Saturday, August 27, 2011

ಸಾಯಿ ಮಹಾಭಕ್ತ  - ಮೋರೆಶ್ವರ್ ಡಬ್ಲ್ಯೂ.ಪ್ರಧಾನ್  - ಕೃಪೆ: ಸಾಯಿಅಮೃತಧಾರಾ.ಕಾಂ



ಮೋರೆಶ್ವರ್ ಡಬ್ಲ್ಯೂ.ಪ್ರಧಾನ್ ರವರು ಕೆಲವು ಕಾಲ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ನಾನಾ ಸಾಹೇಬ್ ಚಂದೋರ್ಕರ್ ರವರ ಪ್ರಚೋದನೆ ಮೇರೆಗೆ ಸಾಯಿಬಾಬಾರವರ ಬಳಿಗೆ ಬಂದರು .ಒಮ್ಮೆ ಪ್ರಧಾನ್ ರವರ ಬಂಧುಗಳು ಮೇ 1910 ರಲ್ಲಿ ಚಂದೋರ್ಕರ್ ರವರ ಹತ್ತಿರ ಮಾತನಾಡುತ್ತಾ ಇದ್ದರು. ಆಗ ಮೋರೆಶ್ವರ್ ರವರ ಸಹೋದರ ಅಕ್ಕಲಕೋಟೆ ಮಹಾರಾಜರಂತೆ ಈಗ ಯಾರಾದರೂ ಸಂತರು ಇದ್ದಾರೆಯೇ ಎಂದು ಕೇಳಲು ಚಂದೋರ್ಕರ್ ರವರು ಶಿರಡಿಯಲ್ಲಿ ಸಾಯಿಬಾಬಾ ಎಂಬ ಮಹಾತ್ಮರಿದ್ದಾರೆ. ಅಲ್ಲಿಯವರೆಗೆ ಇವರ ಬಂಧುಗಳು ಸಾಯಿಯವರ ಹೆಸರನ್ನೇ ಕೇಳಿರಲಿಲ್ಲ. ಚಂದೋರ್ಕರ್ ರವರು ಶಿರಡಿಯು ಅಹಮದ್ ನಗರ ಜಿಲ್ಲೆಯ ಕೋಪರ್ ಗಾವ್ ತಾಲ್ಲೂಕಿನಿಂದ 10 ಕಿಲೋಮೀಟರ್ ದೂರದಲ್ಲಿ ದೌಂಡ್ ಮನಮಾಡ್ ದಾರಿಯಲ್ಲಿ ಇರುವುದಾಗಿ ಹೇಳಿ ಸಾಯಿಬಾಬಾರವರ ಶಕ್ತಿ, ದಯೆ, ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ವಿವರ ನೀಡಿದರು. ಈ ಮಾತನ್ನು ಕೇಳಿದ ಮರುದಿನವೇ 14 ಜನಗಳು ಶಿರಡಿಗೆ ಪ್ರಯಾಣ ಬೆಳೆಸಿದರು. ಆದರೆ ಆ ಗುಂಪಿನಲ್ಲಿ ಪ್ರಧಾನ್ ಇರಲಿಲ್ಲ. ಅವರೆಲ್ಲ ಸಾಯಿಬಾಬಾರವರ ದರ್ಶನ ಮಾಡಿ ಬರುವಾಗ ತಮ್ಮ ಜೊತೆ ಸಾಯಿಯವರ ಚಿತ್ರಪಟ, ದಾಸಗಣು ರವರ ಲೀಲಾಮೃತ (ಅಧ್ಯಾಯ 31 - ಸಾಯಿಯವರ ಜೀವನ ಮತ್ತು ಪವಾಡ) ಪುಸ್ತಕವನ್ನು ತೆಗೆದುಕೊಂಡು ಬಂದರು. ಆ ಪುಸ್ತಕವನ್ನು ಓದಿದ ಮೇಲೆ ಪ್ರಧಾನ್ ರವರ ಅನುಮಾನಗಳೆಲ್ಲವೂ ದೂರವಾಗಿ ಸಾಯಿಬಾಬಾರವರ ಪರಮ ಭಕ್ತರಾದರು. ಅವರ ಪತ್ನಿ ಇನ್ನು ಹೆಚ್ಚಿನ ಪರಮಭಕ್ತಳಾದಳು. ಆ ಕೂಡಲೇ ಅವರು ಶಿರಡಿಗೆ ಹೋಗುವ ನಿರ್ಧಾರ ಮಾಡಿದರು. 

ಇವರ ಬಂಧುಗಳು ಶಿರಡಿಯಿಂದ ಬಂದ 15 ದಿನಗಳ ನಂತರ ಪ್ರಧಾನ್ ರವರು ತಮ್ಮ ಪತ್ನಿ ಮತ್ತು ತಮ್ಮ ಮಕ್ಕಳಾದ ಬಾಬು ಮತ್ತು ಖಾಪು ಅವರ ಜೊತೆಗೂಡಿ ಶಿರಡಿಗೆ ಹೊರಟರು. ಅವರು ಬಾಬಾರವರಿಗೆ ಕೊಡಲು ಸ್ವಲ್ಪ ಚಿನ್ನದ ಸವರನ್ ಗಳನ್ನು ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದರು. ಇವರೆಲ್ಲ ಶಿರಡಿಗೆ ಆಗಮಿಸಿದಾಗ ಬಾಬಾರವರು ಲೇಂಡಿ ತೋಟದ ದಾರಿಯಲ್ಲಿ ನಿಂತು ಇವರ ಬರುವಿಗಾಗಿ ಕಾಯುತ್ತಿದ್ದರು. ಕೂಡಲೇ ಪ್ರಧಾನ್ ಕುಟುಂಬದವರು ಗಾಡಿಯಿಂದ ಇಳಿದು ಸಾಯಿಬಾಬಾರವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.  ಆ ಸಮಯದಲ್ಲಿ ರಾವ್ ಬಹದ್ದೂರ್ ಸಾಥೆ ಮತ್ತು ಮೊದಲನೇ ತರಗತಿ ಸಬ್ ಜಡ್ಜ್ ನೂಲ್ಕರ್ ರವರು ಅಲ್ಲಿದ್ದರು. ಅವರನ್ನೆಲ್ಲ ಭೇಟಿ ಮಾಡಿ ಎಲ್ಲರೊಂದಿಗೆ ಮಸೀದಿಯೊಳಗೆ ಹೋದರು. ಪ್ರಧಾನ್ ರವರು ತಾವು ಬಾಬಾರವರಿಗೆ ಕೊಡಲು ತಂದಿದ್ದ ವಸ್ತುಗಳನ್ನು ಕೊಡಲು ಇಚ್ಚಿಸಿದರು. ಆದರೆ ಬಾಬಾರವರು ಇವರನ್ನು ಆಗಲೇ ಪರೀಕ್ಷೆ ಮಾಡಲು ಆರಂಭಿಸಿದ್ದರು. ಬಾಬಾರವರು ಇವರಿಂದ ದಕ್ಷಿಣೆ ಕೇಳಿದರು. ಪ್ರಧಾನ್ ರವರು ಬಾಬಾರವರಿಗೆ 20 ರುಪಾಯಿಗಳನ್ನು ಕೊಡಬೇಕೆಂದು ಅಂದುಕೊಂಡಿದ್ದರು. ಆದರೆ ಅದಕ್ಕೆ ಬದಲಾಗಿ ಅವರು ಬಾಬಾರವರಿಗೆ ಚಿನ್ನದ ನಾಣ್ಯ ನೀಡಿದರು. ಬಾಬಾರವರು ಅದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ಅದೇನೆಂದು ಮತ್ತು ಅದ ಬೆಲೆ ಏನೆಂದು ಕೇಳಲು ನೂಲ್ಕರ್ ರವರು ಅದು ಚಿನ್ನವೆಂದು ಮತ್ತು ಅದರ ಬೆಲೆ 15 ರುಪಾಯಿಗಳೆಂದು ತಿಳಿಸಿದರು. ಬಾಬಾರವರು ಆ ಚಿನ್ನದ ನಾಣ್ಯವನ್ನು ಪ್ರಧಾನ್ ರವರಿಗೆ ಹಿಂತಿರುಗಿಸಿ ಅದು ತಮಗೆ ಬೇಡವೆಂದು ಪ್ರಧಾನ್ ರವರಿಗೆ ಹಿಂತಿರುಗಿಸಿ ಅವರಿಂದ 15 ರುಪಾಯಿ ದಕ್ಷಿಣೆ ಕೇಳಿದರು. ಪ್ರಧಾನ್ ರವರು ಬಾಬಾರವರಿಂದ ಸ್ಪರ್ಷಿಸಲ್ಪಟ್ಟ ಚಿನ್ನದ ನಾಣ್ಯವನ್ನು ಸಂತೋಷದಿಂದ ವಾಪಸ್ ಪಡೆದು ಬಾಬಾರವರಿಗೆ 15 ರುಪಾಯಿಗಳನ್ನು ಕೊಟ್ಟರು. ಬಾಬಾರವರು ಆ ಹಣವನ್ನು ಎಣಿಸುವ ಹಾಗೆ ಮಾಡಿ ಅದರಲ್ಲಿ 10 ರುಪಾಯಿಗಳಿವೆ ಎಂದು ಎಂದು ಹೇಳಿ ಮತ್ತೆ 5 ರುಪಾಯಿಗಳನ್ನು ಕೇಳಿದರು. ಪ್ರಧಾನ್ ರವರಿಗೆ ಬಾಬಾರವರು ತಮ್ಮನ್ನು ಪರೀಕ್ಷಿಸುತ್ತಿರುವ ವಿಷಯ ತಿಳಿಯಿತು ಮತ್ತು ತಾವು 20 ರುಪಾಯಿ ದಕ್ಷಿಣೆ ಕೊಡುತ್ತೇನೆಂದು ಅಂದುಕೊಂಡಿದ್ದರಿಂದ ಮರು ಮಾತನಾಡದೆ ಪುನಃ 5 ರುಪಾಯಿಗಳನ್ನು ಕೊಟ್ಟರು. ಆಗ ಪ್ರಧಾನ್ ರವರು ತಾವು 20 ರುಪಾಯಿ ಕೊಡಬೇಕೆಂದಿದ್ದೆ. ಬಾಬಾರವರು ಅಷ್ಟೇ ಹಣವನ್ನು ತೆಗೆದುಕೊಂಡರು. ಹೆಚ್ಚಿಗೆ ಕೇಳಲೇ ಇಲ್ಲ. ಬಾಬಾರವರ ವೈರಾಗ್ಯ, ಹಣದ ಮೇಲಿನ ತಾತ್ಸಾರ ಇದರಿಂದ ಸ್ಪಷ್ಟವಾಯಿತು. ಅಲ್ಲದೇ, ಬಾಬಾರವರು ಭಕ್ತರನ್ನು ಪರೀಕ್ಷಿಸುವ ವಿಧಾನವೂ ಸ್ಪಷ್ಟವಾಗಿತ್ತು. 

ಬಾಬಾರವರು ಅವರುಗಳಿಗೆ ತಮ್ಮಲ್ಲಿ ನಂಬಿಕೆ ಬರುವಂತೆ ಮಾಡಲು ತಮ್ಮ ಅಂತರ್ ಜ್ಞಾನದಿಂದ ಮತ್ತು ಪವಾಡಗಳ ಮುಖಾಂತರ ಸಹಾಯ ಮಾಡುತ್ತಿದ್ದರು. ಇನ್ನೊಂದು ಸಂದರ್ಭದಲ್ಲಿ ಅವರು ಬಾಬಾರವರನ್ನು ಭೇಟಿ ಮಾಡಿದಾಗ ಅವರನ್ನು ಭಾವ್ ಎಂದು ಸಂಬೋಧಿಸಿ "ಇನ್ನು 2-4 ದಿನಗಳಲ್ಲಿ ಎಲ್ಲಾ ಸರಿಹೋಗುತ್ತದೆ" ಎಂದಷ್ಟೇ ಹೇಳಿ ಅವರಿಗೆ ಉಧಿಯನ್ನು ನೀಡಿದರು. ಪ್ರಧಾನ್ ರವರು ಮಸೀದಿಯಿಂದ ಹಿಂತಿರುಗಿದರು. ಪ್ರಧಾನ್ ರವರು 8 ದಿನಗಳು ಶಿರಡಿಯಲ್ಲಿದ್ದರು. ಆ ಸಮಯದಲ್ಲಿ ಬಾಬಾರವರಿಗೆ ಪ್ರತ್ಯೇಕವಾದ ಔತಣವನ್ನು ಏರ್ಪಡಿಸಿ ಬಾಬಾರವರನ್ನು ಯಾವ ಅಡಿಗೆ ಮಾಡಿಸಲಿ, ಯಾರನ್ನು ಆಹ್ವಾನಿಸಲಿ ಎಂದು ಕೇಳಿದರು. ಬಾಬಾ ಅವರು "ಒಬ್ಬಟ್ಟು ಔತಣವಿರಲಿ, ಬಾಬು ಮತ್ತು ದಾದಾ ಕೇಳ್ಕರ್ ಅವರ ಸೋದರಳಿಯನನ್ನು ಆಹ್ವಾನಿಸು. ನಾನೂ ಬರುತ್ತೇನೆ" ಎಂದರು. ಮರುದಿನ ಊಟದ ಸಮಯದಲ್ಲಿ ಎಲ್ಲರಿಗೂ ಬಡಿಸಿದರು ಮತ್ತು ಒಂದು ಎಲೆಯನ್ನು ಬಾಬಾ ಅವರಿಗೆ ಮೀಸಲಾಗಿಟ್ಟರು ಮತ್ತು ಇತರೆ ಪದಾರ್ಥಗಳನ್ನು ಇಡಲಾಯಿತು. ಒಂದು ಕಾಗೆ ಬಂದು ಒಬ್ಬಟ್ಟನ್ನು ಮಾತ್ರ ತೆಗೆದುಕೊಂಡು ಹೋಯಿತು. ಅವರುಗಳು "ಬಾಬಾರವರೇ ಕಾಗೆ ಮತ್ತು ತಮಗೆ ಇಷ್ಟವಾದ ಒಬ್ಬಟ್ಟನ್ನು ತೆಗೆದುಕೊಂಡರು" ಎಂದರು.

ಆ ದಿನ ಸಾಯಂಕಾಲ ಬಾಬಾರವರು ತಮ್ಮ ಅಂತರ್ಜ್ಞಾನದ ಬಗ್ಗೆ ಸುಳಿವು ಕೊಟ್ಟರು. ಬಾಬಾರವರು ತಮ್ಮ ಒಂದು ಕಡೆ ಕಾಲನ್ನು ಮುಟ್ಟಿಕೊಂಡು ಈ ದೇಹದ ಭಾಗವೆಲ್ಲಾ ಬಹಳ ನೋವಾಗುತ್ತಿದೆ ಎಂದರು. ಬಾಬಾರವರು ಆರೋಗ್ಯವಾಗಿರುವಂತೆ ಕಂಡರು. ಪ್ರಧಾನ್ ರವರಿಗೆ ಬಾಬಾರವರ ಮಾತಿನ ಅರ್ಥ ತಿಳಿಯಲಿಲ್ಲ. ಅವರು ಮುಂಬೈಗೆ ಹಿಂತಿರುಗಿದ ನಂತರ ಬಾಬಾರವರ ಮಾತಿನ ಅರ್ಥ ತಿಳಿಯಿತು. ಅವರು ಶಿರಡಿಯಲ್ಲಿದ್ದಾಗ ಒಂದು ಗುರುವಾರ, ಪ್ರಧಾನ್ ರವರು ಬಾಬಾ ಅಡಿಗೆ ಮಾಡುತ್ತಿದ್ದುದನ್ನು ನೋಡಿದರು. ಅವರು ಎಲ್ಲರನ್ನೂ ಕಳುಹಿಸಿ ಮಸೀದಿಯಲ್ಲಿ ಒಬ್ಬರೇ ಹಂಡೆಯಲ್ಲಿ ಬೇಯಿಸುತ್ತಿದ್ದರು. ಪ್ರಧಾನ್, ಬಾಪು ಮತ್ತು ಬಾಬು ಒಳಗೆ ಹೋದರು. ಬಾಬಾ ಅವರುಗಳನ್ನು ಸ್ವಾಗತಿಸಿದರು. ಇವರನ್ನು ಮಾತ್ರವೇ ಖಾಸಗಿಯಾಗಿ ಭೇಟಿ ಮಾಡಿ ಇತರರನ್ನು ಕಳುಹಿಸಿದರು. ಬಾಬಾರವರು ಏನೋ ಹಾಡುತ್ತಿರುವುದನ್ನು ಕಂಡು ಬಂದು ಪ್ರಧಾನ್ ಅವರು ಅದನ್ನು ಗ್ರಹಿಸಿದರು. ಬಾಬಾರವರು "ಶ್ರೀರಾಮ್ ಜಯರಾಂ, ಜಯ ಜಯ ರಾಮ್" ಎಂದು ಹಾಡುತ್ತಿದ್ದರು. ಕೂಡಲೇ ಪ್ರಧಾನ್ ರವರು ಉದ್ವೇಗದಿಂದ ಬಾಬಾರವರ ಪಾದಗಳಲ್ಲಿ ತಮ್ಮ ಶಿರವನ್ನು ಇರಿಸಿದರು. ಈ ಪದಗಳು ಗುರುಮಂತ್ರವಾಗಿದ್ದು ಅವರ ಕುಲಗುರು ಹರಿಬುವ ಈ ಮಂತ್ರವನ್ನು ಪ್ರಧಾನ್ ರವರಿಗೆ ಹೇಳಿಕೊಟ್ಟಿದ್ದರು. ಅವರು ಈ ಮಂತ್ರವನ್ನು ಮರೆತಿದ್ದರು. ಬಾಬಾರವರ ದಯೆಯಿಂದ ಅವರಿಗೆ ಗುರುಮಂತ್ರವನ್ನು ಪುನಃ ಹೇಳಿ ಜ್ಞಾಪಿಸಿ ಅವರ ಆಧ್ಯಾತ್ಮಿಕ ಉನ್ನತಿಗೆ ಅನುವು ಮಾಡಿಕೊಟ್ಟರು. ಈ ತರಹ ಆಳವಾದ ಬಾಬಾರವರ ಪ್ರೇಮದಿಂದ ಪ್ರಧಾನ್ ರವರು ಬಾಬಾರವರನ್ನು ಮೆಚ್ಚಿದರು. ಹಂಡೆಯಲ್ಲಿದ್ದ ಪದಾರ್ಥಗಳು ಕುದಿಯುತ್ತಿರುವಾಗ ಬಾಬಾರವರು ತಮ್ಮ ಇಡೀ ಕೈಯನ್ನು ಸ್ಪೂನ್ ಅಥವಾ ಸೌಟು ಇಲ್ಲದೇ ಕಲಸುತ್ತಿದ್ದುದು, ಅವರ ಕೈಗಳು ಸುಡುವುದಾಗಲೀ, ಊದಿಕೊಂಡಾಗಲೀ ಆಗಲಿಲ್ಲ. ಆಗ ಬಾಬಾರವರು ಕೂಡಲೇ ಪ್ರಧಾನ್ ಅವರನ್ನು ಮತ್ತು ಇಬ್ಬರು ಹುಡುಗರನ್ನು ಕರೆದುಕೊಂಡು ಲೇಂಡಿಬಾಗ್ ಕಡೆ ನಡೆದರು. ಸಾಮಾನ್ಯವಾಗಿ ಆ ಸಮಯದಲ್ಲಿ ಬಾಬಾ ಲೇಂಡಿಬಾಗ್ ಗೆ ಹೋಗುತ್ತಿರಲಿಲ್ಲ. ಆದರೆ, ಇವುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಗುಂಡಿಗಳನ್ನು ತೋಡಿ ಕೆಲವು ಕಾಳುಗಳನ್ನು ಪ್ರಧಾನ್ ರವರಿಗೆ ಕೊಟ್ಟು ಆ ಗುಂಡಿಯಲ್ಲಿ ಬಿತ್ತಲು ಹೇಳಿದರು. ಅನಂತರ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಯಿತು. ಬಾಬಾರವರು ಪ್ರಧಾನ್ ರವರಿಗೆ ಅದಕ್ಕೆ ನೀರು ಹಾಕಲು ಹೇಳಿದರು. ಅನಂತರ ಎಲ್ಲರೂ ಮಸೀದಿಗೆ ಹಿಂತಿರುಗಿದರು. ಇದರ ವೈಶಿಷ್ಟ್ಯತೆ ಏನೆಂದರೆ 7-8 ವರ್ಷದ ನಂತರ ಈ ಲೇಂಡಿಬಾಗ್ ನ್ನು ಪ್ರಧಾನ್ ರವರು 1500 ರುಪಾಯಿಗಳನ್ನು ಕೊಟ್ಟು ಅದನ್ನು ಸಾಯಿಬಾಬಾ ಸಂಸ್ಥಾನಕ್ಕೆಂದು ಕೊಂಡುಕೊಂಡರು. ಬಾಬಾರವರು, ಪ್ರಧಾನ್ ರವರು ಇದನ್ನು ಕ್ರಯ ಮಾಡಿ ತೆಗೆದುಕೊಂಡು ಸಂಸ್ಥಾನಕ್ಕೆ ಸಹಾಯ ಮಾಡುತ್ತಾರೆ ಎಂಬುದನ್ನು ಮುಂಚೆಯೇ ಈ ರೀತಿಯಲ್ಲಿ ಗುರುತಿಸಿದ್ದರು.  ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಬಾಬು ಚಂದೋರ್ಕರ್ ಅವರು ಬಾಬಾರವರ ಪಾದ ಪದ್ಮಗಳಲ್ಲಿ ಒಂದು ತಟ್ಟೆಯನ್ನು ಇಟ್ಟು ಅವುಗಳನ್ನು ನೀರಿನಿಂದ ತೊಳೆದು ಪಾದ ತೀರ್ಥವನ್ನು ಮನೆಗೆ ಕೊಂಡೊಯ್ದರು. ಈ ಪದ್ದತಿ ಇರಲಿಲ್ಲ. ಅಲ್ಲಿಯ ತನಕ ಉಧಿಯನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ಪಾದ ತೀರ್ಥವು ಆರತಿ ಸಮಯದಲ್ಲಿ ಮಾತ್ರ ಕೊಡುತ್ತಿದ್ದು ಮನೆಗೆ ತೆಗೆದುಕೊಂಡು ಹೋಗುವ ಪದ್ದತಿ ಇರಲಿಲ್ಲ. ಪ್ರಧಾನ್ ರವರೂ ಸಹ ಸ್ವಲ್ಪ ಪಾದ ತೀರ್ಥವನ್ನು ಮನೆಗೆ ಕೊಂಡೊಯ್ದರು. ಅವರಿಗೆ ಅದೃಷ್ಟವಶಾತ್ ಪಂಜಾಬ್ ಮೇಲ್ ಗೆ ಟಿಕೇಟು ದೊರೆತು ಮನೆಗೆ ಬಂದರು. ಅವರು ಮನೆಗೆ 4-5 ಗಂಟೆ ಮುಂಚಿತವಾಗಿ ಬಂದದ್ದು ಒಳ್ಳೆಯದಾಯ್ತು. ಏಕೆಂದರೆ, ಅವರ ತಾಯಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವುದು ಅವರಿಗೆ ತಿಳಿಯಿತು. ಅವಳಿಗೆ ಬಾಬಾ ಹೇಳಿದಂತೆ ಒಂದು ಪಾರ್ಶ್ವದಲ್ಲಿ ಬಹಳ ನೋವಾಗಿತ್ತು. ಬಾಬಾರವರು ಶಿರಡಿಯಲ್ಲಿ ತಮ್ಮ ಒಂದು ಪಾರ್ಶ್ವ ಬಹಳ ನೋಯುತ್ತಿದೆ ಎಂಬುದು ಅವಳ ನೋವಿಗೆ ಆದರೆ ಬಾಬಾರವರಿಗಲ್ಲ ಮತ್ತು ಪ್ರಧಾನ್ ರವರು ಬೇಗನೆ ಬರಲು ಅವಕಾಶ ಮಾಡಿದ್ದು ಅವರ ಅದೃಷ್ಟ. ಅಂದರೆ ಸಕಾಲದಲ್ಲಿ ಬಾಬಾ ಪಾದತೀರ್ಥವನ್ನು ತಂದು ತಮ್ಮ ತಾಯಿಗೆ ಕುಡಿಸಿದರು. ಅವರ ಸಂಬಂಧಿಕರು ಅವರ ತಾಯಿಯ ಖಾಯಿಲೆ ಸ್ಥಿತಿಯನ್ನು ಪ್ರಧಾನ್ ರವರಿಗೆ ತಿಳಿಸುವುದೋ, ಬೇಡವೋ ಎಂದು ಯೋಚಿಸುತ್ತಿರುವಷ್ಟರಲ್ಲಿ  ಅಂತರ್ ಜ್ಞಾನಿಯಾದ ಬಾಬಾರವರು ಇದನ್ನು ಅರಿತು ಸರಿಯಾದ ಸಮಯಕ್ಕೆ ಹಿಂತಿರುಗಿ ಬರುವಂತೆ ಮಾಡಿದರು. ವೈದ್ಯರು ರೋಗಿಗೆ ಜ್ವರ ಜಾಸ್ತಿಯಾಗಿರುವುದನ್ನು, ಮಲಬದ್ಧತೆಯನ್ನು ಮತ್ತು ಚಡಪಡಿಸುವಿಕೆಯನ್ನು ನೋಡಿ ಆಪತ್ತಿದೆ ಎಂದು ಹೇಳಿದರು. ಆದರೆ ರಾತ್ರಿ ಹೊತ್ತಿಗೆ ಮಲವಿಸರ್ಜನೆ ಆಗಿ ಪರಿಸ್ಥಿತಿ ಸುಧಾರಿಸಿದೆ ಎಂದರು. ಬೆಳಿಗ್ಗೆ 4:30 ಗಂಟೆಯಲ್ಲಿ ಪ್ರಧಾನ್ ರವರು ಮನೆಗೆ ಬಂದರು. ಕೂಡಲೇ ಅವರಿಗೆ ಬಾಬಾರವರ ತೀರ್ಥವನ್ನು ಕೊಟ್ಟರು. ನಿದ್ರೆ ಬಂದಿತು. ಸ್ವಲ್ಪ ಹೊತ್ತಿನ ನಂತರ ಮಲವಿಸರ್ಜನೆಯಾಯಿತು. ಜ್ವರ ಇಳಿಮುಖವಾಯಿತು. ವೈದ್ಯರು ಬಂದು ಪರಿಸ್ಥಿತಿ ಸುಧಾರಿಸಿದೆ ಎಂದರು. ಬಾಬಾರವರು ಪ್ರಧಾನ್ ರವರ ತಾಯಿಗೆ ಎಲ್ಲಾ ಅನುಕೂಲವನ್ನು ನಿಯೋಜಿಸಿದರು. ಇನ್ನೇನು ನಾಲ್ಕು ದಿನಗಳಲ್ಲಿ ಸರಿಹೋಗುತ್ತದೆ ಎಂದು ಬಾಬಾ ಹೇಳಿದರು. ನಿಜವಾಗಿ ಎರಡು ದಿನಗಳೊಳಗೆ ಪ್ರಧಾನ್ ತಾಯಿ ಗುಣವಾದರು. ಬಾಬಾರವರ ಅಂತರ್ ಜ್ಞಾನ ಮತ್ತು ಅವರ ತಾಯಿಗೆ ಮಾಡಿದ ಸಹಾಯ, ಇವುಗಳು ಪ್ರಧಾನ್ ರವರಿಗೆ ಬಾಬಾರವರಲ್ಲಿ ಭಕ್ತಿ ಹೆಚ್ಚಾಗಲು ಕಾರಣವಾದವು ಮತ್ತು ಪ್ರಧಾನ್ ರವರ ಇಡೀ ಕುಟುಂಬವೇ ಬಾಬಾರವರ ಆಶೀರ್ವಾದ ಪಡೆದರು.

ಒಂದು ದಿನ ರಾತ್ರಿ ದಾಸಗಣೂರವರು ಪ್ರಧಾನ್ ರ ತಾಯಿಯ ಊರಿನಲ್ಲಿ ಕೀರ್ತನೆ ಮಾಡುತ್ತಿದ್ದರು. ಇದಾದ ನಂತರ ದಾಸಗಣೂರವರು ಪ್ರಧಾನ್ ರವರ ಸ್ವಂತ ಸ್ಥಳವಾದ ಸಂತಾಕ್ರೂಜ್ ಗೆ ಹೋಗಿ ಅಲ್ಲಿ 2 ರಿಂದ 5 ಗಂಟೆಯ ತನಕ ಕೀರ್ತನೆ ಮಾಡಿದರು. ಅದನ್ನು ಕೇಳುತ್ತಾ ಅವರ ಪತ್ನಿಗೆ ಶಿರಡಿಗೆ ಹೋಗಬೇಕೆಂಬ ಇಚ್ಛೆ ಆಯಿತು. ಬಾಬಾರವರು ಅವಳ ಕನಸಿನಲ್ಲಿ ಕಾಣಿಸಿಕೊಂಡು ಅವಳ ಆಸೆ ಇನ್ನೂ ಜಾಸ್ತಿಯಾಯಿತು. ಆದರೆ ಅವಳು ಹೊರಟರೆ ಅವಳ ನಾದಿನಿಗೆ ಹೆರಿಗೆ ದಿನವಾದ್ದರಿಂದ ತೊಂದರೆಯಾಗುವುದರಲ್ಲಿತ್ತು. ಹೇಗಾದರೂ ಆಗಲಿ ಎಂದು ಇಬ್ಬರೂ ಪ್ರಧಾನ್ ಅವರೊಡಗೂಡಿ ಶಿರಡಿಗೆ ಹೊರಟರು. ಚಂದೋರ್ಕರ್ ರವರು ಪ್ರಧಾನ್ ಅವರನ್ನು ಕೋಪರ್ ಗಾವ್ ರೈಲ್ವೆ ನಿಲ್ದಾಣದಲ್ಲಿ ಬರಮಾಡಿಕೊಂಡರು. ಆಗ ಚಂದೋರ್ಕರ್ ಅವರಿಗೆ ಆಗಾಗ್ಗೆ ಜ್ವರ ಬರುತ್ತಿತ್ತು. ಅವರು ಕೋಪರ್ ಗಾವ್ ನಲ್ಲಿ ಸೇರಿ ಶಿರಡಿಗೆ ಹೊರಡುವ ಸಮಯ ಜ್ವರ ಬರುವುದಾಗಿತ್ತು. ಆದ್ದರಿಂದ ಶಿರಡಿಯಿಂದ ಬರುವ ಮೊದಲೇ ಬಾಬಾರವರು ಅನುಮತಿ ನೀಡಿದ್ದರು. ಆಗ ಕೋಪರ್ ಗಾವ್ ಗೆ ಬಂದು ಜ್ವರ ತಪ್ಪಿಸಿಕೊಂಡರು. ಅವರಿಗೆ ಮುಂದೆ ಜ್ವರ ಬರಲೇ ಇಲ್ಲ.

 ಅವರುಗಳು ದ್ವಾರಕಾಮಾಯಿಗೆ ಬಂದು ಸಾಯಿಬಾಬಾರವರಿಗೆ ನಮಸ್ಕಾರಗಳನ್ನು ಸಲ್ಲಿಸಿದಾಗ, ಸಾಯಿಬಾಬಾರವರು ಅವರೆಲ್ಲ ಯೋಗಕ್ಷೇಮವನ್ನು ವಿಚಾರಿಸಿದರು. ಹೀಗೆ ವಿಚಾರ ಮಾಡುತ್ತಾ  ಇದ್ದಾಗ ಪ್ರಧಾನ್ ರವರ ಹೆಂಡತಿಯ ಕಡೆ ತಿರುಗಿ " ಅತಿ ಶೀಘ್ರದಲ್ಲಿಯೇ ಇವಳು ನನ್ನ ಬಾಬುವಿನ ತಾಯಿಯಾಗುತ್ತಾಳೆ" ಎಂದು ನುಡಿದರು. ಆಗ, ಅಲ್ಲಿಯೇ ಇದ್ದ ಶ್ಯಾಮರವರು ಸಾಯಿಬಾಬಾರವರು ಪ್ರಧಾನ್ ರವರ ಅತ್ತಿಗೆಯನ್ನು ಕುರಿತು ಈ ಮಾತನ್ನು ಹೇಳಿದರೇ ಎಂದು ಕೇಳಲು, ಬಾಬಾರವರು "ಇಲ್ಲಾ, ನಾನು ಹೇಳಿದ್ದು ಈ ಮಹಿಳೆಯ ಬಗ್ಗೆ" ಎಂದು ಪ್ರಧಾನ್ ರವರ ಹೆಂಡತಿಯ ಕಡೆ ಬೆರಳು ತೋರಿಸಿ ಹೇಳಿದರು. 

ಸಾಯಿಬಾಬಾರವರು ನುಡಿದಂತೆ ಸರಿಯಾಗಿ 12 ತಿಂಗಳುಗಳ ಒಳಗೆ ಪ್ರಧಾನ್ ರವರ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ "ಬಾಬು" ಎಂದು ನಾಮಕರಣ ಮಾಡಲಾಯಿತು. ಮಗುವನ್ನು ಶಿರಡಿಗೆ ಕರೆದುಕೊಂಡು ಹೋದಾಗ ಬಾಬಾರವರು ಮಗುವನ್ನು ಎತ್ತಿಕೊಂಡು "ಬಾಬು ಎಲ್ಲಿಗೆ ಹೋಗಿದ್ದೆ? ನಿನಗೆ ನನ್ನಿಂದ ತೊಂದರೆ ಆಯಿತೇ? ಬೇಸರ ಆಯಿತೇ" ಎಂದರು. 

ಬಾಬಾರವರು ಅಗಾಗ್ಗೆ ಪ್ರಧಾನ್ ರವರಿಗೆ ತಮ್ಮ ಅತಿಮಾನುಷ ಶಕ್ತಿಯನ್ನು ತೋರಿದ್ದರು. ಮೊದಲನೆ ಸಾರಿ ಶಿರಡಿಗೆ ಬಂದಾಗ ಅವರು ಶಿರಡಿಯಿಂದ ಮರಳಿ ಹೋಗುವಾಗ ಮಳೆಗಾಳಿ ಬಲವಾಗಿತ್ತು. ಸುಮಾರು ಕಾಲು ಗಂಟೆ ಕಾಲ ಮಳೆ ಸುರಿಯುತ್ತಿತ್ತು. ಅದು ಮುಂದುವರಿದಿದ್ದರೆ ಶಿರಡಿ ಕೊಪರ್ ಗಾವ್ ನ ನಡುವೆ ಇದ್ದ ಹಳ್ಳಿಯಲ್ಲಿ ನೀರಿನ ಪ್ರವಾಹ ಬಂದು (ಆಗ ಸೇತುವೆ ಇರಲಿಲ್ಲ) ಅವರುಗಳು ಕೋಪರ್ ಗಾವ್ ರೈಲ್ವೆ ನಿಲ್ದಾಣ ತಲುಪಲಾಗದೆ ಮುಂಬೈಗೆ ಹೋಗುವ ಹಾಗಿರಲಿಲ್ಲ. ಅದ್ದರಿಂದ ಬಾಬಾರವರು ಅನುಮತಿ ನೀಡಲಾರರು ಎಂದು ಹೆದರಿದ್ದರು. ಆದರೆ ಬಾಬಾರವರ ಬಳಿ ಹೋಗಿ ಅನುಮತಿ ಬೇಡಿದಾಗ ಬಾಬಾರವರು ಆಕಾಶವನ್ನು ನೋಡಿ "ಓ ದೇವರೇ, ಈ ಮಳೆಯನ್ನು ನಿಲ್ಲಿಸು. ನನ್ನ ಮಕ್ಕಳು ಮನೆ ಸೇರಬೇಕು. ಅವರು ಕಷ್ಟವಿಲ್ಲದೆ ಹಿಂತಿರುಗಲಿ" ಎಂದರು. ಬಾಬಾ ಹಾಗೆ ಹೇಳುತ್ತಿದ್ದಂತೆಯೇ ಮಳೆ ನಿಧಾನವಾಯಿತು ಮತ್ತು ಕಡಿಮೆಯಾಯಿತು. ಪ್ರಧಾನ್ ಅವರು ಶಿರಡಿಯಿಂದ ಕೋಪರ್ ಗಾವ್ ಗೆ ಯಾವ ಅಡೆ ತಡೆಯಿಲ್ಲದೆ ಸೇರಿ ಪಂಜಾಬ್ ಮೇಲ್ ಹಿಡಿದು (ಸ್ವಲ್ಪ ಉಧಿ ತೀರ್ಥ ತಮ್ಮ ತಾಯಿಗೋಸ್ಕರ ತೆಗೆದುಕೊಂಡು) ಹೊರಟರು. ಈ ತರಹ ಸಹಾಯವನ್ನು ಬಾಬಾರವರು ತಮ್ಮ ಶಕ್ತಿಯನ್ನು ಪಂಚಭೂತಗಳ ಮೇಲೆ ಉಪಯೋಗಿಸಿ ಮಾಡಿದುದು ದೈವೀಕವೆ. ಈ ಸಂದರ್ಭದಲ್ಲಿ ಬಾಬಾರವರು ನಾನು ನಿಮ್ಮೊಡನೆ ಇರುವೆ ಎಂದರು. ಅಂದರೆ ಅವರ ಪ್ರಯಾಣ ಸುಖಮಯವಾಗಲೆಂದು ಅವರ ಭಾವಾರ್ಥವಾಗಿತ್ತು. ಅದರಂತೆ ಅವರ ಪ್ರಯಾಣ ಸುಖಪ್ರದವಾಗಿತ್ತು. ಅವರು ಹಿಂತಿರುಗಿದಾಗ ರಾತ್ರಿಯೇ ಅವರ ನಾದಿನಿಯ ಕನಸಿನಲ್ಲಿ ಒರ್ವ ಫಕೀರ ಕಫ್ನಿ ಧರಿಸಿ ಒಂದು ಟವಲ್ ಅನ್ನು ತಲೆಗೆ ಹೊದ್ದು ಬಾಬಾ ಅವರಂತೆಯೆ ಮನೆಯಲ್ಲಿರುವ ಹಾಗೆ ಕಾಣಿಸಿದರು. ಇದು ಬಾಬಾರವರು ಪ್ರಧಾನ್ ರವರಿಗೆ ನಾನು ನಿಮ್ಮೊಡನೆ ಇರುವೆ ಎಂದು ಹೇಳಿದ ಮಾತು ಸತ್ಯವಾಯಿತು ಎಂದು ತಿಳಿದುಬಂದಿತು. ಬಾಬಾರವರಿಗೆ ಬಾಬು ಎಂದರೆ ಬಹಳ ಅಚ್ಚು ಮೆಚ್ಚು. ಅವನ ಮೊದಲನೇ ಹುಟ್ಟಿದ ಹಬ್ಬಕ್ಕೆ ಶಿರಡಿಗೆ ಕರೆದುಕೊಂಡು ಬಂದಾಗ ಬಾಬಾರವರು ಎರಡು ರುಪಾಯಿ ಬರ್ಫಿಯನ್ನು ತಂದು ಎಲ್ಲರಿಗೂ ಹಂಚಿದರು. ಆಗ ಬಾಬಾರವರು ಈ ಮಗುವಿಗೆ ತಮ್ಮ ತಂಗಿ ಯಾರೂ ಇಲ್ಲವೆ ಎಂದು ಕೇಳಿದರು. ಶ್ರೀಮತಿ ಪ್ರಧಾನ್ ರವರು ನೀವು ಬಾಬು ಒಬ್ಬನನ್ನೆ ಕೊಟ್ಟಿದ್ದೀರಿ ಎಂದು ಉತ್ತರಿಸಿದರು. ಆದರೆ ಬಾಬಾರವರ ನುಡಿಗಳು ಬಹಳ ವಿಶೇಷವಾಗಿತ್ತು. ಬಾಬುವಿನ ಅನಂತರದಲ್ಲಿ ಪ್ರಧಾನ್ ಅವರಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಸಹಾ ಆಯಿತು. ಬಾಬುವಿನ ಹುಟ್ಟಿದ ಹಬ್ಬವನ್ನು ನೆರವೇರಿಸಲು ಪ್ರಧಾನ್ ರವರು ಶ್ಯಾಮಾರವರಿಗೆ ಒಂದು ಔತಣಕೂಟ ಏರ್ಪಡಿಸಿದ್ದರು ಮತ್ತು ಎಲ್ಲರನ್ನೂ ಆಹ್ವಾನಿಸಿದ್ದರು. ಅಂದು ಗುರುವಾರ. ಬಾಪು ಸಾಹೇಬ್ ಬೂಟಿಯವರು ಗುರುವಾರವಾದ್ದರಿಂದ ಹೊರಗಡೆ ಊಟ ಮಾಡುವುದಿಲ್ಲವಾದ್ದರಿಂದ ಬರುವುದಕ್ಕೆ ಆಗುವುದಿಲ್ಲ ಎಂದರು. ಅವರು ಆ ದಿನ ಬಾಬಾರವರ ಬಳಿಗೆ ಹೋದಾಗ ಬಾಬಾರವರು "ನೀನು ಊಟಕ್ಕೆ ಪ್ರಧಾನ್ ರವರ ಮನೆಗೆ ಹೋಗಿದ್ದೆಯಾ?" ಎಂದು ಕೇಳಿದರು. ಬೂಟಿ ಸಾಹೇಬರು "ಈ ದಿನ ಗುರುವಾರ" ಎಂದರು. ಬಾಬಾ "ಆದರೇನು?" ಎಂದರು. ಆಗ ಬೂಟಿಯವರು "ನಾನು ಗುರುವಾರದ ದಿನ ಹೊರಗಡೆ ಊಟ ಮಾಡುವುದಿಲ್ಲ. ಅದು ನನ್ನ ನಿಯಮ" ಎಂದರು. ಅದಕ್ಕೆ ಬಾಬಾರವರು "ಯಾರನ್ನು ಒಲಿಸಿಕೊಳ್ಳಲು" ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಬೂಟಿಯವರು "ನಿಮ್ಮನ್ನು ಒಲಿಸಿಕೊಳ್ಳಲು" ಎಂದು ಉತ್ತರಿಸಿದರು. ಅದಕ್ಕೆ ಬಾಬಾರವರು "ಹಾಗಾದರೆ ನಾನು ಹೇಳುತ್ತೇನೆ, ನೀನು ಈಗ ಹೋಗಿ ಪ್ರಧಾನ್ ಮನೆಯಲ್ಲಿ ಊಟ ಮಾಡಿ ಬಾ" ಎಂದರು. ಆಗ ಮಧ್ಯಾನ್ಹ ನಾಲ್ಕು ಗಂಟೆಯಾಗಿತ್ತು. ಬೂಟಿಯವರು ಪ್ರಧಾನ್ ರವರ ಮನೆಗೆ ಬಂದು ಊಟ ಮಾಡಿದರು. 
ಶ್ರೀಮತಿ ಪ್ರಧಾನ್ ಸಂತಾಕ್ರೂಜ್ ನಲ್ಲಿದ್ದಾಗ ಕನಸಿನಲ್ಲಿ ಬಾಬಾರವರ ಪಾದ ಪೂಜೆ ಮಾಡಿದ್ದಾರೆ. ಚಂದೋರ್ಕರ್ ರವರು ಬಾಬಾರವರಿಗೆ ಅವಳು ತಮ್ಮ ದೈನಂದಿನ ಪಾದುಕಾ ಪೂಜೆಯನ್ನು ಮಾಡಲಿ ಎಂದು ಅವಳನ್ನು ಬೆಳ್ಳಿ ಪಾದುಕೆಗಳೊಂದಿಗೆ ಶಿರಡಿಗೆ ಬರುವಂತೆ ಹೇಳಿದರು ಎಂದು ವಿವರಿಸಿದರು. ಹಾಗೆ ಅವಳ ಎರಡು ಬೆಳ್ಳಿ ಪಾದುಕೆಗಳನ್ನು ತೆಗೆದುಕೊಂಡು ಬಾಬಾರವರ ಪಾದಗಳಿಗೆ ತೊಡಿಸಿ ಪುನಃ ವಾಪಸ್ಸು ತಂದರು. ಬಾಬಾರವರು ಆಗ ಚಂದೋರ್ಕರ್ ರವರಿಗೆ "ನೋಡಿ, ಈ ಮಹಿಳೆ ನನ್ನ ಕಾಲನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾಳೆ" ಎಂದರು. ಇದು ಅವರು ಪಾದುಕಾ ಪೂಜೆಯನ್ನು ಪ್ರೋತ್ಯಾಹಿಸಿದರು ಎಂದು ಅರ್ಥ. ಆಗಿನಿಂದ ಅವರ ಮನೆಯಲ್ಲಿ ಸಾಯಿ ಪಾದುಕಾ ಪೂಜೆ ನಡೆಯುತ್ತಲೇ ಇದೆ.
ಪ್ರಧಾನ್ ರವರು ಶಿರಡಿಗೆ ತಮ್ಮ ಕೊನೆಯ ಭೇಟಿ ನೀಡಿದ್ದು 1918 ರಲ್ಲಿ. ಆಗ ಅವರ ಬಳಿ 3800 ರುಪಾಯಿಗಳಿದ್ದವು. ಆದರೆ ಅವರು ಅಂದುಕೊಂಡಿದ್ದಕಿಂತ ಹೆಚ್ಚಿನ ದಿವಸ ಶಿರಡಿಯಲ್ಲಿದ್ದರು. ಬಾಬಾರವರು ದಕ್ಷಿಣೆ ಕೇಳುತ್ತಲೇ ಇದ್ದರು. ಆದ್ದರಿಂದ ಅವರು ವೆಟರ್ನರಿ ವೈದ್ಯರಿಂದ 1200 ರುಪಾಯಿ ಸಾಲ ಪಡೆದು ಒಟ್ಟು 5000 ರುಪಾಯಿಗಳನ್ನು ದಕ್ಷಿಣೆಯಾಗಿ ಕೊಟ್ಟಿದ್ದರು.

ದಾಸಗಣೂರವರು ಬಾಬಾರವರನ್ನು ದತ್ತಾತ್ರೇಯರ ಅವತಾರ ಎಂದು ತಿಳಿದಿದ್ದರು. ಅವರ ಕೀರ್ತನೆಗಳಿಂದ ಅನೇಕರು ಮತ್ತು ಪ್ರಧಾನ್ ರವರೂ ಸಹ ಬಾಬಾ ದತ್ತಾತ್ರೇಯರ ಅವತಾರರೂಪಿ ಎಂಬ ಸತ್ಯವನ್ನು ಅರಿತಿದ್ದರು. ಬಾಬುವಿಗೆ ಆರೋಗ್ಯ ಕೆಟ್ಟು ಅವರ ಕುಲ ಪುರೋಹಿತರಾದ ಮಾಧವಭಟ್ ರವರಿಂದ ಮಗುವಿಗಾಗಿ ಮಂತ್ರ, ಜಪ, ಪೂಜೆ ಮಾಡಿಸುತ್ತಿದ್ದರು. ಅವರು ಮಗುವಿನ ಅನಾರೋಗ್ಯವು ಮಹಮ್ಮದೀಯರಾದ ಬಾಬಾರವರನ್ನು ಪೂಜೆ ಮಾಡುತ್ತಿರುವುದರಿಂದ ಎಂದು ಹೇಳಿದರು. ಅದಕ್ಕೆ ಶ್ರೀ.ಪ್ರಧಾನ್ ರವರು ಬಾಬಾರವರು ಮಹಮ್ಮದೀಯ ಸಂತರಲ್ಲಿ "ದತ್ತಾವತಾರಿ" ಎಂದು ಉತ್ತರ ನೀಡಿದ್ದರು. ಆ ಉತ್ತರ ಭಟ್ಟನಿಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ಒಂದು ದಿನ ರಾತ್ರಿ ಭಟ್ಟನಿಗೆ ಕನಸಾಯಿತು. ಆ ಕನಸು ಹೀಗಿತ್ತು: "ಒಂದು ದೊಡ್ಡ ಆಕೃತಿ ಮನೆಯ ಮಹಡಿ ಮೆಟ್ಟಿಲುಗಳ ಮೇಲೆ ಕುಳಿತು ಕೈಗಳಲ್ಲಿ ಸಟಕಾ ಕೋಲು ಹಿಡಿದು ಕುಳಿತಿತ್ತು. ಆ ಆಕೃತಿಯು ಅವರಿಗೆ ’ನಾನು ಯಾರೆಂದು ತಿಳಿದಿದ್ದೀಯಾ? ನಾನು ಈ ಮನೆಯ ಯಜಮಾನ’ ಎಂದಿತು. ಭಟ್ಟ ಕೂಡಲೆ ಎನೂ ಹೇಳಲಿಲ್ಲ. ಅವರು ಸಾಯಿಬಾಬಾರವರು ನಿಜವಾಗಿಯೂ ದತ್ತ ಆಗಿದ್ದರೆ ಮತ್ತು ಸರ್ವ ಶಕ್ತರಾಗಿದ್ದರೆ ಈ ಮಗುವನ್ನು ಖಾಯಿಲೆಯಿಂದ ಪಾರುಮಾಡಬೇಕು ಎಂದು ಬಾಬಾರವರ ಭಾವಚಿತ್ರದ ಮುಂದೆ ಹೇಳಿದರು. ಕೆಲವೇ ನಿಮಿಷಗಳಲ್ಲಿ ಮಗುವಿಗೆ ಜ್ವರ ಕಡಿಮೆಯಾಗಿ ಮಗುವು ಮಧ್ಯಾನ್ಹ 4 ಗಂಟೆಗೆ ಸರಿಯಾಗಿ ಚೇತರಿಸಿಕೊಂಡು ಕೆಳಗಡೆ ಆಟ ಆಡೋಣ" ಎಂದಿತು. ಅವರ ತಾಯಿ ಮಗುವನ್ನು ಕೆಳಗೆ ಕರೆದುಕೊಂಡು ಹೋದರು. ಆಗ ಮಾಧವ ಭಟ್ "ಬಾಬಾರವರು ದತ್ತರೂಪಿ" ಎಂದು ಸ್ವತ: ಮನಗಂಡರು ಮತ್ತು 120 ರುಪಾಯಿ ದಕ್ಷಿಣೆ ನೀಡುತ್ತೇನೆಂದು ನಿರ್ಧರಿಸಿದರು. ತಾವು ಅಂದುಕೊಂಡಂತೆ ಮಾಧವ ಭಟ್ ಶಿರಡಿಗೆ ಹೋಗಿ ಬಾಬಾರವರಿಗೆ 120 ರುಪಾಯಿ ದಕ್ಷಿಣೆ ಅರ್ಪಿಸಿದರು. ಆಗ ಬಾಬಾರವರ ಸಂಗಡ ಶ್ಯಾಮರವರು ಕೂಡ ಇದ್ದರು. ಸ್ವಲ್ಪ ಸಮಯದ ನಂತರ ಬಾಬಾರವರು ಭಟ್ಟರನ್ನು ಉದ್ದೇಶಿಸಿ ನನಗೆ ದಕ್ಷಿಣೆ ಕೊಡು ಎಂದರು. ಅದಕ್ಕೆ ಶ್ಯಾಮರವರು "ಬಾಬಾ ಅವರು ಆಗಲೇ ಅಂದರೆ ಬೆಳಿಗ್ಗೆಯೇ 120 ರುಪಾಯಿ ದಕ್ಷಿಣೆ ಕೊಟ್ಟಿದ್ದಾರೆ" ಎನ್ನಲು ಬಾಬಾರವರು ಅವನು ಕೊಟ್ಟಿದ್ದು ದತ್ತನಿಗೆ ಎಂದು ಹೇಳಿ ಶ್ಯಾಮನಿಗೆ "ಅವನನ್ನು ಕೇಳು" ಎಂದರು. ಶ್ಯಾಮಾರವರಿಗೆ ಎನೂ ಅರ್ಥವಾಗಲಿಲ್ಲ. ನಂತರ ಮಾಧವ ಭಟ್ ಅವರು ನಾನು ಬಾಬಾರವರು ದತ್ತರೂಪಿಯಾಗಿದ್ದರೆ 120 ರುಪಾಯಿ ಕೊಡುವೆ ಎಂದು ಪ್ರತಿಜ್ಞೆ ಮಾಡಿದ್ದೆ. ಅದರಂತೆ, 120 ರುಪಾಯಿ ಕೊಟ್ಟಿದ್ದು ಆ ಹರಕೆಯಿಂದಾಗಿ ಎಂದರು. 

ಮಾಧವ ಭಟ್ ಅವರಿಗೆ ಅಲ್ಲಿಯ ತನಕ ಮಕ್ಕಳಿರಲಿಲ್ಲ. ಅವರು ತಮಗೆ ಮಗುವಾದರೆ ಬಾಬಾರವರಿಗೆ 108 ರುಪಾಯಿ ಕೊಡುವೆನೆಂದು ಹರಕೆ ಮಾಡಿಕೊಂಡರು. ಪ್ರಧಾನ್ ತಮ್ಮ ಆಸೆ ನೆರವೇರಿಸಿದರೆ 1008 ರುಪಾಯಿ ಕೊಡುವೆನೆಂದು ಹರಕೆ ಹೊತ್ತರು. ಈ ಹರಕೆಗಳನ್ನು ಮನಸ್ಸಿನಲ್ಲಿ ಮಾಡಿಕೊಂಡು ಅವರು ಬಾಬಾರವರ ಬಳಿಗೆ ಹೋಗಿ 108 ರುಪಾಯಿ ಕೊಟ್ಟರು. ಶ್ಯಾಮಾರವರು ಅವರು ಇಷ್ಟೊಂದು ಹಣವನ್ನು ಅಂದರೆ 108 ರುಪಾಯಿಗಳನ್ನು ಕೊಟ್ಟಿದ್ದಾರೆ ಎಂದರು. ಅದಕ್ಕೆ ಬಾಬಾರವರು ಅದೇನು ಮಹಾ? ಪ್ರಧಾನ್ ಇನ್ನೂ ಹೆಚ್ಚು ಕೊಡುತ್ತಾನೆ ಎಂದು ಪ್ರಧಾನ್ ಕಡೆ ನೋಡುತ್ತಾ ಹೇಳಿದರು. ಬಾಬಾರವರು ಪ್ರಧಾನ್ ಅವರು 1008 ರುಪಾಯಿ ಕೊಡುತ್ತೇನೆಂದು ಹರಕೆ ಹೊತ್ತಿದ್ದನ್ನು ತಿಳಿಸಿ ತಮ್ಮ ಅಂತರ್ಯಾಮಿತ್ವವನ್ನು ಪ್ರಕಟಿಸಿದರು.

ಬಾಬಾರವರು ಪ್ರಧಾನ್ ಅವರ ಪತ್ನಿಯ ಅಧ್ಯಾತ್ಮಿಕ ಪ್ರಗತಿಯ ಬಗ್ಗೆಯೂ ಗಮನವಿತ್ತರು ಮತ್ತು ಅವರ ಮುಂಗೋಪಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಅವರು ಅವಳಿಗೆ ಯಾರದರೂ ನಮ್ಮ ಬಗ್ಗೆ ಹತ್ತು ಮಾತನಾಡಿದರೆ ನಾವು ಅವರಿಗೆ ಒಂದೇ ಮಾತಿನಲ್ಲಿ ಉತ್ತರ ನೀಡೋಣ. ಅವರೊಡನೆ ಜಗಳವಾಗಲೀ, ಯುದ್ಧವಾಗಲೀ ಮಾಡುವುದು ಬೇಡ ಎಂದು ಹೇಳಿದರು. ಬಾಬಾರವರು ಪ್ರಧಾನ್ ಅವರಿಂದ 5000 ರುಪಾಯಿಗಳನ್ನು ತೆಗೆದುಕೊಂಡು ಕೆಲವು ಸಂಜ್ಞೆಗಳನ್ನು ಮಾಡಿದರು. ಅದು ಸ್ಪಷ್ಟವಾಗಿರಲಿಲ್ಲ. ಆ ಸಂಜ್ಞೆಯು ಸ್ವರ್ಗವೇ ಕಳಚಿಕೊಂಡು ಕೆಳಕ್ಕೆ ಬೀಳಲಿ, ಹೆದರಬೇಡ, ನಾನು ನಿನ್ನೊಡನೆ ಇರುವೆ ಎಂದು ಹೇಳಿದ ಹಾಗಿತ್ತು. 

ಪ್ರಧಾನ್ ರವರು 1916 ರಲ್ಲಿ ಶಿರಡಿಯನ್ನು ಬಿಟ್ಟು ಹೊರಡುವಾಗ ಬಾಬಾರವರು "ತುಜಾ ಗರವಮ್, ಯಾ ಬರಮೆ ಯೆ ಯಿಸ್" ಅಂದರೆ, "ನೀನು ಮನೆಗೆ ಹೋಗು. ನಾನು ನಿನ್ನೊಡನೆ ಹೋಗುತ್ತೇನೆ" ಎಂದರು. ಅವರು ಗೋಚರವಾಗಲಿಲ್ಲ. ಆದರೆ, ಪ್ರಯಾಣದುದ್ದಕ್ಕೂ ಸಂತೋಷವಾಗಿ ಸಾಯಿಬಾಬಾರವರು ಇವರ ಸುಖ ಮತ್ತು ಅನುಕೂಲತೆಗಳನ್ನು ನೋಡಿಕೊಳ್ಳುತ್ತಿದ್ದರು. ಯಾವ ಒಂದು ಅಪಾಯವೂ, ಕಷ್ಟವೂ ಆಗುತ್ತಿರಲಿಲ್ಲ. ಬಾಬಾರವರು ಭೌತಿಕ ದೇಹ ತ್ಯಾಗ ಮಾಡಿದ ನಂತರವೂ ಪ್ರಧಾನ್ ಅವರ ಸಹಾಯ ಪಡೆದರು. ಅವರು ಸೆಕೆಂಡ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಆಗಿ 1920-26 ರ ತನಕ ಆರು ವರ್ಷಗಳು ಕಾರ್ಯ ನಿರ್ವಹಿಸಿದರು. 1926 ರಲ್ಲಿ ಅವರು ಜಸ್ಟೀಸ್ ಆಫ್ ಪೀಸ್ ಆದರು. ಆನಂತರ ಅವರು ಮುಂಬೈ ಪ್ರಾಂತ್ಯದ ವಿಧಾನ ಪರಿಷತ್ ಗೆ ಆಯ್ಕೆಯಾಗಿ 1921-23 ರ ತನಕ ಸದಸ್ಯರಾಗಿದ್ದರು. ಅವರು 1927 ರಲ್ಲಿ ರಾವ್ ಬಹದ್ದೂರ್ ಎಂಬ ಪದವಿಯನ್ನು ಗಳಿಸಿದರು. ಶ್ರೀಮತಿ.ಪ್ರಧಾನ್ ರವರು ಬಾಬಾರವರ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ. ಅವರ ಮಗ ಬಾಬುಗೆ ಸಿಡುಬು ರೋಗ ಬಂದಾಗ ವೈದ್ಯರು ಪರೀಕ್ಷಿಸಿ ಬಹಳ ಚಿಂತಾಜನಕವಾಗಿದೆ ಎಂದರು. ಆಗ ಅವರು ಬಾಬಾರವರಲ್ಲಿ ಪ್ರಾರ್ಥನೆ ಮಾಡಿದರು. ಬಾಬಾರವರು ಕಾಣಿಸಿಕೊಂಡು "ಏಕೆ ಅಳುತ್ತೀಯೇ, ಮಗು ಆರೋಗ್ಯವಾಗಿದೆ. ಅವನಿಗೆ ಬೆಳಿಗ್ಗೆ 6-6:30 ಗಂಟೆಗೆ ಒಳ್ಳೆಯ ಆಹಾರ ಕೊಡು" ಎಂದರು. ಮಗು ಬೆಳಿಗ್ಗೆ ಹೊತ್ತಿಗೆ ಆಟವಾಡಲು ಪ್ರಾರಂಭಿಸಿದಾಗ ಡಾಕ್ಟರ್ ಸಮೇತ ಎಲ್ಲರೂ ಅಚ್ಚರಿಗೊಂಡರು. ಒಂದು ದಿನ ಬಾಬಾರವರು ಶ್ರಿಮತಿ.ಪ್ರಧಾನ್ ರವರಿಗೆ ಕನಸಿನಲ್ಲಿ ಕಾಣಿಸಿಕೊಂಡು "ನೀನು ನಿದ್ರೆ ಮಾಡುತ್ತಿರುವೆಯಾ? ಏಳು, ನಿನ್ನ ಮಗುವಿಗೆ ಫಿಟ್ಸ್  ಬರುತ್ತದೆ" ಎಂದರು. ಆಗ ಅವರಿಗೆ ಎಚ್ಚರವಾಗಿ ಕುಳಿತರು. ಮಗುವಿಗೆ ಆಗ ಫಿಟ್ಸ್ ಬಂದಿರಲಿಲ್ಲ. ಆದರೂ ಅವರು ಬಿಸಿ ನೀರು ಮತ್ತು ಮಾತ್ರೆಗಳನ್ನು ಸಿದ್ದವಾಗಿಟ್ಟುಕೊಂಡರು. 3 ಗಂಟೆಯ ಹೊತ್ತಿಗೆ ಮಗುವಿಗೆ ಎಚ್ಚರವಾಗಿ ಫಿಟ್ಸ್ ಬಂದಿತು. ಸಾಮಾನ್ಯವಾಗಿ ಅವರ ಎಲ್ಲಾ ಮಕ್ಕಳಿಗೆ ಫಿಟ್ಸ್ ಬರುತ್ತಿತ್ತು. ಆದರೆ ಎಲ್ಲವೂ ಸಿದ್ದವಾಗಿದ್ದರಿಂದ ಅರ್ಧ ಗಂಟೆಯಲ್ಲಿ ಎಲ್ಲವೂ ಸರಿಯಾಯಿತು. ಒಂದು ಸಾರಿ ಅವಳು ಮಸೀದಿಗೆ ಹೋದಾಗ ಬಾಬಾರವರು ಎಲ್ಲಿ ಕೋಪಿಸಿಕೊಳ್ಳುವರೋ ಎಂದು ಭ್ರಮೆಯಿಂದ ಇದ್ದರು. ಆ ದಿನ ಬಾಬಾರವರು "ನೋಡು, ನಾನು ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ" ಎಂದರು. ಒಂದು ಸಾರಿ ಅವರು ಮಸೀದಿಯಲ್ಲಿ ಪೂಜೆ ಮಾಡುತ್ತಿದ್ದಾಗ ಬಾಬಾರವರು ಅವಳನ್ನು ತಡೆದು "ನೀನು ಮನೆಗೆ ಹೋಗು" ಎಂದರು. ಅವರು ಮನೆಗೆ ಬಂದು ನೋಡಲಾಗಿ ಅವರ ಮಗನು ಒಬ್ಬನೇ ಇದ್ದು ಅಳುತ್ತಿದ್ದ. ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಅವರು ಮಗುವನ್ನು ಸಂತೈಸಿ ಮಸೀದಿಗೆ ಹಿಂತಿರುಗಿದರು. ಆಗ ಬಾಬಾರವರು "ಈಗ ನೀನು ಪೂಜೆ ಮಾಡಬಹುದು" ಎಂದರು. ಹೀಗೆ ಬಾಬಾರವರು ಮಸೀದಿಯಿಂದಲೇ ತಮ್ಮ ಭಕ್ತರ ಮತ್ತು ಅವರ ಕುಟುಂಬದವರ ಮೇಲೆ ಯಾವಾಗಲೂ ಗಮನ ಇಟ್ಟಿದ್ದರು ಮತ್ತು ಅವರುಗಳನ್ನು ರಕ್ಷಿಸುತ್ತಿದ್ದರು.

ಸಾಯಿಯವರು ಇರುವೆಯ ನಡಿಗೆಯನ್ನು ಕೂಡ ಕೇಳಿಸಿಕೊಳ್ಳುತ್ತಾರೆ. ಒಂದು ಸಾರಿ ಅವರು ರೋಗದಿಂದ ಗುಣವಾಗದೆ ಇರುವ ಹುಡುಗನನ್ನು ವೈದ್ಯರ ಸಲಹೆ ಮೀರಿ ಶಿರಡಿಗೆ ಕರೆದುಕೊಂಡು ಬಂದರು. ಮಗುವಿಗೆ ಟ್ರೈನ್ ನಲ್ಲಿದ್ದಾಗ ಜ್ವರ ಇತ್ತು. ಮಗುವು ಕುಳಿತುಕೊಳ್ಳಲಾಗದೆ ಯಾವಾಗಲೂ ಮಲಗಿಯೇ ಇರುತ್ತಿತ್ತು. ಅವರುಗಳು ತಮ್ಮ ಈ ನಡವಳಿಕೆ ನೋಡಿ ಜನಗಳು ನಗುತ್ತಾರೆ ಎಂದು ಭಾವಿಸಿದರು. ಅವರು ಶಿರಡಿ ತಲುಪಿ ಮಗುವನ್ನು ಬಾಬಾರವರ ಬಳಿಗೆ ಕರೆದುಕೊಂಡು ಹೋದಾಗ ಮಗು ಎದ್ದು ನಿಂತು ಆರೋಗ್ಯವಾಗಿದ್ದಿತು. ಬಾಬಾರವರು "ಈಗ ಜನಗಳು ನಗುವುದಿಲ್ಲ" ಎಂದರು.

೧೫.೧೦೧೯೧೮ ಸಾಯಿಬಾಬಾರವರ ಮಹಾ ಸಮಾಧಿಯ ದಿನ ಪ್ರಧಾನ್ ರವರ ಪತ್ನಿಯ ಕನಸಿನಲ್ಲಿ ಬಾಬಾರವರ ದೇಹವನ್ನು ನೋಡಿ ಬಾಬಾರವರು ಸಾಯುತ್ತಿದ್ದಾರೆ ಎಂದರು. ಅದಕ್ಕೆ ಬಾಬಾರವರು "ಸಂತರು ಸಾಯುವುದಿಲ್ಲ. ಅವರು ಮಹಾ ನಿರ್ವಾಣ (ಮಹಾ ಸಮಾಧಿ) ಹೊಂದುತ್ತಾರೆ" ಎಂದು ಉತ್ತರಿಸಿದರು. ಕೊನೆಗೆ ಅದೇ ದಿನ ಸಾಯಿಬಾಬಾರವರು ಇಹಲೋಕ ತ್ಯಜಿಸಿದರು ಎಂಬ ಸುದ್ದಿ ಬಂದಿತು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment