Wednesday, July 16, 2014

ಶ್ರೀ ಶಿರಡಿ ಸಾಯಿಬಾಬಾರವರು "ಶ್ರೀ ರಾಮ ವಿಜಯ" ಗ್ರಂಥ ಪಾರಾಯಣಕ್ಕೆ ಹೆಚ್ಚಿನ ಮಹತ್ವ ನೀಡಿದ ಉದ್ದೇಶ - ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರು ತಮ್ಮ ಭೌತಿಕ ದೇಹವನ್ನು 15ನೇ ಅಕ್ಟೋಬರ್ 1918 ರಂದು ತ್ಯಜಿಸಿದರು. ಆ ದಿನವು ದಕ್ಷಿಣಾಯನದ ಮೊದಲನೇ ದಿನ ಹಾಗೂ ಹುಣ್ಣಿಮೆಗೆ ಮುಂಚಿತವಾಗಿ ಬರುವ ಪವಿತ್ರ ವಿಜಯದಶಮಿಯ ದಿನವಾಗಿತ್ತು. ಅಲ್ಲದೆ ಮುಸ್ಲಿಮರ ಹಬ್ಬವಾದ ಮೊಹರಂ ಬರುವ ತಿಂಗಳ ಒಂಬತ್ತನೆಯ ದಿನ ಹಾಗೂ ಆ ರಾತ್ರಿಯು "ಪ್ರಾಣಿವಧೆ ಮಾಡುವ ರಾತ್ರಿ" ಯಾಗಿತ್ತು. ಆ ದಿನ ಮಧ್ಯಾನ್ಹ ಸುಮಾರು 2:35 ರ ವೇಳೆಯಲ್ಲಿ ಶ್ರೀ ಸಾಯಿಬಾಬಾರವರು ತಮ್ಮ ದೇಹತ್ಯಾಗ ಮಾಡಿದರು. ಆ ಸಮಯದಲ್ಲಿ ಆಗಷ್ಟೇ ದಶಮಿ ಮುಗಿದು ಏಕಾದಶಿಯ ಉದಯವಾಗಿತ್ತು. ಆದ ಕಾರಣ, ಶ್ರೀ ಸಾಯಿಬಾಬಾರವರು ಪವಿತ್ರ ಏಕಾದಶಿಯನ್ನೇ ತಮ್ಮ ನಿರ್ಯಾಣ ಯಾತ್ರೆಗೆ ಬಳಸಿಕೊಂಡಿದ್ದರು. ಆದರೆ ಆ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ದಶಮಿ ತಿಥಿ ಇದ್ದ ಕಾರಣ ಶ್ರೀ ಸಾಯಿಬಾಬಾರವರ ನಿರ್ಯಾಣದ ದಿನವನ್ನು ವಿಜಯದಶಮಿ ಎಂದು ಪರಿಗಣಿಸಿ ಅವರ ಮಹಾಸಮಾಧಿಯ ದಿನವನ್ನು ವಿಜಯದಶಮಿಯಂದೇ ಆಚರಿಸಿಕೊಂಡು ಬರಲಾಗುತ್ತಿದೆ. (ಆಧಾರ: ಶ್ರೀ ಸಾಯಿ ಸಚ್ಚರಿತ್ರೆ ಅಧ್ಯಾಯ 42).

ಶ್ರೀ ಸಾಯಿಬಾಬಾರವರು ತಮ್ಮ ಮಹಾಸಮಾಧಿಗೆ ಸರಿಯಾಗಿ 14 ದಿನಗಳಿಗೆ ಮುಂಚೆಯೇ ತಾವು ಮರಣ ಹೊಂದುವರೆಂದು ತಿಳಿದಿದ್ದರು. ಹಾಗಾಗಿ ಅವರು ವಜೆ ಎಂಬ ಭಕ್ತರಿಗೆ ತಮ್ಮ ಮುಂದೆ "ಶ್ರೀ ರಾಮ ವಿಜಯ"  ಗ್ರಂಥವನ್ನು ಓದಿ ಹೇಳಲು  ನೇಮಕ ಮಾಡಿದರು.  ಅಂತೆಯೇ ವಜೆಯವರು ದ್ವಾರಕಾಮಾಯಿ ಮಸೀದಿಯಲ್ಲಿ ಬಾಬಾರವರ ಎದುರುಗಡೆ ಕುಳಿತು ಶ್ರೀ ರಾಮ ವಿಜಯವನ್ನು ಮತ್ತೆ ಮತ್ತೆ ಓದಿ ಹೇಳಿದರು. ಶ್ರೀ ಸಾಯಿಬಾಬಾರವರು ಆ ಗ್ರಂಥ ಪಾರಾಯಣವನ್ನು ಅತ್ಯಂತ ಶ್ರದ್ಧೆಯಿಂದ ಆಲಿಸಿದರು. ಹೀಗೆಯೇ ಎಂಟು ದಿನಗಳು ಉರುಳಿದವು. ನಂತರ ಬಾಬಾರವರು ವಜೆಯವರಿಗೆ ಸ್ವಲ್ಪವೂ ನಿಲ್ಲಿಸದೇ ಸ್ಪಷ್ಟವಾಗಿ ಹಾಗೂ ಜೋರಾಗಿ  ಪಾರಾಯಣ ಮಾಡುವಂತೆ ಆಜ್ಞಾಪಿಸಿದರು.  ಆದ ಕಾರಣ ವಜೆಯವರು ಮುಂದಿನ 3 ದಿನಗಳು ಹಗಲು ರಾತ್ರಿ ಎಡಬಿಡದೆ ಪಾರಾಯಣ ಮಾಡಿದರು. ಈ ರೀತಿಯಲ್ಲಿ ವಜೆಯವರು ಒಟ್ಟು ಹನ್ನೊಂದು ದಿನಗಳ ಕಾಲ ಶ್ರೀ ರಾಮ ವಿಜಯವನ್ನು ಹಲವಾರು ಬಾರಿ ಪಾರಾಯಣ ಮಾಡಿದರು. ಅಷ್ಟು ಹೊತ್ತಿಗೆ ವಜೆಯವರು ಬಹಳವೇ ದಣಿದಿದ್ದರು. ಆಗ ಬಾಬಾರವರು ವಜೆಯವರಿಗೆ ಪಾರಾಯಣವನ್ನು ನಿಲ್ಲಿಸುವಂತೆ ಆಜ್ಞಾಪಿಸಿ ಅವರಿಗೆ  ಮನೆಗೆ ಹೋಗುವಂತೆ ತಿಳಿಸಿದರು. ನಂತರ ಸಾಯಿಬಾಬಾರವರು ಶಾಂತಿಯಿಂದ ಇದ್ದರು. ಸಾಧು ಸಂತರಿಗೆ ತಾವು ಮರಣ ಹೊಂದುವರೆಂದು ತಿಳಿದಾಗ ಸಾಮಾನ್ಯವಾಗಿ ಪವಿತ್ರ ಧಾರ್ಮಿಕ ಗ್ರಂಥಗಳನ್ನು ಬೇರೆಯವರಿಂದ ಓದಿಸಿ ಗಮನವಿಟ್ಟು ಕೇಳಿಸಿಕೊಳ್ಳುವುದು  ವಾಡಿಕೆಯಲ್ಲಿದೆ.  (ಆಧಾರ: ಶ್ರೀ ಸಾಯಿ ಸಚ್ಚರಿತೆ ಅಧ್ಯಾಯ 43).

ಅಂತೆಯೇ ಶ್ರೀ ಸಾಯಿಬಾಬಾರವರು ಕೂಡ ಶ್ರೀ ರಾಮ ವಿಜಯದ ಪಾರಾಯಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಆದರೆ  ಶ್ರೀ ಶಿರಡಿ  ಸಾಯಿಬಾಬಾರವರು "ಶ್ರೀ ರಾಮ ವಿಜಯ" ಗ್ರಂಥ ಪಾರಾಯಣಕ್ಕೆ ಏಕೆ ಹೆಚ್ಚಿನ ಮಹತ್ವ ನೀಡಿದರೆಂದು ಪರಿಶೀಲಿಸಿ ನೋಡಿದರೆ ಶ್ರೀ ರಾಮ ವಿಜಯವೆಂಬ  ಗ್ರಂಥದ ಒಳಗೆ ಅಡಕವಾಗಿರುವ ಮಹೋನ್ನತ ಆಧ್ಯಾತ್ಮಿಕ ತತ್ವದ ಅರಿವಾಗುತ್ತದೆ. ಈ ಪವಿತ್ರ ಗ್ರಂಥದ ಆಧ್ಯಾತ್ಮಿಕ  ಸಾರಾಂಶ ಈ ಕೆಳಕಂಡಂತೆ ಇದೆ: 

"ಶ್ರೀ ರಾಮ ವಿಜಯ" ಗ್ರಂಥವು ಭಾರತೀಯ ಸಾಹಿತ್ಯ ಲೋಕದಲ್ಲಿನ ಅತ್ಯಂತ ಅಪರೂಪವಾದ ಮೇರುಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹರ್ಷಿ ವಾಲ್ಮೀಕಿಯು ಸಂಸ್ಕೃತ ಭಾಷೆಯಲ್ಲಿ ಮೇರುಕೃತಿಯಾದ "ಶ್ರೀಮದ್ ರಾಮಾಯಣ" ವನ್ನು ರಚನೆ ಮಾಡಿದ ಮೇಲೆ ಹಲವಾರು ವಿದ್ವಾಂಸರು ಬೇರೆ ಬೇರೆ  ಭಾಷೆಗಳಲ್ಲಿ ರಾಮಾಯಣವನ್ನು ತಮ್ಮದೇ ಆದ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಮೂಲ ಶ್ರೀಮದ್ ರಾಮಾಯಣ ಗ್ರಂಥಕ್ಕೆ ಹೋಲಿಸಿ ನೋಡಿದಾಗ ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಇತರ ಆವೃತ್ತಿಗಳಲ್ಲಿ ಹಲವಾರು ವ್ಯತ್ಯಾಸ ಕಂಡುಬಂದರೂ ಸಹ ಎಲ್ಲಾ ಗ್ರಂಥಗಳ ಸಾರ ಒಂದೇ ಆಗಿರುತ್ತದೆ. ಅದೇನೆಂದರೆ, ಭಗವಾನ್ ಮಹಾವಿಷ್ಣುವು ಶ್ರೀರಾಮನ ಅವತಾರವನ್ನೆತ್ತಿ ರಾಕ್ಷಸ ರಾಜನಾದ ರಾವಣ ಹಾಗೂ ಅವನ ಸಹಚರರನ್ನು ವಧಿಸಿ ಶಾಂತಿ ಹಾಗೂ ಸದಾಚಾರದಿಂದ ಕೂಡಿರುವ "ರಾಮ ರಾಜ್ಯ" ದ ಸ್ಥಾಪನೆ ಮಾಡುವುದೇ ಆಗಿರುತ್ತದೆ. ಆದ ಕಾರಣ ನಾವುಗಳು ಶ್ರೀಮದ್ ರಾಮಾಯಣದ ಸತ್ಯಾಸತ್ಯತೆಯ ಗೋಜಿಗೆಗಾದೆ ಹೋಗದೆ  ಬದಲಿಗೆ ಭಗವಾನ್ ಶ್ರೀರಾಮನ ಜೀವನದ ಮೌಲ್ಯ ಹಾಗೂ ಸಾರವನ್ನು ಅರ್ಥ ಮಾಡಿಕೊಳ್ಳುವುದು ಬುದ್ಧಿವಂತಿಕೆ ಎನಿಸಿಕೊಳ್ಳುತ್ತದೆ. ಇನ್ನೂ ಹೇಳಬೇಕೆಂದರೆ, ನಮಗೆ ಲಭ್ಯವಿರುವ  ಶ್ರೀಮದ್ ರಾಮಾಯಣದ ಎಲ್ಲಾ  ಆವೃತ್ತಿಗಳನ್ನು ಅವಲೋಕನೆ ಮಾಡಿದಾಗ  ಮಹರ್ಷಿ ವಾಲ್ಮೀಕಿಯವರ ಮೂಲ ಶ್ರೀಮದ್ ರಾಮಾಯಣಕ್ಕಿಂತ ಸ್ವಲ್ಪ ಭಿನ್ನವಾಗಿ ಬೇರೆ ಬೇರೆ ಆವೃತ್ತಿಗಳಲ್ಲಿ ಬರೆದಿದ್ದರೂ ಸಹ ಆ ಗ್ರಂಥಗಳ ಲೇಖಕರು ರಾಮಾಯಣದ ಮುಖ್ಯ ಪಾತ್ರಧಾರಿಯಾದ ಭಗವಾನ್ ಶ್ರೀರಾಮನ ಗುಣಗಾನವನ್ನು ಮಾಡುವ ಮೂಲಕ ರಾಮಾಯಣದ ಪೂಜ್ಯತೆಯನ್ನು ಕಾಪಾಡಿದ್ದಾರೆ. ಆದುದರಿಂದ, ರಾಮಾಯಣದ ಎಲ್ಲಾ ಆವೃತ್ತಿಗಳ ಸಾರವು "ಬ್ರಹ್ಮಜ್ಞಾನ" ಅಥವಾ "ಬ್ರಹ್ಮ ವಿದ್ಯೆ" ಯನ್ನು ಹೊಂದುವ ಬಗ್ಗೆಯೇ ಆಗಿರುತ್ತದೆ ಹೊರತೂ ಬೇರೆಯಾಗಿರುವುದಿಲ್ಲ.  ಹಾಗಾಗಿ, ಶ್ರೀ ರಾಮ ವಿಜಯವು ಭಗವಾನ್ ಶ್ರೀ ರಾಮನ ಜೀವನವನ್ನು  ಕುರಿತು ರಚಿಸಲಾದ ಒಂದು ಮಹೋನ್ನತ ಗ್ರಂಥವಾಗಿರುತ್ತದೆ. 

ಶ್ರೀ ರಾಮ ವಿಜಯದ  ಕೆಲವು ಪ್ರಮುಖ ವಿಷಯಗಳು ಈ ಕೆಳಕಂಡಂತೆ ಇವೆ: 


  • ರಾವಣ, ಕುಂಭಕರ್ಣ ಮತ್ತು ವಿಭೀಷಣರ ಜನನ. ಅವರುಗಳು ಬ್ರಹ್ಮದೇವರಿಗೆ  ಪ್ರಾರ್ಥನೆ ಮಾಡಿದುದು ಹಾಗೂ ಬ್ರಹ್ಮದೇವರು ಅವರಿಗೆ ವರವನ್ನು ನೀಡಿದುದು 
  • ಭಗವಾನ್ ವಿಷ್ಣುವು ದೇವತೆಗಳಿಗೆ ಅಭಯವನ್ನಿತ್ತು ಮುಂದೆ ತಾನು ದಶರಥ ಮತ್ತು ಕೌಸಲ್ಯ ರ  ಮಗ ಶ್ರೀರಾಮನಾಗಿ ಅವತಾರವೆತ್ತುವುದಾಗಿ ಘೋಷಣೆ ಮಾಡಿದುದು
  • ಶ್ರವಣ ಕುಮಾರನ ಕಥೆ 
  • ದೇವಿ ಮಹಾಲಕ್ಷ್ಮಿ ರಾಜ ಪದ್ಮಾಕ್ಷ ನ ಮಗಳಾಗಿ ಅವತಾರ ತಳೆದದ್ದು
  • ಕಾಲಾನಂತರದಲ್ಲಿ ಮಹಾಲಕ್ಷ್ಮಿಯೇ ಜನಕ ರಾಜನ ಕುವರಿಯಾಗಿ ಅವತಾರ ತಳೆದದ್ದು
  • ಹನುಮಂತ ದೇವರ ಅವತಾರದ ಕಥೆ 
  • ಅಹಿರಾವಣ ಮತ್ತು ಮಹಿರಾವಣರ ಕಥೆ 
  • ಲವ-ಕುಶರ ಜನನ

ಗಂಥದ ಹೆಸರೇ ಹೇಳುವಂತೆ ಶ್ರೀ ರಾಮ ವಿಜಯದಲ್ಲಿ  "ಭಗವಾನ್ ಶ್ರೀ ರಾಮನ ವಿಜಯ" ವನ್ನು ಕುರಿತು ಉಲ್ಲೇಖಿಸಲಾಗಿದೆ. ಇನ್ನೂ ಹೇಳಬೇಕೆಂದರೆ ನಮ್ಮ ಅಂತರಂಗದ ಆರು ಶತ್ರುಗಳಾದ "ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ" ದ ಮೇಲೆ ನಮ್ಮ ಆತ್ಮವು ಸಾಧಿಸುವ ವಿಜಯವನ್ನು ಸೂಚಿಸುತ್ತದೆ.ಪ್ರಸ್ತುತ ಗ್ರಂಥದಲ್ಲಿ ರಾಕ್ಷಸರಾದ ರಾವಣ, ಕುಂಭಕರ್ಣ, ಶುಕ, ಸರಣ, ಇಂದ್ರಜಿತ್, ಪ್ರಹಸ್ತ, ಮಹಿರಾವಣ ಮತ್ತಿತರರ ಮೇಲೆ ಭಗವಾನ್  ಶ್ರೀರಾಮನು ಸಾಧಿಸಿದ ವಿಜಯವನ್ನು ಕುರಿತು ಹೇಳಲಾಗಿದೆ. ಒಮ್ಮೆ ನಾವು ನಮ್ಮ ಅಂತರಂಗದ ಆರು ಶತ್ರುಗಳನ್ನು ನಿಗ್ರಹಿಸಿದರೆ ಸಾಕು, ಜ್ಞಾನವೆಂಬ ಜ್ಯೋತಿಯು  ಪ್ರಕಾಶಮಾನವಾಗಿ ಬೆಳಗಲು ಪ್ರಾರಂಭಿಸಿ "ಮಾರ್ಗವೇ ಇಲ್ಲದ ಮಾರ್ಗ" ಅಂದರೆ ಈ ಜನನ ಮರಣಗಳೆಂಬ ಜೀವನಚಕ್ರದ ಬಂಧನವನ್ನು ತಪ್ಪಿಸಿ ಭವಸಾಗರವನ್ನು ದಾಟಿಸುತ್ತದೆ. ಯಾರು ಶ್ರೀ ರಾಮ ವಿಜಯ ಗ್ರಂಥವನ್ನು ಶ್ರದ್ಧಾ ಭಕ್ತಿಗಳಿಂದ ಪಾರಾಯಣ ಮಾಡುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗಿ ಮುಕ್ತಿಯನ್ನು ಹೊಂದುತ್ತಾರೆಂಬ ಪ್ರತೀತಿ ನಮ್ಮಲ್ಲಿ ಬೆಳೆದು ಬಂದಿದೆ. ( ಆಧಾರ:ಡಾ.ಪಿ.ವಿ.ಶಿವಚರಣ್)


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment