Friday, October 21, 2011

ಸಾಯಿ ಮಹಾಭಕ್ತೆ - ಶ್ರೀಮತಿ.ಕಾಶೀಭಾಯಿ ಹಂಸರಾಜ್ - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ಕಾಶೀಭಾಯಿ ಹಂಸರಾಜ್ ರವರು ಸಾಯಿಭಕ್ತ ಶ್ರೀ.ಹಂಸರಾಜ್ ರವರ ಧರ್ಮಪತ್ನಿ. ಇವರು ಶಿರಡಿಗೆ ಸುಮಾರು  5  ಕಿಲೋಮೀಟರ್ ದೂರದಲ್ಲಿರುವ ಸಾಕೂರಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇವರು ವಣಿ ಪಂಗಡಕ್ಕೆ ಸೇರಿದವರಾಗಿದ್ದರು. 

ಇವರು ಮತ್ತು ಇವರ ಪತಿ ಶಿರಡಿಗೆ ಸುಮಾರು 20 ವರ್ಷಗಳ ಹಿಂದೆ ಅಂದರೆ ಸುಮಾರು 1916 ನೇ ಇಸವಿಯ ನಂತರ ಭೇಟಿ ನೀಡಿದ್ದರು.  ಆ ವೇಳೆಗಾಗಲೇ ರಾಧಾಕೃಷ್ಣ ಮಾಯಿಯವರು ತೀರಿಕೊಂಡಿದ್ದರು. ಇವರುಗಳು ಶಿರಡಿಯಲ್ಲಿ ಸುಮಾರು 6 ತಿಂಗಳ ಕಾಲ ತಂಗಿದ್ದರು. ಇವರ ಪತಿ ಆಸ್ತಮಾ ಖಾಯಿಲೆಯಿಂದ ನೆರಳುತ್ತಿದ್ದರು. ಆಗ ನಾಸಿಕ್ ನ ನರಸಿಂಗ್ ಬಾಬಾರವರು ಇವರ ಪತಿಗೆ ಯಾವುದೋ ದುಷ್ಟ ಶಕ್ತಿಗಳ ಕಾಟ ಇರುವುದರಿಂದ ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಮಾಡಿ ಸಾಯಿಬಾಬಾರವರಿಂದ ಎರಡು ಬಾರಿ ಕಪಾಳ ಮೋಕ್ಷ ಆದರೆ ಅವರ ಖಾಯಿಲೆ ಗುಣವಾಗುವುದಾಗಿ ತಿಳಿಸಿದರು. ನರಸಿಂಗ್ ಬಾಬಾರವರ ಆದೇಶದಂತೆ ದಂಪತಿಗಳು ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಮಾಡಿದರು. ಆಗ ಸಾಯಿಬಾಬಾರವರು ಇವರ ಪತಿಯ ಕಪಾಳಕ್ಕೆ ಎರಡು ಬಿಗಿದು " ದುಷ್ಟ ಶಕ್ತಿಗಳೇ ತೊಲಗಿ ಹೋಗಿ" ಎಂದು ನುಡಿದರು.

ಆ ದಿನದಿಂದ ದಂಪತಿಗಳಿಬ್ಬರೂ ಶಿರಡಿಯಲ್ಲಿ ಸ್ವಲ್ಪ ತಿಂಗಳುಗಳ ಕಾಲ ತಂಗಿದ್ದರು. ನರಸಿಂಗ್ ಬಾಬಾರವರು ನುಡಿದಂತೆ ಇವರ ಪತಿಯ ಆಸ್ತಮಾ ಖಾಯಿಲೆ ಕಡಿಮೆಯಾಗುತ್ತಾ ಬಂದಿತು. ಖಾಯಿಲೆಯು ಬೆಳಗಿನ ಹೊತ್ತು ಸ್ವಲ್ಪ ಕಾಡುತ್ತಿತ್ತು. ಆದರೆ ರಾತ್ರಿಯ ವೇಳೆ ಇವರ ಪತಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.  ಶಿರಡಿಗೆ ಬರುವ ಮೊದಲು ಹಗಲೂ ರಾತ್ರಿ ರೋಗವು ಕಾಡುತ್ತಿತ್ತು. ಶಿರಡಿಯಲ್ಲಿ ಇವರು ತಂಗಿರುವಾಗ ರಾತ್ರಿಯ ವೇಳೆ ಸಾಯಿಬಾಬಾರವರು ಅನೇಕ ಬಾರಿ ಜೋರಾಗಿ ಕೆಮ್ಮುತ್ತಿದ್ದುದು ಕೇಳಿಸುತ್ತಿತ್ತು . ಹೀಗೆ ಸುಮಾರು  6 ತಿಂಗಳುಗಳ ಕಾಲ ಶಿರಡಿಯಲ್ಲಿ ದಂಪತಿಗಳು ವಾಸವಾಗಿದ್ದರು. ಆರು ತಿಂಗಳುಗಳು ಕಳೆದ ನಂತರ ಇವರ ಪತಿಯು ಸಂಪೂರ್ಣವಾಗಿ ಆಸ್ತಮಾ ಖಾಯಿಲೆಯಿಂದ ಗುಣಮುಖರಾದರು.

ದಂಪತಿಗಳು ಶಿರಡಿಗೆ ಬಂದು ತಂಗಿದ ಸ್ವಲ್ಪ ದಿನಗಳಲ್ಲೇ ಸಾಯಿಬಾಬಾರವರು ಇವರ ಪತಿಗೆ ಮೊಸರು, ಹುಳಿಯಾದ  ಮತ್ತು ಕರಿದ ಪದಾರ್ಥಗಳೆಲ್ಲವನ್ನೂ  ಸಂಪೂರ್ಣವಾಗಿ ತಿನ್ನಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಆದರೆ ಇವರ ಪತಿಗೆ ಆ ಪದಾರ್ಥಗಳೇ ಹೆಚ್ಚು ಇಷ್ಟವಾಗುತ್ತಿದ್ದರಿಂದ ಅಷ್ಟು ಸುಲಭವಾಗಿ ಬಿಡಲು ಆಗುತ್ತಿರಲಿಲ್ಲ. ಅವರಿಗೆ ಮೊಸರು ಇಲ್ಲದಿದ್ದರೆ ಊಟವೇ ಸೇರುತ್ತಿರಲಿಲ್ಲ. "ನಾನು ಪ್ರಾಣವನ್ನಾದರೂ ಬೇಕಾದರೆ ಬಿಡುತ್ತೇನೆ. ಆದರೆ, ಮೊಸರು ಇಲ್ಲದೆ ನಾನು ಬದುಕಿರಲಾರೆ" ಎಂದು ನುಡಿಯುತ್ತಿದ್ದರು. ಶಿರಡಿಯಲ್ಲಿ ಆ ಕಾಲದಲ್ಲಿ ಮೊಸರು ಅಷ್ಟು ಸುಲಭವಾಗಿ ದೊರಕುತ್ತಿರಲಿಲ್ಲ. ಆದ್ದರಿಂದ ದಂಪತಿಗಳು ಹಾಲನ್ನು ಕಾಯಿಸಿದ ನಂತರ ಅದನ್ನು ರಾತ್ರಿ ಹೆಪ್ಪು ಹಾಕುವ ವೇಳೆಗೆ ತಣ್ಣಗಾಗಲೆಂದು ಹಾಗೆಯೇ ಬಿಟ್ಟು ಮಧ್ಯಾನ್ಹ ಆರತಿಗೆ ದ್ವಾರಕಾಮಾಯಿಗೆ ತೆರಳುತ್ತಿದ್ದರು. ಹೀಗಿರುವಾಗ ಪ್ರತಿದಿನ ಸುಮಾರು ಎರಡು ತಿಂಗಳುಗಳ ಕಾಲ ಇವರು ಹೊರಗೆ ಹೋದ ನಂತರ ಬೆಕ್ಕೊಂದು ಅಡಿಗೆ ಮನೆಗೆ ನುಗ್ಗಿ ಇಟ್ಟಿದ್ದ ಹಾಲು ಮತ್ತು ಮೊಸರನ್ನು ಕುಡಿದು ಓಡಿಹೋಗುತ್ತಿತ್ತು. ಆರತಿ ಮುಗಿದ ನಂತರ ಮನೆಗೆ ಬಂದು ನೋಡಿದರೆ ಊಟಕ್ಕೆ ಮೊಸರು ಇರುತ್ತಿರಲಿಲ್ಲ.  ಇದರಿಂದ ಕುಪಿತರಾದ ಇವರ ಪತಿಯು ಒಂದು ದಿನ ಆ ಕಳ್ಳ ಬೆಕ್ಕನ್ನು ಹಿಡಿಯಲೋಸುಗ ಮಧ್ಯಾನ್ಹ ಆರತಿಗೆ ದ್ವಾರಕಾಮಾಯಿಗೆ ಹೋಗದೆ ಮನೆಯಲ್ಲೇ ಕಾಯುತ್ತಾ ಕುಳಿತಿದ್ದರು. ಆ ಕಳ್ಳ ಬೆಕ್ಕು ಬಂದು ಮೊಸರನ್ನು ಕುಡಿಯಲೆಂದು ಪಾತ್ರೆಗೆ ಬಾಯಿ ಹಾಕಿದಾಗ ಇವರ ಪತಿಯು ಆ ಬೆಕ್ಕನ್ನು ಕೋಲಿನಿಂದ ಚೆನ್ನಾಗಿ ಥಳಿಸಿದರು. ಅದೇ ಸಮಯದಲ್ಲಿ ಮಸೀದಿಯಲ್ಲಿ ಸಾಯಿಬಾಬಾರವರು ಆರತಿಯ ನಂತರ ಎಲ್ಲಾ ಭಕ್ತರಿಗೆ ಉಧಿಯನ್ನು ನೀಡುತ್ತಿದ್ದರು. ಬಾಪು ಸಾಹೇಬ್ ಜೋಗ, ಮಾಧವ ರಾವ್ ದೇಶಪಾಂಡೆ, ಕಾಕಾ ಸಾಹೇಬ್ ದೀಕ್ಷಿತ್, ಬೂಟಿ ಮತ್ತಿತರ ಭಕ್ತರುಗಳು ಕೂಡ ಅಲ್ಲಿ ನೆರೆದಿದ್ದರು. ಆಗ ಬಾಬಾರವರು "ಇಲ್ಲಿ ಒಬ್ಬ ಉಪಾಂತೀಯನಿದ್ದಾನೆ (ಹೇಳಿದ ಮಾತನ್ನು ಕೇಳದವನನ್ನು ಉಪಾಂತೀಯನೆಂದು ಕರೆಯುತ್ತಾರೆ). ಅವನು ತಿನ್ನಬಾರದ ಪದಾರ್ಥಗಳನ್ನು ತಿಂದು ಸಾಯಲು ಹೊರಟಿದ್ದಾನೆ. ಆದರೆ, ನಾನು ಅವನಿಗೆ ಆ ಪದಾರ್ಥಗಳನ್ನು ತಿನ್ನಲು ಬಿಡುವುದಿಲ್ಲ. ಈ ದಿನ ಅವನ ಮನೆಗೆ ನಾನು ಬೆಕ್ಕಿನ ರೂಪದಲ್ಲಿ ಹೋಗಿದ್ದೆ. ಅವನು ನನ್ನ ಬೆನ್ನ ಮೇಲೆ ಚೆನ್ನಾಗಿ ಬಾಸುಂಡೆ ಬರುವಂತೆ ಹೊಡೆದು ಕಳುಹಿಸಿದ್ದಾನೆ. ಇಲ್ಲಿ ನೋಡಿ" ಎಂದು ತಮ್ಮ  ಕಫ್ನಿಯನ್ನು ತೆಗೆದು ತಮ್ಮ ಹಿಂಭಾಗವನ್ನು ಅಲ್ಲಿ ನೆರೆದಿದ್ದ ಎಲ್ಲರಿಗೂ ತೋರಿಸಿದರು. ಸಾಯಿಬಾಬಾರವರ ಹಿಂಭಾಗದಲ್ಲಿ ಗಾಯದ ಬರೆಯು ಚೆನ್ನಾಗಿ ಕಾಣುತ್ತಿತ್ತು. ಇದಲ್ಲವೇ ಸಾಯಿಬಾಬಾರವರ ಲೀಲೆ!

ವಿಷಯವನ್ನು ತಮ್ಮ ಪತ್ನಿಯಿಂದ ತಿಳಿದ ಮೇಲೆ ನೊಂದುಕೊಂಡ ಕಾಶೀಭಾಯಿಯವರ ಪತಿಯವರು ಆ ಕ್ಷಣದಿಂದಲೇ ಮೊಸರು ಹಾಗು ಇನ್ನಿತರ ಹುಳಿ ಮತ್ತು ಕರಿದ ಪದಾರ್ಧಗಳನ್ನು ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಆ ದಿನದಿಂದ ಇವರ ಖಾಯಿಲೆ ಕಡಿಮೆಯಾಗುತ್ತಾ ಬಂದಿತು. ಇವರ ಪತಿಗೆ ಮೊದಲು ಕಾಶೀಭಾಯಿಯವರು ಔಷಧಿಯನ್ನು ಕೊಡುತ್ತಿದ್ದರು. ಆದರೆ, ಒಂದು ದಿನ ಸಾಯಿಬಾಬಾರವರು ತಮಗೂ ಕೂಡ ಆಸ್ತಮಾ ಇರುವುದಾಗಿ ಔಷಧಿಗಳಿಂದ ಏನೂ ಪ್ರಯೋಜನ ಇಲ್ಲವೆಂದು ಹಾಗೂ ದೇವರೊಬ್ಬನೇ ಈ ಖಾಯಿಲೆಯನ್ನು ಗುಣಪಡಿಸಲು ಸಾಧ್ಯ ಎಂದು ಹೇಳಿದರು. ಆ ದಿನದಿಂದ ಕಾಶೀಭಾಯಿಯವರು ತಮ್ಮ ಪತಿಗೆ ಔಷಧಿ ಕೊಡುವುದನ್ನು ನಿಲ್ಲಿಸಿಬಿಟ್ಟರು. ಹೀಗೆ ಬಾಬಾರವರು ಯಾವುದೇ ಔಷಧಿಗಳ ಸಹಾಯವಿಲ್ಲದೆಯೇ ಕಾಶೀಭಾಯಿಯವರ ಪತಿಯ ಆಸ್ತಮಾ ಖಾಯಿಲೆಯನ್ನು ಗುಣಪಡಿಸಿದರು. ಹೇಗೆ ಒಂದು ವರ್ಷಗಳ ಕಾಲ ಯಾವುದೇ ಖಾಯಿಲೆಯಿಲ್ಲದೆ ಕಾಶೀಭಾಯಿಯವರ ಪತಿ ಆರಾಮವಾಗಿದ್ದರು. ಆದರೆ ಒಂದು ವರ್ಷದ ನಂತರ ಕಾಶೀಭಾಯಿಯ ಪತಿಯವರ ಆಸ್ತಮಾ ಮತ್ತೆ ಮರುಕಳಿಸಿತು. ಅದು ನಡೆದಿದ್ದು ಸುಮಾರು 1918-1919 ನೇ ಇಸವಿಯಲ್ಲಿ.  ಆಗ ಇವರ ಖಾಯಿಲೆಯನ್ನು ಉಪಾಸಿನಿ ಬಾಬಾರವರು ಗುಣಪಡಿಸಿದರು.

ಸಾಯಿಬಾಬಾರವರು ತಮ್ಮ ಕೊನೆಯ ದಿನಗಳವರೆಗೂ ಅನೇಕ ಉಪದೇಶಗಳನ್ನು ಭಕ್ತರಿಗೆ ನೀಡುತ್ತಲೇ ಇದ್ದರು. ಅವುಗಳಲ್ಲಿ ಕೆಲವು ಹಿತವಚನಗಳನ್ನು ಕಾಶೀಭಾಯಿಯವರು ನೆನಪಿನಲ್ಲಿಟ್ಟುಕೊಂಡಿದ್ದರು. ಒಮ್ಮೆ ಸಾಯಿಬಾಬಾರವರು "ನಾನು ಈಗ ತಾನೇ ಕಾಶಿಗೆ ತೆರಳಿ ಅಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಬಂದಿರುವೆ. ನಾನು ಇಲ್ಲಿ ಮತ್ತೆ ಏಕೆ ಸ್ನಾನ ಮಾಡಬೇಕು" ಎಂದು ನುದಿಯುತ್ತಿದ್ದರು ಎಂದೂ, ಮತ್ತೊಮ್ಮೆ  "ನಾನು ಈಗ ತಾನೇ ಕೊಲ್ಹಾಪುರ, ಔದುಂಬರವಾಡಿಗೆ ಹೋಗಿ ಅಲ್ಲಿಂದ ಮರಳಿ ಬಂದಿರುವೆ" ಎಂದು ನುಡಿಯುತ್ತಿದ್ದರು  ಎಂದು ಕಾಶೀಭಾಯಿಯವರು ಹೇಳುತ್ತಾರೆ. ಅಲ್ಲದೆ, ಬಾಪು ಸಾಹೇಬ್ ಜೋಗ ರರವರು ಒಮ್ಮೆ ಕಾಶೀಭಾಯಿಯವರಿಗೆ ಸಾಯಿಬಾಬಾರವರು ಅವರಿಗೆ ತಮ್ಮ ಇಚ್ಚೆಯಂತೆ ಅಕ್ಕಲಕೋಟೆ ಮಹಾರಾಜರಂತೆ ದರ್ಶನ ನೀಡಿದರು ಎಂದು ಹೇಳಿದ್ದನ್ನು ಕೂಡ ಸ್ಮರಿಸುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment