Monday, November 1, 2010

ಸಾಯಿ ಮಹಾಭಕ್ತ - ಕೇಶವ ಅನಂತ್ ಆಲಿಯಾಸ್ ಅಪ್ಪಾ ಕುಲಕರ್ಣಿ - ಕೃಪೆ: ಸಾಯಿಅಮೃತಧಾರಾ.ಕಾಂ




ಕೇಶವ ಅನಂತ್ ಆಲಿಯಾಸ್ ಅಪ್ಪಾ ಕುಲಕರ್ಣಿಯವರು ಶಿರಡಿ ಗ್ರಾಮದ ನಿವಾಸಿಗಳಾಗಿದ್ದರು  ಮತ್ತು ಬಹಳ ಕಾಲದಿಂದ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಇವರು ಸತ್ಯತನದಿಂದ ನಡೆಯುತ್ತಿದ್ದರು. ಆದರೆ ಬಹಳ ಗರ್ವಿಷ್ಟರಾಗಿದ್ದರು. ಇವರು ಸಾಯಿಬಾಬಾರವರ ಭಕ್ತರಾಗಿದ್ದರೂ ಸಹ ಬಹಳ ತೊಂದರೆಗಳಿಂದ ಬಳಲುತ್ತಿದ್ದರು. ಇವರು ಯಾವುದೋ ಸರ್ಕಾರಿ ಕೆಲಸದಲ್ಲಿ ಹಣವನ್ನು ದುರುಪಯೋಗ ಮಾಡಿಕೊಂಡಿರುವರು ಎಂಬ ಆರೋಪಕ್ಕೆ ಗುರಿಯಾಗಿದ್ದರು. ಈ ವಿಷಯವು ಬಹಳ ಬೇಗನೆ ಶಿರಡಿ ಗ್ರಾಮದಲ್ಲಿ ಹರಡಿತು. ಶಿರಡಿ ಗ್ರಾಮ ನಿವಾಸಿಗಳು ವಿಷಯವನ್ನು ಸರಿಯಾಗಿ ಪರಿಶೀಲಿಸದೆ ಈ ಮಾತನ್ನು ನಂಬಿದ್ದರು. ಇವರ ಮೇಲೆ ಕೇಸ್ ಕೂಡ ಹಾಕುತ್ತಾರೆ ಎಂಬ ವಿಷಯವು ಕೂಡ ಹಬ್ಬಿತ್ತು. 

ಆಗಿನ ಜಿಲ್ಲಾ ಕಲೆಕ್ಟರ್ ಇವರನ್ನು ವಿಚಾರಣೆ ಮಾಡಲು ಹೇಳಿ ಕಳುಹಿಸಿದರು. ಇದರಿಂದ ಅಪ್ಪಾ ಕುಲಕರ್ಣಿಯವರಿಗೆ ತುಂಬಾ ಹೆದರಿಕೆಯಾಯಿತು. "ಇನ್ನು ನಾನು ಮನೆಗೆ ವಾಪಸ್ ಬರುವುದಿಲ್ಲ" ಎಂದು ಮನದಲ್ಲಿ ಅಂದುಕೊಂಡರು. ಆದರೆ ಕಲೆಕ್ಟರ್ ಬಳಿಗೆ ಹೋಗುವುದಕ್ಕೆ ಮುಂಚೆ ತಮ್ಮ ಎಂದಿನ ವಾಡಿಕೆಯಂತೆ ಶಿರಡಿ ಸಾಯಿಬಾಬಾರವರ ಬಳಿಗೆ ಹೋದರು. ಇವರು ಬಾಬಾರವರಿಗೆ ವಂದಿಸಿ "ಬಾಬಾ, ನೀವೇ ನನಗೆ ತಾಯಿ ತಂದೆ ಎಲ್ಲಾ. ನಾನು ತಪ್ಪು ಮಾಡಿರುವೆನೋ ಅಥವಾ ಇಲ್ಲವೋ ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ನನಗೇನಾದರೂ ಹೆಚ್ಹು ಕಡಿಮೆ ಆದರೆ ಅದಕ್ಕೆ ನೀವೇ ಹೊಣೆ ಎಂಬ ಆರೋಪಕ್ಕೆ ಗುರಿಯಾಗುತ್ತೀರಿ. ಈ ಕಷ್ಟದಿಂದ ನನ್ನನ್ನು ಪಾರು ಮಾಡಿ" ಎಂದು ಅಂಗಲಾಚಿ ಬೇಡಿದರು. 

ಅಪ್ಪಾ ಕುಲಕರ್ಣಿಯವರ ಮಾತುಗಳನ್ನು ಕೇಳಿ ಸಾಯಿಬಾಬಾರವರಿಗೆ ಅವರ ಮೇಲೆ ಕರುಣೆ ಉಕ್ಕಿತು. ಬಾಬಾರವರು "ಅಪ್ಪಾ, ಹೆದರಬೇಡ. ಈಗ ಜಿಲ್ಲಾಧಿಕಾರಿ ನೇವಾಸ ಗ್ರಾಮದಲ್ಲಿ ಇದ್ದಾರೆ. ಅಲ್ಲೇ ಸಂತ ಧ್ಯಾನೇಶ್ವರ್ ತಮ್ಮ ಧ್ಯಾನೇಶ್ವರಿಯನ್ನು ಬರೆದಿದ್ದು. ಮೊದಲು ಅಲ್ಲಿ ಹೋಗಿ ಅಲ್ಲಿರುವ ಮೋಹಿನಿರಾಜ ಅವರನ್ನು ಭೇಟಿ ಮಾಡು ಮತ್ತು ಅವರಿಗೆ ಪ್ರಣಾಮಗಳನ್ನು ಸಲ್ಲಿಸು. ಆ ಮೋಹಿನಿರಾಜ ನಿನ್ನನ್ನು ರಕ್ಷಿಸುವರು. ಆ ನಂತರ ಜಿಲ್ಲಾ ಕಲೆಕ್ಟರ್ ಬಳಿಗೆ ಹೋಗು" ಎಂದರು. ಸಾಯಿಬಾಬಾರವರು ಹೇಳಿದಂತೆ ಅಪ್ಪಾ ಕುಲಕರ್ಣಿಯವರು ಮಾಡಿದರು. ಮೊದಲು ನೇವಾಸ ಗ್ರಾಮಕ್ಕೆ ಹೋಗಿ ಮೋಹಿನಿರಾಜರಿಗೆ ವಂದಿಸಿ ನಂತರ ಜಿಲ್ಲಾ ಕಲೆಕ್ಟರ್ ಬಳಿಗೆ ಹೋಗಿ ತಮ್ಮ ಉತ್ತರವನ್ನು ಲಿಖಿತ ರೂಪದಲ್ಲಿ ನೀಡಿದರು. ಆ ಲಿಖಿತ ರೂಪದ ಉತ್ತರವನ್ನು ನೋಡಿದ ಜಿಲ್ಲಾ ಕಲೆಕ್ಟರ್ ರವರು "ನೀವು ಹಣವನ್ನು ತಿಂದಿಲ್ಲ ಎಂದು ನನಗೆ ನಿಮ್ಮ ಉತ್ತರದಿಂದ ಮನವರಿಕೆಯಾಗಿದೆ. ಆದುದರಿಂದ ನಿಮ್ಮನ್ನು ಬಿಡುಗಡೆ ಮಾಡುತ್ತಿದ್ದೇನೆ" ಎಂದು ಹೇಳಿದರು. ಅಪ್ಪಾ ಕುಲಕರ್ಣಿಯವರು ಜಿಲ್ಲಾ ಕಲೆಕ್ಟರ್ ರವರ ಈ ಉತ್ತರವನ್ನು ಕೇಳಿ ಆನಂದದಿಂದ ಕುಣಿದಾಡಿದರು. ಮಾರನೇ ದಿನ ಶಿರಡಿಗೆ ವಾಪಸಾದರು. ಕೂಡಲೇ ಬಾಬಾರವರ ಬಳಿಗೆ ಹೋಗಿ ಅವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು "ಬಾಬಾ, ನನ್ನ ಮರ್ಯಾದೆಯನ್ನು ನೀವು ಕಾಪಾಡಿದಿರಿ. ನಾನು ಎಂದೆಂದಿಗೂ ನಿಮಗೆ ಋಣಿಯಾಗಿರುತ್ತೇನೆ" ಎಂದು ನುಡಿದರು. ಅದಕ್ಕೆ ಸಾಯಿಬಾಬಾರವರು "ನಿನ್ನನ್ನು ರಕ್ಷಿಸುವುದಕ್ಕೆ ನಾನು ಯಾರು? ಇದನ್ನು ಮಾಡಿದ್ದು ಆ ಪರಮೇಶ್ವರ. ಅವನು ಅಸಾಧ್ಯವಾದುದ್ದನ್ನು ಸಾಧ್ಯ ಮಾಡುತ್ತಾನೆ" ಎಂದರು. ಅಪ್ಪಾ ಕುಲಕರ್ಣಿ ತಮ್ಮ ಜೀವನನ್ನೇ ಸಾಯಿಬಾಬಾರವರ ಸೇವೆಗೆ ಮುಡುಪಾಗಿಟ್ಟಿದ್ದರು. ಸಾಯಿಯವರು ಇತರ ಭಕ್ತರನ್ನು ಅಪ್ಪಾ ಕುಲಕರ್ಣಿಯವರಿಗೆ ನಿಕಟವರ್ತಿಗಳಾಗುವಂತೆ ಮಾಡಿದರು. ಅವರಲ್ಲಿ ಪ್ರಮುಖರಾದವರು ಅತ್ಯಂತ ವಿದ್ಯಾವಂತರೂ ಮತ್ತು ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ನಾನಾ ಸಾಹೇಬ್ ಚಂದೋರ್ಕರ್ ರವರು. 

1892 ರಲ್ಲಿ ನಾನಾ ಸಾಹೇಬ್ ಚಂದೋರ್ಕರ್ ರವರು ಕಲ್ಯಾಣ್ ನಲ್ಲಿ ವಾಸವಾಗಿದ್ದರು. ಅವರು ಅಹಮದ್ ನಗರದ ಜಿಲ್ಲಾ ಕಲೆಕ್ಟರ್ ರವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸಾಯಿಬಾಬಾರವರು ಅಪ್ಪಾ ಕುಲಕರ್ಣಿಯವರನ್ನು ಕರೆದು "ಆ ನಾನಾ ಸಾಹೇಬ್ ನ ಬಳಿಗೆ ಹೋಗಿ ನಾನು ಕರೆದುಕೊಂಡು ಬರಲು ಹೇಳಿದೆ ಎಂದು ಅವನಿಗೆ ತಿಳಿಸು" ಎಂದರು. ಅಪ್ಪಾ ಕುಲಕರ್ಣಿ ಈ ಸಂದೇಶವನ್ನು ನಾನಾ ಸಾಹೇಬ್ ನಿಗೆ ತಿಳಿಸಿದರು. ಆಗ ನಾನಾ ಸಾಹೇಬ್ ಚಂದೋರ್ಕರ್ ರವರು "ನಿನ್ನ ಮಾತುಗಳನ್ನು ನಾನು ಹೇಗೆ ನಂಬಲಿ?. ಬಾಬಾರವರು ನನ್ನನ್ನು ಏಕೆ ಕರೆಯುತ್ತಿದ್ದಾರೆ? ನೀನು ಅವರ ಹೆಸರನ್ನು ಏಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಿಯೇ? ನಿನಗೆ ನನ್ನಿಂದ ಏನಾಗಬೇಕು ಹೇಳು?" ಎಂದರು. ಆಗ ಅಪ್ಪಾ ಕುಲಕರ್ಣಿಯವರು ವಿವರವಾಗಿ ಎಲ್ಲಾ ವಿಷಯಗಳನ್ನು ತಿಳಿಸಿ ಸಾಯಿಬಾಬಾರವರೇ ಅವರನ್ನು ಕರೆದುಕೊಂಡು ಬರಲು ಕರೆ ಕಳುಹಿಸಿದ್ದಾರೆ ಎಂದು ಅವರನ್ನು ನಂಬಿಸುವುದರಲ್ಲಿ ಯಶಸ್ವಿಯಾದರು. ಆ ನಂತರ ನಾನಾ ಸಾಹೇಬ್ ಚಂದೋರ್ಕರ್ ರವರು ಕೂಡ ಸಾಯಿ ದರ್ಬಾರದ ಪ್ರಮುಖ ವ್ಯಕ್ತಿಗಳಾದರು.

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment