Wednesday, August 10, 2011

 1.5 ಲಕ್ಷಕ್ಕೂ ಹೆಚ್ಚು ಸಾಯಿ ಭಕ್ತರಿಂದ ಮುಂಬೈನಿಂದ ಶಿರಡಿಗೆ ಪಾದಯಾತ್ರೆ - 2ನೇ ಏಪ್ರಿಲ್ 2011 ರಿಂದ 10ನೇ ಏಪ್ರಿಲ್ 2011 ವರೆಗೆ - ಬೆಂಗಳೂರಿನ ಸಾಯಿಭಕ್ತೆ ಬಿ.ಎನ್.ಕಲ್ಯಾಣಿಯವರ ಅನುಭವಗಳು


ಇದು ನನ್ನ ಜೀವನದ ಮಹತ್ವವಾದ ಅನುಭವವಾಗಿದೆ.ಈ ಅನುಭವ ನನಗೆ ವಿಶೇಷವಾದ ಆಶೀರ್ವಾದ ಎಂದು ತಿಳಿಯುತ್ತೇನೆ.  

ಈ ಪಾದಯಾತ್ರೆಯಲ್ಲಿ ಮುಂಬೈ ನಗರದಿಂದ ಹೊರಟು 300 ಕಿಲೋಮೀಟರ್ ದೂರದಲ್ಲಿರುವ ಶಿರಡಿಗೆ ಸುಮಾರು 9 ದಿನಗಳಲ್ಲಿ ಕ್ರಮಿಸಲಾಯಿತು. ಪ್ರತಿ ವರ್ಷ ರಾಮನವಮಿಗೆ 11 ದಿನಗಳ ಮುಂಚಿತವಾಗಿ ಈ ಪಾದಯಾತ್ರೆಯು ಮುಂಬೈನ  ವಿವಿಧ ಸ್ಥಳಗಳಿಂದ ಪ್ರಾರಂಭಿಸಲಾಗುತ್ತದೆ.  ಈ ವರ್ಷ ಸರಿಸುಮಾರು  1.5 ಲಕ್ಷಕ್ಕೂ ಸಾಯಿಭಕ್ತರು ವಿವಿಧ ಗುಂಪುಗಳಲ್ಲಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿದರು.  ನಮ್ಮ ಸಾಯಿ ಪಲ್ಲಕ್ಕಿ ಗುಂಪಿನಲ್ಲಿ ಗಂಡಸರು, ಹೆಂಗಸರು ಮತ್ತು ಕೆಲವು ಚಿಕ್ಕ ಮಕ್ಕಳು ಸೇರಿ ಸುಮಾರು 350 ರಿಂದ 400 ಸಾಯಿಭಕ್ತರಿದ್ದರು.  ಪ್ರತಿ 10 ರಿಂದ 15 ನಿಮಿಷಕ್ಕೆ  ಒಂದು ಕಿಲೋಮೀಟರ್ ವೇಗದಂತೆ ಪ್ರತಿದಿನ ನಾವುಗಳು  ಕನಿಷ್ಠ 27 ಕಿಲೋಮೀಟರ್ ಮತ್ತು ಗರಿಷ್ಠ 36 ಕಿಲೋಮೀಟರ್ ದಿನಕ್ಕೆ ನಡೆಯಬೇಕಾಗಿತ್ತು. ಅನೇಕ ವಯೋವೃದ್ಧರೂ ಕೂಡ ಹೆಚ್ಚು ಉತ್ಸಾಹದಿಂದ ಈ ನಡಿಗೆಯಲ್ಲಿ ಪಾಲ್ಗೊಂಡರು ಮತ್ತು ಅನೇಕ ಯುವಕ ಯುವತಿಯರು ನಾಚುವಂತೆ ಮಾಡಿದರು. ಆ 9 ದಿನಗಳ ಅವಧಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡ ನಾವುಗಳು ಬೇರೆ ಬೇರೆ  ಸ್ಥಳಗಳಿಂದ ಬಂದಿದ್ದರೂ ಮತ್ತು ಒಬ್ಬರಿಗೊಬ್ಬರು ಪರಿಚಯವಿಲ್ಲದಿದ್ದರೂ ಕೂಡ ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದಂತೆ ನಡೆದುಕೊಂಡೆವು. 

ವೇಳಾಪಟ್ಟಿ: 

ಬೆಳಿಗ್ಗೆ 3:30 AM - ಹಾಸಿಗೆಯಿಂದ ಎದ್ದು ನಿತ್ಯಕರ್ಮಗಳನ್ನು ಪೂರೈಸುವುದು. 
ಬೆಳಿಗ್ಗೆ 4.30 AM - ಕಾಕಡಾ ಆರತಿ ಮತ್ತು ಚಹಾ  ಸೇವನೆಯ ನಂತರ ನಡಿಗೆಯ ಪ್ರಾರಂಭ. 
ಬೆಳಿಗ್ಗೆ 6:30 / 7:30 AM  - ಬೆಳಗಿನ ಉಪಾಹಾರಕ್ಕೊಸ್ಕರ 45 ನಿಮಿಷಗಳ ಬಿಡುವು.  
ಬೆಳಿಗ್ಗೆ 8:30 / 9:30 AM - ಊಟ ಮತ್ತು ವಿಶ್ರಾಂತಿ.
ಸಂಜೆ 4.30 PM - ಸಾಯಿನಾಮ ಜಪ ಮತ್ತು ಲಘು ಉಪಹಾರದ ನಂತರ ನಡಿಗೆಯ ಪ್ರಾರಂಭ. 
ಸಂಜೆ 6:30 PM - ಧೂಪಾರತಿ ಮತ್ತು ಚಹಾ ವಿರಾಮ (ಸುಮಾರು 30 ರಿಂದ 45 ನಿಮಿಷಗಳು)
ಸಂಜೆ 7:00 / 7:45 PM - ಉಳಿದ ನಡಿಗೆಯ ದೂರವನ್ನು ಕ್ರಮಿಸುವುದು. 
ರಾತ್ರಿ 8:30 / 9:30 PM - ರಾತ್ರಿ ಭೋಜನ ಮತ್ತು ತಂಗುವಿಕೆ.  

ವಸತಿ ಸೌಕರ್ಯಗಳು:

ನಮ್ಮ ಪಲ್ಲಕ್ಕಿ ಗುಂಪು ಉಳಿದುಕೊಳ್ಳಲು ವಿವಿಧ ಸ್ಥಳಗಳಲ್ಲಿ ಅತ್ಯುತ್ತಮವಾದ ವಸತಿ ವ್ಯವಸ್ಥೆಯನ್ನು ಮಾಡಲಾಗಿತ್ತು.  ನಾವು ಹೆಚ್ಚಾಗಿ ರಾತ್ರಿ ತಂಗಲು ದೇವಸ್ಥಾನಗಳು ಮತ್ತು ಶಾಲೆಗಳನ್ನು ಬಳಸಿಕೊಂಡೆವು. ಹಗಲಿನ ಸಮಯದಲ್ಲಿ ನಾವು ಒಂದು ವಿಹಾರ ಧಾಮ, ಒಂದು ಗುರುದ್ವಾರ ಮತ್ತು ಅನೇಕ ದೇವಸ್ಥಾನಗಳಲ್ಲಿ ಉಳಿದುಕೊಂಡೆವು.  ಮಧ್ಯಾಹ್ನದ ಸಮಯದಲ್ಲಿ ವಿಶಾಲವಾದ ಸ್ಥಳಗಳಲ್ಲಿ ಶಾಮಿಯಾನಗಳನ್ನು ಬಳಸಿಕೊಂಡು ತಾತ್ಕಾಲಿಕ  ವಸತಿಯನ್ನು ಮಾಡಿಕೊಂಡೆವು.  ಇತರ ಪಲ್ಲಕ್ಕಿ ಗುಂಪುಗಳಿಗಿಂತ ವಿಭಿನ್ನವಾಗಿ ನಾವು ಒಳ್ಳೆಯ ವಸತಿ ಸೌಕರ್ಯವನ್ನು ಹೊಂದಿದ್ದೆವು ಎಂದರೆ ತಪ್ಪಾಗಲಾರದು.
   
ನಮಗೆ ಸಿಕ್ಕ ಸೌಲಭ್ಯಗಳು:

ನಮಗೆ ಸಮಯಕ್ಕೆ ಸರಿಯಾಗಿ ಒಳ್ಳೆಯ ಉಪಹಾರ ಮತ್ತು ಊಟಗಳು ದೊರಕುತ್ತಿದ್ದವು. ನಾವುಗಳು ಒಮ್ಮೆಯೂ ಕೂಡ ತಡವಾಗಿ ಉಪಹಾರ ಮತ್ತು ಊಟವನ್ನು ಮಾಡಿದ್ದಿಲ್ಲ ಮತ್ತು ಯಾತ್ರೆಯಲ್ಲಿ ಭಾಗವಹಿಸಿದ್ದ ಯಾರೊಬ್ಬರೂ ಕೂಡ ಊಟೋಪಚಾರಗಳ ಬಗ್ಗೆ ಚಕಾರವನ್ನು ಎತ್ತಲಿಲ್ಲ.  ಪ್ರತಿದಿನ ಸಂಜೆ ಚಹಾದೊಂದಿಗೆ ಬಿಸ್ಕತ್ ನ್ನು ನೀಡಲಾಗುತ್ತಿತ್ತು. 

ಬೆಳಗಿನ ಉಪಹಾರಕ್ಕೆ  ಪ್ರತಿದಿನ ಬೇರೆ  ಬೇರೆ ತಿಂಡಿಗಳನ್ನು ನೀಡಲಾಗುತ್ತಿತ್ತು. ಪಾವ್ ಭಾಜಿ, ಉಪ್ಪಿಟ್ಟು, ಪೋಹ , ಮಸಾಲಾ ಪಾವ್, ಸಾಬುದಾನ ಖಿಚಡಿ ಮತ್ತು ಭೇಲ್ ಪುರಿಯನ್ನು ದಿನಕ್ಕೊಂದು ತಿಂಡಿಯಂತೆ ನೀಡಲಾಗುತ್ತಿತ್ತು.
ಊಟಕ್ಕೆ ರೋಟಿ / ಭಕ್ರಿ  / ಪೂರಿ ಜೊತೆ ಬಿಳಿಯ ಅನ್ನ, ಸಾಂಬಾರ್, 1 ಪಲ್ಯ, ಒಂದು ಬಗೆಯ ಸಿಹಿ ತಿಂಡಿ ಮತ್ತು ಹಪ್ಪಳ ನೀಡಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ವಿಶೇಷ ಭಕ್ಷ್ಯಗಳನ್ನು ಕೂಡ ಬಡಿಸಲಾಗುತ್ತಿತ್ತು. ಒಟ್ಟಿನಲ್ಲಿ ನಮಗೆ ತುಂಬಾ ರುಚಿಕರವಾದ ಮತ್ತು ಆರೋಗ್ಯಕರವಾದ ಭೋಜನ ದೊರಕುತ್ತಿತ್ತು. ರಾತ್ರಿಯ ಸಮಯದಲ್ಲಿ ನಾವುಗಳೆಲ್ಲ ಸೇರಿ ನಮ್ಮ ಎಲ್ಲಾ ನೋವು ಮತ್ತು ಆಯಾಸವನ್ನು ಮರೆತು ಭೋಜನಕ್ಕೆ ಮುಂಚೆ ಭಜನೆಯನ್ನು ಮಾಡುತ್ತಿದ್ದೆವು. 


ವಿವಿಧ ಸ್ಥಳಗಳಲ್ಲಿ  ಅನೇಕ ಸ್ವಯಂ ಸೇವಾ ಸಂಸ್ಥೆಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ಕಲ್ಪಿಸಿದ್ದರು. ಉಚಿತವಾಗಿ    ವೈದ್ಯಕೀಯ ಸಲಹೆ ಮತ್ತು ಔಷಧಿಗಳನ್ನು 9 ದಿನಗಳ ಕಾಲ 1.5 ಲಕ್ಷಕ್ಕಿಂತ ದೊಡ್ಡದಾದ ಗುಂಪಿಗೆ ಒದಗಿಸಲಾಗಿತ್ತು. ಇದು ವೈದ್ಯಕೀಯ ತಂಡವು ಒದಗಿಸಿದ ಒಂದು ನಿಸ್ವಾರ್ಥ ಸೇವೆ ಎಂದೇ ಹೇಳಬೇಕು.  ಗುರುಸ್ಥಾನ್ ಟ್ರಸ್ಟ್ ನವರು ಒಂದು ದಿನ ಉಚಿತ ಶಿಬಿರವನ್ನು ಆಯೋಜಿಸಿದ್ದರು. ಟ್ರಸ್ಟ್ ನ ಬಗ್ಗೆ ಹೆಚ್ಚಿನ  ಮಾಹಿತಿ ತಿಳಿಯಲು http://www.thegurusthantrust.com/ ಅಂತರ್ಜಾಲ ತಾಣವನ್ನು ನೋಡುವುದು. ಕೊರಾಳೆ  ಬಾಬಾ ಮಂದಿರದ ಸ್ವಯಂ ಸೇವಕರು ಹಗಲೂ ರಾತ್ರಿ  ನೋಡದೆ ತುಂಬು ಹೃದಯದಿಂದ ನಿಸ್ವಾರ್ಥತೆಯಿಂದ ಸಾಯಿಭಕ್ತರ ಶುಶ್ರೂಷೆಯನ್ನು ಉತ್ತಮ ರೀತಿಯಲ್ಲಿ ಮಾಡಿದರು. ಕೆಲವು ಸಾಯಿ ಭಕ್ತರ ಕಾಲುಗಳಿಗೆ ಮಸಾಜ್ ಮಾಡಿ ಉತ್ತಮ ಆರೈಕೆ ಮಾಡಿದರು. 
ಅನೇಕ ಸಾಯಿ ಭಕ್ತರ ಕಾಲುಗಳಲ್ಲಿ ನೆಡೆದು ನೆಡೆದು ದೊಡ್ಡ ಗುಳ್ಳೆಗಳಾಗಿ ಬಹಳ ಕಷ್ಟವನ್ನು ಅನುಭವಿಸಿದರು. ಆ ಭಕ್ತರ ಕಾಲಿನ ಗುಳ್ಳೆಗಳಲ್ಲಿನ  ನೀರನ್ನು ತೆಗೆದು ಚಿಕಿತ್ಸೆ  ಮಾಡಿ ಗಾಯ ವಾಸಿಯಾಗುವ ತನಕ  ಪ್ರತಿದಿನ ಗಾಯವನ್ನು ತೊಳೆದು ಸ್ವಚ್ಛ ಮಾಡಿ ಡ್ರೆಸಿಂಗ್ ಮಾಡಲಾಗುತ್ತಿತ್ತು. ಈ ತರಹದ ವೈದ್ಯಕೀಯ ಶಿಬಿರಗಳು ಪಾದಯಾತ್ರೆಯ ದಾರಿಯಲ್ಲಿ ಇರದಿದ್ದರೆ ಖಂಡಿತವಾಗಿಯೂ ಬಹಳ ಕಷ್ಟವನ್ನು ಅನುಭವಿಸಬೇಕಾಗುತ್ತಿತ್ತು. 


ಪಾದಯಾತ್ರೆ ಮಾಡುವಾಗ ದಾರಿಯಲ್ಲಿ ಆಯಾ ಸ್ಥಳಗಳ ಸಾಯಿಭಕ್ತರು ಪಾದಯಾತ್ರಿಗಳಿಗೆ ನೀರು, ಕಿತ್ತಳೆ ಹಣ್ಣು, ಕಲ್ಲಂಗಡಿ ಹಣ್ಣುಗಳು, ಚಾಕೋಲೇಟ್, ಬಿಸ್ಕತ್ತುಗಳು, ತಿಂಡಿಗಳು, ಮಜ್ಜಿಗೆ ಮತ್ತು ಮುಂತಾದ ವಿವಿಧ ಬಗೆಯ ಬೇಸಿಗೆ ಕಾಲದಲ್ಲಿ ಬಳಸುವ  ತಂಪು ಪಾನೀಯಗಳು, ವಿವಿಧ ಬಗೆಯ ಹಾಲುಗಳು, ಶರಬತ್ ಗಳನ್ನು ನೀಡಿ ಸತ್ಕರಿಸುತ್ತಿದ್ದರು. ಹಾಗೆ ಹೇಳುತ್ತಾ ಹೋದರೆ ಪಟ್ಟಿಯು ಎಂದಿಗೂ ಕೊನೆಗೊಳ್ಳುವುದಿಲ್ಲ.   

ನಮ್ಮ ಪಲ್ಲಕ್ಕಿಯ ಭಕ್ತರನ್ನು ಪ್ರೇರೇಪಿಸಿದ ವಿಶೇಷ ವ್ಯಕ್ತಿಗಳು: 

 1) ಸುಮಾರು 75 ರಿಂದ 80 ವಯಸ್ಸಿನ ಹಿರಿಯ ಮಹಿಳೆಯೊಬ್ಬರು ಪಲ್ಲಕ್ಕಿಯಲ್ಲಿ ಭಾಗವಹಿಸಿದ್ದರು. ಅವರು ಪರಿಪೂರ್ಣ ಉತ್ಸಾಹದಿಂದ ಸಂಪೂರ್ಣ ದಾರಿಯನ್ನು ಕ್ರಮಿಸಿದರು ಮತ್ತು ಎಲ್ಲಿಯಾದರೂ ದಾರಿಯಲ್ಲಿ ಸಂಗೀತವು ಕೇಳಿಸಿತೆಂದರೆ ಸಾಕು ಅವರು  ನೃತ್ಯ ಮಾಡಲು ಆರಂಭಿಸುತ್ತಿದ್ದರು ಮತ್ತು ಇತರರೂ ಅವರ ಜೊತೆ ನೃತ್ಯ ಮಾಡಲು ಪ್ರೇರೇಪಿಸುತ್ತಿದ್ದರು. ಆಕೆಯ ಹುಟ್ಟುಹಬ್ಬ 6ನೇ  ಏಪ್ರಿಲ್ ಆಗಿತ್ತು. ಆದರೆ ಆಕೆ ಹಳ್ಳಿಯಿಂದ ಬಂದವಳಾದ್ದರಿಂದ ಆಕೆಗೆ ತನ್ನ ಹುಟ್ಟುಹಬ್ಬದ ದಿನ ತಿಳಿದಿರಲಿಲ್ಲ. ಆದರೆ, ಆಕೆಯ ಕುಟುಂಬದ ಸದಸ್ಯರು ನೋಂದಣಿ ಪತ್ರದಲ್ಲಿ ತುಂಬಿಸಿದ್ದ ವಿವರಗಳನ್ನು ನೋಡಿ ಪಲ್ಲಕ್ಕಿಯ ಸಂಘಟನಾಕಾರರು ಆ ದಿನ ಆಕೆಯ ಹುಟ್ಟು ಹಬ್ಬವನ್ನು ಧೂಪಾರತಿಯ ಸಮಯದಲ್ಲಿ ಆಕೆ ಕೇಕ್ ಕತ್ತರಿಸುವ ಮುಖಾಂತರ ಆಚರಿಸಿದರು ಮತ್ತು ನಾವುಗಳೆಲ್ಲಾ ಆ ಸಂತೋಷ ಕೂಟದಲ್ಲಿ ಭಾಗವಹಿಸಿದೆವು. ಆಗ ಆಕೆಗಾದ ಸಂತೋಷವನ್ನು ವಾಕ್ಯಗಳಲ್ಲಿ ಬಣ್ಣಿಸಲು ಸಾಧ್ಯವೇ ಇಲ್ಲ.  ಪಾದಯಾತ್ರೆಯ ಎಲ್ಲಾ 9 ದಿನಗಳಲ್ಲಿ ನಾವು ಆಕೆ ಹೆಚ್ಚುವರಿ ವಿಶ್ರಾಂತಿ ಅಥವಾ ಉಳಿದ ಯಾವುದೇ ರೀತಿಯ ಚಿಕಿತ್ಸೆ ಪಡೆದಿದ್ದು ನೋಡಲಿಲ್ಲ. ನಮ್ಮ ಪಾದಯಾತ್ರೆಗೆ 15 ದಿನಗಳ ಮುಂಚೆ ಆಕೆ  ಅಕ್ಕಲಕೋಟೆಯ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರೆಂದು ಆ ನಂತರ ನಮಗೆಲ್ಲ ತಿಳಿದು ಇಷ್ಟು ಸಣ್ಣ ಅವಧಿಯಲ್ಲಿ ಆಕೆ  ಹೇಗೆ ಮತ್ತೊಂದು ಪಾದಯಾತ್ರೆಯಲ್ಲಿ ಭಾಗವಹಿಸಲು ಶಕ್ತಿ ಬಂದಿತು ಎಂದು ತಿಳಿಯಲು ನಾವುಗಳು ಶಕ್ಯರಾಗಲಿಲ್ಲ.

2) ನಮ್ಮ ಸಂಘಟಕರಲ್ಲಿ ಒಬ್ಬರ ತಂದೆಯವರಿಗೆ ಹೃದಯದ ಸಮಸ್ಯೆಯ ಜೊತೆಗೆ 4 ತಿಂಗಳುಗಳ ಹಿಂದೆ ಪಾರ್ಶ್ವವಾಯು ಬಡಿದಿತ್ತು.  ಅವರ ಬಲಭಾಗಕ್ಕೆ ಸಂಪೂರ್ಣ ಪಾರ್ಶ್ವವಾಯು ಬಡಿದಿತ್ತು ಮತ್ತು ಅವರು ಮಾತನಾಡಲೂ ಆಗದೆ ವಾಕ್ ಶಕ್ತಿಯನ್ನು ಕಳೆದುಕೊಂಡಿದ್ದರು. ಸಾಯಿಬಾಬಾರವರ  ಆಶೀರ್ವಾದದಿಂದ ಅವರು 4 ತಿಂಗಳ ಒಳಗೆ ದೊಡ್ಡ ಮಟ್ಟಿಗೆ ಸುಧಾರಿಸಿಕೊಂಡು  ಯಾರ ಸಹಾಯವೂ ಇಲ್ಲದೆ ನಡೆಯಲು ಶಕ್ಯರಾಗಿದ್ದರು ಮತ್ತು ಮಾತನಾಡಲೂ ಕೂಡ ಪ್ರಾರಂಭಿಸಿದ್ದರು. ಅವರು ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದರಿಂದ ವೇಗವಾಗಿ ನಡೆಯಲು ಆಗದಿದ್ದರೂ ಕೂಡ ಕೊನೆಯ ತನಕ ಛಲ ಬಿಡದೆ ಎಲ್ಲರೊಂದಿಗೆ ನಿಧಾನವಾಗಿ ಹೆಜ್ಜೆ ಹಾಕಿ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅವರು ಪಾದಯಾತ್ರೆಯ  ಸಂಪೂರ್ಣ ದೂರವನ್ನು ಬರಿಗಾಲಿನಲ್ಲೇ ನಡೆದು ಪೂರ್ಣಗೊಳಿಸಿದರು. ನಾವುಗಳೆಲ್ಲಾ ಯಾತ್ರೆಗೆ ಹೊರಡುವುದಕ್ಕೆ ಸುಮಾರು ಎರಡು ಘಂಟೆ ಮುಂಚಿತವಾಗಿ ಅವರು ಹೊರಡುತ್ತಿದ್ದರು ಮತ್ತು ನಾವು ಸ್ಥಳ ತಲುಪಿದ ಸುಮಾರು 3-4 ಘಂಟೆಯ ನಂತರ ತಡವಾಗಿ ಬಂದು  ನಾವಿದ್ದ ಸ್ಥಳ ತಲುಪುತ್ತಿದ್ದರು.  ಆದರೂ ಕೂಡ ಅವರ ಉತ್ಸಾಹ, ಭಕ್ತಿ,  ಸಮರ್ಪಣಾ ಮನೋಭಾವ ಮತ್ತು ವಿಶ್ವಾಸ ಸ್ವಲ್ಪವೂ ಕಡಿಮೆಯಾಗಲಿಲ್ಲ. ಅವರು ಎಲ್ಲಾ ಯಾತ್ರಿಕರ ಜೊತೆ ನಗುಮುಖದೊಂದಿಗೆ ಮತ್ತು ಹರಟೆ ಹೊಡೆಯುತ್ತಾ ನಡೆಯುತ್ತಿದ್ದರು ಮತ್ತು ಪ್ರತಿದಿನ ಕನಿಷ್ಠ ಎರಡು ಬಾರಿ ಹೋಮಿಯೋಪತಿಯ ನೋವು ನಿವಾರಕ ಗುಳಿಗೆಗಳನ್ನು ಎಲ್ಲಾ  ಯಾತ್ರಿಕರಿಗೂ ನೀಡುತ್ತಿದ್ದರು. ಇವರ ಆತ್ಮಸ್ಥೈರ್ಯ ಮತ್ತು ವಿಶ್ವಾಸಕ್ಕೆ ನನ್ನ ಅಭಿನಂದನೆಗಳು.
  
3) ಯುವ ದಂಪತಿಗಳು ಮಾನಸಿಕವಾಗಿ ಅಸ್ವಸ್ಥನಾಗಿದ್ದ ಹಾಗೂ ನಡೆಯಲು ಸ್ವಲ್ಪ ಕಷ್ಟ ಪಡುತ್ತಿದ್ದ ತಮ್ಮ 6 ವರ್ಷದ ಮಗ ವಿನಾಯಕ್ ನೊಡನೆ ಯಾತ್ರೆಯಲ್ಲಿ ಭಾಗವಹಿಸಿದ್ದರು. ಆ ದಂಪತಿಗಳು ತಾಳ್ಮೆಯಿಂದ ಮತ್ತು ಅತ್ಯಂತ ಪ್ರೀತಿಯಿಂದ ತಮ್ಮ ಮಗನೊಂದಿಗೆ ಮತ್ತು ಎಲ್ಲರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡರು.  ವಿನಾಯಕ್ ನ ತಂದೆಯವರು ಅವನನ್ನು ಹೆಚ್ಚಿಗೆ ನಡೆಯಲು ಬಿಡುತ್ತಿರಲಿಲ್ಲ. ತಮ್ಮ ಭುಜದ ಮೇಲೆ ಹೊತ್ತುಕೊಂಡು ಸಂಪೂರ್ಣ ದೂರದ ಶೇಕಡಾ  90 ಭಾಗವನ್ನು ಕ್ರಮಿಸುತ್ತಿದ್ದರು. 

4) ಅಷ್ಟೇ ಅಲ್ಲದೇ, ದಾರಿಯಲ್ಲಿ ಪಾದಯಾತ್ರೆ ಮಾಡುವಾಗ ನಾವು ಗಾಲಿ ಕುರ್ಚಿಗಳ ಮೇಲೆ, ವಾಕಿಂಗ್ ಕೋಲುಗಳನ್ನು ಹಿಡಿದುಕೊಂಡು ನಡೆಯುತ್ತಿದ್ದ ಮತ್ತು  ಬಹಳ ವಯಸ್ಸಾದ ಮುದುಕರು ಪಾದಯಾತ್ರೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದನ್ನು ಕಂಡು ಅವರುಗಳಿಂದ ಅತ್ಯಂತ ಪ್ರಭಾವಿತರಾದೆವು.
  
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವು ಪಲ್ಲಕ್ಕಿಯ ವಿವರಗಳು: 

ಮುಂಬೈ ನಿಂದ ಶಿರಡಿಗೆ ಸುಮಾರು 75 ಗುಂಪುಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದವು. 

ಸಾಯಿ ಸೇವಕ್  - ಈ ಗುಂಪು ಸುಮಾರು 37 ವರ್ಷಗಳ ಹಿಂದೆ ಮುಂಬೈನಿಂದ ಶಿರಡಿಗೆ ಪಾದಯಾತ್ರೆ ಆರಂಭಿಸಿದ ಮೊದಲ ಗುಂಪಾಗಿರುತ್ತದೆ.  ಈ ಗುಂಪು ಕೇವಲ ಪುರುಷ ಸಾಯಿ ಭಕ್ತರಿಂದ ಕೂಡಿರುತ್ತದೆ.  ಈ ಗುಂಪಿನಲ್ಲಿ ಸುಮಾರು 15,000 ಭಕ್ತರಿದ್ದರು. ಇವರು ಬೆಳ್ಳಿಯ ಪಾದುಕೆ ಮತ್ತು ಸುಮಾರು 12  ಅಡಿ ಉದ್ದದ ಸಾಯಿಬಾಬಾರವರ ವಿಗ್ರಹದ ಜೊತೆಗೆ ಮುಂಬೈ ನಿಂದ ಶಿರಡಿಗೆ ಮೆರವಣಿಗೆಯಲ್ಲಿ ಬಂದಿದ್ದರು. ಇವರ ಗುಂಪನ್ನು ನೋಡುವುದೇ ಒಂದು ಭಾಗ್ಯ ಎಂದು ನನ್ನ  ಅನಿಸಿಕೆ. ಶಿರಡಿ ತಲುಪಿದ ಮೇಲೆ ಈ ಗುಂಪು ಸಾಯಿಬಾಬಾರವರ ದರ್ಶನ ಪಡೆಯುವವರೆಗೆ , ಇತರ ಯಾವುದೇ ಪಲ್ಲಕ್ಕಿಯವರಿಗೆ ದರ್ಶನ ಪಡೆಯುವ ಅವಕಾಶವಿಲ್ಲ. 


ಸಾಯಿ ನಂದಾದೀಪ - ಈ ಗುಂಪಿನ ಯಾತ್ರಿಕರು ಪಾದಯಾತ್ರೆಯ ಉದ್ದಕ್ಕೂ ತಮ್ಮ ತಲೆಯ ಮೇಲೆ ಬೆಳ್ಳಿ ಮಡಕೆಯಲ್ಲಿ ಗಂಗಾ ಜಲವನ್ನು ಹೊತ್ತುಕೊಂಡು ಬರುತ್ತಾರೆ ಮತ್ತು ಈ ಪವಿತ್ರ ಜಲದಿಂದ ಶಿರಡಿ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. 

ಮಹಿಳೆಯರ  2 ಪ್ರತ್ಯೇಕ ಪಲ್ಲಕ್ಕಿಯ ಗುಂಪುಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದವು. ಇನ್ನೊಂದು ಗುಂಪು ಮುಂಬೈನಿಂದ ಶಿರಡಿಯವರೆಗೆ ಬೆಳ್ಳಿಯ ರಥವನ್ನು ಎಳೆದುಕೊಂಡು ಬಂದಿತ್ತು. ಇಷ್ಟೇ ಅಲ್ಲದೇ  ಇನ್ನು ಹಲವಾರು ಪಲ್ಲಕ್ಕಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು. ಅವರುಗಳು ತಮ್ಮದೇ ಆದ ರೀತಿಯಲ್ಲಿ ಸಾಯಿಬಾಬಾರವರ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ಭಾಗವಹಿಸಿದ್ದರು. ಎಲ್ಲಾ ವಿವರಗಳನ್ನು ನೀಡಲು ನನಗೆ ಸಾಧ್ಯವಿಲ್ಲ. ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ವಿವರಿಸಿದ್ದೇನೆ. 

ಶಿರಡಿಯನ್ನು ತಲುಪಿದಾಗ ನಮಗಾದ ಅನುಭವಗಳು: 


ನಾವು ಪಾದಯಾತ್ರೆಯ ಕೊನೆಯ ದಿನ ಶಿರಡಿಯನ್ನು ತಲುಪಿದಾಗ ಪ್ರತಿಯೊಬ್ಬರ ಮುಖದ ಮೇಲೆ ಏನನ್ನೋ ಸಾಧಿಸಿದ ಹೆಮ್ಮೆ ಕಂಡು ಬರುತ್ತಿತ್ತು. ಎಲ್ಲರೂ ಒಟ್ಟಾಗಿ ಕುಳಿತು ವಿಶೇಷ ಖಾದ್ಯಗಳನ್ನು ತಯಾರಿಸಿ ಭೋಜನವನ್ನು ಮಾಡಿದೆವು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅನೇಕ ಯಾತ್ರಿಕರ ಕುಟುಂಬದವರೂ ಕೂಡ ನಮ್ಮೊಂದಿಗೆ ಸೇರಿಕೊಂಡು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. 

ನಾಮಜಪದ ನಂತರ ನಾವುಗಳು ಶಿರಡಿ ಯಾತ್ರೆ ಪ್ರಾರಂಭಿಸಿದೆವು. ನಮ್ಮೊಂದಿಗೆ ತಾಳಮೇಳಗಳು, ವಾದ್ಯವೃಂದದವರು ಇದ್ದರು. ಎಲ್ಲಾ ಯಾತ್ರಿಕರು ಸುಂದರವಾಗಿ ಶೃಂಗರಿಸಿಕೊಂಡು ನೃತ್ಯ ಮಾಡುತ್ತಾ ಪಲ್ಲಕ್ಕಿಯೊಂದಿಗೆ ಸಾಗುತ್ತಿದ್ದೆವು. ಆ ಸುಂದರ ದೃಶ್ಯವನ್ನು ನೋಡುವುದೇ ಒಂದು ಭಾಗ್ಯ ಎನ್ನಬೇಕು. ಶಿರಡಿಯನ್ನು ತಲುಪಿದ ನಂತರ ನಾವುಗಳು ಮೊದಲು ಖಂಡೋಬ ಮಂದಿರಕ್ಕೆ ತೆರಳಿ ದರ್ಶನ ಮಾಡಿಕೊಂಡು ಹೊರಬಂದೆವು. ಹೊರಬಂದ ಕೂಡಲೇ ಕಾದಿದ್ದ ವಾದ್ಯಗಾರರ ಗುಂಪು ನಮ್ಮ ಮೇಲೆ ಗುಲಾಲ್ ಪುಡಿ ಎರಚಿದರು. ನಂತರ ಎಲ್ಲರೂ ನೃತ್ಯ ಮಾಡಲು ಪ್ರಾರಂಭಿಸಿದೆವು. ಆಗ ಅಲ್ಲಿ ನರೆದಿದ್ದ ಜನಸ್ತೊಮದ ಮನದಲ್ಲಿ ಈ ಗುಂಪು ಒಂಬತ್ತು ದಿನಗಳ ಕಾಲ ಸುಮಾರು ಮುನ್ನೂರು ಕಿಲೋಮೀಟರ್ ಕ್ರಮಿಸಿ ಬಂದಿತೇ ಎಂಬ ಸಂದೇಹ ಬಂದಿತು. ಮೆರವಣಿಗೆಯಲ್ಲಿ ಸಮಾಧಿ ಮಂದಿರದ ಬಳಿ ತೆರಳಿದೆವು. ಅಲ್ಲಿ ಸ್ವಲ್ಪ ಕಾಲ ಕಾದಿದ್ಡೆವು. ನಂತರ ನಮ್ಮನ್ನು ವಿಶೇಷ ದ್ವಾರದ ಮುಖಾಂತರ ಸಮಾಧಿ ಮಂದಿರದ ಒಳಗಡೆ ಬಿಡಲಾಯಿತು. ಸರದಿಯಲ್ಲಿ ಸಾಗುವಾಗ ಭಕ್ತರು ಸಾಯಿನಾಮ ಜಪವನ್ನು ಮಾಡುತ್ತಾ ಬಾಬಾನ ದರ್ಶನ ಮಾಡಲು ಕಾತುರರಾಗಿ ಓಡುವ ದೃಶ್ಯ ಸರ್ವೇ ಸಾಮಾನ್ಯ. ಶಿರಡಿಯ ಪವಿತ್ರ ನೆಲವನ್ನು ಸ್ಪರ್ಶಿಸಿದ ನಂತರ ನಮಗಾದ ಆನಂದವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಪಾದಯಾತ್ರೆ  ಯಶಸ್ವಿಯಾಗಿ ಪೂರ್ಣಗೊಳಿಸಿ ಸಮಾಧಿ ಮಂದಿರಕ್ಕೆ ತೆರಳಿ ಸಾಯಿಬಾಬಾರವರ ದರ್ಶನ ಮಾಡಿದ ಮರುಕ್ಷಣವೇ ನಮ್ಮ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರು ಬಂದಿತು ಮತ್ತು ನಮ್ಮ ಆನಂದವನ್ನು ಬಣ್ಣಿಸಲು ಪದಗಳೇ ಹೊರಡಲಿಲ್ಲ. ಸಾಯಿಬಾಬಾರವರ ದರ್ಶನದ ನಂತರ ನಾವುಗಳೆಲ್ಲಾ ಪುನಃ ಒಂದೆಡೆ ಸೇರಿ ಪರಸ್ಪರ ನಮ್ಮ ಅನುಭವಗಳನ್ನು ಹಂಚಿಕೊಂಡೆವು. ಯಾತ್ರೆಯ ಕೊನೆಯಲ್ಲಿ ಎಲ್ಲರನ್ನು ಬಿಟ್ಟು ನಮ್ಮ ನಮ್ಮ  ಸ್ಥಳಗಳಿಗೆ ತೆರಳುವಾಗ ನಾವು ನಮ್ಮ ಕುಟುಂಬದವರಿಂದ  ಬೇರೆಯಾಗುತ್ತಿರುವ ಭಾವನೆ ನಮ್ಮ ಮನದಲ್ಲಿ ಬಂದಿತು.  ಆ ಸಮಯ ಅತ್ಯಂತ ಹೃದಯ ಸ್ಪರ್ಶಿಯಾಗಿತ್ತು. ಮುಂಬೈನಿಂದ ಬಂದ ಅನೇಕ ಭಕ್ತರು ಅದೇ ದಿನ ಮುಂಬೈಗೆ ಮರಳಿದರು. 

ಪಾದಯಾತ್ರೆಯ ಬಗ್ಗೆ ನನ್ನ ಅಭಿಪ್ರಾಯ: 

ಪಾದಯಾತ್ರೆಯ ಪ್ರತಿಯೊಂದು ಕ್ಷಣವೂ ಕೂಡ ಅತ್ಯಂತ ಮಹತ್ವದ್ದಾಗಿತ್ತು. ಬೇರೆ ಬೇರೆ ರೀತಿಯ ಭಕ್ತಿಯನ್ನು, ಆತ್ಮ ಸ್ಥೈರ್ಯವನ್ನು, ಶಕ್ತಿಯನ್ನು ಮತ್ತು ವಿಶ್ವಾಸವನ್ನು ಹೊಂದಿರುವ ಸಾಯಿ ಭಕ್ತರು, ಏನೇ ತೊಂದರೆ ಬಂದರೂ ಎದೆಗುಂದದೆ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಭಕ್ತರುಗಳನ್ನು ನೋಡಿ ನಾವುಗಳು ಕೂಡ ಪ್ರೇರೇಪಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪಲ್ಲಕ್ಕಿಯ ಮುಂದೆ ಧ್ವಜವನ್ನು ಕೊಂಡೊಯ್ಯಲಾಗುತ್ತದೆ. ಅದರ ಜೊತೆ ನಡೆಯುವುದೇ ಒಂದು ವಿಶೇಷ ಚೈತನ್ಯವನ್ನು ನೀಡುತ್ತದೆ. "ಓಂ ಸಾಯಿ, ಜಯ ಸಾಯಿ" ಮತ್ತು "ಓಂ ಶ್ರೀ ಸಾಯಿನಾಥಾಯ ನಮಃ" ನಾಮಜಪವು ಇಡೀ ವಾತಾವರಣವನ್ನು ತುಂಬಿಕೊಂಡು ಒಂದು ಅದ್ಭುತವಾದ ರೋಮಾಂಚನವನ್ನು ನೀಡುತ್ತದೆ. ಇದು ನಿಜವಾಗಿಯೂ ಒಂದು ಮಹತ್ತರವಾದ ಅನುಭವ. ಈ ಪಾದಯಾತ್ರೆಯ ಸಮಯದಲ್ಲಿ ನಾವು ಸಾಯಿಬಾಬಾರವರ ಮೇಲೆ ಅವರ ಭಕ್ತರಿಗೆ ಇರುವ ಭಕ್ತಿ ಮತ್ತು ಬಾಂಧವ್ಯವನ್ನು ನೋಡಬಹುದು. ಇದೇ ವಾತಾವರಣ ಧ್ವಜದ ಹಿಂದೆ ಬರುವ ಪಲ್ಲಕ್ಕಿಯಲ್ಲಿ ಕೂಡ  ಕಂಡುಬರುತ್ತದೆ. 



ನಿರಂತರವಾಗಿ ಸಾಯಿ ಭಜನೆಗಳು / ಹಾಡುಗಳು,  ಚಿತ್ರಗೀತೆಗಳು ಮೊಳಗುತ್ತಿರುತ್ತವೆ. ವಿಶೇಷವಾಗಿ "ಶ್ರೀ ಸಾಯಿ ಖಿಚಡಿ"  ಆಲ್ಬಮ್ ನ ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದು ಅದನ್ನು ಹೆಚ್ಚಾಗಿ ಹಾಕಲಾಯಿತು. 


ಧ್ವಜವನ್ನು ಹಿಡಿದಿರುವ ವ್ಯಕ್ತಿ ಅತ್ಯದ್ಭುತ ವೇಗದಲ್ಲಿ ನಡೆಯುತ್ತಾ ಅವನ ಇಡೀ ಗುಂಪು ದಿನದ ನಿಗದಿತ ಅಂತರವನ್ನು  ಕ್ರಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ನಮಗೆ ಆಯಾಸ ಆಗದಿರಲೆಂದು ನಮಗೆ ಮನೋರಂಜನೆಯನ್ನು ನೀಡುತ್ತಾ ನಮಗೆ ಪ್ರೇರೇಪಣಾ ಶಕ್ತಿಯಾಗಿರುತ್ತಾರೆ. 

ಪಾದಯಾತ್ರೆಯಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೂ ಧ್ವಜವನ್ನು ಮತ್ತು ಪಲ್ಲಕ್ಕಿಯನ್ನು ಕೊಂಡೊಯ್ಯುವ ಅವಕಾಶ ಕಲ್ಪಿಸಲಾಗಿತ್ತು.  ಸಾಯಿಬಾಬಾರವರ ಆಶೀರ್ವಾದದ ಫಲದಿಂದ ನಾವುಗಳು ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. 

 

ಪ್ರತಿಯೊಬ್ಬ  ವ್ಯಕ್ತಿಯು ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಲೇ ಬೇಕು ಮತ್ತು ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಯಿಭಕ್ತರ ಆಳವಾದ ಭಕ್ತಿಯನ್ನು ನೋಡಲೇಬೇಕು. ಇದು ನಿಜವಾಗಿ ಒಂದು ಮಹಾನ್ ಅನುಭವ. ಈ ಪಾದಯಾತ್ರೆಯಿಂದ ನಾವು ಜೀವನದಲ್ಲಿ ಯಾವ ವಸ್ತುಗಳಿಗೆ ಮತ್ತು ವಿಷಯಗಳಿಗೆ ಎಷ್ಟು ಪ್ರಾಮುಖ್ಯತೆಯನ್ನು ಕೊಡಬೇಕೆಂದು ತಿಳಿಯಲು ಮತ್ತು ಪ್ರಕೃತಿಗೆ ಗೌರವ ನೀಡಬೇಕೆಂಬ ಸತ್ಯವನ್ನು ಹಾಗೂ ಸಮಾಜದಲ್ಲಿ ನಮ್ಮ ಜೊತೆ ಸಹಬಾಳ್ವೆ ನಡೆಸುತ್ತಿರುವ ಜನರಿಗೆ ಗೌರವ ನೀಡಬೇಕೆಂಬ ಮತ್ತು ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತೇವೆ. ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.  ನೀವುಗಳೇ  ಸ್ವತಃ ಇಂತಹ ಪಾದಯಾತ್ರೆಯಲ್ಲಿ ಭಾಗವಹಿಸಿ ಅನುಭವವನ್ನು ಪಡೆಯಬೇಕು.  

ನನಗೆ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸುವ ಶಕ್ತಿಯನ್ನು ನೀಡಿದ ಸಾಯಿಬಾಬಾರವರಿಗೆ ನನ್ನ ಅನಂತಾನಂತ ಧನ್ಯವಾದಗಳು. 

ಪಾದಯಾತ್ರೆಯ ಫೋಟೋಗಳಿಗಾಗಿ ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ: 


https://picasaweb.google.com/104075799611688020927/MumbaiToShirdiPadayatra2011?feat=directlink



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment