Saturday, July 24, 2010

ಸಾಯಿಭಕ್ತರೊಬ್ಬರ "ಹುಳಿತೇಗು" ತೊಂದರೆಯನ್ನು ನಿವಾರಿಸಿದ ಶಿರಡಿ ಸಾಯಿಬಾಬಾ ಲೀಲೆ - ಕೃಪೆ - ಡಾ.ಶಿವಚರಣ್

ಇದು ನನ್ನ ಸ್ವಂತ ಅನುಭವ. ನಾನು ಚಿಕ್ಕ ವಯಸ್ಸಿನಲ್ಲೇ ಮನೆಯ ಆರ್ಥಿಕ ತೊಂದರೆಯನ್ನು ನಿವಾರಿಸಲು ಸೇಲ್ಸ್ ಕೆಲಸವನ್ನು ಸೇರಿಕೊಂಡೆ. ಕೆಲಸದ ನಿಮಿತ್ತವಾಗಿ ಯಾವಾಗಲೂ ತಿರುಗಾಡುತ್ತಿದ್ದರಿಂದ ಆರೋಗ್ಯ ಹದಗೆಟ್ಟಿತು. ನನಗೆ ತೀವ್ರವಾದ ಹೊಟ್ಟೆ ಉರಿ ಕಾಣಿಸಿಕೊಂಡು ಏನು ತಿನ್ನಲು ಆಗುತ್ತಿರಲಿಲ್ಲ ಮತ್ತು ತಿಂದರೆ ಹುಳಿತೇಗು ಬಂದು ಬಹಳ ಯಾತನೆಯಾಗುತ್ತಿತ್ತು.  ಪ್ರತಿದಿನ ೨೦ ಕ್ಕೂ ಹೆಚ್ಚು "ಜೆಲುಸಿಲ್" ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ನಾನು ಅನೇಕ ವಿಧವಾದ ಔಷಧಗಳನ್ನು ತೆಗೆದುಕೊಂಡೆ. ಆದರೆ ಯಾವುದೇ ಗುಣ ಕಾಣಲಿಲ್ಲ. ಇದೇ ರೀತಿ ೫ ವರ್ಷಗಳನ್ನು ಕಳೆದೆ.

೧೯೯೮ ರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಯೊಂದಿಗೆ ಶಿರಡಿಗೆ ತೆರಳಿದೆ. ಬೆಳಗಿನ ದರ್ಶನದ ನಂತರ ನಾವು ದ್ವಾರಕಾಮಾಯಿಗೆ ದರ್ಶನಕ್ಕೆ ಹೋದೆವು. ಅಲ್ಲಿ ಸಾಯಿಬಾಬಾರವರ ದೊಡ್ಡ ಫೋಟೋವನ್ನು ತೂಗುಹಾಕಿದ್ದರು. ಆ ಫೋಟೋಕ್ಕೆ ಒಂದು ದೊಡ್ಡ ಗುಲಾಬಿ ಹಾರವನ್ನು ಹಾಕಿದ್ದರು. ಆ ದಿನಗಳಲ್ಲಿ ನಾವು ಫೋಟೋವನ್ನು ಮುಟ್ಟಲು ಹಾಗೂ ಅಲ್ಲಿಯೇ ಕುಳಿತುಕೊಳ್ಳಲು ಕೂಡ ಬಿಡುತ್ತಿದ್ದರು. ಕ್ಯುನಲ್ಲಿ ನನ್ನ ಮುಂದೆ ಕೆಲವು ಹೆಂಗಸರಿದ್ದರು. ಅವರೆಲ್ಲರೂ ಸಾಯಿಬಾಬಾರವರ ಫೋಟೋಕ್ಕೆ ವಂದಿಸಿ ಅಲ್ಲಿದ್ದ ಗುಲಾಬಿ ಹಾರದಿಂದ ಒಂದೊಂದೇ ಎಸಳುಗಳನ್ನು ಕಿತ್ತುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದರು. ನಾನು ಕೂಡ ಅವರೆಲ್ಲ ಮಾಡಿದಂತೆ ಒಂದು ಗುಲಾಬಿ ಎಸಳನ್ನು ಕಿತ್ತುಕೊಂಡು ಸಾಯಿಬಾಬಾರವರ ಪ್ರಸಾದವೆಂದು ತಿಳಿದುಕೊಂಡು ಬಾಯಿಗೆ ಹಾಕಿಕೊಂಡೆ.

ಅಂದಿನಿಂದ ನನಗೆ ಯಾವುದೇ ಹುಳಿತೇಗು ತೊಂದರೆಯೇ ಇಲ್ಲ. ಈ ಘಟನೆ ನೆಡೆದು ಹಲವಾರು ವರ್ಷಗಳೇ ಕಳೆದಿವೆ. ಈಗಲೂ ಕೂಡ ಏನಾದರು ತಿನ್ನುವಾಗ ಆ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ನಾನು ಈಗ ಎಲ್ಲಾ ಪದಾರ್ಥಗಳನ್ನು ಕೂಡ ಯಾವುದೇ ಭಯವಿಲ್ಲದೆ ತಿನ್ನುತ್ತಿದ್ದೇನೆ. ನನ್ನ ಹುಳಿತೇಗು ಖಾಯಿಲೆಯನ್ನು ಪವಾಡಸದೃಶ ರೀತಿಯಲ್ಲಿ ವಾಸಿಮಾಡಿದ ಸಾಯಿಬಾಬಾರವರಿಗೆ ನನ್ನ ಅನಂತಾನಂತ ವಂದನೆಗಳು. 

-ಶ್ರೀ. ಶ್ರವಣ ಕುಮಾರ್ ಹೇಳಿದಂತೆ

No comments:

Post a Comment