Sunday, October 31, 2010

ಮಹಾರಾಷ್ಟ್ರ ಸರ್ಕಾರದ ಗಿರಿಜನ ಕಲ್ಯಾಣ ಸಚಿವ ಶ್ರೀ.ಬಾಬುರಾವ್ ಪಚ್ಪುಟೆ ಶಿರಡಿ ಭೇಟಿ - 31ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ಸರ್ಕಾರದ ಗಿರಿಜನ ಕಲ್ಯಾಣ ಸಚಿವ ಶ್ರೀ.ಬಾಬುರಾವ್ ಪಚ್ಪುಟೆಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷ ಶ್ರೀ. ಶಂಕರ್ ರಾವ್ ಕೊಲ್ಹೆಯವರು ಸಚಿವರನ್ನು ಸತ್ಕರಿಸಿದರು.

ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ ಮಾಡಿದ ಮಹಾರಾಷ್ಟ್ರ ಗಿರಿಜನ ಕಲ್ಯಾಣ ಸಚಿವ ಶ್ರೀ.ಬಾಬುರಾವ್ ಪಚ್ಪುಟೆ

ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷ ಶ್ರೀ. ಶಂಕರ್ ರಾವ್ ಕೊಲ್ಹೆಯವರು ಸಚಿವರನ್ನು ಸನ್ಮಾನ ಮಾಡುತ್ತಿರುವ ಚಿತ್ರ 

ಕನ್ನಡ ಅನುವಾದ : ಶ್ರೀಕಂಠ ಶರ್ಮ

ಶಿರಡಿ ಸಾಯಿಬಾಬಾರವರಿಗೆ ಬೆಳ್ಳಿಯ ಕೀರಿಟ ಅರ್ಪಿಸಿದ ಆಂಧ್ರಪ್ರದೇಶದ ಸಾಯಿಭಕ್ತ - 31ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಆಂಧ್ರಪ್ರದೇಶದ ಶಾಸಕ ಶ್ರೀ.ಕೆ.ರಾಮಭೂಪಾಲ ರೆಡ್ಡಿಯವರು ಇತ್ತೀಚಿಗೆ ಶಿರಡಿ ಭೇಟಿ ನೀಡಿ ಸಾಯಿಬಾಬಾನಿಗೆ 1.1 ಕೆಜಿ ತೂಕದ ಬೆಳ್ಳಿಯ ಕೀರೀಟವನ್ನು ಕಾಣಿಕೆಯಾಗಿ ಅರ್ಪಿಸಿದರು.  

ಶಿರಡಿ ಸಾಯಿಬಾಬಾರವರಿಗೆ ಬೆಳ್ಳಿಯ ಕಿರೀಟ ಅರ್ಪಿಸಿದ ಆಂಧ್ರಪ್ರದೇಶದ ಶಾಸಕ ಶ್ರೀ.ಕೆ.ರಾಮಭೂಪಾಲ ರೆಡ್ಡಿ


ಕನ್ನಡ ಅನುವಾದ : ಶ್ರೀಕಂಠ ಶರ್ಮ

Saturday, October 30, 2010

ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ಶ್ರೀ.ಗುರುದಾಸ್ ಕಾಮತ್ ರವರಿಂದ ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ - 30ನೇ ಅಕ್ಟೋಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ


ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವರಾದ ಶ್ರೀ.ಗುರುದಾಸ್ ಕಾಮತ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಮಾಡಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಶ್ರೀ.ಗುರುದಾಸ್ ಕಾಮತ್ ರವರನ್ನು ಸನ್ಮಾನಿಸಿದರು. 

 ಶ್ರೀ.ಗುರುದಾಸ್ ಕಾಮತ್ ರವರು ಸಾಯಿಬಾಬಾರವರ ಸಮಾಧಿ ದರ್ಶನ ಮಾಡುತ್ತಿರುವ ಚಿತ್ರ 
 
 ಶಿರಡಿ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಶ್ರೀ.ಗುರುದಾಸ್ ಕಾಮತ್ ರವರನ್ನು ಸನ್ಮಾನ ಮಾಡುತ್ತಿರುವ ಚಿತ್ರ 

ಕನ್ನಡ ಅನುವಾದ : ಶ್ರೀಕಂಠ ಶರ್ಮ


ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೆ ನಾಮ್ " ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನ - ಕೃಪೆ : ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ಕೋರಮಂಗಲ ಬಡಾವಣೆಯ ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿ ಟ್ರಸ್ಟ್ ರವರು ಆಯೋಜಿಸಿದ್ದ ಮತ್ತು ಶಿರಡಿಯ ಬಳಿಯ ಶ್ರೀರಾಮಪುರದ ಶ್ರೀ.ಬಬ್ಲು ದುಗ್ಗಾಲ್ ಮತ್ತು ತಂಡ ಅಭಿನಯಿಸಿದ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೆ ನಾಮ್" ನಾಟಕವು ಇದೇ ತಿಂಗಳ 24 ನೇ ಅಕ್ಟೋಬರ್ 2010, ಭಾನುವಾರದಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಈ ನಾಟಕವನ್ನು ಹೇಮಾಡಪಂತರ ಸಾಯಿ ಸಚ್ಚರಿತೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿತ್ತು. 

ಅಂಬೇಡ್ಕರ್ ಭವನದ ಮುಂದೆ ಲಗತ್ತಿಸಿದ್ದ ಕಾರ್ಯಕ್ರಮದ ನಾಮಫಲಕ 
ಸುಂದರ ಹೂವುಗಳಿಂದ ಅಲಂಕರಿಸಲ್ಪಟ್ಟ ಅಂಬೇಡ್ಕರ್ ಭವನದ ಹೊರ ದ್ವಾರ 

ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿಯವರ ಮುಖ್ಯ ಉದ್ದೇಶ ಸಾಯಿಬಾಬಾರವರೇ ಸ್ವತಃ ಹೇಳಿ ಬರೆಸಿದ ಹೇಮಾಡಪಂತರ ಸಾಯಿ ಸಚ್ಚರಿತೆಯಲ್ಲಿ ಸಾಯಿ ಬಾಬಾರವರು ಹೇಳಿರುವ ತತ್ವಗಳನ್ನು ದೇಶದಾದ್ಯಂತ ಪ್ರಚಾರ ಪಡಿಸುವುದು. 

ನಾಟಕದ ಒಂದು ಸುಂದರ ದೃಶ್ಯ
 
ಈ ಕಾರ್ಯಕ್ರಮವು ಸಂಜೆ 5 ಘಂಟೆಗೆ ಶಿರಡಿಯ ಶ್ರೀ.ಸಂದೀಪ್ ಸೋನವಾನೆ, ಶ್ರೀ.ಬಬ್ಲು ದುಗ್ಗಾಲ್ ಮತ್ತು ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿ ಟ್ರಸ್ಟೀಗಳು ದೀಪವನ್ನು ಬೆಳಗುವುದರೊಂದಿಗೆ ಆರಂಭವಾಯಿತು. 

ನಾಟಕ ವೀಕ್ಷಿಸಿದ ಗಣ್ಯ ಅತಿಥಿಗಳಾದ ಡಾ.ದತ್ತಾ ಮತ್ತು ಶ್ರೀ.ಸಂದೀಪ್ ಸೋನಾವಾನೆ
 
ನಾಟಕವು ಸಂಜೆ ಸುಮಾರು 5:30 ರ ವೇಳೆಗೆ ಆರಂಭವಾಗಿ ರಾತ್ರಿ 10 ಘಂಟೆಯವರೆಗೆ ನಡೆಯಿತು. ಅಂಬೇಡ್ಕರ್ ಭವನದಲ್ಲಿ ಸೇರಿದ್ದ ಎಲ್ಲಾ ಸಾಯಿಭಕ್ತರು ಸಾಯಿ ಭಜನೆಗಳು ಮತ್ತು ಸಾಯಿ ನಾಮ ಸ್ಮರಣೆಯಲ್ಲಿ ಮಿಂದು ಪುನೀತರಾದರು. ಶ್ರೀ.ಬಬ್ಲು ದುಗ್ಗಾಲ್ ರವರು ನಾಟಕದ ಘಟನಾವಳಿಗಳಿಗೆ ತಕ್ಕಂತೆ ಹಾಡುಗಳನ್ನು ಸಂಯೋಜನೆ ಮಾಡಿ ಸಾಯಿಸಚ್ಚರಿತೆಯ ಘಟನಾವಳಿಗಳನ್ನು ನಿರೂಪಣೆ ಮಾಡುತ್ತಾ ಮತ್ತು ಹಾಡುಗಳನ್ನು ಹಾಡುತ್ತಾ ನೆರೆದಿದ್ದ ಎಲ್ಲಾ ಸಾಯಿಭಕ್ತರು ಮೈಮರೆತು ಕುಣಿಯುವಂತೆ ಮಾಡಿದರು. ಶ್ರೀ.ಬಬ್ಲು ದುಗ್ಗಾಲ್ ರವರು ಸತತ 4 ಘಂಟೆಗಳ ಕಾಲ ತಮ್ಮ ಅತ್ಯುತ್ತಮ ನಿರೂಪಣೆ ಹಾಗೂ ಗಾಯನದಿಂದ ನೆರೆದಿದ್ದ ಎಲ್ಲಾ ಸಾಯಿಭಕ್ತರು ಅಚ್ಚರಿ ಪಡುವಂತೆ ಮಾಡಿದರು. ನಾಟಕದಲ್ಲಿ ಪಾತ್ರ ವಹಿಸಿದ್ದ ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. 

ನಾಟಕವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿ, ಉತ್ತಮ ಹಾಡುಗಳನ್ನು ಹಾಡಿ ರಂಜಿಸಿದ ಶ್ರೀ.ಬಬ್ಲು ದುಗ್ಗಾಲ್
 
ಇಡೀ ಕಾರ್ಯಕ್ರಮದ ವಿಶೇಷತೆ ಏನೆಂದರೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯಾರ ಹೆಸರನ್ನು ಕೂಡ ಸೂಚಿಸದೆ ಕೇವಲ "ಶಿರಡಿ ಸಾಯಿಬಾಬಾರವರೇ ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿ" ಎಂದು ಘೋಷಣೆ ಮಾಡಿದುದು. ಈ ಘೋಷಣೆ ಕೇಳುತ್ತಿದ್ದಂತೆ ನೆರೆದಿದ್ದ ಎಲ್ಲಾ ಸಾಯಿಭಕ್ತರು ಏಕಕಂಠದಿಂದ ಸಾಯಿನಾಥರಿಗೆ ಜಯಕಾರಗಳನ್ನು ಹಾಕುವುದನ್ನು ಮರೆಯಲಿಲ್ಲ. ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀ.ಚಂದ್ರಕಾಂತ್ ಜಾಧವ್, ಶ್ರೀ.ಅಜಯ್ ಶರ್ಮ, ಶ್ರೀ.ಮುಕೇಶ್ ಅಗರವಾಲ್, ಶ್ರೀ.ರಾಜೇಂದ್ರ ಕುಮಾರ್ ಬೇಯ್ದ್ ರವರು ವೇದಿಕೆಯನ್ನು ಅಲಂಕರಿಸದೆ ಹಿಂದೆ ನಿಂತುಕೊಂಡು ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಂಡರು. ಶಿರಡಿ ಸಾಯಿಬಾಬಾರವರ ಎರಡು ಮುದ್ದಾದ ಭಾವ ಚಿತ್ರಗಳು ಮುಖ್ಯ ಭೂಮಿಕೆಯನ್ನು  ಅಲಂಕರಿಸಿದ್ದವು. 

ಕಾರ್ಯಕ್ರಮದಲ್ಲಿ ಶಿರಡಿಯ ಶ್ರೀ.ಸಂದೀಪ್ ಸೋನಾವಾನೆ, ಡಾ.ದತ್ತಾ ಮತ್ತು ಕನ್ನಡಕ್ಕೆ ಸಾಯಿ ಸಚ್ಚರಿತೆಯನ್ನು ತರ್ಜುಮೆ ಮಾಡಿದ ಶ್ರೀ.ಏನ್.ಎಸ್.ಅನಂತರಾಮು ರವರು ಉಪಸ್ಥಿತರಿದ್ದರು. ಟ್ರಸ್ಟ್ ನ ಪದಾಧಿಕಾರಿಗಳು ಶ್ರೀ.ಸಂದೀಪ್ ಸೋನಾವಾನೆ, ಡಾ.ದತ್ತಾ, ಶ್ರೀ.ಬಬ್ಲು ದುಗ್ಗಾಲ್  ಮತ್ತು ಶ್ರೀ.ಏನ್.ಎಸ್.ಅನಂತರಾಮು ರವರನ್ನು ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ವತಿಯಿಂದ ಸನ್ಮಾನಿತರಾದ ಸಾಯಿ ಸಚ್ಚರಿತೆ (ಕನ್ನಡ) ದ ಲೇಖಕ ಶ್ರೀ.ಅನಂತರಾಮು
 
ನಾಟಕವು ಸಾಯಿಬಾಬಾರವರ ಆರತಿಯೊಂದಿಗೆ ಪ್ರಾರಂಭವಾಗಿ ಆರತಿಯೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಾಯಿಭಕ್ತರಿಗೂ ಕೂಡ ಮಂಡಳಿಯವರು ಮಹಾಪ್ರಸಾದದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದರು. 

ನಾಟಕ ವೀಕ್ಷಣೆಯಲ್ಲಿ ತಲ್ಲೀನರಾಗಿರುವ ಸಭಿಕರು
 
ಬೆಂಗಳೂರಿನ ಅನೇಕ ಸಾಯಿಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು. 

ಕಾರ್ಯಕ್ರಮ ಯಶಸ್ವಿಯಾಗಲು ಶ್ರಮವಹಿಸಿ ದುಡಿದ ಟ್ರಸ್ಟ್ ನ ಸದಸ್ಯರುಗಳು
 
ಸಾಯಿ ಭಕ್ತ ಮಂಡಳಿ ಟ್ರಸ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.

ಶ್ರೀ.ಚಂದ್ರಕಾಂತ್ ಜಾಧವ್ 
ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿ ಟ್ರಸ್ಟ್ 
ನಂ.310/8,  ಮೊದಲನೇ ಮಹಡಿ, 17ನೇ ಮುಖ್ಯ ರಸ್ತೆ, 
ಕೃಷ್ಣ ಕೇಬಲ್ ರಸ್ತೆ, 5ನೇ ಬ್ಲಾಕ್, ಕೋರಮಂಗಲ 
ಬೆಂಗಳೂರು-560 095.
ದೂರವಾಣಿ : 98453 52984 
ಇ ಮೇಲ್ ವಿಳಾಸ: chandu_jadhav76@yahoo.com

ಕನ್ನಡ ಅನುವಾದ : ಶ್ರೀಕಂಠ ಶರ್ಮ

Friday, October 29, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಸದ್ಗುರು ಶ್ರೀ.ಶ್ರೀ.ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ತೊಕತಿಮ್ಮನ ದೊಡ್ಡಿ, ರಾವಗೊಡ್ಲು ಗೇಟ್, ಕನಕಪುರ ರಸ್ತೆ, ಬೆಂಗಳೂರು.

ಈ ಸಾಯಿ ಮಂದಿರವು ಕನಕಪುರ ಮುಖ್ಯ ರಸ್ತೆಯಲ್ಲಿ 30 ಕಿಲೋಮೀಟರ್ ಸಾಗಿದರೆ ಬಲಭಾಗದಲ್ಲಿ ರಾವಗೊಡ್ಲು ಗೇಟ್ ಬಳಿ ಇದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಮಂದಿರದ ವಿಶೇಷತೆಗಳು: 

  • ಈ ಮಂದಿರವು 22ನೇ ಫೆಬ್ರವರಿ 2009 ರಂದು ಉದ್ಘಾಟನೆಗೊಂಡಿತು. 
  • ಈ ಮಂದಿರವನ್ನು ಯಾವುದೇ ಜನಸಹಾಯವನ್ನು ಪಡೆಯದೇ ನಿರ್ಮಿಸಲಾಗಿದೆ. 
  • ಈ ಮಂದಿರದಲ್ಲಿರುವ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವು ಶಿರಡಿಯ ಸಮಾಧಿ ಮಂದಿರದಲ್ಲಿರುವ ವಿಗ್ರದಂತೆಯೇ ಕಂಡುಬರುತ್ತದೆ. 
  • ಈ ಮಂದಿರವನ್ನು ಶಿರಡಿಯಲ್ಲಿರುವಂತೆ ಅದೇ ಮಾದರಿಯ ಕಲ್ಲುಗಳಿಂದ ನಿರ್ಮಿಸಲಾಗಿದೆ. 
  • ಶಿರಡಿಯ ಸಮಾಧಿಮಂದಿರದಲ್ಲಿರುವಂತೆ ಸಾಯಿಬಾಬಾರವರ ವಿಗ್ರಹದ ಎದುರಿಗೆ ದೇವಾಲಯದ ಮುಂಭಾಗದಲ್ಲಿ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ದೇವಾಲಯದ ಹೊರಭಾಗದ ಬಲಭಾಗದಲ್ಲಿ ಗಣೇಶ, ದತ್ತಾತ್ರೇಯ ಮತ್ತು ಸುಬ್ರಮಣ್ಯಸ್ವಾಮಿಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 
  • ಪವಿತ್ರ ಧುನಿಯನ್ನು ದೇವಾಲಯದ ಹೊರಭಾಗದ ಎಡಭಾಗದಲ್ಲಿ ನಿರ್ಮಿಸಲಾಗಿದೆ. ಧುನಿಯಿರುವ ಪ್ರಾಕಾರದಲ್ಲಿ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ತೂಗುಹಾಕಲಾಗಿದೆ. 
  • ಧುನಿಯ ಪಕ್ಕದಲ್ಲಿ ಒಂದು ಔದುಂಬರ ವೃಕ್ಷವು ತಾನೇ ತಾನಾಗಿ ಉದ್ಭವವಾಗಿದೆ. 
  • ದೇವಾಲಯದ ಪಕ್ಕದಲ್ಲಿ ಮತ್ತು ಹಿಂಭಾಗದಲ್ಲಿ ಬೇವಿನ ಮರಗಳು ತಾವಾಗಿಯೇ ಉದ್ಭವವಾಗಿವೆ. 
  • ಪಂಚಲೋಹದ ಸುಂದರ ಸಾಯಿಬಾಬಾರವರ ವಿಗ್ರಹವಿದ್ದು ಅದನ್ನು ನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತದೆ. 
  • ದೇವಾಲಯದ ಆವರಣದ ಹೊರಭಾಗದ ಮಧ್ಯ ಭಾಗದಲ್ಲಿ ಸ್ಥೂಪವನ್ನು ನಿರ್ಮಿಸಲಾಗಿದೆ. 
 ದೇವಾಲಯದ ಹೊರನೋಟ 

 ಗಣೇಶ, ದತ್ತಾತ್ರೇಯ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳು 

ಶಿರಡಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ 

ಪವಿತ್ರ ಧುನಿ ಮಾ ಮತ್ತು ದ್ವಾರಕಾಮಾಯಿ ಬಾಬಾರವರ ಭಾವಚಿತ್ರ 

ಧುನಿಯ ಪಕ್ಕದಲ್ಲಿರುವ ಬೇವಿನ ಮರ 

ದೇವಾಲಯದ ಕಾರ್ಯಚಟುವಟಿಕೆಗಳು 

ಪ್ರತಿನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ  
ಆರತಿ
ಸಮಯ
ಕಾಕಡಾ ಆರತಿ 6:30am
ಚೋಟ ಆರತಿ 9:30am
ಮಧ್ಯಾನ್ಹ ಆರತಿ 12:00pm
ಧೂಪಾರತಿ 6.00pm
ಶೇಜಾರತಿ 8:00pm

ಪ್ರತಿದಿನ ಬೆಳಗ್ಗೆ 10 ಘಂಟೆಯಿಂದ 11 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕ ಮಾಡಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ 250 /- ರುಪಾಯಿಗಳನ್ನು ಕೊಟ್ಟು ರಸೀದಿ ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ. 

ಧುನಿ ಪೂಜೆಯನ್ನು ಪ್ರತಿದಿನ ಬೆಳಗ್ಗೆ 10 ಘಂಟೆಯಿಂದ 12 ಘಂಟೆಯ ವರೆಗೆ ಮತ್ತು ಸಂಜೆ 5 ಘಂಟೆಯಿಂದ 6 ಘಂಟೆಯವರೆಗೆ ಮಾಡಲಾಗುತ್ತದೆ. ಧುನಿ ಪೂಜೆ ಮಾಡಲು ಇಚ್ಚಿಸುವ ಸಾಯಿಭಕ್ತರು 51 /- ರುಪಾಯಿಗಳನ್ನು ನೀಡಿ ರಸೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ.              

ವಿಶೇಷ ದಿನಗಳು:


ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 3 ಘಂಟೆಯಿಂದ 5 ಘಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು 250 /- ರುಪಾಯಿಗಳನ್ನು ಮುಂಗಡವಾಗಿ ನೀಡಿ ರಸೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ. 

ವಿಶೇಷ ಉತ್ಸವದ ದಿನಗಳು:  

ಪ್ರತಿವರ್ಷದ 22 ನೇ ಫೆಬ್ರವರಿ ದೇವಾಲಯದ ವಾರ್ಷಿಕೋತ್ಸವ 
ಶ್ರೀರಾಮನವಮಿ 
ಗುರುಪೂರ್ಣಿಮೆ 
ವಿಜಯದಶಮಿ 
ದತ್ತಜಯಂತಿ                                     

ಮೇಲಿನ ಎಲ್ಲಾ ವಿಶೇಷ ಉತ್ಸವದ ದಿನಗಳಂದು ಬೆಳಗಿನಿಂದ ರಾತ್ರಿಯವರೆಗೂ ವಿವಿಧ ಭಜನೆ ಮಂಡಳಿಯವರಿಂದ ವಿಶೇಷ ಭಜನೆ ಕಾರ್ಯಕ್ರಮಗಳು ಮತ್ತು ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ. 


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ವಿಳಾಸ:
ಸದ್ಗುರು ಶ್ರೀ.ಶ್ರೀ.ಶ್ರೀ.ಶಿರಡಿ ಸಾಯಿಬಾಬಾ ಮಂದಿರ
ತೊಕತಿಮ್ಮನ ದೊಡ್ಡಿ, 30ನೇ ಕಿಲೋಮೀಟರ್ ಮೈಲಿಗಲ್ಲು,  
ರಾವಗೊಡ್ಲು ಗೇಟ್, ಕನಕಪುರ ರಸ್ತೆ, ಬೆಂಗಳೂರು.

ಸಂಪರ್ಕಿಸಬೇಕಾದ ವ್ಯಕ್ತಿ:


ಶ್ರೀ.ಗೋಪಿಕುಮಾರ್ 


ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:


93412-13523 / 98457-71188

ಮಾರ್ಗಸೂಚಿ:

ಕನಕಪುರ ರಸ್ತೆಯ 30ನೇ ಕಿಲೋಮೀಟರ್ ಮೈಲಿಗಲ್ಲಿನ ಬಳಿ ರಾವಗೊಡ್ಲು ಬಸ್ ನಿಲ್ಧಾಣದಲ್ಲಿ ಇಳಿದು ಸುಮಾರು ಅರ್ಧ ಕಿಲೋಮೀಟರ್ ಕ್ರಮಿಸಿದರೆ ದೇವಾಲಯ ಸಿಗುತ್ತದೆ. ಈ ಮಂದಿರಕ್ಕೆ ಬೆಂಗಳೂರು ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದ ನೇರ ಬಸ್ ಸೌಕರ್ಯವಿದೆ.

 ಕನ್ನಡ ಅನುವಾದ: ಶ್ರೀಕಂಠ ಶರ್ಮ

ಸಾಯಿ ಮಹಾಭಕ್ತ ಅಣ್ಣಾ ಚಿಂಚಿಣಿಕರ್ ಆಲಿಯಾಸ್ ದಾಮೋದರ ಘನಶ್ಯಾಮ ಬಾಬರೆ - ಕೃಪೆ: ಸಾಯಿಅಮೃತಧಾರಾ.ಕಾಂ

 ಅಣ್ಣಾ ಬಾಬರೆ

ಅಣ್ಣಾ ಚಿಂಚಿಣಿಕರ್ ಆಲಿಯಾಸ್ ದಾಮೋದರ ಘನಶ್ಯಾಮ ಬಾಬರೆ ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಇವರು ಮಾತು ಒರಟಾದರೂ ಕೂಡ ಹೃದಯ ಬಹಳ ಒಳ್ಳೆಯದಾಗಿತ್ತು. ಇವರು ತಮ್ಮ ನೇರ ನುಡಿಗಳಿಂದ ಜನರಿಗೆ ಇಷ್ಟವಾಗಿದ್ದರು. ಇವರು ಯಾರಿಗೂ ಹೆದರುತ್ತಿರಲಿಲ್ಲ. ಆಲ್ಲದೇ, ತಮ್ಮ ಎಲ್ಲಾ ವ್ಯವಹಾರಗಳನ್ನು ಚೊಕ್ಕಟವಾಗಿ ಇಟ್ಟುಕೊಂಡಿದ್ದರು ಮತ್ತು ತಮ್ಮ ಎಲ್ಲಾ ವ್ಯವಹಾರಗಳಿಗೆ ಸಾಲವನ್ನು ಮಾಡದೇ ಹಣವಿದ್ದರೆ ಮಾತ್ರ ವ್ಯವಹಾರ ಮಾಡುತ್ತಿದ್ದರು. ಹೊರನೋಟಕ್ಕೆ ನಿರ್ದಯ ವ್ಯಕ್ತಿಯಂತೆ ಕಂಡರೂ ಕೂಡ ಬಹಳ ಒಳ್ಳೆಯ ಸ್ವಭಾವ ಹೊಂದಿದ್ದರು. ಆದ್ದರಿಂದ ಸಾಯಿಬಾಬಾರವರು ಇವರನ್ನು ಕಂಡರೆ ಬಹಳ ಪ್ರೀತಿಯನ್ನು ತೋರಿಸುತ್ತಿದ್ದರು.ಒಂದು ದಿನ ಮಸೀದಿಯಲ್ಲಿ ಬಹಳ ಜನ ಸಾಯಿ ಭಕ್ತರು ನೆರೆದಿದ್ದರು. ಎಲ್ಲರು ಅವರದೇ ಆದ ರೀತಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಅಣ್ಣಾ ಬಾಬರೆಯವರು  ಸಾಯಿಬಾಬಾರವರ ಎಡ ಬದಿಯಲ್ಲಿ ಸಾಯಿಯವರು ಕುಳಿತುಕೊಳ್ಳುತ್ತಿದ್ದ ಸರಳುಗಳ ಪಕ್ಕದಲ್ಲಿ ನಿಂತುಕೊಂಡು ಸಾಯಿಬಾಬಾರವರ ಎಡಗೈಯನ್ನು ಎಣ್ಣೆ ಹೆಚ್ಚಿ ನೀವುತ್ತಿದ್ದರು. ಸಾಯಿಬಾಬಾರವರ ಬಲಭಾಗದಲ್ಲಿ ವೇಣುಭಾಯಿ ಕೌಜಲಗಿ ಎಂಬ ಮುದುಕಿಯು ಕುಳಿತಿದ್ದಳು. ಇವಳೊಬ್ಬ ವಿಧವೆ. ಇವಳನ್ನು ಸಾಯಿಬಾಬಾರವರು ತಾಯಿ ಎಂದು ಮತ್ತು ಮಸೀದಿಗೆ ಬರುತ್ತಿದ್ದ ಜನರು ಮಾವಸೀಬಾಯಿ ಎಂದು ಕರೆಯುತ್ತಿದ್ದರು. ಇವಳಿಗೆ ಬಹಳ ವಯಸ್ಸಾಗಿತ್ತು. ಆಲ್ಲದೇ ಇವಳ ಆತ್ಮ ಪರಿಶುದ್ದವಾಗಿತ್ತು. ತನ್ನ ಎರಡು ಕೈಗಳಿಂದ ಸಾಯಿಬಾಬಾರವರ ಹೊಟ್ಟೆಯನ್ನು ಬಳಸಿಕೊಂಡು ಚೆನ್ನಾಗಿ ನೀವುತ್ತಿದ್ದಳು. ಅವಳು ಹೊಟ್ಟೆಯನ್ನು ತಿಕ್ಕುತ್ತಿದ್ದ ರಭಸಕ್ಕೆ ಹೊಟ್ಟೆ ಮತ್ತು ಬೆನ್ನು ಸೇರಿಕೊಂಡು ಒಂದೇ ಸಮ ಕಾಣುತ್ತಿತ್ತು. ಅವಳು ನೀವುತ್ತಿದ್ದ ರಭಸಕ್ಕೆ ಸಾಯಿಬಾಬಾರವರು ಎಡದಿಂದ ಬಲಕ್ಕೆ ಓಲಾಡುತ್ತಿದ್ದರು. ಎಡಭಾಗದಲ್ಲಿದ್ದ ಅಣ್ಣಾ ಬಾಬರೆ ಅಲುಗಾಡದೆ ಬಾಬಾರವರ ಸೇವೆ ಮಾಡುತ್ತಿದ್ದರು. ಆದರೆ ಮಾವಸೀಬಾಯಿಯ ಮುಖವು ಅತ್ತಿತ್ತ ಹೊರಳಾಡುತ್ತಿತ್ತು. ಹೀಗೆಯೇ ಹೊರಳಾಡು ತ್ತಿದ್ದಾಗ ಅವಳ ಮುಖವು ಅಣ್ಣಾ ಬಾಬರೆಯವರ ಮುಖಕ್ಕೆ ತಗುಲಿತು. ಹಾಸ್ಯ ಪ್ರವೃತ್ತಿಯ ಮಾವಸೀಬಾಯಿ "ಈ ಅಣ್ಣಾ ಎಷ್ಟು ಕೆಟ್ಟವನು. ನನ್ನ ಮುಖಕ್ಕೆ ಮುತ್ತಿಡಲು ಪ್ರಯತ್ನಿಸುತ್ತಿದ್ದಾನೆ. ವಯಸ್ಸಾಗಿ ತಲೆ ಕೂದಲೆಲ್ಲ ಬೆಳ್ಳಗಾಗಿವೆ. ಆದರೂ ಕೂಡ ಇವನಿಗೆ ಸ್ವಲ್ಪವೂ ನಾಚಿಕೆಯಿಲ್ಲ" ಎಂದು ರೇಗಿಸಿದಳು. ಈ ಮಾತುಗಳು ಅಣ್ಣಾ ಬಾಬರೆಯವರಿಗೆ ಕೋಪವನ್ನು ತರಿಸಿತು. ಅವರು ತಮ್ಮ ಅಂಗಿಯ ತೋಳುಗಳನ್ನು ಮೇಲೆ ಸರಿಸುತ್ತ ಕೋಪದಿಂದ "ಏನು, ನೀನು ನನಗೆ ಕೆಟ್ಟ ಮನಸ್ಸಿನ ಮುದುಕನೆಂದೆಯಾ? ನನಗೇನು ಅಷ್ಟು ಕೂಡ ಬುದ್ಧಿ ಇಲ್ಲವೇ? ನಾನೇನು ಜಗಳಗಂಟನಲ್ಲ. ನೀನೇ ಕಾಲು ಕೆರೆದುಕೊಂಡು ಜಗಳ ಆಡುತ್ತಿರುವೆ" ಎಂದು ಕಿರುಚಾಡಿದರು. ಮಸೀದಿಯಲ್ಲಿ ನೆರೆದಿದ್ದ ಎಲ್ಲರು ಈ ದೃಶ್ಯವನ್ನು ನೋಡಿ ಆನಂದಿಸುತ್ತಿದ್ದರು. ಸಾಯಿಬಾಬಾರವರು ಇವರಿಬ್ಬರನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ಇಬ್ಬರನ್ನು ತಮ್ಮ ಮಾತುಗಳಿಂದ ಸಮಾಧಾನ ಮಾಡಲು ಯತ್ನಿಸಿದರು. ಸಾಯಿಬಾಬಾರವರು ಪ್ರೀತಿಯಿಂದ "ಓ ಅಣ್ಣಾ, ಏಕೆ ನೀನು ಸುಮ್ಮನೆ ಕೂಗಾಡುತ್ತಿರುವೆ? ಮಗನು ತನ್ನ ತಾಯಿಗೆ ಮುತ್ತಿಡುವುದರಲ್ಲಿ ತಪ್ಪೇನಿದೆ?" ಎಂದರು. ಸಾಯಿಯವರ ಈ ಮಾತುಗಳನ್ನು ಕೇಳಿ ಇಬ್ಬರು ಸಮಾಧಾನ ಹೊಂದಿದರು. ಮಸೀದಿಯಲ್ಲಿ ಆಗ ನೆರೆದಿದ್ದ ಎಲ್ಲಾ ಸಾಯಿಭಕ್ತರು ಈ ವಿನೋದವನ್ನು ಕಂಡು ಮನಸಾರೆ ನಕ್ಕು ಆನಂದಿಸಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಸಾಯಿ ಮಹಾಭಕ್ತ - ಛೋಟೆ ಖಾನ್ ಕೃಪೆ : ಸಾಯಿ ಅಮೃತಧಾರಾ.ಕಾಂ



ಛೋಟೆ ಖಾನ್ ರವರು ಔರಂಗಾಬಾದ್ ಜಿಲ್ಲೆಯ ವೈಜಾಪುರದ ನಿವಾಸಿಗಳಾಗಿದ್ದರು. ಇವರಿಗೆ 65 ವರ್ಷಗಳಾಗಿತ್ತು. ಇವರು ಸಾಯಿಬಾಬಾರವರನ್ನು 1910 ರಲ್ಲಿ ಮೊದಲ ಬಾರಿಗೆ ಭೇಟಿಯಾದರು.ಫಕೀರ್ ದುರ್ವೇಶ್ ಶಾ ರವರು ಇವರನ್ನು ಸಾಯಿಬಾಬಾರವರ ಬಳಿಗೆ ಕಳುಹಿಸಿದರು. ಕೂಡಲೇ ಛೋಟೆ ಖಾನ್ ರವರು ಸಾಯಿಬಾಬಾರವರನ್ನು ಭೇಟಿ ಮಾಡಲು ಶಿರಡಿಗೆ ಬಂದರು. ಆಗ ಬಾಬಾರವರು ಮಸೀದಿಯ ಮುಂದೆ ಇದ್ದ ಒಂದು ಸಣ್ಣ ಗಲ್ಲಿಯಲ್ಲಿ ನಿಂತಿದ್ದರು. ಅವರಿಗೆ ಒಬ್ಬ ಮಹಿಳೆ ತನ್ನ ಪ್ರಣಾಮಗಳನ್ನು ಸಲ್ಲಿಸುತ್ತಿದ್ದಳು. ಫಕೀರ್ ದುರ್ವೇಶ್ ಶಾ ರವರ ಮಾರ್ಗದರ್ಶನದಂತೆ ಛೋಟೆ ಖಾನ್ ಬಾಬಾರವರ ಹಿಂದೆ ನಿಂತುಕೊಂಡು ಕುರಾನ್ ನ ಮೊದಲ ಅಧ್ಯಾಯವನ್ನು ಓದಿದರು. ಇವರು ಬಿಸ್ಮಿಲ್ಲಾ ಎಂದು ಓದಲು ಶುರು ಮಾಡುತ್ತಿದ್ದಂತೆ ಬಾಬಾರವರು ಇವರ ಕಡೆಗೆ ತಿರುಗಿ ಕೋಪದಿಂದ "ಯಾರು ನೀನು? ನನ್ನನ್ನು ಏನೋ ಕೇಳಲು ಬಂದಿರುವ ನೀನೇನು ನನ್ನ ಅಪ್ಪನೇ?" ಎಂದೆಲ್ಲಾ ಬಾಬಾರವರು ಜೋರಾಗಿ ಕಿರುಚಾಡಿ ಒದರಾಡಿದರು. ಇವರ ಮೇಲೆ ಬಯ್ಗುಳಗಳ ಮಳೆಯನ್ನೇ ಸುರಿಸಿದರು. ನಂತರ ಬಾಬಾರವರು ಮಸೀದಿಗೆ ಬಂದು ಏನೇನೋ ಮಾತುಗಳನ್ನು ಆಡಿದರು. ಆದರೆ ಛೋಟೆ ಖಾನ್ ರವರಿಗೆ ಆ ಮಾತುಗಳು ಅರ್ಥವಾಗಲಿಲ್ಲ. ಸಾಯಿಯವರ ಅನುಮತಿ ಇಲ್ಲದೆ ಮಸೀದಿಗೆ ಯಾರೂ ಪ್ರವೇಶ ಮಾಡುವಂತೆ ಇರಲಿಲ್ಲ. ಆದ್ದರಿಂದ ಛೋಟೆ ಖಾನ್ ಮಸೀದಿಯ ದ್ವಾರದ ಬಳಿ ಸುಮ್ಮನೆ ಕುಳಿತರು. ಎರಡು ದಿನಗಳ ನಂತರ ಸಾಯಿಬಾಬಾರವರು ಇವರಿಗೆ ಒಳಗೆ ಬರಲು ಅಪ್ಪಣೆ ನೀಡಿದರು. ಕಾಕಾ ದೀಕ್ಷಿತ್ ಮತ್ತಿತರರು ಇವರ ಪರವಾಗಿ ಮಾತನಾಡಿ "ಬಾಬಾ, ಇವರೆಲ್ಲ ನಿಮ್ಮ ಮಕ್ಕಳಿದ್ದಂತೆ. ಇವರ ಮೇಲೆ ನಿಮಗೆ ಕೋಪವೇಕೆ?" ಎಂದು ಕೇಳಲು ಸಾಯಿಬಾಬಾರವರು "ಏನು, ಇವನನ್ನು ನನ್ನ ಮಗನೆಂದು ಕರೆದೆಯಾ? ಇವನು ಒಬ್ಬ ಉಪಾಧ್ಯಾಯರನ್ನು ಹೊಡೆದು ಸಾಯಿಸಿದ್ದಾನೆ" ಎಂದರು. ಕೆಲವು ದಿನಗಳ ಹಿಂದೆ ಛೋಟೆ ಖಾನ್ ನಿಜಾಮರ ಸಿಪಾಯಿಯಾಗಿ ಮಾಮಲ್ತೆದಾರರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬ ಕ್ರಿಶ್ಚಿಯನ್ ಉಪಾಧ್ಯಾಯರು ಒಂದು ಕೇಸಿನಲ್ಲಿ ಸರಿಯಾಗಿ ಸಾಕ್ಷ್ಯ ಹೇಳದೆ ತಪ್ಪು ಹೇಳಿದರೆಂದು ಅವರನ್ನು ಚೆನ್ನಾಗಿ ಥಳಿಸಿದ್ದ. ಅದೇ ವಿಷಯದ ಬಗ್ಗೆ ಸಾಯಿಬಾಬಾರವರು ಪ್ರಸ್ತಾಪ ಮಾಡಿದುದು. ಛೋಟೆ ಖಾನ್ ಹೊಡೆದ ರಭಸಕ್ಕೆ ಉಪಾಧ್ಯಾಯರ ಬಾಯಿಯಲ್ಲಿ ರಕ್ತ ಬಂದು ಅವರು ಪ್ರಜ್ಞೆ ತಪ್ಪಿ ಬಿದ್ದರು. ಆಗ ಮಾಮಲ್ತೆದಾರರು ಛೋಟೆ ಖಾನ್ ರವರಿಗೆ ಕೆಲಸಕ್ಕೆ ರಾಜೀನಾಮೆ ನೀಡಿ ಹೋಗುವಂತೆ ಆಜ್ಞಾಪಿಸಿದರು. ಅವರ ಆದೇಶದಂತೆ ಛೋಟೆ ಖಾನ್ ರವರು ನಿಜಾಂ ರಾಜ್ಯ ಬಿಟ್ಟು ಓಡಿ ಬಂದು ಸಾಯಿಬಾಬಾರವರ ಪಾದಗಳಿಗೆ ಶರಣಾದರು. ಬಡೇ ಬಾಬಾ ರವರ ಮಗ ಕಾಸಿಂ ಭಾಯಿ, ಜೋಗ ಮತ್ತು ದೀಕ್ಷಿತ್ ರವರು ಛೋಟೆ ಖಾನ್ ರವರನ್ನು ಬಾಬಾರವರ ಬಳಿಗೆ ಕರೆದುಕೊಂಡು ಬಂದರು. ಆಗ ಬಾಬಾರವರು ಛೋಟೆ ಖಾನ್ ರವರನ್ನು ಉದ್ದೇಶಿಸಿ "ಹೆದರಬೇಡ, ಅಲ್ಲಾನೇ ದೇವರು. ನಿನಗೆ ಸಜೆಯಾಗುವುದಿಲ್ಲ" ಎಂದು ಭರವಸೆ ನೀಡಿದರು. ಎರಡು ತಿಂಗಳುಗಳ ಕಾಲ ಛೋಟೆ ಖಾನ್ ಶಿರಡಿಯಲ್ಲೇ ತಂಗಿದ್ದರು. ನಂತರ ಬಾಬಾರವರು "ನೀನು ಈಗ ಹೊರಡು. ನಿನ್ನ ಜಮೀನಿನ ತಗಾದೆ ಯಾವುದೇ ತೊಂದರೆ ಇಲ್ಲದೆ ನಿವಾರಣೆಯಾಗುವುದು" ಎಂದು ಹೇಳಿದರು. ಬಾಬಾ ಹೇಳಿದುದು ಇವರ ಮತ್ತು ಇವರ ಅತ್ತೆಯವರ ನಡುವೆ ಇದ್ದ ಜಮೀನಿನ ತಗಾದೆ. ಬಾಬಾರವರು ಹೇಳಿದಂತೆ ಆ ತಗಾದೆಯು ನಿವಾರಣೆಯಾಗಿ ಆ ಜಮೀನು ಇವರ ಸುಪರ್ದಿಗೆ ಬಂದಿತು. 

ಇವರು ಎರಡನೇ ಬಾರಿ ಶಿರಡಿಗೆ ಭೇಟಿ ನೀಡಿದಾಗ ಮಹಾಲ್ಸಪತಿ ಮತ್ತು ಮೌಸಿಬಾಯಿಯವರು ಶಿರಡಿಯಲ್ಲಿದ್ದರು. ಇವರನ್ನು ನೋಡಿದ ತಕ್ಷಣವೇ ಬಾಬಾರವರು ಮೌಸಿಬಾಯಿಗೆ "ಈ ಜನಗಳು ನನ್ನ ಮಾತು ಕೇಳುವುದಿಲ್ಲ. ಆಮೇಲೆ ಅನುಭವಿಸುತ್ತಾರೆ. ಮುಳ್ಳುಗಳು ಸಿಕ್ಕಿಕೊಂಡು ಇವರ ಕಡೆಯವರು ಸಾಯುತ್ತಾರೆ" ಎಂದು ನುಡಿದರು. ಬಾಬಾರವರು ನುಡಿದಂತೆಯೇ ಮುಂದೆ ನಡೆಯಿತು. ಬಾಬಾರವರನ್ನು ಮೊದಲನೇ ಬಾರಿ ಭೇಟಿಯಾದ ಮೇಲೆ ಅವರಿಗೆ ಹೇಳದೆ ಛೋಟೆ ಖಾನ್ ರವರು ಶಿರಡಿ ಬಿಟ್ಟು ಹೊರಟರು. ಎರಡು ದಿನಗಳ ಬಳಿಕ ಮನೆಯನ್ನು ಸೇರಿದಾಗ ಇವರ ತಾಯಿಯವರ ಕಾಲಿಗೆ ಮುಳ್ಳುಗಳು ಚುಚ್ಚಿಕೊಂಡು ಕಾಲಿನಲ್ಲಿ ವ್ರಣವಾಗಿ, ಊದಿಕೊಂಡು ಅದರಿಂದಲೇ ಮರಣ ಹೊಂದಿದ್ದರು. ಇವರ ತಾಯಿಯವರ ಮರಣದ ನಾಲ್ಕನೇ ದಿನ ಇವರು ಶಿರಡಿಗೆ ಬಂದಿದ್ದರು. ಛೋಟೆ ಖಾನ್ ರವರ ಬಳಿ ತಾಯಿಯವರ ಅಂತ್ಯಕ್ರಿಯೆ ಮಾಡಲು ಹಣವಿರಲಿಲ್ಲ ಮತ್ತು ಇವರಿಗೆ ಕೆಲಸವೂ ಇರಲಿಲ್ಲ.ಸಾಯಿಬಾಬಾರವರು ಹಣದ ಸಹಾಯ ಮಾಡುವರು ಎಂಬ ಆಸೆಯಿಂದ ಶಿರಡಿಗೆ ಬಂದಿದ್ದರು. ಶಿರಡಿಯಲ್ಲಿ ಸುಮಾರು 34 ದಿನಗಳು ತಂಗಿದ್ದರು. ನಂತರ ಒಂದು ದಿನ ಬಾಬಾರವರು ಇವರಿಗೆ ಮೌಸಿಬಾಯಿಯವರ ಸಮ್ಮುಖದಲ್ಲಿ "ಉಧಿಯನ್ನು ಪಡೆದು ಈ ಮನುಷ್ಯ ಕೂಡಲೇ ಊರಿಗೆ ಹೊರಡಬೇಕು" ಎಂದರು. ಛೋಟೆ ಖಾನ್ ರವರಿಗೆ ಇದು ಬಾಬಾರವರ ಆಜ್ಞೆ ಎಂದು ತಿಳಿಯಿತು. ಮಾರನೇ ದಿನ ಬೆಳಗ್ಗೆ ಛೋಟೆ ಖಾನ್ ರವರು ಬಾಬಾರವರ ಬಳಿಗೆ ಹೋದಾಗ ಸಾಯಿಬಾಬಾರವರು ಇವರ ಕೈಗೆ ಉಧಿಯನ್ನು ನೀಡುತ್ತಾ "ನಿನ್ನ ಮನೆಯ ಬಾಗಿಲಿನಲ್ಲಿ ಒಬ್ಬ ಮುದುಕಿ ಬಂದು ನಿಲ್ಲುತ್ತಾಳೆ. ಅವಳು ನಿನಗೆ ಏನನ್ನೋ ಕೊಡುತ್ತಾಳೆ. ಅದರ ಸಹಾಯದಿಂದ ನೀನು ಅಂತ್ಯಕ್ರಿಯೆಯ ಕಾರ್ಯಗಳನ್ನು ಮುಗಿಸಬಹುದು. ಮನೆಗೆ ಅತಿಥಿಗಳು ಬಂದಿದ್ದಾರೆ. ಅವರೊಡನೆ ಸೇರಿ ಒಟ್ಟಿಗೆ ಭೋಜನವನ್ನು ಮಾಡು" ಎಂದು ನುಡಿದರು. ಇದು ಬಾಬಾರವರು ತಮ್ಮ ಅಂತರ್ಜ್ಞಾನದಿಂದ ಆಡಿದ ಮಾತುಗಳೆಂದು ಛೋಟೆ ಖಾನ್ ರವರಿಗೆ ಆಗ ಅರ್ಥವಾಗಲಿಲ್ಲ. ಆದರೆ ಇವರು ಮನೆಗೆ ತೆರಳಿ ಇವರ ತಾಯಿಯವರ 40 ದಿನದ ಕಾರ್ಯಗಳನ್ನು ಮಾಡಬೇಕೆಂದು ಯೋಚಿಸುತ್ತಿರುವಾಗ ಕಾಜಿ ಗ್ರಾಮದ ಒಬ್ಬ ವಯಸ್ಸಾದ ವಿಧವೆಯೊಬ್ಬರು ಇವರ ಮನೆಯ ಬಾಗಿಲಿಗೆ ಬಂದರು. ಇವರ ಕೈಗಳಿಗೆ ಪ್ರೀತಿಯಿಂದ 50 ರುಪಾಯಿಗಳನ್ನು ಕೊಟ್ಟು "ನೀನು ಕಾರ್ಯಗಳನ್ನು ಮುಂದುವರೆಸು" ಎಂದು ಹೇಳಿದರು. ಅಂದು 40 ದಿನದ ಮಾಸಿಕ ಶ್ರಾದ್ದದ ದಿನವಾಗಿತ್ತು. ಇವರ 4 ಜನ ಸಹೋದರಿಯರು ಅವರ ಪತಿಯೊಡನೆ ಇವರ ಮನೆಗೆ ಬಂದಿದ್ದರು. ಆ ವಯಸ್ಸಾದ ವಿಧವೆ ನೀಡಿದ ಹಣದಿಂದ ಕಾರ್ಯಗಳೆಲ್ಲಾ ಚೆನ್ನಾಗಿ ನಡೆದವು. ಬಾಬಾರವರು ಹೀಗೆ ಛೋಟೆ ಖಾನ್ ರವರಿಗೆ ಸಮಾರಂಭಕ್ಕೆ ಹಣವನ್ನು ಒದಗಿಸಿ ಆ ವಿಧವೆಯ ರೂಪದಲ್ಲಿ ಬಂದು ಸಹಾಯ ಮಾಡಿದರು.

ಇವರು ನಾಲ್ಕನೇ ಬಾರಿ ಶಿರಡಿಗೆ ಭೇಟಿ ನೀಡಿದಾಗ "ನಿನ್ನ ಮನೆಗೆ ಗುಲಾಬ್ ಬಂದಿದ್ದಾನೆ" ಎಂದು ಬಾಬಾ ನುಡಿದರು. ಛೋಟೆ ಖಾನ್ ಮನೆಗೆ ವಾಪಸ್ ಬಂದಾಗ ಇವರ ಪತ್ನಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಬಗ್ಗೆಯೇ ಬಾಬಾ ಮುಂಚೆಯೇ ತಿಳಿದು ಭವಿಷ್ಯ ನುಡಿದಿದ್ದರು. ಸಾಯಿಯವರು ಹೇಳಿದಂತೆ ಮಗುವಿಗೆ ಗುಲಾಬ್ ಎಂದೇ ನಾಮಕರಣ ಮಾಡಲಾಯಿತು.

ಇನ್ನೊಮ್ಮೆ ಛೋಟೆ ಖಾನ್ ಶಿರಡಿಗೆ ಭೇಟಿ ನೀಡಿದಾಗ ಬಹಳ ದಿನಗಳ ಕಾಲ ಬಾಬಾರವರು ಛೋಟೆ ಖಾನ್ ಗೆ ಹೊರಡಲು ಅನುಮತಿ ನೀಡಲಿಲ್ಲ. ಇದರಿಂದ ಛೋಟೆ ಖಾನ್ ರವರು ತಾಳ್ಮೆ ಕಳೆದುಕೊಂಡು ಹೊರಡಲು ಅವಸರ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಾಬಾರವರು ಇವರಿಗೆ ಹೊರಡಲು ಅನುಮತಿ ನೀಡದೆ "ನೀನು ಈಗ ಹೊರಟರೆ ನಿನಗೆ ಬಿರುಗಾಳಿ, ಬೆಂಕಿಯ ಉಂಡೆಗಳು, ಮತ್ತು ಇನ್ನು ಅನೇಕ ತೊಂದರೆಗಳು ಎದುರಾಗಬಹುದು" ಎಂದು ನುಡಿದರು. ಆದರೆ ಛೋಟೆ ಖಾನ್ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮನೆಗೆ ಹೊರಟರು. ಇವರು ವೇಗವಾಗಿ ನಡೆಯುತ್ತಾ, ಓಡುತ್ತಾ 12 ಮೈಲಿ ದೂರವನ್ನು ಕ್ರಮಿಸಿದಾಗ ಸಂಜೆ 5:50 ರ ಸಮಯವಾಗಿತ್ತು. ವರಿ ನದಿಯ ದಡದ ಪಕ್ಕದಲ್ಲಿ ನಡೆಯುತ್ತಾ ಹೋಗುತ್ತಿದ್ದರು.   ಆಗ ಸೂರ್ಯಾಸ್ತದ ಸಮಯ. ದಾರಿಯಲ್ಲಿ ಸಿಕ್ಕ ಪಟೇಲನು "ಮುಂದೆ ಹೋಗಬೇಡ. ಮೋಡ ತುಂಬಿಕೊಂಡಿದೆ. ಮಳೆ ಬರುವ ಹಾಗಿದೆ. ಈಗ ಹೊರಟರೆ ನೀನು ತೊಂದರೆಗೆ ಸಿಕ್ಕಿಕೊಳ್ಳುತ್ತೀಯೇ" ಎಂದು ಬುದ್ಧಿ ಮಾತು ಹೇಳಿದರು. ಅದಕ್ಕೆ ಉತ್ತರವಾಗಿ ಛೋಟೆ ಖಾನ್ ರವರು "ಇನ್ನು ಕೇವಲ 4 ಮೈಲಿಗಳ ದೂರವಷ್ಟೇ ಇದೆ. ನಾನು ಬೇಗನೆ ಹೋಗುತ್ತೇನೆ" ಎಂದು ಹೇಳಿ ಮುಂದೆ ಸಾಗಿದರು. ಮೂರು ಮೈಲಿ ಸಾಗುವುದರೊಳಗೆ ಜೋರಾಗಿ ಬಿರುಗಾಳಿ ಪ್ರಾರಂಭವಾಗಿ ಮಿಂಚೊಂದು ಅಲ್ಲಿದ್ದ ಅರಳಿ ಮರಕ್ಕೆ ಅಪ್ಪಳಿಸಿ ಆ ಮರವು ಕೆಳಗೆ ಉರುಳಿ ಬಿದ್ದು ಅದಕ್ಕೆ ಬೆಂಕಿ ಹತ್ತಿಕೊಂಡಿತು. ಅದನ್ನು ನೋಡಲಾಗದೆ ಹಿಂದೆ ತಿರುಗಿದಾಗ ಇವರಿಗೆ ಸಾಯಿಬಾಬಾರವರು ಎರಡು ನಾಯಿಗಳ ಜೊತೆ ತಮ್ಮ ಬೆನ್ನ ಹಿಂದೆಯೇ ಇದ್ದುದು ಕಾಣಿಸಿತು. ಇವರು ಬಾಬಾರವರಿಗೆ ನಮಸ್ಕಾರ ಮಾಡಿದ ಕೂಡಲೇ ಬಾಬಾರವರು ಅದೃಶ್ಯರಾದರು. ನಂತರ ಛೋಟೆ ಖಾನ್ ಮುಂದುವೆರೆದರು. ಇವರ ಹಳ್ಳಿಗೆ ಹೋಗಲು ಒಂದು ನದಿಯನ್ನು ದಾಟಬೇಕಾಗಿತ್ತು. ಅದರ ಆಳದ ಬಗ್ಗೆ ಛೋಟೆ ಖಾನ್ ರವರಿಗೆ ತಿಳಿದಿರಲಿಲ್ಲ. ನದಿಯ ನೀರು ತಮ್ಮ ಮೊಣಕಾಲವರೆಗೆ ಇದೆ ಎಂದು ಅವರು ಭಾವಿಸಿದ್ದರು. ಧೈರ್ಯವಾಗಿ ನದಿಯನ್ನು ದಾಟಿ ಆಚೆಯ ದಡಕ್ಕೆ ಬಂದು ಸೇರಿದರು. ಆದರೆ ದಡ ಸೇರಿ ಹಿಂತಿರುಗಿ ನೋಡಿದಾಗ ನದಿಯು ಉಕ್ಕಿ ಪ್ರವಾಹದಂತೆ ನೀರು ಹರಿದು ಬರುತ್ತಿರುವುದನ್ನು ನೋಡಿದರು. ಅವರಿಗೆ ನಾನು ಹೇಗೆ ನದಿಯನ್ನು ದಾಟಿದೆ ಎಂದು ಆಶ್ಚರ್ಯವಾಯಿತು. ನದಿಯ ಆಳವು ಸುಮಾರು 20 ಅಡಿಗಳಷ್ಟು ಇಟ್ಟು ಎಂದು ಆಗ ಇವರಿಗೆ ತಿಳಿಯಿತು. ಹೀಗೆ ಛೋಟೆ ಖಾನ್ ರವರು ಸಾಯಿಬಾಬಾರವರ ಸಹಾಯದಿಂದ ಮನೆಯನ್ನು ಸುರಕ್ಷಿತವಾಗಿ ಸೇರಿದರು. ಬಾಬಾರವರು ಇವರನ್ನು ಎಡಬಿಡದೆ ಹಿಂಬಾಲಿಸಿ ಇವರನ್ನು ರಕ್ಷಿಸಿದರು.

1936 ರಲ್ಲಿ ಗುಲಾಬ್ ನ ಮದುವೆ ಮಾಡಬೇಕೆಂದು ಛೋಟೆ ಖಾನ್ ಯೋಚಿಸಿದರು. ಆದರೆ ಆಗಲೂ ಇವರಿಗೆ ಹಣದ ತೊಂದರೆಯಿತ್ತು. ಆಗ ಛೋಟೆ ಖಾನ್ ರವರು ಶಿರಡಿಗೆ ತೆರಳಿ ಅಲ್ಲಿನ ಮಸೀದಿಯಲ್ಲಿ ಮಲಗಿದ್ದರು. ಆಗ ಬಾಬಾರವರು ಇವರ ಸ್ವಪ್ನದಲ್ಲಿ ಕಾಣಿಸಿಕೊಂಡು "ನೀನು ಈಗಲೇ ಪುಣೆಗೆ ಹೋಗು. ಅದರಿಂದ ನಿನಗೆ ಒಳ್ಳೆಯದಾಗುತ್ತದೆ" ಎಂದು ನುಡಿದರು. ಸಾಯಿಯವರು ಹೇಳಿದಂತೆ ಛೋಟೆ ಖಾನ್ ಪುಣೆಗೆ ಹೊರಟರು. ಅತಿಯಾದ ಪೈಲ್ಸ್ ನಿಂದ ಬಳಲುತ್ತಿದ್ದ ಲಡ್ಕರ್ ಎಂಬುವರನ್ನು ಇವರು ಭೇಟಿ ಮಾಡಿದರು. ಛೋಟೆ ಖಾನ್ ವರು ಲಡ್ಕರ್ ರವರಿಗೆ ಸಾಯಿಬಾಬಾರವರು ಆ ಖಾಯಿಲೆಗೆ ನೀಡುವ ಔಷಧ ತಮಗೆ ತಿಳಿದಿದೆ ಎಂದು ಹೇಳಿ ಅವರಿಗೆ ಆ ಔಷಧವನ್ನು ನೀಡಿದರು. ಆ ಔಷಧವನ್ನು ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಲಡ್ಕರ್ ರವರಿಗೆ ಗುಣವಾಯಿತು. ಕೂಡಲೇ ಲಡ್ಕರ್ ಹೊರಟು ಪುಣೆಯ ಕುದುರೆ ರೇಸ್ ಗೆ ತೆರಳಿ ಬಾಜಿಯನ್ನು ಕಟ್ಟಿ ಅದರಲ್ಲಿ 1100 ರುಪಾಯಿಗಳನ್ನು ಗೆದ್ದರು. ಅದರಲ್ಲಿ 700 ರುಪಾಯಿಗಳನ್ನು ಛೋಟೆ ಖಾನ್ ರವರಿಗೆ ನೀಡಿದರು. ಅದರಿಂದ ಗುಲಾಬ್ ನ ಮದುವೆ ಯಾವುದೇ ತೊಂದರೆಯಿಲ್ಲದೆ ನಡೆಯಿತು.

1918 ರಲ್ಲಿ ಸಾಯಿಬಾಬಾರವರು ಮಹಾಸಮಾಧಿಯಾಗುವುದಕ್ಕೆ ಕೆಲವು ದಿನಗಳ ಮುಂಚೆಯೇ ಕೆಲವು ಸಿದ್ದತೆಗಳನ್ನು ಮಾಡಿಕೊಂಡರು. ಇಸ್ಲಾಂ ಧರ್ಮದ ಪ್ರಕಾರವಾಗಿ ಈ ಸಿದ್ದತೆಗಳನ್ನು ಮಾಡಿದರು. ಅದೇನೆಂದರೆ,  ಬಡೇ ಬಾಬಾ ಮಗನಾದ ಖಾಸಿಮ್ ಗೆ ಬಾಬಾರವರು ಕೆಲವು ಪೋಲಿ ಮತ್ತು ಬೇಯಿಸಿದ ಕೋಳಿ ಕೊಟ್ಟರು ಮತ್ತು ಅವನಿಗೆ 250 ರುಪಾಯಿಗಳನ್ನು ಮತ್ತು ಸೇವಂತಿಗೆ ಹೂವಿನ ಹಾರವನ್ನು ಕೊಟ್ಟು ಔರಂಗಾಬಾದ್ ಗೆ ಹೋಗಿ ಅಲ್ಲಿ ಫಕೀರ್ ಶಂಶುದ್ದೀನ್ ಮಿಯಾ ರವರಿಗೆ 250 ರುಪಾಯಿಗಳನ್ನು ಕೊಡುವಂತೆ ತಿಳಿಸಿದರು. ಅವರಿಗೆ ಮೌಲು ಮತ್ತು ಖವಾಲಿ ಹಾಗೂ ನ್ಯಾಸ ಮಾಡುವಂತೆ ಹೇಳು ಎಂದು ತಿಳಿಸಿದರು. ಮೌಲು ಎಂದರೆ ಮೊಹಮ್ಮದ್ ಪೈಗಂಬರ್ ರವರ ಹಾಡುಗಳನ್ನು ಹಾಡುವುದು, ಕವಾಲಿ ಎಂದರೆ ತಬಲಾ ಬಾರಿಸಿಕೊಂಡು ಸಂತರ ಬಗ್ಗೆ ಹಾಡುಗಳನ್ನು ಹಾಡುವುದು ಹಾಗೂ ನ್ಯಾಸ ಎಂದರೆ ಆಹಾರವನ್ನು ತಯಾರು ಮಾಡಿ ಜನಗಳಿಗೆ ಸಂತರ್ಪಣೆ ಮಾಡುವುದು. ಇದಾದ ಬಳಿಕ ಒಂದು ಹಾರವನ್ನು ತೆಗೆದುಕೊಂಡು ಖಾಸಿಮ್ ಬನ್ನೇಮಿಯಾ ರವರ ಬಳಿಗೆ ಹೋಗಿ ಆ ಹಾರವನ್ನು ಅವರ ಕೊರಳಿಗೆ ಹಾಕಿ ಅವರಿಗೆ "ನವ್ ದಿನ್ ನವ್ ತಾರಿಕ್ ಅಲ್ಲಾ ಮಿಯಾನೆ ಅಪನ್ ದುನಿಯಾ ಲಗಾಯಾ, ಮರ್ಜಿ ಅಲ್ಲಾಕಿ" ಅಂದರೆ "9ನೇ ತಿಂಗಳ 9ನೇ ದಿನ ಅಲ್ಲಾನೇ ಇಟ್ಟ ದೀಪವನ್ನು ಅಲ್ಲಾನೇ ತೆಗೆದುಕೊಂಡು ಹೋಗುತ್ತಾನೆ, ಹೀಗಿದೆ ಅಲ್ಲಾನ ಲೀಲೆ" ಎಂದು ಹೇಳಿದರು. ಆದರೆ ಖಾಸಿಂ ನಾನು ಔರಂಗಾಬಾದ್ ಗೆ ಹೊಸಬನೆಂದು ತಿಳಿಸಿದಾಗ ಸಾಯಿಬಾಬಾರವರು ಅವನ ಜೊತೆಯಲ್ಲಿ ಛೋಟೆ ಖಾನ್ ರವರನ್ನು ಕಳುಹಿಸಿದರು. ಹೇಗೆ ಖಾಸಿಮ್, ಛೋಟೆ ಖಾನ್ ರವರು ಮತ್ತು ಖಾಸಿಂ ರವರ ಮನೆಯ ಆಳು ಅಮೀರ್ 3 ಜನ ಕೂಡಿ ಹೊರಟರು. ಇವರು ಔರಂಗಾಬಾದ್ ರೈಲ್ವೇ ನಿಲ್ದಾಣಕ್ಕೆ ಬಂದಿಳಿದಾಗ ಫಕೀರ್ ಶಂಶುದ್ದೀನ್ ಇವರ ಬಳಿಗೆ ಬಂದು "ಸಾಯಿಬಾಬಾರವರ ಕಡೆಯಿಂದ ಬಂದ ಅತಿಥಿಗಳು ಯಾರು?" ಎಂದು ಕೇಳಿದರು. ಛೋಟೆ ಖಾನ್ ಮತ್ತು ಖಾಸಿಂ ಅವರಿಗೆ ತಮ್ಮ ವಂದನೆಗಳನ್ನು ಸಲ್ಲಿಸಿದರು. ಆ ಕೊಡಲೇ ಶಂಶುದ್ದೀನ್ ಸಾಯಿಬಾಬಾರವರು ಶಿರಡಿಯಲ್ಲಿ ಹೇಳಿದ್ದನ್ನೆಲ್ಲವನ್ನು ಯಥಾವತ್ತಾಗಿ ಇವರಿಗೆ ಪುನರುಚ್ಚಾರ ಮಾಡಿದರು. ನಂತರ 3 ಜನರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿ ಅವರಿಗೆ ಊಟವನ್ನು ಹಾಕಿದರು. ಆಗ ಅವರುಗಳು ಸಾಯಿಯವರು ಕೊಟ್ಟ 250 ರುಪಾಯಿಗಳನ್ನು ಶಂಶುದ್ದೀನ್ ರವರಿಗೆ ನೀಡಿದರು. ಸಾಯಿಯವರ ಆಜ್ಞೆಯಂತೆ ಮೌಲು, ಕವಾಲಿ ಮತ್ತು ನ್ಯಾಸವನ್ನು ಮಾಡಿ ರಾತ್ರಿಯ ವೇಳೆಗೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು. ನಂತರ ಈ 3 ಜನ ಹೊರಟು ಮರುದಿನ ಬೆಳಗಿನ ಜಾವ ಬನ್ನೇಮಿಯಾ ರವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಬನ್ನೇಮಿಯಾರವರು ಒಂದು ತೋಳನ್ನು ಮೇಲಕ್ಕೆತ್ತಿ ಇನ್ನೊಂದು ತೋಳನ್ನು ಕೆಳಕ್ಕೆ ಇಳಿಸಿ ನಿಂತುಕೊಂಡಿದ್ದರು. ಅಲ್ಲಿ ಇದ್ದ ಜನಗಳು ಬನ್ನೇಮಿಯಾರವರ ಬಳಿಗೆ ಈಗ ಹೋಗಬೇಡಿ ಎಂದು ಇವರಿಗೆ ತಿಳಿಸಿದರು. ಹೀಗೆಯೇ ಒಂದು ಘಂಟೆ ಕಾಲ ಕಳೆಯಿತು. ಆಗ ಛೋಟೆ ಖಾನ್ ರವರು ಧೈರ್ಯ ಮಾಡಿ ಬಾಬಾರವರು ಕಳುಹಿಸಿದ ಹಾರವನ್ನು ತೆಗೆದುಕೊಂಡು ಬಂದು ಬನ್ನೇಮಿಯಾರವರ ಕೊರಳಿಗೆ ಹಾಕಿದರು. ಆಗ ಬನ್ನೇಮಿಯಾ ಎತ್ತಿದ್ದ ತೋಳನ್ನು ಕೆಳಕ್ಕೆ ಇಳಿಸಿದರು. ಆಗ ಛೋಟೆ ಖಾನ್ ರವರು ಬಾಬಾರವರು ಹೇಳಿದ ವಾಕ್ಯಗಳನ್ನು ಇವರಿಗೆ ತಿಳಿಸಿದರು. ಆ ಮಾತನ್ನು ಕೇಳಿ ಬನ್ನೇಮಿಯಾರವರು ಆಕಾಶವನ್ನು ನೋಡುತ್ತಾ ಕಣ್ಣೀರು ಸುರಿಸಿದರು. ಅವರಿಗೆ ಸಾಯಿಯವರು ಈ ಪ್ರಪಂಚದಿಂದ ದೂರವಾಗುತ್ತಿದ್ದಾರೆ ಎಂಬುದರ ಅರಿವಾಗಿತ್ತು. ಇದಾದ ನಂತರ 4 ತಿಂಗಳಿಗೆ ಸರಿಯಾಗಿ ಸಾಯಿಬಾಬಾರವರು ಇಹಲೋಕವನ್ನು ತ್ಯಜಿಸಿದರು. ನವ್ ದಿನ್ ನವ್ ತಾರಿಕ್ ಅಂದರೆ 9ನೇ ತಿಂಗಳ 9ನೇ ದಿನ. ಸಾಯಿಬಾಬಾರವರು ಇಹಲೋಕ ತ್ಯಜಿಸಿದ್ದು 9ನೇ ತಿಂಗಳ 9ನೇ ದಿನ. ಬಾಬಾರವರಿಗೆ ಅರಬ್ಬೀ ಮತ್ತು ಉರ್ದು ಭಾಷೆಗಳು ಚೆನ್ನಾಗಿ ತಿಳಿದಿತ್ತು ಮತ್ತು ಬಾಬಾರವರು ಅಬ್ದುಲ್ ಗೆ ಖುರಾನ್ ಕಲಿಸಿದ್ದರು.

1936 ರಲ್ಲಿ ಒಂದು ದಿನ ರಾತ್ರಿ ಛೋಟೆ ಖಾನ್ ಮತ್ತು ಮಾಧವ ಫಾಸ್ಲೆ ರಾತ್ರಿ ಮಸೀದಿಯಲ್ಲಿ ಮಲಗಿದ್ದರು. ಆಗ ಛೋಟೆ ಖಾನ್ ರವರು "ಮಾಧವ್, ಏಳು ನಾನು ಮುತ್ರ ಮಾಡಬೇಕು" ಎಂದು ಹೇಳಿದ ಸಾಯಿಬಾಬಾರವರ ಧ್ವನಿಯನ್ನು ಬಹಳ ಸ್ಪಷ್ಟವಾಗಿ ಕೇಳಿಸಿಕೊಂಡರು. ಆದರೆ ಮಾಧವ್ ನಿದ್ರೆಯಿಂದ ಏಳಯೇ ಇಲ್ಲ. ಮಾರನೆಯ ದಿನ ಬೆಳಗಿನ ಜಾವ ಸಾಯಿಬಾಬಾರವರು ಸಾಮಾನ್ಯವಾಗಿ ಕುಳಿತಿರುತ್ತಿದ್ದ ಸ್ಥಳದ ಗುಂಡಿಯ ಜಾಗದಲ್ಲಿ ಸುಗಂಧ ತೀರ್ಥ ಕಂಡರು. ಬಾಬಾ ಮುತ್ರ ಮಾಡಿದ ಜಾಗದಲ್ಲಿ ಸುಗಂಧ ತೀರ್ಥ ತುಂಬಿತ್ತು. 

ಕನ್ನಡ ಅನುವಾದ : ಶ್ರೀಕಂಠ ಶರ್ಮ

ಅಖಂಡ ಸಾಯಿ ನಾಮ ಸಪ್ತಾಹ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರೀ.ಆರ್.ರಾಧಾಕೃಷ್ಣ ಅಯ್ಯರ್ ಇನ್ನಿಲ್ಲ - ಕೃಪೆ : ಸಾಯಿಅಮೃತಧಾರಾ.ಕಾಂ


"ಸಾಯಿ ಜೀವಿ" ದಿವಂಗತ ಶ್ರೀ.ರಾಧಾಕೃಷ್ಣ ಅಯ್ಯರ್ 
 
ಅಖಂಡ ಸಾಯಿ ನಾಮ ಸಪ್ತಾಹ ಸಮಿತಿಯ ಸಂಸ್ಥಾಪಕ ಅಧ್ಯಕ್ಷ  ಶ್ರೀ.ಆರ್.ರಾಧಾಕೃಷ್ಣ ಅಯ್ಯರ್ ರವರು 15 ನೇ ಜುಲೈ 2010 ರಂದು ಚೆನ್ನೈ ನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.ಇವರಿಗೆ 94 ವರ್ಷ ವಯಸ್ಸಾಗಿತ್ತು. ಮೃತರು ತಮ್ಮ ಧರ್ಮಪತ್ನಿ ಶ್ರೀಮತಿ.ಸುಬ್ಬಲಕ್ಷ್ಮಿ , ಒಬ್ಬ ಮಗ, 3 ಹೆಣ್ಣು ಮಕ್ಕಳು ಮತ್ತು 7 ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇವರು ಶಿರಡಿ ಸಾಯಿಬಾಬಾರವರ ಪ್ರಚಾರ ಕಾರ್ಯದಲ್ಲಿ ಕಳೆದ 40 ವರ್ಷಗಳಿಂದ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇವರ ಅನವರತ ಸಾಯಿ ಸೇವೆಯನ್ನು ಗುರುತಿಸಿ ಸಾಯಿಬಂಧುಗಳು ಇವರನ್ನು ಪ್ರೀತಿಯಿಂದ "ಸಾಯಿ ಜೀವಿ" ಎಂದು ಕರೆಯುತ್ತಿದ್ದರು.


ಇವರ ತಂದೆ ಶ್ರೀ.ರಂಗನಾಥ ಅಯ್ಯರ್ ರವರು ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯರಾದ ಶ್ರೀ.ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಸಹಪಾಟಿಯಾಗಿದ್ದರು. ಆಲ್ಲದೇ, ಇವರು ಭಗವಾನ್ ರಮಣ ಮಹರ್ಷಿ, ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ.ರಾಧಾಕೃಷ್ಣ  ಸ್ವಾಮೀಜಿಯವರ ನಿಕಟವರ್ತಿಗಳಾಗಿದ್ದರು. 

ಸಾಯಿ ಪ್ರಚಾರಕ್ಕೆ ಶ್ರೀ.ರಾಧಾಕೃಷ್ಣ ಅಯ್ಯರ್ ರವರು ನೀಡಿದ ಪ್ರಮುಖ ಕೊಡುಗೆಯೆಂದರೆ ಅಖಂಡ ಸಾಯಿ ನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ್ದು. ಈ ಒಂದು ಮಹೋನ್ನತ ಕಾರ್ಯವನ್ನು ಶ್ರೀ.ರಾಧಾಕೃಷ್ಣ ಅಯ್ಯರ್ ರವರು 1980 ರಲ್ಲಿ ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಪ್ರಾರಂಭಿಸಿದರು. ವಿಜಯವಾಡದಲ್ಲಿ 7 ವಾರಗಳ ಕಾಲ ಸತತವಾಗಿ "ಸಾಯಿ ನಾಮ ಜಪ" ವನ್ನು 1984 ರಲ್ಲಿ ನಡೆಸಿದರು. ಬೆಂಗಳೂರಿನ ತ್ಯಾಗರಾಜನಗರದ ಪ್ರತಿಷ್ಟಿತ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ  1989 ರಲ್ಲಿ "ಸಾಯಿ ನಾಮ ಜಪ" ವನ್ನು ನಡೆಸಿದರು. ಶಿರಡಿ ಸಾಯಿಬಾಬಾರವರ 90ನೇ ಮಹಾಸಮಾಧಿ ಉತ್ಸವದ ಅಂಗವಾಗಿ ದೇಶದಾದ್ಯಂತ 90 ಕಡೆಗಳಲ್ಲಿ "ಸಾಯಿ ನಾಮ ಜಪ" ವನ್ನು ನಡೆಸಿ ಅದನ್ನು 1998 ರಲ್ಲಿ ಶಿರಡಿಯಲ್ಲಿ ಪೂರ್ಣಗೊಳಿಸಿದ ಹೆಗ್ಗಳಿಕೆ ಇವರದು. ಇವರ ಕೊನೆಯ ಉಸಿರಿನ ತನಕ ಇವರು ದೇಶದಾದ್ಯಂತ ಸಂಚಾರ ಮಾಡುತ್ತಾ "ಸಾಯಿ ನಾಮ ಜಪ" ವನ್ನು ನಡೆಸಿದರು. ಆದ ಕಾರಣ ಇವರ ನಿಕಟವರ್ತಿಗಳಾದ ಸಾಯಿ ಭಕ್ತರು ಇವರಿಗೆ "ಸಾಯಿ ಜೀವಿ" ಎಂದು ಬಿರುದು ನೀಡಿ ಗೌರವಿಸಿದ್ದರು. 

ಸಾಯಿಅಮೃತಧಾರಾ.ಕಾಂ ಅಗಲಿದ ಈ ಮಹಾನ್ ಚೇತನಕ್ಕೆ ತನ್ನ ಅಶ್ರುತರ್ಪಣವನ್ನು ಸಲ್ಲಿಸುತ್ತದೆ. ಆಲ್ಲದೇ ಇವರ ಮನೆಯವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಸಾಯಿ ಸಮರ್ಥರು ನೀಡಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತದೆ. 

ಕನ್ನಡ ಅನುವಾದ : ಶ್ರೀಕಂಠ ಶರ್ಮ

Thursday, October 28, 2010

ಸಾಯಿ ಭಜನ ಗಾಯಕ - ಶ್ರೀ. ಅಜಯ್ ವಾರಿಯರ್ - 28ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ


 ಖ್ಯಾತ ಗಾಯಕ ಶ್ರೀ.ಅಜಯ್ ವಾರಿಯರ್ ರವರು 

ಅಜಯ್ ವಾರಿಯರ್ ರವರು ಪ್ರಖ್ಯಾತ ಚಲನಚಿತ್ರ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಗಾಯಕರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್ ರವರ ಬಳಿ ಕಲಿತಿದ್ದಾರೆ. ಇವರು ಕನ್ನಡ, ತಮಿಳು, ಮಲಯಾಳಂ, ತೆಲುಗು, ತುಳು, ಹಿಂದಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಲವಾರು ಚಿತ್ರಗೀತೆ, ಭಕ್ತಿ ಗೀತೆಗಳನ್ನು ಹಾಡಿದ್ದಾರೆ. 

ಇವರು ಚಿತ್ರರಂಗದ ದಿಗ್ಗಜರಾದ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಂ, ಶ್ರೀಮತಿ.ಕೆ.ಎಸ್.ಚಿತ್ರರವರ ಜೊತೆ ಅನೇಕ ಗೀತೆಗಳನ್ನು ಹಾಡಿರುತ್ತಾರೆ. ಈ ದಿಗ್ಗಜರುಗಳ ಜೊತೆ ಹಾಡಿರುವುದು ತಮ್ಮ ಭಾಗ್ಯವೆಂದು ಇವರು ಹೇಳುತ್ತಾರೆ. ಆಲ್ಲದೇ, ಇವರು ಚಿತ್ರರಂಗದ ಅನೇಕ ಹೆಸರಾಂತ ಸಂಗೀತ ನಿರ್ದೇಶಕರ ಚಿತ್ರಗಳಿಗೆ ಹಾಡಿದ್ದಾರೆ. 

ಸಂಗೀತ ಕ್ಷೇತ್ರದ ಅನೇಕ ಮಜಲುಗಳಲ್ಲಿ ಕೆಲಸ ಮಾಡಿರುವುದು ಅಜಯ್ ವಾರಿಯರ್ ರವರ ವಿಶೇಷತೆ ಮತ್ತು ಇದು ಅವರಿಗೆ ಸಂತಸವನ್ನು ತಂದಿದೆ. ಪ್ರಸಿದ್ದ ರೇಡಿಯೋ ವಾಹಿನಿಗಳಲ್ಲಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಇವರು ಅನೇಕ ಕಾರ್ಯಕ್ರಮಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ಹೆಸರಾಂತ ಖಾಸಗಿ ಚಾನೆಲ್ ಗಳಾದ ಉದಯ ಟಿವಿ, ಇ ಟಿವಿ, ಏಶಿಯಾನೆಟ್, ಸುವರ್ಣ, ಜೀ ಕನ್ನಡ ಮತ್ತಿತರ ಚಾನೆಲ್ ಗಳಲ್ಲಿ ಇವರು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. 

ಅಜಯ್ ವಾರಿಯರ್ ರವರು ಅನೇಕ ಅಲ್ಬಮ್ ಗಳಲ್ಲಿ ಹಾಡಿದ್ದಾರೆ. ಸುಮಾರು 1300 ಕ್ಕೂ ಹೆಚ್ಚು ಅಲ್ಬಮ್ ಗಳಲ್ಲಿ ಹೆಸರಾಂತ ಸಂಗೀತ ನಿರ್ದೇಶಕರುಗಳಿಗೆ ಹಾಡಿದ ದಾಖಲೆ ಇವರದು.  ಇದರಲ್ಲಿ ಬಹಳಷ್ಟು ಭಕ್ತಿ ಗೀತೆಗಳನ್ನು ಶಿರಡಿ ಸಾಯಿಬಾಬಾರವರ ಮೇಲೆ ಹಾಡಿರುವುದು ಇವರ ವಿಶೇಷತೆ. ಇವರು ಭಾರತದಾದ್ಯಂತ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಲ್ಲದೇ, ಇವರು ದಕ್ಷಿಣ ಏಷಿಯಾ ಮತ್ತು ಮಧ್ಯ ಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತಾವು ನೀಡಿದ ಕಾರ್ಯಕ್ರಮಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 

ಸಂಗೀತ ಕ್ಷೇತ್ರದಲ್ಲಿ ಇನ್ನು ಹೆಚ್ಚು ಹೆಚ್ಹು ಎತ್ತರಕ್ಕೆ ಬೆಳೆಯಬೇಕೆಂಬ ಹಾಗೂ ಸಂಗೀತ ಪ್ರೇಮಿಗಳಿಗೆ ತಮ್ಮ ಗಾಯನದಿಂದ ಇನ್ನು ಹೆಚ್ಚು ಸಂತೋಷವನ್ನು ಕೊಡಬೇಕೆಂಬ ಮಹದಾಸೆ ಅಜಯ್ ವಾರಿಯರ್ ಅವರದು. 

ಅಜಯ್ ರವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ಕೊಡಲಾಗಿದೆ:

ಚಲನಚಿತ್ರ ಕ್ಷೇತ್ರ: 

  • ವಿ.ಮನೋಹರ್ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರ  ಅವರೊಂದಿಗೆ ಹಾಡಿದ್ದಾರೆ. 
  • ಪ್ರಸಿದ್ದ ಸಂಗೀತ ನಿರ್ದೇಶಕರುಗಳಾದ ಹಂಸಲೇಖ, ಎಂ.ಎಂ.ಕೀರವಾಣಿ, ಪ್ರವೀಣ್ ಡಿ.ರಾವ್, ಕೆ.ಕಲ್ಯಾಣ್, ಮೋಹನ್, ಸಿತಾರ (ಮಲಯಾಳಂ) ಮತ್ತಿತರರ ಸಂಗೀತ ನಿರ್ದೇಶನದಲ್ಲಿ ಅನೇಕ ಸೋಲೋ ಹಾಗೂ ಯುಗಳ ಗೀತೆಗಳನ್ನು ಹಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಚಿತ್ರಗಳು ತನನಂ ತನನಂ, ವೀರ ಮದಕರಿ, ತುತ್ತೂರಿ. 
ರೇಡಿಯೋ ಮತ್ತು ದೂರದರ್ಶನ ಹಾಗೂ ಖಾಸಗಿ ಚಾನೆಲ್ ಗಳು: 

  • ಏಷಿಯಾನೆಟ್ ವಾಹಿನಿಯಲ್ಲಿ ಬರುತ್ತಿರುವ ಪ್ರಸಿದ್ದ ಕಾರ್ಯಕ್ರಮ "ಸಂಗೀತ ಸಾಗರಂ" ನಲ್ಲಿ ಹಾಡಿದ್ದಾರೆ. 
  • ಏಷಿಯಾನೆಟ್ ಮಲಯಾಳಂ ವಾಹಿನಿಯ ಪ್ರಸಿದ್ದ ಕಾರ್ಯಕ್ರಮಗಳಾದ "ಮ್ಯುಸಿಕ್ ಲೈವ್" ಮತ್ತು  "ಲೈಮ್ ಲೈಮ್ ಲೈಟ್" ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. 
  • ಪ್ರಸಿದ್ದ ವಾಹಿನಿಗಳಾದ ಚಂದನ, ಕಾವೇರಿ, ಕೈರಳಿ, ಸುವರ್ಣ, ಉದಯ, ಜೀ ಟಿವಿ, ಇ ಟಿವಿ ಕನ್ನಡ, ಏಷಿಯಾನೆಟ್ ಮಲಯಾಳಂ ಮತ್ತಿತ್ತರ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ ಮತ್ತು ನೀಡುತ್ತಲೂ ಇದ್ದಾರೆ. 
  • ಅನೇಕ ರೇಡಿಯೋ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. 
  • ಸುಪ್ಪ್ರಸಿದ್ದ ಕನ್ನಡ ಧಾರಾವಾಹಿಗಳಾದ ಶಿವಲೀಲಾಮೃತ, ಇದು ಕಥೆಯಲ್ಲ ಜೀವನ (ಸುವರ್ಣ ವಾಹಿನಿ) ದಲ್ಲಿ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. 
ಅಲ್ಬಮ್ ಗಳು (ಕ್ಯಾಸೆಟ್ / ಸಿಡಿಗಳು):

  1. ಇದುವರೆಗೂ ಸರಿ ಸುಮಾರು 7 ಭಾಷೆಗಳಲ್ಲಿ 1300 ಕ್ಕೂ ಹೆಚ್ಚು ಗೀತೆಗಳನ್ನು ಅನೇಕ ಪ್ರಸಿದ್ದ ಸಂಗೀತ ನಿರ್ದೇಶಕರುಗಳ ಮಾರ್ಗದರ್ಶನದಲ್ಲಿ ಹಾಡಿದ್ದಾರೆ. 
  2. ಇವರು ಹಾಡಿದ ಕೆಲವು ಪ್ರಸಿದ್ದ ಸೋಲೋ ಆಲ್ಬಮ್ ಗಳು ಹೀಗಿವೆ: ಹರಿ ಕುಣಿದ, ಸಂಕೀರ್ತನ, ಸ್ತುತಿ ಗೀತಂಗಳ್ , ಶ್ರೀ ಮುಕಾಂಬಿಕಾದೇವಿ ಪುಷ್ಪಾಂಜಲಿ.
ಪ್ರತಿಷ್ಟಿತ ಕಾರ್ಯಕ್ರಮಗಳು: 

  • ಇವರು ಕುವೈತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಶ್ರೀಮತಿ.ಎಲ್.ಆರ್.ಈಶ್ವರಿ, ಪಿತುಕುಳಿ ಮುರುಗದಾಸ್ ರವರೊಂದಿಗೆ ಹಾಡಿದ್ದಾರೆ. 
  • ಮಲಯಾಳ ಚಿತ್ರರಂಗದ ಪ್ರಸಿದ್ದ ನಟರಾದ ಸುರೇಶ ಗೋಪಿ, ಸಂಯುಕ್ತ ವರ್ಮ, ಚಿಪ್ಪಿ, ಲಾಲು ಅಲೆಕ್ಸ್ ಮತ್ತು ವಿಂದುಜಾ ಮೆನನ್ ರವರೊಂದಿಗೆ ಭೂಮಿಕೆಯನ್ನು ಹಂಚಿಕೊಂಡಿದ್ದಾರೆ. 
  • ದೋಹಾ, ಕತಾರ್ ನ ಕನ್ನಡ ಸಂಘ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕತಾರ್ ನ ಭಾರತೀಯ ರಾಯಭಾರಿ ಕಚೇರಿಯ ಮುಖ್ಯಸ್ಥ ಶ್ರೀ.ರಂಜನ್ ಮಥಾಯ್ ರವರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅದೇ ರೀತಿ ಕತಾರ್ ನಲ್ಲಿ ಯ ತುಳು ಕೂಟದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ. 
  • ಬೆಹರೈನ್ ನಲ್ಲಿ ನಡೆದ ಕೀನ್ 4, ಕತಾರ್ ವಿಮಾನಯಾನ ಸಂಸ್ಥೆ ಮತ್ತು ಚಿನ್ಮಯ ಮಿಶನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 
  • ಕತಾರ್ ನ ದುಕಾನ್ ದೋಹಾ ನಲ್ಲಿ ನಡೆದ ಖ್ಯಾತ ಗಾಯಕ ಮೊಹಮ್ಮದ್ ರಫಿ ಯವರ ಸ್ಮರಣಾರ್ಥ ಏರ್ಪಡಿಸಿದ್ದ ಸಂಗೀತ ಸಂಜೆಯಲ್ಲಿ ಮೊಹಮ್ಮದ್ ರಫಿಯವರ ಹಳೆಯ ಹಿಂದಿ ಚಿತ್ರ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದ್ದಾರೆ. 
  • ಸಿಂಗಪೂರ್ ಮತ್ತು ಮಲೇಶಿಯ ಗಳಲ್ಲಿ ಭಕ್ತಿ ಗೀತೆ ಹಾಗೂ ಭಾವಗೀತೆಗಳ ಕಾರ್ಯಕ್ರಮವನ್ನು ನೀಡಿದ್ದಾರೆ. 
  • ಚಿತ್ರ ಜಗತ್ತಿನ ಖ್ಯಾತರಾದ ಜಯರಾಂ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ರಾಜನ್ ಮತ್ತು ನಾಗೇಂದ್ರ ಇವರೊಡನೆ ಅನೇಕ ಕಾರ್ಯಕ್ರಮಗಳಲ್ಲಿ ಭೂಮಿಕೆಯನ್ನು ಹಂಚಿಕೊಂಡಿದ್ದಾರೆ. 
  • ಮಲಬಾರ್ ಉತ್ಸವ, ಉಡುಪಿ ಉತ್ಸವ, ಕರಾವಳಿ ಉತ್ಸವ ಗಳ ಸಂದರ್ಭದಲ್ಲಿ ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ. 
  • ಮಲಯಾಳಮ್ ನ ಪ್ರಸಿದ್ದ ಗಾಯಕರುಗಳಾದ ಎಂ.ಜಿ.ಶ್ರೀಕುಮಾರ್, ವೇಣುಗೋಪಾಲ್, ಮಧು ಬಾಲಕೃಷ್ಣನ್, ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ ಮತ್ತಿತರರೊಂದಿಗೆ ಇವರು ಹಾಡಿದ್ದಾರೆ. 
ಪ್ರತಿಷ್ಟಿತ ಬಿರುದುಗಳು / ಗೌರವಗಳು:

  • ಕುವೈತ್ ನ ಯು.ಏನ್.ಕ್ಯಾಂಪ್ ರಿಗ್ಗೆ ಯವರು ಕ್ರಿಸ್ಮಸ್ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ "ಶ್ರೇಷ್ಠ ಗಾಯಕ" ಪ್ರಶಸ್ತಿಯನ್ನು ಪಡೆದಿದ್ದಾರೆ. 
  • ಕರ್ನಾಟಕದ ರಾಜ್ಯಪಾಲರ ಎದುರು ಕಾರ್ಯಕ್ರಮವನ್ನು ನೀಡಿ ಅವರಿಂದ ನೆನಪಿನ ಕಾಣಿಕೆ ಹಾಗೂ ಸನ್ಮಾನ ಪತ್ರವನ್ನು ಪಡೆದಿದ್ದಾರೆ. 
  • ಕತಾರ್ ನಲ್ಲಿ ನಡೆದ ಕನ್ನಡ ಸಂಘ ಮತ್ತು ತುಳು ಕೂಟದ ಕಾರ್ಯಕ್ರಮದಲ್ಲಿ "ಸಂಗೀತ ಯೋಗಿ" ಮತ್ತು "ಗಾನ ಸೌರಭ" ಎಂಬ ಪ್ರತಿಷ್ಟಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
  • ಕತಾರ್ ನ ದೋಹಾ ನಲ್ಲಿ 2008 ರಲ್ಲಿ ನಡೆದ 5ನೇ ವಿಶ್ವ ಕನ್ನಡ ಕೂಟದಲ್ಲಿ "ಗ್ಲೋಬಲ್ ಮ್ಯಾನ್" ಪ್ರಶಸ್ತಿಯನ್ನು ಪಡೆದಿದ್ದಾರೆ. 
  • ಅತಿ ಹೆಚ್ಚು ಕನ್ನಡ ಭಕ್ತಿ ಗೀತೆಗಳನ್ನು ಹಾಡಿದುದಕ್ಕೆ ಕರ್ನಾಟಕ ಸರ್ಕಾರ ನೀಡುವ ಶ್ರೇಷ "ಮಯುರೀ ಪ್ರಶಸ್ತಿ"  ಯನ್ನು ತಮ್ಮದಾಗಿಸಿಕೊಂಡಿದ್ದಾರೆ. 
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ಸಂಪರ್ಕದ ವಿವರಗಳು
ಗಾಯಕರ ಹೆಸರು  ಶ್ರೀ. ಅಜಯ್ ವಾರಿಯರ್
ವಿಳಾಸ ನಂ.156/ 19 , ಗುರು ಕೃಪಾ, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು-560 050. ಕರ್ನಾಟಕ.
ದೂರವಾಣಿ
 +91- 98452 29202
ಇ ಮೇಲ್
ಅಂತರ್ಜಾಲ http://www.ajaywarriar.com
ಆಲ್ಬಮ್ ಗಳು ಶ್ರೀ ಸಾಯಿ ಸುಗಂಧ, ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ ಮತ್ತು ಇನ್ನು ಹತ್ತು ಹಲವು ಆಲ್ಬಮ್ ಗಳು. 


ಕನ್ನಡ ಅನುವಾದ : ಶ್ರೀಕಂಠ ಶರ್ಮ


ಶಿರಡಿ ಸಾಯಿಬಾಬಾನ ದರ್ಶನ ಪಡೆದ ಹಿಂದಿ ನಟ ಸೋನು ಸೂದ್ - 28ನೇ ಅಕ್ಟೋಬರ್ 2010 - ಕೃಪೆ : ಸಾಯಿಅಮೃತಧಾರಾ.ಕಾಂ

ಉದಯೋನ್ಮುಖ ಹಿಂದಿ ಚಿತ್ರನಟ ಶ್ರೀ.ಸೋನು ಸೂದ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ದರ್ಶನ ಪಡೆದರು.

ಹಿಂದಿ ಚಿತ್ರನಟ ಸೋನು ಸೂದ್ ಸಾಯಿಬಾಬಾರವರ ವಿಗ್ರಹದ ಮುಂದೆ ಪ್ರಣಾಮವನ್ನು ಸಲ್ಲಿಸುತ್ತಿರುವ ದೃಶ್ಯ

ಕನ್ನಡ ಅನುವಾದ : ಶ್ರೀಕಂಠ ಶರ್ಮ

Wednesday, October 27, 2010

ಸಾಯಿ ಸಚ್ಚರಿತೆಯ ವಿಸ್ತೃತ ಗದ್ಯ ರೂಪ ಈಗ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯ - ಕೃಪೆ : ಸಾಯಿಅಮೃತಧಾರಾ.ಕಾಂ

ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ. ಹೇಮಾಡಪಂತರ ಮರಾಠಿ ಓವಿ ಶೈಲಿಯಲ್ಲಿ ರಚಿತವಾಗಿರುವ ಸಾಯಿ ಸಚ್ಚರಿತೆ ಈಗ ದಕ್ಷಿಣ ಭಾರತದ ೩ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಲಭ್ಯವಿದೆ. ಈ 3 ಅನುವಾದಗಳು ಕೂಡ ಓವಿ ಶೈಲಿಯ ಗದ್ಯ ರೂಪಾಂತಗಳಾಗಿವೆ. 

ಇದೇ ತಿಂಗಳ 20 ನೇ ಅಕ್ಟೋಬರ್ 2010 , ಬುಧವಾರದಂದು ಶ್ರೀಮತಿ.ಲಕ್ಷ್ಮೀ ರಮಣನ್ ರವರು ಅನುವಾದ ಮಾಡಿರುವ ತಮಿಳು ಸಾಯಿ ಸಚ್ಚರಿತೆಯನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀ.ಆರ್.ಶೇಷಾದ್ರಿಯವರು ಬಿಡುಗಡೆ ಮಾಡಿದರು. ಅನುವಾದದ ಸರಣಿಯಲ್ಲಿ ಇದು 3ನೇಯದು.  ಮೊದಲನೆಯ ಅನುವಾದವನ್ನು ಮಣಿಯಮ್ಮ ಅವರು ಹೇಮಾಡಪಂತರ ಮರಾಠಿ ಕೃತಿಯಂತೆ ಓವಿ ಶೈಲಿಯಲ್ಲಿ ರಚಿಸಿದರು. ಎರಡನೆಯ ಅನುವಾದವನ್ನು ತೆಲುಗಿನಿಂದ ಕನ್ನಡಕ್ಕೆ ಗದ್ಯ ಶೈಲಿಯಲ್ಲಿ ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯನವರು ರಚಿಸಿದರು. ಅದು 22ನೇ ಏಪ್ರಿಲ್ 2001 ರಲ್ಲಿ ಬಿಡುಗಡೆಯಾಯಿತು. ಇದರ  ಬಿಡುಗಡೆಯನ್ನು ಭಾರತೀಯ ವಿದ್ಯಾಭವನದ ಮುಖ್ಯಸ್ಥರಾದ ಡಾ.ಮತ್ತೂರು ಕೃಷ್ಣಮುರ್ತಿಯವರು ನೆರವೇರಿಸಿದರು. 3ನೇ ತಮಿಳು ಅನುವಾದವನ್ನು ಶ್ರೀಮತಿ ಲಕ್ಷ್ಮೀ ರಮಣನ್ ರವರು ಕನ್ನಡ ಗ್ರಂಥವನ್ನು ಆಧರಿಸಿ ಮಾಡಿರುತ್ತಾರೆ. 

ತಮಿಳು ಸಾಯಿ ಸಚ್ಚರಿತೆಯ ತರ್ಜುಮೆಯನ್ನು ಶ್ರೀಮತಿ.ಲಕ್ಷ್ಮೀ ರಮಣನ್ ರವರು ತಮ್ಮ 3 ಜನ ಸ್ನೇಹಿತೆಯರ ಸಹಾಯದಿಂದ ಮಾಡಿರುತ್ತಾರೆ. ಅವರನ್ನು ಲೇಖಕಿ ಪ್ರೀತಿಯಿಂದ 3 ಪವಿತ್ರ ನದಿಗಳಾದ "ಚಂದ್ರಭಾಗ, ಕಾವೇರಿ ಮತ್ತು ತೆಲುಗು ಗಂಗಾ" ಎಂದು ಕರೆಯುತ್ತಾರೆ. ಆ 3 ಜನ ಸ್ನೇಹಿತೆಯರು ಯಾರೆಂದರೆ ಶ್ರೀಮತಿ.ಸರಸ್ವತಿ ರಿಷಬದ್, ಶ್ರೀಮತಿ. ವೀಣಾ ಜಯತೀರ್ಥ ರಾವ್ ಮತ್ತು ಶ್ರೀಮತಿ.ಲಕ್ಷ್ಮೀ ಎಸ್.ಗಂಭೀರ. 

ಶ್ರೀಮತಿ .ಲಕ್ಷ್ಮೀ ರಮಣನ್ ರವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯಲ್ಲಿ 27 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರು ಆಂಗ್ಲ ಭಾಷೆಯಲ್ಲಿ "ಜಯ ಸಾಯಿ ಶಂಕರ" ಎಂಬ ಗ್ರಂಥವನ್ನು 2 ಭಾಗಗಳಲ್ಲಿ ರಚಿಸಿದ್ದು ಆ ಗ್ರಂಥದಲ್ಲಿ ತಾವು ಮತ್ತು ಇತರ ಭಕ್ತರುಗಳು ಹೇಗೆ ಕಂಚಿ ಮಹಾಸ್ವಾಮಿಗಳು ಮತ್ತು ಭಗವಾನ್ ಸತ್ಯ ಸಾಯಿಬಾಬಾರವರ ಸಮ್ಮುಖದಲ್ಲಿ ವಿಶೇಷ ಅನುಭವಗಳನ್ನು ಪಡೆದೆವು ಎಂಬ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಎರಡು ಪುಸ್ತಕಗಳ ಪ್ರತಿಗಳ ಮೇಲೆ ಭಗವಾನ್ ಸತ್ಯ ಸಾಯಿಬಾಬಾರವರು ತಮ್ಮ ಸ್ವಹಸ್ತದಿಂದ ಹಸ್ತಾಕ್ಷರಗಳನ್ನು ಹಾಕಿ ಆಶೀರ್ವಾದ ಮಾಡಿದ್ದಾರೆ. ಶ್ರೀಮತಿ.ಲಕ್ಷ್ಮೀ ರಮಣನ್ ರವರು ತಮಿಳಿನಲ್ಲಿ "ಸೌಂದರ್ಯ ಲಹರಿ" "ಲಲಿತ ಸಹಸ್ರನಾಮ" ಮತ್ತು "ಶ್ರೀಮದ್ ಭಾಗವತಂ" ಬಗ್ಗೆ ಅನೇಕ ಲೇಖನಗಳನ್ನು ಪ್ರಸಿದ್ದ ತಮಿಳು ಮಾಸಿಕವಾದ "ಜ್ಞಾನಭೂಮಿ" ಪತ್ರಿಕೆಯಲ್ಲಿ 3 ವರ್ಷಗಳಿಗೂ ಹೆಚ್ಚು ಕಾಲ ಬರೆದಿದ್ದಾರೆ. 

ಶ್ರೀಮತಿ.ಲಕ್ಷ್ಮೀ ರಮಣನ್ ರವರು ತಮಿಳು ಸಾಯಿ ಸಚ್ಚರಿತೆಯನ್ನು ಅನುವಾದ ಮಾಡಲು 30 ತಿಂಗಳುಗಳ ಕಾಲ ಶ್ರಮವನ್ನು ಪಟ್ಟಿರುತ್ತಾರೆ. ಇವರು ಮರಾಠಿ ಓವಿಯ ಲೇಖಕರಾದ ದಿವಂಗತ.ಹೇಮಾಡಪಂತರಿಗೆ, ತೆಲುಗು ಅನುವಾದ ಮಾಡಿರುವ ಮಣಿಯಮ್ಮನವರಿಗೆ, ಕನ್ನಡದ ಅನುವಾದ ಮಾಡಿರುವ ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯನವರಿಗೆ, ತಮ್ಮ 3 ಜನ ಸ್ನೇಹಿತರಿಗೆ ತಮ್ಮ ವಂದನೆಗಳನ್ನು ಸಲ್ಲಿಸುವುದನ್ನು ಮರೆಯುವುದಿಲ್ಲ. 

ಶ್ರೀ. ಆರ್ ಶೇಷಾದ್ರಿಯವರು ತಮಿಳು ಸಾಯಿಸಚ್ಚರಿತೆಯನ್ನು ಬಿಡುಗಡೆ ಮಾಡುತ್ತಿರುವ ದೃಶ್ಯ 

 ತಮಿಳಿನ ಶ್ರೀ ಸಾಯಿ ಸಚ್ಚರಿತಂ 

 ತಮಿಳು ಶ್ರೀ ಸಾಯಿ ಸಚ್ಚರಿತಂ ಲೇಖಕಿ ಶ್ರೀಮತಿ.ಲಕ್ಷ್ಮೀ ರಮಣನ್ 

ತಮಿಳು ಅನುವಾದಕ್ಕಾಗಿ ದುಡಿದ ನಾಲ್ವರು: ಎಡದಿಂದ ಬಲಕ್ಕೆ ನಿಂತವರು : ಶ್ರೀಮತಿ.ಲಕ್ಷ್ಮೀ ಎಸ್.ಗಂಭೀರ, ಶ್ರೀಮತಿ.ಲಕ್ಷ್ಮೀ ರಮಣನ್, ಶ್ರೀಮತಿ. ವೀಣಾ ಜಯತೀರ್ಥ ರಾವ್. ಕುಳಿತವರು: ಶ್ರೀಮತಿ.ಸರಸ್ವತಿ ರಿಷಬದ್

ಹೇಮಾಡಪಂತರೆಂದು ಸಾಯಿಬಾಬಾರವರಿಂದ ಕರೆಸಿಕೊಂಡ ಅಣ್ಣಾ ಸಾಹೇಬ್ ಸಾಯಿ ಸಚ್ಚರಿತೆಯನ್ನು ರಚಿಸಿದ ಲೇಖಕರು ಯಾರೆಂದು ಈ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ: ಗೋಧಿಯ ಹಿಟ್ಟನ್ನು ಬೀಸುತ್ತಾ ಮಸೀದಿಯಲ್ಲಿ ಕುಳಿತಿರುತ್ತಿದ್ದ ಫಕೀರನ ಜೀವನ ಚರಿತ್ರೆಯನ್ನು ಬರೆಯುವುದು ಹೇಗೆ ಎಂದು ಯೋಚಿಸುತ್ತಿರುವಾಗ "ನಿನ್ನ ಹೃದಯವನ್ನು ಪರಿಶುದ್ಧವಾಗಿ ಮಾಡಿ ನಿನ್ನ ಮನಸ್ಸಿನಲ್ಲಿರುವ ಎಲ್ಲಾ ಯೋಚನೆಗಳನ್ನು ತೆಗೆದು ಹಾಕು. ಆಗ ಆ ಪರಿಶುದ್ಧವಾದ ಸ್ಥಳದಲ್ಲಿ ನಾನೇ ಕುಳಿತು ಸ್ವತಃ ನಾನೇ ನನ್ನ ಜೀವನ ಚರಿತ್ರೆಯನ್ನು ಹೇಳುವೆ. ನೀನು ಅದನ್ನು ಬರೆಯುತ್ತಾ ಹೋಗು" ಎಂದು ಸಾಯಿಬಾಬಾರವರು ಹೇಮಾಡಪಂತರಿಗೆ ಹೇಳಿದರೆಂದು ಅವರೇ ಸ್ವತಃ ನಮಗೆ ತಿಳಿಸಿದ್ದಾರೆ.  

ಶಿರಡಿ ಸಾಯಿಬಾಬಾ ಸಂಸ್ಥಾನದವರು ಪ್ರಕಟಪಡಿಸಿರುವ ತೆಲುಗು ಸಾಯಿ ಸಚ್ಚರಿತೆಯ ಲೇಖಕಿಯಾದ ಮಣಿಯಮ್ಮರವರದು ಒಂದು ವಿಶೇಷ ವ್ಯಕ್ತಿತ್ವ. ಈ ನವ ಯುಗದ ರೀತಿ ನೀತಿಗಳು ಮತ್ತು ಕಟ್ಟುಪಾಡುಗಳಿಗೆ ಬಲಿಯಾಗದೆ ತಮ್ಮದೇ ಆದ ಲೋಕದಲ್ಲಿ ಸದಾ ವಿಹರಿಸುವ ಮಣಿಯಮ್ಮರವರು ಓಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿದ್ದಾರೆ. ಕೆಲವು ಕಾಲ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ತಮಗೆ ಒದಗಿ ಬಂದ ಇಂಗ್ಲೆಂಡ್ ನ ಉನ್ನತ ಶಿಕ್ಷಣದ ಅವಕಾಶವನ್ನು ತಿರಸ್ಕರಿಸಿದ್ದಾರೆ. ಇವರು ಹೇಗೆ ಸಾಯಿಬಾಬಾರವರಿಂದ ಸೆಳೆಯಲ್ಪಟ್ಟರು ಎಂಬುದರ ಬಗ್ಗೆ ನಮಗೆ ತಿಳಿದುಬಂದಿಲ್ಲ. ಇವರು ಏಕೆ ತಮ್ಮ ಬಗ್ಗೆ ಯಾವ ಮಾತನ್ನು ಆಡಲು ಇಚ್ಚಿಸುವುದಿಲ್ಲ ಎಂಬುದೇ ಒಂದು ಸೋಜಿಗದ ಸಂಗತಿಯಾಗಿ ಉಳಿದಿದೆ. ಅವರು ಮಾತನಾಡಿದರೂ ಕೂಡ ನಮಗೆ ಅದನ್ನು ಅರ್ಥೈಸುವುದು ಕಷ್ಟ ಸಾಧ್ಯ. 

ಇವರು ಆಂಧ್ರಪ್ರದೇಶದ ಹೈದರಾಬಾದ್ ನ ಕಿಶನ್ ಗಂಜ್ ನಲ್ಲಿ ಸಾಯಿ ಮಂದಿರವನ್ನು ಕಟ್ಟಿಸಿದ್ದಾರೆ. ಅದರ ಪಕ್ಕದಲ್ಲಿರುವ ಒಂದು ಸಣ್ಣ ಕೋಣೆಯಲ್ಲಿ ಇವರು ತಂಗಿದ್ದಾರೆ. ಇವರು ಈ ಸಾಯಿಮಂದಿರದ ಮೇಲ್ವಿಚಾರಣೆಯನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅತ್ಯಂತ ಸರಳವಾಗಿ ಉಡುಗೆ ತೊಡುಗೆಗಳನ್ನು ತೊಡುವ ಮತ್ತು ಅತ್ಯಂತ ಸರಳವಾಗಿರುವ ಇವರನ್ನು ಮಂದಿರಕ್ಕೆ ಬರುವ ಜನಗಳು ಖಂಡಿತ ಗುರುತು ಹಿಡಿಯುವುದಿಲ್ಲ. ಇವರಿಗೆ ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಮುಖರೆಲ್ಲರ ಪರಿಚಯವಿದ್ದರೂ ಕೂಡ ಇವರು ಶಿರಡಿಗೆ ಬಂದು ಹೋಗುವುದೇ ಯಾರಿಗೂ ತಿಳಿಯದಂತೆ ಎಚ್ಚರ ವಹಿಸುತ್ತಾರೆ. ಶಿರಡಿಗೆ ಹೋದಾಗ ಯಾವುದೋ ಒಂದು ಜಾಗದಲ್ಲಿ ಮಲಗುತ್ತಾ, ಸಾರ್ವಜನಿಕ ಶೌಚಾಲಯಗಳಲ್ಲಿ ಸ್ನಾನವನ್ನು ಮಾಡುತ್ತಾ, ಯಾರು ಏನು ನೀಡಿದರೆ ಅದನ್ನೇ ಪ್ರಸಾದವೆಂದು ತಿಂದುಕೊಂಡು ಮತ್ತು ಸಾರ್ವಜನಿಕ ಪ್ರಸಾದಾಲಯಗಳಲ್ಲಿ  ಊಟವನ್ನು ಮಾಡಿಕೊಂಡು ಕಾಲ ಕಳೆಯುತ್ತಾರೆ ಮತ್ತು ಎಲ್ಲರಂತೆ ಸಾಯಿಬಾಬಾರವರ ದರ್ಶನ ಮಾಡುತ್ತಾರೆ ಎಂಬುದೇ ಒಂದು ವಿಶೇಷ ಸಂಗತಿ. 

ಮಣಿಯಮ್ಮ ರಚಿಸಿರುವ ತೆಲುಗು ಸಾಯಿ ಸಚ್ಚರಿತ್ರ ವಿಸ್ತೃತ ರೂಪ ಪುಸ್ತಕದ ಒಂದು ನೋಟ 

ಮಣಿಯಮ್ಮ ರಚಿಸಿರುವ ಶ್ರೀ ಸಾಯಿ ಸಚ್ಚರಿತ ನಿತ್ಯ ಪಾರಾಯಣ ಗ್ರಂಥ 

ಕನ್ನಡದ ಶ್ರೀ.ಸಾಯಿ ಸಚ್ಚರಿತೆಯು ತೆಲುಗು ಅನುವಾದಕ್ಕಿಂತ ಮುಂಚೆಯೇ ಪ್ರಕಟಣೆಯಾಯಿತು. ಅದಕ್ಕೆ ಮಣಿಯಮ್ಮರವರ ಉದಾರತೆಯೇ ಕಾರಣ. 

ಸಾಯಿ ಲೀಲಾಮೃತ ಕೃತಿಯ ಲೇಖಕರಾದ ಪೂಜ್ಯ ಆಚಾರ್ಯ ಶ್ರೀ.ಎಕ್ಕಿರಾಲ ಭಾರದ್ವಾಜರವರು ಪ್ರಪಂಚದಾದ್ಯಂತ ನೆಲೆಸಿರುವ ತೆಲುಗು ಭಾಷೆಯ ಮನೆಗಳಲ್ಲಿ ಚಿರಪರಿಚಿತ ಹೆಸರು. ತೆಲುಗು ಭಾಂದವರಿಗೆ ಇವರಿಬ್ಬರು ಮಹಾನ್ ಸಂತರು ಬೇರೆ ಬೇರೆಯಲ್ಲ. ಇವರ ತೆಲುಗಿನ ಮಹೋನ್ನತ ಕೃತಿಯಾದ ಸಾಯಿಲೀಲಾಮೃತವನ್ನು ಪಾರಾಯಣ ಮಾಡಿದ ಮೇಲೆ ಶ್ರೀ ಸಾಲಿಗ್ರಾಮ ಸುಬ್ಬರಾಮಯ್ಯನವರು ಸಾಯಿಬಾಬಾರವರ ಅನನ್ಯ ಭಕ್ತರಾದರು. ಮಣಿಯಮ್ಮರವರು ಶ್ರೀ.ಸುಬ್ಬರಾಮಯ್ಯನವರಿಗೆ ತೆಲುಗಿನಿಂದ ಕನ್ನಡಕ್ಕೆ ತರ್ಜುಮೆ ಮಾಡುವಂತೆ ಪ್ರೇರೇಪಣೆ ಮಾಡಿದರು. ಅವರ ಇಚ್ಚೆಯಂತೆ ಕನ್ನಡಕ್ಕೆ ಅನುವಾದ ಮಾಡುವ ಕೆಲಸ ಶುರುವಾಯಿತು. ಇದೆಲ್ಲಾ ಆ ಶಿರಡಿ ಸಾಯಿಬಾಬಾರವರ ಲೀಲೆಯಲ್ಲದೆ ಮತ್ತೇನು? ಕನ್ನಡದ ಸಾಯಿ ಸಚ್ಚರಿತೆಯು 22ನೇ ಏಪ್ರಿಲ್ 2001 ರಲ್ಲಿ ಪ್ರಕಟಣೆಯಾಯಿತು. ಹೀಗೆ ಎಲ್ಲಾ 3 ಅನುವಾದಗಳಿಗೂ ಕಾರಣ ಎಲ್ಲಾ ಭಾಷೆಗಳನ್ನು, ಎಲ್ಲವನ್ನು ಬಲ್ಲ ಸರ್ವಾಂತರ್ಯಾಮಿ ಶಿರಡಿ ಸಾಯಿಬಾಬಾರವರು. 

ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯನವರು ಕನ್ನಡದಲ್ಲಿ ಇನ್ನು ಎರಡು ಮಹೋನ್ನತ ಕೃತಿಗಳನ್ನು ರಚಿಸಿದ್ದಾರೆ. ಅವು ಯಾವುವೆಂದರೆ 1. ಅಕ್ಕಲಕೋಟೆ ಮಹಾರಾಜ ಜೀವನ ಚರಿತ್ರೆ 2. ಸಾಯಿ ಸತ್ಯವ್ರತ ಚರಿತ್ರೆ


ಕನ್ನಡದ ಸಾಯಿ ಸಚ್ಚರಿತೆ

 ಕನ್ನಡ ಸಾಯಿ ಸಚ್ಚರಿತೆಯ ಲೇಖಕ ಪ್ರೊಫೆಸರ್ ಸಾಲಿಗ್ರಾಮ ಸುಬ್ಬರಾಮಯ್ಯ 

 ಕನ್ನಡ ಸಾಯಿ ಸಚ್ಚರಿತೆಯನ್ನು ಬಿಡುಗಡೆ ಮಾಡುತ್ತಿರುವ ಡಾ.ಮತ್ತೂರು ಕೃಷ್ಣಮುರ್ತಿ 

ಶಿರಡಿ ಸಾಯಿ ಸಚ್ಚರಿತೆಯ ಈ ಮಹೋನ್ನತ ಕೃತಿಗಳು ದೊರಕುವ ಸ್ಥಳವನ್ನು ಈ ಕೆಳಗೆ ಸಾಯಿಭಕ್ತರ ಅನುಕೂಲಕ್ಕಾಗಿ ಕೊಡಲಾಗಿದೆ. 

ಕನ್ನಡ ಸಾಯಿ ಸಚ್ಚರಿತೆ:

ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯ 
ನಂ.1724, ಪೂರ್ವಾಂತ್ಯ "ಎ" ಮುಖ್ಯ ರಸ್ತೆ 
9ನೇ ಬಡಾವಣೆ, ಜಯನಗರ
ಬೆಂಗಳೂರು -560 069.
ದೂರವಾಣಿ : 080-2663 4211

ತಮಿಳು ಸಾಯಿ ಸಚ್ಚರಿತೆ: 
ಶ್ರೀಮತಿ.ಲಕ್ಷ್ಮೀ ರಮಣನ್
2223,  4ನೇ ಮುಖ್ಯ ರಸ್ತೆ, 24ನೇ ಅಡ್ಡ ರಸ್ತೆ
ಬನಶಂಕರಿ 2ನೇ ಹಂತ 
ಬೆಂಗಳೂರು- 560070.
ದೂರವಾಣಿ : 080-26716722 / 94487 63222
ಈ ಮೇಲ್ : ramanan44@yahoo.com

ತೆಲುಗು:
ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ)
ಪೋಸ್ಟ್ : ಶಿರಡಿ, ತಾಲ್ಲೂಕ್ : ರಹತಾ, ಜಿಲ್ಲೆ: ಅಹಮದ್ ನಗರ,
ಮಹಾರಾಷ್ಟ್ರ 
ದೂರವಾಣಿ :+ 91-2423-258500
ಫಾಕ್ಸ್ : ಆಫೀಸ್ : 91-2423-258870 ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಆಫೀಸ್: 91-2423- 258770.
ಈ ಮೇಲ್ : saibaba@sai.org.in, saibaba@shrisaibabasansthan.org
ವೆಬ್ ಸೈಟ್ : www.shrisaibabasansthan.org

ಕನ್ನಡ ಮತ್ತು ತಮಿಳು ಸಾಯಿ ಸಚ್ಚರಿತೆ ಪುಸ್ತಕಗಳಿಗಾಗಿ ಸಾಯಿಭಕ್ತರು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರವನ್ನು ಸಂಪರ್ಕಿಸಬಹುದು. ಆಲ್ಲದೇ, 3 ಭಾಷೆಯ ಸಾಯಿ ಸಚ್ಚರಿತೆ ಪುಸ್ತಕಗಳು ಶಿರಡಿಯ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿ ಮತ್ತು ಬೆಂಗಳೂರಿನ ಪ್ರಸಿದ್ದ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. 

ಕನ್ನಡ ಸಾಯಿಸಚ್ಚರಿತೆಯ ಪುಸ್ತಕದ ಮುಖಬೆಲೆಯು 225 ರುಪಾಯಿಗಳು, ತಮಿಳು ಸಾಯಿ ಸಚ್ಚರಿತೆಯ ಪುಸ್ತಕದ ಮುಖಬೆಲೆಯು ೧೫೦ ರುಪಾಯಿಗಳು ಮತ್ತು ತೆಲುಗು ಸಾಯಿಸಚ್ಚರಿತೆಯ ಪುಸ್ತಕದ ಮುಖಬೆಲೆಯು 108 ರುಪಾಯಿಗಳಾಗಿರುತ್ತದೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ 

Sunday, October 24, 2010

ಶಿರಡಿ ಸಾಯಿಬಾಬಾ ದರ್ಶನ ಪಡೆದ ಹಿಂದಿ ಚಿತ್ರ ನಟ ಅಫ್ತಾಬ್ ಶಿವದಾಸಾನಿ  - 25 ನೇ ಅಕ್ಟೋಬರ್ 2010   ಕೃಪೆ : ಸಾಯಿಅಮೃತಧಾರಾ.ಕಾಂ 

ಹಿಂದಿ ಚಿತ್ರರಂಗದ ಖ್ಯಾತ ನಟ ಶ್ರೀ.ಅಫ್ತಾಬ್ ಶಿವದಾಸಾನಿಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ದರ್ಶನ ಪಡೆದರು. ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ನಂತರ ಅಫ್ತಾಬ್ ಶಿವದಾಸಾನಿಯವರನ್ನು ಸನ್ಮಾನಿಸಿದರು. 

ಸಾಯಿಬಾಬಾರವರ ದರ್ಶನ ಪಡೆಯುತ್ತಿರುವ ಚಿತ್ರನಟ ಶ್ರೀ.ಅಫ್ತಾಬ್ ಶಿವದಾಸಾನಿ

ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ ಅಫ್ತಾಬ್ ಶಿವದಾಸಾನಿಯವರನ್ನು ಸನ್ಮಾನಿಸುತ್ತಿರುವ ದೃಶ್ಯ 

ಕನ್ನಡ ಅನುವಾದ : ಶ್ರೀಕಂಠ ಶರ್ಮ

ಚಿತ್ತೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕುಮಾರ ರಸ್ತೆ, ಚಿತ್ತೂರು - ಕೃಪೆ : ಸಾಯಿಅಮೃತಧಾರಾ.ಕಾಂ 

ಈ ಮಂದಿರವು ಚಿತ್ತೂರಿನ ಎಂ.ಎಸ್.ಆರ್ ಚಿತ್ರಮಂದಿರದ ಬಳಿ ಇದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.


ದೇವಾಲಯದ ವಿಶೇಷತೆಗಳು:
  • ಈ ಮಂದಿರದ ಭೂಮಿಪೂಜೆಯನ್ನು 15ನೇ ಸೆಪ್ಟೆಂಬರ್ 1997 ರಂದು ನೆರವೇರಿಸಲಾಯಿತು. 
  • ಈ ಮಂದಿರವನ್ನು ಕಂಚಿ ಮಠದ ಅಂದಿನ ಸ್ವಾಮಿಗಳು 3ನೇ ಮೇ 1999 ರಂದು ನೆರವೇರಿಸಿದರು. 
  • ಈ ಮಂದಿರದಲ್ಲಿ ಸಾಯಿಬಾಬಾನ ಸುಂದರ ಅಮೃತ ಶಿಲೆಯ ವಿಗ್ರಹವಿದೆ. 
  • ಸಾಯಿಬಾಬಾ ಮಂದಿರದ ಹಿಂಭಾಗದ ಜಾಗದಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವಿದೆ. 
  • ಪವಿತ್ರ ಧುನಿಯನ್ನು ದೇವಾಲಯದ ಆವರಣದ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ. 
  • ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಸುಂದರವಾದ ಬೆಳ್ಳಿಯ ಮತ್ತು ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
 ದೇವಾಲಯದ ರಾಜಗೋಪುರ 
ಸಾಯಿಬಾಬಾರವರ ಸುಂದರ ವಿಗ್ರಹ

ಪವಿತ್ರ ಧುನಿ ಮಾ

ಬೆಳ್ಳಿಯ ಪಾದುಕೆಗಳು

ದೇವಾಲಯದ ಹೊರನೋಟ

ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ 
ಆರತಿ
ಸಮಯ
ಕಾಕಡ ಆರತಿ 5:30am
ಮಧ್ಯಾನ್ಹ ಆರತಿ 12:00pm
ಧೂಪಾರತಿ 6.00pm
ಶೇಜಾರತಿ 9:00pm


ವಿಶೇಷ ಕಾರ್ಯಕ್ರಮಗಳು:

  1. ದೇವಾಲಯದ ಅಮೃತ ಶಿಲೆಯ ವಿಗ್ರಹಕ್ಕೆ ಸಾಯಿಭಕ್ತರಿಂದ ಅಭಿಷೇಕ ಪ್ರತಿದಿನ ಬೆಳಗ್ಗೆ 6:00 ಘಂಟೆಗೆ. ಸೇವಾಶುಲ್ಕ 400/- ರೂಪಾಯಿಗಳು. 
  2. ಲಕ್ಷ್ಮೀ ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 30/- ರುಪಾಯಿಗಳ ಸೇವಾಶುಲ್ಕ ಕೊಟ್ಟು ಸೇವೆ ಮಾಡಿಸಬಹುದು.   
  3. ಗಣಪತಿ ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 30/- ರುಪಾಯಿಗಳ ಸೇವಾಶುಲ್ಕ ಕೊಟ್ಟು ಸೇವೆ ಮಾಡಿಸಬಹುದು.
  4.  ಸತ್ಯನಾರಾಯಣ ಪೂಜೆಯನ್ನು ಪ್ರತಿ ತಿಂಗಳ ಹುಣ್ಣಿಮೆಯಂದು ಏರ್ಪಡಿಸಲಾಗಿದೆ. ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು 250/- ರುಪಾಯಿಗಳ ಸೇವಾಶುಲ್ಕವನ್ನು ಕೊಟ್ಟು ಸೇವೆಯಲ್ಲಿ ಭಾಗವಹಿಸಬಹುದು. 
ವಿಶೇಷ ಉತ್ಸವದ ದಿನಗಳು: 

  1. ಶ್ರೀರಾಮನವಮಿ 
  2. ಗುರುಪೂರ್ಣಿಮೆ 
  3. ದತ್ತ ಜಯಂತಿ 
  4. ವಿಜಯದಶಮಿ 
  5. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 3ನೇ ಮೇ

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ : 

ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಕುಮಾರ ರಸ್ತೆ, ಚಿತ್ತೂರು-517 001.
ಆಂಧ್ರ ಪ್ರದೇಶ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಎನ್.ಸುರೇಶ ಬಾಬು / ಜಿ.ತುಳಸಿರಾಮ್ / ಪಿ. ಬಾಬು

ದೂರವಾಣಿ ಸಂಖ್ಯೆಗಳು:

098493 13434 / 099086 33232 / 094401 41999

ಮಾರ್ಗಸೂಚಿ: 

ಹಳೆ ಬಸ್ ನಿಲ್ದಾಣದ ಬಳಿ ಇಳಿಯುವುದು. ಈ ದೇವಾಲಯವು ಎಂ.ಎಸ್.ಆರ್.ಚಿತ್ರಮಂದಿರದ ಬಳಿ ಇದೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ

Saturday, October 23, 2010

ಸಾಯಿ ಮಹಾಭಕ್ತ - ಅಬ್ದುಲ್ ಬಾಬಾ (1871 - 1954) - ಕೃಪೆ : ಸಾಯಿಅಮೃತಧಾರಾ.ಕಾಂ

ಅಬ್ದುಲ್ ಬಾಬಾ 

ಸಾಯಿಬಾಬಾರವರ ಬಳಿಗೆ ಬಂದ ಮುಸ್ಲಿಂ ಭಕ್ತರಲ್ಲಿ ಅತಿ ಹೆಚ್ಚು ಮಾಹಿತಿ ಇರುವ ಮತ್ತು ಸಾಯಿಭಕ್ತರಿಗೆ ಅತ್ಯಂತ ಪ್ರೀತಿಪಾತ್ರರಾದ ಸಾಯಿಮಹಾಭಕ್ತ ಅಬ್ದುಲ್ ಬಾಬಾರವರು. ಅಬ್ದುಲ್ ರವರು 30 ವರ್ಷಗಳ ಕಾಲ ಸಾಯಿಬಾಬಾರವರೊಂದಿಗೆ ಸದಾಕಾಲ ಜೊತೆಯಾಗಿದ್ದರು. ಆಲ್ಲದೇ, ಸಾಯಿಬಾಬಾರವರ ಮಹಾಸಮಾಧಿಯಾದ ನಂತರ 36 ವರ್ಷಗಳ ಕಾಲ ಸಾಯಿಬಾಬಾರವರು ಅವರಿಗೆ ನೀಡಿದ ಮಾರ್ಗದರ್ಶನದಂತೆ ನಡೆಯುತ್ತಾ ಸಾಯಿಭಕ್ತರು ನೀಡುವ ದಕ್ಷಿಣೆಯನ್ನು ಸ್ವೀಕರಿಸುತ್ತಾ ಜೀವನ ಸಾಗಿಸುತ್ತಿದ್ದರು.

ಅಬ್ದುಲ್ ರವರು 1871 ರಲ್ಲಿ ಜನಿಸಿದರು ಮತ್ತು ಏಪ್ರಿಲ್ 1954 ರಲ್ಲಿ ಸಮಾಧಿ ಹೊಂದಿದರು. ಇವರು ತಪತಿ ನದಿಯ ದಡದಲ್ಲಿರುವ ನಂದೇಡ್ ಗ್ರಾಮದ ನಿವಾಸಿಯಾಗಿದ್ದರು. ಇವರು ಸಣ್ಣ ವಯಸ್ಸಿನವರಾಗಿದ್ದಾಗ ಇವರು ಒಬ್ಬ ಮುಸ್ಲಿಂ ಫಕೀರ್ ಅಮಿರುದ್ದೀನ್ ಎಂಬುವರ ಆಶ್ರಯದಲ್ಲಿದ್ದರು. ಸಾಯಿಬಾಬಾರವರು ಆ ಫಕೀರ್ ನ ಕನಸಿನಲ್ಲಿ ಬಂದು ಅವರಿಗೆ ಎರಡು ಮಾವಿನ ಹಣ್ಣುಗಳನ್ನು ನೀಡಿ ಅದನ್ನು ಅಬ್ದುಲ್ ನಿಗೆ ನೀಡಿ ಅವನನ್ನು ಶಿರಡಿಗೆ ತಮ್ಮ ಬಳಿ ಕಳಿಸುವಂತೆ ಆದೇಶ ನೀಡಿದರೆಂದು ತಿಳಿದುಬಂದಿದೆ. ಸಾಯಿಯವರ ಆದೇಶದಂತೆ ಫಕೀರನು ಅಬ್ದುಲ್ ಗೆ ಮಾವಿನ ಹಣ್ಣುಗಳನ್ನು ನೀಡಿ ಸಾಯಿಯವರ ಬಳಿಗೆ ಹೋಗುವಂತೆ ಆದೇಶಿಸಿದನು. ಅದರಂತೆ ಅಬ್ದುಲ್ ತಮ್ಮ 20 ನೇ ವಯಸ್ಸಿನಲ್ಲಿ ಅಂದರೆ ಸುಮಾರು 1890 ರಲ್ಲಿ ಸಾಯಿಬಾಬಾರವರ ಬಳಿಗೆ ಬಂದರು. ಆ ಸಮಯದಲ್ಲಿ ನಾನಾ ಸಾಹೇಬ್ ಚಂದೋರ್ಕರ್ ಕೂಡ ಇನ್ನು ಬಾಬಾರವರ ಬಳಿಗೆ ಬಂದಿರಲಿಲ್ಲ. ಸಾಯಿಯವರು ಅಬ್ದುಲ್ ರವರನ್ನು ಉದ್ದೇಶಿಸಿ "ಮೇರಾ ಕಬ್ಲಾ ಆಲಾ" ಅಂದರೆ "ನನ್ನ ಕಾಗೆ" ನನ್ನ ಬಳಿ ಬಂದಿತು ಎಂದು ಸ್ವಾಗತ ನೀಡಿದರು. ಬಾಬಾರವರು ಅಬ್ದುಲ್ ರವರನ್ನು ಅವರ ಜೀವಮಾನ ಪೂರ್ತಿ ತಮ್ಮ ಸೇವೆ ಮಾಡಿಕೊಂಡು ಇರುವಂತೆ ಆದೇಶಿಸಿದರು. ಅಬ್ದುಲ್ ರವರ ಪ್ರಮುಖ ಕೆಲಸವೆಂದರೆ ಲೇಂಡಿ ಉದ್ಯಾನವನ, ದ್ವಾರಕಾಮಾಯಿ ಮತ್ತು ಚಾವಡಿಯಲ್ಲಿದ್ದ ದೀಪಗಳಿಗೆ ಎಣ್ಣೆಯನ್ನು ಹಾಕಿ ಅವುಗಳನ್ನು ನಿರಂತರವಾಗಿ ಆರದೇ ಉರಿಯುವಂತೆ ನೋಡಿಕೊಳ್ಳುವುದು.

ಇನ್ನು ಆಹಾರದ ವಿಷಯ ಬಂದಾಗ, ಸಾಯಿಬಾಬಾರವರು ಮೊದಲು ಅಬ್ದುಲ್ ನಿಗೆ ಆಹಾರವನ್ನು ನೀಡುತ್ತಿರಲಿಲ್ಲ. ಸಾಯಿಬಾಬಾರವರು ಮತ್ತು ಅಬ್ದುಲ್ ಬಾಬಾ ರವರು ಬೇರೆ ಬೇರೆಯಾಗಿ ಭಿಕ್ಷೆಗೆ ಹೋಗುತ್ತಿದ್ದರು. ದ್ವಾರಕಾಮಾಯಿಯ ಬಳಿಯಿದ್ದ ಒಂದು ಕುದುರೆಯ ಲಾಯದಲ್ಲಿ ಅಬ್ದುಲ್ ವಾಸ ಮಾಡುತ್ತಿದ್ದರು. ಇವರು ಸದಾಕಾಲ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಇವರು ಸಾಯಿಬಾಬಾರವರ ಬಳಿ ಕುಳಿತು ಪ್ರತಿನಿತ್ಯ ಖುರಾನ್ ಗ್ರಂಥವನ್ನು ಪಾರಾಯಣ ಮಾಡುತ್ತಿದ್ದರು. ಕೆಲವೊಮ್ಮೆ ಬಾಬಾರವರು ಖುರಾನ್ ಗ್ರಂಥದ ಯಾವುದೋ ಭಾಗವನ್ನು ತೆಗೆದು ಕೊಟ್ಟು ಅಬ್ದುಲ್ ಬಾಬಾನಿಗೆ ಓದಲು ಹೇಳುತ್ತಿದ್ದರು. ಆಲ್ಲದೇ, ಖುರಾನ್ ನಲ್ಲಿದ್ದ ಕೆಲವು ವಿಷಯಗಳನ್ನು ಕೂಡ ಬಾಬಾರವರು ಹೇಳುತ್ತಿದ್ದರೆಂದು ತಿಳಿದುಬಂದಿದೆ. ಸಾಯಿಬಾಬಾರವರು ಹೀಗೆ ಹೇಳುತ್ತಿದ್ದಾಗ ಅಬ್ದುಲ್ ಬಾಬಾರವರು ಒಂದು ನೋಟ್ ಪುಸ್ತಕದಲ್ಲಿ ಬಾಬಾ ಹೇಳಿದ್ದನ್ನೆಲ್ಲ ಬರೆದುಕೊಳ್ಳುತ್ತಿದ್ದರು. ಈ ಪುಸ್ತಕದಲ್ಲಿನ ಲಿಪಿಯು ಮರಾಠಿ ಮತ್ತು ಮೋಡಿ ಬರಹಗಳಾಗಿದ್ದವು ಮತ್ತು ಅದರಲ್ಲಿ ಸಾಯಿಬಾಬಾರವರು ಹೇಳಿದ ಎಲ್ಲಾ ವಿಷಯಗಳು ಅಬ್ದುಲ್ ರಿಂದ ಬರೆಯಲ್ಪಡುತ್ತಿದ್ದವು. ಅಬ್ದುಲ್ ರವರಿಗೆ ಆ ಪುಸ್ತಕವೇ ಖುರಾನ್ ಗ್ರಂಥವಾಗಿ ಅದರಲ್ಲಿ ಸಾಯಿಯವರ ಬಾಯಿಯಿಂದ ಬಂದ ಎಲ್ಲಾ ನುಡಿ ಮುತ್ತುಗಳನ್ನು ಬಹಳ ಜೋಪಾನವಾಗಿ ಅಬ್ದುಲ್ ಬಾಬಾರವರು ಶೇಖರಿಸಿ ಇಟ್ಟಿದ್ದಾರೆ.

ಅಬ್ದುಲ್ ರವರು ಮೊದಲಿನಿಂದ ಕೊನೆಯವರೆಗೂ ಸಾಯಿಬಾಬಾರವರ ಜೊತೆ ಇದ್ದು ಸಾಯಿಬಾಬಾರವರು ಹೇಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಮಸೀದಿಯ ಕಸವನ್ನು ಕೂಡ ಅಬ್ದುಲ್ ಗುಡಿಸುತ್ತಿದ್ದರು. ಸಾಯಿಬಾಬಾರವರ ಸಮಾಧಿಯಾದ ಬಳಿಕ ಅಬ್ದುಲ್ ಬಾಬಾರವರು ಸಂಸ್ಥಾನದ ಆಡಳಿತ ಮಂಡಳಿಯಲ್ಲಿದ್ದ ಏಕೈಕ ಮುಸ್ಲಿಂ ಆಗಿದ್ದರು. ಬಾಬಾರವರ ಸಮಾಧಿಗೆ ಬಟ್ಟೆಯನ್ನು ಹೊದಿಸುವುದು, ಹೂವುಗಳಿಂದ ಅಲಂಕಾರ ಮಾಡುವುದು ಮತ್ತು ತಮ್ಮ ಉದರ ಪೋಷಣೆಗಾಗಿ ದಿನದ ಮೊದಲ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸುವುದು ಇವರ ವಾಡಿಕೆಯಾಗಿತ್ತು. ಇವರ ಬಳಿ ತೊಂದರೆ ಹೇಳಿಕೊಂಡು ಬರುತ್ತಿದ್ದ ಭಕ್ತರಿಗೆ ಸಾಯಿಬಾಬಾರವರ ಉಲ್ಲೇಖವಿದ್ದ ನೋಟ್ ಪುಸ್ತಕವನ್ನು ತೆಗೆದು ಅಲ್ಲಿ ಬಂದ ಹಾಳೆಯಲಿದ್ದ ವಾಕ್ಯಗಳನ್ನು ಪರಿಶೀಲಿಸಿ ಉತ್ತರ ನೀಡುತ್ತಿದ್ದರು ಮತ್ತು ಅವರ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಇದು ಅಬ್ದುಲ್ ರವರಿಗೆ ಸಾಯಿಬಾಬಾರವರು ನೀಡಿದ ಬಳುವಳಿ ಎಂದೇ ಹೇಳಬೇಕು. ಅದರ ಎರಡು ಉದಾಹರಣೆಗಳು ಈ ಕೆಳಕಂಡಂತೆ ಇವೆ:

ಸಾಯಿಬಾಬಾರವರು ಮಹಾಸಮಾಧಿಯಾದ ಕೆಲವು ದಿನಗಳ ನಂತರ ನಡೆದ ಘಟನೆ. ಸಾಯಿ ಮಂದಿರದಲ್ಲಿ ಒಂದು ಬಾವಿಯನ್ನು ತೆರೆಯಲಾಗಿತ್ತು. ಅದರ ನೀರು ಸಿಹಿಯಾಗಿರದೆ ಉಪ್ಪು ನೀರು ಬರುತ್ತಿತ್ತು. ಆಗ ಅಬ್ದುಲ್ ತಮ್ಮ ಬಳಿಯಿದ್ದ ನೋಟ್ ಪುಸ್ತಕವನ್ನು ನೋಡಿ ಬಾವಿಯನ್ನು ಇನ್ನು ಸ್ವಲ್ಪ ಅಡಿಗಳಷ್ಟು ಅಗೆದರೆ ಸಿಹಿ ನೀರು ದೊರಕುವುದೆಂದು ನುಡಿದರು. ಅದರಂತೆ 2 ಅಡಿಗಳಷ್ಟು ಬಾವಿಯನ್ನು ಅಗೆಯಲಾಯಿತು. ಆಗ ಬಾವಿಯಲ್ಲಿನ ನೀರು ಸಿಹಿಯಾಯಿತು.

ಇನ್ನೊಮ್ಮೆ, ಗಾಡ್ಗಿಲ್ ಎಂಬ ಬ್ಯಾರಿಸ್ಟರ್ ತಮ್ಮ ಮಗನು ಇಂಗ್ಲೆಂಡ್ ನಿಂದ ವಾಪಸ್ ಬಂದು ಭಾರತದಲ್ಲಿ ನೆಲೆಸುವನೇ ಎಂದು ಅಬ್ದುಲ್ ರನ್ನು ಪ್ರಶ್ನಿಸಲು ಅಬ್ದುಲ್ ನೋಟ್ ಪುಸ್ತಕ ಪರಿಶೀಲಿಸಿ ಅವರ ಮಗನು ವಾಪಸ್ ಬಂದು ಭಾರತದಲ್ಲಿ ನೆಲೆಸುವನೆಂದು ಭವಿಷ್ಯ ನುಡಿದರು. ಅಬ್ದುಲ್ ರವರು ನುಡಿದಂತೆ ಬ್ಯಾರಿಸ್ಟರ್ ರವರ ಮಗನು ತನ್ನ ಆಂಗ್ಲ ಹೆಂಡತಿ ಮತ್ತು ಮಕ್ಕಳೊಂದಿಗೆ ಭಾರತದಲ್ಲಿ ಬಂದು ನೆಲೆಸಿದನು. ಅಬ್ದುಲ್ ರವರು ಈ ನೋಟ್ ಪುಸ್ತಕವನ್ನು ತಮ್ಮ ಖುರಾನ್ ಎಂದು ಪರಿಗಣಿಸಿದ್ದರು ಮತ್ತು ಅದನ್ನು ಸದಾಕಾಲ ಪಠಣ ಮಾಡುತ್ತಿದ್ದರು. ಹೀಗೆ ಪಠಣ ಮಾಡುವಾಗ ಪವಿತ್ರ ಜಪಮಾಲೆಯಲ್ಲಿದ್ದ ಮಣಿಗಳನ್ನು ತಮ್ಮ ಬೆರಳುಗಳಿಂದ ಸವರುತ್ತ ಪಠಣ ಮಾಡುತ್ತಿದ್ದರು.

ಶಿರಡಿಯ ಲೇಂಡಿ ಉದ್ಯಾನವನದಲ್ಲಿರುವ ನಂದಾ ದೀಪವನ್ನು ಈಗ 4 ಕಡೆಗಳೂ ಸ್ಥಂಭಗಳನ್ನು ನಿರ್ಮಿಸಿ ಹೊರಗಿನಿಂದ ಮುಚ್ಚಲಾಗಿದೆ. ಆದರೆ 1936 ರಲ್ಲಿ ಅಬ್ದುಲ್ ಬಾಬಾರವರು ನೋಡಿಕೊಳ್ಳುತ್ತಿದ್ದಾಗ ಈ ಜಾಗವು ಒಂದು ಹಳ್ಳವಿತ್ತು. ಅದನ್ನು ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸಲು 4 ಕಡೆಗಳಲ್ಲಿ 20 ಬಟ್ಟೆಯ ತುಂಡುಗಳಿಂದ ಮತ್ತು ತಗಡಿನ ಹೊದಿಕೆಯನ್ನು ಮೇಲ್ಚಾವಣಿಯಂತೆ ಮಾಡಿ ಮುಚ್ಚಲಾಗಿತ್ತು. ಸಾಯಿಬಾಬಾರವರು ನಂದಾದೀಪದ ಹಿಂಭಾಗ ಕುಳಿತುಕೊಂಡು ಅಬ್ದುಲ್ ಬಾಬಾರವರಿಗೆ 2 ಮಡಿಕೆಗಳಲ್ಲಿ ನೀರನ್ನು ತುಂಬಿ ತಮ್ಮ ಬಳಿ ಇಡುವಂತೆ ಆಜ್ಞಾಪಿಸುತ್ತಿದ್ದರು. ಅಬ್ದುಲ್ ಸಾಯಿಯವರ ಆಜ್ಞೆಯಂತೆ ನೀರನ್ನು ತಂದಿಡಲು ಬಾಬಾರವರು ಆ ನೀರನ್ನು 4 ದಿಕ್ಕುಗಳಿಗೆ ಚೆಲ್ಲುತ್ತಿದ್ದರು. ಬಾಬಾರವರು ಏಕೆ ಹಾಗೆ ಮಾಡುತ್ತಿದ್ದರು ಅದು ಯಾರಿಗೂ ತಿಳಿದಿಲ್ಲ. ಸ್ವತಃ ಅಬ್ದುಲ್ ಬಾಬಾರವರಿಗೂ ಕೂಡ ಬಾಬಾ ಏಕೆ ಹಾಗೆ ಮಾಡುತ್ತಿದ್ದರು ಎಂದು ತಿಳಿಯುತ್ತಿರಲಿಲ್ಲ. ಆ ಸಮಯದಲ್ಲಿ ಲೇಂಡಿಯಲ್ಲಿ ಅಬ್ದುಲ್ ಮತ್ತು ಬಾಬಾರವರನ್ನು ಬಿಟ್ಟರೆ ಬೇರೆ ಯಾರೂ ಇರುತ್ತಿರಲಿಲ್ಲ. ಆಲ್ಲದೇ ಬಾಬಾರವರ ಸಮ್ಮುಖದಲ್ಲಿ ಅಬ್ದುಲ್ ಬಿಟ್ಟರೆ ಬೇರೆ ಯಾವ ಮುಸ್ಲಿಂ ಬಾಂಧವರೂ ಕೂಡ ಖುರಾನ್ ಪಠಣ ಮಾಡುತ್ತಿರಲಿಲ್ಲ. ಬಾಬಾರವರು ಕೆಲವು ಬಾರಿ ಪವಿತ್ರ ಶಬ್ದಗಳನ್ನು ಉಚ್ಚರಿಸುತ್ತಿದ್ದರು. ಆ ಎಲ್ಲಾ ಶಬ್ದಗಳನ್ನು ಕೂಡ ಅಬ್ದುಲ್ ಬಾಬಾ ತಮ್ಮ ನೋಟ್ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಬಾಬಾರವರು ಯಾವುದೇ ವಿಷಯವನ್ನು ಹೇಳಲಿ ಅದನ್ನು ಅಬ್ದುಲ್ ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಅಬ್ದುಲ್ ಬಾಬಾರವರು 1954 ಇಸವಿ ಏಪ್ರಿಲ್ ತಿಂಗಳಿನಲ್ಲಿ ಸಮಾಧಿ ಹೊಂದಿದರು. ಅಲ್ಲಿಯವರೆಗೆ ಅವರು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಸೇವೆಯನ್ನು ಅವಿರತವಾಗಿ ಸೇವೆಯನ್ನು ಸಲ್ಲಿಸಿದರು. ಅನೇಕ ಜನರ ಖಾಯಿಲೆಗಳಿಗೆ ಬಾಬಾರವರ ಉಧಿಯನ್ನು ನೀಡಿ ಗುಣಪಡಿಸುತ್ತಿದ್ದರು. ಸರಿ ಸುಮಾರು 66 ವರ್ಷಗಳ ಕಾಲ ಸಾಯಿಬಾಬಾರವರಿಗೆ ಅಂಗರಕ್ಷಕನಂತೆ ಅಥವಾ ಬಾಬಾರವರ ಸಮಾಧಿಯಾದ ಬಳಿಕ ಅವರ ಸಮಾಧಿಯನ್ನು ನೋಡಿಕೊಳ್ಳುವ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದರಿಂದ ಅಬ್ದುಲ್ ರವರನ್ನು "ಸಾಯಿಬಾಬಾರವರ ಹನುಮಂತ" ಎಂದು ಅನೇಕ ಸಾಯಿಭಕ್ತರು ವಿಶ್ಲೇಷಿಸಿದ್ದಾರೆ. ಅಬ್ದುಲ್ ರವರು ಸದಾಕಾಲ ತಮ್ಮ ಗುರುವಿನ ಸೇವೆಯನ್ನು ಯಾವುದೇ ಪ್ರತಿಫಲ ಅಪೇಕ್ಷಿಸದೆ ಕೇವಲ ಅನನ್ಯ ಭಕ್ತಿಯಿಂದ ಮಾಡುತ್ತಿದ್ದುದು ಒಂದು ವಿಶೇಷವೇ ಸರಿ. ಇವರು ಗುರುವಿನಲ್ಲಿ ನಮಗೆ ಇರಬೇಕಾದ ನಿಷ್ಠೆ ಮತ್ತು ಶ್ರದ್ಧೆಗೆ ಮಹೋನ್ನತ ನಿದರ್ಶನವಾಗಿದ್ದಾರೆ. ಇವರು ಸಾಯಿಬಾಬಾರವರಲ್ಲಿ ಅತ್ಯಂತ ಹೆಚ್ಚಿನ ಶ್ರದ್ಧೆ ಮತ್ತು ಸಬೂರಿಯನ್ನು ಹೊಂದಿದ್ದರು. ಸಾಯಿಬಾಬಾರವರು ಆಗಾಗ ಅಬ್ದುಲ್ ರವರಿಗೆ "ನೀನು ಬಹುಮಹಡಿ ಕಟ್ಟಡಗಳಲ್ಲಿ ಮತ್ತು ಮೇಲ್ಚಾವಣಿ ಇರುವ ಜಾಗದಲ್ಲಿ ವಾಸಿಸುವೆ ಮತ್ತು  ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ"  ಎಂದು ಹೇಳಿದ್ದರು. ಬಾಬಾರವರ ಹೇಳಿಕೆ ಮುಂದೆ ನಿಜವಾಯಿತು.ಏಕೆಂದರೆ ಅನೇಕ ವರ್ಷಗಳು ಅಬ್ದುಲ್ ಬಾಬಾರವರು ಬೂಟಿವಾಡಾದ ಮೇಲಿನ ಕೋಣೆಯಲ್ಲಿ ತಂಗಿದ್ದರು ಮತ್ತು ಅನೇಕ ಹಿಂದೂ ಮತ್ತು ಮುಸ್ಲಿಂ ಜನಾಂಗದ ಸಾಯಿಭಕ್ತರು ಇವರ ಮೇಲೆ ಅಪಾರ ಗೌರವ ಇಟ್ಟು ಇವರನ್ನು ಸಂದರ್ಶಿಸಲು ಮತ್ತು ಸಲಹೆಯನ್ನು ಪಡೆಯಲು ಬರುತ್ತಿದ್ದರು. 

ಸಾಯಿಬಾಬಾರವರು ಅಬ್ದುಲ್ ರವರಿಗೆ ಯೋಗಿಯ ಹಾಗೆ ಜೀವನ ನಡೆಸಲು ಪ್ರೇರೇಪಿಸಿದ್ದರು. ಬಾಬಾರವರು ಇವರಿಗೆ ಅತಿ ಕಡಿಮೆ ಆಹಾರ ಸೇವನೆ ಮಾಡುವಂತೆ, ಆಹಾರ ಪದಾರ್ಥಗಳ ಮೇಲೆ ಹೆಚ್ಚಿಗೆ ಗಮನ ಹರಿಸದಂತೆ ಮತ್ತು ಅತಿ ಕಡಿಮೆ ಸಮಯ ನಿದ್ರಿಸುವಂತೆ ಸಲಹೆ ನೀಡಿದ್ದರು. ಬಾಬಾರವರ ಸಲಹೆಯಂತೆ ಅಬ್ದುಲ್ ಬಾಬಾರವರು ರಾತ್ರಿ ವೇಳೆ ನಿದ್ರಿಸದೆ ಮೊಣಕಾಲನ್ನು ಚಾಚಿಕೊಂಡು ನೋಟ್ ಪುಸ್ತಕದಿಂದ ಬಾಬಾರವರು ಹೇಳಿ ತಾವು ಬರೆದುಕೊಂಡ ವಿಷಯಗಳನ್ನು ಪಟಿಸುತ್ತಾ ಅದನ್ನೇ ಕುರಿತು ಧ್ಯಾನ ಮಾಡುತ್ತಿದ್ದರು. 

ಒಂದು ರಾತ್ರಿ ಅಬ್ದುಲ್ ರವರು ಅತ್ಯಂತ ಬಳಲಿದ್ದರು.ಅದ್ದರಿಂದ ನಿದ್ರಿಸಲು ಅನುಕೂಲವಾಗುವಂತೆ ತಮ್ಮ ಕೈಗಳನ್ನು ಬೊಗಸೆಯಂತೆ ಮುಂದೆ ಮಾಡಿಕೊಂಡು ಅದರಲ್ಲಿ ತಮ್ಮ ತಲೆಯನ್ನು ಇಟ್ಟುಕೊಂಡು ಮಲಗಲು ಪ್ರಯತ್ನ ಪಡುತ್ತಿದ್ದರು. ಅದನ್ನು ನೋಡಿದ ಸಾಯಿಬಾಬಾರವರು "ಏನು ಅಬ್ದುಲ್, ನೀನು ಚಂದ್ರನನ್ನು ನೋಡಲು ಪ್ರಯತ್ನ ಪಡುತ್ತಿದ್ದೀಯಾ?" ಎಂದು ಕೇಳಿದರು. ಆ ರಾತ್ರಿ ಅಬ್ದುಲ್ ನಿದ್ರೆಯಲ್ಲಿ ತೂಕಡಿಸುತ್ತಾ ಬಾಬಾರವರ ಮೇಲೆ ಮತ್ತು ಅವರ ಗಾದಿಯ ಮೇಲೆ ಬಿದ್ದರು. ಆಗ ಬಾಬಾರವರು ಅಬ್ದುಲ್ ತಲೆಯ ಮೇಲೆ ಹೊಡೆದು ಅವರನ್ನು ಎಬ್ಬಿಸಿದರು. ಮಾರನೇ ದಿನ ಮಧ್ಯಾನ್ಹ 2 ಘಂಟೆಯ ಸಮಯದಲ್ಲಿ ಮುಖವನ್ನು ತೊಳೆಯಲು ತಮ್ಮ ಕೈಗಳನ್ನು ಬೊಗಸೆಯಂತೆ ಮಾಡಿಕೊಂಡು ನೋಡಿದಾಗ ಆ ನೀರಿನಲ್ಲಿ ದೊಡ್ಡ ಚಂದ್ರನು ಕಾಣಿಸಿದನು. ಇದಲ್ಲವೇ ಸಾಯಿಬಾಬಾರವರ ಲೀಲೆ ಎಂದರೆ?

ಅಬ್ದುಲ್ ರವರು ಹಳ್ಳಿಯ ಗಡಿಯಲ್ಲಿದ್ದ ನೀರಿನ ಬಳಿ ಬಟ್ಟೆಯನ್ನು ಒಗೆಯುವುದು, ಮಸೀದಿ, ಚಾವಡಿ ಮತ್ತು ಅದರ ಸುತ್ತಮುತ್ತಲಿನ ಬೀದಿಯನ್ನು ಗುಡಿಸುವುದು, ಮಸೀದಿ, ಚಾವಡಿಯಲ್ಲಿನ ದೀಪಗಳಿಗೆ ಎಣ್ಣೆಯನ್ನು ಹಾಕಿ ದೀಪ ಆರದಂತೆ ನೋಡಿಕೊಳ್ಳುವುದು, ಶಿರಡಿಯ ಬೀದಿಗಳನ್ನು ಚೆನ್ನಾಗಿ ಗುಡಿಸಿ ಬಾಬಾರವರು ಭಿಕ್ಷೆಗೆ ಹೋಗುತ್ತಿದ್ದ ಹಾದಿಯನ್ನು ಶುಚಿಯಾಗಿ ಇಡುವುದು ಮುಂತಾದ ಕೆಲಸಗಳನ್ನು ಮಾಡುತಿದ್ದರು. ಆದ ಕಾರಣ ಸಾಯಿಬಾಬಾರವರು ಅಬ್ದುಲ್ ರವರನ್ನು "ನನ್ನ ಜಾಡಮಾಲಿ" "ಹಲಾಲ್ ಕೋರ್" ಎಂದೆಲ್ಲ ಕರೆಯುತ್ತಿದ್ದರು. ಅಬ್ದುಲ್ ಮಸೀದಿಗೆ ನೀರನ್ನು ತಂದು ತುಂಬುವ ಮತ್ತು ಇತರ ಎಲ್ಲಾ ಸಾಯಿಬಾಬಾರವರು ಹೇಳಿದ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಸಾಯಿಬಾಬಾರವರು ಅಬ್ದುಲ್ ರವರಿಗೆ ಊಟ, ಬಟ್ಟೆ, ವಸತಿಯನ್ನು ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. 

ಒಮ್ಮೆ 1927 ನೇ ಇಸವಿಯಲ್ಲಿ ರಾಧಾಕೃಷ್ಣ ಆಯಿ ಗತಿಸಿದ 11 ವರ್ಷಗಳ ನಂತರ ಅವರು ತಂಗುತ್ತಿದ್ದ ಕೋಣೆಯಲ್ಲಿ ಅಬ್ದುಲ್ ಕುರಾನ್ ಪಠಣ ಮಾಡುತ್ತಿದ್ದಾಗ ಆ ಕೋಣೆಯ ಶಿಥಿಲವಾದ ಗೋಡೆಗಳು ಅಬ್ದುಲ್ ಮೇಲೆ ಬಿದ್ದು ಅಬ್ದುಲ್ ರವರ ಕುತ್ತಿಗೆಯವರೆಗೂ ತುಂಬಿಕೊಂಡು ಅವರು ಒದ್ದಾಡುತ್ತಿದ್ದಾಗ ಸಾಯಿಬಾಬಾರವರು ಅವರನ್ನು ಅಪಾಯದಿಂದ ಕಾಪಾಡಿದರು. 

ಅಬ್ದುಲ್ ಬಾಬಾರವರ ಮೊದಲ ಗುರು ಒಮ್ಮೆ ಶಿರಡಿಗೆ ಬಂದು ಅಬ್ದುಲ್ ರವರನ್ನು ತಮ್ಮ ಜೊತೆ ವಾಪಸ್ ಬರುವಂತೆ ಕರೆದರು. ಆಗ ಅಬ್ದುಲ್ ರವರು ಸಾಯಿಬಾಬಾರವರ ಅನುಮತಿ ಇಲ್ಲದೆ ತಾವು ಬರುವುದಿಲ್ಲವೆಂದು ತಿಳಿಸಿದರು. ಆ ಗುರುವು ಸಾಯಿಬಾಬಾರವರ ಬಳಿ ಬಂದು ಕೇಳಿಕೊಳ್ಳಲು ಸಾಯಿಯವರು ಅನುಮತಿ ನೀಡಲಿಲ್ಲ. ಅಬ್ದುಲ್ ರವರ ಗುರು ಬಂದ ಹಾಗೆಯೇ ವಾಪಸ್ ಶಿರಡಿಯಿಂದ ತೆರಳಿದರು. 

ಸಾಯಿಬಾಬಾರವರು ಅನೇಕ ಬಾರಿ ತಮ್ಮ ಭಕ್ತರಿಗೆ ಬಯ್ಯುವುದರ ಮತ್ತು ಹೊಡೆಯುವುದರ ಮುಖೇನ ಆಶೀರ್ವಾದ ಮಾಡುತ್ತಿದ್ದರು. ಸಾಯಿಯವರು ಅನೇಕ ಬಾರಿ ಅಬ್ದುಲ್ ಮತ್ತು ಜೋಗ ರವರಿಗೆ ಹೊಡೆಯುತ್ತಿದ್ದರು ಮತ್ತು ಬಯ್ಯುತ್ತಿದ್ದರು. ಆದರೆ ಅಬ್ದುಲ್ ರವರು ಅವುಗಳನ್ನು ಆಶೀರ್ವಾದವೆಂದು ಪರಿಗಣಿಸುತ್ತಿದ್ದರು. ಬಾಬಾರವರು ಮಸೀದಿಗೆ ತೆರಳುವ ಮುಂಚೆ ಅಬ್ದುಲ್ ರವರ ಜೊತೆ ಚಾವಡಿಯಲ್ಲಿ ಕುಳಿತು ಅವರಿಗೆ ಅನೇಕ ಉಪದೇಶಗಳನ್ನು ಮತ್ತು ಭವಿಷ್ಯವಾಣಿಯನ್ನು ಹೇಳುತ್ತಿದ್ದರು. ಅಬ್ದುಲ್ ರವರ ನುಡಿಗಳು ಮತ್ತು ಅಬ್ದುಲ್ ರವರ ಬಳಿಯಿದ್ದ ನೋಟ್ ಪುಸ್ತಕಗಳ ಮಾಹಿತಿಯ ಪ್ರಕಾರ ಸಾಯಿಬಾಬಾರವರು ದಶಾವತಾರಗಳಲ್ಲಿ ಒಂದು ಎಂಬ ವಿಷಯದ ಉಲ್ಲೇಖ ಇದೆ ಎಂದು ಹೇಳಲಾಗುತ್ತದೆ. ಸಾಯಿಬಾಬಾರವರು ಭಾರತವನ್ನು ಆಳಿದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಕೇವಲ 9 ಜನ ದೊರೆಗಳು ಬಂದು ಹೋಗುತ್ತಾರೆ. ನಂತರ ಬ್ರಿಟಿಷ್ ಸಾಮ್ರಾಜ್ಯ ಕುಸಿಯುತ್ತದೆ ಎಂದು ನುಡಿದಿದ್ದರು. ಅವರ ವಾಣಿಯಂತೆ ಬ್ರಿಟಿಷ್ ಸಾಮ್ರಾಜ್ಯದ 9ನೇ ದೊರೆ ಆಳುತ್ತಿದ್ದ ಕಾಲದಲ್ಲಿ ನಮಗೆ ಸ್ವಾತಂತ್ರ್ಯ ದೊರಕಿ ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರ ಕೊನೆಗೊಂಡಿತು. 
ಅಬ್ದುಲ್ ಬಾಬಾರವರ ಕುಟೀರ 

 ಅಬ್ದುಲ್ ಬಾಬಾ ಕುಟೀರ 

ಅಬ್ದುಲ್ ಬಾಬಾರವರ ಕುಟೀರವು ಚಾವಡಿಯ ಎದುರುಗಡೆ ಇದೆ. ಅಬ್ದುಲ್ ಬಾಬಾರವರಿಗೆ ಉಮ್ರಾನ್ ರಾವ್ ಬಿ ಎಂಬ ಹೆಂಡತಿ ಮತ್ತು ಒಬ್ಬ ಮಗನಿದ್ದನು. ಇವರ ತಂದೆಯವರಿಗೆ ನಾಂದೇಡ್ ಗ್ರಾಮಸ್ಥರು ಗೌರವದಿಂದ "ನಾಂದೇಡ್ ಗ್ರಾಮದ ಚೋಟು ಸುಲ್ತಾನ್" ಎಂದು ಕರೆಯುತ್ತಿದ್ದರು. ಅಬ್ದುಲ್ ಕುಟೀರ ಈಗ ಇರುವ ಸ್ಥಳದಲ್ಲಿ ಮೊದಲು ಒಂದು ಮಣ್ಣಿನ ಗುಡಿಸಲು ಇತ್ತು. ಸಾಯಿ ಮಹಾಸಮಾಧಿಯ ನಂತರ ಶಿರಡಿ ಸಂಸ್ಥಾನ ಪ್ರಾರಂಭವಾದ ಮೇಲೆ ಸಂಸ್ಥಾನದವರು ಈ ಜಾಗವನ್ನು ಅಬ್ದುಲ್ ರವರಿಗೆ ಭೋಗ್ಯಕ್ಕೆ ನೀಡಿದರು. 

ಶಿರಡಿಗೆ ಬರುವ ಭಕ್ತರು ಅಬ್ದುಲ್ ಬಾಬಾ ಕುಟೀರದಲ್ಲಿರುವ "ಚಮತ್ಕಾರಿ ಚಿಮಟ" ವನ್ನು ಮುಟ್ಟುವ ಮತ್ತು ಅದರಿಂದ ಆಶೀರ್ವಾದ ಪಡೆಯುವ ಭಾಗ್ಯವನ್ನು ಹೊಂದಿದ್ದಾರೆ. ಏಕೆಂದರೆ, ಇದನ್ನು ಸ್ವತಃ ಸಾಯಿಬಾಬಾರವರೇ ಅಬ್ದುಲ್ ರವರಿಗೆ ನೀಡಿದರೆಂದು ಹೇಳಲಾಗುತ್ತದೆ. ಇದಕ್ಕೆ ಪ್ರತಿದಿನ ಧೂಪವನ್ನು ಹಚ್ಚಿ ಅಬ್ದುಲ್ ಬಾಬಾ ಪೂಜಿಸುತ್ತಿದ್ದರು. ಇದರ ಸಹಾಯದಿಂದ ಅಬ್ದುಲ್ ಬಾಬಾರವರು ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿದರೆಂದು ಹೇಳಲಾಗುತ್ತದೆ. ಅಬ್ದುಲ್ ಬಾಬಾ ಕುಟೀರದಲ್ಲಿ ಸಾಯಿಬಾಬಾರವರ ಅನೇಕ ಹಳೆಯ ಭಾವಚಿತ್ರಗಳನ್ನು ಸಾಯಿಭಕ್ತರು ನೋಡಬಹುದು. 

ಸಾಯಿಬಾಬಾರವರು ಇವರಿಗೆ ಒಂದು ಸಟಕಾ ಮತ್ತು ಒಂದು ತಗಡಿನ ಪಾತ್ರೆಯನ್ನು ನೀಡಿದರೆಂದು ಹೇಳಲಾಗುತ್ತದೆ. ಆದರೆ, ಅಬ್ದುಲ್ ರವರು ಸಾಯಿಬಾಬಾರವರ ಉಪದೇಶಗಳನ್ನು, ವಾಣಿಯನ್ನು ಮತ್ತು ಅವರ ವಚನಗಳನ್ನು ಪುಸ್ತಕದಲ್ಲಿ  ಬರೆದಿಟ್ಟುಕೊಂಡು ಅದನ್ನು ಪ್ರತಿದಿನ ಪವಿತ್ರ ಖುರಾನ್ ಎಂದು ತಿಳಿದು ಪಠಣ ಮಾಡುತಿದ್ದುದಕ್ಕೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲೇ ಬೇಕು.  

ಕನ್ನಡ ಅನುವಾದ - ಶ್ರೀಕಂಠ ಶರ್ಮ