Wednesday, July 14, 2010

ಶಿರಡಿಯಲ್ಲಿ ಆಚರಿಸುವ ಉತ್ಸವಗಳು ಮತ್ತು ಹಬ್ಬಗಳು - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ

ಶಿರಡಿ ಸಾಯಿಬಾಬಾ ಸಂಸ್ಥಾನದವರು ಎಲ್ಲ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ, ಪ್ರಮುಖವಾಗಿ ರಾಮನವಮಿ, ಗುರುಪೂರ್ಣಿಮಾ ಹಾಗೂ ವಿಜಯದಶಮಿಯನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಈ ಮೂರು ಹಬ್ಬಗಳನ್ನು ೩ ದಿನಗಳ ಉತ್ಸವವಾಗಿ ಆಚರಿಸುತ್ತಾರೆ. ಆ ದಿನಗಳಂದು ದೇವಸ್ಥಾನದ ಒಳಗೆ ಮತ್ತು ಹೊರಗೆ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ, ದೇವಾಲಯದ ಪ್ರಾಂಗಣವನ್ನು ಬೃಹತ್ ಶಾಮಿಯಾನದಿಂದ ಮುಚ್ಚುತ್ತಾರೆ. ಇಡೀ ಶಿರಡಿ ದೇವಾಲಯವು ಸ್ವರ್ಗದಂತೆ ಭಾಸವಾಗುವಂತೆ ಶೃಂಗರಿಸುತ್ತಾರೆ. ಪ್ರತಿದಿನ ಸಾಯಂಕಾಲ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸಂಗೀತಗಾರರಿಂದ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. 

೧ ನೇ ದಿನದ ಕಾರ್ಯಕ್ರಮಗಳು

೧. ಸಾಯಿ ಸಚ್ಚರಿತೆಯ ಅಖಂಡ ಪಾರಾಯಣ: 

ಸಾಯಿ ಸಚ್ಚರಿತೆಯ ಪಾರಾಯಣ ಮಾಡಲು ಇಚ್ಚಿಸುವ ಸಾಯಿಭಕ್ತರು ಒಂದು ದಿನ ಮುಂಚಿತವಾಗಿ ತಮ್ಮ ಹೆಸರನ್ನು ದೇವಸ್ಥಾನದ ಕಚೇರಿಯಲ್ಲಿ ನೊಂದಾಯಿಸತಕ್ಕದ್ದು. ಅಂದೇ ಸಂಜೆಯ ಧೂಪಾರತಿಯ ನಂತರ ಲಾಟರಿ ಮುಖಾಂತರ ಎತ್ತಲಾಗುವುದು. ಲಾಟರಿಯ ಮುಖಾಂತರ ಆಯ್ಕೆಯಾದ ಭಕ್ತರ ಹೆಸರು ಮತ್ತು ಅವರಿಗೆ ನಿಗದಿಪಡಿಸಿದ ಅಧ್ಯಾಯವನ್ನು ಮೈಕಿನಲ್ಲಿ ಹೇಳುತ್ತಾರೆ. ಈ ರೀತಿಯಲ್ಲಿ ೫೩ ಅಧ್ಯಾಯಗಳನ್ನು ಎಲ್ಲರಿಗೂ ನಿಗದಿಪಡಿಸುತ್ತಾರೆ ಮತ್ತು  ಸಚ್ಚರಿತೆ ಪಾರಾಯಣಕ್ಕೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ೫ ಜನ ಹೆಚ್ಚುವರಿ ಭಕ್ತರ ಹೆಸರನ್ನು ಕೂಡ ಹೇಳುತ್ತಾರೆ. ಆಲ್ಲದೇ, ಪಾರಾಯಣಕ್ಕೆ ಆಯ್ಕೆಯಾದವರ ಹೆಸರುಗಳನ್ನು ದೇವಸ್ಥಾನದ ಎಲ್ಲ ಪ್ರಮುಖ ಸ್ಥಳಗಳಲ್ಲಿ ನೋಟಿಸ ಬೋರ್ಡ್ ನಲ್ಲಿ ಲಗತ್ತಿಸುತ್ತಾರೆ. 

ಬೆಳಗಿನ ಕಾಕಡ ಆರತಿಯ ನಂತರ ಸಾಯಿಬಾಬಾರವರ ಭಾವಚಿತ್ರ ಮತ್ತು ಪೋತಿಯನ್ನು ಸಮಾಧಿ ಮಂದಿರದಿಂದ ಮೆರವಣಿಗೆಯಲ್ಲಿ ಗುರುಸ್ಥಾನದ ಮಾರ್ಗವಾಗಿ ದ್ವಾರಕಾಮಾಯಿಗೆ ತರಲಾಗುತ್ತದೆ. ದ್ವಾರಕಾಮಾಯಿಯಲ್ಲಿ ಒಂದು ಬೆಳ್ಳಿಯ ಮಂಟಪದಲ್ಲಿ ಸಾಯಿಯವರ ಭಾವಚಿತ್ರವನ್ನು ಮತ್ತು ಪೋತಿಯನ್ನು ಇರಿಸಲಾಗುತ್ತದೆ ಮತ್ತು ಲಘು ಆರತಿ ಅಥವಾ ಚೋಟ ಆರತಿ ಬೆಳಗುತ್ತಾರೆ. ನಂತರ ಸಾಯಿ ಸಚ್ಚರಿತೆ ಪಾರಾಯಣ ಆರಂಭವಾಗುತ್ತದೆ. ಅಖಂಡ ಪಾರಾಯಣವಾದುದರಿಂದ ದ್ವಾರಕಾಮಾಯಿಯು ರಾತ್ರಿಯಿಡಿ ತೆರೆದಿರುತ್ತದೆ. ಮಾರನೇ ದಿನ ಬೆಳಗಿನ ಜಾವ ಪಾರಾಯಣ ಮುಗಿಯುತ್ತದೆ. ಪುನಃ ಸಾಯಿಬಾಬಾರವರ ಭಾವಚಿತ್ರ ಮತ್ತು ಪೋತಿಯನ್ನು ದ್ವಾರಕಾಮಾಯಿಯಿಂದ ಸಮಾಧಿ ಮಂದಿರಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. 

೨. ಪಲ್ಲಕ್ಕಿ ಉತ್ಸವ 

ಪಲ್ಲಕ್ಕಿ ಉತ್ಸವವು ರಾತ್ರಿ ೮:೪೫ ಕ್ಕೆ  ಆರಂಭವಾಗುತ್ತದೆ. ಶಿರಡಿ ಗ್ರಾಮದ ಸುತ್ತಾ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಿ ಸಮಾಧಿ ಮಂದಿರಕ್ಕೆ ವಾಪಸ್ ತರುತ್ತಾರೆ. ಆ ನಂತರ ರಾತ್ರಿಯ ಶೇಜಾರತಿ ನಡೆಯುತ್ತದೆ.
  
೨ ನೇ  ದಿನದ ಕಾರ್ಯಕ್ರಮಗಳು 

ಈ ದಿನವೇ ಉತ್ಸವದ ಮುಖ್ಯ ದಿವಸ ಅಥವಾ ಮಧ್ಯ ದಿವಸ ಎಂದು ಕರೆಯುತ್ತಾರೆ. ಈ ದಿನ ಶಿರಡಿ ಗ್ರಾಮದ ಸುತ್ತಾ ಸಾಯಿಬಾಬಾರವರ ರಥೋತ್ಸವ ನಡೆಸುತ್ತಾರೆ. ಈ ದಿನ ರಾತ್ರಿಯ ಶೇಜಾರತಿ ಇರುವುದಿಲ್ಲ. ಸಮಾಧಿ ಮಂದಿರವನ್ನು ರಾತ್ರಿಯಿಡಿ ಸಾಯಿಭಕ್ತರ ದರ್ಶನಕ್ಕಾಗಿ ತೆರೆದಿಡುತ್ತಾರೆ. 

೩ ನೇ ದಿನದ ಕಾರ್ಯಕ್ರಮಗಳು 
ಈ ದಿನ ಬೆಳಗಿನ ಜಾವದ ಕಾಕಡ ಆರತಿ ಇರುವುದಿಲ್ಲ. ಈ ದಿನದ ವಿಶೇಷವೆಂದರೆ ಗೋಪಾಲಕಾಲಾ  ಆಚರಿಸುತ್ತಾರೆ.  ಈ ದಿನ ಬೆಳಗಿನ ಜಾವ ಹರಿಯ ಕೀರ್ತನೆಯನ್ನು ಆರಂಭಿಸಿ ಗೋಪಾಲ ಕೀರ್ತನೆಯೊಂದಿಗೆ ಕಾರ್ಯಕ್ರಮ ಮುಗಿಸುತ್ತಾರೆ. ಗೋಪಾಲಕಾಲದೊಂದಿಗೆ ೩ ದಿನಗಳ ಉತ್ಸವ ಮುಗಿಯುತ್ತದೆ. ಆ ದಿನ ಸಮಾಧಿ ಮಂದಿರದಲ್ಲಿ ಮೊಸರಿನ ಗಡಿಗೆಯನ್ನು ಎತ್ತರದಲ್ಲಿ ತೂಗು ಹಾಕುತ್ತಾರೆ. ಸಾಯಿಬಾಬಾ ಸಂಸ್ಥಾನದವರು ಅದನ್ನು ಒಡೆಯುವ ಕಾರ್ಯವನ್ನು ತಾತ್ಯಾ ಕೋತೆ ಪಾಟೀಲರ ವಂಶಸ್ಥರಿಗೆ ನೀಡುತ್ತಾ ಬಂದಿದ್ದಾರೆ. ಅದರ ಪ್ರಸಾದವನ್ನು ಅಲ್ಲಿ ನೆರೆದಿರುವ ಸಾಯಿಭಕ್ತರಿಗೆ ಹಂಚುತ್ತಾರೆ. ಗೋಪಾಲಕಾಲಾ  ಮುಗಿದ ನಂತರ ಮಧ್ಯಾನ್ಹ ಆರತಿ ನಡೆಯುತ್ತದೆ. ಅಲ್ಲಿಗೆ ೩ ದಿನಗಳ ಉತ್ಸವ ಮುಗಿಯುತ್ತದೆ. 

ರಾಮನವಮಿ ಉತ್ಸವ 

ಪ್ರತಿ ವರ್ಷ ಚೈತ್ರ ಮಾಸದಲ್ಲಿ ರಾಮನವಮಿ ಉತ್ಸವವನ್ನು ಬಹಳ ವೈಭವದಿಂದ ಸಾಯಿಬಾಬಾ ಸಂಸ್ಥಾನದವರು ನಡೆಸುತ್ತಾರೆ. ಶಿರಡಿಯಲ್ಲಿ ರಾಮನವಮಿ ಉತ್ಸವವು ಪ್ರಥಮ ಬಾರಿಗೆ ೧೯೧೧ ರಲ್ಲಿ ಜರುಗಿತು. ರಾಮನವಮಿಯ ದಿನ ಉರುಸ್ ನಡೆಸಲು ತೀರ್ಮಾನ ಮಾಡಿ ಭೀಷ್ಮರವರು ಕಾಕಾ ಮಹಾಜನಿಯವರೊಡನೆ ಸಮಾಲೋಚಿಸಿದರು. ಈ ವಿಷಯವನ್ನು ಸಾಯಿಬಾಬಾರವರೊಡನೆ ಚರ್ಚೆ ಮಾಡಿ ಅವರ ಒಪ್ಪಿಗೆ ಪಡೆದು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ರಾಮನವಮಿಯ ದಿನ ಉರುಸ್ ಕಾರ್ಯಕ್ರಮ ತಪ್ಪದೆ ನಡೆಯುತ್ತಿದೆ. ಹಿಂದೂ ಮತ್ತು ಮುಸ್ಲಿಂ ಭಾಂದವರು ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಲಕ್ಷಾಂತರ ಮಂದಿ  ದೇಶ ವಿದೇಶಗಳಿಂದ ಶಿರಡಿಗೆ ಬಂದು ರಾಮನವಮಿ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. 

೧ ನೇ ದಿನ : ಸಾಯಿ ಸಚ್ಚರಿತೆ ಅಖಂಡ ಪಾರಾಯಣ ಮತ್ತು ಪಲ್ಲಕ್ಕಿ ಉತ್ಸವ.

೨ ನೇ ದಿನ : ಉತ್ಸವದ ಮುಖ್ಯ ದಿವಸ. 
೫:೧೫  ಕಾಕಡ ಆರತಿ

೬:೦೦ ಅಖಂಡ ಪಾರಾಯಣ ಮುಕ್ತಾಯ 

೬: ೦೫  ಸಾಯಿಬಾಬಾರವರಿಗೆ ಮಂಗಳ ಸ್ನಾನ. ಸಾಯಿಭಕ್ತರು ಮತ್ತು ಶಿರಡಿ ಗ್ರಾಮ ವಾಸಿಗಳು ಕೋಪರ್ ಗಾವ್ ನಲ್ಲಿರುವ ಗೋದಾವರಿ ನದಿಯಿಂದ ಪವಿತ್ರ ಜಲವನ್ನು ತಂದು ಸಾಯಿಯವರ ವಿಗ್ರಹಕ್ಕೆ,ಸಮಾಧಿಗೆ ಮತ್ತು ಪಾದುಕೆಗಳಿಗೆ ಅಭಿಷೇಕವನ್ನು ತಾವೇ ಮಾಡಲು ಅವಕಾಶ ನೀಡಲಾಗುತ್ತದೆ. 

೮:೦೦ ರಿಂದ ೯:೦೦ ಘಂಟೆ - ಹೊಸ ಗೋಧಿಯ ಚೀಲವನ್ನು ಇಡುವ ಕಾರ್ಯಕ್ರಮ - ಹೊಸ ಗೋಧಿಯ ಚೀಲವನ್ನು ಸಮಾಧಿ ಮಂದಿರದಿಂದ ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ತರಲಾಗುತ್ತದೆ. ಹಳೆಯ ಗೋಧಿಯ ಚೀಲವನ್ನು ಪ್ರಸಾದಾಲಯಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹೊಸ ಗೋಧಿಯ ಚೀಲವನ್ನು ದ್ವಾರಕಾಮಾಯಿಯ ಬೀರುವಿನಲ್ಲಿ ಇಡಲಾಗುತ್ತದೆ. ಈ ಪದ್ದತಿಯನ್ನು ಬಾಲಾಜಿ ಪಾಟೀಲ್ ನೇವಾಸಕರ ಪ್ರಾರಂಭಿಸಿದರು. ಈಗ ಸಾಯಿಬಾಬಾ ಸಂಸ್ಥಾನದವರು ಇದೇ ಪದ್ದತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. 

 ಗೋಧಿಯ ಹಿಟ್ಟಿನ ಚೀಲವನ್ನು ಬದಲಾಯಿಸುತ್ತಿರುವ ದೃಶ್ಯ 

ಮಧ್ಯಾನ್ಹ ೧೨:೦೦ ಘಂಟೆ - ರಾಮನ ಜನನ - ಸಮಾಧಿ ಮಂದಿರದಲ್ಲಿ ರಾಮನ ಜನ್ಮವನ್ನು ನೆನಪು ಮಾಡಿಕೊಳ್ಳಲು ಒಂದು ತೊಟ್ಟಿಲನ್ನು ಕಟ್ಟುತ್ತಾರೆ. ಈ ತೊಟ್ಟಿಲನ್ನು ಮೊದಲ ರಾಮನವಮಿಯ ಸಂದರ್ಭದಲ್ಲಿ ರಾಧಾಕೃಷ್ಣ ಮಾಯಿ ನೀಡಿದ್ದರು. ಈ ಪದ್ದತಿಯನ್ನು ಹಾಗೆಯೇ  ಸಾಯಿಬಾಬಾ ಸಂಸ್ಥಾನದವರು ಮುಂದುವರಿಸಿಕೊಂಡು ಬಂದಿದ್ದಾರೆ. 

ಮಧ್ಯಾನ್ಹ ೧೨:೩೦ - ಮಧ್ಯಾನ್ಹ ಆರತಿ 

ಮಧ್ಯಾನ್ಹ ೨:೦೦ ರಿಂದ ೪:೦೦ ಘಂಟೆ - ಧ್ವಜಗಳನ್ನು ಬದಲಾಯಿಸುವ ಕಾರ್ಯಕ್ರಮ - ಸಾಯಿಬಾಬಾ ಸಂಸ್ಥಾನದವರು ಒಂದು ಧ್ವಜವನ್ನು ನೀಡುತ್ತಾರೆ. ಸುಂದರ ಕಸೂತಿ ಮಾಡಲ್ಪಟ್ಟ ಮತ್ತೊಂದು ಧ್ವಜವನ್ನು ದಾಮು ಅಣ್ಣಾ ವಂಶಸ್ಥರು ನೀಡುತ್ತಾರೆ. ನಿಮೋಣ್ಕರ್ ಕುಟುಂಬದವರು ಹಸಿರು ಧ್ವಜವನ್ನು ನೀಡುತ್ತಾರೆ. ಮಧ್ಯಾನ್ಹ ೨:೦೦ ಘಂಟೆಗೆ ಸರಿಯಾಗಿ ಸಂಸ್ಥಾನದವರು ತಮ್ಮ ಧ್ವಜವನ್ನು ಮೆರವಣಿಗೆಯಲ್ಲಿ ಸಮಾಧಿ ಮಂದಿರದಿಂದ ಪಿಲಾಜಿ ಗುರವ್ ಮನೆಯ ಮುಂದಿನ ಖಾಲಿ ಜಾಗಕ್ಕೆ ತರುತ್ತಾರೆ. ಹಸಿರು ಧ್ವಜ ಮತ್ತು ಕಸೂತಿ ಮಾಡಲ್ಪಟ್ಟ ಧ್ವಜಗಳನ್ನು ಒಂದು ಉದ್ದನೆಯ ಕೋಲಿನಲ್ಲಿ ಸಿಕ್ಕಿಸಿಕೊಂಡು ತುಕಾರಾಂ ಸುತಾರ್ ಮನೆಯಿಂದ ಪಿಲಾಜಿ ಗುರವ್ ಮನೆಯ ಮುಂದಿನ ಖಾಲಿ ಜಾಗಕ್ಕೆ ತರುತ್ತಾರೆ. ಅಲ್ಲಿ ೩ ಧ್ವಜಗಳಿಗೆ ಲಘು ಅಥವಾ ಚೋಟ ಆರತಿ ಬೆಳಗುತ್ತಾರೆ. ನಂತರ ೩ ಧ್ವಜಗಳನ್ನು ಶಿರಡಿಯ ಸುತ್ತಾ ಮೆರವಣಿಗೆ ಮಾಡಿ ದ್ವಾರಕಾಮಾಯಿಗೆ ತರುತ್ತಾರೆ.  ಆಗ ಮೆರವಣಿಗೆಯಲ್ಲಿ ನೃತ್ಯಪಟುಗಳು ಭಾಗವಹಿಸಿ ಸೊಗಸಾಗಿ ನೃತ್ಯ ಮಾಡುತ್ತಾರೆ. ಸಂಸ್ಥಾನದವರು ನೀಡುವ ಧ್ವಜವನ್ನು ದ್ವಾರಕಾಮಾಯಿಯ ಒಳಗಡೆ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ತೂಗು ಹಾಕಲಾಗುತ್ತದೆ. ಮಿಕ್ಕ ೨ ಧ್ವಜಗಳನ್ನು ದ್ವಾರಕಾಮಾಯಿಯ ಚಾವಣಿಯ ಮೇಲೆ ತೂಗು ಹಾಕುತ್ತಾರೆ. 

ರಾತ್ರಿ ೮:೪೫ - ಸಾಯಿಬಾಬಾರವರ ರಥೋತ್ಸವ

ರಾತ್ರಿ ೯:೦೦ ರಿಂದ ೧೦:೦೦ ಘಂಟೆ - ಚಂದನದ ಮೆರವಣಿಗೆ - ಸಾಯಿಬಾಬಾರವರು ಈ ಪದ್ದತಿಯನ್ನು ಪ್ರಾರಂಭಿಸಿದರು. ಒಂದು ತಟ್ಟೆಯಲ್ಲಿ ಚಂದನ ಮತ್ತು ಧೂಪವನ್ನು ಹಾಕಿಕೊಂಡು ಶಿರಡಿಯ ಗ್ರಾಮದ ಸುತ್ತಾ ಮೆರವಣಿಗೆಯಲ್ಲಿ ಬಂದು ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ಅಬ್ದುಲ್ ಬಾಬಾರವರ ಸಮಾಧಿ ಬಳಿಗೆ ತರಲಾಗುತ್ತದೆ. ನಂತರ ಮೆರವಣಿಗೆ ದ್ವಾರಕಾಮಾಯಿಗೆ ಬರುತ್ತದೆ. ಅಲ್ಲಿ ತಟ್ಟೆಯಲ್ಲಿರುವ ಚಂದನ ಮತ್ತು ಧೂಪವನ್ನು ಕೈಗಳಿಂದ ನಿಂಬಾರ್ ಗೆ ಬಳಿಯಲಾಗುತ್ತದೆ.


ರಾತ್ರಿ ೧೦:೦೦ ಘಂಟೆಯಿಂದ ಬೆಳಗಿನವರೆಗೆ - ವಿವಿಧ ಸಂಗೀತಗಾರರಿಂದ ಭಜನೆ ಕಾರ್ಯಕ್ರಮಗಳು ಬೆಳಗಿನ ಜಾವದವರೆಗೂ ನಡೆಯುತ್ತದೆ. ಇದರಲ್ಲಿ ಸಾಯಿಭಕ್ತರು ಭಾಗವಹಿಸಬಹುದು.

ರಾತ್ರಿ ೧೧:೦೦ ಘಂಟೆ - ಶೇಜಾರತಿ ಇರುವುದಿಲ್ಲ. ಸಮಾಧಿ ಮಂದಿರ ರಾತ್ರಿಯಿಡಿ ದರ್ಶನಕ್ಕೆ ತೆರೆದಿರುತ್ತದೆ.

೩ ನೇ ದಿನ - ಕಡೆಯ ದಿನ - ಕಾಕಡ ಆರತಿ ಇರುವುದಿಲ್ಲ. ಗೋಪಾಲಕಾಲಾ ಆಚರಣೆ ಮಾಡುತ್ತಾರೆ.

 ರಾಮನವಮಿಯ ಅಂಗವಾಗಿ ಸಮಾಧಿ ಮಂದಿರದಲ್ಲಿ ಕಟ್ಟಲಾಗಿರುವ ತೊಟ್ಟಿಲು 


ಗುರುಪೂರ್ಣಿಮಾ ಉತ್ಸವ

ಶ್ರೀ ಶಿರಡಿ ಸಾಯಿಬಾಬಾರವರೇ ತಮ್ಮ ಭಕ್ತರಿಗೆ ಸ್ವತಃ ಆಚರಿಸಲು ಆದೇಶ ನೀಡಿದ ಏಕೈಕ ಉತ್ಸವವಾದ ಕಾರಣ ಗುರುಪೂರ್ಣಿಮಾ ಉತ್ಸವವು ಹೆಚ್ಚಿನ ಮಹತ್ವವನ್ನು ಪಡೆದಿರುತ್ತದೆ. ಪ್ರತಿ ವರ್ಷದ ಆಷಾಢ ಮಾಸದಲ್ಲಿ (ಜೂನ್, ಜುಲೈ) ಬರುವ ಹುಣ್ಣಿಮೆಯಂದು ಗುರುಪೂರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ. ಶಿರಡಿಯಲ್ಲಿ 1910ರಲ್ಲಿ ಮೊದಲ ಬಾರಿಗೆ ಈ ಗುರುಪೂರ್ಣಿಮಾ ಉತ್ಸವವನ್ನು ಪ್ರಾರಂಭಿಸಿದರು. ಈ ಉತ್ಸವವನ್ನು ಪ್ರಾರಂಭಿಸಿದ ಕೀರ್ತಿ ತಾತ್ಯಾ ಸಾಹೇಬ್ ನೂಲ್ಕರ್ ಮತ್ತು ದಾದಾ ಕೇಳ್ಕರ್ ರವರಿಗೆ ಗೆ ಸಲ್ಲುತ್ತದೆ. ನೂಲ್ಕರ್ ರವರು ನಾನಾ ಸಾಹೇಬ್ ಚಂದೋರ್ಕರ್ ರವರಿಗೆ ಬರೆದಿರುವ ಪತ್ರದಲ್ಲಿ ಸಾಯಿಯವರು ಹೇಗೆ ತಾನು ಗುರುಪೂಜೆ ಮಾಡಲು ಒಪ್ಪಿಗೆ ನೀಡಿದರು ಎಂದು ವಿವರಿಸಿದ್ದಾರೆ. ಆ ದಿನ ಶನಿವಾರವಾಗಿದ್ದು ತಾತ್ಯಾ ಸಾಹೇಬ್ ನೂಲ್ಕರ್ ರವರು ಹಾಸಿಗೆಯಿಂದ್ ಏಳುತ್ತಲೇ ಅಂದು ಗುರುಪೂರ್ಣಿಮಾ ದಿನವಾದ ಕಾರಣ ಗುರುಪೂಜೆಯನ್ನು ಮಾಡಬೇಕೆಂದು ಸಂಕಲ್ಪ ಮಾಡಿ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡರು. ಬಾಬಾರವರು ಎಂದಿನಂತೆ ತಮ್ಮ ಭಿಕ್ಷೆಯನ್ನು ಮುಗಿಸಿಕೊಂಡು ದ್ವಾರಕಾಮಾಯಿಗೆ ವಾಪಸ್ ಬಂದ ನಂತರ ಅವರಿಗೆ ಪ್ರಾರ್ಥನೆ ಮಾಡಿಕೊಳ್ಳಲಾಗಿ ಅವರು ಒಂದು ಮಾತನ್ನು ಸಹ ಆಡದೆ ಗುರುಪೂಜೆ ಮಾಡಲು ಅನುಮತಿ ನೀಡಿದರು ಮತ್ತು ಪೂಜೆಯ ಸಮಯದಲ್ಲಿ ನೀಡಿದ ಎಲ್ಲಾ ದಕ್ಷಿಣೆಯನ್ನು ಪೂಜೆ ಮುಗಿದ ನಂತರ ವಾಪಸ್ ಹಿಂತಿರುಗಿಸಿದರು. ನಂತರ ಬಾಬಾರವರ ಆಜ್ಞೆಯ ಮೇರೆಗೆ ತಾತ್ಯಾ ಸಾಹೇಬ್ ನೂಲ್ಕರ್ ರವರು ರಾಧಾಕೃಷ್ಣ ಮಾಯಿ ಮತ್ತು ದಾದಾ ಕೇಳ್ಕರ್ ರವರಿಗೆ ದ್ವಾರಕಾಮಾಯಿಯಲ್ಲಿ ಆರತಿ ನಡೆಯುತ್ತಿದೆ ಎಂದು ಹೇಳಿ ಬೇಗನೆ ಬರುವಂತೆ ಹೇಳಿ ಕಳುಹಿಸಿದರು. ಅಂತೆಯೇ ರಾಧಾಕೃಷ್ಣ ಮಾಯಿ ಹಾಗೂ ದಾದಾ ಕೇಳ್ಕರ್ ರವರು ಪೂಜಾ ಸಾಮಗ್ರಿಗಳೊಡನೆ ದ್ವಾರಕಾಮಾಯಿಗೆ ಬಂದು ಪೂಜೆ ಹಾಗೂ ಆರತಿಯಲ್ಲಿ ಭಾಗವಹಿಸಿದರು. ಅಂದಿನಿಂದ ಸಾಯಿಭಕ್ತರೆಲ್ಲರೂ ಸೇರಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಗುರುಪೂರ್ಣಿಮಾ ಉತ್ಸವವನ್ನು ತಪ್ಪದೆ ಆಚರಿಸಿಕೊಂಡು ಬರುತ್ತಿದ್ದಾರೆ. ಇದರ ಸಂಪೂರ್ಣ ವಿವರಗಳಿಗಾಗಿ ಸಾಯಿ ಭಕ್ತರು ಸಾಯಿಬಾಬಾ ಸಂಸ್ಥಾನದವರು ಹೊರಡಿಸಿರುವ ಸಾಯಿಲೀಲಾ ಪತ್ರಿಕೆ- ಮೇ-ಆಗಸ್ಟ್ 1991ನೇ ಇಸವಿಯ ಸಂಚಿಕೆಯನ್ನು ನೋಡಬಹುದು.

ಶಿರಡಿಯಲ್ಲಿ ಈ ಉತ್ಸವವನ್ನು 3 ದಿನಗಳ ಕಾಲ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಅದರ ವಿವರ ಈ ಕೆಳಕಂಡಂತೆ ಇದೆ:

1ನೇ ದಿನ : ಸಾಯಿ ಸಚ್ಚರಿತ್ರೆ ಅಖಂಡ ಪಾರಾಯಣ. ಶಿರಡಿ ಗ್ರಾಮದ ಸುತ್ತಾ ಪಲ್ಲಕ್ಕಿ ಉತ್ಸವ. ದ್ವಾರಕಾಮಾಯಿಯು ರಾತ್ರಿಯಿಡಿ ತೆರೆದಿರುತ್ತದೆ.

2ನೇ ದಿನ -ಮುಖ್ಯ ದಿವಸ - ಶಿರಡಿ ಗ್ರಾಮದಲ್ಲಿ ಸಾಯಿಬಾಬಾರವರ ರಥೋತ್ಸವ ಜರುಗುತ್ತದೆ. ಅಂದು ಶೇಜಾರತಿ ಇರುವುದಿಲ್ಲ ಹಾಗೂ ಸಮಾಧಿ ಮಂದಿರವು ರಾತ್ರಿಯಿಡೀ ದರ್ಶನಕ್ಕೆ ತೆರೆದಿರುತ್ತದೆ.

3ನೇ ದಿನ - ಕೊನೆಯ ದಿವಸ - ಕಾಕಡಾ ಆರತಿ ಇರುವುದಿಲ್ಲ. ಗೋಪಾಲಕಾಲಾ ಉತ್ಸವವು ಜರುಗುತ್ತದೆ. ಇದರೊಂದಿಗೆ 3 ದಿನಗಳ ಉತ್ಸವ ಸಂಪೂರ್ಣಗೊಳ್ಳುತ್ತದೆ.



ದ್ವಜವನ್ನು ಬದಲಿಸುತ್ತಿರುವುದು ಮತ್ತು ದ್ವಾರಕಮಾಯಿಯಲ್ಲಿ ಅಖಂಡ ಪಾರಾಯಣ ಮಾಡುತ್ತಿರುವ ದೃಶ್ಯ  

ವಿಜಯದಶಮಿ  

೧೯೧೮ ರ ಆಶ್ವಯುಜ ಮಾಸದ (ಸೆಪ್ಟೆಂಬರ್ - ಅಕ್ಟೋಬರ್) ದಕ್ಷಿಣಾಯನದ ಮೊದಲನೆಯ ದಿನ ಹಿಂದೂಗಳ ಪವಿತ್ರ ದಿನವಾದ ವಿಜಯದಶಮಿಯಂದು ಮತ್ತು ಮುಸ್ಲಿಮರ ಪವಿತ್ರ ಮೊಹರಂ ಮಾಸದ ೯ ನೇ ತಿಂಗಳ ೯ ನೇ ದಿವಸವಾದ ೧೫ ನೇ ಅಕ್ಟೋಬರ್ ೧೯೧೮ ಮಧ್ಯಾನ್ಹ ೦೨.೩೫ ನಿಮಿಷಕ್ಕೆ ಸರಿಯಾಗಿ ಸಾಯಿಬಾಬಾರವರು ಸ್ವಸಮಾಧಿಯನ್ನು ಹೊಂದಿದರು. ಆಗ ತಾನೇ ದಶಮಿ ತಿಥಿಯು ಮುಗಿದು ಏಕಾದಶಿ ಪ್ರಾರಂಭವಾಗಿತ್ತು. 

ಸಾಯಿಯವರ ಮಹಾಸಮಾಧಿಗೆ ೪ ತಿಂಗಳ ಮುಂಚೆ ಸಾಯಿಬಾಬಾರವರು ಬಡೇ ಬಾಬಾ ರವರ ಮಕ್ಕಳಾದ ಇಮಾಂ ಭಾಯಿ ಚೋಟೆ ಖಾನ್ ಮತ್ತು ಖಾಸಿಂ ರನ್ನು ಔರಂಗಾಬಾದ್ ನ ಮೌಲ್ವಿಯಾದ ಶಂಸುದ್ದೀನ್ ಮಿಯಾರ ಬಳಿಗೆ ೨೫೦/- ರುಪಾಯಿಗಳನ್ನು ಕೊಟ್ಟು ಕಳುಹಿಸಿ ಮೌಲು, ಕವಾಲಿ ಹಾಗೂ ನ್ಯಾಸ್ ಮಾಡುವಂತೆ ಹೇಳಿದರು. ಅಲ್ಲಿಂದ ಅವರನ್ನು ಬನ್ನೇ ಮಿಯಾ ಬಳಿಗೆ ಹೋಗಿ ಅವರಿಗೆ ಹಾರ ತುರಾಯಿಗಳನ್ನು ಅರ್ಪಿಸಿ "ನವ್ ದಿನ್ ನವ್ ತಾರಿಕ್ ಅಲ್ಲಾ ಮಿಯಾನೆ ಅಪ್ನ ಧುನಿಯಾ ಲೆಗಯಾ, ಮಿರ್ಜಿ ಅಲ್ಲಾಕಿ" ಎಂದು ಹೇಳುವಂತೆ ತಿಳಿಸಿದರು.

ಆದ್ದರಿಂದ, ಅಂದಿನಿಂದ ವಿಜಯದಶಮಿಯ ದಿನವನ್ನು ಸಾಯಿಯವರ ಮಹಾಸಮಾಧಿ ದಿನವನ್ನಾಗಿ ಸಾಯಿಬಾಬಾ ಸಂಸ್ಥಾನದವರು ಆಚರಿಸುತ್ತಾ ಬಂದಿದ್ದಾರೆ. 

೧ ನೇ ದಿನ : ಸಾಯಿ ಸಚ್ಚರಿತೆ ಅಖಂಡ ಪಾರಾಯಣ, ಶಿರಡಿ ಗ್ರಾಮದ ಸುತ್ತಾ ಸಾಯಿಬಾಬಾರವರ ರಥದ ಉತ್ಸವ. ದ್ವಾರಕಾಮಾಯಿಯು ರಾತ್ರಿಯಿಡಿ ತೆರೆದಿರುತ್ತದೆ.

೨ ನೇ ದಿನ - ಭಿಕ್ಷಾ ಕಾರ್ಯಕ್ರಮ - ಒಂದು ದಿನ ಮುಂಚಿತವಾಗಿ ಭಿಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾಯಿ ಭಕ್ತರು ಸಾಯಿಬಾಬಾ ಸಂಸ್ಥಾನದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಲಾಟರಿಯ ಮುಖಾಂತರ ಆಯ್ಕೆಯಾದವರ ಹೆಸರನ್ನು ಆ ದಿನವೇ ಪ್ರಕಟಿಸಲಾಗುವುದು. ಭಿಕ್ಷಾ ಕಾರ್ಯಕ್ರಮಕ್ಕೆ ಆಯ್ಕೆಯಾದ ಸಾಯಿಭಕ್ತರೆಲ್ಲಾ ಅಂದು ಬೆಳಗಿನ ಜಾವ ೮:೦೦ ಘಂಟೆಗೆ ಸಮಾಧಿ ಮಂದಿರಕ್ಕೆ ಬಂದು ಸೇರುತ್ತಾರೆ. ಅವರುಗಳಿಗೆ ಹಾರವನ್ನು ಹಾಕಿ ಭಿಕ್ಷಾ ಜೋಳಿಗೆಗಳನ್ನು ಕೊಡಲಾಗುತ್ತದೆ. ಅಲ್ಲಿಂದ ಅವರುಗಳನ್ನು ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ಕರೆತರಲಾಗುತ್ತದೆ. ದ್ವಾರಕಾಮಾಯಿಯಲ್ಲಿ ಪೂಜೆಯಾದ ನಂತರ  ಅವರುಗಳನ್ನು ಸಾಯಿಬಾಬಾರವರು ಭಿಕ್ಷೆ ಪಡೆಯುತ್ತಿದ್ದ ೫ ಮನೆಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಅನೇಕ ಸಾಯಿಭಕ್ತರು ಇವರುಗಳಿಗೆ ಭಿಕ್ಷೆ ನೀಡುತ್ತಾರೆ ಮತ್ತು ಇವರುಗಳು ಭಿಕ್ಷೆ ನೀಡಿದ ಸಾಯಿಭಕ್ತರಿಗೆ ಜೋಳಿಗೆಯಿಂದ ತೆಗೆದು ಸ್ವಲ್ಪವನ್ನು ಸಾಯಿಬಾಬಾ ಪ್ರಸಾದವೆಂದು ನೀಡುತ್ತಾರೆ.

ಮಧ್ಯಾನ್ಹ ೪:೦೦ ಘಂಟೆ - ಸೀಮೋಲ್ಲಂಘನ - ಶಿರಡಿಯ ಗ್ರಾಮದ ಸುತ್ತಾ ಮೆರವಣಿಗೆ ನಡೆಯುತ್ತದೆ. ಇಡೀ ರಾತ್ರಿ ಸಮಾಧಿ ಮಂದಿರದಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತದೆ. ಸಮಾಧಿ ಮಂದಿರವನ್ನು ರಾತ್ರಿಯಿಡಿ ದರ್ಶನಕ್ಕಾಗಿ ತೆರೆದಿರಲಾಗುತ್ತದೆ. 

೩ ನೇ ದಿನ - ಕಡೆಯ ದಿನ - ಕಾಕಡ ಆರತಿ ಇರುವುದಿಲ್ಲ. ಗೋಪಾಲಕಾಲಾ ಕಾರ್ಯಕ್ರಮ ನಡೆಯುತ್ತದೆ.

ಗೋಪಾಲಕಾಲ ಕಾರ್ಯಕ್ರಮದ ದೃಶ್ಯ

No comments:

Post a Comment