Tuesday, February 22, 2022

ಉಧಿಯ ಮಹತ್ವ (ಪವಿತ್ರ ಭಸ್ಮ)

ಪವಿತ್ರ ಬೂದಿಯನ್ನು "ಭಸ್ಮ" ಅಥವಾ "ವಿಭೂತಿ" ಎಂದು ಭಾರತದಲ್ಲಿ ಕರೆಯಲಾಗುತ್ತದೆ. ಈ ಜಗತ್ತು ಸೇರಿದಂತೆ ಈ ಜೀವನದಲ್ಲಿ ಎಲ್ಲವೂ ಅಶಾಶ್ವತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಎಲ್ಲವೂ ನಾಶವಾದ ನಂತರವೂ ನಾಶವಾಗದೆ ಉಳಿಯುವುದರಿಂದ ಭಸ್ಮವನ್ನು “ಶೇಷ” ಎಂದು ಸಹ ಕರೆಯುತ್ತಾರೆ. ಬ್ರಹ್ಮಾಂಡದ ವಿಸರ್ಜನೆಯ ಹೊರತಾಗಿಯೂ ನಾಶವಾಗದೇ ಉಳಿಯುವ ಏಕೈಕ ತತ್ವ ಪರಮಾತ್ಮ ಮಾತ್ರ. ಆದ್ದರಿಂದ, ಭಸ್ಮವು ಸಾಂಕೇತಿಕವಾಗಿ ಆ ಶಾಶ್ವತ ತತ್ವವಾದ ಪರಬ್ರಹ್ಮ ತತ್ವವನ್ನು ಪ್ರತಿನಿಧಿಸುತ್ತದೆ.

ಭಸ್ಮವು ಭಗವಾನ್ ಶಿವನ ಆಭರಣವಾಗಿದ್ದು ಅವನು ಅದನ್ನು ತನ್ನ ದೇಹದ ಮೇಲೆ ಧರಿಸುವ ಮೂಲಕ ನಾಶವಾಗುವ ಈ ಮರ್ತ್ಯ ಲೋಕದ ನಶ್ವರತೆಯನ್ನು ಜಗತ್ತಿಗೆ ತೋರಿಸುತ್ತಿದ್ದಾನೆ.  ಯಾರು ಪರಮಾತ್ಮನ ಮೇಲೆ ಅತ್ಯಂತ ಪೂಜ್ಯ ಭಾವನೆಯಿಂದ ವಿಭೂತಿಯನ್ನು ಧಾರಣೆ ಮಾಡಿಕೊಳ್ಳುತ್ತಾನೋ,  ಅಂತಹ ವ್ಯಕ್ತಿಗೆ ವಿವೇಕ (ತಾರತಮ್ಯ) ಮತ್ತು ವೈರಾಗ್ಯವನ್ನು (ನಿರಾಸಕ್ತಿ) ದಯಪಾಲಿಸಿ  ಅಂತಿಮವಾಗಿ ಮೋಕ್ಷಕ್ಕೆ (ಅಂತಿಮ ಹಂತ) ಕಾರಣವಾಗುವ ಶಕ್ತಿ ಇದಾಗಿರುತ್ತದೆ. ಭಸ್ಮದ (ಭಸ್ಮ ಮಾಹಾತ್ಮ್ಯ) ಶ್ರೇಷ್ಠತೆಯನ್ನು ವಿವರಿಸುವುದು ನಮ್ಮ ವ್ಯಾಪ್ತಿಗೆ ಮೀರಿದ ಕೆಲಸವಾಗಿರುತ್ತದೆ.

"ಉಧಿ" ಎಂಬುದು ಮರಾಠಿ ಆಡುಭಾಷೆಯ ಪದವಾಗಿದ್ದು ವಿಭೂತಿ ಅಥವಾ ಭಸ್ಮ ಎಂಬ ಅರ್ಥ ಕೊಡುತ್ತದೆ.

ಸಾಯಿಬಾಬಾರವರು ಯಾವಾಗಲೂ ಶಿರಡಿಯ ದ್ವಾರಕಾಮಾಯಿಯಲ್ಲಿ ಧುನಿ ಅಥವಾ ಅಗ್ನಿಹೋತ್ರವನ್ನು (ಪವಿತ್ರವಾದ ಬೆಂಕಿ) ನಿರ್ವಹಣೆ ಮಾಡುತ್ತಾ ನಿರಂತರವಾಗಿ ಅದನ್ನು ಉರಿಸುತ್ತಿದ್ದರು ಮತ್ತು ಅದರಿಂದ ಸಂಗ್ರಹಿಸಿದ ಭಸ್ಮವನ್ನು ತಮ್ಮ ದರ್ಶನಕ್ಕೆ ಬಂದ ಎಲ್ಲಾ ಭಕ್ತರಿಗೆ ಪ್ರಸಾದವಾಗಿ ಉಚಿತವಾಗಿ ವಿತರಿಸುತ್ತಿದ್ದರು. ಶಿರಡಿಯಿಂದ ವಾಪಸ್ ತೆರಳುವಾಗ ಸಾಯಿಬಾಬಾರವರ ಆಶೀರ್ವಾದ ಮತ್ತು ಉಧಿ ಪ್ರಸಾದವನ್ನು ಸ್ವೀಕರಿಸುವುದು ಎಲ್ಲ ಭಕ್ತರ ಹವ್ಯಾಸವಾಗಿತ್ತು.

ಈ ಉಧಿಯನ್ನು ಹಣೆಯ ಮೇಲೆ (ಎರಡು ಹುಬ್ಬುಗಳ ನಡುವೆ ಒಂದು ಸಣ್ಣ ಬೊಟ್ಟು ಅಥವಾ ಮೂರು ಅಡ್ಡ ಗೆರೆಗಳ ರೂಪದಲ್ಲಿ) ಅತ್ಯಂತ ಪೂಜ್ಯ ಭಾವನೆ ಮತ್ತು ನಂಬಿಕೆಯಿಂದ ಧರಿಸಿದ ಭಕ್ತರು ತಮ್ಮ ದುಃಖ ಅಥವಾ ಕಷ್ಟಗಳಿಂದ ದೂರವಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಭಕ್ತರ ಕಷ್ಟಗಳನ್ನು ನಿವಾರಿಸುವಲ್ಲಿ ಉಧಿಯ ಹಿರಿಮೆಯನ್ನು  ಕುರಿತ ಕೆಲವು ನಿದರ್ಶನಗಳನ್ನು ಪವಿತ್ರ ಸಾಯಿ ಸಚ್ಚರಿತ್ರೆಯಲ್ಲಿ ವಿವರಿಸಲಾಗಿದೆ.

ಸಾಯಿಬಾಬಾರವರ ವೈಭವೋಪೇತ ಲೀಲೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ಈ ಧುನಿಯು ಇಂದಿಗೂ ಸಹ ಶಿರಡಿಯ ದ್ವಾರಕಾಮಾಯಿಯಲ್ಲಿ   ಹಗಲಿರುಳು ಉರಿಯುತ್ತಲೇ ಇದೆ. ಧುನಿಯಿಂದ ಸಂಗ್ರಹಿಸಿದ ಪವಿತ್ರ ಬೂದಿ ಅಥವಾ ಉಧಿಯನ್ನು ಸಾಯಿಬಾಬಾರವರ ದರ್ಶನಕ್ಕಾಗಿ ಶಿರಡಿಗೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ   ಶ್ರೀ ಸಾಯಿಬಾಬಾ ಸಂಸ್ಥಾನವು  ಪ್ಯಾಕ್ ಮಾಡಿ ಉಚಿತವಾಗಿ ವಿತರಿಸುತ್ತಿದೆ.

(ಕೃಪೆ : www.saiamrithadhara.com