Tuesday, November 16, 2010

ಶ್ರೀಮತಿ.ಜರೀನ್ ತಾರಾಪೂರ್ವಾಲ - ಶ್ರೀ ಸಾಯಿ ಸಮರ್ಥ ಸಚ್ಚರಿತೆಯ ಲೇಖಕಿ - (1931 ರಿಂದ 2006) - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ಜರೀನ್ ತಾರಾಪೂರ್ವಾಲ

 ಶ್ರೀಮತಿ ಜರೀನ್ ರವರ ಆಧ್ಯಾತ್ಮಿಕ ಗುರು ಶ್ರೀ.ಶಿವನೇಶನ್ ಸ್ವಾಮೀಜಿ 

ಶ್ರೀಮತಿ.ಜರೀನ್ ತಾರಾಪೂರ್ವಾಲರವರು ಪಾರ್ಸಿ ಜನಾಂಗಕ್ಕೆ ಸೇರಿದವರು. ಇವರು ಒಬ್ಬ ವ್ಯಾಪಾರಸ್ಥರ ಕುಟುಂಬದಿಂದ ಬಂದವರು. ಇವರು 1931 ರಲ್ಲಿ ಶ್ರೀ.ಮೆಹರ್ ಜಿ ಮತ್ತು ಧುನ್ ಮೈ ಬರೂಚ ರವರ ಮಗಳಾಗಿ ಜನಿಸಿದರು. ಇವರ ಶೈಕ್ಷಣಿಕ ಮತ್ತು ವೃತ್ತಿ ಜೀವನವು ಬಹಳ ಉತ್ತಮವಾಗಿತ್ತು. 

ಶ್ರೀಮತಿ.ಜರೀನ್ ರವರು 25 ವರ್ಷಗಳ ಕಾಲ ಬಟ್ಟೆಯ ಉದ್ದಿಮೆಯಲ್ಲಿ ಕಾರ್ಯನಿರ್ವಾಹಕಿಯಾಗಿ ಸೇವೆ ಸಲ್ಲಿಸಿದರು. ಆ ನಂತರದಲ್ಲಿ ವೆಸ್ಟ್ರನ್ ಇಂಡಿಯಾ ಆಟೋಮೊಬೈಲ್ ಅಸೋಸಿಯೇಶನ್ (WIAA) ಮತ್ತು ಫೆಡರೇಶನ್ ಆಫ್ ಇಂಡಿಯನ್ ಆಟೋಮೊಬೈಲ್ ಅಸೋಸಿಯೇಶನ್ - ಈ ಎರಡು ಕಡೆಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇವರು ವಿದೇಶಿ ಕಾರುಗಳನ್ನು ಅಮದು ಸುಂಕ ಇಲ್ಲದೆ ಭಾರತಕ್ಕೆ ಪ್ರವಾಸಿಗರು ತರುವಂತೆ ಮಾಡುವಲ್ಲಿ ಯಶಸ್ವಿಯಾದರು ಮತ್ತು ಇದಕ್ಕಾಗಿ ಅಲಯನ್ಸ್ ಇಂಟರ್ ನ್ಯಾಶನಲೇ ಡಿ ಟೂರಿಸ್ಮೆ ಯಿಂದ ಗೌರವಿಸಲ್ಪಟ್ಟರು. ನಂತರ ಇವರು ಡೈನರ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಕಾನೂನು ವ್ಯವಹಾರ ಮತ್ತು ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ತಮ್ಮ ಸ್ವಂತ ಶಕ್ತಿಯಿಂದ, ದಕ್ಷತೆಯಿಂದ ಮತ್ತು ಕೆಲಸದ ಬಗ್ಗೆ ಇವರು ತೋರಿಸುತ್ತಿದ್ದ ಪ್ರೀತಿಯಿಂದ ಈ ದೊಡ್ಡ ಹುದ್ದೆಗಳನ್ನು ಅವರು ಅಲಂಕರಿಸಲು ಸಾಧ್ಯವಾಯಿತು. 

ಓದಿನಲ್ಲೂ ಕೂಡ ಇವರು ಹಿಂದೆ ಬೀಳಲಿಲ್ಲ. ಗಣಿತ ಶಾಸ್ತ್ರ ಮತ್ತು ಅಂಕಿಅಂಶಗಳ ಶಾಸ್ತ್ರದಲ್ಲಿ ಎಲ್ಫಿನ್ ಸ್ಟೋನ್ ಕಾಲೇಜ್ ನಿಂದ ಪದವಿಯನ್ನು ಪಡೆದರು. ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾನೂನು ಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಆ ಸಮಯದಲ್ಲಿ ಪ್ರತಿಷ್ಟಿತ ಕಿನ್ ಲೋಚ್ ಫೋರ್ಬ್ಸ್ ಚಿನ್ನದ ಪದಕವನ್ನು ಪಡೆದರು. ತಮ್ಮ ಸ್ವಂತ ಸಂತೋಷಕ್ಕಾಗಿ ಹೆಚ್ಚಿನ ಕಾನೂನು ವ್ಯಾಸಂಗ ಮಾಡಿದರು. ಸಂತ ಮೇರಿ ಶಾಲೆಯಲ್ಲಿ ಓದುತ್ತಿದ್ದಾಗ ಹವ್ಯಾಸಿ ಕಲಾ ಕೇಂದ್ರವನ್ನು ಹುಟ್ಟು ಹಾಕಿ ಶಿಕ್ಷಣಕ್ಕೆ ಹೊಸ ಆಯಾಮವನ್ನು ನೀಡಿದ ಕೀರ್ತಿಗೆ ಇವರು ಭಾಜನರಾದರು.
ಇವರು ಮೊದಲಿನಿಂದಲೂ ಸಾಯಿಬಾಬಾರವರ ಅನನ್ಯ ಭಕ್ತರು. ಇವರು ತಮ್ಮ ಗುರುಗಳಾದ ಶ್ರೀ.ಶಿವನೇಶನ್ ಸ್ವಾಮಿಜಿಯವರ ಮಾರ್ಗದರ್ಶನದಂತೆ ಸಾಯಿಬಾಬಾರವರ ಅನೇಕ ಪುಸ್ತಕಗಳನ್ನು ಮರಾಠಿಯಿಂದ ಇಂಗ್ಲೀಷ್ ಗೆ ತರ್ಜುಮೆ ಮಾಡಿದರು. ಇವರು ತರ್ಜುಮೆ ಮಾಡಿದ ಪುಸ್ತಕಗಳಲ್ಲಿ ಪ್ರಮುಖವಾದವುಗಳು ದಾಸಗಣು ಮಹಾರಾಜ್ ರವರ "ಸ್ತವನಮಂಜರಿ" "ಅಷ್ಟೋತ್ತರ ನಾಮಾವಳಿ" ಮತ್ತು "ಸಗುಣೋಪಾಸನ". ಇವಲ್ಲದೇ, ತಮ್ಮ ಗುರುಗಳಾದ ಶ್ರೀ.ಶಿವನೇಶನ್ ಸ್ವಾಮಿಜಿಯವರ "ಗಾಡ್ಸ್ ರೈನ್ ಬೊ" ಮತ್ತು ಇತರ ಸಣ್ಣ ಕತೆಗಳ ಸಂಕಲನ ಮಾಡಿದ್ದಾರೆ.
ಇವರ ಜೀವನದ ಮಹತ್ತರವಾದ ಸಾಧನೆ ಎಂದರೆ ಹೇಮಾಡಪಂತರ ಸಾಯಿ ಸಚ್ಚರಿತೆಯನ್ನು ಆಂಗ್ಲ ಭಾಷೆಗೆ " ಶ್ರೀ ಸಾಯಿ ಸಮರ್ಥ ಸಚ್ಚರಿತೆ" ಎಂಬ ಹೆಸರಿನಲ್ಲಿ ಅನುವಾದ ಮಾಡಿರುವುದು. ಈ ಪುಸ್ತಕವು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಕೇವಲ 135/- ರುಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. 

ಇವರು ಮೆಹರ್ ಧುನ್ ದತ್ತಿ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಅಡಿಯಲ್ಲಿ "ಶ್ರೀ.ಶಿವನೇಶನ್ ಸ್ವಾಮೀಜಿ ಗುರುಕುಲಮ್" ಎಂಬ ಆಶ್ರಮವನ್ನು ಶಿರಡಿಯಲ್ಲಿ ಸ್ಥಾಪಿಸಿದ್ದಾರೆ.  ಇಲ್ಲಿಯೇ ಶ್ರೀ.ಶಿವನೇಶನ್ ಸ್ವಾಮೀಜಿಯವರ ಸಮಾಧಿಯನ್ನು ಭವ್ಯವಾಗಿ ನಿರ್ಮಾಣ ಮಾಡಲಾಗಿದೆ. 

ಸಾಯಿಬಾಬಾರವರ ಸೇವೆಯನ್ನು ತಮ್ಮ ಗುರುಗಳಾದ ಶ್ರೀ.ಶಿವನೇಶನ್ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ 28ನೇ ಡಿಸೆಂಬರ್ 2006 ರಂದು ಶ್ರೀಮತಿ.ಜರೀನ್ ರವರು ಶಿರಡಿ ಸಾಯಿಬಾಬಾರವರ ಚರಣಕಮಲಗಳಲ್ಲಿ ಲೀನವಾದರು. ಈಗ ಶ್ರೀಮತಿ.ಜರೀನ್ ರವರು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಶಿರಡಿ ಸಾಯಿಬಾಬಾರವರಿಗೆ ಸಲ್ಲಿಸಿದ ಸೇವೆ ಅಮರವಾಗಿದೆ. 

ಶಿರಡಿ ಸಾಯಿಬಾಬಾರವರ 4 ಆರತಿಗಳನ್ನು ಇಂಗ್ಲೀಷ್ ನಲ್ಲಿ ತಮ್ಮದೇ ಧ್ವನಿಯಲ್ಲಿ ಅರ್ಥ ಹೇಳಿ ಅಜಿತ್ ಕಡಕಡೆಯವರು ಹಾಡಿದ್ದನ್ನು ಪ್ರಥಮವಾಗಿ 4 ಕ್ಯಾಸೆಟ್ ಗಳ ರೂಪದಲ್ಲಿ ಸ್ವತಃ ಶ್ರೀಮತಿ.ಜರೀನ್ ರವರೇ ಹೊರತಂದರು. ಆಲ್ಲದೇ, ಸಾಯಿ ಭವಾನಿ ಎಂಬ ಧ್ವನಿ ಸುರಳಿಯನ್ನು ಹೊರತಂದರು. ಈ ಧ್ವನಿಸುರಳಿಯಲ್ಲಿ ಸಾಯಿ ಸಚ್ಚರಿತೆಯ ಭಾವಾರ್ಥ ಮತ್ತು ಸಾಯಿ ತಾರಕ ಮಂತ್ರ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಇವೆ. 

ಇದೇ 4 ಆರತಿಗಳು ಮತ್ತು ಸಾಯಿ ಭವಾನಿ ಧ್ವನಿಸುರಳಿಗಳು ಈಗ ಸಿಡಿ ರೂಪದಲ್ಲಿ ಲಭ್ಯವಿದ್ದು ಇದನ್ನು ಪಡೆಯಲು ಇಚ್ಚಿಸುವ ಸಾಯಿ ಭಕ್ತರು ಸಾಯಿ ಸೆಕ್ಯುರಿಟೀ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್ (ದೂರವಾಣಿ ಸಂಖ್ಯೆ: 0129-4194900  ಈ ಮೇಲ್ ವಿಳಾಸ: sspdel@saiprinters.com) ಗೆ ಬರೆದು ಪಡೆಯಬಹುದು. 

ಕನ್ನಡ ಅನುವಾದ : ಶ್ರೀಕಂಠ ಶರ್ಮ  

No comments:

Post a Comment