Saturday, August 6, 2011

ಸಾಯಿ ಮಹಾಭಕ್ತ - ಕ್ಲರ್ಕ್  - ಕೃಪೆ: ಸಾಯಿಅಮೃತಧಾರಾ.ಕಾಂ 

ಸಾಯಿ ಮಹಾಭಕ್ತರಾದ ಶ್ರೀ.ಕ್ಲರ್ಕ್ ರವರು ಪಾರ್ಸಿ ಮತಕ್ಕೆ ಸೇರಿದವರಾಗಿದ್ದು ತಮ್ಮ ಮನೆಯವರೊಂದಿಗೆ ಮುಂಬೈನಲ್ಲಿ ವಾಸವಾಗಿದ್ದರು. ಇವರು ಮೊದಲ ಬಾರಿಗೆ ಶಿರಡಿಗೆ 1913 ರಲ್ಲಿ ಭೇಟಿ ನೀಡಿದರು. ಇವರ ಅಣ್ಣನವರು ಹುಚ್ಚಿನ ಕಾಯಿಲೆಯಿಂದ ನೆರಳುತ್ತಿದ್ದು ಆಗಾಗ್ಗೆ ಅವರ ಹುಚ್ಚು ಕೆರಳಿ ಅವರನ್ನು ಹಿಡಿಯುವುದೇ ಒಂದು ದೊಡ್ಡ ಕೆಲಸವಾಗುತ್ತಿತ್ತು. ಹುಚ್ಚು ಕೆರಳಿದ ಸಂದರ್ಭದಲ್ಲಿ ಅವರು ವಯಸ್ಸಾದ ಅವರ ತಾಯಿಯವರನ್ನು ತುಂಬಾ ಪೀಡಿಸುತ್ತಿದ್ದರು ಮತ್ತು ಬಹಳ ತೊಂದರೆ ಕೊಡುತ್ತಿದ್ದರು. ಕ್ಲರ್ಕ್ ರವರು ಶ್ರೀಮಂತರಾಗಿಲ್ಲದಿದ್ದರೂ ಕೂಡ ಮುಂಬೈನ ಹಲವಾರು ಒಳ್ಳೆಯ ತಜ್ಞ ವೈದ್ಯರಿಂದ ತಮ್ಮ ಅಣ್ಣನವರ ಖಾಯಿಲೆಗೆ ಚಿಕಿತ್ಸೆ ಕೊಡಿಸಿದರು.  ಆದರೆ ಯಾವುದೇ ರೀತಿಯ ವೈದ್ಯೋಪಾಯಗಳೂ ಕೂಡ ಫಲಕಾರಿಯಾಗಲಿಲ್ಲ, ಬದಲಿಗೆ ಅಣ್ಣನವರ ಖಾಯಿಲೆ ಮತ್ತಷ್ಟು ಹೆಚ್ಚಾಯಿತು. 

ಒಂದು ದಿನ ಕ್ಲರ್ಕ್ ರವರ ಸಹೋದ್ಯೋಗಿಯೊಬ್ಬರು ಇವರಿಗೆ ಶಿರಡಿಯ ಸಾಯಿಬಾಬಾರವರ ಚರಣಾರವಿಂದಗಳಲ್ಲಿ ಮೊರೆ ಹೋಗಲು ಸಲಹೆ ನೀಡಿದರು.  ಅವರ ಸಹೋದ್ಯೋಗಿಯ ಸಲಹೆಯಂತೆ ತಮ್ಮ ಅಣ್ಣನವರನ್ನು ಶಿರಡಿಗೆ ಕರೆತಂದರು. ಶಿರಡಿಯಲ್ಲಿ ತಂಗಿದ್ದಾಗ ಖಾಯಿಲೆ ಸ್ವಲ್ಪ ಮಟ್ಟಿಗೆ ಗುಣವಾದಂತೆ ಕಂಡುಬಂದಿತು. ಸಾಯಿಬಾಬಾರವರು ಇವರಿಗೆ ಮುಂಬೈಗೆ ವಾಪಸಾಗುವಂತೆ ಸೂಚನೆ ನೀಡಿದರು. ಆದರೆ, ಮುಂಬೈಗೆ ಹಿಂತಿರುಗಿದ ನಂತರ ಇವರ ಅಣ್ಣನವರ ಹುಚ್ಚು ಮತ್ತಷ್ಟು ತೀವ್ರವಾಗಿ ಕೆರಳಿತು. ಇದರಿಂದ ಭಯಭೀತರಾದ ಕ್ಲರ್ಕ್ ರವರು ಸಾಯಿಬಾಬಾರವರಿಗೆ ಪತ್ರದ ಮುಖೇನ ವಿಷಯವನ್ನು ತಿಳಿಸಿದರು. ಸಾಯಿಯವರು ಪುನಃ ಶಿರಡಿಗೆ ಇವರ ಅಣ್ಣನವರನ್ನು ಕರೆತರುವಂತೆ ಸೂಚಿಸಿದರು. ಸಾಯಿಯವರ ಸಲಹೆಯಂತೆ ಕ್ಲರ್ಕ್ ರವರು ತಮ್ಮ ಅಣ್ಣನವರನ್ನು ಶಿರಡಿಗೆ ಕರೆದುಕೊಂಡು ಬಂದು ಅಲ್ಲಿಯೇ ಬಿಟ್ಟು ಮುಂಬೈಗೆ ಹೊರಟುಹೋದರು. ಅಮೀದಾಸ್ ಭವಾನಿ ಮೆಹತಾರವರು ಶಿರಡಿಯ ತಮ್ಮ ಮನೆಯಲ್ಲಿ ಕ್ಲರ್ಕ್ ರವರ ಅಣ್ಣನವರನ್ನು ಕರೆತಂದು ಬಹಳ ಚೆನ್ನಾಗಿ ಆರೈಕೆ ಮಾಡಿದರು. ಕ್ಲರ್ಕ್ ರವರು ತಮ್ಮ ಅಣ್ಣನವರರನ್ನು ನೋಡಿಕೊಳ್ಳಲು ಆಗುವ ಖರ್ಚಿಗೋಸ್ಕರ ಪ್ರತಿ ತಿಂಗಳೂ 30 ರುಪಾಯಿಗಳನ್ನು ಅಮೀದಾಸ್ ಭವಾನಿ ಮೆಹತಾರವರಿಗೆ ಕಳುಹಿಸುತ್ತಿದ್ದರು. 

ಕೆಲವು ತಿಂಗಳುಗಳ ನಂತರ ಇವರ ಅಣ್ಣನವರ ಆರೋಗ್ಯದಲ್ಲಿ ಬಹಳ ಸುಧಾರಣೆ ಕಂಡುಬಂದಿತು. ಇದಕ್ಕೆ ಕಾರಣವೇನೆಂದರೆ ಇವರ ಅಣ್ಣನವರು ಪ್ರತಿ ನಿತ್ಯ ಸಾಯಿಬಾಬಾರವರ ಆರತಿಯಲ್ಲಿ ಪಾಲ್ಗೊಂಡು ಅವರ ಪಾದ ತೀರ್ಥದೊಡನೆ ಉಧಿಯನ್ನು ಬೆರೆಸಿ ತಪ್ಪದೆ ತೆಗೆದುಕೊಳ್ಳುತ್ತಿದ್ದರು. ಹೀಗೆ ಸಾಯಿಬಾಬಾರವರ ಆಶೀರ್ವಾದದಿಂದ ಇವರ ಅಣ್ಣನವರು ಸಂಪೂರ್ಣ ಗುಣಮುಖರಾದರು. ಯಾವುದೇ ಔಷಧ ತೆಗೆದುಕೊಂಡರೂ ಗುಣವಾಗದಿದ್ದ ಖಾಯಿಲೆ ಕೇವಲ ಸಾಯಿಬಾಬಾರವರ ಆಶೀರ್ವಾದದಿಂದ ಹೊರಟು ಹೋಯಿತು ಎಂದರೆ ಆಶ್ಚರ್ಯದ ಸಂಗತಿಯಲ್ಲೇ ಮತ್ತಿನ್ನೇನು?

ಕ್ಲರ್ಕ್ ರವರು ಸಾಯಿಯವರೊಂದಿಗಿನ ತಮ್ಮ ಅನುಭವಗಳನ್ನು ಮೆಲುಕು ಹಾಕುತ್ತಾ "ನಾನು ಹನ್ನೆರಡು ವರ್ಷದವನಾಗಿದ್ದ ಕಾಲದಿಂದ ಸಾಯಿಬಾಬಾರವರು ಪ್ರತಿನಿತ್ಯ ನನ್ನ ಕನಸಿನಲ್ಲಿ ಬರುತ್ತಿದ್ದರು. ಕನಸಿನಲ್ಲಿ ಕಾಣಿಸುತ್ತಿದ್ದ ಸಾಯಿಬಾಬಾರವರ ಚಿತ್ರಕ್ಕೆ ನಾನು ಭಕ್ತಿಯಿಂದ ನಮಸ್ಕಾರ ಮಾಡುತ್ತಿದ್ದೆ. ಸಾಯಿಯವರು ಕನಸಿನಲ್ಲಿ ಬಂದಾಗಲೆಲ್ಲಾ ನಾನು ಯಾವುದೋ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಮತ್ತು ನನಗೆ ಯಾವುದೋ ಕೆಡುಕಾಗುವ ಮುನ್ಸೂಚನೆಯಾಗಿರುತ್ತಿತ್ತು. ಸಾಯಿಯವರು ನನ್ನ ಮೇಲೆ ದಯೆತೋರಿ ನನಗೆ ಮುಂದೆ ಬರಬಹುದಾಗಿದ್ದ ಕಷ್ಟಗಳಿಂದ ಪಾರು ಮಾಡುತ್ತಿದ್ದರು. ಸಾಯಿಬಾಬಾರವರೊಂದಿಗೆ ನಾನು ಕಳೆದ ಕ್ಷಣಗಳು ಅತ್ಯಂತ ಮಧುರವಾಗಿದ್ದವು. ನಾನು ಸಾಯಿಯವರ ಸನ್ನಿಧಿಯಲ್ಲಿ ಇದ್ದಾಗ ನನ್ನ ಮನಸ್ಸಿನ ಎಲ್ಲ ಚಿಂತೆಗಳೂ ದೂರವಾಗುತ್ತಿದ್ದವು. ನನ್ನ ಮನದಲ್ಲಿದ್ದ ಹೆದರಿಕೆ ಮಾಯವಾಗಿ ಎಲ್ಲಾ ಕಷ್ಟಗಳನ್ನೂ ಎದುರಿಸುವ ಸ್ಥೈರ್ಯ ಮತ್ತು ಆತ್ಮವಿಶ್ವಾಸ ನನ್ನಲ್ಲಿ ಉಂಟಾಗುವಂತೆ ಮಾಡುತ್ತಿದ್ದರು. ಬಾಬಾರವರಿಗೆ ನನ್ನ ಮೇಲೆ ಅತ್ಯಂತ ಕರುಣೆ ಮತ್ತು ಪ್ರೀತಿ ಇದ್ದಿತು. ನಾನು ಮೊದಲ ಬಾರಿಗೆ ಶಿರಡಿಗೆ ಹೋದಾಗ ನಾನು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದೆ. ನನಗೆ ತಿಂಗಳಿಗೆ ಕೇವಲ 60 ರುಪಾಯಿ ಸಂಬಳ ಬರುತ್ತಿತ್ತು. ಸಾಯಿಯವರು ನನ್ನಿಂದ ಹೆಚ್ಚಿಗೆ ದಕ್ಷಿಣೆ ಕೇಳುತ್ತಲೇ ಇರಲಿಲ್ಲ. ಆದರೆ, ಒಮ್ಮೆ ಸಾಯಿಯವರು ನಾನು ತಂದಿದ್ದ ಎಲ್ಲಾ ಹಣವನ್ನು ದಕ್ಷಿಣೆಯಾಗಿ ಕೇಳಿ ಪಡೆದರು. ಆದರೆ, ನಾನು ಶಿರಡಿಯಲ್ಲಿ ಇರುವ ತನಕ ಮತ್ತು ಶಿರಡಿಯಿಂದ ಮುಂಬೈನ ನನ್ನ ಮನೆಯವರೆಗೆ ಹೋಗುವ ತನಕ ಯಾವುದೇ ತೊಂದರೆ ಆಗದಂತೆ ನನ್ನ ಖರ್ಚುಗಳನ್ನೆಲ್ಲಾ ಅವರೇ ನೋಡಿಕೊಂಡರು. ಸಾಯಿಬಾಬಾರವರು ತಾವು ದಕ್ಷಿಣೆ ಪಡೆಯುವುದರಿಂದ ಮತ್ತು ನಮಗೆ ಹಣವನ್ನು ನೀಡುವುದರಿಂದ ನಮಗೆ ಒಳ್ಳೆಯದೇ ಆಗುವಂತೆ ನೋಡಿಕೊಳ್ಳುತ್ತಾರೆ. ನನ್ನ ಪಾರ್ಸಿ ಧರ್ಮ ನಾನು ಸಾಯಿ ಭಕ್ತನಾಗುವುದಕ್ಕೆ ಯಾವುದೇ ಅಡ್ಡಿಯನ್ನು ಮಾಡಲಿಲ್ಲ. ನಮ್ಮ ಧರ್ಮದಲ್ಲಿ ಅಗ್ನಿಗೆ ಪ್ರಾರ್ಥನೆ ಮಾಡುತ್ತೇವೆ. ಅದೇ ರೀತಿ, ಸಾಯಿಬಾಬಾರವರೂ ಕೂಡ ದ್ವಾರಕಾಮಾಯಿಯಲ್ಲಿದ್ದ ಧುನಿಯಲ್ಲಿ ಸದಾ ಅಗ್ನಿಯನ್ನು ಉರಿಸುತ್ತಿದ್ದರು. ದ್ವಾರಕಾಮಾಯಿಯಲ್ಲಿದ್ದ ಧುನಿಯ ಪಕ್ಕದಲ್ಲಿ ನಿಂತು ಪ್ರಾರ್ಥಿಸಿದರೆ ನನಗೆ ನಮ್ಮ ಪಾರ್ಸಿಗಳ ಅಥವಾ ಜೋರಾಸ್ತ್ರಿಯನ್ ಗಳ ಆಲಯವಾದ "ಅಗಾರಿ" ಯಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿದ್ದಂತೆ  ಅನುಭವವಾಗುತ್ತಿತ್ತು" ಎಂದು ಭಾವುಕರಾಗಿ ನುಡಿಯುತ್ತಾರೆ. 

(ಆಧಾರ: ಪೂಜ್ಯ ಬಿ.ವಿ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ,  ಸಂಚಿಕೆ 3,  ಕನ್ನಡ ಅನುವಾದ: ಶ್ರೀಕಂಠ ಶರ್ಮ)

No comments:

Post a Comment