Wednesday, July 14, 2010

ಸಾಯಿ ಮಹಾಭಕ್ತ  ಬಾಲಾಜಿ ಪಿಲಾಜಿ ಗುರವ್ ನ ಕುಟೀರ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ

ಬಾಲಾಜಿ ಪಿಲಾಜಿ ಗುರವ್ ನ ಕುಟೀರ ಮತ್ತು ಪಿಲಾಜಿ ಮನೆಯ ಪಕ್ಕದಲ್ಲಿರುವ ಸಾಯಿಯವರ ಪಾದುಕೆಗಳು

ಬಾಲಾಜಿ ಪಿಲಾಜಿ ಗುರವ್ ರ ಮನೆಯು ಗುರುಸ್ಥಾನದಿಂದ ಸೇವಾಧಾಮ್ ಗೆ ಹೋಗುವ ದಾರಿಯಲ್ಲಿ ಎಡಭಾಗದಲ್ಲಿ ಮೊದಲ ಮನೆಯಾಗಿರುತ್ತದೆ. ಇವರ ಮನೆಯ ಪಕ್ಕದಲ್ಲಿ ಸಾಯಿಬಾಬಾರವರ ಪಾದುಕೆಗಳಿರುವ ಒಂದು ಸಣ್ಣ ಗುಡಿಯು ಇರುತ್ತದೆ. ಇಲ್ಲಿ ಸಾಯಿಯವರು ಪ್ರತಿನಿತ್ಯ ದ್ವಾರಕಾಮಾಯಿಯಿಂದ ಲೇಂಡಿ ಉದ್ಯಾನವನಕ್ಕೆ ಹೋಗುವಾಗ ವಿಶ್ರಾಂತಿ ಪಡೆಯುತ್ತಿದ್ದರೆಂದು ಹೇಳಲಾಗುತ್ತದೆ. ಬಾಲಾಜಿ ಪಿಲಾಜಿ ಗುರವ್ ರವರು ೧೯೧೨ ರಲ್ಲಿ ತಮ್ಮ  ತಂದೆ ತಾಯಿಯೊಂದಿಗೆ ಶಿರಡಿಗೆ ಬಂದರು. ಇವರ ತಂದೆ ತಾಯಿಗೆ ಸಾಯಿಬಾಬಾರವರು ಕನಸಿನಲ್ಲಿ ಮುಂಚೆಯೇ ದರ್ಶನ ನೀಡಿದ್ದರೆಂದು, ಇವರ ತಂದೆಗೆ ಸಾಯಿಯವರು ಶಿರಡಿಗೆ ಬರುವಂತೆ ಆಜ್ಞಾಪಿಸಿದರು, ಇವರ ತಾಯಿಯವರಿಗೆ ೫೦ ಪೈಸೆ ದಕ್ಷಿಣೆ ಮತ್ತು ಬಟ್ಟೆಯನ್ನು ನೀಡುವಂತೆ ಕೇಳಿದರು ಎಂದು ಹೇಳಲಾಗುತ್ತದೆ. ಆ ಕ್ಷಣವೇ ಪಿಲಾಜಿ ಗುರವ್ ನ ತಂದೆ ತಾಯಿಗಳು ಇವರೊಂದಿಗೆ ಕೊರಾಳೆ ಗ್ರಾಮದಿಂದ ಹೊರಟು ರಹತಾಕ್ಕೆ ಬಂದರು. ಅಲ್ಲಿಂದ ತಾತ್ಯಾ ಮುನಿಮ್ ರೊಂದಿಗೆ ಶಿರಡಿಗೆ ಬಂದರು. ಸಾಯಿಯವರು ಇವರನ್ನು ಕಂಡು ಉಗ್ರರಾಗಿ ಕೋಪದಿಂದ ಬಯ್ಗಳನ್ನು ಸುರಿಸಿದರು ಮತ್ತು ಚೆನ್ನಾಗಿ ಥಳಿಸಿದರು. ಇದರಿಂದ ಇವರುಗಳಿಗೆ ಬಹಳ ಹೆದರಿಕೆಯಾಯಿತು. ಆದರೆ, ದೀಕ್ಷಿತ್ ರವರು ಸಾಯಿಯವರ ಕೋಪ ಆಶೀರ್ವಾದವೆಂದು ಹೇಳಿದರು. ದೀಕ್ಷಿತ್ ರವರ ಮಾತಿಗೆ ಒಪ್ಪಿಗೆ ಕೊಟ್ಟು ಅವರು ಶಿರಡಿಯಲ್ಲೇ ವಾಸಿಸಲು ಪ್ರಾರಂಭಿಸಿದರು. ಬಾಲಾಜಿ ಪಿಲಾಜಿ ಗುರವ್ ರವರು ಅನೇಕ ಸಂದರ್ಭಗಳಲ್ಲಿ ಸಾಯಿಬಾಬಾರವರಿಗೆ ಆರತಿಯನ್ನು ಮಾಡುವ ಸಂದರ್ಭದಲ್ಲಿ ಕ್ಲಾರಿಯನ್ ವಾದ್ಯವನ್ನು ನುಡಿಸುತ್ತಿದ್ದರು. ಮಹಾಳಸಪತಿಯವರು ಅಂಧರಾದಾಗ ಬಾಲಾಜಿ ಪಿಲಾಜಿ ಗುರವ್ ರವರು ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಅವರ ಮನೆಯಿಂದ ದ್ವಾರಕಾಮಾಯಿಗೆ ಕರೆತರುತ್ತಿದ್ದರು ಮತ್ತು ವಾಪಸ್ ಕರೆದು ಕೊಂಡು ಹೋಗಿ ಮನೆಗೆ ಬಿಡುತ್ತಿದ್ದರು.  ಇವರ ಮನೆಯವರ ಬಳಿ ಸಾಯಿಯವರ ಮಹಾಸಮಾಧಿಯಾದ ಸಂದರ್ಭದಲ್ಲಿ ಕೊನೆಯ ಮಂಗಳ ಸ್ನಾನ ಮಾಡಿಸಿದಾಗ ತೊಡಿಸಿದ ಲಂಗೋಟಿಯು ಇರುತ್ತದೆ. ಈ ಪವಿತ್ರ ಲಂಗೋಟಿಯನ್ನು ಇವರ ವಂಶಸ್ಥರು ಪೂಜಿಸುತ್ತಾ ಬಂದಿದ್ದಾರೆ.

No comments:

Post a Comment