Sunday, October 2, 2011

ಸಾಯಿ ಮಹಾಭಕ್ತ - ಮಾಧವ ಫಾಸ್ಲೆ - ಕೃಪೆ: ಸಾಯಿಅಮೃತಧಾರಾ.ಕಾಂ 


ಮಾಧವ ಫಾಸ್ಲೆ ಸಾಯಿಬಾಬಾರವರ ಬಳಿ ಬಹಳ ಹಿಂದಿನಿಂದ ಸೇವಕರಾಗಿ ಕೆಲಸ ಮಾಡಿಕೊಂಡಿದ್ದರು. ಇವರ ನಿಜವಾದ ಹೆಸರು "ಮಾಧವ". ಆದರೆ ಶಿರಡಿಯ ಜನರೆಲ್ಲಾ ಇವರನ್ನು "ಮಧು" ಎಂದೇ ಸಂಬೋಧಿಸುತ್ತಿದ್ದರು. ಇವರು ಬಹಳ ಚಿಕ್ಕ ವಯಸ್ಸಿನಿಂದಲೇ ಸಾಯಿಬಾಬಾರವರ ಕಡೆಗೆ ಆಕರ್ಷಿತರಾದರು. ವಯಸ್ಸಿಗೆ ಬಂದ ಮೇಲೆ ಇವರು ಸಾಯಿಬಾಬಾರವರ ಜೊತೆಯಲ್ಲೇ ಮಸೀದಿಯಲ್ಲಿ ತಂಗಿದ್ದು ಅವರ ಸೇವೆಯನ್ನು ಮಾಡುತ್ತಿದ್ದರು. ಬೆಳಗಿನ ಜಾವದಿಂದ ಮಧ್ಯರಾತ್ರಿಯವರೆಗೂ ಇವರು ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. 

ಇವರು ಅನೇಕ ಕೆಲಸಗಳನ್ನು ಮಾಡುತ್ತಿದ್ದರು. ಮಸೀದಿಯನ್ನು ಗುಡಿಸುವುದು ಮತ್ತು ಒರೆಸುವುದು, ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ  ಚಾಪೆಯನ್ನು ಶುಭ್ರಗೊಳಿಸುವುದು, ದ್ವಾರಕಾಮಾಯಿಯ ಮೆಟ್ಟಿಲಿನ ಬಳಿ ಇರಿಸಿದ್ದ ಪ್ಲಾಸ್ಟಿಕ್ ನೀರಿನ ತೊಟ್ಟಿಯಲ್ಲಿ ನೀರನ್ನು ತುಂಬಿಸುವುದು, ಸಾಯಿಬಾಬಾರವರ ಸ್ನಾನಕ್ಕೆ ಬೇಕಾದ ಬಿಸಿ ನೀರನ್ನು ಸಿದ್ಧ ಮಾಡುವುದು, ಸಾಯಿಬಾಬಾರವರ ಸ್ನಾನವಾಗುವವರೆಗೂ ಕಾದಿದ್ದು ನಂತರ ಅವರ ಮೈಯನ್ನು ಒರೆಸುವುದು, ಮಸೀದಿ ಮತ್ತು ಚಾವಡಿಯಲ್ಲಿ ಇರಿಸಿದ್ದ ದೀಪದ ಹಣತೆಗಳನ್ನು ಒರೆಸಿ ಶುಚಿಗೊಳಿಸುವುದು, ಅಬ್ದುಲ್ ಬಾಬಾರವರಿಗೆ ದೀಪಗಳನ್ನು ಹಚ್ಚುವುದರಲ್ಲಿ ನೆರವಾಗುವುದು, ಬಾಬಾರವರ ಪ್ರೀತಿಯ ಕುದುರೆ ಶ್ಯಾಮಕರ್ಣನನ್ನು ನೋಡಿಕೊಳ್ಳುವುದು ಮತ್ತು ಇನ್ನು ಅನೇಕ ಕೆಲಸಗಳನ್ನು ಮಾಡುತ್ತಿದ್ದರು. 

ಧುನಿಯ ಪಕ್ಕದಲ್ಲಿ ಒಂದು ಕೋಣೆಯಿತ್ತು. ಅದನ್ನು ಧುನಿಗೆ ಬೇಕಾದ ಕಟ್ಟಿಗೆಯನ್ನು ಇರಿಸಲು ಬಳಸಲಾಗುತ್ತಿತ್ತು. ಆ ಕೋಣೆಯ ಗೋಡೆಯನ್ನು ಸಾಯಿಬಾಬಾರವರೇ ಸ್ವತಃ ತಮ್ಮ  ಕೈಗಳಿಂದ ಕಟ್ಟಿದರು. ಆಗ ಮಾಧವ ಫಾಸ್ಲೆಯವರು ಸಾಯಿಬಾಬಾರವರಿಗೆ ಮಣ್ಣನ್ನು ಕಲಸಿ ಕೊಟ್ಟು ಸಹಾಯ ಮಾಡಿದರು. ಸಾಯಿಬಾಬಾರವರು ಇಟ್ಟಿಗೆಗಳಿಂದ ಗೋಡೆಯನ್ನು ಕಟ್ಟಿ ಅದನ್ನು ಮಾಧವ ಫಾಸ್ಲೆ ಕಲಸಿಕೊಟ್ಟ ಮಣ್ಣಿನಿಂದ ತಾವೇ ಸ್ವತಃ ಮೆತ್ತಿ ನಿರ್ಮಿಸಿರುತ್ತಾರೆ. 

ಸಾಯಿಬಾಬಾರವರ ದೇಹಾವಸಾನ ಸಮಯದಲ್ಲಿ ಮಾಧವ ಫಾಸ್ಲೆಯವರು ಬಾಪು ಸಾಹೇಬ್ ಜೋಗ್ ರವರಿಗೆ ಸಾಯಿಬಾಬಾರವರು ಉಪಯೋಗಿಸುತ್ತಿದ್ದ ಸಟಕಾ ಹಾಗೂ ಚಿಲ್ಲಂ ಗಳನ್ನು ಕೊಟ್ಟಿದ್ದರು. ಜೋಗ್ ರವರು ಅವುಗಳನ್ನು ತಮ್ಮ ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸುತ್ತಿದ್ದರು. ಸ್ವಲ್ಪ ದಿನಗಳ ನಂತರ ಜೋಗ್ ರವರು ತಮ್ಮ ವಾಸಸ್ಥಾನವನ್ನು ಸಾಕೂರಿ ಬಳಿಯ ಉಪಾಸನಿ ಮಹಾರಾಜ್ ರವರ ಆಶ್ರಮಕ್ಕೆ ಬದಲಿಸಿದರು. ಆಗ ಆ ಪವಿತ್ರ ವಸ್ತುಗಳನ್ನು ಉಪಾಸನಿ ಮಹಾರಾಜ್ ರವರ ಆಶ್ರಮದಲ್ಲಿ ಇರಿಸಿದ್ದರು. ಈಗ ಈ ಪವಿತ್ರ ವಸ್ತುಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಇರಿಸಲಾಗಿದೆ. 

1936 ನೇ ಇಸವಿಯಲ್ಲಿ ಒಂದು ಘಟನೆ ನಡೆಯಿತು. ಸಾಯಿಬಾಬಾರವರ ಮುಸ್ಲಿಂ ಭಕ್ತನಾದ ಛೋಟೆಖಾನ್ ಹಾಗೂ ಮಾಧವ ಫಾಸ್ಲೆಯವರುಗಳು ಒಂದು ರಾತ್ರಿ ಮಸೀದಿಯಲ್ಲಿ ಮಲಗಿದ್ದರು. ಆಗ ಛೋಟೆಖಾನ್ ರವರಿಗೆ ಸಾಯಿಬಾಬಾರವರು "ಮಧು, ಏಳು, ನಾನು ಬಹಿರ್ದಷೆಗೆ ಹೋಗಬೇಕು" ಎಂದು ಮಾತನಾಡಿದ ಹಾಗೆ ಕೇಳಿಸಿತು.  ಆದರೆ, ಮಾಧವ ಫಾಸ್ಲೆ ಗಾಢನಿದ್ರೆಯಲ್ಲಿದ್ದರಿಂದ ಅವರು ಏಳಲಿಲ್ಲ. ಮಾರನೇ ದಿನ ಬೆಳಗಿನ ಜಾವ ಸಾಯಿಬಾಬಾರವರು ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿ ಒಂದು ಸಣ್ಣ ರಂಧ್ರವಾಗಿದ್ದು ಅದರ ತುಂಬಾ ನೀರು ತುಂಬಿಕೊಂಡಿತ್ತು ಮತ್ತು ಅದರಿಂದ ಒಳ್ಳೆಯ ಸುವಾಸನೆ ಬರುತ್ತಿತ್ತು. 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment