Sunday, October 2, 2011

ಸಾಯಿ ಮಹಾಭಕ್ತ - ಸಗುಣ ಮೇರು ನಾಯಕ್ - ಕೃಪೆ: ಸಾಯಿಅಮೃತಧಾರಾ.ಕಾಂ   



ಸಗುಣ ಮೇರು ನಾಯಕ್ ರವರು ಪೂನಾ ತಾಲ್ಲೂಕಿನ ಬೋರಿ ಮರ್ಮಗೋವಾ ಗ್ರಾಮದ ನಿವಾಸಿಯಾಗಿದ್ದರು. ಅಲ್ಲಿ ಅವರು ಹಸುಗಳನ್ನು ಮೇಯಿಸುವ ಕೆಲಸವನ್ನು ಮಾಡಿಕೊಂಡಿದ್ದರು. ಹೀಗೆ ಊರೂರು ಅಲೆದಾಡುತ್ತಾ ಕರ್ನಾಟಕದ ಬೆಳಗಾವಿಗೆ ಬಂದರು. ನಂತರ ಎರಡು ವರ್ಷಗಳ ಕಾಲ ನರಸೋಬವಾಡಿಯಲ್ಲಿ ಟೆಂಬೇ ಸ್ವಾಮಿಗಳ ಜೊತೆಯಲ್ಲಿ ಇದ್ದರು. ನಂತರ ಸ್ವಲ್ಪ ವರ್ಷಗಳ ಕಾಲ ಅಜುನ್ಕರ್ ಮಹಾರಾಜ್ ರವರ ಜೊತೆಯಲ್ಲಿ ಇದ್ದರು. ನಂತರ ಗಾಣಗಾಪುರಕ್ಕೆ ಬಂದರು. ಆನಂತರ ಸ್ವಲ್ಪ ದಿನಗಳ ಕಾಲ ಹುಷಾರು ತಪ್ಪಿದರು. ಆಗ ಇವರು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿಯವರೊಡನೆ ತಂಗಿದ್ದರು. ನಂತರ ರಾಮೇಶ್ವರ, ಪಂಡರಾಪುರ ಮುಂತಾದ ಊರುಗಳನ್ನು ಸಂದರ್ಶಿಸುತ್ತಾ ಕೊನೆಗೆ 1911-1912 ರಲ್ಲಿ ಶಿರಡಿಗೆ ಬಂದರು. ಸಾಯಿಬಾಬಾರವರು ಇವರನ್ನು ನೋಡಿ "ಏನು, ನೀನು ಮೋಟಾ ದರ್ಬಾರದಿಂದ ಬಂದಿರುವೆ ಅಲ್ಲವೇ?" ಎಂದು ಕೇಳಿದರು. ಆ ಮಾತುಗಳು ಸಿದ್ಧಾರೂಢ ಸ್ವಾಮೀಜಿಯವರನ್ನು ಉದ್ದೇಶಿಸಿ ಸಾಯಿಬಾಬಾರವರು ಆಡಿದ ಮಾತುಗಳಾಗಿತ್ತು. ಸಗುಣ ಮೇರು ನಾಯಕ್ ರವರು ಶಿರಡಿಗೆ ಬಂದ ಮೇಲೆ ಸುಮಾರು ಐದು ತಿಂಗಳುಗಳ ಕಾಲ ಸಾಯಿಬಾಬಾರವರು ಅವರಿಗೆ ಹಿತವಚನಗಳನ್ನು, ಉಪದೇಶಗಳನ್ನು ನೀಡಿದರು. ಕೊನಗೆ ಒಂದು ದಿನ ಸಗುಣ ಮೇರು ನಾಯಕ್ ರವರು ಶಿರಡಿಯನ್ನು ಬಿಟ್ಟು ಹೊರಡಲು ಅನುಮತಿ ಬೇಡಿದಾಗ ಸಾಯಿಬಾಬಾರವರು "ಇಲ್ಲಿಯೇ ಇದ್ದು ಏನಾದರೂ ಕೆಲಸವನ್ನು ಮಾಡು. ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ" ಎಂದು ನುಡಿದರು. ಸಾಯಿಬಾಬಾರವರ ಆಜ್ಞೆಯನ್ನು ಪಾಲಿಸಿದ ಸಗುಣ ಮೇರು ನಾಯಕ್ ರವರು ಶಿರಡಿಯಲ್ಲೇ ತಮ್ಮ ವಾಸ್ತವ್ಯವನ್ನು ಹೂಡಿ  ಶಿರಡಿಯನ್ನು ತಮ್ಮ ಕೊನೆಯ ವಾಸ ಸ್ಥಾನವಾಗಿ ಮಾಡಿಕೊಂಡರು. ಆ ದಿನದಿಂದ ಸಗುಣ ಮೇರು ನಾಯಕ್ ರವರು ಒಂದು ಟೀ ಮತ್ತು ಲಘು ಉಪಾಹಾರದ ಅಂಗಡಿಯನ್ನು ಪ್ರಾರಂಭಿಸಿ ಅಲ್ಲಿ ಟೀ ಮತ್ತು ಉಪಹಾರವನ್ನಷ್ಟೇ ಅಲ್ಲದೆ ಸಾಯಿಬಾಬಾರವರ ಚಿತ್ರಪಟ, ಆರತಿಯ ಪುಸ್ತಕಗಳು ಮತ್ತು ಧಾರ್ಮಿಕ ವಸ್ತುಗಳನ್ನು ಕೂಡ ಮಾರಲು ಪ್ರಾರಂಭಿಸಿದರು. ಶಿರಡಿಯಲ್ಲಿ ಇರಲು ಪ್ರಾರಂಭಿಸಿದಾಗಿನಿಂದ ಸಗುಣ ಮೇರು ನಾಯಕ್ ರವರು ಅಭಿವೃದ್ಧಿ ಹೊಂದಲು ಪ್ರಾರಂಭಿಸಿದರು. ಇವರು ಸಾಯಿಬಾಬಾರವರಿಗೆ ತಮ್ಮನ್ನು ಅನವರತವೂ ಕಾಪಾಡುವಂತೆ ಕೋರಿಕೊಂಡರು. ಅದಕ್ಕೆ ಸಾಯಿಬಾಬಾರವರು ಹಾಗೆಯೇ ಆಗಲಿ ಎಂದು ಅಭಯವನ್ನು ನೀಡಿದ್ದರು. ಸಗುಣ ಮೇರು ನಾಯಕ್ ರವರು ಶಿರಡಿಯಲ್ಲಿ ತಮ್ಮ ದೈನಂದಿನ ಕೆಲಸಗಳು ಮುಗಿದ ಮೇಲೆ ದ್ವಾರಕಾಮಾಯಿ ಮಸೀದಿಗೆ ಬಂದು ಅಲ್ಲಿದ್ದ ಹಣತೆಗಳಿಗೆ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದರು.

ಸಗುಣ ಮೇರು ನಾಯಕ್ ರವರಿಗೆ ಸಾಯಿಬಾಬಾರವರ ಅಪಾರ ಶಕ್ತಿಯ ಅರಿವು 1911-1912 ರಲ್ಲೇ ಆಗಿತ್ತು. ಇವರು ಹೈದರಾಬಾದ್ ನ ಒಬ್ಬ ಸಾಯಿಭಕ್ತ ಹಾಗೂ ವೈಶ್ಯ ವ್ಯಾಪಾರಿಯೊಂದಿಗೆ ಶಿರಡಿಗೆ ಬಂದರು. ಆ ವ್ಯಾಪಾರಿಯು ತನ್ನೊಂದಿಗೆ ತನ್ನ ಪಾಶ್ವವಾಯು ಪೀಡಿತ ಮಗಳನ್ನು ಕರೆದುಕೊಂಡು ಬಂದಿದ್ದನು. ಅವನ ಮಗಳಿಗೆ ತನ್ನ ಕಾಲ ಮೇಲೆ ತಾನು ನಿಲ್ಲುವುದಕ್ಕೆ ಮತ್ತು ನಡೆಯುವುದಕ್ಕೆ ಆಗುತ್ತಿರಲಿಲ್ಲ. ಶಕ್ತಿಯಿಲ್ಲ ಕಾಲುಗಳ ಬದಲು ಅವಳು ತನ್ನ ಕೈಗಳನ್ನೇ ಕಾಲಿನಂತೆ ಬಳಸಿಕೊಂಡು ಕುಂಟುತ್ತಾ ನಡೆಯುತ್ತಿದ್ದಳು. ಮೊದಲ ಸಾರಿ ಸಾಯಿಬಾಬಾರವರನ್ನು ಭೇಟಿಯಾಗಲು ಬಂದಾಗ  ಆ ವೈಶ್ಯ ವ್ಯಾಪಾರಿಯು ಅವಳನ್ನು ಎತ್ತಿಕೊಂಡು ಬಂದಿದ್ದನು. ಆದರೆ ಶಿರಡಿಗೆ ಅವರು ಬಂದ 3ನೇ ದಿನದಂದು ಆ ಹುಡುಗಿಯು ತನ್ನ ಕಾಲುಗಳನ್ನು ಸ್ವಲ್ಪ ಉಪಯೋಗಿಸಲು ಪ್ರಾರಂಭ ಮಾಡಿದಳು. 8ನೇ ದಿನದಂದು ಅವಳು ಸರಿಯಾಗಿ ನಡೆಯಲು ಪ್ರಾರಂಭಿಸಿದಳು. ಇದು ಸಾಯಿಬಾಬಾರವರ ಆಶೀರ್ವಾದದ ಫಲವಲ್ಲದೆ ಮತ್ತಿನ್ನೇನು?

ಸಾಯಿಬಾಬಾರವರ ಅನುಗ್ರಹದಿಂದ ಮತ್ತೊಂದು ಪಾಶ್ವವಾಯು ಪೀಡಿತ ರೋಗಿಗೆ ಕೂಡ ಗುಣವಾಯಿತು. ಶ್ರೀ.ಘಾಯಿಸಾಸ್ ರವರು ರೈಲ್ವೇ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು. ಅವರ ಪತ್ನಿಯು ಕೂಡ ಪಾಶ್ವವಾಯುವಿನಿಂದ ನೆರಳುತ್ತಿದ್ದರು. ಅವರು ತಮ್ಮ ಪತ್ನಿಯನ್ನು ಶಿರಡಿಗೆ ಕರೆದುಕೊಂಡು ಬಂದರು. ಹಾಗೆ ಕರೆದುಕೊಂಡು ಬಂದ ಕೆಲವೇ ದಿನಗಳಲ್ಲಿ ಅವರ ಪಾಶ್ವವಾಯು ಸಂಪೂರ್ಣ ಗುಣವಾಯಿತು.

1914 ನೇ ಇಸವಿಯಲ್ಲಿ ಒಂದು ರಾತ್ರಿ ಸಾಯಿಬಾಬಾರವರು ಸಗುಣ ಮೇರು ನಾಯಕ್ ರವರ ಕನಸಿನಲ್ಲಿ ಬಂದು "ನನಗೋಸ್ಕರ ಹದವಾಗಿ ಬೇಯಿಸಿದ ಅನ್ನವನ್ನು ತೆಗೆದುಕೊಂಡು ಬಾ" ಎಂದು ಹೇಳಿದರು. ಈ ಘಟನೆಯಾದ ಮೇಲೆ ಸತತವಾಗಿ ಎರಡು ವರ್ಷಗಳ ಕಾಲ ತುಪ್ಪ ಹಾಕದೆಯೇ ಹದವಾಗಿ ಬೇಯಿಸಿದ ಅನ್ನವನ್ನು ಸಗುಣ ಮೇರು ನಾಯಕ್ ತೆಗೆದುಕೊಂಡು ಹೋಗಿ ಬಾಬಾರವರಿಗೆ ನೀಡುತ್ತಿದ್ದರು. ಕೆಲ ದಿನಗಳ ನಂತರ ಸಾಯಿಬಾಬಾರವರು ಅನ್ನಕ್ಕೆ ತುಪ್ಪವನ್ನು ಹಾಕಿ ತಂದುಕೊಡುವಂತೆ ಹೇಳಿದರು. ಅಂದಿನಿಂದ, ಸಗುಣ ಮೇರು ನಾಯಕ್ ರವರು ಪ್ರತಿನಿತ್ಯ ಅನ್ನಕ್ಕೆ ತುಪ್ಪವನ್ನು ಹಾಕಿ ಮಸೀದಿಗೆ ತಂದು ಅದನ್ನು ಮೊದಲು ನೈವೇದ್ಯವಾಗಿ ಧುನಿಮಾ ಗೆ ಅರ್ಪಿಸಿ ನಂತರ ಸ್ವಲ್ಪ ಭಾಗವನ್ನು ಸಾಯಿಬಾಬಾರವರಿಗೆಂದು ಮಣ್ಣಿನ ಕೊಲಂಬಾದಲ್ಲಿ ಇರಿಸುತ್ತಿದ್ದರು. ಉಳಿದ ಅನ್ನವನ್ನು ನಾಯಿಗಳಿಗೆ ನೀಡುತ್ತಿದ್ದರು. ಸತತವಾಗಿ ಐದಾರು ವರ್ಷಗಳ ಕಾಲ ಸಾಯಿಬಾಬಾರವರನ್ನು ಕಾಣಲು ಹೆಚ್ಚು ಭಕ್ತರು ಬರುತ್ತಿದ್ದ ಸಮಯದಲ್ಲಿ ಸಗುಣ ಮೇರು ನಾಯಕ್ ರವರು ಕೆಲವು ಬ್ರಾಹ್ಮಣ ಅಡಿಗೆಯವರನ್ನು ಅಡಿಗೆ ಮಾಡಲು ಮತ್ತು ಬಂದ ಭಕ್ತರಿಗೆ ಬಡಿಸಲು ಗೊತ್ತು ಮಾಡಿದ್ದರು. 1919 ರಲ್ಲಿ ಶಿರಡಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾದಾಗ ಸಗುಣ ಮೇರು ನಾಯಕ್ ರವರು ತಾವು ನಡೆಸುತ್ತಿದ್ದ ಹೋಟೆಲ್ ನ್ನು ಮುಚ್ಚಿದರು. 

ಇವರಿಗೆ ಉಪಾಸಿನಿ ಮಹಾರಾಜ್ ರವರ ಪರಿಚಯ ಚೆನ್ನಾಗಿ ಇತ್ತು. ಸಗುಣ ಮೇರು ನಾಯಕ್ ರವರು ಶಿರಡಿಗೆ ಬರುವ ಮೊದಲೇ ಉಪಾಸಿನಿ ಮಹಾರಾಜ್  ಶಿರಡಿಯಲ್ಲಿ ವಾಸಿಸುತ್ತಿದ್ದರು.  ಸಗುಣ ಮೇರು ನಾಯಕ್ ಶಿರಡಿಗೆ ಬಂದ ಸುಮಾರು 5 ರಿಂದ 6 ತಿಂಗಳುಗಳ ಕಾಲ ಉಪಾಸಿನಿ ಮಹಾರಾಜ್ ರವರು ದೀಕ್ಷಿತ್ ವಾಡಾ ದಲ್ಲಿ ತಂಗಿದ್ದರು ಮತ್ತು ಇವರ ಎಲ್ಲ ಬೇಕು ಬೇಡಗಳನ್ನು ದೀಕ್ಷಿತ್ ರವರೇ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ದಾದಾ ಸಾಹೇಬ್ ಖಾಪರ್ಡೇ ಯವರು ಕೂಡ ಅಲ್ಲಿಯೇ ಉಪಾನಿಸಿ ಮಹಾರಾಜ್ ರವರೊಂದಿಗೆ ತಂಗಿದ್ದರು. ಒಮ್ಮೆ ಹೆಚ್.ಎಸ್.ದೀಕ್ಷಿತ್ ರವರ ಶಿಷ್ಯರಾದ ಮಾಧವ ರಾವ್ ದೇಶಪಾಂಡೆ ಮತ್ತು ಉಪಾಸಿನಿ ಮಹಾರಾಜ್ ರವರಿಗೆ ಯಾವುದೋ ವಿಷಯಕ್ಕೆ ಜೋರಾಗಿ ಗಲಾಟೆಯಾಯಿತು. ಆ ದಿನದಿಂದ ಉಪಾಸಿನಿ ಮಹಾರಾಜ್ ರವರು ಶಿರಡಿ ಗ್ರಾಮದ ಹೊರಗಡೆ ಇದ್ದ ಖಂಡೋಬಾ ಮಂದಿರದಲ್ಲಿ ವಾಸಿಸಲು ಪ್ರಾರಂಭಿಸಿದರು.

1912 ರಲ್ಲಿ ಸಾಯಿಬಾಬಾರವರ ಪವಿತ್ರ ಅಮೃತ ಶಿಲೆಯ ಪಾದುಕೆಗಳನ್ನು ಸಾಥೆವಾಡಾದ ಪಕ್ಕದಲ್ಲಿದ್ದ ಮತ್ತು ಸಾಯಿಬಾಬಾರವರಿಗೆ ಬಹಳ ಇಷ್ಟವಾದ ಬೇವಿನ ಮರದ ಕೆಳಗಡೆಯಲ್ಲಿ ಸ್ಥಾಪಿಸಲಾಯಿತು. ಅಗರಬತ್ತಿ ವ್ಯಾಪಾರಿಯಾದ ಬಾಯಿ ಆಲಿಬಾಗಕರ್ ರವರು ಈ ಪಾದುಕೆಗಳ ಸ್ಥಾಪನೆಯ ವಿಷಯವನ್ನು ಮೊದಲು ಎಲ್ಲರ ಮುಂದೆ ಇಟ್ಟರು. ಮುಂಬೈ ನ ರಾಮ ರಾವ್ ಕೊಥಾರೆ ಯವರು ಸಮಾರಂಭದ ಎಲ್ಲಾ ಖರ್ಚುಗಳನ್ನು ನೋಡಿಕೊಂಡರು. ಆಲಿಬಾಗಕರ್ ರವರು ಬಹಳ ಬಡವರಾದ್ದರಿಂದ ಅವರಿಗೆ ಯಾವುದೇ ಖರ್ಚನ್ನು ಭರಿಸಲು ಸಾಧ್ಯವಾಗಲಿಲ್ಲ.  ಸಾಯಿಬಾಬಾರವರೇ ಸ್ವತಃ 25 ರುಪಾಯಿಗಳನ್ನು ಸಮಾರಂಭದ ಖರ್ಚಿಗೊಸ್ಕರ ನೀಡಿದರು.  ಕೋಪರ್ಗಾವ್ ನಿಂದ ನಾಲ್ಕು ವೇದಗಳನ್ನು ಪ್ರತಿನಿಧಿಸಲು ನಾಲ್ಕು ಬ್ರಾಹ್ಮಣರನ್ನು ಸಮಾರಂಭವನ್ನು ನಡೆಸಲು ಕರೆತರಲಾಯಿತು.  ಸ್ಥಳೀಯ ಸಾಯಿ ಭಕ್ತರಾದ ಬಾಳಾಸಾಹೇಬ್ ಭಾಟೆ, ಬಾಪು ಸಾಹೇಬ್ ಜೋಗ, ದಾದಾ ಕೇಳ್ಕರ್ ಮತ್ತು ಉಪಾಸಿನಿ ಮಹಾರಾಜ್ ರವರುಗಳು ಪಾದುಕಾ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಂಡರು.

ಕೆಲವು ತಿಂಗಳುಗಳ ನಂತರ ಶಿರಡಿಯಲ್ಲಿ ಸಾಯಿಬಾಬಾರವರು ಸಾವಿರಾರು ಜನರಿಗೆ ಆಹಾರವನ್ನು ನೀಡುತ್ತಿರುವರೆಂದು ಆಸೆಯಿಂದ ಬಂದು ತಂಗಿದ್ದ ಮಾರ್ತಾಂಡ ಎನ್ನುವ ಹುಚ್ಚು ಬ್ರಾಹ್ಮಣ ಒಂದು ದಿನ ಬೇವಿನ ಮರದ ಬಳಿಗೆ ಹೋಗಿ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಆ ಪಾದುಕೆಗಳನ್ನು ಚೂರು ಚೂರು ಮಾಡಿದನು. ನಂತರ ಅವನು ತಾತ್ಯಾ ಪಾಟೀಲರ ಇಚ್ಛೆ ಮೇರೆಗೆ ನಿರ್ಮಿಸಿದ್ದ ಮಹಾದೇವ ಮತ್ತು ಪಾರ್ವತಿಯ ಮಂದಿರಕ್ಕೆ ತೆರಳಿ ಆ ಎರಡು ವಿಗ್ರಹಗಳನ್ನು ಕೂಡ ಕೆಡವಿ ಹಾಳು ಮಾಡಿದನು. ಆಗ ಶಿರಡಿಯ ಸಾಯಿಭಕ್ತರು ಆ ಪಾದುಕೆಯ ಸ್ಥಳದಲ್ಲಿ ಬೇರೆ ಪಾದುಕೆಗಳನ್ನು ಪ್ರತಿಷ್ಟಾಪಿಸುವುದಾಗಿ ಹೇಳಿದಾಗ ಸಾಯಿಬಾಬಾರವರು ಒಪ್ಪಿಗೆ ನೀಡಲಿಲ್ಲ. ಬದಲಿಗೆ, ಕೇವಲ ಅನ್ನ ಶಾಂತಿ ಮಾಡಬೇಕೆಂದು ಹೇಳಿದರು. ಸಾಯಿಬಾಬಾರವರ ಆಜ್ಞೆಯಂತೆ ಅವರ ಭಕ್ತರುಗಳು ಸೇರಿ ಸುಮಾರು 300 ಜನರಿಗೆ ಅನ್ನ ಸಂತರ್ಪಣೆಯನ್ನು ಮಾಡಿದರು. ಆ ದಿನಗಳಲ್ಲಿ ಸಾಯಿಬಾಬಾರವರು ಸುಮಾರು 300 ಬಡ ಜನಗಳಿಗೆ ಪ್ರತಿನಿತ್ಯ ಆಹಾರವನ್ನು ಕೊಟ್ಟು ರಕ್ಷಿಸುತ್ತಿದ್ದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment