Friday, July 23, 2010

ಹೈದರಾಬಾದ್ ಭಕ್ತರೊಬ್ಬರ ಕರೆಗೆ ಓಗೊಟ್ಟು ಮನೆಗೆ ಬಂದು ನಿಜರೂಪದಲ್ಲಿ ಆಶೀರ್ವದಿಸಿದ ಶಿರಡಿ ಸಾಯಿಬಾಬಾ - ಕೃಪೆ - ಡಾ.ಶಿವಚರಣ್ 

ಆಗ ೧೯೮೨ ನೇ ಇಸವಿ. ನಾನು ೬ ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಂದೆಯವರು ನಡೆಸುತ್ತಿದ್ದ ಕಾರ್ಖಾನೆ ಮುಚ್ಚಿಹೋಗಿತ್ತು. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ನಾವುಗಳು ದಿವಾಳಿಯಾಗುವ ಸ್ಥಿತಿಗೆ ಬಂದು ತಲುಪಿದ್ದೆವು. ಆ ಪರಿಸ್ಥಿತಿಯಿಂದ ಹೊರಬರಲು ಏನು ಮಾಡಬೇಕೋ ತಿಳಿಯದೆ ನಮ್ಮ ತಂದೆ, ತಾಯಿ ಮತ್ತು ನಮ್ಮ ಅಜ್ಜಿಯವರು ಬಹಳ ವ್ಯಾಕುಲರಾಗಿದ್ದರು. ಮನೆಯ ಮಕ್ಕಳಾದ ನಮಗೆ ಮನೆಯ ಪರಿಸ್ಥಿತಿ ಚೆನ್ನಾಗಿಲ್ಲವೆಂಬ ಅರಿವಾಗಿತ್ತು. ಶಾಲೆಯ ತಿಂಗಳ ಫೀಸ್ ಕೂಡ ನೀಡಲು ನಮ್ಮ ತಂದೆಯವರು ಅಸಮರ್ಥರಾಗಿದ್ದ ಕಾರಣ ನಾವುಗಳು ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕೆಂದು ನಿರ್ಧಾರ ಮಾಡಿದೆವು.

ನಮ್ಮ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಏನು ಮಾಡಲು ತೋಚದೆ ಮನೆಯವರೆಲ್ಲ ಕೈಚೆಲ್ಲಿ ಕುಳಿತಿದ್ದರು. ಅಂದ ಹಾಗೆ ಹೇಳಲು ಮರೆತಿದ್ದೆ. ನಮ್ಮ ಅಜ್ಜಿಯವರು ೧೯೪೦ ನೇ ಇಸವಿಯಿಂದ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಅವರು ಸಾಯಿಬಾಬಾರವರನ್ನು ಬಂದು ಸಹಾಯ ಮಾಡುವಂತೆ ಪ್ರಾರ್ಥನೆ ಮಾಡುತ್ತಿದ್ದಿರಬೇಕು ಎಂದೆನಿಸುತ್ತದೆ.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಸಾಯಿಬಾಬಾರವರು ತಮ್ಮನ್ನು ನಂಬಿ ಕರೆದ ಯಾವುದೇ ಸಾಯಿಭಕ್ತರನ್ನು ಕೈಬಿಡದೆ ಸಲಹುತ್ತಿದ್ದಾರೆ. ನಮ್ಮ ಮನೆಯಲ್ಲೂ ಕೂಡ ಹಾಗೆಯೇ ಆಯಿತು. ಸಾಯಿಬಾಬಾರವರು ನಮ್ಮೆಲ್ಲರ ಪ್ರಾರ್ಥನೆಗೆ ಓಗೊಟ್ಟು ಹೈದರಾಬಾದ್ ನಲ್ಲಿದ್ದ ನಮ್ಮ ಮನೆಗೆ ಬಂದೇ ಬಿಟ್ಟರು.

ಅಂದು ಮಟ ಮಟ ಮಧ್ಯಾನ್ಹ ೨ ಘಂಟೆಯ ಸಮಯ. ಬಿಸಿಲು ತುಂಬಾ ಹೆಚ್ಚಾಗಿಯೇ ಇತ್ತು. ಸಾಯಿಬಾಬಾರವರು ತಮ್ಮ ನಿಜರೂಪದಲ್ಲೇ ನಮ್ಮ ಮನೆಗೆ ಬಂದರು. ಆಗ ಮನೆಯಲ್ಲಿ ನಮ್ಮ ಅಮ್ಮ ಮತ್ತು ನಮ್ಮ ಅಜ್ಜಿ ಮಾತ್ರ ಮನೆಯಲ್ಲಿ ಇದ್ದರು. ಸಂಪೂರ್ಣ ಕಿವುಡರಾದ ನಮ್ಮ ಅಜ್ಜಿಯವರು ಮನೆಯೊಳಗಿನ ರೂಮಿನಲ್ಲಿ ಮಲಗಿದ್ದರು. ನಮ್ಮ ತಾಯಿಯವರು ವರಾಂಡಾದಲ್ಲಿ ಏನೋ ಕೆಲಸ ಮಾಡುತ್ತಿದ್ದರು. ಅವರು ಸಾಯಿಬಾಬಾ ಮನೆಯೊಳಗೆ ಬರುತ್ತಿರುವುದನ್ನು ಕಂಡು ಯಾರೋ ಮುಸ್ಲಿಂ ಫಕೀರರಿರಬೇಕೆಂದು ಕೊಂಡರು. ಅವರು ಫಕೀರನನ್ನು ಮನೆಯೊಳಗೆ ಬಿಡದೆ ಹೊರಗಡೆಯೇ ಇರುವಂತೆ ತಾಕೀತು ಮಾಡಿದರು. ಆದರೆ ಸಾಯಿಬಾಬಾರವರು ತೆಲುಗಿನಲ್ಲಿಯೇ ಮಾತನಾಡಿ ನಮ್ಮ ತಾಯಿಯವರಿಗೆ "ಹೆದರಬೇಡ ಮಗಳೇ, ನಾನು ಇಲ್ಲಿಗೆ ಏನೋ ಹೇಳಬೇಕೆಂದು ಬಂದಿದ್ದೇನೆ" ಎಂದರು.

ಈ ಮಧ್ಯೆ ಒಳಗಡೆಯ ರೂಮಿನಲ್ಲಿ ಮಲಗಿದ್ದ ನಮ್ಮ ಅಜ್ಜಿಯವರು ಒಳಗಿನಿಂದ ಓಡುತ್ತಾ ಸಾಯಿಬಾಬಾರವರು ತಮ್ಮ ಮನೆಗೆ ಬಂದಿರುವರೆಂದು ಅತ್ಯಂತ ಉತ್ಸಾಹದಿಂದ ಹೇಳುತ್ತಾ ಹೊರಗಡೆಗೆ ಬಂದರು. ನಮ್ಮ ಅಜ್ಜಿಯವರಿಗೆ ಬಾಬಾರವರು ನಮ್ಮ ಮನೆಗೆ ಬಂದಿರುವ ವಿಷಯ ಹೇಗೆ ಗೊತ್ತಾಯಿತು ಎಂಬುದು ಶಿರಡಿ ಸಾಯಿಬಾಬಾರವರಿಗೆ ಮಾತ್ರ ಗೊತ್ತಿರಲು ಸಾಧ್ಯ.

ಸಾಯಿಬಾಬಾರವರು ಆ ದಿನ ನಮ್ಮ ಮನೆಯಲ್ಲಿ ಮುಂದೆ ನಡೆಯುವ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ನನ್ನ, ನನ್ನ ತಮ್ಮನ ಹಾಗೂ ನನ್ನ ತಂಗಿಯ ವಿಷಯಗಳನ್ನು ಕೂಡ ಹೇಳಿದರು. ಆಲ್ಲದೇ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ನಿಮ್ಮೆಲ್ಲರೊಡನೆ ನಾನಿದ್ದೇನೆ ಎಂದು ಅಭಯವನ್ನು ನೀಡಿದರು.

ಕಾಲಾನಂತರದಲ್ಲಿ ಬಾಬಾರವರು ಹೇಳಿದಂತೆಯೇ ನಡೆಯಿತು. ಅವರು ಅಂದು ನುಡಿದ ಭವಿಷ್ಯಗಳೆಲ್ಲ ನಿಜವಾಯಿತು. ನಮ್ಮ ಮನೆಗೆ ಬಂದಿದ್ದು ಸಾಯಿಬಾಬಾರವರೇ ಎಂಬುದು ಅವರು ವಾಪಸು ಹೋಗುವಾಗ ತೋರಿಸಿಕೊಟ್ಟರು. ಅದು ಹೇಗೆಂದರೆ, ನಮ್ಮ ತಾಯಿ ಮತ್ತು ಅಜ್ಜಿಯವರು ಬಾಬಾರವರನ್ನು ಬೀಳ್ಕೊಡುತ್ತಿದ್ದರು. ನಮ್ಮ ಮನೆಯ ಮುಂಬಾಗಿಲಿನಿಂದ ಹೊರಕ್ಕೆ ಹೋಗಿ ಕೂಡಲೇ ಸಿಗುವ ಎಡಕ್ಕೆ ತಿರುಗಿದರು. ಕೆಲವೇ ಕ್ಷಣಗಳಲ್ಲಿ ಅದೇ ದಾರಿಯಲ್ಲಿ ನಮ್ಮ ತಂದೆಯವರು ಬಂದರು. ನಮ್ಮ ತಾಯಿ ಮತ್ತು ಅಜ್ಜಿಯವರು ಹೊರಗಡೆ ನಿಂತಿರುವುದನ್ನು ಕಂಡು ಏಕೆ ಹೊರಗಡೆ ನಿಂತಿರುವಿರೆಂದು ಪ್ರಶ್ನಿಸಿದರು. ನಮ್ಮ ತಂದೆಯವರಿಗೆ ಸಾಯಿಬಾಬಾರವರು ನಮ್ಮ ಮನೆಯಿಂದ ಹೋದದ್ದು ಕಾಣಿಸಲೇ ಇಲ್ಲ. ನಮ್ಮ ತಾಯಿ ಮತ್ತು ಅಜ್ಜಿ ನಡೆದ ವಿಷಯವನ್ನು ನಮ್ಮ ತಂದೆಗೆ ತಿಳಿಸಿದರು. ನಮ್ಮ ತಂದೆಯವರು ಹುಚ್ಚರಂತೆ ಅದೇ ದಾರಿಯಲ್ಲಿ ಬಾಬಾರವರನ್ನು ಹುಡುಕಿ ದರ್ಶನ ಪಡೆಯಲು ಓಡಿದರು. ಆದರೆ ಅವರಿಗೆ ಯಾರು ಕಾಣಲಿಲ್ಲ. ನಿಜ ಹೇಳಬೇಕೆಂದರೆ ಆ ಸಮಯದಲ್ಲಿ ಇಡೀ ರಸ್ತೆ ನಿರ್ಜನವಾಗಿದ್ದು ರಸ್ತೆಯಲ್ಲಿ ಯಾವ ಮನುಷ್ಯರೂ ಇರಲಿಲ್ಲ.

ಸಾಯಿಯವರು ಬಂದ ದಾರಿಯಲ್ಲೇ ಕ್ಷಣ ಮಾತ್ರದಲ್ಲಿ ಮಾಯವಾಗಿದ್ದರು. ಈ ಪವಾಡ ಸಾಯಿಬಾಬಾರವರಿಗಲ್ಲದೇ ಬೇರೆ ಯಾರಿಗೆ ಮಾಡಲು ಸಾಧ್ಯ?

-ಶ್ರೀ. ಶ್ರವಣ ಕುಮಾರ್ ರವರು ಹೇಳಿದಂತೆ

No comments:

Post a Comment