Friday, July 2, 2010

ಶಿರಡಿಯ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - 5 ಸಮಾಧಿಗಳು - ಕೃಪೆ - ಸಾಯಿಅಮೃತಧಾರಾ.ಕಾಂ  
ಶಿರಡಿಯ ಸಮಾಧಿ ಮಂದಿರದ ಪ್ರಾಂಗಣದಲ್ಲಿ ಗುರುಸ್ಥಾನದ ಬಲಭಾಗಕ್ಕೆ ಹಾಗೂ ಸಾಯಿಬಾಬಾ ವಸ್ತು ಸಂಗ್ರಹಾಲಯದ   ಎದುರಿಗೆ 5 ಸಾಯಿ ಮಹಾಭಕ್ತರಾದ ಹಾಜಿ ಅಬ್ದುಲ್ ಬಾಬಾ, ನಾನಾವಲ್ಲಿ, ವಿ.ಪಿ.ಅಯ್ಯರ್, ಬಾವು ಮಹಾರಾಜ್ ಕುಂಬಾರ್ ಮತ್ತು ತಾತ್ಯಾ ಕೋತೆ ಪಾಟೀಲ ಇವರುಗಳ ಸಮಾಧಿಯನ್ನು ಸಾಯಿಭಕ್ತರು ನೋಡಬಹುದು. ಇವರುಗಳ ಸಮಾಧಿಯ ಬಗ್ಗೆ ವಿವರವನ್ನು ಈ ಕೆಳಗೆ ಕೊಡಲಾಗಿದೆ.


1. ಹಾಜಿ ಅಬ್ದುಲ್ ಬಾಬಾ ಸಮಾಧಿ


ಅಬ್ದುಲ್ ಬಾಬಾರವರು ಕಾಂದೇಶ್ ಬಳಿಯಿರುವ ನಾಂದೇಡ್ ನಿವಾಸಿಯಾಗಿದ್ದರು. ಇವರು ಮೊದಲ ಬಾರಿಗೆ ಶಿರಡಿಗೆ 1889 ರಲ್ಲಿ ಬಂದರು.  ಇವರು ಮೊದಲು ಅಮೀರುದ್ದೀನ್ ಎಂಬ ಫಕೀರನ ಆಶ್ರಯದಲ್ಲಿದ್ದರು. ಫಕೀರ್ ಅಮೀರುದ್ದೀನ್ ರವರ ಕನಸಿನಲ್ಲಿ ಸಾಯಿಬಾಬಾರವರು ದರ್ಶನ ನೀಡಿ ಅಬ್ದುಲ್ ಬಾಬಾರವರಿಗೆ ನೀಡಲು ಎರಡು ಮಾವಿನ ಹಣ್ಣುಗಳನ್ನು ನೀಡಿ ಶಿರಡಿಗೆ ಅಬ್ದುಲ್ ಬಾಬಾ ಅವರನ್ನು ಕಳಿಸುವಂತೆ ಆಜ್ಞೆ ಮಾಡಿದರು. ಫಕೀರ್ ಅಮೀರುದ್ದೀನ್ ರವರು ಸಾಯಿಯವರ ಆಜ್ಞೆಯಂತೆ ಅಬ್ದುಲ್ ಬಾಬಾರವರನ್ನು ಶಿರಡಿಗೆ ಕಳುಹಿಸಿದರು.


ಇವರ ಸಮಾಧಿಯು ಲೇಂಡಿಬಾಗ್ ಗೆ ಹೋಗುವ ದಾರಿಯಲ್ಲಿ ಮೊದಲು ಸಿಕ್ಕುತ್ತದೆ. ಇವರ ಸಮಾಧಿಯು  ಸಾಯಿಬಾಬಾ ವಸ್ತು ಸಂಗ್ರಹಾಲಯದ ಎದುರುಗಡೆ ಇದೆ.  ಅಬ್ದುಲ್ ಬಾಬಾರವರು ಸಾಯಿಬಾಬಾರವರ  ಪ್ರಮುಖ ಶಿಷ್ಯರಲ್ಲಿ ಒಬ್ಬರು. ಪ್ರತಿದಿನ ಬೆಳಗಿನ ಜಾವ ಬೇಗನೆ ಎದ್ದು ಶಿರಡಿಯ ರಸ್ತೆಯನ್ನೆಲ್ಲ ಗುಡಿಸಿ ಶುಭ್ರಗೊಳಿಸುವುದೇ ಅಲ್ಲದೆ ಸಾಯಿಬಾಬಾರವರು ಹೇಳಿದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು ಮತ್ತು ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು.

ಸಾಯಿಬಾಬಾರವರು ಇವರನ್ನು ಆಶೀರ್ವದಿಸಿದ ಪರಿಣಾಮವಾಗಿ ಇವರು ಅಧ್ಯಾತ್ಮಿಕ ಮಾರ್ಗದಲ್ಲಿ ಉನ್ನತಿಯನ್ನು ಹೊಂದಿದರು. ಸಾಯಿಬಾಬಾರವರು ಇವರಿಗೆ ನಿತ್ಯವೂ ಕುರಾನ್ ಪಠಣ ಮಾಡಿ  ಅದನ್ನು  ಕುರಿತು ಧ್ಯಾನ ಮಾಡುವಂತೆ  ಆಜ್ಞೆ ಮಾಡಿದ್ದರು. ಇವರು ಸಾಯಿಬಾಬಾರವರು ಹೇಳುತ್ತಿದ್ದುದನ್ನೆಲ್ಲ ಬರೆದಿಟ್ಟುಕೊಂಡು ಅವುಗಳನ್ನು ನಿತ್ಯವೂ ಕುರಾನ್ ಪಠಣ ಮಾಡುವಂತೆ ಮಾಡುತ್ತಿದ್ದರು. ಸಾಯಿಬಾಬಾರವರ ಮಹಾಸಮಾಧಿಯ ನಂತರ ಬರೆದಿಟ್ಟುಕೊಂಡ ಎಲ್ಲ ಸಾಯಿಯವರ ಉಕ್ತಿಗಳನ್ನು ಉಪಯೋಗಿಸಿಕೊಂಡು ಶಿರಡಿಯ ಜನರಿಗೆ ಭವಿಷ್ಯವನ್ನು ಹೇಳುತ್ತಿದ್ದರು.

ಅಬ್ದುಲ್ ಬಾಬಾರವರು 16ನೇ ಆಗಸ್ಟ್ 1954 ರಂದು ಸಮಾಧಿ ಹೊಂದಿದರು. ಇವರ ಸಮಾಧಿಯನ್ನು ಅತ್ಯಂತ ಶ್ರದ್ದೆಯಿಂದ ಇವರ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ.ಇವರ ವಂಶಸ್ಥರಾದ ಘನಿ ಭಾಯ್ ರವರಿಗೆ ಶಿರಡಿ ಸಾಯಿಬಾಬಾರವರ ಸಮಾಧಿಯನ್ನು ಪ್ರತಿದಿನ ಶುದ್ಧಿಗೊಳಿಸಿ ಪೂಜೆ ಸಲ್ಲಿಸುವ ಸುವರ್ಣಾವಕಾಶವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದವರು ನೀಡಿದ್ದಾರೆ. ಪ್ರತಿದಿನ ಬೆಳಿಗ್ಗೆ 10 ಘಂಟೆಗೆ ಈ ಕಾರ್ಯವನ್ನು ಘನಿ ಭಾಯ್ ರವರು ಸಮಾಧಿ ಮಂದಿರದಲ್ಲಿ ತಪ್ಪದೆ ಆಚರಿಸುತ್ತಾ ಬಂದಿದ್ದಾರೆ.



2. ಬಾವು ಮಹಾರಾಜ್ ಕುಂಬಾರ್ ರವರ ಸಮಾಧಿ



ಇವರ ಸಮಾಧಿಯು ನಾನಾವಲ್ಲಿಯವರ ಸಮಾಧಿಯ ಪಕ್ಕದಲ್ಲಿದೆ. ಬಾವು ಮಹಾರಾಜ್ ಕುಂಬಾರ್ ರವರು ಚಿಕ್ಕಂದಿನಿಂದಲೇ  ಆಧ್ಯಾತ್ಮದ ಕಡೆಗೆ ಒಲವನ್ನು ಹೊಂದಿದ್ದರು. ಇವರ ಪೂರ್ವಜರು  ಮಹಾರಾಷ್ಟ್ರದ ಸಂಗಮ್ನೇರ್ ಜಿಲ್ಲೆಯ  ಕೈರಿ  ನೀಮಗಾವ್ ನಲ್ಲಿ ಕುಂಬಾರ ವೃತ್ತಿಯನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದರು. ಅದಕ್ಕೆ ಇವರ ಹೆಸರಿನ ಮುಂದೆ ಕುಂಬಾರ್  ಎಂದು  ಸೇರಿಕೊಂಡಿತ್ತು. ಬಾವು ಮಹಾರಾಜ್ ಕುಂಬಾರ್ ರವರು ತಮ್ಮ ಅತೀ ಸಣ್ಣ  ವಯಸ್ಸಿನಲ್ಲೇ  ಶಿರಡಿಗೆ ಬಂದವರು ಮತ್ತೆ ವಾಪಸ್ ತಮ್ಮ ಹಳ್ಳಿಗೆ ಹೋಗಲೇ ಇಲ್ಲ.  ಬದಲಿಗೆ ಶಿರಡಿಯಲ್ಲೇ ಇದ್ದು ಬಿಟ್ಟರು.

ಶಿರಡಿಯಲ್ಲಿ ಇವರು ಶನಿ ದೇವಾಲಯದ ಹತ್ತಿರ ಇರುತ್ತಿದ್ದರು. ಕೆಲವೊಮ್ಮೆ ರಹತಾಗೆ ಹೋಗುವ ದಾರಿಯಲ್ಲಿ ಇದ್ದ ದೊಡ್ಡ ಆಲದ ಮರದ ಕೆಳಗೆ ಇರುತ್ತಿದ್ದರು.  ಕೆಲವೊಮ್ಮೆ ಇವರು ರಹತಾ, ನೀಮಗಾವ್, ಸಾಕೋರಿ ಮತ್ತು ಇತರ ಸ್ಥಳಗಳಿಗೆ ಹೋಗುತ್ತಿದ್ದರು. ಆದರೆ ಅಲ್ಲಿ ತಂಗುತ್ತಿರಲಿಲ್ಲ. ಶಿರಡಿಗೆ ಆ ದಿನವೇ ವಾಪಸ್ ಬಂದುಬಿಡುತ್ತಿದ್ದರು.


ಬಾವು ಮಹಾರಾಜ್ ಕುಂಬಾರ್ ರವರು ಸಾಯಿಬಾಬಾರವರಿಗೆ ಅತಿ ಪ್ರೀತಿ ಪಾತ್ರರಾಗಿದ್ದರು.ಸಾಯಿಬಾಬಾರವರ ಜೀವಿತದ ಕೊನೆಯ ದಿನಗಳಲ್ಲಿ ಅಂದರೆ ಇನ್ನು 2-3 ವರ್ಷಗಳಿರುವಾಗ ಬಾವು ಮಹಾರಾಜ್ ಕುಂಬಾರ್ ರವರು ಶಿರಡಿಗೆ ಬಂದರು. ಬಾವು ಅವರನ್ನು ಶಿರಡಿಯ ಜನರೆಲ್ಲಾ ಬಹಳ ಗೌರವದಿಂದ ನೋಡುತ್ತಿದ್ದರು ಮತ್ತು ಅವಧೂತರೆಂದು ಪರಿಗಣಿಸಿದ್ದರು. ಅವರು ಸದಾಕಾಲ ಮೌನವಾಗಿರುತ್ತಿದ್ದರು. ಆದರೆ, ಅವರು ಎಲ್ಲರಲ್ಲೂ ತೋರುತ್ತಿದ್ದ ಪ್ರೀತಿ, ಸದಾ ಹಸನ್ಮುಖ ಸ್ವಭಾವ ಮತ್ತು ಎಲ್ಲ ಜೀವಿಗಳಲ್ಲೂ ಅವರು ತೋರುತ್ತಿದ್ದ ದಯೆಯನ್ನು ಕಂಡು ಶಿರಡಿಯ ಜನರೆಲ್ಲಾ ಅವರನ್ನು ಮೆಚ್ಚುವಂತೆ ಮಾಡಿದ್ದವು. ಬಾವುರವರು ಶಿರಡಿಯ ಬೀದಿಯನ್ನೆಲ್ಲ ಸ್ವತ: ತಾವೇ ಗುಡಿಸುತ್ತಿದ್ದರು ಮತ್ತು ತಮ್ಮಲ್ಲಿದ್ದ ಹಣವನ್ನೆಲ್ಲ ಬೇರೆಯವರಿಗೋಸ್ಕರ ಖರ್ಚು ಮಾಡುತ್ತಿದ್ದರು. ಬಾವುರವರ ಬಳಿ ಸದಾಕಾಲ ಒಂದು ಕೋಲು, ಒಂದು ಖಾದಿ  ಧೋತಿ,  ಖಾದಿ  ಟೋಪಿ,  ಒಂದು ಕಫ್ನಿ ಮತ್ತು  ಇವರ ಭುಜದ ಮೇಲೆ ಕುರಿಯ ತುಪ್ಪಳದಿಂದ ಮಾಡಿದ ಹೊದಿಕೆ ಮಾತ್ರ ಇರುತ್ತಿತ್ತು.  ಯಾರಾದರು ಹಾಕಿಕೊಳ್ಳಲು ಬಟ್ಟೆಯನ್ನು ಕೊಟ್ಟರೆ, ಅದನ್ನು ಪ್ರಾಣಿಗಳ ನೆರಳಿಗೊಸ್ಕರ ಮರಗಳಿಗೆ ನೇತು ಹಾಕಿಬಿಡುತ್ತಿದ್ದರು ಅಥವಾ ಮರಗಳ ಮೈ ಮುಚ್ಚಲು ಬಟ್ಟೆ ಹೊದಿಸುತ್ತಿದ್ದರು. ಅದೇ ರೀತಿ ಯಾರಾದರು ತಿನ್ನಲು ಆಹಾರವನ್ನು ನೀಡಿದರೆ ಅದನ್ನು ಬೇರೆಯವರಿಗೆ ಕೊಟ್ಟು ಬಿಡುತ್ತಿದ್ದರು.

ಬಾವು ಮಹಾರಾಜ್ ಕುಂಬಾರ್ ರವರು ಶಿರಡಿಯ ಬೀದಿಯನ್ನೆಲ್ಲಾ ಗುಡಿಸುವ ಕೆಲಸದಲ್ಲಿ ಸದಾ ನಿರತರಾಗಿರುತ್ತಿದ್ದರು. ಬೆಳಿಗ್ಗೆ 8 ಘಂಟೆಯಿಂದ ಮಧ್ಯಾನ್ಹ 2 ಘಂಟೆಯವರೆಗೆ ಶಿರಡಿಯ ಎಲ್ಲ ಬೀದಿಗಳನ್ನು ಗುಡಿಸಿ ಶುಭ್ರಗೊಳಿಸುತ್ತಿದ್ದರು. ಬೀದಿಯನ್ನು ಗುಡಿಸಲು ತಮ್ಮ ಬಳಿಯಿದ್ದ ಬಟ್ಟೆಯನ್ನೇ ಬಳಸುತ್ತಿದ್ದರು. ಅಲ್ಲದೆ, ಶಿರಡಿಯ ಮೋರಿಗಳನ್ನು ಮತ್ತು ಮಹಿಳೆಯರು ಬೀದಿಯಲ್ಲಿ ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಬಳಸುತ್ತಿದ್ದ ಜಾಗಗಳನ್ನು ಕೂಡ ಶುಭ್ರಗೊಳಿಸುತ್ತಿದ್ದರು. ಪುನಃ ಸಂಜೆಯ ವೇಳೆ ಶಿರಡಿಯ ಎಲ್ಲ ಬೀದಿಗಳನ್ನು ಗುಡಿಸಿ ಮೋರಿಗಳನ್ನು ಶುಭ್ರಗೊಳಿಸುತ್ತಿದ್ದರು. ಚಳಿಯಿರಲಿ, ಮಳೆಯಿರಲಿ ಅಥವಾ ಬಿಸಿಲಿರಲಿ, ತಮ್ಮ ಈ ಕಾಯಕ ಮಾಡುವುದನ್ನು ಒಂದು ದಿನವೂ ಕೂಡ ತಪ್ಪಿಸುತ್ತಿರಲಿಲ್ಲ. 

ಬೆಳಗಿನ ಜಾವ 5 ಘಂಟೆಗೆ ಇವರು ಬಾಬಾರವರ ದರ್ಶನಕ್ಕೆ ಹೋಗುತ್ತಿದ್ದರು. ಇದನ್ನು ಇವರು ಬಹಳ ಗುಪ್ತವಾಗಿ ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು. ಅಲ್ಲದೆ, ದಿನದಲ್ಲಿ ಅನೇಕ ಬಾರಿ ಸಾಯಿಯವರ ದರ್ಶನಕ್ಕೆ ಹೋಗುತ್ತಿದ್ದರು. ಆಗ ಬಾಬಾರವರು ಇವರ ಜೊತೆ ಸಂಜ್ಞೆಯ ಮುಖಾಂತರ ನಿಶ್ಯಬ್ದವಾಗಿ ಏನನ್ನೋ ಮಾತನಾಡುತ್ತಿದ್ದರು. ಶಿರಡಿಯ ಯಾವ ಜನರಿಗೂ ಬಾವು ಮಹಾರಾಜ್ ಕುಂಬಾರ್ ರವರು ಬಾಬಾರವರ ಬಳಿ ಏನು ಮಾತನಾಡಿದರೆಂದು ತಿಳಿಯುತ್ತಿರಲಿಲ್ಲ. 

ಸಾಯಿಯವರು ಮಹಾಸಮಾಧಿ ಹೊಂದಿದ ಮೇಲೆ ದಿನದಲ್ಲಿ ಅನೇಕ ಬಾರಿ ಇವರು ಸಾಯಿಬಾಬಾರವರ ಸಮಾಧಿ ದರ್ಶನ ಮಾಡುತ್ತಿದ್ದರು. ಈ ಕೆಲಸವನ್ನು ಕೂಡ ಬಾವು ಮಹಾರಾಜ್ ಕುಂಬಾರ್ ರವರು ಅತ್ಯಂತ ಗುಪ್ತವಾಗಿ ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು. ಇವರ ಮತ್ತು ಬಾಬಾರವರ ನಡುವೆ ಯಾವುದೋ ಅವಿನಾಭಾವ ಸಂಬಂಧವಿತ್ತೆಂದು ಹೇಳಲಾಗುತ್ತದೆ. 

ಬಾವು ಮಹಾರಾಜ್ ಕುಂಬಾರ್ ರವರು ತಾವು ಸಮಾಧಿ ಹೊಂದುವುದಕ್ಕೆ ಕೆಲವು ದಿನಗಳ ಮುಂಚೆ ಖಾಯಿಲೆಯಿಂದ ನರಳುತ್ತಿದ್ದರು. ಇವರಿಗೆ ಹಸಿವು ಆಗುತ್ತಿರಲಿಲ್ಲ ಮತ್ತು ಇವರು ಏನನ್ನೂ ತಿನ್ನುತ್ತಿರಲಿಲ್ಲ. ದಿನದಲ್ಲಿ ಅನೇಕ ಬಾರಿ ನೀರನ್ನು ಮಾತ್ರ ಕುಡಿಯುತ್ತಿದ್ದರು. ಇವರ ಖಾಯಿಲೆಯ ಲಕ್ಷಣಗಳು ಇವರಿಗೆ ಅತೀವ ಸಕ್ಕರೆ ಖಾಯಿಲೆಯಾಗಿದೆ ಎಂದು ಸೂಚಿಸುತ್ತಿತ್ತು. ರಘುವೀರ ಭಾಸ್ಕರ ಪುರಂದರೆ ಮತ್ತು ಸಗುಣ ಮೇರು ನಾಯಕ್ ರವರು ಇವರನ್ನು ಬಹಳ ಜೋಪಾನವಾಗಿ ನೋಡಿಕೊಂಡು ಇವರ ಆರೈಕೆಯನ್ನು ಮಾಡುತ್ತಿದ್ದರು. ಬಾವು ಮಹಾರಾಜ್ ಕುಂಬಾರ್ ರವರು ಚೈತ್ರ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯಂದು ಅಂದರೆ 12ನೇ ಶಕೆ 1860  ಅಂದರೆ ಇಂಗ್ಲೀಷ್ ಪಂಚಾಂಗದ ಪ್ರಕಾರ  27ನೇ ಏಪ್ರಿಲ್ 1937 ರಂದು ಸ್ವರ್ಗಸ್ಥರಾದರು. ಇವರ ಸಾವಿನ ಸುದ್ದಿ ಶಿರಡಿಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಶಿರಡಿಯ ಜನರೆಲ್ಲಾ ಸೇರಿ ಇವರ ಸಮಾಧಿಯನ್ನು ಲೇಂಡಿ ಬಾಗ್ ನಲ್ಲಿದ್ದ ಬೇವಿನ ಮರದ ಕೆಳಗೆ ಮಾಡಿದರು. 

ಬಾವು ಮಹಾರಾಜ್ ಕುಂಬಾರ್ ರವರು ಸಮಾಧಿಯಾದ 12ನೇ ದಿನ ಅಂದರೆ 7ನೇ ಮೇ 1937 ರಂದು ಬಹಳ ದೊಡ್ಡ ರೀತಿಯಲ್ಲಿ ಶಿರಡಿಯ ಜನರಿಗೆಲ್ಲ ಅನ್ನದಾನವನ್ನು ಏರ್ಪಡಿಸಲಾಗಿತ್ತು. 13ನೇ ದಿನ ಕೂಡ ಬಹಳ ದೊಡ್ಡ ರೀತಿಯಲ್ಲಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಶಿರಡಿಯ ಜನರೆಲ್ಲಾ ಈ ಅನ್ನ ಸಂತರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತೃಪ್ತಿಯಿಂದ ಭೋಜನವನ್ನು ಮಾಡಿದರು. ಅಲ್ಲದೇ, ಇದೇ ದಿನ ಶಿರಡಿಯ ಸಮಾಧಿ ಮಂದಿರದ ಫೋಟೋ ಗ್ಯಾಲರಿಯಲ್ಲಿ  ಬಾವು ಮಹಾರಾಜ್ ಕುಂಬಾರ್ ರವರ ದೊಡ್ಡ ಭಾವಚಿತ್ರವನ್ನು ತೂಗುಹಾಕಲಾಯಿತು. 

ಪ್ರತಿವರ್ಷ ಚೈತ್ರ ಮಾಸದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದವರು ಇವರ ಪುಣ್ಯ ತಿಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ಶಿರಡಿಯ ಎಲ್ಲ ಜನರಿಗೆ ಅನ್ನದಾನವನ್ನು ಮಾಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಇಂದಿಗೂ ಶಿರಡಿಯ ಹೆಂಗಸರು ಬಾವುರವರ ಸಮಾಧಿಯ ಬಳಿ ತಮ್ಮ ಮಕ್ಕಳನ್ನು ಕೂರಿಸಿ ಅಲ್ಲಿರುವ ಮಣ್ಣನ್ನು  ತಮ್ಮ ಮಕ್ಕಳ ಹಣೆಯ ಮೇಲೆ ಹಚ್ಚುತ್ತಾರೆ ಮತ್ತು ತಮ್ಮ ಮಕ್ಕಳೂ ಕೂಡ ಬಾವು ಮಹಾರಾಜ್ ಕುಂಬಾರ್ ರಂತೆ ಆಗಲೆಂದು ಪ್ರಾರ್ಥಿಸುತ್ತಾರೆ.

3. ನಾನಾವಲ್ಲಿಯವರ ಸಮಾಧಿ 



ನಾನಾವಲ್ಲಿ (ಶಂಕರ ನಾರಾಯಣ ವೈದ್ಯ) ಯವರು ಒಬ್ಬ ವಿಶೇಷ ಸಾಯಿಬಾಬಾ ಭಕ್ತರಾಗಿದ್ದರು.  ಶಿರಡಿಯ ಅನೇಕ ಜನವರು ಇವರನ್ನು ತಪ್ಪು ತಿಳಿದಿದ್ದರು. ಇವರು ತಂತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಇವರು ತಮ್ಮನ್ನು ತಾವೇ "ಸಾಯಿಬಾಬಾರವರ ಸೈನ್ಯದ ದಂಡಾಧಿಕಾರಿ" ಎಂದು ಕರೆದು ಕೊಳ್ಳುತ್ತಿದ್ದರು. ಇವರು ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿ ಶಿರಡಿಯ ಜನರು ಇವರನ್ನು ಕೆಟ್ಟ ದೃಷ್ಟಿಯಿಂದ ನೋಡುವಂತೆ ಮಾಡುತ್ತಿತ್ತು. ಸಾಯಿಬಾಬಾರವರ ಜೀವನದಂತೆ ಇವರ ಹಿಂದಿನ ಜೀವನವು ಕೂಡ ರಹಸ್ಯಮಾಯವಾಗಿತ್ತು. ಇವರು ತಮ್ಮ ಜೇಬಿನಲ್ಲಿ ಹಾವುಗಳನ್ನು ಮತ್ತು ನಾಲಗೆಯಲ್ಲಿ ಚೇಳುಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದುದೆ ಅಲ್ಲದೆ ಶಿರಡಿಯ ಕೆಲವು ಜನರನ್ನು ಕಂಡ ಕೂಡಲೇ ಯಾವುದೇ ಪ್ರಚೋದನೆ ಇಲ್ಲದೆ ಅವರ ಮೇಲೆರಗಿ ಅವರನ್ನು ಚೆನ್ನಾಗಿ ಥಳಿಸುತ್ತಿದ್ದರು. ಇದರಿಂದ ಶಿರಡಿಯ ಜನರಿಗೆ ನಾನಾವಲ್ಲಿ ಎಂದರೆ ಭಯವಾಗುತ್ತಿತ್ತು. ಇನ್ನು ಕೆಲವು ಶಿರಡಿಯ ಜನರು ಇವರನ್ನು ಮಹಾತ್ಮನೆಂದು ತಿಳಿದಿದ್ದರು. ಇವರಿಗೆ ಸಾಯಿಯಲ್ಲಿ ಅಪರಿಮಿತವಾದ ಭಕ್ತಿ ಇದ್ದಿತು. ನಾನಾವಲ್ಲಿಯವರ ರೂಪ ನೋಡುವುದಕ್ಕೆ ಭಯವನ್ನು ಹುಟ್ಟಿಸುತ್ತಿತ್ತು. ಇವರು ಕೆಲವೊಮ್ಮೆ ನಗ್ನರಾಗಿ ಓಡಾಡುತ್ತಿದ್ದರು. ಮತ್ತೆ ಕೆಲವೊಮ್ಮೆ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು. ನಾನಾವಲ್ಲಿಯವರ ಜೀವನವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ ಅವರೊಬ್ಬ ಅತ್ಯಂತ ಶ್ರದ್ದೆ ಭಕ್ತಿಯಿಂದ ಕೂಡಿದ ಹಾಗೂ ವೈರಾಗ್ಯವೇ ಮುರ್ತಿವೆತ್ತಂತೆ ಇರುವ ವ್ಯಕ್ತಿಯಾಗಿ ಕಾಣುತ್ತಾರೆ. ಸಾಯಿಬಾಬಾರವರಂತೆ ನಾನಾವಲ್ಲಿಯವರ ಹಿಂದಿನ ವಿಷಯಗಳ ಬಗ್ಗೆ ಕೂಡ ಹೆಚ್ಚಿಗೆ ತಿಳಿದುಬಂದಿಲ್ಲ. ಕೆಲವರು ಇವರನ್ನು ಬ್ರಾಹ್ಮಣರೆಂದು, ಮತ್ತೆ ಕೆಲವರು ಇವರನ್ನು ಮುಸಲ್ಮಾನರೆಂದು ವಾದವನ್ನು ಮಂಡಿಸುತ್ತಾರೆ. ಕೆಲವೊಮ್ಮೆ ನಾನವಲ್ಲಿ ಮುಸಲ್ಮಾನ್ ಫಕೀರರ ಹಾಗೆ ಬಟ್ಟೆಯನ್ನು ಧರಿಸಿದರೆ ಇನ್ನು ಕೆಲವೊಮ್ಮೆ ಹಿಂದೂ ಸಿದ್ಧರ ಹಾಗೆ ಬಟ್ಟೆಯನ್ನು ಧರಿಸುತ್ತಿದ್ದರು. ಸಾಯಿಬಾಬಾರವರಂತೆ ನಾನಾವಲ್ಲಿಯವರ ಧಾರ್ಮಿಕ ರೀತಿ ನೀತಿಗಳು ಇತರರಿಗಿಂತ ಬೇರೆಯಾಗಿದ್ದು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೆ ನಾನಾವಲ್ಲಿ ಬಾಲಕನಾಗಿದ್ದಾಗ ಒಂದು ಮುಸ್ಲಿಂ ದರ್ಗಾದಲ್ಲಿದ್ದು ದಿವ್ಯ ಪ್ರೇರೇಪಣೆ ಮೇರೆಗೆ ಸಾಯಿಬಾಬಾರವರಲ್ಲಿಗೆ ಬಂದರೆಂದು ಶಿರಡಿಯ ಎಲ್ಲ ಜನರು ಒಪ್ಪುತ್ತಾರೆ. ನಾನಾವಲ್ಲಿಯವರು ಯಾವಾಗ ಶಿರಡಿಗೆ ಬಂದರೆಂದು ಯಾರಿಗೂ ತಿಳಿದಿಲ್ಲ. ಆದರೆ ಸಾಯಿಬಾಬಾರವರು ಮದುವೆ ದಿಬ್ಬಣದ ಜೊತೆಯಲ್ಲಿ ಬರುವುದಕ್ಕೆ ಮುಂಚೆಯೇ ನಾನಾವಲ್ಲಿ ಶಿರಡಿಯಲ್ಲಿದ್ದರೆಂದು ಕೆಲವು ಜನರ ಅಭಿಮತವಾಗಿದೆ. ಸಾಯಿಬಾಬಾರವರನ್ನು ನೋಡಿದ ಕೂಡಲೇ ನಾನಾವಲ್ಲಿ "ಓ ಮಾಮಾ ಬಂದಿರ" ಎಂದು ಸಂಬೋಧಿಸಿದರೆಂದು ತಿಳಿದು ಬಂದಿದೆ. ಅಲ್ಲಿಂದ ಮುಂದೆ ನಾನಾವಲ್ಲಿಯವರು ಸಾಯಿಯವರನ್ನು "ಮಾಮಾ" ಎಂದೇ ಕರೆಯುತ್ತಿದ್ದರು.

ನಾನಾವಲ್ಲಿಯವರು ಬಾಬಾರವರನ್ನು ಕೆಲವೊಮ್ಮೆ ನೋಡುತ್ತಿದ್ದರು ಹಾಗೂ ದೂರದಿಂದಲೇ ದರ್ಶನ ಮಾಡುತ್ತಿದ್ದರು ಹಾಗೂ ಎಲ್ಲ ಶಿರಡಿ ಜನರ ಭಕ್ತಿ, ಪ್ರೀತಿ ಹಾಗೂ ವೈಭವಗಳು ಸಾಯಿಯವರಿಗೆ ಸಲ್ಲಬೇಕೆಂದು ಇಚ್ಚಿಸುತ್ತಿದ್ದರು. ಅವರು "ನನ್ನ ಮಾಮಾನನ್ನು ರಕ್ಷಿಸುವುದೇ ನನ್ನ ಆದ್ಯ ಕರ್ತವ್ಯ" ಎಂದು ಯಾವಾಗಲು ಹೇಳುತ್ತಿದ್ದರು. ನಾನಾವಲ್ಲಿಯವರು ಎಂದಿಗೂ ಅನೀತಿಯನ್ನು ಮತ್ತು ತೋರಿಕೆಯನ್ನು ಸಹಿಸುತ್ತಿರಲಿಲ್ಲ. ಅವರಿಗೆ ಭಕ್ತರ ಅಂತರಂಗ ಚೆನ್ನಾಗಿ ತಿಳಿಯುತ್ತಿತ್ತು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು. ಅವರು ಕೆಲವೊಮ್ಮೆ ದ್ವಾರಕಾಮಾಯಿಯ ಹೊರಗಡೆ ಕಾದು ನಿಂತಿದ್ದು ಕೆಲವು ಜನರಿಗೆ ಥಳಿಸುತ್ತಿದ್ದರೆಂದು ತಿಳಿದುಬಂದಿದೆ. ಆ ಜನರು ಹೋಗಿ ಸಾಯಿಬಾಬಾರವರಿಗೆ ಈ ವಿಷಯವನ್ನು ಹೇಳಿದರೆ ಸಾಯಿಯವರು ನಾನಾವಲ್ಲಿಯವರನ್ನು ಬಯ್ಯದೆ ಜನರಿಗೆ ಹುಷಾರಾಗಿರಲು ಹೇಳುತ್ತಿದ್ದರೆಂದು ತಿಳಿದುಬರುತ್ತದೆ. ಎಚ್.ವಿ.ಸಾಥೆ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು ಹಾಗೂ ಬ್ರಿಟಿಷ್ ಸರ್ಕಾರದ ಉನ್ನತ ಅಧಿಕಾರಿಯಾಗಿದ್ದರು. ಯಾವುದೋ ತಿಳಿಯದ ಕಾರಣಕ್ಕೆ ನಾನಾವಲ್ಲಿ ಸಾಥೆಯವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು. ಚಾವಡಿ ಉತ್ಸವದ ಸಂದರ್ಭದಲ್ಲಿ ಸಾಥೆಯವರು ಬಾಬಾರವರ ಮೆರವಣಿಗೆ ಮುಂದೆ ರಾಜದಂಡವನ್ನು ಹಿಡಿದುಕೊಂಡು ಹೋಗುವ ವಾಡಿಕೆ ಇತ್ತು. ಆ ರೀತಿ ನಡೆಯುವ ಒಂದು ಸಂದರ್ಭದಲ್ಲಿ ನಾನಾವಲ್ಲಿ ಸಾಥೆಯವರ ಹಿಂದಿನಿಂದ ಅವರಿಗೆ ತಿಳಿಯದಂತೆ ಬಂದು ಗಾಜಿನ ಚೂರಿನಿಂದ ಥಳಿಸಿದನು. ಮತ್ತೊಂದು ಬಾರಿ ಸಾಥೆಯವರು ಇನ್ನೇನು ಮಸೀದಿಗೆ ಹೊರಡಲು ಅನುವಾಗುತ್ತಿದ್ದಾಗ, ಸಾಥೆಯವರ ಮಾವನವರು ಬಂದು ನಾನಾವಲ್ಲಿ ದ್ವಾರಕಾಮಾಯಿಯ ಬಳಿ ಮಚ್ಚನ್ನು ಹಿಡಿದುಕೊಂಡು ಅವರನ್ನು ಕೊಲ್ಲಲು ಹೊಂಚು ಹಾಕುತ್ತಿರುವರೆಂದು ಹೇಳಿದರು. ಅದರಿಂದ ಭೀತರಾದ ಸಾಥೆಯವರು 1916 ರಲ್ಲಿ ಸಾಯಿಬಾಬಾರವರ ಅನುಮತಿಯನ್ನು ಸಹ ಪಡೆಯದೇ ಶಿರಡಿಯನ್ನು ಬಿಟ್ಟು ಹೊರಟು ಹೋದರು ಮತ್ತು ಪುನಃ ಶಿರಡಿಗೆ ಸಾಯಿಬಾಬಾರವರು ಜೀವಿಸಿರುವವರೆಗೂ ಬರಲೇ ಇಲ್ಲ.

ಸಾಯಿಬಾಬಾರವರ ಕೀರ್ತಿ ಹರಡುತ್ತಿದಂತೆ ಶಿರಡಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು ಮತ್ತು ಸಾಯಿಯವರನ್ನು ಅತೀವ ಶ್ರದ್ದೆ ಹಾಗೂ ಭಕ್ತಿಗಳಿಂದ ಜನರು ಪೂಜಿಸಹತ್ತಿದರು. ಒಂದು ದಿನ ಮಸೀದಿಯ ತುಂಬಾ ಜನರೆಲ್ಲಾ ನರೆದಿರುವಾಗ ನಾನಾವಲ್ಲಿ ಸೀದಾ ಸಾಯಿಬಾಬಾರವರು ಕುಳಿತಿದ್ದ ಬಳಿಗೆ ಬಂದು "ಸಾಯಿಬಾಬಾ, ದಯಮಾಡಿ ನೀವು ಕುಳಿತಿರುವ ಆಸನ ಬಿಟ್ಟು ಏಳಿ. ನಾನು ಅಲ್ಲಿ ಕುಳಿತುಕೊಳ್ಳಬೇಕು" ಎಂದರು. ಸಾಯಿಬಾಬಾರವರು ಸ್ವಲ್ಪವೂ ತಡ ಮಾಡದೆ ಆಸನದಿಂದೆದ್ದು "ದಯಮಾಡಿ ಕುಳಿತುಕೋ" ಎಂದರು. ನಾನಾವಲ್ಲಿ ಅವರ ಆಸನದಲ್ಲಿ ಕುಳಿತುಕೊಂಡರು. ಇದರಿಂದ ಸಾಯಿ ಭಕ್ತರಿಗೆ ಬಹಳ ಕೋಪ ಬಂದಿತು. ಭಕ್ತರು ನಾನಾವಲ್ಲಿಯವರ ಭಂಡತನವನ್ನು ಕಂಡು ಅವರನ್ನು ಆಸನದಿಂದ ಎಳೆದು ಹಾಕಲು ಯೋಚಿಸಿದರು. ಆದರೆ ಸಾಯಿಬಾಬಾರವರ ಪ್ರಶಾಂತ ಹಾಗೂ ಮಂದಸ್ಮಿತ ಮುಖವನ್ನು ಕಂಡು ಸುಮ್ಮನಾದರು. ಸ್ವಲ್ಪ ಸಮಯ ಅಲ್ಲಿ ಕುಳಿತ ನಂತರ ಆಸನದಿಂದೆದ್ದು "ಶಹಭಾಶ್" ಎಂದು ಉದ್ಗರಿಸಿ ನಾನಾವಲ್ಲಿ ಸಾಯಿಯವರಿಗೆ ನಮಸ್ಕರಿಸಿ ಆನಂದದಿಂದ ಸ್ವಲ್ಪ ಸಮಯ ಕುಣಿದಾಡಿ ಹೊರಟು ಹೋದರು. ಕೆಲವರು ನಾನಾವಲ್ಲಿಯವರು ಸಾಯಿಯವರಿಗೆ ಅಹಂ ಇತ್ತೇ ಎಂದು ಪರೀಕ್ಷಿಸಲು ಹೀಗೆ ಮಾಡಿದರೆಂದು ಮತ್ತೆ ಕೆಲವರು ಸಾಯಿಬಾಬಾರವರ ಶುದ್ಧ ವ್ಯಕ್ತಿತ್ವ ಹಾಗೂ ಅವರು ಮೋಹರಹಿತರೆಂದು ಪ್ರಪಂಚಕ್ಕೆ ತಿಳಿಯಪಡಿಸಲು ನಾನಾವಲ್ಲಿ ಹೀಗೆ ಮಾಡಿದರೆಂದು ಹೇಳುತ್ತಾರೆ. ಇದರ ವಿವರವನ್ನು  ಸಾಯಿಭಕ್ತರು  ಸಾಯಿ ಸಚ್ಚರಿತೆಯ 10ನೇ ಅಧ್ಯಾಯದಲ್ಲಿ ನೋಡಬಹುದು.  ಸಾಯಿಯವರು ಈ ಘಟನೆಯ ಬಗ್ಗೆ ಏನು ಮಾತನಾಡುತ್ತಿರಲಿಲ್ಲ ಹಾಗೂ ಯಾರಿಗೂ ಅದನ್ನು ಕೇಳುವ ಧೈರ್ಯವೂ ಇರಲಿಲ್ಲ. ನಾನಾವಲ್ಲಿಗೆ ಸಾಯಿಯವರ ಭಾಂಧವ್ಯ ಎಷ್ಟಿತ್ತೆಂದರೆ "ಸಾಯಿಯವರ ನಂತರ ನಾನೇ ಅವರ ಉತ್ತರಾಧಿಕಾರಿ" ಎಂದು ಹೇಳುತ್ತಿದ್ದರು. ಅದು ನಿಜವೆಂದು ತಿಳಿದು ಬರುತ್ತದೆ. ಯಾಕೆಂದರೆ ಸಾಯಿಯವರ ಮರಣದ ವಾರ್ತೆ ತಿಳಿದ ನಾನಾವಲ್ಲಿ ದ್ವಾರಕಾಮಾಯಿಗೆ ಅಳುತ್ತ ಓಡಿ ಬಂದರು ಹಾಗೂ "ಮಾಮಾ, ನಿಮ್ಮನ್ನು ಬಿಟ್ಟು ನಾನು ಹೇಗೆ ಬದುಕಿರಲಿ? ನಾನು ನಿಮ್ಮೊಡನೆ ಬರುತ್ತೇನೆ" ಎಂದು ಹೇಳುತ್ತಾ ಹನುಮಾನ್ ಮಂದಿರಕ್ಕೆ ಹೋಗಿ ಅಲ್ಲಿ ಆಹಾರವನ್ನು ಕೂಡ ಸೇವಿಸದೆ ಅಳುತ್ತ ಕುಳಿತರು ಮತ್ತು ಸಾಯಿಯವರ ಮರಣದ ನಂತರ ಸರಿಯಾಗಿ ಹದಿಮೂರನೇ ದಿನ "ಕಾಕಾ ಕಾಕಾ" ಎಂದು ಹೇಳುತ್ತಾ  ತಮ್ಮ ದೇಹತ್ಯಾಗ ಮಾಡಿದರು.  ಇವರ  ಸಮಾಧಿಯು ಲೇಂಡಿ ಬಾಗ್ ನಲ್ಲಿ ಅಬ್ದುಲ್ ಬಾಬಾರವರ ಸಮಾಧಿಯ ಪಕ್ಕದಲ್ಲಿ  ಇರುತ್ತದೆ. ಸಾಯಿಬಾಬಾ ಸಂಸ್ಥಾನದವರು ನಾನವಲ್ಲಿಯ ಸಮಾಧಿಯನ್ನು ನೋಡಿಕೊಳ್ಳುತ್ತಿದ್ದಾರೆ.

 
4. ವಿ. ಪಿ. ಅಯ್ಯರ್ ರವರ ಸಮಾಧಿ




ವಿ.ಪಿ.ಅಯ್ಯರ್ ರವರ ಸಮಾಧಿಯು ಲೇಂಡಿ ಬಾಗ್ ನಲ್ಲಿ ನಾನಾವಲ್ಲಿಯ ಸಮಾಧಿಯ ಹಿಂಭಾಗದಲ್ಲಿದೆ. ಇವರು ತಮ್ಮ ಹೆಂಡತಿ ಮತ್ತು ಆರು ಜನ ಮಕ್ಕಳೊಡನೆ ಲಕ್ನೌ ನಲ್ಲಿ ವಾಸಿಸುತ್ತಿದ್ದರು. ಇವರು ಬಹಳ ಮೃದು ಸ್ವಭಾವದವರು ಮತ್ತು  ಇವರಿಗೆ ಸಾಯಿಬಾಬಾರವರನ್ನು ಕಂಡರೆ ಅತ್ಯಂತ ಪ್ರೀತಿ ಮತ್ತು ಭಕ್ತಿ. ಒಮ್ಮೆಶಿರಡಿಯ ಯಾರೋ ಗ್ರಾಮಸ್ಥರು ಬಾಬಾರವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಕಂಡು ಮನನೊಂದು ಬಹಳವಾಗಿ ಕಣ್ಣೀರು ಸುರಿಸಿದರು.

ವಿ. ಪಿ. ಅಯ್ಯರ್ ರವರು ಸಕ್ಕರೆ ತಂತ್ರಜ್ಞರಾಗಿದ್ದು ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡಿದರು. ಆಗಿನ ಕಾಲದಲ್ಲಿ  ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ನೀಡುತ್ತಿದ್ದರು. ಆದುದರಿಂದ ಇವರು ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ  ಕೆಲಸ ಮಾಡಿದರು. 1943 ರಲ್ಲಿ ಇವರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಸಿಗದೇ ಬಹಳ ಕಷ್ಟವನ್ನು ಅನುಭವಿಸಿದರು. ಆದರೆ ತಮಗೆ ಸಾಯಿಬಾಬಾರವರು ಯಾವುದೋ ರೀತಿಯಲ್ಲಿ ಸಹಾಯ ಮಾಡುತ್ತಾರೆ ಮತ್ತು ತಮ್ಮ ಒಳಿತು ಕೆಡಕುಗಳು ಸಾಯಿಬಾಬಾರವರಿಗೆ ಚೆನ್ನಾಗಿ ತಿಳಿದಿದೆ. ಆದುದರಿಂದ ಯಾವುದೇ ಭಯ ಪಡುವ ಕಾರಣ ಇಲ್ಲ ಎಂದು ತಮ್ಮ ಮನೆಯವರನ್ನು ಸಮಾಧಾನಪಡಿಸಿದರು.



1944 ರಲ್ಲಿ ಕೋಪರ್ಗಾವ್ ನ ಲಕ್ಷ್ಮೀವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದರು. ಆಗ ಇವರು ಅತೀವ ಸಂತೋಷದಿಂದ ತಮ್ಮ ಮನೆಯವರು ಮತ್ತು ಸ್ನೇಹಿತರ ಹತ್ತಿರ ಸಾಯಿಬಾಬಾರವರು ತಮ್ಮನ್ನು ಶಿರಡಿಯ ಹತ್ತಿರಕ್ಕೆ ಕರೆಸಿಕೊಂಡಿದ್ದಾರೆ ಎಂದು ಹೇಳಿದರು. ಇವರು ಸಾಯಿಬಾಬಾ ಅವರನ್ನು ಪ್ರತ್ಯಕ್ಷವಾಗಿ ನೋಡುವ ಭಾಗ್ಯ ಹೊಂದಿರಲಿಲ್ಲ. ಆದರೆ, ಇವರು ಸಾಯಿಬಾಬಾರವರ ಅನನ್ಯ ಭಕ್ತರಾಗಿ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಬಹಳ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಆಗಾಗ್ಗೆ ಶಿರಡಿಗೆ ಬಂದು ಹೋಗಿ ಮಾಡುತ್ತಿದ್ದರು. ಶಿರಡಿಯ ಜನರಿಗೆ ಇವರೆಂದರೆ ಬಹಳ ಪ್ರೀತಿ, ವಿಶ್ವಾಸ.

ಲಕ್ಷ್ಮೀವಾಡಿ ಸಕ್ಕರೆ ಕಾರ್ಖಾನೆಯಲ್ಲಿನ ಇವರ ಗುತ್ತಿಗೆ 7ನೇ ಮೇ 1944 ಕ್ಕೆ ಮುಗಿಯುತ್ತಿತ್ತು.  ಆದರೆ ಇವರು ತಮ್ಮ  ಉಳಿದ ಜೀವನವನ್ನು ಶಿರಡಿಯಲ್ಲೇ ಕಳೆಯಬೇಕೆಂದು ನಿರ್ಧರಿಸಿದ್ದರು.  27ನೇ ಮೇ ೧೯೪೪ ರಂದು  ಶಿರಡಿಗೆ  ಬರುತ್ತಿರುವ ಸಮಯದಲ್ಲಿ ಇವರ ಆರೋಗ್ಯ ಹದಗೆಟ್ಟಿತು.  ಸ್ವಲ್ಪ ಸಮಯದ ಬಳಿಕ ಇವರು ಪ್ರಜ್ಞೆ ತಪ್ಪಿದರು. ಆಗಾಗ್ಗೆ ತಮ್ಮ ಕಣ್ಣನ್ನು  ತೆರೆದು ತಮ್ಮ ಕೈನಲ್ಲಿ ಹಿಡಿದುಕೊಂಡಿದ್ದ ಸಾಯಿಬಾಬಾರವರ ಚಿತ್ರಪಟಕ್ಕೆ ವಂದಿಸಿ ಪುನಃ  ಕಣ್ಣು ಮುಚ್ಚುತ್ತಿದ್ದರು. ಹೀಗೆ ಬಾಬಾರವರ ಚಿತ್ರಪಟವನ್ನು ಹಿಡಿದುಕೊಂಡು ಅವರ ನಾಮ ಸ್ಮರಣೆ ಮಾಡುತ್ತಾ ತಮ್ಮ ಪ್ರಾಣವನ್ನು ಬಿಟ್ಟರು. ಇವರಿಗೆ ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿಯೇ ಸಮಾಧಿ ಹೊಂದಬೇಕೆಂದು ಆಸೆಯನ್ನು ಸಾಯುವುದಕ್ಕೆ ಮುಂಚೆ ವ್ಯಕ್ತಪಡಿಸಿದ್ದರು. ವಿ. ಪಿ. ಅಯ್ಯರ್ ಅವರ ಇಚ್ಚೆಯಂತೆ ಇವರ ಸಮಾಧಿಯನ್ನು ಸಂಸ್ಥಾನದ ಪ್ರಾಂಗಣದಲ್ಲಿ ಮಾಡಲಾಗಿದೆ.

5.ತಾತ್ಯಾ ಕೋತೆ ಪಾಟೀಲ ರವರ ಸಮಾಧಿ 




ತಾತ್ಯಾ ಕೋತೆ ಪಾಟೀಲರದು ಲೇಂಡಿ ಬಾಗ್ ನ ದಾರಿಯಲ್ಲಿರುವ ಕಡೆಯ ಸಮಾಧಿಯಾಗಿರುತ್ತದೆ. ತಾತ್ಯಾ ಕೋತೆ ಪಾಟೀಲರು ಬಾಯಿಜಾಬಾಯಿ ಮಾ  ಅವರ ಪುತ್ರ. ಇವರು 12ನೇ ಮಾರ್ಚ್ 1945  ರಂದು   ಸ್ವರ್ಗಸ್ಥರಾದರು. ಇವರು ಮತ್ತು ಸಾಯಿಬಾಬಾರವರದು ಒಂದು ವಿಶೇಷವಾದ ಸಂಬಂಧ. ಇವರ ಸಂಬಂಧ ಬಹಳ ವರ್ಷಗಳಷ್ಟು ಹಳೆಯದ್ದು. ಇವರಿಬ್ಬರದು ತೋರಿಕೆಗೆ ಬಹಳ ಹುಡುಗಾಟಿಕೆಯ ಸಂಬಂಧವಾದರೂ ಕೂಡ ಅದು ವಿಭಿನ್ನವಾಗಿತ್ತು. ಏಕೆಂದರೆ, ತಾತ್ಯಾರವರು ಬಾಲ್ಯದಲ್ಲೇ ಮನೆಯಲ್ಲಿ ಮಲಗುವುದನ್ನು ಬಿಟ್ಟು ಸಾಯಿಬಾಬಾರವರ ಜೊತೆ ದ್ವಾರಕಾಮಾಯಿ ಮಸೀದಿಯಲ್ಲಿ ಹೆಚ್ಚು ಕಡಿಮೆ 14 ವರ್ಷಗಳ ಕಾಲ ವಾಸ ಮಾಡುತ್ತಿದ್ದರು. ಸಾಯಿಬಾಬಾರವರು ತಾತ್ಯಾರವರ  ಋಣವನ್ನು ತೀರಿಸುವ ಸಲುವಾಗಿ 15ನೇ ಅಕ್ಟೋಬರ್ 1918 ರ ವಿಜಯದಶಮಿಯಂದು ತಮ್ಮ ದೇಹತ್ಯಾಗ ಮಾಡಿದರು ಎಂದು ಹೇಳಲಾಗುತ್ತದೆ. ಖಾಯಿಲೆಯಿಂದ ನರಳುತ್ತಿದ್ದ ತಾತ್ಯಾರವರು ಗುಣಮುಖರಾಗಿ ಮುಂದೆ ನೆಮ್ಮದಿಯ ಜೀವನವನ್ನು ನಡೆಸಿ 1945 ರಲ್ಲಿ ಸ್ವರ್ಗಸ್ಥರಾದರು. 

ತಾತ್ಯಾರವರಿಗೆ 3 ಜನ ಹೆಂಡತಿಯರಿದ್ದರು. ಮೊದಲನೇ ಹೆಂಡತಿಗೆ ಮಕ್ಕಳಿರಲಿಲ್ಲ. ಎರಡನೇ ಹೆಂಡತಿಗೆ ಒಬ್ಬ ಹೆಣ್ಣು ಮಗಳಿದ್ದಳು. 3ನೇ ಹೆಂಡತಿಗೆ ಒಬ್ಬ ಮಗಳು ಮತ್ತು 3 ಜನ ಗಂಡು ಮಕ್ಕಳಿದ್ದರು. ಬಾಬಾರವರು ಬಾಯಿಜಾಬಾಯಿ ಮಾ ರವರಿಗೆ ತಾತ್ಯಾ ಮತ್ತು ಅವರ ಕುಟುಂಬದವರ ಯೋಗಕ್ಷೇಮವನ್ನು ತಾನು ನೋಡಿಕೊಳ್ಳುವುದಾಗಿ ಮಾತು ಕೊಟ್ಟಿದ್ದರು ಮತ್ತು ಅದರಂತೆ ನಡೆದುಕೊಂಡರು. 

ದುರದೃಷ್ಟವಶಾತ್ ಇವರು ಹುಟ್ಟಿದ ದಿವಸ ಮತ್ತು ಇವರ ಇತರ ವಿವರಗಳು ನಮಗೆ ತಿಳಿದುಬಂದಿಲ್ಲ. ಆದರೆ, ಇವರ ವಂಶಸ್ಥರು ಶಿರಡಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment