Friday, July 29, 2011

ಬೆಂಗಳೂರು, ಮೈಸೂರು, ಮತ್ತು ಕೋಲಾರ ಜಿಲ್ಲೆಗಳಲ್ಲಿ ಶಿರಡಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಪೂಜೆ - 19ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ ನೀಡಿದ್ದ ಪವಿತ್ರ ಪಾದುಕೆಗಳನ್ನು ಸಾಯಿಭಕ್ತರ ದರ್ಶನಕ್ಕೊಸ್ಕರ ಬೆಂಗಳೂರು, ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಅನೇಕ ಸಾಯಿಬಾಬಾ ದೇವಸ್ಥಾನ ಹಾಗೂ ಸಾಯಿ ಭಕ್ತರ ಮನೆಗಳಿಗೆ ಇದೇ ತಿಂಗಳ 14ನೇ ಜುಲೈ 2011 ರಿಂದ 19ನೇ ಜುಲೈ 2011 ರ ವರೆಗೆ ತರಲಾಗಿತ್ತು.  ಪವಿತ್ರ ಪಾದುಕೆಗಳನ್ನು ನಿಮೋಣ್ಕರ್ ವಂಶಸ್ಥರಾದ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ (ನಿಮೋಣ್ಕರ್) ರವರು ಶಿರಡಿಯ ಸಮೀಪದ ನಿಮೋಣ್ ಗ್ರಾಮದಿಂದ ತೆಗೆದುಕೊಂಡು ಬಂದಿದ್ದರು. 

ಪಾದುಕೆಗಳನ್ನು ಹೊಂದಿರುವ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ (ನಿಮೋಣ್ಕರ್)

ಸಾವಿರಾರು ಸಾಯಿ ಭಕ್ತರು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಶಿರಡಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ದರ್ಶನವನ್ನು ಪಡೆದರು. 

1. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸಾಯಿಭಕ್ತ ಸುಬ್ರಮಣಿಯವರ  ಮನೆಯಲ್ಲಿ  ಇದೇ ತಿಂಗಳ 14ನೇ ಜುಲೈ 2011 ರಂದು  ಪಾದುಕಾ ಪೂಜೆಯನ್ನು ನಡೆಸಲಾಯಿತು.




2. ಕರ್ನಾಟಕದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಾಯಿಬಾಬಾ ಮಂದಿರದಲ್ಲಿ ಇದೇ ತಿಂಗಳ 16ನೇ ಜುಲೈ 2011 ರಂದು  ಪಾದುಕಾ ಪೂಜೆಯನ್ನು ನಡೆಸಲಾಯಿತು.  ಅದರ ಪತ್ರಿಕಾ ವರದಿ ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ 17ನೇ ಜುಲೈ 2011 ರಂದು ಪ್ರಕಟವಾಯಿತು. ಅಲ್ಲದೆ, ಸ್ಥಳೀಯ ಕೇಬಲ್ ವಾಹಿನಿಯಾದ ಪಲ್ಲವಿ ವಾರ್ತೆಯವರು ಪಾದುಕಾ ಪೂಜೆಯ ದೃಶ್ಯವನ್ನು ಸ್ಥಳೀಯ ಕೇಬಲ್ ಜಾಲದಲ್ಲಿ 16ನೇ ಜುಲೈ 2011 ರಂದು ನೇರಪ್ರಸಾರ ಮಾಡಿದರು.


 ಬಂಗಾರಪೇಟೆಯ ಸಾಯಿಮಂದಿರದ ಪಾದುಕ ಪೂಜೆಯ ವೀಡಿಯೋ (ಕೃಪೆ: ಪಲ್ಲವಿ ವಾರ್ತೆ) 

3.ಮೈಸೂರಿನ ರಾಮಕೃಷ್ಣ ನಗರದ ಸಾಯಿಬಾಬಾ ಮಂದಿರದಲ್ಲಿ ಇದೇ ತಿಂಗಳ 17ನೇ ಜುಲೈ 2011 ರಂದು ಪಾದುಕಾ ಪೂಜೆಯನ್ನು ನಡೆಸಲಾಯಿತು. 







4.ಮೈಸೂರಿನ ಸಾಯಿಭಕ್ತ ಶ್ರೀ.ಶೇಷಾದ್ರಿಯವರ  ಮನೆಯಲ್ಲಿ  ಇದೇ ತಿಂಗಳ 18ನೇ ಜುಲೈ 2011 ರಂದು  ಪಾದುಕಾ ಪೂಜೆಯನ್ನು ನಡೆಸಲಾಯಿತು. ಬೆಳಗಿನ ಕಾಕಡಾ ಆರತಿ ಮತ್ತು ಪಾದುಕೆಗಳಿಗೆ ಅಭಿಷೇಕವನ್ನು ಕೂಡ ಇವರ ಮನೆಯಲ್ಲಿ ನೆರವೇರಿಸಲಾಯಿತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, July 26, 2011

ಪ್ರಖ್ಯಾತ ಸಾಯಿ ಚಿತ್ರಕಾರ ಶ್ರೀ.ಸುನೀಲ್ ಶೇಗಾವಂಕರ್ - ಕೃಪೆ: ಸಾಯಿಅಮೃತಧಾರಾ.ಕಾಂ 


ಶ್ರೀ.ಸುನೀಲ್ ಶೇಗಾವಂಕರ್ ರವರು ಜೀವಂತ ಚಿತ್ರಗಳನ್ನು ಬಿಡಿಸುವುದರಲ್ಲಿ ಅದರಲ್ಲೂ ಶಿರಡಿ ಸಾಯಿಬಾಬಾರವರ ಚಿತ್ರಗಳನ್ನು ಚಿತ್ರಿಸುವುದರಲ್ಲಿ ಸಿದ್ದಹಸ್ತರಾಗಿ ಪ್ರಪಂಚದಾದ್ಯಂತ ಇಂದು "ಸಾಯಿಬಾಬಾರವರಿಂದ ಆಶೀರ್ವದಿಸಲ್ಪಟ್ಟ ಚಿತ್ರಕಾರ" ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಇವರು 30ನೇ ಸೆಪ್ಟೆಂಬರ್ 1964 ರಂದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಉಮ್ರೇದ್ ಗ್ರಾಮದಲ್ಲಿ ಜನಿಸಿರುತ್ತಾರೆ. ಇವರ ತಂದೆ ಶ್ರೀ.ಬಾಬುರಾವ್ ಮತ್ತು ತಾಯಿ ದಿವಂಗತ ಶ್ರೀಮತಿ.ತಾರಾಬಾಯಿ. ಇವರು ಶ್ರೀಮತಿ.ಸುನೀತಾರವರನ್ನು ವಿವಾಹವಾಗಿದ್ದು ಕುಮಾರಿ.ಸುನೀರಾ ಎಂಬ ಮುದ್ದಾದ ಮಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಇವರು ಪುಣೆಯಲ್ಲಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶಿರಡಿ ಸಾಯಿಬಾಬಾರವರ ಚಿತ್ರವನ್ನು ನೈಜವಾಗಿ ಕಾಣುವಂತೆ ಚಿತ್ರಿಸುವುದು ಸುಲುಭದ ಮಾತೇನಲ್ಲ! ಆದರೆ ಸಾಯಿಬಾಬಾರವರ ಆಶೀರ್ವಾದದಿಂದ ಮತ್ತು ಚಿತ್ರಕಲೆಯ ಅನೇಕ ಗುರುಗಳ ಮಾರ್ಗದರ್ಶನದಿಂದ ಹಾಗೂ ಪ್ರಕೃತಿಯ ವೀಕ್ಷಣೆ ಮತ್ತು ತಮ್ಮ ಕಲ್ಪನಾ ಶಕ್ತಿಯ ಸಹಾಯದಿಂದ ಇವರು ಸಾಯಿಬಾಬಾರವರ ಚಿತ್ರಗಳನ್ನು ಜೀವಂತವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇವರ ಚಿತ್ರಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಪಾರಾಯಣ ಹಾಲ್, ಸತ್ಯನಾರಾಯಣ ಪೂಜಾ ಹಾಲ್, ಸಮಾಧಿ ಮಂದಿರ ಮತ್ತು ಪ್ರಸಾದಾಲಯಗಲ್ಲಿ ನಾವುಗಳು ನೋಡಬಹುದಾಗಿದೆ.


ಶಿರಡಿ ಸಾಯಿಬಾಬಾರವರ ಸಾಯಿ ಸಚ್ಚರಿತ್ರೆಯನ್ನು ಆಧರಿಸಿ 51 ಅಧ್ಯಾಯಗಳಲ್ಲಿ ಬರುವ ಒಂದೊಂದು ಘಟನೆಯನ್ನು ಕುರಿತು  ಜೀವಂತ ಚಿತ್ರವನ್ನು ಬಿಡಿಸುವ ಪ್ರಪಂಚದ ಮೊದಲ ಕಲಾವಿದರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸಾಯಿಬಾಬಾರವರೇ ಸ್ವತಃ ತಮ್ಮ ಚಿತ್ರಗಳನ್ನು ತಾವೇ ಬರೆಸಿಕೊಳ್ಳುತ್ತಿದ್ದಾರೆ ಮತ್ತು ಇದರ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಅತ್ಯಂತ ವಿನಯಪೂರ್ವಕವಾಗಿ ಇವರು ಹೇಳುತ್ತಾರೆ. 

ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ಇರುವ ಸಾಯಿಭಕ್ತರ ಸಹಾಯದಿಂದ ಇನ್ನೂ ಹೆಚ್ಚು ಹೆಚ್ಚು ಸಾಯಿಬಾಬಾರವರ ಚಿತ್ರಗಳನ್ನು ರಚಿಸಬೇಕೆಂಬ ಬಯಕೆಯನ್ನು ಇವರು ಹೊಂದಿದ್ದಾರೆ.

ಇವರು ಮಾಡುತ್ತಿರುವ ಎಲ್ಲ ಕೆಲಸಗಳಿಗೆ ತುಂಬು ಹೃದಯದಿಂದ ಪ್ರೋತ್ಸಾಹ ನೀಡುತ್ತಿರುವ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಇವರು ತಮ್ಮ ಕೃತಜ್ಞತೆಯನ್ನು ಹೇಳಲು ಮರೆಯುವುದಿಲ್ಲ.

ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಶ್ರೀ.ಸುನೀಲ್ ಶೇಗಾವಂಕರ್ ರವರ ಚಿತ್ರಗಳನ್ನು ಸ್ವತಃ ನೋಡಿ ಅತ್ಯಂತ ಸಂತೋಷಗೊಂಡಿದ್ದಾರೆ ಮತ್ತು ಮುಕ್ತ ಕಂಠದಿಂದ ಶ್ರೀ.ಸುನೀಲ್ ಶೇಗಾವಂಕರ್ ರವರನ್ನು ಶ್ಲಾಘಿಸಿದ್ದಾರೆ.




ಶ್ರೀ.ಸುನೀಲ್ ಶೇಗಾವಂಕರ್ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 
ಎಸ್.14, ಧ್ರುವದರ್ಶನ್, ಸೆಕ್ಟರ್ 26, ಪ್ರಾಧಿಕರಣ್,ನಿಗಡಿ, ಪುಣೆ-411 044, ಮಹಾರಾಷ್ಟ್ರ, ಭಾರತ.



ದೂರವಾಣಿ ಸಂಖ್ಯೆಗಳು: 
+91-97635 75767 / +91- 93250 96319




ಅಂತರ್ಜಾಲ ತಾಣ: 
http://www.saisart.com


ಕನ್ನಡ ಅನುವಾದ: ಶ್ರೀಕಂಠ ಶರ್ಮ
ನೋಯ್ಡಾದ ಸೇವಾ ಸಂಸ್ಥೆಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ 2 ಆಂಬುಲೆನ್ಸ್ ಗಳ ಕೊಡುಗೆ - 18ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ನೋಯ್ಡಾದ ಸೇವಾ ಸಂಸ್ಥೆಯಾದ ಸದ್ಭಾವನಾ ಸೇವಾ ಸಂಸ್ಥಾನದ ವತಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಇದೇ ತಿಂಗಳ 18ನೇ ಜುಲೈ 2011 ರಂದು 2 ಮಾರುತಿ ಈಕೋ  ಆಂಬುಲೆನ್ಸ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಕಾರ್ಯಕಾರಿ ಅಧಿಕಾರಿ ಡಾ.ಯಶವಂತ್  ರಾವ್ ಮಾನೆಯವರುಗಳು ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬೆಂಗಳೂರಿನಲ್ಲಿ ಗುರುಪೂರ್ಣಿಮಾ ಉತ್ಸವದ ಆಚರಣೆ - ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ  

ತ್ಯಾಗರಾಜನಗರದ ಸಾಯಿ ಆಧ್ಯಾತ್ಮಿಕ ಕೇಂದ್ರದ ವತಿಯಿಂದ 14ನೇ ಜುಲೈ 2011 ಮತ್ತು 15ನೇ ಜುಲೈ 2011 ರಂದು ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲ ದಿನವಾದ 14ನೇ ಜುಲೈ 2011 ರಂದು ವಿವಿಧ ಸಾಯಿ ಭಜನಾ ವೃಂದದವರಿಂದ ಬೆಳಿಗ್ಗೆ 9 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಾರನೆಯ ದಿನವಾದ 15ನೇ ಜುಲೈ 2011 ರಂದು ವ್ಯಾಸ ಪೂಜೆ ಮತ್ತು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. 




ಜಯನಗರದ 4ನೇ ಟಿ ಬ್ಲಾಕ್ ಬಡಾವಣೆಯ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ 14ನೇ ಜುಲೈ 2011 ರಂದು ಸಂಜೆ 6:30 ರಿಂದ 8 :30 ರವರೆಗೆ  ಶ್ರೀಮತಿ.ಸರಸ್ವತಿ ಮತ್ತು ವೃಂದದವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  



ಬೆಂಗಳೂರು ಗ್ರಾಮಾಂತರದ ತೋಕತಿಮ್ಮನದೊಡ್ಡಿಯ ಸಾಯಿಮಂದಿರದ ವತಿಯಿಂದ 15ನೇ ಜುಲೈ 2011 ರಂದು ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಸುತ್ತಮುತ್ತಲ ಹಳ್ಳಿಯ ಸುಮಾರು 25   ಮಹಿಳಾ ಭಜನಾ ವೃಂದದವರಿಂದ ಬೆಳಿಗ್ಗೆ 9 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.


ಶ್ರೀ.ದ್ವಾರಕಾಮಾಯಿ ಸೇವಾ ಟ್ರಸ್ಟ್ (ನೋಂದಣಿ), ರಾಜಾಜಿನಗರದ ವತಿಯಿಂದ 15ನೇ ಜುಲೈ 2011 ರಂದು ರಾಜಾಜಿನಗರದ ರಾಮಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವ ಮತ್ತು ಟ್ರಸ್ಟ್ ನ 3ನೇ ವಾರ್ಷಿಕೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಆ ದಿನ ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ.ವಿನಯ ಚಂದ್ರ ಮೆನನ್ ಮತ್ತು ವೃಂದದವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಜೆ ಸಾಯಿಬಾಬಾರವರ ಹೂವಿನ ಪಲ್ಲಕ್ಕಿಯ ಉತ್ಸವವನ್ನು ರಾಜಾಜಿನಗರದ 3ನೇ ಬ್ಲಾಕ್ ನ ಹಲವು ರಸ್ತೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. 



 ಜರಗನಹಳ್ಳಿಯ ಗಂಗಾಧರೇಶ್ವರ ದೇವಾಲಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ 15ನೇ ಜುಲೈ 2011 ರಂದು ಸಂಜೆ 6 ಘಂಟೆಯಿಂದ ರಾತ್ರಿ 8:30 ರವರೆಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.ದತ್ತಾತ್ರೇಯ, ಸಾಯಿಬಾಬಾ ಮತ್ತು ದಕ್ಷಿಣಾಮುರ್ತಿ ದೇವರುಗಳಿಗೆ ಷೋಡಚೋಪಚಾರ ಪೂಜೆ, ಪಂಚಾಮೃತ ಅಭಿಷೇಕವನ್ನು ಮಾಡಲಾಯಿತು. ನಂತರ "ಸಾಯಿ ರಕ್ಷಾ ಹೋಮ" ವನ್ನು ಆಚರಿಸಿ ನೆರೆದ ಎಲ್ಲ ಸಾಯಿ ಭಕ್ತರಿಗೂ ಪ್ರಸಾದ ವಿನಿಯೋಗವನ್ನು ಮಾಡಲಾಯಿತು. 


 ಜೆ.ಪಿ.ನಗರದ 3ನೇ ಹಂತದಲ್ಲಿರುವ ಸಾಯಿ ಭಕ್ತರಾದ ಶ್ರೀ.ಸಾಯಿ ಮೋಹನ್ ರವರ ಮನೆಯಲ್ಲಿ 15ನೇ ಜುಲೈ 2011 ರಂದು ಗುರುಪೂರ್ಣಿಮೆಯ ಅಂಗವಾಗಿ ಶ್ರೀ.ಗಂಗಾಧರ ತಿಲಕ್, ಶ್ರೀ.ಕಾರ್ತಿಕ್ ಮತ್ತು ಶ್ರೀ.ಶಿವಚರಣ್ ರವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 



ವಸಂತಪುರದ ಸಾಯಿ ಆಧ್ಯಾತ್ಮಿಕ ಕೇಂದ್ರದ ವತಿಯಿಂದ 15ನೇ ಜುಲೈ 2011 ಮತ್ತು 16ನೇ ಜುಲೈ 2011 ರಂದು ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲ ದಿನವಾದ 15ನೇ ಜುಲೈ 2011 ರಂದು ವ್ಯಾಸ ಪೂಜೆ ಮತ್ತು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾರನೆಯ ದಿನವಾದ 16ನೇ ಜುಲೈ 2011 ರಂದು  ವಿವಿಧ ಸಾಯಿ ಭಜನಾ ವೃಂದದವರಿಂದ ಸಂಜೆ 4:30 ರಿಂದ ರಾತ್ರಿ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  

ಶ್ರೀಮತಿ.ಸುವೇದಿತಾ ಶ್ರೀಧರ್ ಮತ್ತು ವೃಂದದವರು, ಶ್ರೀ.ಗಂಗಾಧರ ತಿಲಕ್, ಶ್ರೀ.ಕಾರ್ತಿಕ್ ಮತ್ತು ಶ್ರೀ.ಶಿವಚರಣ್ ಮತ್ತು ಶಂಕರ ಸಾಯಿ ಭಜನ ಮಂಡಳಿಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.




ಕನ್ನಡ ಅನುವಾದ: ಶ್ರೀಕಂಠ ಶರ್ಮ 


ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಗುರುಪೂರ್ಣಿಮೆಯ ಆಚರಣೆ -  14ನೇ ಜುಲೈ 2011 ಇಂದ 16ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ ತಿಂಗಳ  14ನೇ ಜುಲೈ 2011 ರಿಂದ 16ನೇ ಜುಲೈ 2011 ರ ವರೆಗೆ ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 

ಗುರುಪೂರ್ಣಿಮೆ ಉತ್ಸವದ ಮೊದಲ ದಿನವಾದ 14ನೇ ಜುಲೈ 2011 ರಂದು ಸಾಯಿ ಸಚ್ಚರಿತ್ರೆ, ವೀಣೆ ಮತ್ತು ಸಾಯಿಬಾಬಾರವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಉಪ ಕಾರ್ಯಕಾರಿ ಅಧಿಕಾರಿಯಾದ ಡಾ.ಯಶವಂತ್ ರಾವ್ ಮಾನೆ ಮತ್ತು ನೂರಾರು ಸಾಯಿಭಕ್ತರು ಭಾಗವಹಿಸಿದ್ದರು. 


ಗುರುಪೂರ್ಣಿಮೆ ಉತ್ಸವದ ಮೊದಲ ದಿನವಾದ 14ನೇ ಜುಲೈ 2011 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆಯವರು ದ್ವಾರಕಾಮಾಯಿಯಲ್ಲಿ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಪ್ರಾರಂಭಿಸಿದರು. 



ಗುರುಪೂರ್ಣಿಮೆ ಉತ್ಸವದ ಮೊದಲ ದಿನವಾದ 14ನೇ ಜುಲೈ 2011 ರಂದು ಪುಣೆಯ ಸಾಯಿಭಕ್ತರಾದ ಶ್ರೀ.ಸುನೀಲ್ ನಹಾರ್ ರವರು 4675 ಗ್ರಾಂ ತೂಕದ 2,14,676 ರುಪಾಯಿಗಳ ಬೆಳ್ಳಿಯ ಕಿರೀಟವನ್ನು ಸಾಯಿಬಾಬಾರವರ ಚರಣ ಕಮಲಗಳಿಗೆ ಅರ್ಪಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಉಪಸ್ಥಿತರಿದ್ದರು. 




ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು ಸಾಯಿ ಸಚ್ಚರಿತ್ರೆ ಪಾರಾಯಣ ಮುಕ್ತಾಯದ ಅಂಗವಾಗಿ ಸಾಯಿ ಸಚ್ಚರಿತ್ರೆ, ವೀಣೆ ಮತ್ತು ಸಾಯಿಬಾಬಾರವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಶ್ರೀ.ಪಾಂಡುರಂಗ ಅಭಂಗ್, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ನೂರಾರು ಸಾಯಿಭಕ್ತರು ಭಾಗವಹಿಸಿದ್ದರು. 


ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು ವಿಜಯವಾಡದ ಸಾಯಿ ಭಕ್ತರಾದ ಶ್ರೀ.ಎನ್.ಎಂ.ರೆಡ್ಡಿಯವರು 1250 ಗ್ರಾಂ ತೂಕದ 26,47,500 ರುಪಾಯಿ ಬೆಲೆಬಾಳುವ ಚಿನ್ನದ ಶೇಷನಾಗನನ್ನು ಸಾಯಿಬಾಬಾರವರ ಚರಣ ಕಮಲಗಳಿಗೆ ಅರ್ಪಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಉಪಸ್ಥಿತರಿದ್ದರು. 


ಗುರುಪೂರ್ಣಿಮೆ ಉತ್ಸವದ ಅಂಗವಾಗಿ ಶಿರಡಿಗೆ ಸಾವಿರಾರು ಜನ ಸಾಯಿಭಕ್ತರು ಆಗಮಿಸಿದ್ದರು. 



ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು ಸಾಯಿಬಾಬಾರವರ ದರ್ಶನಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ವಿಧಾನಸಭಾ ಅಧ್ಯಕ್ಷ ಶ್ರೀ.ದಿಲೀಪ್ ವಾಲಸೆ ಪಾಟೀಲ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷರಾದ ಶ್ರೀ.ಶಂಕರ ರಾವ್ ಕೊಹ್ಲೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಬಾಳಾಸಾಹೇಬ್ ವಿಕ್ಹೇ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. 


ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು "ಸಾಯಿ ಟೆಕ್ ಪಾರ್ಕ್" ನ ಉದ್ಘಾಟನೆಯನ್ನು  ಮಹಾರಾಷ್ಟ್ರ ವಿಧಾನಸಭಾ ಅಧ್ಯಕ್ಷ ಶ್ರೀ.ದಿಲೀಪ್ ವಾಲಸೆ ಪಾಟೀಲ್ ರವರು ನೆರವೇರಿಸಿದರು.  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಉಪಾಧ್ಯಕ್ಷರಾದ ಶ್ರೀ.ಶಂಕರ ರಾವ್ ಕೊಹ್ಲೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಪಾಂಡುರಂಗ ಅಭಂಗ್, ಶ್ರೀ.ಕೃಷ್ಣಚಂದ್ರ ಪಾಂಡೆ ಮತ್ತಿತರ ಸಾಯಿಭಕ್ತರು ಉಪಸ್ಥಿತರಿದ್ದರು. 



 
ಗುರುಪೂರ್ಣಿಮೆ ಉತ್ಸವದ ಅಂಗವಾಗಿ ಶಿರಡಿಯ ಸಮಾಧಿ ಮಂದಿರವನ್ನು ವಿವಿಧ ಬಗೆಯ ಹೂವುಗಳಿಂದ ಬಹಳ ಸುಂದರವಾಗಿ ಬೆಂಗಳೂರಿನ ಸಾಯಿ ಭಕ್ತರು ಮತ್ತು ಹೂವಿನ ವ್ಯಾಪಾರಿಯಾದ ಶ್ರೀ.ಕೆ.ಸುಬ್ರಮಣಿ ರಾಜುರವರು ಶೃಂಗರಿಸಿದ್ದರು. 



ಕನ್ನಡ ಅನುವಾದ:ಶ್ರೀಕಂಠ ಶರ್ಮ 

ಬೆಂಗಳೂರಿನಲ್ಲಿ ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ಪ್ರದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ 

ಬೆಂಗಳೂರಿನ ಕೋರಮಂಗಲದಲ್ಲಿರುವ ಶಿರಡಿ ಸಾಯಿ ಪರಿವಾರ್ ಟ್ರಸ್ಟ್ (ನೋಂದಣಿ) ಯ ವತಿಯಿಂದ ಇದೇ ತಿಂಗಳ 31ನೇ ಜುಲೈ 2011, ಭಾನುವಾರದಂದು ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ಪ್ರದರ್ಶನವನ್ನು  ಏರ್ಪಡಿಸಲಾಗಿದೆ. ಶಿರಡಿಯ ಬಳಿಯ ಶ್ರೀರಾಮಪುರದ ಖ್ಯಾತ ನಾಟಕಕಾರರಾದ ಶ್ರೀ.ಬಬ್ಲು ದುಗ್ಗಲ್ ಮತ್ತು ತಂಡದವರು ಈ ನಾಟಕವನ್ನು ನಡೆಸಿಕೊಡಲಿದ್ದಾರೆ. 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗ್ಗತಿಸಲಾಗಿದೆ. 


ಈ ನಾಟಕಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಮತ್ತು ನಾಟಕದ ಕೊನೆಯಲ್ಲಿ ಸಾಯಿ ಮಹಾಪ್ರಸಾದದ ವ್ಯವಸ್ಥೆ ಕೂಡ ಇರುತ್ತದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಸುಂದರ ನಾಟಕವನ್ನು ವೀಕ್ಷಿಸಬೇಕೆಂದು ಈ ಮುಖಾಂತರ ಟ್ರಸ್ಟ್ ನ ಪದಾಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಮಹಾರಾಷ್ಟ್ರ ಸಚಿವರಿಬ್ಬರ ಶಿರಡಿ ಭೇಟಿ - 9ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರದ ಕೈಗಾರಿಕೆ, ಬಂದರು, ಉದ್ಯೋಗ ಮತ್ತು ಸ್ವಯಂ ಉದ್ಯೋಗ ಸಚಿವರಾದ ಶ್ರೀ.ನಾರಾಯಣ ರಾಣೆಯವರು ಇದೇ ತಿಂಗಳ 9ನೇ ಜುಲೈ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 


ಮಹಾರಾಷ್ಟ್ರದ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ.ಹರ್ಷವರ್ಧನ ಪಾಟೀಲ್ ಇದೇ ತಿಂಗಳ 9ನೇ ಜುಲೈ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸಾಯಿಬಾಬಾರವರ ವಿಗ್ರಹವನ್ನು ನೀಡುವ ಮುಖಾಂತರ ಸನ್ಮಾನಿಸಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, July 23, 2011

ಕೇಂದ್ರ ಪ್ರವಾಸೋದ್ಯಮ ಸಚಿವರ ಶಿರಡಿ ಭೇಟಿ - 22ನೇ ಜುಲೈ 2011  - ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ.ಸುಭೋದ್ ಕಾಂತ್ ಸಹಾಯ್ ರವರು ಇದೇ ತಿಂಗಳ 22ನೇ ಜುಲೈ 2011  ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶ್ರೀ.ಕೃಷ್ಣಚಂದ್ರ ದೇಶಪಾಂಡೆಯವರು ಸಾಯಿಬಾಬಾ ವಿಗ್ರಹವನ್ನು ನೀಡುವ ಮುಖಾಂತರ ಸನ್ಮಾನಿಸಿದರು.





ಕನ್ನಡ ಅನುವಾದ:ಶ್ರೀಕಂಠ ಶರ್ಮ

Wednesday, July 6, 2011

ಶ್ರೀ ಶಿರಡಿ ಸಾಯಿ ಮಂದಿರ ಹೊಸಕೋಟೆಯ ವತಿಯಿಂದ ಗುರುಪೂರ್ಣಿಮೆ ಉತ್ಸವ - 6ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ ಶಿರಡಿ ಸಾಯಿ ಮಂದಿರ ಹೊಸಕೋಟೆಯು ಗುರುಪೂರ್ಣಿಮಾ ಉತ್ಸವವನ್ನು ಇದೇ ತಿಂಗಳ  15ನೇ ಜುಲೈ 2011, ಶುಕ್ರವಾರದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. 

ಆಮಂತ್ರಣ ಪತ್ರವನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ. 


ಹೆಚ್ಚಿನ ವಿವರಗಳಿಗಾಗಿ ಸಾಯಿಭಕ್ತರು ಶ್ರೀ.ಸಾಯಿ ರಮೇಶ್ ರವರನ್ನು ದೂರವಾಣಿ ಸಂಖ್ಯೆ 99002 15194 ರಲ್ಲಿ ಸಂಪರ್ಕಿಸಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, July 5, 2011

ಪ್ರಪಂಚದ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರ - ಭಿವಪುರಿ  ಶ್ರೀ ಸಾಯಿನಾಥ ಮಂದಿರ - ಕೃಪೆ: ಸಾಯಿ ಅಮೃತಧಾರಾ .ಕಾಂ  

ಭಿವಪುರಿಯು ಹಿಂದಿನ ಕುಲಬ ಮತ್ತು ಈಗಿನ ರಾಯಘಡ ಜಿಲ್ಲೆಯಲ್ಲಿರುವ ಅತ್ಯಂತ ಸಣ್ಣ ಗ್ರಾಮವಾಗಿರುತ್ತದೆ. ಭಿವಪುರಿ ರಸ್ತೆಯು ಮುಂಬೈ-ಪುಣೆ ರೈಲು ಮಾರ್ಗದಲ್ಲಿ ಸಿಗುವ ಒಂದು ರೈಲ್ವೇ ನಿಲ್ದಾಣವಾಗಿದ್ದು ಈ ನಿಲ್ದಾಣವು ಖರ್ಜತ್ ರೈಲ್ವೇ ನಿಲ್ದಾಣ ಮತ್ತು ನೆರಾಲ್ ರೈಲ್ವೇ ನಿಲ್ದಾಣದ ನಡುವೆ ಇರುತ್ತದೆ. ಭಿವಪುರಿ ಶ್ರೀ ಸಾಯಿನಾಥ ಮಂದಿರವು ಭಿವಪುರಿ ರಸ್ತೆ ರೈಲು ನಿಲ್ದಾಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುತ್ತದೆ ಮತ್ತು ಕರ್ಜತ್ ರೈಲ್ವೇ ನಿಲ್ದಾಣದಿಂದ 13 ಕಿಲೋಮೀಟರ್ ದೂರದಲ್ಲಿರುತ್ತದೆ.


ಮುಂಬೈನಿಂದ ಪುಣೆಗೆ ಹೋಗುವ ಮಧ್ಯ ರೈಲ್ವೇ ಮಾರ್ಗದಲ್ಲಿ ಭಿವಪುರಿ ರಸ್ತೆ ಎಂಬ ರೈಲ್ವೇ ನಿಲ್ದಾಣವು ಖರಟ್ ಗಿಂದ ಮುಂಚಿತವಾಗಿ ಸಿಗುವ ಒಂದು ರೈಲು ನಿಲ್ದಾಣವಾಗಿರುತ್ತದೆ. ಈ ರೈಲ್ವೇ ನಿಲ್ದಾಣದಲ್ಲಿ ಇಳಿದು ಪೂರ್ವಕ್ಕೆ ತಿರುಗಿ ನೋಡಿದರೆ ನಿಮಗೆ ಭಿವಪುರಿ ಶ್ರೀ ಸಾಯಿನಾಥ ಮಂದಿರದ ರಾಜಗೋಪುರ ಕಣ್ಣಿಗೆ ಕಾಣುತ್ತದೆ. ಈ ದೇವಾಲಯ ತಲುಪಲು ಹೊಲಗಳ ಮಧ್ಯೆ ಹಾದು ಹೋಗಬೇಕಾಗಿದ್ದು ಕೇವಲ ಐದರಿಂದ ಏಳು ನಿಮಿಷಗಳಲ್ಲಿ ದೇವಾಲಯವನ್ನು ಸೇರಬಹುದು. 



ಈ ದೇವಾಲಯವನ್ನು 1916 ನೇ ಇಸವಿಯಲ್ಲಿ ಸಾಯಿಬಾಬಾರವರು ಜೀವಂತವಾಗಿ ಇದ್ದಾಗ ಅವರ ಆದೇಶದಂತೆ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರು ನಿರ್ಮಿಸಿರುತ್ತಾರೆ. ಆದುದರಿಂದ ಈ ಮಂದಿರವು ಪ್ರಪಂಚದ ಪ್ರಪ್ರಥಮ ಸಾಯಿಬಾಬಾ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಆದುದರಿಂದ ಭಿವಪುರಿಯು ಪ್ರಪಂಚದ ಪ್ರತಿಯೊಬ್ಬ ಸಾಯಿಭಕ್ತರೂ ಕೂಡ ನೋಡಲೇಬೇಕಾದ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುತ್ತದೆ. ಈ ದೇವಾಲಯದ ಇತಿಹಾಸವು ಬಹಳ ಸ್ವಾರಸ್ಯಕರವಾಗಿದ್ದು ಇದನ್ನು ಸಾಯಿಭಕ್ತರು ತಿಳಿದುಕೊಂಡರೆ ಹೇಗೆ ಶಿರಡಿ ಸಾಯಿಬಾಬಾರವರು ತಮ್ಮ ಭಕ್ತರ ಮನವನ್ನು ಪರಿವರ್ತನೆ ಮಾಡಿ ಅವರಲ್ಲಿ ಭಕ್ತಿಯನ್ನು ತುಂಬುತ್ತಿದ್ದರು ಎಂದು ಅರ್ಥವಾಗುತ್ತದೆ.   

ಶ್ರೀ.ಕೇಶವ ರಾವ್ ಪ್ರಧಾನ್ ರವರು ಭಿವಪುರಿ ಗ್ರಾಮದವರು. ಈ ಗ್ರಾಮದಲ್ಲಿ ಇವರು ಒಂದು ಮನೆ ಮತ್ತು ಸ್ವಲ್ಪ ಜಮೀನನ್ನು ಹೊಂದಿದ್ದರು. ಅಲ್ಲದೆ, ತಮ್ಮ ದಿನ ನಿತ್ಯದ ಜೀವನಕ್ಕಾಗಿ ಇವರು ಒಂದು ಹಣಕಾಸು ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರ ಮನೆಯು ಇವರ ಜಮೀನಿನ ಪಕ್ಕದಲ್ಲೇ ಇದ್ದು ಗ್ರಾಮದ ಹೊರಗಡೆ ನಿರ್ಜನ ಪ್ರದೇಶದಲ್ಲಿ ಇತ್ತು. ಇವರಿದ್ದ ಜಾಗವು ಬಹಳ ಪ್ರಶಾಂತವಾಗಿದ್ದು ಮನೆಯ ಸುತ್ತಲೂ ಸುಂದರ ಹೂವುಗಳಿಂದ ಕೂಡಿದ ತೋಟವನ್ನು ಕಾಣಬಹುದಾಗಿತ್ತು. ಇವರಿದ್ದ ಮನೆಯ ಪಕ್ಕದಲ್ಲಿ ಒಂದು ಸಾಯಿಬಾಬಾ ಮಂದಿರವನ್ನು ಬಹಳ ವರ್ಷಗಳಾದ ಮೇಲೆ ಕಟ್ಟಲಾಗಿದೆ. ಅಲ್ಲದೆ, ತುಳಸಿ ಬೃಂದಾವನ, ಒಂದು ಬಾವಿ ಮತ್ತು ಅನೇಕ ಹಳೆಯದಾದ ಮರಗಳನ್ನು ಕೂಡ ನಾವು ನೋಡಬಹುದು. ಮನೆಯ ಪಕ್ಕದಲ್ಲಿದ್ದ ಹೂತೋಟದಲ್ಲಿ ಒಂದು ಹಳೆಯದಾದ ಆಲದ ಮರ, ಒಂದು ಅರಳಿ ಮರ, ಎರಡು ಬೇವಿನ ಮರಗಳು ಮತ್ತು ಒಂದು ಔದುಂಬರ ವೃಕ್ಷವನ್ನು ಕಾಣಬಹುದಾಗಿತ್ತು. 


ಪ್ರಧಾನ್ ರವರು ಸಾಯಿಬಾಬಾರವರನ್ನು ಭೇಟಿಯಾಗುವುದಕ್ಕೆ ಮೊದಲು ಅವರಿಗೆ ಸಾಧು ಸಂತರೆಂದರೆ ಬಹಳ ಅಗೌರವ ಇತ್ತು. ಒಮ್ಮೆ ಇವರ ಸ್ನೇಹಿತರು ಶಿರಡಿಗೆ ತಮ್ಮ ಮನೆಯವರೊಂದಿಗೆ ಹೋಗುತ್ತಿದ್ದರು. ಅವರು ಪ್ರಧಾನ್ ರವರನ್ನು ತಮ್ಮೊಡನೆ ಬರುವಂತೆ ಬಹಳ ಸಲ ಒತ್ತಾಯ ಮಾಡಿದರು. ಮೊದಲು ಪ್ರಧಾನ್ ಶಿರಡಿಗೆ ಹೋಗಲು ಒಪ್ಪಲಿಲ್ಲ. ಆದರೆ, ಬಹಳ ಸಲ ಒತ್ತಾಯ ಮಾಡಿದ ಮೇಲೆ ಪ್ರಧಾನ್ ಒಂದು ಶರತ್ತಿನ ಮೇಲೆ ಶಿರಡಿಗೆ ಹೋಗಲು ಒಪ್ಪಿದರು. ಅದೇನೆಂದರೆ, ತಾನು ಸಾಯಿಬಾಬಾರವರಿಗೆ ತಲೆ ಬಾಗುವುದಿಲ್ಲ ಮತ್ತು ಅವರ ಪಾದ ತೀರ್ಥವನ್ನು ತೆಗೆದುಕೊಳ್ಳುವುದಿಲ್ಲ ಎಂಬುದಾಗಿತ್ತು. ಪ್ರಧಾನ್ ರವರ ಸ್ನೇಹಿತರು ಅದಕ್ಕೆ ಒಪ್ಪಿದರು. ಅವರು ಮತ್ತು ಅವರ ಸ್ನೇಹಿತರ ಮನೆಯವರೆಲ್ಲ ಶಿರಡಿಗೆ ಹೋದರು.ಶಿರಡಿ ತಲುಪಿ ಸಾಯಿಬಾಬಾರವರ ದರ್ಶನ ಪಡೆಯಲು ದ್ವಾರಕಾಮಾಯಿಗೆ ತೆರಳಿದರು. ದ್ವಾರಕಾಮಾಯಿಯಲ್ಲಿ ಬಹಳ ಜನ ಭಕ್ತರು ನೆರೆದಿದ್ದು ಸಭಾಮಂಟಪವು ತುಂಬಿ ಹೋಗಿತ್ತು. ಆದುದರಿಂದ ಪ್ರಧಾನ್ ರವರು ಒಂದು ಕಡೆ ತುದಿಯಲ್ಲಿ ತಮ್ಮ ಪಾಡಿಗೆ ತಾವು ಎಲ್ಲವನ್ನು ನೋಡುತ್ತಾ ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಜನಜಂಗುಳಿ ಕಡಿಮೆಯಾಗಿ ದ್ವಾರಕಾಮಾಯಿ ಖಾಲಿಯಾಯಿತು. ಪ್ರಧಾನ್ ರವರ ಸ್ನೇಹಿತರು ಬಾಬಾರವರ ಬಳಿಗೆ ಹೋಗಿ ಅವರಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಿದ್ದರು. ಆಗ ಸಾಯಿಬಾಬಾರವರು ಪ್ರಧಾನ್ ರವರ ಕಡೆ ತಮ್ಮ ಕೈಯನ್ನು ತೋರಿಸುತ್ತಾ "ಆ ಬೇಜವಾಬ್ದಾರಿತನದ  ಮತ್ತು ತೆಗಳುವ ವ್ಯಕ್ತಿಯನ್ನು ಇಲ್ಲಿಗೆ ಕರೆದು ತಾ" ಎಂದು ಆಜ್ಞಾಪಿಸಿದರು. ಪ್ರಧಾನ್ ರವರ ಸ್ನೇಹಿತರು ಅವರನ್ನು ಸಾಯಿಬಾಬಾರವರ ಬಳಿಗೆ ಕರೆದುಕೊಂಡು ಬಂದರು. ಸಾಯಿಬಾಬಾರವರು ಪ್ರಧಾನ್ ರವರಿಗೆ ಬಯ್ಗುಳಗಳ ಮಳೆಯನ್ನು ಸುರಿಸುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಶಾಂತರಾದ ಸಾಯಿಬಾಬಾರವರು ಸಾಧು ಸಂತರಿಗೆ ನಿಂದನೆ ಮಾಡುವದು ತಪ್ಪು ಎಂಬ ಮನವರಿಕೆಯನ್ನು ಪ್ರಧಾನ್ ರವರಿಗೆ ಮಾಡಿಕೊಟ್ಟರು ಮತ್ತು ತಮ್ಮ ಬುದ್ಧಿಯನ್ನು ತಿದ್ದಿಕೊಳ್ಳಲು ಸಲಹೆಯನ್ನು ನೀಡಿದರು. ಸಾಯಿಬಾಬಾರವರು ಪ್ರಧಾನ್ ರವರಿಗೆ ಬುದ್ಧಿವಾದ ಹೇಳುತ್ತಿದ್ದಾಗ ಪ್ರಧಾನ್ ರವರಿಗೆ ಸಾಯಿಬಾಬಾರವರ ಅಂತರ್ಯಾಮಿತ್ವ ಮತ್ತು ತಮ್ಮ ಮನದಲ್ಲಿ ಬಾಬಾರವರ ಬಗ್ಗೆ ಹಾಗೂ ಇತರ ಸಾಧು ಸಂತರ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯಗಳ ಬಗ್ಗೆ ಇದ್ದ ಜ್ಞಾನದ ಅರಿವಾಯಿತು. ಆ ಕೊಡಲೇ ಪ್ರಧಾನ್ ರವರಿಗೆ ಸಾಧು ಸಂತರ ಬಗ್ಗೆ ಇದ್ದ ಅಗೌರವ ಮಾಯವಾಯಿತು. ಆ ಕ್ಷಣದಿಂದಲೇ ಪ್ರಧಾನ್ ರವರು ಸಾಯಿಬಾಬಾರವರ ಅನನ್ಯ ಭಕ್ತರಾದರು. 

ದಿನ ಕಳೆದಂತೆ, ಸಾಯಿಬಾಬಾರವರ ದಯೆಯಿಂದ ಪ್ರಧಾನ್ ರವರ ಹಣಕಾಸು ಪರಿಸ್ಥಿತಿ ಸುಧಾರಿಸಿ ಅವರು ಮನಶ್ಯಾಂತಿ ಹೊಂದಿದರು. ಅಂದಿನಿಂದ ಪ್ರಧಾನ್ ರವರು ಆಗಾಗ್ಗೆ ಶಿರಡಿಗೆ ಹೋಗಿ ಬರಲು ಪ್ರಾರಂಭಿಸಿದರು ಮತ್ತು ಪ್ರತಿ ಸಲ ಶಿರಡಿಗೆ ಹೋದಾಗಲೂ ಸಾಯಿಬಾಬಾರವರನ್ನು ಭಿವಪುರಿಗೆ ಬರಲು ಒತ್ತಾಯ ಮಾಡುತ್ತಿದ್ದರು. ಕಟ್ಟ ಕಡೆಗೆ ಒಮ್ಮೆ ಸಾಯಿಬಾಬಾರವರು ತಮ್ಮ ಒಪ್ಪಿಗೆ ಸೂಚಿಸಿ "ನಾನು ಭಿವಪುರಿಗೆ ಖಂಡಿತವಾಗಿ ಬರುವೆ" ಎಂದು ವಚನ ನೀಡಿದರು. ಆದರೆ, ಪ್ರಧಾನ್ ರವರು ಅಷ್ಟಕ್ಕೇ ಸುಮ್ಮನಾಗದೆ ಪದೇ ಪದೇ ಸಾಯಿಬಾಬಾರವರನ್ನು "ನೀವು ಯಾವಾಗ ಭಿವಪುರಿಗೆ ಬರುವಿರಿ" ಎಂದು ಕೇಳಲು ಪ್ರಾರಂಭಿಸಿದರು.  ಕಡೆಗೆ  ಪ್ರಧಾನ್ ರವರು ಒಮ್ಮೆ ಶಿರಡಿಗೆ ಭೇಟಿ ನೀಡಿದಾಗ ಅವರಿಗೆ ತಮ್ಮ ಒಂದು ಚಿತ್ರಪಟವನ್ನು ನೀಡಿ "ಕೇಳು, ಈ ಚಿತ್ರಪಟವನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯಲ್ಲಿ ಇದು. ಈ ಚಿತ್ರಪಟವೇ ನಾನೆಂದು ತಿಳಿದು ಪೂಜಿಸು.ಇನ್ನು ಎಂದಿಗೂ ನೀನು ಶಿರಡಿಗೆ ಕಾಲಿಡಬೇಡ" ಎಂದು ಹೇಳಿದರು. ಪ್ರಧಾನ್ ರವರು ಚಿತ್ರಪಟವನ್ನು ತೆಗೆದುಕೊಂಡು ಹೋದರು. ಆದರೆ, ಅವರು ಸಾಯಿಬಾಬಾ ಸುಮ್ಮನೆ ಹಾಸ್ಯ ಮಾಡುತ್ತಿದ್ದಾರೆ ಎಂದು ಭಾವಿಸಿದರು. ಪುನಃ ಮತ್ತೊಮ್ಮೆ ಶಿರಡಿಗೆ ಬಂದರು. ಪ್ರಧಾನ್ ರವರು ದ್ವಾರಕಾಮಾಯಿ ಪ್ರವೇಶ ಮಾಡುತ್ತಿದ್ದಂತೆ ಸಾಯಿಬಾಬಾರವರು "ನಾನು ನಿನ್ನ ಮನೆಯಲ್ಲೇ ಇದ್ದೇನೆ. ಶಿರಡಿಗೆ ಮತ್ತೆ ಕಾಲಿಡಬೇಡ. ಭಿವಪುರಿಗೆ ವಾಪಸ್ ಹೋಗು. ಅಲ್ಲಿ ಒಂದು ಮಂದಿರವನ್ನು ನಿರ್ಮಾಣ ಮಾಡು. ಆ ಮಂದಿರದಲ್ಲಿ ನಾನು ನಿನಗೆ ನೀಡಿದ ಚಿತ್ರಪಟವನ್ನು ಪ್ರತಿಷ್ಠಾಪಿಸು. ಆ ಸ್ಥಳದಲ್ಲೇ ಎಲ್ಲ ಉತ್ಸವಗಳನ್ನು ಆಚರಿಸು. ಪುನಃ ಶಿರಡಿಗೆ ಬರಬೇಡ. ಏಕೆಂದರೆ ಭಿವಪುರಿಯೇ ನಿನ್ನ ಶಿರಡಿಯಾಗಿರುತ್ತದೆ. ಈ ಕೊಡಲೇ ಇಲ್ಲಿಂದ ಹೊರಟುಹೋಗು. ನಿನ್ನ ಮನೆಯನ್ನು ಸೇರಿಕೋ" ಎಂದರು. ಹೀಗೆ, ಸಾಯಿಬಾಬಾರವರ ಆಜ್ಞೆಯ ಮೇರೆಗೆ ಪ್ರಧಾನ್ ರವರು ಶಿರಡಿಗೆ ಹೋಗುವುದನ್ನು ನಿಲ್ಲಿಸಿದರು. 



ಪ್ರಧಾನ್ ರವರು ತಮ್ಮ ಮನೆಯ ಪಕ್ಕದಲ್ಲಿ ಒಂದು ಸಣ್ಣ ಮಂದಿರವನ್ನು ನಿರ್ಮಿಸಿದರು. ಒಂದು ದಿನ ಮಧ್ಯರಾತ್ರಿಯ ಸಮಯದಲ್ಲಿ ದೇವಾಲಯದ ಬಾಗಿಲು ತೆರೆದ ಶಬ್ದ ಕೇಳಿಸಿತು. ಅವರು ಮತ್ತು ಅವರ ಮನೆಯವರೆಲ್ಲಾ ಏನಾಯಿತೆಂದು ನೋಡಲು ಹೋದರು. ಅಲ್ಲಿ ನಡೆದ ದೃಶ್ಯ ಕಂಡು ಮನೆಯವರಿಗೆಲ್ಲ ಆಶ್ಚರ್ಯವಾಯಿತು. ಸಾಯಿಬಾಬಾರವರು ದೇವಾಲಯದ ಒಳಗಡೆ ಹೋಗಿ ತಮ್ಮ ಹಿಂದೆಯೇ ಬಾಗಿಲನ್ನು ಹಾಕಿಕೊಂಡರು. ಮತ್ತೆ 3 ಘಂಟೆಗೆ ದೇವಾಲಯದ ಬಾಗಿಲು ತೆರೆಯಿತು. ಬಾಬಾರವರು ತಾವು ಬಂದಂತೆಯೇ ಹಿಂತಿರುಗಿ ಹೋದರು. ಪ್ರಧಾನ್ ಓಡಿಹೋಗಿ ನಡೆದ ವಿಷಯವನ್ನು ಗ್ರಾಮದ ಅನೇಕ ಸ್ನೇಹಿತರಿಗೆ ಮತ್ತು ತಮ್ಮ ಬಂಧುಗಳಿಗೆ ತಿಳಿಸಿದರು. ಅವರುಗಳೂ ಕೂಡ ಬಂದು ಈ ವಿಸ್ಮಯಕಾರಿ ದೃಶ್ಯವನ್ನು ನೋಡಿ ಅಚ್ಚರಿಗೊಂಡರು. 



ಒಮ್ಮೆ ಪ್ರಧಾನ್ ತಮ್ಮ ಜೀವನದಲ್ಲಿ ಒಂದು ದೊಡ್ಡ ತೊಂದರೆಗೆ ಸಿಕ್ಕಿಹಾಕಿಕೊಂಡರು. ಏನು ಮಾಡಿದರೂ ಕೂಡ ಆ ತೊಂದರೆ ನಿವಾರಣೆ ಆಗುವ ಮಾರ್ಗ ಕಾಣಲಿಲ್ಲ. ಆ ಸಮಯದಲ್ಲಿ ಸಾಯಿಬಾಬಾರವರು ಪ್ರಧಾನ್ ರವರಿಗೆ ದರ್ಶನ ನೀಡಿ ಅವರ ಬೆನ್ನು ತಟ್ಟಿ "ಹೆದರಬೇಡ, ನಾನು ನಿನ್ನನ್ನು ರಕ್ಷಿಸಲು ಇಲ್ಲೇ ಇದ್ದೇನೆ" ಎಂದು ಅಭಯ ನೀಡಿದರು. ಪ್ರಧಾನ್ ರವರು ಬಾಬಾ ತಮಗೆ ಸಾಕ್ಷಾತ್ಕಾರ ನೀಡಿದ ಸ್ಥಳವನ್ನು ಪವಿತ್ರವೆಂದು ತೀರ್ಮಾನಿಸಿ ಆ ಸ್ಥಳದಲ್ಲಿ ಯಾರು ಓಡಾಡಲು ಬಿಡುತ್ತಿರಲಿಲ್ಲ. ಆದುದರಿಂದ ಆ ಸ್ಥಳದ ಪವಿತ್ರತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆ ಸ್ಥಳದಲ್ಲಿ ಒಂದು ಪವಿತ್ರ ತುಳಸಿ ಬೃಂದಾವನವನ್ನು ಪ್ರತಿಷ್ಟಾಪಿಸಿದರು. 



ಭಿವಪುರಿಯ ಸಾಯಿಬಾಬಾ ಮಂದಿರದ ಉಸ್ತುವಾರಿಯನ್ನು ನೋಡಿಕೊಳ್ಳಲು ಒಂದು ಟ್ರಸ್ಟ್ ನಿರ್ಮಾಣಗೊಂಡಿದೆ. ಈ ಟ್ರಸ್ಟ್ ಇತ್ತೀಚಿಗೆ ಹಳೆಯ ಮಂದಿರವನ್ನು ಕೆಡವಿ ಆ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿತು.

ಭಿವಪುರಿಯಲ್ಲಿ ದೇವ್ ಬಾಬಾ ರವರ ಶ್ರೀ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣ: 

ಶಿರಡಿ ಸಾಯಿಬಾಬಾ ಮತ್ತು ದೇವ್ ಬಾಬಾ ರವರ ಸಂಬಂಧ ಬಹಳ ಆಳವಾಗಿತ್ತು. ದೇವ್ ಬಾಬಾ ಆಗಾಗ್ಗೆ ಭಿವಪುರಿಗೆ ಹೋಗಿ ಅಲ್ಲಿ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣವನ್ನು ಮಾಡುತ್ತಿದ್ದರು. ಒಮ್ಮೆ ಇವರು ತಮ್ಮ ಅಖಂಡ ಪಾರಾಯಣವನ್ನು ಸರಿಯಾಗಿ 11 ಘಂಟೆಗೆ ಪೂರ್ಣಗೊಳಿಸಿದರು. ಗ್ರಾಮದ ಜನರಿಗೆ ಆ ದಿನ ಪಾರಾಯಣದ ಕಡೆಯ ದಿನವೆಂದು ತಿಳಿದಿತ್ತು. ಆದುದರಿಂದ ಹಳ್ಳಿಯ ಜನರೆಲ್ಲಾ ಪ್ರಸಾದ ಸಿಗುವುದೆಂದು ದೇವಾಲಯದಲ್ಲಿ ನೆರೆದಿದ್ದರು. ಸಾಯಿ ಸಚ್ಚರಿತೆ ಪಾರಾಯಣದ ಕೊನೆಯಲ್ಲಿ ಈ ರೀತಿ ಪ್ರಸಾದ ವಿತರಣೆ ಮಾಡುವ ವಾಡಿಕೆ ಮತ್ತು ಸಂಪ್ರದಾಯವಿರುತ್ತದೆ. 

ಮಧ್ಯಾನ್ಹ 12 ಘಂಟೆಗೆ ಸರಿಯಾಗಿ ಆರತಿಯಾಯಿತು. ಹಳ್ಳಿಯ ಜನರೆಲ್ಲಾ ಆರತಿಗೆ ಸೇರಿದ್ದರು. ಆರತಿ ಹಾಡುವುದರಲ್ಲಿ ಸಂಪೂರ್ಣ ಮಗ್ನರಾಗಿದ್ದರೂ ಕೂಡ ದೇವ್ ಬಾಬಾ ರವರಿಗೆ ತಮ್ಮ ಪಕ್ಕದಲ್ಲಿ ಏನೋ ಒಂದು ರೀತಿಯ ಆಧ್ಯಾತ್ಮಿಕ ಅನುಭೂತಿಯಾಯಿತು. ದೇವ್ ಬಾಬಾ ತಮ್ಮ ಕಣ್ಣುಗಳನ್ನು ತೆರೆದು ತಮ್ಮ ಸುತ್ತಲೂ ನೋಡಿದರು. ಇವರ ಪಕ್ಕದಲ್ಲಿ ಒಬ್ಬ ಎತ್ತರದ ಮನುಷ್ಯ ನಿಂತಿದ್ದನು. ಅವನು ಕುರಿ ಕಾಯುವವನಂತೆ ಕಂಡನು ಮತ್ತು ಗ್ರಾಮದ ಎಲ್ಲ ಜನರಿಗಿಂತ ಭಿನ್ನವಾಗಿ ಕಂಡನು. ಆ ಸಮಯದಲ್ಲಿ ಮಂತ್ರ ಪುಷ್ಪಾಂಜಲಿ (ದೇವರಿಗೆ ಹೂಗಳನ್ನು ಸಮರ್ಪಣೆ ಮಾಡುವ ಕಾರ್ಯಕ್ರಮ) ಮುಗಿಯಿತು. ದೇವಾಲಯದಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಪುಷ್ಪಗಳನ್ನು ವಿಗ್ರಹಕ್ಕೆ ಅರ್ಪಿಸಲು ಮುಂದೆ ತೆರಳಿದರು. ಆದರೆ, ಆ ಕುರಿ ಕಾಯುವವ ಮುಂದೆ ಹೋಗದೆ ತಾನು ನಿಂತ ಸ್ಥಳದಲ್ಲೇ ನಿಂತು ತಾನು ಕೈನಲ್ಲಿ ಹಿಡಿದಿದ್ದ ಹೂಗಳು ತನ್ನ ಪಾದದ ಮೇಲೆ ಬೀಳುವ ಹಾಗೆ ಮಾಡಿದನು. ಕೂಡಲೇ, ದೇವ್ ಬಾಬಾ ರವರಿಗೆ ತಮ್ಮನ್ನು ಹರಸಲು ಸಾಯಿಬಾಬಾರವರೇ  ಕುರಿ ಕಾಯುವವನ ವೇಷದಲ್ಲಿ ಬಂದಿರುವರೆಂದು ತಿಳಿಯಿತು. ಒಂದು ಕ್ಷಣವೂ ತಡ ಮಾಡದೆ ದೇವ್ ಬಾಬಾ ಆ ಕುರಿ ಕಾಯುವವನಿಗೆ ತಮ್ಮ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದರು. 

ಶ್ರೀ ಸಾಯಿನಾಥ ಮಂದಿರ ಟ್ರಸ್ಟ್, ಭಿವಪುರಿಯ ಬಗ್ಗೆ ವಿವರಗಳು: 

ದೇವಾಲಯದ ಸುತ್ತಮುತ್ತಲಿನ ಪರಿಸರ ಅತ್ಯಂತ ರಮಣೀಯವಾಗಿದೆ. ದೇವಾಲಯದ ಸುತ್ತಲೂ ದೊಡ್ಡ ದೊಡ್ಡ ಮರಗಳಿವೆ. ರಾತ್ರಿಯ ವೇಳೆ ದೇವಾಲಯದ ಹತ್ತಿರ ಸ್ವಲ್ಪವೂ ಕೂಡ ಸದ್ದು ಗದ್ದಲಗಳಿಲ್ಲದೆ ಪ್ರಶಾಂತ ವಾತಾವರಣವಿರುತ್ತದೆ. ದೇವಾಲಯ ನಿರ್ಮಾಣವಾದ ನಂತರ ಪ್ರತಿದಿನ ಮಧ್ಯರಾತ್ರಿ ದೇವಾಲಯದ ಬಾಗಿಲು ತೆರೆದ ಸದ್ದು ಕೇಳಿಬರುತ್ತಿತ್ತು ಮತ್ತು ಸಾಯಿಬಾಬಾರವರು ದೇವಾಲಯದ ಸುತ್ತಲೂ ಓಡಾಡುವಂತೆ ಕಾಣಿಸುತ್ತಿತ್ತು. ಕೆಲವೊಮ್ಮೆ ದೇವಾಲಯದ ಹತ್ತಿರ ಇದ್ದ ಮರದ ಬುಡದಲ್ಲಿ ಸಾಯಿಬಾಬಾರವರು ಕುಳಿತು ಆಯಾಸ ಪರಿಹಾರ ಮಾಡಿಕೊಳ್ಳುವಂತೆ ಕಾಣಿಸುತ್ತಿತ್ತು. ಪ್ರತಿದಿನ 3 ಘಂಟೆಯ ವೇಳೆಗೆ ದೇವಾಲಯದ ಬಾಗಿಲು ಹಾಕಿದ ಸದ್ದು ಕೇಳಿಬರುತ್ತಿತ್ತು. ಈ ದೃಶ್ಯವನ್ನು ಪ್ರಧಾನ್ ಮತ್ತು ಅವರ ಮನೆಯವರು ಮಾತ್ರವಲ್ಲದೆ ಗ್ರಾಮದ ಅನೇಕ ಜನರು ತಮ್ಮ ಕಣ್ಣಾರೆ ಕಂಡಿರುತ್ತಾರೆ. ಆ ಘಟನೆಯಾದ ಬಳಿಕ ಪ್ರಧಾನ್ ರವರ ಎಲ್ಲ ಅನುಮಾನಗಳೂ ದೂರವಾಗಿ ಅವರು ಸಾಯಿಬಾಬಾರವರ ಅನನ್ಯ ಭಕ್ತರಾದರು. ಸಾವಿರಾರು ರುಪಾಯಿಗಳನ್ನು ಖರ್ಚು  ಮಾಡಿ ಪ್ರಧಾನ್ ರವರು ಸುಂದರವಾದ ಸಾಯಿಬಾಬಾ ಮಂದಿರ, ಒಂದು ದೊಡ್ಡ ಹಾಲ್, ಒಂದು ವರಾಂಡಾ ಮತ್ತು ಅತಿಥಿ ಗೃಹವನ್ನು ನಿರ್ಮಿಸಿರುತ್ತಾರೆ. 

ಶ್ರೀ ಸಾಯಿಬಾಬಾರವರು 1918 ರಲ್ಲಿ ಸಮಾಧಿ ಹೊಂದಿದರು. ಆದರೆ, ಪ್ರಧಾನ್ ರವರು ತಮ್ಮ ಸಾಯಿ ಪೂಜೆಯನ್ನು ಅಷ್ಟೇ ಶ್ರದ್ಧಾ ಭಕ್ತಿಗಳಿಂದ ಮುಂದುವರಿಸಿದರು. 1924 ರಲ್ಲಿ ಪ್ರಧಾನ್ ರವರ ಮಗಳನ್ನು ಮುಂಬೈ ದಾದರ್ ನ ಶ್ರೀ.ಎ.ವಿ.ಗುಪ್ತೆ ಎಂಬುವರಿಗೆ ಕೊಟ್ಟು ವಿವಾಹ ಮಾಡಲಾಯಿತು. ಗುಪ್ತೆಯವರು ಕೂಡ ಬಹಳ ಒಳ್ಳೆಯ ಮನಸ್ಸಿನವರಾದುದರಿಂದ ಅವರು ಕೂಡ ಭಿವಪುರಿಯ ದೇವಾಲಯದ ಎಲ್ಲ ಸಮಾರಂಭಗಳಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ಅನೇಕ ಸ್ನೇಹಿತರಿಗೂ ಕೂಡ ಭಿವಪುರಿಗೆ ಬಂದು ಬಾಬಾರವರ ದರ್ಶನ ಮಾಡಿಕೊಂಡು ಹೋಗಲು ಪ್ರೇರೇಪಿಸುತ್ತಿದ್ದರು. ಆ ಕಾರಣದಿಂದ ಭಿವಪುರಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು. 

ಶ್ರೀ.ಗುಪ್ತೆ ಪ್ರಥಮ ಬಾರಿಗೆ 1936 ರಲ್ಲಿ ಶಿರಡಿಗೆ ಭೇಟಿ ನೀಡಿದರು. ಅಲ್ಲಿನ ಸಮಾಧಿ ಮಂದಿರವನ್ನು ನೋಡಿ ಭಿವಪುರಿಯಲ್ಲಿ ಕೂಡ ಅದೇ ರೀತಿಯ ಸಮಾಧಿ ಮಂದಿರ ನಿರ್ಮಾಣವಾಗಬೇಕೆಂದು ಸಾಯಿಬಾಬಾರವರನ್ನು ಮನಸಾರೆ ಪ್ರಾರ್ಥಿಸಿದರು. ಸಾಯಿಬಾಬಾರವರು ತಮ್ಮ ಭಕ್ತರ ಕೋರಿಕೆಗಳನ್ನು ಕೂಡಲೇ ನೆರವೇರಿಸುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಂತೆ, ಸಾಯಿಬಾಬಾರವರು ಗುಪ್ತೆಯವರ ಈ ಕೋರಿಕೆಯನ್ನು ಕೂಡಲೇ ನೆರವೇರಿಸಿದರು.  ಆ ಕ್ಷಣದಿಂದಲೇ ಭಿವಪುರಿಯ ಸಾಯಿನಾಥ ಮಂದಿರವು ಹೆಚ್ಚು ಹೆಚ್ಚು  ಪ್ರಸಿದ್ದಿಯನ್ನು ಪಡೆಯಲು ಪ್ರಾರಂಭಿಸಿತು.
ಶ್ರೀ.ಪ್ರಧಾನ್ ರವರು 1939 ರಲ್ಲಿ ಸ್ವರ್ಗಸ್ಥರಾದರು. ಆಗಿನಿಂದ ದೇವಾಲಯದ ಉಸ್ತುವಾರಿಯ ಹೊಣೆ ಪ್ರಧಾನ್ ರವರ ಮಗ ಮತ್ತು ಅಳಿಯನ ಮೇಲೆ ಬಿದ್ದಿತು. ದೇವಾಲಯದ ಮೇಲ್ವಿಚಾರಣೆಗಾಗಿ ಅದೇ ವರ್ಷ "ಶ್ರೀ ಸದ್ಗುರು ಸಾಯಿನಾಥ ಸೇವಾ ಸಂಸ್ಥಾ" ಎಂಬ ಟ್ರಸ್ಟ್ ನ್ನು ಪ್ರಾರಂಭಿಸಿ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳಲು 7 ಜನ ಟ್ರಸ್ಟಿಗಳನ್ನು ನೇಮಕ ಮಾಡಲಾಯಿತು. 

ದಿನೇ ದಿನೇ ಹೆಚ್ಚು ಹೆಚ್ಚು ಸಾಯಿ ಭಕ್ತರು ದೇವಾಲಯಕ್ಕೆ ದರ್ಶನ ಪಡೆಯಲು ಬರಲಾರಂಭಿಸಿದರು. ಇದರಿಂದ ದೇವಾಲಯದಲ್ಲಿ ಸ್ಥಳಾವಕಾಶವಿಲ್ಲದೆ ಹೋಯಿತು. ಆದುದರಿಂದ ದೇವಾಲಯವನ್ನು ಪುನರ್ ನಿರ್ಮಾಣ ಮತ್ತು ಅಗಲೀಕರಣ ಮಾಡುವ ಕಾರ್ಯ ಪ್ರಾರಂಭಿಸಲಾಯಿತು. ದೇವಾಲಯದ ಗೋಡೆ ಕಟ್ಟುವ ಕಾರ್ಯ ಪೂರ್ಣಗೊಂಡಿತಾದರೂ ಹಣದ ಅಭಾವದಿಂದ ಮೇಲ್ಚಾವಣಿಯ ಕೆಲಸ ನಿಂತು ಹೋಯಿತು. ಆಗ ಶ್ರೀ.ನಾರಾಯಣ ಪುರೋಹಿತ್ ಎನ್ನುವ ಸಾಯಿಭಕ್ತರು ಆ ಸಂಕಷ್ಟದಿಂದ ಹೊರಗೆ ಬರಲು ಸಾಯಿ ಸಚ್ಚರಿತೆಯ ಪಾರಾಯಣವನ್ನು ಪ್ರಾರಂಭಿಸಿದರು. ಪಾರಾಯಣ ಆರಂಭಿಸಿದ ನಾಲ್ಕನೇ ದಿನ ಸಾಯಿಬಾಬಾರವರು ಶ್ರೀ.ನಾರಾಯಣ ಪುರೋಹಿತ್ ರವರ ಕನಸಿನಲ್ಲಿ ದರ್ಶನ ನೀಡಿ "ನನ್ನ ಧುನಿ ಎಲ್ಲಿ? ಧುನಿಯು ಇಲ್ಲದಿದ್ದರೆ ಈ ಸ್ಥಳವು ಹೇಗೆ ಶಿರಡಿಯಾಗುತ್ತದೆ? ದೇವಾಲಯದ ಕೆಲಸ ಹೇಗೆ ಪೂರ್ಣವಾಗುತ್ತದೆ?" ಎಂದು ಕೇಳಿದರು. ಈ ಕನಸು ಪ್ರತಿದಿನ ಪುನರಾವರ್ತನೆಯಾಗುತ್ತಿದ್ದರಿಂದ ಶ್ರೀ.ನಾರಾಯಣ ಪುರೋಹಿತ್ ತಮ್ಮ ಕನಸನ್ನು ಶ್ರೀ.ಗುಪ್ತೆಯವರಿಗೆ ತಿಳಿಸಿದರು. ಗುಪ್ತೆಯವರು ಈ ವಿಷಯವನ್ನು ಇತರ ಟ್ರಸ್ಟಿಗಳೊಂದಿಗೆ ಸಮಾಲೋಚಿಸಿ ದೇವಾಲಯದಲ್ಲಿ ಧುನಿಯನ್ನು ಪ್ರಾರಂಭಿಸಲು ತೀರ್ಮಾನಿಸಿದರು. ಧುನಿಗೆ ಒಂದು ಸ್ಥಳವನ್ನು ತೀರ್ಮಾನಿಸಿ ದೇವಾಲಯದ ಕಾರ್ಯ ಮುಂದುವರಿಸಲಾಯಿತು. ಧುನಿಯನ್ನು ಸಾಯಿ ಸಚ್ಚರಿತೆಯ ಲೇಖಕರಾದ ಶ್ರೀ.ಹೇಮಾಡಪಂತರ ಮೊಮ್ಮಗನಾದ ಶ್ರೀ.ಎ.ಆರ್.ವಳವಾಲ್ಕರ್ ರವರು 7ನೇ ಏಪ್ರಿಲ್ 1949 ರ ಪವಿತ್ರ ಶ್ರೀರಾಮನವಮಿಯ ದಿನ ಬೆಳಿಗ್ಗೆ 10 ಘಂಟೆಗೆ ವಿಧ್ಯುಕ್ತವಾಗಿ ಉದ್ಘಾಟಿಸಿದರು. 

ಸಾಯಿ ಭಕ್ತರಾದ ಶ್ರೀ.ಕುಮರೇಶನ್ ಸಮರ್ಥ ಎಂಬುವರು ಮೇಲ್ಛಾವಣಿಯ ಮತ್ತು ಧುನಿಯ ಸುತ್ತಾ ನಿರ್ಮಿಸಬೇಕಿದ್ದ ಕಟ್ಟಡಗಳ ಎಲ್ಲ ಖರ್ಚನ್ನು ವಹಿಸಿಕೊಂಡರು. ಶಿರಡಿಯ ದ್ವಾರಕಾಮಾಯಿಯಲ್ಲಿನ ಧುನಿಯಂತೆ ಈ ಧುನಿಯು ಕೂಡ ನಿರಂತರವಾಗಿ ಪ್ರಜ್ವಲಿಸುತ್ತಿದೆ. ವರ್ಷ ಪೂರ್ತಿ ಅನೇಕ ವಿಶೇಷ ಉತ್ಸವದ ದಿನಗಳನ್ನು ಆಚರಿಸಲಾಗುತ್ತಿದೆ. ಶ್ರೀರಾಮನವಮಿ ಮತ್ತು ಸಾಯಿಬಾಬಾರವರ ಸಮಾಧಿ ದಿವಸವನ್ನು ಮತ್ತಷ್ಟು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶ್ರೀ ಸಾಯಿ ಲೀಲಾ ಮಾಸ ಪತ್ರಿಕೆಯ ಮಾಜಿ ಸಂಪಾದಕರಾದ ದಿವಂಗತ ಪ್ರೊಫೆಸ್ಸರ್ ಶ್ರೀ.ಡಿ.ಡಿ.ಪರ್ಚೂರೆಯವರು ಈ ಎರಡೂ ಉತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಾಯಿಬಾಬಾರವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದ ಕೀರ್ತನೆಯನ್ನು ಮಾಡುತ್ತಿದ್ದರು. 

ಅನೇಕ ಪ್ರಸಿದ್ದ ಸಾಯಿಭಕ್ತರು ಈ ದೇವಾಲಯವನ್ನು ಸಂದರ್ಶಿಸಿ ಧನ ಸಹಾಯವನ್ನು ಮಾಡುತ್ತಿದ್ದಾರೆ. ದೇವಾಲಯದ ಟ್ರಸ್ಟಿಗಳು ಹಣ ಸಹಾಯವನ್ನು ಮಾಡಿದ ಈ ಎಲ್ಲ ದಾನಿಗಳಿಗೆ ಅತ್ಯಂತ ಋಣಿಯಾಗಿದ್ದಾರೆ. ಈ ಮೇಲೆ ತಿಳಿಸಿದ ಸಾಯಿಬಾಬಾರವರ ಮಾಡಿದ ವಿಶೇಷ ಲೀಲೆಯಿಂದ ಈ ಸ್ಥಳವು ಪ್ರತಿ ವರ್ಷ ಹೆಚ್ಚು ಹೆಚ್ಚು ಸಾಯಿ ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ ಮತ್ತು ಒಮ್ಮೆ ಬಂದ ಸಾಯಿ ಭಕ್ತ ಮತ್ತೆ ಮತ್ತೆ ಈ ಸ್ಥಳಕ್ಕೆ ಬರುವ ಹಾಗೆ ಮಾಡುತ್ತಿದೆ. 

ದೇವಾಲಯದ ವಿಶೇಷತೆಗಳು: 

ದೇವಾಲಯದ ಗರ್ಭಗುಡಿಯಲ್ಲಿ ಶಿರಡಿ ಸಾಯಿಬಾಬಾರವರು 1916ನೇ ಇಸವಿಯಲ್ಲಿ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರಿಗೆ ನೀಡಿದ ಚಿತ್ರಪಟವನ್ನು ನೋಡಬಹುದು. ದಿನನಿತ್ಯ ಈ ಚಿತ್ರಪಟಕ್ಕೆ ಸ್ಟೀಲ್ ಫ್ರೇಮನ್ನು ಹೊದಿಸಲಾಗುತ್ತದೆ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಬೆಳ್ಳಿಯ ಫ್ರೇಮ್ ನ್ನು ಹೊದಿಸಲಾಗುತ್ತದೆ.

ಗಣೇಶ, ಕಪ್ಪು ಶಿಲೆಯ ಶಿವಲಿಂಗ, ಬೆಳ್ಳಿಯ ಲಕ್ಷ್ಮಿ ನಾಣ್ಯವನ್ನು ಸಾಯಿಬಾಬಾರವರ ಚಿತ್ರಪಟದ ಮುಂಭಾಗದಲ್ಲಿ ನೋಡಬಹುದು.

ಸಾಯಿಬಾಬಾರವರ ಚಿತ್ರಪಟದ ಎರಡೂ ಬದಿಗಳಲ್ಲಿ ನಿರಂತರ ಪ್ರಜ್ವಲಿಸುವ ಎರಡು ನಂದಾದೀಪಗಳನ್ನು ನೋಡಬಹುದು.


ದತ್ತಾತ್ರೇಯ ದೇವರ ಅತ್ಯಂತ ಪುರಾತನ ಮತ್ತು ಅಪರೂಪದ ಚಿತ್ರಪಟ ಮತ್ತು ಅದರ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ.



ವಿಠಲ, ದ್ವಾರಕಾಮಾಯಿ ಬಾಬಾ, ಭಿಕ್ಷೆಗೆ ಹೋಗುತ್ತಿರುವ ಬಾಬಾ, ಸ್ವಾಮಿ ಸಮರ್ಥ, ಸಂತ ಜ್ಞಾನೇಶ್ವರ, ಕೇಶವ ರಾಮಚಂದ್ರ ಪ್ರಧಾನ್ ರವರುಗಳ ಚಿತ್ರಪಟ ಮತ್ತು ಹೊಸದಾಗಿ ನಿರ್ಮಿಸಬೇಕೆಂದುಕೊಂಡಿರುವ ಸಾಯಿಬಾಬಾ ಮಂದಿರದ ನಕಾಶೆಯನ್ನು ಗರ್ಭಗುಡಿಯ ಹೊರಭಾಗದ ಗೋಡೆಯ ಮೇಲೆ ಕಾಣಬಹುದು.





ಸಾಯಿಬಾಬಾ ಮಂದಿರದ ಹೊರಗಡೆಯಲ್ಲಿ ಗರ್ಭಗುಡಿಗೆ ಎದುರಾಗಿ ಇರುವಂತೆ ಪವಿತ್ರ ಧುನಿಯನ್ನು ನಿರ್ಮಿಸಲಾಗಿದೆ. ಧುನಿಯ ಒಳಭಾಗದ ಗೋಡೆಯ ಮೇಲೆ ಹನುಮಂತನ ಕಪ್ಪು ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ.




ದೇವಾಲಯದ ಎಡಭಾಗದಲ್ಲಿ ತುಳಸಿ ಬೃಂದಾವನವನ್ನು ಸ್ಥಾಪಿಸಲಾಗಿದೆ. ಈ ಸ್ಥಳದಲ್ಲಿ ಸಾಯಿಬಾಬಾರವರು ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರಿಗೆ ದರ್ಶನ ನೀಡಿದರೆಂದು ತಿಳಿದುಬಂದಿದೆ.

ತುಳಸಿ ಬೃಂದಾವನದ ಪಕ್ಕದಲ್ಲಿ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರ ಮೊಮ್ಮಗನಾದ ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ ರವರು ಮತ್ತು ಅವರ ಮನೆಯವರು ವಾಸಿಸುತ್ತಿರುವ ಅನುವಂಶಿಕವಾಗಿ ಬಳುವಳಿಯಾಗಿ ಬಂದಿರುವ ಮನೆಯನ್ನು ನೋಡಬಹುದು.

ದೇವಾಲಯದ ಆವರಣದಲ್ಲಿ ಮತ್ತು ಲೇಂಡಿ ಉದ್ಯಾನವನದ ಎದುರುಗಡೆ ಇರುವಂತೆ ಒಂದು ಪವಿತ್ರ ಅರಳಿ ಮರವನ್ನು ನೋಡಬಹುದು.


ದೇವಾಲಯದ ಎದುರುಗಡೆ ಇರುವ ಸ್ಥಳದಲ್ಲಿ ಅತ್ಯಂತ ಸುಂದರವಾದ ಲೇಂಡಿ ಉದ್ಯಾನವನವಿದ್ದು ಈ ಸ್ಥಳವನ್ನು ದೇವಾಲಯದ ಟ್ರಸ್ಟ್ ನವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.



ದೇವಾಲಯವು ಬೆಳಿಗ್ಗೆ 5:30 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8 ಘಂಟೆಗೆ ಶೇಜಾರತಿಯ ನಂತರ ಮುಚ್ಚುತ್ತದೆ.

ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ - ಬೆಳಿಗ್ಗೆ 5:30 ಕ್ಕೆ
ಮಧ್ಯಾನ್ಹ ಆರತಿ - ಮಧ್ಯಾನ್ಹ 12:30 ಕ್ಕೆ
ಶೇಜಾರತಿ - ರಾತ್ರಿ 7:30 ಕ್ಕೆ 

ಪ್ರತಿದಿನ ಬೆಳಿಗ್ಗೆ  ಕಾಕಡಾ ಆರತಿಯ ನಂತರ ೬:೩೦ ಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 11 ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1.ಗುರುಪೂರ್ಣಿಮೆ. 
2.ಶ್ರೀರಾಮನವಮಿ. 
3. ಗೋಕುಲಾಷ್ಟಮಿ. 
4. ವಿಜಯದಶಮಿ. 
5. ದೀಪಾವಳಿ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಭಿವಪುರಿ ರಸ್ತೆ ರೈಲು ನಿಲ್ದಾಣದ ಬಳಿ. 

ವಿಳಾಸ: 
ಶ್ರೀ ಸಾಯಿನಾಥ ಮಂದಿರ (ಭಿವಪುರಿ ರಸ್ತೆ) ಟ್ರಸ್ಟ್ (ನೋಂದಣಿ), 
ನೋಂದಣಿ ಸಂಖ್ಯೆ: ಎ-2024 (ಮುಂಬೈ), 
ಭಿವಪುರಿ ರಸ್ತೆ, ಉಕ್ರೂಲ್ ಗ್ರಾಮ, 
ಚಿಂಚವಾಲಿ ಅಂಚೆ-410 201, 
ಖರ್ಜತ್ ತಾಲ್ಲೂಕ್, ರಾಯಘಡ ಜಿಲ್ಲೆ, 
ಮಹಾರಾಷ್ಟ್ರ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ / ಶ್ರೀ.ಯೋಗೇಶ್ ಪ್ರಧಾನ್ / ಶ್ರೀ.ಮಾರುತಿ ರಾಜಾರಾಂ ಪಂಡಿತ್ ಜಿ. 

ದೂರವಾಣಿ ಸಂಖ್ಯೆಗಳು: 
+91 93722 18558 / +91 74981 62002 / +91 93714 94766 

ಮಾರ್ಗಸೂಚಿ: 
ಭಿವಪುರಿ ಶ್ರೀ ಸಾಯಿನಾಥ ಮಂದಿರವು ಭಿವಪುರಿ ರಸ್ತೆ ರೈಲು ನಿಲ್ದಾಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುತ್ತದೆ ಮತ್ತು ಕರ್ಜತ್ ರೈಲ್ವೇ ನಿಲ್ದಾಣದಿಂದ 13 ಕಿಲೋಮೀಟರ್ ದೂರದಲ್ಲಿರುತ್ತದೆ.ಕರ್ಜತ್ ರೈಲು ನಿಲ್ದಾಣದಿಂದ ಆಟೋ ಸೌಲಭ್ಯವಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ