Friday, October 1, 2010

ಸಾಯಿ ಮಹಾಭಕ್ತ - ಚಕ್ರ ನಾರಾಯಣ (ಕ್ರಿಶ್ಚಿಯನ್ ಭಕ್ತ) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ

ಚಕ್ರ ನಾರಾಯಣ ಪ್ರಾಟೆಸ್ಟೆಂಟ್ ಪಂಗಡಕ್ಕೆ ಸೇರಿದ ಕ್ರಿಶ್ಚಿಯನ್ ಮತಸ್ಥರಾಗಿದ್ದರು. ಇವರು ಸಾಯಿಬಾಬಾರವರ ಬಗ್ಗೆ ಹಲವು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. 1936 ರಲ್ಲಿ ಬಿಡುಗಡೆಯಾದ "ಭಕ್ತರ ಅನುಭವಗಳು" ಸಂಪುಟ 1 ಪುಟ 117 ರಲ್ಲಿ ಚಕ್ರ ನಾರಾಯಣ ಅವರು ಸಾಯಿಬಾಬಾರವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆದರೆ ಇವರಿಗೆ ಬಾಬಾರವರಲ್ಲಿ ನಂಬಿಕೆಯಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇವರು ಬಾಬಾರವರ ಉದಾತ್ತ ಸ್ವಭಾವವನ್ನು ಮೆಚ್ಚಿ ಬಾಬಾರವರ ಬಗ್ಗೆ ಎಚ್ಚರವಾಗಿದ್ದರು. ಇವರು ಮತ್ತು ಇವರ ಕಡೆಯವರು ಬಾಬಾರವರ ಬಗ್ಗೆ ವಿಶೇಷ ಗಮನವಿಟ್ಟು ವಿಶೇಷವಾಗಿ ಆದಾಯ ತೆರಿಗೆ ವಿಷಯದಲ್ಲಿ ಗಮನವಿಟ್ಟಿದ್ದರು. ಬಾಬಾರವರು ಕಾಮಿನಿ ಮತ್ತು ಕಾಂಚಾಣದ ಬಗ್ಗೆ ವಿರಕ್ತಿಯನ್ನು ತೋರುತ್ತಿದ್ದುದನ್ನು ಕಂಡು ಇವರಿಗೆ ಬಾಬಾರವರಲ್ಲಿ ಬಹಳ ವಿಶೇಷವಾದ ಗೌರವ ಇತ್ತು. ಅನೇಕ ಸ್ತ್ರೀಯರು ಬಾಬಾರವರ ಪಾದಗಳಲ್ಲಿ ತಮ್ಮ ಶಿರವನ್ನು ಇಟ್ಟು ನಮಸ್ಕರಿಸುತ್ತಿದ್ದರು. ಆದರೆ ಬಾಬಾರವರು ಯಾರ ಮುಖದ ಮೇಲೂ ಹೊಗಳಿಕೆ, ಪ್ರೇಮ ಅಥವಾ ಕಾಮದಿಂದ ದೃಷ್ಟಿಯನ್ನು ಬೀರುತ್ತಿರಲಿಲ್ಲ. ಬಾಬಾರವರು ನಿಜಕ್ಕೂ ವಿರಕ್ತರಾಗಿದ್ದರು. ಚಕ್ರನಾರಾಯಣರನ್ನು ಬಾಬಾರವರು ಜನರಿಂದ ತೆಗೆದುಕೊಂಡ ಹಣದ ಬಗ್ಗೆ ನಿಗಾ ಇಡಬೇಕೆಂದು ಹೇಳಿ ನೇಮಿಸಲಾಗಿತ್ತು. ಈ ವಿಷಯದಲ್ಲಿ ಕೂಡ ಚಕ್ರನಾರಾಯಣ ಬಾಬಾರವರ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಜನಗಳು ತಾವಾಗಿಯೇ ಬಾಬಾರವರಿಗೆ ಹಣವನ್ನು ನೀಡುತ್ತಿದ್ದರು. ಯಾರಾದರೂ ಕೊಡದಿದ್ದರೆ ಅವರನ್ನು ದ್ವೇಷಿಸುತ್ತಿರಲಿಲ್ಲ ಅಥವಾ ಅವರನ್ನು ನಿಂದಿಸುತ್ತಿರಲೂ ಇಲ್ಲ. ಇದೇ ರೀತಿ ಅವರು ತಮ್ಮ ಆಹಾರ ಭಿಕ್ಷೆ ಬೇಡುತ್ತಿದ್ದಾಗಲೂ ಸಹ ನೆಡೆದು ಕೊಳ್ಳುತ್ತಿದ್ದರು. ಬಾಬಾರವರಿಗೆ ತಮ್ಮ ಜೋಳಿಗೆಗೆ ಮತ್ತು ತಗಡಿನ ಪಾತ್ರೆಗೆ ಯಾವ ಪದಾರ್ಥ ಹಾಕಿದ್ದಾರೆ ಎಂಬುದರ ಬಗ್ಗೆ ಕಾಳಜಿ ತೋರಿಸುತ್ತಿರಲಿಲ್ಲ. ಜೋಳಿಗೆಯಲ್ಲಿ ಗಟ್ಟಿಯಾದ ಪದಾರ್ಥಗಳನ್ನು ಮತ್ತು ತಗಡಿನ ಪಾತ್ರೆಯಲ್ಲಿ ದ್ರವ್ಯ ಪದಾರ್ಥಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಅವುಗಳೆಲ್ಲವನ್ನು ಬೆರೆಸಿ ಅನೇಕ ಬಡಬಗ್ಗರಿಗೆ, ಭಕ್ತರಿಗೆ, ಭಿಕ್ಷುಕರಿಗೆ ಧಾರಾಳವಾಗಿ ನೀಡುತ್ತಿದ್ದರು. ಹಾಗೆಯೇ ತಮಗೆ ಬಂದ ದಕ್ಷಿಣೆಯನ್ನು ಕೂಡ ಎಲ್ಲರಿಗೂ ಧಾರಾಳವಾಗಿ ಹಂಚುತ್ತಿದ್ದರು. ಸಾಯಿಯವರು ಸಮಾಧಿಯಾದಾಗ ಸರ್ಕಾರವು ಅವರ ಬಳಿಯಿದ್ದ ಹಣವನ್ನು ವಶಕ್ಕೆ ತೆಗೆದುಕೊಂಡಿತು. ಆಗ ಅವರ ಬಳಿ ಇದ್ದುದು ಕೇವಲ 16 ರೂಪಾಯಿಗಳು ಮಾತ್ರ. ಆದರೂ ಬಾಬಾರವರು ಪ್ರತಿದಿನ ನೂರಾರು ರುಪಾಯಿಗಳನ್ನು ಭಕ್ತರಿಗೆ ಹಂಚುತ್ತಿದ್ದರು. ಚಕ್ರನಾರಾಯಣರಿಗೆ ಮತ್ತು ಪೊಲೀಸರಿಗೆ ಸಾಯಿಯವರು ಫಕೀರ್ ಆದ್ದರಿಂದ ಅವರ ಬಳಿ ಅಷ್ಟು ಹಣ ಎಲ್ಲಿಂದ ಬರುತ್ತಿತ್ತು ಎಂದು ಆಶ್ಚರ್ಯವಾಗುತ್ತಿತ್ತು. ಆದ್ದರಿಂದ ಚಕ್ರನಾರಾಯಣ ಅವರು ಸಾಯಿಯವರಿಗೆ ದೈವಿಕ ಶಕ್ತಿ ಇದೆ ಎಂಬ ನಿರ್ಧಾರಕ್ಕೆ ಬಂದರು. ಸಾಯಿಯವರು ಎಲ್ಲಾ ಮತದವರನ್ನು ಸಮಾನವಾಗಿ ಕಾಣುತ್ತಿದ್ದುದನ್ನು ಕಂಡು ಚಕ್ರನಾರಾಯಣ ಅವರಿಗೆ ಅತೀವ ಸಂತೋಷವಾದ ವಿಷಯವಾಗಿತ್ತು ಮತ್ತು ಇದಕ್ಕಾಗಿ ಇವರು ಸಾಯಿಯವರ ಬಗ್ಗೆ ತಮ್ಮ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಚಕ್ರನಾರಾಯಣರನ್ನು ಸಬ್-ಇನ್ಸೆಪೆಕ್ಟರ ಆಗಿ ಸರ್ಕಾರ ನೇಮಕ ಮಾಡಿದಾಗ ಇವರ ಸಹೋದ್ಯೋಗಿಗಳು ಅದನ್ನು ಸಹಿಸದೆ ಸಾಯಿಬಾಬಾರವರಿಗೆ "ಹೊಸ ಫೌಜೀದಾರ ಹಿಂದುವೂ ಅಲ್ಲಾ ಅಥವಾ ಮುಸ್ಲಿಮನೂ ಅಲ್ಲಾ, ಅವನು ಕ್ರಿಶ್ಚಿಯನ್" ಎಂದು ಚಾಡಿ ಹೇಳಿದರು. ಅದಕ್ಕೆ ಬಾಬಾರವರು "ಆದರೇನು? ಅವನು ನನ್ನ ಸಹೋದರ" ಎಂದು ಪ್ರತ್ಯುತ್ತರ ನೀಡಿದರು. ಚಕ್ರನಾರಾಯಣ ಸಾಯಿಬಾಬಾರವರನ್ನು ರಾಜ ವೈಭೋಗದ ನಡುವೆ ಕಂಗೊಳಿಸುತ್ತಿದ್ದ ಮಹಾರಾಜರೆಂದು ಕರೆದಿದ್ದಾರೆ. ಸಾಯಿಯವರ ಅಗಾಧ ಶಕ್ತಿಯನ್ನು ಚಕ್ರನಾರಾಯಣ ಕಣ್ಣಾರೆ ಕಂಡಿದ್ದರು. ಸಾಯಿಯವರ ಅತೀಂದ್ರಿಯ ದೃಷ್ಟಿ, ದೂರ ದೃಷ್ಟಿ, ಅಂತರ್ ಜ್ಞಾನವನ್ನು ಕಂಡು ಚಕ್ರನಾರಾಯಣ ಬೆರಗಾಗಿದ್ದರು. ಅದರ ಒಂದು ಉದಾಹರಣೆ ಈ ಕೆಳಕಂಡಂತೆ ಇದೆ. 

ಒಮ್ಮೆ ಓರ್ವ ಪೋಲಿಸ್ ಪೇದೆ ಹೋಗಿ ಸಾಯಿಬಾಬಾರವರಿಗೆ ನಮಸ್ಕರಿಸಿದ. ಆಗ ಬಾಬಾರವರು ಅವನಿಂದ ದಕ್ಷಿಣೆ ಕೇಳಿದರು. ಅವನು ತನ್ನ ಬಳಿ ಹಣವಿಲ್ಲವೆಂದು ಹೇಳಿದ. ಸಾಯಿಬಾಬಾರವರು ನಿನ್ನ ಹಣದ ಚೀಲವನ್ನು ನೋಡು ಎಂದು ಅವನಿಗೆ ಹೇಳಿದರು. ಅವನ ಹಣದ ಚೀಲದಲ್ಲಿ 50 ರೂಪಾಯಿಗಳು ಇದ್ದವು. ಆಗ ಅದನ್ನು ಅವನು ಬಾಬಾರವರಿಗೆ ಅರ್ಪಿಸಿದ. ಬಾಬಾರವರು ಅದರಲ್ಲಿ ಸ್ವಲ್ಪವನ್ನು ಮಾತ್ರವೇ ತೆಗೆದುಕೊಂಡು ಉಳಿದಿದ್ದುದನ್ನು ಅವನಿಗೆ ಹಿಂತಿರುಗಿಸಿ ನಿನಗೆ ತೊಂದರೆ ಆದಾಗ ಬೇಕಾಗಬಹುದು ಎಂದರು. ಅದೇ ರೀತಿ ನಡೆಯಿತು. ಅವನು ಶಿರಡಿಯಲ್ಲಿ ಸಾಯಿಯವರ ದರ್ಶನ ಮಾಡಿ ಹಿಂತಿರುಗುತ್ತಿದ್ದಾಗ ತೊಂದರೆ ಆಗಿ ಹಣದ ಅವಶ್ಯಕತೆ ಬಿತ್ತು. ಹೀಗೆ ತೊಂದರೆಯಿಂದ ತಪ್ಪಿಸಿಕೊಂಡ ಪೋಲಿಸ್ ಪೇದೆ ಸಾಯಿಯವರಿಗೆ ತನ್ನ ಕೃತಜ್ಞತೆಗಳನ್ನು ಅರ್ಪಿಸಿದ. ಅಲ್ಲದೇ, ತನ್ನ ಬಳಿ ಉಳಿದ ಹಣವನ್ನು ಶಿರಡಿಗೆ ಕಳುಹಿಸಿದ. 

ಚಕ್ರನಾರಾಯಣ ಸಾಯಿಬಾಬಾರವರು ರೋಗಗಳನ್ನು ಗುಣಪಡಿಸಲು ಉಧಿಯನ್ನು ಕೊಡುತ್ತಿದ್ದರು ಮತ್ತು ಅದರಿಂದ ಅನೇಕ ರೋಗಿಗಳಿಗೆ ಗುಣವಾಗುತ್ತಿತ್ತು ಎಂದು ಕೂಡ ತಿಳಿಸಿದ್ದಾರೆ.

No comments:

Post a Comment