Thursday, August 18, 2011

ಸಾಯಿ ಮಹಾಭಕ್ತ - ಲಕ್ಷ್ಮಣ ರತ್ನ ಪರ್ಕೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಸಾಯಿ ಮಹಾಭಕ್ತ ಶ್ರೀ.ಲಕ್ಷ್ಮಣ ರತ್ನ ಪರ್ಕೆಯವರ ವಂಶಸ್ಥರು ಪೇಶ್ವೆ ರಾಜರ ಬಳಿ ಬೆಲೆಬಾಳುವ ಹರಳುಗಳ ಮತ್ತು ವಜ್ರಗಳ ಪರೀಕ್ಷಕರಾಗಿದ್ದರು. ಆದ್ದರಿಂದ ಇವರ ವಂಶದವರನ್ನು ರತ್ನ ಪರ್ಕೆ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು. ಇವರು ಬ್ರಾಹ್ಮಣ ಕುಲಕ್ಕೆ ಸೇರಿದವರಾಗಿದ್ದು ಪೌರೋಹಿತ್ಯ ವೃತ್ತಿಯನ್ನು ಮಾಡಿಕೊಂಡಿದ್ದರು. ಇವರು ಬೇರೆ ಕಡೆಯಿಂದ ವಲಸೆ ಬಂದು ಶಿರಡಿಯಲ್ಲಿ ಮನೆ ಮಾಡಿಕೊಂಡಿದ್ದರು. ಲಕ್ಷ್ಮಣ ಮಾಮಾ ಅವರು ಶಿರಡಿ ಗ್ರಾಮದ ಪುರೋಹಿತರು ಮತ್ತು ಜ್ಯೋತಿಷ್ಕರಾಗಿದ್ದರು. ಇವರ ಹೆಸರಿನ ಉಲ್ಲೇಖ ಶ್ರೀ.ಸಾಯಿ ಸಚ್ಚರಿತ್ರೆಯಲ್ಲಿ ನೋಡಬಹುದು. 

ಇವರ ಮನೆಯು ವಿಠಲ ಮಂದಿರದ ಹಿಂಭಾಗದಲ್ಲಿ ಇರುತ್ತದೆ. ವಿಠಲ ಮಂದಿರದ ಒಳಗೆ ಪ್ರವೇಶಿಸಿದರೆ ನಿಮ್ಮ ಎಡ ಭಾಗದಲ್ಲಿ ಕೆಲವು ಮೆಟ್ಟಿಲುಗಳನ್ನು ಕಾಣಬಹುದು. ಆ ಮೆಟ್ಟಿಲುಗಳನ್ನು ಏರಿ ಹೋದರೆ ನಿಮಗೆ ರತ್ನ ಪರ್ಕೆಯವರ ತುಂಬು ಸಂಸಾರ ವಾಸ ಮಾಡುತ್ತಿರುವ ಮನೆ ಕಾಣಿಸುತ್ತದೆ. 

ಲಕ್ಷ್ಮಣ ಮಾಮಾ ಅವರು ಮಡಿವಂತ ಬ್ರಾಹ್ಮಣರಾಗಿದ್ದು ಅತ್ಯಂತ ಕಠಿಣ ವ್ಯಕ್ತಿತ್ವವನ್ನು ಹೊಂದಿದ್ದರು. ಮೊದಲು ಇವರು ಸಾಯಿಬಾಬಾರವರು ಶಿರಡಿಯಲ್ಲಿ ಜೀವಿಸುತ್ತಿದ್ದ ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಒಮ್ಮೆ ಇವರು ಅನಾರೋಗ್ಯದಿಂದ ಹಾಸಿಗೆ ಹಿಡಿದರು.ಆಗ ಇವರ ಮಗ ಬಾಪಾಜಿ ಬಾಬಾರವರ ಬಳಿಗೆ ಸಹಾಯವನ್ನು ಅಪೇಕ್ಷಿಸಿ ಓಡಿ ಬಂದನು ಮತ್ತು ತನ್ನ ತಂದೆಯವರನ್ನು ಕಾಪಾಡುವಂತೆ ಬೇಡಿಕೊಂಡನು. ಬಾಬಾರವರು ಕೆಟ್ಟ ಮಾತುಗಳಿಂದ ಬಾಪಾಜಿಯನ್ನು ಬಯ್ದರು ಮತ್ತು ಮನೆಗೆ ಹೋಗುವಂತೆ ಹೇಳಿದರು. ಸ್ವಲ್ಪ ಸಮಯದ ನಂತರ ಸಾಯಿಬಾಬಾರವರ ಮೃದು ಹೃದಯ ಕರಗಿ ಅವರು ಲಕ್ಷ್ಮಣ ಮಾಮಾರವರ ಮನೆಗೆ ಹೋದರು. ಅಲ್ಲಿ ಲಕ್ಷ್ಮಣ ಮಾಮಾರವರು ಅತಿಯಾದ ನೋವಿನಿಂದ ನೆರಳುತ್ತಿದ್ದುದನ್ನು ಕಂಡರು. ಆಗ ಬಾಬಾರವರು ಪ್ರೀತಿಯಿಂದ ಅವರ ಆರೈಕೆ ಮಾಡಿ ತಮ್ಮ ಅಭಯ ಹಸ್ತವನ್ನು ಲಕ್ಷ್ಮಣ ಮಾಮಾರವರ ತಲೆಯ ಮೇಲೆ ಇರಿಸಿದರು. ಆ ಕ್ಷಣದಿಂದಲೇ ಲಕ್ಷ್ಮಣ ಮಾಮಾ ಹುಷಾರಾಗಲು ಪ್ರಾರಂಭಿಸಿದರು. ಈ ಘಟನೆ ಲಕ್ಷ್ಮಣ ಮಾಮಾರವರ ಜೀವನದಲ್ಲಿ  ಒಳ್ಳೆಯ ಪರಿಣಾಮವನ್ನು ಬೀರಿ ಅವರು ಸಾಯಿಬಾಬಾರವರ ಅನನ್ಯ ಭಕ್ತರಾದರು. 

ಒಮ್ಮೆ ಬಾಪಾಜಿ ತೀವ್ರವಾದ ರೋಗದಿಂದ ಬಳಲುತ್ತಿದ್ದನು. ಎಲ್ಲಾ ರೀತಿಯ ಔಷಧೋಪಚಾರಗಳನ್ನು ಮಾಡಿದರೂ ಗುಣವಾಗಲಿಲ್ಲ. ಕೊನೆಗೆ ಇವರ ತಂದೆ ಸಹಾಯವನ್ನು ಅಪೇಕ್ಷಿಸಿ ಬಾಬಾರವರ ಬಳಿಗೆ ಓಡಿದರು. ಬಾಬಾರವರು ಅವರನ್ನು ಶಪಿಸಿದರು ಮತ್ತು ಕೋಪದಿಂದ ಜೋರಾಗಿ ಕಿರುಚಾಡಿದರು. ಸ್ವಲ್ಪ ಸಮಯದ ನಂತರ ಬಾಬಾರವರು ಅವರ ಮನೆಗೆ ಹೋದರು. ಬಾಬಾರವರು ತಮ್ಮ ಅಭಯ ಹಸ್ತವನ್ನು ಬಾಪಾಜಿಯ ತಲೆಯ ಮೇಲೆ ಇರಿಸಿದರು. ಇದರಿಂದ ಬಾಪಾಜಿ ಗುಣ ಹೊಂದಿದನು. ಈ ಘಟನೆ ಲಕ್ಷ್ಮಣ ಮಾಮಾ ಅವರು ಮತ್ತಷ್ಟು ಹೆಚ್ಚಿನ ಪರಿಣಾಮವನ್ನು ಬೀರಿ ಅವರಿಗೆ ಬಾಬಾರವರಲ್ಲಿ ಭಕ್ತಿ ಮತ್ತು ನಂಬಿಕೆ ಹೆಚ್ಚುವಂತೆ ಮಾಡಿತು. 

ಸಾಯಿಬಾಬಾರವರು 15ನೇ ಅಕ್ಟೋಬರ್ 1918 ರ ವಿಜಯದಶಮಿಯಂದು ಸಮಾಧಿ ಹೊಂದಿದಾಗ ದ್ವಾರಕಾಮಾಯಿಯಲ್ಲಿ ಅವರ ಬಳಿ ಬಾಪಾಜಿ ಇದ್ದನು. ಬಾಬಾರವರ ದೇಹ ಸ್ಥಿತಿಯನ್ನು ನೋಡಿ ಗಾಬರಿಗೊಂಡಿದ್ದ ಎಲ್ಲಾ ಭಕ್ತರನ್ನು ಬಾಬಾರವರು ಮನೆಗೆ ಕಳುಹಿಸಿದ್ದರು. ಕೆಲವೇ ಭಕ್ತರು ಸಾಯಿಬಾಬಾರವರ ಬಳಿ ಇದ್ದರು.ಅವರಲ್ಲಿ ಬಾಪಾಜಿ ಕೂಡ ಒಬ್ಬರು. ಆ ದಿನ ಬೆಳಗಿನ ಜಾವದ ಕನಸಿನಲ್ಲಿ ಲಕ್ಷ್ಮಣ ಮಾಮಾರವರಿಗೆ ಬಾಬಾರವರು ಕಾಣಿಸಿಕೊಂಡು ಮಸೀದಿಗೆ ಬಂದು ಕಾಕಡಾ ಆರತಿ ಮಾಡುವಂತೆ ಆಜ್ಞಾಪಿಸಿದರು. ಬಾಬಾರವರ ಇಚ್ಚೆಯಂತೆ ಲಕ್ಷ್ಮಣ ಮಾಮಾರವರು ಬೆಳಿಗ್ಗೆ ಬಂದು ಮೌಲ್ವಿಗಳ ವಿರೋಧವನ್ನು ಕೂಡ ಲೆಕ್ಕಿಸದೆ ಮೃತ ದೇಹಕ್ಕೆ ಕಾಕಡಾ ಆರತಿ ಮಾಡಿದರು. ಬಾಬಾರವರ ಪಾದಗಳನ್ನು ತೊಳೆದು ಆರತಿಯನ್ನು ಮಾಡಿ ಬಾಬಾರವರ ಮುಚ್ಚಿಕೊಂಡಿದ್ದ ಮುಷ್ಟಿಯನ್ನು ಬಿಡಿಸಿ ಬಾಬಾರವರ ಕೈನಲ್ಲಿ ದಕ್ಷಿಣೆ ಮತ್ತು ತಾಂಬೂಲವನ್ನು ಇಟ್ಟು ಹೊರಟುಹೋದರು  (ಶ್ರೀ.ಸಾಯಿ ಸಚ್ಚರಿತ್ರೆ, ಅಧ್ಯಾಯ 43).

ಲಕ್ಷ್ಮಣ  ಮಾಮಾರವರ ವಂಶಸ್ಥರು ಈಗಲೂ ಶಿರಡಿಯ ಆ ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment