Saturday, October 15, 2011

ಸಾಯಿ ಭಜನ ಗಾಯಕ ಮತ್ತು ಸಮಾಜ ಸೇವಕ  - ಶ್ರೀ.ಸಾಯಿ ನಾರಾಯಣ ಸಿಂಗ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ  



ಮೈಸೂರಿನ ಖ್ಯಾತ ಸಾಯಿ ಭಜನ ಗಾಯಕ ಹಾಗೂ ಸಮಾಜ ಸೇವಕರಾದ ಶ್ರೀ.ಸಾಯಿ ನಾರಾಯಣ ಸಿಂಗ್ ರವರು ಇದೇ ತಿಂಗಳ 15ನೇ ಅಕ್ಟೋಬರ್ 2011, ಶನಿವಾರದಂದು ಮೈಸೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.  ಇವರಿಗೆ 41 ವರ್ಷ ವಯಸ್ಸಾಗಿತ್ತು.  ಇವರು ಮೈಸೂರಿನಲ್ಲಿ ಶ್ರೀ.ಸಾಯಿನಾಥ ಸೇವಾ ಸಂಸ್ಥೆ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ಶಿರಡಿ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಸಾಯಿ ಭಕ್ತರಿಗೆ ತಲುಪಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರು. ಇವರು ತಮ್ಮ ಪತ್ನಿ ಶ್ರೀಮತಿ.ಸಾಯಿ ಶ್ರೀ ಹಾಗೂ ಮಗನನ್ನು ಬಿಟ್ಟು ಅಗಲಿದ್ದಾರೆ.
 
ಇವರು ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಇವರು ತಮ್ಮ ಸತ್ಸಂಗದ ಮುಖಾಂತರ ಮೈಸೂರಿನ ಮತ್ತು ಬೆಂಗಳೂರಿನ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಭಜನ ಸತ್ಸಂಗ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಮೈಸೂರಿನಿಂದ ಶಿರಡಿಗೆ ಅನೇಕ ಪ್ಯಾಕೇಜ್ ಟೂರ್ ಗಳನ್ನು ನಡೆಸಿ ಹೊಸದಾಗಿ ಸಾಯಿಬಾಬಾ ಪಥಕ್ಕೆ ಬಂದ ಸಾಯಿ ಭಕ್ತರಿಗೆ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ತಲುಪಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರು. ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಬಲ್ ಗಳನ್ನು ವಿತರಿಸುತ್ತಿದ್ದರು. ಮೈಸೂರಿನ ಅನೇಕ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ತಾವೇ ಭರಿಸುತ್ತಿದ್ದರು. ಹಲವು ಬಡ ರೋಗಿಗಳು ಆಸ್ಪತ್ರೆ ಸೇರಿದಾಗ ಅವರ ಶಸ್ತ್ರಚಿಕಿತ್ಸೆಯ ಸ್ವಲ್ಪ ಭಾಗವನ್ನು ನೀಡಿರುತ್ತಾರೆ. ಅಷ್ಟೇ ಅಲ್ಲದೆ, ಇವರು ಸಾಯಿಬಾಬಾರವರ ಆರತಿ, ಭಜನೆ ಮತ್ತು ಇತರ ಸಾಯಿಬಾಬಾರವರ ಪುಸ್ತಕಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸುವುದರ ಮುಖಾಂತರ ಸಾಯಿಬಾಬಾರವರ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿದ್ದರು. 
 
ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವು ಶ್ರೀ.ಸಾಯಿ ನಾರಾಯಣ್ ಸಿಂಗ್ ರವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಹಾಗೂ ಶ್ರೀಮತಿ.ಸಾಯಿ ಶ್ರೀ ಯವರಿಗೆ ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಶಿರಡಿ ಸಾಯಿಬಾಬಾರವರಲ್ಲಿ ವಿನೀತ ಭಾವದಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment