Monday, October 10, 2011

ಪ್ರಖ್ಯಾತ ಸಾಯಿ ಭಜನ ಗಾಯಕ ಮತ್ತು ಗಜಲ್ ಸಾಮ್ರಾಟ್ ಜಗಜಿತ್ ಸಿಂಗ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ  


ಪ್ರಖ್ಯಾತ ಸಾಯಿ ಭಜನ ಗಾಯಕ ಹಾಗೂ ಗಜಲ್ ಗಾಯಕ ಶ್ರೀ.ಜಗಜಿತ್ ಸಿಂಗ್ ರವರು ಇದೇ ತಿಂಗಳ 10ನೇ ಅಕ್ಟೋಬರ್ 2011, ಸೋಮವಾರದಂದು ಬೆಳಗಿನ ಜಾವ 8:10 ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು.  ಇವರು "ಗಜಲ್ ಕಿಂಗ್" ಮತ್ತು "ಗಜಲ್ಜೀತ್ ಸಿಂಗ್" ಎಂಬ ಬಿರುದನ್ನು ತಮ್ಮ ಅಪಾರ ಅಭಿಮಾನಿಗಳಿಂದ ಪಡೆದಿದ್ದರು. 

ಇವರು ಬಹಳ ಕಾಲದಿಂದ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು  ಇವರನ್ನು ಕಳೆದ ತಿಂಗಳ 23ನೇ ಸೆಪ್ಟೆಂಬರ್ 2011 ರಂದು ಮೆದುಳಿನ ರಕ್ತಸ್ರಾವದ ತೊಂದರೆಯಿಂದ ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಇವರ ಪ್ರಾಣವನ್ನು ಉಳಿಸುವ ಸಲುವಾಗಿ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿದರು.  ಕೆಲವು ದಿನಗಳಿಂದ ಇವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗುತ್ತಿತ್ತು. ಆದರೆ, 15 ಗಳಿಗೂ ಹೆಚ್ಚು ದಿನಗಳ ಕಾಲದ ಹೋರಾಟದ ನಂತರ ಇಂದು ಅವರು ತಮ್ಮ ಕೊನೆಯುಸಿರನ್ನು ಎಳೆದರು. 

ಶ್ರೀ.ಜಗಜಿತ್ ಸಿಂಗ್ ರವರು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಜನಿಸಿದರು. ಇವರು ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಹೊಂದಿದ್ದರು. ಇವರ ಮನೆಯವರೆಲ್ಲಾ ಇವರನ್ನು ಪ್ರೀತಿಯಿಂದ "ಜೀತ್" ಎಂದು ಕರೆಯುತ್ತಿದ್ದರು. 

ಇವರು 2003 ನೇ ಇಸವಿಯಲ್ಲಿ  ಪ್ರತಿಷ್ಟಿತ "ಪದ್ಮಭೂಷಣ" ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಹಿಂದಿ, ಉರ್ದು, ಪಂಜಾಬಿ, ನೇಪಾಳಿ ಮತ್ತು ಇನ್ನು ಹಲವಾರು ಭಾಷೆಗಳಲ್ಲಿ ಹಾಡಿದ್ದರು. 

ಇವರು ತಮ್ಮ ಪತ್ನಿ ಮತ್ತು ಖ್ಯಾತ ಗಜಲ್ ಗಾಯಕಿ ಶ್ರೀಮತಿ.ಚಿತ್ರಾ ಸಿಂಗ್ ರವರನ್ನು ಬಿಟ್ಟು ಅಗಲಿದ್ದಾರೆ. ಇವರ ಪಾರ್ಥಿವ ದೇಹದ ಅಂತ್ಯ ಸಂಸ್ಕಾರವನ್ನು ನಾಳೆ ಮಧ್ಯಾನ್ಹ 12 ಘಂಟೆಗೆ ಮುಂಬೈ ನ ಮೆರೈನ್ ಲೇನ್ ನಲ್ಲಿರುವ ಚಂದನವಾಡಿ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತಿದೆ.

ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವು ಶ್ರೀ.ಜಗಜಿತ್ ಸಿಂಗ್ ರವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಹಾಗೂ ಶ್ರೀಮತಿ.ಚಿತ್ರಾ ಸಿಂಗ್ ರವರಿಗೆ ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಶಿರಡಿ ಸಾಯಿಬಾಬಾರವರಲ್ಲಿ ವಿನೀತ ಭಾವದಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment