Sunday, July 18, 2010

ಶಿರಡಿ ಸಾಯಿಬಾಬಾರವರ "ಅದ್ಭುತ ಉಧಿ" ಬೆಂಗಳೂರಿನ ಭಕ್ತರ "ಆಸ್ತಮಾ" ವನ್ನು ಗುಣ ಮಾಡಿದ ಸಾಯಿಲೀಲೆ- ಕೃಪೆ - ಸಾಯಿಅಮೃತಧಾರಾ.ಕಾಂ  

ಆಗ ಸುಮಾರು 1989ನೇ ಇಸವಿಯು ಪ್ರಾರಂಭವಾಗಿತ್ತು. ಶ್ರೀ.ಶ್ರೀಕಂಠ ಶರ್ಮರವರು ಆಗ ತಾನೇ ಪದವಿಯನ್ನು ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ ಸಾಯಿಬಾಬಾರವರ ಬಗ್ಗೆ ಗೊತ್ತೇ ಇರಲಿಲ್ಲ. ಅವರಿಗೆ ಮನೆಯ ಹಣಕಾಸಿನ ತೊಂದರೆಯ ಜೊತೆಗೆ ಭಯಂಕರ ಆಸ್ತಮಾ ಖಾಯಿಲೆಯಿಂದ ನರಳುತ್ತಿದ್ದರು. ಅವರ ಕಂಪನಿಯಲ್ಲಿ  ರಾಜೇಶ್ ಎಂಬುವರು ಜೊತೆಗೆ ಕೆಲಸ ಮಾಡುತ್ತಿದ್ದರು. ಶ್ರೀ.ರಾಜೇಶ್ ರವರು ಯಾವಾಗಲೂ ಸಾಯಿಬಾಬಾರವರ ಹೆಸರನ್ನು ಉಚ್ಚರಿಸುತ್ತಿದ್ದರು ಮತ್ತು ಯಾರಿಗಾದರೂ ನಮಸ್ಕಾರ ಮಾಡುವಾಗ "ಸಾಯಿರಾಂ" ಎಂದು ಹೇಳಿ ನಮಸ್ಕರಿಸುತ್ತಿದ್ದರು. ಶ್ರೀ.ರಾಜೇಶ್ ರವರ ಈ ವರ್ತನೆಯನ್ನು ಕಂಡು ಶ್ರೀ.ಶ್ರೀಕಂಠ ಶರ್ಮರವರಿಗೆ ಬಹಳ ಆಶ್ಚರ್ಯ ಮತ್ತು ಕುತೂಹಲವಾಗುತ್ತಿತ್ತು. 

ಹೀಗಿರುವಾಗ, ಒಂದು ದಿನ ಇದ್ದಕ್ಕಿದ್ದಂತೆ ಶ್ರೀ.ರಾಜೇಶ್ ರವರು ರಮೇಶ್ ರವರಿಗೆ ಶಿರಡಿಗೆ ತಮ್ಮ ಜೊತೆಯಲ್ಲಿ ಬರುವಂತೆ ಒತ್ತಾಯ ಮಾಡಿದರು ಮತ್ತು ಶಿರಡಿಗೆ ಬಂದು ಒಮ್ಮೆ ಸಾಯಿಬಾಬಾರವರ ದರ್ಶನ ಮಾಡಿದರೆ ಅವರ ತೊಂದರೆಗಳೆಲ್ಲ ನಿವಾರಣೆಯಾಗುವುದೆಂದು ಭರವಸೆ ನೀಡಿದರು. ಆದರೆ, ರಮೇಶ್ ರವರ ಬಳಿ ಆಗ ಹಣವಿರಲಿಲ್ಲ ಮತ್ತು ಶಿರಡಿ ಯಾತ್ರೆ ಎಂದರೆ ಕಮ್ಮಿ ಎಂದರೂ ಆಗಿನ ಕಾಲದಲ್ಲಿ 1500/- ರೂಗಳು ಬೇಕಾಗುತ್ತಿತ್ತು. ಆದುದರಿಂದ, ಶ್ರೀಕಂಠ ಶರ್ಮರವರು ತಮ್ಮ ಬಳಿ ಆಗ ಅಷ್ಟು ಹಣವಿಲ್ಲವೆಂದು ಮತ್ತು ಆ ಕಾರಣದಿಂದ ಶಿರಡಿಗೆ ಬರುವುದಿಲ್ಲವೆಂದು ರಾಜೇಶ್ ರವರ ಆಹ್ವಾನವನ್ನು ನಿರಾಕರಿಸಿದರು. ಆದರೆ, ಸಾಯಿಬಾಬಾರವರ ಇಚ್ಛೆ ಬೇರೆಯೇ ಇದ್ದಿತ್ತು. ರಾಜೇಶ್  ಮತ್ತು ಅವರ ಸ್ನೇಹಿತ ಪ್ರವೀಣ್ ರವರು ತಮ್ಮ ಜೊತೆಯಲ್ಲಿ ಬರಲೇಬೇಕೆಂದು ಒತ್ತಾಯ ಮಾಡಿದರಲ್ಲದೇ ಹಣವನ್ನು ಶಿರಡಿಗೆ ಹೋಗಿ ಬಂದ ನಂತರ ನಿಧಾನವಾಗಿ ಕೊಡುವಂತೆ ಹೇಳಿದರು. ಶ್ರೀಕಂಠ ಶರ್ಮರವರು ಸ್ನೇಹಿತರ ಸಲಹೆಗೆ ತಮ್ಮ ಸಮ್ಮತಿ ಸೂಚಿಸಿ ಇತರ 13 ಭಕ್ತರ ಜೊತೆ ಶಿರಡಿಗೆ ತೆರಳಲು ಸಿದ್ದತೆ ನಡೆಸಿದರು. 

ಎಲ್ಲವು ಅಂದುಕೊಂಡಂತೆ ನಡೆಯಿತು. ಎಲ್ಲ 14 ಸ್ನೇಹಿತರಿಗೂ ಸಾಯಿಬಾಬಾರವರ ದರ್ಶನ ಚೆನ್ನಾಗಿ ಆಯಿತು. ಶ್ರೀಕಂಠ ಶರ್ಮ ರವರು ಶಿರಡಿ ಸಾಯಿಬಾಬಾರವರ ದಿವ್ಯ ವಿಗ್ರಹವನ್ನು ಸಮಾಧಿ ಮಂದಿರದಲ್ಲಿ ನೋಡಿದ ಮರುಕ್ಷಣವೇ ಅವರಿಗೆ ತಮ್ಮ ಸ್ನೇಹಿತರಾದ ರಾಜೇಶ್ ಮತ್ತು ಪ್ರವೀಣ್ ರವರು ಬಾಬಾರವರ ಬಗ್ಗೆ ಹೇಳುತ್ತಿದ್ದುದೆಲ್ಲ ನಿಜ ಎಂದು ಅನ್ನಿಸತೊಡಗಿತು. ಶ್ರೀಕಂಠ ಶರ್ಮರವರ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ಏನೋ ಬದಲಾವಣೆಯಾಗಿದೆ ಎಂದು ಅನ್ನಿಸತೊಡಗಿತು. 


ಶಿರಡಿಯಲ್ಲಿ 3 ದಿನಗಳು ತಂಗಿದ್ದು ಸುತ್ತಮುತ್ತಲಿನ ಎಲ್ಲ ಪ್ರವಾಸಿ ತಾಣಗಳನ್ನು ಸ್ನೇಹಿತರ ಜೊತೆಗೂಡಿ ಹೋಗಿ ಬಂದರು. 3 ದಿನಗಳು ತಂಗಿದ ನಂತರ ಕರ್ನಾಟಕ ಎಕ್ಷ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ವಾಪಸಾಗಲು ಹತ್ತಿ ಕುಳಿತರು. ಅದೇ ದಿನ ಬೆಳಗಿನ ಜಾವ 2:00 ಘಂಟೆಯ ವೇಳೆಗೆ ರಮೇಶ್ ರವರಿಗೆ ಆಸ್ತಮಾ ಹೆಚ್ಚಾಗಿ ಉಸಿರಾಡುವುದಕ್ಕೂ ಕಷ್ಟವಾಯಿತು. ಕೂಡಲೇ ಅವರ ಸ್ನೇಹಿತರಾದ ರಾಜೇಶ್  ಮತ್ತು ಪ್ರವೀಣ್ ರವರು ಶ್ರೀಕಂಠ ಶರ್ಮರವರ ಬಾಯಿಗೆ ಸಾಯಿಬಾಬಾರವರ ಪವಿತ್ರ ಉಧಿಯನ್ನು ಹಾಕಿ ಅವರಿಗೆ ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಮನದಲ್ಲೇ ಹೇಳಿಕೊಳ್ಳಲು ಸಲಹೆ ನೀಡಿದರು. ಸ್ನೇಹಿತರು ಹೇಳಿದಂತೆ ಸಾಯಿ ತಾರಕ ಮಂತ್ರ ಹೇಳುತ್ತಾ ಯಾವಾಗಲೋ ಶ್ರೀಕಂಠ ಶರ್ಮರವರು ನಿದ್ರೆಗೆ ಜಾರಿದರು ಮತ್ತು ಆ ರಾತ್ರಿ ಯಾವುದೇ ತೊಂದರೆಯಾಗದೆ ಸುಖವಾಗಿ ನಿದ್ರಿಸಿದರು. ಬೆಳಗಿನ ಜಾವ 7:00 ಘಂಟೆಗೆ ಶ್ರೀಕಂಠ ಶರ್ಮರವರಿಗೆ ಎಚ್ಚರವಾಯಿತು. ಆದರೆ ಅವರ ದೇಹಸ್ಥಿತಿ ಎಂದಿನಂತೆ ಇರಲಿಲ್ಲ. ಶಿರಡಿಗೆ ಬರುವ ಮೊದಲು ಪ್ರತಿನಿತ್ಯ 3 ಡೆರಿಫಿಲಿನ್ ಮಾತ್ರೆಗಳನ್ನು ಆಸ್ತಮಾಕ್ಕೋಸ್ಕರವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಅಂದು ಮಾತ್ರೆ ತೆಗೆದುಕೊಳ್ಳಬೇಕೆಂದು ಅನಿಸಲೇ ಇಲ್ಲ. ಅವರಿಗೆ ಯಾವುದೇ ಉಸಿರಾಟದ ತೊಂದರೆಯು ಕಂಡು ಬರಲಿಲ್ಲ. ಅಂದಿನಿಂದ ಶ್ರೀಕಂಠ ಶರ್ಮರವರು ಯಾವುದೇ ಉಸಿರಾಟದ ತೊಂದರೆಯಿಲ್ಲದೆ ಗುಣಮುಖರಾಗತೊಡಗಿದರು. ಪ್ರತಿದಿನ ಮಾತ್ರೆ ತೆಗೆದುಕೊಳ್ಳುವುದನ್ನು ಕೂಡ ನಿಲ್ಲಿಸಿದರು. ಆಗೊಮ್ಮೆ ಈಗೊಮ್ಮೆ  ತೊಂದರೆಯಾದಾಗ ಅದಕ್ಕೆ ಮಾತ್ರೆಯನ್ನು ತೆಗೆದುಕೊಳ್ಳದೆ ಅದರ ಬದಲಾಗಿ ಸಾಯಿಬಾಬಾರವರ ಪವಿತ್ರ ಉಧಿಯನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರು ಮತ್ತು ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಜಪಿಸುತ್ತಿದ್ದರು. 

ಈ ರೀತಿಯಲ್ಲಿ ಶಿರಡಿ ಸಾಯಿಬಾಬಾರವರು ಶ್ರೀಕಂಠ ಶರ್ಮ ರವರ ಆಸ್ತಮಾ ಖಾಯಿಲೆಯನ್ನು ಸಂಪೂರ್ಣ ಗುಣ ಮಾಡಿದರು. ಆ ದಿನದಿಂದ ಶ್ರೀಕಂಠ ಶರ್ಮ ರವರು ಸಾಯಿಬಾಬಾರವರ ಅನನ್ಯ ಭಕ್ತರಾದರು ಮತ್ತು ಪ್ರತಿ ವರ್ಷ ಶಿರಡಿಗೆ ಹೋಗುವುದಕ್ಕೆ ಪ್ರಾರಂಭಿಸಿದರು. ಆಲ್ಲದೇ, ತಮ್ಮ ಜೀವನದಲ್ಲಿ ನಡೆದ ಸಾಯಿ ಲೀಲೆಯನ್ನು ತಮ್ಮ ಸುತ್ತ ಮುತ್ತಲಿನ ಎಲ್ಲರಿಗೂ ಹೇಳಿ ಅವರನ್ನು ಸಾಯಿಭಕ್ತರಾಗುವಂತೆ ಪ್ರೇರೇಪಿಸುತ್ತಿದ್ದರು. ಆಲ್ಲದೇ, ಶಿರಡಿಗೆ  ಹೋಗಲು ಇಚ್ಚೆಯಿದ್ದು, ಆದರೆ ಅಲ್ಲಿಗೆ ಹೋಗುವ ಬಗೆ ತಿಳಿಯದೆ ಇರುವಂತಹ ಭಕ್ತರಿಗೆ ಮಾರ್ಗದರ್ಶಕರಂತೆ ಶಿರಡಿಗೆ ಅವರನ್ನು ಕರೆದುಕೊಂಡು ಹೋಗಿ ಅವರಿಗೆ ಸಾಯಿಬಾಬಾರವರ ದರ್ಶನವನ್ನು ಮಾಡಿಸಲು ಪ್ರಾರಂಭಿಸಿದರು. 
ಬ್ಲಾಗ್ ಸೃಷ್ಟಿಕರ್ತರ ಸ್ವಂತ ಅನುಭವ 

No comments:

Post a Comment