Wednesday, November 3, 2010

ಸಾಯಿ ಮಹಾಭಕ್ತ - ಬಾಳಾಸಾಹೇಬ್ ದೇವ  - ಕೃಪೆ: ಸಾಯಿಅಮೃತಧಾರಾ.ಕಾಂ 


ಬಾಳಾಸಾಹೇಬ್ ದೇವ

ಬಾಳಾಸಾಹೇಬ್ ದೇವರವರು ಒಬ್ಬ ಮಹಾನ್ ಸಾಯಿ ಭಕ್ತರಾಗಿದ್ದರು. ಇವರು ದಹಾನುವಿನಲ್ಲಿ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ತಾಯಿಯವರು ಕೆಲವು ದೀಕ್ಷೆಗಳನ್ನು ಮಾಡಿಕೊಂಡಿದ್ದರು. ಆ ದೀಕ್ಷೆ ಪೂರ್ಣಗೊಳಿಸುವ ಸಲುವಾಗಿ ಶ್ರಾವಣ ಮಾಸದಲ್ಲಿ ಸಾವಿರ ಜನರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಂಡಿದ್ದರು. ಬಾಳಾಸಾಹೇಬ್ ದೇವ ರವರಿಗೆ ಸಾಯಿಬಾಬಾರವರು ಈ ಸಮಾರಂಭಕ್ಕೆ ಬರಬೇಕೆಂದು ಆಸೆಯಿತ್ತು. ಅದಕ್ಕಾಗಿ ಎರಡು ತಿಂಗಳ ಮುಂಚೆಯೇ ಸಾಯಿಬಾಬಾರವರಿಗೆ ಪತ್ರ ಬರೆದು ಆಹ್ವಾನಿಸಿದರು. ಅದಕ್ಕೆ ಉತ್ತರವಾಗಿ ಸಾಯಿಬಾಬಾರವರು ತಾನು ಮತ್ತು ಇನ್ನಿಬ್ಬರು ಜೊತೆಯಲ್ಲಿ ಸಮಾರಂಭಕ್ಕೆ ಬರುವುದಾಗಿ ಉತ್ತರ ಬರೆದರು. ಈ ಉತ್ತರವನ್ನು ನೋಡಿ ಬಾಳಾಸಾಹೇಬ್ ದೇವರವರಿಗೆ ಬಹಳ ಸಂತೋಷವಾಯಿತು. 

ಶ್ರಾವಣ ಮಾಸಕ್ಕೆ ಸರಿಯಾಗಿ ಒಂದು ತಿಂಗಳ ಮುಂಚಿತವಾಗಿ ಆಷಾಢ ಮಾಸದಲ್ಲಿ ಒಬ್ಬ ಸನ್ಯಾಸಿಯು ಗೋ ಸಂರಕ್ಷಣಾ ಕಾರ್ಯಕರ್ತನೆಂದು ಹೇಳಿಕೊಂಡು ಚಂದಾ ಎತ್ತಲು ಬಂದಿದ್ದನು. ಆದರೆ ಆ ಹೊತ್ತಿಗೆ ಬೇರೊಬ್ಬರು ಒಂದು ಶುಭ ಕಾರ್ಯಕ್ಕೆ ಚಂದಾ ಎತ್ತಲು ಬಂದಿದ್ದರಿಂದ ಮತ್ತು ಅವರಿಗೆ ಚಂದಾ ಹಣವನ್ನು ನೀಡಿದ್ದರಿಂದ ಬಾಳಾಸಾಹೇಬ್ ದೇವರವರು ಆ ಸನ್ಯಾಸಿಗೆ 4  ತಿಂಗಳ ನಂತರ ಅಂದರೆ ದೀಪಾವಳಿ ಸಮಯದಲ್ಲಿ ಚಂದಾ ಎತ್ತಲು ಬರುವಂತೆ ಸಲಹೆ ನೀಡಿದರು. ಆ ಸನ್ಯಾಸಿಯು ಮರುಮಾತನಾಡದೆ ಹೊರಟುಹೋದನು. ಆದರೆ ಉದ್ಯಾಪನಾ ಸಮಾರಂಭದ ಮುಕ್ತಾಯದ ದಿನ ಸರಿಯಾಗಿ ಹಾಜರಾದನು. ಬಾಳಾಸಾಹೇಬ್ ದೇವರವರು ಆ ಸನ್ಯಾಸಿಯು ಚಂದಾ ವಸೂಲಿ ಮಾಡಲು ಬಂದಿರುವನೆಂದು ತಿಳಿದು ಇನ್ನೇನು ಅವನನ್ನು ತೆಗಳಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಆ ಸನ್ಯಾಸಿಯು ತಾನು ಚಂದಾ ಎತ್ತಲು ಬಂದಿರದೇ ಉದ್ಯಾಪನಾ ಸಮಾರಂಭದಲ್ಲಿ ಭಾಗವಹಿಸಿ ಭೋಜನ ಮಾಡಿಕೊಂಡು ಹೋಗಲು ಬಂದಿರುವುದಾಗಿ ಹೇಳಿದರು. ಆ ಮಾತನ್ನು ಕೇಳಿ ಬಾಳಾಸಾಹೇಬ್ ದೇವರವರು ಆನಂದದಿಂದ "ಅಗತ್ಯವಾಗಿ ಬನ್ನಿ, ಇಂದು ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಇಟ್ಟುಕೊಂಡಿದ್ದೇವೆ. ನೀವು ಬಂದಿರುವುದು ನಮಗೆ ಬಹಳ ಸಂತೋಷ" ಎಂದು ಹೇಳಿದರು. ಆದರೆ ಆ ಸನ್ಯಾಸಿಯು ತನ್ನೊಡನೆ ಇನ್ನು ಇಬ್ಬರು ಬಂದಿರುವುದಾಗಿ ಮತ್ತು ಅವರು ಧರ್ಮಶಾಲೆಯಲ್ಲಿ ತಂಗಿರುವುದಾಗಿ ತಿಳಿಸಿದನು. ಅದಕ್ಕೆ ಬಾಳಾಸಾಹೇಬ್ ದೇವರವರು "ಅವರನ್ನು ಕರೆದುಕೊಂಡು ಬನ್ನಿ, ನಮಗೆ ಇನ್ನು ಹೆಚ್ಚಿನ ಸಂತೋಷವಾಗುತ್ತದೆ" ಎಂದು ಆಹ್ವಾನವಿತ್ತರು. ಆ ಸನ್ಯಾಸಿಯು ಅವರಿಬ್ಬರೊಂದಿಗೆ ಬಂದು ಭೋಜನ ಮಾಡಿಕೊಂಡು ಬಾಳಾಸಾಹೇಬ್ ದೇವರವರನ್ನು ಹರಸಿ ಹೊರಟು ಹೋದನು. ಸಮಾರಂಭ ಮುಕ್ತಾಯವಾದ ನಂತರ ಬಾಳಾಸಾಹೇಬ್ ದೇವರವರು ಬಾಬಾರವರಿಗೆ ಪತ್ರ ಬರೆದು "ನೀವು ಸಮಾರಂಭಕ್ಕೆ ಬರಲಿಲ್ಲ, ಮಾತು ಕೊಟ್ಟು ಮೋಸಗೊಳಿಸಿದಿರಿ"  ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಾಯಿಬಾಬಾರವರು ಆ ಪತ್ರಕ್ಕೆ ಉತ್ತರ ಬರೆದು " ನಾನು ಮಾತು ಕೊಟ್ಟು ನಿನ್ನನ್ನು ಮೋಸ ಮಾಡಲಿಲ್ಲ.ನಾನು ಸನ್ಯಾಸಿಯ ವೇಷದಲ್ಲಿ ಇನ್ನಿಬ್ಬರ ಜೊತೆಯಲ್ಲಿ ಬಂದು ಸಮಾರಂಭದಲ್ಲಿ ಭಾಗವಹಿಸಿ ಭೋಜನ ಮಾಡಿ ಹೋದೆ. ನೀನು ನನ್ನನ್ನು ಗುರುತಿಸಲಿಲ್ಲ" ಎಂದು ತಿಳಿಸಿದರು. ಸಾಯಿಬಾಬಾರವರ ಪತ್ರವನ್ನು ನೋಡಿ ಬಾಳಾಸಾಹೇಬ್ ದೇವರವರಿಗೆ ಅತೀವ ದುಃಖವಾಯಿತು. ಸಾಯಿಬಾಬಾರವರು ಸಮಾರಂಭಕ್ಕೆ ಬಂದು ಹೋಗಿದ್ದರೂ ಕೂಡ ತಾನು ಗುರುತಿಸಲಾಗದ್ದಕ್ಕೆ ಬಹಳ ಖೇದವಾಯಿತು. ಆದರೆ ಸಾಯಿಬಾಬಾರವರು ಸಮಾರಂಭಕ್ಕೆ ಬಂದರೆಂದು ತಿಳಿದು ಆನಂದವೂ ಕೂಡ ಆಯಿತು. 
 
ಕನ್ನಡ ಅನುವಾದ : ಶ್ರೀಕಂಠ ಶರ್ಮ 

No comments:

Post a Comment