Monday, October 31, 2011

ಸಾಯಿ ಮಹಾಭಕ್ತ  - ಶ್ರೀ.ಸೋಮನಾಥ ಶಂಕರ ದೇಶಪಾಂಡೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ಸೋಮನಾಥ ಶಂಕರ ದೇಶಪಾಂಡೆಯವರು ಸಾಯಿ ಮಹಾಭಕ್ತರಾದ ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ಪುತ್ರರು.  ಇವರು ಬ್ರಾಹ್ಮಣ ಕುಲಕ್ಕೆ ಸೇರಿದವರಾಗಿದ್ದರು ಮತ್ತು ಪೋಲಿಸ್ ಇಲಾಖೆಯಲ್ಲಿ ತನಿಖಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಇವರು ಪುಣೆಯ ಶನಿವಾರಪೇಟೆಯಲ್ಲಿ ವಾಸವಾಗಿದ್ದರು. 

ನಿಮೋಣ್ ಶಿರಡಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಗ್ರಾಮವಾಗಿರುತ್ತದೆ. ಈ ಸ್ಥಳದಲ್ಲಿ ಇವರ ದೇಶಪಾಂಡೆ ಮನೆತನದವರು ಹಲವಾರು ವರ್ಷಗಳಿಂದ ವಾಸವಾಗಿದ್ದರು. ಶಿರಡಿಯಲ್ಲಿ ಇವರ ಅನೇಕ ಬಂಧುಗಳು ವಾಸವಾಗಿದ್ದರು. ಮಾಧವ ರಾವ್ ದೇಶಪಾಂಡೆ ಆಲಿಯಾಸ್ ಶ್ಯಾಮಾ ಅವರ ತಂದೆಯವರು ನಾನಾ ಸಾಹೇಬ್ ನಿಮೋಣ್ಕರ್ ರವರ ಚಿಕ್ಕಪ್ಪನವರಾಗಿದ್ದರು ಮತ್ತು ಅವರನ್ನು ಬಹಳವಾಗಿ ಇಷ್ಟ ಪಡುತ್ತಿದ್ದರು. ಒಮ್ಮೆ ಅವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ "ಜನರು ಶಿರಡಿಯ ಆ ಫಕೀರನನ್ನು ಹುಚ್ಚು ಫಕೀರನೆಂದು ಕರೆಯುತ್ತಾರೆ. ಆದರೆ ನನಗೆ ಆ ಫಕೀರ ಹುಚ್ಚನಂತೆ ಕಾಣುವುದಿಲ್ಲ. ನೀನು ನನ್ನ ಜೊತೆಯಲ್ಲಿ ಶಿರಡಿಗೆ ಬಂದು ಫಕೀರನನ್ನು ನೋಡಿ ನಿನ್ನ ಅಭಿಪ್ರಾಯವನ್ನು ತಿಳಿಸು" ಎಂದು ಹೇಳಿ ಅವರನ್ನು ಶಿರಡಿಗೆ ಕರೆದುಕೊಂಡು ಬಂದಿದ್ದರು. ಬಲವಂತ್ ನಾಚ್ನೆ ಮಸೀದಿಗೆ ಹೋಗಲು ಯತ್ನಿಸಿದಾಗಲೆಲ್ಲಾ ಸಾಯಿಬಾಬಾರವರು ಇಟ್ಟಿಗೆಯನ್ನು ತಮ್ಮ ಕೈಗೆತ್ತಿಕೊಂಡು ಹೊಡೆಯಲು ಬರುತ್ತಿದ್ದರು. ಆದ್ದರಿಂದ ಶಿರಡಿಯ ಅನೇಕ ಜನರು ಮಸೀದಿಗೆ ಹೋಗಲು ಹೆದರುತ್ತಿದ್ದರು. ಆದರೆ, ನಾನಾ ಸಾಹೇಬ್ ಬಾಬಾರವರನ್ನು ನೋಡಲು ಹೋದಾಗ ಬಾಬಾರವರು ಇಟ್ಟಿಗೆಯನ್ನು ಕೈಗೆತ್ತಿಕೊಂಡು ಹೊಡೆಯಲು ಹೋಗುತ್ತಿರಲಿಲ್ಲ. ಸಾಯಿಬಾಬಾರವರನ್ನು ನೋಡಿದ ಕೂಡಲೇ ನಾನಾ ಸಾಹೇಬ್ ರವರು ಸಾಯಿಯವರ ಕಡೆ ಆಕರ್ಷಿತರಾದರು. ಮನೆಗೆ ಹಿಂತಿರುಗಿದ ಕೂಡಲೇ ನಾನಾರವರು ತಮ್ಮ ಚಿಕ್ಕಪ್ಪನವರಿಗೆ ಸಾಯಿಯವರು ಹುಚ್ಚರಲ್ಲವೆಂದು, ಬದಲಿಗೆ ಅವರು ಒಬ್ಬ ಮಹಾನ್ ಸಂತರೆಂದು ನುಡಿದರು. ನಾನಾರವರ ನುಡಿಯನ್ನು ಕೇಳಿ ಅವರ ಚಿಕ್ಕಪ್ಪನವರಿಗೆ ಆಶ್ಚರ್ಯವಾಯಿತು. ಪ್ರತಿ ಬಾರಿ ಎಲ್ಲರ ಮೇಲೆ ಇಟ್ಟಿಗೆಯನ್ನು ಎಸೆಯುತ್ತಿದ್ದ ಬಾಬಾರವರು ಅದು ಹೇಗೆ ಅಂದು ತಮ್ಮ ಮೇಲೆ ಇಟ್ಟಿಗೆಯನ್ನು ಎಸೆಯಲಿಲ್ಲ ಎಂದು ಆಶ್ಚರ್ಯವಾಗುತ್ತಿದೆ ಎಂದು ಹೇಳಿದಾಗ ನಾನಾರವರು "ನೀವೆಲ್ಲರೂ ಬಾಬಾರವರನ್ನು ಹುಚ್ಚರೆಂದು ಸಂಶಯ ದೃಷ್ಟಿಯಿಂದ ನೋಡಿದಿರಿ. ಆದರೆ ನಾನು ಸಂಶಯ ಪಡಲಿಲ್ಲ" ಎಂದು ನುಡಿದರು. ಆ ದಿನದಿಂದ ನಾನಾರವರು ಪ್ರತಿ ವರ್ಷ ಶಿರಡಿಗೆ ಹೋಗಲು ಆರಂಭಿಸಿದರು. ನಂತರದ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಮತ್ತು ಸ್ವಲ್ಪ ವರ್ಷಗಳ ನಂತರ ವರ್ಷಕ್ಕೆ ಅನೇಕ ಬಾರಿ ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಭೇಟಿ ಮಾಡುತ್ತಿದ್ದರು. ದಿನೇ ದಿನೇ ಅವರಿಗೆ ಸಾಯಿಬಾಬಾರವರಲ್ಲಿ ಇದ್ದ ನಂಬಿಕೆ ಹೆಚ್ಚಾಗುತ್ತಾ ಹೋಯಿತು. 

ನಾನಾ ಸಾಹೇಬ್ ನಿಮೋಣ್ಕರ್  ರವರು ತಾವು ಸಾಯುವುದಕ್ಕೆ ಎರಡು ತಿಂಗಳುಗಳ ಮುಂಚೆ ಪುಣೆಯಲ್ಲಿದ್ದ ಸೋಮನಾಥ್ ರ ಮನೆಯಲ್ಲಿ ತಂಗಿದ್ದರು. ಆಗ ಎರಡು ಬಾರಿ ಬಾಬಾರವರು ಇವರನ್ನು ಸಾವಿನ ದವಡೆಯಿಂದ ಕಾಪಾಡಿದ್ದರು.  ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್  ಕುಟುಂಬದ ಎಲ್ಲರ ಯೋಗಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನಾರವರು ಸೋಮನಾಥ್ ರವರನ್ನು ಅವರ ಬಾಲ್ಯದ ದಿನಗಳಿಂದಲೇ ಬಾಬಾರವರ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು. ಬಾಬಾರವರು ಸೋಮನಾಥ್ ರವರನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಮತ್ತು ಅವರನ್ನು "ಸೋಮ್ನಿಯಾ" ಎಂದು ಸಂಬೋಧಿಸುತ್ತಿದ್ದರು. 

1912ನೇ ಇಸವಿಯಲ್ಲಿ ಸೋಮನಾಥ್ ರವರು ಕೋಪರ್ ಗಾವ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಶಿರಡಿ ಗ್ರಾಮವು ಇವರ ಪರಿಧಿಗೆ ಬರುತ್ತಿತ್ತು. ಸೋಮನಾಥ್ ರವರಿಗೆ ಮೊದಲ ಸಂಬಳ ಬಂದ ದಿನದಿಂದ ನಾನಾ ಸಾಹೇಬ್ ನಿಮೋಣ್ಕರ್ ರವರ ಅಣತಿಯಂತೆ ಅವರು ಪ್ರತಿ ತಿಂಗಳೂ ಆವರು ಬಾಬಾರವರಿಗೆ ಎರಡು ರುಪಾಯಿಗಳನ್ನು ಮನಿ ಆರ್ಡರ್ ಮುಖಾಂತರ ಕಳುಹಿಸುತ್ತಿದ್ದರು. ಹೀಗೆ ಅವರು 1920ನೇ ಇಸವಿಯವರೆಗೂ ಶಿರಡಿಗೆ ತಪ್ಪದೆ ಹಣವನ್ನು ಕಳುಹಿಸುತ್ತಿದ್ದರು. ತಮ್ಮ ತಂದೆಯವರು ಕಾಲವಾದ ಸ್ವಲ್ಪ ತಿಂಗಳುಗಳ ತನಕವೂ ಅವರು ಈ ರೀತಿ ಹಣವನ್ನು ಶಿರಡಿಗೆ ಕಳುಹಿಸುತ್ತಿದ್ದರು. ಇವರು ಕೋಪರ್ ಗಾವ್ ನಲ್ಲಿದ್ದಾಗ ಒಮ್ಮೆ ತಮ್ಮ ತಂದೆಯವರ ಜೊತೆ ಶಿರಡಿಗೆ ಭೇಟಿ ನೀಡಿದ್ದರು. ಆಗ ಬಾಬಾರವರು ಸೋಮನಾಥ್ ರಿಂದ 10 ರುಪಾಯಿಗಳ ದಕ್ಷಿಣೆಯನ್ನು ಕೇಳಿ ಪಡೆದರು. ಆಗ ಅದಕ್ಕೆ ಯಾವುದೇ ಮಹತ್ವವಿದೆ ಎಂದು ಸೋಮನಾಥ್ ರವರಿಗೆ ಅರಿವಾಗಿರಲಿಲ್ಲ. ಆದರೆ ಈ ಘಟನೆಯಾಗಿ ಸರಿಯಾಗಿ ಆರು ತಿಂಗಳುಗಳ ನಂತರ ಸೋಮನಾಥ್ ರವರ ಸಂಬಳವು ಸರಿಯಾಗಿ ಹತ್ತು ರುಪಾಯಿಗಳಷ್ಟು ಹೆಚ್ಚಾಗಿತ್ತು. ಅಷ್ಟೇ ಅಲ್ಲ, ಇವರು ಸಾಯಿಬಾಬಾರವರನ್ನು ಭೇಟಿಯಾದ ದಿನಾಂಕದಿಂದ ಇವರ ಸಂಬಳವನ್ನು ಹತ್ತು ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಸೋಮನಾಥ್ ರವರಿಗೆ 1912 ರಲ್ಲಿ ಕೋಪರ್ ಗಾವ್ ನಿಂದ ಪುಣೆಗೆ ವರ್ಗವಾಯಿತು. 

ಇನ್ನೊಂದು ಘಟನೆ ಈ ರೀತಿಯಿದೆ: ಆಗ ಸೋಮನಾಥ್ ರವರು ಇನ್ನು ಕೆಲಸಕ್ಕೆ ಸೇರಿರಲಿಲ್ಲ. ಒಂದು ದಿನ ಬಾಬಾರವರು ದ್ವಾರಕಾಮಾಯಿ ಮಸೀದಿಯಲ್ಲಿ ಕುಳಿತು ತಮ್ಮ ಕೈಗಳಿಂದ ನಾಣ್ಯಗಳನ್ನು ಎತ್ತಿಕೊಂಡು ಅವನ್ನು ಚೆನ್ನಾಗಿ ತಿಕ್ಕುತ್ತಾ "ಇದು ಕಾಕನದು, ಇದು ಸೋಮ್ಯನದು"  ಎಂದು ಹೆಸರುಗಳನ್ನು ಉಚ್ಚರಿಸುತ್ತಿದ್ದುದನ್ನು ನಾನಾ ಸಾಹೇಬ್ ನಿಮೋಣ್ಕರ್ ರವರು ಸೋಮನಾಥನಿಗೆ ತೋರಿಸಿದರು ಮತ್ತು ಬಾಬಾರವರಿಗೆ ಸೋಮನಾಥ್ ನನ್ನು ಕಂಡರೆ ಎಷ್ಟು ಪ್ರೀತಿ ಇತ್ತೆಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಹೇಳಿದರು.

1916 ನೇ ಇಸವಿಯಲ್ಲಿ  ಸೋಮನಾಥ್ ರವರ ಪತ್ನಿಯು ಗರ್ಭಿಣಿಯಾಗಿದ್ದರು. ದಂಪತಿಗಳು ಹೆರಿಗೆ ಸುಲಭವಾಗಲೆಂದು  ಸೋಮನಾಥ್ ರವರ ತಂದೆ ತಾಯಿಗಳು ಬರುವುದನ್ನೇ ಎದುರು ನೋಡುತ್ತಿದ್ದರು. ತಮ್ಮ ಸೊಸೆಯನ್ನು ನೋಡಿಕೊಳ್ಳುವ ಸಲುವಾಗಿ ನಾನಾ ಸಾಹೇಬ್ ನಿಮೋಣ್ಕರ್ ಮತ್ತು ಅವರ ಪತ್ನಿ ಪುಣೆಗೆ ಹೊರಟರು.  ಆದರೆ ಶಿರಡಿ ಸಮೀಪಿಸುತ್ತಿದ್ದಂತೆ ಶಿರಡಿ ಸಾಯಿಬಾಬಾರವರು ಮರಣ ಶಯ್ಯೆಯಲ್ಲಿ ಇದ್ದಾರೆಂಬ ವಾರ್ತೆ ಕೇಳಿ ಶಿರಡಿಗೆ ಬಂದು ಬಾಬಾರವರ ದರ್ಶನ ಮಾಡಿದರು. ಸಾಯಿಬಾಬಾರವರು ನಿಮೋಣ್ಕರ್ ದಂಪತಿಗಳಿಗೆ ಪುಣೆಗೆ ಆಗಲಿ ಅಥವಾ ನಿಮೋಣ್ ಗೆ ವಾಪಸ್ ಆಗಲಿ ಹೋಗದಂತೆ ತಡೆದರು. ಇದರಿಂದ ನಿಮೋಣ್ಕರ್ ದಂಪತಿಗಳಿಗೆ ಏನು ಮಾಡಬೇಕೆಂದು ತಿಳಿಯದಾಗಿ ದಿಕ್ಕು ತೋಚಲಿಲ್ಲ. ಆಗ ಇವರ ಪರವಾಗಿ ಶ್ಯಾಮರವರು ಬಾಬಾರವರನ್ನು ಕೇಳಿದರು.  ಅವರಿಗೂ ಕೂಡ ಬಾಬಾರವರು ಚೆನ್ನಾಗಿ ಬಯ್ದರು. "ನೀವು ಹೋಗಲೇ ಬೇಕೆಂದು ಅಂದುಕೊಂಡಿದ್ದರೆ ನನ್ನನ್ನು ಹೂಳಿಬಿಟ್ಟು ನಂತರ ಹೊರಡಿ" ಎಂದರು. ಇತ್ತ ಪುಣೆಯಲ್ಲಿ ಸೋಮನಾಥ್ ಮನೆಯವರು ತಾವುಗಳೇ ನಿಮೋಣ್ ಗೆ ತೆರಳಬೇಕೆಂದು ಅಂದುಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ರಾತ್ರಿ ಸೋಮನಾಥ್ ರವರ ಪತ್ನಿಯವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ತಡಮಾಡದೆ ಸೋಮನಾಥ್ ಪತ್ನಿಯನ್ನು ಟಾಂಗಾ ಮಾಡಿಕೊಂಡು ರಾತ್ರಿ ಹತ್ತು ಗಂಟೆಯ ವೇಳೆಗೆ ಪುಣೆಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದರು ಮತ್ತು ಹಾಸಿಗೆಯ ಮೇಲೆ ಮಲಗಿಸಿದರು.  ಪಕ್ಕದ ಕೋಣೆಯಲ್ಲಿ ಸೋಮನಾಥ್ ಮತ್ತು ದಾದಿ ಮಾತನಾಡುತ್ತಾ ಇದ್ದರು. ಸುಮಾರು 11 ಗಂಟೆಯ ಸಮಯದಲ್ಲಿ ಆಗ ತಾನೇ ಹುಟ್ಟಿದ ಗಂಡು ಮಗುವಿನ ಅಳುವನ್ನು ಕೇಳಿದರು. ಯಾರ ಸಹಾಯವೂ ಇಲ್ಲದೆಯೇ ಸುಖವಾಗಿ ಹೆರಿಗೆಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಶಿರಡಿಯ ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ "ಒಬ್ಬಳು ಹೆಂಗಸು ಇದ್ದಳು. ಅವಳನ್ನು ಹೆರಿಗೆಗೆ ಎಲ್ಲಿಗೋ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದರು. ಆದರೆ,ಅವಳಿಗೆ ಅಲ್ಲಿಯೇ ಸುಖವಾದ ಹೆರಿಗೆಯಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ" ಎಂದು ನುಡಿದರು.

ಹೆರಿಗೆಯಾದ ಕೂಡಲೇ ಸೋಮನಾಥ್ ರವರು ತಮ್ಮ ಸಹೋದರನೊಡನೆ ಸಿಹಿ ಪೇಡಾವನ್ನು ಕೊಟ್ಟು ಶಿರಡಿಗೆ  ಹೋಗಿ ಸಾಯಿಬಾಬಾ ಮತ್ತು ತಮ್ಮ ತಂದೆ ತಾಯಿಗಳಿಗೆ ಸಿಹಿಯನ್ನು ನೀಡಿ ತಮ್ಮ ತಾಯಿಯವರನ್ನು ಬಾಣಂತನಕ್ಕೆ ಪುಣೆಗೆ ಕರೆದುಕೊಂಡು ಬರುವಂತೆ ಹೇಳಿ ಕಳುಹಿಸಿದರು. ಆದರೆ ಬಾಬಾರವರು ಆಗಲೂ ಕೂಡ ನಾನಾ ಸಾಹೇಬ್ ನಿಮೋಣ್ಕರ್ ರವರ ಪತ್ನಿಗೆ ಹೋಗಲು ಅನುಮತಿ ನೀಡಲಿಲ್ಲ. ಆಗ ನಿಮೋಣ್ಕರ್  ರವರು ತಮ್ಮ ಮಗನಿಗೆ ಸಾಯಿಬಾಬಾರವರು ಹೆರಿಗೆಯ ವಿಷಯವನ್ನು ಅದೇ ಸಮಯಕ್ಕೆ ಪ್ರಸ್ತಾಪಿಸಿದ ವಿಷಯವನ್ನು ತಿಳಿಸಿದರು. ಅದು 1916ನೇ ಇಸವಿಯ ಭಾದ್ರಪದ ಮಾಸವಾಗಿತ್ತು. 

ಮತ್ತೊಂದು ಘಟನೆ ಈ ರೀತಿಯಿದೆ: 1917ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಪುಣೆಯಲ್ಲಿ ಪ್ಲೇಗ್ ಮಹಾಮಾರಿ ಆವರಿಸಿಕೊಂಡಿತು. ಕ್ರಿಸ್ಮಸ್ ರಜೆಯ ಸಮಯದಲ್ಲಿ ಸೋಮನಾಥ್ ಅವರ 2 ವರ್ಷದ ಮಗ ಗೋಪಾಲ್ ನೊಡನೆ ತಮ್ಮ ಸಹೋದರನ ಪತ್ನಿಯು ಆಗ ತಾನೇ ಹಡೆದ ಮಗುವನ್ನು ನೋಡಿಕೊಂಡು ಬರಲು  ನಿಮೋಣ್ ಗೆ ಹೊರಟರು. ಮಾರ್ಗ ಮಧ್ಯದಲ್ಲಿ ಅವರು ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಪಡೆದರು. ಅವರು ಹೊರಡುವಾಗ ಸಾಯಿಬಾಬಾರವರು ಉಧಿಯನ್ನು ನೀಡಿ ಆಶೀರ್ವಾದ ಮಾಡುತ್ತಾ "ಮಗುವನ್ನು ಉಳಿಸು" ಎಂದು ಹೇಳಿದರು. ಸೋಮನಾಥ್ ರವರು ಬಾಬಾ ತಮ್ಮ ಮಗ ಗೋಪಾಲ್ ವಿಷಯವಾಗಿ ಈ ರೀತಿ ಹೇಳುತ್ತಿದ್ದಾರೆಂದು ಭಾವಿಸಿ ಅವನ ಹಣೆಗೆ ಉಧಿಯನ್ನು ಹಚ್ಚಿ ಟಾಂಗಾ ಮಾಡಿಕೊಂಡು ನಿಮೋಣ್ ಗೆ ಹೊರಟರು. ಅವರು ನಿಮೋಣ್ ತಲುಪಿದಾಗ ತಮ್ಮ ಸಹೋದರನ ಕೇವಲ 12 ದಿನಗಳ ಮಗು
ಹುಷಾರು ತಪ್ಪಿ ತೊಂದರೆಯಲ್ಲಿರುವುದನ್ನು ಕಂಡರು. ಮಗುವಿನ ಕೈ ಕಾಲುಗಳು ತಣ್ಣಗಾಗಿ ಮನೆಯವರೆಲ್ಲರೂ ಮಗುವು ತಮಗೆ ದಕ್ಕುವುದಿಲ್ಲವೆಂದು ತಿಳಿದುಕೊಂಡಿದ್ದರು. ಕೂಡಲೇ ಸೋಮನಾಥ್ ಗೆ ಸಾಯಿಬಾಬಾರವರು ಹೇಳಿದ ಮಾತುಗಳು ನೆನಪಾಯಿತು. ಮಗುವಿನ ಹಣೆಗೆ ಉಧಿಯನ್ನು ಹಚ್ಚಲು ತಮ್ಮ ಅಂಗಿಯ ಜೇಬನ್ನೆಲ್ಲಾ ತಡಕಾಡಿದರು. ಆದರೆ ಉಧಿಯ ಪೊಟ್ಟಣವು ಪ್ರಯಾಣದ ಮಧ್ಯದಲ್ಲಿ ಎಲ್ಲಿಯೋ ಕಳೆದುಹೋಗಿತ್ತು. ಆಗ ಸೋಮನಾಥ್ ರವರು ಆ ಮಗುವನ್ನು ತಮ್ಮ ತೊಡೆಯ ಮೇಲಿರಿಸಿಕೊಂಡು ಸುಮಾರು 15 ನಿಮಿಷಗಳ ಕಾಲ ಸಾಯಿಯವರ ಸಹಾಯವನ್ನು ಬೇಡಿ ಪ್ರಾರ್ಥನೆ ಮಾಡಿಕೊಂಡರು. ಸರಿಯಾಗಿ 15 ನಿಮಿಷಗಳ ನಂತರ ಮಗುವಿನ ಆರೋಗ್ಯದಲ್ಲಿ ಗುಣ ಕಂಡು ಬಂದು ಕ್ರಮೇಣ ಸಂಪೂರ್ಣವಾಗಿ ಗುಣವಾಯಿತು. ಆ ಮಗುವು ದೇವರ ವರ ಎಂದು ಭಾವಿಸಿ ಮನೆಯವರು "ದತ್ತ" ಎಂದು ನಾಮಕರಣ ಮಾಡಿದರು.

ಸೋಮನಾಥ್ ಗೆ ರಜೆ ಇಲ್ಲದ ಕಾರಣ ಮತ್ತು 8 ನೇ ಜನವರಿ 1917 ರಂದು ಕೆಲಸಕ್ಕೆ ಹಾಜರಾಲೇಬೇಕಾಗಿದ್ದ ಕಾರಣ ಶಿರಡಿಯಿಂದ ವಾಪಸ್ ಪುಣೆಗೆ ಹೊರಡಲು ಸಾಯಿಬಾಬಾರವರನ್ನು ಬೇಡಿದಾಗ ಸಾಯಿಬಾಬಾರವರು ಅನುಮತಿ ನೀಡಲಿಲ್ಲ. ಆದರೆ ಅಲ್ಲಿದ್ದ ನಾನಾ ಸಾಹೇಬ್ ನಿಮೋಣ್ಕರ್ ರವರು ಸಾಯಿಬಾಬಾರವರ ಕೈಗೆ ಬಲವಂತವಾಗಿ ಉಧಿಯನ್ನು ನೀಡಿ ಅದನ್ನು ಸೋಮನಾಥ್ ಗೆ ಕೊಟ್ಟು ಆಶೀರ್ವದಿಸಿ ಕಳಿಸಿಕೊಡಬೇಕೆಂದು ಒತ್ತಾಯ ಮಾಡಿದರು.   ಸೋಮನಾಥ್ ಮತ್ತು ಅವರ ಕುಟುಂಬದವರು 3 ನೇ ಜನವರಿ 1917 ರಂದು ಪುಣೆಗೆ ವಾಪಾಸ್ ಬಂದರು. ಅಲ್ಲಿ ಸೋಮನಾಥ್ ರವರ ಮನೆಯ ಮಾಲೀಕ ಪ್ಲೇಗ್ ನಿಂದ ಬಳಲುತ್ತಿದ್ದರು. 4ನೇ ಜನವರಿ 1917 ರಂದು ಸೋಮನಾಥ್ ರವರ ಪತ್ನಿಗೆ ಪ್ಲೇಗ್ ಜ್ವರ ಅಂಟಿಕೊಂಡಿತು. ಆಗ ಸಾಯಿಬಾಬಾರವರು ಇವರನ್ನು ಮತ್ತು ಇವರ ಮನೆಯ ಎಲ್ಲರನ್ನು ಕಾಪಾಡಿದರು. ಸಾಯಿಬಾಬಾರವರು ಮನೆಯನ್ನು ಬಿಟ್ಟು ಎಲ್ಲೂ ಹೋಗಬಾರದೆಂದು ಅಪ್ಪಣೆ ಮಾಡಿದ್ದರು. ಸೋಮನಾಥ್ ರವರ ಕುಟುಂಬದವರು ಸಾಯಿಬಾಬಾರವರ ಆಜ್ಞೆಯನ್ನು ತಪ್ಪದೆ ಪಾಲಿಸಿದರು. ಕಾಲಕ್ರಮೇಣ ಸೋಮನಾಥ್ ರವರ ಹೆಂಡತಿ ಗುಣಮುಖರಾದರು. ಆದರೆ ಅವರು ತಮ್ಮ ಕಣ್ಣುಗಳನ್ನು ಕಳೆದುಕೊಂಡರು. 

ಒಮ್ಮೆ ಸೋಮನಾಥ್ ರವರ ಹೆಂಡತಿ ಹುಷಾರು ತಪ್ಪಿದಾಗ ನಾನಾ ಸಾಹೇಬ್ ನಿಮೋಣ್ಕರ್  ರವರು ಪುಣೆಗೆ ಹೋಗಬೇಕೆಂದುಕೊಂಡಿದ್ದರು. ಆದರೆ ಸಾಯಿಬಾಬಾರವರು ಅವರಿಗೆ ಹೋಗಲು ಅಪ್ಪಣೆ ನೀಡಲಿಲ್ಲ. ಬದಲಿಗೆ ಅವರು "ನೀನು ಹೋಗಲೇಬೇಕೆಂದಿದ್ದರೆ ನನ್ನನ್ನು ಸಮಾಧಿ ಮಾಡಿ ನಂತರ ಹೋಗು" ಎಂದರು. 

1917ನೇ ಇಸವಿಯ ಮಾರ್ಚ್ ತಿಂಗಳಿನಲ್ಲಿ ಸೋಮನಾಥ್ ರವರು ತೀವ್ರ ಜ್ವರದಿಂದ ಹಾಸಿಗೆ ಹಿಡಿದರು. ಆಗಲೂ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್  ಗೆ ಪುಣೆಗೆ ಹೋಗಲು ಅನುಮತಿ ನೀಡಲಿಲ್ಲ. ಬದಲಿಗೆ "ನಾನಾ, ಏಕೆ ಹೆದರಿಕೊಳ್ಳುವೆ?. ಸೋಮನಾಥ್ ನಿಗೆ ಗುಣವಾಗಿ ಅವನೇ ಇಲ್ಲಿಗೆ ನಮ್ಮನ್ನು ಕಾಣಲು ಬರುತ್ತಾನೆ" ಎಂದರು.  ಸರಿ ಸುಮಾರು 21 ದಿನಗಳ ಕಾಲ ಸೋಮನಾಥ್ ರವರಿಗೆ ತೀವ್ರ ಜ್ವರ ಕಾಡಿತು. ಆಗ ಕೇವಲ ನೀರನ್ನು ಮಾತ್ರ ಸೋಮನಾಥ್ ಸೇವಿಸುತ್ತಿದ್ದರು. ನಂತರ ಅವರು ಸಂಪೂರ್ಣ ಗುಣಮುಖರಾದರು. ಸೋಮನಾಥ್ 3 ತಿಂಗಳು ರಜೆಯನ್ನು ಹಾಕಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಲುವಾಗಿ ತಮ್ಮ ಹೆಂಡತಿ ಮತ್ತು ಮಕ್ಕಳೊಡನೆ ಬೇಲಾಪುರದಲ್ಲಿರುವ ತಮಗೆ ಮಂತ್ರೋಪದೇಶ ಮಾಡಿದ ವಿದ್ಯಾನಂದ ಸ್ವಾಮೀಜಿಯವರ ಸಮಾಧಿಯಿರುವ ಸ್ಥಳಕ್ಕೆ ತೆರಳಿ ಅಲ್ಲಿ ಸ್ವಲ್ಪ ಕಾಲ ತಂಗಿದ್ದರು. ಅಲ್ಲಿಗೆ ಸೋಮನಾಥ್ ರವರ ತಾಯಿಯವರು ಬಂದು ಎಲ್ಲರನ್ನು ತಮ್ಮ ಜೊತೆ ಶಿರಡಿಗೆ ಕರೆದುಕೊಂಡು ಹೋದರು. ಬೇಲಾಪುರದಲ್ಲಿ ತಂಗಿದ್ದಾಗ ಸೋಮನಾಥ್ ರವರು ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಶಿರಡಿಗೆ ಬಂದ ಕೂಡಲೇ ಸಾಯಿಬಾಬಾರವರು ಇವರಿಗೆ ಪ್ರತಿನಿತ್ಯ ಕಿಚಡಿಯನ್ನು ತಿನ್ನುವಂತೆ ಹೇಳಿದರು. ಕೇವಲ ಒಂದು ತಿಂಗಳಿನಲ್ಲಿ ಸೋಮನಾಥ್ ರವರು ಸಂಪೂರ್ಣ ಗುಣಮುಖರಾಗಿ ಮೊದಲಿನಂತೆ ಆದರು.

ಸಾಯಿಬಾಬಾರವರು ಸಮಾಧಿ ಹೊಂದುವುದಕ್ಕೆ ಕೆಲವು ದಿನಗಳ ಮುಂಚೆ ಸೋಮನಾಥ್ ರವರು ಬಾಬಾರವರ ಜೊತೆಯಲ್ಲಿಯೇ ಇದ್ದರು.  ಆದರೆ ಕೆಲಸದ ಪರಭಾರೆಯನ್ನು ಹೊರಬೇಕಾದ್ದರಿಂದ ಸೋಮನಾಥ್ ರವರು ಪುಣೆಗೆ ಹೊರಟುಹೋದರು. ಈ ಘಟನೆಯಾದ ಕೆಲವು ದಿನಗಳಲ್ಲೇ ಸಾಯಿಬಾಬಾರವರು ಸಮಾಧಿ ಹೊಂದಿದರು. ನಾನಾ ಸಾಹೇಬ್  ನಿಮೋಣ್ಕರ್  ರವರು ಸಾಯಿಬಾಬಾ ಸಮಾಧಿ ಹೊಂದಿದ 3 ದಿನಗಳ ನಂತರ ನಿಮೋಣ್ ಗೆ ತೆರಳಿದರು. ಅಲ್ಲಿ ಸ್ವಲ್ಪ ದಿನಗಳಿದ್ದು ನಂತರ ಅಹಮದ್ ನಗರಕ್ಕೆ ಹೋದರು. ಅಲ್ಲಿಂದ ತಮ್ಮ ಮಗ ಸೋಮನಾಥ್ ನ ಆರೋಗ್ಯ ಸರಿ ಇಲ್ಲದಿದ್ದ ಕಾರಣ ಪುಣೆಗೆ ಬಂದು ನೆಲೆಸಿದರು. ನಂತರ ಆವರು ತಮ್ಮ ಅಂತ್ಯ ಕಾಲದವರೆಗೆ ಪುಣೆಯಲ್ಲಿಯೇ ವಾಸಿಸುತ್ತಿದ್ದರು. 

ನಾನಾ ಸಾಹೇಬ್ ನಿಮೋಣ್ಕರ್ ಅನನ್ಯ ಸಾಯಿ ಭಕ್ತರಾಗಿದ್ದರು ಮತ್ತು ತಮ್ಮ ಬಳಿಗೆ ಬರುತ್ತಿದ್ದ ಎಲ್ಲರನ್ನು ಸಾಯಿ ಸ್ವರೂಪರೆಂದೇ ಗುರುತಿಸುತ್ತಿದ್ದರು. ಇವರು ಶ್ರೀರಾಮಚಂದ್ರ ದೇವರ ಭಕ್ತರಾಗಿ ಸದಾ ಕಾಲ "ಶ್ರೀರಾಮ" ಎಂದು ಜಪಿಸುತ್ತಿದ್ದರು. ತಮ್ಮ ಅಂತ್ಯಕಾಲದಲ್ಲಿ ಕೂಡ "ಶ್ರೀರಾಮ" ಎಂದು ನುಡಿಯುತ್ತಾ ಮರಣ ಹೊಂದಿದರು.  

ಸೋಮನಾಥ್ ರವರಿಗೆ ಸಾಯಿಬಾಬಾರವರ ಸೇವೆಯನ್ನು ನಾಲ್ಕು ದಿನಗಳ ಕಾಲ ಮಾಡುವ ಯೋಗ ಒಮ್ಮೆ ದೊರೆಯಿತು. ಒಮ್ಮೆ  ನಾನಾ ಸಾಹೇಬ್ ನಿಮೋಣ್ಕರ್ ರವರು ಅಹಮದ್ ನಗರಕ್ಕೆ ಯಾವುದೋ ಕೋರ್ಟ್ ವ್ಯವಹಾರ ಇದ್ದಿದ್ದರಿಂದ ಹೋಗಲೇಬೇಕಾಯಿತು. ಆಗ ಅವರು ಸೋಮನಾಥ್ ರನ್ನು ಕರೆಯಿಸಿ ತಾವು ಏನೇನು ಸೇವೆಯನ್ನು ಸಾಯಿಬಾಬಾರವರಿಗೆ ಮಾಡುತ್ತಿದ್ದರೋ, ಅದೆಲ್ಲವನ್ನು ಚಾಚೂ ತಪ್ಪದೆ ಮಾಡಬೇಕೆಂದು ಆಜ್ಞೆ ಮಾಡಿ ಸೋಮನಾಥ್ ರನ್ನು ಸಾಯಿಬಾಬಾರವರ ಬಳಿ ಬಿಟ್ಟು ಅಹಮದ್ ನಗರಕ್ಕೆ ಹೊರಟುಹೋದರು.  ಸೋಮನಾಥ್ ರವರು ಚಿಕ್ಕ ಹುಡುಗನಾದ್ದರಿಂದ ಚೆನ್ನಾಗಿ ಓಡಾಡಿಕೊಂಡು ಸಾಯಿಬಾಬಾರವರು ಹೇಳಿದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಸೋಮನಾಥ್ ರವರಿಗೆ ಸಾಯಿಬಾಬಾರವರು ತಮ್ಮ ಆಶೀರ್ವಾದವನ್ನು ಮಾಡಿದರು. ಅದು ಹೇಗೆಂದರೆ, ಒಂದು ದಿನ ಮಸೀದಿಯಲ್ಲಿ ಸೋಮನಾಥ್ ರವರು ಏನೋ ಕೆಲಸದಲ್ಲಿ ನಿರತರಾಗಿದ್ದರು. ಸಾಯಿಬಾಬಾರವರು ತಮ್ಮ ಸ್ಥಳದಲ್ಲಿ ಕುಳಿತಿದ್ದರು. ಮಾಧವ ರಾವ್ ರವರು ಮಸೀದಿಯ ಮೆಟ್ಟಿಲುಗಳ ಹತ್ತಿರ ಕುಳಿತಿದ್ದರು. ಆಗ ಸೋಮನಾಥ್ ರವರಿಗೆ ಸಾಯಿಬಾಬಾರವರು ಮಾರುತಿಯಂತೆ ಗೋಚರಿಸಿದರು. ಸೋಮನಾಥ್ ಕೂಡಲೇ ಮಾಧವ ರಾವ್ ದೇಶಪಾಂಡೆ ಯವರ ಕಡೆ ತಿರುಗಿ "ಅವನ ದರ್ಶನವನ್ನು ತೆಗೆದುಕೊಳ್ಳಿ. ನೋಡಿ ಇವನೇ ಮಾರುತಿ" ಎಂದು ಕೂಗಿಕೊಂಡರು.  ಈ ರೀತಿಯಲ್ಲಿ ಸಾಯಿಬಾಬಾರವರು ಸೋಮನಾಥ್ ರವರಿಗೆ ಮಾರುತಿಯಂತೆ ದರ್ಶನ ನೀಡಿದರು.

1918 ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ ಸೋಮನಾಥ್ ರವರು ತೀವ್ರವಾದ ದೇಹದ ನೋವಿನಿಂದ ನರಳುತ್ತಿದ್ದರು. ಆಗ ನಿಮೋಣ್ಕರ್  ರವರು ಅಹಮದ್ ನಗರದಲ್ಲಿದ್ದರು. ಆಗ ನೋವನ್ನು ತಡೆಯಲಾರದೆ ತಮ್ಮ ತಂದೆಯವರಿಗೆ ಪತ್ರವನ್ನು    ಬರೆದು  ತಮ್ಮ ಬಳಿ ಬಂದು ಇರುವಂತೆ  ಕೇಳಿಕೊಂಡರು. ಅದರಂತೆ ನಿಮೋಣ್ಕರ್  ಅವರು ಪುಣೆಗೆ ಬಂದು ತಮ್ಮ ಮಗ ಸೋಮನಾಥ್ ರವರಿಗೆ ನೋವಿದ್ದ ಜಾಗದಲ್ಲಿ ಉಧಿಯನ್ನು ಹಚ್ಚಿದರು. ಮಾರನೇ ದಿನದಿಂದಲೇ ಸೋಮನಾಥ್ ರವರ ನೋವು ಮಂಗಮಾಯವಾಗಿತ್ತು. ಸೋಮನಾಥ್ ರವರ ಸಹೋದರ ಕೂಡ ತೀವ್ರವಾದ ಖಾಯಿಲೆಯಿಂದ ನರಳುತ್ತಿದ್ದರು. ಅವರಿಗೂ ನಿಮೋಣ್ಕರ್  ರವರು ಉಧಿಯನ್ನು ನೀಡಿದರು. ಅವರು ಕೂಡ ಸ್ವಲ್ಪ ದಿನಗಳಲ್ಲೇ ರೋಗಮುಕ್ತರಾದರು. ಸೋಮನಾಥ್ ರವರ ಸೋದರಳಿಯ ದತ್ತ ಅವರು ತೀವ್ರವಾದ ತಲೆಯ ಕೆರೆತದಿಂದ ಬಳಲುತ್ತಿದ್ದರು. ನಿಮೋಣ್ಕರ್  ರವರು ಅವರಿಗೂ ಕೂಡ ಉಧಿಯನ್ನು ನೀಡಲು ಅವರ ಖಾಯಿಲೆ ಕೂಡ ಗುಣವಾಯಿತು. 

ಸೋಮನಾಥ್ ರವರು ಸಾಯಿಬಾಬಾರವರ ಹೆಜ್ಜೆ ಗುರುತುಗಳನ್ನು ಒಮ್ಮೆ ಗಮನಿಸಿದ್ದರು. ಸಾಯಿಬಾಬಾರವರ ಒಂದು ಪಾದದಲ್ಲಿ "ಮೀನಿನ ಗುರುತು" ಮತ್ತು ಇನ್ನೊಂದು ಪಾದದಲ್ಲಿ "ಬಾಣದ ಗುರುತು" ಇದ್ದಿತು.    ಈ ಗುರುತುಗಳು ಕೇವಲ ಶ್ರೇಷ್ಠ ಸಂತರುಗಳಲ್ಲಿ ಮಾತ್ರ ಕಂಡು ಬರುತ್ತವೆ ಎಂದು ನಮಗೆಲ್ಲಾ ತಿಳಿದೇ ಇದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ


Sunday, October 30, 2011

ದ್ವಿತೀಯ ವಾರ್ಷಿಕೋತ್ಸವ ಆಚರಿಸಿಕೊಂಡ  ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ - ಕೃಪೆ : ಸಾಯಿಅಮೃತಧಾರಾ.ಕಾಂ 

ಸಾಯಿಅಮೃತವಾಣಿ ಬ್ಲಾಗ್ ನ ಮಾತೃ ಅಂತರ್ಜಾಲ ತಾಣವಾದ ಸಾಯಿಅಮೃತಧಾರಾ.ಕಾಂ 6ನೇ ಅಕ್ಟೋಬರ್ 2011 ರ ವಿಜಯದಶಮಿಯಂದು ತನ್ನ ದ್ವಿತೀಯ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಬೆಂಗಳೂರಿನ ಜಯನಗರ 9 ನೇ ಬಡಾವಣೆಯ ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿ ಆಚರಿಸಿಕೊಂಡಿತು. ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವನ್ನು 28ನೇ ಸೆಪ್ಟೆಂಬರ್ 2009 ರ ಪವಿತ್ರ ವಿಜಯದಶಮಿಯಂದು ಬೆಂಗಳೂರಿನ ರಾಜಾಜಿನಗರದ ಸಾಯಿಮಂದಿರದಲ್ಲಿ ಪ್ರಾರಂಭ ಮಾಡಲಾಗಿತ್ತು ಎಂಬುದನ್ನು ವೀಕ್ಷಕರು ಇಲ್ಲಿ ಸ್ಮರಿಸಬಹುದು.





ಸಾಯಿಬಾಬಾರವರಿಗೆ ಬೆಳಗಿನ ಕಾಕಡಾ ಆರತಿ ಮಾಡುವುದರೊಂದಿಗೆ ಆ ದಿನದ ಕಾರ್ಯಕ್ರಮಗಳು ಆರಂಭವಾದವು. ಅನಂತರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಶ್ರೀ ರುದ್ರ ನಮಕ, ಚಮಕ, ಪುರುಷ ಸೂಕ್ತ ಮಂತ್ರಗಳು ಹಾಗೂ ದುರ್ಗಾ ಸೂಕ್ತ  ಮಂತ್ರ ಪುರಸ್ಸರವಾಗಿ ಮಂಗಳಸ್ನಾನ ಮಾಡಿಸಲಾಯಿತು.  ರುದ್ರಾಭಿಷೇಕದ ನಂತರ ಲಘು ಆರತಿ ಕಾರ್ಯಕ್ರಮ ನೆರವೇರಿಸಲಾಯಿತು.

ಬೆಳಿಗ್ಗೆ 9:30 ಕ್ಕೆ ಮಹಾಸಂಕಲ್ಪದೊಂದಿಗೆ "ಶ್ರೀ ಸಾಯಿ ಸಹಸ್ರನಾಮ ಹೋಮ" ವನ್ನು ಪ್ರಾರಂಭಿಸಲಾಯಿತು.  ಇದರ ಜೊತೆಗೆ ಏಕಕಾಲದಲ್ಲಿ ಸಾಯಿಬಾಬಾರವರ ಚಿತ್ರಪಟಕ್ಕೆ ಸಾಯಿ ಸಹಸ್ರನಾಮಪೂರ್ವಕ ಭಸ್ಮಾರ್ಚನೆ ಮತ್ತು ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಸಹಸ್ರಬಿಲ್ವಾರ್ಚನೆಯನ್ನು ಕೂಡ ಮಾಡಲಾಯಿತು. ಭಸ್ಮಾರ್ಚನೆಯ ಬಳಿಕ ಅನಂತಕೋಟಿ ಬ್ರಹ್ಮಾಂಡನಾಯಕರಾದ ಸಾಯಿಬಾಬಾರವರ ಬಗ್ಗೆ ಡಾ.ಪಿ.ವಿ.ಶಿವಚರಣ್ ರವರು ಮಾತನಾಡಿ ವೇದಗಳು ಮತ್ತು ಉಪನಿಷತ್ತಿನ ಭಾಗಗಳನ್ನು ಉಲ್ಲೇಖಿಸಿ ಅವುಗಳಲ್ಲಿ ಅಡಕವಾಗಿರುವ ಸಾಯಿತತ್ವವನ್ನು ಬಹಳ ಸುಂದರವಾಗಿ ವರ್ಣಿಸಿದರು. ನಂತರ ಮಧ್ಯಾನ್ಹ 12..20 ಕ್ಕೆ  ಹೋಮದ ಪೂರ್ಣಾಹುತಿಯಾದ ನಂತರ ಸಾಯಿಬಾಬಾರವರ ಆರತಿ ಹಾಗೂ ಮಹಾಪ್ರಸಾದ ವಿನಿಯೋಗದೊಂದಿಗೆ ಬೆಳಗಿನ ಕಾರ್ಯಕ್ರಮಗಳು  ಸುಸಂಪನ್ನವಾಯಿತು.





 



ಸಂಜೆಯ ಕಾರ್ಯಕ್ರಮಗಳು 6 ಘಂಟೆಗೆ  ಧೂಪಾರತಿಯೊಂದಿಗೆ ಪ್ರಾರಂಭವಾಯಿತು. ನಂತರ ಎಲ್ಲಾ ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣವನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಮಾಡಿದರು. ಆನಂತರ ಶ್ರೀ.ಗಂಗಾಧರ ತಿಲಕ್, ಶ್ರೀ. ಕಾರ್ತಿಕ್  ಹಾಗೂ ಶ್ರೀ.ಶಿವಚರಣ್ ಮತ್ತು ವೃಂದದವರು ಸುಮಾರು ಒಂದೂವರೆ ಘಂಟೆಗಳ ಕಾಲ "ಸಾಯಿ ಭಜನ ಸಂಧ್ಯಾ" ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆರೆದ ಎಲ್ಲಾ ಸಾಯಿಭಕ್ತರು ಸಾಯಿ ಭಜನೆಗಳನ್ನು ಏಕಕಂಠದಿಂದ ಹಾಡಿ ಆನಂದಿಸಿದರು. 

ಬೆಳಿಗ್ಗೆ "ವೇದ" ದಿಂದ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ "ನಾದ" ದೊಂದಿಗೆ ಪೂರ್ಣವಾಯಿತು. ಅಷ್ಟೇ ಅಲ್ಲಾ, ಈ ವೇದ ನಾದಗಳೊಂದಿಗೆ "ಭಕ್ತಿ" ಕೂಡ ಮೇಳೈಸಿ  ಇಡೀ ದಿನದ ಕಾರ್ಯಕ್ರಮಗಳಿಗೆ ಇನ್ನಷ್ಟು ಮೆರುಗು ತಂದಿತು ಎಂದರೆ ತಪ್ಪಾಗಲಾರದು. 


ಕನ್ನಡ ಅನುವಾದ : ಶ್ರೀಕಂಠ ಶರ್ಮ

Wednesday, October 26, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದೀಪಾವಳಿ  ಹಬ್ಬದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದೆಹಲಿಯ ಸಾಯಿ ಭಕ್ತರಾದ ಶ್ರೀ.ರಾಜೇಂದ್ರ ತಲ್ವಾರ್ ರವರು ನೀಡಿದ ಕಾಣಿಕೆಯನ್ನು ಬಳಸಿಕೊಂಡು ದೀಪಾವಳಿ ಹಬ್ಬದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರದವನ್ನು ಸುಂದರವಾದ ಹೂವುಗಳ ಅಲಂಕಾರದಿಂದ ಸಿಂಗರಿಸಲಾಯಿತು. 



ದೀಪಾವಳಿ ಹಬ್ಬದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರದಲ್ಲಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆಯವರು ಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಸಂಸತ್ ಸದಸ್ಯರಾದ ಶ್ರೀ.ಬಾವುಸಾಹೇಬ್ ವಾಕ್ಚುರೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೊಂಡ್ಕರ್, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ ರಾವ್ ಮಾನೆಯವರುಗಳು ಕೂಡ ಉಪಸ್ಥಿತರಿದ್ದರು. 



ದೀಪಾವಳಿ ಹಬ್ಬದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ದೇವಾಲಯದ ಆವರಣದಲ್ಲಿರುವ ಲೇಂಡಿ ಉದ್ಯಾನವನದಲ್ಲಿ ದೇಶದೆಲ್ಲೆಡೆಯಿಂದ ಬಂದು ಸೇರಿದ್ದ ಸಾಯಿಭಕ್ತರುಗಳು ದೀಪಗಳನ್ನು ಬೆಳಗಿ ಸಂಭ್ರಮದಿಂದ ಹಬ್ಬವನ್ನು  ಆಚರಿಸಿದರು.   


 ದೀಪಾವಳಿ ಹಬ್ಬದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯನ್ನು ಈ ಕಳಗಡೆ ಲಗ್ಗತ್ತಿಸಲಾಗಿದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, October 21, 2011

ಸಾಯಿ ಮಹಾಭಕ್ತೆ - ಶ್ರೀಮತಿ.ಕಾಶೀಭಾಯಿ ಹಂಸರಾಜ್ - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ಕಾಶೀಭಾಯಿ ಹಂಸರಾಜ್ ರವರು ಸಾಯಿಭಕ್ತ ಶ್ರೀ.ಹಂಸರಾಜ್ ರವರ ಧರ್ಮಪತ್ನಿ. ಇವರು ಶಿರಡಿಗೆ ಸುಮಾರು  5  ಕಿಲೋಮೀಟರ್ ದೂರದಲ್ಲಿರುವ ಸಾಕೂರಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇವರು ವಣಿ ಪಂಗಡಕ್ಕೆ ಸೇರಿದವರಾಗಿದ್ದರು. 

ಇವರು ಮತ್ತು ಇವರ ಪತಿ ಶಿರಡಿಗೆ ಸುಮಾರು 20 ವರ್ಷಗಳ ಹಿಂದೆ ಅಂದರೆ ಸುಮಾರು 1916 ನೇ ಇಸವಿಯ ನಂತರ ಭೇಟಿ ನೀಡಿದ್ದರು.  ಆ ವೇಳೆಗಾಗಲೇ ರಾಧಾಕೃಷ್ಣ ಮಾಯಿಯವರು ತೀರಿಕೊಂಡಿದ್ದರು. ಇವರುಗಳು ಶಿರಡಿಯಲ್ಲಿ ಸುಮಾರು 6 ತಿಂಗಳ ಕಾಲ ತಂಗಿದ್ದರು. ಇವರ ಪತಿ ಆಸ್ತಮಾ ಖಾಯಿಲೆಯಿಂದ ನೆರಳುತ್ತಿದ್ದರು. ಆಗ ನಾಸಿಕ್ ನ ನರಸಿಂಗ್ ಬಾಬಾರವರು ಇವರ ಪತಿಗೆ ಯಾವುದೋ ದುಷ್ಟ ಶಕ್ತಿಗಳ ಕಾಟ ಇರುವುದರಿಂದ ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಮಾಡಿ ಸಾಯಿಬಾಬಾರವರಿಂದ ಎರಡು ಬಾರಿ ಕಪಾಳ ಮೋಕ್ಷ ಆದರೆ ಅವರ ಖಾಯಿಲೆ ಗುಣವಾಗುವುದಾಗಿ ತಿಳಿಸಿದರು. ನರಸಿಂಗ್ ಬಾಬಾರವರ ಆದೇಶದಂತೆ ದಂಪತಿಗಳು ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಮಾಡಿದರು. ಆಗ ಸಾಯಿಬಾಬಾರವರು ಇವರ ಪತಿಯ ಕಪಾಳಕ್ಕೆ ಎರಡು ಬಿಗಿದು " ದುಷ್ಟ ಶಕ್ತಿಗಳೇ ತೊಲಗಿ ಹೋಗಿ" ಎಂದು ನುಡಿದರು.

ಆ ದಿನದಿಂದ ದಂಪತಿಗಳಿಬ್ಬರೂ ಶಿರಡಿಯಲ್ಲಿ ಸ್ವಲ್ಪ ತಿಂಗಳುಗಳ ಕಾಲ ತಂಗಿದ್ದರು. ನರಸಿಂಗ್ ಬಾಬಾರವರು ನುಡಿದಂತೆ ಇವರ ಪತಿಯ ಆಸ್ತಮಾ ಖಾಯಿಲೆ ಕಡಿಮೆಯಾಗುತ್ತಾ ಬಂದಿತು. ಖಾಯಿಲೆಯು ಬೆಳಗಿನ ಹೊತ್ತು ಸ್ವಲ್ಪ ಕಾಡುತ್ತಿತ್ತು. ಆದರೆ ರಾತ್ರಿಯ ವೇಳೆ ಇವರ ಪತಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.  ಶಿರಡಿಗೆ ಬರುವ ಮೊದಲು ಹಗಲೂ ರಾತ್ರಿ ರೋಗವು ಕಾಡುತ್ತಿತ್ತು. ಶಿರಡಿಯಲ್ಲಿ ಇವರು ತಂಗಿರುವಾಗ ರಾತ್ರಿಯ ವೇಳೆ ಸಾಯಿಬಾಬಾರವರು ಅನೇಕ ಬಾರಿ ಜೋರಾಗಿ ಕೆಮ್ಮುತ್ತಿದ್ದುದು ಕೇಳಿಸುತ್ತಿತ್ತು . ಹೀಗೆ ಸುಮಾರು  6 ತಿಂಗಳುಗಳ ಕಾಲ ಶಿರಡಿಯಲ್ಲಿ ದಂಪತಿಗಳು ವಾಸವಾಗಿದ್ದರು. ಆರು ತಿಂಗಳುಗಳು ಕಳೆದ ನಂತರ ಇವರ ಪತಿಯು ಸಂಪೂರ್ಣವಾಗಿ ಆಸ್ತಮಾ ಖಾಯಿಲೆಯಿಂದ ಗುಣಮುಖರಾದರು.

ದಂಪತಿಗಳು ಶಿರಡಿಗೆ ಬಂದು ತಂಗಿದ ಸ್ವಲ್ಪ ದಿನಗಳಲ್ಲೇ ಸಾಯಿಬಾಬಾರವರು ಇವರ ಪತಿಗೆ ಮೊಸರು, ಹುಳಿಯಾದ  ಮತ್ತು ಕರಿದ ಪದಾರ್ಥಗಳೆಲ್ಲವನ್ನೂ  ಸಂಪೂರ್ಣವಾಗಿ ತಿನ್ನಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಆದರೆ ಇವರ ಪತಿಗೆ ಆ ಪದಾರ್ಥಗಳೇ ಹೆಚ್ಚು ಇಷ್ಟವಾಗುತ್ತಿದ್ದರಿಂದ ಅಷ್ಟು ಸುಲಭವಾಗಿ ಬಿಡಲು ಆಗುತ್ತಿರಲಿಲ್ಲ. ಅವರಿಗೆ ಮೊಸರು ಇಲ್ಲದಿದ್ದರೆ ಊಟವೇ ಸೇರುತ್ತಿರಲಿಲ್ಲ. "ನಾನು ಪ್ರಾಣವನ್ನಾದರೂ ಬೇಕಾದರೆ ಬಿಡುತ್ತೇನೆ. ಆದರೆ, ಮೊಸರು ಇಲ್ಲದೆ ನಾನು ಬದುಕಿರಲಾರೆ" ಎಂದು ನುಡಿಯುತ್ತಿದ್ದರು. ಶಿರಡಿಯಲ್ಲಿ ಆ ಕಾಲದಲ್ಲಿ ಮೊಸರು ಅಷ್ಟು ಸುಲಭವಾಗಿ ದೊರಕುತ್ತಿರಲಿಲ್ಲ. ಆದ್ದರಿಂದ ದಂಪತಿಗಳು ಹಾಲನ್ನು ಕಾಯಿಸಿದ ನಂತರ ಅದನ್ನು ರಾತ್ರಿ ಹೆಪ್ಪು ಹಾಕುವ ವೇಳೆಗೆ ತಣ್ಣಗಾಗಲೆಂದು ಹಾಗೆಯೇ ಬಿಟ್ಟು ಮಧ್ಯಾನ್ಹ ಆರತಿಗೆ ದ್ವಾರಕಾಮಾಯಿಗೆ ತೆರಳುತ್ತಿದ್ದರು. ಹೀಗಿರುವಾಗ ಪ್ರತಿದಿನ ಸುಮಾರು ಎರಡು ತಿಂಗಳುಗಳ ಕಾಲ ಇವರು ಹೊರಗೆ ಹೋದ ನಂತರ ಬೆಕ್ಕೊಂದು ಅಡಿಗೆ ಮನೆಗೆ ನುಗ್ಗಿ ಇಟ್ಟಿದ್ದ ಹಾಲು ಮತ್ತು ಮೊಸರನ್ನು ಕುಡಿದು ಓಡಿಹೋಗುತ್ತಿತ್ತು. ಆರತಿ ಮುಗಿದ ನಂತರ ಮನೆಗೆ ಬಂದು ನೋಡಿದರೆ ಊಟಕ್ಕೆ ಮೊಸರು ಇರುತ್ತಿರಲಿಲ್ಲ.  ಇದರಿಂದ ಕುಪಿತರಾದ ಇವರ ಪತಿಯು ಒಂದು ದಿನ ಆ ಕಳ್ಳ ಬೆಕ್ಕನ್ನು ಹಿಡಿಯಲೋಸುಗ ಮಧ್ಯಾನ್ಹ ಆರತಿಗೆ ದ್ವಾರಕಾಮಾಯಿಗೆ ಹೋಗದೆ ಮನೆಯಲ್ಲೇ ಕಾಯುತ್ತಾ ಕುಳಿತಿದ್ದರು. ಆ ಕಳ್ಳ ಬೆಕ್ಕು ಬಂದು ಮೊಸರನ್ನು ಕುಡಿಯಲೆಂದು ಪಾತ್ರೆಗೆ ಬಾಯಿ ಹಾಕಿದಾಗ ಇವರ ಪತಿಯು ಆ ಬೆಕ್ಕನ್ನು ಕೋಲಿನಿಂದ ಚೆನ್ನಾಗಿ ಥಳಿಸಿದರು. ಅದೇ ಸಮಯದಲ್ಲಿ ಮಸೀದಿಯಲ್ಲಿ ಸಾಯಿಬಾಬಾರವರು ಆರತಿಯ ನಂತರ ಎಲ್ಲಾ ಭಕ್ತರಿಗೆ ಉಧಿಯನ್ನು ನೀಡುತ್ತಿದ್ದರು. ಬಾಪು ಸಾಹೇಬ್ ಜೋಗ, ಮಾಧವ ರಾವ್ ದೇಶಪಾಂಡೆ, ಕಾಕಾ ಸಾಹೇಬ್ ದೀಕ್ಷಿತ್, ಬೂಟಿ ಮತ್ತಿತರ ಭಕ್ತರುಗಳು ಕೂಡ ಅಲ್ಲಿ ನೆರೆದಿದ್ದರು. ಆಗ ಬಾಬಾರವರು "ಇಲ್ಲಿ ಒಬ್ಬ ಉಪಾಂತೀಯನಿದ್ದಾನೆ (ಹೇಳಿದ ಮಾತನ್ನು ಕೇಳದವನನ್ನು ಉಪಾಂತೀಯನೆಂದು ಕರೆಯುತ್ತಾರೆ). ಅವನು ತಿನ್ನಬಾರದ ಪದಾರ್ಥಗಳನ್ನು ತಿಂದು ಸಾಯಲು ಹೊರಟಿದ್ದಾನೆ. ಆದರೆ, ನಾನು ಅವನಿಗೆ ಆ ಪದಾರ್ಥಗಳನ್ನು ತಿನ್ನಲು ಬಿಡುವುದಿಲ್ಲ. ಈ ದಿನ ಅವನ ಮನೆಗೆ ನಾನು ಬೆಕ್ಕಿನ ರೂಪದಲ್ಲಿ ಹೋಗಿದ್ದೆ. ಅವನು ನನ್ನ ಬೆನ್ನ ಮೇಲೆ ಚೆನ್ನಾಗಿ ಬಾಸುಂಡೆ ಬರುವಂತೆ ಹೊಡೆದು ಕಳುಹಿಸಿದ್ದಾನೆ. ಇಲ್ಲಿ ನೋಡಿ" ಎಂದು ತಮ್ಮ  ಕಫ್ನಿಯನ್ನು ತೆಗೆದು ತಮ್ಮ ಹಿಂಭಾಗವನ್ನು ಅಲ್ಲಿ ನೆರೆದಿದ್ದ ಎಲ್ಲರಿಗೂ ತೋರಿಸಿದರು. ಸಾಯಿಬಾಬಾರವರ ಹಿಂಭಾಗದಲ್ಲಿ ಗಾಯದ ಬರೆಯು ಚೆನ್ನಾಗಿ ಕಾಣುತ್ತಿತ್ತು. ಇದಲ್ಲವೇ ಸಾಯಿಬಾಬಾರವರ ಲೀಲೆ!

ವಿಷಯವನ್ನು ತಮ್ಮ ಪತ್ನಿಯಿಂದ ತಿಳಿದ ಮೇಲೆ ನೊಂದುಕೊಂಡ ಕಾಶೀಭಾಯಿಯವರ ಪತಿಯವರು ಆ ಕ್ಷಣದಿಂದಲೇ ಮೊಸರು ಹಾಗು ಇನ್ನಿತರ ಹುಳಿ ಮತ್ತು ಕರಿದ ಪದಾರ್ಧಗಳನ್ನು ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಆ ದಿನದಿಂದ ಇವರ ಖಾಯಿಲೆ ಕಡಿಮೆಯಾಗುತ್ತಾ ಬಂದಿತು. ಇವರ ಪತಿಗೆ ಮೊದಲು ಕಾಶೀಭಾಯಿಯವರು ಔಷಧಿಯನ್ನು ಕೊಡುತ್ತಿದ್ದರು. ಆದರೆ, ಒಂದು ದಿನ ಸಾಯಿಬಾಬಾರವರು ತಮಗೂ ಕೂಡ ಆಸ್ತಮಾ ಇರುವುದಾಗಿ ಔಷಧಿಗಳಿಂದ ಏನೂ ಪ್ರಯೋಜನ ಇಲ್ಲವೆಂದು ಹಾಗೂ ದೇವರೊಬ್ಬನೇ ಈ ಖಾಯಿಲೆಯನ್ನು ಗುಣಪಡಿಸಲು ಸಾಧ್ಯ ಎಂದು ಹೇಳಿದರು. ಆ ದಿನದಿಂದ ಕಾಶೀಭಾಯಿಯವರು ತಮ್ಮ ಪತಿಗೆ ಔಷಧಿ ಕೊಡುವುದನ್ನು ನಿಲ್ಲಿಸಿಬಿಟ್ಟರು. ಹೀಗೆ ಬಾಬಾರವರು ಯಾವುದೇ ಔಷಧಿಗಳ ಸಹಾಯವಿಲ್ಲದೆಯೇ ಕಾಶೀಭಾಯಿಯವರ ಪತಿಯ ಆಸ್ತಮಾ ಖಾಯಿಲೆಯನ್ನು ಗುಣಪಡಿಸಿದರು. ಹೇಗೆ ಒಂದು ವರ್ಷಗಳ ಕಾಲ ಯಾವುದೇ ಖಾಯಿಲೆಯಿಲ್ಲದೆ ಕಾಶೀಭಾಯಿಯವರ ಪತಿ ಆರಾಮವಾಗಿದ್ದರು. ಆದರೆ ಒಂದು ವರ್ಷದ ನಂತರ ಕಾಶೀಭಾಯಿಯ ಪತಿಯವರ ಆಸ್ತಮಾ ಮತ್ತೆ ಮರುಕಳಿಸಿತು. ಅದು ನಡೆದಿದ್ದು ಸುಮಾರು 1918-1919 ನೇ ಇಸವಿಯಲ್ಲಿ.  ಆಗ ಇವರ ಖಾಯಿಲೆಯನ್ನು ಉಪಾಸಿನಿ ಬಾಬಾರವರು ಗುಣಪಡಿಸಿದರು.

ಸಾಯಿಬಾಬಾರವರು ತಮ್ಮ ಕೊನೆಯ ದಿನಗಳವರೆಗೂ ಅನೇಕ ಉಪದೇಶಗಳನ್ನು ಭಕ್ತರಿಗೆ ನೀಡುತ್ತಲೇ ಇದ್ದರು. ಅವುಗಳಲ್ಲಿ ಕೆಲವು ಹಿತವಚನಗಳನ್ನು ಕಾಶೀಭಾಯಿಯವರು ನೆನಪಿನಲ್ಲಿಟ್ಟುಕೊಂಡಿದ್ದರು. ಒಮ್ಮೆ ಸಾಯಿಬಾಬಾರವರು "ನಾನು ಈಗ ತಾನೇ ಕಾಶಿಗೆ ತೆರಳಿ ಅಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಬಂದಿರುವೆ. ನಾನು ಇಲ್ಲಿ ಮತ್ತೆ ಏಕೆ ಸ್ನಾನ ಮಾಡಬೇಕು" ಎಂದು ನುದಿಯುತ್ತಿದ್ದರು ಎಂದೂ, ಮತ್ತೊಮ್ಮೆ  "ನಾನು ಈಗ ತಾನೇ ಕೊಲ್ಹಾಪುರ, ಔದುಂಬರವಾಡಿಗೆ ಹೋಗಿ ಅಲ್ಲಿಂದ ಮರಳಿ ಬಂದಿರುವೆ" ಎಂದು ನುಡಿಯುತ್ತಿದ್ದರು  ಎಂದು ಕಾಶೀಭಾಯಿಯವರು ಹೇಳುತ್ತಾರೆ. ಅಲ್ಲದೆ, ಬಾಪು ಸಾಹೇಬ್ ಜೋಗ ರರವರು ಒಮ್ಮೆ ಕಾಶೀಭಾಯಿಯವರಿಗೆ ಸಾಯಿಬಾಬಾರವರು ಅವರಿಗೆ ತಮ್ಮ ಇಚ್ಚೆಯಂತೆ ಅಕ್ಕಲಕೋಟೆ ಮಹಾರಾಜರಂತೆ ದರ್ಶನ ನೀಡಿದರು ಎಂದು ಹೇಳಿದ್ದನ್ನು ಕೂಡ ಸ್ಮರಿಸುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, October 19, 2011

 ಪುಣೆಯ  ಶಿರಡಿ ಸಾಯಿಬಾಬಾ  ಮಂದಿರ  - ಸಾಯಿ ಲೋಕಸೇವಾ ಪ್ರತಿಷ್ಠಾನ, ಸರ್ವೇ ನಂ.135, ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ, ಮೋಹನ ನಗರ, ಚಿಂಚವಾಡಾ, ಪುಣೆ - 411 019, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ   

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು  ಪುಣೆಯ ಚಿಂಚವಾಡಾ, ಮೋಹನ ನಗರದ ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ ಇರುತ್ತದೆ. 

ಈ ದೇವಾಲಯದ ಭೂಮಿ ಪೂಜೆಯನ್ನು 30ನೇ ಮಾರ್ಚ್ 2006 ನ ಪವಿತ್ರ ಗುಡಿ ಪಾಡ್ವಾ ದ ದಿನದಂದು ಮಾಡಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 19 ಮತ್ತು 20 ನೇ ಆಗಸ್ಟ್ 2006 ರಂದು ಮಹಾರಾಷ್ಟ್ರದ ಆಳಂದಿಯ ಡಾ.ಜಾಧವ್ ಮಹಾರಾಜ್ (ಬ್ರಹ್ಮಚಾರಿ) ಯವರು ನೆರವೇರಿಸಿದರು. 

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 

ದೇವಾಲಯದ ಆವರಣದಲ್ಲಿ ನಿತ್ಯ ಅನ್ನದಾನ ಮಾಡುವ ಸಲುವಾಗಿ ಮಹಾಪ್ರಸಾದ ಭೋಜನ ಶಾಲೆಯನ್ನು ಕೂಡ ನಿರ್ಮಿಸಲಾಗಿದೆ. 







ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಬೆಳಗಿನ ಆರತಿ : ಬೆಳಿಗ್ಗೆ 7:30 ಘಂಟೆಗೆ
ಮಧ್ಯಾನ್ಹ ಆರತಿ : ಮಧ್ಯಾನ್ಹ 1 ಘಂಟೆಗೆ
ಸಂಜೆಯ ಆರತಿ : ಸಂಜೆ 7:30 ಘಂಟೆಗೆ

ವಿಶೇಷ ಉತ್ಸವದ ದಿನಗಳು: 

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 19ನೇ ಆಗಸ್ಟ್.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ದತ್ತ ಜಯಂತಿ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ, ಮೋಹನ ನಗರ, ಚಿಂಚವಾಡಾ, ಪುಣೆ.


ವಿಳಾಸ: 
ಸಾಯಿ ಲೋಕಸೇವಾ ಪ್ರತಿಷ್ಠಾನ,
ಸರ್ವೇ ನಂ.135, ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ,
ಮೋಹನ ನಗರ, ಚಿಂಚವಾಡಾ,
ಪುಣೆ - 411 019, ಮಹಾರಾಷ್ಟ್ರ, ಭಾರತ  

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ರಾಥೋಡ್ ಪ್ರೇಮದಾಸ್ ಮಾನ್ಸಿಂಗ್ / ಶ್ರೀ.ಸುಗವೇಕರ್ ದಿಲೀಪ್ ಸಖಾರಾಮ್ / ಶ್ರೀ.ಎನ್.ಕೆ.ನಲವಾಡೆ.

ದೂರವಾಣಿ ಸಂಖ್ಯೆಗಳು: 
+ 91 95525 10992 / +91 98508 46568/ +91 94220 24792
 
ಇಮೇಲ್ ವಿಳಾಸ: 
nknalawade45@gmail.com / dilsug@rediffmail.com  
 

ಮಾರ್ಗಸೂಚಿ: 
ಮೋಹನ ನಗರ, ಚಿಂಚವಾಡಾ, ಪುಣೆಯಲ್ಲಿರುವ  ಇ.ಎಸ್.ಐ.ಆಸ್ಪತ್ರೆಯ ಬಳಿ ಇಳಿಯುವುದು. ದೇವಾಲಯವು ಇ.ಎಸ್.ಐ.ಆಸ್ಪತ್ರೆಯ ಎದುರುಗಡೆ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, October 16, 2011

ಸಾಯಿ ಭಕ್ತರೊಬ್ಬರಿಂದ ಶಿರಡಿ ಸಾಯಿಬಾಬನಿಗೆ ಚಿನ್ನದ ಪನ್ನೀರುದಾನಿ ಯ ಕಾಣಿಕೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಸಾಯಿ ಭಕ್ತರಾದ ಶ್ರೀ.ಹೃಷಿಕೇಶ್ ಬಾರ್ಜೆಯವರು ಇದೇ ತಿಂಗಳ 16ನೇ ಅಕ್ಟೋಬರ್ 2011, ಭಾನುವಾರದಂದು ಶಿರಡಿ ಸಾಯಿಬಾಬಾನಿಗೆ ಸುಮಾರು 10 ಲಕ್ಷ ಬೆಲೆ ಬಾಳುವ ಚಿನ್ನದ ಪನ್ನೀರುದಾನಿಯನ್ನು ಕಾಣಿಕೆಯಾಗಿ ನೀಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ  ಉಚಿತ ಕೃತಕ ಸಂಧಿ ಜೋಡಣೆ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ ತಿಂಗಳ 16ನೇ ಅಕ್ಟೋಬರ್  2011, ಭಾನುವಾರದಂದು ದೇವಾಲಯದ ಆವರಣದಲ್ಲಿ ಉಚಿತ ಕೃತಕ ಸಂಧಿ ಜೋಡಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿರಡಿಯ ಸಾಯಿಬಾಬಾ ಆಸ್ಪತ್ರೆಯ ಅಸ್ಥಿ ಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ.ಪ್ರೀತಂ ಜಪೆ ಮತ್ತು ಡಾ.ರಾಮರಾವ್ ಅವರುಗಳು ರೋಗಿಗಳ ತಪಾಸಣೆ ಮಾಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್, ಶ್ರೀ.ಅಶೋಕ್ ಕಂಬೇಕರ್, ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ ಮತ್ತು ಡಾ.ಮಸ್ಕೆಯವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, October 15, 2011

ಸಾಯಿ ಭಜನ ಗಾಯಕ ಮತ್ತು ಸಮಾಜ ಸೇವಕ  - ಶ್ರೀ.ಸಾಯಿ ನಾರಾಯಣ ಸಿಂಗ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ  



ಮೈಸೂರಿನ ಖ್ಯಾತ ಸಾಯಿ ಭಜನ ಗಾಯಕ ಹಾಗೂ ಸಮಾಜ ಸೇವಕರಾದ ಶ್ರೀ.ಸಾಯಿ ನಾರಾಯಣ ಸಿಂಗ್ ರವರು ಇದೇ ತಿಂಗಳ 15ನೇ ಅಕ್ಟೋಬರ್ 2011, ಶನಿವಾರದಂದು ಮೈಸೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.  ಇವರಿಗೆ 41 ವರ್ಷ ವಯಸ್ಸಾಗಿತ್ತು.  ಇವರು ಮೈಸೂರಿನಲ್ಲಿ ಶ್ರೀ.ಸಾಯಿನಾಥ ಸೇವಾ ಸಂಸ್ಥೆ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ಶಿರಡಿ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಸಾಯಿ ಭಕ್ತರಿಗೆ ತಲುಪಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರು. ಇವರು ತಮ್ಮ ಪತ್ನಿ ಶ್ರೀಮತಿ.ಸಾಯಿ ಶ್ರೀ ಹಾಗೂ ಮಗನನ್ನು ಬಿಟ್ಟು ಅಗಲಿದ್ದಾರೆ.
 
ಇವರು ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಇವರು ತಮ್ಮ ಸತ್ಸಂಗದ ಮುಖಾಂತರ ಮೈಸೂರಿನ ಮತ್ತು ಬೆಂಗಳೂರಿನ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಭಜನ ಸತ್ಸಂಗ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಮೈಸೂರಿನಿಂದ ಶಿರಡಿಗೆ ಅನೇಕ ಪ್ಯಾಕೇಜ್ ಟೂರ್ ಗಳನ್ನು ನಡೆಸಿ ಹೊಸದಾಗಿ ಸಾಯಿಬಾಬಾ ಪಥಕ್ಕೆ ಬಂದ ಸಾಯಿ ಭಕ್ತರಿಗೆ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ತಲುಪಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರು. ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಬಲ್ ಗಳನ್ನು ವಿತರಿಸುತ್ತಿದ್ದರು. ಮೈಸೂರಿನ ಅನೇಕ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ತಾವೇ ಭರಿಸುತ್ತಿದ್ದರು. ಹಲವು ಬಡ ರೋಗಿಗಳು ಆಸ್ಪತ್ರೆ ಸೇರಿದಾಗ ಅವರ ಶಸ್ತ್ರಚಿಕಿತ್ಸೆಯ ಸ್ವಲ್ಪ ಭಾಗವನ್ನು ನೀಡಿರುತ್ತಾರೆ. ಅಷ್ಟೇ ಅಲ್ಲದೆ, ಇವರು ಸಾಯಿಬಾಬಾರವರ ಆರತಿ, ಭಜನೆ ಮತ್ತು ಇತರ ಸಾಯಿಬಾಬಾರವರ ಪುಸ್ತಕಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸುವುದರ ಮುಖಾಂತರ ಸಾಯಿಬಾಬಾರವರ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿದ್ದರು. 
 
ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವು ಶ್ರೀ.ಸಾಯಿ ನಾರಾಯಣ್ ಸಿಂಗ್ ರವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಹಾಗೂ ಶ್ರೀಮತಿ.ಸಾಯಿ ಶ್ರೀ ಯವರಿಗೆ ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಶಿರಡಿ ಸಾಯಿಬಾಬಾರವರಲ್ಲಿ ವಿನೀತ ಭಾವದಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, October 12, 2011

ಸಾಯಿ ಮಹಾಭಕ್ತ  - ಶ್ರೀಧರ ನಾರಾಯಣ ಕರ್ಕರ್  - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಶ್ರೀಧರ ನಾರಾಯಣ ಕರ್ಕರ್  ರವರು ಕಾಯಸ್ತ ಪ್ರಭು ಕುಲಕ್ಕೆ ಸೇರಿದವರಾಗಿದ್ದರು. ಇವರು ಸಚಿವಾಲಯದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ಮುಂಬೈನ ಥಾಣೆಯಲ್ಲಿ ವಾಸ ಮಾಡುತ್ತಿದ್ದರು. 


ಬಾಲ್ಯದಲ್ಲಿ ಇವರ ತಾತನವರ ಮಾರ್ಗದರ್ಶನದಲ್ಲಿ ಬೆಳೆದಿದ್ದರಿಂದ ಧಾರ್ಮಿಕ ರೀತಿ ನೀತಿಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಹೀಗಿರುವಾಗ ಡೆಪ್ಯೂಟಿ ಕಲೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದ ಅಪ್ಪಾ ಕುಲಕರ್ಣಿಯವರು ಇವರಿಗೆ ಸಾಯಿಬಾಬಾರವರ ಚಿತ್ರಪಟವೊಂದನ್ನು ಇವರಿಗೆ ತೋರಿಸಿದರು. ಆ ಚಿತ್ರಪಟವು ಇವರಿಗೆ ಬಹಳ ಹಿಡಿಸಿತು. ಹೀಗೆ ಇವರಿಗೆ ಸಾಯಿಬಾಬಾರವರ ಮೊದಲ ಭೇಟಿಯಾಯಿತು. ಇದಾದ ಕೆಲವೇ ದಿನಗಳಲ್ಲಿ ಇವರಿಗೆ ಹೇಮಾಡಪಂತರ ಮುಖಾಂತರ ಸಾಯಿಬಾಬಾರವರ ಇನ್ನೊಂದು ಚಿತ್ರಪಟ, ಅನೇಕ ಸಾಯಿ ಲೀಲಾ ಮಾಸಪತ್ರಿಕೆಯ ಪ್ರತಿಗಳು ಮತ್ತು ಪವಿತ್ರ ಉಧಿಯ ಪೊಟ್ಟಣ ಒಂದೇ ದಿನ ಬಂದು ಸೇರಿತು. ಆ ದಿನ ಇವರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಮರುದಿನ ಇವರ ದೇಹ ಸ್ಥಿತಿ ಇದ್ದಕಿದ್ದಂತೆ ಸರಿಹೋಯಿತು. ಅಂದಿನಿಂದ ಇವರು ಸಾಯಿಬಾಬಾರವರ ಪೂಜೆಯನ್ನು ಮಾಡಲು ಪ್ರಾರಂಭಿಸಿದರು ಮತ್ತು ಅದು ನಿಯಮಿತವಾಗಿ ನಡೆದುಕೊಂಡು ಬರಲು ಪ್ರಾರಂಭವಾಯಿತು. 


ಇವರಿಗೆ ಸಾಯಿಬಾಬಾರವರಲ್ಲಿ ನಂಬಿಕೆ ಬರಲು ಕಾರಣ ಇವರಿಗೆ ಬಿದ್ದ ಒಂದು ಕನಸಾಗಿತ್ತು. ಅದರ ವಿವರ ಈ ಕೆಳಕಂಡಂತೆ ಇದೆ: 

ಕರ್ಕರ್ ರವರು ಹೇಮಾಡಪಂತರು ನೀಡಿದ ಚಿತ್ರಪಟವನ್ನು ತೆಗೆದುಕೊಂಡು ಅದನ್ನು ಪೂಜಾಗೃಹದಲ್ಲಿ ಇರಿಸಲು ಹೋದರು. ಇವರು ಮೊದಲಿನಿಂದಲೂ ಪೂಜಿಸುತ್ತಿದ್ದ ಅಕ್ಕಲಕೋಟೆ ಮಹಾರಾಜರ ಚಿತ್ರಪಟ ಪೂಜಾಗೃಹದಲ್ಲಿತ್ತು. ಅದರ ಪಕ್ಕದಲ್ಲಿ ಸಾಯಿಬಾಬಾರವರ ಚಿತ್ರಪಟವನ್ನು ಇರಿಸಬೇಕೆಂದು ಅಂದುಕೊಳ್ಳುತ್ತಿರುವಾಗ ಇವರ ಮನಸ್ಸಿನಲ್ಲಿ ಒಂದು ರೀತಿಯ ಸಂಶಯ ಮನೆ ಮಾಡಿಕೊಂಡಿತ್ತು."ಅರೆ, ಈ ಚಿತ್ರಪಟವು ಒಬ್ಬ ಮುಸ್ಲಿಂ ಫಕೀರನದು. ಇದನ್ನು ಹೇಗೆ ಹಿಂದೂ ಸಂತನ ಪಕ್ಕದಲ್ಲಿ ಇರಿಸುವುದು" ಎಂಬ ಜಿಜ್ಞಾಸೆ ಮನದಲ್ಲಿ ಸುಳಿಯಿತು. ಹೀಗೆ ಮನಸ್ಸಿನಲ್ಲಿ ಯೋಚಿಸುತ್ತಾ ಸಾಯಿಬಾಬಾರವರ ಚಿತ್ರಪಟವನ್ನು ಸ್ವಲ್ಪ ದೂರದಲ್ಲಿ ಈ ಚಿತ್ರಪಟಗಳ ಗುಂಪಿನಿಂದ ಬೇರೆಯಾಗಿಯೇ ಇರಿಸಿದರು.


ಅದೇ ದಿನ ರಾತ್ರಿ ಕರ್ಕರ್ ರವರಿಗೆ ಕನಸು ಬಿದ್ದಿತು. ಎಂದಿನಂತೆ ಬೆಳಗಿನ ಜಾವ ಎದ್ದ ಕರ್ಕರ್ ರವರು ರಾತ್ರಿ ಬಿದ್ದ ಕನಸನ್ನು ಮರೆತು ಬಿಟ್ಟಿದ್ದರು.ಆದರೆ, ಇವರು ಪೂಜೆ ಮಾಡಲು ಕುಳಿತುಕೊಂಡಾಗ ಹಿಂದಿನ ರಾತ್ರಿ ಬಿದ್ದ ಕನಸು ನೆನಪಿಗೆ ಬಂದಿತು. ಆ ಕನಸಿನಲ್ಲಿ ಇವರ ಮನೆಯ ವರಾಂಡಕ್ಕೆ ಸಾಯಿಬಾಬಾರವರನ್ನೇ ಹೋಲುತ್ತಿದ್ದ ಒಬ್ಬ ಫಕೀರ ಬಂದರು. ಆ ವರಾಂಡದಲ್ಲಿ ಕರ್ಕರ್ ಮತ್ತು ಅವರ ಸ್ನೇಹಿತರೊಬ್ಬರು ಕುಳಿತಿದ್ದರು. ಆ ಫಕೀರನನ್ನು ಎದ್ದು ಸ್ವಾಗತಿಸುವ ಸಂದರ್ಭದಲ್ಲಿ ಭೇದವನ್ನು ಮನದಲ್ಲಿ ಭೇದಭಾವ ಮಾಡುವ ಇಚ್ಚೆಯನ್ನು ಹೊಂದಿದ್ದರು. ಆಗ ಇವರ ಪಕ್ಕದಲ್ಲಿದ್ದ ಸ್ನೇಹಿತರು "ಇವರು ಅಕ್ಕಲಕೋಟೆ ಮಹಾರಾಜರಿಗಿಂತ ಬೇರೆಯಲ್ಲ" ಎಂದು ಹೇಳಿ ಆ ಫಕೀರನನ್ನು ಸರಿಯಾಗಿ ಸತ್ಕರಿಸುವಂತೆ ಹೇಳಿದರು. ಆ ಕನಸು ಸರಿಯಾದ ಸಮಯಕ್ಕೆ ನೆನಪಾಗಿ ಇವರ ಮನದ ಶಂಕೆಗಳೆಲ್ಲಾ ದೂರವಾಗಿ ದೂರದಲ್ಲಿ ಬೇರೆಯಾಗಿ ಇರಿಸಿದ್ದ ಸಾಯಿಬಾಬಾರವರ ಚಿತ್ರಪಟವನ್ನು ತೆಗೆದು ಅಕ್ಕಲಕೋಟೆ ಮಹಾರಾಜರ ಚಿತ್ರಪಟದ ಪಕ್ಕದಲ್ಲಿ ಇರಿಸಿದ್ದಷ್ಟೇ ಅಲ್ಲದೇ ಅಂದಿನಿಂದ ಸಾಯಿಬಾಬಾರವರನ್ನು  ಕೂಡ ಪೂಜಿಸಲು ಪ್ರಾರಂಭಿಸಿದರು.

ಕಾಲ ಉರುಳಿದಂತೆ ಸಾಯಿಬಾಬಾರವರ ದಯೆಯಿಂದ ಇವರು ಮತ್ತು ಇವರ ಮನೆಯವರಲ್ಲೆಲ್ಲಾ ಸಾಯಿಬಾಬಾರವರ ಬಗ್ಗೆ ಭಕ್ತಿ ಭಾವ ಹೆಚ್ಚಾಯಿತು. ಇವರು ಸಾಯಿಬಾಬಾರವರ ಬಗ್ಗೆ ಬರೆಯಲಾದ ಎಲ್ಲಾ ಗ್ರಂಥಗಳನ್ನೂ ಓದಿ ಮುಗಿಸಿದರು. ಇವರ ಹೆಂಡತಿ ಮತ್ತು ಮಕ್ಕಳು ಕೂಡ ಸಾಯಿಬಾಬಾರವರ ಪೂಜೆಯನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದರು. ಇವರ ಮನೆಯವರುಗಳ ಶ್ರದ್ಧೆ ಎಷ್ಟರ ಮಟ್ಟಿಗೆ ಇತ್ತೆಂದರೆ ಕರ್ಕರ್ ರವರು ಸಾಯಿಬಾಬಾರವರ ಪೂಜೆ ಮತ್ತು ಆರತಿಯನ್ನು ಮಾಡಲು ಸಾಧ್ಯವಾಗದಿದ್ದ ದಿನಗಳಲ್ಲಿ, ಮನಯಲ್ಲಿದ್ದ ಯಾರಾದರೂ ಒಬ್ಬರು ಈ ಕೆಲಸವನ್ನು ನಿರ್ವಹಿಸಲು ಸದಾ ಸಿದ್ಧರಾಗಿರುತ್ತಿದ್ದರು.

ಪ್ರಾರಂಭದ ದಿನಗಳಲ್ಲಿ ಇವರ ತಾಯಿಯವರು ಅನೇಕ ವರ್ಷಗಳ ಕಾಲ ಇವರ ಜೊತೆಯಲ್ಲಿ ವಾಸಿಸದೇ ಬೇರೆಯಾಗಿ ವಾಸ ಮಾಡುತ್ತಿದ್ದರು. ಆದರೆ ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ಇವರು ತಾಯಿಯವರು ಇವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಮೊದಲ ಕೆಲವು ದಿನಗಳು,  ಕರ್ಕರ್ ರವರು ಸಾಯಿಬಾಬಾರವರನ್ನು ಪೂಜೆ ಮಾಡುವುದು ಮತ್ತು ಆಗಾಗ್ಗೆ ಶಿರಡಿಗೆ ಹೋಗಿ ಬರುವುದು ಇವರ ತಾಯಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಏಕೆಂದರೆ, ಅವರ ಮನಸ್ಸಿನಲ್ಲಿ ಸಾಯಿಬಾಬಾರವರು ಒಬ್ಬ ಮುಸ್ಲಿಂ ಫಕೀರ ಎಂಬ ಭಾವನೆ ಇತ್ತು. ಆದರೆ, ಕರ್ಕರ್ ಮತ್ತು ಅವರ ತಾಯಿಯವರ ಮೇಲೆ ಸಾಯಿಬಾಬಾರವರು ಅತ್ಯಂತ ಗಮನಾರ್ಹವಾದ ಪ್ರೀತಿಯನ್ನು ಹೊಂದಿದ್ದರು. ಕಾಲ ಕಳೆದಂತೆ ಕರ್ಕರ್ ರವರ ತಾಯಿಯವರಿಗೆ ಸಾಯಿಬಾಬಾರವರ ಬಗ್ಗೆ ಇದ್ದ ಅಭಿಪ್ರಾಯ ಬದಲಾಯಿತು. ಕರ್ಕರ್ ರವರು ಶಿರಡಿಗೆ ಹೋದಾಗಲೆಲ್ಲಾ ಇವರ ತಾಯಿಯವರನ್ನು ಮಾತ್ರ ಬಿಟ್ಟು ಉಳಿದ ಎಲ್ಲರನ್ನು ಕರೆದುಕೊಂಡು ಹೋಗುವ ಪರಿಪಾಠವನ್ನು ಇಟ್ಟುಕೊಂಡಿದ್ದರು.

ಹೀಗೆ 2-3 ವರ್ಷಗಳು ಕಳೆದ ಮೇಲೆ 1933 ರಲ್ಲಿ ಕರ್ಕರ್ ರವರ ತಾಯಿಯವರು ಕರ್ಕರ್ ರವರ ಹೆಂಡತಿ ಮತ್ತು ಮಗಳ ಹತ್ತಿರ ತಮಗೆ ಕೂಡ ಶಿರಡಿಗೆ ತೆರಳಿ ಸಾಯಿಬಾಬಾರವರಿಗೆ ಪೂಜೆಯನ್ನು ಸಲ್ಲಿಸಬೇಕೆಂಬ ಆಸೆ ಇರುವುದಾಗಿ ಹೇಳಿಕೊಂಡರು. ತಮ್ಮ ತಾಯಿಯವರ ಮಾತುಗಳನ್ನು ಕೇಳಿ ಕರ್ಕರ್ ರವರಿಗೆ ಅತೀವ ಸಂತೋಷವಾಯಿತು. ತಾಯಿಯವರ ಆಸೆಯಂತೆ ಕರ್ಕರ್ ರವರು ತಾಯಿಯವರನ್ನು ಶಿರಡಿಗೆ ಕರೆದುಕೊಂಡು ಹೋದರು. ಶಿರಡಿಯಲ್ಲಿನ ಸಾಯಿಬಾಬಾರವರ ಎಲ್ಲಾ ಸ್ಥಳಗಳು, ಪೂಜಾ ವಿಧಿಗಳನ್ನು ನೋಡಿ ಕರ್ಕರ್ ರವರ ತಾಯಿಯವರು ತುಂಬಾ ಖುಷಿಯಾದರು. ಶಿರಡಿಯಿಂದ ವಾಪಸಾದ ಸ್ವಲ್ಪ ದಿನಗಳಲ್ಲಿಯೇ ಕರ್ಕರ್ ವರ ಥಾಣೆಯ ನಿವಾಸದಲ್ಲಿ ಅವರ ತಾಯಿ ಕೊನೆಯುಸಿರೆಳೆದರು. ಕರ್ಕರ್ ರವರ ತಾಯಿಯವರ ಮನಸ್ಸಿನ ಭಾವನೆಯನ್ನು ಬದಲಿಸಿ ಕೊನೆಯ ಕಾಲದಲ್ಲಿ ತಮ್ಮ ಸಮಾಧಿಯ ದರ್ಶನವನ್ನು ನೀಡಿದುದು ಸಾಯಿಬಾಬಾರವರ ದಯೆಯಲ್ಲದೆ ಮತ್ತಿನ್ನೇನೆಂದು ಹೇಳಬೇಕು?

ಹೀಗೆ ಹೇಳುತ್ತಾ ಹೋದರೆ, ಸಾಯಿಬಾಬಾರವರು ಕರ್ಕರ್ ಮತ್ತು ಅವರ ಕುಟುಂಬದವರ ಮೇಲೆ ತೋರಿದ ದಯೆಯನ್ನು ವಿವರಿಸುವ ಇನ್ನು ಅನೇಕ ಘಟನೆಗಳನ್ನು ಹೇಳುತ್ತಾ ಹೋಗಬಹುದು. ಆದರೆ, ಅದರ ಅವಶ್ಯಕತೆ ಕಂಡುಬರುವುದಿಲ್ಲ. ಒಟ್ಟಿನಲ್ಲಿ ಕರ್ಕರ್ ರವರು,  ಸಾಯಿಬಾಬಾರವರು ತಮ್ಮ ಮತ್ತು ತಮ್ಮ ಮನೆಯವರೆಲ್ಲರಿಗೂ ಪ್ರತಿಯೊಂದು ವಿಷಯದಲ್ಲೂ ಮಾರ್ಗದರ್ಶನ ನೀಡುತ್ತಾ, ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಸದಾಕಾಲ ಕಾಪಾಡುತ್ತಿದ್ದರು ಎಂದು ಹೇಳುತ್ತಾರೆ.

ಕರ್ಕರ್ ರವರ ಎರಡನೇಯ ಮಗ ಗೋವಿಂದ್ ಗೆ ಶಿರಡಿಗೆ ಹೋಗಿ ಸಾಯಿಬಾಬಾರವರ ಸಮಾಧಿ ಮತ್ತು ದ್ವಾರಕಾಮಾಯಿಯ ದರ್ಶನವನ್ನು ಮಾಡಬೇಕೆಂಬ ಹಂಬಲ ಬಹಳ ದಿನಗಳಿಂದ ಇತ್ತು. 1934 ನೇ ಇಸವಿಯ ರಾಮನವಮಿಯ ಉತ್ಸವಕ್ಕೆ ಕರ್ಕರ್ ರವರ ಸ್ನೇಹಿತರಾದ ಶ್ರೀ.ಜಿ.ಬಿ.ದಾತಾರ್ ಮತ್ತು ಅವರ ಕುಟುಂಬದವರು ಶಿರಡಿಗೆ ಹೊರಟಿದ್ದರು. ಅವರ ಜೊತೆಯಲ್ಲಿ ಕರ್ಕರ್ ರವರ ಮಗ ಗೋವಿಂದ್ ಕೂಡ ಹೊರಟರು. ದ್ವಾರಕಾಮಾಯಿಗೆ ತೆರಳಿ ಸಾಯಿಬಾಬಾರವರ ಅತ್ಯಂತ ಸುಂದರವಾಗಿ ಜಯಕರ್ ರವರು ಬರೆದಿರುವ ತೈಲಚಿತ್ರದ ಬಳಿ ಒಬ್ಬರೇ ನಿಂತುಕೊಂಡಿದ್ದರು.  ಸಾಯಿಬಾಬಾರವರ ಆ ಚಿತ್ರಪಟವನ್ನೇ ದಿಟ್ಟಿಸಿ ನೋಡುತ್ತಾ ಗೋವಿಂದ್ ರವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು. ಆಗ ಇವರಿಗೆ "ನನ್ನನ್ನು ನೋಡಲು ನೀನು ಬಂದೆಯಾ" ಎಂದು ಯಾರೋ ಕೇಳಿದ ಹಾಗೆ ಆಯಿತು. ಕಣ್ಣು ತೆರೆದು ನೋಡಲು ಪಕ್ಕದಲ್ಲಿ ಯಾರೂ ಇರಲಿಲ್ಲ. ಗೋವಿಂದ್ ಒಬ್ಬರೇ ಇದ್ದರು. ಪಕ್ಕದಲ್ಲಿ ಯಾರು ಇರದಿದ್ದರಿಂದ ಹಾಗೆ ನುಡಿಯಲು ಬಂದವರು ಬಾಬಾರವರಲ್ಲದೇ ಮತ್ತಿನ್ನಾರು ಬಂದಿರಬೇಕು?


ಇದಾದ 8 ವರ್ಷಗಳ ನಂತರ ಕರ್ಕರ್ ರವರ ಮಗಳು ಗರ್ಭಿಣಿಯಾದ್ದರಿಂದ ಹೆರಿಗೆಗೆ ಅವಳನ್ನು ಥಾಣೆಯಿಂದ ಸುಮಾರು 2-3 ಮೈಲು ದೂರದಲ್ಲಿರುವ ಕಾರ್ ಇನ್ನುವ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋದರು. ಹೆರಿಗೆಯ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಇರಲಿಲ್ಲ. ಕರ್ಕರ್ ರವರ ಬಂಧುಗಳು ಥಾಣೆಯಲ್ಲಿ ವ್ಯವಸ್ಥೆ ಚೆನ್ನಾಗಿದ್ದರೂ ಈ ಕುಗ್ರಾಮಕ್ಕೆ ಮಗಳನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದಕ್ಕೆ ಕರ್ಕರ್ ರವರನ್ನು ಚೆನ್ನಾಗಿ ನಿಂದಿಸಿದರು. ಇವರ ಹೆಂಡತಿ ಬಂದು ಹೆರಿಗೆಗೆ ಬಹಳ ತೊಂದರೆ ಆಗುತ್ತಿದೆ ಎಂದು ತಿಳಿಸಿದರು. ಗರ್ಭದಲ್ಲಿಯೇ ಮಗುವು ಸತ್ತು ಹೋಗಿತ್ತು ಮತ್ತು ಅದು ಹೊರಗಡೆ ಬರದೆ ಹೆರಿಗೆ ಕಷ್ಟವಾಗುತ್ತಿತ್ತು. ಇದನ್ನು ಕಂಡು ಕರ್ಕರ್ ರವರ ಮಗಳು ಮತ್ತು ಅವರ ಮನೆಯವರೆಲ್ಲರೂ ಬಹಳ ಭಯಭೀತರಾದರು. ಆಗ ಮಧ್ಯರಾತ್ರಿ ಎರಡು ಘಂಟೆಯ ಸಮಯ. ಕರ್ಕರ್ ರವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ಕರ್ಕರ್ ರವರಿಗೆ ತಮ್ಮ ಬಳಿ ಸಾಯಿಬಾಬಾರವರ ಉಧಿ ಇರುವುದು ನೆನಪಿಗೆ ಬಂದಿತು. ಇವರ ಹೆಂಡತಿಯು ಆ ಉಧಿಯನ್ನು ತೆಗೆದುಕೊಂಡು ಮಗಳ ಹಣೆಯ ಮೇಲೆ ಹಚ್ಚಿದರು. ಹಾಗೆ ಉಧಿಯನ್ನು ಹಚ್ಚಿದ ಕೇವಲ 30  ನಿಮಿಷಗಲ್ಲಿ ಮಗುವು ಹೊರಗಡೆ ಬಂದಿತು. ಮಗುವು ಸತ್ತು ಹೋಗಿತ್ತು. ಆದರೆ ಕರ್ಕರ್ ರವರ ಮಗಳ ಪ್ರಾಣವನ್ನು ಸಾಯಿಬಾಬಾರವರು ಉಳಿಸಿದರು. ಬೆಳಿಗ್ಗೆ ನೋಡಲು ಬಂದ ಡಾಕ್ಟರ್ ರವರಿಗೆ ಮಗುವು ಹೇಗೆ ಗರ್ಭದಿಂದ ಹೊರಗೆ ಬಂದಿತು ಎಂದು ಆಶ್ಚರ್ಯವಾಯಿತು. ಕೇವಲ ಉಧಿಯ ಸಹಾಯದಿಂದ ಮತ್ತು ಯಾವ ನುರಿತ ಪ್ರಸೂತಿ ತಜ್ಞರ ಸಹಾಯವೂ ಇಲ್ಲದೆ ಮಗುವು ಹೊರಗೆ ಬಂದಿತು ಎಂದು ಕೇಳಿ ಡಾಕ್ಟರ್ ಬಹಳ ಅಚ್ಚರಿಗೊಂಡರು. 


ಕರ್ಕರ್ ರವರ ಮನೆಯ ಎಲ್ಲಾ ಹೆಣ್ಣು ಮಕ್ಕಳು ಸಾಯಿಬಾಬಾರವರ ಸೇವೆಯಲ್ಲಿ ತಮ್ಮನ್ನು ಅನವರತವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಪ್ರತಿನಿತ್ಯ ಸಾಯಿಬಾಬಾರವರಿಗೆ ಆರತಿಯನ್ನು ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. 


ಕರ್ಕರ್ ರವರ ಮಗಳ ಹೆರಿಗೆಗೆ ಒಂದು ವಾರಕ್ಕೆ ಮುಂಚೆ ಕರ್ಕರ್ ರವರ ಮಗನ ಕನಸಿನಲ್ಲಿ ಸಾಯಿಬಾಬಾರವರು ಬಂದು "ನಾನಾ, ಅವನು ಎಲ್ಲಿ? ಅವನು ಏಕೆ ಗಾಭರಿಗೊಂಡಿದ್ದಾನೆ? ನನ್ನ ಉಧಿಯನ್ನು ಹಚ್ಚಲು ಹೇಳು? ಎಲ್ಲವು ಸರಿಯಾಗುತ್ತದೆ" ಎಂದು ಹೇಳಿದ್ದರು. ಈ ವಿಷಯವನ್ನು ಕರ್ಕರ್ ರವರ ಮಗನು ತಂದೆಗೆ ತಿಳಿಸಿದ್ದನು. ಆದರೆ, ಹೆರಿಗೆಯ ಸಮಯದಲ್ಲಿ ಈ ವಿಷಯ ಕರ್ಕರ್ ರವರ ನೆನಪಿಗೆ ಬರಲಿಲ್ಲ. ಆದರೆ, ತಮ್ಮ ಮಗಳ ಹಣೆಗೆ ಉಧಿಯನ್ನು ಹಚ್ಚಬೇಕೆಂದು ಮಾತ್ರ ಹೊಳೆಯಿತು. ಸ್ವಲ್ಪ ದಿನಗಳು ಕಳೆದ ಮೇಲೆ ಹಳೆಯ ವಿಷಯಗಳನ್ನು ಮೆಲುಕು ಹಾಕುತ್ತಿರುವಾಗ, ತಮ್ಮ ಮಗನು ತನಗೆ ಬಿದ್ದ ಕನಸನ್ನು ತಿಳಿಸಿದ್ದು ಜ್ಞಾಪಕಕ್ಕೆ ಬಂದಿತು. ಸಾಯಿಬಾಬಾರವರು ಮೊದಲೇ ಎಚ್ಚರಿಕೆ ನೀಡಿದ್ದರೂ ಸಮಯಕ್ಕೆ ಅದು ಕರ್ಕರ್ ರವರ ಜ್ಞಾಪಕಕ್ಕೆ ಬರಲಿಲ್ಲ. ಆದರೆ, ತಮ್ಮ ಅರಿವಿಲ್ಲದೆ ಸಾಯಿಬಾಬಾರವರ ಉಧಿಯನ್ನು ಮಗಳ ಹಣೆಗೆ ಹಚ್ಚಿದ್ದು ಸಾಯಿಬಾಬಾರವರ ಪವಾಡವಲ್ಲದೆ ಮತ್ತಿನ್ನೇನೆಂದು ಹೇಳಬೇಕು?


ಕನ್ನಡ ಅನುವಾದ:ಶ್ರೀಕಂಠ ಶರ್ಮ

Monday, October 10, 2011

ಪ್ರಖ್ಯಾತ ಸಾಯಿ ಭಜನ ಗಾಯಕ ಮತ್ತು ಗಜಲ್ ಸಾಮ್ರಾಟ್ ಜಗಜಿತ್ ಸಿಂಗ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ  


ಪ್ರಖ್ಯಾತ ಸಾಯಿ ಭಜನ ಗಾಯಕ ಹಾಗೂ ಗಜಲ್ ಗಾಯಕ ಶ್ರೀ.ಜಗಜಿತ್ ಸಿಂಗ್ ರವರು ಇದೇ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರದಂದು ಬೆಳಗಿನ ಜಾವ 8:10 ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು.  ಇವರು "ಗಜಲ್ ಕಿಂಗ್" ಮತ್ತು "ಗಜಲ್ಜೀತ್ ಸಿಂಗ್" ಎಂಬ ಬಿರುದನ್ನು ತಮ್ಮ ಅಪಾರ ಅಭಿಮಾನಿಗಳಿಂದ ಪಡೆದಿದ್ದರು. 

ಇವರು ಬಹಳ ಕಾಲದಿಂದ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು  ಇವರನ್ನು ಕಳೆದ ತಿಂಗಳ 23ನೇ ಸೆಪ್ಟೆಂಬರ್ 2011 ರಂದು ಮೆದುಳಿನ ರಕ್ತಸ್ರಾವದ ತೊಂದರೆಯಿಂದ ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಇವರ ಪ್ರಾಣವನ್ನು ಉಳಿಸುವ ಸಲುವಾಗಿ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿದರು.  ಕೆಲವು ದಿನಗಳಿಂದ ಇವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗುತ್ತಿತ್ತು. ಆದರೆ, 15 ಗಳಿಗೂ ಹೆಚ್ಚು ದಿನಗಳ ಕಾಲದ ಹೋರಾಟದ ನಂತರ ಇಂದು ಅವರು ತಮ್ಮ ಕೊನೆಯುಸಿರನ್ನು ಎಳೆದರು. 

ಶ್ರೀ.ಜಗಜಿತ್ ಸಿಂಗ್ ರವರು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಜನಿಸಿದರು. ಇವರು ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಹೊಂದಿದ್ದರು. ಇವರ ಮನೆಯವರೆಲ್ಲಾ ಇವರನ್ನು ಪ್ರೀತಿಯಿಂದ "ಜೀತ್" ಎಂದು ಕರೆಯುತ್ತಿದ್ದರು. 

ಇವರು 2003 ನೇ ಇಸವಿಯಲ್ಲಿ  ಪ್ರತಿಷ್ಟಿತ "ಪದ್ಮಭೂಷಣ" ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಹಿಂದಿ, ಉರ್ದು, ಪಂಜಾಬಿ, ನೇಪಾಳಿ ಮತ್ತು ಇನ್ನು ಹಲವಾರು ಭಾಷೆಗಳಲ್ಲಿ ಹಾಡಿದ್ದರು. 

ಇವರು ತಮ್ಮ ಪತ್ನಿ ಮತ್ತು ಖ್ಯಾತ ಗಜಲ್ ಗಾಯಕಿ ಶ್ರೀಮತಿ.ಚಿತ್ರಾ ಸಿಂಗ್ ರವರನ್ನು ಬಿಟ್ಟು ಅಗಲಿದ್ದಾರೆ. ಇವರ ಪಾರ್ಥಿವ ದೇಹದ ಅಂತ್ಯ ಸಂಸ್ಕಾರವನ್ನು ನಾಳೆ ಮಧ್ಯಾನ್ಹ 12 ಘಂಟೆಗೆ ಮುಂಬೈ ನ ಮೆರೈನ್ ಲೇನ್ ನಲ್ಲಿರುವ ಚಂದನವಾಡಿ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತಿದೆ.

ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವು ಶ್ರೀ.ಜಗಜಿತ್ ಸಿಂಗ್ ರವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಹಾಗೂ ಶ್ರೀಮತಿ.ಚಿತ್ರಾ ಸಿಂಗ್ ರವರಿಗೆ ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಶಿರಡಿ ಸಾಯಿಬಾಬಾರವರಲ್ಲಿ ವಿನೀತ ಭಾವದಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಗಾರ್ಡನ್  ಥೀಮ್ ಪಾರ್ಕ್ ಉತ್ಖನನ ಕಾರ್ಯಕ್ರಮ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರು ಇದೇ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶ್ರೀ ಸಾಯಿ ಗಾರ್ಡನ್ ಥೀಮ್ ಪಾರ್ಕ್ ನ ಉತ್ಖನನ ಕಾರ್ಯವನ್ನು ನೆರವೇರಿಸಿದರು . ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವರಾದ ಶ್ರೀ.ಬಾಳಾಸಾಹೇಬ್ ತೋರಟ್,  ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಹಳ್ಳಿಗಾಡು ಅಭಿವೃದ್ಧಿ ಸಚಿವರಾದ ಶ್ರೀ.ಬಾಬನ ರಾವ್ ಪಚ್ಪುಟೆ, ಆಹಾರ, ವಸತಿ ಮತ್ತು ಔಷಧಿಗಳ ರಾಜ್ಯ ಸಚಿವರಾದ ಶ್ರೀ.ಸತೇಜ್ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಪಾಂಡುರಂಗ ಅಭಂಗ್, ಡಾ.ಏಕನಾಥ್ ಗೊಂಡ್ಕರ್, ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ನಗರ ಪಂಚಾಯತಿಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಭದ್ರತಾ ನಿಯಂತ್ರಣ ಕೇಂದ್ರದ ಉದ್ಘಾಟನೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರು ಇದೆ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭದ್ರತಾ ನಿಯಂತ್ರಣ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದರು . ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವರಾದ ಶ್ರೀ.ಬಾಳಾಸಾಹೇಬ್ ತೋರಟ್,  ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಹಳ್ಳಿಗಾಡು ಅಭಿವೃದ್ಧಿ ಸಚಿವರಾದ ಶ್ರೀ.ಬಾಬನ ರಾವ್ ಪಚ್ಪುಟೆ, ಆಹಾರ, ವಸತಿ ಮತ್ತು ಔಷಧಿಗಳ ರಾಜ್ಯ ಸಚಿವರಾದ ಶ್ರೀ.ಸತೇಜ್ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಪಾಂಡುರಂಗ ಅಭಂಗ್, ಡಾ.ಏಕನಾಥ್ ಗೊಂಡ್ಕರ್, ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ನಗರ ಪಂಚಾಯತಿಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು.

 
ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರು ಇದೆ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಕಂದಾಯ ಸಚಿವರಾದ ಶ್ರೀ.ಬಾಳಾಸಾಹೇಬ್ ತೋರಟ್,  ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಹಳ್ಳಿಗಾಡು ಅಭಿವೃದ್ಧಿ ಸಚಿವರಾದ ಶ್ರೀ.ಬಾಬನ ರಾವ್ ಪಚ್ಪುಟೆ, ಆಹಾರ, ವಸತಿ ಮತ್ತು ಔಷಧಿಗಳ ರಾಜ್ಯ ಸಚಿವರಾದ ಶ್ರೀ.ಸತೇಜ್ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಪಾಂಡುರಂಗ ಅಭಂಗ್, ಡಾ.ಏಕನಾಥ್ ಗೊಂಡ್ಕರ್, ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ನಗರ ಪಂಚಾಯತಿಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಮಿಸ್ ಇಂಡಿಯಾ-2011 ಅಂಕಿತ ಶೌರಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ
ಮಿಸ್ ಇಂಡಿಯಾ-2011 ಅಂಕಿತ ಶೌರಿಯವರು ಇದೇ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆಯವರು ಸನ್ಮಾನಿಸಿದರು.   


ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, October 8, 2011

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆ - ನಾಲ್ಕನೇ  ದಿನದ ವರದಿ -  ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 8ನೇ ಅಕ್ಟೋಬರ್ 2011, ಶನಿವಾರದಂದು ಶ್ರೀ ಶಿರಡಿ ಸಾಯಿಬಾಬಾರವರ ಪುಣ್ಯತಿಥಿಯ ಕೊನೆಯ ದಿನದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ  ಸಮಾಧಿ ಮಂದಿರದಲ್ಲಿ "ಮೊಸರಿನ ಗಡಿಗೆ" ಒಡೆಯುವ ಕಾರ್ಯಕ್ರಮವನ್ನು ಆಚರಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, October 6, 2011

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆ - ಎರಡನೇ ದಿನದ ವರದಿ -  ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರಾಜಶ್ರೀ ಸಾಸನೆಯವರು ಶಿರಡಿಯ ಸಮಾಧಿ ಮಂದಿರದಲ್ಲಿ ಆರಾಧನಾ ವಿಧಿಯನ್ನು ನೆರವೇರಿಸಿದರು.




ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಗ್ರಾಮದಲ್ಲಿ ಭಿಕ್ಷಾ ಜೋಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಪಾಲ್ಗೊಂಡಿದ್ದರು.



ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂ ತ್ ಸಾಸನೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರಾಜಶ್ರೀ ಸಾಸನೆಯವರು ಶಿರಡಿಯ ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಸಮಾಧಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡಕರ್,  ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ರಮಾಕಾಂತ್ ಕಾರ್ಣಿಕ್  ರವರುಗಳು ಕೂಡ ಪಾಲ್ಗೊಂಡಿದ್ದರು.



ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 6ನೇ ಅಕ್ಟೋಬರ್ 2011, ಗುರುವಾರ,  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂ ತ್ ಸಾಸನೆಯವರು ಒರಿಯಾ ಭಾಷೆಯ ಶ್ರೀ ಸಾಯಿ ಸಚ್ಚರಿತ್ರೆಯನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ  ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡಕರ್,  ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಶೈಲೇಶ್ ಕುಟೆ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ್ ರಾವ್ ಮಾನೆಯವರುಗಳು ಕೂಡ ಪಾಲ್ಗೊಂಡಿದ್ದರು.



ಮುಂಬೈನ ಸಾಯಿ ಭಕ್ತೆ ಶ್ರೀಮತಿ.ಅಂಬಿಕಾ ನಾಯರ್ ರವರು ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಸಮಾಧಿ ಮಂದಿರವನ್ನು ವಿವಿಧ ಬಗೆಯ ಹೂವುಗಳಿಂದ ಬಹಳ ಸುಂದರವಾಗಿ ಅಲಂಕರಿಸಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, October 5, 2011

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆ - ಪ್ರಥಮ ದಿನದ ವರದಿ -  ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 5ನೇ ಅಕ್ಟೋಬರ್ 2011, ಬುಧವಾರ,  ಬೆಳಿಗ್ಗೆ ಶಿರಡಿ ಸಾಯಿಬಾಬಾರವರ ಚಿತ್ರಪಟ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್, ಶ್ರೀಮತಿ.ಊರ್ಮಿಳಾ ಜಾಧವ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆಯವರುಗಳು  ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 



ಶ್ರೀ ಶಿರಡಿ ಸಾಯಿಬಾಬಾರವರ  93ನೇ ಪುಣ್ಯತಿಥಿ ಉತ್ಸವದ ಆಚರಣೆಯ ಅಂಗವಾಗಿ ಇದೇ ತಿಂಗಳ 5ನೇ ಅಕ್ಟೋಬರ್ 2011, ಬುಧವಾರ,  ಬೆಳಿಗ್ಗೆ ಶಿರಡಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಪೂಜೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀಮತಿ.ಊರ್ಮಿಳಾ ಜಾಧವ್ ರವರು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್ ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ:ಶ್ರೀಕಂಠ ಶರ್ಮ
ಮಹಾರಾಷ್ಟ್ರ ನೀರಾವರಿ ಮತ್ತು ನಿರ್ಮಲೀಕರಣ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರದ ನೀರಾವರಿ ಮತ್ತು ನಿರ್ಮಲೀಕರಣ ಸಚಿವರಾದ ಶ್ರೀ.ಲಕ್ಷ್ಮಣ ರಾವ್ ದೋಬ್ಲೆಯವರು ಇದೇ ತಿಂಗಳ 5ನೇ ಅಕ್ಟೋಬರ್ 2011, ಬುಧವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, October 3, 2011

ಅನಾಮಧೇಯ ಸಾಯಿ ಭಕ್ತರೊಬ್ಬರಿಂದ ಸಾಯಿಬಾಬಾ ಸಂಸ್ಥಾನಕ್ಕೆ ಚಿನ್ನದ ಛತ್ರಿಯ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಅನಾಮಧೇಯ ಸಾಯಿ ಭಕ್ತರೊಬ್ಬರು ಇದೇ ತಿಂಗಳ 3ನೇ ಅಕ್ಟೋಬರ್ 2011, ಸೋಮವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಚಿನ್ನದ ಛತ್ರಿಯನ್ನು ಕಾಣಿಕೆಯಾಗಿ ನೀಡಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, October 2, 2011

ಸಾಯಿ ಮಹಾಭಕ್ತ - ಸಗುಣ ಮೇರು ನಾಯಕ್ - ಕೃಪೆ: ಸಾಯಿಅಮೃತಧಾರಾ.ಕಾಂ   



ಸಗುಣ ಮೇರು ನಾಯಕ್ ರವರು ಪೂನಾ ತಾಲ್ಲೂಕಿನ ಬೋರಿ ಮರ್ಮಗೋವಾ ಗ್ರಾಮದ ನಿವಾಸಿಯಾಗಿದ್ದರು. ಅಲ್ಲಿ ಅವರು ಹಸುಗಳನ್ನು ಮೇಯಿಸುವ ಕೆಲಸವನ್ನು ಮಾಡಿಕೊಂಡಿದ್ದರು. ಹೀಗೆ ಊರೂರು ಅಲೆದಾಡುತ್ತಾ ಕರ್ನಾಟಕದ ಬೆಳಗಾವಿಗೆ ಬಂದರು. ನಂತರ ಎರಡು ವರ್ಷಗಳ ಕಾಲ ನರಸೋಬವಾಡಿಯಲ್ಲಿ ಟೆಂಬೇ ಸ್ವಾಮಿಗಳ ಜೊತೆಯಲ್ಲಿ ಇದ್ದರು. ನಂತರ ಸ್ವಲ್ಪ ವರ್ಷಗಳ ಕಾಲ ಅಜುನ್ಕರ್ ಮಹಾರಾಜ್ ರವರ ಜೊತೆಯಲ್ಲಿ ಇದ್ದರು. ನಂತರ ಗಾಣಗಾಪುರಕ್ಕೆ ಬಂದರು. ಆನಂತರ ಸ್ವಲ್ಪ ದಿನಗಳ ಕಾಲ ಹುಷಾರು ತಪ್ಪಿದರು. ಆಗ ಇವರು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿಯವರೊಡನೆ ತಂಗಿದ್ದರು. ನಂತರ ರಾಮೇಶ್ವರ, ಪಂಡರಾಪುರ ಮುಂತಾದ ಊರುಗಳನ್ನು ಸಂದರ್ಶಿಸುತ್ತಾ ಕೊನೆಗೆ 1911-1912 ರಲ್ಲಿ ಶಿರಡಿಗೆ ಬಂದರು. ಸಾಯಿಬಾಬಾರವರು ಇವರನ್ನು ನೋಡಿ "ಏನು, ನೀನು ಮೋಟಾ ದರ್ಬಾರದಿಂದ ಬಂದಿರುವೆ ಅಲ್ಲವೇ?" ಎಂದು ಕೇಳಿದರು. ಆ ಮಾತುಗಳು ಸಿದ್ಧಾರೂಢ ಸ್ವಾಮೀಜಿಯವರನ್ನು ಉದ್ದೇಶಿಸಿ ಸಾಯಿಬಾಬಾರವರು ಆಡಿದ ಮಾತುಗಳಾಗಿತ್ತು. ಸಗುಣ ಮೇರು ನಾಯಕ್ ರವರು ಶಿರಡಿಗೆ ಬಂದ ಮೇಲೆ ಸುಮಾರು ಐದು ತಿಂಗಳುಗಳ ಕಾಲ ಸಾಯಿಬಾಬಾರವರು ಅವರಿಗೆ ಹಿತವಚನಗಳನ್ನು, ಉಪದೇಶಗಳನ್ನು ನೀಡಿದರು. ಕೊನಗೆ ಒಂದು ದಿನ ಸಗುಣ ಮೇರು ನಾಯಕ್ ರವರು ಶಿರಡಿಯನ್ನು ಬಿಟ್ಟು ಹೊರಡಲು ಅನುಮತಿ ಬೇಡಿದಾಗ ಸಾಯಿಬಾಬಾರವರು "ಇಲ್ಲಿಯೇ ಇದ್ದು ಏನಾದರೂ ಕೆಲಸವನ್ನು ಮಾಡು. ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ" ಎಂದು ನುಡಿದರು. ಸಾಯಿಬಾಬಾರವರ ಆಜ್ಞೆಯನ್ನು ಪಾಲಿಸಿದ ಸಗುಣ ಮೇರು ನಾಯಕ್ ರವರು ಶಿರಡಿಯಲ್ಲೇ ತಮ್ಮ ವಾಸ್ತವ್ಯವನ್ನು ಹೂಡಿ  ಶಿರಡಿಯನ್ನು ತಮ್ಮ ಕೊನೆಯ ವಾಸ ಸ್ಥಾನವಾಗಿ ಮಾಡಿಕೊಂಡರು. ಆ ದಿನದಿಂದ ಸಗುಣ ಮೇರು ನಾಯಕ್ ರವರು ಒಂದು ಟೀ ಮತ್ತು ಲಘು ಉಪಾಹಾರದ ಅಂಗಡಿಯನ್ನು ಪ್ರಾರಂಭಿಸಿ ಅಲ್ಲಿ ಟೀ ಮತ್ತು ಉಪಹಾರವನ್ನಷ್ಟೇ ಅಲ್ಲದೆ ಸಾಯಿಬಾಬಾರವರ ಚಿತ್ರಪಟ, ಆರತಿಯ ಪುಸ್ತಕಗಳು ಮತ್ತು ಧಾರ್ಮಿಕ ವಸ್ತುಗಳನ್ನು ಕೂಡ ಮಾರಲು ಪ್ರಾರಂಭಿಸಿದರು. ಶಿರಡಿಯಲ್ಲಿ ಇರಲು ಪ್ರಾರಂಭಿಸಿದಾಗಿನಿಂದ ಸಗುಣ ಮೇರು ನಾಯಕ್ ರವರು ಅಭಿವೃದ್ಧಿ ಹೊಂದಲು ಪ್ರಾರಂಭಿಸಿದರು. ಇವರು ಸಾಯಿಬಾಬಾರವರಿಗೆ ತಮ್ಮನ್ನು ಅನವರತವೂ ಕಾಪಾಡುವಂತೆ ಕೋರಿಕೊಂಡರು. ಅದಕ್ಕೆ ಸಾಯಿಬಾಬಾರವರು ಹಾಗೆಯೇ ಆಗಲಿ ಎಂದು ಅಭಯವನ್ನು ನೀಡಿದ್ದರು. ಸಗುಣ ಮೇರು ನಾಯಕ್ ರವರು ಶಿರಡಿಯಲ್ಲಿ ತಮ್ಮ ದೈನಂದಿನ ಕೆಲಸಗಳು ಮುಗಿದ ಮೇಲೆ ದ್ವಾರಕಾಮಾಯಿ ಮಸೀದಿಗೆ ಬಂದು ಅಲ್ಲಿದ್ದ ಹಣತೆಗಳಿಗೆ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದರು.

ಸಗುಣ ಮೇರು ನಾಯಕ್ ರವರಿಗೆ ಸಾಯಿಬಾಬಾರವರ ಅಪಾರ ಶಕ್ತಿಯ ಅರಿವು 1911-1912 ರಲ್ಲೇ ಆಗಿತ್ತು. ಇವರು ಹೈದರಾಬಾದ್ ನ ಒಬ್ಬ ಸಾಯಿಭಕ್ತ ಹಾಗೂ ವೈಶ್ಯ ವ್ಯಾಪಾರಿಯೊಂದಿಗೆ ಶಿರಡಿಗೆ ಬಂದರು. ಆ ವ್ಯಾಪಾರಿಯು ತನ್ನೊಂದಿಗೆ ತನ್ನ ಪಾಶ್ವವಾಯು ಪೀಡಿತ ಮಗಳನ್ನು ಕರೆದುಕೊಂಡು ಬಂದಿದ್ದನು. ಅವನ ಮಗಳಿಗೆ ತನ್ನ ಕಾಲ ಮೇಲೆ ತಾನು ನಿಲ್ಲುವುದಕ್ಕೆ ಮತ್ತು ನಡೆಯುವುದಕ್ಕೆ ಆಗುತ್ತಿರಲಿಲ್ಲ. ಶಕ್ತಿಯಿಲ್ಲ ಕಾಲುಗಳ ಬದಲು ಅವಳು ತನ್ನ ಕೈಗಳನ್ನೇ ಕಾಲಿನಂತೆ ಬಳಸಿಕೊಂಡು ಕುಂಟುತ್ತಾ ನಡೆಯುತ್ತಿದ್ದಳು. ಮೊದಲ ಸಾರಿ ಸಾಯಿಬಾಬಾರವರನ್ನು ಭೇಟಿಯಾಗಲು ಬಂದಾಗ  ಆ ವೈಶ್ಯ ವ್ಯಾಪಾರಿಯು ಅವಳನ್ನು ಎತ್ತಿಕೊಂಡು ಬಂದಿದ್ದನು. ಆದರೆ ಶಿರಡಿಗೆ ಅವರು ಬಂದ 3ನೇ ದಿನದಂದು ಆ ಹುಡುಗಿಯು ತನ್ನ ಕಾಲುಗಳನ್ನು ಸ್ವಲ್ಪ ಉಪಯೋಗಿಸಲು ಪ್ರಾರಂಭ ಮಾಡಿದಳು. 8ನೇ ದಿನದಂದು ಅವಳು ಸರಿಯಾಗಿ ನಡೆಯಲು ಪ್ರಾರಂಭಿಸಿದಳು. ಇದು ಸಾಯಿಬಾಬಾರವರ ಆಶೀರ್ವಾದದ ಫಲವಲ್ಲದೆ ಮತ್ತಿನ್ನೇನು?

ಸಾಯಿಬಾಬಾರವರ ಅನುಗ್ರಹದಿಂದ ಮತ್ತೊಂದು ಪಾಶ್ವವಾಯು ಪೀಡಿತ ರೋಗಿಗೆ ಕೂಡ ಗುಣವಾಯಿತು. ಶ್ರೀ.ಘಾಯಿಸಾಸ್ ರವರು ರೈಲ್ವೇ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು. ಅವರ ಪತ್ನಿಯು ಕೂಡ ಪಾಶ್ವವಾಯುವಿನಿಂದ ನೆರಳುತ್ತಿದ್ದರು. ಅವರು ತಮ್ಮ ಪತ್ನಿಯನ್ನು ಶಿರಡಿಗೆ ಕರೆದುಕೊಂಡು ಬಂದರು. ಹಾಗೆ ಕರೆದುಕೊಂಡು ಬಂದ ಕೆಲವೇ ದಿನಗಳಲ್ಲಿ ಅವರ ಪಾಶ್ವವಾಯು ಸಂಪೂರ್ಣ ಗುಣವಾಯಿತು.

1914 ನೇ ಇಸವಿಯಲ್ಲಿ ಒಂದು ರಾತ್ರಿ ಸಾಯಿಬಾಬಾರವರು ಸಗುಣ ಮೇರು ನಾಯಕ್ ರವರ ಕನಸಿನಲ್ಲಿ ಬಂದು "ನನಗೋಸ್ಕರ ಹದವಾಗಿ ಬೇಯಿಸಿದ ಅನ್ನವನ್ನು ತೆಗೆದುಕೊಂಡು ಬಾ" ಎಂದು ಹೇಳಿದರು. ಈ ಘಟನೆಯಾದ ಮೇಲೆ ಸತತವಾಗಿ ಎರಡು ವರ್ಷಗಳ ಕಾಲ ತುಪ್ಪ ಹಾಕದೆಯೇ ಹದವಾಗಿ ಬೇಯಿಸಿದ ಅನ್ನವನ್ನು ಸಗುಣ ಮೇರು ನಾಯಕ್ ತೆಗೆದುಕೊಂಡು ಹೋಗಿ ಬಾಬಾರವರಿಗೆ ನೀಡುತ್ತಿದ್ದರು. ಕೆಲ ದಿನಗಳ ನಂತರ ಸಾಯಿಬಾಬಾರವರು ಅನ್ನಕ್ಕೆ ತುಪ್ಪವನ್ನು ಹಾಕಿ ತಂದುಕೊಡುವಂತೆ ಹೇಳಿದರು. ಅಂದಿನಿಂದ, ಸಗುಣ ಮೇರು ನಾಯಕ್ ರವರು ಪ್ರತಿನಿತ್ಯ ಅನ್ನಕ್ಕೆ ತುಪ್ಪವನ್ನು ಹಾಕಿ ಮಸೀದಿಗೆ ತಂದು ಅದನ್ನು ಮೊದಲು ನೈವೇದ್ಯವಾಗಿ ಧುನಿಮಾ ಗೆ ಅರ್ಪಿಸಿ ನಂತರ ಸ್ವಲ್ಪ ಭಾಗವನ್ನು ಸಾಯಿಬಾಬಾರವರಿಗೆಂದು ಮಣ್ಣಿನ ಕೊಲಂಬಾದಲ್ಲಿ ಇರಿಸುತ್ತಿದ್ದರು. ಉಳಿದ ಅನ್ನವನ್ನು ನಾಯಿಗಳಿಗೆ ನೀಡುತ್ತಿದ್ದರು. ಸತತವಾಗಿ ಐದಾರು ವರ್ಷಗಳ ಕಾಲ ಸಾಯಿಬಾಬಾರವರನ್ನು ಕಾಣಲು ಹೆಚ್ಚು ಭಕ್ತರು ಬರುತ್ತಿದ್ದ ಸಮಯದಲ್ಲಿ ಸಗುಣ ಮೇರು ನಾಯಕ್ ರವರು ಕೆಲವು ಬ್ರಾಹ್ಮಣ ಅಡಿಗೆಯವರನ್ನು ಅಡಿಗೆ ಮಾಡಲು ಮತ್ತು ಬಂದ ಭಕ್ತರಿಗೆ ಬಡಿಸಲು ಗೊತ್ತು ಮಾಡಿದ್ದರು. 1919 ರಲ್ಲಿ ಶಿರಡಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾದಾಗ ಸಗುಣ ಮೇರು ನಾಯಕ್ ರವರು ತಾವು ನಡೆಸುತ್ತಿದ್ದ ಹೋಟೆಲ್ ನ್ನು ಮುಚ್ಚಿದರು. 

ಇವರಿಗೆ ಉಪಾಸಿನಿ ಮಹಾರಾಜ್ ರವರ ಪರಿಚಯ ಚೆನ್ನಾಗಿ ಇತ್ತು. ಸಗುಣ ಮೇರು ನಾಯಕ್ ರವರು ಶಿರಡಿಗೆ ಬರುವ ಮೊದಲೇ ಉಪಾಸಿನಿ ಮಹಾರಾಜ್  ಶಿರಡಿಯಲ್ಲಿ ವಾಸಿಸುತ್ತಿದ್ದರು.  ಸಗುಣ ಮೇರು ನಾಯಕ್ ಶಿರಡಿಗೆ ಬಂದ ಸುಮಾರು 5 ರಿಂದ 6 ತಿಂಗಳುಗಳ ಕಾಲ ಉಪಾಸಿನಿ ಮಹಾರಾಜ್ ರವರು ದೀಕ್ಷಿತ್ ವಾಡಾ ದಲ್ಲಿ ತಂಗಿದ್ದರು ಮತ್ತು ಇವರ ಎಲ್ಲ ಬೇಕು ಬೇಡಗಳನ್ನು ದೀಕ್ಷಿತ್ ರವರೇ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ದಾದಾ ಸಾಹೇಬ್ ಖಾಪರ್ಡೇ ಯವರು ಕೂಡ ಅಲ್ಲಿಯೇ ಉಪಾನಿಸಿ ಮಹಾರಾಜ್ ರವರೊಂದಿಗೆ ತಂಗಿದ್ದರು. ಒಮ್ಮೆ ಹೆಚ್.ಎಸ್.ದೀಕ್ಷಿತ್ ರವರ ಶಿಷ್ಯರಾದ ಮಾಧವ ರಾವ್ ದೇಶಪಾಂಡೆ ಮತ್ತು ಉಪಾಸಿನಿ ಮಹಾರಾಜ್ ರವರಿಗೆ ಯಾವುದೋ ವಿಷಯಕ್ಕೆ ಜೋರಾಗಿ ಗಲಾಟೆಯಾಯಿತು. ಆ ದಿನದಿಂದ ಉಪಾಸಿನಿ ಮಹಾರಾಜ್ ರವರು ಶಿರಡಿ ಗ್ರಾಮದ ಹೊರಗಡೆ ಇದ್ದ ಖಂಡೋಬಾ ಮಂದಿರದಲ್ಲಿ ವಾಸಿಸಲು ಪ್ರಾರಂಭಿಸಿದರು.

1912 ರಲ್ಲಿ ಸಾಯಿಬಾಬಾರವರ ಪವಿತ್ರ ಅಮೃತ ಶಿಲೆಯ ಪಾದುಕೆಗಳನ್ನು ಸಾಥೆವಾಡಾದ ಪಕ್ಕದಲ್ಲಿದ್ದ ಮತ್ತು ಸಾಯಿಬಾಬಾರವರಿಗೆ ಬಹಳ ಇಷ್ಟವಾದ ಬೇವಿನ ಮರದ ಕೆಳಗಡೆಯಲ್ಲಿ ಸ್ಥಾಪಿಸಲಾಯಿತು. ಅಗರಬತ್ತಿ ವ್ಯಾಪಾರಿಯಾದ ಬಾಯಿ ಆಲಿಬಾಗಕರ್ ರವರು ಈ ಪಾದುಕೆಗಳ ಸ್ಥಾಪನೆಯ ವಿಷಯವನ್ನು ಮೊದಲು ಎಲ್ಲರ ಮುಂದೆ ಇಟ್ಟರು. ಮುಂಬೈ ನ ರಾಮ ರಾವ್ ಕೊಥಾರೆ ಯವರು ಸಮಾರಂಭದ ಎಲ್ಲಾ ಖರ್ಚುಗಳನ್ನು ನೋಡಿಕೊಂಡರು. ಆಲಿಬಾಗಕರ್ ರವರು ಬಹಳ ಬಡವರಾದ್ದರಿಂದ ಅವರಿಗೆ ಯಾವುದೇ ಖರ್ಚನ್ನು ಭರಿಸಲು ಸಾಧ್ಯವಾಗಲಿಲ್ಲ.  ಸಾಯಿಬಾಬಾರವರೇ ಸ್ವತಃ 25 ರುಪಾಯಿಗಳನ್ನು ಸಮಾರಂಭದ ಖರ್ಚಿಗೊಸ್ಕರ ನೀಡಿದರು.  ಕೋಪರ್ಗಾವ್ ನಿಂದ ನಾಲ್ಕು ವೇದಗಳನ್ನು ಪ್ರತಿನಿಧಿಸಲು ನಾಲ್ಕು ಬ್ರಾಹ್ಮಣರನ್ನು ಸಮಾರಂಭವನ್ನು ನಡೆಸಲು ಕರೆತರಲಾಯಿತು.  ಸ್ಥಳೀಯ ಸಾಯಿ ಭಕ್ತರಾದ ಬಾಳಾಸಾಹೇಬ್ ಭಾಟೆ, ಬಾಪು ಸಾಹೇಬ್ ಜೋಗ, ದಾದಾ ಕೇಳ್ಕರ್ ಮತ್ತು ಉಪಾಸಿನಿ ಮಹಾರಾಜ್ ರವರುಗಳು ಪಾದುಕಾ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಂಡರು.

ಕೆಲವು ತಿಂಗಳುಗಳ ನಂತರ ಶಿರಡಿಯಲ್ಲಿ ಸಾಯಿಬಾಬಾರವರು ಸಾವಿರಾರು ಜನರಿಗೆ ಆಹಾರವನ್ನು ನೀಡುತ್ತಿರುವರೆಂದು ಆಸೆಯಿಂದ ಬಂದು ತಂಗಿದ್ದ ಮಾರ್ತಾಂಡ ಎನ್ನುವ ಹುಚ್ಚು ಬ್ರಾಹ್ಮಣ ಒಂದು ದಿನ ಬೇವಿನ ಮರದ ಬಳಿಗೆ ಹೋಗಿ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಆ ಪಾದುಕೆಗಳನ್ನು ಚೂರು ಚೂರು ಮಾಡಿದನು. ನಂತರ ಅವನು ತಾತ್ಯಾ ಪಾಟೀಲರ ಇಚ್ಛೆ ಮೇರೆಗೆ ನಿರ್ಮಿಸಿದ್ದ ಮಹಾದೇವ ಮತ್ತು ಪಾರ್ವತಿಯ ಮಂದಿರಕ್ಕೆ ತೆರಳಿ ಆ ಎರಡು ವಿಗ್ರಹಗಳನ್ನು ಕೂಡ ಕೆಡವಿ ಹಾಳು ಮಾಡಿದನು. ಆಗ ಶಿರಡಿಯ ಸಾಯಿಭಕ್ತರು ಆ ಪಾದುಕೆಯ ಸ್ಥಳದಲ್ಲಿ ಬೇರೆ ಪಾದುಕೆಗಳನ್ನು ಪ್ರತಿಷ್ಟಾಪಿಸುವುದಾಗಿ ಹೇಳಿದಾಗ ಸಾಯಿಬಾಬಾರವರು ಒಪ್ಪಿಗೆ ನೀಡಲಿಲ್ಲ. ಬದಲಿಗೆ, ಕೇವಲ ಅನ್ನ ಶಾಂತಿ ಮಾಡಬೇಕೆಂದು ಹೇಳಿದರು. ಸಾಯಿಬಾಬಾರವರ ಆಜ್ಞೆಯಂತೆ ಅವರ ಭಕ್ತರುಗಳು ಸೇರಿ ಸುಮಾರು 300 ಜನರಿಗೆ ಅನ್ನ ಸಂತರ್ಪಣೆಯನ್ನು ಮಾಡಿದರು. ಆ ದಿನಗಳಲ್ಲಿ ಸಾಯಿಬಾಬಾರವರು ಸುಮಾರು 300 ಬಡ ಜನಗಳಿಗೆ ಪ್ರತಿನಿತ್ಯ ಆಹಾರವನ್ನು ಕೊಟ್ಟು ರಕ್ಷಿಸುತ್ತಿದ್ದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಮಹಾಭಕ್ತ - ಮಾಧವ ಫಾಸ್ಲೆ - ಕೃಪೆ: ಸಾಯಿಅಮೃತಧಾರಾ.ಕಾಂ 


ಮಾಧವ ಫಾಸ್ಲೆ ಸಾಯಿಬಾಬಾರವರ ಬಳಿ ಬಹಳ ಹಿಂದಿನಿಂದ ಸೇವಕರಾಗಿ ಕೆಲಸ ಮಾಡಿಕೊಂಡಿದ್ದರು. ಇವರ ನಿಜವಾದ ಹೆಸರು "ಮಾಧವ". ಆದರೆ ಶಿರಡಿಯ ಜನರೆಲ್ಲಾ ಇವರನ್ನು "ಮಧು" ಎಂದೇ ಸಂಬೋಧಿಸುತ್ತಿದ್ದರು. ಇವರು ಬಹಳ ಚಿಕ್ಕ ವಯಸ್ಸಿನಿಂದಲೇ ಸಾಯಿಬಾಬಾರವರ ಕಡೆಗೆ ಆಕರ್ಷಿತರಾದರು. ವಯಸ್ಸಿಗೆ ಬಂದ ಮೇಲೆ ಇವರು ಸಾಯಿಬಾಬಾರವರ ಜೊತೆಯಲ್ಲೇ ಮಸೀದಿಯಲ್ಲಿ ತಂಗಿದ್ದು ಅವರ ಸೇವೆಯನ್ನು ಮಾಡುತ್ತಿದ್ದರು. ಬೆಳಗಿನ ಜಾವದಿಂದ ಮಧ್ಯರಾತ್ರಿಯವರೆಗೂ ಇವರು ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. 

ಇವರು ಅನೇಕ ಕೆಲಸಗಳನ್ನು ಮಾಡುತ್ತಿದ್ದರು. ಮಸೀದಿಯನ್ನು ಗುಡಿಸುವುದು ಮತ್ತು ಒರೆಸುವುದು, ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ  ಚಾಪೆಯನ್ನು ಶುಭ್ರಗೊಳಿಸುವುದು, ದ್ವಾರಕಾಮಾಯಿಯ ಮೆಟ್ಟಿಲಿನ ಬಳಿ ಇರಿಸಿದ್ದ ಪ್ಲಾಸ್ಟಿಕ್ ನೀರಿನ ತೊಟ್ಟಿಯಲ್ಲಿ ನೀರನ್ನು ತುಂಬಿಸುವುದು, ಸಾಯಿಬಾಬಾರವರ ಸ್ನಾನಕ್ಕೆ ಬೇಕಾದ ಬಿಸಿ ನೀರನ್ನು ಸಿದ್ಧ ಮಾಡುವುದು, ಸಾಯಿಬಾಬಾರವರ ಸ್ನಾನವಾಗುವವರೆಗೂ ಕಾದಿದ್ದು ನಂತರ ಅವರ ಮೈಯನ್ನು ಒರೆಸುವುದು, ಮಸೀದಿ ಮತ್ತು ಚಾವಡಿಯಲ್ಲಿ ಇರಿಸಿದ್ದ ದೀಪದ ಹಣತೆಗಳನ್ನು ಒರೆಸಿ ಶುಚಿಗೊಳಿಸುವುದು, ಅಬ್ದುಲ್ ಬಾಬಾರವರಿಗೆ ದೀಪಗಳನ್ನು ಹಚ್ಚುವುದರಲ್ಲಿ ನೆರವಾಗುವುದು, ಬಾಬಾರವರ ಪ್ರೀತಿಯ ಕುದುರೆ ಶ್ಯಾಮಕರ್ಣನನ್ನು ನೋಡಿಕೊಳ್ಳುವುದು ಮತ್ತು ಇನ್ನು ಅನೇಕ ಕೆಲಸಗಳನ್ನು ಮಾಡುತ್ತಿದ್ದರು. 

ಧುನಿಯ ಪಕ್ಕದಲ್ಲಿ ಒಂದು ಕೋಣೆಯಿತ್ತು. ಅದನ್ನು ಧುನಿಗೆ ಬೇಕಾದ ಕಟ್ಟಿಗೆಯನ್ನು ಇರಿಸಲು ಬಳಸಲಾಗುತ್ತಿತ್ತು. ಆ ಕೋಣೆಯ ಗೋಡೆಯನ್ನು ಸಾಯಿಬಾಬಾರವರೇ ಸ್ವತಃ ತಮ್ಮ  ಕೈಗಳಿಂದ ಕಟ್ಟಿದರು. ಆಗ ಮಾಧವ ಫಾಸ್ಲೆಯವರು ಸಾಯಿಬಾಬಾರವರಿಗೆ ಮಣ್ಣನ್ನು ಕಲಸಿ ಕೊಟ್ಟು ಸಹಾಯ ಮಾಡಿದರು. ಸಾಯಿಬಾಬಾರವರು ಇಟ್ಟಿಗೆಗಳಿಂದ ಗೋಡೆಯನ್ನು ಕಟ್ಟಿ ಅದನ್ನು ಮಾಧವ ಫಾಸ್ಲೆ ಕಲಸಿಕೊಟ್ಟ ಮಣ್ಣಿನಿಂದ ತಾವೇ ಸ್ವತಃ ಮೆತ್ತಿ ನಿರ್ಮಿಸಿರುತ್ತಾರೆ. 

ಸಾಯಿಬಾಬಾರವರ ದೇಹಾವಸಾನ ಸಮಯದಲ್ಲಿ ಮಾಧವ ಫಾಸ್ಲೆಯವರು ಬಾಪು ಸಾಹೇಬ್ ಜೋಗ್ ರವರಿಗೆ ಸಾಯಿಬಾಬಾರವರು ಉಪಯೋಗಿಸುತ್ತಿದ್ದ ಸಟಕಾ ಹಾಗೂ ಚಿಲ್ಲಂ ಗಳನ್ನು ಕೊಟ್ಟಿದ್ದರು. ಜೋಗ್ ರವರು ಅವುಗಳನ್ನು ತಮ್ಮ ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸುತ್ತಿದ್ದರು. ಸ್ವಲ್ಪ ದಿನಗಳ ನಂತರ ಜೋಗ್ ರವರು ತಮ್ಮ ವಾಸಸ್ಥಾನವನ್ನು ಸಾಕೂರಿ ಬಳಿಯ ಉಪಾಸನಿ ಮಹಾರಾಜ್ ರವರ ಆಶ್ರಮಕ್ಕೆ ಬದಲಿಸಿದರು. ಆಗ ಆ ಪವಿತ್ರ ವಸ್ತುಗಳನ್ನು ಉಪಾಸನಿ ಮಹಾರಾಜ್ ರವರ ಆಶ್ರಮದಲ್ಲಿ ಇರಿಸಿದ್ದರು. ಈಗ ಈ ಪವಿತ್ರ ವಸ್ತುಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಇರಿಸಲಾಗಿದೆ. 

1936 ನೇ ಇಸವಿಯಲ್ಲಿ ಒಂದು ಘಟನೆ ನಡೆಯಿತು. ಸಾಯಿಬಾಬಾರವರ ಮುಸ್ಲಿಂ ಭಕ್ತನಾದ ಛೋಟೆಖಾನ್ ಹಾಗೂ ಮಾಧವ ಫಾಸ್ಲೆಯವರುಗಳು ಒಂದು ರಾತ್ರಿ ಮಸೀದಿಯಲ್ಲಿ ಮಲಗಿದ್ದರು. ಆಗ ಛೋಟೆಖಾನ್ ರವರಿಗೆ ಸಾಯಿಬಾಬಾರವರು "ಮಧು, ಏಳು, ನಾನು ಬಹಿರ್ದಷೆಗೆ ಹೋಗಬೇಕು" ಎಂದು ಮಾತನಾಡಿದ ಹಾಗೆ ಕೇಳಿಸಿತು.  ಆದರೆ, ಮಾಧವ ಫಾಸ್ಲೆ ಗಾಢನಿದ್ರೆಯಲ್ಲಿದ್ದರಿಂದ ಅವರು ಏಳಲಿಲ್ಲ. ಮಾರನೇ ದಿನ ಬೆಳಗಿನ ಜಾವ ಸಾಯಿಬಾಬಾರವರು ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿ ಒಂದು ಸಣ್ಣ ರಂಧ್ರವಾಗಿದ್ದು ಅದರ ತುಂಬಾ ನೀರು ತುಂಬಿಕೊಂಡಿತ್ತು ಮತ್ತು ಅದರಿಂದ ಒಳ್ಳೆಯ ಸುವಾಸನೆ ಬರುತ್ತಿತ್ತು. 
ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಮಹಾಭಕ್ತ  - ಗೋಪಾಲ್  ರಾವ್ ಗುಂಡ - ಕೃಪೆ: ಸಾಯಿಅಮೃತಧಾರಾ.ಕಾಂ 


ಗೋಪಾಲ್ ರಾವ್ ಗುಂಡರವರು ಕೋಪರ್ಗಾವ್ ನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರಿಗೆ ಪುತ್ರ ಸಂತಾನವಿರಲಿಲ್ಲ. ಆದ ಕಾರಣ ಇವರು ಸಾಯಿಬಾಬಾರವರ ಮೊರೆ ಹೋದರು. ನಾನಾ ಸಾಹೇಬ್ ಡೇನ್ಗಳೆ ಯವರಂತೆ ಇವರೂ ಸಹ ಧಾರ್ಮಿಕ ಮನೋಭಾವವನ್ನು ಹೊಂದಿದ್ದರು ಮತ್ತು ಇವರಿಬ್ಬರೂ ಬಹಳ ಆತ್ಮೀಯ ಸ್ನೇಹಿತರಾಗಿದ್ದರು.  ನಾನಾ ಸಾಹೇಬ್ ಡೇನ್ಗಳೆಯವರ ಸಲಹೆ ಮೇರೆಗೆ ಗುಂಡರವರು ಸಾಯಿಬಾಬಾರವರ ದರ್ಶನವನ್ನು ಮಾಡಿದರು. 

ಗೋಪಾಲ್ ರಾವ್ ಗುಂಡರವರಿಗೆ 3 ಜನ ಹೆಂಡತಿಯರಿದ್ದರು. ಆದರೂ ಅವರಿಗೆ ಪುತ್ರ ಸಂತಾನವಿರಲಿಲ್ಲ. ಆದರೆ, ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ಇವರಿಗೆ ಪುತ್ರನ ಭಾಗ್ಯ ಒದಗಿಬಂದಿತು. ಸಾಯಿಬಾಬಾರವರಿಗೆ ತಮ್ಮ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಮಸೀದಿಯನ್ನು ಜೀರ್ಣೋದ್ದಾರ ಮಾಡಬೇಕೆಂದು ಮನಸ್ಸು ಮಾಡಿದರು. ಅದಕ್ಕಾಗಿ ಬೇಕಾದ ಕಲ್ಲು, ಇಟ್ಟಿಗೆ, ಮರಳು ಮತ್ತು ಇತರ ಎಲ್ಲಾ ಸಾಮಗ್ರಿಗಳನ್ನು ಅಣಿ ಮಾಡಿಕೊಂಡರು. ಆದರೆ ಬಾಬಾರವರು ಗೋಪಾಲ್ ರಾವ್ ಗುಂಡರವರಿಗೆ ಅನುಮತಿಯನ್ನು ನೀಡಲಿಲ್ಲ. ನಂತರ ಮಾಳಸಾಪತಿಯವರ ಒತ್ತಾಯದಿಂದ ಬಾಬಾರವರು ಒಪ್ಪಿದರು. ಬಾಬಾರವರು ಈ ಕೆಲಸವನ್ನು ನಾನಾ ಸಾಹೇಬ್ ಚಂದೋರ್ಕರ್ ಮತ್ತು ಕಾಕಾ ಸಾಹೇಬ್ ದೀಕ್ಷಿತ್ ರವರಿಗೆ ವಹಿಸಿದರು. ಆದ್ದರಿಂದ ಮಸೀದಿಯನ್ನು ದುರಸ್ತಿ ಮಾಡುವುದಕ್ಕೆ ಗೋಪಾಲ್ ರಾವ್ ಗುಂಡರವರಿಗೆ ಬಾಬಾ ಒಪ್ಪಿಗೆ ನೀಡಲಿಲ್ಲ. 

ಆದರೆ, ಸ್ವಲ್ಪ ದಿನಗಳ ನಂತರ ಸಾಯಿಬಾಬಾರವರು ಶಿರಡಿಯಲ್ಲಿದ್ದ ಶನಿ ಮಂದಿರ ಮತ್ತು ಇತರ ಮಂದಿರಗಳ ಜೀರ್ಣೋದ್ದಾರ ಕಾರ್ಯಕ್ಕಾಗಿ ಆ ಸಾಮಗ್ರಿಗಳನ್ನು ಉಪಯೋಗಿಸಲು ಗೋಪಾಲ್ ರಾವ್ ಗುಂಡರವರಿಗೆ ಆಜ್ಞಾಪಿಸಿದರು. ಇದರಿಂದ ಗೋಪಾಲ್ ರಾವ್ ಗುಂಡರವರಿಗೆ ಅತೀವ ಆನಂದವಾಯಿತು. ಕೊಡಲೇ ಕೆಲಸವನ್ನು ಪ್ರಾರಂಭಿಸಿ ಶನಿ ಮಂದಿರವನ್ನು ಜೀರ್ಣೋದ್ದಾರ ಮಾಡಿದ್ದೇ ಅಲ್ಲದೇ ಅದು ಚಿಕ್ಕದಾಗಿದ್ದರಿಂದ ಸ್ವಲ್ಪ ವಿಸ್ತರಣೆಯನ್ನು ಕೂಡ ಮಾಡಿಸಿದರು. ಅಲ್ಲದೇ, ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಬೇವಿನ ಮರದ ಕೆಳಗಡೆ ಇದ್ದ ಗುರುಸ್ಥಾನದ ದುರಸ್ತಿ ಕಾರ್ಯವನ್ನು ಕೂಡ ಮಾಡಿಸಿದರು. 

ಗೋಪಾಲ್ ರಾವ್ ಗುಂಡರವರು ತಮಗೆ ಪುತ್ರ ಸಂತಾನವಾಗಿದ್ದು ಸಾಯಿಬಾಬಾರವರ ಆಶೀರ್ವಾದದ ಫಲ ಎಂದು ಮನಗಂಡಿದ್ದರು. ಆ ಸಂತೋಷಕ್ಕಾಗಿ 1897 ರಲ್ಲಿ ಶಿರೈದ್ಯಲ್ಲಿ ಒಂದು ಜಾತ್ರೆ ಅಥವಾ ಉರುಸ್ ನಡೆಸಬೇಕೆಂದು ಮನಸ್ಸಿನಲ್ಲಿ ಅಂದುಕೊಂಡರು. ಇವರು ತಮ್ಮ ಅನಿಸಿಕೆಯನ್ನು ದಾದಾ ಕೋತೆ, ತಾತ್ಯಾ ಕೋತೆ, ಮಾಧವ ರಾವ್ ದೇಶಪಾಂಡೆ ಮತ್ತು ಇತರ ಸಾಯಿಭಕ್ತರ ಮುಂದೆ ಇರಿಸಿದರು.  ಅವರೆಲ್ಲರೂ ಇದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಸಾಯಿಬಾಬಾರವರು ಕೂಡ ಇದಕ್ಕೆ ಸಮ್ಮತಿಸಿದರು. 

ನಂತರ ಈ ವಿಷಯವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅವರಿಗೆ ಅರ್ಜಿಯನ್ನು ಸಲ್ಲಿಸಿದರು. ಆದರೆ, ಆ ಗ್ರಾಮದ ಪಟೇಲನು ಅದಕ್ಕೆ ಒಪ್ಪದೇ ವಿರುದ್ಧವಾಗಿ ಬರೆದಿದ್ದರಿಂದ ಜಿಲ್ಲಾಧಿಕಾರಿಯು ಒಪ್ಪಿಗೆ ನೀಡಲಿಲ್ಲ. ಬಾಬಾರವರ ಆಶೀರ್ವಾದದ ಫಲದಿಂದ ಮತ್ತೊಮ್ಮೆ ಪ್ರಯತ್ನಿಸಿ ಅವರುಗಳು ಜಯಶೀಲರಾದರು. ಉರುಸ್ ಶ್ರೀರಾಮನವಮಿಯ ದಿನ ನಡೆಯಬೇಕೆಂದು ಬಾಬಾರವರ ಸಲಹೆಯ ಮೇರೆಗೆ ನಿರ್ಧಾರವಾಯಿತು. ಹೀಗೆ 1897 ರಿಂದ ನಿರಂತರವಾಗಿ ಶ್ರೀರಾಮನವಮಿ ಹಾಗು ಉರುಸ್ ಕಾರ್ಯಕ್ರಮ ಒಟ್ಟಿಗೆ ನಡೆದುಕೊಂಡು ಬರುತ್ತಿದೆ. ಹೀಗೆ ಗೋಪಾಲ್ ರಾವ್ ಗುಂಡರವರು ಈ ಶ್ರೀರಾಮನವಮಿ ಉತ್ಸವ ಪ್ರಾರಂಭವಾಗಲು ಕಾರಣರಾದರು. ಉತ್ಸವದ ಸಿದ್ಧತೆಗಳನ್ನೂ ತಾತ್ಯಾ ಕೋತೆ ಪಾಟೀಲ್ ನೋಡಿಕೊಳ್ಳುತ್ತಿದ್ದರು. 

ನಂತರದ ದಿನಗಳಲ್ಲಿ ಸಾಯಿಬಾಬಾರವರ ಆಶೀರ್ವಾದದಿಂದ ದಾಮು ಅಣ್ಣಾರವರು ಕೂಡ ಪುತ್ರ ಸಂತಾನವನ್ನು ಪಡೆದರು. ಗೋಪಾಲ್ ರಾವ್ ಗುಂಡರವರು ದಾಮು ಅಣ್ಣಾರವರಿಗೆ ಆ ಸಂತೋಷಕ್ಕಾಗಿ ದ್ವಾರಕಾಮಾಯಿ ಮಸೀದಿಯ ಮೇಲೆ ಧ್ವಜವನ್ನು ನೆಡುವಂತೆ ಪ್ರೇರೇಪಿಸಿದರು. ದಾಮು ಅಣ್ಣಾರವರು ಈ ವಿಷಯವನ್ನು ನಾನಾ ಸಾಹೇಬ್ ನಿಮೋಣ್ಕರ್ ರವರ ಮುಂದೆ ಇರಿಸಿದರು. ಅವರು ಇದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಅದರಂತೆ ದಾಮು ಅಣ್ಣಾರವರು ಶ್ರೀರಾಮನವಮಿಯ ದಿವಸ ಮಸೀದಿಯ ಮೇಲೆ ಧ್ವಜವನ್ನು ನೆಡುವ ಕಾರ್ಯವನ್ನು ಪ್ರಾರಂಭಿಸಿದರು. 

ಇಂದಿಗೂ ಶ್ರೀರಾಮನವಮಿಯ ದಿವಸ ಎರಡು ಧ್ವಜಗಳನ್ನು ಭಜನೆ, ಪೂಜೆ ಮತ್ತು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ತಂದು ದ್ವಾರಕಾಮಾಯಿ ಮಸೀದಿಯ ಚಾವಣಿಯ ಮೇಲೆ ನೆಡಲಾಗುತ್ತಿದೆ. ಹಸಿರು ಬಣ್ಣದ ಧ್ವಜವನ್ನು ದಾಮು ಅಣ್ಣಾರವರ ಮನೆಯವರು ಹಾಗೂ ಬಣ್ಣದ ಕಸೂತಿಯನ್ನು ಮಾಡಿದ ಧ್ವಜವನ್ನು ನಿಮೋಣ್ಕರ್ ರವರ ಮನೆಯವರು  ನೆಡುತ್ತಾರೆ. ಈ ಧ್ವಜಗಳನ್ನು ಕೊಂಡಾಜಿ ಸುತಾರ್ ರವರ ಮನೆಯಲ್ಲಿ ಸಿದ್ಧ ಪಡಿಸಲಾಗುತ್ತದೆ. ನಂತರ ಮೆರವಣಿಗೆಯಲ್ಲಿ ತಂದು ದ್ವಾರಕಾಮಾಯಿ ಮಸೀದಿಯ ಮೇಲೆ ನೆಡಲಾಗುತ್ತದೆ. 
ಸಾಯಿಬಾಬಾರವರ ಸಮಾಧಿಯ ನಂತರ, ಗೋಪಾಲ್ ರಾವ್ ಗುಂಡರವರು ತಮ್ಮ ಕಲ್ಲಿನ ಮನೆಯನ್ನು ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದರು. 
ಕನ್ನಡ ಅನುವಾದ: ಶ್ರೀಕಂಠ ಶರ್ಮ