Wednesday, December 30, 2015

ಪ್ರಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಥಾ ಲೇಖಕ ಹಾಗೂ ನಟ ಶ್ರೀ.ಅಶುತೋಷ್ ಗೌರೀಕರ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಪ್ರಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಥಾ ಲೇಖಕ ಹಾಗೂ ನಟ ಶ್ರೀ.ಅಶುತೋಷ್ ಗೌರೀಕರ್ ಅವರು ಇದೇ ತಿಂಗಳ 30ನೇ ಡಿಸೆಂಬರ್ 2015, ಬುಧವಾರದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, December 18, 2015

ಪ್ರಖ್ಯಾತ ಹಿಂದಿನ ಚಲನಚಿತ್ರ ನಟ ಶ್ರೀ.ರಿಷಿ ಕಪೂರ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಪ್ರಖ್ಯಾತ ಹಿಂದಿನ ಚಲನಚಿತ್ರ ನಟ ಶ್ರೀ.ರಿಷಿ ಕಪೂರ್ ಅವರು ಇದೇ ತಿಂಗಳ 18ನೇ ಡಿಸೆಂಬರ್ 2015, ಶುಕ್ರವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, December 15, 2015

ಮಲೇಶಿಯಾ ಮತ್ತು ಲಂಡನ್ ಸಾಯಿ ಭಕ್ತರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಲೇಶಿಯಾ ಮತ್ತು ಲಂಡನ್ ನ ಸಾಯಿ ಭಕ್ತರು ಇದೇ ತಿಂಗಳ 15ನೇ ಡಿಸೆಂಬರ್ 2015, ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಸಾಯಿ ಭಕ್ತರನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರು ಸಂಸ್ಥಾನದ ಪರವಾಗಿ ಸ್ವಾಗತಿಸಿದರು. ಆನಂತರ ಎಲ್ಲ ಸಾಯಿ ಭಕ್ತರೊಂದಿಗೆ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಜಗನ್ನಾಥ್ ಯಾದವ್ ರವರು ಭಾವಚಿತ್ರದಲ್ಲಿ ಈ ಕೆಳಗಿನಂತೆ ಕಾಣಿಸಿಕೊಂಡರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, September 28, 2015

ಮೈಲಾನ್ ಸಂಸ್ಥೆಯಿಂದ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಆಂಬುಲೆನ್ಸ್ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮೈಲಾನ್ ಸಂಸ್ಥೆಯು ಇದೇ ತಿಂಗಳ  28ನೇ ಸೆಪ್ಟೆಂಬರ್ 2015, ಸೋಮವಾರದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 12,00,000/- ರೂಪಾಯಿ ಬೆಲೆಬಾಳುವ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಿಕ್ ಅವರು ವಾಹನದ ಕೀಲಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು  ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, September 25, 2015

ಗುಜರಾತ್ ಮುಖ್ಯಮಂತ್ರಿ ಶ್ರೀಮತಿ. ಆನಂದಿ ಬೆನ್ ಪಟೇಲ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.

ಗುಜರಾತ್  ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀಮತಿ.ಆನಂದಿ ಬೆನ್ ಪಟೇಲ್ ರವರು ಇದೇ ತಿಂಗಳ 25ನೇ ಸೆಪ್ಟೆಂಬರ್ 2015, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಂದರ್ಭದಲ್ಲಿ ಕೋಪರಗಾವ್ ನ ಶಾಸಕಿ ಶ್ರೀಮತಿ.ಸ್ನೇಹಲತಾ ಕೊಲ್ಹೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, September 16, 2015

ಚಂಡೀಘಡದ ಸಾಯಿ ಭಕ್ತರಿಂದ ಸಾಯಿಬಾಬಾ ಸಂಸ್ಥಾನಕ್ಕೆ ಮಾರುತಿ ಇಕೋ ಆಂಬುಲೆನ್ಸ್ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಚಂಡೀಘಡದ ಸಾಯಿ ಭಕ್ತರಾದ ಶ್ರೀ.ಕಮಲ್ ಬಾತ್ರಾ ಮತ್ತು ಶ್ರೀಮತಿ.ಅರ್ಚನಾ ಬಾತ್ರಾರವರು ಇದೇ ತಿಂಗಳ  16ನೇ ಸೆಪ್ಟೆಂಬರ್ 2015, ಬುಧವಾರದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 3,59,000/- ರೂಪಾಯಿ ಬೆಲೆಬಾಳುವ ಮಾರುತಿ ಇಕೋ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಅವರು ವಾಹನದ ಕೀಲಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಮಂದಿರದ ಪ್ರಮುಖರಾದ ಶ್ರೀ.ನವನಾಥ್ ಕೋತೆ ಮತ್ತು ವಾಹನ ವಿಭಾಗದ ಮುಖ್ಯಸ್ಥರಾದ ಶ್ರೀ.ಶೇಕಡೆ ಮತ್ತಿತರ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, September 15, 2015

ಬೆಂಗಳೂರಿನ ಸಾಯಿ ಭಕ್ತರಿಂದ ಸಾಯಿಬಾಬಾ ಸಂಸ್ಥಾನಕ್ಕೆ ಆಂಬುಲೆನ್ಸ್ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಅಮಿತ್ ಬಜಾಜ್ ರವರು ಇದೇ ತಿಂಗಳ  15ನೇ ಸೆಪ್ಟೆಂಬರ್ 2015, ಮಂಗಳವಾರ ದಂದು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ 10,92,000/- ರೂಪಾಯಿ ಬೆಲೆಬಾಳುವ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಅವರು ವಾಹನದ ಕೀಲಿಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಮಂದಿರದ ಪ್ರಮುಖರಾದ ಶ್ರೀ.ನವನಾಥ್ ಕೋತೆ ಮತ್ತು ವಾಹನ ವಿಭಾಗದ ಮುಖ್ಯಸ್ಥರಾದ ಶ್ರೀ.ಶೇಕಡೆಯವರುಗಳು ಕೂಡ ಉಪಸ್ಥಿತರಿದ್ದರು. 



ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಆಂಗ್ಲಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

Saturday, September 12, 2015

ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳದ ನಡೆಯುತ್ತಿರುವ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಸಾಯಿ ಭಕ್ತರ ಮಹಾಪೂರ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಇದೇ ತಿಂಗಳ 12ನೇ ಸೆಪ್ಟೆಂಬರ್  2015, ಶನಿವಾರ ದಂದು ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಸಾಯಿ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಆ ಭಕ್ತ ಸಾಗರದ ಕೆಲವು ದೃಶ್ಯಗಳನ್ನು ಈ ಕೆಳಗೆ ನೋಡಬಹುದು. 







ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಇದೇ ತಿಂಗಳ 13ನೇ ಸೆಪ್ಟೆಂಬರ್  2015, ಭಾನುವಾರ  ದಂದು ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಹರಿದು ಬಂದ ಭಕ್ತ ಸಾಗರ ತಮ್ಮ ವಾಹನಗಳನ್ನು ವಾಹನ ನಿಲುಗಡೆ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಅದರ ಒಂದು ಪಕ್ಷಿನೋಟವನ್ನು   ಈ ಕೆಳಗೆ ನೋಡಬಹುದು. 


ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಹರಿದು ಬಂದ ಭಕ್ತರನ್ನು ವಾಹನ ನಿಲುಗಡೆ ತಾಣದಿಂದ ದರ್ಶನದ ಸಾಲಿನ ಬಳಿಗೆ ಕರೆದುಕೊಂಡು ಹೋಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 68 ಬಸ್ ಗಳನ್ನು ವ್ಯವಸ್ಥೆ ಮಾಡಿತ್ತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, August 29, 2015

ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳದ ಅಂಗವಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸಹಾಯವಾಣಿ ಮತ್ತು ಸಹಾಯ ತಂಡಗಳ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ- 2015 ನಡೆಯುತ್ತಿರುವುದರಿಂದ, ನಾಸಿಕ್ ನಿಂದ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನಕ್ಕೆಂದು  ಶಿರಡಿ ಬರುವ ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನವು ನಾಸಿಕ್ ನಲ್ಲಿ ಸಹಾಯವಾಣಿ ಮತ್ತು ಸಹಾಯ ತಂಡಗಳನ್ನು ಆಯೋಜಿಸಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಆಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  ಇದೇ ತಿಂಗಳ 29ನೇ ಆಗಸ್ಟ್ 2015, ಶನಿವಾರ ದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. 

ಸುದ್ದಿಗಾರರೊಂದಿಗೆ ತಮ್ಮ ಮಾತನ್ನು ಮುಂದುವರಿಸುತ್ತಾ ಶ್ರೀ.ಜಾಧವ್ ರವರು  ತಲಾ ಹತ್ತು ಜನರ ಎರಡು ತಂಡಗಳು ಎರಡು ಪಾಳಿಯಲ್ಲಿ ಕಾರ್ಯವನ್ನು ನಿರ್ವಹಿಸಲಿದ್ದು ಭಕ್ತರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಅವರಿಗೆ ಸೂಕ್ತ ಪರಿಹಾರವನ್ನು ನೀಡಿ ಅವರ ಮನದಲ್ಲಿ ಏಳುವ ಎಲ್ಲ ಪ್ರಶ್ನೆಗಳಿಗೆ ಸಮಾಧಾನ ನೀಡಲಿದ್ದಾರೆ ಎಂದು ತಿಳಿಸಿದರು. ಈ ಸಹಾಯವಾಣಿ ಮತ್ತು ಸಹಾಯ ತಂಡಗಳು ಶಿರಡಿಗೆ ಸಾಯಿಬಾಬಾರವರ ದರ್ಶನಕ್ಕೆ ಬರಬೇಕೆಂದಿರುವ ಭಕ್ತರಿಗೆ ಬಹಳ ಉಪಯುಕ್ತವಾಗುತ್ತವೆ. ದೂರವಾಣಿ ಸಂಖ್ಯೆ 7720077203 ಇದೇ ತಿಂಗಳ 27ನೇ ಆಗಸ್ಟ್ 2015 ರ ಸಂಜೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ ಶ್ರೀ ಜಾಧವ್ ರವರು  ಭಕ್ತರು ಯಾವುದೇ ರೀತಿಯ ಸಮಸ್ಯೆಯಿದ್ದಲ್ಲಿ ಈ ಸಹಾಯವಾಣಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕೆಂದು ಈ ಮೂಲಕ  ಮನವಿ ಮಾಡಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ 

Friday, August 28, 2015

ಕೇಂದ್ರ ವಿಮಾನಯಾನ ಖಾತೆ ಸಚಿವ ಶ್ರೀ.ಅಶೋಕ್ ಗಜಪತಿ ರಾಜು ಪುಸಪತಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.

ಕೇಂದ್ರ ವಿಮಾನಯಾನ ಖಾತೆ ಸಚಿವ ಶ್ರೀ.ಅಶೋಕ್ ಗಜಪತಿ ರಾಜು ಪುಸಪತಿಯವರು ಇದೇ ತಿಂಗಳ 28ನೇ ಆಗಸ್ಟ್  2015, ಶುಕ್ರವಾರ ದಂದು ತಮ್ಮ ಧರ್ಮಪತ್ನಿಯ ಜೊತೆಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 


Saturday, August 22, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಆಯೋಜನೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ)ಯು ಶಿರಡಿ ಗ್ರಾಮಸ್ಥರ ಸಹಯೋಗದೊಂದಿಗೆ ಇದೇ ತಿಂಗಳ 15ನೇ ಆಗಸ್ಟ್ 2015, ಶನಿವಾರದಿಂದ 23ನೇ ಆಗಸ್ಟ್ 2015, ಭಾನುವಾರದವರಗೆ ಹಮ್ಮಿಕೊಂಡಿದ್ದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣವು  22ನೇ ಆಗಸ್ಟ್  2015, ಶನಿವಾರ ದಂದು  ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಶಿರಡಿ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯುವುದರೊಂದಿಗೆ ವಿಧ್ಯುಕ್ತವಾಗಿ ಸುಸಂಪನ್ನಗೊಂಡಿತು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, August 21, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಡಾ.ಚಂದ್ರಭಾನು ಸತ್ಪತಿಯವರಿಗೆ ಸನ್ಮಾನ ಸಮಾರಂಭದ ವರದಿ - ಕೃಪೆ: ಸಾಯಿಅಮೃತಧಾರಾ. ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 20ನೇ ಆಗಸ್ಟ್ 2015, ಗುರುವಾರದಂದು ಬೆಳಿಗ್ಗೆ  11 ಘಂಟೆಗೆ ಸಾಯಿ ಪ್ರಸಾದಾಲಯದ ಆವರಣದಲ್ಲಿರುವ ಸಂಭಾಂಗಣದಲ್ಲಿ ಡಾ.ಚಂದ್ರಭಾನು ಸತ್ಪತಿ (ಗುರೂಜಿ)ಯವರಿಗೆ ಸನ್ಮಾನ ಮಾಡಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ.ಚಂದ್ರಭಾನು ಸತ್ಪತಿಯವರು " ಈ ಸನ್ಮಾನವು ನನಗೆ ಸಲ್ಲಬೇಕಾದುದಲ್ಲ. ಬದಲಿಗೆ ಶ್ರೀ ಸಾಯಿಬಾಬಾರವರ ಆಲೋಚನೆಗಳಿಗೆ ಹಾಗೂ ಹಲವಾರು ಸಾಯಿಭಕ್ತರು ನೀಡಿರುವ ಅತ್ಯುತ್ತಮ ಕೊಡುಗೆಗೆ ಸಲ್ಲಬೇಕಾಗಿದೆ. ಶ್ರೀ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಎಲ್ಲೆಡೆ ಹರಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿರುವ ಅವಶ್ಯಕತೆಯಿದೆ" ಎಂದು ನುಡಿದರು. ಅಲ್ಲದೇ, ಸಾಯಿಬಾಬಾರವರ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸುವ ಸಲುವಾಗಿ ಒಂದು ಸಾಯಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಅವರು ಮನವಿ ಮಾಡಿದರು. 



ಡಾ.ಚಂದ್ರಭಾನು ಸತ್ಪತಿಯವರು ಶ್ರೀ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಭಾರತದಲ್ಲಿ ಹಾಗೂ ಪ್ರಪಂಚದ ಹಲವಾರು ಕಡೆಗಳಲ್ಲಿ ಹರಡುವುದಕ್ಕೆ ಕಾರಣೀಭೂತರಾಗಿರುತ್ತಾರೆ. ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ವಿನಯ್ ಜೋಷಿ, ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಶಿರಡಿಯ ಸಂಸತ್ ಸದಸ್ಯರಾದ ಶ್ರೀ.ಸದಾಶಿವ ಲೋಖಂಡೆಯವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಡಾ.ಸತ್ಪತಿಯವರ ಬಗ್ಗೆ  ಪ್ರಸ್ತಾವಿಕ ಭಾಷಣವನ್ನು ಮಾಡುವುದರೊಂದಿಗೆ ಸನ್ಮಾನ ಕಾರ್ಯಕ್ರಮವು ಪ್ರಾರಂಭವಾಯಿತು. ತರುವಾಯ, ಡಾ.ಚಂದ್ರಭಾನು ಸತ್ಪತಿಯವರು ಉಪನ್ಯಾಸ ಭಾಷಣವನ್ನು ಮಾಡಿದರು. 

ಉಪನ್ಯಾಸ ಭಾಷಣವನ್ನು ಮಾಡುತ್ತಾ  ಡಾ.ಚಂದ್ರಭಾನು ಸತ್ಪತಿಯವರು "ಶ್ರೀ ಸಾಯಿಬಾಬಾ ಸಂಸ್ಥಾನವು ಇಂದು ನನ್ನನ್ನು ಸನ್ಮಾನಿಸುತ್ತಿದೆ. 25 ವರ್ಷಗಳ ನಂತರ ನಾನು ಈ ರೀತಿಯ ಸನ್ಮಾನಕ್ಕೆ ಪಾತ್ರನಾಗುತ್ತೇನೆ ಎಂದು ನಾನು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಾನು ಮೊಟ್ಟ ಮೊದಲ ಬಾರಿಗೆ 2ನೇ ನವೆಂಬರ್ 1989 ರಲ್ಲಿ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ದರ್ಶನವನ್ನು ಮಾಡಿದೆ. ನಾನು ಅಂದು ಆರಂಭಿಸಿದ ಪ್ರಯಾಣವು ಒಂದು ಪ್ರಮುಖ ಮೈಲಿಗಳನ್ನು ತಲುಪಿದೆ. ಇಂದು ಸಾಯಿಬಾಬಾರವರ ಹೆಸರು ಪ್ರಪಂಚದಾದ್ಯಂತ ಹರಡಿ ಬಹಳ ಜನಪ್ರಿಯತೆಯನ್ನು ಪಡೆದಿದೆ. ಶ್ರೀ ಸಾಯಿಬಾಬಾರವರು ಎಲ್ಲಾ ಮತಗಳೂ ಒಂದೇ;  ಪ್ರತಿಯೊಬ್ಬ ಮನುಷ್ಯನನ್ನು ಒಂದೇ ರೀತಿಯಿಂದ ಕಾಣಬೇಕು; ಪ್ರತಿಯೊಬ್ಬರೂ ತಮ್ಮ ತಾಯಿ, ತಂದೆ, ಸಹೋದರ, ಸಹೋದರಿಯರಲ್ಲಿ ಆ ಭಗವಂತನನ್ನು ಕಾಣುವಂತಾಗಬೇಕು. ನಾವಿರುವ ಪರಿಸ್ಥಿತಿಯು ಒಳ್ಳೆಯದು ಅಥವಾ ಕೆಟ್ಟದೇ ಇರಲಿ ಎಲ್ಲಾ ಸಂದರ್ಭದಲ್ಲಿಯೂ ನಾವು ಸಾಯಿಯನ್ನು ಮನದಲ್ಲಿ  ನೆನೆಯೋಣ, ಅವರಿಗೆ ಪ್ರಣಾಮವನ್ನು ಸಲ್ಲಿಸೋಣ. ಶ್ರೀ ಸಾಯಿಬಾಬಾರವರ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ" ಎಂದು ನುಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ವಿನಯ್ ಜೋಷಿಯವರು ಡಾ.ಸತ್ಪತಿಯರು ಸಾಯಿಬಾಬಾರವರ ತತ್ವ ಮತ್ತು ಉಪದೇಶಗಳನ್ನು ಭಕ್ತರಿಗಷ್ಟೇ ಅಲ್ಲದೆ ಸಾಮಾನ್ಯ ವ್ಯಕ್ತಿಗೆ ಕೂಡ ಸರಳ ರೀತಿಯಲ್ಲಿ ವಿವರಿಸುವ ಮೂಲಕ ಶ್ರೀ ಸಾಯಿಬಾಬಾರವರ ಸಂದೇಶಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಶಿರಡಿ ಮತ್ತು ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಸಾಯಿಬಾಬಾರವರ ಎರಡು ಪ್ರಮುಖ ಸಂದೇಶಗಳಾದ "ಶ್ರದ್ಧಾ-ಸಬೂರಿ" ಯನ್ನು ಪ್ರಪಂಚದಾದ್ಯಂತ ಹರಡುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದ್ದಾರೆ  ಎಂದು ತಿಳಿಸಿದರು. ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆವರು ಮಾತನಾಡಿ ಡಾ.ಸತ್ಪತಿಯವರು ತಮ್ಮ ಹೆಸರು-ಕೀರ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಶ್ರೀ ಸಾಯಿಬಾಬಾರವರ ಸಂದೇಶಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸತ್ಪತಿಯವರು ಸ್ವಾತಂತ್ರ್ಯ ದಿನಾಚರಣೆಯಂದು ನೀಡಿದ ಉಪನ್ಯಾಸ ಭಾಷಣವು ಬಹಳ ಉತ್ತೇಜನಕಾರಿಯಾಗಿತ್ತು ಎಂದು ಶ್ಲಾಘಿಸಿದರು. 

ಸಂಸತ್ ಸದಸ್ಯರಾದ ಶ್ರೀ.ಸದಾಶಿವ ಲೋಖಂಡೆ, ಮಾಜಿ ಮಹಾ ಪೌರರಾದ ಶ್ರೀ.ಕೈಲಾಸ್ ಕೋತೆ, ಶ್ರೀ.ದಿಲೀಪ್ ಸಂಕ್ಲೇಚಾ ರವರುಗಳು ಕೂಡ ಈ ಸಂದರ್ಭದಲ್ಲಿ ಮಾತನಾಡಿದರು. ರಾಷ್ಟ್ರೀಯ ಸುರಕ್ಷತಾ ಸಲಹೆಗಾರರಾದ  ಶ್ರೀ.ಸುರೇಶ ರೆಡ್ಡಿ, ಅಸ್ಸಾಂ ರಾಜ್ಯದ ಮುಖ್ಯ ಮಾಹಿತಿ ಅಧಿಕಾರಿಯಾದ ಶ್ರೀ.ಎಸ್.ಎಸ್.ದಾಸ್, ಪುಣೆ ದಂಡಿನ ಮಖ್ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಸಂಜೀವ್ ಕುಮಾರ್, ಮಾಜಿ ಸಂಸತ್ ಸದಸ್ಯೆ ಶ್ರೀಮತಿ.ಅರ್ಚನಾ ನಾಯಕ್, ಭಾರತೀಯ ಆಡಳಿತಾತ್ಮಕ ಸೇವೆಯ ಹಿರಿಯ ಅಧಿಕಾರಿಗಳು, ತಿರುಪತಿ ವಿಶ್ವವಿದ್ಯಾಲಯದ ಡಾ.ರಘುನಾಥ ರೆಡ್ಡಿ, ಸಮಾಜದ ವಿವಿಧ ಕ್ಷೇತ್ರಗಳಿಗೆ ಸೇರಿದ ಗಣ್ಯರು, ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳು,  ಇಲಾಖೆಯ ಮುಖ್ಯಸ್ಥರು ಹಾಗೂ ಸಂಸ್ಥಾನದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ.ಶಿವಗಜೆಯವರು ವಹಿಸಿಕೊಂಡಿದ್ದರು. ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಂದನಾರ್ಪಣೆಯನ್ನು ಮಾಡಿದರು.  

ಮರಾಠಿಯಿಂದ ಆಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ 

Wednesday, August 19, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಡಾ.ಚಂದ್ರಭಾನು ಸತ್ಪತಿಯವರಿಗೆ ಸನ್ಮಾನ ಸಮಾರಂಭ - ಕೃಪೆ: ಸಾಯಿಅಮೃತಧಾರಾ. ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 20ನೇ ಆಗಸ್ಟ್ 2015, ಗುರುವಾರ ದಂದು ಬೆಳಿಗ್ಗೆ  11 ಘಂಟೆಗೆ ಸಮಾಧಿ ಮಂದಿರದ ಹೊರ ಆವರಣದಲ್ಲಿರುವ ವೇದಿಕೆಯಲ್ಲಿ ಡಾ.ಚಂದ್ರಭಾನು ಸತ್ಪತಿ (ಗುರೂಜಿ)ಯವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು 19ನೇ ಆಗಸ್ಟ್ 2015, ಬುಧವಾರ ದಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ಡಾ.ಚಂದ್ರಭಾನು ಸತ್ಪತಿಯವರು ಶ್ರೀ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಭಾರತದಲ್ಲಿ ಹಾಗೂ ಪ್ರಪಂಚದ ಹಲವಾರು ಕಡೆಗಳಲ್ಲಿ ಹರಡುವುದಕ್ಕೆ ಕಾರಣೀಭೂತರಾಗಿರುವುದಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಹಲವಾರು ಸಾಯಿ ಮಂದಿರಗಳು ತಲೆ ಎತ್ತುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. 


ಡಾ.ಚಂದ್ರಭಾನು ಸತ್ಪತಿಯವರು ಶ್ರೀ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಭಾರತದಲ್ಲಿ ಹಾಗೂ ಪ್ರಪಂಚದ ಹಲವಾರು ಕಡೆಗಳಲ್ಲಿ ಹರಡುವುದಕ್ಕೆ ಕಾರಣೀಭೂತರಾಗಿದ್ದಾರೆ. ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಧರಿಸಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. 1983ನೇ ಸಾಲಿನ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಡಾ.ಸತ್ಪತಿಯವರು ಕೆಲವು ವರ್ಷಗಳ ಕಾಲ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಉತ್ತರಪ್ರದೇಶದ ಅನೇಕ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿಯೂ ಸಹ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ ಹೆಗ್ಗಳಿಕೆ ಇವರದು. ಇವರು 2008ನೇ ಇಸವಿಯಲ್ಲಿ ಪೋಲಿಸ್ ಮಹಾ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದರು. ಇವರು 1989ನೇ ಇಸವಿಯಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡು ಅವರ ಅನನ್ಯ ಭಕ್ತರಾದರು. ಇವರು ಹಲವು ವರ್ಷಗಳ ಕಾಲ ಶಿರಡಿಯಲ್ಲಿ ಉಳಿದುಕೊಂಡು ಶ್ರೀ ಸಾಯಿ ಸಚ್ಚರಿತ್ರೆಯ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿ ತಿಳಿದುಕೊಂಡರು. ನಂತರ ಬಾಬಾರವರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮೊಟ್ಟ ಮೊದಲನೆಯ ಸಾಯಿಬಾಬಾ ಮಂದಿರವನ್ನು ಚೆನ್ನೈನಲ್ಲಿ ಕಟ್ಟಿಸಿದರು.  ಅಲ್ಲಿಂದ ಮುಂದಿನ ವರ್ಷಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಇಲ್ಲಿಯವರೆಗೂ ಸುಮಾರು 230 ಸಾಯಿ ಮಂದಿರಗಳು ತಲೆ ಎತ್ತುವಲ್ಲಿ ಕಾರಣೀಭೂತರಾಗಿದ್ದಾರೆ. 24ನೇ ಜೂನ್ 2015 ರಂದು ಅಮೇರಿಕಾದ ವಾಷಿಂಗ್ ಟನ್ ನಲ್ಲಿ ನಡೆದ ಅಮೇರಿಕನ್ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ಅವರು ಮಾನವೀಯತೆಯ ಪ್ರಾಮುಖ್ಯತೆ ಮತ್ತು ಶ್ರೀ ಸಾಯಿಬಾಬಾರವರ ಜಾತ್ಯಾತೀತ ವ್ಯಕ್ತಿತ್ವವನ್ನು ಹಾಗೂ ಶ್ರೀ ಸಾಯಿಬಾಬಾರವರ ಅತ್ಯಂತ ಪ್ರಮುಖ ಉಪದೇಶವಾದ "ಸಬ್ ಕಾ ಮಾಲಿಕ್ ಏಕ್" ನ ಬಗ್ಗೆ ಉಪದೇಶ ನೀಡಿದರು ಎಂದು ಶ್ರೀ.ಜಾಧವ್ ರವರು ತಿಳಿಸಿದರು.  
    
ಶ್ರೀ ಸಾಯಿಬಾಬಾ ಸಂಸ್ಥಾನದ ಪರವಾಗಿ ಅದರ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ವಿನಯ್ ಜೋಷಿ, ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯ ಹಾಗೂ ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆಯವರುಗಳು ಈ ಮಹಾನ್ ಸಾಯಿಭಕ್ತರಾದ ಡಾ.ಸತ್ಪತಿಯವರನ್ನು 20ನೇ ಆಗಸ್ಟ್ 2015, ಗುರುವಾರ ದಂದು ಬೆಳಿಗ್ಗೆ  11 ಘಂಟೆಗೆ ಸಮಾಧಿ ಮಂದಿರದ ಹೊರ ಆವರಣದಲ್ಲಿರುವ ವೇದಿಕೆಯಲ್ಲಿ  ಸನ್ಮಾನಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾಗವಹಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ 

ಚತ್ತೀಸ್ ಘಡದ ರಾಜ್ಯಪಾಲ ಶ್ರೀ.ಬಲರಾಮಜಿ ದಾಸ್ ಟಂಡನ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಚತ್ತೀಸ್ ಘಡದ ರಾಜ್ಯಪಾಲರಾದ ಶ್ರೀ.ಬಲರಾಮಜಿ ದಾಸ್ ಟಂಡನ್ ರವರು ಇದೇ ತಿಂಗಳ 19ನೇ ಆಗಸ್ಟ್ 2015, ಬುಧವಾರ ದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, August 14, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ)ಯು ಶಿರಡಿ ಗ್ರಾಮಸ್ಥರ ಸಹಯೋಗದೊಂದಿಗೆ ಇದೇ ತಿಂಗಳ 15ನೇ ಆಗಸ್ಟ್ 2015, ಶನಿವಾರದಿಂದ 23ನೇ ಆಗಸ್ಟ್ 2015, ಭಾನುವಾರದವರಗೆ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 13ನೇ ಆಗಸ್ಟ್ 2015, ಗುರುವಾರ ದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು

ಮಹಾಪಾರಾಯಣದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 7:00 ರಿಂದ 11:30 ರವರಗೆ ಗಂಡಸರಿಗೂ ಹಾಗೂ ಮಧ್ಯಾನ್ಹ 1:00 ರಿಂದ ಸಂಜೆ 5:30 ರವರಗೆ ಹೆಂಗಸರಿಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ

ಮಹಾಪಾರಾಯಣದ ಮೊದಲನೇ ದಿನವಾದ 15ನೇ ಆಗಸ್ಟ್ 2015, ಶನಿವಾರ ದಂದು ಸಂಜೆ 7:30 ರಿಂದ ರಾತ್ರಿ  9:00 ರವರಗೆ ಮುಂಬೈನ ಶ್ರೀಮತಿ.ಪದ್ಮಾ ರಾಮಸ್ವಾಮಿಯವರಿಂದ ಬಾಲ ಗೋಪಾಲ ಭಜನೆಯ ಕಾರ್ಯಕ್ರಮವನ್ನು ಮತ್ತು ರಾತ್ರಿ 9:00 ರಿಂದ 10.15 ರವರಗೆ ಆದರ್ಶ ಪ್ರೌಢಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಎರಡನೇ ದಿನವಾದ 16ನೇ ಆಗಸ್ಟ್ 2015, ಭಾನುವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ದೆಹಲಿಯ ಪ್ರಸಿದ್ಧ ಗಾಯಕ ಶ್ರೀ.ಸುಖ್ವಿಂದರ್ ಸಿಂಗ್ ರವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಮೂರನೇ ದಿನವಾದ 17ನೇ ಆಗಸ್ಟ್ 2015, ಸೋಮವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ದಿವಂಗತ ವೀರ ಸಾವರ್ಕರ್ ರವರ ಜೀವನ ಚರಿತ್ರೆಯ  ದೆಹಲಿಯ ಪ್ರಸಿದ್ಧ ಗಾಯಕ ಶ್ರೀ.ಸುಖ್ವಿಂದರ್ ಸಿಂಗ್ ರವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ನಾಲ್ಕನೇ ದಿನವಾದ 18ನೇ ಆಗಸ್ಟ್ 2015, ಮಂಗಳವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ಸದ್ಗುರು ಸಾಯಿನಾಥ ಮಿತ್ರ ಮಂಡಳಿ, ದೆಹಲಿಯ ಶ್ರೀಮತಿ.ವೈಶಾಲಿ ರಾಜ್ ರವರಿಂದ "ರಾಧಾ ಕೃಷ್ಣ ಮತ್ತು ಗೀತಾ" ಎಂಬ ಶೀರ್ಷಿಕೆಯಡಿಯಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಐದನೇ ದಿನವಾದ 19ನೇ ಆಗಸ್ಟ್ 2015, ಬುಧವಾರ ದಂದು ಸಂಜೆ 7:30 ರಿಂದ ರಾತ್ರಿ 10:15 ರವರಗೆ ಶ್ರೀ.ಸಂತೋಷ್ ಪವಾರ್ ರವರಿಂದ "ಝರಾ ಹವಾ ಯೇವು ಧ್ಯಾ" ಎಂಬ ನಾಟಕವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಆರನೇ ದಿನವಾದ 20ನೇ ಆಗಸ್ಟ್ 2015, ಗುರುವಾರ  ದಂದು ಸಂಜೆ 7:30 ರಿಂದ ರಾತ್ರಿ  9:00 ರವರಗೆ ಶ್ರೀ.ರಾಹುಲ್ ಶೋಲಾಪುರ್ ಕರ್ ರವರಿಂದ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ಹಾಗೂ ರಾತ್ರಿ 9:00 ರಿಂದ 10.15 ರವರಗೆ ಪುಣೆಯ   ಶ್ರೀಮತಿ.ಶುಭಾಂಗಿ ಮೂಳೆಯವರಿಂದ ಗೀತಬಹಾರ್  ಸಂಗೀತ  ಕಾರ್ಯಕ್ರಮವನ್ನು  ಏರ್ಪಡಿಸಲಾಗಿದೆ.

ಮಹಾಪಾರಾಯಣದ ಏಳನೇ ದಿನವಾದ 21ನೇ ಆಗಸ್ಟ್ 2015, ಶುಕ್ರವಾರ ದಂದು ಸಂಜೆ 5:30 ಕ್ಕೆ ಸುವಾಸಿನಿಯರಿಂದ ಅರಿಶಿನ ಮತ್ತು ಕುಂಕುಮ ಸಾಂಪ್ರದಾಯಿಕ ಕಾರ್ಯಕ್ರಮ ಹಾಗೂ ಸಂಜೆ 7:30 ರಿಂದ ರಾತ್ರಿ 10:15 ರವರಗೆ ದೆಹಲಿಯ ಸದ್ಗುರು ಸಾಯಿನಾಥ ಮಿತ್ರ ಮಂಡಳಿಯ ಶ್ರೀ.ಸುನೀಲ್ ಸರ್ಗಮ್ ರವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  

ಮಹಾಪಾರಾಯಣದ ಎಂಟನೇ ದಿನವಾದ 22ನೇ ಆಗಸ್ಟ್ 2015, ಶನಿವಾರ ದಂದು ಬೆಳಿಗ್ಗೆ 7:00 ರಿಂದ 8:30 ರವರಗೆ ಪುರುಷ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡಿ ಸುಸಂಪನ್ನಗೊಳಿಸುವರು. ಹಾಗೂ 9:30 ಕ್ಕೆ ಮಹಿಳಾ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡಿ ಸುಸಂಪನ್ನಗೊಳಿಸುವರುಮಧ್ಯಾನ್ಹ 3:30 ರಿಂದ ಸಂಜೆ 6:00 ರವರಗೆ ಶ್ರೀ ಸಾಯಿ ಸಚ್ಚರಿತ್ರೆ ಪವಿತ್ರ ಗ್ರಂಥವನ್ನು ಶಿರಡಿ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ರಾತ್ರಿ 7:30 ರಿಂದ 10:15 ರವರಗೆ ಶ್ರೀ.ಮನ್ಹರ್ ಉದಾಸ್ ರವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ

ಮಹಾಪಾರಾಯಣದ ಅಂತಿಮ ದಿನವಾದ 23ನೇ ಆಗಸ್ಟ್ 2015, ಭಾನುವಾರ ದಂದು ಬೆಳಿಗ್ಗೆ  9:30 ರಿಂದ ಮಧ್ಯಾನ್ಹ 12:00 ರವರಗೆ ಪುಣತಾಂಬೆಯ ಮುಕ್ತ ಜ್ಞಾನ ಪೀಠದ ಹರಿ ಭಕ್ತ ಪರಾಯಣರಾದ ಸ್ವಾಮಿ ರಮಾನಂದ ಗಿರಿ ಮಹಾರಾಜ್ ರವರಿಂದ "ಕಲ್ಯಾಚೆ ಕೀರ್ತನೆ" ಕಾರ್ಯಕರ್ಮವನ್ನು ಹಮ್ಮಿಕೊಳ್ಳಲಾಗಿದೆ.  ಮಧ್ಯಾನ್ಹ 12:30 ರಿಂದ ಸಂಜೆ 4:00 ರವರಗೆ ಎಲ್ಲ ಸಾಯಿಭಕ್ತರಿಗೂ "ಮಹಾಪ್ರಸಾದ ಭಂಡಾರ" ವನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ, ಸಂಜೆ 7:30 ರಿಂದ ರಾತ್ರಿ 10:15 ರವರಗೆ ಸಂಗಮನೇರದ ಪ್ರೊ.ಎಸ್.ಜೆಡ್.ದೇಶಮುಖ್ ರವರಿಂದ "ಶಿವ್ ಛತ್ರಪತಿ"  ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ

ಮೇಲಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹನುಮಾನ್ ಮಂದಿರದ ಹತ್ತಿರ ನಿರ್ಮಿಸಲಾಗಿರುವ ಮಹಾ ಪಾರಾಯಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಹಾಗೂ ಶ್ರೀ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಮೂಲಕ ಮನವಿ ಮಾಡಿಕೊಳ್ಳುತ್ತಾರೆ

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 

ಕನ್ನಡಕ್ಕೆ: ಶ್ರೀಕಂಠ ಶರ್ಮ 

Tuesday, August 11, 2015

ಶ್ರೀ ಸಾಯಿಬಾಬಾ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹೆಚ್ಚುವರಿ ಶ್ರೀ ಸಾಯಿ ಸತ್ಯವ್ರತ ಪೂಜೆಗಳ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮುಂಬರುವ ಶ್ರಾವಣ ಮಾಸದಲ್ಲಿ ಶಿರಡಿಗೆ ಹರಿದು ಬರುವ ಭಕ್ತ ಸಾಗರ ಹಾಗೂ ಈ ಪವಿತ್ರ ಮಾಸದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಚರಿಸುವುದಕ್ಕೆ ನೀಡಿರುವ ಹೆಚ್ಚಿನ ಪ್ರಾಶಸ್ತ್ಯವನ್ನು ಮನಗಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 15ನೇ ಆಗಸ್ಟ್ 2015 ರಿಂದ  13ನೇ ಸೆಪ್ಟೆಂಬರ್ 2015 ರವರೆಗೆ ಶ್ರೀ ಸಾಯಿ ಸತ್ಯವ್ರತ ಪೂಜೆಯ ಆರು ತಂಡ (ಬ್ಯಾಚ್) ಗಳನ್ನು ವ್ಯವಸ್ಥೆ ಮಾಡಿದೆ ಎಂದು ಶ್ರೀ ಸಾಯಿಬಾಬಾ  ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 11th August 2015, ಮಂಗಳವಾರ ದಂದು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 


ಸಾಮಾನ್ಯವಾಗಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 8, 9 ರಿಂದ 10 ಮತ್ತು 11 ರಿಂದ 12 ರವರೆಗೆ ಶ್ರೀ ಸಾಯಿ ಸತ್ಯವ್ರತದ ಮೂರು ತಂಡಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.ಆದರೆ ನಮ್ಮ ಸಂಪ್ರದಾಯದ ಪ್ರಕಾರ ಶ್ರಾವಣ ಮಾಸದಲ್ಲಿ ಆಚರಿಸುವ  ಶ್ರೀ ಸಾಯಿ ಸತ್ಯನಾರಾಯಣ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆದ ಕಾರಣ, ಈ ಸಮಯದಲ್ಲಿ ಭಕ್ತರಿಂದ ಶ್ರೀ ಸಾಯಿ ಸತ್ಯವ್ರತದ ಪೂಜೆಯ ಟಿಕೇಟ್ ಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ ಎಂದು ಶ್ರೀ.ರಾಜೇಂದ್ರ ಜಾಧವ್ ತಿಳಿಸಿದರು. 

ಆದುದರಿಂದ, ಭಕ್ತರ ಕೋರಿಕೆಯ ಮೇರೆಗೆ ಶ್ರೀ ಸಾಯಿಬಾಬಾ ಸಂಸ್ಥಾನವು ಈ ವರ್ಷದ ಶ್ರಾವಣ ಮಾಸದಲ್ಲಿ 6 ತಂಡಗಳನ್ನು ಆಯೋಜಿಸಿದ್ದು ಮೊದಲನೇ ತಂಡ ಬೆಳಿಗ್ಗೆ 7 ರಿಂದ 8,  ಎರಡನೇ ತಂಡ  9 ರಿಂದ 10, ಮೂರನೇ ತಂಡ  11 ರಿಂದ 12, ನಾಲ್ಕನೇ ತಂಡ ಮಧ್ಯಾನ್ಹ 1 ರಿಂದ  2, ಐದನೇ ತಂಡ  3 ರಿಂದ 4, ಮತ್ತು ಆರನೇ ತಂಡವನ್ನು ಸಂಜೆ 5 ರಿಂದ 6 ಗಂಟೆಯವರಗೆ ಆಯೋಜಿಸಿದೆ. ಪ್ರತಿಯೊಂದು ತಂಡದಲ್ಲಿ 100 ಜನ ಭಕ್ತರಿಗೆ ಶ್ರೀ ಸಾಯಿ ಸತ್ಯವ್ರತದ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಪೂಜೆಗಳಿಗೆ ಚೀಟಿಯನ್ನು ಒಂದು ದಿನ ಮುಂಚಿತವಾಗಿ ಮಧ್ಯಾನ್ಹ  2 ಗಂಟೆಯಿಂದ ಸಂಸ್ಥಾನದ ಕಚೇರಿಯಲ್ಲಿ ವಿತರಿಸಲಾಗುವುದು. ಪೂಜೆಯ ವೇಳೆಯಲ್ಲಿ ಆಗಿರುವ ಈ ತಾತ್ಕಾಲಿಕ ಬದಲಾವಣೆಗೆ ಸಾಯಿ ಭಕ್ತರು ಸಹಕರಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ

Thursday, August 6, 2015

ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಫಿಜಿಯೋಥಿರೆಪಿ ವಿಭಾಗಗಳ ಕಾರ್ಯಾರಂಭ -ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಫಿಜಿಯೋಥಿರೆಪಿ ವಿಭಾಗಗಳನ್ನು ತೆರೆಯಲಾಗಿದ್ದು, ಹಲವಾರು ರೀತಿಯ ಖಾಯಿಲೆಗಳಿಗೆ ಇಲ್ಲಿನ ಆಯುರ್ವೇದ  ವಿಭಾಗದಲ್ಲಿ ಪಂಚಕರ್ಮ ಚಿಕಿತ್ಸೆಯನ್ನು  ಹಾಗೂ ಫಿಜಿಯೋಥಿರೆಪಿ ವಿಭಾಗದಲ್ಲಿ ದೈಹಿಕ ವ್ಯಾಯಾಮವನ್ನು ನಿಯಮಿತವಾಗಿ ನೀಡಲಾಗುತ್ತಿದೆ ಎಂದು ಶ್ರೀ ಸಾಯಿಬಾಬಾ  ಸಂಸ್ಥಾನದ  ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 4ನೇ ಆಗಸ್ಟ್ 2015, ಮಂಗಳವಾರ ದಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. 

ಶ್ರೀ ಜಾಧವ್ ರವರು ತಮ್ಮ ಮಾತನ್ನು ಮುಂದುವರಿಸುತ್ತಾ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಫಿಜಿಯೋಥಿರೆಪಿ ವಿಭಾಗಗಳು ನಿಯಮಿತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. 

ಫಿಜಿಯೋಥಿರೆಪಿ ವಿಭಾಗದಲ್ಲಿ ಈ ಕೆಳಕಂಡ ಖಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ: 

  1. ಸಂಧಿವಾತ - ಕೀಲುಗಳಲ್ಲಿ ಉರಿಯೂತ, ಸ್ಪಾಂಡಿಲೋಸಿಸ್ (ಕುತ್ತಿಗೆ ಮತ್ತು ಬೆನ್ನೆಲುಬು)
  2. ಘನೀಕೃತ ಭುಜ (ಭುಜವನ್ನು ಅಲುಗಾಡಿಸಲು ಅಸಮರ್ಥತೆ)
  3. ಇಸಿಯಾಲ್ಜಿಯಾ (ಸೊಂಟ ನೋವು) 
  4. ಸ್ನಾಯು ಸೆಳೆತ
  5. ಅಸ್ಥಿರಜ್ಜು ಉಳುಕು 
  6. ಆಟವಾಡುವಾ ಸಂಭವಿಸುವ ಗಾಯಗಳು

ಈ ಕೆಳಕಂಡ ಖಾಯಿಲೆಗಳಿಗೆ ಶಸ್ತ್ರಚಿಕಿತ್ಸಾ ನಂತರದ ಚಿಕಿತ್ಸೆಯನ್ನು ನೀಡಲಾಗುತ್ತದೆ:
  1. ಮೂಳೆ ಮುರಿತಗಳು ಮತ್ತು ಕೀಲು ಬದಲಾವಣೆ
  2. ಸ್ಟ್ರೋಕ್ ಅಥವಾ ಪಾರ್ಶ್ವವಾಯು
  3. ಪಾರ್ಕಿನ್ಸನ್ ಖಾಯಿಲೆ (ಪಾರ್ಕಿನ್ಸನ್ ರೋಗವು ಚಲನೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ)
  4. ಬೆಲ್ಸ್ ಪಾರ್ಶ್ವವಾಯು ಅಥವಾ ಮುಖದ ಮೇಲಿನ ಪಾರ್ಶ್ವವಾಯು (ಮುಖದ ಸ್ನಾಯುಗಳ ಚಲನೆಯ ಮೇಲೆ ಪರಿಣಾಮ)
  5. ಗುಯ್ಲೈನ್ ಬರ್ರೆ ಸಿಂಡ್ರೊಮ್ (ದೇಹದ ನಿರೋಧಕ ವ್ಯವಸ್ಥೆಯು ಬಾಹ್ಯ ನರ ವ್ಯವಸ್ಥೆಯ ದಾಳಿ ಮಾಡುತ್ತವೆ)
  6. ತಲೆ ಅಥವಾ ಬೆನ್ನುಹುರಿ ಗಾಯದ ನಂತರದ ಪುನಶ್ಚೇತನಾ ಚಿಕಿತ್ಸೆ 
ಶಾಖ ತರಂಗ ಚಿಕಿತ್ಸಾ ವಿಧಾನ, ಪ್ಯಾರಾಫಿನ್ ಮೇಣದ ಸ್ನಾನ ಮತ್ತು ಹಾಟ್ ಪ್ಯಾಕ್ ಚಿಕಿತ್ಸೆ, ಡಿಪ್ ಹಿಟ್ ಚಿಕಿತ್ಸೆ, ಸಣ್ಣ ಅಲೆಗಳ ವಿದ್ಯುದುಷ್ಣ ಚಿಕಿತ್ಸೆ, ಹೈಡ್ರೋಥಿರೆಪಿ (ನೀರನ್ನು ಬಳಸಿ ಚಿಕಿತ್ಸೆ ನೀಡುವುದು), ಎಲೆಕ್ಟ್ರೋಥಿರೆಪಿ (ವಿದ್ಯುತ್ ಶಾಕ್ ನೀಡಿ ಚಿಕಿತ್ಸೆ ನೀಡುವುದು), ಅಲ್ಟ್ರಾಸೌಂಡ್ ಮತ್ತು ಐ.ಎಫ್.ಟಿ ಹಾಗೂ ಟ್ರಾಕ್ಷನ್ (ಸಂಕೋಚನ) ಚಿಕಿತ್ಸೆ, ಸ್ನಾಯು ಸಂವೇದಕ ಚಿಕಿತ್ಸೆ, ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ದೈಹಿಕ ವ್ಯಾಯಾಮಗಳು -  ಈ ಚಿಕಿತ್ಸಾ ಕ್ರಮಗಳನ್ನು ಬಳಸಿ ಮೇಲಿನ ಎಲ್ಲಾ ಖಾಯಿಲೆಗಳನ್ನು ಗುಣಪಡಿಸಲಾಗುತ್ತದೆ. 

ಆಯುರ್ವೇದ ವಿಭಾಗದಲ್ಲಿ, ಈ ಕೆಳಕಂಡ ಖಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ:  
  1. ನಿದ್ರಾಹೀನತೆ 
  2. ಮರೆಗುಳಿತನ 
  3. ಕೂದಲು ಉದುರುವಿಕೆ 
  4. ತಲೆ ನೋವು
  5. ಹೃದಯದ ಖಾಯಿಲೆ 
  6. ಬೆನ್ನುಹುರಿಗೆ ಸಂಬಂಧಿಸಿದ ಖಾಯಿಲೆಗಳು
  7. ಕುತ್ತಿಗೆ ನೋವು 
  8. ಬೆನ್ನು ನೋವು 
  9. ಕೀಲು ನೋವು 
  10. ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು 
  11. ಕಣ್ಣಿನ ತೊಂದರೆಗಳು 
  12. ಶೀತ ವೈಪರೀತ್ಯ 
  13. ಮೂಗಿನ ತೊಂದರೆಗಳು 
  14. ಕೆಮ್ಮು ರೋಗ 
  15. ಪಾರ್ಶ್ವವಾಯು 
  16. ಆರ್ಥ್ರಾಲ್ಜಿಯಾ ಮತ್ತು ಚರ್ಮ ರೋಗಗಳು
ಮೇಲಿನ ಈ ಎಲ್ಲಾ ಖಾಯಿಲೆಗಳಿಗೆ ಶಿರೋಧರ (ತಲೆಯ ಮೇಲೆ ಎಣ್ಣೆಯನ್ನು ಸುರಿಯುವಿಕೆ), ಪಂಚಕರ್ಮ ಚಿಕಿತ್ಸೆಗಳಾದ ಬಸ್ತಿ (ಔಷಧೀಯ ಎನಿಮಾ), ನೇತ್ರಾರ್ಪಣ, ನಾಸ್ಯ (ಔಷಧಿಗಳನ್ನು ಮೂಗಿನ ಹೊಳ್ಳೆಗಳ ಮೂಲಕ ನೀಡುವಿಕೆ), ವಾಮನ (ವಾಂತಿಯಾಗುವಂತೆ ಮಾಡುವ ಔಷಧಿಗಳು), ಸ್ವರ್ಗ ಸ್ನೇಹನ  - ಸ್ವೇದನ ಮತ್ತು ರಕ್ತ ಮೋಕ್ಷಣ - ಇವುಗಳನ್ನು ಬಳಸಿ ಚಿಕಿತ್ಸೆ ನೀಡಲಾಗುವುದು.

ಮೇಲಿನ ಎಲ್ಲ ಖಾಯಿಲೆಗಳಿಗೆ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಆಸ್ಪತ್ರೆಯ ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾನ್ಹ 1 ಗಂಟೆಯವರೆಗೆ  ಹಾಗೂ ಪಂಚಕರ್ಮ ಚಿಕಿತ್ಸೆಯನ್ನು ಸಂಜೆ 4 ಗಂಟೆಯಿಂದ 6  ಗಂಟೆಯವರೆಗೆ ನೀಡುತ್ತಾರೆ. ಆದ ಕಾರಣ ಅಗತ್ಯವಿರುವ ರೋಗಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ಶ್ರೀ.ರಾಜೇಂದ್ರ ಜಾಧವ್ ರವರು ಈ ಮೂಲಕ  ಒತ್ತಾಯಿಸಿದ್ದಾರೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ