Monday, July 12, 2010

ಶ್ರೀ ಶಿರಡಿ ಸಾಯಿಬಾಬಾರವರು ವಾಸಿಸುತ್ತಿದ್ದ ಸ್ಥಳ - ದ್ವಾರಕಾಮಾಯಿ ಮಸೀದಿ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ 

ಈಗಿನ ದ್ವಾರಕಾಮಾಯಿಯ ಒಂದು ಪಕ್ಷಿ ನೋಟ



ದ್ವಾರಕಾಮಾಯಿ ೧೯೩೦ ರಲ್ಲಿದ್ದಂತೆ

ದ್ವಾರಕಾಮಾಯಿ ೧೯೦೫ ರಲ್ಲಿದ್ದಂತೆ

ಮೊದಲ ಬಾರಿ ದ್ವಾರಕಾಮಾಯಿ ಮಸೀದಿಗೆ ಬರುವ ಸಾಯಿ ಭಕ್ತರಿಗೆ ಅತ್ಯಂತ ಸರಳವಾದ, ಯಾವುದೇ ಆಡಂಭರವಿಲ್ಲದ ಈ ಸ್ಥಳವನ್ನು ನೋಡಿ ಇಡೀ ವಿಶ್ವವೇ ಪೂಜಿಸುವ ಆರಾಧ್ಯ ದೈವನಾದ, ದತ್ತವತಾರಿಯಾದ ಶಿರಡಿ ಸಾಯಿಬಾಬಾರವರು ಇಷ್ಟೊಂದು ಚಿಕ್ಕ ಸ್ಥಳದಲ್ಲಿ ವಾಸಿಸುತ್ತಿದ್ದರೇ? ಈ ಸ್ಥಳದಲ್ಲಿ ಅಷ್ಟೆಲ್ಲ ಪವಾಡಗಳು ನೆಡೆದವೇ? ಪ್ರಪಂಚದಾದ್ಯಂತ ಇರುವ ಸಾಯಿಭಕ್ತರು ನಿತ್ಯ ಪಾಲಿಸುವ ಆಧ್ಯಾತ್ಮಿಕ ರಾಜಮಾರ್ಗ ತೋರಿಸಿಕೊಟ್ಟ ಸ್ಥಳ ಇದೇನಾ? ಎಂದು ಆಶ್ಚರ್ಯವಾಗುತ್ತದೆ.

ಕಬ್ಬಿಣದ ಮೇಲ್ಚಾವಣಿ ಮತ್ತು ಕಲ್ಲಿನ ಗೋಡೆಗಳನ್ನು ಹೊಂದಿರುವ ದ್ವಾರಕಾಮಾಯಿಯನ್ನು ನೋಡಿದವರು ಯಾವ ವೈಭವವನ್ನು ಕೂಡ ಅಲ್ಲಿ ಕಾಣುವುದಿಲ್ಲ. ಅದರಿಂದಲೇ ಇರಬೇಕು, ಬಡ ಫಕೀರನಂತೆ ಭಿಕ್ಷೆ ಬೇಡಿ ಜೀವಿಸುತ್ತಿದ್ದ ಸಾಯಿಬಾಬಾರವರಿಗೆ ದ್ವಾರಕಾಮಾಯಿಯು ಬಹಳ ಅಚ್ಚುಮೆಚ್ಚಿನ ತಾಣವಾಗಿತ್ತು. ಯಾವುದೇ ಆಡಂಭರವಿಲ್ಲದೆ ಬಡತನದಲ್ಲಿದ್ದು ಭಿಕ್ಷೆ ಬೇಡಿ ಜೀವಿಸುತ್ತಿದ್ದ ಬಾಬಾರವರ ಬಳಿ ಇದ್ದುದು ಕೇವಲ ಕೆಲವು ಹಳೆಯ ಬಟ್ಟೆಗಳು, ಒಂದು ಸಟಕಾ, ಒಂದು ಭಂಗಿಯನ್ನು ಸೇದುವ ಚಿಲುಮೆ, ಮಣ್ಣಿನ ಭಿಕ್ಷಾ ಪಾತ್ರೆಗಳು, ಕೆಲವು ಕಫ್ನಿಗಳು. ಯಾರಾದರೂ ಭಕ್ತರು ಮಸೀದಿಯನ್ನು ನವೀಕರಿಸಬೇಕೆಂದು ಬಾಬಾರವರ ಅನುಮತಿ ಕೇಳಿದರೆ ಬಾಬಾರವರು ಅದಕ್ಕೆ ಕೂಡಲೇ ಅನುಮತಿ ನೀಡುತ್ತಿರಲಿಲ್ಲ. ಆದರೆ ಅವರ ಭಕ್ತರು ಅವರನ್ನು ಪದೇ ಪದೇ ಪೀಡಿಸಿ ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಮಸೀದಿಯನ್ನು ಪುನರ್ ನಿರ್ಮಾಣ ಮಾಡಿದರು.

ಸಾಯಿಬಾಬಾರವರ ಭಕ್ತರಿಗೆ ದ್ವಾರಕಾಮಾಯಿಯು ಒಂದು ಅನರ್ಘ್ಯ ರತ್ನವಿದ್ದಂತೆ ಎಂದರೆ ತಪ್ಪಾಗಲಾರದು. ಏಕೆಂದರೆ ಸಾಯಿಬಾಬಾರವರೇ "ಯಾರು ಈ ಮಸೀದಿಯ ೩ ಮೆಟ್ಟಿಲುಗಳನ್ನು ಹತ್ತಿ ಇಳಿಯುವರೋ ಅವರ ಕಷ್ಟಗಳೆಲ್ಲವೂ ಕೊನೆಗಾಣುತ್ತವೆ" ಎಂದು ಹೇಳಿದ್ದಾರೆ ಮತ್ತು ಸಾಯಿ ಭಕ್ತರು ಇದನ್ನು ಸ್ವತಃ ಮನಗಂಡಿದ್ದಾರೆ. ಸಾಯಿಬಾಬಾರವರು ಎಲ್ಲಾ ಮತಗಳನ್ನು ಬಹಳ ಗೌರವದಿಂದ ಕಾಣುತ್ತಿದ್ದರು ಮತ್ತು ಯಾರು ಬೇಕಾದರೂ ಮಸೀದಿಗೆ ಬರಬಹುದಾಗಿತ್ತು. ಸಾಯಿಯವರು ಯಾರನ್ನು ಬರಬೇಡವೆಂದು ಹೇಳುತ್ತಿರಲಿಲ್ಲ. ಸಾಯಿಯವರು ತಾವಿರುವ ಮಸೀದಿಯನ್ನು "ಮಾಯಿ" ಅಥವಾ "ತಾಯಿ" ಎಂದು ಸಂಭೋದಿಸುತ್ತಿದ್ದರು. ಒಮ್ಮೆ ಒಬ್ಬ ಭಕ್ತನಿಗೆ "ಈ ದ್ವಾರಕಾಮಾಯಿಯೇ ಮಸೀದಿಮಾಯಿ. ಈ ಮಸೀದಿಮಾಯಿಯ ೩ ಮೆಟ್ಟಿಲುಗಳನ್ನು ಹತ್ತಿದವರನ್ನು ನಿರ್ಭಯರನ್ನಾಗಿ ಮಾಡುವಳು. ಇವಳು ಅತ್ಯಂತ ದಯಾಮಯಳು. ಈ ಮಸೀದಿಮಾಯಿಗೆ ಬರುವ ಭಕ್ತರ ಬಯಕೆಗಳೆಲ್ಲ ಕೈಗೂಡುವುವು" ಎಂದು ಭರವಸೆಯನ್ನು ನೀಡಿದರು.

ದ್ವಾರಕಾಮಾಯಿಗೆ ತೆರಳುವ ಸಾಯಿಭಕ್ತರು ವಿವಿಧ ರೀತಿಯಲ್ಲಿ ಸಾಯಿಯವರಿಗೆ ಪೂಜೆಯನ್ನು ಸಲ್ಲಿಸುವುದನ್ನು ನೋಡಬಹುದು. ಕೆಲವರು ಸಾಯಿಯವರ ಸುಂದರ ಚಿತ್ರಪಟಕ್ಕೆ ಪೂಜೆ ಸಲ್ಲಿಸಿ ಕಾಣಿಕೆಗಳನ್ನು ಅರ್ಪಿಸಿದರೆ, ಇನ್ನು ಕೆಲವರು ಧುನಿಗೆ ತಮ್ಮ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ, ಮತ್ತೆ ಕೆಲವರು ಕಣ್ಣುಗಳನ್ನು ಮುಚ್ಚಿಕೊಂಡು ಭಕ್ತಿಯಿಂದ ಸಾಯಿ ನಾಮ ಜಪ ಪಠಣ ಮಾಡುತ್ತಿದ್ದರೆ, ಮತ್ತೆ ಕೆಲವರು ಸಾಯಿ ಸಚ್ಚರಿತೆಯನ್ನು ಪಠಣ ಮಾಡುತ್ತಿರುತ್ತಾರೆ. ಇನ್ನು ಕೆಲವರು ಹಲವಾರು ಘಂಟೆಗಳು ಧ್ಯಾನದಲ್ಲಿ ಮಗ್ನರಾಗಿರುತ್ತಾರೆ. ಹೀಗೆ ಅನೇಕ ವಿಧದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಯಿಯವರಿಗೆ ಪೂಜೆಯನ್ನು ಸಲ್ಲಿಸುವುದನ್ನು ನಾವು ಕಣ್ಣಾರೆ ನೋಡಬಹುದು.

ಸಾಯಿಯವರು ಮಸೀದಿಗೆ ವಾಸಿಸಲು ಬಂದಾಗ ಅದು ಅತ್ಯಂತ ಶಿಥಿಲಾವಸ್ತೆಯಲ್ಲಿತ್ತು ಮತ್ತು ಈಗ ನಾವು ಕಾಣುವ ಮಸೀದಿಗಿಂತ ಅತ್ಯಂತ ಚಿಕ್ಕದಾಗಿ ಕೂಡ ಇತ್ತು. ಭಕ್ತರು ಕೂರುವ ೩ ಮೆಟ್ಟಿಲುಗಳ ತನಕವೇ ದ್ವಾರಕಾಮಾಯಿಯು ಇದ್ದಿತ್ತು ಮತ್ತು ಮೇಲಿನ ಚಾವಣಿಯನ್ನು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿತ್ತು. ಇಲ್ಲಿಂದ ಮುಂದೆ ಕೇವಲ ಖಾಲಿ ಜಾಗವಾಗಿತ್ತು. ಮಸೀದಿಯ ಸುತ್ತ ಮತ್ತು ಧುನಿಯ ಮುಂದೆ ಈಗ ಇರುವಂತೆ ಕಬ್ಬಿಣದ ಸರಳುಗಳು ಇರಲಿಲ್ಲ. ಹೇಮಾಡಪಂತರು ಹೇಳುವಂತೆ ಮುಂದಿನ ಖಾಲಿ ಜಾಗವಿದ್ದ ನೆಲದಲ್ಲಿ ದೊಡ್ಡ ಹಳ್ಳಗಳು, ಗುಂಡಿಗಳು ಇದ್ದವು. ಮೇಲಿನ ಚಾವಣಿಯ ಒಂದು ಭಾಗವು ಕುಸಿದಿತ್ತು ಮತ್ತು ಉಳಿದ ಭಾಗವು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿತ್ತು. ಆದುದರಿಂದ ಮಸೀದಿಯು ವಾಸಿಸಲು ಯೋಗ್ಯವಾದ ಸ್ಥಳವಾಗಿರಲಿಲ್ಲ. ಒಮ್ಮೆ ಸಾಯಿಯವರು ತಮ್ಮ ಭಕ್ತರೊಂದಿಗೆ ಮಸೀದಿಯಲ್ಲಿ ಊಟಕ್ಕೆ ಕುಳಿತಿದ್ದಾಗ ಮೇಲಿನ ಚಾವಣಿಯ ಕಡೆಯಿಂದ ಒಂದು ಜೋರಾದ ಧ್ವನಿಯು ಕೇಳಿಸಿತು. ಕೂಡಲೇ, ಸಾಯಿಬಾಬಾರವರು ತಮ್ಮ ಕೈಗಳನ್ನು ಮೇಲಕ್ಕೆತ್ತಿ "ಸಬರ್, ಸಬರ್" ಎಂದು ಕೂಗಿದರು. ಆ ಕ್ಷಣವೇ ಅ ಧ್ವನಿ ಅಡಗಿತು ಮತ್ತು ಸಾಯಿಭಕ್ತರು ತಮ್ಮ ಊಟ ಮುಂದುವರಿಸಿದರು. ಅವರೆಲ್ಲ ಊಟ ಮುಗಿಸಿ ಹೊರಕ್ಕೆ ತೆರಳಿದ ಮರುಕ್ಷಣವೇ ಮೇಲಿನಿಂದ ಒಂದು ದೊಡ್ಡ ಚಾವಣಿಯ ಭಾಗವು ಕುಸಿದು ಇವರು ಊಟ ಮಾಡುತ್ತಾ ಕುಳಿತಿದ್ದ ಜಾಗದಲ್ಲಿ ಬಿದ್ದಿತು. ಸಾಯಿಯವರು ಮುಂಚೆಯೇ ಅದನ್ನು ತಮ್ಮ ಅಂತರ್ ಜ್ಞಾನದಿಂದ ತಿಳಿದು ಭಕ್ತರನ್ನು ಕಾಪಾಡಿದರು.

ದ್ವಾರಕಾಮಾಯಿಯ ವಿಶೇಷತೆಯೇನೆಂದರೆ, ದ್ವಾರಕಾಮಾಯಿಯಲ್ಲಿ ಎಷ್ಟೇ ಜನ ಜಂಗುಳಿಯಿದ್ದರೂ ಕೂಡ ಸಾಯಿಭಕ್ತರು ಅಲ್ಲಿ ಧ್ಯಾನಕ್ಕೆ ಕುಳಿತುಕೊಂಡರೆ ಅಲ್ಲಿ ಸಾಯಿಯವರೊಡನೆ ತಾವೊಬ್ಬರೇ ಏಕಾಂತದಲ್ಲಿರುವಂತೆ ಅನ್ನಿಸುತ್ತದೆ. ಆ ಸ್ಥಳವು ಎಷ್ಟೇ ಶಬ್ಧಗಳಿಂದ ಕೂಡಿದ್ದರೂ ಮನಸ್ಸಿನ ಏಕಾಗ್ರತೆಗೆ ಯಾವ ಭಂಗವೂ ಆಗುವುದಿಲ್ಲ.

ಸಾಯಿಬಾಬಾ ಸಂಸ್ಥಾನದವರು ದ್ವಾರಕಾಮಾಯಿ ಮಸೀದಿಯನ್ನು ಬೆಳಗಿನ ಜಾವ ೪:೦೦ ಘಂಟೆಯಿಂದ ರಾತ್ರಿ ೧೧:೦೦ ರ ವರೆಗೆ ಸಾಯಿಭಕ್ತರ ದರ್ಶನಕ್ಕಾಗಿ ತೆರೆದಿಟ್ಟಿರುತ್ತಾರೆ.

ಬನ್ನಿ ಸಾಯಿಭಕ್ತರೆ, ನಾವುಗಳು ದ್ವಾರಕಾಮಾಯಿಯಲ್ಲಿ ಇರುವ ಎಲ್ಲಾ ಸ್ಥಳಗಳನ್ನು ನೋಡಿ ಬರೋಣ:
ಧುನಿ ಮಾ


ಸಾಯಿಬಾಬಾರವರು ಪ್ರಾರಂಭಿಸಿದ ಪವಿತ್ರ ಧುನಿ ಮಾ

ಸಾಯಿಬಾಬಾರವರು ಸ್ವತಃ ತಮ್ಮ ಕೈಗಳಿಂದ ೧೪೦ಕ್ಕೂ ಹೆಚ್ಚು ವರ್ಷಗಳ ಹಿಂದೆ ಬೆಳಗಿದ ಈ ಧುನಿಯು ಶಿರಡಿಯಲ್ಲಿನ ದ್ವಾರಕಮಾಯಿಯಲ್ಲಿ ನಿರಂತರವಾಗಿ ಪ್ರಜ್ವಲಿಸುತ್ತಿದೆ. ಧುನಿ ಎಂಬ ಪದವು "ಧುನ್" ಎಂಬ ಧಾತುವಿನಿಂದ ಬಂದಿದ್ದು ಅದರ ಅರ್ಥವು "ಬೆಳಗುವುದು, ಹಚ್ಚುವುದು, ಉರಿಸುವುದು" ಎಂದು ಹೇಳಲಾಗುತ್ತದೆ. ಶಿರಡಿ ಗ್ರಾಮದಲ್ಲಿ ಕಾಲರಾ, ಪ್ಲೇಗ್ ಮುಂತಾದ ಸಾಂಕ್ರಾಮಿಕ ರೋಗಗಳು ಬಂದಾಗ ಶಿರಡಿಯ ಪಂಚಾಯತಿಯ ಅಧಿಕಾರಿಗಳು ಗ್ರಾಮದೊಳಗೆ ಯಾವುದೇ ಗಾಡಿಗಳು ಬರಬಾರದೆಂದು ನಿಷೇಧ ಹೊರಿಸಿದರು. ಆದರೆ ಸಾಯಿಬಾಬಾರವರು ಇವೆಲ್ಲವನ್ನೂ ಲೆಕ್ಕಿಸದೆ ಬಾಬಾರವರೆ ಸ್ವತಃ ಗಾಡಿಯ ಬಳಿಗೆ ಹೋಗಿ ಧುನಿ ಉರಿಸುವುದಕ್ಕೆ ಬೇಕಾದ ಕಟ್ಟಿಗೆಗಳನ್ನು ಕೊಂಡುಕೊಂಡರು. ಅಗ್ನಿಹೋತ್ರಿಯಂತೆ ದ್ವಾರಕಾಮಾಯಿಯಲ್ಲಿ ಹಗಲು ರಾತ್ರಿ ತಮ್ಮ ಜೀವಿತಾವಧಿಯವರೆಗೂ ಧುನಿಯನ್ನು ಉರಿಸುತ್ತಿದ್ದರು ಮತ್ತು ಈಗಲೂ ಕೂಡ ಉರಿಯುತ್ತಿದೆ.

ಸಾಯಿಬಾಬಾರವರು ಚಾವಡಿಯಲ್ಲಿ ಮಲಗುತ್ತಿದ್ದ ಸಮಯದಲ್ಲಿ ರಾಧಾಕೃಷ್ಣ ಆಯಿ ಮಸೀದಿಯನ್ನೆಲ್ಲಾ ಚೆನ್ನಾಗಿ ಗುಡಿಸಿ, ಸಾರಿಸಿ ತೊಳೆಯುತ್ತಿದ್ದರು. ಇವರು ಉರಿಯುತ್ತಿದ್ದ ಧುನಿಯನ್ನು ಕೂಡ ತೆಗೆದು ಆ ಜಾಗವನ್ನು ತೊಳೆದು, ಒರೆಸಿ ಪುನಃ ಅದೇ ಜಾಗದಲ್ಲಿಡುತ್ತಿದ್ದರು.

ಮೊದಲು ಸಾಯಿಬಾಬಾರವರು ದ್ವಾರಕಾಮಾಯಿಗೆ ಬರುವ ಭಕ್ತರ ಖಾಯಿಲೆಗಳಿಗೆ ಔಷಧಿಯನ್ನು ಕೊಡುತ್ತಿದ್ದರು. ಹಕೀಮರೆಂದು ಪ್ರಸಿದ್ದಿಯನ್ನು ಕೂಡ ಪಡೆದಿದ್ದರು. ಕೆಲವು ದಿನಗಳ ನಂತರ ಔಷಧಿಯನ್ನು ಕೊಡುವುದನ್ನು ನಿಲ್ಲಿಸಿ ಪವಿತ್ರ "ಉಧಿ" ಯನ್ನು ನೀಡಲು ಪ್ರಾರಂಭಿಸಿದರು.

ಒಮ್ಮೆ ಸಾಯಿಯವರು ಉರಿಯುತ್ತಿದ್ದ ಧುನಿಯಲ್ಲಿ ತಮ್ಮ ಕೈಗಳನ್ನಿಟ್ಟು ಕೈಗಳೆಲ್ಲ ಸುಟ್ಟವು. ಅಲ್ಲಿದ್ದ ಶ್ಯಾಮ ಅವರು ಹೀಗೇಕೆ ಮಾಡಿದರೆಂದು ಬಾಬಾರವರನ್ನು ಕೇಳಲಾಗಿ "ಅಕ್ಕಸಾಲಿಗನ ಮಗುವು ಆಟವಾಡುತ್ತ ಉರಿಯುತ್ತಿದ್ದ ಬಾಣಲೆಯೊಳಗೆ ಬೀಳುತ್ತಿತ್ತು. ಅದನ್ನು ತಪ್ಪಿಸಲು ಹೀಗೆ ಮಾಡಿದೆ. ನನ್ನ ಕೈಗಳು ಬೆಂದರೂ ಚಿಂತೆಯಿಲ್ಲ. ಆದರೆ ಆ ಮಗುವು ಬದುಕಿತಲ್ಲಾ, ಅಷ್ಟೇ ಸಾಕು" ಎಂಬ ಉತ್ತರ ಬಂದಿತು. ಈ ಘಟನೆಯು ಸಾಯಿಯವರಿಗೆ ತಮ್ಮ ಭಕ್ತರ ಮೇಲಿದ್ದ ಕರುಣೆಯನ್ನು ತೋರಿಸುತ್ತದೆ. ಈ ಘಟನೆಯಾದ ನಂತರ ಸಾಯಿಯವರ ಕೈಗಳಿಗೆ ಕುಷ್ಟ ರೋಗಿಯಾದ ಭಾಗೋಜಿ ಶಿಂಧೆ ತುಪ್ಪವನ್ನು ಸವರಿ ಪಟ್ಟಿಯನ್ನು ಕಟ್ಟುತ್ತಿದ್ದರು. ಸ್ವಲ್ಪ ದಿನಗಳ ಬಳಿಕ ಗಾಯವು ಸಂಪೂರ್ಣ ಗುಣವಾಯಿತು. ಆದರೆ ಸಾಯಿಯವರ ಮಹಾಸಮಾಧಿಯವರೆಗೆ ಪ್ರತಿದಿನವೂ ಭಾಗೋಜಿ ಶಿಂಧೆ ಈ ಕಾರ್ಯಕ್ರಮವನ್ನು ಮುಂದುವರಿಸಿದರು.

ಪ್ರತಿದಿನ ಬೆಳಗಿನ ಜಾವ ಧುನಿಯ ಮುಂದೆ ಬಾಬಾ ಕುಳಿತುಕೊಳ್ಳುತ್ತಿದ್ದರು. ಅವರು ಆ ಉರಿಯುತ್ತಿರುವ ಜ್ವಾಲೆಯಲ್ಲಿ ತಮ್ಮ ಎಲ್ಲಾ ಅಹಂಕಾರ, ಬಯಕೆಗಳು ಮತ್ತು ಕೆಟ್ಟ ಯೋಚನೆಗಳನ್ನು ಅರ್ಪಣೆ ಮಾಡುವಂತೆ ತೋರುತ್ತಿತ್ತು. ಸಾಯಿಯವರು ಯಾವಾಗಲೂ "ಅಲ್ಲಾ ಮಾಲಿಕ್" ಎಂದು ಹೇಳುತ್ತಿದ್ದರು.

ಕೆಲವು ವೇಳೆ ಧುನಿಯ ಮುಂದೆ ಕುಳಿತು ತಾವು ಹಿಂದಿನ ರಾತ್ರಿ ಎಲ್ಲೆಲ್ಲಿ ಹೋಗಿ ಏನೇನು ಮಾಡಿದೆನೆಂದು ಹೇಳುತ್ತಿದ್ದರು. ಅವರ ಪಕ್ಕದಲ್ಲಿ ಮಸೀದಿಯಲ್ಲಿ ಇಡೀ ರಾತ್ರಿ ಮಲಗಿದ್ದವರು ರಾತ್ರಿಯೆಲ್ಲ ಸಾಯಿಯವರು ಎಲ್ಲೂ ಹೋಗಿರಲಿಲ್ಲವೆಂದು ಹೇಳುತ್ತಿದ್ದರು. ಆದರೆ ಪರಿಶೀಲಿಸಿದಾಗ ಸಾಯಿಯವರು ಹೇಳಿದ್ದು ನಿಜವೆಂದು ಕಂಡುಬಂದಿತೆಂದು ಪ್ರೊ.ನಾರ್ಕೆಯವರು ಮತ್ತು ಇತರರು ಹೇಳಿರುತ್ತಾರೆ.

ಶಿರಡಿಗೆ ತೆರಳುವ ಭಕ್ತರು "ಕಟ್ಟಿಗೆ, ತುಪ್ಪ, ಗೌರಿ, ನವ ಧಾನ್ಯಗಳು, ತೆಂಗಿನಕಾಯಿ" ಇವುಗಳನ್ನು ಧುನಿಗೆ ಅರ್ಪಿಸಬಹುದಾಗಿದೆ. ಪ್ರತಿದಿನ ಬೆಳಗ್ಗೆ ೧೧:೩೦ ರಿಂದ ೧೨:೦೦ ಘಂಟೆಯವರೆಗೆ ಸಾಯಿಬಾಬಾ ಸಂಸ್ಥಾನದವರು ಧುನಿ ಪೂಜೆಯನ್ನು ತಪ್ಪದೆ ಮಾಡುತ್ತಾರೆ. ಆಗ ೧೧ ತೆಂಗಿನಕಾಯಿಗಳನ್ನು, ಕಟ್ಟಿಗೆಯನ್ನು, ಗೌರಿಯನ್ನು ಅರ್ಪಿಸಲಾಗುತ್ತದೆ. ಈ ವೈಶ್ವದೇವವನ್ನು ಅನ್ನದ ಆಹುತಿಯೊಂದಿಗೆ ಅಗ್ನಿಗೆ ಪ್ರತಿನಿತ್ಯ ಸಮರ್ಪಿಸಲಾಗುತ್ತದೆ. ಸಾಯಿಬಾಬಾರವರ ಕಾಲದಲ್ಲಿ ಸಗುಣ ಮೇರು ನಾಯಕ್ ರವರು ಸಾಯಿಯವರ ಆಜ್ಞೆಯಂತೆ ಈ ಕಾರ್ಯವನ್ನು ಮಾಡುತ್ತಿದ್ದರು.

ಪೂಜಾ ಸ್ಥಂಭ

ಪೂಜಾ ಸ್ಥಂಭ
ಧುನಿಯ ಮುಂದಿರುವ ಪವಿತ್ರ ಪಾದುಕೆಗಳು

ಈ ಪೂಜಾ ಸ್ಥಂಭವು ದ್ವಾರಕಾಮಾಯಿಯ ಒಳಗಡೆ ಧುನಿಯ ಬಲಭಾಗಕ್ಕೆ ಇದೆ. ಇದರ ಕೆಳಗೆ ಬೆಳ್ಳಿಯ ಚಿಕ್ಕ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಇದರ ಪೂಜೆಯ ಕಾರ್ಯಕ್ರಮ ಗುರುಪೂರ್ಣಿಮೆಯ ದಿನ ಪ್ರಾರಂಭವಾಯಿತು. ಅದರ ವಿವರ ಹೀಗಿದೆ. ಒಂದು ದಿನ ಸಾಯಿಬಾಬಾರವರು ದಾದ ಕೇಳ್ಕರ್ ರವರನ್ನು ಕರೆದು "ಇಂದು ಗುರುಪೂರ್ಣಿಮೆ ಎಂದು ನಿನಗೆ ತಿಳಿದಿಲ್ಲವೇ" ಎಂದು ಹೇಳಿ ಪೂಜಾ ಸ್ಥಂಭದ ಕಡೆಗೆ ತಮ್ಮ ಕೈಯನ್ನು ತೋರಿಸುತ್ತ "ಹೋಗಿ ಪೂಜಾ ಸಾಮಗ್ರಿಗಳನ್ನು ತಂದು ಆ ಸ್ಥಂಭವನ್ನು ಭಕ್ತಿಯಿಂದ ಪೂಜಿಸು" ಎಂದು ಆಜ್ಞೆ ಮಾಡಿದರು. ಅಂದಿನಿಂದ ಗುರುಪೂರ್ಣಿಮೆಯ ದಿನ ಸಾಯಿಯವರನ್ನು ಮತ್ತು ಆ ಪೂಜಾ ಸ್ಥಂಭವನ್ನು ಪೂಜಿಸುವ ಪ್ರಕ್ರಿಯೆ ಆರಂಭವಾಯಿತು. ಈ ವಿಷಯವನ್ನು ಹೆಚ್.ವಿ.ಸಾಥೆಯವರು ಸ್ಪಷ್ಟಪಡಿಸಿದ್ದಾರೆ.

ಹೇಗೆ ಸ್ಥಂಭವು ಒಂದು ಕಟ್ಟಡದ ಭದ್ರತೆಗೆ ಬಹಳ ಮುಖ್ಯವೋ ಹಾಗೆ ಶಿಷ್ಯನ ಉನ್ನತಿಗೆ ಗುರುವಿನ ಅವಶ್ಯಕತೆ ಬಹಳ ಮುಖ್ಯವಾಗಿದೆ. ಇಂದು ಈ ಪೂಜಾ ಸ್ಥಂಭವನ್ನು ನೋಡಿದರೆ ಒಂದು ಸಾಮಾನ್ಯ ಸ್ಥಂಭದಂತೆ ಕಂಡರೂ ಅದರ ಹಿಂದಿನ ಈ ಮೇಲಿನ ಘಟನೆಯನ್ನು ಕೇಳಿದಾಗ ಗುರುವಿನ ಮಹತ್ವ ಮತ್ತು ಗುರುಪೂರ್ಣಿಮೆಯ ಮಹತ್ವ ಚೆನ್ನಾಗಿ ಅರಿವಾಗುತ್ತದೆ. ಅಲ್ಲದೇ, ಸಾಯಿಬಾಬಾರವರಲ್ಲಿ ನಮ್ಮ ಭಕ್ತಿ ಮತ್ತಷ್ಟು ಹೆಚ್ಚುತ್ತದೆ.

ಕೊಲಂಬ ಮತ್ತು ನೀರಿನ ಮಡಿಕೆ

ಕೊಲಂಬ ಮತ್ತು ನೀರಿನ ಮಡಿಕೆ

ಕೊಲಂಬ
ಸಾಯಿಬಾಬಾರವರು ಪ್ರತಿನಿತ್ಯ ಶಿರಡಿ ಗ್ರಾಮದ ೫ ಮನೆಗಳಲ್ಲಿ ತಪ್ಪದೆ ಭಿಕ್ಷೆಗೆ ಹೋಗುತ್ತಿದ್ದರು. "ಓ ತಾಯಿ, ಒಂದು ಚೂರು ರೊಟ್ಟಿಯನ್ನು ಹಾಕಿ" ಎಂದು ಜೋರಾಗಿ ಕೂಗುತ್ತಿದ್ದರು. ಈ ರೀತಿ ೩-೪ ಬಾರಿ ಮಧ್ಯಾನ್ಹದ ವರೆಗೂ ಭಿಕ್ಷೆ ಬೇಡುತ್ತಿದ್ದರು. ಆದರೆ ಒಂದು ಸರಿಯಾದ ಸಮಯವನ್ನಾಗಲಿ ಅಥವಾ ಪದ್ದತಿಯನ್ನಾಗಲಿ ಪಾಲಿಸುತ್ತಿರಲಿಲ್ಲ (ಸಾಯಿ ಸಚ್ಚರಿತ್ರೆ ೮ ನೇ ಅಧ್ಯಾಯ). ಭಿಕ್ಷೆ ಬೇಡಿ ತಂದ ಆಹಾರವನ್ನು ಕೊಲಂಬ (ಮಡಿಕೆ) ಯಲ್ಲಿಡುತ್ತಿದ್ದರು. ನಾಯಿಗಳು, ಬೆಕ್ಕುಗಳು, ಕಾಗೆಗಳು ಬಂದು ಇದರಿಂದ ಆಹಾರವನ್ನು ತಿಂದು ಹೋಗುತ್ತಿದ್ದವು. ಸಾಯಿಬಾಬಾ ಇವುಗಳನ್ನು ಎಂದೂ ಓಡಿಸುತ್ತಿರಲಿಲ್ಲ. ಇವರ ಮಹಾಸಮಾಧಿಯವರೆಗೂ ಈ ಭಿಕ್ಷೆಯ ಕಾರ್ಯಕ್ರಮ ಪ್ರತಿನಿತ್ಯ ನಡೆಯುತ್ತಿತ್ತು. ಇವರು ಹುಷಾರಿಲ್ಲದೆ ಭಿಕ್ಷೆಗೆ ಹೋಗದೆ ಇದ್ದ ದಿನಗಳಲ್ಲಿ ವಾಮನ ರಾವ್ ಅಥವಾ ಜಿ.ಜಿ.ನಾರ್ಕೆ ಯವರನ್ನು ಕಳುಹಿಸುತ್ತಿದ್ದರು. ಇಂದಿಗೂ ಸಮಾಧಿ ಮಂದಿರದಿಂದ ಪುರೋಹಿತರು ಪ್ರತಿದಿನ ೨ ಬಾರಿ ದ್ವಾರಕಾಮಾಯಿಗೆ ಬಂದು "ಭೋಗ್" ಅರ್ಪಿಸಿ ಕೊಲಂಬದಲ್ಲಿ ಸ್ವಲ್ಪ ಪ್ರಸಾದವನ್ನು ಸಾಯಿಭಕ್ತರು ಸ್ವೀಕರಿಸಲು ಇಟ್ಟು ಹೋಗುತ್ತಾರೆ. ಸಾಯಿ ಭಕ್ತರು ಕೂಡ ಧುನಿಗೆ ಕಾಣಿಕೆಯನ್ನು ಅರ್ಪಿಸಿ ಪ್ರಸಾದವನ್ನು ಸಾಯಿಬಾಬಾರವರಿಗೆ ಅರ್ಪಿಸಿ ಸ್ವಲ್ಪ ಪ್ರಸಾದವನ್ನು ಕೊಲಂಬ ದಲ್ಲಿ ಇಟ್ಟು ಹೋಗುವ ಪದ್ಧತಿ ಇಟ್ಟುಕೊಂಡಿದ್ದಾರೆ.

ನೀರಿನ ಮಡಿಕೆ

ಸಾಯಿಬಾಬಾರವರು ಸ್ವತಃ ತಾವೇ ಪ್ರತಿದಿನ ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ಬಾವಿಯಿಂದ ನೀರು ಸೇದಿಕೊಂಡು ಬಂದು ಈ ಮಡಿಕೆಯನ್ನು ತುಂಬುತ್ತಿದ್ದರು. ಸಾಯಿಭಕ್ತರು ಇದನ್ನು "ತೀರ್ಥ"ವೆಂದು ಭಾವಿಸಿ ಸ್ವೀಕರಿಸುತ್ತಿದ್ದರು. ಈಗಲೂ ಕೂಡ ಇದರಲ್ಲಿ ನೀರನ್ನು ತುಂಬಿಟ್ಟು ಆ ನೀರನ್ನು ತೀರ್ಥವೆಂದು ಸ್ವೀಕರಿಸುವ ಪದ್ಧತಿ ಮುಂದುವರೆದಿದೆ. ಈಗ ಈ ಮಡಿಕೆಗೆ ದ್ವಾರಕಾಮಾಯಿಯ ಪುರೋಹಿತರು ನೀರನ್ನು ತುಂಬಿಸುತ್ತಾರೆ. ಈ ನೀರಿನ ಮಡಿಕೆಯು ದ್ವಾರಕಾಮಾಯಿಯ ಒಳಗಡೆ ದಕ್ಷಿಣ ದಿಕ್ಕಿನಲ್ಲಿ ಕೊಲಂಬದ ಪಕ್ಕದಲ್ಲಿ ಇಟ್ಟಿರುತ್ತಾರೆ. ಸಾಯಿ ಭಕ್ತರು ಈ ಪವಿತ್ರ ತೀರ್ಥವನ್ನು ಸ್ವೀಕರಿಸಿ ತಮ್ಮ ಖಾಯಿಲೆಗಳಿಂದ ಗುಣ ಹೊಂದಬಹುದಾಗಿದೆ.

ನಿಂಬಾರ್


ನಿಂಬಾರ್

ದ್ವಾರಕಾಮಾಯಿಯ ಪಶ್ಚಿಮ ದಿಕ್ಕಿನಲ್ಲಿ, ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾ ಇರುವ ದಿಕ್ಕಿಗೆ ಈ ನಿಂಬಾರ್ ಅಥವಾ ಗೂಡು ಇದೆ. ನಿಂಬಾರ್ ಎಲ್ಲಾ ಮಸೀದಿಗಳಲ್ಲಿ ಇರುವುದನ್ನು ನಾವು ನೋಡಬಹುದು. ಆದರೆ ಇದರ ಮುಂದೆ ಸಾಯಿಬಾಬಾರವರು ದೀಪಗಳನ್ನು ಹಚ್ಚುತ್ತಿದ್ದರು. ಈ ಸ್ಥಳವನ್ನು ಸಾಯಿಭಕ್ತರು ಹೂವುಗಳಿಂದ, ಹಾರಗಳಿಂದ ಅಲಂಕರಿಸುವ ಪದ್ಧತಿ ಇಟ್ಟುಕೊಂಡಿದ್ದಾರೆ. ಈ ನಿಂಬಾರ್ ಗೆ ತಮ್ಮ ಬೆನ್ನು ಮಾಡಿಕೊಂಡು ತಮ್ಮ ಇಕ್ಕೆಲಗಳಲ್ಲಿ ಭಕ್ತರನ್ನು ಕೂಡಿಸಿಕೊಂಡು ಸಾಯಿಬಾಬಾರವರು ಊಟ ಮಾಡುತ್ತಿದ್ದರು ಮತ್ತು ನಿಂಬಾರ್ ನ ಮುಂದೆ ಒಂದು ಪರದೆಯನ್ನು ಊಟದ ಸಮಯದಲ್ಲಿ ಇಳಿ ಬಿಡಲಾಗುತ್ತಿತ್ತು ಎಂದು ಸಾಯಿ ಸಚ್ಚರಿತೆಯಲ್ಲಿ ಬರೆದಿರುತ್ತಾರೆ. ಇದೇ ಸ್ಥಳದಲ್ಲಿ ಸಾಯಿಯವರು ರಾತ್ರಿಯ ಹೊತ್ತು ತಮ್ಮ ತಲೆಯನ್ನು ನಿಂಬಾರ್ ಇರುವ ದಿಕ್ಕಿಗೆ ಇಟ್ಟುಕೊಂಡು ಮಲಗುತ್ತಿದ್ದರು. ಅವರ ಪಕ್ಕದಲ್ಲಿ ಮಾಳಸಾಪತಿ ಮತ್ತು ತಾತ್ಯ ಕೋತೆ ಪಾಟೀಲರು ಮಲಗುತ್ತಿದ್ದರು.

ಸಾಯಿಬಾಬಾರವರು ಕೆಲವು ವೇಳೆ ಮುಸ್ಲಿಮರ ಪದ್ದತಿಯಂತೆ ನಿಂಬಾರ್ ನ ಎದುರುಗಡೆ ಕುಳಿತು ನಮಾಜ್ ಮಾಡುತ್ತಿದ್ದರು. ಆಗ ಶಿರಡಿ ಗ್ರಾಮದ ಮುಸ್ಲಿಮರು ಕೂಡ ಬಂದು ಇವರೊಡನೆ ಸೇರಿ ನಮಾಜ್ ಮಾಡುತ್ತಿದ್ದರು. ಒಂದು ಬಾರಿ ಶಿರಡಿಗೆ ಸಮೀಪದಲ್ಲಿರುವ ಸಂಗಮ್ನೇರ್ ನಿಂದ ಕೆಲವು ಹಿರಿಯ ಮುಸ್ಲಿಂ ಮುಖಂಡರು ಸಾಯಿಬಾಬಾರವರು ಮುಸ್ಲಿಂ ಪದ್ದತಿಗೆ ವಿರುದ್ದವಾಗಿ ಅನೈತಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂಬ ದೂರಿನ ಮೇಲೆ ಅವರನ್ನು ಪರೀಕ್ಷಿಸಲು ಬಂದರು. ಆ ಸಮಯದಲ್ಲಿ ಸಾಯಿಬಾಬಾರವರು ಮಸೀದಿಯ ನೆಲಕ್ಕೆ ಸಗಣಿಯನ್ನು ಬಳಿದು ಮಸೀದಿಯನ್ನು ಸಾರಿಸುತ್ತಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಾಬಾ ಆಗ ಮಧ್ಯಾನ್ಹದ ಸಮಯವಾದ್ದರಿಂದ ಆ ಮುಖಂಡರನ್ನು ತಮ್ಮೊಂದಿಗೆ ನಮಾಜ್ ಮಾಡಲು ಕರೆದರು. ಆ ಒದ್ದೆಯಾದ ಸ್ಥಳವನ್ನು ನೋಡಿ ಮುಸ್ಲಿಂ ಮುಖಂಡರು ಎಲ್ಲಿ ತಮ್ಮ ಬಟ್ಟೆಗಳು ಕೊಳೆಯಾಗುವುದೋ ಎಂದು ಹಿಂಜರಿದರು. "ನೀವು ಶುದ್ದ ಮನಸ್ಸಿನಿಂದ ನಮಾಜ್ ಮಾಡಿದರೆ ಯಾವ ಕೊಳೆಯು ಅಂಟುವುದಿಲ್ಲ" ಎಂದು ಬಾಬಾರವರು ಹೇಳಿದರು. ಅಲ್ಲಾ ಮಾಲಿಕ್ ಎಂದು ಹೇಳುತ್ತಾ ಬಾಬಾರವರು ನಮಾಜ್ ಪ್ರಾರಂಭಿಸಿದರು. ಆ ಮುಸ್ಲಿಮರು ವಿಧಿಯಿಲ್ಲದೇ ಬಾಬಾರವರೊಂದಿಗೆ ನಮಾಜ್ ಮಾಡಿದರು. ಆ ನಂತರ ಎದ್ದು ನೋಡಲಾಗಿ ಅವರ ಬಟ್ಟೆಗಳು ಸ್ವಲ್ಪವೂ ಕೊಳೆಯಾಗದಿರುವುದನ್ನು ಕಂಡು ಆಶ್ಚರ್ಯಪಟ್ಟು ಬಾಬಾರವರ ಪಾದಗಳಿಗೆರಗಿದರು ಮತ್ತು ಸಾಯಿಯವರೊಬ್ಬ ಮಹಾತ್ಮನೆಂಬ ಸತ್ಯವನ್ನು ಅರಿತರು.

ಬೀಸುವ ಕಲ್ಲು

ಬೀಸುವ ಕಲ್ಲು

ಈ ಬೀಸುವ ಕಲ್ಲು ದ್ವಾರಕಾಮಾಯಿಯ ಪಶ್ಚಿಮ ದಿಕ್ಕಿನಲ್ಲಿ ನಿಂಬಾರ್ ಪಕ್ಕದಲ್ಲಿದೆ. ಸಾಯಿಬಾಬಾರವರು ೨-೩ ಬೀಸುವ ಕಲ್ಲುಗಳನ್ನು ಇಟ್ಟುಕೊಂಡಿದ್ದರು. ಅದರಲ್ಲಿ ಒಂದು ಬೀಸುವ ಕಲ್ಲು ಈಗ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನು ಸಾಯಿಯವರು ಗೋಧಿಯನ್ನು ಬೀಸಿ ಹಿಟ್ಟು ಮಾಡಲು ಬಳಸುತ್ತಿದ್ದರು. ಹೇಮಾಡಪಂತರು ಸಾಯಿ ಸಚ್ಚರಿತೆ ಬರೆಯಲು ಈ ಬೀಸುವ ಕಲ್ಲೇ ಸ್ಪೂರ್ತಿಯಾಯಿತು. ಅದರ ವಿವರಣೆ ಇಲ್ಲಿದೆ:

ಒಂದು ದಿನ ಬೆಳಗಿನ ಜಾವ, ೧೯೧೦ ರಲ್ಲಿ ಹೇಮಾಡಪಂತರು ಶಿರಡಿಗೆ ತೆರಳಿ ದ್ವಾರಕಾಮಾಯಿಗೆ ಸಾಯಿಬಾಬಾರವರ ದರ್ಶನ ಮಾಡಲು ಹೋದಾಗ ಅಲ್ಲಿ ಒಂದು ಆಶ್ಚರ್ಯದ ಘಟನೆ ನಡೆಯಿತು. ಸಾಯಿಯವರು ಗೋಧಿಯ ರಾಶಿಯನ್ನು ಹಾಕಿಕೊಂಡು ಬೀಸಲು ಕುಳಿತಿದ್ದರು. ಒಂದು ಗೋಣಿಚೀಲವನ್ನು ನೆಲದ ಮೇಲೆ ಹಾಸಿ, ತಮ್ಮ ಕೈತೋಳನ್ನು ಮೇಲೇರಿಸಿ ಗೋಧಿಯನ್ನು ಬೀಸಲು ಕುಳಿತರು. ಇದನ್ನು ಕಂಡು ಹೇಮಾಡಪಂತರಿಗೆ ಆಶ್ಚರ್ಯವಾಯಿತು. ಸಾಯಿಯವರು ಫಕೀರರು. ಭಿಕ್ಷೆ ಬೇಡಿ ಜೀವಿಸುತ್ತಾರೆ. ಇವರಿಗೆ ಮನೆಯಾಗಲಿ, ಮಕ್ಕಳಾಗಲಿ ಯಾರು ಇಲ್ಲ. ಯಾರಿಗೋಸ್ಕರ ಇಷ್ಟು ಗೋಧಿಯನ್ನು ಹಿಟ್ಟು ಮಾಡಲು ಹೊರಟಿದ್ದಾರೆ ಎಂದು ಯೋಚಿಸಿದರು. ಮಸೀದಿಯಲ್ಲಿ ನೆರೆದಿದ್ದ ಇತರ ಭಕ್ತರಿಗೂ ಈ ದೃಶ್ಯವನ್ನು ಕಂಡು ಆಶ್ಚರ್ಯವಾಯಿತು. ಆದರೆ, ಯಾರಿಗೂ ಮಾತನಾಡುವ ಧೈರ್ಯವಿಲ್ಲದೆ ಸುಮ್ಮನಾದರು. ಈ ವಿಷಯ ಶಿರಡಿ ಗ್ರಾಮದಲ್ಲೆಲ್ಲ ಹರಡಿ ಎಲ್ಲರೂ ಬಂದು ಮಸೀದಿಯಲ್ಲಿ ನೆರೆದರು. ಅವರಲ್ಲಿ ೪ ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಬಾಬಾರವರಿಂದ ಬೀಸುವ ಕಲ್ಲಿನ ಹಿಡಿಯನ್ನು ಕಸಿದುಕೊಂಡು ತಾವೇ ಬೀಸಲು ಕುಳಿತರು. ಬಾಬಾ ಮೊದಲು ಕೋಪಗೊಂಡರು. ಆದರೆ, ನಂತರ ಆ ಮಹಿಳೆಯರು ಹಾಡುತ್ತ ಬೀಸುತ್ತಿದ್ದುದನ್ನು ಕಂಡು ಮನಸೋತು ಮುಗುಳ್ನಗುತ್ತ ಕುಳಿತರು. ಆ ರಾಶಿ ಗೋಧಿಯನ್ನು ಬೀಸಿ ಮುಗಿಸಿದ ಮಹಿಳೆಯರು ಅದನ್ನು ೪ ಭಾಗ ಮಾಡಿ ತೆಗೆದುಕೊಂಡು ಹೋಗಲು ಅನುವಾದರು. ಅಲ್ಲಿಯವರೆಗೂ ಸುಮ್ಮನಿದ್ದ ಬಾಬಾ ಒಮ್ಮೆಲೇ ಕೋಪಗೊಂಡು "ಏನು ಮಹಿಳೆಯರೇ, ನಿಮಗೇನು ಹುಚ್ಚು ಹಿಡಿಯಿತೆ? ಯಾರ ಅಪ್ಪನ ಆಸ್ತಿಯೆಂದು ಇದನ್ನು ತೆಗೆದುಕೊಂಡು ಹೋಗುತ್ತಿದ್ದೀರಿ? ನಾನೇನಾದರೂ ನಿಮ್ಮ ಮನೆಗಳಿಂದ ಗೋಧಿಯನ್ನು ಸಾಲವಾಗಿ ತಂದಿರುವೆನೆ? ನಿಮಗೆ ಇದರ ಮೇಲೆ ಏನು ಅಧಿಕಾರವಿದೆ? ಎಂದು ದಬಾಯಿಸಿದರು. "ಈ ಹಿಟ್ಟನ್ನು ತೆಗೆದುಕೊಂಡು ಹೋಗಿ ಹಳ್ಳಿಯ ಗಡಿಯ ಸುತ್ತಲೂ ಹಾಕಿ ಬನ್ನಿ" ಎಂದು ಆಜ್ಞಾಪಿಸಿದರು. ಆಗ ಶಿರಡಿಯಲ್ಲಿ ಕಾಲರಾ ಸಾಂಕ್ರಾಮಿಕ ರೋಗವು ಹರಡಿತ್ತು. ಅದನ್ನು ತಡೆಗಟ್ಟಲು ಸಾಯಿಯವರು ಹೀಗೆ ಮಾಡಿದರು ಎಂದು ಮಸೀದಿಯಲ್ಲಿ ನೆರೆದಿದ್ದ ಶಿರಡಿಯ ಗ್ರಾಮಸ್ಥರು ಹೇಳಿದರು. ಇದನ್ನು ಕಂಡು ಹೇಮಾಡಪಂತರು ಆಶ್ಚರ್ಯಗೊಂಡರು. ಗೋಧಿಗೂ, ಕಾಲರಾಕ್ಕೂ ಇರುವ ಸಂಬಂಧವೇನು? ಎಂದು ಯೋಚನಮಗ್ನರಾದರು. ಅಂದೇ ಸಾಯಿಬಾಬಾರವರ ಬಗ್ಗೆ ಬರೆಯಬೇಕೆಂದು ನಿರ್ಧರಿಸಿಕೊಂಡರು.

ಚಿಲ್ಲಂ

ಬೀಸುವ ಕಲ್ಲಿನ ಪಕ್ಕದ ಗೂಡಿನಲ್ಲಿ ಸಾಯಿಬಾಬಾರವರು ಈ ಚಿಲ್ಲಂಗಳನ್ನು ಇಡುತ್ತಿದ್ದರು. ಸಾಯಿಬಾಬಾರವರು ಆ ಚಿಲ್ಲಂಗಳಲ್ಲಿ ಹೊಗೆಸೊಪ್ಪನ್ನು ಹಾಕಿಕೊಂಡು ಸೇದುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು. ಅವರು ಚಿಲ್ಲಮನ್ನು ಒಂದು ಬಾರಿ ಎಳೆದು ಅದನ್ನು ತಮ್ಮ ಪಕ್ಕದಲ್ಲಿದ್ದ ಭಕ್ತರಿಗೂ ಸೇದಲು ಕೊಡುತ್ತಿದ್ದರು. ಆಗ ಸಾಯಿಬಾಬಾರವರು ಸ್ವಾರಸ್ಯಕರವಾದ ಕತೆಗಳನ್ನು ಹೇಳುತ್ತಿದ್ದರು. ಶಿರಡಿ ಡೈರಿಯ ಲೇಖಕರಾದ ಜಿ.ಎಸ್.ಖಾಪರ್ದೆಯವರು ತಮಗೆ ಸಾಯಿಯವರು ಪದೇ ಪದೇ ಚಿಲ್ಲಂ ಸೇದಲು ನೀಡುತ್ತಿದ್ದರು ಮತ್ತು ಅದನ್ನು ಒಂದು ಬಾರಿ ಎಳೆದ ನಂತರ ತಮ್ಮ ಮನದಲ್ಲಿದ್ದ ಅನೇಕ ಸಂಶಯಗಳು ಹಾರಿಹೋಗುತ್ತಿದ್ದವು ಎಂದು ತಿಳಿಸಿದ್ದಾರೆ. ಸಾಯಿಭಕ್ತರಾದ ಹರಿ ಭಾವು ಕಾರ್ಣಿಕರು ಅಸ್ಥಮಾದಿಂದ ನರಳುತ್ತಿದ್ದರು. ಸಾಯಿಯವರು ಅವರಿಗೆ ಚಿಲ್ಲಂ ಸೇದಲು ನೀಡಿದಾಗಿನಿಂದ ಅವರ ಆಸ್ತಮಾ ಸಂಪೂರ್ಣ ಗುಣವಾಗಿ ಪುನಃ ಬರಲೇ ಇಲ್ಲ.

ಈ ಚಿಲ್ಲಂಗಳನ್ನು ಈಗ ಸಾಯಿಬಾಬಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಸಾಯಿಬಾಬಾರವರ ಭಾವಚಿತ್ರ ಮತ್ತು ಅದರ ಮುಂದಿರುವ ಪಾದುಕೆಗಳು


ಶ್ಯಾಮರಾವ್ ಜಯಕರ್ ಚಿತ್ರಿಸಿರುವ ದ್ವಾರಕಾಮಾಯಿ ಸಾಯಿಬಾಬಾ ಭಾವಚಿತ್ರ

ಸಾಯಿಬಾಬಾರವರ ಭಾವಚಿತ್ರದ ಮುಂದೆ ಇರಿಸಿರುವ ಬೆಳ್ಳಿಯ ಪವಿತ್ರ ಪಾದುಕೆಗಳು

ಸಾಯಿಬಾಬಾರವರ ಜೀವಿತದ ಕಾಲದಲ್ಲಿ ಈ ಸುಂದರ ಚಿತ್ರವನ್ನು ಸ್ಥಾಪಿಸಲಾಯಿತು. ಈ ಚಿತ್ರವನ್ನು ಸಾಯಿ ಭಕ್ತರಾದ ಶ್ಯಾಮರಾವ್ ಜಯಕರ್ ರವರು ಚಿತ್ರಿಸಿದ್ದಾರೆ. ಈ ಚಿತ್ರಪಟಕ್ಕೆ ಬಾಪು ಸಾಹೇಬ್ ಜೋಗ ಪ್ರತಿದಿನ ೨ ಬಾರಿ ಆರತಿ ಮಾಡುತ್ತಿದ್ದರು. ನಂತರ ಸಾಯಿಬಾಬಾರವರ ಸಲಹೆಯ ಮೇರೆಗೆ ಆರತಿ ಮಾಡುವುದನ್ನು ನಿಲ್ಲಿಸಲಾಯಿತು. ಅನೇಕ ಸಾಯಿಭಕ್ತರಿಗೆ ಈ ಭಾವಚಿತ್ರವನ್ನು ನೋಡಿದರೆ ತಮ್ಮ ಇಷ್ಟದೇವರ ಸಾಕ್ಷಾತ್ಕಾರವಾಗಿದೆ. ಈ ಭಾವಚಿತ್ರದ ಮುಂದೆ ಬೆಳ್ಳಿಯ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಈ ಭಾವಚಿತ್ರಕ್ಕೆ ಮತ್ತು ಬೆಳ್ಳಿಯ ಪವಿತ್ರ ಪಾದುಕೆಗಳಿಗೆ ಪ್ರತಿದಿನ ದ್ವಾರಕಾಮಾಯಿಯ ಪುರೋಹಿತರು ಅಲಂಕಾರ ಮಾಡುತ್ತಾರೆ ಮತ್ತು ಪ್ರತಿದಿನ ಸಾಯಂಕಾಲ ಭೋಗ್ ನೀಡುತ್ತಾರೆ.



ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಪವಿತ್ರ ಕಲ್ಲು

ಸಾಯಿಬಾಬಾ ಕುಳಿತುಕೊಳ್ಳುತ್ತಿದ್ದ ಪವಿತ್ರ ಕಲ್ಲು

ದ್ವಾರಕಾಮಾಯಿಯ ಪೂರ್ವ ಭಾಗದ ಮಧ್ಯದಲ್ಲಿ ಈ ಪವಿತ್ರ ಕಲ್ಲಿದೆ. ಈ ಕಲ್ಲಿನ ಮೇಲೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿಕೊಂಡು ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದರೆಂದು ಹೇಳುತ್ತಾರೆ. ಈ ಕಲ್ಲಿನ ಮುಂದೆ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಈ ಕಲ್ಲು ಮೊದಲು ಲೇಂಡಿ ಉದ್ಯಾನವನದಲ್ಲಿ ಇತ್ತೆಂದು, ಅಬ್ದುಲ್ಲಾ ಮತ್ತು ಇತರ ಶಿರಡಿ ಗ್ರಾಮದ ನಿವಾಸಿಗಳು ಇದನ್ನು ಬಟ್ಟೆ ಒಗೆಯಲು ಬಳಸುತ್ತಿದರೆಂದು, ಒಮ್ಮೆ ಸಾಯಿಬಾಬಾರವರು ಇದರ ಮೇಲೆ ಕುಳಿತಿದ್ದನ್ನು ನೋಡಿ ಅದನ್ನು ದ್ವಾರಕಾಮಾಯಿಗೆ ತಂದು ಸಾಯಿಬಾಬಾರವರು ಕುಳಿತುಕೊಳ್ಳಲು ಆಸನ ಮಾಡಿಕೊಟ್ಟರು ಎಂದು ಹೇಳಲಾಗುತ್ತದೆ.

ಹುಲಿಯ ವಿಗ್ರಹ

ಹುಲಿಯ ವಿಗ್ರಹ

ಈ ಹುಲಿಯ ವಿಗ್ರಹವನ್ನು ೧೨ ನೇ ನವೆಂಬರ್ ೧೯೬೯ ರಂದು ಒಜೆರ್ ಗ್ರಾಮದ ನಿವಾಸಿಯಾದ ತ್ರಯಂಬಕ ರಾವ್ ರವರು ದ್ವಾರಕಾಮಾಯಿಯಲ್ಲಿ ಸ್ಥಾಪಿಸಿದರು. ಇದರ ವಿವರಣೆಯನ್ನು ಸಾಯಿ ಸಚ್ಚರಿತೆಯ ೩೧ ನೇ ಅಧ್ಯಾಯದಲ್ಲಿ ಸಾಯಿಭಕ್ತರು ನೋಡಬಹುದು. ಸಾಯಿಬಾಬಾರವರ ದೇಹಾವಸಾನಕ್ಕೆ ೭ ದಿನಗಳ ಮುಂಚೆ ಕೆಲವು ದರವೇಶಿಗಳು ಈ ಮರಣ ಶಯ್ಯೆಯಲ್ಲಿದ್ದ ಹುಲಿಯನ್ನು ಚಕ್ಕಡಿ ಗಾಡಿಯಲ್ಲಿ ಹಾಕಿ ಸಾಯಿಬಾಬಾರವರ ಬಳಿ ಬದುಕಿಸುವ ಆಸೆಯಿಂದ ತಂದರು. ಆ ದರವೇಶಿಗಳು ಹುಲಿಯನ್ನು ಹಳ್ಳಿಗಳಲ್ಲಿ ಪ್ರದರ್ಶನ ಮಾಡಿ ಅದರಿಂದ ಬರುವ ಆದಾಯದಿಂದ ಜೀವನ ನಡೆಸುತ್ತಿದ್ದರು. ಅದು ಬಹಳ ದಿನಗಳಿಂದ ರೋಗದಿಂದ ನರಳುತ್ತಿತ್ತು. ಆದರೆ ಆ ಹುಲಿಯು ದ್ವಾರಕಾಮಾಯಿಯ ಒಳಗಡೆ ಬಂದು ಸಾಯಿಬಾಬಾರವರನ್ನು ನೋಡಿದ ಕೂಡಲೇ ಅವರ ದಿವ್ಯ ತೇಜಸ್ಸನ್ನು ಸಹಿಸಲಾರದೆ ತಲೆಯನ್ನು ಕೆಳಗೆ ಮಾಡಿ ಅವರನ್ನು ಪ್ರೀತಿಯಿಂದ ನೋಡಿತು. ನಂತರ ಬಾಲವನ್ನು ಅಲ್ಲಾಡಿಸಿ ಅದನ್ನು ಮೂರು ಸಲ ನೆಲಕ್ಕೆ ಹೊಡೆದು, ಜ್ಞಾನ ತಪ್ಪಿ ಕೆಳಗೆ ಬಿದ್ದ ಕೂಡಲೇ ಅದರ ಪ್ರಾಣ ಹೋಯಿತು. ಇದರಿಂದ ಆ ದರವೇಶಿಗಳಿಗೆ ಅತೀವ ದುಃಖವಾಯಿತು. ಸಾಯಿಬಾಬಾರವರು ಅವರನ್ನು ಸಂತೈಸಿ ಅವರಿಗೆ ೫೦೭/- ರುಪಾಯಿಗಳನ್ನು ನೀಡಿದರು. ಹೀಗೆ ಸಾಯಿಬಾಬಾರವರು ಮಾನವರಿಗೆ ಮಾತ್ರವೇ ಅಲ್ಲದೇ ಪ್ರಾಣಿಗಳಿಗೂ ಕೂಡ ಸದ್ಗತಿಯನ್ನು ಕೊಡುತ್ತಿದ್ದುದು ಈ ಘಟನೆಯಿಂದ ನಮಗೆ ತಿಳಿಯುತ್ತದೆ.

ಸಾಯಿಬಾಬಾರವರಿಂದ ದ್ವಾರಕಾಮಾಯಿಯಲ್ಲಿ ಮುಕ್ತಿಯನ್ನು ಪಡೆದ ಈ ಹುಲಿಯ ಸಮಾಧಿ ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ಈಶ್ವರನ ಮಂದಿರದ ಮುಂಭಾಗದಲ್ಲಿದೆ.

ಅಡುಗೆಯ ಒಲೆ

ಅಡುಗೆಯ ಒಲೆ

ಇದು ದ್ವಾರಕಾಮಾಯಿಯ ಹೊರಗಡೆಯಲ್ಲಿ ಎಡಭಾಗದಲ್ಲಿದೆ. ಈ ಒಲೆಯ ಮೇಲೆ ಸಾಯಿಬಾಬಾರವರು ಕೆಲವು ವೇಳೆ ಅಡುಗೆ ಮಾಡುತ್ತಿದ್ದರು. ಇತ್ತೀಚಿನ ದಿನಗಳವರೆಗೂ ಇದನ್ನು ತೆರೆದಿಟ್ಟಿದ್ದರು. ಈಗ ಈ ಅಡುಗೆಯ ಒಲೆಯನ್ನು ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ.

ಈ ಒಲೆಯ ಮೇಲೆ ಸಾಯಿಯವರು ಆಗಾಗ್ಗೆ ಅಡುಗೆ ಮಾಡಿ ಎಲ್ಲರಿಗೂ ತಮ್ಮ ಸ್ವಹಸ್ತದಿಂದ ಬಡಿಸುತ್ತಿದರು. ಸಿಹಿ ಅನ್ನ, ಪುಲಾವ್ ಮತ್ತು ಇನ್ನು ಮುಂತಾದ ಅಡುಗೆಯನ್ನು ಮಾಡಿ ಬಡಿಸುತ್ತಿದ್ದರು. ಅದಕ್ಕೆ ಬೇಕಾದ ಪದಾರ್ಥಗಳನ್ನು ತಾವೇ ಸ್ವತಃ ಪೇಟೆಗೆ ಹೋಗಿ ತರುತ್ತಿದ್ದರು. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ೫೦-೨೦೦ ಜನರಿಗೆ ಆಗುವಷ್ಟು ಅಡುಗೆಯನ್ನು ಮಾಡಿ ಮಸೀದಿಯಲ್ಲಿದ್ದವರಿಗೆಲ್ಲ ಬಡಿಸುತ್ತಿದ್ದರು. ಅನ್ನ ಸರಿಯಾಗಿ ಬೆಂದಿದೆಯೋ ಇಲ್ಲವೋ ಎಂದು ನೋಡಲು ತಮ್ಮ ತೋಳುಗಳನ್ನು ಮೇಲೆ ಸರಿಸಿ ಬಲಗೈನಿಂದ ಹಂಡೆಯ ಒಳಗಡೆ ಕೈಹಾಕಿ ನೋಡುತ್ತಿದ್ದರು. ಆದರೂ ಕೂಡ ಅವರ ಕೈಗಳು ಸ್ವಲ್ಪವೂ ಸುಡುತ್ತಿರಲಿಲ್ಲ. ಮುಖವು ಸ್ವಲ್ಪವೂ ಕುಂದುತ್ತಿರಲಿಲ್ಲ. ಈಗ ಈ ಹಂಡೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಮರದ ಕಂಭ

ಮರದ ಕಂಭ

ಇದು ದ್ವಾರಕಾಮಾಯಿಯ ಹೊರಗಡೆಯಲ್ಲಿ ಎಡಭಾಗದಲ್ಲಿ ಅಡುಗೆಯ ಒಲೆಯ ಪಕ್ಕದಲ್ಲಿದೆ. ಸಾಯಿಬಾಬಾರವರು ಅಡುಗೆಯನ್ನು ಮಾಡುವಾಗ ಇದಕ್ಕೆ ಒರಗಿ ಕುಳಿತುಕೊಳ್ಳುತ್ತಿದ್ದರೆಂದು ಹೇಳುತ್ತಾರೆ. ಸಾಯಿ ಶರಣಾನಂದರು ಮತ್ತು ವಾಮನ್ ಪಟೇಲರು ಮೊಣಕಾಲು ನೋವಿನಿಂದ ನರಳುತ್ತಿದ್ದಾಗ ಸಾಯಿಬಾಬಾರವರು ಇವರಿಗೆ ಈ ಮರದ ಕಂಭವನ್ನು ಮುಟ್ಟಿ ಅದಕ್ಕೆ ಪ್ರದಕ್ಷಿಣೆ ಮಾಡುವಂತೆ ಸೂಚಿಸಿದರು ಮತ್ತು ಹಾಗೆಯೇ ಮಾಡಲಾಗಿ ಅವರುಗಳ ನೋವು ಮಾಯವಾಯಿತು ಎಂದು ಹೇಳಲಾಗಿದೆ. ಇಂದಿಗೂ ಅನೇಕ ವಿಧವಾದ ನೋವುಗಳಿಂದ ಬಳಲುತ್ತಿರುವ ಸಾಯಿಭಕ್ತರು ಈ ಮರದ ಕಂಭಕ್ಕೆ ಒರಗಿ ಕುಳಿತುಕೊಳ್ಳುವ ಅಭ್ಯಾಸ ಇಟ್ಟುಕೊಂಡಿದ್ದಾರೆ ಮತ್ತು ಅವರ ನೋವುಗಳು ಆಶ್ಚರ್ಯಕರ ರೀತಿಯಲ್ಲಿ ಮಾಯವಾಗಿರುತ್ತವೆ.

ಪಾದುಕೆಗಳು

ಇದು ದ್ವಾರಕಾಮಾಯಿಯ ಹೊರಗಡೆಯಲ್ಲಿ ಎಡಭಾಗದಲ್ಲಿ ಅಡುಗೆಯ ಒಲೆಯ ಹಿಂಭಾಗದಲ್ಲಿದೆ. ಇದರ ಮೇಲೆ ಸಾಯಿಬಾಬಾರವರು ತಮ್ಮ ಕೈಗಳನ್ನಿಟ್ಟುಕೊಂಡು ಏನನ್ನೋ ಯೋಚಿಸುತ್ತ ನಿಲ್ಲುವ ಭಂಗಿಯಲ್ಲಿ ಇದಕ್ಕೆ ಒರಗಿಕೊಂಡು ಲೇಂಡಿ ಉದ್ಯಾನವನಕ್ಕೆ ಹೋಗುವ ಮುನ್ನ ನಿಲ್ಲುತ್ತಿದ್ದರು. ಹೀಗೆ ನಿಂತುಕೊಂಡು ಹೋಗಿ ಬರುವ ಶಿರಡಿಯ ಗ್ರಾಮಸ್ಥರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಸಾಯಿಯವರು ಮಹಾಸಮಾಧಿಯಾದ ನಂತರ ಈ ಸ್ಥಳದಲ್ಲಿ ಸಾಯಿಬಾಬಾ ಸಂಸ್ಥಾನದವರು ಪಾದುಕೆಗಳನ್ನು ಸ್ಥಾಪಿಸಿ ಇದರ ಮೇಲೆ ಸಣ್ಣ ದೇಗುಲವನ್ನು ಕಟ್ಟಿದ್ದಾರೆ. ಇದರ ಗೋಡೆಯ ಮೇಲೆ ಮತ್ತೆರಡು ಪಾದುಕೆಗಳನ್ನು ಸ್ಥಾಪಿಸಿದ್ದಾರೆ. ಇದರ ಮೇಲೆ ಸಾಯಿಬಾಬಾರವರು ತಮ್ಮ ಕೈಗಳನ್ನು ಇಡುತ್ತಿದ್ದರೆಂದು ತಿಳಿದು ಬಂದಿದೆ.

ಸಾಯಿಯವರು ಒರಗಿಕೊಂಡು ನಿಲ್ಲುತ್ತಿದ್ದ ಸ್ಥಳದಲ್ಲಿ ಸ್ಥಾಪಿಸಿರುವ ಸಣ್ಣ ದೇಗುಲ ಮತ್ತು ಪಾದುಕೆಗಳು

ಸಾಯಿಬಾಬಾ ಒರಗಿಕೊಂಡು ನಿಲ್ಲುತ್ತಿದ್ದ ಸ್ಥಳ

ತುಳಸಿ ಬೃಂದಾವನ

                       ತುಳಸಿ ಬೃಂದಾವನ

ಸಾಯಿಬಾಬಾರವರು ಇದನ್ನು ದ್ವಾರಕಾಮಾಯಿ ಮಸೀದಿಯ ಪ್ರಾಂಗಣದ ಹೊರಗಡೆ ಬೆಳೆಸಿದ್ದರು. ಮಸೀದಿಯ ಪ್ರಾಂಗಣದ ಮೇಲ್ಚಾವಣಿಯನ್ನು ಸರಿಪಡಿಸಿದ ಮೇಲೆ ಸಾಯಿಭಕ್ತರು ಇದನ್ನು ತಂದು ದ್ವಾರಕಾಮಾಯಿಯ ಪ್ರಾಂಗಣದ ಒಳಗಡೆ ದೇವ ಮೂಲೆಯಲ್ಲಿ ಸ್ಥಾಪಿಸಿದರು. ಶ್ರೀ ಸಾಯಿಬಾಬಾ ಸಂಸ್ಥಾನದವರು ಪ್ರತಿ ವರ್ಷ ದೀಪಾವಳಿ ಹಬ್ಬದ ೧೨ ನೇ ದಿವಸ ತುಳಸಿ ವಿವಾಹವನ್ನು ಅತ್ಯಂತ ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ.

ಸಾಯಿಬಾಬಾರವರ ಪ್ರೀತಿಯ ಕುದುರೆ ಶ್ಯಾಮ ಕರ್ಣ

ಶ್ಯಾಮಕರ್ಣ ನ ವಿಗ್ರಹ

ಕುದುರೆಯ ವ್ಯಾಪರಿಯಾದ ಕಸಮ್ ಗೆ ತನ್ನ ಬಳಿಯಿದ್ದ ಕುದುರೆಯು ಎಷ್ಟು ವರ್ಷವಾದರೂ ಮರಿ ಹಾಕಲಿಲ್ಲ ಎಂದು ಬಹಳ ಬೇಜಾರಾಗಿತ್ತು. ಆಗ ಕಸಮ್ ತನ್ನ ಬಳಿಯಿದ್ದ ಕುದುರೆಗೆ ಮರಿ ಹುಟ್ಟಿದರೆ ಅದರ ಮೊದಲ ತಳಿಯನ್ನು ಸಾಯಿಬಾಬಾರವರಿಗೆ ಅರ್ಪಿಸುವುದಾಗಿ ಬೇಡಿಕೊಂಡರು. ಸಾಯಿಬಾಬಾರವರ ದಯೆಯಿಂದ ಮತ್ತು ಆಶೀರ್ವಾದದಿಂದ ಕುದುರೆಯು ಮರಿಯನ್ನು ಹಾಕಿತು. ಕಸಮ್ ಆ ಮರಿಯನ್ನು ತಂದು ಸಾಯಿಬಾಬಾರವರಿಗೆ ಆರ್ಪಿಸಿದರು. ಅದರ ಮೈ ಕಂಡು ಬಣ್ಣದಿಂದ ಕೂಡಿದ್ದು ಅದರ ಕಿವಿಗಳು ಕಪ್ಪಗಿದ್ದವು. ಆದುದರಿಂದ ಸಾಯಿಬಾಬಾರವರು ಅದಕ್ಕೆ "ಶ್ಯಾಮಕರ್ಣ" ಎಂದು ನಾಮಕರಣ ಮಾಡಿದರು. ಆ ಕುದುರೆಗೆ ಸಾಯಿಬಾಬಾರವರೆಂದರೆ ಬಹಳ ಇಷ್ಟ ಮತ್ತು ಸಾಯಿಯವರು ಕೂಡ ಅದನ್ನು ಬಹಳ ಇಷ್ಟಪಡುತ್ತಿದ್ದರು. ಈ ಕುದುರೆಯನ್ನು "ಶ್ಯಾಮಸುಂದರ ಹಾಲ್" ನಲ್ಲಿ ಇರಿಸಿದ್ದರು. ಈ ಕುದುರೆಯು ೧೯೪೫ ರಲ್ಲಿ ತೀರಿಕೊಂಡಿತು ಮತ್ತು ಇದರ ಸಮಾಧಿಯನ್ನು ಲೇಂಡಿ ಉದ್ಯಾನವನದಲ್ಲಿ ಸ್ಥಾಪಿಸಲಾಗಿದೆ. ಶಿರಡಿ ಗ್ರಾಮ ನಿವಾಸಿಯಾದ ಬಾಳಾ ಸಾಹೇಬ ಸುಲ್ತೆ ಯವರು ಈ ಸುಂದರ ವಿಗ್ರಹವನ್ನು ಶ್ಯಾಮಕರ್ಣನ ನೆನಪಿಗಾಗಿ ನೀಡಿದರು. ಇದನ್ನು ಸಾಯಿಯವರು ಕುಳಿತು ಕೊಳ್ಳುತ್ತಿದ್ದ ಪವಿತ್ರ ಕಲ್ಲಿನ ಎಡಭಾಗದಲ್ಲಿ ಇರಿಸಲಾಗಿದೆ.

No comments:

Post a Comment