Wednesday, October 27, 2010

ಸಾಯಿ ಸಚ್ಚರಿತೆಯ ವಿಸ್ತೃತ ಗದ್ಯ ರೂಪ ಈಗ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯ - ಕೃಪೆ : ಸಾಯಿಅಮೃತಧಾರಾ.ಕಾಂ

ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ. ಹೇಮಾಡಪಂತರ ಮರಾಠಿ ಓವಿ ಶೈಲಿಯಲ್ಲಿ ರಚಿತವಾಗಿರುವ ಸಾಯಿ ಸಚ್ಚರಿತೆ ಈಗ ದಕ್ಷಿಣ ಭಾರತದ ೩ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಲಭ್ಯವಿದೆ. ಈ 3 ಅನುವಾದಗಳು ಕೂಡ ಓವಿ ಶೈಲಿಯ ಗದ್ಯ ರೂಪಾಂತಗಳಾಗಿವೆ. 

ಇದೇ ತಿಂಗಳ 20 ನೇ ಅಕ್ಟೋಬರ್ 2010 , ಬುಧವಾರದಂದು ಶ್ರೀಮತಿ.ಲಕ್ಷ್ಮೀ ರಮಣನ್ ರವರು ಅನುವಾದ ಮಾಡಿರುವ ತಮಿಳು ಸಾಯಿ ಸಚ್ಚರಿತೆಯನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀ.ಆರ್.ಶೇಷಾದ್ರಿಯವರು ಬಿಡುಗಡೆ ಮಾಡಿದರು. ಅನುವಾದದ ಸರಣಿಯಲ್ಲಿ ಇದು 3ನೇಯದು.  ಮೊದಲನೆಯ ಅನುವಾದವನ್ನು ಮಣಿಯಮ್ಮ ಅವರು ಹೇಮಾಡಪಂತರ ಮರಾಠಿ ಕೃತಿಯಂತೆ ಓವಿ ಶೈಲಿಯಲ್ಲಿ ರಚಿಸಿದರು. ಎರಡನೆಯ ಅನುವಾದವನ್ನು ತೆಲುಗಿನಿಂದ ಕನ್ನಡಕ್ಕೆ ಗದ್ಯ ಶೈಲಿಯಲ್ಲಿ ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯನವರು ರಚಿಸಿದರು. ಅದು 22ನೇ ಏಪ್ರಿಲ್ 2001 ರಲ್ಲಿ ಬಿಡುಗಡೆಯಾಯಿತು. ಇದರ  ಬಿಡುಗಡೆಯನ್ನು ಭಾರತೀಯ ವಿದ್ಯಾಭವನದ ಮುಖ್ಯಸ್ಥರಾದ ಡಾ.ಮತ್ತೂರು ಕೃಷ್ಣಮುರ್ತಿಯವರು ನೆರವೇರಿಸಿದರು. 3ನೇ ತಮಿಳು ಅನುವಾದವನ್ನು ಶ್ರೀಮತಿ ಲಕ್ಷ್ಮೀ ರಮಣನ್ ರವರು ಕನ್ನಡ ಗ್ರಂಥವನ್ನು ಆಧರಿಸಿ ಮಾಡಿರುತ್ತಾರೆ. 

ತಮಿಳು ಸಾಯಿ ಸಚ್ಚರಿತೆಯ ತರ್ಜುಮೆಯನ್ನು ಶ್ರೀಮತಿ.ಲಕ್ಷ್ಮೀ ರಮಣನ್ ರವರು ತಮ್ಮ 3 ಜನ ಸ್ನೇಹಿತೆಯರ ಸಹಾಯದಿಂದ ಮಾಡಿರುತ್ತಾರೆ. ಅವರನ್ನು ಲೇಖಕಿ ಪ್ರೀತಿಯಿಂದ 3 ಪವಿತ್ರ ನದಿಗಳಾದ "ಚಂದ್ರಭಾಗ, ಕಾವೇರಿ ಮತ್ತು ತೆಲುಗು ಗಂಗಾ" ಎಂದು ಕರೆಯುತ್ತಾರೆ. ಆ 3 ಜನ ಸ್ನೇಹಿತೆಯರು ಯಾರೆಂದರೆ ಶ್ರೀಮತಿ.ಸರಸ್ವತಿ ರಿಷಬದ್, ಶ್ರೀಮತಿ. ವೀಣಾ ಜಯತೀರ್ಥ ರಾವ್ ಮತ್ತು ಶ್ರೀಮತಿ.ಲಕ್ಷ್ಮೀ ಎಸ್.ಗಂಭೀರ. 

ಶ್ರೀಮತಿ .ಲಕ್ಷ್ಮೀ ರಮಣನ್ ರವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯಲ್ಲಿ 27 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರು ಆಂಗ್ಲ ಭಾಷೆಯಲ್ಲಿ "ಜಯ ಸಾಯಿ ಶಂಕರ" ಎಂಬ ಗ್ರಂಥವನ್ನು 2 ಭಾಗಗಳಲ್ಲಿ ರಚಿಸಿದ್ದು ಆ ಗ್ರಂಥದಲ್ಲಿ ತಾವು ಮತ್ತು ಇತರ ಭಕ್ತರುಗಳು ಹೇಗೆ ಕಂಚಿ ಮಹಾಸ್ವಾಮಿಗಳು ಮತ್ತು ಭಗವಾನ್ ಸತ್ಯ ಸಾಯಿಬಾಬಾರವರ ಸಮ್ಮುಖದಲ್ಲಿ ವಿಶೇಷ ಅನುಭವಗಳನ್ನು ಪಡೆದೆವು ಎಂಬ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಎರಡು ಪುಸ್ತಕಗಳ ಪ್ರತಿಗಳ ಮೇಲೆ ಭಗವಾನ್ ಸತ್ಯ ಸಾಯಿಬಾಬಾರವರು ತಮ್ಮ ಸ್ವಹಸ್ತದಿಂದ ಹಸ್ತಾಕ್ಷರಗಳನ್ನು ಹಾಕಿ ಆಶೀರ್ವಾದ ಮಾಡಿದ್ದಾರೆ. ಶ್ರೀಮತಿ.ಲಕ್ಷ್ಮೀ ರಮಣನ್ ರವರು ತಮಿಳಿನಲ್ಲಿ "ಸೌಂದರ್ಯ ಲಹರಿ" "ಲಲಿತ ಸಹಸ್ರನಾಮ" ಮತ್ತು "ಶ್ರೀಮದ್ ಭಾಗವತಂ" ಬಗ್ಗೆ ಅನೇಕ ಲೇಖನಗಳನ್ನು ಪ್ರಸಿದ್ದ ತಮಿಳು ಮಾಸಿಕವಾದ "ಜ್ಞಾನಭೂಮಿ" ಪತ್ರಿಕೆಯಲ್ಲಿ 3 ವರ್ಷಗಳಿಗೂ ಹೆಚ್ಚು ಕಾಲ ಬರೆದಿದ್ದಾರೆ. 

ಶ್ರೀಮತಿ.ಲಕ್ಷ್ಮೀ ರಮಣನ್ ರವರು ತಮಿಳು ಸಾಯಿ ಸಚ್ಚರಿತೆಯನ್ನು ಅನುವಾದ ಮಾಡಲು 30 ತಿಂಗಳುಗಳ ಕಾಲ ಶ್ರಮವನ್ನು ಪಟ್ಟಿರುತ್ತಾರೆ. ಇವರು ಮರಾಠಿ ಓವಿಯ ಲೇಖಕರಾದ ದಿವಂಗತ.ಹೇಮಾಡಪಂತರಿಗೆ, ತೆಲುಗು ಅನುವಾದ ಮಾಡಿರುವ ಮಣಿಯಮ್ಮನವರಿಗೆ, ಕನ್ನಡದ ಅನುವಾದ ಮಾಡಿರುವ ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯನವರಿಗೆ, ತಮ್ಮ 3 ಜನ ಸ್ನೇಹಿತರಿಗೆ ತಮ್ಮ ವಂದನೆಗಳನ್ನು ಸಲ್ಲಿಸುವುದನ್ನು ಮರೆಯುವುದಿಲ್ಲ. 

ಶ್ರೀ. ಆರ್ ಶೇಷಾದ್ರಿಯವರು ತಮಿಳು ಸಾಯಿಸಚ್ಚರಿತೆಯನ್ನು ಬಿಡುಗಡೆ ಮಾಡುತ್ತಿರುವ ದೃಶ್ಯ 

 ತಮಿಳಿನ ಶ್ರೀ ಸಾಯಿ ಸಚ್ಚರಿತಂ 

 ತಮಿಳು ಶ್ರೀ ಸಾಯಿ ಸಚ್ಚರಿತಂ ಲೇಖಕಿ ಶ್ರೀಮತಿ.ಲಕ್ಷ್ಮೀ ರಮಣನ್ 

ತಮಿಳು ಅನುವಾದಕ್ಕಾಗಿ ದುಡಿದ ನಾಲ್ವರು: ಎಡದಿಂದ ಬಲಕ್ಕೆ ನಿಂತವರು : ಶ್ರೀಮತಿ.ಲಕ್ಷ್ಮೀ ಎಸ್.ಗಂಭೀರ, ಶ್ರೀಮತಿ.ಲಕ್ಷ್ಮೀ ರಮಣನ್, ಶ್ರೀಮತಿ. ವೀಣಾ ಜಯತೀರ್ಥ ರಾವ್. ಕುಳಿತವರು: ಶ್ರೀಮತಿ.ಸರಸ್ವತಿ ರಿಷಬದ್

ಹೇಮಾಡಪಂತರೆಂದು ಸಾಯಿಬಾಬಾರವರಿಂದ ಕರೆಸಿಕೊಂಡ ಅಣ್ಣಾ ಸಾಹೇಬ್ ಸಾಯಿ ಸಚ್ಚರಿತೆಯನ್ನು ರಚಿಸಿದ ಲೇಖಕರು ಯಾರೆಂದು ಈ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ: ಗೋಧಿಯ ಹಿಟ್ಟನ್ನು ಬೀಸುತ್ತಾ ಮಸೀದಿಯಲ್ಲಿ ಕುಳಿತಿರುತ್ತಿದ್ದ ಫಕೀರನ ಜೀವನ ಚರಿತ್ರೆಯನ್ನು ಬರೆಯುವುದು ಹೇಗೆ ಎಂದು ಯೋಚಿಸುತ್ತಿರುವಾಗ "ನಿನ್ನ ಹೃದಯವನ್ನು ಪರಿಶುದ್ಧವಾಗಿ ಮಾಡಿ ನಿನ್ನ ಮನಸ್ಸಿನಲ್ಲಿರುವ ಎಲ್ಲಾ ಯೋಚನೆಗಳನ್ನು ತೆಗೆದು ಹಾಕು. ಆಗ ಆ ಪರಿಶುದ್ಧವಾದ ಸ್ಥಳದಲ್ಲಿ ನಾನೇ ಕುಳಿತು ಸ್ವತಃ ನಾನೇ ನನ್ನ ಜೀವನ ಚರಿತ್ರೆಯನ್ನು ಹೇಳುವೆ. ನೀನು ಅದನ್ನು ಬರೆಯುತ್ತಾ ಹೋಗು" ಎಂದು ಸಾಯಿಬಾಬಾರವರು ಹೇಮಾಡಪಂತರಿಗೆ ಹೇಳಿದರೆಂದು ಅವರೇ ಸ್ವತಃ ನಮಗೆ ತಿಳಿಸಿದ್ದಾರೆ.  

ಶಿರಡಿ ಸಾಯಿಬಾಬಾ ಸಂಸ್ಥಾನದವರು ಪ್ರಕಟಪಡಿಸಿರುವ ತೆಲುಗು ಸಾಯಿ ಸಚ್ಚರಿತೆಯ ಲೇಖಕಿಯಾದ ಮಣಿಯಮ್ಮರವರದು ಒಂದು ವಿಶೇಷ ವ್ಯಕ್ತಿತ್ವ. ಈ ನವ ಯುಗದ ರೀತಿ ನೀತಿಗಳು ಮತ್ತು ಕಟ್ಟುಪಾಡುಗಳಿಗೆ ಬಲಿಯಾಗದೆ ತಮ್ಮದೇ ಆದ ಲೋಕದಲ್ಲಿ ಸದಾ ವಿಹರಿಸುವ ಮಣಿಯಮ್ಮರವರು ಓಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿದ್ದಾರೆ. ಕೆಲವು ಕಾಲ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ತಮಗೆ ಒದಗಿ ಬಂದ ಇಂಗ್ಲೆಂಡ್ ನ ಉನ್ನತ ಶಿಕ್ಷಣದ ಅವಕಾಶವನ್ನು ತಿರಸ್ಕರಿಸಿದ್ದಾರೆ. ಇವರು ಹೇಗೆ ಸಾಯಿಬಾಬಾರವರಿಂದ ಸೆಳೆಯಲ್ಪಟ್ಟರು ಎಂಬುದರ ಬಗ್ಗೆ ನಮಗೆ ತಿಳಿದುಬಂದಿಲ್ಲ. ಇವರು ಏಕೆ ತಮ್ಮ ಬಗ್ಗೆ ಯಾವ ಮಾತನ್ನು ಆಡಲು ಇಚ್ಚಿಸುವುದಿಲ್ಲ ಎಂಬುದೇ ಒಂದು ಸೋಜಿಗದ ಸಂಗತಿಯಾಗಿ ಉಳಿದಿದೆ. ಅವರು ಮಾತನಾಡಿದರೂ ಕೂಡ ನಮಗೆ ಅದನ್ನು ಅರ್ಥೈಸುವುದು ಕಷ್ಟ ಸಾಧ್ಯ. 

ಇವರು ಆಂಧ್ರಪ್ರದೇಶದ ಹೈದರಾಬಾದ್ ನ ಕಿಶನ್ ಗಂಜ್ ನಲ್ಲಿ ಸಾಯಿ ಮಂದಿರವನ್ನು ಕಟ್ಟಿಸಿದ್ದಾರೆ. ಅದರ ಪಕ್ಕದಲ್ಲಿರುವ ಒಂದು ಸಣ್ಣ ಕೋಣೆಯಲ್ಲಿ ಇವರು ತಂಗಿದ್ದಾರೆ. ಇವರು ಈ ಸಾಯಿಮಂದಿರದ ಮೇಲ್ವಿಚಾರಣೆಯನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅತ್ಯಂತ ಸರಳವಾಗಿ ಉಡುಗೆ ತೊಡುಗೆಗಳನ್ನು ತೊಡುವ ಮತ್ತು ಅತ್ಯಂತ ಸರಳವಾಗಿರುವ ಇವರನ್ನು ಮಂದಿರಕ್ಕೆ ಬರುವ ಜನಗಳು ಖಂಡಿತ ಗುರುತು ಹಿಡಿಯುವುದಿಲ್ಲ. ಇವರಿಗೆ ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಮುಖರೆಲ್ಲರ ಪರಿಚಯವಿದ್ದರೂ ಕೂಡ ಇವರು ಶಿರಡಿಗೆ ಬಂದು ಹೋಗುವುದೇ ಯಾರಿಗೂ ತಿಳಿಯದಂತೆ ಎಚ್ಚರ ವಹಿಸುತ್ತಾರೆ. ಶಿರಡಿಗೆ ಹೋದಾಗ ಯಾವುದೋ ಒಂದು ಜಾಗದಲ್ಲಿ ಮಲಗುತ್ತಾ, ಸಾರ್ವಜನಿಕ ಶೌಚಾಲಯಗಳಲ್ಲಿ ಸ್ನಾನವನ್ನು ಮಾಡುತ್ತಾ, ಯಾರು ಏನು ನೀಡಿದರೆ ಅದನ್ನೇ ಪ್ರಸಾದವೆಂದು ತಿಂದುಕೊಂಡು ಮತ್ತು ಸಾರ್ವಜನಿಕ ಪ್ರಸಾದಾಲಯಗಳಲ್ಲಿ  ಊಟವನ್ನು ಮಾಡಿಕೊಂಡು ಕಾಲ ಕಳೆಯುತ್ತಾರೆ ಮತ್ತು ಎಲ್ಲರಂತೆ ಸಾಯಿಬಾಬಾರವರ ದರ್ಶನ ಮಾಡುತ್ತಾರೆ ಎಂಬುದೇ ಒಂದು ವಿಶೇಷ ಸಂಗತಿ. 

ಮಣಿಯಮ್ಮ ರಚಿಸಿರುವ ತೆಲುಗು ಸಾಯಿ ಸಚ್ಚರಿತ್ರ ವಿಸ್ತೃತ ರೂಪ ಪುಸ್ತಕದ ಒಂದು ನೋಟ 

ಮಣಿಯಮ್ಮ ರಚಿಸಿರುವ ಶ್ರೀ ಸಾಯಿ ಸಚ್ಚರಿತ ನಿತ್ಯ ಪಾರಾಯಣ ಗ್ರಂಥ 

ಕನ್ನಡದ ಶ್ರೀ.ಸಾಯಿ ಸಚ್ಚರಿತೆಯು ತೆಲುಗು ಅನುವಾದಕ್ಕಿಂತ ಮುಂಚೆಯೇ ಪ್ರಕಟಣೆಯಾಯಿತು. ಅದಕ್ಕೆ ಮಣಿಯಮ್ಮರವರ ಉದಾರತೆಯೇ ಕಾರಣ. 

ಸಾಯಿ ಲೀಲಾಮೃತ ಕೃತಿಯ ಲೇಖಕರಾದ ಪೂಜ್ಯ ಆಚಾರ್ಯ ಶ್ರೀ.ಎಕ್ಕಿರಾಲ ಭಾರದ್ವಾಜರವರು ಪ್ರಪಂಚದಾದ್ಯಂತ ನೆಲೆಸಿರುವ ತೆಲುಗು ಭಾಷೆಯ ಮನೆಗಳಲ್ಲಿ ಚಿರಪರಿಚಿತ ಹೆಸರು. ತೆಲುಗು ಭಾಂದವರಿಗೆ ಇವರಿಬ್ಬರು ಮಹಾನ್ ಸಂತರು ಬೇರೆ ಬೇರೆಯಲ್ಲ. ಇವರ ತೆಲುಗಿನ ಮಹೋನ್ನತ ಕೃತಿಯಾದ ಸಾಯಿಲೀಲಾಮೃತವನ್ನು ಪಾರಾಯಣ ಮಾಡಿದ ಮೇಲೆ ಶ್ರೀ ಸಾಲಿಗ್ರಾಮ ಸುಬ್ಬರಾಮಯ್ಯನವರು ಸಾಯಿಬಾಬಾರವರ ಅನನ್ಯ ಭಕ್ತರಾದರು. ಮಣಿಯಮ್ಮರವರು ಶ್ರೀ.ಸುಬ್ಬರಾಮಯ್ಯನವರಿಗೆ ತೆಲುಗಿನಿಂದ ಕನ್ನಡಕ್ಕೆ ತರ್ಜುಮೆ ಮಾಡುವಂತೆ ಪ್ರೇರೇಪಣೆ ಮಾಡಿದರು. ಅವರ ಇಚ್ಚೆಯಂತೆ ಕನ್ನಡಕ್ಕೆ ಅನುವಾದ ಮಾಡುವ ಕೆಲಸ ಶುರುವಾಯಿತು. ಇದೆಲ್ಲಾ ಆ ಶಿರಡಿ ಸಾಯಿಬಾಬಾರವರ ಲೀಲೆಯಲ್ಲದೆ ಮತ್ತೇನು? ಕನ್ನಡದ ಸಾಯಿ ಸಚ್ಚರಿತೆಯು 22ನೇ ಏಪ್ರಿಲ್ 2001 ರಲ್ಲಿ ಪ್ರಕಟಣೆಯಾಯಿತು. ಹೀಗೆ ಎಲ್ಲಾ 3 ಅನುವಾದಗಳಿಗೂ ಕಾರಣ ಎಲ್ಲಾ ಭಾಷೆಗಳನ್ನು, ಎಲ್ಲವನ್ನು ಬಲ್ಲ ಸರ್ವಾಂತರ್ಯಾಮಿ ಶಿರಡಿ ಸಾಯಿಬಾಬಾರವರು. 

ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯನವರು ಕನ್ನಡದಲ್ಲಿ ಇನ್ನು ಎರಡು ಮಹೋನ್ನತ ಕೃತಿಗಳನ್ನು ರಚಿಸಿದ್ದಾರೆ. ಅವು ಯಾವುವೆಂದರೆ 1. ಅಕ್ಕಲಕೋಟೆ ಮಹಾರಾಜ ಜೀವನ ಚರಿತ್ರೆ 2. ಸಾಯಿ ಸತ್ಯವ್ರತ ಚರಿತ್ರೆ


ಕನ್ನಡದ ಸಾಯಿ ಸಚ್ಚರಿತೆ

 ಕನ್ನಡ ಸಾಯಿ ಸಚ್ಚರಿತೆಯ ಲೇಖಕ ಪ್ರೊಫೆಸರ್ ಸಾಲಿಗ್ರಾಮ ಸುಬ್ಬರಾಮಯ್ಯ 

 ಕನ್ನಡ ಸಾಯಿ ಸಚ್ಚರಿತೆಯನ್ನು ಬಿಡುಗಡೆ ಮಾಡುತ್ತಿರುವ ಡಾ.ಮತ್ತೂರು ಕೃಷ್ಣಮುರ್ತಿ 

ಶಿರಡಿ ಸಾಯಿ ಸಚ್ಚರಿತೆಯ ಈ ಮಹೋನ್ನತ ಕೃತಿಗಳು ದೊರಕುವ ಸ್ಥಳವನ್ನು ಈ ಕೆಳಗೆ ಸಾಯಿಭಕ್ತರ ಅನುಕೂಲಕ್ಕಾಗಿ ಕೊಡಲಾಗಿದೆ. 

ಕನ್ನಡ ಸಾಯಿ ಸಚ್ಚರಿತೆ:

ಶ್ರೀ.ಸಾಲಿಗ್ರಾಮ ಸುಬ್ಬರಾಮಯ್ಯ 
ನಂ.1724, ಪೂರ್ವಾಂತ್ಯ "ಎ" ಮುಖ್ಯ ರಸ್ತೆ 
9ನೇ ಬಡಾವಣೆ, ಜಯನಗರ
ಬೆಂಗಳೂರು -560 069.
ದೂರವಾಣಿ : 080-2663 4211

ತಮಿಳು ಸಾಯಿ ಸಚ್ಚರಿತೆ: 
ಶ್ರೀಮತಿ.ಲಕ್ಷ್ಮೀ ರಮಣನ್
2223,  4ನೇ ಮುಖ್ಯ ರಸ್ತೆ, 24ನೇ ಅಡ್ಡ ರಸ್ತೆ
ಬನಶಂಕರಿ 2ನೇ ಹಂತ 
ಬೆಂಗಳೂರು- 560070.
ದೂರವಾಣಿ : 080-26716722 / 94487 63222
ಈ ಮೇಲ್ : ramanan44@yahoo.com

ತೆಲುಗು:
ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ)
ಪೋಸ್ಟ್ : ಶಿರಡಿ, ತಾಲ್ಲೂಕ್ : ರಹತಾ, ಜಿಲ್ಲೆ: ಅಹಮದ್ ನಗರ,
ಮಹಾರಾಷ್ಟ್ರ 
ದೂರವಾಣಿ :+ 91-2423-258500
ಫಾಕ್ಸ್ : ಆಫೀಸ್ : 91-2423-258870 ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಆಫೀಸ್: 91-2423- 258770.
ಈ ಮೇಲ್ : saibaba@sai.org.in, saibaba@shrisaibabasansthan.org
ವೆಬ್ ಸೈಟ್ : www.shrisaibabasansthan.org

ಕನ್ನಡ ಮತ್ತು ತಮಿಳು ಸಾಯಿ ಸಚ್ಚರಿತೆ ಪುಸ್ತಕಗಳಿಗಾಗಿ ಸಾಯಿಭಕ್ತರು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರವನ್ನು ಸಂಪರ್ಕಿಸಬಹುದು. ಆಲ್ಲದೇ, 3 ಭಾಷೆಯ ಸಾಯಿ ಸಚ್ಚರಿತೆ ಪುಸ್ತಕಗಳು ಶಿರಡಿಯ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿ ಮತ್ತು ಬೆಂಗಳೂರಿನ ಪ್ರಸಿದ್ದ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. 

ಕನ್ನಡ ಸಾಯಿಸಚ್ಚರಿತೆಯ ಪುಸ್ತಕದ ಮುಖಬೆಲೆಯು 225 ರುಪಾಯಿಗಳು, ತಮಿಳು ಸಾಯಿ ಸಚ್ಚರಿತೆಯ ಪುಸ್ತಕದ ಮುಖಬೆಲೆಯು ೧೫೦ ರುಪಾಯಿಗಳು ಮತ್ತು ತೆಲುಗು ಸಾಯಿಸಚ್ಚರಿತೆಯ ಪುಸ್ತಕದ ಮುಖಬೆಲೆಯು 108 ರುಪಾಯಿಗಳಾಗಿರುತ್ತದೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ 

No comments:

Post a Comment