Wednesday, July 21, 2010

ಬೆಂಗಳೂರಿನ ಸಾಯಿಭಕ್ತೆಯ ಪಕ್ಕದಲ್ಲಿ  ಶಿರಡಿ ಸಾಯಿಬಾಬಾ ಬಂದು ಕುಳಿತ ಸಾಯಿಲೀಲೆ - ಕೃಪೆ - ಶ್ರೀಮತಿ. ಗಿರಿಜಾ ಶಾಸ್ತ್ರಿ

ಅಪರ್ಣ ಮತ್ತು ನಾನು ೨೦೦೧ ನೇ ಇಸವಿಯಲ್ಲಿ ಶಿರಡಿಗೆ ಹೋಗಿದ್ದೆವು. ಅಪರ್ಣ ರವರ ಗಂಡ ಮತ್ತು ಅವರ ಮಕ್ಕಳು ಕೂಡ ಜೊತೆಯಲ್ಲಿ ಬಂದಿದ್ದರು. ಸಮಾಧಿ ಮಂದಿರದಲ್ಲಿ ಸಾಯಿಯವರ ವಿಗ್ರಹದ ದರ್ಶನವನ್ನು ಚೆನ್ನಾಗಿ ಮಾಡಿಕೊಂಡು ಹೊರಬಂದೆವು. ಹೊರಗೆ ಬಂದ ತಕ್ಷಣ ನನಗೆ ಸಾಯಿ ಸತ್ಯನಾರಾಯಣ ವ್ರತ ಮಾಡಬೇಕೆಂದು ಅನಿಸಿತು. ಅಪರ್ಣ ಮತ್ತು ಅವರ ಮನೆಯವರು ಸಮಾಧಿ ಮಂದಿರದ ಹೊರಗಡೆ ಕಲ್ಲಿನ ಮೇಲೆ ಕುಳಿತಿದ್ದರು. ಆಗ ಸಾಯಿ ಸತ್ಯನಾರಾಯಣ ವ್ರತವನ್ನು ಸಮಾಧಿ ಮಂದಿರದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಮಾಡುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ನಾವೆಲ್ಲರೂ ಸಾಯಿ ಸತ್ಯನಾರಾಯಣ ವ್ರತ ಶುರು ಮಾಡುವ ಸಲುವಾಗಿ ದೀಪಗಳನ್ನು ಹಚ್ಚಬೇಕೆಂದುಕೊಳ್ಳುತ್ತಿರುವಾಗ ಥೇಟ್ ಸಾಯಿಬಾಬಾರವರಂತೆ ಹೋಲುತ್ತಿದ್ದ ಮುದುಕರೊಬ್ಬರು ನಮ್ಮನ್ನೇ ನೋಡುತ್ತಾ ಸಮಾಧಿ ಮಂದಿರದ ಎದುರಿಗಿರುವ ಸ್ಟೇಜ್ ಮೇಲೆ ನಡೆದಾಡುತ್ತಿದ್ದರು ಮತ್ತು ನಾವು ಮಾಡುವ ಎಲ್ಲ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ವ್ರತವನ್ನು ಮಾಡಿಸುತ್ತಿದ್ದ ಸಾಯಿಬಾಬಾ ಸಂಸ್ಥಾನದ ಪುರೋಹಿತರಾದ ಉಲ್ಲಾಸ್ ವಲಜೋನ್ಕರ್ ರವರು ಇದನ್ನು ಗಮನಿಸಿದಂತೆ ಕಾಣಲಿಲ್ಲ. ನಾನು ಉಲ್ಲಾಸ್ ರವರಿಗೆ ಹೇಳಬೇಕೆಂದು ಬಾಯಿ ತೆರೆಯಲು ಹೋದೆ. ಆದರೆ, ನನಗೆ ಅದು ಸಾಯಿಯವರೇ ಎಂದು ಪೂರ್ಣ ನಂಬಿಕೆ ಇರದಿದ್ದ ಕಾರಣ ಸುಮ್ಮನಾಗಿಬಿಟ್ಟೆ.   ನಾನು ಪೂಜೆ ಮಾಡುವುದನ್ನು ಬಿಟ್ಟು ಅವರನ್ನೇ ನೋಡುತ್ತಿದ್ದೆ. ಆಗ ಆ ಮುದುಕರು ನಮ್ಮನ್ನೆಲ್ಲ ನೋಡಿ ನಗುತ್ತ ತಮ್ಮ ಬಲಗೈಯನ್ನು ಎತ್ತಿ ಆಶೀರ್ವಾದ ಮಾಡುವಂತೆ ಮಾಡಿದರು. ನಾನು ಅವರು ಆಶೀರ್ವದಿಸಿದ್ದಕ್ಕೆ ಮನದಲ್ಲೇ ವಂದಿಸಿದೆ. ಕೆಲವೇ ಕ್ಷಣಗಳಲ್ಲಿ ಆ ಮುದುಕರು ಸಾಯಿಬಾಬಾ ಮಂದಿರದ ಗಂಡಸರ ಕ್ಯೂ ನ ಕಡೆ ನಡೆದರು. ಅವರು ಹೋದ ನಂತರ ನಾನು ಶ್ರದ್ದೆಯಿಂದ ನನ್ನ ಪೂಜೆಯನ್ನು ಮುಂದುವರಿಸಿದೆ. ನಾನು ಪುನಃ ಪೂಜೆ ಪ್ರಾರಂಭ ಮಾಡುವ ಹೊತ್ತಿಗೆ ಬೇರೆ ಎಲ್ಲ ಭಕ್ತರೂ ತಮ್ಮ ತಮ್ಮ ಪೂಜೆಗಳನ್ನು ಮುಗಿಸಿ ಆರತಿ ಮಾಡುತ್ತಿದ್ದರು. ನಾನು ಕೂಡ ಬೇಗ ಬೇಗನೆ ಪೂಜೆಯನ್ನು ಮುಗಿಸಿ ಹೊರಗೆ ಬಂದೆ. 

ನಾನು ಹೊರಗೆ ಬಂದು ನೋಡಿದಾಗ ಆದೇ ಮುದುಕರು ಅಪರ್ಣ ಮತ್ತು ಮನೆಯವರು ಕುಳಿತಿದ್ದ ಜಾಗದ ಪಕ್ಕದಲ್ಲಿ ಕುಳಿತಿರುವುದನ್ನು ನೋಡಿದೆ. ಅಪರ್ಣ ರವರ ಗಂಡನಿಗೂ ಅವರು ಸಾಯಿಬಾಬಾರವರೇ ಎಂದು ಅನಿಸಿ ಫೋಟೋ ತೆಗೆಯಲು ಪ್ರಯತ್ನಿಸಿದರು ಆದರೆ ಎಲ್ಲಿ ಆ ಮುದುಕರು ಬಯ್ಯುವರೋ ಎಂದು ಹೆದರಿದರು. ಆದುದರಿಂದ ಅಪರ್ಣ ಅವರ ಗಂಡ ಅಪರ್ಣ ಅವರಿಗೆ ಮುದುಕರು ಕುಳಿತಿರುವ ಜಾಗದಿಂದ ಸ್ವಲ್ಪ ದೂರ ಅಂದರೆ ೭ ಅಡಿಯಿಂದ ೧೧ ಅಡಿ ದೂರದಲ್ಲಿ ಕುಳಿತುಕೊಳ್ಳಬೇಕೆಂದು ಮತ್ತು ತಾವು ಫೋಟೋ ಹೇಗಾದರೂ ಮಾಡಿ ತೆಗೆಯಲು ಪ್ರಯತ್ನಪಡುವೆನೆಂದರು.  ಅವರು ಫೋಟೋ ತೆಗೆಯುತ್ತಿದ್ದುದನ್ನು ನಾನು ಕಣ್ಣಾರೆ ನೋಡಿ ನನಗೆ ಮತ್ತು ಅಪರ್ಣ ಮನೆಯವರಿಗೆಲ್ಲ ಬಹಳ ಸಂತೋಷವಾಯಿತು. 

ನಾವು ಶಿರಡಿ ದರ್ಶನ ಮುಗಿಸಿ ರೈಲಿನಲ್ಲಿ ಹೊರಟು ಬೆಂಗಳೂರಿಗೆ ಬರುತ್ತಿರುವಾಗ ಅಪರ್ಣರವರ ೭ ವರ್ಷದ ಮಗ ತಿಳಿಯದೆ ಕ್ಯಾಮೆರಾ ದಲ್ಲಿದ್ದ ರೀಲನ್ನು ಹೊರತೆಗೆದುಬಿಟ್ಟನು. ಇದರಿಂದ ಅಪರ್ಣರವರಿಗೆ ಬಹಳ ಕೋಪ ಬಂದಿತು. ಏಕೆಂದರೆ ಅವರಿಗೆ ತಾವು ಬಾಬಾರವರ ಜೊತೆ ಕುಳಿತಿರುವ ಫೋಟೋ ಹಾಳಾಗಿಹೋಯಿತಲ್ಲ ಎಂದು ಬಹಳ ಬೇಸರವಾಯಿತು. ಅಪರ್ಣರವರ ಗಂಡ ಮಗನಿಗೆ ಚೆನ್ನಾಗಿ ಹೊಡೆದರು. ನಾನು ಮಧ್ಯೆ ಪ್ರವೇಶಿಸಿ ಹೊಡೆಯಬಾರದೆಂದು ನಿರ್ಬಂಧಿಸಿದೆನು. ಬೆಂಗಳೂರಿಗೆ ವಾಪಸಾದ ಮೇಲೆ ಅಪರ್ಣರವರು ಏನಾದರಾಗಲಿ ನೋಡಿಬಿಡೋಣ ಎಂದು ರೀಲನ್ನು ಸ್ಟೂಡಿಯೋಗೆ ತೆಗೆದುಕೊಂಡು ಹೋಗಿ ಕೊಟ್ಟರು. ಅದನ್ನು ತೊಳೆದು ನೋಡಿದ ಸ್ಟೂಡಿಯೋದವನು ಎಲ್ಲ ಫೋಟೋಗಳು ಹಾಳಾಗಿಹೋಗಿವೆ, ಆದರೆ ಒಂದೇ ಒಂದು ಫೋಟೋ ಚೆನ್ನಾಗಿ ಬಂದಿದೆ ಎಂದು ಆ ಒಂದು ಫೋಟೋವನ್ನು ಅಪರ್ಣರವರಿಗೆ ಕೊಟ್ಟನು. ಆ ಫೋಟೋವೇ ಸಾಯಿಬಾಬಾರವರಂತೆ ಹೋಲುತ್ತಿದ್ದ ಮುದುಕರು ಅಪರ್ಣ ಪಕ್ಕದಲ್ಲಿ ಕುಳಿತುಕೊಂಡಿದ್ದ ಫೋಟೋ ಆಗಿದ್ದಿತು. ಆ ಫೋಟೋವನ್ನು ನೋಡಿ ನಾವೆಲ್ಲರೂ ಬಹಳ ಆನಂದದಿಂದ ಕುಣಿದಾಡಿದೆವು. ಏಕೆಂದರೆ, ೭ ರಿಂದ ೧೧ ಅಡಿ ದೂರದಲ್ಲಿದ್ದ ಮುದುಕರು ಅಪರ್ಣ ಪಕ್ಕದಲ್ಲಿ ಕುಳಿತಂತೆ ಫೋಟೋದಲ್ಲಿ ಬರಲು ಎಂದಾದರೂ ಸಾಧ್ಯವೇ? ಸಾಯಿಯವರಿಗೆ ಬಿಟ್ಟು ಮತ್ಯಾರಿಗೆ ಅದು ಸಾಧ್ಯವಾಗುತ್ತದೆ? ನೀವೇ ಹೇಳಿ? ಜೈ ಬೋಲೋ ಸಮರ್ಥ ಸದ್ಗುರು ಸಾಯಿನಾಥ್ ಮಹಾರಾಜ್ ಕೀ ಜೈ!!!!!!!!!!!

ಸಾಯಿಭಕ್ತರಿಗೊಸ್ಕರ ಆ ಫೋಟೋವನ್ನು ಈ ಕೆಳಗೆ ನೀಡುತ್ತಿದ್ದೇನೆ.

 ಅಪರ್ಣ ರವರ ಪಕ್ಕದಲ್ಲಿ ಕುಳಿತಿರುವ ಸಾಯಿಬಾಬಾರವರನ್ನು ಹೋಲುವ ಮುದುಕರು

-ಶ್ರೀಮತಿ.ಗಿರಿಜಾ ಶಾಸ್ತ್ರಿಯವರು ಹೇಳಿದಂತೆ

No comments:

Post a Comment