Tuesday, November 2, 2010

ಸಾಯಿ ಮಹಾಭಕ್ತ ತಾತ್ಯಾ ಕೋತೆ ಪಾಟೀಲ್  - ಕೃಪೆ: ಸಾಯಿಅಮೃತಧಾರಾ.ಕಾಂ 

ತಾತ್ಯಾ ಕೋತೆ ಪಾಟೀಲ್ 

ತಾತ್ಯಾ ಕೋತೆ ಪಾಟೀಲ್ ರವರು ಬಾಯಜಾ ಬಾಯಿ ಪಾಟೀಲ್ ಮತ್ತು ಅಪ್ಪಾ ಕೋತೆ ಪಾಟೀಲ್ ರವರ ಮಗ. ಬಾಯಜಾ ಬಾಯಿಯವರು ಸಾಯಿಬಾಬಾರವರು ಶಿರಡಿಗೆ ಮೊದಲ ಬಾರಿಗೆ ಬಂದಾಗಿನಿಂದ ಅವರಿಗೆ ಪ್ರತಿನಿತ್ಯ ಆಹಾರವನ್ನು ನೀಡುತ್ತಿದ್ದರು. ಆದುದರಿಂದ ಸಾಯಿಬಾಬಾರವರು ಬಾಯಜಾ ಬಾಯಿ ಅವರ ಕುಟುಂಬದ ಬಗ್ಗೆ ಒಂದು ರೀತಿಯ ಹೆಚ್ಚಿನ ವಿಶ್ವಾಸವನ್ನು ಹೊಂದಿದ್ದರು.

ತಾತ್ಯಾ ಕೋತೆ ಪಾಟೀಲ್ ಮತ್ತು ಸಾಯಿಬಾಬಾರವರಿಗೆ ಒಂದು ಅವಿನಾಭಾವ ಸಂಬಂಧವಿತ್ತು. ಇವರು ತಮ್ಮ 7 ವರ್ಷವಾದಾಗಿನಿಂದ ಸಾಯಿಬಾಬಾರವರ ಜೊತೆಯಲ್ಲಿ ಆಡಿ ಬೆಳೆದರು. ಇವರು ಸಾಯಿಬಾಬಾರವರನ್ನು ಮಾಮಾ ಎಂದು ಕರೆಯುತ್ತಿದ್ದರು. ಸಾಯಿಬಾಬಾರವರು ತಾತ್ಯಾರವರೊಂದಿಗೆ ಕೂಡಿ ಆಟವಾಡುತ್ತಿದ್ದರು. ಅಷ್ಟೇ ಅಲ್ಲಾ, ತಾತ್ಯಾ ರವರು ಬಾಬಾರವರ ಬೆನ್ನಿನ ಮೇಲೆ ಹತ್ತಿ ಸವಾರಿ ಮಾಡುತ್ತಿದ್ದರು  ಮತ್ತು ಬಾಬಾರವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಬಾಬಾರವರನ್ನು ಕಂಡರೆ ತಾತ್ಯಾರವರಿಗೆ ಬಹಳ ಸಲಿಗೆ ಮತ್ತು ಪ್ರೀತಿಯಿತ್ತು. ಬಾಬಾರವರಿಗೆ ಅತ್ಯಂತ ನಿಕಟವರ್ತಿಗಳಾಗಿದ್ದರಿಂದ  ಇನ್ನಿತರ ಸಾಯಿಭಕ್ತರಿಗಿಂತ ತಾತ್ಯಾರವರಿಗೆ ಹೆಚ್ಚಿನ ಮರ್ಯಾದೆ, ಗೌರವ ಮತ್ತು ಆದರಣೆ ಇತ್ತು. ಇವರು ಮತ್ತು ಮಹಾಲ್ಸಪತಿಯವರು ಸಾಯಿಬಾಬಾರವರೊಂದಿಗೆ ಮಸೀದಿಯಲ್ಲಿ 14 ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗೆ ರಾತ್ರಿಯ ವೇಳೆ ನಿದ್ರಿಸುತ್ತಿದ್ದರು. ಮಹಾಲ್ಸಪತಿಯವರ ತಂದೆಯ ಕಾಲವಾದ ನಂತರ ಅವರು ಸಂಸಾರದ ಜವಾಬ್ದಾರಿಯನ್ನು ಹೊರಬೇಕಾದ್ದರಿಂದ ಮಹಾಲ್ಸಪತಿಯವರು ರಾತ್ರಿಯ ವೇಳೆ ತಮ್ಮ ಮನೆಯಲ್ಲೇ ಮಲಗಹತ್ತಿದರು. ಸಾಯಿಬಾಬಾರವರು 1918 ರಲ್ಲಿ ತಮ್ಮ ದೇಹತ್ಯಾಗ ಮಾಡಿದರು. ಆ ಸಮಯದಲ್ಲಿ ತಾತ್ಯಾರವರು ಕೂಡ ರೋಗಪೀಡಿತರಾಗಿ ಸಾಯುವ ಸ್ಥಿತಿಯಲ್ಲಿದ್ದರು. ಆದರೆ ಬಾಬಾರವರ ದಯೆಯಿಂದ ತಾತ್ಯಾರವರು ಬದುಕುಳಿದರು. ಆದರೆ ಬಾಬಾರವರು ಸಮಾಧಿ ಹೊಂದಿದರು. ಶಿರಡಿ ಗ್ರಾಮಸ್ತರು ಬಾಬಾರವರು ತಾತ್ಯಾರವರಿಗೊಸ್ಕರ ತಮ್ಮ ದೇಹತ್ಯಾಗ ಮಾಡಿದರು ಎಂದು ಭಾವಿಸಿದರು. ಆದರೆ ಬಾಬಾರವರು ಹಾಗೇಕೆ ಮಾಡಿದರು ಎಂಬುದು ಈಗಲೂ ಕೂಡ ತಿಳಿಯದ ವಿಷಯವಾಗಿದೆ. ಈ ಘಟನೆಯಾದ ಮೇಲೆ ಅನೇಕ ವರ್ಷಗಳ ಕಾಲ ತಾತ್ಯಾರವರು ಸುಖವಾಗಿ ಬಾಳಿ ಬದುಕಿದರು. ತಾತ್ಯಾ ರವರು 1945ನೇ ಇಸವಿಯಲ್ಲಿ ತಮ್ಮ ದೇಹತ್ಯಾಗ ಮಾಡಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment