Monday, October 11, 2010

ಕೋರಮಂಗಲ ಸಾಯಿಬಾಬಾ ಮಂದಿರದ ಸಂಸ್ಥಾಪಕ ಅಧ್ಯಕ್ಷ ಶ್ರೀ.ದಕ್ಷಿಣಾಮುರ್ತಿ ಪುಟ್ಟಣ್ಣ ವಿಧಿವಶ - ಕೃಪೆ -ಕುಮಾರಿ.ಹಂಸಲಕ್ಷ್ಮಿ ಮತ್ತು ಸಾಯಿ ಅಮೃತಧಾರಾ.ಕಾಂ 

ಅನನ್ಯ ಸಾಯಿಭಕ್ತ ಮತ್ತು ಕೋರಮಂಗಲ 7 ನೇ ಘಟ್ಟದ ಶ್ರೀ. ಸೋಮೇಶ್ವರಸ್ವಾಮಿ ದೇವಾಲಯ ಮತ್ತು ಶ್ರೀ.ಸದ್ಗುರು ಶಿರಡಿ ಸಾಯಿಬಾಬಾ ದೇವಾಲಯಗಳ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ದಕ್ಷಿಣಾಮುರ್ತಿ ಪುಟ್ಟಣ್ಣನವರು ಕಳೆದ ತಿಂಗಳ ಆಗಸ್ಟ್ 15, 2010 ರಂದು ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರು ಸ್ವಲ್ಪ ಕಾಲದಿಂದ ಅಸ್ವಸ್ಥರಾಗಿದ್ದರು. ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ವನಜಾಕ್ಷಮ್ಮ, ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಹಾಗೂ ಅಸಂಖ್ಯಾತ ಸಾಯಿಬಂಧುಗಳನ್ನು ಬಿಟ್ಟು ಅಗಲಿದ್ದಾರೆ. 

ದಿವಂಗತ ಶ್ರೀ.ಪುಟ್ಟಣ್ಣ ತಮ್ಮ ಧರ್ಮಪತ್ನಿ ಶ್ರೀಮತಿ ವನಜಾಕ್ಷಮ್ಮ ಅವರೊಂದಿಗೆ ಸೋಮೇಶ್ವರನ ದೇವಾಲಯದ ಎದುರು

ಇವರು ತಮ್ಮ ವೃತ್ತಿಯನ್ನು 27 ನೇ ವಯಸ್ಸಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಉದ್ಯೋಗಿಯಾಗುವುದರೊಂದಿಗೆ ಪ್ರಾರಂಭಿಸಿದರು. ಇವರಿಗೆ ದೇವರ ಸಾಕ್ಷಾತ್ಕಾರವಾಗುವುದರೊಂದಿಗೆ ಇವರಿಗೆ ದೇವರ ಮೇಲಿದ್ದ ನಂಬಿಕೆ ಬಲವಾಗಿ ದೇವಾಲಯ ಕಟ್ಟಲು ಪ್ರೇರೇಪಣೆಯಾಯಿತು. ದೇವರ ಆದೇಶದಂತೆ ಶ್ರೀ.ಪುಟ್ಟಣ್ಣನವರು 1983 ರಲ್ಲಿ ಕೋರಮಂಗಲದ 7 ನೇ ಘಟ್ಟದಲ್ಲಿ ಶ್ರೀ ಸೋಮೇಶ್ವರ ದೇವಾಲಯವನ್ನು ಪ್ರಾರಂಭಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾದರು. ಅದೇ ಸ್ಥಳದಲ್ಲಿ 2005 ನೇ ಇಸವಿಯಲ್ಲಿ ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಂದಿರವನ್ನು ಕೂಡ ನಿರ್ಮಾಣ ಮಾಡಿದರು. 

ಇವರು ತಮ್ಮ ಜೀವನದ ಉದ್ದಕ್ಕೂ ಸತ್ಯ ಮಾರ್ಗದಲ್ಲಿ ನಡೆದರು. ಇವರು ದೇವರ ಮುಂದೆ ಎಲ್ಲರು ಒಂದೇ ಎನ್ನುವ ಉನ್ನತ ಮನೋಭಾವ ಹೊಂದಿದ್ದರು. ಇವರು ತಮ್ಮ ಜೀವನವನ್ನೇ ದೈವಿಕ ಕಾರ್ಯಗಳಿಗಾಗಿ ಮತ್ತು ವಿಶೇಷವಾಗಿ ಕೋರಮಂಗಲದ ದೇವಾಲಯಕ್ಕಾಗಿ ಮುಡುಪಾಗಿಟ್ಟಿದ್ದರು. 

ಇವರು ಜೀವನದ ಉದ್ದಕ್ಕೂ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಇವರು ಸ್ವಲ್ಪ ಸಮಯ ಉತ್ತರಹಳ್ಳಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ಇವರು ಶಿಕ್ಷಣ ದಾನ ಎಂಬ ವಿಶೇಷವಾದ ಯೋಜನೆಯನ್ನು ರೂಪಿಸಿ ಮಕ್ಕಳ ಶಿಕ್ಷಣ ಅಭಿಯಾನವನ್ನು ಪ್ರಾರಂಭಿಸಿ ಕೋರಮಂಗಲ ಮತ್ತು ಆಡುಗೋಡಿಯ ಕೊಳೆಗೇರಿ ನಿವಾಸಿಗಳ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ವಸ್ತುಗಳನ್ನು ಮತ್ತು ಬಟ್ಟೆ ಬರೆಗಳನ್ನು ನೀಡುತ್ತಿದ್ದರು.  ಇವರು ಪ್ರಮುಖ ಉತ್ಸವದ ದಿನಗಳಾದ ಗುರು ಪೂರ್ಣಿಮೆ ಮತ್ತು ವಿಜಯದಶಮಿ ದಿನಗಳಂದು ವಯೋವೃದ್ದರಿಗೆ ಉಚಿತವಾಗಿ ಸೀರೆ, ಪಂಚೆ ಮತ್ತು ಹೊದಿಕೆಗಳನ್ನು ನೀಡುತ್ತಿದ್ದರು. ಇವರು ಗುರುವಾರದ ಅನ್ನದಾನ ಕಾರ್ಯಕ್ರಮ ಪ್ರಾರಂಭಿಸಿ, ಪ್ರತಿ ಗುರುವಾರದಂದು ದೇವಾಲಯಕ್ಕೆ ಬರುವ ಸರಿ ಸುಮಾರು 650 - 750 ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಸ್ವತಃ ಇವರೇ ನಿಂತು ನೋಡಿಕೊಳ್ಳುತ್ತಿದ್ದರು. ಇಷ್ಟೇ ಆಲ್ಲದೇ, ಆಗಾಗ್ಗೆ ದೇವಾಲಯದ ಪಕ್ಕದಲ್ಲಿರುವ ದೊಡ್ಡ ಹಾಲ್ ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದ್ದರು. 

ಇವರು ತಮ್ಮ ಕೊನೆಯ ಉಸಿರಿರುವವರೆಗೂ ಸಮಾಜದ ಏಳಿಗಾಗಿ ದುಡಿದರು. ದೇವಾಲಯದ ಕೆಲಸಗಳನ್ನು ತಮ್ಮ ಮನೆಯ ಕೆಲಸವೆಂದು ಭಾವಿಸಿ ಮಾಡುತ್ತಿದ್ದರು. ಯಾರ ಸಹಾಯವಿಲ್ಲದೆ ಶ್ರೀ ಸೋಮೇಶ್ವರ ದೇವಾಲಯ ಮತ್ತು ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ದೇವಾಲಯಗಳನ್ನು ನಿರ್ಮಿಸಿದ್ದಷ್ಟೇ ಆಲ್ಲದೇ ಬೆಳೆಸಿದರು. ಇವರು ಬಹಳ ಸೌಮ್ಯ ಹಾಗೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು. ಇವರು ಸುಮಾರು 30 ವರ್ಷಗಳ ಅವಿರತ ಸೇವೆಯನ್ನು ದೇವಾಲಯಕ್ಕೆ ನೀಡಿದ್ದಾರೆ. ಈಗ ಇವರ ಮನೆಯವರು ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. 

ಸಾಯಿ ಅಮೃತಧಾರಾ.ಕಾಂ ಮತ್ತು ಅದರ ಕನ್ನಡ ಬ್ಲಾಗ್ ಆದ ಸಾಯಿ ಅಮೃತವಾಣಿ ಎಲ್ಲಾ ಸಾಯಿಭಕ್ತರ ಪರವಾಗಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತದೆ. ಅವರ ಕುಟುಂಬದವರಿಗೆ ಶಿರಡಿ ಸಾಯಿನಾಥನು ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸುತ್ತದೆ. ಅಷ್ಟೇ ಆಲ್ಲದೇ, ದಿವಂಗತ ಪುಟ್ಟಣ್ಣನವರು ಅರ್ಧಕ್ಕೆ ನಿಲ್ಲಿಸಿದ ಜನೋಪಯೋಗಿ ಮತ್ತು ಸಾಮಾಜಿಕ ಕಾರ್ಯಗಳನ್ನು ಅವರ ಮನೆಯವರು ನಡೆಸಿಕೊಂಡು ಹೋಗುವಂತೆ ಮಾರ್ಗದರ್ಶನ ಮಾಡುವಂತೆ ಶಿರಡಿ ಸಾಯಿಬಾಬಾರವರನ್ನು ಪ್ರಾರ್ಥನೆ ಮಾಡುತ್ತದೆ. 

ಕನ್ನಡ ಅನುವಾದ - ಶ್ರೀ.ಶ್ರೀಕಂಠ ಶರ್ಮ

No comments:

Post a Comment