Sunday, October 30, 2011

ದ್ವಿತೀಯ ವಾರ್ಷಿಕೋತ್ಸವ ಆಚರಿಸಿಕೊಂಡ  ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ - ಕೃಪೆ : ಸಾಯಿಅಮೃತಧಾರಾ.ಕಾಂ 

ಸಾಯಿಅಮೃತವಾಣಿ ಬ್ಲಾಗ್ ನ ಮಾತೃ ಅಂತರ್ಜಾಲ ತಾಣವಾದ ಸಾಯಿಅಮೃತಧಾರಾ.ಕಾಂ 6ನೇ ಅಕ್ಟೋಬರ್ 2011 ರ ವಿಜಯದಶಮಿಯಂದು ತನ್ನ ದ್ವಿತೀಯ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಬೆಂಗಳೂರಿನ ಜಯನಗರ 9 ನೇ ಬಡಾವಣೆಯ ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿ ಆಚರಿಸಿಕೊಂಡಿತು. ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವನ್ನು 28ನೇ ಸೆಪ್ಟೆಂಬರ್ 2009 ರ ಪವಿತ್ರ ವಿಜಯದಶಮಿಯಂದು ಬೆಂಗಳೂರಿನ ರಾಜಾಜಿನಗರದ ಸಾಯಿಮಂದಿರದಲ್ಲಿ ಪ್ರಾರಂಭ ಮಾಡಲಾಗಿತ್ತು ಎಂಬುದನ್ನು ವೀಕ್ಷಕರು ಇಲ್ಲಿ ಸ್ಮರಿಸಬಹುದು.





ಸಾಯಿಬಾಬಾರವರಿಗೆ ಬೆಳಗಿನ ಕಾಕಡಾ ಆರತಿ ಮಾಡುವುದರೊಂದಿಗೆ ಆ ದಿನದ ಕಾರ್ಯಕ್ರಮಗಳು ಆರಂಭವಾದವು. ಅನಂತರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಶ್ರೀ ರುದ್ರ ನಮಕ, ಚಮಕ, ಪುರುಷ ಸೂಕ್ತ ಮಂತ್ರಗಳು ಹಾಗೂ ದುರ್ಗಾ ಸೂಕ್ತ  ಮಂತ್ರ ಪುರಸ್ಸರವಾಗಿ ಮಂಗಳಸ್ನಾನ ಮಾಡಿಸಲಾಯಿತು.  ರುದ್ರಾಭಿಷೇಕದ ನಂತರ ಲಘು ಆರತಿ ಕಾರ್ಯಕ್ರಮ ನೆರವೇರಿಸಲಾಯಿತು.

ಬೆಳಿಗ್ಗೆ 9:30 ಕ್ಕೆ ಮಹಾಸಂಕಲ್ಪದೊಂದಿಗೆ "ಶ್ರೀ ಸಾಯಿ ಸಹಸ್ರನಾಮ ಹೋಮ" ವನ್ನು ಪ್ರಾರಂಭಿಸಲಾಯಿತು.  ಇದರ ಜೊತೆಗೆ ಏಕಕಾಲದಲ್ಲಿ ಸಾಯಿಬಾಬಾರವರ ಚಿತ್ರಪಟಕ್ಕೆ ಸಾಯಿ ಸಹಸ್ರನಾಮಪೂರ್ವಕ ಭಸ್ಮಾರ್ಚನೆ ಮತ್ತು ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಸಹಸ್ರಬಿಲ್ವಾರ್ಚನೆಯನ್ನು ಕೂಡ ಮಾಡಲಾಯಿತು. ಭಸ್ಮಾರ್ಚನೆಯ ಬಳಿಕ ಅನಂತಕೋಟಿ ಬ್ರಹ್ಮಾಂಡನಾಯಕರಾದ ಸಾಯಿಬಾಬಾರವರ ಬಗ್ಗೆ ಡಾ.ಪಿ.ವಿ.ಶಿವಚರಣ್ ರವರು ಮಾತನಾಡಿ ವೇದಗಳು ಮತ್ತು ಉಪನಿಷತ್ತಿನ ಭಾಗಗಳನ್ನು ಉಲ್ಲೇಖಿಸಿ ಅವುಗಳಲ್ಲಿ ಅಡಕವಾಗಿರುವ ಸಾಯಿತತ್ವವನ್ನು ಬಹಳ ಸುಂದರವಾಗಿ ವರ್ಣಿಸಿದರು. ನಂತರ ಮಧ್ಯಾನ್ಹ 12..20 ಕ್ಕೆ  ಹೋಮದ ಪೂರ್ಣಾಹುತಿಯಾದ ನಂತರ ಸಾಯಿಬಾಬಾರವರ ಆರತಿ ಹಾಗೂ ಮಹಾಪ್ರಸಾದ ವಿನಿಯೋಗದೊಂದಿಗೆ ಬೆಳಗಿನ ಕಾರ್ಯಕ್ರಮಗಳು  ಸುಸಂಪನ್ನವಾಯಿತು.





 



ಸಂಜೆಯ ಕಾರ್ಯಕ್ರಮಗಳು 6 ಘಂಟೆಗೆ  ಧೂಪಾರತಿಯೊಂದಿಗೆ ಪ್ರಾರಂಭವಾಯಿತು. ನಂತರ ಎಲ್ಲಾ ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣವನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಮಾಡಿದರು. ಆನಂತರ ಶ್ರೀ.ಗಂಗಾಧರ ತಿಲಕ್, ಶ್ರೀ. ಕಾರ್ತಿಕ್  ಹಾಗೂ ಶ್ರೀ.ಶಿವಚರಣ್ ಮತ್ತು ವೃಂದದವರು ಸುಮಾರು ಒಂದೂವರೆ ಘಂಟೆಗಳ ಕಾಲ "ಸಾಯಿ ಭಜನ ಸಂಧ್ಯಾ" ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆರೆದ ಎಲ್ಲಾ ಸಾಯಿಭಕ್ತರು ಸಾಯಿ ಭಜನೆಗಳನ್ನು ಏಕಕಂಠದಿಂದ ಹಾಡಿ ಆನಂದಿಸಿದರು. 

ಬೆಳಿಗ್ಗೆ "ವೇದ" ದಿಂದ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ "ನಾದ" ದೊಂದಿಗೆ ಪೂರ್ಣವಾಯಿತು. ಅಷ್ಟೇ ಅಲ್ಲಾ, ಈ ವೇದ ನಾದಗಳೊಂದಿಗೆ "ಭಕ್ತಿ" ಕೂಡ ಮೇಳೈಸಿ  ಇಡೀ ದಿನದ ಕಾರ್ಯಕ್ರಮಗಳಿಗೆ ಇನ್ನಷ್ಟು ಮೆರುಗು ತಂದಿತು ಎಂದರೆ ತಪ್ಪಾಗಲಾರದು. 


ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment