Saturday, August 13, 2011

ಸಾಯಿ ಮಹಾಭಕ್ತ ರಾಮಚಂದ್ರ ರಾಮಕೃಷ್ಣ  ಸಾಮಂತ್ - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ.ರಾಮಚಂದ್ರ ರಾಮಕೃಷ್ಣ  ಸಾಮಂತ್ ರವರು ಹೇಮಾಡಪಂತ ಆಲಿಯಾಸ್ ದಾಬೋಲ್ಕರ್ ರವರ ಅಳಿಯ. ಸಾಯಿಬಾಬಾರವರು ದಾಬೋಲ್ಕರ್ ರವರನ್ನು ಬಹಳ ಪ್ರೀತಿಸುತ್ತಿದ್ದರು. ಆ ಪ್ರೀತಿ ಅವರ ಅಳಿಯನ ಮೇಲೆ ಕೂಡ ಪಸರಿಸಿತು. ಸಾಮಂತ್ ಅವರು ಬಹಳ ಅವಿಭಕ್ತ ಕುಟುಂಬದಲ್ಲಿ ಜನಿಸಿದರು. ಇವರ ಮುತ್ತಾತನವರು ಬಹಳ ದೊಡ್ಡ ಪಾಂಡುರಂಗನ ಭಕ್ತರಾಗಿದ್ದು ಪಂಡರಾಪುರಕ್ಕೆ ಆಗಾಗ್ಗೆ ಯಾತ್ರೆಯನ್ನು ಕೈಗೊಳ್ಳುತ್ತಲೇ ಇದ್ದರು. ಪಂಡರಾಪುರದಲ್ಲಿ ವಿಶೇಷ ದಿನವಾದ ಆಷಾಢ ಮಾಸದ ಏಕಾದಶಿಯಂದು ತಪ್ಪದೆ ದರ್ಶನ ಮಾಡುತ್ತಿದ್ದರು. ಇವರ ತಾತನವರು ಪಾಂಡುರಂಗ ಹಾಗೂ ಈಶ್ವರನ ಭಕ್ತರಾಗಿದ್ದು ಪ್ರತಿದಿನ ತಪ್ಪದೆ ನಾಮಜಪ, ಧ್ಯಾನ ಮತ್ತು ಭಕ್ತಿ ಗೀತೆಗಳನ್ನು ಹಾಡುವುದರಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದರು. ಇವರ ತಂದೆಯವರು ಅದೇ ಪದ್ಧತಿಯನ್ನು ಮುಂದುವರಿಸಿ ಪ್ರತಿ ವರ್ಷ ತಪ್ಪದೆ ಪಂಡರಾಪುರದ ಯಾತ್ರೆಯನ್ನು ಮಾಡುತ್ತಿದ್ದರು. ಹೀಗಾಗಿ, ಸಾಮಂತ್ ರವರು ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ವಾತಾವರಣದಲ್ಲಿ ಬೆಳೆದರು. ಆದರೆ, ಇವರ ಶಿಕ್ಷಣವು ಇವರನ್ನು ವಿರುದ್ಧ ದಿಕ್ಕಿಗೆ ಬಲವಾಗಿ ಸೆಳೆದಿದ್ದರಿಂದ ಇವರ ಆಧ್ಯಾತ್ಮಿಕ ಪ್ರಗತಿ ಸ್ವಲ್ಪ ಮಟ್ಟಿಗೆ ಕುಂಟಿತವಾಯಿತೆಂದೇ ಹೇಳಬೇಕು. 

ಇವರ ಮನೆಯವರಿಗೆ 1911 ರ ತನಕ ಸಾಯಿಬಾಬಾರವರ ಹೆಸರೇ ಗೊತ್ತಿರಲಿಲ್ಲ. 1911ನೇ ಇಸವಿಯಲ್ಲಿ ಇವರು ದಾಬೋಲ್ಕರ್ ರವರ ಮಗಳನ್ನು ವಿವಾಹವಾದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಇವರು ತಮ್ಮ ವಂಶವಾಹಿನಿ ಖಾಯಿಲೆಯಾದ ಆಲ್ಬಮಿನ್ ಯುರಿಯಾ ದಿಂದ ಬಳಲಲು ಪ್ರಾರಂಭಿಸಿದರು. ಆದುದರಿಂದ, ಇವರು ರಾತ್ರಿಯ ಹೊತ್ತು ಗಟ್ಟಿ ಪದಾರ್ಧವನ್ನು ತಿನ್ನದಂತೆ ಪಥ್ಯವನ್ನು ಡಾಕ್ಟರ್ ಗಳು ನಿರ್ಬಂಧವನ್ನು ವಿಧಿಸಿದ್ದರು. ದಾಬೋಲ್ಕರ್ ರವರು ತಮ್ಮ ಅಳಿಯನನ್ನು ಕರೆದುಕೊಂಡು ಶಿರಡಿ ಸಾಯಿಬಾಬಾರವರ ಪಾದಗಳಲ್ಲಿ ಶರಣು ಹೋದರು. ಶಿರಡಿಯ ದ್ವಾರಕಾಮಾಯಿಯಲ್ಲಿ ಎಲ್ಲಾ ಭಕ್ತರೂ ಸಾಯಿಬಾಬಾರವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದರು. ಅಲ್ಲಿಯೇ ಇದ್ದ ಶ್ಯಾಮರವರು ಸಾಮಂತ್ ರವರಿಗೆ ಬಾಬಾರವರಿಗೆ ನಮಸ್ಕರಿಸುವಂತೆ ತಿಳಿಸಿದರು. ಆಗ ಸಾಯಿಬಾಬಾರವರು ನಗುತ್ತಾ "ಶ್ಯಾಮಾ, ಇವನಿಗೆ ಗುರುವಿನ ಪಾದಗಳಿಗೆ ನಮಸ್ಕರಿಸುವುದು ತುಂಬಾ ಕಷ್ಟದ ವಿಷಯ"  ಎಂದು ಹೇಳುತ್ತಾ ತಮ್ಮ ಅಭಯ ಹಸ್ತವನ್ನು ಸಾಮಂತ್ ರವರ ತಲೆಯ ಮೇಲೆ ಇಡುತ್ತಾ "ಅಲ್ಲಾ, ಭಲಾ ಕರೇಗಾ" ಎಂದು ನುಡಿದರು. ಬಾಬಾರವರು ನುಡಿದಂತೆ ಆ ಕ್ಷಣದಿಂದಲೇ ಸಾಮಂತ್ ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ಸ್ವಲ್ಪ ದಿನಗಳಲ್ಲೇ ಸಾಮಂತ್ ರಾತ್ರಿ ವೇಳೆ ಗಟ್ಟಿ ಪದಾರ್ಥಗಳನ್ನು ತಿನ್ನುವಂತೆ ಆಯಿತು. ಆದರೂ, ಸಾಮಂತ್ ರವರು ಔಷಧಿಗಳನ್ನು ತಪ್ಪಿಸದೇ ತೆಗೆದುಕೊಂಡು ನಿಯಮಿತವಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಕೊನೆಗೂ, ಇವರು ತಮಗೆ ಬಂದ ಖಾಯಿಲೆಯಿಂದ ಸಂಪೂರ್ಣವಾಗಿ ಗುಣ ಹೊಂದಿ ಮನೆಯವರೊಂದಿಗೆ ಊಟವನ್ನು ಸರಿಯಾಗಿ ಮಾಡಲು ಪ್ರಾರಂಭಿಸಿದರು. ಈ ಘಟನೆಯಿಂದ ಸಾಮಂತ್ ರವರಿಗೆ ಸಾಯಿಬಾಬಾರವರ ಮೇಲಿದ್ದ ನಂಬಿಕೆ ಮತ್ತಷ್ಟು ಹೆಚ್ಚಿತು. 

1915 ನೇ ಇಸವಿಯ ಫೆಬ್ರವರಿ ತಿಂಗಳಿನಲ್ಲಿ ಇವರಿಗೆ ತಮ್ಮನ್ನು ಸಾಯಿಬಾಬಾರವರು ಎಷ್ಟು ಪ್ರೀತಿಸುತ್ತಾರೆ ಮತ್ತು ರಕ್ಷಿಸುತ್ತಾರೆ ಎಂಬುದರ ಅರಿವಾಯಿತು. ಫೆಬ್ರವರಿ ತಿಂಗಳ ಪ್ರಾರಂಭದಲ್ಲಿ ಇವರು ತಮ್ಮ ಅರ್ನಾಲದ ಮನೆಯಲ್ಲಿ ತುಂಬಾ ಹುಶಾರಿಲ್ಲದೇ ನರಳುತ್ತಿದ್ದರು. ಒಂದು ದಿನ ಹಾಸಿಗೆಯಿಂದ ಏಳಲು ಹೋಗಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ನೆಲಕ್ಕೆ ತಮ್ಮ ತಲೆಯನ್ನು ಜೋರಾಗಿ ಹೊಡೆದುಕೊಂಡು ಬಿದ್ದು ಬಿಟ್ಟರು. ಜೋರಾದ ಸದ್ದನ್ನು ಕೇಳಿ ಇವರ ಹೆಂಡತಿ ಓಡಿ ಬಂದರು. ಇವರ ಸ್ಥಿತಿಯನ್ನು ನೋಡಿ ಬಹಳ ಗಂಭೀರವಾದ ಗಾಯವಾಗಿದೆ ಎಂದು ಗಾಭರಿಗೊಂಡರು. ಆ ಸಮಯದಲ್ಲಿ ಸಾಮಂತ್ ರವರಿಗೆ ಒಂದು ವಿಶೇಷವಾದ ಅನುಭವವಾಯಿತು. ಅವರು "ಕನಸಿನಲ್ಲಿ ಸುಮಾರು 8 ರಿಂದ 10 ಜನರು ನಾನು ನೋಡಿದೆ. ಅವರು ನೋಡಲು ಬಹಳ ಕಪ್ಪಗೆ ಮತ್ತು ತುಂಬಾ ಭಯಂಕರವಾಗಿದ್ದರು. ಅವರುಗಳು ತ್ರಿಶೂಲ ಮತ್ತು ಕತ್ತಿಯನ್ನು ಹಿಡಿದು ನನ್ನನ್ನು ಸುತ್ತುವರಿದರು. ಆಗ ನನಗೆ ಅವರುಗಳು ನನ್ನನ್ನು ಕರೆದೊಯ್ಯಲು ಬಂದ ಯಮಧೂತರು ಎಂದು ಅರಿವಾಯಿತು. ಆಗ ಅವರಿಗೆ ನಾನು ನನ್ನನ್ನು ಯಾಕೆ ಹೊಡೆಯುತ್ತಾ ಇದ್ದೀರಿ? ಎಂದು ಕೇಳಿದೆ. ಅವರು ಹೊಡೆಯುತ್ತಿದ್ದರೂ ನನಗೆ ಸ್ವಲ್ಪವೂ ನೋವಿನ ಅನುಭವ ಆಗುತ್ತಿರಲಿಲ್ಲ. ಆ ಕ್ಷಣದಲ್ಲಿ ನನಗೆ ದಿವ್ಯವಾದ ಬೆಳಕಿನಲ್ಲಿ ಕಾಣದ ಕೈಯೊಂದು ಆ ಕಪ್ಪು ಮನುಷ್ಯರನ್ನು ಓಡಿಸುತ್ತಿದ್ದುದು ಕಾಣಿಸಿತು. ಆ ಕೂಡಲೇ ಆ ಕಪ್ಪು ಮನುಷ್ಯರುಗಳು ಪಕ್ಕಕ್ಕೆ ಸರಿದು ತಲೆ ತಗ್ಗಿಸಿ ನಿಂತರು. ಆಗ ನನಗೆ ಬಿಳಿಯ ಬಣ್ಣದ ಕಫ್ನಿ ಕಾಣಿಸಿತು. ಆಗ ನನ್ನನ್ನು ರಕ್ಷಿಸಿದವರಾರೆಂದು ಅರಿವಾಯಿತು. ಆ ಕ್ಷಣವೇ ನನಗೆ ಪ್ರಜ್ಞೆ ಬಂದು ಎದ್ದು ಕುಳಿತೆ. ನನ್ನ ಸುತ್ತಲೂ ನನ್ನ ಮನೆಯವರು ನೆರೆದಿದ್ದರು. ನಾನು ಕೆಳಗೆ ಬಿದ್ದಿದ್ದರಿಂದ ನನ್ನ ಕನ್ನಡಕ ಮಾತ್ರ ಒಡೆದು ಹೋಗಿತ್ತು. ನನಗೆ ಸ್ವಲ್ಪವೂ ಗಾಯವಾಗಿರಲಿಲ್ಲ. ಈ ಘಟನೆ ಸಾಯಿಬಾಬಾರವರ ಮೇಲೆ ನನಗಿದ್ದ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿತು"  ಎಂದು ನುಡಿಯುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment