ಸಾಯಿ ಮಹಾಭಕ್ತ - ಬಾಬು ಪ್ರಧಾನ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾರವರ ಆಶೀರ್ವಾದ ಮತ್ತು ಪ್ರೇಮ ಅವರ ಭಕ್ತರಿಗೆ ಆ ಜನ್ಮಕ್ಕೆ ಮಾತ್ರ ಸೀಮಿತವಾಗಿರದೆ ಮುಂದಿನ ಅನೇಕ ಜನ್ಮಗಳಿಗೂ ವಿಸ್ತರಿಸಿತ್ತು. ಇದಕ್ಕೆ ಒಂದು ಸರಿಯಾದ ಉದಾಹರಣೆ ಶ್ರೀ.ಬಾಬು ಪ್ರಧಾನ್ ರವರು. ಸಾಯಿಬಾಬಾರವರಿಗೆ ದಾದಾ ಕೇಳ್ಕರ್ ರವರ ಸೋದರಿಯ ಮಗ ಬಾಬು ಎಂದರೆ ಬಹಳ ಪ್ರೀತಿ. ಇವರು ಕೋಪರ್ಗಾವ್ ಮತ್ತು ಯಾವಲಾ ಗ್ರಾಮದ ರವಿನ್ಯೂ ಇಲಾಖೆಯ ಸರ್ವೇ ವಿಭಾಗದಲ್ಲಿ ಶ್ರೀ.ಲಿಮಯೆಯವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇವರು ಸಾಯಿಬಾಬಾರವರ ಪರಮ ಭಕ್ತರಾಗಿದ್ದರು. ಇವರು ಅನೇಕ ಬಾರಿ ಕೆಲಸಕ್ಕೆ ಹೋಗುವುದನ್ನು ತಪ್ಪಿಸಿಕೊಂಡು ಶಿರಡಿಗೆ ಹೋಗಿ ಸಾಯಿಬಾಬಾರವರ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದರಿಂದ ಲಿಮಯೆ ಕೋಪಗೊಂಡು ತಮ್ಮ ಮೇಲಿನ ಅಧಿಕಾರಿಗಳಾದ ಶ್ರೀ.ಸಾಥೆಯವರಿಗೆ ದೂರು ನೀಡಿದರು. ಸಾಥೆಯವರು ಕೇಳ್ಕರ್ ರವರ ಅಳಿಯಂದಿರು. ಇವರು ತಮ್ಮ ಮಾವನವರಿಗೆ ಈ ವಿಷಯದ ಬಗ್ಗೆ ಸಾಯಿಬಾಬಾರವರ ಬಳಿ ಮಾತನಾಡುವಂತೆ ಹೇಳಿದರು.
ಕೇಳ್ಕರ್ ರವರು ಸಾಯಿಬಾಬಾರವರಿಗೆ ಬಾಬುವಿನ ಬಗ್ಗೆ ದೂರು ಹೇಳಿದರು. ಆದರೆ, ಬಾಬುವಿನ ಮುಂದಿನ ಭವಿಷ್ಯವನ್ನು ಚೆನ್ನಾಗಿ ತಿಳಿದಿದ್ದ ಸಾಯಿಬಾಬಾರವರು ಆ ದೂರನ್ನು ಹಗುರಾಗಿ ತೆಗೆದುಕೊಂಡರು. ಬಾಬಾರವರು "ಆ ಕೆಲಸದ ಮನೆ ಹಾಳಾಗಿ ಹೋಗಲಿ. ಅವನು ನನ್ನ ಸೇವೆ ಮಾಡಿಕೊಂಡು ಇರಲಿ" ಎಂದರು. ಬಾಬಾರವರ ಮಾತನ್ನು ಕೇಳಿ ಬಾಬುವಿಗೆ ಖುಷಿಯಾಯಿತು. ಆಗಿನಿಂದ ಬಾಬು ಸದಾಕಾಲ ಸಾಯಿಬಾಬಾರವರ ಜೊತೆಯಲ್ಲೇ ಇದ್ದು ಅವರ ಸೇವೆಯನ್ನು ಮಾಡಿಕೊಂಡು ಇದ್ದನು. ಬಾಬಾರವರು ಬಾಬುವನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ತಮ್ಮ ಬಳಿ ಭಕ್ತರು ತರುತ್ತಿದ್ದ ಅತ್ಯುತ್ತಮ ತಿಂಡಿ ತಿನಿಸುಗಳನ್ನು ಪ್ರಸಾದ ರೂಪದಲ್ಲಿ ಬಾಬುವಿಗೆ ನೀಡುತ್ತಿದ್ದರು.
1910ನೇ ಇಸವಿಯಲ್ಲಿ ಸಾಯಿಬಾಬಾರವರಿಗೆ ಭಕ್ತರು ಅರ್ಪಿಸಿದ್ದ ಮಾವಿನ ಹಣ್ಣುಗಳನ್ನು ಬಾಬು ಮೇಲಿಂದ ಮೇಲೆ ತಿನ್ನುತ್ತಿದ್ದನು. ಇದನ್ನು ನೋಡಿದ ಸಾಯಿಬಾಬಾರವರು ಕೇಳ್ಕರ್ ಗೆ ಬಾಬುವನ್ನು ಹುಷಾರಾಗಿ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು. ಕೆಲವೇ ದಿನಗಳಲ್ಲಿ ಬಾಬು ಹುಷಾರು ತಪ್ಪಿ ತೀವ್ರವಾದ ಜ್ವರದಿಂದ ಬಳಲುತ್ತಿದ್ದನು. ಅವನ ಜೀವನದ ಕೊನೆಯ ದಿನಗಳು ಸಮೀಪಿಸಿತ್ತು. ಬಾಬು ಮೃತನಾದ ದಿನ ಸಾಯಿಬಾಬಾರವರು ದ್ವಾರಕಾಮಾಯಿಯಲ್ಲಿ ನೆರೆದಿದ್ದ ಭಕ್ತರಿಗೆ "ಬಾಪು ಬದುಕಿದ್ದಾನೆಯೇ" ಎಂದು ಮಾರ್ಮಿಕವಾಗಿ ಕೇಳಿದ್ದರು. ಏಕೆಂದರೆ ಅವರಿಗೆ ಬಾಬು ಮೃತನಾದ ವಿಷಯ ಮೊದಲೇ ತಿಳಿದಿತ್ತು. ಬಾಬು ತನ್ನ 22ನೇ ವಯಸ್ಸಿನಲ್ಲೇ ಅತ್ಯಂತ ಕಿರಿಯ ವಯಸ್ಸಿನ ಹೆಂಡತಿಯನ್ನು ಬಿಟ್ಟು ಇಹಲೋಕ ತ್ಯಜಿಸಿದನು.
ಬಾಬು ಪ್ರಧಾನ್ ನ್ನು ಬಾಬಾರವರ ಬಳಿಗೆ ಮೊದಲು ಕರೆದುಕೊಂಡು ಬಂದಿದ್ದು ಶ್ರೀ.ಚಂದೋರ್ಕರ್ ರವರು. ಚಂದೋರ್ಕರ್ ಸಾಯಿಬಾಬಾರವರಿಗೆ ತಮ್ಮ ಭಕ್ತರ ಬಗ್ಗೆ ಇದ್ದ ಪ್ರೇಮ, ದಯೆ ಮತ್ತು ಅವರ ದೈವತ್ವವನ್ನು ಕುರಿತು ಬಹಳ ಹೊಗಳಿಕೆಯ ಮಾತುಗಳನ್ನು ನುಡಿದರು. ಇದನ್ನು ಕೇಳಿದ ಮೇಲೆ 1910 ರ ಮೇ ತಿಂಗಳ ಕಡೆಯ ವಾರದಲ್ಲಿ ಪ್ರಧಾನ್, ಅವರ ಹೆಂಡತಿ, ಅವರ ಅತ್ತಿಗೆಯವರು ಮತ್ತು ತಮ್ಮ ಇಬ್ಬರು ಗಂಡು ಮಕ್ಕಳೊಡನೆ ಶಿರಡಿಗೆ ಆಗಮಿಸಿದರು. ಎಲ್ಲರೂ ಕೂಡಿ ದ್ವಾರಕಾಮಾಯಿಗೆ ಬಾಬಾರವರ ದರ್ಶನಕ್ಕೆ ತೆರಳಿದರು. ಆ ಸಮಯದಲ್ಲಿ ಚಂದೋರ್ಕರ್ ರವರ ಅತ್ತಿಗೆಯವರು ತುಂಬು ಗರ್ಭಿಣಿಯಾಗಿದ್ದರು. ಆದ್ದರಿಂದ ಪ್ರಧಾನ್ ರವರಿಗೆ ತಮ್ಮಅತ್ತಿಗೆಯನ್ನು ಶಿರಡಿಗೆ ಕರೆದುಕೊಂಡು ಹೋಗಲು ಇಷ್ಟವಿರಲಿಲ್ಲ. ಆದರೆ, ಅವರ ಅತ್ತಿಗೆಗೆ ಹಿಂದಿನ ರಾತ್ರಿ ಸಾಯಿಬಾಬಾರವರು ಕನಸಿನಲ್ಲಿ ಕಾಣಿಸಿಕೊಂಡಿದ್ದರು. ಆದುದರಿಂದ, ಅವರು ತಾನು ಶಿರಡಿಗೆ ಬಂದೇ ತೀರುವೆನೆಂದು ಹಠ ಮಾಡಿ ಇವರುಗಳ ಜೊತೆ ಬಂದಿದ್ದರು.
ಅವರುಗಳು ಸಾಯಿಬಾಬಾರವರಿಗೆ ನಮಸ್ಕಾರಗಳನ್ನು ಸಲ್ಲಿಸಿದಾಗ, ಸಾಯಿಬಾಬಾರವರು ಅವರೆಲ್ಲ ಯೋಗಕ್ಷೇಮವನ್ನು ವಿಚಾರಿಸಿದರು. ಹೀಗೆ ವಿಚಾರ ಮಾಡುತ್ತಾ ಇದ್ದಾಗ ಪ್ರಧಾನ್ ರವರ ಹೆಂಡತಿಯ ಕಡೆ ತಿರುಗಿ " ಅತಿ ಶೀಘ್ರದಲ್ಲಿಯೇ ಇವಳು ನನ್ನ ಬಾಬುವಿನ ತಾಯಿಯಾಗುತ್ತಾಳೆ" ಎಂದು ನುಡಿದರು. ಆಗ, ಅಲ್ಲಿಯೇ ಇದ್ದ ಶ್ಯಾಮರವರು ಸಾಯಿಬಾಬಾರವರು ಪ್ರಧಾನ್ ರವರ ಅತ್ತಿಗೆಯನ್ನು ಕುರಿತು ಈ ಮಾತನ್ನು ಹೇಳಿದರೇ ಎಂದು ಕೇಳಲು, ಬಾಬಾರವರು "ಇಲ್ಲಾ, ನಾನು ಹೇಳಿದ್ದು ಈ ಮಹಿಳೆಯ ಬಗ್ಗೆ" ಎಂದು ಪ್ರಧಾನ್ ರವರ ಹೆಂಡತಿಯ ಕಡೆ ಬೆರಳು ತೋರಿಸಿ ಹೇಳಿದರು.
ಸಾಯಿಬಾಬಾರವರು ನುಡಿದಂತೆ ಸರಿಯಾಗಿ 12 ತಿಂಗಳುಗಳ ಒಳಗೆ ಪ್ರಧಾನ್ ರವರ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ "ಬಾಬು" ಎಂದು ನಾಮಕರಣ ಮಾಡಲಾಯಿತು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment