Wednesday, July 14, 2010

ಶಿರಡಿಯಲ್ಲಿ ನೋಡಬೇಕಾದ ಸ್ಥಳ - ದಕ್ಷಿಣಮುಖಿ ಶ್ರೀ ಹನುಮಾನ್ ಮಂದಿರ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಶಿರಡಿಯಲ್ಲಿರುವ ಈ ಹನುಮಾನ್ ಮಂದಿರದಲ್ಲಿ ಮೊದಲಿಗೆ ಎರಡು ಮಾರುತಿಯ ವಿಗ್ರಹಗಳಿದ್ದವು. ಒಂದು ವಿಗ್ರಹ ಶಿರಡಿ ಗ್ರಾಮವನ್ನು ಮತ್ತು ಮತ್ತೊಂದು ವಿಗ್ರಹವು ಪಕ್ಕದ ಬೈರಗಾವ್ ಹಳ್ಳಿಯನ್ನು ಪ್ರತಿನಿಧಿಸುತ್ತಿದ್ದವು.ದ್ವಾರಕಾಮಾಯಿಯಿಂದ ಚಾವಡಿಗೆ ಹೋಗುವ ದಾರಿಯ ಕೊನೆಯಲ್ಲಿ ಈ ದಕ್ಷಿಣ ಮುಖಿ ಹನುಮಾನ್ ಮಂದಿರವಿರುತ್ತದೆ. ಇದು ಶಿರಡಿಯ ಅತ್ಯಂತ ಪುರಾತನವಾದ ಮಂದಿರವಾಗಿರುತ್ತದೆ. ಈ ಮಂದಿರದ ಪಕ್ಕದಲ್ಲಿ 2 ಮರಗಳಿರುತ್ತವೆ ಮತ್ತು ಅವುಗಳಿಗೆ ಬೇಲಿಯನ್ನು ಹಾಕಿರುತ್ತಾರೆ. ಈ ಮಂದಿರದ ವಿಶೇಷತೆ ಏನೆಂದರೆ ಇದು ದಕ್ಷಿಣ ಮುಖಿ ಮಾರುತಿ ಮಂದಿರವಾಗಿರುತ್ತದೆ. ಸಾಮಾನ್ಯವಾಗಿ ಈ ರೀತಿ ದಕ್ಷಿಣ ಮುಖಿಯಾಗಿ ಮಂದಿರವನ್ನು ನಿರ್ಮಾಣ ಮಾಡುವುದು ಬಹಳ ಅಪರೂಪ ಎನ್ನಬಹುದು. ಈ ಹಿಂದೆ ಇಲ್ಲಿ ಒಂದರ ಪಕ್ಕದಲ್ಲಿ ಮತ್ತೊಂದರಂತೆ ಹನುಮಂತನ 2 ವಿಗ್ರಹಗಳನ್ನು ಸಾಯಿ ಭಕ್ತರು ನೋಡಬಹುದಾಗಿತ್ತು. ಆದರೆ ಈಗ ಸಾಯಿಬಾಬಾ ಸಂಸ್ಥಾನದವರು ಇದರ ಪುನರ್ ನಿರ್ಮಾಣ ಮಾಡಿ 2 ಹನುಮಂತನ ವಿಗ್ರಹಕ್ಕೆ ಬದಲಾಗಿ ಒಂದು  ಆಳೆತ್ತರದ  ಹನುಮಂತನ ವಿಗ್ರಹವನ್ನು ಪ್ರತಿಷ್ಟಾಪಿಸಿರುತ್ತಾರೆ. ಹಳೆಯ ಹನುಮಂತನ ಮಂದಿರದಲ್ಲಿ ಒಂದು ಕೊನೆಯಲ್ಲಿ ಮಲ್ಲರು ಮತ್ತು ಜಟ್ಟಿಗಳು ಬಳಸುವ ಭಾರ ಎತ್ತುವ ವಸ್ತುಗಳನ್ನು ಇಟ್ಟಿದ್ದರು. ಏಕೆಂದರೆ ನಮ್ಮ ಹಿಂದೂ ಧರ್ಮದಲ್ಲಿ ಹನುಮಂತನೆಂದರೆ ಶಕ್ತಿಯ ಪ್ರತೀಕವಾಗಿದ್ದರಿಂದ ಮಲ್ಲರು ಮತ್ತು ಜಟ್ಟಿಗಳು ಇಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡಲು ಬರುತ್ತಿದ್ದರು.

ಹಳೆಯ ಹನುಮಾನ್ ಮಂದಿರದ ಹೊರನೋಟ


ಹಳೆಯ ಹನುಮಾನ್ ಮಂದಿರದಲ್ಲಿದ್ದ 2 ಹನುಮಂತನ ವಿಗ್ರಹಗಳು

ಹೊಸದಾಗಿ ನವೀಕರಿಸಿದ ಹನುಮಾನ್ ಮಂದಿರದ ಪಕ್ಷಿನೋಟ


ಹೊಸ ಹನುಮಾನ್ ವಿಗ್ರಹ 


ಸಾಯಿಬಾಬಾರವರಿಗೂ ಮತ್ತು ಈ ಮಂದಿರಕ್ಕೂ ಅವಿನಾಭಾವ ಸಂಬಂಧವಿತ್ತೆಂದು ತೋರುತ್ತದೆ. ಸಾಯಿಬಾಬಾರವರು ಹೊರಗಡೆ ಹೋಗುವಾಗ ಈ ಮಾರುತಿ ದೇವಾಲಯದ ಎದುರು ನಿಂತು ಎನ್ನನ್ನೋ ಗೊಣಗುತ್ತಾ ಮಾರುತಿಯ ಕಡೆಗೆ ತಿರುಗಿ ಬಗೆ ಬಗೆಯ ಭಂಗಿಗಳನ್ನು ತಾಳುತ್ತಿದ್ದರು. ತರುವಾಯ ಒಂದೊಂದು ದಿಕ್ಕಿಗೂ ತಿರುಗಿ ಹಾಗೆಯೇ ಮಾಡಿ ತದೇಕಚಿತ್ತರಾಗಿ ನೋಡುತ್ತಿದ್ದರು. ಒಂದೊಂದು ಸಾರಿ ಯಾರನ್ನೋ ಬಯ್ಯುತ್ತಿರುವಂತೆ ಎಲ್ಲ ದಿಕ್ಕುಗಳ ಕಡೆಯೂ ಸಟ್ಕಾ ತಿರುಗಿಸುತ್ತಿದ್ದರು. ಇಲ್ಲವೇ, ಕಲ್ಲು ಎಸೆಯುತ್ತೇನೆಂದು ಬೆದರಿಸುತ್ತಿದ್ದರು. ಕೆಟ್ಟ ಕೆಟ್ಟ ಮಾತಿನಲ್ಲಿ ಬಯ್ಯುತ್ತಿದ್ದರು. ತಿಳಿಯದವರು ಇವರನ್ನು ಹುಚ್ಚರೆಂದು ಕಡೆಗಣಿಸುತ್ತಿದ್ದರು. ತಿಳಿದವರು ಸಾಯಿಬಾಬಾರವರು ಪ್ರಕೃತಿಯ ಶಕ್ತಿಗಳಿಗೆ ಏನೋ ಆದೇಶ ನೀಡುತ್ತಿದ್ದಾರೆಂದು ಭಾವಿಸುತ್ತಿದ್ದರು.

ಒಮ್ಮೆ ಚಾವಡಿ ಉತ್ಸವದ ಸಂದರ್ಭದಲ್ಲಿ ಮಾರುತಿ ಮಂದಿರದ ದಾರಿಯ ಬಳಿಗೆ ಬಂದಾಗ ಸಾಯಿಯವರು ಇದ್ದಕ್ಕಿದ್ದಂತೆ ಆವೇಶ ಬಂದವರಂತೆ ಆಡಲು ಶುರು ಮಾಡಿದರು. ಆಗ ಹಲವು ಭಕ್ತರು ಇವರನ್ನು ಚಾವಡಿ ಬರುವವರೆಗೂ ಗಟ್ಟಿಯಾಗಿ ಹಿಡಿದುಕೊಳ್ಳಬೇಕಾಯಿತು. ಚಾವಡಿ ತಲುಪುತ್ತಲೇ ಇವರ ಆವೇಶ ಕಡಿಮೆಯಾಯಿತು. ಇದರ ಬಗ್ಗೆ ಶ್ಯಾಮ ಅವರು "ಬಾಬಾ, ಈ ಮಾರುತಿ ನಮ್ಮ ಸ್ವಾಮಿ. ನೀವೇಕೆ ಅವನನ್ನು ಅಷ್ಟೊಂದು ಗೌರವದಿಂದ ಕಾಣುತ್ತೀರಿ" ಎಂದು ಬಾಬಾ ಅವರನ್ನು ವಿಚಾರಿಸಿದಾಗ ಸಾಯಿಯವರು "ಅರೇ ಶ್ಯಾಮ, ಚಿಕ್ಕಂದಿನಲ್ಲಿ ನಮ್ಮ ತಂದೆ ತಾಯಿಗಳು ನನ್ನನ್ನು ಮಾರುತಿಗೆ ಅರ್ಪಿಸಿದ್ದರು. ಆದುದರಿಂದ ಮಾರುತಿ ನನ್ನ ಸಹೋದರನೆಂದು ತಿಳಿಸುವುದಕ್ಕೊಸ್ಕರ ಹೀಗೆ ಕೈಗಳಿಂದ ಸಂಜ್ಞೆ ಮಾಡುತ್ತೇನೆ" ಎಂದರು.

ಈ ಮಾರುತಿ ಮಂದಿರದಲ್ಲಿ ಸಾಧು ಸಂತರು ವಾಸ ಮಾಡುತ್ತಿದ್ದರು. ದೇವಿದಾಸ ಎಂಬ ಸಾಧುವು ಕೂಡ ಇಲ್ಲೇ ಬೀಡು ಬಿಟ್ಟಿದ್ದರು. ಸಾಯಿಯವರು ಇವರನ್ನು ಆಗಾಗ್ಗೆ ಹೋಗಿ ಭೇಟಿ ಮಾಡಿ ಬರುತ್ತಿದ್ದರು. ಒಮ್ಮೆ 1890 ರಲ್ಲಿ ಸಾಯಿಯವರು ಜವಾಹರ್ ಆಲಿ ಎಂಬ ಮುಸ್ಲಿಂ ಸಾಧುವಿನೊಡನೆ ಶಿರಡಿಯಿಂದ 5 ಕಿಲೋಮೀಟರ್ ದೂರದಲ್ಲಿರುವ ರಹತಾಕ್ಕೆ ಹೋಗಿ ನೆಲೆಸಿದಾಗ ಶಿರಡಿಯ ಸಾಯಿಭಕ್ತರಿಗೆ ಬಹಳ ಬೇಸರವಾಯಿತು. ನಂತರ 8 ವಾರಗಳ ಸತತ ಪ್ರಯತ್ನದಿಂದ ಜವಾಹರ್ ಆಲಿಯನ್ನು ಹೇಗೋ ಉಪಾಯದಿಂದ ಒಪ್ಪಿಸಿ ಸಾಯಿಬಾಬಾರವರನ್ನು ಪುನಃ ಶಿರಡಿಗೆ ಕರೆತಂದರು. ಕೆಲವು ದಿನಗಳ ನಂತರ ಇದೇ ಮಾರುತಿ ಮಂದಿರದಲ್ಲಿ ಜವಾಹರ್ ಆಲಿಗೂ ಮತ್ತು ದೇವಿದಾಸನಿಗೂ ವಾದ ವಿವಾದಗಳು ನಡೆದು ಜವಾಹರ್ ಆಲಿ ವಾದದಲ್ಲಿ ಸೋತು ಶಿರಡಿಯನ್ನು ಬಿಟ್ಟು ಹೊರಟು ಹೋದನು. ಆ ಘಟನೆಯ ನಂತರ ತಮ್ಮ ಸಮಾಧಿಯವರೆಗೂ ಸಾಯಿಬಾಬಾ ಶಿರಡಿಯನ್ನು ಬಿಟ್ಟು ಬೇರೆ ಇಲ್ಲಿಯೂ ಹೋಗಲಿಲ್ಲ. 

ಪ್ರತಿ ಗುರುವಾರದಂದು ರಾತ್ರಿಯ ವೇಳೆ ಮಾರುತಿ ಮಂದಿರವನ್ನು ಸುಂದರವಾಗಿ ಅಲಂಕರಿಸುತ್ತಾರೆ ಮತ್ತು ಇಲ್ಲಿ ಶಿರಡಿ ಗ್ರಾಮ ನಿವಾಸಿಗಳು ಮತ್ತು ಭಕ್ತರೆಲ್ಲಾ ಸೇರಿ ಆನಂದದಿಂದ ಭಜನೆಗಳನ್ನು ಹಾಡುತ್ತಾರೆ ಮತ್ತು ಆಗಾಗ್ಗೆ ಅಖಂಡ ಸಾಯಿ ನಾಮ ಜಪವನ್ನು  ಹಮ್ಮಿಕೊಳ್ಳುತ್ತಾರೆ. ಪ್ರತಿನಿತ್ಯ ತಪ್ಪದೆ ಆರತಿಯನ್ನು ಮಾಡಲಾಗುತ್ತದೆ. ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವವು ಈ ಮಂದಿರದ ಮುಂದೆ ಬಂದು ನಿಲ್ಲುತ್ತದೆ. ಚೋಪಾದಾರರು ಜೋರಾಗಿ ಉದ್ಘೋಷವನ್ನು ಮಾಡುತ್ತಾರೆ. ಹನುಮಾನ್ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. 

ಸಾಯಿಬಾಬಾರವರು ತಮ್ಮ ಕಾಲದಲ್ಲಿ ತಮಗೆ ಬಂದ ದಕ್ಷಿಣೆ ಹಣದಿಂದ ತಾತ್ಯಾ ಪಾಟೀಲ್ ರ ಮುಖಾಂತರ ಈ ಮಂದಿರದ ಜೀರ್ಣೋದ್ದಾರವನ್ನು ಮಾಡಿಸಿದರು ಎಂಬ ಉಲ್ಲೇಖವನ್ನು ಸಾಯಿ ಸಚ್ಚರಿತೆಯ 7ನೇ ಅಧ್ಯಾಯದಲ್ಲಿ ನಾವು ನೋಡಬಹುದು. 

ಹನುಮಾನ್ ಮಂದಿರದ ಮುಂದಿರುವ ಅರಳಿ ಮತ್ತು ಬೇವಿನ ಮರದ ಕೆಳಗಡೆ ಇರುವ ನಾಗದೇವರ ಪ್ರತಿಷ್ಠಾಪನೆಯನ್ನು ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು ಮಾಡಿಸಿರುತ್ತಾರೆ. ಶಿವಲಿಂಗ ಮತ್ತು ನಂದಿಯ ವಿಗ್ರಹದ ಪ್ರತಿಷ್ಠಾಪನೆಯನ್ನು ಮುಂಬೈ ನ ಸಾಯಿ ಭಕ್ತರಾದ ಮುರ್ತಿಕರ್ ಬಜ್ರೆ ರಾವ್ ದಲ್ವೆಯವರು 11ನೇ ಫೆಬ್ರವರಿ 1983 ರಂದು  ಮಾಡಿಸಿದರು. ಶಿರಡಿಯ ಜನರು ಶಿವರಾತ್ರಿಯನ್ನು ಈ ಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. 

ಏಪ್ರಿಲ್ 2009 ರ ಹನುಮಾನ್ ಜಯಂತಿಯ ನಂತರ ಶಿರಡಿ ಸಾಯಿಬಾಬಾ ಸಂಸ್ಥಾನದವರು ಹಳೆಯ ಮಂದಿರವನ್ನು ಕೆಡವಿ ಆ ಸ್ಥಳದಲ್ಲಿ ಹೊಸ ಮಂದಿರವನ್ನು ನಿರ್ಮಾಣ ಮಾಡಿರುತ್ತಾರೆ. ಈಗ ಸಾಯಿಭಕ್ತರು ಶಿರಡಿಗೆ ಹೋದರೆ ಹಳೆಯ ಹನುಮಾನ್ ವಿಗ್ರಹಗಳಿಗೆ ಬದಲಾಗಿ ಹೊಸದಾಗಿ ಸ್ಥಾಪಿಸಲಾಗಿರುವ ಆಳೆತ್ತರದ ಹನುಮಾನ್ ವಿಗ್ರಹ ಮತ್ತು ಹೊಸದಾಗಿ ನವೀಕರಿಸಲಾದ ಮಂದಿರವನ್ನು ನೋಡಬಹುದಾಗಿದೆ. 

ಕನ್ನಡ ಅನುವಾದ:ಶ್ರೀಕಂಠ ಶರ್ಮ 

No comments:

Post a Comment