್ಕು ಗಂಟೆಯಾಗಿತ್ತು. ಬೂಟಿಯವರು ಪ್ರಧಾನ್ ರವರ ಮನೆಗೆ ಬಂದು ಊಟ ಮಾಡಿದರು. 
ಶ್ರೀಮತಿ ಪ್ರಧಾನ್ ಸಂತಾಕ್ರೂಜ್ ನಲ್ಲಿದ್ದಾಗ ಕನಸಿನಲ್ಲಿ ಬಾಬಾರವರ ಪಾದ ಪೂಜೆ ಮಾಡಿದ್ದಾರೆ. ಚಂದೋರ್ಕರ್ ರವರು ಬಾಬಾರವರಿಗೆ ಅವಳು ತಮ್ಮ ದೈನಂದಿನ ಪಾದುಕಾ ಪೂಜೆಯನ್ನು ಮಾಡಲಿ ಎಂದು ಅವಳನ್ನು ಬೆಳ್ಳಿ ಪಾದುಕೆಗಳೊಂದಿಗೆ ಶಿರಡಿಗೆ ಬರುವಂತೆ ಹೇಳಿದರು ಎಂದು ವಿವರಿಸಿದರು. ಹಾಗೆ ಅವಳ ಎರಡು ಬೆಳ್ಳಿ ಪಾದುಕೆಗಳನ್ನು ತೆಗೆದುಕೊಂಡು ಬಾಬಾರವರ ಪಾದಗಳಿಗೆ ತೊಡಿಸಿ ಪುನಃ ವಾಪಸ್ಸು ತಂದರು. ಬಾಬಾರವರು ಆಗ ಚಂದೋರ್ಕರ್ ರವರಿಗೆ "ನೋಡಿ, ಈ ಮಹಿಳೆ ನನ್ನ ಕಾಲನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾಳೆ" ಎಂದರು. ಇದು ಅವರು ಪಾದುಕಾ ಪೂಜೆಯನ್ನು ಪ್ರೋತ್ಯಾಹಿಸಿದರು ಎಂದು ಅರ್ಥ. ಆಗಿನಿಂದ ಅವರ ಮನೆಯಲ್ಲಿ ಸಾಯಿ ಪಾದುಕಾ ಪೂಜೆ ನಡೆಯುತ್ತಲೇ ಇದೆ.
ಪ್ರಧಾನ್ ರವರು ಶಿರಡಿಗೆ ತಮ್ಮ ಕೊನೆಯ ಭೇಟಿ ನೀಡಿದ್ದು 1918 ರಲ್ಲಿ. ಆಗ ಅವರ ಬಳಿ 3800 ರುಪಾಯಿಗಳಿದ್ದವು. ಆದರೆ ಅವರು ಅಂದುಕೊಂಡಿದ್ದಕಿಂತ ಹೆಚ್ಚಿನ ದಿವಸ ಶಿರಡಿಯಲ್ಲಿದ್ದರು. ಬಾಬಾರವರು ದಕ್ಷಿಣೆ ಕೇಳುತ್ತಲೇ ಇದ್ದರು. ಆದ್ದರಿಂದ ಅವರು ವೆಟರ್ನರಿ ವೈದ್ಯರಿಂದ 1200 ರುಪಾಯಿ ಸಾಲ ಪಡೆದು ಒಟ್ಟು 5000 ರುಪಾಯಿಗಳನ್ನು ದಕ್ಷಿಣೆಯಾಗಿ ಕೊಟ್ಟಿದ್ದರು.

ದಾಸಗಣೂರವರು ಬಾಬಾರವರನ್ನು ದತ್ತಾತ್ರೇಯರ ಅವತಾರ ಎಂದು ತಿಳಿದಿದ್ದರು. ಅವರ ಕೀರ್ತನೆಗಳಿಂದ ಅನೇಕರು ಮತ್ತು ಪ್ರಧಾನ್ ರವರೂ ಸಹ ಬಾಬಾ ದತ್ತಾತ್ರೇಯರ ಅವತಾರರೂಪಿ ಎಂಬ ಸತ್ಯವನ್ನು ಅರಿತಿದ್ದರು. ಬಾಬುವಿಗೆ ಆರೋಗ್ಯ ಕೆಟ್ಟು ಅವರ ಕುಲ ಪುರೋಹಿತರಾದ ಮಾಧವಭಟ್ ರವರಿಂದ ಮಗುವಿಗಾಗಿ ಮಂತ್ರ, ಜಪ, ಪೂಜೆ ಮಾಡಿಸುತ್ತಿದ್ದರು. ಅವರು ಮಗುವಿನ ಅನಾರೋಗ್ಯವು ಮಹಮ್ಮದೀಯರಾದ ಬಾಬಾರವರನ್ನು ಪೂಜೆ ಮಾಡುತ್ತಿರುವುದರಿಂದ ಎಂದು ಹೇಳಿದರು. ಅದಕ್ಕೆ ಶ್ರೀ.ಪ್ರಧಾನ್ ರವರು ಬಾಬಾರವರು ಮಹಮ್ಮದೀಯ ಸಂತರಲ್ಲಿ "ದತ್ತಾವತಾರಿ" ಎಂದು ಉತ್ತರ ನೀಡಿದ್ದರು. ಆ ಉತ್ತರ ಭಟ್ಟನಿಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ಒಂದು ದಿನ ರಾತ್ರಿ ಭಟ್ಟನಿಗೆ ಕನಸಾಯಿತು. ಆ ಕನಸು ಹೀಗಿತ್ತು: "ಒಂದು ದೊಡ್ಡ ಆಕೃತಿ ಮನೆಯ ಮಹಡಿ ಮೆಟ್ಟಿಲುಗಳ ಮೇಲೆ ಕುಳಿತು ಕೈಗಳಲ್ಲಿ ಸಟಕಾ ಕೋಲು ಹಿಡಿದು ಕುಳಿತಿತ್ತು. ಆ ಆಕೃತಿಯು ಅವರಿಗೆ ’ನಾನು ಯಾರೆಂದು ತಿಳಿದಿದ್ದೀಯಾ? ನಾನು ಈ ಮನೆಯ ಯಜಮಾನ’ ಎಂದಿತು. ಭಟ್ಟ ಕೂಡಲೆ ಎನೂ ಹೇಳಲಿಲ್ಲ. ಅವರು ಸಾಯಿಬಾಬಾರವರು ನಿಜವಾಗಿಯೂ ದತ್ತ ಆಗಿದ್ದರೆ ಮತ್ತು ಸರ್ವ ಶಕ್ತರಾಗಿದ್ದರೆ ಈ ಮಗುವನ್ನು ಖಾಯಿಲೆಯಿಂದ ಪಾರುಮಾಡಬೇಕು ಎಂದು ಬಾಬಾರವರ ಭಾವಚಿತ್ರದ ಮುಂದೆ ಹೇಳಿದರು. ಕೆಲವೇ ನಿಮಿಷಗಳಲ್ಲಿ ಮಗುವಿಗೆ ಜ್ವರ ಕಡಿಮೆಯಾಗಿ ಮಗುವು ಮಧ್ಯಾನ್ಹ 4 ಗಂಟೆಗೆ ಸರಿಯಾಗಿ ಚೇತರಿಸಿಕೊಂಡು ಕೆಳಗಡೆ ಆಟ ಆಡೋಣ" ಎಂದಿತು. ಅವರ ತಾಯಿ ಮಗುವನ್ನು ಕೆಳಗೆ ಕರೆದುಕೊಂಡು ಹೋದರು. ಆಗ ಮಾಧವ ಭಟ್ "ಬಾಬಾರವರು ದತ್ತರೂಪಿ" ಎಂದು ಸ್ವತ: ಮನಗಂಡರು ಮತ್ತು 120 ರುಪಾಯಿ ದಕ್ಷಿಣೆ ನೀಡುತ್ತೇನೆಂದು ನಿರ್ಧರಿಸಿದರು. ತಾವು ಅಂದುಕೊಂಡಂತೆ ಮಾಧವ ಭಟ್ ಶಿರಡಿಗೆ ಹೋಗಿ ಬಾಬಾರವರಿಗೆ 120 ರುಪಾಯಿ ದಕ್ಷಿಣೆ ಅರ್ಪಿಸಿದರು. ಆಗ ಬಾಬಾರವರ ಸಂಗಡ ಶ್ಯಾಮರವರು ಕೂಡ ಇದ್ದರು. ಸ್ವಲ್ಪ ಸಮಯದ ನಂತರ ಬಾಬಾರವರು ಭಟ್ಟರನ್ನು ಉದ್ದೇಶಿಸಿ ನನಗೆ ದಕ್ಷಿಣೆ ಕೊಡು ಎಂದರು. ಅದಕ್ಕೆ ಶ್ಯಾಮರವರು "ಬಾಬಾ ಅವರು ಆಗಲೇ ಅಂದರೆ ಬೆಳಿಗ್ಗೆಯೇ 120 ರುಪಾಯಿ ದಕ್ಷಿಣೆ ಕೊಟ್ಟಿದ್ದಾರೆ" ಎನ್ನಲು ಬಾಬಾರವರು ಅವನು ಕೊಟ್ಟಿದ್ದು ದತ್ತನಿಗೆ ಎಂದು ಹೇಳಿ ಶ್ಯಾಮನಿಗೆ "ಅವನನ್ನು ಕೇಳು" ಎಂದರು. ಶ್ಯಾಮಾರವರಿಗೆ ಎನೂ ಅರ್ಥವಾಗಲಿಲ್ಲ. ನಂತರ ಮಾಧವ ಭಟ್ ಅವರು ನಾನು ಬಾಬಾರವರು ದತ್ತರೂಪಿಯಾಗಿದ್ದರೆ 120 ರುಪಾಯಿ ಕೊಡುವೆ ಎಂದು ಪ್ರತಿಜ್ಞೆ ಮಾಡಿದ್ದೆ. ಅದರಂತೆ, 120 ರುಪಾಯಿ ಕೊಟ್ಟಿದ್ದು ಆ ಹರಕೆಯಿಂದಾಗಿ ಎಂದರು. 

ಮಾಧವ ಭಟ್ ಅವರಿಗೆ ಅಲ್ಲಿಯ ತನಕ ಮಕ್ಕಳಿರಲಿಲ್ಲ. ಅವರು ತಮಗೆ ಮಗುವಾದರೆ ಬಾಬಾರವರಿಗೆ 108 ರುಪಾಯಿ ಕೊಡುವೆನೆಂದು ಹರಕೆ ಮಾಡಿಕೊಂಡರು. ಪ್ರಧಾನ್ ತಮ್ಮ ಆಸೆ ನೆರವೇರಿಸಿದರೆ 1008 ರುಪಾಯಿ ಕೊಡುವೆನೆಂದು ಹರಕೆ ಹೊತ್ತರು. ಈ ಹರಕೆಗಳನ್ನು ಮನಸ್ಸಿನಲ್ಲಿ ಮಾಡಿಕೊಂಡು ಅವರು ಬಾಬಾರವರ ಬಳಿಗೆ ಹೋಗಿ 108 ರುಪಾಯಿ ಕೊಟ್ಟರು. ಶ್ಯಾಮಾರವರು ಅವರು ಇಷ್ಟೊಂದು ಹಣವನ್ನು ಅಂದರೆ 108 ರುಪಾಯಿಗಳನ್ನು ಕೊಟ್ಟಿದ್ದಾರೆ ಎಂದರು. ಅದಕ್ಕೆ ಬಾಬಾರವರು ಅದೇನು ಮಹಾ? ಪ್ರಧಾನ್ ಇನ್ನೂ ಹೆಚ್ಚು ಕೊಡುತ್ತಾನೆ ಎಂದು ಪ್ರಧಾನ್ ಕಡೆ ನೋಡುತ್ತಾ ಹೇಳಿದರು. ಬಾಬಾರವರು ಪ್ರಧಾನ್ ಅವರು 1008 ರುಪಾಯಿ ಕೊಡುತ್ತೇನೆಂದು ಹರಕೆ ಹೊತ್ತಿದ್ದನ್ನು ತಿಳಿಸಿ ತಮ್ಮ ಅಂತರ್ಯಾಮಿತ್ವವನ್ನು ಪ್ರಕಟಿಸಿದರು.

ಬಾಬಾರವರು ಪ್ರಧಾನ್ ಅವರ ಪತ್ನಿಯ ಅಧ್ಯಾತ್ಮಿಕ ಪ್ರಗತಿಯ ಬಗ್ಗೆಯೂ ಗಮನವಿತ್ತರು ಮತ್ತು ಅವರ ಮುಂಗೋಪಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಅವರು ಅವಳಿಗೆ ಯಾರದರೂ ನಮ್ಮ ಬಗ್ಗೆ ಹತ್ತು ಮಾತನಾಡಿದರೆ ನಾವು ಅವರಿಗೆ ಒಂದೇ ಮಾತಿನಲ್ಲಿ ಉತ್ತರ ನೀಡೋಣ. ಅವರೊಡನೆ ಜಗಳವಾಗಲೀ, ಯುದ್ಧವಾಗಲೀ ಮಾಡುವುದು ಬೇಡ ಎಂದು ಹೇಳಿದರು. ಬಾಬಾರವರು ಪ್ರಧಾನ್ ಅವರಿಂದ 5000 ರುಪಾಯಿಗಳನ್ನು ತೆಗೆದುಕೊಂಡು ಕೆಲವು ಸಂಜ್ಞೆಗಳನ್ನು ಮಾಡಿದರು. ಅದು ಸ್ಪಷ್ಟವಾಗಿರಲಿಲ್ಲ. ಆ ಸಂಜ್ಞೆಯು ಸ್ವರ್ಗವೇ ಕಳಚಿಕೊಂಡು ಕೆಳಕ್ಕೆ ಬೀಳಲಿ, ಹೆದರಬೇಡ, ನಾನು ನಿನ್ನೊಡನೆ ಇರುವೆ ಎಂದು ಹೇಳಿದ ಹಾಗಿತ್ತು. 

ಪ್ರಧಾನ್ ರವರು 1916 ರಲ್ಲಿ ಶಿರಡಿಯನ್ನು ಬಿಟ್ಟು ಹೊರಡುವಾಗ ಬಾಬಾರವರು "ತುಜಾ ಗರವಮ್, ಯಾ ಬರಮೆ ಯೆ ಯಿಸ್" ಅಂದರೆ, "ನೀನು ಮನೆಗೆ ಹೋಗು. ನಾನು ನಿನ್ನೊಡನೆ ಹೋಗುತ್ತೇನೆ" ಎಂದರು. ಅವರು ಗೋಚರವಾಗಲಿಲ್ಲ. ಆದರೆ, ಪ್ರಯಾಣದುದ್ದಕ್ಕೂ ಸಂತೋಷವಾಗಿ ಸಾಯಿಬಾಬಾರವರು ಇವರ ಸುಖ ಮತ್ತು ಅನುಕೂಲತೆಗಳನ್ನು ನೋಡಿಕೊಳ್ಳುತ್ತಿದ್ದರು. ಯಾವ ಒಂದು ಅಪಾಯವೂ, ಕಷ್ಟವೂ ಆಗುತ್ತಿರಲಿಲ್ಲ. ಬಾಬಾರವರು ಭೌತಿಕ ದೇಹ ತ್ಯಾಗ ಮಾಡಿದ ನಂತರವೂ ಪ್ರಧಾನ್ ಅವರ ಸಹಾಯ ಪಡೆದರು. ಅವರು ಸೆಕೆಂಡ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಆಗಿ 1920-26 ರ ತನಕ ಆರು ವರ್ಷಗಳು ಕಾರ್ಯ ನಿರ್ವಹಿಸಿದರು. 1926 ರಲ್ಲಿ ಅವರು ಜಸ್ಟೀಸ್ ಆಫ್ ಪೀಸ್ ಆದರು. ಆನಂತರ ಅವರು ಮುಂಬೈ ಪ್ರಾಂತ್ಯದ ವಿಧಾನ ಪರಿಷತ್ ಗೆ ಆಯ್ಕೆಯಾಗಿ 1921-23 ರ ತನಕ ಸದಸ್ಯರಾಗಿದ್ದರು. ಅವರು 1927 ರಲ್ಲಿ ರಾವ್ ಬಹದ್ದೂರ್ ಎಂಬ ಪದವಿಯನ್ನು ಗಳಿಸಿದರು. ಶ್ರೀಮತಿ.ಪ್ರಧಾನ್ ರವರು ಬಾಬಾರವರ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ. ಅವರ ಮಗ ಬಾಬುಗೆ ಸಿಡುಬು ರೋಗ ಬಂದಾಗ ವೈದ್ಯರು ಪರೀಕ್ಷಿಸಿ ಬಹಳ ಚಿಂತಾಜನಕವಾಗಿದೆ ಎಂದರು. ಆಗ ಅವರು ಬಾಬಾರವರಲ್ಲಿ ಪ್ರಾರ್ಥನೆ ಮಾಡಿದರು. ಬಾಬಾರವರು ಕಾಣಿಸಿಕೊಂಡು "ಏಕೆ ಅಳುತ್ತೀಯೇ, ಮಗು ಆರೋಗ್ಯವಾಗಿದೆ. ಅವನಿಗೆ ಬೆಳಿಗ್ಗೆ 6-6:30 ಗಂಟೆಗೆ ಒಳ್ಳೆಯ ಆಹಾರ ಕೊಡು" ಎಂದರು. ಮಗು ಬೆಳಿಗ್ಗೆ ಹೊತ್ತಿಗೆ ಆಟವಾಡಲು ಪ್ರಾರಂಭಿಸಿದಾಗ ಡಾಕ್ಟರ್ ಸಮೇತ ಎಲ್ಲರೂ ಅಚ್ಚರಿಗೊಂಡರು. ಒಂದು ದಿನ ಬಾಬಾರವರು ಶ್ರಿಮತಿ.ಪ್ರಧಾನ್ ರವರಿಗೆ ಕನಸಿನಲ್ಲಿ ಕಾಣಿಸಿಕೊಂಡು "ನೀನು ನಿದ್ರೆ ಮಾಡುತ್ತಿರುವೆಯಾ? ಏಳು, ನಿನ್ನ ಮಗುವಿಗೆ ಫಿಟ್ಸ್  ಬರುತ್ತದೆ" ಎಂದರು. ಆಗ ಅವರಿಗೆ ಎಚ್ಚರವಾಗಿ ಕುಳಿತರು. ಮಗುವಿಗೆ ಆಗ ಫಿಟ್ಸ್ ಬಂದಿರಲಿಲ್ಲ. ಆದರೂ ಅವರು ಬಿಸಿ ನೀರು ಮತ್ತು ಮಾತ್ರೆಗಳನ್ನು ಸಿದ್ದವಾಗಿಟ್ಟುಕೊಂಡರು. 3 ಗಂಟೆಯ ಹೊತ್ತಿಗೆ ಮಗುವಿಗೆ ಎಚ್ಚರವಾಗಿ ಫಿಟ್ಸ್ ಬಂದಿತು. ಸಾಮಾನ್ಯವಾಗಿ ಅವರ ಎಲ್ಲಾ ಮಕ್ಕಳಿಗೆ ಫಿಟ್ಸ್ ಬರುತ್ತಿತ್ತು. ಆದರೆ ಎಲ್ಲವೂ ಸಿದ್ದವಾಗಿದ್ದರಿಂದ ಅರ್ಧ ಗಂಟೆಯಲ್ಲಿ ಎಲ್ಲವೂ ಸರಿಯಾಯಿತು. ಒಂದು ಸಾರಿ ಅವಳು ಮಸೀದಿಗೆ ಹೋದಾಗ ಬಾಬಾರವರು ಎಲ್ಲಿ ಕೋಪಿಸಿಕೊಳ್ಳುವರೋ ಎಂದು ಭ್ರಮೆಯಿಂದ ಇದ್ದರು. ಆ ದಿನ ಬಾಬಾರವರು "ನೋಡು, ನಾನು ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ" ಎಂದರು. ಒಂದು ಸಾರಿ ಅವರು ಮಸೀದಿಯಲ್ಲಿ ಪೂಜೆ ಮಾಡುತ್ತಿದ್ದಾಗ ಬಾಬಾರವರು ಅವಳನ್ನು ತಡೆದು "ನೀನು ಮನೆಗೆ ಹೋಗು" ಎಂದರು. ಅವರು ಮನೆಗೆ ಬಂದು ನೋಡಲಾಗಿ ಅವರ ಮಗನು ಒಬ್ಬನೇ ಇದ್ದು ಅಳುತ್ತಿದ್ದ. ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಅವರು ಮಗುವನ್ನು ಸಂತೈಸಿ ಮಸೀದಿಗೆ ಹಿಂತಿರುಗಿದರು. ಆಗ ಬಾಬಾರವರು "ಈಗ ನೀನು ಪೂಜೆ ಮಾಡಬಹುದು" ಎಂದರು. ಹೀಗೆ ಬಾಬಾರವರು ಮಸೀದಿಯಿಂದಲೇ ತಮ್ಮ ಭಕ್ತರ ಮತ್ತು ಅವರ ಕುಟುಂಬದವರ ಮೇಲೆ ಯಾವಾಗಲೂ ಗಮನ ಇಟ್ಟಿದ್ದರು ಮತ್ತು ಅವರುಗಳನ್ನು ರಕ್ಷಿಸುತ್ತಿದ್ದರು.

ಸಾಯಿಯವರು ಇರುವೆಯ ನಡಿಗೆಯನ್ನು ಕೂಡ ಕೇಳಿಸಿಕೊಳ್ಳುತ್ತಾರೆ. ಒಂದು ಸಾರಿ ಅವರು ರೋಗದಿಂದ ಗುಣವಾಗದೆ ಇರುವ ಹುಡುಗನನ್ನು ವೈದ್ಯರ ಸಲಹೆ ಮೀರಿ ಶಿರಡಿಗೆ ಕರೆದುಕೊಂಡು ಬಂದರು. ಮಗುವಿಗೆ ಟ್ರೈನ್ ನಲ್ಲಿದ್ದಾಗ ಜ್ವರ ಇತ್ತು. ಮಗುವು ಕುಳಿತುಕೊಳ್ಳಲಾಗದೆ ಯಾವಾಗಲೂ ಮಲಗಿಯೇ ಇರುತ್ತಿತ್ತು. ಅವರುಗಳು ತಮ್ಮ ಈ ನಡವಳಿಕೆ ನೋಡಿ ಜನಗಳು ನಗುತ್ತಾರೆ ಎಂದು ಭಾವಿಸಿದರು. ಅವರು ಶಿರಡಿ ತಲುಪಿ ಮಗುವನ್ನು ಬಾಬಾರವರ ಬಳಿಗೆ ಕರೆದುಕೊಂಡು ಹೋದಾಗ ಮಗು ಎದ್ದು ನಿಂತು ಆರೋಗ್ಯವಾಗಿದ್ದಿತು. ಬಾಬಾರವರು "ಈಗ ಜನಗಳು ನಗುವುದಿಲ್ಲ" ಎಂದರು.

೧೫.೧೦೧೯೧೮ ಸಾಯಿಬಾಬಾರವರ ಮಹಾ ಸಮಾಧಿಯ ದಿನ ಪ್ರಧಾನ್ ರವರ ಪತ್ನಿಯ ಕನಸಿನಲ್ಲಿ ಬಾಬಾರವರ ದೇಹವನ್ನು ನೋಡಿ ಬಾಬಾರವರು ಸಾಯುತ್ತಿದ್ದಾರೆ ಎಂದರು. ಅದಕ್ಕೆ ಬಾಬಾರವರು "ಸಂತರು ಸಾಯುವುದಿಲ್ಲ. ಅವರು ಮಹಾ ನಿರ್ವಾಣ (ಮಹಾ ಸಮಾಧಿ) ಹೊಂದುತ್ತಾರೆ" ಎಂದು ಉತ್ತರಿಸಿದರು. ಕೊನೆಗೆ ಅದೇ ದಿನ ಸಾಯಿಬಾಬಾರವರು ಇಹಲೋಕ ತ್ಯಜಿಸಿದರು ಎಂಬ ಸುದ್ದಿ ಬಂದಿತು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ
 52 ಜಪಾನ್ ಸಾಯಿ ಭಕ್ತರಿಂದ ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ವಿಗ್ರಹ ಪೂಜೆ ಮತ್ತು ಸಾಯಿಬಾಬಾ ಸಮಾಧಿ ದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ 

52 ಜಪಾನ್ ಸಾಯಿ ಭಕ್ತರು ಇದೇ ತಿಂಗಳ 27ನೇ ಆಗಸ್ಟ್ 2011, ಶನಿವಾರದಂದು ಶಿರಡಿಯ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ ಮತ್ತು ಪಾದುಕೆಗಳ ಪೂಜೆಯನ್ನು ನೆರವೇರಿಸಿದರು ಮತ್ತು ಪೂಜೆಯ ನಂತರ ಸಾಯಿಬಾಬಾರವರ ಸಮಾಧಿ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಮೋಹನ್ ಯಾದವ್ ರವರು ಉಪಸ್ಥಿತರಿದ್ದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಾಯಿ ಭಕ್ತ ಸಮ್ಮೇಳನದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇದೇ ತಿಂಗಳ 6ನೇ ಆಗಸ್ಟ್ 2011 ರಂದು   ಸಾಯಿ ಭಕ್ತ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅದರ ಪತ್ರಿಕಾ ವರದಿಯನ್ನು ಈ ಕೆಳಗೆ ಲಗತ್ತಿಸಲಾಗಿದೆ.


ಈ ಸಂದರ್ಭದಲ್ಲಿ  ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಶೈಲೇಂದ್ರ ಭಾರತಿಯವರು ಸಾಯಿ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 


ಈ ಸಂದರ್ಭದಲ್ಲಿ  ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಅನುರಾಧ ಪೌಡ್ವಾಲ್ ರವರು ಸಹ ಸಾಯಿ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸಾಯಿ ಭಕ್ತ ಸಮ್ಮೇಳನದ ಪ್ರಾಯೋಜಕರಾದ ಶ್ರೀ.ಜೈಕಿಶನ್ ತೊಲನಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು. ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಕೃಷ್ಣಚಂದ್ರ ಪಾಂಡೆ ಮತ್ತು ಉಪ ಕಾರ್ಯಕಾರಿ ಅಧಿಕಾರಿಯಾದ ಡಾ.ಯಶವಂತ್ ರಾವ್ ಮಾನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಕೃಷ್ಣಚಂದ್ರ ಪಾಂಡೆ ಮತ್ತು ಉಪ ಕಾರ್ಯಕಾರಿ ಅಧಿಕಾರಿಯಾದ ಡಾ.ಯಶವಂತ್ ರಾವ್ ಮಾನೆಯವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಾಯಿಬಾಬಾ ವಿಗ್ರಹದ ಸ್ಥಾಪನೆಯ ವಿಷಯವನ್ನು ಬಹಿರಂಗಗೊಳಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, August 24, 2011

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ  ಸೇವಾ ಟ್ರಸ್ಟ್ (ನೋಂದಣಿ), ವಾಣಿ ವಿದ್ಯಾಲಯದ ಹತ್ತಿರ, ಪರಿಗಿ ಅಂಚೆ-515 261, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ  - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಪರಿಗಿಯಲ್ಲಿ ಇರುತ್ತದೆ. ಈ ದೇವಾಲಯವು ಹಿಂದೂಪುರ ಬಸ್ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುತ್ತದೆ.  ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ. 

ಈ ದೇವಾಲಯದ ಭೂಮಿ ಪೂಜೆಯನ್ನು  29ನೇ ನವೆಂಬರ್ 2009 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 5ನೇ ಮೇ 2011 ರಂದು ಗುಂಟೂರಿನ ಖ್ಯಾತ ಸಾಯಿ ಭಕ್ತರಾದ  ಶ್ರೀ.ಸಿ.ಕೆ.ನಾಯ್ಡುರವರು ಆರ್.ಎಸ್.ಕೊಂಡಪುರಂ ನ ಸಾಯಿ ಋತ್ವಿಕ್ ಶ್ರೀ.ಜಿ.ರಾಮಮುರ್ತಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು. ನಂದ್ಯಾಲದ ಸಾಯಿಭಕ್ತರಾದ  ಶ್ರೀ.ಸಿ.ರಂಗನಾಯಕುಲು ಮತ್ತು ಬೆಂಗಳೂರಿನ ಖ್ಯಾತ ಸಾಯಿಭಕ್ತೆಯಾದ ಶ್ರೀಮತಿ.ಸಾಯಿಮಾತಾರವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 
 
ಸಾಯಿಬಾಬಾ ಮಂದಿರವು 5 ಸೆಂಟ್ ಪ್ರದೇಶದಲ್ಲಿದ್ದು ಈ ಭೂಮಿಯನ್ನು ಸ್ಥಳೀಯ ಅಂಧ ಸಾಯಿಭಕ್ತರಾದ ಶ್ರೀ.ಕೆ.ಆದಿನಾರಾಯಣ ರೆಡ್ಡಿಯವರು ದಾನವಾಗಿ ನೀಡಿರುತ್ತಾರೆ.

ಈ ದೇವಾಲಯವನ್ನು ಶ್ರೀ.ಕೆ.ಗೋಪಾಲ್, ಶ್ರೀಮತಿ.ಆರ್.ಜ್ಯೋತಿ ಮತ್ತು ಶ್ರೀ.ಎಸ್.ಮಲ್ಲಿಕಾರ್ಜುನ ರೆಡ್ಡಿಯವರು ಜಂಟಿಯಾಗಿ ನಿರ್ಮಿಸಿರುತ್ತಾರೆ. ಶ್ರೀ.ಎಸ್.ಮಲ್ಲಿಕಾರ್ಜುನ ರೆಡ್ಡಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವು ಬೆಳಿಗ್ಗೆ 6:00 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:00 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ. 

ದೇವಾಲಯದ ಗರ್ಭಗುಡಿಯಲ್ಲಿ 5 1/2 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಒಂದು ಪುಟ್ಟ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಕೂಡ ಇರಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. 
 
ಮಂದಿರದ ಹೊರಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 
 
ಸಾಯಿಬಾಬಾರವರ ಎರಡು ಆಳೆತ್ತರದ ಚಿತ್ರಪಟಗಳನ್ನು ಮತ್ತು ತೆಲುಗಿನಲ್ಲಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳನ್ನು ಬರೆದಿರುವ ಫಲಕವನ್ನು ಮಂದಿರದ ಒಳ ಗೋಡೆಗಳ ಮೇಲೆ ತೂಗುಹಾಕಲಾಗಿದೆ.

ಮಂದಿರದ ಆವರಣದ ಬಲಭಾಗದಲ್ಲಿ ಕಪ್ಪು ಶಿಲೆಯ ಗಣಪತಿ, ನಾಗದೇವತೆ ಮತ್ತು ಅಮೃತ ಶಿಲೆಯ ದತ್ತಾತ್ರೇಯ ದೇವರುಗಳ ಪುಟ್ಟ ಆಲಯವನ್ನು ಸ್ಥಾಪಿಸಲಾಗಿದೆ.

ಮಂದಿರದ ಆವರಣದ ಎಡಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
 
ಮಂದಿರದ ಆವರಣದಲ್ಲಿ ನಂದಿಯ ಹಿಂಭಾಗದಲ್ಲಿ "ಸಾಯಿ ಕೋಟಿ ಸ್ಥೂಪ" ವನ್ನು ನಿರ್ಮಿಸಲಾಗಿದ್ದು ಅದರ ಮೇಲ್ಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.
 













 

 
ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು



ಆರತಿಯ ಸಮಯ: 

ಕಾಕಡಾ ಆರತಿ 
6:00 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM


ಪ್ರತಿದಿನ ಬೆಳಿಗ್ಗೆ  7 ಘಂಟೆಯಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಕ್ಷೀರಾಭಿಷೇಕ" ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ನಿಗದಿಪಡಿಸಿರುವುದಿಲ್ಲ. 

ಪ್ರತಿ ಗುರುವಾರ,ವಿಶೇಷ ಉತ್ಸವದ ದಿನಗಳಂದು ಮತ್ತು ಸಾಯಿ ಭಕ್ತರು ಸೇವೆಯನ್ನು ಮಾಡಿಸಿದ ದಿನಗಳಲ್ಲಿ ವಿಶೇಷವಾದ ವಿಳ್ಲೇದೆಲೆಯ ಅಲಂಕಾರವನ್ನು ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ನಿಗದಿಪಡಿಸಿರುವುದಿಲ್ಲ. 


ವಿಶೇಷ ಉತ್ಸವದ ದಿನಗಳು: 

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 5ನೇ ಮೇ.
ಶ್ರೀರಾಮನವಮಿ. 
ಗುರುಪೂರ್ಣಿಮೆ
ವಿಜಯದಶಮಿ
 
ದೇಣಿಗೆಗೆ ಮನವಿ: 
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೊಸ್ಕರ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ) ,ಬ್ಯಾಂಕ್ ಆಫ್ ಬರೋಡಾ,  ಬಿ.ಟಿ.ಎಂ.ಶಾಖೆ, ಖಾತೆ ಸಂಖ್ಯೆ:29600200000249 RTGS/NEFT IFSC ಕೋಡ್ BARBOBTMBAN" ಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದು.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 



ಸ್ಥಳ: 
ವಾಣಿ ವಿದ್ಯಾಲಯದ ಹತ್ತಿರ, ಪರಿಗಿ, ಹಿಂದೂಪುರ ತಾಲ್ಲೂಕು.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿಬಾಬಾ  ಸೇವಾ ಟ್ರಸ್ಟ್ (ನೋಂದಣಿ), 
ವಾಣಿ ವಿದ್ಯಾಲಯದ ಹತ್ತಿರ, 
ಪರಿಗಿ ಅಂಚೆ-515 261, ಹಿಂದೂಪುರ ತಾಲ್ಲೂಕು, 
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ
 
ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಕೆ.ಗೋಪಾಲ್ - ಅಧ್ಯಕ್ಷರು / ಶ್ರೀಮತಿ.ಆರ್.ಜ್ಯೋತಿ - ಖಚಾಂಚಿ/ ಶ್ರೀ.ಎಸ್.ಮಲ್ಲಿಕಾರ್ಜುನ ರೆಡ್ಡಿ - ಕಾರ್ಯದರ್ಶಿ.

ದೂರವಾಣಿ ಸಂಖ್ಯೆಗಳು: 
+91 8556 248216 (ಸ್ಥಿರದೂರವಾಣಿ) / + 91 98452 70562 / +91 99483 59364 / +91 72591 84944
 
ಈ  ಮೇಲ್ ವಿಳಾಸ:  
 
 
ಮಾರ್ಗಸೂಚಿ:
ಹಿಂದೂಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಬಸ್ ಅಥವಾ ಆಟೋ ಹಿಡಿದು ಪರಿಗಿ  ಗ್ರಾಮಕ್ಕೆ ಹೋಗಬಹುದು.  ಹಿಂದೂಪುರ ಮಡಗಶಿರ ರಸ್ತೆಯಲ್ಲಿ ಸುಮಾರು 5 ಕಿಲೋಮೀಟರ್ ಕ್ರಮಿಸಿದರೆ  ಪರಿಗಿ ಸಿಗುತ್ತದೆ. ಅಲ್ಲಿನ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, August 23, 2011

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶ್ರೀ.ರಾಮದಾಸ್ ಕದಂ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶ್ರೀ.ರಾಮದಾಸ್ ಕದಂ ರವರು ಇದೇ ತಿಂಗಳ 23ನೇ ಆಗಸ್ಟ್ 2011 , ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, August 22, 2011

 ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿ ಸೇವಾ ಸಮಿತಿ (ನೋಂದಣಿ), ಮೋದ ಚೆಕ್ ಪೋಸ್ಟ್ ನ ಎದುರು, ಮೋದ ಅಂಚೆ-515 212, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ  - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಮೋದ ಗ್ರಾಮದ ಚೆಕ್ ಪೋಸ್ಟ್ ನ ಎದುರು ಇರುತ್ತದೆ. ಈ ದೇವಾಲಯವು ಹಿಂದೂಪುರ ಬಸ್ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುತ್ತದೆ.  ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ. 

ಈ ದೇವಾಲಯದ ಭೂಮಿ ಪೂಜೆಯನ್ನು  1995 ನೇ ಇಸವಿಯಲ್ಲಿ  ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 27ನೇ ಮಾರ್ಚ್ 2003 ರಂದು ಶ್ರೀ.ಸಾಯಿ ಕಾಳೇಶ್ವರ ಸ್ವಾಮಿಯವರು ನೆರವೇರಿಸಿದರು. ಉದ್ಘಾಟನೆಯ ದಿನ ಸುತ್ತ ಮುತ್ತಲಿನ ಗ್ರಾಮದ 30 ಬಡ ಕುಟುಂಬಗಳಿಗೆ ಸೇರಿದ ಯುವ ಜೋಡಿಗಳಿಗೆ ಮದುವೆಯನ್ನು ಟ್ರಸ್ಟ್ ನ ವತಿಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿಭಕ್ತರು ಭಾಗವಹಿಸಿದ್ದರು.

ಸಾಯಿಬಾಬಾ ಮಂದಿರವು ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿರುತ್ತದೆ. ಈ ದೇವಾಲಯವನ್ನು ಶ್ರೀ.ಎನ್.ನರಸಿಂಹಪ್ಪನವರು ಸ್ಥಾಪಿಸಿರುತ್ತಾರೆ ಮತ್ತು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವು ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 10:30 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ. 

ದೇವಾಲಯದ ಗರ್ಭಗುಡಿಯಲ್ಲಿ 3 1/2 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾ ವಿಗ್ರಹದ ಕೆಳಗಡೆ ಕಪ್ಪು ಶಿಲೆಯ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಅಮೃತ ಶಿಲೆಯ ನಂದಿಯ ವಿಗ್ರಹ ಮತ್ತು ಪಾದುಕೆಗಳನ್ನು ಸಾಯಿಬಾಬಾ ವಿಗ್ರಹದ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ. 
 
ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಚಿತ್ರಪಟ ಮತ್ತು ದ್ವಾರಕಾಮಾಯಿ ಬಾಬಾರವರ ಚಿತ್ರಪಟವನ್ನು ಮಂದಿರದ ಒಳಗಡೆ ನೋಡಬಹುದು. ಪ್ರತಿ ಗುರುವಾರ ಮತ್ತು ಹಬ್ಬದ ದಿನಗಳಂದು ಕೊಂಡೊಯ್ಯುವ ಮರದ ಪಲ್ಲಕ್ಕಿಯನ್ನು ಕೂಡ ಮಂದಿರದ ಒಳಗಡೆ ನೋಡಬಹುದು. 
 
ಮಂದಿರದ ವಿಶಾಲ ಆವರಣದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ಸ್ಥಾಪಿಸಲಾಗಿದ್ದು ಇದರ ಒಳಗಡೆ ಪವಿತ್ರ ಧುನಿ ಮತ್ತು ಶಿರಡಿ ಸಾಯಿಬಾಬಾರವರ ಅತ್ಯಂತ ಪುರಾತನ ಕಾಲದ ಕಪ್ಪು ಬಿಳುಪು ಚಿತ್ರಪಟವನ್ನು ನೋಡಬಹುದು.

ಕಪ್ಪು ಶಿಲೆಯ ಗಣಪತಿ, ದತ್ತಾತ್ರೇಯ ಮತ್ತು ನಾಗದೇವತೆಗಳ ವಿಗ್ರಹಗಳನ್ನು ದೇವಾಲಯದ ಹೊರ ಆವರಣದ ಹೆಬ್ಬಾಗಿಲಿನ  ಬಳಿ ಎಡಭಾಗದಲ್ಲಿ ಸ್ಥಾಪಿಸಲಾಗಿದೆ. 
 
ಕಪ್ಪು ಶಿಲೆಯ ನವಗ್ರಹ ದೇವರುಗಳನ್ನು ದೇವಾಲಯದ ಹೊರ ಆವರಣದ ಹೆಬ್ಬಾಗಿಲಿನ  ಬಳಿ ಬಲಭಾಗದಲ್ಲಿ ಸ್ಥಾಪಿಸಲಾಗಿದೆ. 






















ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು



ಆರತಿಯ ಸಮಯ: 

ಕಾಕಡಾ ಆರತಿ 
5:15 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:15 PM
ಶೇಜಾರತಿ
10:00 PM


ಪ್ರತಿದಿನ ಬೆಳಿಗ್ಗೆ  7 ಘಂಟೆಯಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಕ್ಷೀರಾಭಿಷೇಕ" ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ. 

ಪ್ರತಿ ಗುರುವಾರ ರಾತ್ರಿ 8 ಘಂಟೆಗೆ ಪಲಕ್ಕಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ನಂತರ 8 ಘಂಟೆಯಿಂದ 10 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. 

ಪ್ರತಿ ಗುರುವಾರ ರಾತ್ರಿ 10:00 ಕ್ಕೆ ಶೇಜಾರತಿಯಾದ ನಂತರ ಮಂದಿರಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ  ಇರುತ್ತದೆ. 


ವಿಶೇಷ ಉತ್ಸವದ ದಿನಗಳು: 
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 27ನೇ ಮಾರ್ಚ್.
ಗುರುಪೂರ್ಣಿಮೆ.
ವಿಜಯದಶಮಿ.
 
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 
ದೇವಾಲಯದ ಆವರಣದಲ್ಲಿ ಒಂದು ಕಲ್ಯಾಣ ಮಂಟಪವನ್ನು ಕಟ್ಟಲಾಗಿದ್ದು ಇದನ್ನು ಸುತ್ತಮುತ್ತಲಿನ ಹಳ್ಳಿಗಳ ಬಡ ಜನರು ಮದುವೆ ಮತ್ತು ಇತರ ಮಂಗಳ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 
ಮೋದ ಚೆಕ್ ಪೋಸ್ಟ್ ನ ಎದುರು, ಮೋದ ಗ್ರಾಮ, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿ ಸೇವಾ ಸಮಿತಿ (ನೋಂದಣಿ), 
ಮೋದ ಚೆಕ್ ಪೋಸ್ಟ್ ನ ಎದುರು, ಮೋದ ಗ್ರಾಮ-515 212, 
ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು, 
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಎನ್.ನರಸಿಂಹಪ್ಪ - ಅಧ್ಯಕ್ಷರು 

ದೂರವಾಣಿ ಸಂಖ್ಯೆಗಳು: 
+ 91 8556 200099 (ಸ್ಥಿರದೂರವಾಣಿ)
 
ಮಾರ್ಗಸೂಚಿ:
ಹಿಂದೂಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಬಸ್ ಅಥವಾ ಆಟೋ ಹಿಡಿದು ಮೋದ ಗ್ರಾಮಕ್ಕೆ ಹೋಗಬಹುದು.  ಹಿಂದೂಪುರ ಮಧುಗಿರಿ ರಸ್ತೆಯಲ್ಲಿ ಸೇವಾ ಮಂದಿರ ಮಾರ್ಗವಾಗಿ ಸುಮಾರು 5 ಕಿಲೋಮೀಟರ್ ಕ್ರಮಿಸಿದರೆ  ಮೋದ ಗ್ರಾಮ ಸಿಗುತ್ತದೆ. ಮೋದ ಚೆಕ್ ಪೋಸ್ಟ್ ಬಸ್ ನಿಲ್ದಾಣದಲ್ಲಿ ಇಳಿದರೆ ಚೆಕ್ ಪೋಸ್ಟ್ ನ ಎದುರುಗಡೆ ದೇವಾಲಯ ಇರುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
 ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ (ನೋಂದಣಿ), ವಿದ್ಯಾನಗರ ಕಾಲೋನಿ, ಕೋಡಿಗೆನಹಳ್ಳಿ ಅಂಚೆ-515 212, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ  - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಕೋಡಿಗೆನಹಳ್ಳಿಯಲ್ಲಿ ಇರುತ್ತದೆ. ಈ ದೇವಾಲಯವು ಹಿಂದೂಪುರ ಬಸ್ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುತ್ತದೆ.  ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ. 

ಈ ದೇವಾಲಯದ ಭೂಮಿ ಪೂಜೆಯನ್ನು  26ನೇ ಜನವರಿ 1998 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 13ನೇ ಮೇ 2011 ರಂದು ಹಿಂದೂಪುರದ ಖ್ಯಾತ ಸಾಯಿ ಭಕ್ತರಾದ  ಶ್ರೀ.ವಿ.ಪಿ.ರಂಗಸ್ವಾಮಿಯವರು ನೆರವೇರಿಸಿದರು. 

ಸಾಯಿಬಾಬಾ ಮಂದಿರವು 25 ಸೆಂಟ್  ಪ್ರದೇಶದಲ್ಲಿರುತ್ತದೆ. ಇದರಲ್ಲಿ 10 ಸೆಂಟ್ ಭೂಮಿಯನ್ನು ಶ್ರೀ.ವಿ.ಪಿ.ರಂಗಸ್ವಾಮಿಯವರು ನೀಡಿರುತ್ತಾರೆ. 11 ಸೆಂಟ್ ಭೂಮಿಯನ್ನು ಸ್ಥಳೀಯ ಗ್ರಾಮ ಪಂಚಾಯತಿಯವರು ನೀಡಿರುತ್ತಾರೆ. ಉಳಿದ 4 ಸೆಂಟ್ ಭೂಮಿಯನ್ನು ದೇವಾಲಯದ ಟ್ರಸ್ಟ್ ನ ಸದಸ್ಯರು ಖರೀದಿ ಮಾಡಿರುತ್ತಾರೆ.

ಈ ದೇವಾಲಯವನ್ನು ಶ್ರೀ.ಆರ್.ಪಿ.ಲಿಂಗಾರೆಡ್ಡಿಯವರು ಸ್ಥಳೀಯ ಬಟ್ಟೆ ಗಿರಣಿಯ ಕಾರ್ಮಿಕರ ಸಹಾಯದೊಂದಿಗೆ ಸ್ಥಾಪಿಸಿರುತ್ತಾರೆ ಮತ್ತು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವು ಬೆಳಿಗ್ಗೆ 5:30 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 9:30 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ. 

ದೇವಾಲಯದ ಗರ್ಭಗುಡಿಯಲ್ಲಿ ನಾಲ್ಕೂವರೆ ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ದೇವಾಲಯದಲ್ಲಿ ಸುಮಾರು 3 1/2 ಅಡಿ ಎತ್ತರದ ಪಂಚಲೋಹದ ಸಾಯಿಬಾಬಾ ವಿಗ್ರಹವಿದ್ದು  ಅದನ್ನು ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುತ್ತದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. 
 
ಮಂದಿರದ ಮಧ್ಯಭಾಗದ ನೆಲದಲ್ಲಿ ಅಮೃತ ಶಿಲೆಯ ಕೂರ್ಮವನ್ನು ಸಾಯಿಬಾಬಾರವರ ವಿಗ್ರಹಕ್ಕೆ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ. ಮಂದಿರದ ಹೊರಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಮಂದಿರದ ವಿಶಾಲ ಆವರಣದ ಮಧ್ಯಭಾಗದಲ್ಲಿ "ಹೋಮಕುಂಡ" ವನ್ನು ಸ್ಥಾಪಿಸಲಾಗಿದ್ದು, ವಿಶೇಷ ಉತ್ಸವದ ದಿನಗಳಂದು ಹೋಮವನ್ನು ಮಾಡಲು ಬಳಸಲಾಗುತ್ತದೆ

ಕಪ್ಪು ಶಿಲೆಯ ಗಣಪತಿಯ ವಿಗ್ರಹ ಮತ್ತು ಅಮೃತ ಶಿಲೆಯ ದತ್ತಾತ್ರೇಯರ ವಿಗ್ರಹಗಳನ್ನು ದೇವಾಲಯದ ಹೊರ ಆವರಣದ ಹೆಬ್ಬಾಗಿಲ ಬಳಿ ಸ್ಥಾಪಿಸಲಾಗಿದೆ. 















ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು


ಆರತಿಯ ಸಮಯ: 

ಕಾಕಡಾ ಆರತಿ 
5:30 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:30 PM
ಶೇಜಾರತಿ
9:30 PM


ಪ್ರತಿದಿನ ಬೆಳಿಗ್ಗೆ  6 ಘಂಟೆಯಿಂದ 7 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಜಲಾಭಿಷೇಕ" ಮಾಡಲಾಗುತ್ತದೆ. 

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬೆಳಿಗ್ಗೆ  6 ಘಂಟೆಯಿಂದ 7 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಪಂಚಾಮೃತ ಅಭಿಷೇಕ" ಮಾಡಲಾಗುತ್ತದೆ. ಸೇವಾ ಶುಲ್ಕ 216/- ರುಪಾಯಿಗಳು.  

ಪ್ರತಿ ಗುರುವಾರ ಸಂಜೆ 6:30 ರಿಂದ ರಾತ್ರಿ 8 ಘಂಟೆಯವರೆಗೆ ಪಲಕ್ಕಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ನಂತರ 8 ಘಂಟೆಯಿಂದ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. 

ಪ್ರತಿ ಗುರುವಾರ ರಾತ್ರಿ 9:30 ಕ್ಕೆ ಶೇಜಾರತಿಯಾದ ನಂತರ ಮಂದಿರಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ  ಇರುತ್ತದೆ. 


ವಿಶೇಷ ಉತ್ಸವದ ದಿನಗಳು: 

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 13ನೇ ಮೇ ಯಂದು.

ಯುಗಾದಿ- ಸಾಯಿಬಾಬಾರವರ ಉತ್ಸವ ವಿಗ್ರಹದ ಮೆರವಣಿಗೆ ಮತ್ತು ಅನ್ನದಾನ.

ಗುರುಪೂರ್ಣಿಮೆ - ಸಾಯಿಬಾಬಾರವರ ಉತ್ಸವ ವಿಗ್ರಹದ ಮೆರವಣಿಗೆ ಮತ್ತು ಅನ್ನದಾನ.
 
ವಿಜಯದಶಮಿ - ಉತ್ಸವಕ್ಕೆ ಒಂದು ವಾರದ ಮೊದಲು ಹಳ್ಳಿಯಲ್ಲಿ ಭಿಕ್ಷಾ ಜೋಳಿ ಕಾರ್ಯಕ್ರಮ ಮಾಡಿ ಅದರಿಂದ ಬಂದ ಹಣ ಮತ್ತು ದವಸ ಧಾನ್ಯಗಳನ್ನು ಅನ್ನದಾನಕ್ಕೆ ಬಳಸಲಾಗುತ್ತದೆ. ಪಂಚ ಲೋಹದ ಸಾಯಿಬಾಬಾರವರ ವಿಗ್ರಹವನ್ನು ಹಳ್ಳಿಯ ಹೊರಗಡೆ ಇರುವ ಶಮೀ ವೃಕ್ಷಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪುನಃ ವಾಪಸ್ ತರಲಾಗುತ್ತದೆ.

ದೇಣಿಗೆಗೆ ಮನವಿ: 
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೊಸ್ಕರ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ (ನೋಂದಣಿ) , ಸಿಂಡಿಕೇಟ್ ಬ್ಯಾಂಕ್, ಕೋಡಿಗೆನಹಳ್ಳಿ ಶಾಖೆ, ಖಾತೆ ಸಂಖ್ಯೆ: 31382200011408 ಐ.ಎಫ್.ಎಸ್.ಸಂಖ್ಯೆ:SYNB0003138" ಸಂದಾಯವಾಗುವಂತೆ ನೀಡಬಹುದು.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 
ಅಂಧರ ಶಾಲೆಯ ಹತ್ತಿರ, ವಿದ್ಯಾನಗರ ಕಾಲೋನಿ, ಕೋಡಿಗೆನಹಳ್ಳಿ, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು.


ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ (ನೋಂದಣಿ), 
ವಿದ್ಯಾನಗರ ಕಾಲೋನಿ, ಕೋಡಿಗೆನಹಳ್ಳಿ ಅಂಚೆ-515 212, 
ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು, 
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಆರ್.ಪಿ.ಲಿಂಗಾರೆಡ್ಡಿ - ಅಧ್ಯಕ್ಷರು / ಶ್ರೀ.ವೈ.ನರಸಿಂಹಂ  -ಉಪಾಧ್ಯಕ್ಷರು / ಶ್ರೀ.ಹೆಚ್.ಶ್ರೀನಿವಾಸುಲು -ಕಾರ್ಯದರ್ಶಿ.

ದೂರವಾಣಿ ಸಂಖ್ಯೆಗಳು: 

+ 91 8556 227599 (ಸ್ಥಿರದೂರವಾಣಿ) / +91 96528 43885 / +91 98667 68411

ಮಾರ್ಗಸೂಚಿ:
ಹಿಂದೂಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಬಸ್ ಅಥವಾ ಆಟೋ ಹಿಡಿದು ಕೊಡಿಗೇನಹಳ್ಳಿ ಗ್ರಾಮಕ್ಕೆ ಹೋಗಬಹುದು.  ಹಿಂದೂಪುರ ಮಡಗಶಿರ ರಸ್ತೆಯಲ್ಲಿ ಸುಮಾರು 5 ಕಿಲೋಮೀಟರ್ ಕ್ರಮಿಸಿದರೆ  ಕೊಡಿಗೇನಹಳ್ಳಿ ಸಿಗುತ್ತದೆ. ಅಲ್ಲಿನ ಅಂಧರ ಶಾಲೆಯ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ