Wednesday, July 31, 2013

ಬೆಂಗಳೂರಿನಲ್ಲಿ ರಾಮೇಶ್ವರದಿಂದ ಶಿರಡಿಗೆ ತೆರಳುವ ಪಲ್ಲಕ್ಕಿ ಯಾತ್ರಿಗಳ ಪಲ್ಲಕ್ಕಿ ದರ್ಶನ, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಕಾರ್ಯಕ್ರಮ - ಕೃಪೆ: ಶ್ರಿ. ಸಾಯಿರಮೇಶ್, ಶಿರಡಿ

ರಾಮೇಶ್ವರದಿಂದ ಶಿರಡಿಗೆ ತೆರಳುವ ಪಲ್ಲಕ್ಕಿ ಯಾತ್ರಿಗಳ ಪಲ್ಲಕ್ಕಿ ದರ್ಶನ, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಕಾರ್ಯಕ್ರಮಗಳನ್ನು ಪರಮ ಪವಿತ್ರ ಏಕಾದಶಿಯ ದಿನವಾದ 17ನೇ ಆಗಸ್ಟ್ 2013, ಶನಿವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕುಣಿಗಲ್ ಕ್ರಾಸ್ ನಲ್ಲಿರುವ ಲಕ್ಷ್ಮೀನಾರಾಯಣ ಭವನದಲ್ಲಿ ಬೆಳಿಗ್ಗೆ 8:00 ರಿಂದ ರಾತ್ರಿ 8:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. 

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಕಾರ್ಯಕ್ರಮದ ಆಯೋಜಕರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 



ಕನ್ನಡ ಅನುವಾದ:  ಶ್ರೀಕಂಠ ಶರ್ಮ

Saturday, July 27, 2013

ಶ್ರೀ ಸಾಯಿ ಲೀಲಾ ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ ನ ವತಿಯಿಂದ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ "ಶ್ರೀ ಸಾಯಿ ಟಿವಿ" ಯ ಲೋಕಾರ್ಪಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಹೈದರಾಬಾದ್  ನ  ಶ್ರೀ ಸಾಯಿ ಲೀಲಾ ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದೇ ತಿಂಗಳ 22ನೇ ಜುಲೈ 2013 ರ ಪವಿತ್ರ ಗುರುಪೂರ್ಣಿಮೆಯ ದಿನದಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಶ, ಕಾಶಿಬುಗ್ಗಾದ ಶಿರಡಿ ಸಾಯಿಬಾಬಾ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ 10:33 ಕ್ಕೆ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ www. srisaitv.com ನ ಲೋಕಾರ್ಪಣೆಯನ್ನು ಶಿರಡಿ ಸಾಯಿಬಾಬಾರವರ ದಿವ್ಯ ಸಾನಿಧ್ಯದಲ್ಲಿ ಒಬ್ಬ ಪುಟ್ಟ ಬಾಲಕಿಯು ಅಮೃತ ಹಸ್ತದಿಂದ ಗಣಕ ಯಂತ್ರದ ಬಟನ್ ಒತ್ತುವ ಮುಖಾಂತರ ಚಾಲನೆ ನೀಡಿತು. ಕಾರ್ಯಕ್ರಮದಲ್ಲಿ ನೂರಾರು ಸ್ಥಳೀಯ ಸಾಯಿ ಭಕ್ತರು ಪಾಲ್ಗೊಂಡಿದ್ದರು. 
ಲೋಕಾರ್ಪಣೆಯ ಹಿಂದಿನ ದಿನವಾದ 21ನೇ ಜುಲೈ 2013 ರಂದು ಪತ್ರಿಕಾಗೋಷ್ಠಿಯನ್ನು  ಉದ್ದೇಶಿಸಿ ಮಾತನಾಡಿದ ಶ್ರೀ ಸಾಯಿ ಟಿವಿಯ ನಿರ್ದೇಶಕರಾದ ಶ್ರೀ.ಅನಿಲ್ ಕುಮಾರ್ ರಪಾಕ ಹಾಗೂ ಚಾನಲ್ ನ ಸಂಯೋಜಕರಾದ ಶ್ರಿ.ಸಿ.ಸಾಯಿಬಾಬಾ ಅಂತರ್ಜಾಲ ತಾಣದಲ್ಲಿ ಚಾನಲ್ ಪ್ರಾರಂಭಿಸುತ್ತಿರುವ ಹಿಂದಿರುವ ಉದ್ಧೇಶವನ್ನು ಕುರಿತು ಮಾತನಾಡಿದರು. ಕಾರ್ಯದರ್ಶಿಗಳಾದ ಶ್ರೀ.ಜಿ.ಜೆ.ಎಸ್.ರೆಡ್ಡಿ, ಖಚಾಂಚಿಗಳಾದ ಶ್ರಿ.ಚಲಪತಿ ರಾವ್, ಶ್ರೀ.ಕೃಷ್ಣಾ ರೆಡ್ಡಿ, ಟಾಟಾ ಸಂಸ್ಥಾನದ ಅವಧೂತ ರಾಮಿರೆಡ್ಡಿ, ಕೊಲ್ಲೂರು ರವರುಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರಿ.ಸಿ.ಸಾಯಿಬಾಬಾರವರು ಈ ಚಾನಲ್ ನ ಅಧ್ಯಕ್ಷರು ಸ್ವಯಂ ಸಾಯಿಬಾಬಾರವರೇ ಆಗಿರುತ್ತಾರೆ. ಈ ಚಾನಲ್ ಸಾಯಿಬಾಬಾರವರ ಆದೇಶದ ಮೇರೆಗೆ ಸಾಯಿ ಭಕ್ತರಿಂದ ಸಾಯಿ ಭಕ್ತರಿಗಾಗಿ ಸಾಯಿಭಕ್ತರೆಲ್ಲರೂ ಸೇರಿ ನಡೆಸಲು ಉದ್ದೇಶಿಸಿರುವ ಚಾನಲ್ ಆಗಿರುತ್ತದೆ ಎಂದು ಒತ್ತಿ ಹೇಳಿದರು. 











ಶ್ರೀ ಸಾಯಿ ಟಿವಿಯ ನಿರ್ದೇಶಕರಾದ ಶ್ರೀ.ಅನಿಲ್ ಕುಮಾರ್ ರಪಾಕರವರು ಮಾತನಾಡಿ ಈ ಚಾನಲ್ ಪ್ರಾರಂಭಿಸಲು ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ನೋಡಿಕೊಳ್ಳುವ ಸಲುವಾಗಿ ಶ್ರೀ ಸಾಯಿ ಪ್ರಸನ್ನ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನೋಂದಣಿಯನ್ನು ಸಹ ಮಾಡಲಾಗಿರುತ್ತದೆ. ಈ ಚಾನಲ್ ಗೆ ಉತ್ತೇಜನ ನೀಡಲು ಇಚ್ಛಿಸುವ ಸಾಯಿ ಭಕ್ತರು ಪೋಷಕ, ಗೌರವ ಪೋಷಕ ಅಥವಾ ಪ್ರಧಾನ ಪೋಷಕರಾಗಿ ಸೇರುವ ಮುಖಾಂತರ ಸೇವೆ ಸಲ್ಲಿಸುವ ಅವಕಾಶವಿರುತ್ತದೆ ಎಂದು ನುಡಿದರು.

22ನೇ ಜುಲೈ 2013 ರ ಪವಿತ್ರ ಗುರುಪೂರ್ಣಿಮೆಯ ದಿನದಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಶ, ಕಾಶಿಬುಗ್ಗಾದ ಶಿರಡಿ ಸಾಯಿಬಾಬಾ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ 10:33 ಕ್ಕೆ ನಡೆದ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ www. srisaitv.com ನ ಲೋಕಾರ್ಪಣೆಯ ಮುಂದುವರಿದ ಭಾಗವಾಗಿ ಇದೇ ತಿಂಗಳ 25ನೇ ಜುಲೈ 2013, ಗುರುವಾರದಂದು ಶಿರಡಿಯಲ್ಲಿ  ಸಾಯಿಬಾಬಾರವರ ದಿವ್ಯ ಸಾನಿಧ್ಯದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಗಣಕ ಯಂತ್ರದ ಬಟನ್ ಒತ್ತುವ ಮುಖಾಂತರ ಅಂತರ್ಜಾಲ ತಾಣವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಹೈದರಾಬಾದ್ ನ ರಾಜಿರೆಡ್ಡಿನಗರ, ಚಾಮಾಪೇಟ್ ನ ಸಾಯಿಬಾಬಾ ಮಂದಿರದ ಶ್ರೀಮತಿ.ಜಿ. ಅನಂತಲಕ್ಷ್ಮೀ, ಶ್ರೀ ಸಾಯಿ ಟಿವಿಯ ನಿರ್ದೇಶಕರಾದ ಶ್ರೀ.ಅನಿಲ್ ಕುಮಾರ್ ರಪಾಕ, ಶ್ರೀ ಸಾಯಿ ಪ್ರಸನ್ನ ಸೊಸೈಟಿಯ ಸಹ ಪ್ರವರ್ತಕಿ ಶ್ರೀಮತಿ ಸಾಯಿ ವಾಹಿನಿಯವರುಗಳು ಕೂಡ ಉಪಸ್ಥಿತರಿದ್ದರು.



 ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, July 20, 2013

ಶ್ರೀ ಸಾಯಿ ಲೀಲಾ ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ ನ ವತಿಯಿಂದ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ "ಶ್ರೀ ಸಾಯಿ ಟಿವಿ" ಯ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

 ಹೈದರಾಬಾದ್  ನ  ಶ್ರೀ ಸಾಯಿ ಲೀಲಾ ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದೇ ತಿಂಗಳ 22ನೇ ಜುಲೈ 2013 ರ ಪವಿತ್ರ ಗುರುಪೂರ್ಣಿಮೆಯ ದಿನದಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಶ, ಕಾಶಿಬುಗ್ಗಾದ ಶಿರಡಿ ಸಾಯಿಬಾಬಾ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ 10:33 ಕ್ಕೆ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ www. srisaitv.com ನ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.






































ಕನ್ನಡ ಅನುವಾದ: ಶ್ರೀಕಂಠ ಶರ್ಮ



ಶ್ರೀ ಸಾಯಿ ಜನ ಸೇವಾ ಟ್ರಸ್ಟ್ ನ ವತಿಯಿಂದ ಗುರುಪೂರ್ಣಿಮೆ ಉತ್ಸವದ ಆಚರಣೆ ಹಾಗೂ ಸಾಯಿಬಾಬಾರವರ ಮೇಲಿನ ಕನ್ನಡ ಹಾಡುಗಳ ಧ್ವನಿಸುರಳಿ "ಸಾಯಿ ಸಿರಿ" ಬಿಡುಗಡೆ - ಕೃಪೆ: ಸಾಯಿ ರಮೇಶ್, ಶಿರಡಿ




ಬೆಂಗಳೂರಿನ ಶ್ರೀ ಸಾಯಿ ಜನ ಸೇವಾ ಟ್ರಸ್ಟ್ ನ ಇದೇ ತಿಂಗಳ 22ನೇ ಜುಲೈ 2013, ಸೋಮವಾರದಂದು ಪವಿತ್ರ ಗುರುಪೂರ್ಣಿಮೆಯ ಅಂಗವಾಗಿ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. ಉತ್ಸವದ ಅಂಗವಾಗಿ ಸಾಯಿಬಾಬಾರವರ ಮೇಲಿನ ಕನ್ನಡ ಹಾಡುಗಳ ಧ್ವನಿಸುರಳಿ "ಸಾಯಿ ಸಿರಿ" ಯನ್ನು ಬಿಡುಗಡೆಗೊಳಿಸಲಾಗುತ್ತಿದೆ   ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷರಾದ  ಡಾ. ಮಹರ್ಷಿ ಆನಂದ ಗುರೂಜಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಧ್ವನಿಸುರಳಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ. 



ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿ ಜನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, July 17, 2013

ಸಾಯಿ ಆಶ್ರಮ ವಸತಿ ಸಮುಚ್ಚಯ- 2 ನೇ ಹಂತದ ಆರಂಭ - ಕೃಪೆ: ಸಾಯಿಅಮೃತಧಾರಾ.ಕಾಂ


ಪವಿತ್ರ ಗುರುಪೂರ್ಣಿಮೆಯ ಅಂಗವಾಗಿ ದಿನೇ ದಿನೇ ಶಿರಡಿಗೆ ಹರಿದುಬರುತ್ತಿರುವ ಸಾಯಿ ಭಕ್ತ ಸಾಗರವನ್ನು ಗಮನದಲ್ಲಿಟ್ಟುಕೊಂಡು ಇದೇ ತಿಂಗಳ 18ನೇ ಜುಲೈ 2013, ಗುರುವಾರದಂದು ಸಾಯಿ ಆಶ್ರಮ ವಸತಿ ಸಮುಚ್ಚಯ- 2 ನೇ ಹಂತವನ್ನು ವಿಧ್ಯುಕ್ತವಾಗಿ  ಪ್ರಾರಂಭಿಸಲಾಯಿತು. ಸಾಯಿ ಆಶ್ರಮ ವಸತಿ ಸಮುಚ್ಚಯಗಳು ಚನ್ನೈ ನ ಶಿರಡಿ ಸಾಯಿ ಟ್ರಸ್ಟ್ ನ ಶ್ರಿ.ಕೆ.ವಿ.ರಮಣಿಯವರು ಸಾಯಿಬಾಬಾರವರ ಮೇಲಿನ ಪ್ರೀತಿ ಹಾಗೂ ಅವರಿಗೆ ಸೇವೆಯ ಸಂಕೇತವಾಗಿ ನೀಡಿದ ಕೊಡುಗೆಯಾಗಿರುತ್ತದೆ. 

ಪತ್ರಿಕಾ  ಗೋಷ್ಟಿಯಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿ ಮಾತನಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯರೂ ಹಾಗೂ ಕಾರ್ಯಕಾರಿ ಅಧಿಕಾರಿಗಳೂ ಆದ ಶ್ರೀ.ಕಿಶೊರ್ ಮೋರೆಯವರು ಸಾಯಿ ಆಶ್ರಮ-2  ವಸತಿ ಸಮುಚ್ಚಯವು ನೀಮಗಾವ್-ಕೊರಾಳೆ  ಪರಿಧಿಯಲ್ಲಿದ್ದು 7  ಎಕರೆಗೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿದೆ; 3,25,190 ಚದರ ಅಡಿಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ; ಈ ಭಕ್ತನಿವಾಸದಲ್ಲಿ 32 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಪ್ರತಿಯೊಂದು  ಹಾಲ್ ಗಳಲ್ಲಿ 18 ಹಾಸಿಗೆಗಳನ್ನು ಇರಿಸಲಾಗಿದೆ. ಈ ವಸತಿ ಸಮುಚ್ಚಯದಲ್ಲಿ ಒಟ್ಟು 6 ಕಟ್ಟಡಗಳಿದ್ದು ಒಟ್ಟು 192 ಹಾಲ್ ಗಳನ್ನು ನಿರ್ಮಿಸಲಾಗಿದೆ. ಏಕ ಕಾಲಕ್ಕೆ 5000 ಕ್ಕೂ ಹೆಚ್ಚು ಸಾಯಿ ಭಕ್ತರು ಈ ಭಕ್ತನಿವಾಸದಲ್ಲಿ ಉಳಿದುಕೊಳ್ಳಬಹುದಾಗಿರುತ್ತದೆ. ಈ ವಸತಿ ಸಮುಚ್ಚಯದಲ್ಲಿ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಇರುತ್ತದೆ. ಈ ವಸತಿ ಸಮುಚ್ಚಯದಲ್ಲಿ ಉಳಿದುಕೊಂಡ ಭಕ್ತರ ಸುಖ ಸಂತೋಷಗಳನ್ನು ಗಮನದಲ್ಲಿಟ್ಟುಕೊಂಡು ಕಣ್ಣುಗಳಿಗೆ ಮುದ ನೀಡುವ ಉತ್ತಮ ಗಿಡ ಮರಗಳನ್ನು ಬೆಳೆಸಿದ್ದು ಅತ್ಯಾಕರ್ಷಕ ನೈಸರ್ಗಿಕ ಭೂ ದೃಶ್ಯವನ್ನು ಹೊಂದಿದೆ. ಈ ಆಶ್ರಮಕ್ಕೆ ಬಂದು ಸೇರುವ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದ್ದು ಹಾದಿಯ ಇಕ್ಕೆಲಗಳಲ್ಲೂ ಬೀದಿ ದೀಪಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲದೆ, ಈ ಆಶ್ರಮದ ಒಳಗಡೆ ಬಸ್ಸು, ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಇರಿಸಲು ವಿಸ್ತಾರವಾದ ಪಾರ್ಕಿಂಗ್ ಸೌಲಭ್ಯವನ್ನು ಸಹ ನಿರ್ಮಾಣ ಮಾಡಲಾಗಿದೆ. ನೈಸರ್ಗಿಕ ಸಂಪತ್ತು ಎನಿಸಿಕೊಂಡ ನೀರನ್ನು ಉತ್ತಮ ರೀತಿಯಲ್ಲಿ ಬಳಸುವ ನಿಟ್ಟಿನಿಂದ ಆ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಬಿಸಿ ನೀರಿಗಾಗಿ ಸೋಲಾರ್ ಹೇಟಿಂಗ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಸಾಯಿ ಭಕ್ತರು ಉತ್ಸವದ ಸಂದರ್ಭಗಳಲ್ಲಿ ಹಾಗೂ ಪಲ್ಲಕ್ಕಿ ಉತ್ಸವ ಯಾತ್ರೆಯ  ಜೊತೆಯಲ್ಲಿ ಬಂದಾಗ ಈ ಸಾಯಿ ಆಶ್ರಮ ವಸತಿ ಸಮುಚ್ಚಯ- 2 ಬಹಳ ಪ್ರಯೋಜನಕಾರಿಯಾಗುತ್ತದೆ. 

ಈ ವಸತಿ ಸಮುಚ್ಚಯದ ಬಾಡಿಗೆ 24  ತಾಸುಗಳಿಗೆ  ಕೇವಲ 10  ರೂಪಾಯಿಗಳೆಂದು ನಿಗದಿಪಡಿಸಲಾಗಿದ್ದು ಎಲ್ಲ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಾಗಿರುತ್ತದೆ. ಇಲ್ಲಿ ತಂಗುವ ಭಕ್ತರಿಗೆ ಸಂಸ್ಥಾನವು ಮಂಚ ಹಾಗೂ ಹಾಸಿಗೆಯನ್ನು ಸಹ ನೀಡುತ್ತದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿ ಯಾತ್ರೆಯನ್ನು ಕೈಗೊಳ್ಳಬೇಕೆಂದು ಮತ್ತು ಈ ವಸತಿ ಸಮುಚ್ಚಯದ ಪ್ರಯೋಜನ ಪಡೆಯಬೇಕೆಂದು ಕಾರ್ಯಕಾರಿ ಅಧಿಕಾರಿಗಳಾದ ಮೋರೆಯವರುತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ : ಕುಮಾರಿ ಶಂಶಾದ್ ಆಲಿ ಬೇಗ್ 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
 

Monday, July 15, 2013

ಗ್ಲಾಸಿ ಪ್ರಿಂಟ್ಸ್, ಬೆಂಗಳೂರಿನ ವತಿಯಿಂದ ಕನ್ನಡ ಸಾಯಿ ಭಕ್ತರಿಗೋಸ್ಕರ "ಶ್ರೀ ಶಿರಡಿ ಸಾಯಿಬಾಬಾ ಸಮಗ್ರ ಕೈಪಿಡಿ" ಪುಸ್ತಕದ ಬಿಡುಗಡೆ - ಕೃಪೆ: ಸಾಯಿಅಮೃತಧಾರಾ.ಕಾಂ




ಬೆಂಗಳೂರಿನ ಗ್ಲಾಸಿ ಪ್ರಿಂಟ್ಸ್ ಸಂಸ್ಥೆಯು ಕನ್ನಡದ ಸಾಯಿ ಭಕ್ತರಿಗೋಸ್ಕರ "ಶ್ರೀ ಶಿರಡಿ ಸಾಯಿಬಾಬಾ ಸಮಗ್ರ ಕೈಪಿಡಿ" ಎಂಬ ಪುಸ್ತಕವನ್ನು ಹೊರ ತರುತ್ತಿದೆ. ಈ ಪುಸ್ತಕವು ಶ್ರೀ ಶಿರಡಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳು, ಶ್ರೀ ದತ್ತಾವತಾರದ ಇತಿಹಾಸ, ಶಿರಡಿ ಸಾಯಿಬಾಬಾ ಯಾರು?, ಶಿರಡಿ ಯಾತ್ರೆಯ ಮಹತ್ವ, ಶಿರಡಿ ಮಾರ್ಗಸೂಚಿ ಶಿರಡಿ ನಕಾಶೆ ಸಹಿತ, ಶಿರಡಿ ದೇವಾಲಯದ ಪ್ರಾಂಗಣದಲ್ಲಿರುವ ಸ್ಥಳಗಳು, ಶಿರಡಿ ಸುತ್ತಮುತ್ತಲಿನ ಪವಿತ್ರ ಸ್ಥಳಗಳು, ಸಾಯಿ ಮಹಾಭಕ್ತರ ಮನೆಗಳು, ಶಿರಡಿ ಸಾಯಿಬಾಬಾರವರು ಭಿಕ್ಷೆ ಸ್ವೀಕರಿಸುತ್ತಿದ್ದ ಐದು ಪೂಜ್ಯ ಮನೆಗಳು, ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮಹತ್ವ ಮತ್ತು ಪದ್ಧತಿ, ಶ್ರೀ ಶಿರಡಿ ಸಾಯಿಬಾಬಾರವರಿಗೆ ಸಲ್ಲಿಸುವ ಪಂಚಾರತಿಯ ಮಹತ್ವ, ಶ್ರೀ ಸಾಯಿನಾಥ ಸ್ತವನ ಮಂಜರಿಯ ಮಹತ್ವ, ಶ್ರೀ ಸಾಯಿ ಲೀಲಾ ದ್ವೈಮಾಸಿಕ ಪತ್ರಿಕೆಯ ಚಂದಾವಿವರಗಳು, ಶ್ರೀ ಸಾಯಿಬಾಬಾರವರ ಬಗ್ಗೆ ಪ್ರಕಟಣೆಯಾಗಿರುವ ಅಧಿಕೃತ ಕನ್ನಡ ಗ್ರಂಥಗಳು ಹಾಗೂ ಮಾಸಪತ್ರಿಕೆಗಳು, ಪಾದುಕೆಗಳ ಮಹತ್ವ ಮತ್ತು ಪಾದುಕೆಗಳು ಇರುವ ಸ್ಥಳಗಳು, ಶ್ರೀ ಶಿರಡಿ ಸಾಯಿಬಾಬಾರವರ ಆರತಿ, ಅಷ್ಟೋತ್ತರ, ಸಹಸ್ರನಾಮ, ಸ್ತವನ ಮಂಜರಿ, ಸಾಯಿ ಸಚ್ಚರಿತ್ರೆಯ ರಚನಕಾರರ ಕಿರುಪರಿಚಯ,  ಸಾಯಿಬಾಬಾರವರ ಅವತರಣ ಕಾಲದಲ್ಲಿ ನಡೆದ ಘಟನೆಗಳ ಕಾಲಗಣನೆ, ಶ್ರೀ ಸಾಯಿಬಾಬಾ ಸಂಸ್ಥಾನದ ಸೌಲಭ್ಯಗಳು, ಸಾಯಿಭಕ್ತರಿಗೆ ಉಪಯುಕ್ತ ಮಾಹಿತಿಗಳು, ಆನ್ ಲೈನ್ ಬುಕಿಂಗ್ ವ್ಯವಸ್ಥೆ, ಶುಲ್ಕ ಸಹಿತ ದರ್ಶನ ಮತ್ತು ವಿಐಪಿ ಪಾಸ್ ಸೌಲಭ್ಯಗಳ ವಿವರ, ಭಾರತದಲ್ಲಿರುವ ಶ್ರೀ ಸಾಯಿಬಾಬಾ ಸಂಸ್ಥಾನದ ಮಾಹಿತಿ ಕೇಂದ್ರಗಳು, ಶಿರಡಿಯ ಪ್ರಮುಖ ಸಂಪರ್ಕ ವಿವರಗಳು, ಶಿರಡಿಯ ಸಮಾಧಿ ಮಂದಿರದಲ್ಲಿ ನಡೆಯುವ ನಿತ್ಯ ಕಾರ್ಯಕ್ರಮಗಳು, ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಪ್ರತಿದಿನ ನಡೆಯುವ ಪೂಜಾ ಹಾಗೂ ದೇಣಿಗೆ ವಿವರಗಳು,  ಸಾಯಿಬಾಬಾರವರ ಅತ್ಯಂತ ಅಪರೂಪದ ಚಿತ್ರಗಳು, ಶಿರಡಿಯಲ್ಲಿನ ಸ್ಥಳಗಳ ಅತ್ಯಂತ ಅಪರೂಪದ ಚಿತ್ರಗಳು, ಸಾಯಿ ಮಹಾಭಕ್ತರ ಚಿತ್ರಗಳನ್ನು ಒಳಗೊಂಡಿದ್ದು ಶಿರಡಿ ಸಾಯಿಬಾಬಾ ಮತ್ತು ಶಿರಡಿ ದರ್ಶನಕ್ಕೆ ಹೋದಾಗ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು  ಒಟ್ಟಿಗೆ ದೊರೆಯುವಂತೆ ಮಾಡುವ ಒಂದು ಸಣ್ಣ ಪ್ರಯತ್ನ ಇದಾಗಿರುತ್ತದೆ.


ಈ ಪುಸ್ತಕವನ್ನು ಇದೇ ತಿಂಗಳ 22.07.2013 ರ ಪವಿತ್ರ ಗುರು ಪೂರ್ಣಿಮೆಯಂದು ಶಿರಡಿ ಸಾಯಿಬಾಬಾರವರ ಪಾದ ಕಮಲಗಳಿಗೆ ಅರ್ಪಣೆ ಮಾಡುವ ಮುಖಾಂತರ ಬಿಡುಗಡೆಗೊಳಿಸಲಾಗುತ್ತದೆ. ಈ ಪುಸ್ತಕದ ಬೆಲೆ ಕೇವಲ 60/- ರೂಪಾಯಿಗಳಾಗಿದ್ದು ಪುಸ್ತಕವನ್ನು ಖರೀದಿಸಲು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:

ಗ್ಲಾಸಿ ಪ್ರಿಂಟ್ಸ್
ನಂ.8,  1ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ,
20, ಪುಕ್ ರಾಜ್ ಲೇ ಔಟ್, ಆಡುಗೋಡಿ,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-560 030.
ದೂರವಾಣಿ: +91 80 2212 8796 / +91 80 4218 5146
ಇ-ಮೈಲ್: glossyprints@yahoo.com

ಗ್ಲಾಸಿ ಪ್ರಿಂಟ್ಸ್, ಬೆಂಗಳೂರಿನ ವತಿಯಿಂದ ಕನ್ನಡ ಸಾಯಿ ಭಕ್ತರಿಗೋಸ್ಕರ "ಶ್ರೀ ಶಿರಡಿ ಸಾಯಿನಾಥ ಸಗುಣೋಪಾಸನ" ಪುಸ್ತಕದ ಬಿಡುಗಡೆ - ಕೃಪೆ: ಸಾಯಿಅಮೃತಧಾರಾ.ಕಾಂ




ಬೆಂಗಳೂರಿನ ಗ್ಲಾಸಿ ಪ್ರಿಂಟ್ಸ್ ಸಂಸ್ಥೆಯು ಕನ್ನಡದ ಸಾಯಿ ಭಕ್ತರಿಗೋಸ್ಕರ "ಶ್ರೀ ಶಿರಡಿ ಸಾಯಿನಾಥ ಸಗುಣೋಪಾಸನ" ಎಂಬ ಪುಸ್ತಕವನ್ನು ಹೊರ ತರುತ್ತಿದೆ. ಈ ಪುಸ್ತಕವು ಶ್ರೀ ಶಿರಡಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳು, ಶ್ರೀ ಶಿರಡಿ ಸಾಯಿಬಾಬಾರವರ ಆರತಿ, ಅಷ್ಟೋತ್ತರ, ಸಹಸ್ರನಾಮ, ಸ್ತವನ ಮಂಜರಿಯ ರಚನಕಾರರ ಕಿರುಪರಿಚಯ, ಶ್ರೀ ಶಿರಡಿ ಸಾಯಿಬಾಬಾರವರಿಗೆ ಸಲ್ಲಿಸುವ ಪಂಚಾರತಿಯ ಮಹತ್ವ, ಶ್ರೀ ಸಾಯಿನಾಥ ಸ್ತವನ ಮಂಜರಿಯ ಮಹತ್ವ, ಪರಮ ಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು ರಚಿಸಿರುವ ಶ್ರೀ ಶಿರಡಿ ಸಾಯಿಬಾಬಾರವರ ಅಷ್ಟೋತ್ತರ, ಸಹಸ್ರನಾಮ, ಸಂತ ಕವಿ ದಾಸಗಣು ವಿರಚಿತ ಶ್ರೀ ಸಾಯಿನಾಥ ಸ್ತವನ ಮಂಜರಿ, ಶಿರಡಿ ಸಾಯಿಬಾಬಾರವರ ನಾಲ್ಕು ಆರತಿಗಳು, ಶಿರಡಿಯ ಸಮಾಧಿ ಮಂದಿರದಲ್ಲಿ ನಡೆಯುವ ನಿತ್ಯ ಕಾರ್ಯಕ್ರಮಗಳು, ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಪ್ರತಿದಿನ ನಡೆಯುವ ಪೂಜಾ ಹಾಗೂ ದೇಣಿಗೆ ವಿವರಗಳು, ಸಾಯಿಬಾಬಾರವರ 106 ಸೂಕ್ತಿಗಳನ್ನು ಒಳಗೊಂಡಿದ್ದು ಶಿರಡಿ ಸಾಯಿಬಾಬಾರವರ ಸಗುಣೋಪಾಸನೆಗೆ ಅಗತ್ಯವಿರುವ ಎಲ್ಲವನ್ನೂ ಒಟ್ಟಿಗೆ ದೊರೆಯುವಂತೆ ಮಾಡುವ ಒಂದು ಸಣ್ಣ ಪ್ರಯತ್ನ ಇದಾಗಿರುತ್ತದೆ.

ಈ ಪುಸ್ತಕವನ್ನು ಇದೇ ತಿಂಗಳ 22.07.2013 ರ ಪವಿತ್ರ ಗುರು ಪೂರ್ಣಿಮೆಯಂದು ಶಿರಡಿ ಸಾಯಿಬಾಬಾರವರ ಪಾದ ಕಮಲಗಳಿಗೆ ಅರ್ಪಣೆ ಮಾಡುವ ಮುಖಾಂತರ ಬಿಡುಗಡೆಗೊಳಿಸಲಾಗುತ್ತದೆ. ಈ ಪುಸ್ತಕದ ಬೆಲೆ ಕೇವಲ 50/- ರೂಪಾಯಿಗಳಾಗಿದ್ದು ಪುಸ್ತಕವನ್ನು ಖರೀದಿಸಲು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:

ಗ್ಲಾಸಿ ಪ್ರಿಂಟ್ಸ್
ನಂ.8,  1ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ,
20, ಪುಕ್ ರಾಜ್ ಲೇ ಔಟ್, ಆಡುಗೋಡಿ,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-560 030.
ದೂರವಾಣಿ: +91 80 2212 8796 / +91 80 4218 5146
ಇ-ಮೈಲ್: glossyprints@yahoo.com

ಕನ್ನಡ ಅನುವಾದ: ಶ್ರೀಕಂಠಶರ್ಮ

Monday, July 8, 2013

ಅಪ್ರತಿಮ ಬರಹಗಾರ ಹಾಗೂ ಸಾಯಿಬಂಧು ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ಆಲಿಯಾಸ್ "ಸಾಯಿ-ರಸ್" - ಕೃಪೆ: ಸಾಯಿಅಮೃತಧಾರಾ.ಕಾಂ


 
ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ರವರು ಆಂಗ್ಲ ಭಾಷೆಯಲ್ಲಿ ಸ್ವಸಹಾಯದ ಬಗ್ಗೆ ಪ್ರೇರೇಪಣೆ ನೀಡುವ "ಬಿಯಾಂಡ್ ಗಟ್ಸ್" ಎಂಬ ಹೆಸರಿನ 1000 ಪುಟಗಳ ಪುಸ್ತಕವನ್ನು ರಚಿಸಿರುವ ಅಪ್ರತಿಮ ಬರಹಗಾರ, ಉಪನ್ಯಾಸಕ ಹಾಗೂ  ಸಾಯಿ ಭಕ್ತರು. 

ತಮ್ಮ ಪ್ರೀತಿಪಾತ್ರರಿಂದ ಹಾಗೂ ಸ್ನೇಹಿತರಿಂದ "ಸಾಯಿ-ರಸ್" ಎಂದು ಕರೆಸಿಕೊಳ್ಳುವ ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ರವರು ಲೆಫ್ಟಿನೆಂಟ್ ಜನರಲ್ ದಿವಂಗತ ಜಹಂಗೀರ್ ಟಿ.ಸತಾರಾವಾಲ (M.B.E; M.C.) ಮತ್ತು ಶ್ರೀಮತಿ.ಪೆರಿನ್ ಜೆ. ಸತಾರಾವಾಲ ರವರ ಮಗನಾಗಿ 2ನೇ ಜನವರಿ 1958 ರಂದು ಜನಿಸಿದರು. "ನನ್ನ ತಾಯಿ ನನಗೆ ಜೀವ, ನಡೆದಾಡುವ ಹಾಗೂ ಮಾರ್ಗದರ್ಶನ ನೀಡುವ ದೇವರು, ಗುರು, ದೇವತೆ ಹಾಗೂ ನನ್ನ ಸರ್ವಸ್ವ" ಎಂದು ಸೈರಸ್ ರವರು ಭಾವುಕರಾಗಿ ನುಡಿಯುತ್ತಾರೆ. 

ಬಾಲ್ಯದಿಂದಲೂ ಕಷ್ಟಗಳ ಸರಮಾಲೆಯನ್ನೇ ಎದುರಿಸಿದ್ದರೂ ಸಹ ತಮಗೆ ಪ್ರತಿಯೊಂದು ಹಂತದಲ್ಲೂ ಸಾಯಿಬಾಬಾರವರು ಬಂದು ಸಹಾಯ ಹಸ್ತವನ್ನು ಚಾಚಿದ್ದಾರೆ ಎಂದು ಅವರು ನಂಬಿದ್ದಾರೆ.

ಕೇವಲ 8 ವರ್ಷದವರಾಗಿದ್ದಾಗ ಇವರು ತೀವ್ರವಾದ ಖಾಯಿಲೆಯಿಂದ ಹಾಸಿಗೆ ಹಿಡಿದರು. ಪುನಃ ಇವರ 18ನೇ  ವಯಸ್ಸಿನಲ್ಲಿ ತೀವ್ರ ಖಾಯಿಲೆಯಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ಕರೆದುಕೊಂಡು ಹೋದರು. ಅಲ್ಲಿ 15ನೇ ಮಾರ್ಚ್ 1977 ರಂದು ಇವರಿಗೆ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡಿ 5 ಅಡಿ ಉದ್ದದ ದೊಡ್ಡಕರುಳು, ಗುದದ್ವಾರಗಳನ್ನು ತೆಗೆದುಹಾಕಲಾಯಿತು. ನಂತರ ಪುನಃ 1991 ರಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿ 2 ಅಡಿ ಉದ್ದದ ಸಣ್ಣಕರುಳನ್ನು ತೆಗೆದುಹಾಕಲಾಯಿತು. 

ಇವರು ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇತಿಹಾಸ ವಿಷಯದಲ್ಲಿ ಬಿ.ಎ.(ಹಾನರ್ಸ್) ಪದವಿಯನ್ನು ಗಳಿಸಿರುತ್ತಾರೆ. ಸೋಲೂರಿನ ಟೀ ಎಸ್ಟೆಟ್ ನಲ್ಲಿ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಪುಣೆಗೆ ಹಿಂತಿರುಗಿದ ಇವರು ತಮ್ಮ ವಾಕ್ಚಾತುರ್ಯದ ಮುಖಾಂತರ ಅತ್ಯುತ್ತಮ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ಸರಿಯಾದ ಆಲೋಚನೆಯನ್ನು ಮಾಡುವುದರಿಂದ ಮಾನವನು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಇವರು ಅಭಿಪ್ರಾಯ ಪಡುತ್ತಾರೆ.

ಇವರು ಆಲೋಚನಾ ಶಕ್ತಿ ಮತ್ತು ಸೃಜನಶೀಲ ಕಲ್ಪನೆಯ ಬಗ್ಗೆ ಉಪನ್ಯಾಸಗಳನ್ನು ನೀಡುವಾಗ "ಸೈರಸ್, ನೀವು ಸಮ್ಮೋಹನ ಮಾಡುತ್ತೀರಾ?" ಎಂದು ಅನೇಕರು ಪ್ರಶ್ನಿಸಿದ್ದಾರೆ. ಅದಕ್ಕೆ ನಗುತ್ತಾ ಸೈರಸ್ ರವರು "ಇಲ್ಲ ನಾನು ನಿಮ್ಮ ಸೀಮಿತ ಆಲೋಚನೆಗಳಿಗೆ ವ್ಯತಿರಿಕ್ತ ಸಮ್ಮೋಹನವನ್ನು ಮಾಡುವ ಮುಖಾಂತರ ನಿಮ್ಮಲ್ಲಿ ಸ್ವಯಂ ನಂಬಿಕೆಯನ್ನು ಹುಟ್ಟುಹಾಕಿ ಅದರ ಮುಖಾಂತರವಾಗಿ ನಿಮ್ಮೊಳಗಿರುವ ಗುರು-ದೇವರುಗಳನ್ನು ಜಾಗೃತಗೊಳಿಸುತ್ತೇನೆ. ಅದು ನಿಮ್ಮ ಎಲ್ಲಾ ನ್ಯಾಯ ಸಮ್ಮತವಾದ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತವೆ" ಎಂದು ಉತ್ತರಿಸುತ್ತಾರೆ.

ನಾನು ಚಿಕ್ಕವನಿದ್ದಾಗ ನನ್ನ ತಂದೆಯವರು "ಎಂದಿಗೂ ಬಾಗದ ಆಶಯವನ್ನು ಹೊಂದಿದ್ದಾಗ ಮತ್ತು ಅದರೊಂದಿಗೆ ಮನೋಬಲವೆಂಬ ಬೆಂಕಿಯು ಸೇರಿಕೊಂಡಾಗ, ಅದು ರತ್ನದಂತೆ ಪ್ರಕಾಶಮಾನವಾಗಿ ಬೆಳಗಿ ಅನೇಕ ನದಿಗಳ ಸಂಗಮವನ್ನೂ ಸಹ ಕೇವಲ ಒಂದು ಕಲ್ಲಿನಿಂದಲೇ ಹಿಂಡಿಹಾಕಬಹುದು" ಎಂದು ಹೇಳುತ್ತಿದ್ದರು ಎಂದು ಸೈರಸ್ ಆವೇಶದಿಂದ ನುಡಿಯುತ್ತಾರೆ. 

2004 ನೇ ಇಸವಿಯಲ್ಲಿ ಆಂಗ್ಲ ಭಾಷೆಯಲ್ಲಿ ಸ್ವಸಹಾಯದ ಬಗ್ಗೆ ಪ್ರೇರೇಪಣೆ ನೀಡುವ "ಬಿಯಾಂಡ್ ಗಟ್ಸ್" ಎಂಬ ಹೆಸರಿನ 1000 ಪುಟಗಳ ಪುಸ್ತಕವನ್ನು ರಚಿಸಿರುತ್ತಾರೆ. ಈ ಅತ್ಯುತ್ತಮವಾದ ಪುಸ್ತಕದಲ್ಲಿ ಸೈರಸ್ ರವರು ಜೀವನವು ತಮ್ಮ ಎದುರು  ಪ್ರತಿಯೊಂದು ಬಾರಿಯೂ ನಿಂಬೆಹಣ್ಣನ್ನು ಎಸೆದಾಗ ಹೇಗೆ ಅದನ್ನು ಸಿಹಿಯಾದ ನಿಂಬೆಯ ರಸವನ್ನಾಗಿ ಪರಿವರ್ತನೆ ಮಾಡಿದರು ಎಂಬ ವಿಷಯವನ್ನು ಪುಸ್ತಕದ ಉದ್ದಕ್ಕೂ ವಿವರಿಸಿದ್ದಾರೆ. ಈ ಸವಿಯಾದ ರಸವನ್ನು ಓದುಗರು ಸಹ ಸವಿಯಬಹುದಾಗಿರುತ್ತದೆ. 

ಈ ಪುಸ್ತಕವು ಸರಳ ಸುಲಲಿತವಾದ ಭಾಷೆಯಿಂದ ಕೂಡಿದ್ದು ಅಲ್ಲಲ್ಲಿ ಅತ್ಯುತ್ತಮ ಉದಾಹರಣೆಗಳನ್ನು ನೀಡಿರುವ ಕಾರಣ ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕೆನ್ನುವ ಹಂಬಲ ಬೆಳೆಯುವಂತೆ ಸೈರಸ್ ರವರು ಬರೆದಿದ್ದಾರೆ.

ಸೈರಸ್ ರವರ ಜೀವನದಲ್ಲಿ ಶಿರಡಿ ಸಾಯಿಬಾಬಾರವರ ಅನೇಕ ಲೀಲೆಗಳು ಸಂಭವಿಸಿರುತ್ತವೆ. ಅದರಲ್ಲಿ ಒಂದು ಘಟನೆಯನ್ನು ಸೈರಸ್ ರವರು ಸಾಯಿ ಭಕ್ತರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ : "ಕೆಲವು  ವರ್ಷಗಳ ಹಿಂದೆ ಶಿರಡಿಯ ಖಂಡೋಬ ಮಂದಿರದ ಶ್ರೀ ಮನೋಹರ ಮಾರ್ತಾಂಡ ನಗರೆಯವರು ತಾವಾಗಿಯೇ ಪುಣೆಯಲ್ಲಿರುವ ನನ್ನ ಮನೆಗೆ ಸಾಯಿಬಾಬಾರವರ ಪವಿತ್ರ ಚರಣ ಪಾದುಕೆಗಳನ್ನು ತೆಗೆದುಕೊಂಡು ಬಂದಿದ್ದರು. ಇದರಿಂದ ನನಗೆ ಅತೀವ ವಿಸ್ಮಯವಾಯಿತು. ಈ ಘಟನೆಯನ್ನು ನನ್ನ ಜೀವಮಾನದಲ್ಲಿ ಮರೆಯುವುದಿಲ್ಲ. ಶಿರಡಿ ಸಾಯಿಬಾಬಾರವರು ಮನಸ್ಸು ಮಾಡಿ ನನ್ನ ಮೇಲೆ ಕರುಣೆ ತೋರಿದರೆ ನಾನು ಅವರ ಪಾದದ ಹೆಬ್ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತೇನೆ. ಆಗ ನನಗೆ ಸಾಯಿಬಾಬಾರವರ ಬಳಿ ಬೇಡಲು ಬೇರೆ ಏನೂ ಇರುವುದಿಲ್ಲ" ಎಂದು ಭಾವುಕರಾಗಿ ನುಡಿಯುತ್ತಾರೆ. 

ಋಣಾನುಬಂಧದಿಂದ ತಾವು ಸಾಯಿಬಾಬಾ ಭಕ್ತರಾಗಿರುವುದು ಹಾಗೂ ತಮ್ಮ ತಾಯಿಯವರ ಸೇವೆಯನ್ನು ಮಾಡುವುದರಿಂದ ತಮಗೆ ದೊರೆತಿರುವ ಪ್ರತಿಫಲವೇ ತಮಗೆ ಸಂದಿರುವ ಪ್ರಶಸ್ತಿಯಾಗಿದ್ದು ಅದರ ಮುಂದೆ ಬೇರೆ ಯಾವ ಪ್ರಶಸ್ತಿಗಳೂ  ಸಮನಾಗುವುದಿಲ್ಲ ಎಂದು ನುಡಿಯುತ್ತಾರೆ. 

ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ವಿಳಾಸ:
ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ
ಇ-4, ಅಶೋಕ, 3, ನೈಲಾರ್ ರಸ್ತೆ, 
ಪುಣೆ-411 001, ಮಹಾರಾಷ್ಟ್ರ, ಭಾರತ. 

ದೂರವಾಣಿ ಸಂಖ್ಯೆಗಳು: 
+91 98231 10144/020-2612 5457

ಇ-ಮೈಲ್ ವಿಳಾಸ:

ಅಂಗ್ಲ  ಭಾಷೆ ಅನುವಾದ ಹಾಗೂ ಭಾವಚಿತ್ರ ಕೃಪೆ: ಕುಮಾರಿ.ಶಂಶಾದ್ ಆಲಿ ಬೇಗ್
ಕನ್ನಡ  ಅನುವಾದ: ಶ್ರೀಕಂಠ ಶರ್ಮ

Tuesday, July 2, 2013

ವಿನಯವಂತ ಸಾಯಿ ಭಜನ ಗಾಯಕಿ, ಗೀತ ರಚನಕಾರ್ತಿ ಹಾಗೂ ಸಂಗೀತ ಸಂಯೋಜಕಿ - ಶ್ರೀಮತಿ.ಎಂ.ಬಿ.ಜಯಶ್ರೀ - ಕೃಪೆ: ಸಾಯಿಅಮೃತಧಾರಾ.ಕಾಂ

 
ಬೆಂಗಳೂರಿನ ಸಾಯಿ ಭಕ್ತ ವೃಂದದಿಂದ "ಜಯಶ್ರೀ ಅಮ್ಮ" ಎಂದೇ ಕರೆಸಿಕೊಳ್ಳುವ ಶ್ರೀಮತಿ.ಎಂ.ಬಿ.ಜಯಶ್ರೀಯವರು ಒಬ್ಬ ಅಪ್ರತಿಮ ಸಾಯಿ ಭಜನ ಗಾಯಕಿ, ಗೀತ ರಚನಕಾರ್ತಿ ಹಾಗೂ ಸಂಗೀತ ಸಂಯೋಜಕಿ. ಇವರು ಕರ್ನಾಟಕದ ಬೆಂಗಳೂರಿನ ಹಲವಾರು ಸಾಯಿಭಕ್ತರ ಮನೆಗಳಲ್ಲಿ ತಮ್ಮ ಸುಮಧುರ ಸಾಯಿ ಭಜನ ಗಾಯನದಿಂದ ಮನೆ ಮಾತಾಗಿದ್ದಾರೆ. ಇವರು 27ನೇ ಜುಲೈ 1954 ರಂದು  ಕರ್ನಾಟಕದ ಮೈಸೂರಿನಲ್ಲಿ ದಿವಂಗತ ಶ್ರೀಮತಿ.ಲಕ್ಷ್ಮೀದೇವಮ್ಮ ಮತ್ತು ದಿವಂಗತ ಶ್ರೀ.ಬಾಲಕೃಷ್ಣ ರವರ ಮಗಳಾಗಿ ಜನಿಸಿದರು.

ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಗಳಿಸಿದ್ದಾರೆ. ಅಲ್ಲದೇ, ಮೈಸೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಸಂಗೀತ ಜ್ಯೂನಿಯರ್ ಅನ್ನು ಮುಗಿಸಿದ್ದಾರೆ.

ಇವರು 2003 ನೇ ಇಸವಿಯಲ್ಲಿ ಸಾಯಿ ಭಕ್ತೆಯಾಗಿ ರೂಪುಗೊಂಡರು. ಇವರು "ಶ್ರೀ ಸಾಯಿ ಚೈತನ್ಯ ಭಜನ ಮಂಡಳಿ" ಯನ್ನು ಸ್ಥಾಪಿಸಿ ಮಂಡಳಿಯ ಸದಸ್ಯರೊಂದಿಗೆ ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಹಾಗೂ ಭಕ್ತರ ಮನೆಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕದ ಬೆಂಗಳೂರು, ಮೈಸೂರು, ಕೋಲಾರ, ಘಾಟಿ,ಚಿತ್ರದುರ್ಗ, ತಮಿಳುನಾಡು ರಾಜ್ಯದ ವೆಲ್ಲೂರು ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಸಂಸ್ಥಾನವನ್ನು ಒಳಗೊಂಡಂತೆ ಇಲ್ಲಿಯವರೆಗೂ 1008ಕ್ಕೂ ಹೆಚ್ಚು ಸಾಯಿ ಭಜನೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿದ್ದಾರೆ. 

ಇವರು ಪ್ರತಿ ವರ್ಷ 3 ಬಾರಿ ಸಾಯಿ ಭಕ್ತರನ್ನು ಶಿರಡಿ ಯಾತ್ರೆಗೆ ಕರೆದುಕೊಂಡು ಹೋಗುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.

ಇವರು "ಶ್ರೀ ಸಾಯಿ ನಿವೇದನಾ" ಮತ್ತು "ಶ್ರೀ ಸಾಯಿ ಸಮರ್ಪಣಾ" ಎಂಬ ಎರಡು MP3 ಸಾಯಿಭಜನ ಧ್ವನಿಸುರಳಿಗಳನ್ನು ಕನ್ನಡದಲ್ಲಿ ಹೊರತಂದಿದ್ದಾರೆ. ಈ ಎರಡೂ MP3 ಸಾಯಿಭಜನ ಧ್ವನಿಸುರಳಿಗಳಿಗೆ ಗೀತ ರಚನೆ ಹಾಗೂ ಸಂಗೀತ ಸಂಯೋಜನೆಯನ್ನು ಮಾಡಿ ಭಜನೆಗಳನ್ನು ಕೂಡ ಅವರೇ ಹಾಡಿದ್ದಾರೆ. 




ಇವರು "ಶ್ರೀ ಸಾಯಿ ಭಕ್ತಿ ಸುಧಾ" ಎಂಬ ಸಾಯಿಭಜನೆಗಳನ್ನು ಒಳಗೊಂಡ ಪುಸ್ತಕವನ್ನು ಕನ್ನಡದಲ್ಲಿ ಹೊರತಂದಿದ್ದಾರೆ.

ಅಷ್ಟೇ ಅಲ್ಲದೇ, ಬೆಂಗಳೂರಿನ ಹುಳಿಮಾವು ಬಡಾವಣೆಯಲ್ಲಿ 2013 ನೇ ಮೇ ತಿಂಗಳಿನಲ್ಲಿ ಸಾಯಿಬಾಬಾ ಮಂದಿರವನ್ನು ಪ್ರಾರಂಭಿಸಿ ಅದರ ಸಂಪೂರ್ಣ ಉಸ್ತುವಾರಿಯನ್ನು ಅವರೇ ಅತ್ಯಂತ ಮುತುವರ್ಜಿವಹಿಸಿ ನೋಡಿಕೊಳ್ಳುತ್ತಿದ್ದಾರೆ.

ಇವರಿಗೆ ಶ್ರೀಮತಿ.ಕೆ.ದಿವ್ಯಶ್ರೀ ಎಂಬ ಮಗಳು ಹಾಗೂ ಕುಮಾರಿ.ಧೃತಿ ರಾವ್ ಎಂಬ ಹೆಸರಿನ ಮುದ್ದಾದ ಮೊಮ್ಮಗಳಿದ್ದಾಳೆ.

ಶ್ರೀಮತಿ.ಎಂ.ಬಿ.ಜಯಶ್ರೀಯವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀಮತಿ.ಎಂ.ಬಿ.ಜಯಶ್ರೀ
ಶ್ರೀ ಚೌಡೇಶ್ವರಿ ನಿಲಯ,
1093/6, 10ನೇ ಅಡ್ಡರಸ್ತೆ,
ಮುತ್ತುರಾಯಸ್ವಾಮಿ ಲೇ ಔಟ್,
ಹುಳಿಮಾವು, ಬನ್ನೇರುಘಟ್ಟ ರಸ್ತೆ,
ಬೆಂಗಳೂರು - 560 076,
ಕರ್ನಾಟಕ, ಭಾರತ

ದೂರವಾಣಿ ಸಂಖ್ಯೆಗಳು:
+91 98861 24547/ +91 97386 88731

ಇ-ಮೈಲ್ ವಿಳಾಸ:
natarajnagaraj.nn@gmail.com

ಧ್ವನಿಸುರಳಿಗಳು:
"ಶ್ರೀ ಸಾಯಿ ನಿವೇದನಾ" ಮತ್ತು "ಶ್ರೀ ಸಾಯಿ ಸಮರ್ಪಣಾ"

ಪುಸ್ತಕಗಳು:
ಶ್ರೀ ಸಾಯಿ ಭಕ್ತಿ ಸುಧಾ

ಕನ್ನಡ ಅನುವಾದ: ಶ್ರೀಕಂಠ ಶರ್ಮ