Saturday, July 3, 2010

ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳಗಳು  - ಲೇಂಡಿ ಉದ್ಯಾನವನ - ಕೃಪೆ - ಸಾಯಿಅಮೃತಧಾರಾ.ಕಾಂ  

ಲೇಂಡಿ ಉದ್ಯಾನವನದ ಒಂದು ಪಕ್ಷಿ ನೋಟ

ಲೇಂಡಿ ಉದ್ಯಾನವನವು ಸಾಯಿಬಾಬಾ ಸಂಸ್ಥಾನದ ಪ್ರಾಂಗಣದಲ್ಲಿ ಈಶಾನ್ಯ ಭಾಗದಲ್ಲಿದೆ. ಈ ಜಾಗವನ್ನು ಭೂಲೋಕದ ವೈಕುಂಠ ಎಂದೇ ಹೇಳಬೇಕು. ಏಕೆಂದರೆ, ತಮ್ಮ ಜೀವಿತ ಕಾಲದಲ್ಲಿ ಸಾಯಿಬಾಬಾರವರು ಪ್ರತಿದಿನ ಈ ಉದ್ಯಾನವನಕ್ಕೆ ಬಂದು ಹೋಗುತ್ತಿದ್ದರು.

ಲೇಂಡಿ ಎನ್ನುವುದು ಶಿರಡಿ ಗ್ರಾಮದ ಹೊರಭಾಗದಲ್ಲಿ ಹರಿಯುತ್ತಿದ್ದ ಒಂದು ಸಣ್ಣ ತೊರೆಯ ಹೆಸರು. ಆದ್ದರಿಂದ ಅದರ ಸುತ್ತ ಮುತ್ತಲಿನ ಪ್ರದೇಶವನ್ನು ಸಾಯಿಬಾಬಾರವರು ಲೇಂಡಿ ಬಾಗ್ ಎಂದು ಕರೆಯುತ್ತಿದ್ದರು. ಬಾಬಾರವರು ತಮ್ಮ ದೈನಂದಿನ ಜೀವನವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾನ್ಹ ತಮ್ಮ ಭಕ್ತರೊಡನೆ ಹಾಗೂ ಬೂಟಿ, ಭಾಗೋಜಿ  ಶಿಂಧೆ ಮತ್ತು ನಿಮೋಣ್ಕರ್ ರವರೊಡನೆ ಈ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಉದ್ಯಾನವನದ ಒಳಗಡೆ ತಾವೊಬ್ಬರೇ ಹೋಗುತ್ತಿದ್ದರು ಮತ್ತು ಅಲ್ಲಿ ಬಹಳ ಹೊತ್ತು ಕಾಲ ಕಳೆಯುತ್ತಿದ್ದರು.

ಸಾಯಿಬಾಬಾರವರ ಮಹಾಸಮಾಧಿಗೆ ಕೆಲವು ದಿನಗಳ ಮುಂಚೆ ಈ ಜಾಗವನ್ನು ಮುಂಬೈನ ಅಪ್ರತಿಮ ಸಾಯಿಭಕ್ತ ಮೊರೇಶ್ವರ  ಪ್ರಧಾನ್ ರವರು ಕೊಂಡುಕೊಂಡರು.  ಈ ಉದ್ಯಾನವನವನ್ನು ಮೊರೇಶ್ವರ ಪ್ರಧಾನ್ ಕೊಳ್ಳುವುದಕ್ಕೆ ಕೆಲವು ವರ್ಷಗಳ ಹಿಂದೆ  ಪ್ರಧಾನ್ ರವರನ್ನು  ಮತ್ತು ಚಂದೋರ್ಕರ್ ರವರ ಇಬ್ಬರು ಮಕ್ಕಳನ್ನು ಸಾಯಿಬಾಬಾರವರು ಇಲ್ಲಿಗೆ ಕರೆದುಕೊಂಡು ಬಂದಿದ್ದರು.  ಇಲ್ಲಿ ಸಾಯಿಬಾಬಾರರವರು ಕೆಲವು ಹಳ್ಳಗಳನ್ನು ತೋಡಿ ಅದರಲ್ಲಿ ನೆಡಲು ಕೆಲವು ಕಾಳುಗಳನ್ನು ಪ್ರಧಾನ್ ರವರಿಗೆ ನೀಡಿದರು ಮತ್ತು ಅದಕ್ಕೆ ನೀರೆರೆಯುವಂತೆ ಹೇಳಿದರು. ಆಗ ಪ್ರಧಾನ್ ರವರಿಗೆ ಆ ಸ್ಥಳವನ್ನು ಕೊಂಡು ಸಾಯಿಬಾಬಾರವರಿಗೆ ನೀಡಬೇಕೆಂಬ ಬಯಕೆ ಮನದಲ್ಲಿ  ಸುಳಿಯಿತು. ಅದರಂತೆ ಆ ಸ್ಥಳವನ್ನು ಪ್ರಧಾನ್ ರವರು ಕೊಂಡುಕೊಂಡರು ಮತ್ತು ಆ ಜಾಗವನ್ನು ಸಾಯಿಬಾಬಾರವರಿಗೆ ನೀಡಿದರು. ಅಂದಿನಿಂದ ಭಕ್ತರು ಸಾಯಿಬಾಬಾರವರನ್ನು ಮೆರವಣಿಗೆಯಲ್ಲಿ ಲೇಂಡಿ ಬಾಗ್ ಗೆ ಕರೆದುಕೊಂಡು ಹೋಗಲು ಪ್ರಾರಂಭಿಸಿದರು. ಸಾಯಿಭಕ್ತರು ಶಿರಡಿಗೆ ಹೋದಾಗ ಲೇಂಡಿ ಉದ್ಯಾನವನದ ಮುಂಭಾಗದಲ್ಲಿರುವ ಗೇಟ್ ನ ಮೇಲೆ "ಮೊರೇಶ್ವರ ಪ್ರಧಾನ್ ಚೇ ಲೇಂಡಿ ಬಾಗ್" ಎನ್ನುವ ನಾಮಫಲಕವನ್ನು ನೋಡಬಹುದು.    

ಲೇಂಡಿ ಉದ್ಯಾನವನವು ಸಾಯಿಬಾಬಾರವರ ಪಾದಧೂಳಿಯಿಂದ ಪವಿತ್ರವಾದ ಒಂದು ತಾಣ. ಸಾಯಿಬಾಬಾರವರು ಈ ಸ್ಥಳದಲ್ಲಿ ಬಹಳ ಹೊತ್ತು ಏಕಾಂತದಲ್ಲಿ ಕಳೆಯುತ್ತಿದ್ದರು. ಈ ಉದ್ಯಾನವನದಲ್ಲಿ ಅನೇಕ ಮರಗಳು ಮತ್ತು ಹೂ ಗಿಡಗಳಿದ್ದವು. ಪಾರಿಜಾತ, ಚಂಪಾ, ಚಮೇಲಿ, ಜುಯಿ ಮತ್ತು ಜಾಯಿ ಮತ್ತು ಇನ್ನು ಮುಂತಾದ ಹೂ ಗಿಡಗಳಿದ್ದವು. 1980 ರ ತನಕ ಈ ಉದ್ಯಾನವನದ ಮುಂಭಾಗವು ಬೋಗನ್ ವಿಲ್ಲಾ ಹೂಗಳಿಂದ ಮೇಲ್ಚಾವಣಿಯ ಹೊದಿಕೆಯನ್ನು ಹೊಂದಿದ ಸುಂದರವಾದ ಪ್ರವೇಶದ್ವಾರವನ್ನು ಹೊಂದಿತ್ತು. ಲೇಂಡಿ ಉದ್ಯಾನವನದ ಎಡ ಭಾಗದಲ್ಲಿ ಗುಲಾಬಿ ತೋಟವಿದ್ದು ಅಲ್ಲಿ ಜಿಂಕೆ ಮತ್ತು ಮೊಲಗಳು ನಿರ್ಭಯದಿಂದ ಓಡಾಡುತ್ತಿದ್ದವು.

ಮಾವಿನ ಮರ, ಬೇವಿನ ಮರ, ಅಶ್ವಥ ವೃಕ್ಷ, ಔದುಂಬರ ವೃಕ್ಷಗಳು ಇಲ್ಲಿದ್ದವು. ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಈ ಮರಗಳಲ್ಲಿ ದೇವತೆಗಳು ವಾಸವಾಗಿದ್ದು ಬಹಳ ಪವಿತ್ರವಾದ ಮರಗಳಾಗಿವೆ.

ಲೇಂಡಿ ಉದ್ಯಾನವನವು ಸುಮಾರು 1 ಎಕರೆಯಷ್ಟು ದೊಡ್ಡದಾಗಿದೆ. ಈ ಉದ್ಯಾನವನದ ಮಧ್ಯಭಾಗದಲ್ಲಿ "ಲೇಂಡಿ" ಎನ್ನುವ ಸಣ್ಣ ನದಿಯು ಹರಿಯುತ್ತಿತ್ತು ಮತ್ತು ಈ ನದಿಯು ಲೇಂಡಿ ಬಾಗ್ ಇರುವ ಪ್ರದೇಶದಲ್ಲಿ ಇಬ್ಬಾಗವಾಗಿ ಮಾರ್ಪಡಿಸುತ್ತಿತ್ತು. ಲೇಂಡಿ ಬಾಗ್ ನಲ್ಲಿ ಈ ನದಿಯು ಒಂದು ಸಣ್ಣ ತೊರೆಯಂತೆ ಹರಿಯುತ್ತಿತ್ತು. ಸಾಯಿಬಾಬಾರವರು ಪ್ರತಿದಿನ ಇಲ್ಲಿಗೆ ಬರುತ್ತಿದ್ದರು. ಮತ್ತು ಲೇಂಡಿ ತೊರೆಯಲ್ಲಿ ಕೆಲವು ಬೆಳ್ಳಿಯ ನಾಣ್ಯಗಳನ್ನು ಎಸೆಯುತ್ತಿದ್ದರು. ತಮ್ಮ ಭಕ್ತರು ಒಡವೆ ಮತ್ತು ಹಣಕ್ಕೆ ಆಶೆಪಡುತ್ತಿದ್ದರೇ ಎಂದು ಪರೀಕ್ಷೆ ಮಾಡುವುದಕ್ಕೆ ಬಾಬಾರವರು ಈ ರೀತಿ ಮಾಡುತ್ತಿದ್ದರು. ಒಮ್ಮೆ ಪುರಂದರೆಯವರನ್ನು ಲೇಂಡಿಗೆ ಕರೆದುಕೊಂಡು ಹೋಗಿ ಅಲ್ಲಿ ನೀರಿನಲ್ಲಿ ಬಿದ್ದಿದ್ದ 3 ಚಿನ್ನದ ತಟ್ಟೆಗಳನ್ನು ತೋರಿಸಿದರು. ಆದರೆ ಪುರಂದರೆ ಆ ಚಿನ್ನದ ತಟ್ಟೆಗಳ ಕಡೆ ಗಮನವನ್ನೇ ನೀಡಲಿಲ್ಲ. ಇನ್ನೊಮ್ಮೆ, ಬಾಬಾರವರು ತಮ್ಮ ಮತ್ತೊಬ್ಬ ಭಕ್ತ ಜ್ಯೋತೀಂದ್ರ ರನ್ನು ಲೇಂಡಿಗೆ ಕರೆದುಕೊಂಡು ಹೋಗಿ ಅಲ್ಲಿನ ತೊರೆಯಲ್ಲಿ ಬಿದ್ದಿದ್ದ ಚಿನ್ನದ ನಾಣ್ಯಗಳ ರಾಶಿಯನ್ನೇ ತೋರಿಸಿದರು. ಆದರೆ, ಜ್ಯೋತೀಂದ್ರ ಅತ್ತ ಕಡೆ ಗಮನವನ್ನು ಹರಿಸಲೇ ಇಲ್ಲ. ಅವರು ಸದಾಕಾಲ ಬಾಬಾರವರ ಬಳಿ ಇರಬೇಕು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಹೊಂದಬೇಕೆಂಬ ಏಕೈಕ ಗುರಿಯನ್ನು ಹೊಂದಿದ್ದರು.


ಸಾಯಿಬಾಬಾರವರು ಏನಾದರೂ ಕಾರ್ಯವನ್ನು ಪ್ರಾರಂಭ ಮಾಡಿದರೆ ಅದನ್ನು ತಮ್ಮ ಜೀವಮಾನ ಪೂರ್ತಿ ತಪ್ಪದೆ ಮಾಡುತ್ತಲೇ ಇದ್ದರು. ಇದಕ್ಕೆ ಉದಾಹರಣೆ ನೀಡಬೇಕೆಂದರೆ ಒಮ್ಮೆ ಶಿರಡಿಯಲ್ಲಿ ಜೋರಾಗಿ ಮಳೆ ಬರುತ್ತಿದ್ದಾಗ,  ಸಾಯಿಭಕ್ತರು ಇವರನ್ನು ಮಸೀದಿಯನ್ನು ಬಿಟ್ಟು ಚಾವಡಿಯಲ್ಲಿ ಮಲಗಲು ಬಲವಂತ ಮಾಡಿ ಒಪ್ಪಿಸಿದರು. ಇದನ್ನು ಬಾಬಾರವರು ತಮ್ಮ ಜೀವಮಾನವಿಡಿ ಪಾಲಿಸಿ, ಅಂದಿನಿಂದ ಚಾವಡಿಯಲ್ಲೇ ಮಲಗಲು ಶುರುಮಾಡಿದರು. ಇನ್ನೊಮ್ಮೆ ಧುನಿಯಲ್ಲಿ ತಮ್ಮ ಕೈಯನ್ನಿಟ್ಟು ಕೈಗಳು ಸುಟ್ಟಿದ್ದಾಗಿನಿಂದ ಭಾಗೋಜಿ ಶಿಂಧೆಯವರು ಇವರ ಕೈಗಳಿಗೆ ತುಪ್ಪವನ್ನು ಸವರಿ ಎಲೆಗಳನ್ನು ಕಟ್ಟಿ ಚೆನ್ನಾಗಿ ನೀವುತ್ತಿದ್ದರು. ಸ್ವಲ್ಪ ದಿನಗಳಲ್ಲಿ ಇವರ ಕೈಗಳು ಸರಿಹೋಯಿತು. ಆದರೆ, ಮುಂದಿನ ೮ ವರ್ಷಗಳು ಸಾಯಿಬಾಬಾರವರ ಜೀವಮಾನದ ಕೊನೆಯವರೆಗೆ ಪ್ರತಿನಿತ್ಯ ಭಾಗೋಜಿ ಶಿಂಧೆಯವರು ಈ ಕಾರ್ಯವನ್ನು ಮುಂದುವರಿಸುವಂತೆ ಬಾಬಾರವರು ಅವರಿಗೆ ಹೇಳಿದರು ಮತ್ತು ಭಾಗೋಜಿ ಶಿಂಧೆಯವರು ಅದನ್ನು ತಪ್ಪದೆ ಮಾಡುತ್ತಿದ್ದರು.

ಇದೇ ರೀತಿ ಬಾಬಾರವರು ದ್ವಾರಕಾಮಾಯಿಯಿಂದ ಲೇಂಡಿ ಉದ್ಯಾನವನಕ್ಕೂ ಕೂಡ ನಿತ್ಯ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ ಮತ್ತು ಹೋಗುವ ದಾರಿಯನ್ನು ಕೂಡ ಬದಲಿಸುತ್ತಿರಲಿಲ್ಲ. ಸಾಯಿಯವರು ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದ ದಾರಿ ನೇರ ದಾರಿಯಾಗಿರಲಿಲ್ಲ. ಬದಲಿಗೆ ಬಳಸು ದಾರಿಯಾಗಿತ್ತು. ಆದರೆ, ಬಾಬಾರವರು ಅದೇ ಮಾರ್ಗದಲ್ಲೇ ಪ್ರತಿನಿತ್ಯ ತಪ್ಪದೆ ಹೋಗಿ ಬರುತ್ತಿದ್ದರು. ಸಾಯಿಬಾಬಾರವರು ಏಕೆ ಈ ರೀತಿ ಮಾಡುತ್ತಿದ್ದರು ಎಂಬುದು ಅವರೊಬ್ಬರಿಗೆ ತಿಳಿದ ವಿಷಯ.

ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದ ದಾರಿಯನ್ನು ಈಗ ನೋಡೋಣ. ಸಾಯಿಬಾಬಾರವರು ದ್ವಾರಕಾಮಾಯಿಯಿಂದ ಹೊರಟು ಬಲಕ್ಕೆ ತಿರುಗಿ ಸ್ವಲ್ಪ ದೂರ ತೆರಳಿ ನಂತ ಗುರುಸ್ಥಾನದ ದ್ವಾರಕ್ಕೆ ಎದುರುಗಡೆ ಇರುವ ರಸ್ತೆಯಲ್ಲಿ ಎಡಕ್ಕೆ ತಿರುಗುತ್ತಿದ್ದರು. ಆ ರಸ್ತೆಯಲ್ಲಿ ಅರ್ಧ ದಾರಿ ಕ್ರಮಿಸಿದ ನಂತರ, ಬಲಕ್ಕೆ ತಿರುಗಿ ನಂತರ ತಕ್ಷಣ ಇರುವ ಎಡಕ್ಕೆ ತಿರುಗುತ್ತಿದ್ದರು. ಈ ದಾರಿಯ ಕೊನೆಯಲ್ಲಿ ಸ್ವಲ್ಪ ಹೊತ್ತು ನಿಲ್ಲುತ್ತಿದ್ದರು. ಏಕೆಂದರೆ, ಈ ಸ್ಥಳದಲ್ಲೇ ಬಾಬಾರವರ ಭಕ್ತ ಪಿಲಾಜಿ ಗುರವ್ ವಾಸ ಮಾಡುತ್ತಿದ್ದರು ಮತ್ತು ಅವರ ಮನೆಯ ಎದುರಿಗೆ ಇದ್ದ ವಿಠಲನ ದೇವಸ್ಥಾನದ ಎದುರಿಗೆ ವಿಠಲನಂತೆ ಭಂಗಿ ಮಾಡಿ ನಿಲ್ಲುತ್ತಿದ್ದರು. ಅದರ ಗುರುತಿಗಾಗಿ ಈಗ ಅಲ್ಲಿ ಎರಡು ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಮೊದಲು ವಿಠಲನ ದೇವಸ್ಥಾನ ಭಕ್ತರೊಬ್ಬರ ಸ್ವಂತದ್ದಾಗಿತ್ತು. ಆದರೆ ಈಗ ಇದು ಸಾರ್ವಜನಿಕರಿಗೆ ಸೇರಿದ್ದು ದೇವಾಲಯವನ್ನು ಇದೇ ದಾರಿಯಲ್ಲಿ ಸ್ವಲ್ಪ ಮುಂದೆ ಪುನರ್ ಪ್ರತಿಷ್ಟಾಪನೆ ಮಾಡಲಾಗಿದೆ.  ಇದೇ ದಾರಿಯ ಕೊನೆಗೆ ಬಂದು ಬಾಬಾರವರು ಬಲಕ್ಕೆ ತಿರುಗುತ್ತಿದ್ದರು. ಈ ದಾರಿಯಲ್ಲಿ ಸ್ವಲ್ಪ ಮೀಟರ್ ದೂರದಲ್ಲಿ ಪೋಸ್ಟ್ ಆಫೀಸ್ ನ ಎದುರಿಗೆ ಒಂದು ಚಿಕ್ಕ ಮಂದಿರವಿತ್ತು. ಇದು ಶಿರಡಿ ಗ್ರಾಮದಲ್ಲಿನ ಅತ್ಯಂತ ಪುರಾತನ ಮಂದಿರವಾಗಿದೆ. ಈ ಮಂದಿರವೇ ನಾಥ ಪಂತಕ್ಕೆ ಸೇರಿದ ಮತ್ತು ನವನಾಥರಲ್ಲೋಬ್ಬನಾದ ಶ್ರೀ. ಕನೀಫ್ ನಾಥ್ ಗೆ ಸೇರಿದ್ದು. ಕನೀಫ್ ನಾಥ್ ನ ವಿಶೇಷವೇನೆಂದರೆ ಇವರು ಕೂಡ ಸಾಯಿಬಾಬಾರವರಂತೆ ಧುನಿಯನ್ನು ಸ್ಥಾಪಿಸಿ ಅದನ್ನು ನೋಡಿಕೊಳ್ಳುತ್ತಿದ್ದುದು. ಕೆಲವು ದಿನಗಳಲ್ಲಿ ಸಾಯಿಯವರು ಸ್ವಲ್ಪ ಸಮಯವನ್ನು ಇಲ್ಲಿ ಕಳೆಯುತ್ತಿದ್ದರೆಂದು ಹೇಳಲಾಗಿದೆ. ಈ ಸ್ಥಳಕ್ಕೂ ಸಾಯಿಬಾಬಾರವರಿಗೂ ಅವಿನಾಭಾವ ಸಂಬಂಧವಿರಬೇಕೆಂದು ಸಾಯಿಭಕ್ತರು ಯೋಚಿಸುತ್ತಾರೆ. ಅಲ್ಲಿಂದ ಮುಂದೆ ಸಾಗಿ ಬಲಕ್ಕೆ ತಿರುಗುತ್ತಿದ್ದರು. ಅದು ಮುಖ್ಯ ದಾರಿಯಾಗಿತ್ತು ಮತ್ತು ಇದೇ ದಾರಿಯಲ್ಲಿ ಬಲಭಾಗಕ್ಕೆ ಲೇಂಡಿ ಉದ್ಯಾನವನವಿತ್ತು. ಸಾಯಿಬಾಬಾರವರ ಕಾಲದಲ್ಲಿ ಈ ರಸ್ತೆಯು ನಿರ್ಜನವಾಗಿತ್ತು. ಆದರೆ ಈಗ ಅನೇಕ ಅಂಗಡಿ ಮುಂಗಟ್ಟುಗಳು ಕಾಣಸಿಗುತ್ತವೆ. ಸಾಯಿಬಾಬಾರವರನ್ನು ಲೇಂಡಿ ಉದ್ಯಾನವನದ ಒಳಗೆ ಹೋಗಲು ಬಿಟ್ಟು ನಾವು ಅದರ ದ್ವಾರದಲ್ಲೇ ಕಾಯುತ್ತ ನಿಲ್ಲೋಣ. ಸಾಯಿಯವರ ಏಕಾಂತಕ್ಕೆ ಅನುವು ಮಾಡಿಕೊಡೋಣ.

ಬಾಬಾರವರು ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಮತ್ತು ಮಧ್ಯಾನ್ಹ 3 ಘಂಟೆಗೆ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು. ಆಗ ಭಕ್ತರು ಇವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಿದ್ದರು. ಆದರೆ, ಲೇಂಡಿಯ ಒಳಗೆ ಬಾಬಾರವರೊಬ್ಬರೇ ಹೋಗುತ್ತಿದ್ದರು. ಮೆರವಣಿಗೆಯಲ್ಲಿ ಬಂದ ಭಕ್ತರು ವಾಪಾಸ್ ಹೊರಟುಹೋಗುತ್ತಿದ್ದರು. ಬಾಬಾರವರು ಲೇಂಡಿಗೆ ಪಶ್ಚಿಮ ದಿಕ್ಕಿನಿಂದ ಪ್ರವೇಶಿಸುತ್ತಿದ್ದರು. ಆಲ್ಲದೇ, ನಂದಾದೀಪಕ್ಕೆ ಬೆನ್ನು ಮಾಡಿಕೊಂಡು ಪಶ್ಚಿಮ ದಿಕ್ಕಿಗೆ ಕುಳಿತುಕೊಳ್ಳುತ್ತಿದ್ದರು.


ಲೇಂಡಿ ಉದ್ಯಾನವನ ಮತ್ತು ಉದ್ಯಾನವನದಲ್ಲಿರುವ ನಂದಾ ದೀಪವು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಏಕೆಂದರೆ, ಲೇಂಡಿ ಉದ್ಯಾನವನವನ್ನು ಸಾಯಿಬಾಬಾರವರೇ ಸ್ವತಃ ದಿನನಿತ್ಯ ನೀರೆರೆದು ಬೆಳೆಸಿದ್ದರು ಮತ್ತು ತಾವೇ ಸ್ವತಃ ನೀರೆರೆದು ಬೆಳೆಸಿದ್ದ ೨ ಮರಗಳ ಮಧ್ಯದಲ್ಲಿ ನಂದಾದೀಪವನ್ನು ಸ್ಥಾಪಿಸಿದರು.

1999 ರಲ್ಲಿ ಸಾಯಿಬಾಬಾ ಸಂಸ್ಥಾನದವರು ಲೇಂಡಿ ಉದ್ಯಾನವನದ ರಿಪೇರಿ ಕಾರ್ಯವನ್ನು ಕೈಗೊಂಡರು. ಈಗ ಸಾಯಿಭಕ್ತರು ಶಿರಡಿಗೆ ಹೋದರೆ ಸುಂದರ ಲೇಂಡಿ ಉದ್ಯಾನವನವನ್ನು ನೋಡಬಹುದು. ಸಾಯಿಬಾಬಾ ಸಂಸ್ಥಾನದವರು ಸುಂದರವಾದ ಹಾಸುಕಲ್ಲುಗಳನ್ನು ಹಾಸಿ, ಮನೋಹರವಾದ ಕೃತಕ ಜಲಪಾತವನ್ನು ನಿರ್ಮಿಸಿ, ಹೂತೋಟವನ್ನು ಮತ್ತಷ್ಟು ಸುಂದರವಾಗಿ ಮಾಡಿದ್ದಾರೆ.

ಸಾಯಿಬಾಬಾರವರು ಪ್ರತಿನಿತ್ಯವೂ ಲೇಂಡಿ ಉದ್ಯಾನವನಕ್ಕೆ ಹೋಗಿ ಬರುತ್ತಿದ್ದರು. ಈ ಲೇಂಡಿ ಉದ್ಯಾನವನದಲ್ಲಿ ಕೆಲವು ಸಮಾಧಿಗಳು, ದೇವಾಲಯಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಾಯಿಬಾಬಾರವರೇ ಸ್ಥಾಪಿಸಿದ ನಂದಾದೀಪವಿದೆ.

ಲೇಂಡಿ ಉದ್ಯಾನವನದಲ್ಲಿ ಸಾಯಿಭಕ್ತರು ನೋಡಬೇಕಾದ ಸ್ಥಳಗಳು ಹೀಗಿವೆ. 1.ಅರಳಿ ಮರದಲ್ಲಿ ಉದ್ಭವವಾಗಿರುವ ಗಣಪತಿ. 2 . ಕೃತಕ ಜಲಪಾತ. 3. ಸುಂದರವಾದ ಕಮಲದ ಸರೋವರ 4. ಬಾಬಾರವರು ಬಳಸುತ್ತಿದ್ದ ನೆಲಬಾವಿ 5. ನಂದಾದೀಪದ ಅಕ್ಕಪಕ್ಕದಲ್ಲಿರುವ  ಬೇವಿನ ಮತ್ತು ಬೋಧಿ ಮರಗಳು  6. ದತ್ತಾತ್ರೇಯ ಮಂದಿರ 7. ನಂದಾ ದೀಪ.8. ಶ್ಯಾಮಕರ್ಣನ ಸಮಾಧಿ 9. ಅಮಿದಾಸ್ ಭವಾನಿ ಮೆಹ್ತಾರವರ ಸಮಾಧಿ 10. ಮುಕ್ತಾರಾಂ ರವರ ಸಮಾಧಿ 11. ಸುಂದರವಾದ ಹೂವಿನ ತೋಟ.



ಲೇಂಡಿಯಲ್ಲಿ  ನೋಡಬಹುದಾದ ಸ್ಥಳಗಳು

ನಂದಾ ದೀಪ:

            ಸಾಯಿಯವರು ಸ್ಥಾಪಿಸಿದ ಅಖಂಡ ಜ್ಯೋತಿ "ನಂದಾ ದೀಪ"

ಲೇಂಡಿ ಉದ್ಯಾನವನದಲ್ಲಿ ಸಾಯಿಭಕ್ತರು ನೋಡಲೇ ಬೇಕಾದ ಒಂದು ಸ್ಥಳ ಇದಾಗಿದೆ. ಬೇವಿನ ಮರ ಮತ್ತು ಬೋಧಿ ವೃಕ್ಷದ ನಡುವೆ ಸಾಯಿಬಾಬಾರವರು ಈ ಅಖಂಡ ಜ್ಯೋತಿಯನ್ನು ಸ್ಥಾಪಿಸಿರುತ್ತಾರೆ. ಈ ಎರಡು ಮರಗಳು ಮೊದಲು ಬರಡಾಗಿ ಬೆಳವಣಿಗೆ ಇಲ್ಲದೆ ಇತ್ತೆಂದು, ಸಾಯಿಯವರು ಒಂದು ದಿನ ಈ ಮರಗಳನ್ನು ಮುಟ್ಟಿ ಚೆನ್ನಾಗಿ ಅಲ್ಲಾಡಿಸಿದರೆಂದು ಮತ್ತು ಅಂದಿನಿಂದ ಇವುಗಳು ಬೆಳೆಯಲು ಪ್ರಾರಂಭಿಸಿದವೆಂದು ಭಕ್ತರು ಹೇಳುತ್ತಾರೆ. ಸಾಯಿಬಾಬಾರವರು ಈ ಮರಗಳ ಬಳಿ ಕುಳಿತುಕೊಳ್ಳುತ್ತಿದ್ದರಿಂದ ಮತ್ತು ನಂದಾದೀಪವನ್ನು ಸ್ಥಾಪಿಸಿದ್ದರಿಂದ ಈ ಸ್ಥಳದಲ್ಲಿ ಸಾಯಿಭಕ್ತರು ಭಕ್ತಿಯಿಂದ ಮರಗಳಿಗೆ ಹಾಗೂ ನಂದಾ ದೀಪಕ್ಕೆ ಪ್ರದಕ್ಷಿಣೆ ಮಾಡುತ್ತಾರೆ.

ಸಾಯಿಬಾಬಾರವರು ಈ ಅಖಂಡ ಜ್ಯೋತಿಯನ್ನು ಸ್ಥಾಪಿಸಿ ಅದು ಆರದಂತೆ ಮತ್ತು ಸದಾ ಕಾಲ ಉರಿಯುತ್ತಿರುವಂತೆ ನೋಡಿಕೊಳ್ಳಬೇಕೆಂದು ಅಬ್ದುಲ್ ಬಾಬಾರವರಿಗೆ ಹೇಳಿದರೆಂದು ತಿಳಿದುಬಂದಿದೆ. ಸಾಯಿಬಾಬಾರವರು  ಒಂದು ಸಣ್ಣ ಗುಂಡಿಯನ್ನು ತೋಡಿ ಅದರೊಳಗೆ ಈ ನಂದಾ ದೀಪವನ್ನು ಇಟ್ಟು, ದೀಪವು ಗಾಳಿಗೆ ಆರದಿರಲೆಂದು ಅದರ ಅಕ್ಕ ಪಕ್ಕದಲ್ಲಿ ತಗಡಿನ ಹೊದಿಕೆಯನ್ನು ಹೊದೆಸಿ ಅದರ ಮೇಲೆ ಬಟ್ಟೆಯನ್ನು ಕಟ್ಟಿ ಒಂದು ಸಣ್ಣ ಮನೆಯಂತೆ ಮಾಡಿದ್ದರು. ಸಾಯಿಬಾಬಾ ಸಂಸ್ಥಾನದವರು ಅದನ್ನು ತೆಗೆದು ಪುನರ್ ನಿರ್ಮಾಣ ಮಾಡಿದ್ದಾರೆ ಮತ್ತು ಅದರ ಅಕ್ಕ ಪಕ್ಕದ ಜಾಗದಲ್ಲಿ ಹಾಸುಕಲ್ಲುಗಳನ್ನು ಹಾಕಿದ್ದಾರೆ.

ಸಾಯಿಬಾಬಾರವರು ಈ ನಂದಾ ದೀಪದ ಬಳಿ ಏನನ್ನೋ ಯೋಚಿಸುತ್ತ ಕುಳಿತುಕೊಳ್ಳುತ್ತಿದ್ದರೆಂದು ಹೇಳುತ್ತಾರೆ. ಸಾಯಿಬಾಬಾರವರು ದೀಪವು ಕಾಣುವ ಹಾಗೆ ಕುಳಿತುಕೊಳ್ಳದೆ ಅದರ ಮುಂದಿರುವ ನೆಲದೆ ಮೇಲೆ ಕುಳಿತುಕೊಳ್ಳುತ್ತಿದ್ದರು ಮತ್ತು ಏನನ್ನೋ ಯೋಚಿಸುತ್ತ ಆತ್ಮದಲ್ಲೇ ತಲ್ಲೀನರಾಗಿರುವಂತೆ ಕಾಣುತ್ತಿತ್ತು ಎಂದು ಅಬ್ದುಲ್ ಬಾಬಾರವರು ಹೇಳುತ್ತಾರೆ. ಸಾಯಿಯವರು ಅಲ್ಲಿ ಕುಳಿತು ಏನು ಮಾಡುತ್ತಿದ್ದರೆಂಬುದು ಈವರೆಗೂ ಯಾರಿಗೂ ಸರಿಯಾಗಿ ತಿಳಿದಿಲ್ಲ.

ಅಬ್ದುಲ್ ಬಾಬಾರವರು ದಿನವೂ 2 ಬಕೇಟ್ ಗಳಲ್ಲಿ ನೀರನ್ನು ತಂದು ನಂದಾ ದೀಪದ ಬಳಿ ಇಡುತ್ತಿದ್ದರು. ನಂದಾ ದೀಪದ ಬಳಿ ಸ್ವಲ್ಪ ಹೊತ್ತು ಕುಳಿತ ನಂತರ ಸಾಯಿಬಾಬಾರವರು ಬಕೇಟ್ ಗಳಲ್ಲಿ ಇದ್ದ ನೀರನ್ನು ತೆಗೆದುಕೊಂಡು ನಂದಾ ದೀಪದ ಸುತ್ತಾ 4 ದಿಕ್ಕುಗಳಲ್ಲೂ ಚೆಲ್ಲುತ್ತಾ ಬಾಯಲ್ಲಿ ಏನೋ ಹೇಳಿಕೊಳ್ಳುತ್ತಿದ್ದರೆಂದು ಮತ್ತು ಯಾರಿಗೂ ಕೂಡ ಇಂದಿಗೂ ತಿಳಿಯದ ವಿಷಯವಾಗಿದೆ ಎಂದು ಅಬ್ದುಲ್ ಬಾಬಾ ಹೇಳುತ್ತಿದ್ದರು. "ಎಲ್ಲಾ 4 ದಿಕ್ಕುಗಳಲ್ಲಿದ್ದ ತಮ್ಮ ಭಕ್ತರಿಗೆ ಬಂದೆರಗುವ ತೊಂದರೆಗಳನ್ನು ನಿವಾರಿಸಲು ಮತ್ತು ಅವರನ್ನು ಆಶೀರ್ವದಿಸಲು ಸಾಯಿಬಾಬಾರವರು ಹಾಗೆ ಮಾಡುತ್ತಿದ್ದಿರಬಹುದು" ಎಂದು ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ದತ್ತ ಮಂದಿರ:

ನಂದಾದೀಪವಿರುವ ಜಾಗದಿಂದ ಸ್ವಲ್ಪ ದೂರದಲ್ಲಿ ಮತ್ತು ಮುಕ್ತಾರಾಮ್ ನ ಸಮಾಧಿಯ ಎದುರುಗಡೆ ಈ ದತ್ತ ಮಂದಿರವಿದೆ. ಈ ಮಂದಿರವನ್ನು ಶಿರಡಿಯ ಇಬ್ಬರು ಭಕ್ತರು ಕಟ್ಟಿಸಿದ್ದಾರೆ ಎಂದು ಹೇಳಲಾಗಿದ್ದರೂ ಕೂಡ ಅವರುಗಳು ತಮ್ಮ ಹೆಸರು ಎಲ್ಲೂ ಹೊರಗಡೆ ಬರಬಾರದೆಂಬ ಆಶಯವನ್ನು ಹೊಂದಿದ್ದರಿಂದ ಇಲ್ಲಿಯವರೆಗೂ ಈ ವಿಷಯ ಗೋಪ್ಯವಾಗಿಯೇ ಉಳಿದಿದೆ. ಆಗಸ್ಟ್ 1976 ರಲ್ಲಿ ದತ್ತಾತ್ರೇಯ ವಿಗ್ರಹದ ಮತ್ತು ಅಮೃತಶಿಲೆಯ ಪಾದುಕೆಗಳ ಪ್ರಾಣ ಪ್ರತಿಷ್ಟಾಪನೆಯನ್ನು ಸಾಯಿಬಾಬಾ ಸಂಸ್ಥಾನದವರು ನೆರವೇರಿಸಿರುತ್ತಾರೆ. ಈ ಮಂದಿರದ ಹಿಂಭಾಗದಲ್ಲಿ ಒಂದು ಸಣ್ಣ ಔದುಂಬರ ವೃಕ್ಷವಿದೆ. ಗುರುಸ್ಥಾನವನ್ನು ನೋಡಿಕೊಳ್ಳುವ ಪುರೋಹಿತರೇ ಈ ಮಂದಿರವನ್ನು ನೋಡಿಕೊಳ್ಳುತ್ತಾರೆ. ಪ್ರತಿದಿನ ಬೆಳಿಗ್ಗೆ ಮಂಗಳ ಸ್ನಾನ, ಅಲಂಕಾರ ಮತ್ತು ದತ್ತಾತ್ರೇಯರ ಮೇಲಿನ ವಸ್ತ್ರಗಳನ್ನು ಬದಲಿಸಲಾಗುತ್ತದೆ. ಪ್ರತಿದಿನ 3 ಹೊತ್ತು ನೈವೇದ್ಯವನ್ನು ಇಡಲಾಗುತ್ತದೆ.  

ಬೆಳ್ಳಿಯ ಪಾದುಕೆಗಳನ್ನು 12ನೇ ಡಿಸೆಂಬರ್ 2008 ರ ದತ್ತ ಜಯಂತಿಯ ದಿನದಂದು ಪ್ರತಿಷ್ಟಾಪಿಸಲಾಯಿತು. ದತ್ತ ಜಯಂತಿಯ ದಿನದಂದು ಸಮಾಧಿ ಮಂದಿರದ ಪುರೋಹಿತರು ದತ್ತಾತ್ರೇಯನಿಗೆ ಆರತಿಯನ್ನು ಮಾಡುವ ಸಂಪ್ರದಾಯವಿದೆ. ಸಾಯಿಭಕ್ತರು ಈ ಸ್ಥಳದಲ್ಲಿ ಪ್ರದಕ್ಷಿಣೆ ಮಾಡಿ ತಮ್ಮ ಮನದ ಇಚ್ಛೆಗಳನ್ನು ಪೂರೈಸಿಕೊಳ್ಳುತ್ತಾ ಬಂದಿದ್ದಾರೆ. 

ಸಾಯಿಬಾಬಾರವರ ಜೀವಿತ ಕಾಲದಲ್ಲಿ ಈ ದತ್ತ ಮಂದಿರದ ಹಿಂಭಾಗದಲ್ಲಿ ಇನ್ನೊಂದು ಸಣ್ಣ ದತ್ತ ಮಂದಿರವಿತ್ತೆಂದು ಹೇಳಲಾಗುತ್ತದೆ. ಸಾಯಿಬಾಬಾರವರು ಅಲ್ಲಿ ಹೋಗಿ ಸ್ವಲ್ಪ ಕಾಲ ನಿಂತುಕೊಳ್ಳುತ್ತಿದ್ದರೆಂದು ಕೂಡ ಹೇಳಲಾಗುತ್ತದೆ. ಆದರೆ, ಸಾಯಿಬಾಬಾ ಸಂಸ್ಥಾನದವರು ದೇವಾಲಯದ ಸಂಕೀರ್ಣದ ಜೀರ್ಣೋದ್ದಾರ ಮಾಡುವ ಸಮಯದಲ್ಲಿ ಸಣ್ಣ ಮಂದಿರವನ್ನು ತೆಗೆದುಹಾಕಿದ್ದಾರೆ.

 
ದತ್ತ ಮಂದಿರ

ಶ್ಯಾಮಕರ್ಣನ ಸಮಾಧಿ:

ಕಾಸಿಂ ಎನ್ನುವ ಕುದುರೆ ವ್ಯಾಪಾರಿ ಬಳಿ ಒಂದು ಹೆಣ್ಣು ಕುದುರೆ ಇದ್ದಿತು. ಅದು ಬಹಳ ವರ್ಷಗಳಿಂದ ಮರಿಯನ್ನು ಹಾಕಿರಲಿಲ್ಲ. ಆಗ ಖಾಸಿಂ ತನ್ನ ಕುದುರೆ ಮರಿಗಳನ್ನು ಹಾಕಿದರೆ ಮೊದಲ ಕುದುರೆಯನ್ನು ಸಾಯಿಬಾಬಾರವರಿಗೆ ಕಾಣಿಕೆಯಾಗಿ ನೀಡುವುದಾಗಿ ಹರಕೆ ಮಾಡಿಕೊಂಡನು. ಸಾಯಿಬಾಬಾರವರ ಆಶೀರ್ವಾದದಿಂದ ಆ ಕುದುರೆ ಮರಿಗಳನ್ನು ಹಾಕಿತು. ಮೊದಲ ಕುದುರೆಯನ್ನು ತಂದು ಖಾಸಿಂ ಸಾಯಿಬಾಬಾರವರಿಗೆ ನೀಡಿದನು. ಸಾಯಿಬಾಬಾರವರು ಆ ಕುದುರೆಗೆ "ಶ್ಯಾಮಕರ್ಣ" ಎಂದು ನಾಮಕರಣ ಮಾಡಿದರು. 

ಶ್ಯಾಮ ಎಂದರೆ "ಕಪ್ಪು" ಕರ್ಣ ಎಂದರೆ "ಕಿವಿ" ಎಂದು ಅರ್ಥ. ಬಾಬಾರವರ ಬಳಿ ಬಂದ ಆ ಕುದುರೆಯ ಕಿವಿಗಳು ಕಪ್ಪಗೆ ಇದ್ದಿದ್ದರಿಂದ ಸಾಯಿಬಾಬಾರವರು ಶ್ಯಾಮಕರ್ಣ ಎಂದು ನಾಮಕರಣ ಮಾಡಿದರು. ಸಾಯಿಬಾಬಾರವರಿಗೆ ಶ್ಯಾಮಕರ್ಣನೆಂದರೆ ಬಹಳ ಪ್ರೀತಿ. ಶ್ಯಾಮಕರ್ಣನಿಗೂ ಕೂಡ ಸಾಯಿಬಾಬಾರವರನ್ನು ಕಂಡರೆ ಅಷ್ಟೇ ಪ್ರೀತಿ. ಸಾಯಿಬಾಬಾರವರ ಆರತಿ ಸಮಯದಲ್ಲಿ ಶ್ಯಾಮಕರ್ಣನು ಬಹಳ ಸಂತಸದಿಂದ ಹೆಜ್ಜೆ ಹಾಕಿ ಕುಣಿಯುತ್ತಿದ್ದನು ಮತ್ತು ಆರತಿಯ ನಂತರ ಸಾಯಿಬಾಬಾರವರಿಗೆ ಪ್ರಥಮ ನಮಸ್ಕಾರವನ್ನು ಮಾಡುತ್ತಿದ್ದನು. ಆರತಿಯ ಸಮಯದಲ್ಲಿ ಕುತ್ತಿಗೆಗೆ ಸುಂದರವಾದ ಹಾರವನ್ನು ಹಾಕಿಕೊಂಡು ಮತ್ತು ಕಾಲುಗಳಿಗೆ ಅಂದವಾದ ಗೆಜ್ಜೆಗಳನ್ನು ಹಾಕಿಕೊಂಡು ಸಭಾಮಂಟಪದ ಮಧ್ಯದಲ್ಲಿ ರಾಜಗಾಂಭೀರ್ಯದಿಂದ ನಿಲ್ಲುತ್ತಿದ್ದನು. ಈಗ ಆ ಸ್ಥಳದಲ್ಲಿ ಆಮೆಯ ಅಮೃತ ಶಿಲೆಯ ವಿಗ್ರಹವಿದೆ. ಶ್ಯಾಮಕರ್ಣನ ಇಕ್ಕೆಲಗಳಲ್ಲಿ ಸಾಯಿಭಕ್ತರು ನಿಲ್ಲುತ್ತಿದ್ದರು. ಆರತಿಯ ಸಮಯದಲ್ಲಿ ತಾಳಕ್ಕೆ ತಕ್ಕಂತೆ ಹೆಜ್ಜೆಯನ್ನು ಹಾಕುತ್ತಿದ್ದನು. ಆರತಿಯಾದ ನಂತರ ದ್ವಾರಕಾಮಾಯಿಯ 3 ಮೆಟ್ಟಿಲುಗಳನ್ನು ಏರಿ ಸಾಯಿಬಾಬಾರವರಿಗೆ ವಂದಿಸುತ್ತಿದ್ದನು. ಸಾಯಿಬಾಬಾರವರು ಶ್ಯಾಮಕರ್ಣನ ಹಣೆಯ ಮೇಲೆ ಉಧಿಯನ್ನು ಹಚ್ಚಿ ಆಶೀರ್ವದಿಸುತ್ತಿದ್ದರು. ಆ ನಂತರವಷ್ಟೇ, ಸಾಯಿಬಾಬಾರವರು ಇತರ ಭಕ್ತರಿಗೆ ಉಧಿಯನ್ನು ನೀಡುತ್ತಿದ್ದುದು. 

ಶ್ಯಾಮಕರ್ಣನಿಗೆ ದ್ವಾರಕಾಮಾಯಿಯ ಪೂರ್ವದಲ್ಲಿದ್ದ ಒಂದು ಕೋಣೆಯಲ್ಲಿ ಇರಿಸಲಾಗಿತ್ತು. ಆ ಸ್ಥಳವೇ ಈಗಿನ ಶ್ಯಾಮ ಸುಂದರ್ ಹಾಲ್ ಆಗಿದೆ. ಶ್ಯಾಮಕರ್ಣನನ್ನು "ಖಜ್ಗಿವಾಲೆ" ಎಂಬ  ಕುದುರೆ ತರಬೇತುದಾರ ಕುದುರೆಗಳಿಗೆ ಹಾಕಬೇಕಾದ ಎಲ್ಲಾ ವಸ್ತ್ರಾಭರಣಗಳನ್ನು ಹಾಕಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆ ವಸ್ತ್ರಾಭರಣಗಳನ್ನು ಈಗ ಸಾಯಿಬಾಬಾ ವಸ್ತುಸಂಗ್ರಹಾಲಯದಲ್ಲಿ ನೋಡಬಹುದು. 

ಸಾಯಿಬಾಬಾ ಮಹಾಸಮಾಧಿಯ ನಂತರ ಶ್ಯಾಮಕರ್ಣನು ಸಮಾಧಿ ಮಂದಿರದ ಆರತಿಯಲ್ಲಿ ಭಾಗವಹಿಸಿ ಆರತಿಯ ನಂತರ ಸಾಯಿಬಾಬಾರವರ ಸಮಾಧಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದನು. ವಿಜಯದಶಮಿಯ ದಿವಸ ಸುಂದರವಾಗಿ ಅಲಂಕೃತಗೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದನು. ಮೆರವಣಿಗೆಗೆ ಮುಂಚೆ ಸಾಯಿಭಕ್ತರು ಒಂದು ರುಪಾಯಿ ನಾಣ್ಯವನ್ನು ಶ್ಯಾಮಕರ್ಣನ ತಲೆಯ ಸುತ್ತ ವೃತ್ತಾಕಾರವಾಗಿ ತಿರುಗಿಸಿ ದೃಷ್ಟಿ ತಗುಲದಿರಲೆಂದು ಪ್ರಾರ್ಥಿಸಿ ನೀವಾಳಿಸುತ್ತಿದ್ದರು 

ಸಾಯಿಬಾಬಾರವರ ಚಾವಡಿ ಉತ್ಸವದ ದಿನ ಕೂಡ ಸುಂದರವಾಗಿ ಅಲಂಕೃತಗೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದನು. ಸಾಯಿಬಾಬಾರವರು ಚಾವಡಿಯ ಒಳಗಡೆ ಹೋದ ಮೇಲೆ ಅವರ ಎದುರುಗಡೆ ರಾಜಗಾಂಭೀರ್ಯದಿಂದ ನಿಲ್ಲುತ್ತಿದ್ದನು. 

ಶ್ಯಾಮಕರ್ಣ 1945 ರಲ್ಲಿ ಮರಣ ಹೊಂದಿದನು. ಶಿರಡಿ ಸಾಯಿಬಾಬಾ ಸಂಸ್ಥಾನದವರು ಶ್ಯಾಮಕರ್ಣನ ಸಮಾಧಿಯನ್ನು ಲೇಂಡಿ ಉದ್ಯಾನವನದಲ್ಲಿ ಮಾಡುವ ಮುಖಾಂತರ ಸಾಯಿಬಾಬಾರವರ ಪ್ರೀತಿಯ ಅಶ್ವಕ್ಕೆ ಗೌರವ ಸಲ್ಲಿಸಿದರು. 1950 ರಲ್ಲಿ ಶ್ಯಾಮಕರ್ಣನ ಸಮಾಧಿಯ ಮುಂಭಾಗದಲ್ಲಿ "ಕೃಷ್ಣಾಜಿ (ಆಲಿಯಾಸ್ ನಾನಾ) ಖಜ್ಗಿವಾಲೆ, ಸಾಯಿಬಾಬಾರವರ ಪ್ರೀತಿಯ ಅಶ್ವ ಶ್ಯಾಮಕರ್ಣನ ತರಬೇತುದಾರ. ಅಂತಹ ಶ್ಯಾಮಕರ್ಣನ ಸಮಾಧಿ ಇಲ್ಲಿದೆ" ಎಂಬ ನಾಮಫಲಕವಿತ್ತು. ಆದರೆ ಈಗ ಆ ನಾಮಫಲಕ ಕಾಣಸಿಗುವುದಿಲ್ಲ. 


ಶ್ಯಾಮಕರ್ಣನ ಸಮಾಧಿ 

ಅಮೀದಾಸ್ ಭವಾನಿ ಮೆಹ್ತಾ ಸಮಾಧಿ:

ಇವರ ಸಮಾಧಿಯು ಲೇಂಡಿ ಬಾಗ್ ನ ಮಧ್ಯಭಾಗದಲ್ಲಿದೆ. ಇವರ ನಿಜನಾಮಧೇಯ ಶ್ರೀ.ಅಮೃತಲಾಲ್. ಇವರು ಸೌರಾಷ್ಟ್ರದ ಕಾತೆವಾಡಾ   ಜಿಲ್ಲೆಯ ಭಾವನಗರ್ ನಿವಾಸಿ. ಇವರು ಶ್ರೀ.ನರಸಿಂಗ್ ಮೆಹ್ತಾ ಪಂಗಡಕ್ಕೆ ಸೇರಿದವರು. ಇವರು ಬಹಳ ಒಳ್ಳೆಯ ಕವಿ ಮತ್ತು ಭಾಗವನ್ ಶ್ರೀಕೃಷ್ಣನ ಅನನ್ಯ ಭಕ್ತರು.  ಪ್ರತಿ ಬಾರಿ ಕೃಷ್ಣನ ಪೂಜೆಯನ್ನು ಮಾಡಿ ಕೃಷ್ಣನ ಭಾವಚಿತ್ರವನ್ನು ನೋಡಿದಾಗ ಇವರಿಗೆ ಗಾಜಿನಲ್ಲಿ ಒಬ್ಬ ಫಕೀರನ ಮುಖವು ಅಸ್ಪಷ್ಟವಾಗಿ ಕಾಣುತ್ತಿತ್ತು. ಕೃಷ್ಣನಿರುವ ಸ್ಥಳದಲ್ಲಿ ಒಬ್ಬ ಮುಸ್ಲಿಂ ಫಕೀರನ ಚಿತ್ರವು ಕಾಣುತ್ತಿರುವುದು ಅವರನ್ನು ಗೊಂದಲಕ್ಕೆ ಈಡು ಮಾಡಿತು. ಆ ಕ್ಷಣದಿಂದಲೇ ಇವರು ತಮಗೆ ಕಂಡ ಫಕೀರನನ್ನು ಹುಡುಕಿಕೊಂಡು ಹೊರಟರು. ಅವರು ಬೇರಾರೂ ಆಗಿರದೆ ಸ್ವತಃ ಶಿರಡಿ ಸಾಯಿಬಾಬಾರವರೇ ಆಗಿದ್ದರೆಂದು ಬೇರೆ ಹೇಳಬೇಕಿಲ್ಲ ಅಲ್ಲವೇ? 

ಶ್ರೀ.ಅಮೀದಾಸ್ ಭವಾನಿ ಮೆಹ್ತಾರವರು ಬಹಳ ವಿದ್ಯಾವಂತರು, ಸುಸಂಸ್ಕೃತರು ಮತ್ತು ಭಾರತೀಯ ಶಾಸ್ತ್ರೀಯ ಗಾಯನ ಮತ್ತು ವಾದ್ಯಸಂಗೀತದಲ್ಲಿ ಪರಿಣತಿಯನ್ನು ಹೊಂದಿದ್ದರು. ಇವರು ಬಹಳ ಸ್ಥಿತಿವಂತರಾಗಿದ್ದರು ಮತ್ತು ಶ್ರೀ.ದಯಾಶಂಕರ ರೇವಾಶಂಕರ ಪಾಂಡ್ಯ ಎಂಬ ಒಬ್ಬ ರಾಜನ ಆಶ್ರಯದಲ್ಲಿದ್ದರು. ಆ ದಿನಗಳಲ್ಲಿ ಕಾತೆವಾಡಾ ಪ್ರಾಂತ್ಯವು ಚಿಕ್ಕ ಚಿಕ್ಕ ಪ್ರದೇಶಗಳಾಗಿದ್ದು ಅವುಗಳನ್ನು ನವಾಬರು ಆಳುತ್ತಿದ್ದರು. 

ಇವರು ಆಗಾಗ್ಗೆ ಶಿರಡಿಗೆ ಭೇಟಿ ನೀಡಿ ಬಹಳ ದಿನಗಳು ಅಲ್ಲಿಯೇ ಇರುತ್ತಿದ್ದರು. ಶಿರಡಿಯಲ್ಲಿ ಒಂದು ಸಣ್ಣ ಕೊಟಡಿಯನ್ನು ಬಾಡಿಗೆಗೆ ಪಡೆದು ಸಾಯಿಬಾಬಾರವರ ಜೊತೆಯಲ್ಲಿ ಬಹಳ ದಿನಗಳು ಕಳೆಯುತ್ತಿದ್ದರು. ಇವರು ಗುಜರಾತಿ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದರಿಂದ ಗುಜರಾತಿ ಭಾಷೆಯಲ್ಲಿ ಸಾಯಿಬಾಬಾರವರ ಮಹಿಮೆಯ ಬಗ್ಗೆ ಅನೇಕ ಲೇಖನಗಳನ್ನು ಬರೆದು ದೇಶದಾದ್ಯಂತ ಇದ್ದ ಗುಜರಾತಿ ಭಾಂದವರಲ್ಲಿ ಸಾಯಿಬಾಬಾರವರ ಹಿರಿಮೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು (ಸಾಯಿ ಸಚ್ಚರಿತ್ರೆ 2 ನೇ ಅಧ್ಯಾಯವನ್ನು ನೋಡಬೇಕಾಗಿ ವಿನಂತಿ). 

ಸಾಯಿಬಾಬಾರವರಿಗೆ ಅಮೀದಾಸ್ ಭವಾನಿ ಮೆಹ್ತಾ ರವರ ಸರಳ ಮತ್ತು ದಯಾಪರ ವ್ಯಕ್ತಿತ್ವ ಬಹಳ ಇಷ್ಟವಾಗಿತ್ತು. ಶಿರಡಿಯಲ್ಲಿ ಯಾರಿಗಾದರೂ ಖಾಯಿಲೆಯಾದರೆ ಅವರನ್ನು ಅಮೀದಾಸ್ ಭವಾನಿ ಮೆಹ್ತಾರವರ ಬಳಿ ಆರೈಕೆಗೆ ಕಳುಹಿಸುತ್ತಿದ್ದರು. ಅಮೀದಾಸ್ ರವರು ಸ್ವಲ್ಪವೂ ಬೇಸರಿಸಿಕೊಳ್ಳದೆ ಆ ರೋಗಿಯನ್ನು ಉಪಚರಿಸಿ ಗುಣಮುಖ ಮಾಡಿ ಕಳುಹಿಸುತ್ತಿದ್ದರು. ಶ್ರೀ.ಅಮೀದಾಸ್ ಭವಾನಿ ಮೆಹ್ತಾರವರ ಒಂದೇ ಆಸೆಯೆಂದರೆ ಶಿರಡಿಯಲ್ಲಿ ಸಾಯಿಬಾಬಾರವರ ಸನ್ನಿಧಿಯಲ್ಲಿ ತಮ್ಮ ಪ್ರಾಣವನ್ನು ಬಿಡುವುದು. 

ಸಾಯಿಬಾಬಾರವರು ಅಮೀದಾಸ್ ಭವಾನಿ ಮೆಹ್ತಾರವರ ಈ ಮಾತನ್ನು ಕೇಳಿ " ನೀನು ಎಲ್ಲಿಯಾದರೂ ಮರಣವನ್ನು ಹೊಂದು. ಆದರೆ, ಸದಾಕಾಲ ನೀನು ನನ್ನ ಜೊತೆಯಲ್ಲಿಯೇ ಇರುತ್ತೀಯೇ" ಎಂದು ಭವಿಷ್ಯವನ್ನು ನುಡಿದಿದ್ದರು. ಸಾಯಿಯವರ ಭವಿಷ್ಯವಾಣಿಯಂತೆ ಅಮೀದಾಸ್ ಭವಾನಿ ಮೆಹ್ತಾರವರ ಮರಣದ ನಂತರ ಸಾಯಿಬಾಬಾ ಸಂಸ್ಥಾನದವರು ಅವರ ಸಮಾಧಿಯನ್ನು ಶಿರಡಿಯ ಲೇಂಡಿ ಉದ್ಯಾನವನದಲ್ಲೇ ಮಾಡಿರುತ್ತಾರೆ. ಇವರ ಸಮಾಧಿ ಮುಕ್ತಾರಾಮ್ ಸಮಾಧಿಯ ಪಕ್ಕದಲ್ಲಿದೆ. ಇವರು ಮಾಘ ಶುದ್ಧ ಚತುರ್ದಶಿಯ ದಿನ ಬುಧವಾರ 31ನೇ ಜನವರಿ 1923 ರಂದು ಮರಣ ಹೊಂದಿದರು. 

ಅಮೀದಾಸ್ ಭವಾನಿ ಮೆಹ್ತಾ ಸಮಾಧಿ 

ಮುಕ್ತಾರಾಂ ಸಮಾಧಿ:

ಮುಕ್ತಾರಾಂ ಮೊದಲ ಬಾರಿಗೆ 1911 ರಲ್ಲಿ ಒಂದು ಭಕ್ತರ ಗುಂಪಿನ ಜೊತೆ ಸೇರಿ ಶಿರಡಿಗೆ ಬಂದರು. ಮೊದಲ ಭೇಟಿಯಲ್ಲಿಯೇ  ಸಾಯಿಬಾಬಾರವರ ದೈವಿಕ ಶಕ್ತಿಯು ಇವರನ್ನು ಬಹಳವಾಗಿ ಸಾಯಿಬಾಬಾರವರ ಕಡೆ ಆಕರ್ಷಿಸಿತು. ಇದಾದ ಮೇಲೆ ಅನೇಕ ಬಾರಿ ಇವರು ಶಿರಡಿಗೆ ಬಂದು ಕೊನೆಗೆ ಶಿರಡಿಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡುಬಿಟ್ಟರು. ಇವರ ಸ್ಥಳ ರವಿಯರ್ ಕೆಡ್. ಅಲ್ಲಿ ಇವರು ತಮ್ಮ ಹೆಂಡತಿ,ತಾಯಿ ಮತ್ತಿತರ ಕುಟುಂಬ ವರ್ಗದೊಡನೆ ವಾಸಿಸುತ್ತಿದ್ದರು. ಇವರ ನಿಜನಾಮಧೇಯ ಯಾರಿಗೂ ಇದುವರೆಗೂ ತಿಳಿದಿಲ್ಲ. ಇವರನ್ನು ಸಾಯಿಬಾಬಾರವರು ಮುಕ್ತಾರಾಮ್ ಎಂದು ಕರೆಯುತ್ತಿದ್ದರು. ಆದ ಕಾರಣ ಶಿರಡಿಯ ಎಲ್ಲಾ ಜನರು ಇವರನ್ನು ಹಾಗೆಯೇ ಸಂಬೋಧಿಸುತ್ತಿದ್ದರು. 

ಇವರು ಬಹಳ ಶ್ರೀಮಂತರಾಗಿದ್ದರು. ಶಿರಡಿಯಲ್ಲಿ ಒಂದು ದೊಡ್ಡ ವಾಡೆ (ಮನೆ) ಮತ್ತು ಬಹಳ ಎಕರೆ ಜಮೀನು ಮತ್ತು ತೋಟವನ್ನು ಕೂಡ ಹೊಂದಿದ್ದರು. ಇವರ ಸ್ವಲ್ಪ ದಿನಗಳ ನಂತರ ತಮ್ಮ ಎಲ್ಲಾ ಆಸ್ತಿ ಪಾಸ್ತಿ, ಮನೆಯವರ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡು ಇಡೀ ದಿನ ಸಾಯಿಬಾಬಾರವರ ನಾಮಸ್ಮರಣೆಯಲ್ಲಿ ಕಾಲವನ್ನು ಕಳೆಯುತ್ತಿದ್ದರು. ಸದಾಕಾಲ ಸದ್ಗುರುವಿನ ಬಳಿಗೆ  ಹೋಗುವ ಬಗೆಯನ್ನು ಯೋಚಿಸುತ್ತ ಕೊನೆಗೆ ಒಂದು ದಿನ ತಮ್ಮ ಮನೆಯನ್ನು ತೊರೆದು ಶಿರಡಿಗೆ ಬಂದು ನೆಲೆಸಿದರು. 

ಇವರು ಸಾಯಿಬಾಬಾರವರ ಜೊತೆ ಬೆಳಗಿನಿಂದ ಮಧ್ಯಾನ್ಹದವರೆಗೂ ಇರುತ್ತಿದ್ದರು. ಇವರು ಧುನಿಯ ಪಕ್ಕದಲ್ಲಿ ಮತ್ತು ಬಾಬಾರವರ ಎದುರುಗಡೆ ಕುಳಿತುಕೊಳ್ಳುತ್ತಿದ್ದರು. ಚಳಿಗಾಲವಿರಲಿ ಅಥವಾ ಬೇಸಿಗೆಯ ಕಾಲವಿರಲಿ, ಇವರು ಮಾತ್ರ ಉರಿಯುತ್ತಿರುವ ಧುನಿಯ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದರು. ರಾಮಭಕ್ತ ಹನುಮಾನ್ ರಂತೆ ಹಾಗೂ ವಿಷ್ಣುವಿನ ವಾಹನ ಗರುಡ ನಂತೆ ಇವರು ಸದಾ ಬಾಬಾರವರ ಎದುರುಗಡೆ ವಿನೀತ ಭಾವದಿಂದ ಕುಳಿತುಕೊಳ್ಳುತ್ತಿದ್ದರು. 

ಸಾಯಿಬಾಬಾರವರು ಭಿಕ್ಷೆ ಬೇಡಿ ತಂದು ಅದರಿಂದ ಕೊಟ್ಟ ಪ್ರಸಾದದಿಂದಲೇ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು.  ಮಧ್ಯಾನ್ಹ ಆರತಿಯ ನಂತರ ಸಾಯಿಬಾಬಾರವರು ಸ್ವಲ್ಪಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಮುಕ್ತಾರಾಂ ತಮ್ಮ ಶಿಥಿಲವಾದ ತಗಡಿನ ಮೇಲ್ಚಾವಣಿಯನ್ನು ಹೊಂದಿದ್ದ ಮನೆಗೆ ತೆರಳಿ ಅಲ್ಲಿದ್ದ ಧುನಿಯ ಮುಂದೆ ಧ್ಯಾನ ಮಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಮತ್ತೆ ಪುನಃ ದ್ವಾರಕಾಮಾಯಿಗೆ ಬಂದು ಬಾಬಾರವರ ಎದುರು ಕುಳಿತುಕೊಳ್ಳುತ್ತಿದ್ದರು. ತಗಡಿನ ಮನೆಯಾದ್ದರಿಂದ ಬೇಸಿಗೆಯ ಕಾಲದಲ್ಲಿ ಒಳಗಡೆ ಇರಲು ಆಗುತ್ತಿರಲಿಲ್ಲವಾದರೂ ಸಹ ತಮ್ಮ ಈ ಧುನಿಯ ಮುಂದುಗಡೆ ಕುಳಿತು ಮಾಡುವ ಧ್ಯಾನವನ್ನು ಬಿಡಲಿಲ್ಲ ಎಂಬುದು ವಿಶೇಷವೇ ಸರಿ. 

ಮುಕ್ತಾರಾಂ ಸಾಯಿಬಾಬಾರವರಂತೆಯೇ ಉಡುಪನ್ನು ಧರಿಸುತ್ತಿದ್ದರು. ಬಿಳಿಯ ಕಫ್ನಿಯನ್ನು ಧರಿಸುತ್ತಿದ್ದರು ಮತ್ತು ತಲೆಗೆ ಬಿಳಿಯ ಬಟ್ಟೆಯನ್ನು ಸುತ್ತಿಕೊಳ್ಳುತ್ತಿದ್ದರು ಮತ್ತು ಸೊಂಟದ ಸುತ್ತ ಲಂಗೋಟಿಯನ್ನು ಧರಿಸುತ್ತಿದ್ದರು. ಇವರಿಗೆ ಕಫ್ನಿಯನ್ನು ಮತ್ತು ಬಿಳಿಯ ಬಟ್ಟೆಯನ್ನು ಸ್ವಯಂ ಸಾಯಿಬಾಬಾರವರೇ ನೀಡಿದ್ದರು. ಸಾಯಿಯವರ ಆಶೀರ್ವಾದದಿಂದ ಇವರು ಸಾಯಿಬಾಬಾರವರಂತೆಯೇ ತಮ್ಮ ಜೀವನ ಶೈಲಿಯನ್ನು ನಡೆಸುವ ಭಾಗ್ಯವನ್ನು ಹೊಂದಿದ್ದು ಅವರ ಅದೃಷ್ಟವೆಂದೇ ಹೇಳಬೇಕು. 

ಸಾಯಿಬಾಬಾರವರ ಮಹಾಸಮಾಧಿಗೆ 3 ತಿಂಗಳ ಮುಂಚೆಯೇ ಮುಕ್ತಾರಾಂ ರವರು ತೀರ್ವ ಜ್ವರ ಮತ್ತು ಕಫದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಇವರು ತಮ್ಮ ಕೊಟಡಿಯಲ್ಲೇ ಹೆಚ್ಚು ಸಮಯವನ್ನು ಕಳೆಯಲು ಪ್ರಾರಂಭಿಸಿದರು. ಸಾಯಿಯವರ ಮಹಾಸಮಾಧಿಯ ಸಮಯದಲ್ಲಿ ಇವರ ಪರಿಸ್ಥಿತಿ ವಿಷಮಿಸಿತು. ಸಾಯಿಬಾಬಾರವರ ಮಹಾಸಮಾಧಿಯಾದ ಎಂಟು ದಿನಗಳ ಬಳಿಕ ಇವರು ದ್ವಾರಕಾಮಾಯಿಗೆ ತೆರಳಿ ಸ್ವಲ್ಪ ಸಮಯದ ಬಳಿಕ ತಮ್ಮ ಕೊಟಡಿಗೆ ಹಿಂತಿರುಗಿದರು. ದ್ವಾರಕಾಮಾಯಿಯಲ್ಲಿ ಇದ್ದ ಸಮಯದಲ್ಲಿ ಇವರು ಸಾಯಿಯವರು ಕುಳಿತುಕೊಳ್ಳುತ್ತಿದ್ದ ಗೋಣಿಚೀಲದ ಮೇಲೆ ದ್ವಾರಕಾಮಾಯಿಯ ಮಧ್ಯಭಾಗದಲ್ಲಿದ್ದ ಕಂಭಕ್ಕೆ ಒರಗಿಕೊಂಡು ಕುಳಿತಿದ್ದರು. ಅಲ್ಲಿಂದ ಕೊಟಡಿಗೆ ಬಂದ ಮೇಲೆ ಹೊರಗಡೆ ಎಲ್ಲೂ ಹೋಗಲಿಲ್ಲ. ದಿನೇ ದಿನೇ ಇವರ ಖಾಯಿಲೆ ಹೆಚ್ಚಾಗಿ ಕೊನೆಗೆ 1919 ಜನವರಿ ತಿಂಗಳಿನಲ್ಲಿ ಇಹಲೋಕವನ್ನು ತ್ಯಜಿಸಿದರು. 
 

ಮುಕ್ತಾರಾಂ ಸಮಾಧಿ 

ಬಾಬಾರವರು ತೋಡಿದ ಬಾವಿ:
ಈ ಬಾವಿಯು ಲೇಂಡಿ ಉದ್ಯಾನವನದ ಮಧ್ಯಭಾಗದಲ್ಲಿ ಪಶ್ಚಿಮ ಕಾಂಪೌಂಡ್ ಗೋಡೆಯ ಪಕ್ಕದಲ್ಲಿದೆ. ಸಾಯಿಬಾಬಾರವರೇ ಸ್ವತಃ ಶಿರಡಿಯ ಎಲ್ಲಾ ಬಡ ಹಾಗೂ ಶ್ರೀಮಂತ ಭಕ್ತರ ಸಹಕಾರದಿಂದ ತಮ್ಮ ಕೈಯಾರೆ ಈ ಬಾವಿಯನ್ನು ನಿರ್ಮಿಸಿದ್ದಾರೆ. 

ಬಾಬಾರವರು ಈ ಬಾವಿಯ ನೀರನ್ನು ಕುಡಿಯುತ್ತಿದ್ದರು ಮತ್ತು ಈ ಬಾವಿಯ ನೀರಿಗೆ "ಬುಡ್ಕಿ" ಎಂದು ಸಂಬೋಧಿಸುತ್ತಿದ್ದರು. ಈ ಬಾವಿಯ ನೀರು ಔಷಧೀಯ ಗುಣಗಳನ್ನು ಹೊಂದಿದ್ದು ಜ್ವರ ಮತ್ತು ಇನ್ನಿತರ ಖಾಯಿಲೆಗಳನ್ನು ಗುಣಪಡಿಸುತ್ತಿತ್ತು ಎಂದು ಹೇಳಲಾಗುತ್ತದೆ. ಭಕ್ತರು ಇದರಿಂದ ನೀರನ್ನು ಸೇದಿ ಉಪಯೋಗಿಸುತ್ತಿದ್ದರು. ಆದರೆ, ಕ್ರಮೇಣ ಇದರ ನೀರು ಬತ್ತಿ ಹೋಯಿತು. 1983 ರಲ್ಲಿ ಶ್ರೀ.ಎ.ಆರ್.ಶಿಂಧೆಯವರು ಈ ಬಾವಿಯನ್ನು ಇನ್ನಷ್ಟು ಆಳ ತೊಡಿಸಿದಾಗ ನೀರು ಬಹಳವಾಗಿ ಬಂದಿತು. ಆ ದಿನಗಳಲ್ಲಿ ಶಿರಡಿಯಲ್ಲಿ ಎರಡು ಬಾವಿಗಳಿದ್ದವು. ಒಂದು ಲೇಂಡಿ ಉದ್ಯಾನವನದಲ್ಲೂ ಮತ್ತು ಇನ್ನೊಂದು ಬಾವಿಯು ಸಮಾಧಿ ಮಂದಿರದ ನಿರ್ಗಮನ ದ್ವಾರದ ಎಡಭಾಗದಲ್ಲೂ ಇತ್ತು. ಆದರೆ, ಸಮಾಧಿ ಮಂದಿರದ ನಿರ್ಗಮನ ದ್ವಾರದ ಎಡಭಾಗದಲ್ಲಿದ್ದ ಬಾವಿಯನ್ನು ಈಗ ಮುಚ್ಚಲಾಗಿದೆ. 

ಶ್ರೀ.ಸಾಯಿ ಸಚ್ಚರಿತೆಯ 32ನೇ ಅಧ್ಯಾಯದಲ್ಲಿ  "ಗುರುವಿನ ಮಹತ್ವ" ದ ಬಗ್ಗೆ ತಿಳಿಸುವಾಗ ಬಾವಿಯಲ್ಲಿ ತಲೆಕೆಳಗಾಗಿ ಸಾಯಿಬಾಬಾರವರ ಗುರುವು ತಮ್ಮ ಶಿಷ್ಯನನ್ನು ತೂಗುಹಾಕಿದ ವಿಷಯವನ್ನು ಉಲ್ಲೇಖಿಸಲಾಗಿದೆ. 

ಶಿರಡಿ ಯಾತ್ರೆಗೆ ತೆರಳುವ ಸಾಯಿಭಕ್ತರು ತಪ್ಪದೆ ಸಾಯಿಬಾಬಾರವರೇ ಸ್ವತಃ ತೋಡಿದ ಈ ಬಾವಿಯನ್ನು ದರ್ಶನ ಮಾಡಿಯೇ ತೀರಬೇಕು.

ಪವಿತ್ರ ಅರಳಿ ಮರ:
ಈ ಪವಿತ್ರ ಅರಳಿ ಮರವು ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಇದ್ದಿತು. ಈ ಮರವು ನಂದಾದೀಪದ ಬಲಭಾಗದಲ್ಲಿದೆ. ಬಾಬಾರವರು ಪ್ರತಿದಿನವೂ ಲೇಂಡಿ ಉದ್ಯಾನವನಕ್ಕೆ ತೆರಳಿ ಸುಮಾರು 2-3 ಘಂಟೆಗಳ ಈ ಮರದ ಕೆಳಗಡೆ ಕುಳಿತುಕೊಳ್ಳುತ್ತಿದ್ದರು. ಈ ಮರವು ಬಾಡಿಹೋಗುತ್ತಿದ್ದ ಸಮಯದಲ್ಲಿ ಸಾಯಿಬಾಬಾರವರು ಪ್ರತಿದಿನವೂ ನೀರೆರದು ಅದನ್ನು ಬೆಳೆಸಿ ಆ ಮರದ ಬುಡದಲ್ಲಿ ನವಗ್ರಹಗಳನ್ನು ಸ್ಥಾಪಿಸಿದರು. ಅದರ ಸಂಕೇತವಾಗಿ ಈ ಮರದಲ್ಲಿ ಒಂಬತ್ತು ಕೊಂಬೆಗಳು ಮತ್ತು ಒಂಬತ್ತು ಬೇರುಗಳಿವೆ. ಆಲ್ಲದೇ,  ಈ ಮರದಲ್ಲಿ "ಗಣೇಶನ ಆಕಾರ" ವೂ ಕೂಡ ಕಾಣಿಸುತ್ತದೆ. 

ಪವಿತ್ರ ಬೇವಿನ ಮರ:  

ಈ ಪವಿತ್ರ ಬೇವಿನ ಮರವು ಲೇಂಡಿ ಉದ್ಯಾನವನದಲ್ಲಿ ನಂದಾದೀಪದ ಎಡಭಾಗದಲ್ಲಿದೆ.  ಈ ಸ್ಥಳದಲ್ಲಿ  ಸಾಯಿಬಾಬಾರವರು ನೀರೆರೆದು ಬೆಳೆಸಿದ್ದ ಎರಡು ಬೇವಿನ ಮರಗಳಿದ್ದವು. ಆದರೆ ಈ ಎರಡು ಮರಗಳು ಕಾಲ ಕ್ರಮೇಣ ಸತ್ತು ಹೋದವು. ಆದ್ದರಿಂದ ಒಂದರ ಬುಡವನ್ನು ಕತ್ತರಿಸಲಾಯಿತು. ಮತ್ತೊಂದನ್ನು ಸ್ವಲ್ಪ ಮೇಲ್ಭಾಗದಲ್ಲಿ ಕತ್ತರಿಸಿ ಅದರ ಮೇಲೆ ಬಳ್ಳಿಯನ್ನು ಬೆಳೆಸಲಾಗುತ್ತಿದೆ. 
 
ಹೂವಿನ ತೋಟ:

ಲೇಂಡಿ ಬಾಗ್ ನ ಮಹಾದ್ವಾರದ ಎಡಭಾಗದಲ್ಲಿ 1920 ರ ವರೆಗೂ ಸುಂದರ ಹೂವಿನ ತೋಟವಿತ್ತು. ಈ ತೋಟವು ಬಹಳ ಅನೇಕ ಗಿಡ ಮರಗಳಿಂದ ಕೂಡಿ ಸುಂದರವಾಗಿದ್ದು ಇಲ್ಲಿ ನವಿಲು, ಜಿಂಕೆ, ಮೊಲ, ಮುಂಗುಸಿ ಮತ್ತು ಇನ್ನು ಮುಂತಾದ ಪ್ರಾಣಿಗಳು ಸ್ವಚ್ಚಂದವಾಗಿ ವಿಹರಿಸುತ್ತಿದ್ದವು. ಅನೇಕ ಬಗೆಯ ಪಕ್ಷಿಗಳು ಬೇರೆ ಬೇರೆ ಸ್ಥಳಗಳಿಂದ ಇಲ್ಲಿಗೆ ಬಂದು ಸ್ವಲ್ಪಕಾಲ ವಿಶ್ರಮಿಸಿ ಹೋಗುತ್ತಿದ್ದವು. ಈ ರೀತಿ ಸುಮಾರು 1980 ರ ವರೆಗೂ ಇದ್ದಿತು. 

ಸಾಯಿಬಾಬಾ ಸಂಸ್ಥಾನದವರು ಈ ಉದ್ಯಾನವನವನ್ನು ಸುಂದರಗೊಳಿಸುವ ಯೋಜನೆಯನ್ನು ಹಾಕಿಕೊಂಡು ಈ ಸ್ಥಳದಲ್ಲಿ ಈಗ ಸುಂದರವಾದ ಕೃತಕ ಜಲಪಾತವನ್ನು ನಿರ್ಮಿಸಿರುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment