Friday, August 12, 2011

ಸಾಯಿ ಮಹಾಭಕ್ತ - ಬಾಲಕೃಷ್ಣ ವಾಮನ ವೈದ್ಯ - ಕೃಪೆ: ಸಾಯಿಅಮೃತಧಾರಾ.ಕಾಂ  



ಬಾಲಕೃಷ್ಣ ವಾಮನ ವೈದ್ಯ ಮುಂಬೈನ ಬಾಂದ್ರಾ ಬಡಾವಣೆಯಲ್ಲಿ ವಾಸವಾಗಿದ್ದರು. ಇವರು ರೈಲ್ವೇಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಇವರು ಮೊದಲ ಬಾರಿಗೆ 1910 ರಲ್ಲಿ ತಮ್ಮ ಕುಟುಂಬದ ಸದಸ್ಯರೊಡನೆ ಶಿರಡಿಗೆ ಭೇಟಿ ನೀಡಿದರು. ಇವರು ಶಿರಡಿಗೆ ಬರುವುದಕ್ಕೆ ಮೊದಲೇ ಇವರ ಮೇಲೆ ಸಾಯಿಬಾಬಾರವರು ತಮ್ಮ ಪ್ರೀತಿಯನ್ನು ಮತ್ತು ಆಶೀರ್ವಾದವನ್ನು ಇವರಿಗೆ ನೀಡಿದ್ದರು. 

ಬಾಲಕೃಷ್ಣ ವಾಮನ ವೈದ್ಯರವರು ರಜೆಯನ್ನು ಕೇಳಿ ಮತ್ತು ಉಚಿತ ರೈಲ್ವೇ ಪಾಸ್ ಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಯಾವುದೋ ಆತುರದ ಕೆಲಸ ಬಂದಿದ್ದರಿಂದ ತಮಗೆ ರಜೆ ಸಿಗುವುದೋ ಇಲ್ಲವೋ ಎಂಬ ಸಂದೇಹದಲ್ಲಿದ್ದರು. ಆ ಕೆಲಸಕ್ಕೆ ಬಾಲಕೃಷ್ಣ ವಾಮನ ವೈದ್ಯರವರ ಅವಶ್ಯಕತೆಯಿತ್ತು. ಆದರೂ ಕೂಡ ತಮ್ಮ ರಜೆಯ ಅರ್ಜಿಯನ್ನು ಮೇಲಿನ ಅಧಿಕಾರಿಗಳಿಗೆ ಕಳುಹಿಸಿದರು. ಇವರಿಗೆ ರಜೆ ಮತ್ತು ರೈಲ್ವೇ ಪಾಸ್ ನ್ನು ಹಿರಿಯ ಅಧಿಕಾರಿಗಳು ಮಂಜೂರು ಮಾಡಿದಾಗ ಇವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಕೊನೆಗೆ ವಿಚಾರಿಸಲಾಗಿ ತಮಗೆ ರಜೆ ಮತ್ತು ರೈಲ್ವೇ ಪಾಸ್ ಮಂಜೂರು ಮಾಡಿದ ಅಧಿಕಾರಿ ಶಿರಡಿ ಸಾಯಿಬಾಬಾರವರ ಭಕ್ತರೆಂದು ತಿಳಿದುಬಂದಿತು. 

ಇವರು ಶಿರಡಿಯ ಸಮೀಪವಿರುವ ಕೋಪರ್ಗಾವ್ ತಲುಪಿದಾಗ ರಾತ್ರಿಯಾಗಿತ್ತು. ಅವರು ಒಂದು ಜಟಕಾ ಬಂಡಿಯನ್ನು ಗೊತ್ತು ಮಾಡಿಕೊಂಡು ಶಿರಡಿಗೆ ಹೊರಟರು.ದಟ್ಟವಾದ ಕತ್ತಲು ದಾರಿಯಲ್ಲಿ ಜನರ ಓಡಾಟವೇ ಇಲ್ಲದೆ ನಿರ್ಜನವಾಗಿದ್ದರಿಂದ ಮತ್ತು ದರೋಡೆಕೋರರ ಭಯದಿಂದ ಜಟಕಾ ಬಂಡಿಯ ಮಾಲೀಕ ಶಿರಡಿಗೆ ಆ ಅವೇಳೆಯಲ್ಲಿ ಬರಲು ಒಪ್ಪಲಿಲ್ಲ. ಆದರೆ ಬಾಲಕೃಷ್ಣ ಅವರಿಗೆ ಸಾಯಿಬಾಬಾರವರ ಮೇಲೆ ಅಪಾರ ನಂಬಿಕೆಯಿದ್ದಿದ್ದರಿಂದ ಅವರು ಜಟಕಾದವನಿಗೆ ಸಾಯಿಬಾಬಾರವರ ಆಶೀರ್ವಾದ ತಮ್ಮ ಮೇಲೆ ಇರುವುದರಿಂದ ದಾರಿಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದರು. ಬಾಲಕೃಷ್ಣರವರ ಮಾತಿಗೆ ಮಣಿದು ಜಟಕಾದವನು ಅವರೆಲ್ಲರನ್ನು ಕರೆದುಕೊಂಡು ಸಾಗುತ್ತಿದ್ದಾಗ ತಮ್ಮ ಜಟಕಾವನ್ನು ಎರಡು ಜಟಕಾಗಳು ಹಿಂಬಾಲಿಸುತ್ತಿದ್ದುದು ಗಮನಕ್ಕೆ ಬಂದಿತು. ಮಾರ್ಗ ಮಧ್ಯದಲ್ಲಿ ಇವರು ಶಿರಡಿಯಿಂದ ವಾಪಸಾಗುತ್ತಿದ್ದ ಕೆಲವು ಜಟಕಾಗಳು ಮತ್ತು ಎತ್ತಿನ ಬಂಡಿಗಳನ್ನು ಕಂಡರು. ಆಗ, ಇವರಿಗೆ ಮುಂದೆ ಹೋಗಲು ಧೈರ್ಯ ಬಂದಿತು.

ಕೊನೆಗೂ ಶಿರಡಿ ತಲುಪಿ ಸಾಥೆವಾಡಾದ ಒಂದು ರೂಮಿನಲ್ಲಿ ಉಳಿದುಕೊಂಡರು. ಆಗ ಸುಮಾರು 1 ಘಂಟೆಯ ಸಮಯವಾಗಿತ್ತು. ಮಾರನೇ ದಿನ ಸಂಕಷ್ಟ ಚತುರ್ಥಿಯಾದ್ದರಿಂದ ಉಪವಾಸ ಇರಬೇಕಾದ ಕಾರಣ ವೈದ್ಯರವರು ತಮ್ಮ ಮನೆಯವರಿಗೆ ಏನನ್ನಾದರೂ ಸ್ವಲ್ಪ ಆಹಾರವನ್ನು ಆಗಲೇ ಸೇವಿಸಿ ಮಲಗಿಕೊಳ್ಳೋಣ ಎಂದು ಹೇಳಿದರು. ನಂತರ ಇದ್ದ ಸ್ವಲ್ಪ ಆಹಾರವನ್ನು ಸೇವಿಸಿ ಮಲಗಿಕೊಂಡರು. ಮಾರನೇಯ ದಿನ ಸಾಯಿಬಾಬಾರವರು ಸಾಥೆವಾಡಾದಲ್ಲಿ ತಂಗಿದ್ದ ಇತರ ನಿವಾಸಿಗಳನ್ನು ತರಾಟೆಗೆ ತೆಗೆದುಕೊಂಡರು. "ನನ್ನ ಮಕ್ಕಳು ನೆನ್ನೆ ರಾತ್ರಿ ಶಿರಡಿಗೆ ಬಂದರು. ನೀವುಗಳು ಯಾರೂ ಆಹಾರವನ್ನು ನೀಡದೇ ಇದ್ದಿದರಿಂದ ಅವರುಗಳೆಲ್ಲಾ ಊಟವನ್ನು ಮಾಡದೆ ಉಪವಾಸ ಮಲಗಬೇಕಾಯಿತು" ಎಂದು ಅವರನ್ನೆಲ್ಲಾ ಬಯ್ದು ದ್ವಾರಕಾಮಾಯಿಯಿಂದ ಹೊರಗೆ ಅಟ್ಟಿದರು. ಬಾಬಾರವರಿಂದ ಬಯ್ಗುಳ ತಿಂದು ಬಂದ ಭಕ್ತರು ವೈದ್ಯ ಅವರಿಗೆ ದ್ವಾರಕಾಮಾಯಿಯಲ್ಲಿ ನಡೆದ ಎಲ್ಲ ವಿಷಯವನ್ನೂ ಹೇಳಿದರು ಮತ್ತು ಬಾಬಾ ಅವರಿಗೆ ತಾವುಗಳು ಸ್ವಲ್ಪ ಆಹಾರವನ್ನು
ಸೇವಿಸಿ ಮಲಗಿಕೊಂಡ ವಿಷಯವನ್ನು ಕೂಡ ತಿಳಿಸಬೇಕೆಂದು ಕೇಳಿಕೊಂಡರು. ನಂತರ ವೈದ್ಯ ಅವರು ಬಾಬಾರವರ ದರ್ಶನಕ್ಕೆ ಹೋಗಿ ಅವರಿಗೆ ನಮಸ್ಕಾರ ಮಾಡಿ ಹಿಂದಿನ ದಿನ ರಾತ್ರಿ ತಮಗೆ ಮತ್ತು ತಮ್ಮ ಮನೆಯವರಿಗೆ ಆಹಾರವನ್ನು ನೀಡಿ ಸಾಥೆವಾಡಾದ ನಿವಾಸಿಗಳು ಚೆನ್ನಾಗಿ ನೋಡಿಕೊಂಡರು ಎಂದು ತಿಳಿಸಿದರು. ಆಗ ಬಾಬಾರವರು ವೈದ್ಯರನ್ನು ಆಶೀರ್ವದಿಸಿ "ಅಲ್ಲಾ ಭಲಾ ಕರೇಗಾ" ಎಂದು ನುಡಿದರು. 

ವೈದ್ಯ ಅವರ ಪತ್ನಿಯವರಿಂದ ಭಿಕ್ಷೆ ಸ್ವೀಕರಿಸಿದ ಸಾಯಿಬಾಬಾ: 

ಆ ದಿನ ಬೆಳಿಗ್ಗೆ ಸಾಯಿಬಾಬಾ ತಮ್ಮ ಎಂದಿನ ಭಿಕ್ಷೆಗೆ ಹೊರಟಾಗ ವೈದ್ಯರವರ ಮನೆಯವರು ತಂಗಿದ್ದ ಸಾಥೆವಾಡಾದ ಎದುರಿಗೆ ಬಂದು ನಿಂತು ಭಿಕ್ಷೆಯನ್ನು ನೀಡುವಂತೆ ವೈದ್ಯರವರ ಪತ್ನಿಯನ್ನು ಕೇಳಿದರು. ವೈದ್ಯರ ಪತ್ನಿ ಕೂಡಲೇ ಒಳಗಡೆ ತೆರಳಿ ಚಪಾತಿಯನ್ನು ಮತ್ತು ತರಕಾರಿ ಪಲ್ಯವನ್ನು ತಂದು ಸಂತೋಷದಿಂದ ಸಾಯಿಬಾಬಾರವರಿಗೆ ನೀಡಿದರು. ಇದು ಸ್ವಲ್ಪ ವಿಚಿತ್ರವಾಗಿ ಕಂಡುಬರುತ್ತದೆ. ಏಕೆಂದರೆ, ಅದು ಸಾಯಿಬಾಬಾರವರ ದಿನನಿತ್ಯದ ಭಿಕ್ಷಾ ಮಾರ್ಗವಾಗಿರಲಿಲ್ಲ. ಇದು ಸಾಯಿಬಾಬಾರವರಿಗೆ ತಮ್ಮ ಭಕ್ತರ ಮೇಲಿದ್ದ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ. 

ಮಾರನೇ ದಿನ, ವೈದ್ಯರವರ ಪತ್ನಿ ಸಾಯಿಬಾಬಾರವರಿಗೆ ನೀಡಲು ಆಹಾರವನ್ನು ಸಿದ್ಧಪಡಿಸಿದರು. ಆದರೆ, ಆಹಾರ ತಯಾರಿಸುವುದು ಸ್ವಲ್ಪ ತಡವಾಯಿತು. ಬೇರೆ ಭಕ್ತರು ಆಗಲೇ ಬಾಬಾರವರಿಗೆ ಭಿಕ್ಷೆಯನ್ನು ನೀಡಿದ್ದರು ಮತ್ತು ಎಲ್ಲಾ ಭಕ್ತರೂ ಸಾಯಿಬಾಬಾರವರು ನೈವೇದ್ಯ ಸ್ವೀಕರಿಸುವುದನ್ನೇ ಎದುರು ನೋಡುತ್ತಿದ್ದರು. ಆದರೆ ಬಾಬಾರವರು ಆಹಾರವನ್ನು ಸ್ವೀಕರಿಸದೆ ಎಲ್ಲರಿಗೂ ಸ್ವಲ್ಪ ಕಾಲ ತಾಳ್ಮೆಯಿಂದ ಇರುವಂತೆ ಸೂಚಿಸಿದರು. ವೈದ್ಯರ ಪತ್ನಿಯು ನೈವೇದ್ಯವನ್ನು ತಂದಾಗ ಅಲ್ಲಿದ್ದ ಸ್ವಯಂ ಸೇವಕರಿಗೆ ಆ ನೈವೇದ್ಯದ ತಟ್ಟೆಯನ್ನು ತಮ್ಮ ಹತ್ತಿರ ಇರಿಸುವಂತೆ ಸೂಚಿಸಿದರು. ನಂತರ ಆ ತಟ್ಟೆಯಿಂದ ಸ್ವಲ್ಪ ಆಹಾರವನ್ನು ಸ್ವೀಕರಿಸಿ ಉಳಿದುದನ್ನು ಪ್ರಸಾದವಾಗಿ ಹಿಂತಿರುಗಿಸಿದರು. 

ಚಿತ್ರಪಟವನ್ನು ಸ್ಪರ್ಶಿಸಿ ಪವಿತ್ರಗೊಳಿಸಿದ ಸಾಯಿಬಾಬಾ: 

ವೈದ್ಯರವರಿಗೆ ಆ ಭೇಟಿಯ ಸಮಯದಲ್ಲಿ ಸಾಯಿಬಾಬಾರವರಿಂದ ಸ್ಪರ್ಶಿಸಿ ಪವಿತ್ರವಾದ ಚಿತ್ರಪಟವನ್ನು ಪಡೆಯಬೇಕೆಂಬ ಆಸೆಯಾಯಿತು. ತಮ್ಮ ಆಸೆಯನ್ನು ಶ್ಯಾಮ ಅವರಿಗೆ ತಿಳಿಸಿದರು. ಶ್ಯಾಮರವರು ಈ ವಿಷಯವನ್ನು ಬಾಬಾರವರಿಗೆ ತಿಳಿಸಿದಾಗ ಬಾಬಾರವರು ಆ ಕೂಡಲೇ "ಏಕೆ ತಡ? ಈಗಲೇ ಹೋಗಿ ಒಂದು ಚಿತ್ರಪಟವನ್ನು ತೆಗೆದುಕೊಂಡು ಬನ್ನಿ" ಎಂದು ಆಜ್ಞಾಪಿಸಿದರು. ಚಿತ್ರಪಟವನ್ನು ತಂದ ನಂತರ ಅದನ್ನು ಸ್ವಲ್ಪ ಕಾಲ ತಮ್ಮ ಕೈನಲ್ಲಿ ಹಿಡಿದುಕೊಂಡಿದ್ದು ನಂತರ ಅದನ್ನು ವೈದ್ಯ ಅವರಿಗೆ ಕೊಡುತ್ತಾ "ಇದನ್ನು ಮನೆಗೆ ತೆಗೆದುಕೊಂಡು ಹೋಗಿ ನಿತ್ಯವೂ ಪೂಜಿಸು" ಎಂದು ಹೇಳಿದರು. ಆ ಚಿತ್ರಪಟವು ಈಗಲೂ ವೈದ್ಯ ಅವರ ಮನೆಯಲ್ಲಿ ಇದೆ. 

ವೈದ್ಯರವರು ಮುಂಬೈಗೆ ವಾಪಸಾಗುವಾಗ ಮಧ್ಯದಲ್ಲಿ ನಾಸಿಕ್ ಗೆ ಹೋಗಬೇಕೆಂದುಕೊಂಡು ತಮ್ಮ ಮನೆಯವರೆಲ್ಲ ಜೊತೆ ಸಾಯಿಬಾಬಾರವರ ಬಳಿಗೆ ತೆರಳಿ ಹೊರಡಲು ಅನುಮತಿ ಬೇಡಿದರು. ಆಗ ಬಾಬಾರವರು ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾ " ಹೊರಡು, ಆದರೆ ಹೇಗೆ ಶಿರಡಿಗೆ ಹೆಂಡತಿ ಮತ್ತು ಮಕ್ಕಳೊಂದಿಗೆ ಬಂದೆಯೋ ಹಾಗೆಯೇ ವಾಪಸಾಗು. ನಾಸಿಕ್ ಗೆ ಹೋಗಬೇಡ. ಅಲ್ಲಿ ಪ್ಲೇಗ್ ಮಹಾಮಾರಿಯಿದೆ" ಎಂದು ತಿಳಿಸಿದರು. ಬಾಬಾರವರಿಗೆ ತಮ್ಮ ಮೇಲಿದ್ದ ಪ್ರೇಮವನ್ನು ಕಂಡು ವೈದ್ಯ ಅವರಿಗೆ ಕಣ್ಣೇರು ಉಕ್ಕಿ ಬಂದಿತು. ನಂತರ ಜಟಕಾ ಬಂಡಿಯೊಂದನ್ನು ಗೊತ್ತು ಮಾಡಿಕೊಂಡು ಮನೆಯವರೊಡನೆ ಕೋಪರ್ ಗಾವ್ ರೈಲ್ವೇ ನಿಲ್ದಾಣಕ್ಕೆ ಹೋದರು. ಆದರೆ, ಇವರು ಹೋಗಬೇಕಾಗಿದ್ದ ರೈಲುಬಂಡಿ ಆಗಲೇ ಹೊರಟುಹೋಗಿತ್ತು. ಇದರಿಂದ ವೈದ್ಯರವರ ಮನಸ್ಸಿಗೆ ಬೇಸರವಾಯಿತು. ಅವರುಗಳು ಇಡೀ ರಾತ್ರಿ ರೈಲ್ವೇ ನಿಲ್ದಾಣದಲ್ಲಿ ಕಳೆಯಬೇಕಾಯಿತು. ಮಾರನೇ ದಿನ ಬೆಳಗಿನ ಜಾವದ ರೈಲನ್ನು ಹಿಡಿದು ಮನಮಾಡ್ ನ್ನು ಸುಖವಾಗಿ ತಲುಪಿದರು. ನಂತರ ತಾವು ಹತ್ತಬೇಕಿದ್ದ ರೈಲು ಭಯಂಕರವಾದ ಅಪಘಾತವಾಗಿ ತಾವು ಪ್ರಯಾಣಿಸಬೇಕಿದ್ದ ಬೋಗಿಯು ಸಂಪೂರ್ಣವಾಗಿ ಜಖಂಗೊಂಡಿರುವುದು ತಿಳಿದುಬಂದಿತು. ಹೀಗೆ ಸಾಯಿಬಾಬಾರವರು ತಮ್ಮ  ಭಕ್ತನನ್ನು ಮತ್ತೊಮ್ಮೆ ಅಪಾಯವಾಗುವುದರಿಂದ ಕಾಪಾಡಿದರು. 

ವೈದ್ಯ ಅವರು ಪುನಃ 1912 ಮತ್ತು 1916 ರಲ್ಲಿ ಶಿರಡಿಗೆ ಭೇಟಿ ನೀಡಿದರು. ಪ್ರತಿ ಸಲ ಶಿರಡಿಗೆ ಬಂದಾಗಲೂ ಸಾಯಿಬಾಬಾರವರು ಇವರಿಗೆ ಅತಿಯಾದ ಪ್ರೀತಿಯನ್ನು ತೋರಿಸುತ್ತಿದ್ದರು. 1916 ನೇ ಇಸವಿಯಲ್ಲಿ ಇವರು ತಮ್ಮ ಮನೆಯನ್ನು ಬಾಂದ್ರಾಕ್ಕೆ ಬದಲಾಯಿಸಿದರು.ಒಂದು ಒಬ್ಬ ಭಿಕ್ಷುಕ ಇವರ ಮನೆಗೆ ಬಂದು ಆಣೆ ಭಿಕ್ಷೆಯನ್ನು ನೀಡಲು ಕೇಳಿದನು. ಆಗ ಅಲ್ಲಿಯೇ ಆಟವಾಡುತ್ತಿದ್ದ ವೈದ್ಯರವರ ಮಗ ಒಳಗೆ ಓಡಿಹೋಗಿ ಒಂದು ಆಣೆಯನ್ನು ತಂದು ಬಂದವರು ಸ್ವತಃ ಸಾಯಿಬಾಬಾರವರೇ ಎಂದು ತಿಳಿದು ಭಿಕ್ಷೆಯನ್ನು ಸಂತೋಷದಿಂದ ನೀಡಿದನು. ಮನೆಯ ಒಳಗಡೆ ಇದ್ದ ವೈದ್ಯರವರು ಹೊರಗಡೆ ಬಂದು ಆ ಭಿಕ್ಷುಕನಿಗೆ ನಮಸ್ಕರಿಸಿದರು ಮತ್ತು ಅವನು ನೋಡಲು ಬಾಬಾರವರನ್ನೇ ಹೋಲುತ್ತಿದ್ದರಿಂದ ಅವನಿಗೆ ತಮ್ಮ ಮನೆಯ ಒಳಗಡೆ ಬರುವಂತೆ ಆಹ್ವಾನ ನೀಡಿದರು. ಭಿಕ್ಷುಕನು ಮನೆಯ ಒಳಗಡೆ ಬಂದು ಬೇಯಿಸದೆ ಇದ್ದ ಬೇಳೆ, ಕಾಳುಗಳನ್ನು ನೀಡುವಂತೆ ಹೇಳಿದನು. ವೈದ್ಯರವರು ಅವನು ಕೇಳಿದ್ದನ್ನೆಲ್ಲಾ ಸಂತೋಷದಿಂದ ನೀಡಿದರು. ಭಿಕ್ಷೆಯನ್ನು ಸ್ವೀಕರಿಸಿದ ನಂತರ ಅವನು ವೈದ್ಯರವರಿಗೆ "ನಿನಗೆ ಈಗ ಸಂತೋಷವಾಯಿತಾ? ನಾನು ಇಲ್ಲೇ ನಿನ್ನೊಡನೆ ಇದ್ದೇನೆ. ನೀನು ಶಿರಡಿಗೆ ಬರುವ ಅವಶ್ಯಕತೆಯಿಲ್ಲ" ಎಂದು ನುಡಿದನು. ಆ ಘಟನೆಯ ನಂತರ ವೈದ್ಯರವರು ಶಿರಡಿಗೆ ಹೋಗಲೇ ಇಲ್ಲ. 

ನಂತರ ವೈದ್ಯರವರು ಎಷ್ಟೇ ಕಷ್ಟಗಳೂ ಬಂದರೂ ಎದೆಗುಂದದೆ ಬಾಬಾರವರು ತಮ್ಮ ಜೊತೆಗಿದ್ದಾರೆಂಬ ನಂಬಿಕೆಯಿಂದ ತಮ್ಮ ಮುಂದಿನ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಿದರು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment