Sunday, July 27, 2014

ಚನ್ನೈನಿಂದ ಶಿರಡಿಗೆ ಪಾದಯಾತ್ರೆಯಲ್ಲಿ ಬಂದ ಸಾಯಿಭಕ್ತರನ್ನು ಸ್ವಾಗತಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ - ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ.ವಿ.ಚಂದ್ರಮೌಳಿಯವರ ನೇತೃತ್ವದಲ್ಲಿ ಚನ್ನೈನಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಪಾದಯಾತ್ರೆಯಲ್ಲಿ ಬಂದು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದ ಹದಿಮೂರು ಜನ ಸಾಯಿಭಕ್ತರ ತಂಡವನ್ನು ಇದೇ ತಿಂಗಳ 26ನೇ ಜುಲೈ 2014, ಶನಿವಾರ ದಂದು ಶ್ರೀ ಸಾಯಿಬಾಬಾ ಸಂಸ್ಥಾನದ ಪರವಾಗಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸ್ವಾಗತಿಸಿದರು. ಈ ಪಾದಯಾತ್ರಿಗಳು ಕಳೆದ ನಾಲ್ಕು ವರ್ಷಗಳಿಂದ ಈ ರೀತಿ ಪಲ್ಲಕ್ಕಿಯನ್ನು ಹೊತ್ತುಕೊಂಡು ಪಾದಯಾತ್ರೆಯಲ್ಲಿ ಬಂದು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆಯುತ್ತಿದ್ದಾರೆ.


ಈ ವರ್ಷ ಶ್ರೀ.ವಿ.ಚಂದ್ರಮೌಳಿಯವರ ಜೊತೆಯಲ್ಲಿ ಶ್ರೀ.ಬಿ.ಎಂ.ಶ್ರೀಧರ ಗುಪ್ತಾ, ಶ್ರೀ.ಟಿ.ಡಿ.ಅಶೋಕ್ ಕುಮಾರ್, ಶ್ರೀ.ಎಸ್.ಕಾರ್ತಿಕೇಯನ್, ಶ್ರೀ.ಎಸ್.ಎ.ಆನಂದ್, ಶ್ರೀ.ಎ.ರಾಧಾಕೃಷ್ಣ ಮೂರ್ತಿ, ಶ್ರೀ.ಎ.ಸುಮಾನ್, ಶ್ರೀ. ಪಿ.ಎಸ್. ಪರಮೇಶ್ವರನ್, ಶ್ರೀ.ಎಂ.ಎಸ್.ಶಕ್ತಿದಯಾಳನ್, ಶ್ರೀ.ಎಸ್.ಮೋಹನ್ ರಾಜ್, ಶ್ರೀ.ಪಿ.ವಿ.ಕದಿರವನ್, ಶ್ರೀ.ಎಂ.ಲಿಂಗಮ್, ಶ್ರೀ.ಆರ್.ಉದಯಕುಮಾರ್, ಮತ್ತು ಶ್ರೀ.ಆರ್. ಉಮಾಮದನ್ ರವರುಗಳು ಪಲ್ಲಕ್ಕಿಯನ್ನು ಹೊತ್ತು ಪ್ರತಿನಿತ್ಯ ಸುಮಾರು 50 ಕಿಲೋಮೀಟರ್ ಗಳಂತೆ  31 ದಿನಗಳಲ್ಲಿ ಒಟ್ಟು 1650 ಕಿಲೋಮೀಟರ್ ಗಳನ್ನು ಕ್ರಮಿಸಿ ಶಿರಡಿ ತಲುಪಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯರುಗಳು ಕೇವಲ ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ತಾವುಗಳು ಈ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇವರುಗಳು ಮೊದಲು ಚನ್ನೈನ ಮೈಲಾಪುರ ಸಾಯಿಬಾಬಾ ಮಂದಿರದಲ್ಲಿ ಬಾಬಾರವರ ದರ್ಶನವನ್ನು ಮಾಡಿ ನಂತರ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಸುಮಾರು 50 ಕಿಲೋಮೀಟರ್ ಕ್ರಮಿಸಿ ಪಟ್ಟಿಪುಲಂನ ಸಾಯಿಮಂದಿರಕ್ಕೆ ಭೇಟಿ ನೀಡಿ ಸಾಯಿಬಾಬಾರವರ ದರ್ಶನವನ್ನು ಪಡೆದರು. ಅಲ್ಲಿನ ಸಾಯಿಬಾಬಾ ಮಂದಿರದ ಸಂಸ್ಥಾಪಕರಾದ ಶ್ರೀಯುತ.ಕೆ.ವಿ.ರಮಣಿಯವರು ಪಾದಯಾತ್ರಿಗಳಿಗೆ ತುಳಸಿ ಮಾಲೆಯನ್ನು ಹಾಕಿ ಸತ್ಕರಿಸಿ ಅವರೆಲ್ಲರಿಗೂ ಶುಭ ಹಾರೈಸಿ ಪಾದಯಾತ್ರೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು. ಅಷ್ಟೇ ಅಲ್ಲದೇ ಅವರೊಂದಿಗೆ ಅನವರತವಾಗಿ ಸಂಪರ್ಕದಲ್ಲಿದ್ದು ಅವರ ದಿನನಿತ್ಯದ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಪಡೆದು ಅವರಿಗೆ ಸೂಕ್ತ  ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಪಾದಯಾತ್ರಿಗಳು ಚನ್ನೈಯಿಂದ ಹೊರಟ ಪಾದಯಾತ್ರಿಗಳು ತಿರುಪತಿಯ ವೆಂಕಟೇಶ್ವರ ಹಾಗೂ ಪಂಢರಾಪುರದ ಪಾಂಡುರಂಗನ ದರ್ಶನವನ್ನು ಸಹ ಮಾಡಿದರು. 

ಚನ್ನೈನಿಂದ ಶಿರಡಿಗೆ ಪಾದಯಾತ್ರೆಯಲ್ಲಿ ನಡೆದುಬರುವಾಗ ತಮ್ಮ ತಂಡದ ಸದಸ್ಯರಿಗೆ ಆದ ಅನುಭವಗಳನ್ನು ಹಂಚಿಕೊಂಡ ಶ್ರೀ.ಚಂದ್ರಮೌಳಿಯವರು " ಶಿರಡಿಯ ಶ್ರೀ ಸಾಯಿಬಾಬಾರವರು ಕಲಿಯುಗದ ಮಹೋನ್ನತ ಸಂತರಾಗಿದ್ದಾರೆ. ಅವರು ಇಂದಿಗೂ ಜೀವಂತವಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದನ್ನು ಅರಿಯಬೇಕಾದರೆ ಜಾಗೃತ ಭಕ್ತಿ ಇರಬೇಕು. ಶ್ರೀ ಸಾಯಿಬಾಬಾರವರ ಅನುಗ್ರಹದಿಂದ ಮುಂದಿನ ವರ್ಷ ನಾವುಗಳು ರಥದೊಂದಿಗೆ ಶಿರಡಿಗೆ ಪಾದಯಾತ್ರೆಯಲ್ಲಿ ಬರಬೇಕೆಂದು ನಿರ್ಧರಿಸಿದ್ದೇವೆ" ಎಂದು ನುಡಿದರು. ಈ ಸಂದರ್ಭದಲ್ಲಿ ಪಾದಯಾತ್ರಿಗಳನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸನ್ಮಾನಿಸಿದರು. ನಂತರ ಮಾತನಾಡಿದ ಶ್ರೀ.ಶಿಂಧೆಯವರು ಪಾದಯಾತ್ರಿಗಳ  ಈ ಮಹೋನ್ನತ ಕಾರ್ಯವನ್ನು ಶ್ಲಾಘಿಸಿದಷ್ಟೇ ಅಲ್ಲದೇ ಮುಂದಿನ ವರ್ಷದ ಪಾದಯಾತ್ರೆಗೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ಮಾಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ  ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಎಲ್ಲಾ ಪಾದಯಾತ್ರಿಗಳಿಗೂ ಸಂಸ್ಥಾನದ ಪರವಾಗಿ ವಂದನಾರ್ಪಣೆಯನ್ನು ಸಲ್ಲಿಸಿದರು (ಮರಾಠಿಯಿಂದ ಆಂಗ್ಲ ಭಾಷೆಗೆ ಅನುವಾದ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment