Monday, October 31, 2011

ಸಾಯಿ ಮಹಾಭಕ್ತ  - ಶ್ರೀ.ಸೋಮನಾಥ ಶಂಕರ ದೇಶಪಾಂಡೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ಸೋಮನಾಥ ಶಂಕರ ದೇಶಪಾಂಡೆಯವರು ಸಾಯಿ ಮಹಾಭಕ್ತರಾದ ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ಪುತ್ರರು.  ಇವರು ಬ್ರಾಹ್ಮಣ ಕುಲಕ್ಕೆ ಸೇರಿದವರಾಗಿದ್ದರು ಮತ್ತು ಪೋಲಿಸ್ ಇಲಾಖೆಯಲ್ಲಿ ತನಿಖಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಇವರು ಪುಣೆಯ ಶನಿವಾರಪೇಟೆಯಲ್ಲಿ ವಾಸವಾಗಿದ್ದರು. 

ನಿಮೋಣ್ ಶಿರಡಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಗ್ರಾಮವಾಗಿರುತ್ತದೆ. ಈ ಸ್ಥಳದಲ್ಲಿ ಇವರ ದೇಶಪಾಂಡೆ ಮನೆತನದವರು ಹಲವಾರು ವರ್ಷಗಳಿಂದ ವಾಸವಾಗಿದ್ದರು. ಶಿರಡಿಯಲ್ಲಿ ಇವರ ಅನೇಕ ಬಂಧುಗಳು ವಾಸವಾಗಿದ್ದರು. ಮಾಧವ ರಾವ್ ದೇಶಪಾಂಡೆ ಆಲಿಯಾಸ್ ಶ್ಯಾಮಾ ಅವರ ತಂದೆಯವರು ನಾನಾ ಸಾಹೇಬ್ ನಿಮೋಣ್ಕರ್ ರವರ ಚಿಕ್ಕಪ್ಪನವರಾಗಿದ್ದರು ಮತ್ತು ಅವರನ್ನು ಬಹಳವಾಗಿ ಇಷ್ಟ ಪಡುತ್ತಿದ್ದರು. ಒಮ್ಮೆ ಅವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ "ಜನರು ಶಿರಡಿಯ ಆ ಫಕೀರನನ್ನು ಹುಚ್ಚು ಫಕೀರನೆಂದು ಕರೆಯುತ್ತಾರೆ. ಆದರೆ ನನಗೆ ಆ ಫಕೀರ ಹುಚ್ಚನಂತೆ ಕಾಣುವುದಿಲ್ಲ. ನೀನು ನನ್ನ ಜೊತೆಯಲ್ಲಿ ಶಿರಡಿಗೆ ಬಂದು ಫಕೀರನನ್ನು ನೋಡಿ ನಿನ್ನ ಅಭಿಪ್ರಾಯವನ್ನು ತಿಳಿಸು" ಎಂದು ಹೇಳಿ ಅವರನ್ನು ಶಿರಡಿಗೆ ಕರೆದುಕೊಂಡು ಬಂದಿದ್ದರು. ಬಲವಂತ್ ನಾಚ್ನೆ ಮಸೀದಿಗೆ ಹೋಗಲು ಯತ್ನಿಸಿದಾಗಲೆಲ್ಲಾ ಸಾಯಿಬಾಬಾರವರು ಇಟ್ಟಿಗೆಯನ್ನು ತಮ್ಮ ಕೈಗೆತ್ತಿಕೊಂಡು ಹೊಡೆಯಲು ಬರುತ್ತಿದ್ದರು. ಆದ್ದರಿಂದ ಶಿರಡಿಯ ಅನೇಕ ಜನರು ಮಸೀದಿಗೆ ಹೋಗಲು ಹೆದರುತ್ತಿದ್ದರು. ಆದರೆ, ನಾನಾ ಸಾಹೇಬ್ ಬಾಬಾರವರನ್ನು ನೋಡಲು ಹೋದಾಗ ಬಾಬಾರವರು ಇಟ್ಟಿಗೆಯನ್ನು ಕೈಗೆತ್ತಿಕೊಂಡು ಹೊಡೆಯಲು ಹೋಗುತ್ತಿರಲಿಲ್ಲ. ಸಾಯಿಬಾಬಾರವರನ್ನು ನೋಡಿದ ಕೂಡಲೇ ನಾನಾ ಸಾಹೇಬ್ ರವರು ಸಾಯಿಯವರ ಕಡೆ ಆಕರ್ಷಿತರಾದರು. ಮನೆಗೆ ಹಿಂತಿರುಗಿದ ಕೂಡಲೇ ನಾನಾರವರು ತಮ್ಮ ಚಿಕ್ಕಪ್ಪನವರಿಗೆ ಸಾಯಿಯವರು ಹುಚ್ಚರಲ್ಲವೆಂದು, ಬದಲಿಗೆ ಅವರು ಒಬ್ಬ ಮಹಾನ್ ಸಂತರೆಂದು ನುಡಿದರು. ನಾನಾರವರ ನುಡಿಯನ್ನು ಕೇಳಿ ಅವರ ಚಿಕ್ಕಪ್ಪನವರಿಗೆ ಆಶ್ಚರ್ಯವಾಯಿತು. ಪ್ರತಿ ಬಾರಿ ಎಲ್ಲರ ಮೇಲೆ ಇಟ್ಟಿಗೆಯನ್ನು ಎಸೆಯುತ್ತಿದ್ದ ಬಾಬಾರವರು ಅದು ಹೇಗೆ ಅಂದು ತಮ್ಮ ಮೇಲೆ ಇಟ್ಟಿಗೆಯನ್ನು ಎಸೆಯಲಿಲ್ಲ ಎಂದು ಆಶ್ಚರ್ಯವಾಗುತ್ತಿದೆ ಎಂದು ಹೇಳಿದಾಗ ನಾನಾರವರು "ನೀವೆಲ್ಲರೂ ಬಾಬಾರವರನ್ನು ಹುಚ್ಚರೆಂದು ಸಂಶಯ ದೃಷ್ಟಿಯಿಂದ ನೋಡಿದಿರಿ. ಆದರೆ ನಾನು ಸಂಶಯ ಪಡಲಿಲ್ಲ" ಎಂದು ನುಡಿದರು. ಆ ದಿನದಿಂದ ನಾನಾರವರು ಪ್ರತಿ ವರ್ಷ ಶಿರಡಿಗೆ ಹೋಗಲು ಆರಂಭಿಸಿದರು. ನಂತರದ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಮತ್ತು ಸ್ವಲ್ಪ ವರ್ಷಗಳ ನಂತರ ವರ್ಷಕ್ಕೆ ಅನೇಕ ಬಾರಿ ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಭೇಟಿ ಮಾಡುತ್ತಿದ್ದರು. ದಿನೇ ದಿನೇ ಅವರಿಗೆ ಸಾಯಿಬಾಬಾರವರಲ್ಲಿ ಇದ್ದ ನಂಬಿಕೆ ಹೆಚ್ಚಾಗುತ್ತಾ ಹೋಯಿತು. 

ನಾನಾ ಸಾಹೇಬ್ ನಿಮೋಣ್ಕರ್  ರವರು ತಾವು ಸಾಯುವುದಕ್ಕೆ ಎರಡು ತಿಂಗಳುಗಳ ಮುಂಚೆ ಪುಣೆಯಲ್ಲಿದ್ದ ಸೋಮನಾಥ್ ರ ಮನೆಯಲ್ಲಿ ತಂಗಿದ್ದರು. ಆಗ ಎರಡು ಬಾರಿ ಬಾಬಾರವರು ಇವರನ್ನು ಸಾವಿನ ದವಡೆಯಿಂದ ಕಾಪಾಡಿದ್ದರು.  ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್  ಕುಟುಂಬದ ಎಲ್ಲರ ಯೋಗಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾನಾರವರು ಸೋಮನಾಥ್ ರವರನ್ನು ಅವರ ಬಾಲ್ಯದ ದಿನಗಳಿಂದಲೇ ಬಾಬಾರವರ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು. ಬಾಬಾರವರು ಸೋಮನಾಥ್ ರವರನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಮತ್ತು ಅವರನ್ನು "ಸೋಮ್ನಿಯಾ" ಎಂದು ಸಂಬೋಧಿಸುತ್ತಿದ್ದರು. 

1912ನೇ ಇಸವಿಯಲ್ಲಿ ಸೋಮನಾಥ್ ರವರು ಕೋಪರ್ ಗಾವ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಶಿರಡಿ ಗ್ರಾಮವು ಇವರ ಪರಿಧಿಗೆ ಬರುತ್ತಿತ್ತು. ಸೋಮನಾಥ್ ರವರಿಗೆ ಮೊದಲ ಸಂಬಳ ಬಂದ ದಿನದಿಂದ ನಾನಾ ಸಾಹೇಬ್ ನಿಮೋಣ್ಕರ್ ರವರ ಅಣತಿಯಂತೆ ಅವರು ಪ್ರತಿ ತಿಂಗಳೂ ಆವರು ಬಾಬಾರವರಿಗೆ ಎರಡು ರುಪಾಯಿಗಳನ್ನು ಮನಿ ಆರ್ಡರ್ ಮುಖಾಂತರ ಕಳುಹಿಸುತ್ತಿದ್ದರು. ಹೀಗೆ ಅವರು 1920ನೇ ಇಸವಿಯವರೆಗೂ ಶಿರಡಿಗೆ ತಪ್ಪದೆ ಹಣವನ್ನು ಕಳುಹಿಸುತ್ತಿದ್ದರು. ತಮ್ಮ ತಂದೆಯವರು ಕಾಲವಾದ ಸ್ವಲ್ಪ ತಿಂಗಳುಗಳ ತನಕವೂ ಅವರು ಈ ರೀತಿ ಹಣವನ್ನು ಶಿರಡಿಗೆ ಕಳುಹಿಸುತ್ತಿದ್ದರು. ಇವರು ಕೋಪರ್ ಗಾವ್ ನಲ್ಲಿದ್ದಾಗ ಒಮ್ಮೆ ತಮ್ಮ ತಂದೆಯವರ ಜೊತೆ ಶಿರಡಿಗೆ ಭೇಟಿ ನೀಡಿದ್ದರು. ಆಗ ಬಾಬಾರವರು ಸೋಮನಾಥ್ ರಿಂದ 10 ರುಪಾಯಿಗಳ ದಕ್ಷಿಣೆಯನ್ನು ಕೇಳಿ ಪಡೆದರು. ಆಗ ಅದಕ್ಕೆ ಯಾವುದೇ ಮಹತ್ವವಿದೆ ಎಂದು ಸೋಮನಾಥ್ ರವರಿಗೆ ಅರಿವಾಗಿರಲಿಲ್ಲ. ಆದರೆ ಈ ಘಟನೆಯಾಗಿ ಸರಿಯಾಗಿ ಆರು ತಿಂಗಳುಗಳ ನಂತರ ಸೋಮನಾಥ್ ರವರ ಸಂಬಳವು ಸರಿಯಾಗಿ ಹತ್ತು ರುಪಾಯಿಗಳಷ್ಟು ಹೆಚ್ಚಾಗಿತ್ತು. ಅಷ್ಟೇ ಅಲ್ಲ, ಇವರು ಸಾಯಿಬಾಬಾರವರನ್ನು ಭೇಟಿಯಾದ ದಿನಾಂಕದಿಂದ ಇವರ ಸಂಬಳವನ್ನು ಹತ್ತು ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಸೋಮನಾಥ್ ರವರಿಗೆ 1912 ರಲ್ಲಿ ಕೋಪರ್ ಗಾವ್ ನಿಂದ ಪುಣೆಗೆ ವರ್ಗವಾಯಿತು. 

ಇನ್ನೊಂದು ಘಟನೆ ಈ ರೀತಿಯಿದೆ: ಆಗ ಸೋಮನಾಥ್ ರವರು ಇನ್ನು ಕೆಲಸಕ್ಕೆ ಸೇರಿರಲಿಲ್ಲ. ಒಂದು ದಿನ ಬಾಬಾರವರು ದ್ವಾರಕಾಮಾಯಿ ಮಸೀದಿಯಲ್ಲಿ ಕುಳಿತು ತಮ್ಮ ಕೈಗಳಿಂದ ನಾಣ್ಯಗಳನ್ನು ಎತ್ತಿಕೊಂಡು ಅವನ್ನು ಚೆನ್ನಾಗಿ ತಿಕ್ಕುತ್ತಾ "ಇದು ಕಾಕನದು, ಇದು ಸೋಮ್ಯನದು"  ಎಂದು ಹೆಸರುಗಳನ್ನು ಉಚ್ಚರಿಸುತ್ತಿದ್ದುದನ್ನು ನಾನಾ ಸಾಹೇಬ್ ನಿಮೋಣ್ಕರ್ ರವರು ಸೋಮನಾಥನಿಗೆ ತೋರಿಸಿದರು ಮತ್ತು ಬಾಬಾರವರಿಗೆ ಸೋಮನಾಥ್ ನನ್ನು ಕಂಡರೆ ಎಷ್ಟು ಪ್ರೀತಿ ಇತ್ತೆಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಹೇಳಿದರು.

1916 ನೇ ಇಸವಿಯಲ್ಲಿ  ಸೋಮನಾಥ್ ರವರ ಪತ್ನಿಯು ಗರ್ಭಿಣಿಯಾಗಿದ್ದರು. ದಂಪತಿಗಳು ಹೆರಿಗೆ ಸುಲಭವಾಗಲೆಂದು  ಸೋಮನಾಥ್ ರವರ ತಂದೆ ತಾಯಿಗಳು ಬರುವುದನ್ನೇ ಎದುರು ನೋಡುತ್ತಿದ್ದರು. ತಮ್ಮ ಸೊಸೆಯನ್ನು ನೋಡಿಕೊಳ್ಳುವ ಸಲುವಾಗಿ ನಾನಾ ಸಾಹೇಬ್ ನಿಮೋಣ್ಕರ್ ಮತ್ತು ಅವರ ಪತ್ನಿ ಪುಣೆಗೆ ಹೊರಟರು.  ಆದರೆ ಶಿರಡಿ ಸಮೀಪಿಸುತ್ತಿದ್ದಂತೆ ಶಿರಡಿ ಸಾಯಿಬಾಬಾರವರು ಮರಣ ಶಯ್ಯೆಯಲ್ಲಿ ಇದ್ದಾರೆಂಬ ವಾರ್ತೆ ಕೇಳಿ ಶಿರಡಿಗೆ ಬಂದು ಬಾಬಾರವರ ದರ್ಶನ ಮಾಡಿದರು. ಸಾಯಿಬಾಬಾರವರು ನಿಮೋಣ್ಕರ್ ದಂಪತಿಗಳಿಗೆ ಪುಣೆಗೆ ಆಗಲಿ ಅಥವಾ ನಿಮೋಣ್ ಗೆ ವಾಪಸ್ ಆಗಲಿ ಹೋಗದಂತೆ ತಡೆದರು. ಇದರಿಂದ ನಿಮೋಣ್ಕರ್ ದಂಪತಿಗಳಿಗೆ ಏನು ಮಾಡಬೇಕೆಂದು ತಿಳಿಯದಾಗಿ ದಿಕ್ಕು ತೋಚಲಿಲ್ಲ. ಆಗ ಇವರ ಪರವಾಗಿ ಶ್ಯಾಮರವರು ಬಾಬಾರವರನ್ನು ಕೇಳಿದರು.  ಅವರಿಗೂ ಕೂಡ ಬಾಬಾರವರು ಚೆನ್ನಾಗಿ ಬಯ್ದರು. "ನೀವು ಹೋಗಲೇ ಬೇಕೆಂದು ಅಂದುಕೊಂಡಿದ್ದರೆ ನನ್ನನ್ನು ಹೂಳಿಬಿಟ್ಟು ನಂತರ ಹೊರಡಿ" ಎಂದರು. ಇತ್ತ ಪುಣೆಯಲ್ಲಿ ಸೋಮನಾಥ್ ಮನೆಯವರು ತಾವುಗಳೇ ನಿಮೋಣ್ ಗೆ ತೆರಳಬೇಕೆಂದು ಅಂದುಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ರಾತ್ರಿ ಸೋಮನಾಥ್ ರವರ ಪತ್ನಿಯವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ತಡಮಾಡದೆ ಸೋಮನಾಥ್ ಪತ್ನಿಯನ್ನು ಟಾಂಗಾ ಮಾಡಿಕೊಂಡು ರಾತ್ರಿ ಹತ್ತು ಗಂಟೆಯ ವೇಳೆಗೆ ಪುಣೆಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದರು ಮತ್ತು ಹಾಸಿಗೆಯ ಮೇಲೆ ಮಲಗಿಸಿದರು.  ಪಕ್ಕದ ಕೋಣೆಯಲ್ಲಿ ಸೋಮನಾಥ್ ಮತ್ತು ದಾದಿ ಮಾತನಾಡುತ್ತಾ ಇದ್ದರು. ಸುಮಾರು 11 ಗಂಟೆಯ ಸಮಯದಲ್ಲಿ ಆಗ ತಾನೇ ಹುಟ್ಟಿದ ಗಂಡು ಮಗುವಿನ ಅಳುವನ್ನು ಕೇಳಿದರು. ಯಾರ ಸಹಾಯವೂ ಇಲ್ಲದೆಯೇ ಸುಖವಾಗಿ ಹೆರಿಗೆಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಶಿರಡಿಯ ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ "ಒಬ್ಬಳು ಹೆಂಗಸು ಇದ್ದಳು. ಅವಳನ್ನು ಹೆರಿಗೆಗೆ ಎಲ್ಲಿಗೋ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದರು. ಆದರೆ,ಅವಳಿಗೆ ಅಲ್ಲಿಯೇ ಸುಖವಾದ ಹೆರಿಗೆಯಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ" ಎಂದು ನುಡಿದರು.

ಹೆರಿಗೆಯಾದ ಕೂಡಲೇ ಸೋಮನಾಥ್ ರವರು ತಮ್ಮ ಸಹೋದರನೊಡನೆ ಸಿಹಿ ಪೇಡಾವನ್ನು ಕೊಟ್ಟು ಶಿರಡಿಗೆ  ಹೋಗಿ ಸಾಯಿಬಾಬಾ ಮತ್ತು ತಮ್ಮ ತಂದೆ ತಾಯಿಗಳಿಗೆ ಸಿಹಿಯನ್ನು ನೀಡಿ ತಮ್ಮ ತಾಯಿಯವರನ್ನು ಬಾಣಂತನಕ್ಕೆ ಪುಣೆಗೆ ಕರೆದುಕೊಂಡು ಬರುವಂತೆ ಹೇಳಿ ಕಳುಹಿಸಿದರು. ಆದರೆ ಬಾಬಾರವರು ಆಗಲೂ ಕೂಡ ನಾನಾ ಸಾಹೇಬ್ ನಿಮೋಣ್ಕರ್ ರವರ ಪತ್ನಿಗೆ ಹೋಗಲು ಅನುಮತಿ ನೀಡಲಿಲ್ಲ. ಆಗ ನಿಮೋಣ್ಕರ್  ರವರು ತಮ್ಮ ಮಗನಿಗೆ ಸಾಯಿಬಾಬಾರವರು ಹೆರಿಗೆಯ ವಿಷಯವನ್ನು ಅದೇ ಸಮಯಕ್ಕೆ ಪ್ರಸ್ತಾಪಿಸಿದ ವಿಷಯವನ್ನು ತಿಳಿಸಿದರು. ಅದು 1916ನೇ ಇಸವಿಯ ಭಾದ್ರಪದ ಮಾಸವಾಗಿತ್ತು. 

ಮತ್ತೊಂದು ಘಟನೆ ಈ ರೀತಿಯಿದೆ: 1917ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಪುಣೆಯಲ್ಲಿ ಪ್ಲೇಗ್ ಮಹಾಮಾರಿ ಆವರಿಸಿಕೊಂಡಿತು. ಕ್ರಿಸ್ಮಸ್ ರಜೆಯ ಸಮಯದಲ್ಲಿ ಸೋಮನಾಥ್ ಅವರ 2 ವರ್ಷದ ಮಗ ಗೋಪಾಲ್ ನೊಡನೆ ತಮ್ಮ ಸಹೋದರನ ಪತ್ನಿಯು ಆಗ ತಾನೇ ಹಡೆದ ಮಗುವನ್ನು ನೋಡಿಕೊಂಡು ಬರಲು  ನಿಮೋಣ್ ಗೆ ಹೊರಟರು. ಮಾರ್ಗ ಮಧ್ಯದಲ್ಲಿ ಅವರು ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಪಡೆದರು. ಅವರು ಹೊರಡುವಾಗ ಸಾಯಿಬಾಬಾರವರು ಉಧಿಯನ್ನು ನೀಡಿ ಆಶೀರ್ವಾದ ಮಾಡುತ್ತಾ "ಮಗುವನ್ನು ಉಳಿಸು" ಎಂದು ಹೇಳಿದರು. ಸೋಮನಾಥ್ ರವರು ಬಾಬಾ ತಮ್ಮ ಮಗ ಗೋಪಾಲ್ ವಿಷಯವಾಗಿ ಈ ರೀತಿ ಹೇಳುತ್ತಿದ್ದಾರೆಂದು ಭಾವಿಸಿ ಅವನ ಹಣೆಗೆ ಉಧಿಯನ್ನು ಹಚ್ಚಿ ಟಾಂಗಾ ಮಾಡಿಕೊಂಡು ನಿಮೋಣ್ ಗೆ ಹೊರಟರು. ಅವರು ನಿಮೋಣ್ ತಲುಪಿದಾಗ ತಮ್ಮ ಸಹೋದರನ ಕೇವಲ 12 ದಿನಗಳ ಮಗು
ಹುಷಾರು ತಪ್ಪಿ ತೊಂದರೆಯಲ್ಲಿರುವುದನ್ನು ಕಂಡರು. ಮಗುವಿನ ಕೈ ಕಾಲುಗಳು ತಣ್ಣಗಾಗಿ ಮನೆಯವರೆಲ್ಲರೂ ಮಗುವು ತಮಗೆ ದಕ್ಕುವುದಿಲ್ಲವೆಂದು ತಿಳಿದುಕೊಂಡಿದ್ದರು. ಕೂಡಲೇ ಸೋಮನಾಥ್ ಗೆ ಸಾಯಿಬಾಬಾರವರು ಹೇಳಿದ ಮಾತುಗಳು ನೆನಪಾಯಿತು. ಮಗುವಿನ ಹಣೆಗೆ ಉಧಿಯನ್ನು ಹಚ್ಚಲು ತಮ್ಮ ಅಂಗಿಯ ಜೇಬನ್ನೆಲ್ಲಾ ತಡಕಾಡಿದರು. ಆದರೆ ಉಧಿಯ ಪೊಟ್ಟಣವು ಪ್ರಯಾಣದ ಮಧ್ಯದಲ್ಲಿ ಎಲ್ಲಿಯೋ ಕಳೆದುಹೋಗಿತ್ತು. ಆಗ ಸೋಮನಾಥ್ ರವರು ಆ ಮಗುವನ್ನು ತಮ್ಮ ತೊಡೆಯ ಮೇಲಿರಿಸಿಕೊಂಡು ಸುಮಾರು 15 ನಿಮಿಷಗಳ ಕಾಲ ಸಾಯಿಯವರ ಸಹಾಯವನ್ನು ಬೇಡಿ ಪ್ರಾರ್ಥನೆ ಮಾಡಿಕೊಂಡರು. ಸರಿಯಾಗಿ 15 ನಿಮಿಷಗಳ ನಂತರ ಮಗುವಿನ ಆರೋಗ್ಯದಲ್ಲಿ ಗುಣ ಕಂಡು ಬಂದು ಕ್ರಮೇಣ ಸಂಪೂರ್ಣವಾಗಿ ಗುಣವಾಯಿತು. ಆ ಮಗುವು ದೇವರ ವರ ಎಂದು ಭಾವಿಸಿ ಮನೆಯವರು "ದತ್ತ" ಎಂದು ನಾಮಕರಣ ಮಾಡಿದರು.

ಸೋಮನಾಥ್ ಗೆ ರಜೆ ಇಲ್ಲದ ಕಾರಣ ಮತ್ತು 8 ನೇ ಜನವರಿ 1917 ರಂದು ಕೆಲಸಕ್ಕೆ ಹಾಜರಾಲೇಬೇಕಾಗಿದ್ದ ಕಾರಣ ಶಿರಡಿಯಿಂದ ವಾಪಸ್ ಪುಣೆಗೆ ಹೊರಡಲು ಸಾಯಿಬಾಬಾರವರನ್ನು ಬೇಡಿದಾಗ ಸಾಯಿಬಾಬಾರವರು ಅನುಮತಿ ನೀಡಲಿಲ್ಲ. ಆದರೆ ಅಲ್ಲಿದ್ದ ನಾನಾ ಸಾಹೇಬ್ ನಿಮೋಣ್ಕರ್ ರವರು ಸಾಯಿಬಾಬಾರವರ ಕೈಗೆ ಬಲವಂತವಾಗಿ ಉಧಿಯನ್ನು ನೀಡಿ ಅದನ್ನು ಸೋಮನಾಥ್ ಗೆ ಕೊಟ್ಟು ಆಶೀರ್ವದಿಸಿ ಕಳಿಸಿಕೊಡಬೇಕೆಂದು ಒತ್ತಾಯ ಮಾಡಿದರು.   ಸೋಮನಾಥ್ ಮತ್ತು ಅವರ ಕುಟುಂಬದವರು 3 ನೇ ಜನವರಿ 1917 ರಂದು ಪುಣೆಗೆ ವಾಪಾಸ್ ಬಂದರು. ಅಲ್ಲಿ ಸೋಮನಾಥ್ ರವರ ಮನೆಯ ಮಾಲೀಕ ಪ್ಲೇಗ್ ನಿಂದ ಬಳಲುತ್ತಿದ್ದರು. 4ನೇ ಜನವರಿ 1917 ರಂದು ಸೋಮನಾಥ್ ರವರ ಪತ್ನಿಗೆ ಪ್ಲೇಗ್ ಜ್ವರ ಅಂಟಿಕೊಂಡಿತು. ಆಗ ಸಾಯಿಬಾಬಾರವರು ಇವರನ್ನು ಮತ್ತು ಇವರ ಮನೆಯ ಎಲ್ಲರನ್ನು ಕಾಪಾಡಿದರು. ಸಾಯಿಬಾಬಾರವರು ಮನೆಯನ್ನು ಬಿಟ್ಟು ಎಲ್ಲೂ ಹೋಗಬಾರದೆಂದು ಅಪ್ಪಣೆ ಮಾಡಿದ್ದರು. ಸೋಮನಾಥ್ ರವರ ಕುಟುಂಬದವರು ಸಾಯಿಬಾಬಾರವರ ಆಜ್ಞೆಯನ್ನು ತಪ್ಪದೆ ಪಾಲಿಸಿದರು. ಕಾಲಕ್ರಮೇಣ ಸೋಮನಾಥ್ ರವರ ಹೆಂಡತಿ ಗುಣಮುಖರಾದರು. ಆದರೆ ಅವರು ತಮ್ಮ ಕಣ್ಣುಗಳನ್ನು ಕಳೆದುಕೊಂಡರು. 

ಒಮ್ಮೆ ಸೋಮನಾಥ್ ರವರ ಹೆಂಡತಿ ಹುಷಾರು ತಪ್ಪಿದಾಗ ನಾನಾ ಸಾಹೇಬ್ ನಿಮೋಣ್ಕರ್  ರವರು ಪುಣೆಗೆ ಹೋಗಬೇಕೆಂದುಕೊಂಡಿದ್ದರು. ಆದರೆ ಸಾಯಿಬಾಬಾರವರು ಅವರಿಗೆ ಹೋಗಲು ಅಪ್ಪಣೆ ನೀಡಲಿಲ್ಲ. ಬದಲಿಗೆ ಅವರು "ನೀನು ಹೋಗಲೇಬೇಕೆಂದಿದ್ದರೆ ನನ್ನನ್ನು ಸಮಾಧಿ ಮಾಡಿ ನಂತರ ಹೋಗು" ಎಂದರು. 

1917ನೇ ಇಸವಿಯ ಮಾರ್ಚ್ ತಿಂಗಳಿನಲ್ಲಿ ಸೋಮನಾಥ್ ರವರು ತೀವ್ರ ಜ್ವರದಿಂದ ಹಾಸಿಗೆ ಹಿಡಿದರು. ಆಗಲೂ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್  ಗೆ ಪುಣೆಗೆ ಹೋಗಲು ಅನುಮತಿ ನೀಡಲಿಲ್ಲ. ಬದಲಿಗೆ "ನಾನಾ, ಏಕೆ ಹೆದರಿಕೊಳ್ಳುವೆ?. ಸೋಮನಾಥ್ ನಿಗೆ ಗುಣವಾಗಿ ಅವನೇ ಇಲ್ಲಿಗೆ ನಮ್ಮನ್ನು ಕಾಣಲು ಬರುತ್ತಾನೆ" ಎಂದರು.  ಸರಿ ಸುಮಾರು 21 ದಿನಗಳ ಕಾಲ ಸೋಮನಾಥ್ ರವರಿಗೆ ತೀವ್ರ ಜ್ವರ ಕಾಡಿತು. ಆಗ ಕೇವಲ ನೀರನ್ನು ಮಾತ್ರ ಸೋಮನಾಥ್ ಸೇವಿಸುತ್ತಿದ್ದರು. ನಂತರ ಅವರು ಸಂಪೂರ್ಣ ಗುಣಮುಖರಾದರು. ಸೋಮನಾಥ್ 3 ತಿಂಗಳು ರಜೆಯನ್ನು ಹಾಕಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಲುವಾಗಿ ತಮ್ಮ ಹೆಂಡತಿ ಮತ್ತು ಮಕ್ಕಳೊಡನೆ ಬೇಲಾಪುರದಲ್ಲಿರುವ ತಮಗೆ ಮಂತ್ರೋಪದೇಶ ಮಾಡಿದ ವಿದ್ಯಾನಂದ ಸ್ವಾಮೀಜಿಯವರ ಸಮಾಧಿಯಿರುವ ಸ್ಥಳಕ್ಕೆ ತೆರಳಿ ಅಲ್ಲಿ ಸ್ವಲ್ಪ ಕಾಲ ತಂಗಿದ್ದರು. ಅಲ್ಲಿಗೆ ಸೋಮನಾಥ್ ರವರ ತಾಯಿಯವರು ಬಂದು ಎಲ್ಲರನ್ನು ತಮ್ಮ ಜೊತೆ ಶಿರಡಿಗೆ ಕರೆದುಕೊಂಡು ಹೋದರು. ಬೇಲಾಪುರದಲ್ಲಿ ತಂಗಿದ್ದಾಗ ಸೋಮನಾಥ್ ರವರು ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಶಿರಡಿಗೆ ಬಂದ ಕೂಡಲೇ ಸಾಯಿಬಾಬಾರವರು ಇವರಿಗೆ ಪ್ರತಿನಿತ್ಯ ಕಿಚಡಿಯನ್ನು ತಿನ್ನುವಂತೆ ಹೇಳಿದರು. ಕೇವಲ ಒಂದು ತಿಂಗಳಿನಲ್ಲಿ ಸೋಮನಾಥ್ ರವರು ಸಂಪೂರ್ಣ ಗುಣಮುಖರಾಗಿ ಮೊದಲಿನಂತೆ ಆದರು.

ಸಾಯಿಬಾಬಾರವರು ಸಮಾಧಿ ಹೊಂದುವುದಕ್ಕೆ ಕೆಲವು ದಿನಗಳ ಮುಂಚೆ ಸೋಮನಾಥ್ ರವರು ಬಾಬಾರವರ ಜೊತೆಯಲ್ಲಿಯೇ ಇದ್ದರು.  ಆದರೆ ಕೆಲಸದ ಪರಭಾರೆಯನ್ನು ಹೊರಬೇಕಾದ್ದರಿಂದ ಸೋಮನಾಥ್ ರವರು ಪುಣೆಗೆ ಹೊರಟುಹೋದರು. ಈ ಘಟನೆಯಾದ ಕೆಲವು ದಿನಗಳಲ್ಲೇ ಸಾಯಿಬಾಬಾರವರು ಸಮಾಧಿ ಹೊಂದಿದರು. ನಾನಾ ಸಾಹೇಬ್  ನಿಮೋಣ್ಕರ್  ರವರು ಸಾಯಿಬಾಬಾ ಸಮಾಧಿ ಹೊಂದಿದ 3 ದಿನಗಳ ನಂತರ ನಿಮೋಣ್ ಗೆ ತೆರಳಿದರು. ಅಲ್ಲಿ ಸ್ವಲ್ಪ ದಿನಗಳಿದ್ದು ನಂತರ ಅಹಮದ್ ನಗರಕ್ಕೆ ಹೋದರು. ಅಲ್ಲಿಂದ ತಮ್ಮ ಮಗ ಸೋಮನಾಥ್ ನ ಆರೋಗ್ಯ ಸರಿ ಇಲ್ಲದಿದ್ದ ಕಾರಣ ಪುಣೆಗೆ ಬಂದು ನೆಲೆಸಿದರು. ನಂತರ ಆವರು ತಮ್ಮ ಅಂತ್ಯ ಕಾಲದವರೆಗೆ ಪುಣೆಯಲ್ಲಿಯೇ ವಾಸಿಸುತ್ತಿದ್ದರು. 

ನಾನಾ ಸಾಹೇಬ್ ನಿಮೋಣ್ಕರ್ ಅನನ್ಯ ಸಾಯಿ ಭಕ್ತರಾಗಿದ್ದರು ಮತ್ತು ತಮ್ಮ ಬಳಿಗೆ ಬರುತ್ತಿದ್ದ ಎಲ್ಲರನ್ನು ಸಾಯಿ ಸ್ವರೂಪರೆಂದೇ ಗುರುತಿಸುತ್ತಿದ್ದರು. ಇವರು ಶ್ರೀರಾಮಚಂದ್ರ ದೇವರ ಭಕ್ತರಾಗಿ ಸದಾ ಕಾಲ "ಶ್ರೀರಾಮ" ಎಂದು ಜಪಿಸುತ್ತಿದ್ದರು. ತಮ್ಮ ಅಂತ್ಯಕಾಲದಲ್ಲಿ ಕೂಡ "ಶ್ರೀರಾಮ" ಎಂದು ನುಡಿಯುತ್ತಾ ಮರಣ ಹೊಂದಿದರು.  

ಸೋಮನಾಥ್ ರವರಿಗೆ ಸಾಯಿಬಾಬಾರವರ ಸೇವೆಯನ್ನು ನಾಲ್ಕು ದಿನಗಳ ಕಾಲ ಮಾಡುವ ಯೋಗ ಒಮ್ಮೆ ದೊರೆಯಿತು. ಒಮ್ಮೆ  ನಾನಾ ಸಾಹೇಬ್ ನಿಮೋಣ್ಕರ್ ರವರು ಅಹಮದ್ ನಗರಕ್ಕೆ ಯಾವುದೋ ಕೋರ್ಟ್ ವ್ಯವಹಾರ ಇದ್ದಿದ್ದರಿಂದ ಹೋಗಲೇಬೇಕಾಯಿತು. ಆಗ ಅವರು ಸೋಮನಾಥ್ ರನ್ನು ಕರೆಯಿಸಿ ತಾವು ಏನೇನು ಸೇವೆಯನ್ನು ಸಾಯಿಬಾಬಾರವರಿಗೆ ಮಾಡುತ್ತಿದ್ದರೋ, ಅದೆಲ್ಲವನ್ನು ಚಾಚೂ ತಪ್ಪದೆ ಮಾಡಬೇಕೆಂದು ಆಜ್ಞೆ ಮಾಡಿ ಸೋಮನಾಥ್ ರನ್ನು ಸಾಯಿಬಾಬಾರವರ ಬಳಿ ಬಿಟ್ಟು ಅಹಮದ್ ನಗರಕ್ಕೆ ಹೊರಟುಹೋದರು.  ಸೋಮನಾಥ್ ರವರು ಚಿಕ್ಕ ಹುಡುಗನಾದ್ದರಿಂದ ಚೆನ್ನಾಗಿ ಓಡಾಡಿಕೊಂಡು ಸಾಯಿಬಾಬಾರವರು ಹೇಳಿದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಸೋಮನಾಥ್ ರವರಿಗೆ ಸಾಯಿಬಾಬಾರವರು ತಮ್ಮ ಆಶೀರ್ವಾದವನ್ನು ಮಾಡಿದರು. ಅದು ಹೇಗೆಂದರೆ, ಒಂದು ದಿನ ಮಸೀದಿಯಲ್ಲಿ ಸೋಮನಾಥ್ ರವರು ಏನೋ ಕೆಲಸದಲ್ಲಿ ನಿರತರಾಗಿದ್ದರು. ಸಾಯಿಬಾಬಾರವರು ತಮ್ಮ ಸ್ಥಳದಲ್ಲಿ ಕುಳಿತಿದ್ದರು. ಮಾಧವ ರಾವ್ ರವರು ಮಸೀದಿಯ ಮೆಟ್ಟಿಲುಗಳ ಹತ್ತಿರ ಕುಳಿತಿದ್ದರು. ಆಗ ಸೋಮನಾಥ್ ರವರಿಗೆ ಸಾಯಿಬಾಬಾರವರು ಮಾರುತಿಯಂತೆ ಗೋಚರಿಸಿದರು. ಸೋಮನಾಥ್ ಕೂಡಲೇ ಮಾಧವ ರಾವ್ ದೇಶಪಾಂಡೆ ಯವರ ಕಡೆ ತಿರುಗಿ "ಅವನ ದರ್ಶನವನ್ನು ತೆಗೆದುಕೊಳ್ಳಿ. ನೋಡಿ ಇವನೇ ಮಾರುತಿ" ಎಂದು ಕೂಗಿಕೊಂಡರು.  ಈ ರೀತಿಯಲ್ಲಿ ಸಾಯಿಬಾಬಾರವರು ಸೋಮನಾಥ್ ರವರಿಗೆ ಮಾರುತಿಯಂತೆ ದರ್ಶನ ನೀಡಿದರು.

1918 ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ ಸೋಮನಾಥ್ ರವರು ತೀವ್ರವಾದ ದೇಹದ ನೋವಿನಿಂದ ನರಳುತ್ತಿದ್ದರು. ಆಗ ನಿಮೋಣ್ಕರ್  ರವರು ಅಹಮದ್ ನಗರದಲ್ಲಿದ್ದರು. ಆಗ ನೋವನ್ನು ತಡೆಯಲಾರದೆ ತಮ್ಮ ತಂದೆಯವರಿಗೆ ಪತ್ರವನ್ನು    ಬರೆದು  ತಮ್ಮ ಬಳಿ ಬಂದು ಇರುವಂತೆ  ಕೇಳಿಕೊಂಡರು. ಅದರಂತೆ ನಿಮೋಣ್ಕರ್  ಅವರು ಪುಣೆಗೆ ಬಂದು ತಮ್ಮ ಮಗ ಸೋಮನಾಥ್ ರವರಿಗೆ ನೋವಿದ್ದ ಜಾಗದಲ್ಲಿ ಉಧಿಯನ್ನು ಹಚ್ಚಿದರು. ಮಾರನೇ ದಿನದಿಂದಲೇ ಸೋಮನಾಥ್ ರವರ ನೋವು ಮಂಗಮಾಯವಾಗಿತ್ತು. ಸೋಮನಾಥ್ ರವರ ಸಹೋದರ ಕೂಡ ತೀವ್ರವಾದ ಖಾಯಿಲೆಯಿಂದ ನರಳುತ್ತಿದ್ದರು. ಅವರಿಗೂ ನಿಮೋಣ್ಕರ್  ರವರು ಉಧಿಯನ್ನು ನೀಡಿದರು. ಅವರು ಕೂಡ ಸ್ವಲ್ಪ ದಿನಗಳಲ್ಲೇ ರೋಗಮುಕ್ತರಾದರು. ಸೋಮನಾಥ್ ರವರ ಸೋದರಳಿಯ ದತ್ತ ಅವರು ತೀವ್ರವಾದ ತಲೆಯ ಕೆರೆತದಿಂದ ಬಳಲುತ್ತಿದ್ದರು. ನಿಮೋಣ್ಕರ್  ರವರು ಅವರಿಗೂ ಕೂಡ ಉಧಿಯನ್ನು ನೀಡಲು ಅವರ ಖಾಯಿಲೆ ಕೂಡ ಗುಣವಾಯಿತು. 

ಸೋಮನಾಥ್ ರವರು ಸಾಯಿಬಾಬಾರವರ ಹೆಜ್ಜೆ ಗುರುತುಗಳನ್ನು ಒಮ್ಮೆ ಗಮನಿಸಿದ್ದರು. ಸಾಯಿಬಾಬಾರವರ ಒಂದು ಪಾದದಲ್ಲಿ "ಮೀನಿನ ಗುರುತು" ಮತ್ತು ಇನ್ನೊಂದು ಪಾದದಲ್ಲಿ "ಬಾಣದ ಗುರುತು" ಇದ್ದಿತು.    ಈ ಗುರುತುಗಳು ಕೇವಲ ಶ್ರೇಷ್ಠ ಸಂತರುಗಳಲ್ಲಿ ಮಾತ್ರ ಕಂಡು ಬರುತ್ತವೆ ಎಂದು ನಮಗೆಲ್ಲಾ ತಿಳಿದೇ ಇದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment