Friday, July 16, 2010

ಶಿರಡಿಯಲ್ಲಿ ನೋಡಬೇಕಾದ ಸ್ಥಳ - ಖಂಡೋಬ ಮಂದಿರ ಮತ್ತು ಪವಿತ್ರ ಆಲದ ಮರ - ಕೃಪೆ - ಸಾಯಿ ಅಮೃತಧಾರಾ.ಕಾಂ

ಶಿರಡಿಯಲ್ಲಿರುವ ಈ ಖಂಡೋಬ ಮಂದಿರವು 500 ವರ್ಷಕ್ಕೂ ಹೆಚ್ಚು ಪುರಾತನವಾದ ದೇವಾಲಯ.  ಈ ದೇವಾಲಯವನ್ನು  ಯಾವ ವರ್ಷದಲ್ಲಿ ಕಟ್ಟಲಾಯಿತು ಎಂಬುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಖಂಡೋಬ ಮಂದಿರವು ಶ್ರೀ ಸಾಯಿನಾಥ್ ಹಾಸ್ಪಿಟಲ್ ಪಕ್ಕದಲ್ಲಿ ಮತ್ತು ಶಿರಡಿ ಬಸ್ ನಿಲ್ದಾಣದ ಎದುರುಗಡೆ ಇದೆ. ಖಂಡೋಬ ಶಿವನ ಅವತಾರವೆಂದು ಹೇಳಲಾಗಿದ್ದು ಶಿರಡಿಯ ಗ್ರಾಮದೇವರು ಮತ್ತು ಮಹಾರಾಷ್ಟ್ರದ ಕುಲದೇವರಾಗಿರುತ್ತಾರೆ. ಸಾಯಿಬಾಬಾರವರ ಕಾಲದಲ್ಲಿ ಈ ಮಂದಿರದ ಪೂಜಾರಿ  ಸಾಯಿಭಕ್ತ  ಮಹಲ್ಸಾಪತಿಯವರಾಗಿದ್ದರು.

 ಹಳೆಯ ಖಂಡೋಬ ಮಂದಿರ

 ಹೊಸ ಖಂಡೋಬ ಮಂದಿರದ ಹೊರನೋಟ 

ಸಾಯಿಬಾಬಾರವರು ಚಾಂದ್ ಪಾಟೀಲ್ ರವರ ಮದುವೆ ದಿಬ್ಬಣದ ಜೊತೆ ಶಿರಡಿಗೆ ಬಂದಾಗ ಈ ಮಂದಿರದಲ್ಲಿ ಮಹಲ್ಸಾಪತಿಯವರು ಪೂಜೆಯನ್ನು ನೆರವೇರಿಸುತ್ತಿದ್ದರು.  ಮಹಲ್ಸಾಪತಿಯವರು ಮಂದಿರದ ಹೊರಗಡೆ ಬಂದು ಸಾಯಿಬಾಬಾರವರನ್ನು "ಆವೋ ಸಾಯಿ" ಎಂದು ಸಂಬೋಧಿಸಿ, ಸಾಯಿಯವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಫಕೀರ ನ್ನು ಪ್ರೀತಿಯಿಂದ ಒಂದೆಡೆ ಕುಳ್ಳಿರಿಸಿದರು. ದೇವಾಲಯದ ಪೂಜೆಯನ್ನು ಮುಗಿಸಿದ ನಂತರ ಸಾಯಿಬಾಬಾ ಮತ್ತು ಮಹಲ್ಸಾಪತಿಯವರು ಒಂದೆಡೆ ಕುಳಿತು ಭಂಗಿಯನ್ನು ಸೇದಿ ಅನೇಕ ವಿಚಾರಗಳನ್ನು ಕುರಿತು ಬಹಳ ಹೊತ್ತು ಮಾತನಾಡಿದರು. ನಂತರ ಮಹಲ್ಸಾಪತಿಯವರು ಬಾಬಾರವರನ್ನು ಶಿರಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕಾಶೀರಾಂ ಶಿಂಪಿ ಮತ್ತು ಅಪ್ಪಾ ಜಗ್ಲೆಯವರಿಗೆ ಪರಿಚಯ ಮಾಡಿಕೊಟ್ಟರು (ಡಾ.ಕೇಶವ್ ಬಿ.ಗಾವಂಕರ್ ಬರೆದಿರುವ ಶಿಲಧಿ ಪುಸ್ತಕವನ್ನು ಸಾಯಿ ಭಕ್ತರು ಪರಿಶೀಲಿಸುವುದು). ಅಂದಿನಿಂದ ಶಿರಡಿಯ ಎಲ್ಲ ಗ್ರಾಮಸ್ಥರು "ಸಾಯಿಬಾಬಾ" ಎಂದು ಕರೆಯಲು ಪ್ರಾರಂಭಿಸಿದರು.

ಖಂಡೋಬ ಮಂದಿರದಲ್ಲಿರುವ ಸಾಯಿ ಪಾದುಕೆ
ಶ್ಯಾಮಕರ್ಣನ ವಿಗ್ರಹ 

ಮಹಲ್ಸಾಪತಿ ಮತ್ತು ಕಾಶೀರಾಂ ರವರು ಸಾಯಿಬಾಬಾರವರನ್ನು ಮಸೀದಿಯಲ್ಲಿರುವಂತೆ ಏರ್ಪಾಡು ಮಾಡಿ ಸಾಯಿಯವರ ಎಲ್ಲಾ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಮಹಲ್ಸಾಪತಿಯವರಿಗೆ ಸಾಯಿಬಾಬಾರವರ ದೈವತ್ವ ಬಹಳ ಚೆನ್ನಾಗಿ ಅರಿವಾಗಿತ್ತು. ಆದುದರಿಂದ ಅವರು ಸಾಯಿಯವರನ್ನು ಕಡೆಯವರೆಗೂ ಬಿಟ್ಟಿರಲಿಲ್ಲ. 

ಸಾಯಿಬಾಬಾರವರು ಉಪಾಸಿನಿಯವರನ್ನು ಸುಮಾರು 3 ವರ್ಷಗಳಿಗೂ ಹೆಚ್ಚು ಕಾಲ ಖಂಡೋಬ ಮಂದಿರದಲ್ಲಿರುವಂತೆ ಆಜ್ಞಾಪಿಸಿ ಅವರ ಅಧ್ಯಾತ್ಮಿಕ ಪ್ರಗತಿಗೆ ಸಹಕಾರಿಯಾಗುವಂತೆ ಮಾಡಿದರು. 1929 ರಲ್ಲಿ ಉಪಾಸಿನಿಯವರು ಸಾಯಿಬಾಬಾರವರು ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಿದ ಸಹಾಯಕ್ಕೆ ಕೃತಜ್ಞತಾಪೂರ್ವಕವಾಗಿ ಖಂಡೋಬ ಮಂದಿರವನ್ನು ಪುನರ್ ನಿರ್ಮಾಣ ಮಾಡಿ ರಾಜಗೋಪುರವನ್ನು ಕೂಡ ನಿರ್ಮಿಸಿದರು. 

ಖಂಡೋಬ ಮಂದಿರವು 15 ಅಡಿ ಉದ್ದ ಮತ್ತು 15 ಅಡಿ ಅಗಲವಿರುತ್ತದೆ. ದೇವಾಲಯದ ಒಳಗಡೆ ಮಧ್ಯಭಾಗದಲ್ಲಿ ಕಲ್ಲಿನ ಖಂಡೋಬ ದೇವರ ವಿಗ್ರಹವಿದೆ. ಮಹಲ್ಸಾ ವಿಗ್ರಹವು ಖಂಡೋಬನ ಎಡ ಭಾಗದಲ್ಲಿದೆ. ಮಹಲ್ಸಾ ವೈಶ್ಯ ಜಾತಿಯವಳಾಗಿದ್ದಳು. ಬನೈ ದೇವರ ವಿಗ್ರಹವು ಖಂಡೋಬನ ಬಲ ಭಾಗದಲ್ಲಿದೆ. ಇವಳು ಕುರುಬ ಜನಾಂಗಕ್ಕೆ ಸೇರಿದವಳಾಗಿದ್ದಳು. ಮಹಲ್ಸಾ ಮತ್ತು ಬನೈ ದೇವರುಗಳು ಪಾರ್ವತಿ ಮತ್ತು ಗಂಗೆಯ ಅವತಾರವೆಂದು ಹೇಳಲಾಗುತ್ತದೆ.

ಮಹಲ್ಸಾ, ಖಂಡೋಬ ಮತ್ತು ಬನೈ ದೇವರ ವಿಗ್ರಹಗಳು 

ಖಂಡೋಬ ದೇವರ ಎದುರುಗಡೆ ಎರಡು ಶಿವಲಿಂಗಗಳಿವೆ. ಮಹಲ್ಸಾ ದೇವರ ಎದುರುಗಡೆ ಒಂದು ಹುಲಿಯ ವಿಗ್ರಹವಿದೆ ಮತ್ತು ಬನೈ ದೇವರ ಎದುರುಗಡೆ ನಾಯಿಯ ವಿಗ್ರಹವಿದೆ. ಖಂಡೋಬ ಮಂದಿರದ ಬಾಗಿಲ ಎರಡು ಕಡೆಗಳಲ್ಲಿ ಕಬ್ಬಿಣದ ಸರಳುಗಳನ್ನು ಹಾಕಲಾಗಿದ್ದು ದೇವಾಲಯದ ಬಾಗಿಲು ಹಾಕಿದ್ದಾಗಲೂ ಕೂಡ ಭಕ್ತರು ಕಬ್ಬಿಣದ ಸರಳುಗಳ ಮುಖಾಂತರ ಖಂಡೋಬನ ದರ್ಶನ ಮಾಡುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ಪ್ರತಿದಿನ ಮಧ್ಯಾನ್ಹ 12 ಘಂಟೆಗೆ ಮತ್ತು ಸಂಜೆ 6 ಘಂಟೆಗೆ ಆರತಿಯನ್ನು ಮಾಡಲಾಗುತ್ತದೆ.  ಪ್ರತಿ ವರ್ಷ ಚಂಪಾ ಷಷ್ಠಿಯ ಸಂದರ್ಭದಲ್ಲಿ ದೊಡ್ಡ ಉತ್ಸವವನ್ನು ನಡೆಸಲಾಗುತ್ತದೆ. ಮಾರ್ಗಶೀರ್ಷ ಶುದ್ಧ ಷಷ್ಠಿ (ನವೆಂಬರ್- ಡಿಸೆಂಬರ್ ತಿಂಗಳು) ಯ ದಿನದಂದು ಸಾವಿರಾರು ಭಕ್ತರು ಮಂದಿರದಲ್ಲಿ ಸೇರುತ್ತಾರೆ. 12 ಅಡಿ ಉದ್ದದ ಉರಿಯುತ್ತಿರುವ ಇದ್ದಿಲಿನ ಗುಂಡಿಯಲ್ಲಿ ಬರಿ ಕಾಲಿನಲ್ಲಿ ನಡೆಯುತ್ತಾರೆ. ಈ ಚಂಪಾ ಷಷ್ಠಿಯ ಉತ್ಸವದ ಆಚರಣೆ 1950 ರಿಂದ ನಡೆದುಕೊಂಡು ಬಂದಿದೆ. ದೇವಾಲಯದ ಪೂಜಾರಿಯು ತಾನು ಕೂಡ ಉರಿಯುತ್ತಿರುವ ಬೆಂಕಿಯ ಮೇಲೆ ನಡೆಯುವ ಮುಖಾಂತರ ಉತ್ಸವಕ್ಕೆ ನಾಂದಿಯನ್ನು ಹಾಡುತ್ತಾರೆ. 

ಪ್ರತಿ ವರ್ಷದ ವಿಜಯದಶಮಿಯ ಪವಿತ್ರ ದಿನ ಈ ದೇವಾಲಯದಲ್ಲಿ ಸೀಮೋಲ್ಲಂಘನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. 

ಚಂಪಾಷಷ್ಟಿಯ ಹಿಂದಿರುವ ಪೌರಾಣಿಕ ಕಥೆ: 

ಮಾಲ ಮತ್ತು ಮಣಿ ಎಂಬ ಇಬ್ಬರು ರಾಕ್ಷಸರು ತಪಸ್ಸನ್ನಾಚರಿಸಿ ಬ್ರಹ್ಮನಿಂದ ಅಮರತ್ವದ ವರವನ್ನು ಪಡೆದಿರುತ್ತಾರೆ. ಹೀಗೆ ವರವನ್ನು ಪಡೆದ ಅವರು ಜನರನ್ನು ಸಾಯಿಸಲು ತೊಡಗಿ ಪ್ರಜಾ ಕಂಟಕರಾಗುತ್ತಾರೆ. ಆಗ ಶಿವನು  ಖಂಡೋಬನ ಅವತಾರವನ್ನು ತಾಳಿ ಈ ರಾಕ್ಷಸರನ್ನು ಸಂಹಾರ ಮಾಡುತ್ತಾನೆ. ಖಂಡೋಬನ ಹೆಂಡತಿ ಚಂಪಾ (ಆಲಿಯಾಸ್ ಮಹಲ್ಸಾ) ತನ್ನ ಪತಿಯ ಗೆಲುವಿಗಾಗಿ ತಪಸ್ಸನ್ನು ಆಚರಿಸುತ್ತಾಳೆ. ಅವಳು ತಪಸ್ಸನ್ನು ಆಚರಿಸಲು ಪ್ರಾರಂಭಿಸಿ ಸರಿಯಾಗಿ ಆರನೇ ದಿವಸ ಖಂಡೋಬನು ಆ ರಾಕ್ಷಸರ ಸಂಹಾರ ಮಾಡುತ್ತಾನೆ. ಚಂಪಾ ಆ ಸಂತೋಷಕ್ಕಾಗಿ ಎಲ್ಲರಿಗೂ ಬಾರಿ ಔತಣವನ್ನು ನೀಡುತ್ತಾಳೆ. ಅಂದಿನಿಂದ ಈ ದಿನವನ್ನು ಚಂಪಾಷಷ್ಠಿ ಎಂದು ಆಚರಿಸಲಾಗುತ್ತಿದೆ. ತಾನು ಮಾಡಿದ ಕಾರ್ಯದ ಪ್ರಾಯಶ್ಚಿತ್ತಕ್ಕಾಗಿ ಖಂಡೋಬ ದೇವರು ಆ ದಿನ ಉರಿಯುತ್ತಿರುವ ಇದ್ದಿಲಿನ ಗುಂಡಿಯಲ್ಲಿ ನಡೆದಾಡಿದನು ಎಂಬ ಪ್ರತೀತಿಯಿದೆ. 

ಖಂಡೋಬ ಮಂದಿರವು ಪ್ರತಿದಿನ ಬೆಳಗಿನ ಜಾವ 5:00 ಘಂಟೆಯಿಂದ ರಾತ್ರಿ 10:00 ಘಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿರುತ್ತದೆ.


ಖಂಡೋಬ ಮಂದಿರದ ಪ್ರಾಂಗಣದಲ್ಲಿರುವ ಪವಿತ್ರ ಆಲದ ಮರ  

ಈ ಪವಿತ್ರ ಆಲದ ಮರವು ಖಂಡೋಬ ಮಂದಿರದ ಪ್ರಾಂಗಣದಲ್ಲಿದೆ. ಈ ಮರವು ಚಾಂದ್ ಪಾಟೀಲ್ ರ ಮದುವೆ ದಿಬ್ಬಣವು ಶಿರಡಿಗೆ ಸಾಯಿಬಾಬಾರವರೊಂದಿಗೆ ಬಂದಿಳಿದಾಗ ಅವರಿಗೆ ನೆರಳನ್ನು ನೀಡಿತಷ್ಟೇ ಅಲ್ಲದೇ ಸಾಯಿಯವರು ಶಿರಡಿಗೆ ಬಂದಿಳಿದಿದ್ದಕ್ಕೆ ಸಾಕ್ಷಿಯಾಗಿ ನಿಂತಿರುತ್ತದೆ. ಈ ಆಲದ ಮರವು ಖಂಡೋಬ ಮಂದಿರದ ಬಲಭಾಗದಲ್ಲಿದೆ. ಈ ಮರದ ಕೆಳಗೆ ಸಾಯಿಬಾಬಾರವರ ಒಂದು ಚಿಕ್ಕ ವಿಗ್ರಹವನ್ನು ಅವರ ಪಾದುಕೆಗಳೊಂದಿಗೆ ಸಾಯಿಯವರು ಶಿರಡಿಗೆ ಮೊದಲಿಗೆ ಬಂದಿಳಿದ ನೆನಪಿಗಾಗಿ ಸ್ಥಾಪಿಸಲಾಗಿದೆ. 

ಚಾಂದ್ ಪಾಟೀಲರ ಮದುವೆ ದಿಬ್ಬಣವು ಮಹಲ್ಸಾಪತಿಯವರ ಹೊಲದಲ್ಲಿದ್ದ ಈ ಪವಿತ್ರ ಮರದ ಬುಡದಲ್ಲಿ ಬಂದು ಇಳಿಯಿತು. ಮದುವೆ ದಿಬ್ಬನದವರು ಒಬ್ಬೊಬ್ಬರಾಗಿ ಈ ಮರದ ಬುಡದಲ್ಲಿ ಇಳಿದರು. ಈ ಫಕೀರನು ಕೂಡ ಈ ಮರದ ಬುಡದಲ್ಲಿ ಬಂದು ಇಳಿದನು. ಮಹಲ್ಸಾಪತಿಯವರು ಈ ಯುವ ಫಕೀರನ್ನು ನೋಡಿ "ಆವೋ ಸಾಯಿ" ಎಂದು ಸಂಬೋಧಿಸಿದರು.  ಅಂದಿನಿಂದ ಶಿರಡಿಯ ಜನರೆಲ್ಲರೂ ಇವರನ್ನು ಸಾಯಿಬಾಬಾ ಎಂದು ಕರೆಯಲು ಪ್ರಾರಂಭ ಮಾಡಿದರು (ಸಾಯಿ ಸಚ್ಚರಿತ್ರೆ 5ನೇ ಅಧ್ಯಾಯ).

 ಖಂಡೋಬ ಮಂದಿರದ ಪ್ರಾಂಗಣದಲ್ಲಿರುವ ಪವಿತ್ರ ಆಲದ ಮರ 

ಶಿರಡಿಯಲ್ಲಿ ಈ ಪವಿತ್ರ ಆಲದ ಮರದ ಬಳಿ ವಟ ಪೂರ್ಣಿಮಾ ವ್ರತವನ್ನು ಆಚರಿಸುತ್ತಾರೆ. ಸ್ಕಂದ ಪುರಾಣದಲ್ಲಿ ಈ ವ್ರತದ  ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಸಾವಿತ್ರಿಯ ಪತಿ ಸತ್ಯವಾನ ಸಾವಿತ್ರಿ ತಡವಾಗಿ ಬಂದಿದ್ದರಿಂದ ಮರಣ ಹೊಂದಿದ್ದನು. ಆಗ ಸಾವಿತ್ರಿಯು ಯಮಧರ್ಮನೊಡನೆ ವಾದ ಮಾಡಿ ತನ್ನ ಪತಿಯ ಪ್ರಾಣವನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಆದುದರಿಂದ ಮದುವೆಗೆ ಇರುವ ಹೆಣ್ಣು ಮಕ್ಕಳು ಮತ್ತು ಮದುವೆಯಾದ ಹೆಣ್ಣು ಮಕ್ಕಳು ಈ ಪವಿತ್ರ ಮರದ ಬಳಿ ವಟ ಪೂರ್ಣಿಮಾ ವ್ರತ ಆಚರಿಸಿ ತಮಗೆ ಉತ್ತಮ ಪತಿ ದೊರೆಯಲು ಮತ್ತು ತಮ್ಮ ಪತಿಗೆ ಧೀರ್ಘಾಯಸ್ಸು ನೀಡಲೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಈ ವ್ರತದಲ್ಲಿ ಹೆಣ್ಣು ಮಕ್ಕಳು ಆಲದ ಮರದ ಸುತ್ತಾ ಬಿಳಿಯ ದಾರವನ್ನು ಸುತ್ತುತ್ತಾ ಪ್ರದಕ್ಷಿಣೆಯನ್ನು ಮಾಡುವ ರೂಢಿಯಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment