Saturday, September 17, 2011

ಸಾಯಿ ಮಹಾಭಕ್ತೆ - ಚಂದ್ರಾಭಾಯಿ ಬೋರ್ಕರ್  - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀಮತಿ.ಚಂದ್ರಾಭಾಯಿ ಬೋರ್ಕರ್ ರವರು ಮುಂಬೈನ ವಿಲೇಪಾರ್ಲೆಯಲ್ಲಿ ವಾಸವಾಗಿದ್ದ ಶ್ರೀ.ರಾಮಚಂದ್ರ ಬೋರ್ಕರ್ ರವರ ಹೆಂಡತಿಯಾಗಿದ್ದರು. ಇವರು 1898 ರಲ್ಲಿ ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ  ಸಾಯಿಬಾಬಾರವರನ್ನು ಭೇಟಿಯಾಗಿದ್ದರು. ಸಾಯಿಬಾಬಾರವರು ಇವರಿಗೆ ಪ್ರತಿದಿನ ತಮ್ಮ ಸ್ವಹಸ್ತದಿಂದ ಸ್ವಲ್ಪ ಉಧಿಯನ್ನು ನೀಡುತ್ತಿದ್ದರು. ಚಂದ್ರಾಭಾಯಿಯವರು ಆ ಉಧಿಯು ಉತ್ತಮ ಗುಣಕಾರಕ ಶಕ್ತಿಯನ್ನು ಹೊಂದಿದ್ದರಿಂದ ಬಹಳ ಜಾಗರೂಕತೆಯಿಂದ ಅದನ್ನು ಕಾಪಾಡಿಕೊಂಡಿದ್ದರು. ಅಲ್ಲದೆ, ಅವರ ಬಳಿ ಸಾಯಿಬಾಬಾರವರು ಜ್ಞಾಪಕಾರ್ಥವಾಗಿ ನೀಡಿದ್ದ ಸಾಯಿಬಾಬಾರವರ ದಂತವನ್ನು ಒಳಗೊಂಡಿದ್ದ ತಾಯಿತವು ಕೂಡ ಇತ್ತು.

ಇವರಿಗೆ ಸಾಯಿಬಾಬಾರವರ ಮೇಲೆ ಅತೀವವಾದ ಭಕ್ತಿ ಮತ್ತು ಪ್ರೀತಿ ಇತ್ತು. ಅದೇ ರೀತಿಯಲ್ಲಿ ಸಾಯಿಬಾಬಾರವರು ಕೂಡ ಇವರ ಭಕ್ತಿಗೆ ತಕ್ಕ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಇವರು 1898 ರಲ್ಲಿ ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈಗ ನಮಗೆ ಕಾಣಿಸುವ ಪುನರ್ ನಿರ್ಮಾಣಗೊಂಡಿರುವ ದ್ವಾರಕಾಮಾಯಿ ಮಸೀದಿ ಮತ್ತು ಸಾಥೆವಾಡಾ ಇರಲಿಲ್ಲ. ಸಾಯಿಬಾಬಾರವರು ಈಗ ಸಾಥೆವಾಡಾ ಇರುವ ಸ್ಥಳದಲ್ಲಿದ್ದ ಬೇವಿನ ಮರದ ಕೆಳಗಡೆ ಕುಳಿತಿದ್ದರು. ಅಲ್ಲದೇ, ಬಾಬಾರವರು ಎಣ್ಣೆಯ ಬದಲು ನೀರನ್ನು ಹಣತೆಗಳಿಗೆ ಹಾಕುತ್ತಿದ್ದುದನ್ನು ಕಂಡರು. ಹಾಗೆಯೇ, ದ್ವಾರಕಾಮಾಯಿಯಲ್ಲಿ ಒಂದು ಹಲಗೆಯನ್ನೇ ಬಟ್ಟೆಗಳ ಸಹಾಯದಿಂದ ಉಯ್ಯಾಲೆಯಂತೆ ತೂಗುಹಾಕಿ ಅದರ ನಾಲ್ಕೂ ತುದಿಗಳಲ್ಲಿ ದೀಪಗಳನ್ನು ಹತ್ತಿಸಿ ಆದರ ಮೇಲೆ ಮಲಗುತ್ತಿದ್ದುದನ್ನು ಕಂಡರು. ಆಗ ಶಿರಡಿಗೆ ಯಾವ ದೊಡ್ಡ ವ್ಯಕ್ತಿಗಳೂ ಬರುತ್ತಿರಲಿಲ್ಲ. ಚಂದ್ರಾಭಾಯಿಯವರು ಶಿರಡಿಗೆ ಹೋದಾಗಲೆಲ್ಲಾ ಅವರು ಶಿರಡಿಯ ಯಾವುದಾದರೂ ಗ್ರಾಮಸ್ಥರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.

ಇವರ ಮೇಲೆ ಸಾಯಿಬಾಬಾರವರು ಅತ್ಯಂತ ಹೆಚ್ಚಿನ ಕರುಣೆಯನ್ನು ಹೊಂದಿದ್ದರು. ಇವರ ಪತಿಯವರು ಸಾಯಿಬಾಬಾರವರನ್ನು ಒಂದು ಸಲವೂ ಹೋಗಿ ಭೇಟಿ ಮಾಡಿರಲಿಲ್ಲ. ಆದರೆ, ಅವರ ಮೇಲೆ ಕೂಡ ಸಾಯಿಬಾಬಾರವರು ತಮ್ಮ ಕೃಪಾದೃಷ್ಟಿಯನ್ನು ಬೀರಿದ್ದರು. ಇವರ ಪತಿಯವರು ಇಂಜೀನಿಯರ್ ಆಗಿದ್ದು 1909ನೇ ಇಸವಿಯಲ್ಲಿ ಪಂಡರಾಪುರದ ಬಳಿಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿಯಲ್ಲಿ ನಿರತರಾಗಿದ್ದರು. ಪತಿಯು ಪಂಡರಾಪುರದಲ್ಲಿದ್ದಾಗ ಚಂದ್ರಾಭಾಯಿಯವರು ಶಿರಡಿಗೆ ಸಾಯಿಬಾಬಾರವರನ್ನು ಕಾಣಲು ಹೋಗಿದ್ದರು ಮತ್ತು ಅವರ ಸೇವೆಯಲ್ಲಿ ನಿರತರಾಗಿದ್ದರು. ಒಂದು ದಿನ ಸಾಯಿಬಾಬಾರವರು "ನೀನು ಈಗಲೇ ಪಂಡರಾಪುರಕ್ಕೆ ಹೋಗು. ನಾನು ನಿನ್ನ ಜೊತೆಯಲ್ಲೇ ಬರುತ್ತೇನೆ" ಎಂದರು. ಸಾಯಿಯವರ ಆಜ್ಞೆಯಂತೆ ಚಂದ್ರಾಭಾಯಿ ಪಂಡರಾಪುರಕ್ಕೆ ಹೊರಟರು. ಅವರಿಗೆ ಪಂಡರಾಪುರದಲ್ಲಿ ಏನು ನಡೆದಿದೆ ಎಂದು ತಿಳಿದಿರಲಿಲ್ಲ. ಅವರು ಪಂಡರಾಪುರಕ್ಕೆ ಹೋದಾಗ ಅವರ ಪತಿ ಅಲ್ಲಿ ಇರಲಿಲ್ಲ. ಅಲ್ಲಿಗೆ ಹೋದಾಗ, ಇವರ ಪತಿ ಕೆಲಸಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದಾರೆಂಬ ವಿಷಯ ತಿಳಿಯಿತು. ಆ ವಿಷಯವನ್ನು ಕೇಳಿದ ಮೇಲೆ ಚಂದ್ರಾಭಾಯಿಯವರ ಮನಸ್ಸಿಗೆ ಬಹಳ ನೋವಾಯಿತು. ಆ ಸಮಯದಲ್ಲಿ ಇವರ ಬಳಿ ಸ್ವಲ್ಪವೇ ಹಣವಿತ್ತು. ಅಷ್ಟೇ ಅಲ್ಲದೆ, ತಮ್ಮ ಜೊತೆಯಲ್ಲಿ ಇನ್ನು ಇಬ್ಬರನ್ನು ಕರೆದುಕೊಂಡು ಹೋಗಿದ್ದರು. ಇವರ ಬಳಿ ಕುರ್ಡುವಾಡಿವರೆಗೆ ಹೋಗಲು ಮಾತ್ರ ಹಣವಿತ್ತು. ಅವರು ಧೈರ್ಯ ಮಾಡಿ ಕುರ್ಡುವಾಡಿಗೆ ಹೋದರು. ಚಂದ್ರಾಭಾಯಿಯವರ ಮನಸ್ಸು ಚಿಂತೆಯಿಂದ ತುಂಬಿ ಬಹಳ ವ್ಯಾಕುಲರಾಗಿದ್ದರು ಮತ್ತು ನಡೆದ ವಿಷಯವನ್ನೇ ಕುರಿತು ಚಿಂತೆ ಮಾಡುತ್ತಿದ್ದರು. ಆ ಕ್ಷಣದಲ್ಲಿ ಅವರ ಮುಂದೆ ಫಕೀರನೊಬ್ಬ ಪ್ರತ್ಯಕ್ಷನಾದನು ಮತ್ತು ಇವರ ಚಿಂತೆಗೆ ಕಾರಣವನ್ನು ಕೇಳಿದನು. ಇವರು ಅವನಿಗೆ ಹಾರಿಕೆಯ ಉತ್ತರವನ್ನು ಕೊಡಲು ನೋಡಿದರು. ಆಗ ಫಕೀರನು ತಾನಾಗಿಯೇ ಇವರಿಗೆ ಕೂಡಲೇ ಇವರ ಇಬ್ಬರು ಸ್ನೇಹಿತೆಯರೊಂದಿಗೆ ದೌಂಡ್ ಗೆ ಹೋಗಲು ಸೂಚಿಸಿದನು ಮತ್ತು ಇವರ ಪತಿಯು ದೌಂಡ್ ನಲ್ಲಿ ಇರುವರೆಂದು ಕೂಡ ತಿಳಿಸಿದನು. ಆಗ ಚಂದ್ರಾಭಾಯಿ ತಮ್ಮ ಬಳಿ ಅಲ್ಲಿಗೆ ಹೋಗಲು ಹಣವಿಲ್ಲ ಎಂದು ತಿಳಿಸಿದರು. ಆಗ ಫಕೀರನು ಇವರಿಗೆ ದೌಂಡ್ ಗೆ ಹೋಗಲು 3 ಟಿಕೆಟ್ ಗಳನ್ನು ನೀಡಿ ಹೊರಟುಹೋದನು. ಫಕೀರನಿಂದ ಟಿಕೆಟ್ ಪಡೆದು ತಮ್ಮ ಇಬ್ಬರು ಸ್ನೇಹಿತೆಯರೊಂದಿಗೆ ಇವರು ದೌಂಡ್ ಗೆ ತೆರಳಿದರು. ಅತ್ತ ದೌಂಡ್ ನಲ್ಲಿ ಇವರ ಪತಿಯು ಚಹಾ ಕುಡಿಯುತ್ತಾ ಹಾಗೆಯೇ ತನಿ ನಿದ್ರೆ ಬಂದು ಮಲಗಿದಾಗ ಕನಸೊಂದನ್ನು ಕಂಡರು. ಕನಸಿನಲ್ಲಿ ಒಬ್ಬ ಫಕೀರನು ಇವರ ಎದುರುಗಡೆ ಪ್ರತ್ಯಕ್ಷನಾಗಿ "ನೀನು ಹೇಗೆ ನನ್ನ ತಾಯಿಯನ್ನು ಮರೆತಿರುವೆ? ನಿನ್ನ ತಾಯಿ ಈಗ ಬರುವ ರೈಲಿನಲ್ಲಿ ನಿನ್ನನ್ನು ಸಂಧಿಸಲು ಬರುತ್ತಿದ್ದಾಳೆ. ಅವಳು ಇಂತಹ ಸಂಖ್ಯೆಯ ಬೋಗಿಯಲ್ಲಿದ್ದಾಳೆ" ಎಂದು ಹೇಳಿ ಬೋಗಿಯ ಸಂಖ್ಯೆಯನ್ನು ಕೂಡ ನೀಡಿದನು.  ಆ ಕೂಡಲೇ ಚಂದ್ರಾಭಾಯಿ ಪತಿಗೆ ಎಚ್ಚರವಾಗಿ "ಯಾರು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದು" ಎಂದು ಸುತ್ತಲೂ ನೋಡಿದರು. ಆ ಕ್ಷಣವೇ ಫಕೀರನು ಮಾಯವಾಗಿದ್ದನು. ಮುಂದಿನ ರೈಲಿನಲ್ಲಿ  ಚಂದ್ರಾಭಾಯಿಯವರು  ಇಳಿದು ಬಂದು ಇವರ ಪತಿಯನ್ನು ಸಂಧಿಸಿದರು. ಇವರ ಪತಿಯು ಆ ಫಕೀರನು ಹೇಳಿದ ಬೋಗಿಯ ಬಳಿಯೇ ಇವರನ್ನು ಸ್ವಾಗತಿಸಲು ನಿಂತಿದ್ದರು. ತಮಗೆ ಬಿದ್ದ ಕನಸನ್ನು ವಿವರಿಸಿದ ಇವರ ಪತಿಯು, ಇವರು ಪೂಜಿಸುತ್ತಿದ್ದ ಸಾಯಿಬಾಬಾರವರ ಚಿತ್ರಪಟವನ್ನು ತೋರಿಸಲು ಹೇಳಿದರು. ಚಂದ್ರಾಭಾಯಿಯವರು ಚಿತ್ರಪಟವನ್ನು ತೋರಿಸಲು ತಮಗೆ ಕನಸಿನಲ್ಲಿ ದರ್ಶನ ನೀಡಿದ ಫಕೀರ ಇವರೇ ಎಂದು ಇವರಿಗೆ ತಿಳಿಸಿದರು.

ಒಮ್ಮೆ ಒಂದು ಗುರುಪೂರ್ಣಿಮೆಯ ಸಂದರ್ಭದಲ್ಲಿ ಸಾಯಿಬಾಬಾರವರು ಚಂದ್ರಾಭಾಯಿಯವರ ಗುರುಬಂಧುವಾದ ಶ್ರೀ.ಉಪಾಸಿನಿ ಮಹಾರಾಜ್ ರವರನ್ನು ಅವರು ಕರಗ್ಪುರಕ್ಕೆ ಹೊರಡುವುದಕ್ಕೆ ಮುಂಚೆಯೇ ಪೂಜಾ ಸಾಮಗ್ರಿ ಮತ್ತು ನೈವೇದ್ಯದೊಡನೆ ಹೋಗಿ  ಅರ್ಚಿಸಿ ಬರುವಂತೆ ಆಜ್ಞಾಪಿಸಿದರು. ಚಂದ್ರಾಭಾಯಿಯವರು ಹೋಗಿ ಅವರನ್ನು ಭೇಟಿ ಮಾಡಿ ಸಾಯಿಬಾಬಾರವರು ಅವರನ್ನು ಪೂಜಿಸಲು ಹೇಳಿರುವರೆಂದು ಹೇಳಿ ಅವರ ಪೂಜೆಯನ್ನು ನೆರವೇರಿಸಿ ಬಂದರು. ಅದಕ್ಕೆ ಉಪಾಸಿನಿ ಮಹಾರಾಜ್ ಕೂಡ ಒಪ್ಪಿಗೆ ಸೂಚಿಸಿ ಬೇಡವೆನ್ನದೆ ಪೂಜೆಯನ್ನು ಸ್ವೀಕರಿಸಿದರು. ಆದರೆ, ಆ ದಿನದ ನಂತರ  ಚಂದ್ರಭಾಯಿಯವರು ಮತ್ತೆಂದಿಗೂ ಕೂಡ ಉಪಾನಿಸಿ ಮಹಾರಾಜ್ ರವರನ್ನು ಪೂಜಿಸಲಿಲ್ಲ. ಚಂದ್ರಾಭಾಯಿಯವರು  ಅವರನ್ನು ಕೇವಲ ಗುರುಬಂಧುವಂತೆ ನೋಡುತ್ತಿದ್ದರು. ಶಿರಡಿಯಲ್ಲಿನ ಅನೇಕ ಜನರು ದ್ವೇಷಿಸುವಂತೆ ಚಂದ್ರಾಭಾಯಿ ಎಂದಿಗೂ ಅವರನ್ನು ದ್ವೇಷಿಸಲಿಲ್ಲ. ಸಾಯಿಬಾಬಾರವರು ಯಾರನ್ನು ದ್ವೇಷಿಸಬಾರದು ಮತ್ತು ಯಾರಾದರೂ ನಮ್ಮನ್ನು ದ್ವೇಷಿಸಿದರೆ ನಾವು ನಾಮಜಪವನ್ನು ಮಾಡುತ್ತಾ ಅಂತಹ ಜನಗಳಿಂದ ದೂರವಿರಬೇಕೆಂದು ಹೇಳುತ್ತಿದ್ದರು. ಆದರೆ, ಚಂದ್ರಾಭಾಯಿಯವರ ವರ್ತನೆ ಉಪಾಸಿನಿ ಮಹಾರಾಜ್ ರವರಿಗೆ ಮತ್ತು ಶಿರಡಿಯ ಅನೇಕ ಜನರಿಗೆ ಇಷ್ಟವಾಗಲಿಲ್ಲ. ಒಮ್ಮೆ ಚಂದ್ರಾಭಾಯಿಯವರು  ಸಾಕೋರಿ ಆಶ್ರಮಕ್ಕೆ ಅವರ ಪಂಚಕನ್ಯಾ ಪದ್ದತಿಯನ್ನು ಸರಿಗೊಳಿಸಬೇಕೆಂದು ಬಯಸಿ ಹೋಗಿದ್ದಾಗ ಉಪಾಸಿನಿ ಮಹಾರಾಜ್ ರವರು ಇವರಿಗೆ ತಮ್ಮ ಪ್ರತ್ಯೇಕ ಭೇಟಿಗೆ ಅವಕಾಶ ನೀಡದೆ, ಚಂದ್ರಾಭಾಯಿಯವರು ಹಾಗೆಯೇ ಹಿಂತಿರುಗಿದರು.

ಚಂದ್ರಾಭಾಯಿಯವರ ಮೇಲೆ ಸಾಯಿಬಾಬಾರವರು 1918 ಕ್ಕೆ ಮುಂಚೆ ಮತ್ತು 1918 ರ ತಮ್ಮ ಮಹಾಸಮಾಧಿಯ ನಂತರವೂ ಕೃಪೆಯನ್ನು ಬೀರಿದರು. 1918 ನೇ ಇಸವಿಯ ದಸರಾ ಹಬ್ಬಕ್ಕೆ ಮುಂಚೆಯೇ ಸಾಯಿಬಾಬಾರವರು ತಮ್ಮ ಅಂತ್ಯಕಾಲ ಸಮೀಪಿಸುತ್ತಿರುವುದನ್ನು ಅರಿತು ಚಂದ್ರಾಭಾಯಿಯವರನ್ನು ತಮ್ಮ ಬಳಿಗೆ ಕರೆದು "ಭಾಯಿ, ಇನ್ನು ಮುಂದೆ ನೀನು ಶಿರಡಿಗೆ ಬರುವ ತೊಂದರೆಯನ್ನು ತೆಗೆದುಕೊಳ್ಳಬೇಡ. ನೀನು ಎಲ್ಲಿ ಇರುತ್ತೀಯೋ ಅಲ್ಲಿಯೇ ನಾನು ಕೂಡ ಸದಾಕಾಲ ಇರುತ್ತೇನೆ"  ಎಂದು ನುಡಿದರು. ದಸರೆಯ ಹಬ್ಬ ಬಂದಿತು. ಆಗ ಚಂದ್ರಾಭಾಯಿ ಪಂಚಗನಿಯಲ್ಲಿದ್ದರು. ಆಗ ಹೆಚ್.ಎಸ್.ದೀಕ್ಷಿತ್ ರವರಿಂದ ಸಾಯಿಬಾಬಾರವರಿಗೆ ತುಂಬಾ ಹುಷಾರಿಲ್ಲವೆಂದು, ಇನ್ನು ಹೆಚ್ಚು ಕಾಲ ಬದುಕಿರುವ ಭರವಸೆಯಿಲ್ಲವೆಂದು ಮತ್ತು ಇವರನ್ನು ನೆನೆಯುತ್ತಿದ್ದರೆಂದು ವರ್ತಮಾನ ತಿಳಿದುಬಂದಿತು. ವಿಷಯ ತಿಳಿದ ಕೂಡಲೇ ಚಂದ್ರಾಭಾಯಿ ಶಿರಡಿಗೆ ತೆರಳಿದರು. ಸಾಯಿಬಾಬಾರವರಿಗೆ ಇವರು ಮತ್ತು ಬಾಯಜಿಯವರು ಪವಿತ್ರ ತೀರ್ಥವನ್ನು ಕುಡಿಸಿದರು. ಬಾಬಾರವರು ತೀರ್ಥವನ್ನು ಸ್ವೀಕರಿಸಿ ಬಾಯಾಜಿಯವರ ಮೇಲೆ ಒರಗಿಕೊಂಡು ತಮ್ಮ ಭೌತಿಕ ದೇಹವನ್ನು ತ್ಯಜಿಸಿದರು.

ಸಾಯಿಬಾಬಾರವರ ಮಹಾಸಮಾಧಿಯಾದ ನಂತರ ಚಂದ್ರಾಭಾಯಿಯವರು 1919 ರಲ್ಲಿ ಒಂದು ಬಾರಿ ಮತ್ತು 1933 ರಲ್ಲಿ ಮತ್ತೊಂದು ಬಾರಿ ಶಿರಡಿಗೆ ಹೋಗಿ ಬಂದರು. ಆದರೆ, ಬಾಬಾರವರು ತಾವು ಮಾತು ಕೊಟ್ಟಂತೆ ಸದಾಕಾಲ ಚಂದ್ರಾಭಾಯಿಯವರ ಜೊತೆಯಲ್ಲೇ ಇದ್ದು ಅವಶ್ಯಕತೆ ಇದ್ದಾಗಲೆಲ್ಲಾ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದರು. ಚಂದ್ರಾಭಾಯಿಯವರು ಸಾಯಿಬಾಬಾರವರೊಂದಿಗಿನ ತಮ್ಮ ಅನುಭವಗಳನ್ನು ಮತ್ತು ಅವರ ಬಗ್ಗೆ ರಚಿಸಿದ ಕೆಲವು ಕವನಗಳನ್ನು ಸಾಯಿ ಲೀಲಾ ಮಾಸ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

1921 ನೇ ಇಸವಿಯಲ್ಲಿ  ಚಂದ್ರಾಭಾಯಿಯವರ ಪತಿ ಕುದುರೆ ಗಾಡಿಯಿಂದ ಇಳಿಯುವಾಗ ಬಿದ್ದು ತಮ್ಮ ಕಾಲನ್ನು ಮುರಿದುಕೊಂಡರು. ಆಗ ಚಂದ್ರಾಭಾಯಿಯವರು ಉಧಿಯನ್ನು ಮತ್ತು ಬೀಬಾಕಾಯಿ ಮತ್ತು ತಗಡಿಫಲದ ಮಿಶ್ರಣವನ್ನು ಮುರಿದ ಕಾಲಿಗೆ ಹಚ್ಚಿದರು. 3 ತಿಂಗಳ ಒಳಗಾಗಿ ಇವರ ಪತಿ ಸಂಪೂರ್ಣ ಗುಣ ಹೊಂದಿದರು. ಅದೇ ವರ್ಷದಲ್ಲಿ ಇವರು ಸಾಯಿಬಾಬಾರವರ ಆಶೀರ್ವಾದದಿಂದ ಒಂದು ಮಗುವಿಗೆ ಜನ್ಮವನ್ನು ಕೂಡ ನೀಡಿದರು. 1918 ರಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ಇವರು ತಮಗೆ ಒಂದು ಮಗುವಾಗಬೇಕೆಂಬ ಬಯಕೆಯನ್ನು ಹೊಂದಿದ್ದರು. ಇವರ ಮನದ ಬಯಕೆಯನ್ನು ತಿಳಿದಿದ್ದ ಸರ್ವಾಂತರ್ಯಾಮಿ ಸಾಯಿಬಾಬಾರವರು ಒಂದು ದಿನ  "ಭಾಯಿ, ನಿನ್ನ ಮನಸ್ಸಿನಲ್ಲಿರುವ ಕೋರಿಕೆಯೇನು? " ಎಂದು ಕೇಳಿದರು.  ಅದಕ್ಕೆ ಚಂದ್ರಾಭಾಯಿಯವರು "ಬಾಬಾ, ನಿಮಗೆ ಎಲ್ಲಾ ಗೊತ್ತಿದೆ. ನಾನು ನಿಮಗೆ ಹೇಳುವ ಅವಶ್ಯಕತೆ ಏನಿದೆ" ಎಂದು ಕೇಳಿದರು.

ಈ ಘಟನೆಯಾದ 3 ವರ್ಷಗಳ ನಂತರ ಚಂದ್ರಾಭಾಯಿಯವರ ಮುಟ್ಟು ನಿಂತಿತು. ಇದಾದ 3 ತಿಂಗಳ ನಂತರ ಇವರನ್ನು ಪರೀಕ್ಷಿಸಿದ ಡಾ.ಪುರಂಧರೆಯವರು ಇವರ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿರುವುದಾಗಿ ಹೇಳಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ತೆಗೆಯಬೇಕೆಂದು ಹೇಳಿದರು. ಅದಕ್ಕೆ ಚಂದ್ರಾಭಾಯಿಯವರು ಒಪ್ಪದೇ ಹತ್ತು ತಿಂಗಳು ಕಾಯುವುದಾಗಿ ಮತ್ತು ನಂತರ ಶಸ್ತ್ರಚಿಕಿತ್ಸೆಯ ಬಗ್ಗೆ ಯೋಚಿಸುವುದಾಗಿ ಹೇಳಿದರು. ಕಡೆಗೆ ಸಾಯಿಬಾಬಾರವರ ಆಶೀರ್ವಾದದಿಂದ ಹತ್ತು ತಿಂಗಳ ನಂತರ ಇವರ 51ನೇ ವಯಸ್ಸಿನಲ್ಲಿ ಪವಿತ್ರ ಧನ ತ್ರಯೋದಶಿಯಂದು ಗಂಡು ಮಗುವಿಗೆ ಜನನ ನೀಡಿದರು. ಇವರಿಗೆ ಹೆರಿಗೆಯು ಚೆಂಬೂರಿನಲ್ಲಿ ಆದಾಗ  ಇವರ ಬಳಿ ಯಾವುದೇ ವೈದ್ಯರಾಗಲಿ, ದಾದಿಯಾಗಲಿ ಅಥವಾ ಯಾವುದೇ ಮಾತ್ರೆ ಔಷಧಿಗಳಾಗಲಿ ಇರಲಿಲ್ಲ. ಇವರು ಗರ್ಭಿಣಿಯಾಗಿದ್ದ ಸಮಯದಲ್ಲಿ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದೆ ಅನೇಕ ದಿನ ಉಪವಾಸವನ್ನು ಮಾಡಿದರು, ಅನೇಕ ಬಾರಿ ಕಾಲುಗಳು ಊದಿಕೊಂಡು ತೊಂದರೆಯಾಯಿತು. ಆದರೆ, ಪ್ರತಿನಿತ್ಯ ನೀರಿಗೆ ಉಧಿಯನ್ನು ಬೆರೆಸಿ ತೆಗೆದುಕೊಳ್ಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ.

ಚಂದ್ರಾಭಾಯಿಯವರ ಪತಿಯ ಮರಣ ಸಮಯದಲ್ಲಿ ಕೂಡ ಸಾಯಿಬಾಬಾರವರು ತಮ್ಮ ಕೃಪೆಯನ್ನು ಇವರ ಮೇಲೆ ತೋರಿದರು. ಇವರ ಪತಿಯು ಸಾಯುವುದಕ್ಕೆ ಎರಡು ತಿಂಗಳ ಮುಂಚೆಯೇ ಸಾಯಿಬಾಬಾರವರು ಇವರ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿದರು. ಬಾಬಾರವರು ಇವರ ಕನಸಿನಲ್ಲಿ ಕಾಣಿಸಿಕೊಂಡು "ಭಯಪಡಬೇಡ, ನಾನು ಶ್ರೀರಾಮನನ್ನು ಕರೆದುಕೊಂಡು ಹೋಗುತ್ತೇನೆ" (ಇವರ ಪತಿಯ ಹೆಸರು ರಾಮಚಂದ್ರ) ಎಂದರು. ಅದಕ್ಕೆ ಇವರು "ಬಾಬಾ, ನನ್ನನ್ನು ಮೊದಲು ಕರೆದುಕೊಂಡು ಹೋಗಿ" ಎಂದು ಕೇಳಿಕೊಂಡರು. ಅದಕ್ಕೆ ಬಾಬಾರವರು ಇವರಿಗೆ ಮಾಡುವ ಕೆಲಸವು ಇನ್ನು ಬಹಳ ಇದ್ದ ಕಾರಣ ಇವರು ಬದುಕಿರಬೇಕು ಎಂದು ತಿಳಿಸಿದರು. ಚಂದ್ರಾಭಾಯಿಯವರು ಈ ವಿಷಯವನ್ನು ತಮ್ಮ ಪತಿಗೆ ತಿಳಿಸಿದಾಗ ಅವರು ಅದು ಕೇವಲ ಕನಸು ಎಂದು ಬಹಳ ಹಗುರವಾಗಿ ತೆಗೆದುಕೊಂಡರು. ಆಗ ಚಾತುರ್ಮಾಸ್ಯ ಮುಗಿಯುವುದಕ್ಕೆ ಇನ್ನು ಎರಡು ತಿಂಗಳು ಇತ್ತು. ಸ್ವಲ್ಪ ದಿನಗಳಲ್ಲೇ ಇವರ ಪತಿ ಕಿಡ್ನಿ ವೈಫಲ್ಯದಿಂದ ಬಳಲಲು ಪ್ರಾರಂಭಿಸಿದರು. ಅವರ ಮರಣವು ಸನ್ನಿಹಿತವಾಗುತ್ತಿತ್ತು. ಆಗ ಇವರ ಪತಿಗೆ ತಾವು ಕೆಲವು ದಿನಗಳಲ್ಲೇ ಸಾಯುವ ವಿಷಯ ಮನವರಿಕೆಯಾಗಿ ತಾವು ಚಾತುರ್ಮಾಸ್ಯ ಮುಗಿದ ನಂತರ ಸಾಯಲು ಇಚ್ಚಿಸುವುದಾಗಿ ಹೇಳಿದರು. ಆದರೆ, ಸ್ವಲ್ಪ ದಿನಗಳಲ್ಲಿಯೇ ಅವರ ಮರಣದ ಎಲ್ಲ ಸೂಚನೆಗಳು ಕಾಣಿಸಿಕೊಂಡವು. ಅವರ ಕೈಕಾಲುಗಳು ಸೆಟೆದುಕೊಂಡು ಪ್ರಜ್ಞೆ ತಪ್ಪಿದರು. ಚಂದ್ರಾಭಾಯಿಯವರು ಚಾತುರ್ಮಾಸ್ಯ ಮುಗಿಯುವವರೆಗಾದರೂ ತಮ್ಮ ಪತಿಯನ್ನು ಉಳಿಸುವಂತೆ ಸಾಯಿಬಾಬಾರವರನ್ನು ಪ್ರಾರ್ಥಿಸಿದರು. ಮಾರನೇ ದಿನವೇ ಇವರ ಪತಿಗೆ ಪ್ರಜ್ಞೆ ಮರಳಿ ಬಂದಿತು ಮತ್ತು ಕೈಕಾಲುಗಳು ಸರಿಯಾಯಿತು. ಇವರ ಪತಿಯು ಬಹಳ ಸಂತೋಷದಿಂದ ಇದ್ದರು. ಚಾತುರ್ಮಾಸ್ಯ ಕಳೆದು ಏಳು ದಿನವಾದ ನಂತರ ಅಂದರೆ 1934 ರ ಕಾರ್ತೀಕ ಪೂರ್ಣಿಮೆ ಮೇಲೆ ಪಾಡ್ಯ ತಿಥಿಯು ಬಂದ ದಿನ ಮಧ್ಯರಾತ್ರಿಯಲ್ಲಿ ಚಹಾ ಮಾಡಿಸಿಕೊಂಡು ಕುಡಿದರು ಮತ್ತು ತಮ್ಮ ಪತ್ನಿಗೆ ವಿಷ್ಣು ಸಹಸ್ರನಾಮ ಮತ್ತು ಸಾಯಿಬಾಬಾರವರ ಆರತಿಯನ್ನು ಜೋರಾದ ದನಿಯಲ್ಲಿ ಉಚ್ಚರಿಸುವಂತೆ ಕೇಳಿಕೊಂಡರು. ಅವರು ಹೇಳಿದಂತೆ ಚಂದ್ರಾಭಾಯಿ ಮಾಡಿದರು. ಬೆಳಗಿನ ಜಾವದವರೆಗೂ ವಿಷ್ಣು ಸಹಸ್ರನಾಮ ಮತ್ತು ಆರತಿ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ವೈದ್ಯರು ಬಂದರು. ಇವರನ್ನು ಪರೀಕ್ಷಿಸಿ ಇವರ ಆರೋಗ್ಯ ಸುಧಾರಿಸುತ್ತದೆ ಎಂಬ ಭರವಸೆ ನೀಡಿದರು. ಆದರೆ ಚಂದ್ರಾಭಾಯಿಯವರಿಗೆ ಇವರು ಆ ದಿನ ಮಧ್ಯಾನ್ಹ ಮರಣ ಹೊಂದುವರೆಂಬ ವಿಷಯ ತಿಳಿದಿತ್ತು. ಆದ್ದರಿಂದ ತಮ್ಮ ಪತಿಗೆ ಗಂಗಾಜಲವನ್ನು ಕುಡಿಸಿದರು. ಗಂಗಜಾಲವನ್ನು ಕುಡಿದು ಇವರ ಪತಿಯು "ಶ್ರೀ ರಾಮ, ಶ್ರೀ ರಾಮ"  ಎಂದು ಉಚ್ಚರಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಒಂದು ಚಿಕ್ಕ ಹುಡುಗ ಬಂದು "ಬಾಬಾ" ಎಂದು ಕೂಗಿದನು. ಇವರ ಪತಿಯು ಕೂಡಲೇ ಎದ್ದು ಕುಳಿತು "ಓಹೋ" ಎಂದು ನುಡಿದರು. ಮತ್ತೆ ಪುನಃ  "ಶ್ರೀ ರಾಮ, ಶ್ರೀ ರಾಮ" ಎಂದು ಉಚ್ಚರಿಸುತ್ತಾ ಮರಣವನ್ನಪ್ಪಿದರು. ಆ ಸಮಯದಲ್ಲಿ ಚಂದ್ರಾಭಾಯಿಯವರು ತಮ್ಮ ಪತಿಯ ಪಕ್ಕದಲ್ಲೇ ಕುಳಿತು  ತಮ್ಮ ಪತಿಯನ್ನು ಸಾಯಿಬಾಬಾ ಮತ್ತು ಕೃಷ್ಣ ದೇವರುಗಳ ಪವಿತ್ರ ಪಾದಗಳಲ್ಲಿ ಲೀನಗೊಳಿಸಬೇಕೆಂದು ಬೇಡಿಕೊಂಡರು.  ಹೀಗೆ ಚಂದ್ರಾಭಾಯಿಯವರ ಪತಿ ದೇವರ ಮತ್ತು ಸಾಯಿಯವರ ನಾಮಸ್ಮರಣೆ ಮಾಡುತ್ತಾ ಶಾಂತಿಯಿಂದ ಮರಣವನ್ನು ಹೊಂದಿ ಸಾಯಿಪಾದಗಳಲ್ಲಿ ಲೀನವಾದರು.  ಹೀಗೆ ಸಾಯಿಯವರು ರಾಮಚಂದ್ರ ಅವರಿಗೆ ಸದ್ಗತಿಯನ್ನು ನೀಡಿದರು.

ತಮ್ಮ ಪತಿಯ ಮರಣವಾದ ನಂತರ ಚಂದ್ರಾಭಾಯಿಯವರು ತಮ್ಮ ಮಗನ ಹಾಗು ತಾವಿದ್ದ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ಇವರಿದ್ದ ಮನೆಯನ್ನು ಕಿತ್ತುಕೊಳ್ಳುವ ಸಲುವಾಗಿ ಇವರ ಕೆಲವು ಬಂಧುಗಳು ಕಿರುಕುಳ ಕೊಡಲು ಪ್ರಾರಂಭಿಸಿದರು. ಆಗ ಚಂದ್ರಾಭಾಯಿಯವರಿಗೆ ಇವರುಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು 14,000 ರುಪಾಯಿಗಳು ಬೇಕಾಗಿತ್ತು. ಇವರ ಮನೆಗೆ ಯಾರೂ ಬಾಡಿಗೆದಾರರು ಬರದಂತೆ ಇವರ ಬಂಧುಗಳು ಮಾಟ ಮಂತ್ರಗಳನ್ನು ಕೂಡ ಮಾಡಿಸಿದರು. ಸಾಯಿಬಾಬಾರವರು ಈ ವಿಷಯವನ್ನು ಚಂದ್ರಭಾಯಿಯವರ ಕನಸಿನಲ್ಲಿ ಬಂದು ತಿಳಿಸಿ ಸೂಕ್ತ ಸಮಯದಲ್ಲಿ ಎಚ್ಚರಿಕೆ ನೀಡಿದರು. ಕೂಡಲೇ ಚಂದ್ರಾಭಾಯಿಯವರು ತಡ ಮಾಡದೆ ತಮ್ಮ ಕೆಲವು ನಂಬಿಕೆಯಿರುವ ಜನರನ್ನು ತಮ್ಮ ಊರಾದ ಗೋವಾಕ್ಕೆ ಕಳುಹಿಸಿ ತಮ್ಮ ಕುಲದೇವಿಗೆ ಪೂಜೆಯನ್ನು ಮಾಡಿಸುವಂತೆ ಹೇಳಿ ಮಾಟ ಮಂತ್ರಗಳ ತೊಂದರೆಯಿಂದ ಬಿಡುಗಡೆ ಹೊಂದಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment