Tuesday, August 16, 2011

ಸಾಯಿ ಮಹಾಭಕ್ತ - ಹಾಜಿ ಮೊಹಮ್ಮದ್ ಸಿದ್ದಿಕ್ ಫಾಲ್ಕೆ  - ಕೃಪೆ: ಸಾಯಿಅಮೃತಧಾರಾ.ಕಾಂ 

ಹಾಜಿ ಮೊಹಮ್ಮದ್ ಸಿದ್ದಿಕ್ ಫಾಲ್ಕೆಯವರು 1841ನೇ ಇಸವಿಯಲ್ಲಿ ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ಜನಿಸಿದರು. ಇವರು ಶ್ರೀಮಂತ ಜಮೀನ್ದಾರರಾಗಿದ್ದು ಎಕರೆಗಟ್ಟಲೆ ಜಮೀನನ್ನು ಹೊಂದಿದ್ದರು.ಇವರು ವಿದ್ಯಾವಂತರೂ ಹಾಗೂ ಆಧ್ಯಾತ್ಮಿಕ ಪ್ರವೃತ್ತಿ ಉಳ್ಳವರೂ ಕೂಡ ಆಗಿದ್ದರು. ಪ್ರಸಿದ್ದ ಪುಣ್ಯ ಕ್ಷೇತ್ರಗಳಾದ ಬಾಗ್ದಾದ್, ಕಾನ್ಸ್ಟೆನ್ಟಿನೋಪಲ್ ಮತ್ತು ಮೆಕ್ಕಾಗೆ ಅನೇಕ ಬಾರಿ ಹೋಗಿ ಬಂದಿದ್ದರು. ದಾದಾ ಸಾಹೇಬ್ ಕಾಪರ್ಡೆಯವರು 14ನೇ ಡಿಸೆಂಬರ್ 1911 ರಿಂದ 23ನೇ ಡಿಸೆಂಬರ್ 1911 ರ ನಡುವೆ ತಾವು ಶಿರಡಿಗೆ ಭೇಟಿ ನೀಡಿಯ ಸಂದರ್ಭದಲ್ಲಿ ನಡೆದ ಈ ಕೆಳಗಿನ ಘಟನೆಯೊಂದನ್ನು ತಮ್ಮ "ಶಿರಡಿ ಡೈರಿ" ಯಲ್ಲಿ  ಉಲ್ಲೇಖಿಸಿದ್ದಾರೆ. 

ದಾದಾ ಸಾಹೇಬ್ ಕಾಪರ್ಡೆಯವರು: "ಹಾಜಿ ಸಿದ್ದಿಕ್ ಫಾಲ್ಕೆ ಅತ್ಯುನ್ನತ ಗುಣಗಳನ್ನು ಹೊಂದಿದ್ದ ಹಳೆಯ ತಲೆಮಾರಿನ ವ್ಯಕ್ತಿಯಾಗಿದ್ದರು. ಇವರು ಕರ್ಮಯೋಗದಲ್ಲಿ ನಂಬಿಕೆ ಇಟ್ಟು ತಮ್ಮ ಪಾಲಿಗೆ ಬಂದ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಿದ್ದರು. ಇವರು ಬಹಳ ಬುದ್ದಿವಂತರಾಗಿದ್ದರು. ಆಧ್ಯಾತ್ಮಿಕ ಮಾರ್ಗದಲ್ಲಿ ಬಹಳ ಪ್ರಗತಿಯನ್ನು ಸಾಧಿಸಿದ್ದರು. ನಮ್ಮಿಬ್ಬರ ನಡೆಯುತ್ತಿದ್ದ ಸಂಭಾಷಣೆಗಳು ಬಹಳ ಉತ್ತಮ ರೀತಿಯಲ್ಲಿ ಇರುತ್ತಿದ್ದವು ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದವು. ಸಾಯಿಬಾಬಾರವರು ಫಾಲ್ಕೆಯವರನ್ನು ಬಹಳ ಇಷ್ಟಪಡುತ್ತಿದ್ದರು ಮತ್ತು ಅವರ ಮನದ ಆಸೆಯೊಂದನ್ನು ಪೂರೈಸಿದರು" ಎಂದು ಹೇಳುತ್ತಾರೆ. 

ಆ ಭೇಟಿಯ ಸಂದರ್ಭದಲ್ಲಿ ಫಾಲ್ಕೆಯವರು ತಮಗೆ ಬಿದ್ದ ಕನಸೊಂದನ್ನು ಕಾಪರ್ಡೆಯವರಿಗೆ ವಿವರಿಸಿ ಅದನ್ನು ಬಾಬಾರವರಿಗೆ ತಿಳಿಸಿ ಅದರ ಅರ್ಥವೇನೆಂದು ತಿಳಿದುಕೊಂಡು ತಮಗೆ ಹೇಳಲು ಕೋರಿಕೊಂಡರು. ಕನಸಿನಲ್ಲಿ ಫಾಲ್ಕೆಯವರು 3 ಸುಂದರವಾದ ಹುಡುಗಿಯರು ಮತ್ತು ಒಬ್ಬ ಅಂಧ ಮಹಿಳೆ ತಮ್ಮನ್ನು ತಮಾಷೆ ಮಾಡಲು ಬಂದಿದ್ದನ್ನು ಕಂಡರು. ಫಾಲ್ಕೆಯವರು ಅವರುಗಳಿಗೆ ತಮ್ಮಿಂದ ದೂರ ಹೋಗುವಂತೆ ಗದರಿಸಿದರು ಮತ್ತು ಹಾಗೆ ಮಾಡದಿದ್ದರೆ ಒದ್ದು ಓಡಿಸುವೆನೆಂದು ತಿಳಿಸಿದರು. ಅಲ್ಲದೆ, ಕೂಡಲೇ ಸ್ವಲ್ಪವೂ ತಡ ಮಾಡದೆ ಸಾಯಿಬಾಬಾರವರನ್ನು ಜೋರಾದ ದನಿಯಿಂದ ಪ್ರಾರ್ಥನೆ ಮಾಡಲು ಆರಂಭಿಸಿದರು. ಪ್ರಾರ್ಥನೆಯನ್ನು ಕೇಳಿ ಅವರುಗಳು ಓಡಿಹೋದರು. ಆಗ ಫಾಲ್ಕೆಯವರು ರೂಮಿನಲ್ಲಿದ್ದ, ಮನೆಯಲ್ಲಿದ್ದ ಹಾಗೂ ಗ್ರಾಮದಲ್ಲಿದ್ದ ಎಲ್ಲ ಜನರನ್ನು ಹರಸಿದರು. ಆ ಕನಸಿನ ಅರ್ಥ ಈ ರೀತಿಯಿದೆ. 3 ಹುಡುಗಿಯರು ತ್ರಿಗುಣಗಳಾದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳನ್ನು ಮತ್ತು ಅಂಧ ಮಹಿಳೆಯು ಮಾಯೆಯನ್ನು ಪ್ರತಿನಿಧಿಸುತ್ತವೆ. ಈ ನಾಲ್ಕೂ ಜೀವಾತ್ಮನನ್ನು ತಮ್ಮ ವಶಕ್ಕೆ ತೆಗೆದುಕೊಂಡು ತಮಗೆ ಇಷ್ಟ ಬಂದಂತೆ ಆಟವಾಡಿಸುತ್ತವೆ. ಜೀವಾತ್ಮನು ಪರಬ್ರಹ್ಮನಲ್ಲಿ ಲೀನವಾಗಬೇಕಾದರೆ ತ್ರಿಗುಣಗಳನ್ನು ಮೆಟ್ಟಿ ನಿಂತು ಮಾಯೆಯನ್ನು ಹೊರದೂಡಬೇಕು. ಫಾಲ್ಕೆ ಅವುಗಳನ್ನು ಗದರಿಸಿ ಒದೆಯುತ್ತೆನೆಂದು ಹೇಳುವ ಮುಖಾಂತರ ತಾವು ಈ ನಾಲ್ಕೂ ವಿಷಯಗಳನ್ನು ಮೀರಿ ನಿಂತಿರುವುದಾಗಿ ತಿಳಿಸುತ್ತಾರೆ ಮತ್ತು ಸಾಯಿಬಾಬಾರವರಿಗೆ ಪ್ರಾರ್ಥನೆ ಮಾಡುವ ಮುಖಾಂತರ "ಆತ್ಮ ಸಾಕ್ಷಾತ್ಕಾರ" ಪಡೆದಿರುವುದಾಗಿ ತಿಳಿಸುತ್ತಾರೆ. 

ಸಾಯಿಬಾಬಾರವರು ತಮ್ಮ ಮುಂದೆ ಕುಳಿತಿದ್ದ ದಾದಾ ಸಾಹೇಬ್ ಕಾಪರ್ಡೆಯವರಿಗೆ "ಅವನು ತನ್ನ ಕೈಗಳಿಂದ ಮತ್ತು ಯಾವುದೋ ಬಲವಾದ ವಸ್ತುವಿನಿಂದ ತನ್ನ ಮರ್ಮಾಂಗಕ್ಕೆ ಚೆನ್ನಾಗಿ ಹೊಡೆದ. ನಂತರ ಆ ಜಾಗಕ್ಕೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಎಲ್ಲಾ ಕಡೆ ಅಡ್ಡಾಡಿದ ನಂತರ ಬೆಂಕಿಯ ಬಳಿ ಕುಳಿತು ಮಲ ವಿಸರ್ಜನೆ ಮಾಡಿದ ನಂತರ ಸ್ವಲ್ಪ ಸುಧಾರಣೆ ಹೊಂದಿದ"  ಎಂದರು. ಅಂದರೆ, ಫಾಲ್ಕೆ ತ್ರಿಗುಣಗಳನ್ನು ಮತ್ತು ಮಾಯೆಯನ್ನು ಚೆನ್ನಾಗಿ ಹೊಡೆದು ಪ್ರಾರ್ಥನೆ ಎಂಬ ಎಣ್ಣೆಯನ್ನು ಚೆನ್ನಾಗಿ ಹಚ್ಚಿಕೊಂಡು ಓಡಾಡಿ ನಂತರ ಸಂಚಿತ ಕರ್ಮಗಳೆಂಬ ಮಲವನ್ನು ವಿಸರ್ಜಿದರು ಎಂದು ಇದರ ಒಳ ಅರ್ಥ. 

ಹಾಜಿಯವರು ಕುರ್ಷೀದ್ ಎಂಬುವರನ್ನು ವಿವಾಹವಾಗಿದ್ದರು. ಇವರಿಗೆ ಗುಲಾಂ ಮುಸ್ತಫಾ ಮತ್ತು ಮೊಹಮ್ಮದ್ ಮುಕ್ರಾಂ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಇವರ ವಂಶಸ್ಥರು ಈಗಲೂ ಕಲ್ಯಾಣ್ ನಲ್ಲಿರುವ "ಫಾಲ್ಕೆವಾಡಾ" ದಲ್ಲಿ ವಾಸವಾಗಿದ್ದಾರೆ. ಫಾಲ್ಕೆಯವರಂತೆಯೇ ಎಲ್ಲರೂ ವಿದ್ಯಾವಂತರೂ ಹಾಗೂ ಸ್ಥಿತಿವಂತರೂ ಆಗಿದ್ದಾರೆ. 

ಕಲ್ಯಾಣದಲ್ಲಿರುವ ಫಾಲ್ಕೆವಾಡಾ, ಹಾಜಿಯವರ ಸಮಾಧಿ ಮತ್ತು ಅವರ ಮನೆಯ ಎದುರುಗಡೆ ಇರುವ ಮಸೀದಿ

ಹಾಜಿಯವರು ಯಾವಾಗಲೂ ಸ್ವಚ್ಚವಾದ ಬಿಳಿಯ ಬಟ್ಟೆಯನ್ನು ಹಾಕಿಕೊಳ್ಳಲು ಇಷ್ಟ ಪಡುತ್ತಿದ್ದರು. ದ್ವಾರಕಾಮಾಯಿಯ ನೆಲವನ್ನು ಸಗಣಿಯಿಂದ ಸಾರಿಸಿದಾಗಲೆಲ್ಲಾ ಸಾಯಿಬಾಬಾರವರು ಫಾಲ್ಕೆಯನ್ನು ಕರೆದು ಇನ್ನೂ ಆರದೆ ಇದ್ದ ಹಸಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಫಾಲ್ಕೆಯವರಿಗೆ ಇದು ಇಷ್ಟವಾಗುತ್ತಿರಲಿಲ್ಲ. ಆದರೂ ಸಾಯಿಯವರ ಆಜ್ಞೆಯಂತೆ ಕುಳಿತುಕೊಳ್ಳುತ್ತಿದ್ದರು. ಆದರೆ, ಅವರು ನೆಲದ ಮೇಲಿನಿಂದ ಇದ್ದು ನೋಡಿದರೆ  ಅವರು ತೊಟ್ಟಿದ್ದ ಬಿಳಿಯ ಬಟ್ಟೆಯು ಸ್ವಲ್ಪವೂ ಹಾಳಾಗದೆ ಮೊದಲಿನಂತೆಯೇ ಶುಭ್ರವಾಗಿರುತ್ತಿತ್ತು. 

ಸಾಯಿಬಾಬಾರವರು ಹಾಜಿಯವರನ್ನು ಬಹಳ ಇಷ್ಟ ಪಡುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಹಾಜಿಯವರು ಶಿರಡಿಯನ್ನು ಬಿಟ್ಟು ಹೊರಟಾಗಲೆಲ್ಲಾ  ಬಾಬಾರವರೂ ತಮ್ಮ ಒಪ್ಪಿಗೆ ನೀಡುವುದಷ್ಟೇ ಅಲ್ಲದೇ ಹಾಜಿಯೊಡನೆ ಸುಮಾರು ದೂರ ನಡೆದುಕೊಂಡು ಹೋಗಿ ಬೀಳ್ಕೊಡುತ್ತಿದ್ದರು. ಫಾಲ್ಕೆಯವರು ಕಲ್ಯಾಣ್ ದ ತಮ್ಮ ಬೃಹತ್ ಬಂಗಲೆಯಾದ "ಫಾಲ್ಕೆವಾಡಾ" ದಲ್ಲಿ ವಾಸಿಸುತ್ತಿದ್ದರು. ಆ ಬೃಹತ್ ಬಂಗಲೆ ಈಗಲೂ ಆ ಸ್ಥಳದಲ್ಲಿ ಇದೆ. 

ಶ್ರೀ.ಸಾಯಿ ಸಚ್ಚರಿತ್ರೆಯ 11ನೇ ಅಧ್ಯಾಯದಲ್ಲಿ ಹೇಗೆ ಹಾಜಿಯವರು ಸಾಯಿಬಾಬಾರವರ ದರ್ಶನ ಪಡೆಯಲು ಪ್ರಯತ್ನಿಸಿದರು ಎಂಬ ವಿಷಯವನ್ನು ನೀಡಲಾಗಿದೆ. ಹಾಜಿಯವರು ಸುಮಾರು 9 ತಿಂಗಳುಗಳ ಕಾಲ ಮಸೀದಿಯ ಉತ್ತರ ದಿಕ್ಕಿನಲ್ಲಿದ ಚಾವಡಿಯಲ್ಲಿ ತಂಗಿದ್ದರು. ಹಾಜಿಯವರು ಎಷ್ಟು ಪ್ರಯತ್ನಿಸಿದರೂ ಸಾಯಿಬಾಬಾ ಅವರನ್ನು ಮಸೀದಿಯ ಒಳಗಡೆ ಬರಲು ಅವಕಾಶ ನೀಡಿರಲಿಲ್ಲ. ಆಗ ಹಾಜಿಯವರು ಶ್ಯಾಮರವರ ಸಹಾಯವನ್ನು ಕೋರಿದರು. ಬಾಬಾ ಕೊನೆಗೆ ಒಪ್ಪಿ 3 ಪ್ರಶ್ನೆಗಳನ್ನು ಹಾಜಿಗೆ ಶ್ಯಾಮಾ ಮುಖಾಂತರ ಕೇಳಿದರು. ಬಾಬಾರವರ ಮೊದಲ ಪ್ರಶ್ನೆ "ಶ್ಯಾಮಾ, ನೀನು ಹೋಗಿ ನಾಳೆ ಅವರಿಗೆ ಬಾರವಿ ಬಾವಿಯ ಬಳಿಯಿರುವ ಕಾಲು ದಾರಿಯಲ್ಲಿ ನನ್ನನ್ನು ಸಂಧಿಸಲು ಸಾಧ್ಯವೇ ಕೇಳಿ ಬಾ" ಎಂದರು. ಶ್ಯಾಮಾ ಅವರು ಹಾಜಿಯವರನ್ನು ಬಂದು ಕೇಳಲು ಅವರು ಸಮ್ಮತಿಸಿದರು. ಅದನ್ನು ಬಾಬಾರವರಿಗೆ ತಿಳಿಸಿದರು. 

ಬಾಬಾರವರ ಎರಡನೇ ಪ್ರಶ್ನೆ "ಶ್ಯಾಮಾ, ಅವರು ನನಗೆ 40,000 ರುಪಾಯಿಗಳನ್ನು ನಾಲ್ಕು ಕಂತಿನಲ್ಲಿ ಕೊಡಬಲ್ಲರೇ? ಕೇಳಿ ಬಾ" ಎಂದರು. ಶ್ಯಾಮಾ ಅವರು ಹಾಜಿಯವರನ್ನು ಬಂದು ಕೇಳಲು ಅವರು ನಲವತ್ತು ಸಾವಿರವೇಕೆ ನಲವತ್ತು ಲಕ್ಷ ರುಪಾಯಿ ಕೊಡಲು ಸಿದ್ಧರೆಂದು ಉತ್ತರಿಸಿದರು. 

ಬಾಬಾರವರ 3ನೇ ಪ್ರಶ್ನೆ "ಶ್ಯಾಮಾ, ನಾಳೆಯ ದಿನ ಮಸೀದಿಯಲ್ಲಿ ನಾವು ಆದನ್ನು ವಧಿಸುತ್ತೇವೆ. ಅದರ ಮಾಂಸ ಮತ್ತು ಇತರ ಅವಯವಗಳನ್ನು ಅವರು ಸ್ವೀಕರಿಸಲು ಸಿದ್ಧರಿರುವರೋ, ಕೇಳಿ ಬಾ" ಎಂದರು.ಶ್ಯಾಮಾ ಅವರು ಹಾಜಿಯವರನ್ನು ಬಂದು ಕೇಳಲು ಅವರು "ಬಾಬಾರವರ ಪ್ರಸಾದವು ಏನೇ ಆಗಿರಲಿ ಅದನ್ನು ಸ್ವೀಕರಿಸಲು ಸಿದ್ಧ" ಎಂದು ತಿಳಿಸಿದರು. ಆಗ ಬಾಬಾರವರು ಸಿಟ್ಟಿಗೆ ಬಂದು ತಮ್ಮ ಪಾತ್ರೆಯನ್ನು ಎಸೆದು ಹಾಜಿಯಲ್ಲಿಗೆ ಹೋಗಿ "ನೀನು ಏತಕ್ಕೆ ಹಾಜಿಯೆಂದು ಹೇಳಿಕೊಳ್ಳುವೆ? ಕುರಾನ್ ಓದಿರುವುದು ಇಷ್ಟೇನೇ? ಮೆಕ್ಕಾ-ಮದೀನ ಯಾತ್ರೆ ಮಾಡಿರುವೆನೆಂದು ಜಂಭ ಕೊಚ್ಚಿಕೊಳ್ಳುವೀ? ನಾನು ಯಾರು ಎಂದು ನಿನಗೆ ಗೊತ್ತಿಲ್ಲವೇ?" ಎಂದು ಹಾಜಿಯನ್ನು ಕೇಳಿದರು. ಹಾಜಿಯವರು ಸ್ತಂಭೀಭೂತರಾದರು. ನಂತರ ಬಾಬಾರವರು ಮಸೀದಿಗೆ ಹಿಂತಿರುಗಿ ಕೆಲವು ಮಾವಿನ ಹಣ್ಣುಗಳನ್ನು ತರಿಸಿ ಹಾಜಿಯವರಿಗೆ ಕೊಟ್ಟರು ಮತ್ತು ತಮ್ಮ ಕಿಸೆಯಿಂದ 55 ರುಪಾಯಿಗಳನ್ನು ತೆಗೆದು ಹಾಜಿಯವರ ಕೈಗಿತ್ತರು. ಅಂದಿನಿಂದ ಹಾಜಿಯವರನ್ನು ಬಾಬಾ ಪ್ರೀತಿಸತೊಡಗಿದರು. ಹಾಜಿಯವರೂ ಸಹ ತಮಗೆ ಇಷ್ಟ ಬಂದಾಗ ಮಸೀದಿಗೆ ಬಂದು ಹೋಗುತ್ತಿದ್ದರು. ಅವರೂ ಸಹ ಸಾಯಿಬಾಬಾ ದರ್ಬಾರದ ಭಕ್ತರಾದರು. 

ಹಾಜಿಯವರು ಆಗಾಗ್ಗೆ ಶಿರಡಿಗೆ ಬಂದು ಅನೇಕ ದಿನಗಳ ಕಾಲ ಉಳಿದುಕೊಂಡು ನಂತರ ಕಲ್ಯಾಣಕ್ಕೆ ಹಿಂತಿರುಗುತ್ತಿದ್ದರು. ಫಾಲ್ಕೆಯವರು ಕಲ್ಯಾಣದಲ್ಲಿ ಮರಣ ಹೊಂದಿದರು. ತಮ್ಮ ದೇಹದ ಮೇಲೆ ಗೋರಿಯನ್ನು ಕಟ್ಟಿ ಅದರ ಮೇಲೆ ನಾಮಫಲಕ ಇರಿಸಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ತಮ್ಮ ದೇಹವನ್ನು ಮಾವಿನ ಮರದ ಕೆಳಗಡೆ ಹೂಳಬೇಕೆಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇವರ ಮನೆಯವರು ಹಾಜಿಯವರ ಕೊನೆಯ ಆಸೆಯನ್ನು ಪೂರೈಸಿದರು. ಇವರ ಗೋರಿಯ ಮೇಲೆ ಒಂದು ಸುಂದರವಾದ ಹೂತೋಟವನ್ನು ನಿರ್ಮಿಸಲಾಗಿದೆ. ಇವರ ವಂಶಸ್ಥರು ಇಲ್ಲಿಯೇ ವಾಸಿಸುತ್ತಿದ್ದು ಈ ಪವಿತ್ರ ಸ್ಥಳವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇವರ ಮನೆಯ ಎದುರುಗಡೆ ಮಸೀದಿಯಿದ್ದು ಈ ಮಸೀದಿಗೆ ಹಾಜಿಯವರು ಪ್ರತಿನಿತ್ಯ ನಮಾಜ್ ಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment