Saturday, July 26, 2014

ಶ್ರೀ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುತ್ತಿರುವಾಗ ತೆಗೆದ ಅತ್ಯಂತ ಅಪರೂಪದ ಕಪ್ಪು ಬಿಳುಪಿನ ಭಾವಚಿತ್ರದ ವಿವರ - ಕೃಪೆ: ಸಾಯಿಅಮೃತಧಾರಾ.ಕಾಂ

ಬಾಬಾರವರು ಪ್ರತಿನಿತ್ಯ ಬೆಳಿಗ್ಗೆ 8.30 ರಿಂದ 9.30 ರ ನಡುವೆ ತಪ್ಪದೇ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು. ಅವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಅದೂ ಅವರಿಗೆ ಮನಸ್ಸು ಬಂದಾಗ ಮಾತ್ರ ಕಾಲಿಗೆ ಪಾದರಕ್ಷೆಗಳನ್ನು ಉಪಯೋಗಿಸುತ್ತಿದ್ದರು.  ಅವರು ಮೊದಲು ಮಸೀದಿಯಿಂದ ಹೊರಗೆ ಬಂದು ಹೊರಗಡೆಯಿದ್ದ ಗೋಡೆಗೆ ಒರಗಿಕೊಂಡು ಸ್ವಲ್ಪ ಹೊತ್ತು ನಿಂತುಕೊಳ್ಳುತ್ತಿದ್ದರು. ನಂತರ ಅಲ್ಲಿಂದ ಮಾರುತಿ ಮಂದಿರದ ಬಳಿಗೆ ತೆರಳಿ ಮಂದಿರದ ಒಳಗಿದ್ದ ಹನುಮಂತನನ್ನೇ ದಿಟ್ಟಿಸಿ ನೋಡುತ್ತಾ ಕೈಯಿಂದ ಏನೋ ಸನ್ನೆಗಳನ್ನು ಮಾಡುತ್ತಿದ್ದರು.  ನಂತರ ಗುರುಸ್ಥಾನಕ್ಕೆ ಅಡ್ಡಲಾಗಿದ್ದ ರಸ್ತೆಯ ಬಳಿ ನಿಂತು ಯಾರೊಡನೆಯೋ ಮಾತನಾಡುತ್ತಿರುವಂತೆ ಸ್ವಲ್ಪ ಹೊತ್ತು ನಿಂತಿದ್ದು ನಂತರ ಅಲ್ಲಿಂದ ಮುಂದೆ ಹೋಗುತ್ತಿದ್ದರು. ಗುರುಸ್ಥಾನದ ಹತ್ತಿರದ ಮನೆಗಳಲ್ಲಿ ವಾಸಿಸುತ್ತಿದ್ದ ಭಕ್ತರು ಹಾಗೂ ಆಗಷ್ಟೇ ಶಿರಡಿಗೆ ಬರುತ್ತಿದ್ದ ಭಕ್ತರು ದಾರಿಯಲ್ಲಿಯೇ ಬಾಬಾರವರ ದರ್ಶನ ಮಾಡಿಕೊಳ್ಳುತ್ತಿದ್ದರು. ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತು  ಬಾಬಾರವರು ಮಸೀದಿಯಿಂದ ಹೊರಬರುವುದನ್ನೇ ಕಾಯುತ್ತಿದ್ದರು. ಬಾಬಾರವರು ನಿಧಾನವಾಗಿ ದಾರಿಯಲ್ಲಿ ಸಾಗುತ್ತಾ ಪ್ರತಿಯೊಬ್ಬ ಭಕ್ತರ ಹೆಸರು ಹಿಡಿದು ಕರೆಯುತ್ತಾ ಪ್ರೀತಿಯಿಂದ ನಗುನಗುತಾ ಮಾತನಾಡಿಸಿ ನಂತರವಷ್ಟೇ ಮುಂದೆ ಸಾಗುತ್ತಿದ್ದರು.

ನಂತರ ಅವರು ಎಡಕ್ಕೆ ತಿರುಗಿ ಬಾಲಾಜಿ ಪಿಲಾಜಿ ಗುರವ್ ರವರ ಮನೆಯ ಬಳಿಗೆ ಹೋಗುತ್ತಿದ್ದರು. ಅಲ್ಲಿ ಅವರು ಬಾಲಾಜಿ ಪಿಲಾಜಿ ಗುರವ್ ರವರ ಮನೆಯ ಗೋಡೆಗೆ ಒರಗಿಕೊಂಡು ನಿಲ್ಲುತ್ತಿದ್ದರು. ಹಾಗೆ ಒಮ್ಮೆ ಅವರು ಬಾಲಾಜಿ ಪಿಲಾಜಿ ಗುರಾವ್ ರ ಮನೆಯ ಗೋಡೆಗೆ ಒರಗಿಕೊಂಡು ನಿಂತಿದ್ದಾಗ ಈ ಹಳೆಯ ಹಾಗೂ ಅತ್ಯಂತ ಅಪರೂಪದ ಭಾವಚಿತ್ರವನ್ನು ಸೆರೆಹಿಡಿಯಲಾಗಿರುತ್ತದೆ.    


ಮೇಲಿನ ಈ ಅಪರೂಪದ ಚಿತ್ರದಲ್ಲಿ  ನಾನಾ ಸಾಹೇಬ್ ನಿಮೋಣ್ಕರ್ ರವರು ಬಾಬಾರವರ ಬಲಭಾಗದಲ್ಲಿ , ಬಾಪು ಸಾಹೇಬ ಬೂಟಿಯವರು ಬಾಬಾರವರ ಎಡಭಾಗದಲ್ಲಿ, ಭಾಗೋಜಿ ಶಿಂಧೆಯವರು ಬಾಬಾರವರ ಹಿಂದೆ ನಿಂತುಕೊಂಡು ಅವರ ಮೇಲೆ ಛತ್ರಿಯನ್ನು ಹಿಡಿದಿದ್ದು ಹಾಗೂ ಚೋಪದಾರರು ಬಾಬಾರವರ ಮುಂದುಗಡೆ ನಿಂತುಕೊಂಡಿರುತ್ತಾರೆ. ಬೂಟಿಯವರು ಈ ಚಿತ್ರದಲ್ಲಿ ತಮ್ಮ ತಲೆಯನ್ನು ಕೆಳಗೆ ಮಾಡಿ ನೋಡುತ್ತಿರುವುದನ್ನು ನಾವುಗಳು ಗಮನಿಸಬಹುದಾಗಿದೆ. ಅದು ಏಕೆಂದರೆ, ಬೂಟಿಯವರು ತಮ್ಮ ಜೀವಮಾನದಲ್ಲಿ ಎಂದಿಗೂ ಬಾಬಾರವರ ಮುಖವನ್ನು ನೋಡಿಕೊಂಡು ಮಾತನಾಡುತ್ತಿರಲಿಲ್ಲ. ಬದಲಿಗೆ ಬಾಬಾರವರಿಗೆ ತಲೆಬಾಗಿ ವಂದಿಸಿ ಗೌರವ ಸೂಚಿಸುತ್ತಿದ್ದರು. ಭಾವಚಿತ್ರವನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಬಾಬಾರವರು ಒಂದು ಕಾಲಿನ ಮೇಲೆ ಭಾಗವಾನ್ ಶ್ರೀಕೃಷ್ಣನಂತೆ ನಿಂತುಕೊಂಡಿದ್ದಾರೆ. ಅಲ್ಲದೆ ಅವರು ಧರಿಸಿರುವ ಕಫ್ನಿಯಿಂದ ದಾರದ ಎಳೆಯೊಂದು ಹೊರ ಚಾಚಿದೆ. 

ಅಲ್ಲಿ ಸ್ವಲ್ಪ ಹೊತ್ತು ನೀಂತುಕೊಂಡಿದ್ದ ನಂತರ ಬಾಬಾರವರು ಅಲ್ಲಿಂದ ಹೊರಟು ವಿಠಲನ ಮಂದಿರದ ಹತ್ತಿರ ಹೋಗಿ  ಅಲ್ಲಿ ರಸ್ತೆಯನ್ನು ದಾಟಿ ಬಲಕ್ಕೆ ತಿರುಗಿ ಹಳೆಯ ಅಂಚೆ ಕಛೇರಿಯ ಬಳಿಯಿದ್ದ ಕನೀಫನಾಥ ಮಂದಿರಕ್ಕೆ ಹೋಗುತ್ತಿದ್ದರು.  ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಪುನಃ ಬಲಕ್ಕೆ ತಿರುಗಿ ಲೇಂಡಿ ಉದ್ಯಾನವನವನ್ನು ಪ್ರವೇಶಿಸುತ್ತಿದ್ದರು. ಲೇಂಡಿ ಉದ್ಯಾನವನದಲ್ಲಿ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಿದ್ದರು. ಬಾಬಾರವರು ಕೆಲವೊಂದು ದಿನ ಲೇಂಡಿ ಉದ್ಯಾನವನದಲ್ಲಿ ಸ್ನಾನವನ್ನು ಸಹ ಮಾಡುತ್ತಿದ್ದರು. 

ಬಾಬಾರವರು ಪುನಃ ಮಧ್ಯಾನ್ಹ 2.30 ಕ್ಕೆ ಲೇಂಡಿ ಉದ್ಯಾನವನಕ್ಕೆ ಹೋಗಿ ಬರುತ್ತಿದ್ದರು. ಲೇಂಡಿಯಿಂದ ಹಿಂತಿರುಗಿದ ನಂತರ ಮಸೀದಿಯಲ್ಲಿ ದರ್ಬಾರು ನಡೆಸುತ್ತಿದ್ದರು.  (ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿ). 

ಕನ್ನಡ ಅನುವಾದ:ಶ್ರೀಕಂಠ ಶರ್ಮ 

No comments:

Post a Comment