Friday, September 30, 2011

ಸಾಯಿ ಮಹಾಭಕ್ತ ಮತ್ತು ಸಾಯಿಬಾಬಾರವರ ಪ್ರಥಮ ಚಿತ್ರವನ್ನು ಬಿಡಿಸಿದ ಮಹಾನ್ ಕಲಾವಿದ - ಶ್ಯಾಮರಾವ್ ಜಯಕರ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಶ್ಯಾಮರಾವ್ ಜಯಕರ್ ರವರು ಮುಂಬೈನ ವಿಲೇ ಪಾರ್ಲೆಯಲ್ಲಿ ವಾಸಿಸುತ್ತಿದ್ದರು. ಇವರು ವೃತ್ತಿಯಲ್ಲಿ ಚಿತ್ರಕಾರರಾಗಿದ್ದರು. ಇವರು ಮೊದಲ ಬಾರಿ ಶಿರಡಿಗೆ 1916-1917 ರಲ್ಲಿ ಬಂದರು. ಇವರು ಶಿರಡಿಗೆ ಅನೇಕ ಸಾಯಿ ಭಕ್ತರೊಡನೆ ಹೋಗುತ್ತಿದ್ದರು ಮತ್ತು ಅವರೊಡನೆ ತಂಗುತ್ತಿದ್ದರು ಮತ್ತು ಅವರುಗಳೆಲ್ಲಾ ಹೊರಟು ಹೋದ ಮೇಲೆ ಕೂಡ ಅಲ್ಲಿಯೇ ಸ್ವಲ್ಪ ದಿನ ಇರುತ್ತಿದ್ದರು. ಜಯಕರ್ ರವರಿಗೆ ಶಿರಡಿಯಲ್ಲಿದ್ದಾಗ ಸ್ವಲ್ಪ ಹಣ ಸಂಪಾದನೆಯಾಗುತ್ತಿತ್ತು. ಆದ್ದರಿಂದ ಸಾಯಿಬಾಬಾರವರು ಇವರಿಂದ ದಕ್ಷಿಣೆಯನ್ನು ಕೇಳಿ ಪಡೆಯುತ್ತಿದ್ದರು. ಹಾಗೆಯೇ, ಜಯಕರ್ ರವರು ಕೂಡ ಬಾಬಾರವರು ಕೇಳಿದಷ್ಟು ದಕ್ಷಿಣೆಯನ್ನು ಕೊಡುತ್ತಿದ್ದರು. ಜಯಕರ್ ರವರ ಜೊತೆಯಲ್ಲಿ ತಂಗಿದ್ದವರು ಹೊರಟು ಹೋದ ಮೇಲೆ ಅವರ ಬಳಿ ಹಣ ಇರುತ್ತಿರಲಿಲ್ಲ. ಆಗ ಸಾಯಿಬಾಬಾ ಇವರಿಂದ ದಕ್ಷಿಣೆ ಕೇಳುತ್ತಿರಲಿಲ್ಲ. ಸರ್ವಾಂತರ್ಯಾಮಿಯಾದ ಬಾಬಾರವರಿಗೆ ಜಯಕರ್ ರವರ ಸ್ಥಿತಿಗತಿಗಳ ಅರಿವಿತ್ತು. 

ಜಯಕರ್ ರವರು 16 ವರ್ಷದ ಹುಡುಗನಾಗಿದ್ದಾಗ  ಒಬ್ಬ ಬ್ರಹ್ಮಚಾರಿಯು ಇವರಿಗೆ ಶಿವ ಮಂತ್ರವನ್ನು ಉಪದೇಶಿಸಿದ್ದನು. ಸ್ವಲ್ಪ ವರ್ಷಗಳ ಬಳಿಕ ಒಬ್ಬ ಸನ್ಯಾಸಿಯು ಶಿವ ಮಂತ್ರಕ್ಕೆ ಹೊಂದಾಣಿಕೆಯಾಗುವಂತೆ ಇವರಿಗೆ ಶಕ್ತಿ ಮಂತ್ರವನ್ನು ಉಪದೇಶಿಸಿದರು. ಜಯಕರ್ ರವರು ಶಿರಡಿಗೆ ಹೋದಾಗ ಸಾಯಿಬಾಬಾರವರು ಈ ಎರಡೂ ಮಂತ್ರಗಳ ದೀಕ್ಷೆಯನ್ನು ಇವರಿಗೆ ನೀಡಿದರು. ಸಾಯಿಬಾಬಾರವರು ಎಲ್ಲರಿಗೂ ತಮ್ಮ ಗುರುವು ಯಾರೇ ಆಗಿರಲಿ ಅವರು ನೀಡಿದ ಉಪದೇಶ, ಮಂತ್ರ ದೀಕ್ಷೆಯನ್ನು ತಪ್ಪದೆ ಅನುಸರಿಸಲು ಹೇಳುತ್ತಿದ್ದರು. ಆದರೆ, ಬಾಬಾರವರು ಯಾವಾಗಲೂ ಒಳ್ಳೆಯ ಉಪದೇಶಗಳನ್ನು ತಮ್ಮ ಭಕ್ತರಿಗೆ ನೀಡುತ್ತಿದ್ದರು. ಅವರು ಅನೇಕ ಬಾರಿ "ಯಾವಾಗಲೂ ಪರಿಶುದ್ಧರಾಗಿರಿ ಮತ್ತು ಸತ್ಯತನದಿಂದ ನಡೆಯಿರಿ. ಎಲ್ಲಾ ಜನರನ್ನು ಗೌರವದಿಂದ ಕಾಣಿರಿ" ಎಂದು ಹೇಳುತ್ತಿದ್ದರು. 

ಜಯಕರ್ ರವರಿಗೆ ಶಿರಡಿಯಲ್ಲಿ ಕೆಲವು ಭಕ್ತರ ಪರಿಚಯವಿತ್ತು. ಇವರು ರಾಧಾಕೃಷ್ಣ ಮಾಯಿಯ ಬಳಿ ಯಾವ ಕೆಲಸವೂ ಇಲ್ಲದಿದ್ದರಿಂದ ಎಂದಿಗೂ ಅವರ ಬಳಿಗೆ ಹೋಗಲಿಲ್ಲ. ಇವರಿಗೆ ನಾನಾವಲ್ಲಿ ಬಗ್ಗೆ ಚೆನ್ನಾಗಿ ತಿಳಿದಿತ್ತು. ನಾನಾವಲ್ಲಿ ಬಹಳ ಭಯಂಕರ ವ್ಯಕ್ತಿಯಾಗಿದ್ದನು. ಸಾಯಿಬಾಬಾರವರು ಜಯಕರ್ ರವರಿಗೆ ನಾನಾವಲ್ಲಿಯ ಜೊತೆ ಹೋಗಬೇಡ ಎಂದು ಎಚ್ಚರಿಕೆ ನೀಡಿದ್ದರು. ಪ್ರಾರಂಭದಲ್ಲಿ ಇವರು ನಾನಾವಲ್ಲಿಯ ಜೊತೆ ಓಡಾಡುತ್ತಿದ್ದರು. ಡಾ.ಪಿಳ್ಳೆಯವರು ಕೂಡ ನಾನಾವಲ್ಲಿಯ ಜೊತೆ ಓಡಾಡುತ್ತಿದ್ದರು. ಆದರೆ ಒಮ್ಮೆ ನಾನಾವಲ್ಲಿ ಡಾ.ಪಿಳ್ಳೆಯವರನ್ನು ಚೆನ್ನಾಗಿ ಥಳಿಸಿದನು. ಅಂದಿನಿಂದ ಅವರಿಬ್ಬರೂ ನಾನಾವಲ್ಲಿಯ ಸಹವಾಸವನ್ನು ಬಿಟ್ಟುಬಿಟ್ಟರು. ನಾನಾವಲ್ಲಿ ಸಾಯಿಬಾಬಾರವರ ಭಕ್ತನಾಗಿರಲಿಲ್ಲ. ಆದರೆ, ಅವರನ್ನು ಕಂಡರೆ ಗೌರವ ಹೊಂದಿದ್ದನು. ಸಾಯಿಬಾಬಾರವರು ಆಗಾಗ್ಗೆ ನಾನಾವಲ್ಲಿಗೆ ಹೊಡೆಯುತ್ತಿದ್ದರು ಮತ್ತು ತರಲೆ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದರು. 

ಜಯಕರ್ ರವರು ಎಂಟು ತಿಂಗಳುಗಳ ಕಾಲ ಶಿರಡಿಯಲ್ಲಿ ತಂಗಿದ್ದರು ಮತ್ತು ಸಾಯಿಬಾಬಾರವರು ನೀಡಿದ ಅನೇಕ ಉಪದೇಶಗಳನ್ನು ಕೇಳಿದ್ದರು. ಆದರೆ ಯಾವುದೂ ಇವರ ನೆನಪಿನಲ್ಲಿ ಇರುತ್ತಿರಲಿಲ್ಲ. ಜಯಕರ್ ರವರ ಪ್ರಕಾರ ಬಾಬಾರವರು ಆಧ್ಯಾತ್ಮಿಕ ಉಪದೇಶಗಳನ್ನು ಜನರಿಗೆ ನೀಡುತ್ತಿದ್ದುದು ಬಹಳ ಕಮ್ಮಿಯೆಂದೇ ಹೇಳಬೇಕು. ಏಕೆಂದರೆ, ಬಹುತೇಕ ಜನರು ಸಾಯಿಬಾಬಾರವರ ಬಳಿ ಲೌಕಿಕ ವಿಷಯಗಳಾದ ಹಣ, ಆರೋಗ್ಯ ಮತ್ತಿತರ ವಿಷಯಗಳಿಗಾಗಿ ಹೋಗುತ್ತಿದ್ದರು. 

ಸಾಯಿಬಾಬಾರವರು ಜಯಕರ್ ರವರ ಯೋಗಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದುದರಿಂದ, ಜಯಕರ್ ರವರು ತೃಪ್ತಿಯಿಂದ ಇದ್ದರು. ಕಾಲ ಕಳೆದಂತೆ ಜಯಕರ್ ರವರು ತಮ್ಮ ಎರಡು ಮಕ್ಕಳನ್ನು ಕಳೆದುಕೊಂಡರು. ಆದರೆ ಬಾಬಾರವರು ಇವರ ಮನೆಯವರನ್ನು ಸುಖವಾಗಿ ಇಟ್ಟಿದ್ದರು. ಜಯಕರ್ ರವರು ಜನರು ಸಾಯಿಬಾಬಾರವರ ಬಳಿಗೆ ಹಣವನ್ನು ಬೇಡುವುದಕ್ಕಾಗಿ ಮಾತ್ರ ಹೋಗಬಾರದೆಂದು, ಅದರ ಬದಲು ಅಧ್ಯಾತ್ಮಿಕ ಪ್ರಗತಿಗಾಗಿ ಹೋಗಬೇಕೆಂದು ಸದಾ ನುಡಿಯುತ್ತಿದ್ದರು. ಶಿರಡಿಯ ಮಸೀದಿಯ ಪ್ರತಿಯೊಂದು ಗೋಡೆಯು ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಜಯಕರ್ ವರು ಸದಾ ನುಡಿಯುತ್ತಿದ್ದರು. ಭಕ್ತರು ಗಾಡಿಯನ್ನು ತಂದು ಅದರ ತುಂಬಾ ಆ ಚಿನ್ನದ ಗಣಿಯನ್ನು ತೆಗೆದುಕೊಂಡು ಹೋಗಬೇಕೆಂದು ಇಚ್ಚಿಸುತ್ತಿದ್ದರು. ಆದರೆ ಯಾವ ಭಕ್ತರೂ ಕೂಡ ಆ ಚಿನ್ನದ ಗಣಿಯನ್ನು ತೆಗೆದುಕೊಂಡು ಹೋಗಲು ಬರಲಿಲ್ಲ ಎಂದು ವ್ಯಥೆ ಪಡುತ್ತಿದ್ದರು ಎಂದು ಕೂಡ ಹೇಳುತ್ತಿದ್ದರು. 

ರಾವ್ ಬಹದ್ದೂರ್ ಮೋರೆಶ್ವರ ಪ್ರಧಾನ್ ರವರು ಸಾಯಿಬಾಬಾವರ ತೈಲ ಚಿತ್ರವನ್ನು ಬಿಡಿಸುವಂತೆ ಕೇಳಿಕೊಂಡಿದ್ದರಿಂದ ಜಯಕರ್ ವರು ಶಿರಡಿಗೆ ಮೊದಲ ಬಾರಿಗೆ ಬರುವಂತೆ ಆಯಿತು. ಅದಕ್ಕಾಗಿ ಜಯಕರ್ ರವರು ಸಾಯಿಬಾಬಾರವರನ್ನು ನೋಡುವ ಅವಶ್ಯಕತೆಯಿತ್ತು. ಜಯಕರ್ ರವರು ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಮೊದಲ ಬಾರಿಗೆ ನೋಡಿದರು. ಬಾಬಾರವರು ಕೂಡ ಇವರನ್ನು ನೋಡಿದರು. ನಂತರ ಬಾಬಾರವರ ಚಿತ್ರವನ್ನು ಬಿಡಿಸಲು ಅವರ ಒಪ್ಪಿಗೆಯನ್ನು ಕೇಳುವ ಅವಶ್ಯಕತೆಯಿತ್ತು. ಆದುದರಿಂದ ಶ್ಯಾಮರವರು ಬಾಬಾರವರ ಬಳಿಗೆ ಹೋಗಿ ಅವರ ಚಿತ್ರವನ್ನು ಬಿಡಿಸಲು ಬಾಬಾರವರ ಅನುಮತಿಯನ್ನು ಬೇಡಿದರು. ಆಗ ಬಾಬಾರವರು "ಈ ಬಡ ಫಕೀರನ ಚಿತ್ರವನ್ನು ಬಿಡಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಶ್ಯಾಮ, ನೀನು ಬೇಕಾದರೆ ನಿನ್ನ ಚಿತ್ರವನ್ನು ಬರೆಯಿಸಿಕೊ" ಎಂದು ನುಡಿದರು. ಅನೇಕ ಬಾರಿ ಪ್ರಯತ್ನ ಮಾಡಿದ ನಂತರ ಶ್ಯಾಮರವರು ಆ ಕಾರ್ಯದಲ್ಲಿ ಜಯಶೀಲರಾಗಿ ಜಯಕರ್ ರವರ ಬಳಿಗೆ ಬಂದು ಬಾಬಾರವರು ಅವರ ಚಿತ್ರವನ್ನು ಬಿಡಿಸಲು ಒಪ್ಪಿಗೆ ನೀಡಿರುವ ವಿಷಯವನ್ನು ತಿಳಿಸಿದರು. ಆಗ ಜಯಕರ್ ರವರು ಒಂದು ಚಿತ್ರವನ್ನು ಮಾತ್ರ ಬಿಡಿಸದೆ 3 ಚಿತ್ರಗಳನ್ನು ರಚಿಸಿದರು. ಅದರಲ್ಲಿ ಎರಡು ಚಿತ್ರಗಳನ್ನು ರಾವ್ ಬಹದ್ದೂರ್  ಮೊರೇಶ್ವರ ಪ್ರಧಾನ್ ರವರು ತೆಗೆದುಕೊಂಡು ಹೋದರು. 3ನೇ ಚಿತ್ರವನ್ನು ಬಾಬಾರವರ ಬಳಿಗೆ ತೆಗೆದುಕೊಂಡು ಹೋಗಲಾಯಿತು. ಬಾಬಾರವರು ಅದನ್ನು ತಮ್ಮ ಕೈಗಳಿಂದ ಸ್ಪರ್ಶಿಸಿ ಹೆಚ್.ಎಸ್.ದೀಕ್ಷಿತ್ ರವರಿಗೆ ನೀಡಿದರು. ಆ ಚಿತ್ರವನ್ನು ಈಗಲೂ ದೀಕ್ಷಿತ್ ರವರ ಮನೆಯಲ್ಲಿ ತೂಗುಹಾಕಲಾಗಿದ್ದು ಪ್ರತಿನಿತ್ಯ ಅದನ್ನು ಪೂಜಿಸಲಾಗುತ್ತಿದೆ. 

ಜಯಕರ್ ರವರು ಸಾಯಿಬಾಬಾರವರ ಮತ್ತೊಂದು ಬೃಹತ್ ಚಿತ್ರವನ್ನು ಬಿಡಿಸಿದರು. ಅದನ್ನು ಬಹಳ ವರ್ಷಗಳ ಕಾಲ ಉಪಯೋಗಿಸದೆ ಹಾಗೆಯೇ ಇರಿಸಲಾಗಿತ್ತು. ಅದನ್ನು ಈಗ ದ್ವಾರಕಾಮಾಯಿ ಮಸೀದಿಯಲ್ಲಿ ಇರಿಸಲಾಗಿದ್ದು ಕೋಟ್ಯಾಂತರ ಸಾಯಿಭಕ್ತರು ಇದರ ದರ್ಶನ ಪಡೆಯುತ್ತಿದ್ದಾರೆ. ಈ ಚಿತ್ರವನ್ನೇ ಸಾಯಿ ಭಕ್ತರು "ದ್ವಾರಕಾಮಾಯಿ ಬಾಬಾ ಚಿತ್ರಪಟ" ಎಂದು ಕರೆಯುವ ವಾಡಿಕೆಯಿದೆ.

ಸಾಯಿಬಾಬಾರವರಿಗೆ ಜಯಕರ್ ರವರನ್ನು ಕಂಡರೆ ಅಪಾರ ಕರುಣೆಯಿತ್ತು. ಆದರೆ ಜಯಕರ್ ರವರು ಬಾಬಾರವರನ್ನು ಮತ್ತು ಎಲ್ಲಾ ವಿಷಯಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದರು.  ಇವರ ಸ್ವಭಾವ ಬಹಳ ವಿಚಿತ್ರವಾಗಿತ್ತು. ಇವರು ಯಾವ ಕೆಲಸವನ್ನು ಸರಿಯಾಗಿ ಗಮನವಿಟ್ಟು ಮಾಡುತ್ತಿರಲಿಲ್ಲ. ಈ ವಿಷಯ ಸಾಯಿಬಾಬಾರವರಿಗೆ ಚೆನ್ನಾಗಿ ತಿಳಿದಿತ್ತು. ಒಮ್ಮೆ ಬೆಳ್ಳಿಯ ಪಾದುಕೆಗಳನ್ನು ತೆಗೆದುಕೊಂಡು ಬಂದು ಅದನ್ನು ಸಾಯಿಬಾಬಾರವರ ಹಸ್ತದಿಂದ ಸ್ಪರ್ಶಿಸಿ ಪುನಃ ಪಡೆದುಕೊಂಡು ಪೂಜಿಸಬೇಕೆಂದು ಜಯಕರ್ ಆಸೆಪಟ್ಟರು.  ಅದರಂತೆ, ಬೆಳ್ಳಿಯ ಸಣ್ಣ ಪಾದುಕೆಗಳನ್ನು ತೆಗೆದುಕೊಂಡು ಬಂದು ಸಾಯಿಬಾಬಾರವರ ಕೈಗಿತ್ತರು. ಸಾಯಿಬಾಬಾರವರು ಪಾದುಕೆಗಳನ್ನು ಮತ್ತು ಜಯಕರ್ ರವರನ್ನು ಒಮ್ಮೆ ದೃಷ್ಟಿಸಿ ನೋಡಿದರು. ಅದನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ, ಅದನ್ನು ಜಯಕರ್ ರವರ ಕೈಗಳಿಗೆ ನೀಡುವ ಹಾಗೆ ಮಾಡಿ ಅದನ್ನು ಕೆಳಗೆ ಬೀಳುವಂತೆ ಮಾಡಿದರು. ಜಯಕರ್ ಅದನ್ನು ನೆಲದ ಮೇಲಿನಿಂದ ತೆಗೆದುಕೊಂಡರು ಮತ್ತು ಪೂಜೆಗೆ ಇಟ್ಟುಕೊಳ್ಳಬೇಕೆಂದು ಮನದಲ್ಲಿ ಅಂದುಕೊಂಡರು. ಅವುಗಳನ್ನು ತಮ್ಮ ಅಂಗಿಯ ಜೇಬಿನಲ್ಲಿ ಹಾಕಿಕೊಂಡರು. ಅದೇ ದಿನ ಸಾಯಂಕಾಲ ಬಟ್ಟೆಯನ್ನು ಒಗೆಯಲು ಕೊಡುವಾಗ ಪಾದುಕೆಗಳ ಸಮೇತ ಕೊಟ್ಟುಬಿಟ್ಟರು. ಈ ರೀತಿ ಪಾದುಕೆಗಳು ಕಳೆದು ಹೋದವು. ಪುನಃ ಅವರಿಗೆ ದೊರೆಯಲೇ ಇಲ್ಲ. ಅಂತರ್ಯಾಮಿಯಾದ ಬಾಬಾರವರಿಗೆ ಜಯಕರ್ ರವರು ಪಾದುಕೆಗಳನ್ನು ಕಾಪಾಡಲು ಆಗುವುದಿಲ್ಲ ಎಂದು ಮೊದಲೇ ತಿಳಿದಿತ್ತು. ಅದಕ್ಕಾಗಿಯೇ, ಅವರು ಆ ಪಾದುಕೆಗಳನ್ನು ಜಯಕರ್ ರವರಿಗೆ ನೀಡುವ ಸಂದರ್ಭದಲ್ಲಿ ತಮ್ಮ ಕೈಗಳಿಂದ ಬೀಳುವ ಹಾಗೆ ಮಾಡಿದುದು. ಅದರಂತೆ, ಜಯಕರ್ ರವರು ಪಾದುಕೆಗಳನ್ನು ಕಳೆಯುತ್ತಾರೆ ಎಂದು ಸಾಯಿಬಾಬಾರವರು ಮೊದಲೇ ಸೂಚನೆ ಈ ರೀತಿಯಲ್ಲಿ ನೀಡಿದ್ದರು.

ಒಮ್ಮೆ ಜಯಕರ್ ರವರು ಒಬ್ಬ ಮಕ್ಕಳಿಲ್ಲದ ಮುಸ್ಲಿಂ ಮಹಿಳೆಗೆ ನಾಲ್ಕು ಸಾವಿರವನ್ನು ಸಾಲವಾಗಿ ನೀಡಿದ್ದರು. ಜಯಕರ್ ರವರು 8 ಮಕ್ಕಳ ತುಂಬು ಸಂಸಾರವನ್ನು ಹೊಂದಿದ್ದರಿಂದ ಅವರಿಗೆ ದುಡ್ಡಿನ ಅವಶ್ಯಕತೆ ಬಿದ್ದಿತು. ಅದಕ್ಕಾಗಿ ಆ ಮುಸ್ಲಿಂ ಮಹಿಳೆಯಿಂದ ಹಣವನ್ನು ವಾಪಸ್ ಪಡೆಯಲು ಜಯಕರ್ ಇಚ್ಚಿಸಿದರು. ಹಣವನ್ನು ವಾಪಸ್ ಪಡೆಯಲು ಎಷ್ಟು ಪ್ರಯತ್ನಿಸಿದರೂ ಆ ಮಹಿಳೆ ಹಣವನ್ನು ಹಿಂತಿರುಗಿ ನೀಡಲಿಲ್ಲ. ಆಗ ಜಯಕರ್ ರವರು ಹಣವನ್ನು ವಾಪಸ್ ಪಡೆಯಲು ಸಾಯಿಬಾಬಾರವರ ಸಹಾಯವನ್ನು ಬೇಡಿದರು. ಆಗ ಬಾಬಾರವರು "ಆ ಕೆಟ್ಟ ಹಣದ ಆಸೆಯನ್ನು ಬಿಡು. ಆ ಹಣ ನಮಗೆ ಬೇಡ" ಎಂದು ಉತ್ತರಿಸಿದರು. ಜಯಕರ್ ರವರಿಗೆ ಹಣ ಕೊನೆಗೂ ವಾಪಸ್ ಬರಲೇ ಇಲ್ಲ. 2-3 ವರ್ಷಗಳ ನಂತರ ಆ ಮುಸ್ಲಿಂ ಮಹಿಳೆ ತನ್ನ ಎಲ್ಲಾ ಹಣವನ್ನು ಕಳೆದುಕೊಂಡಿರುವುದು ಜಯಕರ್ ರವರಿಗೆ ತಿಳಿದು ಬಂದಿತು.

ಜಯಕರ್ ರವರು ಶಿರಡಿಗೆ ಮೊದಲ ಭೇಟಿ ನೀಡಿದಾಗಿನಿಂದ ಅವರ ಬಳಿ ಸದಾಕಾಲ ಸಾಯಿಬಾಬಾರವರ ಚಿತ್ರಪಟವಿರುತ್ತಿತ್ತು. ಜಯಕರ್ ರವರು ಎಲ್ಲಿಯೇ ಹೋಗಲಿ ಸಾಯಿಬಾಬಾರವರು ಅವರನ್ನು ಮತ್ತು ಅವರ ಮನೆಯವರನ್ನು ವಿಶಿಷ್ಟ ರೀತಿಯಲ್ಲಿ ಸದಾಕಾಲ ಕಾಪಾಡುತ್ತಿದ್ದರು. ಅದರ ಕೆಲವು ಉದಾಹರಣೆಗಳು ಈ ಕೆಳಕಂಡಂತೆ ಇವೆ:

1916ನೇ ಇಸವಿಯಲ್ಲಿ ಜಯಕರ್ ರವರು ಮುಂಬೈ ನ ಭಾಗವಾದ ಮುಗಬಾತ್ ನ ಗಜಾನನ ರಾವ್ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯ ಕೋಣೆಯೊಳಗೆ ಸಾಯಿಬಾಬಾರವರ ಚಿತ್ರಪಟವನ್ನು ಇರಿಸಲಾಗಿತ್ತು. ಒಂದು ದಿನ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಸಾಯಿಬಾಬಾರವರ ಚಿತ್ರಪಟವಿದ್ದ ಕೋಣೆಗೆ ಮೊದಲು ನುಗ್ಗಲು ಪ್ರಯತ್ನಿಸಿದರು. ಕಿಟಕಿಯ ಎರಡು ಕಬ್ಬಿಣದ ಸರಳುಗಳನ್ನು ಯಶಸ್ವಿಯಾಗಿ ಕಿತ್ತು ಬಿಸುಟರು. ಇದರಿಂದ ಕಳ್ಳರಿಗೆ ಮನೆಯೊಳಗೆ ನುಗ್ಗಲು ಬಹಳ ಸುಲಭವಾಯಿತು. ಆದರೆ, ಅದೇ ಮನೆಯ ಇನ್ನೊಂದು ಕಡೆಯಲ್ಲಿ ವರಾಂಡದ ಹತ್ತಿರ ಕ್ಷೌರಿಕನೊಬ್ಬ ಮಲಗಿದ್ದನು. ಅವನು ಪ್ರತಿನಿತ್ಯ ಅದೇ ಸ್ಥಳದಲ್ಲಿ ಮಲಗುತ್ತಿದ್ದು ಸರಿಯಾಗಿ 4 ಘಂಟೆಗೆ ಏಳುವ ಅಭ್ಯಾಸ ಇಟ್ಟುಕೊಂಡಿದ್ದನು ಮತ್ತು ಮನೆಯ ಹಿಂಭಾಗದಲ್ಲಿ ಹೋಗಿ ಜಲಬಾಧೆಯನ್ನು ತೀರಿಸಿಕೊಂಡು ಬರುತ್ತಿದ್ದನು. ಆದರೆ, ಕಳ್ಳರು ನುಗ್ಗಲು ಯತ್ನಿಸಿದ ದಿನದಂದು 2 ಘಂಟೆಗೆ ಎದ್ದು ಮನೆಯ ಹಿಂಭಾಗದಲ್ಲಿ ಜಲಬಾಧೆಯನ್ನು ತೀರಿಸಿಕೊಳ್ಳಲು ಹೋದನು. ಅವನು ಬರುತ್ತಿರುವುದನ್ನು ನೋಡಿ ಕಳ್ಳರು ಭಯದಿಂದ ಓಡಲು ಪ್ರಾರಂಭಿಸಿದರು. ಅವರುಗಳು ಓಡುವುದನ್ನು ನೋಡಿದ ಕ್ಷೌರಿಕ "ಕಳ್ಳರು ಕಳ್ಳರು" ಎಂದು ಜೋರಾಗಿ ಕೂಗಿಕೊಂಡನು. ಅವನು ಕೂಗುವುದನ್ನು ಕೇಳಿ ಮನೆಯವರೆಲ್ಲರೂ ಎಚ್ಚರಗೊಂಡರು. ಹೀಗೆ ಮನೆಯನ್ನು ಲೂಟಿ ಮಾಡಿ ಕಳ್ಳರು ದೋಚಿಕೊಂಡು ಹೋಗುವುದು ತಪ್ಪಿತು.   ಮನೆಯವರೆಲ್ಲರೂ ಕೋಣೆಯಲ್ಲಿದ್ದ ಸಾಯಿಬಾಬಾರವರು ಮನೆಯಲ್ಲಿ ಕಳ್ಳತನ ಆಗುವುದನ್ನು ತಪ್ಪಿಸಿದರು ಎಂದು ಮನಗಂಡರು.

ಸುಮಾರು 1917ನೇ ಇಸವಿಯಲ್ಲಿ ಜಯಕರ್ ರವರ ಮನೆಯವರು ಪುಣೆಯಲ್ಲಿ ಒಂದು ಶಿಥಿಲವಾದ ಮನೆಯಲ್ಲಿ ವಾಸಿಸುತ್ತಿದ್ದರು. ಆ ಮನೆಯ ಗೋಡೆಗಳು ಹಾಗೂ ಚಾವಣಿ ಕಿತ್ತು ಬೀಳುವ ಹಾಗೆ ತೋರುತ್ತಿತ್ತು. ಆ ಮನೆಯ ಕೋಣೆಯಲ್ಲಿ ಧೂಳು ಬೀಳದಿರಲೆಂದು ಚಾವಣಿಗೆ ಒಂದು ಬಟ್ಟೆಯನ್ನು ಕಟ್ಟಿ ಅದನ್ನು ಕೆಳಗಡೆ ಇಳಿ ಬಿಡಲಾಗಿತ್ತು.  ಆ ಕೋಣೆಯಲ್ಲಿ ಸಾಯಿಬಾಬಾರವರ ಚಿತ್ರಪಟವೊಂದನ್ನು ಇರಿಸಲಾಗಿತ್ತು  ಮತ್ತು ಆ ಚಿತ್ರಪಟದ ಎದುರುಗಡೆ ಸೀಮೆಎಣ್ಣೆಯ ದೀಪದ ಬುಡ್ಡಿಯನ್ನು ಇರಿಸಲಾಗಿತ್ತು. ಆ ದೀಪದ ಪಕ್ಕದಲ್ಲೇ ಜಯಕರ್ ರವರ ಒಂದು ವರ್ಷದ ಮಗುವು ಮಲಗಿತ್ತು. ಮಧ್ಯರಾತ್ರಿಯ ವೇಳೆಯಲ್ಲಿ ಜೋರಾಗಿ ಶಬ್ದ ಕೇಳಿಸಿತು. ಚಾವಣಿಗೆ ಹೊದ್ದಿಸಿದ್ದ ಬಟ್ಟೆಯು ಕೆಳಗಡೆ ಬಿದ್ದಿತ್ತು. ಕೆಲವು ಇಟ್ಟಿಗೆಯ ಚೂರುಗಳು ಕೆಳಗಡೆ ಬಿದ್ದ ಬಟ್ಟೆಯ ಮೇಲೆ ಬಿದ್ದಿದ್ದವು. ಪೂರ್ತಿ ಚಾವಣಿಗೆ ಬಟ್ಟೆಯನ್ನು ಕಟ್ಟಿದ್ದರಿಂದ ಪೂರ್ತಿ ಚಾವಣಿಯೇ ಮುರಿದು ಮಗುವಿನ ಮೇಲೆ ಮತ್ತು ಸಾಯಿಬಾಬಾರವರ ಚಿತ್ರಪಟದ ಮೇಲೆ ಬೀಳಬೇಕಾಗಿತ್ತು. ಆದರೆ, ಸಾಯಿಬಾಬಾರವರ ಸಂಕಲ್ಪವೇ ಬೇರೆ ಇದ್ದಿತು. ಚಾವಣಿಯ ಇಟ್ಟಿಗೆಯ ಚೂರುಗಳು ಮಗುವಿನಿಂದ ಮತ್ತು ದೀಪದಿಂದ ಸುಮಾರು ಒಂದು ಅಡಿ ದೂರದಲ್ಲಿ ಬಿದ್ದಿತ್ತು. ಮಗುವಿನ ಮೇಲೆ ಬಿದ್ದಿದ್ದರೆ ಮಗುವು ಸತ್ತು ಹೋಗುತ್ತಿತ್ತು. ದೀಪದ ಮೇಲೆ ಬಿದ್ದಿದ್ದರೆ ಇಡೀ ಮನೆಯೇ ಹತ್ತಿಕೊಂಡು ಮಗುವಿನ ಸಮೇತ ಸುಟ್ಟುಹೋಗುತ್ತಿತ್ತು.  ಇದಲ್ಲವೇ, ಸಾಯಿ ಬಾಬಾರವರ ಲೀಲೆ ಎಂದರೆ!!!!!!!!!!


1917ನೇ ಇಸವಿಯಲ್ಲಿ ಜಯಕರ್ ರವರು ತಮ್ಮ ಮನೆಯವರ ಸಮೇತ ಶಿರಡಿಗೆ ಹೋಗಿ ಸುಮಾರು 10 ತಿಂಗಳುಗಳ ಕಾಲ ತಂಗಿದ್ದರು. ಇವರ ಮನೆಯವರೆಲ್ಲ ಬಾಳಾ ಬಾವುವಿನ ಅಂದರೆ ಶಾರದಾಬಾಯಿಯವರ ಮನೆಯಲ್ಲಿ ತಂಗಿದ್ದರು. ಅವರ ಮನೆಯ ಕೋಣೆಯಲ್ಲಿ ಸರ್ಪವೊಂದು ಗೂಡು ಮಾಡಿಕೊಂಡು ವಾಸ ಮಾಡುತ್ತಿತ್ತು. ಇದರಿಂದ ಇವರ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಒಂದು ದಿನ ರಾತ್ರಿ ಜಯಕರ್ ರವರ ಮಗ ಮತ್ತು ಇತರರು ಆ ಸರ್ಪವು ಗೂಡಿನಿಂದ ಹೊರಬರುವುದನ್ನು ನೋಡಿ ಅದನ್ನು ಹೊಡೆದು ಕೊಂದರು.

1923ನೇ ಇಸವಿಯಲ್ಲಿ ಜಯಕರ್ ರವರ ಹತ್ತು ವರ್ಷದ ಮಗನಾದ ಸುರೇಂದ್ರನಿಗೆ ಟೈಫಾಯಿಡ್ ಜ್ವರ ಕಾಣಿಸಿಕೊಂಡಿತು. ಒಂದು ದಿನ ಸುರೇಂದ್ರನ ಜ್ವರ ಜಾಸ್ತಿಯಾಗಿ ಹೊಟ್ಟೆಯಿಂದ ವಾಯುವು ಮೇಲ್ಮುಖವಾಗಿ ಹೃದಯ ಭಾಗಕ್ಕೆ ಬಂದು ನೋವು ವಾಯುಭಾರ ಹೆಚ್ಚಾಗಿ  "ಕಾಪಾಡಿ, ಕಾಪಾಡಿ" ಎಂದು ಕೂಗಿಕೊಂಡನು. ಇದನ್ನು ನೋಡಿ ಜಯಕರ್ ವರಿಗೆ ಏನೂ ಮಾಡಲು ತೋಚದಂತಾಯಿತು. ಜಯಕರ್ ವರು ಜೋರಾಗಿ "ಬಾಬಾ" ಎಂದು ಅಳಲು ಪ್ರಾರಂಭಿಸಿದರು. ಒಂದೇ ನಿಮಿಷದಲ್ಲಿ ಸುರೇಂದ್ರನ ವಾಯುಭಾರ ಕಡಿಮೆಯಾಗಿ ಮೊದಲಿನಂತಾದನು.

ಸಾಯಿಬಾಬಾರವರು ಜಯಕರ್ ರವರಿಗೆ ಯಾವುದೇ ಮಂತ್ರೋಪದೇಶ ಮಾಡಲಿಲ್ಲ. ಏಕೆಂದರೆ, ಜಯಕರ್ ರವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲೇ ತಮ್ಮ ಗುರುವಿನಿಂದ ಮಂತ್ರೋಪದೆಶವನ್ನು ಪಡೆದು ಅವರ ಆದೇಶದಂತೆ 12 ವರ್ಷಗಳ ಕಾಲ ಉಚ್ಚರಿಸಿ ಸಿದ್ದಿ ಮಾಡಿಕೊಂಡಿದ್ದರು. ಆದ್ದರಿಂದ ಬಾಬಾರವರು ಕೇವಲ ಅಧ್ಯಾತ್ಮಿಕ ಬೋಧನೆಯನ್ನು ಮಾತ್ರ ಮಾಡುತ್ತಿದ್ದರು. ಬಾಬಾರವರು ತಮಗೆ ಪ್ರಶ್ನೆಯನ್ನು ಕೇಳುವ ವ್ಯಕ್ತಿ ಇನ್ನೊಬ್ಬರ ಮುಖಾಂತರ ಕೇಳುವುದನ್ನು ಇಷ್ಟ ಪಡುತ್ತಿರಲಿಲ್ಲ. ನೇರವಾಗಿ ತಮ್ಮನ್ನೇ ಕೇಳಬೇಕೆಂದು ಬಯಸುತ್ತಿದ್ದರು.

ಒಮ್ಮೆ ಬಾಬಾರವರು ಹೆಚ್.ಎಸ್.ದೀಕ್ಷಿತ್ ರವರನ್ನು ಕರೆದು 30 ರುಪಾಯಿಗಳ ದಕ್ಷಿಣೆಯನ್ನು ನೀಡುವಂತೆ ಕೇಳಿದರು.  ಆಗ ದೀಕ್ಷಿತ್ ರವರು ತಮ್ಮ ಬಳಿ ಹಣ ಇಲ್ಲವೆಂದು ಹೇಳಿದಾಗ ಸಾಯಿಬಾಬಾರವರು ಹಣವನ್ನು ಬಾಪು ಸಾಹೇಬ್ ಜೋಗ ರವರ ಬಳಿ ಹೋಗಿ ತರಲು ಆಜ್ಞಾಪಿಸಿದರು. ಸಾಯಿಯವರ ಆದೇಶದಂತೆ ದೀಕ್ಷಿತ್ ಹೊರಟರು. ಇನ್ನು ಮಸೀದಿಯ ಹೊರಬಾಗಿಲನ್ನು ಕೂಡ ದೀಕ್ಷಿತ್ ದಾಟಿರಲಿಲ್ಲ. ಆಗ ಬಾಬಾರವರು "ಇವನ ಮನಸ್ಸು ಸ್ಥಿರವಾಗಿಲ್ಲ" ಎಂದರು. ಸಾಯಿಬಾಬಾರವರು ಹಾಗೆ ಹೇಳಲು ಕಾರಣವೇನೆಂದರೆ ದೀಕ್ಷಿತ್ ರವರ ಮನಸ್ಸಿನಲ್ಲಿ ಸಾಯಿಬಾಬಾರವರ ಬಗ್ಗೆ ಸಂಶಯ ಮನೋಭಾವನೆ ಇತ್ತು. ಆದುದರಿಂದ ಅವರು ಸಾಯಿಬಾಬಾರವರನ್ನೇ ನೇರವಾಗಿ ಕೇಳುವ ಬದಲು ಅವರ ಬಗ್ಗೆ ಶಿರಡಿಯಲ್ಲಿದ್ದ ಅನೇಕ ಜನರಲ್ಲಿ ವಿಚಾರ ಮಾಡುತ್ತಿದ್ದರು. ಆದರೆ, ಕಾಲ ಕಳೆದಂತೆ ದೀಕ್ಷಿತ್ ರವರಿಗೆ ಸಾಯಿಬಾಬಾರವರ ಮೇಲೆ ನಂಬಿಕೆ ಹುಟ್ಟಿ ಅವರ ಮನೋಭಾವ ಬದಲಾಯಿತು.

ಬಾಬಾರವರು ಜಯಕರ್ ರವರಿಗೆ ತಮ್ಮ ಅಂತರ್ಜ್ಞಾನವನ್ನು ಪ್ರದರ್ಶಿಸುವ ಮುಖಾಂತರ ಅವರಿಗೆ ತಮ್ಮ ಮೇಲಿದ್ದ ನಂಬಿಕೆಯನ್ನು ಬಲಪಡಿಸಿದರು. ಒಮ್ಮೆ  ಜಯಕರ್ ರವರು ಸಾಯಿಬಾಬಾರವರ ಮುಂದೆ ಕುಳಿತಿದ್ದರು. ಅವರ ಅಂಗಿಯ ಜೇಬಿನಲ್ಲಿ ಕೇವಲ 3 ರುಪಾಯಿಗಳಿದ್ದವು. ಆ ಸಮಯದಲ್ಲಿ ಸಾಯಿಬಾಬಾರವರ ಪಕ್ಕದಲ್ಲಿ ಕಾಕಾ ದೀಕ್ಷಿತ್, ನಾನಾ ಸಾಹೇಬ್ ನಿಮೋಣ್ಕರ್ ರವರುಗಳು ಕೂಡ ಇದ್ದರು. ಆಗ ಬಾಬಾರವರು ಜಯಕರ್ ರವರನ್ನು ಉದ್ದೇಶಿಸಿ "ಮಾಲಾ ಚಾರ್ ದ್ಯಾವೇ"
ಎಂದು ಕೇಳಿದರು. ಜಯಕರ್ ರವರು ಸಾಯಿಬಾಬಾರವರು ತಮ್ಮನ್ನು ಹಣ ಕೇಳುತ್ತಿದ್ದಾರೆ ಎಂದು ತಿಳಿದುಕೊಂಡರು. ಆದ್ದರಿಂದ ತಮ್ಮ ಅಂಗಿಯ ಜೇಬಿನಿಂದ 3 ರುಪಾಯಿಗಳನ್ನು ತೆಗೆದು ಸಾಯಿಬಾಬಾರವರ ಮುಂದೆ ಇಟ್ಟರು. ಕಾಕಾ ಸಾಹೇಬ್ ದೀಕ್ಷಿತ್ ರವರು ಜಯಕರ್ ರವರ ಕಡೆ ನೋಡುತ್ತಾ "ನಾಲ್ಕು ರುಪಾಯಿಗಳನ್ನು ಕೇಳುತ್ತಿರುವಾಗ 3 ರುಪಾಯಿಗಳನ್ನು ಏಕೆ ಕೊಡುತ್ತಿದ್ದೀರಿ" ಎಂದು ಕೇಳಿದರು. ಕೂಡಲೇ ಬಾಬಾರವರು "ಏಕೆ ನಾಲ್ಕು ರುಪಾಯಿಗಳು? ಅವನ ಬಳಿ ಇರುವುದೇ  3 ರುಪಾಯಿಗಳು" ಎಂದು ನುಡಿದರು. ಸಾಯಿಬಾಬಾರವರಿಗೆ ಜಯಕರ್ ರವರ ಅಂಗಿಯ ಜೇಬಿನಲ್ಲಿದ್ದುದು ಕೇವಲ 3 ರುಪಾಯಿಗಳು ಎಂದು ಮೊದಲೇ ತಿಳಿದಿತ್ತು. ಸಾಯಿಬಾಬಾರವರಿಗೆ ಜಯಕರ್ ರವರು ಅವರ ಬಳಿ ಉಳಿದಿದ್ದ ಎಲ್ಲ ಹಣವನ್ನು ಸಂತೋಷದಿಂದ ನೀಡಿ ತಮ್ಮ ತೊಂದರೆಯನ್ನು ವಿಧಿಗೆ ಒಪ್ಪಿಸಬೇಕೆಂದು ಆಗಿತ್ತು. ಅದರಂತೆ, ಜಯಕರ್ ರವರು ಕೂಡ ನಡೆದುಕೊಂಡರು.

ಇನ್ನೊಂದು ಘಟನೆ ಈ ರೀತಿಯಿದೆ: 1917ನೇ ಇಸವಿಯ ಆಷಾಢ ಮಾಸದ ಒಂದು ದಿನ ಜಯಕರ್  ರವರು ಮಸೀದಿಯ ಸಭಾಮಂಟಪದಲ್ಲಿ ಸಾಯಿಬಾಬಾರವರು ಕುಳಿತಿದ್ದ ಜಾಗದಿಂದ ಸುಮಾರು ಇಪ್ಪತ್ತು ಅಡಿಗಳಷ್ಟು ದೂರದಲ್ಲಿ ಕುಳಿತಿದ್ದರು. ವರ್ದೆ ಎನ್ನುವ ಭಕ್ತರೊಬ್ಬರು ಅವರ ಬಳಿ ಕುಳಿತು ಮಾತನಾಡುತ್ತಿದ್ದರು. ಅವರು ಮಸೀದಿಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಲು ಇಚ್ಚಿಸಿ ಅದಕ್ಕೆ ಸಾಯಿಬಾಬಾರವರ ಅನುಮತಿಯನ್ನು ಬೇಡಿದರು. ಬಾಬಾರವರು ಅದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆಗ ವರ್ದೆಯವರು ತಮ್ಮ ಬಳಿ ಪೂಜೆ ಮಾಡಲು ಹಣದ ಅಭಾವವಿರುವುದಾಗಿ ತಿಳಿಸಿದರು. ಆಗ ಬಾಬಾರವರು ಜಯಕರ್ ರವರ ಬಳಿ ತಮ್ಮ ಕೈಬೆರಳನ್ನು ತೋರಿಸುತ್ತಾ "ಹೋಗಿ ಅವನನ್ನು ಕೇಳು" ಎಂದರು. ವರ್ದೆಯವರು ಜಯಕರ್ ರವರ ಬಳಿಗೆ ಬಂದು ಸಾಯಿಬಾಬಾರವರು ಮಸೀದಿಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಲು ಒಪ್ಪಿಗೆ ನೀಡಿರುವುದಾಗಿ ತಿಳಿಸಿ ಅದರ ಖರ್ಚಿಗಾಗಿ ಬೇಕಾದ ಹಣವನ್ನು ಇವರ ಬಳಿ ತೆಗೆದುಕೊಳ್ಳುವಂತೆ ಹೇಳಿರುವುದಾಗಿ ತಿಳಿಸಿದರು. ಜಯಕರ್ ರವರಿಗೆ ವರ್ದೆಯವರ ಪರಿಚಯ ಹೆಚ್ಚಾಗಿ ಇರಲಿಲ್ಲ. ಅವರು ಕೇವಲ ಒಬ್ಬ ಸಾಯಿಬಾಬಾರವರ ಭಕ್ತರೆಂದು ಮಾತ್ರ ತಿಳಿದಿತ್ತು. ಆದರೂ ಸಾಯಿಬಾಬಾರವರ ಆಜ್ಞೆ ಎಂದು ತಿಳಿದ ಕೂಡಲೇ ಜಯಕರ್ ರವರು ಎಷ್ಟು ಹಣ ಬೇಕೆಂದು ವರ್ದೆಯವರನ್ನು ವಿಚಾರಿಸಿದರು. ವರ್ದೆಯವರು 2-5-0 ರುಪಾಯಿಗಳು ಬೇಕೆಂದು ಕೇಳಿದರು. ಆಗ ಜಯಕರ್ ರವರ ಅಂಗಿಯ ಜೇಬಿನಲ್ಲಿ ಸರಿಯಾಗಿ ಅಷ್ಟೇ ಹಣವಿತ್ತು. ಜಯಕರ್ ರವರಿಗೆ ಇದು ಸಾಯಿಬಾಬಾರವರ ಲೀಲೆ ಎಂದು ಕೂಡಲೇ ತಿಳಿದುಬಂದಿತು. ಕೂಡಲೇ ಸ್ವಲ್ಪವೂ ತಡ ಮಾಡದೆ ತಮ್ಮ ಜೇಬಿನಿಂದ ಹಣವನ್ನು ತೆಗೆದು ವರ್ದೆಯವರಿಗೆ ಕೊಟ್ಟುಬಿಟ್ಟರು. ವರ್ದೆಯವರು ಆ ಹಣವನ್ನು ಪಡೆದು ಸತ್ಯನಾರಾಯಣ ಪೂಜೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲು ಹೊರಟರು. ಎರಡು ಬಾಳೆಯ ಎಲೆಗಳನ್ನು ತಂದು ಸಾಯಿಬಾಬಾರವರ ಎರಡೂ ಬದಿಯಲ್ಲಿ ಕಟ್ಟಿದರು.  ಸಾಯಿಬಾಬಾರವರನ್ನೇ ಸತ್ಯನಾರಾಯಣ ಎಂದು ಭಾವಿಸಿ ವರ್ದೆಯವರು ಹೀಗೆ ಮಾಡಿದರು. ಇದಕ್ಕೆ ಬಾಬಾರವರು ಒಪ್ಪದೇ ಆ ಬಾಳೆಯ ಎಲೆಗಳನ್ನು ಸತ್ಯನಾರಾಯಣ ಸ್ವಾಮಿಯ ಚಿತ್ರಪಟದ ಎಕ್ಕೆಲೆಗಳಲ್ಲಿ ಕಟ್ಟಬೇಕೆಂದು ತಿಳಿಸಿದರು. ಆದರೆ ಮಸೀದಿಯಲ್ಲಿ ಸೇರಿದ್ದ ಎಲ್ಲಾ ಭಕ್ತರೂ ಸಾಯಿಬಾಬಾರವರೇ ಸತ್ಯನಾರಾಯಣನಂತೆ ನಟಿಸಿ ಪೂಜೆಯಲ್ಲಿ ಪಾಲ್ಗೊಳ್ಳಬೇಕೆಂದು ಹಠ ಮಾಡಿದರು. ಕೊನೆಗೆ ಬಾಬಾರವರು ಅದಕ್ಕೆ ಸಮ್ಮತಿಸಿದರು. ಸಭಾಮಂಟಪದಲ್ಲಿ ಸತ್ಯನಾರಾಯಣ ವ್ರತದ ಕಥೆಯನ್ನು ಓದಲು ಆರಂಭ ಮಾಡಿದರು. ಆಗ ಜಯಕರ್ ಮತ್ತು ಇಬ್ಬರು ಬೇರೆ ಭಕ್ತರು ಸಾಯಿಬಾಬಾರವರ ಪಕ್ಕದಲ್ಲಿ ಮಸೀದಿಯಲ್ಲೇ ಕುಳಿತಿದ್ದರು. ಅವರು ಸಾಯಿಬಾಬಾರವರ ಪಕ್ಕದಲ್ಲಿ ಮಸೀದಿಯಲ್ಲಿ ಕುಳಿತಿದ್ದರಿಂದ ಸತ್ಯನಾರಾಯಣ ವ್ರತ ಕಥೆಯನ್ನು ಕೇಳಲು ಆಗುತ್ತಿರಲಿಲ್ಲ. ಆದರೆ, ಅವರಿಗೆ ಸತ್ಯನಾರಾಯಣ ವ್ರತ ಕಥೆಯನ್ನು ಕೇಳುವುದೆಂದರೆ ಬಹಳ ಇಷ್ಟವಾಗುತ್ತಿತ್ತು. ಆದ ಕಾರಣ ಜಯಕರ್ ರವರ ಮನಸ್ಸು ಆಗ ಗೊಂದಲಮಯವಾಗಿತ್ತು. ಇವರ ಅಂತರಂಗವನ್ನು ತಿಳಿದಿದ್ದ ಬಾಬಾರವರು ಜಯಕರ್ ರವರಿಗೆ ಕೆಳಗಡೆ ಹೋಗಿ ಕುಳಿತು ಕಥೆಯನ್ನು ಕೇಳುವಂತೆ ಆಜ್ಞಾಪಿಸಿದರು.

ಇನ್ನೊಂದು ಬಾರಿ ಸಾಯಿಬಾಬಾರವರು ಒಂದು ಮುಗ್ಧ ಪ್ರಾಣಿಯನ್ನು ಹೇಗೆ ಕಾಪಾಡಿದರು ಎಂಬುದನ್ನು ನೋಡೋಣ. ಒಮ್ಮೆ ಜಯಕರ್ ರವರು ದೀಕ್ಷಿತ್ ವಾಡಾ ದ ವರಾಂಡದಲ್ಲಿ ಕುಳಿತಿದ್ದಾಗ ಒಂದು ವಿಚಿತ್ರವನ್ನು ನೋಡಿದರು. ದೊಡ್ಡ ನಾಯಿಗಳನ್ನು ಒಂದು ಸಣ್ಣ ಹುಚ್ಚು ನಾಯಿ ಅಟ್ಟಿಸಿಕೊಂಡು ಹೋಗುವುದನ್ನು ಕಂಡರು. ಆ ಸಣ್ಣ ನಾಯಿಯು ತಮ್ಮನ್ನು ಕಚ್ಚುವ ಭಯದಿಂದ ದೊಡ್ಡ ನಾಯಿಗಳು ಓಡುತ್ತಿದ್ದವು. ಈ ವಿಚಿತ್ರ ದೃಶ್ಯವನ್ನು ಕಂಡ ಶಿರಡಿಯ ಗ್ರಾಮಸ್ಥರು ಕೋಲುಗಳನ್ನು ಹಿಡಿದು ಆ ಸಣ್ಣ ನಾಯಿಯನ್ನು ಸಾಯಿಸುವ ಸಲುವಾಗಿ ಅದರ ಹಿಂದೆ ಓಡತೊಡಗಿದರು. ಈ ಘಟನೆ ನಡೆಯುತ್ತಿರುವಾಗ ಜಯಕರ್ ರವರು ಮಸೀದಿಗೆ ಬಂದಿದ್ದರು. ಅವರ ಹಿಂದೆ ನಾಯಿಯನ್ನು ಅಟ್ಟಿಸಿಕೊಂಡು ಬಂದ ಜನರುಗಳೂ ಕೂಡ ಬಂದರು. ಅವರುಗಳನ್ನು ಕಂಡ ಆ ಸಣ್ಣ ನಾಯಿಯು ಓಡಿಹೋಗಿ ಸಾಯಿಬಾಬಾರವರ ಹಿಂದೆ ಅಡಗಿ ಕುಳಿತುಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಬಂದ ಜನರು ಆ ನಾಯಿಯು ಸಾಯಿಬಾಬಾರವರ ಹಿಂಭಾಗದಿಂದ ಹೊರಗಡೆ ಬರುವುದನ್ನೇ ಕಾಯುತ್ತಾ ನಿಂತರು. ಆದರೆ, ಬಾಬಾರವರು ನಾಯಿಯನ್ನು ಅಟ್ಟಿಸಿಕೊಂಡು ಬಂದ ಜನರನ್ನು ಬಾಯಿಗೆ ಬಂದಂತೆ ಬಯ್ದರು. ಆ ಪ್ರಾಣಿಯನ್ನು ಏಕೆ ಹಿಂಸೆ ಮಾಡುವಿರಿ ಎಂದು ತರಾಟೆಗೆ ತೆಗೆದುಕೊಂಡರು. ಆಗ ಆ ಜನರು ಆ ನಾಯಿಗೆ ಹುಚ್ಚು ಹಿಡಿದಿರುವುದಾಗಿ ಹೇಳಿ ಆದ ಕಾರಣ ಅದನ್ನು ಕೊಲ್ಲಲು ಹೊರಟಿರುವುದಾಗಿ ತಿಳಿಸಿದರು. ಅದಕ್ಕೆ ಬಾಬಾರವರು ಇನ್ನು ಹೆಚ್ಚಿಗೆ ಬಯ್ಗುಳಗಳನ್ನು ಸುರಿಸಿ ಮಸೀದಿಯಿಂದ ಹೊರಟು ಹೋಗುವಂತೆ ಆಜ್ಞಾಪಿಸಿದರು. ಆಗ ಅಲ್ಲಿ ಜಯಕರ್ ಮತ್ತು ಡಾ.ಪಿಳ್ಳೆಯವರು ಕೂಡ ಇದ್ದರು. ಅವರುಗಳು ಕೂಡ ನಾಯಿಗೆ ಹುಚ್ಚು ಹಿಡಿದಿರುವುದರಿಂದ ಅದರ ಹತ್ತಿರ ಇರುವುದು ಅಪಾಯ ಎಂದು ಯೋಚಿಸತೊಡಗಿದರು. ಆದರೆ ಕೊನೆಗೆ ನಾಯಿಯನ್ನು ಅಟ್ಟಿಸಿಕೊಂಡು ಬಂದಿದ್ದ ಜನರೆಲ್ಲರೂ ವಿಧಿ ಇಲ್ಲದೆ ಬಂದ ದಾರಿಯಲ್ಲೇ ಹಿಂತಿರುಗಿದರು. ಹೀಗೆ ಸಾಯಿಬಾಬಾರವರು ಆ ನಾಯಿಯ ಪ್ರಾಣವನ್ನು ಉಳಿಸಿದರು. ಆಗ ಜಯಕರ್ ರವರು ಸಾಯಿಬಾಬಾರವರು ಆ ನಾಯಿಯ ಖಾಯಿಲೆಯನ್ನು ವಾಸಿ ಮಾಡಿ ಅದರ ಪ್ರಾಣವನ್ನು ಉಳಿಸಿರುವುದಾಗಿ ಡಾ.ಪಿಳ್ಳೆಯವರಿಗೆ ತಿಳಿಸಿದರು. ಅಂತರ್ ಜ್ಞಾನಿಯಾದ ಬಾಬಾರವರಿಗೆ ಆ ನಾಯಿಯ ಖಾಯಿಲೆಯ ವಿಷಯ, ಅದನ್ನು ವಾಸಿ ಮಾಡುವ ಬಗೆ ಮತ್ತು ಅದನ್ನು ಜನರಿಂದ ರಕ್ಷಿಸುವ ವಿಷಯವೆಲ್ಲಾ ಮೊದಲೇ ತಿಳಿದಿತ್ತೆಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ?

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment