Saturday, January 23, 2010

ಸಾಯಿ ಮಹಾ ಭಕ್ತ - ಉಪಾಸಿನಿ ಬಾಬ ಆಲಿಯಾಸ್ ಕಾಶೀನಾಥ್ ಗೋವಿಂದ್ ಉಪಾಸಿನಿ ಮಹಾರಾಜ್  (೧೮೭೦ ರಿಂದ ೧೯೪೧) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಉಪಾಸಿನಿ ಬಾಬ ಅವರು ೧೫ ನೇ ಮೇ ೧೮೭೦ ರಂದು ಸಾಟನಾ ಹಳ್ಳಿಯ ಶಾಸ್ತ್ರೀಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಗೋವಿಂದ ಶಾಸ್ತ್ರಿಗಳು. ಇವರ ನಿಜ ನಾಮ ಕಾಶೀನಾಥ ಗೋವಿಂದ ಉಪಾಸಿನಿ ಶಾಸ್ತ್ರಿ. ಇವರು ತಮ್ಮ ದೊಡ್ದಪ್ಪನಾದ ಗೋಪಾಲ ಶಾಸ್ತ್ರಿಗಳ ಬಳಿ ಇದ್ದರು. ಉಪಾಸಿನಿ ಬಾಬರವರ ಬಾಲ್ಯ ಶಿಕ್ಷಣ ಏನು ಇಲ್ಲ ಎನ್ನಬಹುದು. ಏಕೆಂದರೆ, ಇವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗ ಇವರ ಮಾಸ್ತರ್ ಶ್ರೀ ಗರಪುರೆಯವರು ಇವರನ್ನು ಯಾವುದೋ ಕಾರಣಕ್ಕಾಗಿ ಥಳಿಸಿದರು. ಉಪಾಸಿನಿ ಬಾಬ ಅಳುತ್ತ ಹೋಗಿ ಮುನ್ಸೀಫ್ ರಿಗೆ ದೂರು ನೀಡಿದರು. ಅಲ್ಲಿಗೆ ಇವರ ವಿದ್ಯಾಭ್ಯಾಸ ಮುಗಿಯಿತು. ಎಲ್ಲರು ಉಪಾಸಿನಿ ಬಾಬರವರನ್ನು ದಡ್ಡ ಎಂದೇ ಕರೆಯುತ್ತಿದ್ದರು. ಉಪಾಸಿನಿ ಬಾಬರವರು ಬೇಡವೆಂದರೂ ಅವರ ಮನೆಯವರು ಬಲವಂತವಾಗಿ ಅವರ ೧೪ ನೇ ವಯಸ್ಸಿನಲ್ಲಿ ೮ ವರ್ಷದ ಬಾಲಕಿಯೊಡನೆ ವಿವಾಹ ಮಾಡಿದರು. ೧೮೮೫ ರಲ್ಲಿ ಆ ಹುಡುಗಿ ಮೃತಳಾದಳು. ಅವರಿಗೆ ಪುನಃ ಮದುವೆ ಮಾಡಿದರು. ಒಂದು ವರ್ಷದ ನಂತರ ಅವಳೂ ಗತಿಸಿದಳು. ಅವರಿಗೆ ತಮ್ಮ ಮನೆಯವರ ರೀತಿ ನೀತಿಗಳು ಸರಿ ಹೋಗಲಿಲ್ಲ. ಮದುವೆಯೆಂಬ ಬಂಧನದಿಂದ ಅವರಿಗೆ ಜೀವನವೇ ಬೇಸರವಾಗಿ ಮನೆ ಬಿಟ್ಟು ಓಡಿ ಹೋದರು. ಕೆಲವು ಕಾಲದ ನಂತರ ಮರಳಿ ಬಂದು ಸ್ವಲ್ಪ ದಿನಗಳಿದ್ದು ಪುನಃ ಹೊರಟು ಹೋದರು.

ಮನೆಯನ್ನು ಬಿಟ್ಟು ಪ್ರವಾಸ ಹೊರಟ ಅವರು ಬೂರ್ಗಾ ಬೆಟ್ಟಕ್ಕೆ ಹೋಗಿ ಯೋಗ, ಧ್ಯಾನ ಮತ್ತು ಏಕಾಂತ ವಾಸಕ್ಕೆ ಮಾರು ಹೋದರು. ಅಲ್ಲಿ ಒಂದು ಗುಹೆಯನ್ನು ಕಂಡರು ಮತ್ತು ಅದು ತಮ್ಮ ಧ್ಯಾನಕ್ಕೆ ಸರಿಯಾದ ಸ್ಥಳ ಎಂದು ನಿರ್ಧರಿಸಿ ಧ್ಯಾನಮಗ್ನರಾದರು. ಮೂರ್ಚಿತರಾಗಿ ದೇವರ ನಾಮಜಪ ಮಾಡತೊಡಗಿದರು. ಹೀಗೆಯೇ ಹಲವು ದಿನಗಳನ್ನು ಕಳೆದರು. ಅಲ್ಲಿ ಅವರ ಕನಸಿನಲ್ಲಿ ಓರ್ವ ಹಿಂದೂ ಮತ್ತು ಓರ್ವ ಮುಸ್ಲಿಂ ಇವರ ಹತ್ತಿರ ನಿಂತು ದೇಹದ ಚರ್ಮವನ್ನೆಲ್ಲ ಎಳೆದಂತಾಗಿ ಅವರಲ್ಲಿ ದೈವಿಕ ದೇಹವನ್ನು ಕಾಣುವಂತೆ ಭಾಸವಾಯಿತು. ಅವರಿಬ್ಬರೂ ಆ ದೇಹವನ್ನು ಸಂಬೋಧಿಸಿ "ನೀನೇಕೆ ಸಾಯಲು ಇಚ್ಚಿಸುವೆ. ನಾವು ನಿನ್ನನ್ನು ಸಾಯಲು ಬಿಡುವುದಿಲ್ಲ. ನಾವು ನಿನ್ನೊಡನೆ ಇದ್ದೇವೆ" ಎಂದು ಹೇಳಿ ಅದೇ ಕ್ಷಣದಲ್ಲಿ ಮಾಯವಾದರು. ಗುಹೆಯಿಂದ ಪುನಃ ಹೊರಗೆ ಬಂದು ಮನೆಗೆ ಮರಳಿ ಬಂದರು. ಆದರೆ ಕೆಲವೇ ದಿನಗಳಲ್ಲಿ ಪುನಃ ಅಲೆಮಾರಿತನ ಪ್ರಾರಂಭಿಸಿದರು. ಹೀಗೆ ಅಲೆಯುತ್ತ ಪುಣೆಗೆ ಬಂದರು. ಅಲ್ಲಿ ಅವರ ಅಣ್ಣನ ಮನೆಗೆ ಹೋಗದೆ ಅಲ್ಲಲ್ಲಿ ಭಿಕ್ಷೆ ಬೇಡಿ ತಿನ್ನುತ್ತ ಜೀವನ ನಡೆಸುತ್ತಿದ್ದರು. ೧೮೯೧ ರಲ್ಲಿ ಅವರ ದೊಡ್ಡಪ್ಪ ಗೋಪಾಲ ಶಾಸ್ತ್ರಿಗಳು ನಿಧನರಾದರು. ಆಗ ಉಪಾಸಿನಿ ಬಾಬರವರಿಗೆ ತಾವು ಏನಾದರೊಂದು ಕೆಲಸ ಮಾಡಿ ಜೀವನ ನಡೆಸಬೇಕೆಂದು ತೀರ್ಮಾನ ಮಾಡಿದರು. ಸಾಂಗ್ಲಿಗೆ ಹೋಗಿ ಸಾಂಗ್ಲಿ ವೆಂಕಟರಮಣಾಚಾರ್ ರವರ ಬಳಿ ಆಯುರ್ವೇದ ಮತ್ತು ಸಂಸ್ಕೃತ ವ್ಯಾಕರಣ ಕಲಿತರು. ಅಲ್ಲಿಂದ ಅಮರಾವತಿಗೆ ಹೋಗಿ ಅಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು.

ಉಪಾಸಿನಿ ಬಾಬರವರು ಭಿಷಜ್ ರತ್ನಮಾಲ ಎಂಬ ಮರಾಠ ಮಾಸ ಪತ್ರಿಕೆಯನ್ನು ೧೯೦೨ ರಿಂದ ೧೯೦೫ ರ ತನಕ ಪ್ರಕಾಶನ ಮಾಡಿದರು. ಅದರಲ್ಲಿ ತಮ್ಮ ಔಷಧಿಗಳ ಜಾಹೀರಾತನ್ನು ನೀಡಿ ವೈದ್ಯ ವೃತ್ತಿಯಿಂದ ಸ್ವಲ್ಪ ಹಣಗಳಿಸಿದರು. ಅದರಿಂದ ಬಂದ ಹಣವನ್ನು ಒಂದು ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಅದರಲ್ಲಿ ನಷ್ಟ ಅನುಭವಿಸಿದರು. ಆರೋಗ್ಯ ಪುನಃ ಕೆಟ್ಟಿತು. ಹತಾಶರಾಗಿ ಪುನಃ ಮನೆಗೆ ವಾಪಸಾದರು. ಕೂಡಲೇ ತೀರ್ಥಯಾತ್ರೆ ಮಾಡುವ ಸಲುವಾಗಿ ತಮ್ಮ ೩ ನೇಯ ಪತ್ನಿಯೊಂದಿಗೆ ೩.೪.೧೯೧೦ ರಂದು ನರ್ಮದ ಮತ್ತು ಕಾವೇರಿ ಸಂಗಮಕ್ಕೆ ಬಂದು ಅಲ್ಲಿನ ಬೃಹತ್ ಸೋಮನಾಥ ಲಿಂಗದ ಬಳಿ ತಮ್ಮ ಪತ್ನಿಯೊಡನೆ ಪ್ರಾಣಾಯಾಮ ಮಾಡಲು ಕುಳಿತರು. ಪ್ರಾಣಾಯಾಮ ಮಾಡುತ್ತಲೇ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಅವರ ಪತ್ನಿಯು ನದಿಯ ನೀರನ್ನು ಚುಮುಕಿಸಿದರು. ಆನಂತರ ಜ್ಞಾನ ಬಂದಿತು. ಆದರೆ ಅಂದಿನಿಂದ ಉಸಿರಾಟದ ತೊಂದರೆ ಪ್ರಾರಂಭವಾಯಿತು.  ಯಾವ ಔಷಧಗಳಿಂದಲೂ ಗುಣ ಕಾಣಲಿಲ್ಲ. ಆಗ ರಾಹುರಿಯಲ್ಲಿನ ಯೋಗಿ ಕುಲಕರ್ಣಿಯವರ ಬಳಿಗೆ ಬಂದರು. ಅವರು ಇವರ ತೊಂದರೆ ಯೋಗದಿಂದ ಬಂದಿರುವುದನ್ನು ತಿಳಿದು ಶಿರಡಿಯ ಸಾಯಿಬಾಬಾರವರಲ್ಲಿಗೆ ಹೋಗಲು ತಿಳಿಸಿದರು. ಸಾಯಿಯವರ ಹೆಸರನ್ನು ಕೇಳಿ "ಸಾಯಿಬಾಬ ಮುಸ್ಲಿಂ, ನಾನು ಬ್ರಾಹ್ಮಣ, ಶಾಸ್ತ್ರಿಗಳ ಮಗ. ಆದ್ದರಿಂದ ಮುಸ್ಲಿಮನಿಗೆ ನಾನು ತಲೆ ಬಾಗಲಾರೆ" ಎಂದರು. ಸ್ವಲ್ಪ ದಿನಗಳ ನಂತರ ಒಂದು ದಿನ ರಾಹುರಿಯಲ್ಲಿನ ಬೀದಿಯಲ್ಲಿ ಹೋಗುತ್ತಿದ್ದಾಗ ಓರ್ವ ವಯಸ್ಸಾದ ಮುಸ್ಲಿಮನ್ನು ಸಂಧಿಸಿದರು. ಇವರ ತೊಂದರೆಯನ್ನು ಆಲಿಸಿದ ಆ ವೃದ್ದ ಮುಸ್ಲಿಂ ಉಪಾಸಿನಿ ಬಾಬರವರಿಗೆ ತಣ್ಣೀರು ಕುಡಿಯುವುದು ಬಿಟ್ಟು ಬಿಸಿನೀರು ಕುಡಿಯಲು ಸಲಹೆ ಮಾಡಿದನು. ಅವನ ಸಲಹೆಯನ್ನು ತಿರಸ್ಕರಿಸಿ ಒಬ್ಬ ಹಿಂದೂ ಯೋಗಿ ಪಾತಕ್ ರನ್ನು ಭೇಟಿ ಮಾಡಲು ಜೆಜೂರಿಗೆ ಹೋದರು. ಅಲ್ಲಿ ಪುನಃ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದರು. ಒಂದು ದಿನ ಬಾಯಾರಿಕೆಯಾಗಿ ಎಲ್ಲಿಯೇ ಹತ್ತಿರವಿದ್ದ ಹಳ್ಳದ ಬಳಿ ನೀರು ಕುಡಿಯಲು ಹೋದಾಗ, ರಾಹುರಿಯಲ್ಲಿ ಸಂಧಿಸಿದ ಮುದುಕ ಪುನಃ ಕಾಣಿಸಿಕೊಂಡು ಪುನಃ ಬಿಸಿನೀರು ಕುಡಿಯಲು ಹೇಳಿದನು. ಆಗ ಆ ಮುಸ್ಲಿಂ ವೃದ್ದನ ಮಾತಿನಂತೆ ಬಿಸಿನೀರು ಕುಡಿಯಲು ಪ್ರಾರಂಭಿಸಿದರು. ತಮ್ಮ ಆರೋಗ್ಯ ಸುಧಾರಿಸುತ್ತಾ ಬರುತ್ತಿರುವುದನ್ನು ಗಮನಿಸಿದರು.

ಅದಾದ ಸ್ವಲ್ಪ ದಿನಗಳ ಮೇಲೆ ರಾಹುರಿಯ ಯೋಗಿಯ ಒತ್ತಾಯದ ಮೇರೆಗೆ ೨೭ ನೇ ಜೂನ್ ೧೯೧೧ ರಲ್ಲಿ ಶಿರಡಿಯ ಸಾಯಿಬಾಬಾರವರನ್ನು ಕಾಣಲು ಬಂದರು. ಇದೇ ಉಪಾಸಿನಿ ಬಾಬ ಮತ್ತು ಸಾಯಿಬಾಬಾರವರ ಮೊದಲನೇ ಭೇಟಿ. ಶಿರಡಿಯಲ್ಲಿ ಉಪಾಸಿನಿ ಬಾಬರವರು ಸಾಯಿಬಾಬಾರವರ ಅದ್ವಿತೀಯ ಶಕ್ತಿಯನ್ನು ಮನಗಂಡರು. ಸಾಯಿಬಾಬಾರವರು ಉಪಾಸಿನಿ ಬಾಬರವರಿಗೆ ಖಂಡೋಬ ಮಂದಿರದಲ್ಲಿ ವಾಸಿಸಲು ಹೇಳಿದರು. ಅಲ್ಲಿ ಅವರು ತಮ್ಮನ್ನು ಕಾಣಲು ಬರುವ ಸಂದರ್ಶಕರು ಕೊಡುವ ಭಿಕ್ಷೆಯಿಂದ ಜೀವನ ನಡೆಸುತ್ತಿದ್ದರು. ಕೆಲವು ವೇಳೆ ಭಿಕ್ಷೆ ಸಿಗದೇ ಉಪವಾಸ ಮಾಡಬೇಕಾಗುತ್ತಿತ್ತು. ಹೀಗೆ ಅವರು ಉಪವಾಸ ಮಾಡುತ್ತಿದ್ದುದರಿಂದ ಅವರನ್ನು "ಉಪಾಸಿನಿ" ಎಂದು ಕರೆಯುತ್ತಿದ್ದರು.

ಕೆಲಕಾಲದ ನಂತರ ಉಪಾಸಿನಿಯವರು ಸಕೋರಿ ಆಶ್ರಮಕ್ಕೆ ಬಂದು ನೆಲೆಸಿದರು. ಉಪಾಸಿನಿ ಬಾಬರವರು ಜನರನ್ನು ಪ್ರಾಪಂಚಿಕ ಅಭಿಲಾಷೆಗಳಿಂದ ಎಳೆದು ಧರ್ಮ ಕಾರ್ಯಗಳಲ್ಲಿ ನಿರತರಾಗುವಂತೆ ಮಾಡಿದರು. ಉಪಾಸಿನಿಯವರಿಗೆ ಸಾಯಿಬಾಬಾರವರಿಂದ ಪಡೆದ ಕೆಲವು ದೈವಿಕ ಶಕ್ತಿಗಳಿದ್ದವು. ಉಪಾಸಿನಿ ಬಾಬರವರು ಸಾಯಿ ಪ್ರಚಾರಕ್ಕೆ ಸಲ್ಲಿಸಿದ ಸೇವೆಯನ್ನು ಯಾರು ಮರೆಯುವಂತಿಲ್ಲ. ಇವರು ಸುಪ್ಪ್ರಸಿದ್ಧವಾದ "ಸಾಯಿ ಮಹಿಮ್ನ ಸ್ತೋತ್ರ" ವನ್ನು ರಚಿಸಿದ್ದಾರೆ. ಮತ್ತೊಬ್ಬ ಸಾಯಿ ಮಹಾಭಕ್ತ ಶ್ರೀ ಮೆಹರ್ ಬಾಬಾರವರು ಉಪಾಸಿನಿ ಬಾಬಾರವರ ಶಿಷ್ಯರಾಗಿದ್ದರು. ಉಪಾಸಿನಿ ಬಾಬರವರು ೧೯೪೧ ರಲ್ಲಿ ಸಮಾಧಿ ಹೊಂದಿದರು.

Friday, January 22, 2010

ಸಾಯಿ ಮಹಾ ಭಕ್ತ - ಶ್ರೀ ನಂಜುಂಡೇಶ್ವರ್ (೨೮.೦೪.೧೯೨೪ ರಿಂದ ಫೆಬ್ರವರಿ ೨೦೦೦) - ಕೃಪೆ - ಶ್ರೀಮತಿ.ಅನ್ನಪೂರ್ಣ ತಿಲಕ್ ಮತ್ತು ಡಾ.ಶಿವಚರಣ್


ಶ್ರೀ ನಂಜುಂಡೇಶ್ವರ್ ರವರು ಶ್ರೀಮತಿ.ಟೇಕುರ್ ಜಯಲಕ್ಷ್ಮಿ ಹಾಗೂ ಟೇಕುರ್ ಶ್ರೀನಿವಾಸಮೂರ್ತಿಯವರ ಮಗನಾಗಿ ೨೮.೦೪.೧೯೨೪ ರಂದು ಜನಿಸಿದರು. ಶ್ರೀ ನಂಜುಂಡೇಶ್ವರ್ ರವರು ಕರ್ನಾಟಕದ ಶಿಲ್ಪಿ ಎಂದೇ ಹೆಸರಾದ ಸರ್. ಎಂ. ವಿಶ್ವೇಶ್ವರಯ್ಯ ರವರ ಸಂಬಂಧಿಗಳಾಗಿರುತ್ತಾರೆ. ಬೇರೆ ಎಲ್ಲ ಮಕ್ಕಳಂತೆ ನಂಜುಂಡೇಶ್ವರ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಬೆಂಗಳೂರಿನ ಪ್ರಸಿದ್ದ ಕಾಲೇಜೊಂದರಲ್ಲಿ ಬಿ.ಏ. ಪದವಿಗೆ ಸೇರಿದರು. ಆ ಸಮಯದಲ್ಲಿ ನಂಜುಂಡೇಶ್ವರ್ ರವರಿಗೆ ಸಾಯಿಬಾಬಾರವರ  ಲೀಲೆಗಳು ಅತೀವ ಪ್ರಭಾವ ಬೀರುವುದಕ್ಕೆ ಪ್ರಾರಂಭವಾಯಿತು. ಬಿ.ಏ. ಪರೀಕ್ಷೆಗೆ ಇನ್ನು ೧೫ ದಿನಗಳಿರುವಾಗ ಸಾಯಿಬಾಬಾರವರು ಇವರಿಗೆ ಸಾಕ್ಷಾತ್ಕಾರ ನೀಡಿ ಈ ಪ್ರಾಪಂಚಿಕ ವಿಷಯಗಳಲ್ಲಿ ಇವರಿಗೆ ಏನು ಉಳಿದಿಲ್ಲವೆಂದು ಮನವರಿಕೆ ಮಾಡಿಕೊಟ್ಟು ಈ ಪ್ರಾಪಂಚಿಕ ಬಂಧನದಿಂದ ಬಿಡುಗಡೆ ಮಾಡಿ ಆಧ್ಯಾತ್ಮಿಕದತ್ತ ಅವರ ಮನಸ್ಸು ಹೋಗುವಂತೆ ಮಾಡಿದರು. ಹೀಗೆ ತಮ್ಮ ಕೃಪಾಕಟಾಕ್ಷದಿಂದ ಸಾಯಿಬಾಬಾರವರು ಶ್ರೀ ನಂಜುಂಡೇಶ್ವರ್ ರವರನ್ನು ತಮ್ಮ ಮಹಾಭಕ್ತರನ್ನಾಗಿ ಮಾಡಿಕೊಂಡರು ಮತ್ತು ತಮ್ಮ ತಕ್ಕೆಗೆ ಎಳೆದುಕೊಂಡರು.

ಶ್ರೀ ನಂಜುಂಡೇಶ್ವರ್ ರವರು ಬಹಳ ಸರಳ ಜೀವಿಯಾಗಿದ್ದರು ಮತ್ತು ಸಾಯಿಬಾಬಾರವರ ಅಪ್ರತಿಮ ಭಕ್ತರಾಗಿದ್ದರು. ಅವರು ಬಾಹ್ಯ ಪ್ರಪಂಚಕ್ಕೆ ತಾವು ದೇವಮಾನವರೆಂದಾಗಲಿ ಅಥವಾ ಅತ್ಮಜ್ಞಾನಿಯೆಂದು ಹೇಳಿಕೊಳ್ಳಲಿಲ್ಲ. ಎಲ್ಲ ಸಾಮಾನ್ಯ ಮನುಷ್ಯರಂತೆ ತಾವು ಕೂಡ ನಡೆದುಕೊಳ್ಳುತ್ತಿದ್ದರು. ಆದರೂ ಕೂಡ ಸಾಯಿಬಾಬಾರವರ ಸಾಕ್ಷಾತ್ಕಾರವನ್ನು ಪಡೆದಿದ್ದರು ಮತ್ತು ನಿಜವಾದ ಮಹಾತ್ಮರು ಕಮಲದ ಎಲೆಯ ಮೇಲಿನ ನೀರಿನಂತೆ ಇರುವ ಹಾಗೆ, ತಾವು ಕೂಡ ಜೀವನ ನಡೆಸುತ್ತಿದ್ದರು. ಯಾರಾದರೂ ಸ್ವಾಮಿ ಅಥವಾ ಬಾಬಾ ಎಂದು ಕರೆದರೆ ಕೋಪಗೊಳ್ಳುತ್ತಿದ್ದರು ಮತ್ತು "ನಾನು ಸ್ವಾಮಿಯು ಅಲ್ಲ ಗುರುವು ಅಲ್ಲ, ನಾನು ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಬಾಲಕ ಮತ್ತು ಶಿರಡಿ ಸಾಯಿಬಾಬಾ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು" ಎಂದು ಹೇಳುತ್ತಿದ್ದರು. ಶ್ರೀ ನಂಜುಂಡೇಶ್ವರ್ ರವರಿಗೆ ಹೇಗೆ ಸಾಯಿಬಾಬಾ ಸಾಕ್ಷಾತ್ಕಾರವಾಯಿತೆಂದು ಕೇಳಿದರೆ ಕಣ್ಣು ರೆಪ್ಪೆ ಕೂಡ ಮಿಟುಕಿಸದೆ ತಕ್ಷಣವೇ "ನಾನು ಯಾವ ಆಧ್ಯಾತ್ಮಿಕ ಸಾಧನೆಯನ್ನು ಮಾಡಲಿಲ್ಲ. ನಾನು ಕೇವಲ ಬಾಬನಿಗೆ ಒಂದು ಬಿಳಿಯ ಹಾಳೆಯನ್ನು ಕೊಟ್ಟೆ ಅಷ್ಟೇ. ಸಾಯಿಬಾಬಾರವರೆ ಮಿಕ್ಕಿದೆಲ್ಲವನ್ನು ಮಾಡಿದರು" ಎಂದು ಹೇಳುತ್ತಿದ್ದರು. ಇದರಿಂದ ಶ್ರೀ ನಂಜುಂಡೇಶ್ವರ್ ರವರು ಏನು ಹೇಳಬಯಸಿದ್ದರೆಂದರೆ ಸಾಯಿಬಾಬಾರವರ ಸಾಕ್ಷಾತ್ಕಾರವಾಗಬೇಕಾದರೆ ಮಾನವನು ತನ್ನ ಮನಸ್ಸನ್ನು ಬಿಳಿಯ ಹಾಳೆಯಂತೆ ಪರಿಶುದ್ದವಾಗಿ ಇಟ್ಟುಕೊಳ್ಳಬೇಕು. ಆಗ ಖಂಡಿತವಾಗಿ ಸಾಯಿಬಾಬಾರವರ ಸಾಕ್ಷಾತ್ಕಾರ ಆಗುತ್ತದೆ. ಶ್ರೀ ನಂಜುಂಡೇಶ್ವರ್ ರವರು ಆಗಾಗ ತಮ್ಮ ಹತ್ತಿರದ ಜನಗಳಿಗೆ ಹೀಗೆ ಹೇಳುತ್ತಿದ್ದರು "ಶಾಂತರಾಗಿ ಇರುವುದನ್ನು ಕಲಿಯಿರಿ. ಸಾಯಿಬಾಬನ ಮುಂದೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸಿ. ನಿಮ್ಮ ಎಲ್ಲ ಅಹಂಕಾರಗಳನ್ನು ಮತ್ತು ಋಣಾತ್ಮಕ ಶಕ್ತಿಗಳನ್ನು ಸಾಯಿಬಾಬನಲ್ಲಿ ಅರ್ಪಿಸಿ. ಸಾಯಿಬಾಬನನ್ನು ಯಾವುದೇ ಸಂಶಯ ಪಡದೆ ವಿನಮ್ರರಾಗಿ ಅನುಸರಿಸಿ. ಸಾಯಿಬಾಬಾರವರು ನಿಮಗೆ ಖಂಡಿತವಾಗಿ ಸಾಕ್ಷಾತ್ಕಾರವನ್ನು ನೀಡುವರು". ಶ್ರೀ ನಂಜುಂಡೇಶ್ವರ್ ರವರ ಈ ಮಾತುಗಳು ಎಷ್ಟು ಅರ್ಥಪೂರ್ಣವಾಗಿವೆ ಅಲ್ಲವೇ?

೧೯೬೩ ರಲ್ಲಿ ಶ್ರೀ ನಂಜುಂಡೇಶ್ವರ್ ರವರಿಗೆ ಪ್ರತಿದಿನ ಮಧ್ಯಾನ್ಹ ಮೂರು ಘಂಟೆಯ ಸಮಯದಲ್ಲಿ ಸಾಯಿಬಾಬಾರವರು ಸೂಕ್ಷ್ಮ ರೂಪದಲ್ಲಿ ದರ್ಶನ ನೀಡುತ್ತಿದ್ದರು ಮತ್ತು ಗುರುವಿನ ಅವಶ್ಯಕತೆಯ ಬಗ್ಗೆ ಕನ್ನಡ ಭಾಷೆಯಲ್ಲಿ ಉಪದೇಶವನ್ನು ಕೂಡ ಮಾಡುತ್ತಿದ್ದರು. ಶ್ರೀ ನಂಜುಂಡೇಶ್ವರ್ ರವರು ಬಾಬಾರವರ ಉಪದೇಶಗಳನ್ನು ತಪ್ಪದೆ ಬರೆದಿಟ್ಟುಕೊಳ್ಳುತ್ತಿದ್ದರು. ಸಾಯಿಬಾಬಾರವರು ೧೯೧೮ ರಲ್ಲಿ ಮಹಾಸಮಾಧಿ ಹೊಂದಿದರು. ಹಲವು ಸಂವತ್ಸರಗಳ ಬಳಿಕವು ಕೂಡ ಶ್ರೀ ನಂಜುಂಡೇಶ್ವರ್ ರವರಿಗೆ ತಮ್ಮ ದಿವ್ಯದರ್ಶನ ನೀಡಿದುದು ಸಾಯಿಬಾಬಾರವರ ಒಂದು ಪವಾಡವೇ ಸರಿ.  (ತಮ್ಮ ಭಕ್ತರಿಗೆ ಈಗಲೂ ಮಾರ್ಗದರ್ಶನ ನೀಡುತ್ತ ಅವರಿಗೆ ತಮ್ಮ ದಿವ್ಯ ದರ್ಶನವನ್ನು ದಯಪಾಲಿಸುತ್ತ ಮತ್ತು ಅವರ ಕಷ್ಟಗಳನ್ನೆಲ್ಲ ನೀಗುತ್ತ ತಾವು ಜನನ ಮರಣಗಳಿಗೆ ಅತೀತರೆಂದು ಪ್ರಪಂಚಕ್ಕೆ ತೋರಿಸಿದ್ದಾರೆ). ಶ್ರೀ ನಂಜುಂಡೇಶ್ವರ್ ರವರು ಸಾಯಿಬಾಬಾರವರ ಉಪದೇಶಗಳನ್ನು ಹಲವು ವರ್ಷಗಳು ತಮ್ಮ ಬಳಿಯೇ ಜೋಪಾನವಾಗಿ ಇಟ್ಟುಕೊಂಡಿದ್ದರು. ಆದರೆ ಶ್ರೀ ನಂಜುಂಡೇಶ್ವರ್ ರವರಿಗೆ ಹತ್ತಿರವಾಗಿದ್ದ ಕೆಲವು ಸಾಯಿಭಕ್ತರ ಒತ್ತಡಕ್ಕೆ ಮಣಿದು ೩೧ನೇ ಅಕ್ಟೋಬರ್ ೧೯೯೬ ರಲ್ಲಿ "ಶಿರಡಿ ಸಾಯಿಬಾಬಾ ಹೇಳಿದ ಮಾತುಗಳು" ಎಂಬ ಶೀರ್ಷಿಕೆಯಡಿ ಕನ್ನಡ ಭಾಷೆಯಲ್ಲಿ ಪ್ರಕಟಿಸಿದರು. ಗುರುವಿನ ಅನ್ವೇಷಣೆಯಲ್ಲಿರುವವರಿಗೆ ಈ ಪುಸ್ತಕವು ಮಾರ್ಗದರ್ಶಕನ ಹಾಗೆ ಬೆಳಕು ಚೆಲ್ಲುತ್ತದೆ ಮತ್ತು ಆತ್ಮ ಸಾಕ್ಷತ್ಕಾರವಾಗಬೇಕಾದರೆ ಗುರುವಿನ ಅವಶ್ಯಕತೆ ಇದೆ ಎಂದು ತಿಳಿಯಪಡಿಸುತ್ತದೆ.  ಕಾಲಾನಂತರದಲ್ಲಿ ಈ ಪುಸ್ತಕವನ್ನು "ಸಾಯಿಬಾಬಾ ವಾಕ್ಸುಧಾಮ್ರುತಮು" ಎಂಬ ಶೀರ್ಷಿಕೆಯಡಿ ಶ್ರೀಮತಿ ಅನ್ನಪೂರ್ಣ ತಿಲಕ್ ರವರು ಬಹಳ ಸುಂದರವಾಗಿ ಅನುವಾದ ಮಾಡಿದ್ದಾರೆ.

ಹೀಗೆ ಶ್ರೀ ನಂಜುಂಡೇಶ್ವರ್ ರವರು ತಮ್ಮ ಸಣ್ಣ ವಯಸ್ಸಿನಲ್ಲೇ ಎಲ್ಲ ಬಂಧನಗಳನ್ನು ತೊರೆದು ಸಾಮಾನ್ಯ ಜನರಿಗೆ ಸಾಯಿಬಾಬರವರನ್ನು ಹೊಂದಲು ನಡೆಯಬೇಕಾದ ದಾರಿಯನ್ನು ತೋರಿಸುತ್ತ  ಫೆಬ್ರವರಿ ೨೦೦೦ ಶಿವರಾತ್ರಿಯ ಪವಿತ್ರ ದಿವಸ ಸಾಯಿಪಾದವನ್ನು ಸೇರಿದರು.

ಶ್ರೀ ನಂಜುಂಡೇಶ್ವರ್ ರವರ ತರಹದ ಸಾಯಿಭಕ್ತರು ಇತ್ತೀಚಿನ ದಿನಗಳಲಿ ನಮಗೆ ಕಾಣ ಸಿಗುವುದು ಬಹಳ ಅಪರೂಪ ಎಂದೇ ಹೇಳಬಹುದು.

Thursday, January 21, 2010

ಸಾಯಿ ಮಹಾಭಕ್ತ - ಶ್ರೀ ಸ್ವಾಮಿ ಕೇಶವಯ್ಯಜಿ - ಕೃಪೆ - ಸಾಯಿಅಮೃತಧಾರಾ.ಕಾಂ


ಸ್ವಾಮಿ ಕೇಶವಯ್ಯಜಿಯವರು ಚನ್ನೈನ ಶಣೈ ನಗರದ ಶ್ರೀ ಸಾಯಿಬಾಬಾ ಭಕ್ತ ಸಮಾಜಂನ ಸಂಸ್ಥಾಪಕರು. ಇವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು ಹಾಗೂ  ಸಾಯಿಬಾಬಾರವರ ಲೀಲೆಗಳನ್ನು ಹಾಗೂ ಉಪದೇಶಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಸ್ವಾಮಿ ಕೇಶವಯ್ಯನವರು ದಕ್ಷಿಣ ಭಾರತದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನ್ನಾರ್ ನದಿಯ ತೀರದಲ್ಲಿರುವ ಪಾಮಿಡಿ ಎಂಬ ಗ್ರಾಮದಲ್ಲಿ ಸಾತ್ವಿಕ ಶೀವೈಷ್ಣವ ಕುಟುಂಬದಲ್ಲಿ ಜನಿಸಿದರು.

ಇವರು 19ನೇ ಶತಮಾನದ ಕೊನೆಯ ಭಾಗದಲ್ಲಿ ಬರುವ ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಜನಿಸಿದರು. ಇವರ ತಂದೆ ಶ್ರೀ.ಸ್ವಾಮಿ ಬಾಲಯ್ಯನವರು ಬಹಳ ದೈವಭಕ್ತರಾಗಿದ್ದರು.

ಸ್ವಾಮೀಜಿಯವರು ತಮ್ಮ ಬಾಲ್ಯದ ದಿನಗಳನ್ನು ಸಂಪೂರ್ಣವಾಗಿ ಪಾಮಿಡಿ ಗ್ರಾಮದಲ್ಲಿಯೇ ಕಳೆದರು. ಆ ಗ್ರಾಮದಲ್ಲಿ ಪೆನ್ನಾರ್ ನದಿಯ ದಡದಲ್ಲಿದ್ದ ಸುಂದರ ಪ್ರಕೃತಿಯ ವಾತಾವರಣ  ಹಾಗೂ ಭೋಗೇಶ್ವರಸ್ವಾಮಿ, ಚೆನ್ನಕೇಶವಸ್ವಾಮಿ ಮತ್ತು ಆಂಜನೇಯಸ್ವಾಮಿಯ ದೇವಾಲಯಗಳು ಇವರನ್ನು ಬಹಳವಾಗಿ ಆಕರ್ಷಿಸಿದವು. ಸ್ವಾಮಿ ಕೇಶವಯ್ಯನವರು ನಿಯಮಿತವಾಗಿ ಈ ದೇವಾಲಯಗಳಿಗೆ ಭೇಟಿ ಕೊಟ್ಟು ಅಲ್ಲಿ ಗಂಟೆಗಟ್ಟಲೆ ಹೊತ್ತು ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಬಾಲ್ಯದಿಂದಲೇ ದೈವಿಕ ತೇಜಸ್ಸು, ಸರ್ವರನ್ನೂ ಪ್ರೇಮ, ಆತ್ಮೀಯತೆ ಹಾಗೂ ದಯೆಯಿಂದ ಕಾಣುವ ಮನೋಭಾವ ಇವರಲ್ಲಿ ಬೆಳೆದುಬಂದಿತ್ತು. ಆದಕಾರಣ, ಇವರೊಬ್ಬ ದೈವಿಕತೆಯ ಅಂಶವನ್ನು ಹೊಂದಿದ ವಿಶೇಷ ವ್ಯಕ್ತಿಯಾಗಿ ಬೆಳೆಯತೊಡಗಿದರು.

ಇವರ ತಂದೆಯವರು ಇವರನ್ನು ಬಹಳ ಶಿಸ್ತಿನಿಂದ ಬೆಳೆಸಿದ್ದರು. ಇವರಿಗೆ ಗುರು-ಹಿರಿಯರನ್ನು ಕಂಡರೆ ಅಪಾರವಾದ ಗೌರವವಿತ್ತು. ಇವರ ಗುರುಗಳು ಹೇಳಿದ ಮಾತನ್ನು ಎಂದಿಗೂ ಮೀರುತ್ತಿರಲಿಲ್ಲ. ಇವರು ಬಾಲ್ಯದಿಂದಲೇ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದರು. ಚಿಕ್ಕಂದಿನಿಂದಲೇ ದಾನ-ಧರ್ಮಗಳನ್ನು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಇವರಿಗೆ ಡಂಭಾಚರಣೆಯಲ್ಲಿ ನಂಬಿಕೆ ಇರಲಿಲ್ಲ. ದೇವಾಲಯದಲ್ಲಿ ತೆಂಗಿನಕಾಯಿಯನ್ನು ಒಡೆಯುವ ಬದಲಿಗೆ ದಾನ-ಧರ್ಮಗಳನ್ನು ಮಾಡುವುದು ಉತ್ತಮ ಎಂಬ ಮನೋಭಾವನೆಯನ್ನು ಹೊಂದಿದ್ದರು. ಇವರ ಶಾಲೆಯಲ್ಲಿ ನಡೆಸಿದ ಬೈಬಲ್ ತರಗತಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಷ್ಟೇ ಅಲ್ಲದೇ ಜೀಸಸ್ ಕ್ರೈಸ್ಟ್  ಇವರಿಗೆ ದರ್ಶನವನ್ನು ಕೂಡ ಪಾಲಿಸಿದ್ದನು. ಇವರು ಪವಿತ್ರ ಕುರಾನ್ ಗ್ರಂಥವನ್ನು ಪಾರಾಯಣ ಮಾಡಿ ಪ್ರಾಫೆಟ್ ಮೊಹಮ್ಮದ್ ರ ದರ್ಶನವನ್ನು ಕೂಡ ಪಡೆದಿದ್ದರು. ಇವರು ಎಲ್ಲವನ್ನೂ ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ಗಮನಿಸುತ್ತಿದ್ದರು. ಹಲವಾರು ಜ್ಯೋತಿಷಿಗಳು ಇವರು ಬಾಲ್ಯದಲ್ಲಿದ್ದಾಗಲೇ ಮುಂದೆ ಒಂದು ದಿನ ಇವರು ಸಂತರಾಗುತ್ತಾರೆಂಬ ಸೂಚನೆಯನ್ನು ನೀಡಿದ್ದರು.

ಇವರು ತಮ್ಮ 14ನೇ ವಯಸ್ಸಿನವರೆವಿಗೂ ಶಾಲೆಯ ಮೆಟ್ಟಿಲನ್ನು ಹತ್ತಿರಲಿಲ್ಲ. ನಂತರ ಪಾಮಿಡಿ ಗ್ರಾಮದಲ್ಲಿದ್ದ ಲಂಡನ್ ಮಿಷನ್ ಮಾಧ್ಯಮಿಕ ಶಾಲೆಗೆ ಸೇರಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಇ.ಡಿ.ಲೇಕರ್ ರವರ ಬಳಿ ಆಂಗ್ಲ ಪದಗಳನ್ನು ಕಲಿಯಲು ಪ್ರಾರಂಭಿಸಿದರು. ಕಲಿಯಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಇವರು ಶ್ರೀ.ಇ.ಡಿ.ಲೇಕರ್ ರವರು ತಮ್ಮನ್ನು ಮೆಚ್ಚುವಂತೆ ಮಾಡುವಲ್ಲಿ ಯಶಸ್ವಿಯಾದರು. ಶ್ರೀ.ಇ.ಡಿ.ಲೇಕರ್ ರವರು ಹೋದ ಕಡೆಯೆಲ್ಲಾ ಇವರು ಹಿಂಬಾಲಿಸಿಕೊಂಡು ಹೋಗುತ್ತಿದ್ದರು ಮತ್ತು ದೇವರು ಹಾಗೂ ಧರ್ಮದ ಬಗ್ಗೆ ಹೆಚ್ಚಿನ ವಿಚಾರವನ್ನು ತಿಳಿದುಕೊಂಡರು. ಕೇವಲ ಎರಡೇ ವರ್ಷದಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ ಅನಂತಪುರದಲ್ಲಿದ್ದ ಪ್ರೌಢಶಾಲೆಯಲ್ಲಿ ಆಗಿನ 4ನೇ ಫಾರ್ಮ್ ಗೆ ಪ್ರವೇಶವನ್ನು ಗಳಿಸಿದರು. ಶಾಲೆಯಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲಿಗರಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು ಮತ್ತು ಮಂಚೂಣಿಯಲ್ಲಿದ್ದರು.  ಶಾಲೆಯಲ್ಲಿ ನಡೆಸುತ್ತಿದ್ದ ಬೈಬಲ್ ತರಗತಿಗೆ ಸೇರಿ ""33 Years life of Jesus" ಎಂಬ ಪುಸ್ತಕವನ್ನು ಆಳವಾಗಿ ಅಧ್ಯಯನ ಮಾಡಿ ಮೊದಲ ಸ್ಥಾನವನ್ನು ಗಳಿಸಿದರು. ಬಾಲ ಕೇಶವಯ್ಯನವರಿಗೆ ಓದಿನಲ್ಲಿ ಇದ್ದ ಆಸಕ್ತಿಯನ್ನು ಕಂಡ ಶಾಲೆಯ ಮುಖ್ಯ ನಿರ್ವಹಣಾಧಿಕಾರಿ ಜರ್ಮನಿ ದೇಶದ ಕುಮಾರಿ.ಕ್ರಿಸ್ಟಲಿಬ್ ರವರು ಇವರಿಗೆ ಅತ್ಯುತ್ತಮ ಶಿಕ್ಷಣ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಲ ಕೇಶವಯ್ಯನವರು ಎಲ್ಲಾ ಧರ್ಮಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೂ ಸಹ ಹಿಂದೂ ಧರ್ಮದಲ್ಲಿ ಇವರಿಗೆ ಅಚಲವಾದ ನಂಬಿಕೆಯಿತ್ತು. ಬಾಲ ಕೇಶವಯ್ಯನವರು ಶಾಲೆಯಲ್ಲಿ ಚೆನ್ನಾಗಿ ಓದಿ ತಮ್ಮ 10ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸಿದರು. ಇವರ ಮನೆಯ ಹಣಕಾಸಿನ ಪರಿಸ್ಥಿತಿ  ಉತ್ತಮವಾಗಿರಲ್ಲಿಲ್ಲವಾದ ಕಾರಣ ಮುಂದೆ ಓದಲಾಗದೇ  ಸರಕಾರಿ ಕೆಲಸಕ್ಕೆ ಸೇರಿದರು. ಮುಂದಿನ ದಿನಗಳಲ್ಲಿ ಜನರು ಇವರನ್ನು "ಸ್ವಾಮಿ ಕೇಶವಯ್ಯ" ಎಂದು ಸಂಬೋಧಿಸುತ್ತಿದ್ದರು. 

ಅಂದಿನ ಮದ್ರಾಸ್ ರಾಜ್ಯದ ಸರ್ಕಾರಿ ನೋಂದಣಿ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡರು. ಕೇವಲ ಕೆಲವೇ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಹುದ್ದೆಗೆ ಬಡ್ತಿಯನ್ನು ಪಡೆದರು. ಬಡವರ ಮೇಲೆ ಇವರಿಗಿದ್ದ ಕಾಳಜಿಯನ್ನು ನೋಡಿದ ಜನರು ಇವರನ್ನು "ಸಂತ ಸಬ್ ರಿಜಿಸ್ಟ್ರಾರ್" ಎಂದು ಕರೆಯುತ್ತಿದ್ದರು. ಇವರ ಮೇಲಿನ ಅಧಿಕಾರಿಗಳು ಇವರ ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿ ಆರು ಬಾರಿ ಇವರಿಗೆ ಹೆಚ್ಚಿನ ವೇತನ ಹಾಗೂ ಪುರಸ್ಕಾರವನ್ನು ನೀಡಿ ಗೌರವಿಸಿದ್ದರು. ಮನೆಯಲ್ಲಿ ದಯಾವಂತರಾಗಿ ಹಾಗೂ ಕಚೇರಿಯಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯಾಗಿ ಎಲ್ಲರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರ ಕೆಲಸದ ಸಂಪೂರ್ಣ ಅವಧಿಯಲ್ಲಿ ಇವರ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಕೂಡ ಬರದಂತೆ ಎಚ್ಚರಿಕೆ ವಹಿಸಿದ್ದರು.

ಇವರು ಧರ್ಮಾವರಂ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಾಯಿಬಾಬಾರವರ ಆಶೀರ್ವಾದ ಹಾಗೂ ಕೃಪೆ ಇವರ ಮೇಲೆ 1ನೇ ಜುಲೈ 1939 ರ ರಾತ್ರಿ ಆಯಿತು. ಶಿರಡಿಗೆ ಹೋಗದೇ, ಸಾಯಿಬಾಬಾ ಯಾರೆಂದು ತಿಳಿಯದೇ, ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡದೇ ಇವರ ಸ್ನೇಹಿತರಾದ ಅನಂತಪುರದ ವಕೀಲರಾದ ಶ್ರೀ.ಮಲ್ಲಿರೆಡ್ಡಿಯವರಿಂದ ಕೇವಲ ಸಾಯಿಬಾಬಾರವರ ಹೆಸರನ್ನು ಕೇಳಿದ ಕೆಲವೇ ಗಂಟೆಗಳಲ್ಲಿ ಇವರಿಗೆ ಸಾಯಿಬಾಬಾರವರ ಸಾಕ್ಷಾತ್ಕಾರವಾಗಿ ಕೃಪಾಸಿದ್ಧರಾದರೆಂದರೆ ಆಶ್ಚರ್ಯವಲ್ಲದೇ ಮತ್ತೇನು?? ಸ್ವಾಮಿ ಕೇಶವಯ್ಯನವರು ಈ ವಿಷಯವನ್ನು ತಮ್ಮ ಪತ್ನಿ ಶ್ರೀಮತಿ.ಗೋವಿಂದಮ್ಮಾಳ್ ಗೆ ತಿಳಿಸಿರುತ್ತಾರೆ. ಆ ವೃತ್ತಾಂತ ಈ ರೀತಿಯಿದೆ: 1ನೇ ಜುಲೈ 1939 ರ ರಾತ್ರಿ ಸಾಯಿಬಾಬಾರವರು ಸ್ವಾಮಿ ಕೇಶವಯ್ಯನವರ ಕನಸಿನಲ್ಲಿ ಬಂದು ನಾಲ್ಕೈದು ನಿಮಿಷಗಳ ಕಾಲ ಜೊತೆಯಲ್ಲಿದ್ದರೆಂದು ಹೇಳಲಾಗುತ್ತದೆ. ಇದರಿಂದ ಸ್ವಾಮಿ ಕೇಶವಯ್ಯನವರಿಗೆ ಅತೀವ ಸಂತೋಷವಾಗಿ ಧನ್ಯತೆಯ ಭಾವವನ್ನು ಹೊಂದಿದರೆಂದು ತಿಳಿದುಬಂದಿರುತ್ತದೆ. ಮಾರನೇ ದಿನ ಸಾಯಿಬಾಬಾರವರ ಭಾವಚಿತ್ರವನ್ನು ಕೊಂಡು ಪೂಜೆ ಮಾಡಬೇಕೆಂದು ಸ್ವಾಮಿ ಕೇಶವಯ್ಯನವರು ಅಂದುಕೊಂಡರು. ಆದರೆ, ಒಂದು ವಿಚಿತ್ರ ಸಂಗತಿ ನಡೆಯಿತು. ಅದೇನೆಂದರೆ, ಮಾರನೇ ದಿನ ಅಂಚೆಯ ಮುಖಾಂತರ ಸಾಯಿಬಾಬಾರವರ ಭಾವಚಿತ್ರ ಹಾಗೂ ನಂತರದ ದಿನ ಉಧಿ ಪೊಟ್ಟಣ ಸ್ವಾಮಿ ಕೇಶವಯ್ಯನವರ ಮನೆಗೆ ಬಂದು ಮುಟ್ಟುತ್ತದೆ. ಆದರೆ, ಯಾರು ಕಳುಹಿಸಿದರು ಎಂಬ ಬಗ್ಗೆ ಸ್ವಲ್ಪವೂ ಮಾಹಿತಿ ಇರುವುದಿಲ್ಲ.

ಸ್ವಾಮಿ ಕೇಶವಯ್ಯನವರು ಸಾಯಿಬಾಬಾರವರನ್ನು ಹುಡುಕಿಕೊಂಡು ಹೋಗಲಿಲ್ಲ. ಬದಲಿಗೆ ಸಾಯಿಬಾಬಾರವರೇ ಸ್ವಯಂ ಇವರ ಬಳಿಗೆ ಬಂದು ಭಕ್ತರ ಮೇಲೆ ತಮಗಿದ್ದ ಪ್ರೀತಿಯನ್ನು ತಿಳಿಸಲು ಸ್ವಾಮಿ ಕೇಶವಯ್ಯನವರನ್ನು ಒಂದು ಆಯುಧವನ್ನಾಗಿ ಬಳಸಿಕೊಂಡರೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಂತರದ ನಾಲ್ಕು ದಶಕಗಳಲ್ಲಿ ಸ್ವಾಮಿ ಕೇಶವಯ್ಯನವರು ಮಾಡಿದ ಸಾಯಿ ಸೇವೆಯನ್ನು ಗಮನಿಸಿದರೆ ಸಾಯಿಬಾಬಾರವರು ಇವರನ್ನು ತಮ್ಮ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿದ್ದು ಸರಿ ಎಂದು ನಮಗೆ ಮನದಟ್ಟಾಗುತ್ತದೆ.   1939 ನೇ ಇಸವಿಯ ನಂತರದ ಸ್ವಾಮಿ ಕೇಶವಯ್ಯನವರ ಜೀವನ ಶೈಲಿ ಶಿರಡಿ ಸಾಯಿಬಾಬಾರವರ ಜೀವನದಂತೆಯೇ ಇತ್ತೆಂದರೆ ತಪ್ಪಾಗಲಾರದು.  7ನೇ ಏಪ್ರಿಲ್ 1941 ರಂದು ಇವರಿಗೆ ಪೆನುಕೊಂಡಕ್ಕೆ ವರ್ಗವಾಯಿತು. ಅಂದಿನಿಂದ ಪ್ರತಿ ಗುರುವಾರದಂದು ಇವರು ಮಾಡುತ್ತಿದ್ದ ಸಾಯಿಬಾಬಾರವರ ಪೂಜೆ, ಪುನಸ್ಕಾರಗಳನ್ನು ಸಾವಿರಾರು ಜನರನ್ನು ಇವರ ಕಡೆ ಸೆಳೆಯಿತು.

ಒಮ್ಮೆ ಸ್ವಾಮಿ ಕೇಶವಯ್ಯನವರು ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಪ್ರಸಿದ್ಧ ಸುಬ್ರಮಣ್ಯ ದೇವರ ಕ್ಷೇತ್ರವಾದ ಪಳನಿಗೆ ದರ್ಶನಕ್ಕೆಂದು ತೆರಳಿದ್ದರು. ಪೂಜೆ ಮುಗಿದ ನಂತರ ಕೆಲವು ನಿಮಿಷಗಳ ಕಾಲ ಸ್ವಾಮಿ ಕೇಶವಯ್ಯನವರು ಧ್ಯಾನದಲ್ಲಿ ಮಗ್ನರಾದರು. ಧ್ಯಾನ ಮುಗಿಸಿ ಕಣ್ಣು ತೆರೆದಾಗ ಸುಬ್ರಮಣ್ಯ ದೇವರ ವಿಗ್ರಹವಿದ್ದ ಸ್ಥಳದಲ್ಲಿ ವಿಗ್ರಹಕ್ಕೆ ಬದಲಾಗಿ ಜ್ಯೋತಿಯೊಂದು ಇವರಿಗೆ ಕಾಣಿಸಿತು. ಇವರ ದೇಹವು ಸಂಪೂರ್ಣ ಹಗುರವಾದಂತೆ ಕಂಡುಬಂದಿತು. ಇವರಿಗೆ ದಿವ್ಯ ಆಧ್ಯಾತ್ಮಿಕ ಅನುಭವವಾಗಿತ್ತು. ಆ ದಿನದಿಂದ ಇವರಿಗೆ ವಿಶೇಷ ಶಕ್ತಿ ಪ್ರಾಪ್ತವಾಯಿತು. ಇವರ ಬಳಿಗೆ ಯಾರೇ ಬಂದರೂ ಅವರು ಕೇಳದೆಯೇ ಅವರ ಹಿಂದಿನ ಚರಿತ್ರೆಯನ್ನು ಹೇಳುತ್ತಿದ್ದರು. ಅಲ್ಲದೇ ಅವರ ಮುಂದಿನ ಭವಿಷ್ಯವನ್ನು ಕೂಡ ಹೇಳುತ್ತಿದ್ದರು. ಇವರ ಬಳಿಗೆ ಬಂದ ಜನರು ಹೇಗೆ ಮುಂದೆ ತಮಗೆ ಒದಗಿಬರುವ ತೊಂದರೆಯಿಂದ ಪಾರಾಗಬೇಕೆಂಬ ವಿಧಾನವನ್ನು ಹೇಳಿಕೊಡುತ್ತಿದ್ದರು. ಎಲ್ಲಾ ಸಿದ್ಧಿಗಳು ಇವರ ಅಧೀನದಲ್ಲಿದ್ದವು. ಆದರೆ ಸ್ವಾಮಿ ಕೇಶವಯ್ಯನವರು ಎಂದಿಗೂ ಆ ಸಿದ್ಧಿಗಳಿಗಾಗಿ ಸಾಧನೆಯನ್ನು ಮಾಡಲಿಲ್ಲ ಅಥವಾ ಅದನ್ನು ಪಡೆಯಬೇಕೆಂದು ಪ್ರಯತ್ನ ಮಾಡಲಿಲ್ಲ. ಆ ಸಿದ್ಧಿಗಳು ತಾವಾಗಿಯೇ ಸ್ವಾಮಿ ಕೇಶವಯ್ಯನವರನ್ನು ಅರಸಿ ಬಂದವು.

ಸ್ವಾಮಿ ಕೇಶವಯ್ಯನವರು ನಿತ್ಯ ಪೂಜೆಯನ್ನು ಮಾಡುವುದಷ್ಟೇ ಅಲ್ಲದೇ ಗುರುವಾರಗಳಂದು ವಿಶೇಷ ಪೂಜೆಯನ್ನು ಮಾಡುತ್ತಿದ್ದರು. ಈ ಗುರುವಾರದ ಪೂಜೆಗೆ ಸಾವಿರಾರು ಭಕ್ತರು ಬಂದು ಸೇರುತ್ತಿದ್ದರು. ಪ್ರತಿಯೊಬ್ಬ ಭಕ್ತರು ಪೂಜಾ ಮಂದಿರದ ಒಳಗೆ ಬಂದ ಕೂಡಲೇ ಸ್ವಾಮಿ ಕೇಶವಯ್ಯನವರು ಸಾಯಿಬಾಬಾರವರ ಭಾವಚಿತ್ರವನ್ನು ದೃಷ್ಟಿಸಿ ನೋಡಿ ಒಳಗೆ ಬಂದ ಭಕ್ತರ ಕಷ್ಟಗಳನ್ನು ಸಾಯಿಬಾಬಾರವರ ಬಳಿ ನಿವೇದನೆ ಮಾಡಿ ಆ ತೊಂದರೆಗೆ ಪರಿಹಾರವನ್ನು ತಿಳಿಸುತ್ತಿದ್ದರು. ಭಕ್ತರ ಬಳಿ ಮಾತನಾಡುವಾಗ ಇವರಿಗೆ ಸಾಯಿಬಾಬಾರವರು ತಮ್ಮೊಳಗಿರುವರೆಂಬ ಅರಿವು ಇರುತ್ತಿರಲಿಲ್ಲ. ಸಾಯಿಬಾಬಾರವರ ಆಜ್ಞೆಯಿಲ್ಲದೇ ಇವರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಭಕ್ತರು ಇವರ ಬಳಿ ಮುಖತಃ ಬರಲು ಆಗದಿದ್ದಾಗ ಪತ್ರಮುಖೇನ ಇವರಿಗೆ ವಿಷಯವನ್ನು ತಿಳಿಸುತ್ತಿದ್ದರು. ಸ್ವಾಮಿ ಕೇಶವಯ್ಯನವರು ಆ ಪತ್ರವನ್ನು ಸಾಯಿಬಾಬಾರವರ ಭಾವಚಿತ್ರದ ಮುಂದೆ ಇರಿಸಿ ಸಾಯಿಬಾಬಾರವರಿಂದ ಉತ್ತರವನ್ನು ತಿಳಿದುಕೊಂಡು ಆ ಪತ್ರಕ್ಕೆ ಮರು ಉತ್ತರ ಬರೆದು ಕಳುಹಿಸುತ್ತಿದ್ದರು. ಸಾಯಿಬಾಬಾರವರು ಇವರಿಗೆ ತಮ್ಮ ಭಾವಚಿತ್ರದ ಮುಖಾಂತರ ಹಾಗೂ ಕನಸಿನಲ್ಲಿ ಬಂದು ಮಾತನಾಡುತ್ತಿದ್ದರೆಂದು ತಿಳಿದುಬಂದಿರುತ್ತದೆ. ಹೀಗೆ ತಮ್ಮ ಲೌಕಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಆಧ್ಯಾತ್ಮಿಕ ಜೀವನವನ್ನು ಕೂಡ ನೆಡೆಸಿಕೊಂಡು ಹೋಗುತ್ತಾ ತಮ್ಮ ಬಳಿ ಬಂದ ಜನರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಮಾನವೀಯತೆಯನ್ನು ಸ್ವಾಮಿ ಕೇಶವಯ್ಯನವರು ಮೆರೆದರು.

ಸ್ವಾಮಿ ಕೇಶವಯ್ಯನವರು 1947ನೇ ಇಸವಿಯಲ್ಲಿ ಪೆನುಕೊಂಡದಲ್ಲಿ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡಿದರು. ಇವರು ಮಾಡಿದ ಈ ಕಾರ್ಯವನ್ನು ಇವರ ಹತ್ತಿರದ ಸ್ನೇಹಿತರು ಇಂದಿಗೂ ನೆನೆಯುತ್ತಾರೆ. ಬಹಳ ದೂರದ ಊರುಗಳಿಂದ ಪೆನುಕೊಂಡ ಸಾಯಿಬಾಬಾ ಮಂದಿರಕ್ಕೆ ಭಕ್ತರು ಬಂದು ತಮ್ಮ ಕಷ್ಟಗಳನ್ನು ಸ್ವಾಮಿ ಕೇಶವಯ್ಯನವರ ಮುಖಾಂತರ ಸಾಯಿಬಾಬಾರವರಲ್ಲಿ ಹೇಳಿಕೊಂಡು ಅವರ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ತಮ್ಮ ಬಳಿಗೆ ಬಂದ ಎಲ್ಲಾ ಭಕ್ತರಿಗೂ ಸ್ವಾಮಿ ಕೇಶವಯ್ಯನವರು ಪವಿತ್ರ ತೀರ್ಥ ಹಾಗೂ ಉಧಿಯನ್ನು ನೀಡುತ್ತಿದ್ದರು ಮತ್ತು ಆಶೀರ್ವದಿಸುತ್ತಿದ್ದರು. ಭಕ್ತರು ಸ್ವಾಮಿ ಕೇಶವಯ್ಯನವರಲ್ಲಿ ಸಾಯಿಬಾಬಾರವರ ದಯೆಯನ್ನು ಕಂಡಿದ್ದರು. ತಮ್ಮ ಬಳಿಗೆ ಬರುತ್ತಿದ್ದ ಸಮಾಜದ ಎಲ್ಲಾ ವರ್ಗದ ಭಕ್ತರಲ್ಲಿ ಸಾಯಿಬಾಬಾರವರ ಮೇಲೆ ಅತ್ಯಂತ ಹೆಚ್ಚಿನ ನಂಬಿಕೆ ಬರುವಂತೆ ಮಾಡುವಲ್ಲಿ ಸ್ವಾಮಿ ಕೇಶವಯ್ಯನವರು ಯಶಸ್ವಿಯಾಗಿದ್ದರು. ಆದರೆ ಯಾವುದಕ್ಕೂ ತಾವು ಕಾರಣಕರ್ತರು ಎಂದು ಹೊಗಳಿಕೊಳ್ಳುತ್ತಿರಲಿಲ್ಲ. ಒಮ್ಮೆ ಆಂಧ್ರಪ್ರದೇಶದ ಗೂಟಿ ಪ್ರಾಂತ್ಯದಲ್ಲಿ ಮಳೆ ಬಾರದೇ ಬರಗಾಲ ಪರಿಸ್ಥಿತಿ ತಲೆದೋರಿದಾಗ ಸಾಯಿಬಾಬಾರವರಲ್ಲಿ ಪ್ರಾರ್ಥನೆಯನ್ನು ಮಾಡಿ ವರ್ಷಧಾರೆಯಾಗುವಂತೆ ಮಾಡಿದರು.

ತಮ್ಮ ಜೀವಿತಾವಧಿಯಲ್ಲಿ ಇವರು ಶಿರಡಿಗೆ 73 ಬಾರಿ ಯಾತ್ರೆಯನ್ನು ಕೈಗೊಂಡಿದ್ದರು. ಅಲ್ಲದೇ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಸಾಯಿಬಾಬಾ ಮಂದಿರಗಳನ್ನು ಪ್ರಾರಂಭಿಸಲು ಕಾರಣೀಭೂತರಾದರು.

1948ನೇ ಇಸವಿಯಲ್ಲಿ ದೇಹದ ಆರೋಗ್ಯ ಉತ್ತಮವಾಗಿಲ್ಲವಾದ ಕಾರಣ ಚಿಕಿತ್ಸೆಗಾಗಿ ಚನ್ನೈ ನಗರಕ್ಕೆ ಬಂದರು. ನಂತರ 1949ನೇ ಇಸವಿಯಲ್ಲಿ ಆರೋಗ್ಯ ಸುಧಾರಿಸಿದ ನಂತರ ಶಣೈ ನಗರದ ತಮ್ಮ ನಿವಾಸ "ಸಾಯಿ ನಿಲಯಂ" ಲ್ಲಿ ಪ್ರತಿ ಗುರುವಾರ ವಿಶೇಷ ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ಸಾವಿರಾರು ಜನರು ಈ ಪೂಜೆಯನ್ನು ನೋಡಲು ಬಂದು ಸೇರುತ್ತಿದ್ದರು. ಪೂಜೆಯಲ್ಲಿ ಪಾಲ್ಗೊಂಡು ತಮ್ಮ ತೊಂದರೆಗಳನ್ನು ಸ್ವಾಮೀಜಿಯವರಲ್ಲಿ ಹೇಳಿಕೊಂಡು ಅವರಿಂದ ಶಿರಡಿಯಿಂದ ತಂದ ಪವಿತ್ರ ಉಧಿ ಪ್ರಸಾದವನ್ನು ಸ್ವೀಕರಿಸಿ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಸ್ವಾಮೀಜಿಯವರು ಗುರುಪೂರ್ಣಿಮೆ, ಶ್ರೀರಾಮನವಮಿ, ಗೋಕುಲಾಷ್ಟಮಿ ಮತ್ತು ವಿಜಯದಶಮಿ ಉತ್ಸವಗಳನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು. ದೂರದ ಊರುಗಳಿಂದ ಬಂದು ಸಾವಿರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಸಂದರ್ಭಗಳಲ್ಲಿ ಸ್ವಾಮೀಜಿಯವರು ಭಕ್ತರಿಗೆ ನೀಡುತ್ತಿದ್ದ ಸಂದೇಶಗಳು ಬಹಳ ಅರ್ಥಪೂರ್ಣವಾಗಿರುತ್ತಿದ್ದವು.

ತಮ್ಮ ಮನೆಯ ಎದುರುಗಡೆ ಇದ್ದ ವಿಶಾಲವಾದ ಖಾಲಿ ಸ್ಥಳದಲ್ಲಿ ಸಾಯಿಬಾಬಾರವರಿಗಾಗಿ ಒಂದು ಭವ್ಯವಾದ ಮಂದಿರವನ್ನು ಕಟ್ಟಿಸಬೇಕೆಂಬ ಕನಸು ಸ್ವಾಮೀಜಿಯವರಿಗೆ ಬಹಳ ಕಾಲದಿಂದಲೂ ಇತ್ತು. ಸ್ವಾಮೀಜಿಯವರ ಕನಸು ನನಸಾಗಿ 14ನೇ ಮಾರ್ಚ್ 1975 ರಂದು ಶಣೈ ನಗರದ ಸಾಯಿಬಾಬಾ ಮಂದಿರ ಪ್ರಾರಂಭವಾಯಿತು. ಅಲ್ಲದೇ ಧ್ಯಾನಮಂದಿರವೂ ಕೂಡ ಉದ್ಘಾಟನೆಗೊಂಡಿತು. ಅಲ್ಲದೇ ಅಂದಿನ ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ಶ್ರೀ.ಸಿ.ಸುಬ್ರಮಣ್ಯಂರವರು 15ನೇ ಮಾರ್ಚ್ 1975 ರಂದು ವಿಶೇಷ ಸ್ಮರಣ ಸಂಚಿಕೆಯನ್ನು ಕೂಡ ಬಿಡುಗಡೆ ಮಾಡಿದರು.

ಸ್ವಾಮೀಜಿಯವರು ತಮ್ಮ ಬಳಿಗೆ ಬರುತ್ತಿದ್ದ ಭಕ್ತರ ಮನವನ್ನು ಪರಿವರ್ತನೆಗೊಳಿಸುವಲ್ಲಿ ಸಿದ್ಧಹಸ್ತರಾಗಿದ್ದರು. ಅತ್ಯಂತ ಕ್ಲಿಷ್ಟವಾದ ಈ ಕಾರ್ಯವನ್ನು ಸ್ವಾಮೀಜಿಯವರು ಸಾಯಿಬಾಬಾರವರ ದಯೆಯಿಂದ ನಿರಾಯಾಸವಾಗಿ ಮಾಡುತ್ತಿದ್ದರು. ನಾಸ್ತಿಕರನ್ನು ಕೂಡ ಸಾಯಿ ಭಕ್ತರನ್ನಾಗಿ ಮಾಡುವಲ್ಲಿ ಸ್ವಾಮೀಜಿಯವರು ಯಶಸ್ವಿಯಾಗಿದ್ದರು.  ಸಾಯಿಭಕ್ತರಲ್ಲಿ ಅಗ್ರಗಣ್ಯರು ಮತ್ತು ಅನನ್ಯರೂ ಸ್ವಾಮಿ ಕೇಶವಯ್ಯನವರು ಎಂದರೆ ತಪ್ಪಾಗಲಾರದು. ಭಾರತದ ಹಲವಾರು ಸಾಯಿಭಕ್ತಾಗ್ರೇಸರು ಸ್ವಾಮಿ ಕೇಶವಯ್ಯನವರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

ಸ್ವಾಮಿ ಕೇಶವಯ್ಯನವರು ಒಳ್ಳೆಯ ವಾಗ್ಮಿಗಳಾಗಿದ್ದರು. ಇವರು ಹೋದ ಕಡೆಯೆಲ್ಲಾ ಇವರ ಉಪನ್ಯಾಸವನ್ನು ಕೇಳಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದರು. ಸ್ವಾಮಿ ಕೇಶವಯ್ಯನವರು 9ನೇ ಆಗಸ್ಟ್ 1981 ರ ಪವಿತ್ರ ಶ್ರಾವಣ ಶುದ್ಧ ದಶಮಿಯ ದಿನದಂದು ಸೂರ್ಯಾಸ್ತ ಸಮಯ ಸಂಜೆ 6:30ಕ್ಕೆ ಸರಿಯಾಗಿ ಸಮಾಧಿಸ್ಥರಾದರು. ತಾವು ಸಮಾಧಿಯಾಗುವುದಕ್ಕೆ ಸ್ವಲ್ಪ ಸಮಯದ ಹಿಂದೆ ಉಧಿ ನೀಡುವಂತೆ ಕೇಳಿಕೊಂಡರು. ಸ್ವಲ್ಪ ಉಧಿಯನ್ನು ಬಾಯಿಗೆ ಹಾಕಿಕೊಂಡು, ತಮ್ಮ ಹಣೆಗೆ ತಾವೇ ಹಚ್ಚಿಕೊಂಡರು. ಕುರ್ಚಿಯಲ್ಲಿ ಕುಳಿತುಕೊಂಡು "ಅಲ್ಲಾ ಮಾಲಿಕ್" ಎಂದು ಹೇಳುತ್ತಾ ತಮ್ಮ ಕಣ್ಣನ್ನು ಮುಚ್ಚಿಕೊಂಡರು. ಸ್ವಲ್ಪ ಸಮಯದ ನಂತರ ಅವರ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಲಾಯಿತು. ಸ್ವಾಮಿ ಕೇಶವಯ್ಯನವರು ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಸ್ವಾಮಿ ಕೇಶವಯ್ಯನವರು ಇಂದು ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಸಹ ಅವರು ಮಾನವ ಕುಲಕ್ಕೆ ಮಾಡಿದ ಸೇವೆ, ಅವರು ಮಾಡಿದ ಸಾಯಿ ಪ್ರಚಾರ ಅವರನ್ನು ಇನ್ನೂ ನಮ್ಮ ಮನೆ-ಮನಗಳಲ್ಲಿ ಜೀವಂತವಾಗಿರಿಸಿದೆ.

ಕನ್ನಡ ಅನುವಾದ: ಶ್ರೀಕಂಠಶರ್ಮ
ಸಾಯಿ ಮಹಾ ಭಕ್ತ - ಶ್ರೀ.ಶಿವನೇಶನ್ ಸ್ವಾಮೀಜಿ (12ನೇ ಏಪ್ರಿಲ್ 1927 ರಿಂದ 12ನೇ  ಫೆಬ್ರವರಿ 1996) - ಕೃಪೆ - ಸಾಯಿಅಮೃತಧಾರಾ.ಕಾಂ


ಶ್ರೀ.ಶಿವನೇಶನ್ ಸ್ವಾಮೀಜಿಯವರು ಶಿರಡಿ ಯಾತ್ರೆಗೆ ಬರುವ ಭಕ್ತರೆಲ್ಲರಿಗೂ ಚಿರಪರಿಚಿತರು. ಇವರು ಶಿರಡಿಯಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿ ಸಾಯಿಬಾಬಾರವರ ಸೇವೆಯನ್ನು ಮಾಡಿದರು.

ಪರಮ ಪೂಜ್ಯ ಶ್ರೀ. ಶಿವನೇಶನ್ ಸ್ವಾಮೀಜಿಯವರು ಶ್ರೀಮತಿ ಅಲಮೇಲು ಮತ್ತು ಶ್ರೀ ಮುತ್ತಯ್ಯನವರ 3ನೇ ಹಾಗೂ ಕೊನೆಯ ಮಗನಾಗಿ 12ನೇ ಏಪ್ರಿಲ್ 1927 ರಂದು ರಾಮನವಮಿಯ ದಿವಸ ಜನಿಸಿದರು. ಆಗ ತಾನೇ ಹುಟ್ಟಿದ ಮಗುವಿಗೆ "ಎರಡು ಮುಂದಿನ ಹಲ್ಲುಗಳು" ಹಾಗೂ ತಲೆಯ ಹಿಂಭಾಗದಲ್ಲಿ "ಜಟೆ" ಇತ್ತೆಂದು ಹೇಳಲಾಗಿದೆ. ಇವರ ಜಾತಕವನ್ನು ಪರಿಶೀಲಿಸಿದ ಜ್ಯೋತಿಷಿಗಳು ಇವರು ಸಂಸಾರಿಕ ಜೀವನ ನಡೆಸದೆ ಸನ್ಯಾಸಿಗಳಾಗುತ್ತಾರೆ  ಎಂದು ಭವಿಷ್ಯ ನುಡಿದರು ಎಂದು ಹೇಳಲಾಗಿದೆ.

ಅವರ ಬಾಲ್ಯದ ದಿನಗಳಲ್ಲೇ ಶ್ರೀ ಶಿವನೆಶನ್ ಸ್ವಾಮಿಯವರು ಈ ಪ್ರಾಪಂಚಿಕ ಜೀವನದಿಂದ ಹೊರಗೆ ಹೋಗುವ ಎಲ್ಲ ಲಕ್ಷಣಗಳನ್ನು ತೋರಿಸಿದರು. ಅವರು ಸದಾಕಾಲ ಒಂಟಿಯಾಗಿ ಯಾರೊಂದಿಗೂ ಹೆಚ್ಚು ಮಾತನಾಡದೆ ಶಾಂತಿಯಿಂದ ಮತ್ತು ಧ್ಯಾನಸಕ್ತರಾಗಿ ಇರುತ್ತಿದ್ದರು ಮತ್ತು ಯಾವುದಾದರೂ ಏಕಾಂತ ಸ್ಥಳಕ್ಕೆ ಹೋಗಿ ಊಟ-ತಿಂಡಿಗಳನ್ನು ಮರೆತು ಕುಳಿತುಬಿಡುತ್ತಿದ್ದರು. ಮನೆಯವರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುತ್ತಲೇ ಇರಲಿಲ್ಲ. ಏಕೆಂದರೆ ಅವರು ಊಟದ ಸಮಯದಲ್ಲಿ ಮನೆಯಲ್ಲೇ ಇರುತ್ತಿರಲಿಲ್ಲ. ಇವರು ತಮ್ಮ ತಾಯಿಯವರ ತಾಯಿಯ (ಅಜ್ಜಿ) ಮನೆಯಲ್ಲಿ ಬಾಲ್ಯದ ಕೆಲವು ಸಂತೋಷದ ಕ್ಷಣಗಳನ್ನು ಕಳೆದರೆಂದು ಹೇಳಲಾಗಿದೆ. ಅಲ್ಲದೆ, ಇವರ ತಂದೆಯ ಸಹೋದರನ ಮನೆಯಲ್ಲಿ ಕೂಡ ಅನೇಕ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತ ತಮ್ಮ ಬಾಲ್ಯವನ್ನು ಕಳೆದರೆಂದು ಹೇಳಲಾಗುತ್ತದೆ.

ತಮ್ಮ ತಾಯಿಯವರು ಕಾಲವಾದ ನಂತರ ಆಧ್ಯಾತ್ಮಿಕ ಜೀವನವನ್ನು ಹುಡುಕುತ್ತ ಮನೆಯನ್ನು ಬಿಟ್ಟು ಹೊರಟು ಮುಂಬೈ ಸೇರಿದರು. ಮತ್ತೆ ಮನೆಗೆ ಹಿಂತಿರುಗಲೇ ಇಲ್ಲ. ಮುಂಬೈನಲ್ಲಿ ಹೆಚ್ಚು ದಿನಗಳು ಇರಲಾಗಲಿಲ್ಲ. ಮತ್ತೆ ಅಲ್ಲಿ ಇಲ್ಲಿ ಅಲೆದಾಡುತ್ತಾ ಸ್ವಾಮಿ ನಿತ್ಯಾನಂದರ ವಾಸಸ್ಥಾನವಾದ ವಜ್ರೇಶ್ವರಿಗೆ ಬಂದರು. ಅಲ್ಲಿ ಸ್ವಾಮಿ ನಿತ್ಯಾನಂದರನ್ನು ಪೂಜಿಸಲು ಆರಂಭಿಸಿದರು. ಅವರ ದಿವ್ಯ ಸನ್ನಿಧಾನದಲ್ಲಿದ್ದು ಅವರು ಹೇಳಿಕೊಟ್ಟ ಆಧ್ಯಾತ್ಮಿಕ ಶಿಕ್ಷಣವನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡರು.

ನಂತರ ಅಲ್ಲಿಂದ ನಾಸಿಕ್ ಗೆ ಬಂದು ಅಲ್ಲಿಂದ ಕೊನೆಯದಾಗಿ ಶಿರಡಿಗೆ 1953 ರಲ್ಲಿ ಬಂದರು. ಆಗ  ಅವರಿಗೆ ತಮಗೆ ಸಾಯಿಬಾಬಾರವರ ಸಾಕ್ಷಾತ್ಕಾರ ಆಗಿರುವ ಅರಿವಾಯಿತು. ಸಾಯಿಬಾಬಾರವರು ಶಿವನೇಶನ್ ಸ್ವಾಮೀಜಿಯವರನ್ನು ಸಂಪೂರ್ಣವಾಗಿ ಅನುಗ್ರಹಿಸಿದ್ದರು. ನಂತರ ಶಿವನೇಶನ್ ಸ್ವಾಮೀಜಿಯವರ ಮತ್ತು ಸಾಯಿಬಾಬಾರವರ ನಡುವೆ ಹೆಚ್ಚಿನ ಪ್ರೀತಿ ಮತ್ತು ಬಾಂಧವ್ಯ ಬೆಳೆದು ಅವರು ಶಿರಡಿ ಬಿಟ್ಟು ಎಲ್ಲಿಗೂ ಹೋಗಲೇ ಇಲ್ಲ.

ಶಿವನೇಶನ್ ಸ್ವಾಮೀಜಿಯವರು ಶಿರಡಿಯಲ್ಲಿ ಸದಾಕಾಲ ಸೇವೆಯನ್ನು ಮಾಡುತ್ತಾ ಕಳೆಯುತ್ತಿದ್ದರು. ಶಿರಡಿಯಲ್ಲಿನ ಎಲ್ಲಾ ದೇವಾಲಯಗಳನ್ನು ಗುಡಿಸಿ ಶುಭ್ರಗೊಳಿಸುತ್ತಿದ್ದರು. ಆದರೆ ಇವರಿಗೆ ಬಹಳ ಇಷ್ಟವಾದ ಸ್ಥಳ ದ್ವಾರಕಾಮಾಯಿ ಆಗಿತ್ತು. ಪ್ರತಿನಿತ್ಯವೂ ದ್ವಾರಕಾಮಾಯಿಯಲ್ಲಿನ ದೀಪಗಳನ್ನು ಚೆನ್ನಾಗಿ ಒರೆಸಿ ಫಳಫಳ ಹೊಳೆಯುವಂತೆ ನೋಡಿಕೊಳ್ಳುತ್ತಿದ್ದರು. ಇವರನ್ನು ಚಾವಡಿಯನ್ನು ನೋಡಿಕೊಳ್ಳುವಂತೆ ನೇಮಕ ಮಾಡಲಾಯಿತು. ಶಿವನೇಶನ್ ಸ್ವಾಮೀಜಿಯವರು ಚಾವಡಿಯನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರು. ಆದರೆ, ದ್ವಾರಕಾಮಾಯಿಯನ್ನು ನೋಡಿಕೊಳ್ಳುವುದನ್ನು ಬಿಡಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ದ್ವಾರಕಾಮಾಯಿಯನ್ನು ಸಂಪೂರ್ಣವಾಗಿ ಗುಡಿಸಿ ಒರೆಸುತ್ತಿದ್ದರು.

ಶಿವನೇಶನ್ ಸ್ವಾಮೀಜಿಯವರು ಸದಾ ಬಿಳಿಯ ಬಟ್ಟೆಯನ್ನೇ ಧರಿಸುತ್ತಿದ್ದರು. ಯಾರಾದರೂ ಇವರಿಗೆ ಹಣವನ್ನು ನೀಡಿದರೆ ಅದರಿಂದ ಕೂಡಲೇ ಪುಸ್ತಕಗಳನ್ನು ಅಥವಾ ಹಸಿದವರಿಗೆ ನೀಡಲು ಆಹಾರವನ್ನು ಕೊಳ್ಳುತ್ತಿದ್ದರು. ಶಿವನೇಶನ್ ಸ್ವಾಮೀಜಿಯವರು ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದರಲ್ಲಿ ಮಗ್ನರಾಗಿರುತ್ತಿದ್ದರು. ಇವರಿಗೆ ಸರಿ ಸುಮಾರು 10 ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಹೀಗಾಗಿ, ಶಿರಡಿಗೆ ಬರುವ ಭಕ್ತರ ಜೊತೆ ಸತ್ಸಂಗ ನಡೆಸುತ್ತ ಅವರವರ ಮಾತೃ ಭಾಷೆಯಲೇ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು ಮತ್ತು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಇವರಿಗೆ ಪ್ರದಕ್ಷಿಣೆ ಮಾಡುವುದೆಂದರೆ ಬಹಳ ಇಷ್ಟ. ಪ್ರತಿದಿನ ಬೆಳಗಿನ ಜಾವ ಸುಮಾರು 3 ಘಂಟೆಗೆ ಎದ್ದು ಮೊದಲು ಗುರುಸ್ಥಾನ ಪ್ರದಕ್ಷಿಣೆ ಮಾಡಿ ನಂತರ ಲೇಂಡಿಬಾಗ್ ಮತ್ತು ದತ್ತ ಮಂದಿರವನ್ನು ಪ್ರದಕ್ಷಿಣೆ ಮಾಡುತ್ತಿದ್ದರು. ಆಲ್ಲದೇ, ತಮ್ಮ ಬಳಿ ಬರುವ ಎಲ್ಲಾ ಭಕ್ತರಿಗೂ ಅವರ ಅಧ್ಯಾತ್ಮಿಕ ಪ್ರಗತಿ ಮತ್ತು ಒಳ್ಳೆಯ ಆರೋಗ್ಯಕ್ಕಾಗಿ ಪ್ರದಕ್ಷಿಣೆ ಮಾಡುವಂತೆ ಸಲಹೆ ನೀಡುತ್ತಿದ್ದರು. ಚಾವಡಿ ಸಂಜೆ ಆರತಿಯ ನಂತರ ಸುಮಾರು ಒಂದು ಘಂಟೆಗಳ ಕಾಲ ಭಜನೆಯನ್ನು ಮಾಡುತ್ತಿದ್ದರು. ಇವರ ಇಷ್ಟವಾದ ಭಜನೆ "ಸಾಯಿ ಭವಾನಿ". ಈ ಭಜನೆಯು ಪ್ರಪಂಚದಾದ್ಯಂತ ಎಲ್ಲಾ ಸಾಯಿ ಭಕ್ತರೂ ಹಾಡುತ್ತಾರೆ.

ಶಿವನೇಶನ್ ಸ್ವಾಮೀಜಿಯವರು ಪ್ರತಿ ದಿನ ಧುನಿ ಪೂಜೆಯನ್ನು ತಪ್ಪದೆ ಮಾಡುತ್ತಿದ್ದರು. ಇವರ ಬಳಿ ಹೋದ ಪ್ರತಿಯೊಬ್ಬರಿಗೂ ಕೂಡ ಬಾಬಾರವರ ಉಧಿ ಮತ್ತು ತೀರ್ಥವನ್ನು ಕೊಡದೆ ಕಳುಹಿಸುತ್ತಿರಲಿಲ್ಲ. ಇವರ ಬಳಿ ಹೋದ ಯಾರೂ ಬರಿಗೈನಲ್ಲಿ ವಾಪಸಾಗುತ್ತಿರಲಿಲ್ಲ. ಆದರೆ ಶಿರಡಿಯಲ್ಲಿ ಇವರಿಗೆ ಜೀವನ ನಡೆಸುವುದು ಬಹಳ ಕಷ್ಟವಾಗುತ್ತಿತ್ತು. ಅನೇಕ ದಿನಗಳು ಇವರು ತಿನ್ನಲು ಆಹಾರ ಸಿಗದೇ ಮತ್ತು ಮಲಗಲು ಸ್ಥಳ ಸಿಗದೇ ಬಹಳ ಕಷ್ಟಪಟ್ಟರು. ಆದರೆ ಎಂದೂ ಧೃತಿಗೆಡಲಿಲ್ಲ. ಬದಲಿಗೆ ಕಷ್ಟಗಳು ಅವರಿಗೆ ಮತ್ತಷ್ಟು ಹೆಚ್ಚು ಶಕ್ತಿಯನ್ನು ನೀಡಿದವು ಎಂದೇ ಹೇಳಬಹುದು.

ಶಿವನೇಶನ್ ಸ್ವಾಮೀಜಿಯವರು ಸಾಯಿಬಾಬಾರವರ ಕೀರ್ತಿಯನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರ ಬಳಿ ಬರುವ ಭಕ್ತರಿಗೆ ಸಾಯಿ ಮಂದಿರಗಳನ್ನು ಕಟ್ಟುವಂತೆ, ಸಾಯಿಯವರ ನಾಮ ಜಪ, ಸತ್ಸಂಗ ಮತ್ತು ಅವರ ಲೀಲೆಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಣೆ ಮಾಡುತ್ತಿದ್ದರು.


ಈ ರೀತಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಅನವರತವಾಗಿ 50 ವರ್ಷಗಳ ಕಾಲ ಮಾಡುತ್ತಾ  ತಮ್ಮ ಕೊನೆಯ ದಿನಗಳಲ್ಲಿ ಸ್ವಲ್ಪ ಅಸ್ವಸ್ಥರಾಗಿ ಕೋಣೆಗೆ  12ನೇ ಫೆಬ್ರವರಿ 1996 ರಂದು ಮಹಾ ಸಮಾಧಿ ಹೊಂದಿದರು.  ಇವರ ಸಮಾಧಿಯು ಶಿರಡಿಯಿಂದ  2 ಕಿಲೋಮೀಟರ್ ದೂರದಲ್ಲಿ ಪಿಂಪಲ್ ವಾಡಿ ರಸ್ತೆಯಲ್ಲಿದೆ. ಸದ್ಗುರು ಶಿವನೇಶನ್ ಸ್ವಾಮೀಜಿಯವರ ಗುರುಕುಲ, ಅವರ ಸಮಾಧಿ ಮತ್ತು ವಸ್ತು ಸಂಗ್ರಹಾಲಯವನ್ನು ಮೆಹರ್ ಧುನ್ ದತ್ತಿ ಟ್ರಸ್ಟ್ (ನೋಂದಣಿ) ನವರು ಸಾರ್ವಜನಿಕ ದತ್ತಿ ಸಂಸ್ಥೆಯನ್ನಾಗಿ ಮಾಡಿಕೊಂಡು ನೋಡಿಕೊಳ್ಳುತ್ತಿದ್ದಾರೆ.




ಶಿವನೇಶನ್ ಸ್ವಾಮೀಜಿಯವರ ಆಶ್ರಮದ ವಸ್ತು ಸಂಗ್ರಹಾಲಯದಲ್ಲಿ ಅವರ ಕೆಲವು ಹಳೆಯ ಅಪರೂಪದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಬಟ್ಟೆಗಳು, ಪುಸ್ತಕಗಳು, ವಿಗ್ರಹಗಳು ಮತ್ತು ಇನ್ನು ಹಲವಾರು ವಸ್ತುಗಳನ್ನು ನೋಡಬಹುದು.


ಇಂದು ಶಿವನೇಶನ್ ಸ್ವಾಮೀಜಿಯವರು ನಮ್ಮೊಂದಿಗೆ ಇಲ್ಲ. ಆದರೆ, ಅವರ ಪ್ರೀತಿ ಮತ್ತು ಅವರ ಸಂಪ್ರದಾಯಗಳ ಆಚರಣೆಯು ಇನ್ನು ಜೀವಂತವಾಗಿ ನಮ್ಮೊಂದಿಗೆ ಇದೇ. ಕರ್ನಾಟಕದ ಗಾಣಗಾಪುರದಲ್ಲಿ "ದತ್ತಗುರು ಭಂಡಾರ ಟ್ರಸ್ಟ್ (ನೋಂದಣಿ)" (http://dattagurubhandara.org/pujyasri.html) ನವರು ಶಿವನೇಶನ್ ಸ್ವಾಮಿಜಿಯವರ ಹೆಸರಿನಲ್ಲಿ ಟ್ರಸ್ಟ್ ನ್ನು ಸ್ಥಾಪಿಸಿರುವುದಷ್ಟೇ ಆಲ್ಲದೇ, ನಿರಂತರವಾಗಿ ವರ್ಷದ 365 ದಿನಗಳೂ 24 ಘಂಟೆಗಳೂ ಸಾಯಿ ನಾಮ ಜಪ ಮತ್ತು ನಿತ್ಯ ಅನ್ನದಾನ ಕಾರ್ಯಕ್ರಮವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟೇ ಆಲ್ಲದೇ, ಇಂದಿಗೂ ಪೂಜ್ಯ ಶಿವನೇಶನ್ ಸ್ವಾಮೀಜಿಯವರು ತಮ್ಮ ಅನೇಕ ಭಕ್ತರಿಗೆ ಕನಸಿನಲ್ಲಿ ದರ್ಶನವನ್ನು ನೀಡಿ ಸಾಯಿಬಾಬಾರವರ ಸೇವೆಯನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ. 

ಶಿವನೇಶನ್ ಸ್ವಾಮಿಜಿಯವರ ಸಮಾಧಿ ಮಂದಿರವು ಪ್ರತಿದಿನ ಬೆಳಿಗ್ಗೆ 5:30 ರಿಂದ ರಾತ್ರಿ 11 ಘಂಟೆಯವರೆಗೆ  ದರ್ಶನಕ್ಕೆ ತೆರೆದಿರುತ್ತದೆ.

ಆರತಿಯ ಸಮಯ 
ಕಾಕಡಾ ಆರತಿ 
5:30 AM
ಮಧ್ಯಾನ್ಹ ಆರತಿ 
12:00 Noon
ಧೂಪಾರತಿ 
6:30 PM
ಶೇಜಾರತಿ 
10:00 PM

ಗುರುಕುಲದಲ್ಲಿ ಆಚರಿಸುವ ವಿಶೇಷ ಉತ್ಸವದ ದಿನಗಳು 
  1. ಪ್ರತಿ ವರ್ಷದ 12ನೇ ಏಪ್ರಿಲ್ - ಶಿವನೇಶನ್ ಸ್ವಾಮೀಜಿಯವರ ಹುಟ್ಟುಹಬ್ಬ.  
  2. ಪ್ರತಿ ವರ್ಷದ 12ನೇ ಫೆಬ್ರವರಿ - ಶಿವನೇಶನ್ ಸ್ವಾಮೀಜಿಯವರ ಪುಣ್ಯತಿಥಿ.
  3. ದತ್ತ ಜಯಂತಿ. 
  4. ಶ್ರೀರಾಮನವಮಿ. 
  5. ವಿಜಯದಶಮಿ. 
  6. ಗುರುಪೂರ್ಣಿಮಾ - ಪಲ್ಲಕಿ ಉತ್ಸವ.
ಹೆಚ್ಚಿನ ವಿವರಗಳಿಗೆ ಶ್ರೀ.ಶಿವನೇಶನ್ ಸ್ವಾಮೀಜಿಯವರ ಆಶ್ರಮವನ್ನು ಸಾಯಿಭಕ್ತರು ಸಂಪರ್ಕಿಸಬಹುದು. ಅದರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ: 

ಶ್ರೀ.ಸದ್ಗುರು ಶಿವನೇಶನ್ ಸ್ವಾಮೀಜಿ ಗುರುಕುಲಂ, 
ಪಿಂಪಲ್ ವಾಡಿ ರಸ್ತೆ, ಶಿರಡಿ. 
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ದಿನೇಶ್ ಪಾಂಡೆ 
ದೂರವಾಣಿ ಸಂಖ್ಯೆ: +9198920 47031


ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಸಾಯಿ ಮಹಾ ಭಕ್ತ - ಶ್ರೀ ಆಚಾರ್ಯ ಎಕ್ಕಿರಾಲ ಭಾರದ್ವಾಜ (೩೦ ನೇ ಅಕ್ಟೋಬರ್ ೧೯೩೮ ರಿಂದ ೧೨ ನೇ ಏಪ್ರಿಲ್ ೧೯೮೯) - ಕೃಪೆ - ಸಾಯಿಅಮೃತಧಾರಾ.ಕಾಂ

ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ೩೦ ನೇ ಅಕ್ಟೋಬರ್ ೧೯೩೮ ರಂದು ಶ್ರೀ ಎಕ್ಕಿರಾಲ ಅನಂತಾಚಾರ್ಯ ಮತ್ತು ವೆಂಕಟ ಲಕ್ಷ್ಮೀ ಯವರ ಪುತ್ರನಾಗಿ ಆಂಧ್ರಪ್ರದೇಶದ ಬಾಪಟ್ಲ ಎಂಬಲ್ಲಿ ಜನಿಸಿದರು. ಇವರು ತಮ್ಮ ತಾಯಿಯವರನ್ನು ಬಹಳ ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡರು. ಇವರ ತಂದೆಯವರು ಪುರಾತನ ಹಿಂದೂ ಶಾಸ್ತ್ರಗಳಲ್ಲಿ ಹಾಗೂ ವೇದಗಳಲ್ಲಿ ಅಪಾರ ಪಾಂಡಿತ್ಯವನ್ನು  ಪಡೆದಿದ್ದರು.

೧೯೫೯ ರಲ್ಲಿ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ಇಂಗ್ಲೀಷ್ ಸಾಹಿತ್ಯದಲ್ಲಿ ಪೋಸ್ಟ್ ಗ್ರಾಜುಯೇಶನ್ ಮುಗಿಸಿದರು. ನಂತರದಲ್ಲಿ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ೧೯೬೧ ರಲ್ಲಿ ಐ.ಎ.ಎಸ್ ಪರೀಕ್ಷೆಗೆ ಕುಳಿತು ಅದರಲ್ಲಿ ಉತ್ತೀರ್ಣರಾದರು. ಆದರೆ, ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ಅದನ್ನು ತಿರಸ್ಕರಿಸಿದರು. ೯ ನೇ ಫೆಬ್ರವರಿ ೧೯೬೩ ರಲ್ಲಿ ಶಿರಡಿಯ ಸಮಾಧಿ ಮಂದಿರದಲ್ಲಿ ಇವರಿಗೆ ಸಾಯಿಬಾಬಾರವರ ಸಾಕ್ಷತ್ಕಾರವಾಗಿ ಸಂಪೂರ್ಣ ಬದಲಾದ ಮನುಷ್ಯನಾದರು.

ನಂತರ ೧೯೬೮ ರಲ್ಲಿ ಇವರು ತಮ್ಮ ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ೧ ವರ್ಷದ ಕಾಲ ಆಶ್ರಮ ಜೀವನ ನಡೆಸಿದರು. ನಂತರ ಸಾಯಿಬಾಬಾರವರ ಆದೇಶದ ಮೇರೆಗೆ ಆಶ್ರಮವನ್ನು ಬಿಟ್ಟು ಪುನಃ ವಿದ್ಯಾನಗರದಲ್ಲಿ ಪ್ರಾಧ್ಯಾಪಕ ವೃತ್ತಿಗೆ ಸೇರಿದರು. ಆ ಸಮಯದಲ್ಲಿ ಇವರಿಗೆ ಜೀವನದ ಬಗ್ಗೆ ಜಿಗುಪ್ಸೆ ಶುರುವಾಗಿ ಅಧ್ಯಾತ್ಮಿಕದತ್ತ ಒಲವು ಹೆಚ್ಚಾಯಿತು. ಆಗ ಸಾಯಿಬಾಬಾರವರನ್ನು ತಾವಿರುವ ಸ್ಥಳದಲ್ಲಿ ಸತ್ಸಂಗ ನಡೆಯಲು ಅವಕಾಶ ಮಾಡಿಕೊಡುವಂತೆ ಪ್ರಾರ್ಥನೆ ಮಾಡಿದರು. ಈ ರೀತಿ ಪ್ರಾರ್ಥನೆ ಮಾಡಿದ ಕೆಲವೇ ತಿಂಗಳಲ್ಲಿ ಒಬ್ಬ ಕ್ರಿಶ್ಚಿಯನ್ ಹುಡುಗ ಇವರಿರುವ ಸ್ಥಳಕ್ಕೆ ಬಂದು ಕೇವಲ ಮಾನವನಾದ ಸಾಯಿಬಾಬಾರವರನ್ನು ಪೂಜಿಸುವುದರ ಬಗ್ಗೆ ಕೇವಲವಾಗಿ ಮಾತನಾಡಿದನು. ಇದು ಬಹು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಅನೇಕ ದಿನಗಳು ಇದರ ಬಗ್ಗೆ ಚರ್ಚೆ ನಡೆಯಿತು. ಚರ್ಚೆ ನಡೆಯುವಾಗ ಬಹಳ ಜನ ವಿಧ್ಯಾರ್ಥಿಗಳು ಬಂದು ಚರ್ಚೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇವರಲ್ಲಿ ಕೆಲವು ವಿಧ್ಯಾರ್ಥಿಗಳು ವಾರದಲ್ಲಿ ಒಂದು ದಿನ ಈ ರೀತಿಯ ಸತ್ಸಂಗ ನಡೆಸಲು ತೀರ್ಮಾನಿಸಿ ಗುರುವಾರದ ದಿನ ಸತ್ಸಂಗ ಹಾಗೂ ಭಜನೆ ಕಾರ್ಯಕ್ರಮವನ್ನು ಶುರು ಮಾಡಿದರು. ಹೀಗೆ ಭಜನೆ ಮತ್ತು ಸತ್ಸಂಗ ನಡೆಯುವ ಸಂದರ್ಭದಲ್ಲಿ ಅನೇಕ ಸಾಧು ಸಂತರುಗಳು ಬಂದು ಆಶೀರ್ವದಿಸಿದ್ದಾರೆ. ಅವರುಗಳಲ್ಲಿ ಪ್ರಮುಖರು ಗುಂಟೂರ್ ನ ಸಂತ ಶ್ರೀ ರಂಗಣ್ಣ ಬಾಬು ಹಾಗೂ ಹರಿಹರದ ಶ್ರೀ ಸಮರ್ಥ ನಾರಾಯಣ ಮಹಾರಾಜ್.

ಈ ರೀತಿ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ದೇಶದ ಉದ್ದಗಲಕ್ಕೂ ಸಂಚರಿಸಿ ಸತ್ಸಂಗ ಹಾಗೂ ಭಜನೆಯ ಕೇಂದ್ರಗಳನ್ನು ಸ್ಥಾಪಿಸಿ ಸಾಯಿ ಪ್ರಚಾರವನ್ನು ಮಾಡಲು ಪ್ರಾರಂಭಿಸಿದರು. ಎಲ್ಲ ಶಿಷ್ಯರೂ ಸೇರಿ ವಿಚಾರ ವಿನಿಮಯ ಮಾಡಿಕೊಂಡು "ಸಾಯಿ ಬಾಬಾ ಮಿಶನ್" (ಈಗಿನ ಶ್ರೀ ಮಾಸ್ಟರ್ ಯುನಿವೆರ್ಸಲ್ ಟ್ರಸ್ಟ್ ) ಪ್ರಾರಂಭಿಸಿ ಅದರ ಮೂಲಕ ಸಾಯಿ ಪ್ರಚಾರವನ್ನು ಪುಸ್ತಕಗಳ ಮೂಲಕ ಮಾಡಲು ಶುರು ಮಾಡಿದರು. ಅದರ ಮುಖ್ಯಸ್ತರಾಗಿ ಪೂಜ್ಯ ಆಚಾರ್ಯ ಎಕ್ಕಿರಾಲ ಭಾರದ್ವಾಜರವರನ್ನು ನೇಮಿಸಿದರು. ೧೯೮೧ ರಲ್ಲಿ ಎಲ್ಲ ಭಕ್ತರ ಸಹಕಾರದಿಂದ ವಿದ್ಯಾನಗರದಲ್ಲಿ ಒಂದು ಭವ್ಯ ಸಾಯಿಬಾಬಾರವರ ಮಂದಿರವನ್ನು ಪ್ರಾರಂಭಿಸಿದರು.

೧೯೭೩ ರಲ್ಲಿ ಶಿರಡಿಗೆ ತೆರಳಿದಾಗ ಸಾಯಿಬಾಬಾರವರು ಇವರ ಕನಸಿನಲ್ಲಿ ಬಂದು ಮದುವೆಯಾಗಿ ಸಂಸಾರದ ಎಲ್ಲ ಕರ್ಮಗಳನ್ನು ಮಾಡಲು ಪ್ರೇರೇಪಣೆ ನೀಡಿದರು. ಸಾಯಿಯವರ ಆದೇಶದಂತೆ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ೬ನೇ ಮಾರ್ಚ್ ೧೯೭೫ ರಂದು ಶ್ರೀಮತಿ ಅಲಿವೆಲು ಮಂಗ ತಾಯರ್   (ಪ್ರೀತಿಯಿಂದ ಭಕ್ತರು ಇವರನ್ನು ಅಮ್ಮಗಾರು ಎಂದು ಕರೆಯುತ್ತಾರೆ) ನ್ನು ವಿವಾಹವಾದರು.

೧೯೮೧ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಪೂರ್ಣ ಸಮಯವನ್ನು ಅಧ್ಯಾತ್ಮಿಕ ಕಾರ್ಯಗಳಿಗಾಗಿ ಮೀಸಲಿಟ್ಟರು. ಈ ಸಮಯದಲ್ಲಿ ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಸಾಧು ಸಂತರನ್ನು ಮುಖತಃ ಭೇಟಿ ಮಾಡಿ ಅವರ ಜೀವನ ಚರಿತ್ರೆಯನ್ನೆಲ್ಲ ತಿಳಿದುಕೊಂಡರು. ವಿಜ್ಞಾನದ ೭ ಅಂಗಗಳನ್ನು ಹಾಗೂ ಪ್ರಪಂಚದ ೫ ಪ್ರಮುಖ ಧರ್ಮಗಳನ್ನು (ಭೌದ್ದ, ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಹಾಗೂ ತೋವಿಸಮ್) ಅಭ್ಯಾಸ ಮಾಡಿದರು. ೧೯೮೩ ರಲ್ಲಿ "ಸಾಯಿಬಾಬಾ" ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಯಿಬಾಬಾರವರ ಸಮಕಾಲೀನರನ್ನೆಲ್ಲ ಮುಖತಃ ಭೇಟಿ ಮಾಡಿ ಅವರಿಂದ ಸಾಯಿಬಾಬಾರವರ ಬಗ್ಗೆ ಅವರ ಎಲ್ಲ ಅನುಭವಗಳನ್ನು ಟಿಪ್ಪಣಿ ಮಾಡಿಕೊಂಡರು. ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಅನೇಕ ಸಂತರ ಬಗ್ಗೆ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಶಿರಡಿಯ ಸಾಯಿಬಾಬಾ, ಅಕ್ಕಲ್ ಕೋಟೆಯ ಸ್ವಾಮಿ ಸಮರ್ಥ, ನಾಗ್ಪುರ್ ನ ತಾಜುದ್ದೀನ್ ಬಾಬಾ ರವರ ಬಗ್ಗೆ ಬರೆದ ಪುಸ್ತಕಗಳು.

ಈ ವೇಳೆಗೆ ಅವರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳು ಹುಟ್ಟಿದ್ದರು. ಸಂಸಾರ ತಾಪತ್ರಯಗಳ ನಡುವೆಯೂ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ತಮ್ಮ ಆಧ್ಯಾತ್ಮಿಕ ಕಾರ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಮುಂದುವರಿಸಿದರು. ಅನೇಕ ಬಡ ವಿದ್ಯಾರ್ಥಿಗಳಿಗೆ ತಮ್ಮ ಹಣವನ್ನು ಖರ್ಚು ಮಾಡಿ ಓದಿಸಿದರು. ಅನೇಕ ಬಡವರಿಗೆ ಧನ ಸಹಾಯ ಮಾಡಿದರು. ಇವರನ್ನು ಭೇಟಿ ಮಾಡಿದ ಹಲವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿ ಸುಲಭವಾಗಿ ಆಧ್ಯಾತ್ಮಿಕ ಕೇಂದ್ರಗಳನ್ನು ಪ್ರಾರಂಭಿಸಿ ಒಳ್ಳೆಯ ಜೀವನ ನಡೆಸುವುದನ್ನು ಕಲಿಸಿದರು. ಹೆಸರಾಂತ ಕ್ರಿಶ್ಚಿಯನ್ ಪಾದ್ರಿ ಪೌಲ್ ರೆಪ್ಸ್ (ಸೀಟಾಲ್, ಅಮೇರಿಕ) ಇವರ ಮಾರ್ಗದರ್ಶನದಲ್ಲಿ ಸಾಯಿಬಾಬಾರವರ ಬಗ್ಗೆ ಪುಸ್ತಕಗಳನ್ನು ಓದಿ ಅರಿತ ನಂತರ ಹೇಗೆ ಕ್ರೈಸ್ಟ್ ಮತ್ತು ಕ್ರಿಶ್ಚಿಯನ್ ಧರ್ಮ ಅರಿಯಲು ಸಹಾಯವಾಯಿತು ಎಂದು ತಮ್ಮ ಬರಹಗಳಲ್ಲಿ ತಿಳಿಸಿದ್ದಾರೆ.

ಪೂಜ್ಯ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ೧೨ ನೇ ಏಪ್ರಿಲ್ ೧೯೮೯ ರಂದು ಮಹಾಸಮಾಧಿ ಹೊಂದಿದರು. ಆದರೆ ಅವರ ಭಕ್ತರಿಗೆ ಈಗಲೂ ಮಾರ್ಗದರ್ಶನ ಮಾಡುತ್ತಿದ್ದಾರೆ.

ಆಚಾರ್ಯ ಎಕ್ಕಿರಾಲ ಭಾರದ್ವಾಜರವರ ಬಗ್ಗೆ ಹಿಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವೆಬ್ ಸೈಟ್ ಜೋಡಣೆಯನ್ನು ಕ್ಲಿಕ್ಕ್ ಮಾಡಿ:

ಸಾಯಿ ಮಹಾ ಭಕ್ತ - ಅವತಾರ್ ಮೆಹರ್ ಬಾಬಾ (೨೫ ನೇ ಫೆಬ್ರವರಿ ೧೮೯೪ ರಿಂದ ೩೧ ನೇ ಜನವರಿ ೧೯೬೯) - ಕೃಪೆ - ಸಾಯಿಅಮೃತಧಾರಾ.ಕಾಂ


ಮರ್ವಿನ್ ಶೆರಿಯರ್ ಇರಾನಿ ಆಲಿಯಾಸ್ ಮೆಹರ್ ಬಾಬಾ ಅವರು ೨೫ ನೇ ಫೆಬ್ರವರಿ ೧೮೯೪ ರಂದು ಒಂದು ಜೊರಾಸ್ಟ್ರಿಯನ್ ವಂಶದಲ್ಲಿ   ಪುಣೆಯಲ್ಲಿ ಜನಿಸಿದರು. ಇವರ ತಂದೆಯವರು ಆಧ್ಯಾತ್ಮಿಕದತ್ತ ಮೊದಲಿನಿಂದಲೂ ಒಲವು ತೋರುತ್ತಿದ್ದರು. ಇವರ ತಂದೆಯ ಆಧ್ಯಾತ್ಮಿಕ ಗುರುಗಳು ಇವರಿಗೆ ತಮ್ಮ ಮಗನ ಮುಖಾಂತರ ಭಗವಂತನ ಸಾಕ್ಷಾತ್ಕಾರವಾಗುವುದೆಂದು ಭವಿಷ್ಯ ನುಡಿದರು. ತಂದೆಯವರಿಗೆ ೨ ನೇ ಮಗನಾದ ಮೆಹರ್ ಬಾಬಾರವರು ನೋಡಲು ಬಹಳ ಸುಂದರವಾಗಿದ್ದರು ಮತ್ತು ಎಲ್ಲರನ್ನು ಆಕರ್ಷಿಸುತ್ತಿದ್ದರು. ಇವರು ತಮ್ಮ ಪ್ರಾಥಮಿಕ ವ್ಯಾಸಂಗವನ್ನು ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿಯೂ ಮತ್ತು ಕಾಲೇಜ್ ವ್ಯಾಸಂಗವನ್ನು ಡೆಕ್ಕನ್ ಕಾಲೇಜ್ ನಲ್ಲಿಯೂ ಪೂರ್ಣಗೊಳಿಸಿದರು.

ಮೆಹರ್ ಬಾಬಾ ಇವರ ಶಿಷ್ಯರು ಇವರಿಗೆ ಕೊಟ್ಟ ಹೆಸರಾಗಿದೆ. ೫ ಗುರುಗಳ ಬಳಿ ಸತತ ಶಿಷ್ಯ ವೃತ್ತಿಯನ್ನು ಪೂರ್ಣಗೊಳಿಸಿದ ಬಳಿಕ ಮೆಹರ್ ಬಾಬಾರವರು ೧೯೨೨ ರಲ್ಲಿ ತಮ್ಮ ಆಧ್ಯಾತ್ಮಿಕ ವೃತ್ತಿಯನ್ನು ಪ್ರಾರಂಭಿಸಿದರು. ಹಜ್ರತ್ ಬಾಬಾಜಾನ್ ಎಂಬ ಪುಣೆಯ ವಯೋವೃದ್ದ ಮಹಿಳಾ ಗುರುಗಳು ಇವರಿಗೆ ಆಧ್ಯಾತ್ಮಿಕ ಉಪದೇಶವನ್ನು ಜನವರಿ ೧೯೧೪ ರಲ್ಲಿ ಇವರ ಹಣೆಗೆ ಚುಂಬಿಸುವ ಮೂಲಕ ನೀಡಿದರು. ಅವರು ತಮ್ಮ ಗುರುಗಳಿಂದ ಆಧ್ಯಾತ್ಮಿಕ ಶಕ್ತಿಪಾತವಾದ ಕೂಡಲೇ ತಮ್ಮ ಸಹಜ ಸ್ಥಿತಿಯಿಂದ ಸಮಾಧಿ ಸ್ಥಿತಿಗೆ ಹೊರಟು ಹೋದರು. ಅಲ್ಲಿಂದ ಮುಂದೆ ೯ ತಿಂಗಳ ಕಾಲ ಹೆಚ್ಚಿಗೆ ಆಹಾರ ಸೇವಿಸುವುದಾಗಲಿ ಅಥವಾ ನಿದ್ದೆ ಮಾಡುವುದಾಗಲಿ ಅವರಿಂದ ಸಾಧ್ಯವಾಗಲಿಲ್ಲ.

ಇದರಿಂದ ಆಶ್ಚರ್ಯಗೊಂಡ ಮೆಹರ್ ಬಾಬಾರವರು ಹುಚ್ಚು ಹಿಡಿದವರಂತಾಗಿ ಮುಂದಿನ ವರ್ಷವೇ  ತಮ್ಮ ೫ ಗುರುಗಳಲ್ಲಿ ಮಹಾ ಗುರುಗಳಾದ ಶಿರಡಿ ಸಾಯಿಬಾಬಾರವರ ದರ್ಶನ ಪಡೆಯಲು ಶಿರಡಿಗೆ ತೆರಳಿದರು. ಸಾಯಿಬಾಬಾರವರು ಮೆಹರ್ ಬಾಬಾರವರನ್ನು ನೋಡಿದ ಕೂಡಲೇ ಇವರು ಪ್ರಪಂಚದ ರಕ್ಷಕರೆಂದು ಗುರುತಿಸಿ ಇವರನ್ನು ಉಪಾಸಿನಿ ಮಹಾರಾಜ್ ರವರ ಬಳಿ ಕಳುಹಿಸಿದರು. ಮೆಹರ್ ಬಾಬಾರವರು ಉಪಾಸಿನಿ ಬಾಬಾರವರ ಬಳಿ ಬರುತ್ತಿದ್ದಂತೆ ಇವರ ಮೇಲೆ ಕಲ್ಲೆಸೆದರು. ಆ ಕಲ್ಲು ಇವರಿಗೆ ಸರಿಯಾಗಿ ಬಂದು ಹಜ್ರತ್ ಬಾಬಾಜಾನ್ ಹಣೆಯಲ್ಲಿ ಚುಂಬಿಸಿದ ಜಾಗಕ್ಕೆ ಸರಿಯಾಗಿ ಬಡಿಯಿತು. ಹೀಗೆ ಸಮಾಧಿ ಸ್ಥಿತಿಯನ್ನು ಬಿಡದೆ ಸಹಜ ಸ್ಥಿತಿಗೆ ಮರಳುವ ಕಾರ್ಯ ೫ ವರ್ಷಗಳ ಕಾಲ ನಡೆಯಿತು.

೧೯೨೦ ರಲ್ಲಿ ತಮ್ಮ ಅತಿ ಸಮೀಪದ ಶಿಷ್ಯರನ್ನು ಒಂದುಗೂಡಿಸಿ ಅವರಿಗೆ ಆಧ್ಯಾತ್ಮಿಕ ಭೋಧನೆಯನ್ನು ಮಾಡಲು ಶುರು ಮಾಡಿದರು. ಅಹಮದ್ ನಗರದಲ್ಲಿ ಒಂದು ಆಧ್ಯಾತ್ಮಿಕ ಕೇಂದ್ರವನ್ನು ಪ್ರಾರಂಭಿಸಿ ಅದರ ಮುಖಾಂತರ ಶಾಲೆಗಳನ್ನು, ಆಸ್ಪತ್ರೆಗಳನ್ನು ಹಾಗೂ ಇನ್ನಿತರ ಸಾರ್ವಜನಿಕರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಪ್ರಾರಂಭಿಸಿದರು. ಇದಾದ ಹತ್ತು ವರ್ಷಗಳ ಬಳಿಕ ಮೆಹರ್ ಬಾಬಾರವರು ಮೌನವ್ರತ  ಕೈಗೊಂಡರು ಹಾಗೂ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಹೀಗೆ ಸತತ ೪೪ ವರ್ಷಗಳ ಕಾಲ ತಮ್ಮ ಶಿಷ್ಯರ ಬಳಿ ಕೇವಲ ಸಂಕೇತಗಳ ಮುಖಾಂತರ ಹಾಗೂ ಕಪ್ಪು ಹಲಗೆಯಲ್ಲಿ ಬರೆದು ತೋರಿಸುವ ಮುಖಾಂತರ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಮಯದಲ್ಲಿ ಇವರು ೨ ಪುಸ್ತಕಗಳನ್ನು ಕೂಡ ಬರೆದರು.

೧೯೩೧ ರಲ್ಲಿ ಪ್ರಥಮ ಬಾರಿಗೆ ಇವರು ವಿದೇಶ ಪ್ರಯಾಣ ಕೈಗೊಂಡರು. ಹಡಗಿನಲ್ಲಿ ಲಂಡನ್ ಗೆ ರೌಂಡ್ ಟೇಬಲ್ ಕನ್ಫಾರೆನ್ಸ್  ಗೆ ತೆರಳುತ್ತಿದ್ದ  ಮಹಾತ್ಮ ಗಾಂಧಿಯವರೊಂದಿಗೆ  ಪ್ರಯಾಣ ಬೆಳೆಸಿದರು.  ಈ ಸಮಯದಲ್ಲಿ ಮೆಹರ್ ಬಾಬಾರವರು ಗಾಂಧೀಜಿಯವರಿಗೆ ಆಧ್ಯಾತ್ಮಿಕ ಗುರುಗಳಾಗಿ ವರ್ತಿಸಿದರು. ಇಂಗ್ಲೆಂಡ್ ಮತ್ತು ಅಮೇರಿಕ ದೇಶದಲ್ಲಿ ತಮ್ಮ ಶಿಷ್ಯ ಪರಂಪರೆಯನ್ನು ಬೆಳೆಸಿದರು. ಮುಂದೆ ಕೆಲವು ಶಿಷ್ಯರು ಭಾರತಕ್ಕೆ ಬಂದು ಇವರ ಜೊತೆಗೂಡಿ ಕೆಲಸ ಮಾಡಿದರು. ೨ ನೇ ಮಹಾಯುದ್ದಕ್ಕೆ ಮುಂಚೆ ೬ ಬಾರಿ ವಿದೇಶ ಪ್ರಯಾಣ ಮಾಡಿದರು.

೧೯೪೦ ರಲ್ಲಿ ಮೆಹರ್ ಬಾಬಾರವರು ಭಾರತದ ಉದ್ದಗಲಕ್ಕೂ ಸಂಚರಿಸಿ ಬಡವರ, ಕುಷ್ಟ ರೋಗಿಗಳ, ಬುದ್ದಿಮಾಂದ್ಯರ ಮತ್ತು ವಿಕೃತ ಆಧ್ಯಾತ್ಮಿಕ ಮನಸ್ಸುಳ್ಳ ವಿದೇಶಿಯರ ಸೇವೆಯನ್ನು ಯಾವುದೇ ಆಡಂಭರವಿಲ್ಲದೆ, ಸದ್ದಿಲ್ಲದೇ ಮಾಡಿದರು.

೧೯೫೦ ರಲ್ಲಿ ಮೆಹರ್ ಬಾಬಾರವರು ವಿದೇಶಗಳಲ್ಲಿ ತಮ್ಮ ೨ ಕೇಂದ್ರಗಳನ್ನು ತೆರೆದರು. ಸೌತ್ ಕರೋಲಿನ, ಅಮೇರಿಕ ಹಾಗೂ ಬ್ರಿಸ್ಬೆನ್ , ಆಸ್ಟ್ರೇಲಿಯಾ ಗಳಲ್ಲಿ ತಮ್ಮ ಆಧ್ಯಾತ್ಮಿಕ ಕೇಂದ್ರಗಳನ್ನು ಆರಂಭಿಸಿದರು. ಆ ಸಮಯದಲ್ಲಿ ಇವರು ಅಪಘಾತಕ್ಕೆ ತುತ್ತಾಗಿ ಅವರ ಮುಖಕ್ಕೆ ಬಹಳ ಗಾಯವಾಯಿತು ಮತ್ತು ದೇಹದ ಮುಖ್ಯ ಮೊಳೆಗಳು ಮುರಿದವು. ಸ್ವಲ್ಪ ವರ್ಷಗಳ ನಂತರ ಭಾರತದಲ್ಲಿ ಇದೇ ರೀತಿಯ ಅಪಘಾತಕ್ಕೆ ತುತ್ತಾದರು.

ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ವೆಬ್ ಸೈಟ್ ಜೋಡಣೆಯನ್ನು ಕ್ಲಿಕ್ಕ್ ಮಾಡಿ:

http://www.avatarmeherbaba.org/

Wednesday, January 20, 2010

ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮಿ (ಟೆಂಬೆ ಸ್ವಾಮಿ) - ಕೃಪೆ - ಸಾಯಿಅಮೃತಧಾರಾ.ಕಾಂ


ಶ್ರೀ ವಾಸುದೇವಾನಂದ ಸರಸ್ವತಿಯವರು ದಕ್ಷಿಣ ಮಹಾರಾಷ್ಟ್ರದ ಸಾವಂತವಾಡಿ ಹತ್ತಿರದ ಮನಗಾವ್ ನಲ್ಲಿ ಅವಿಭಕ್ತ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಇವರ ಮನೆಯವರು ದತ್ತಾತ್ರೇಯನ ಔಪಾಸಕರಾಗಿದ್ದರು. ಇವರ ತಾತಾನವರು ಗುರುಚರಿತ್ರೆಯನ್ನು ಸದಾಕಾಲವೂ ಪಾರಾಯಣ ಮಾಡುತ್ತಿದ್ದರು. ಅಲ್ಲದೆ, ಗುರುಚರಿತ್ರೆಯ ಹಸ್ತಪ್ರತಿಗಳನ್ನು ಮಾಡಿ ಜೀವನೋಪಾಯಕ್ಕೊಸ್ಕರ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ಮಾಡುತ್ತಿದ್ದರು. ಇವರ ತಂದೆಯವರಾದ ಶ್ರೀ ಗಣೇಶ್ ಬತಾಜಿ ಟೆಂಬೆಯವರು ಕೂಡ ದತ್ತಾತ್ರೇಯನ ಔಪಾಸಕರಾಗಿದ್ದು ಅನೇಕ ವರ್ಷಗಳ ಕಾಲ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ದತ್ತ ಕ್ಷೇತ್ರದಲ್ಲಿ ವಾಸ ಮಾಡಿರುತ್ತಾರೆ. ಇವರ ತಾಯಿಯವರಾದ ಶ್ರೀಮತಿ ರಮಾಬಾಯಿ ಕೂಡ ಅವರ ಕಾಲವನ್ನು ದತ್ತಾತ್ರೇಯನ ಜಪ, ಪ್ರದಕ್ಷಿಣೆ, ಪವಿತ್ರ ಗ್ರಂಥಗಳ ಪಾರಾಯಣ, ಅನ್ನ ಸಂತರ್ಪಣೆ ಮೂಲಕ ಬಹಳ ಕಾಲ ಮಾಡಿದರೆಂದು ತಿಳಿದುಬಂದಿದೆ. ಈ ರೀತಿ ಅನೇಕ ವರ್ಷಗಳು ಅವಿರತವಾಗಿ ಸೇವೆ ಮಾಡಿದ ಮೇಲೆ ಒಂದು ದಿನ ದತ್ತಾತ್ರೆಯರು ಶ್ರೀ ಗಣೇಶ್ ಬತಾಜಿ ಟೆಂಬೆಯವರ ಕನಸಿನಲ್ಲಿ ಬಂದು ಮನಗವ್ ಗೆ ವಾಪಸಾಗುವಂತೆ ತಿಳಿಸಿದರು ಮತ್ತು ಗೃಹಸ್ಥ  ಜೀವನ ನಡೆಸಲು ನಿರ್ದೇಶಿಸಿ ಸ್ವಲ್ಪ ಕಾಲದಲ್ಲಿಯೇ ಇವರ ಮಗನಾಗಿ ಅವತರಿಸುವೆನೆಂದು ಅಭಯ ನೀಡಿದರೆಂದು ಹೇಳಲಾಗಿದೆ. ಗಾಣಗಾಪುರದಿಂದ ವಾಪಸಾದ ಮೇಲೆ ಶ್ರಾವಣ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿವಸ ೧೮೫೪ ರಲ್ಲಿ ಶ್ರೀ ಗಣೇಶ್ ಬತಾಜಿ ಟೆಂಬೆಯವರ ಹಿರಿಯ ಮಗನಾಗಿ ವಾಸುದೇವಾನಂದ ಸರಸ್ವತಿಯವರು ಜನಿಸಿದರು. ಇವರ ವಂಶದಲ್ಲಿ ಆಧ್ಯಾತ್ಮಿಕ ಸಂಪತ್ತು ತುಂಬಿ ತುಳುಕುತ್ತಿತ್ತು. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟು ಸರಿಯಾಗಿರಲಿಲ್ಲ. ಅವರ ಮನೆಗೆ ಪುರೋಹಿತ್ಯದಿಂದ ಬರುತ್ತಿದ್ದ ಆದಾಯ ಜೀವನ ನಡೆಸಲು ಸಾಲುತ್ತಿರಲಿಲ್ಲ. ಅದ್ದರಿಂದ ವಾಸುದೇವಾನಂದ ಸರಸ್ವತಿಯವರ ತಾತಾನವರು ವ್ಯವಸಾಯವನ್ನು ಕೂಡ ಮಾಡುತ್ತಿದ್ದರು.

ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕ್ ಮಾಡಿ:

ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆ -ಶಿವಮ್ಮ ತಾಯಿ  - ಕೃಪೆ - ಸಾಯಿಅಮೃತಧಾರಾ.ಕಾಂ

ಶಿವಮ್ಮ ತಾಯಿಯವರ ಭಾವಚಿತ್ರ

ತಮಿಳುನಾಡಿನ ಕೊಯಮತ್ತೂರಿನ ಬಳಿಯ ಪಾಪನಾಯಕನ ಪಾಳ್ಯ ಎಂಬ ಗ್ರಾಮದಲ್ಲಿ ತಂಗವೇಲ್ ಗೌಂಡರ್ ಎಂಬ ರಾಜಯೋಗಿಗಳಿದ್ದರು. ಅವರ ತಮ್ಮ ವೆಟ್ರಿವೇಲ್ ರವರು. ವೆಟ್ರಿವೇಲ್ ರವರ ಪತ್ನಿಯೇ ಪುಷ್ಪಾವತಮ್ಮನವರು. ಇವರ ಪುತ್ರಿಯೇ ಶಿವಮ್ಮ ತಾಯಿಯವರು. ಇವರು ವೆಲ್ಲಾಳ್ ಗೌಂಡರ್ ಜನಾಂಗಕ್ಕೆ ಸೇರಿದವರು. ವೆಟ್ರಿವೇಲ್ ರವರು ವ್ಯವಸಾಯದಿಂದ ಜೀವನ ನಡೆಸುತ್ತಿದರು. ಇವರಿಗೆ 4 ಎಕರೆ ಜಮೀನಿತ್ತು. ಅದರಲ್ಲಿ ತೋಟ ಮಾಡಿಕೊಂಡು ಜೀವನ ಮಾಡುತ್ತಿದ್ದರು. ತಮಗೆ ಇದ್ದ ಆ ಸ್ವಲ್ಪ ಜಮೀನಿನಲ್ಲೆ ಬೆಳೆ ತೆಗೆದು ತೃಪ್ತಿಯಿಂದ ಜೀವನ ನಡೆಸುತ್ತಿದ್ದರು. ಈ ಕುಟುಂಬದಲ್ಲಿ 29-05-1889 ರಂದು ಮನೆಯ ಹಿರಿಯ ಮಗಳಾಗಿ ಶಿವಮ್ಮ ತಾಯಿಯವರು ಜನಿಸಿದರು.  ಇವರಿಗೆ ತಂದೆ ತಾಯಿಗಳು ರಾಜಮ್ಮ ಎಂದು ನಾಮಕರಣ ಮಾಡಿದರು. ಆ ದಂಪತಿಗಳ ಮುದ್ದಿನ ಮಗಳಾಗಿ ಶಿವಮ್ಮ ತಾಯಿಯವರು ಬೆಳೆಯುತ್ತಿದ್ದರು. ಕಾಲಾನಂತರದಲ್ಲಿ ಆ ಸಂಸಾರಕ್ಕೆ ಇನ್ನು 3 ಜನ ಮಕ್ಕಳು ಸೇರ್ಪಡೆಯಾದರು. ಅವರಲ್ಲಿ ಶಿವಮ್ಮ ತಾಯಿಯವರಿಗೆ ಒಬ್ಬಳು ತಂಗಿ ಮತ್ತು ಇನ್ನಿಬ್ಬರು ತಮ್ಮಂದಿರು.

ಅಂದಿನ ಕಾಲದಲ್ಲಿ ಮದರಾಸು ರಾಜ್ಯದಲ್ಲಿ ಆಂಗ್ಲರ ಆಡಳಿತವಿತ್ತು. ವಿದ್ಯೆ ಕಲಿಯಲು ಸಾಕಷ್ಟು ಅನುಕೂಲ ಇರಲಿಲ್ಲ. ಇದರಿಂದ ಶಿವಮ್ಮ ತಾಯಿಯವರು ಸಹ ಪ್ರಾಪಂಚಿಕ ವಿದ್ಯೆ ಕಲಿಯಲು ಸಾಧ್ಯವಾಗಲಿಲ್ಲ. ಆದರೆ ಆ ಗ್ರಾಮದಲ್ಲಿದ್ದ ಕೂಲಿ ಮಠವೊಂದರಲ್ಲಿ ಒಬ್ಬ ನಾಯ್ಡು ಜನಾಂಗದವರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅದೇ ಸ್ಥಳದಲ್ಲಿ ಶಿವಮ್ಮ ತಾಯಿಯವರು ಕೂಡ ಅಕ್ಷರಾಭ್ಯಾಸ ಮಾಡಿ 3ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ತಮಿಳಿನಲ್ಲಿ ಸ್ವಲ್ಪ ಮಟ್ಟಿಗೆ ಓದಲು ಮತ್ತು ಬರೆಯಲು ಕಲಿತರು.

ಮನೆಯ ಹಿರಿಯ ಮಗಳಾಗಿ ತಂದೆ ತಾಯಿಗಳಿಗೆ ತೋಟದ ಕೆಲಸದಲ್ಲಿ ನೆರವಾಗುತ್ತಿದ್ದರು. ತಂಗಿ ತಮ್ಮಂದಿರನ್ನು ನೋಡಿಕೊಳ್ಳುವ ಕೆಲಸವನ್ನು ಕೂಡ ಮಾಡುತ್ತಿದ್ದರು. ತಾಯಿಯವರು ತೋಟದ ಕೆಲಸಕ್ಕೆ ಹೋದಾಗ ಅಡಿಗೆ ಕೆಲಸ, ಬಡಿಸುವ ಕೆಲಸ ಮತ್ತು ಗ್ರಾಮದ ಹೆಂಗಸರೊಡನೆ ಒಡನಾಟ ಮಾಡುತ್ತಾ ವ್ಯವಹಾರಿಕ ಜ್ಞಾನವು ಚೆನ್ನಾಗಿ ಲಭ್ಯವಾಯಿತು. ತಾಯಿತಂದೆಯವರು ಮೃದುಸ್ವಭಾವದವರಾಗಿದ್ದರಿಂದ ಶಿವಮ್ಮ ತಾಯಿಯವರಿಗೂ ಸಹಜವಾಗಿ ಮೃದು ಸ್ವಭಾವ ರಕ್ತಗತವಾಗಿ ಬಂದಿತ್ತು.

ಶಿವಮ್ಮ ತಾಯಿಯವರು ವಯಸ್ಸಿಗೆ ಬಂದಾಗ ಇವರ ಮಾತಾ ಪಿತೃಗಳು ಇವರಿಗೆ ವಿವಾಹ ಮಾಡಲು ಯೋಚಿಸಿದರು. ಆಗ ಅವರ ಕುಟುಂಬದಲ್ಲಿ 9ನೇ ವಯಸ್ಸಿಗೆಲ್ಲ ವಿವಾಹ ಮಾಡುತ್ತಿದ್ದರು. ಇವರದು ದೊಡ್ಡ ಕುಟುಂಬವಾದರೂ ಎಲ್ಲರು ಬೇರೆ ಬೇರೆ ವಾಸ ಮಾಡುತ್ತಿದ್ದರು. ಇವರ ಚಿಕ್ಕಪ್ಪ, ದೊಡ್ಡಪ್ಪನವರ ಕುಟುಂಬವನ್ನೆಲ್ಲಾ ಸೇರಿಸಿದರೆ ಒಟ್ಟು ಐವತ್ತು ಮಂದಿ ಆಗುತ್ತಿದ್ದರು. ಅದರಲ್ಲಿ ಹದಿನೈದು ಮಂದಿ ಹೆಣ್ಣು ಮಕ್ಕಳೇ ಇದ್ದರು. ಶಿವಮ್ಮ ತಾಯಿಯವರಿಗೆ 12 ವರ್ಷವಾದರೂ ವಿವಾಹ ಮಾಡಿರಲಿಲ್ಲವಾದ್ದರಿಂದ ಕುಟುಂಬ ವರ್ಗದವರೆಲ್ಲ ಇವರ ಮಾತಾ ಪಿತೃಗಳನ್ನು ಆಕ್ಷೇಪಿಸುತ್ತಿದ್ದರು. ಆದ್ದರಿಂದ ಇವರ ತಂದೆ ತಾಯಿಗಳು ಶಿವಮ್ಮ ತಾಯಿಯವರಿಗೆ ಅತಿ ಶೀಘ್ರದಲ್ಲಿ ವಿವಾಹ ಮಾಡಲು ತೀರ್ವ ಪ್ರಯತ್ನ ಮಾಡುತ್ತಿದ್ದರು. ಪುಷ್ಪಾವತಮ್ಮನವರಿಗೆ ತಮ್ಮ ತಮ್ಮನಿಗೆ ಕೊಟ್ಟು ಶಿವಮ್ಮ ತಾಯಿಯವರನ್ನುವಿವಾಹ ಮಾಡಬೇಕೆಂಬ ಆಸೆಯಿತ್ತು. ವೆಟ್ರಿವೇಲ್ ರವರಿಗೆ ತಮ್ಮ ಅಕ್ಕನ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ಇವರಿಬ್ಬರ ಇಚ್ಚೆಗೆ ವ್ಯತಿರಿಕ್ತವಾಗಿ ಪಕ್ಕದೂರಿನ ಶ್ರೀ.ಸುಬ್ಬಯ್ಯ ಎಂಬುವರೊದನೆ ಶಿವಮ್ಮ ತಾಯಿಯವರ ವಿವಾಹವು ಇವರ 13ನೇ ವಯಸ್ಸಿನಲ್ಲಿ ನೆರವೇರಿತು.

ಸುಬ್ಬಯ್ಯನವರು ಕೊಯಮತ್ತೂರಿನಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರದು ಸ್ವಲ್ಪ ಕಠಿಣ ಮತ್ತು ಶೀಘ್ರ ಮುಂಗೋಪಿ ಸ್ವಭಾವ. ಇವರು ಯಾರೊಂದಿಗೂ ಕೂಡ ಬೆರೆಯುತ್ತಿರಲಿಲ್ಲ. ತಾನು ಹೇಳಿದ್ದೇ ನಡೆಯಬೇಕೆಂಬ ಸ್ವಭಾವ. ಇವರು ತಮ್ಮ ಅತ್ತೆ ಮತ್ತು ಮಾವನವರೊಂದಿಗೆ ಒಟ್ಟಿಗೆ ಸಂಸಾರ ಮಾಡುತ್ತಿದ್ದರು. ಸಂಸಾರ ಸುಗಮವಾಗಿ ಸಾಗುತ್ತಿದ್ದರೂ ಕೂಡ ಶಿವಮ್ಮ ತಾಯಿಯವರಿಗೆ ಮನಸ್ಸಿಗೆ ಸಮಾಧಾನವಿರಲಿಲ್ಲ. ಸುಬ್ಬಯ್ಯನವರ ಹಠದ ಸ್ವಭಾವ ಶಿವಮ್ಮ ತಾಯಿಯವರಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಿವಾಹವಾದ 3 ತಿಂಗಳ ನಂತರ ಸುಬ್ಬಯ್ಯ ಮತ್ತು ಶಿವಮ್ಮ ತಾಯಿಯವರು ಬೇರೆ ಮನೆ ಮಾಡಿ ಸಂಸಾರ ಪ್ರಾರಂಭಿಸಿದರು.

ಹೀಗಿರುವಾಗ ಈ ದಂಪತಿಗಳಿಗೆ ಒಂದು ಗಂಡು ಮಗುವಿನ ಜನನವಾಯಿತು. ಆ ಮಗುವಿಗೆ ಮಣಿರಾಜ್ ಎಂದು ನಾಮಕರಣ ಮಾಡಿದರು. ಮಗುವಿನ ಆರೈಕೆಯಲ್ಲಿ ಶಿವಮ್ಮ ತಾಯಿಯವರು ತಮ್ಮ ಮಾನಸಿಕ ಅಶಾಂತಿಯನ್ನು ಮರೆತರು. ಸಂಸಾರ ಸಾಗಿಸುವುದರಲ್ಲಿ ಮಗ್ನರಾದರು.

ಇವರ ದೊಡ್ಡಪ್ಪನವರಾದ ತಂಗವೇಲ್ ಗೌಂಡರ್ ರವರು ಇವರ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಅವರ ಮನೆಯಲ್ಲಿ ಸಾಧುಸಂತರ ಸತ್ಕಾರ ಬಹಳವಾಗಿ ನಡೆಯುತ್ತಿತ್ತು. ಅದರ ಪ್ರಭಾವ ಶಿವಮ್ಮ ತಾಯಿಯವರ ಮೇಲೆ ಆಯಿತು. ಹೀಗಾಗಿ ಶಿವಮ್ಮ ತಾಯಿಯವರು ಬಾಲ್ಯದಿಂದಲೇ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು.

ಸಾಯಿಬಾಬಾರವರು ಶಿವಮ್ಮ ತಾಯಿಯವರಿಗೆ ಸ್ವಪ್ನದಲ್ಲಿ ಗಾಯತ್ರಿ ಮಂತ್ರವನ್ನು ಉಪದೇಶಿಸಿದರಲ್ಲದೆ ಒಂದು ಸಣ್ಣ ಹಾಳೆಯಲ್ಲಿ ತಮಿಳಿನಲ್ಲಿ ಗಾಯತ್ರಿ ಮಂತ್ರವನ್ನು ಬರೆದು ಕೊಟ್ಟರು.  ಸಾಯಿಬಾಬಾರವರೇ ಶಿವಮ್ಮ ತಾಯಿಯವರಿದ್ದ ಸ್ಥಳಕ್ಕೆ ಬಂದು ಮಂತ್ರ ಉಪದೇಶ ನೀಡಿದರೆಂದ ಮೇಲೆ ಶಿವಮ್ಮ ತಾಯಿಯವರ ಪೂರ್ವಜನ್ಮದ ಸಂಸ್ಕಾರ ಎಂತದ್ದಿರಬಹುದೆಂದು ನಾವುಗಳೆಲ್ಲ ಉಹಿಸಿಕೊಳ್ಳಬಹುದು.

ಈ ಉಪದೇಶವಾದ ನಂತರ ಶಿವಮ್ಮ ತಾಯಿಯವರು ಶ್ರೀ ಸಾಯಿಬಾಬಾರವರನ್ನು ತಾವು ದರ್ಶಿಸಿರುವುದನ್ನಾಗಲಿ ಅಥವಾ ತಮಗೆ ಉಪದೇಶವಾದ ಮಂತ್ರವನ್ನಾಗಲಿ ಜ್ಞಾಪಕಮಾಡಿಕೊಳ್ಳಲಿಲ್ಲ. ಸಂಪೂರ್ಣವಾಗಿ ಮರೆತುಬಿಟ್ಟರು. ಸಂಸಾರ ಸಾಗರದಲ್ಲಿ ಮುಳುಗಿಹೋದರು. ಮಗ ಪ್ರಾಪ್ತ ವಯಸ್ಕನಾದ ಮೇಲೆ ಅವನಿಗೆ ಮದುವೆ ಮಾಡಿದರು. ಅವನು ಕೊಯಮತ್ತೂರಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದನು.

ಸುಬ್ಬಯ್ಯನವರಿಗೆ ಸ್ವಲ್ಪ ದಿನಗಳ ನಂತರ ಬೆಂಗಳೂರಿನ ಟಿ.ಆರ್.ಮಿಲ್ ನಲ್ಲಿ ಕೆಲಸ ಸಿಕ್ಕಿ ಅವರು ಬೆಂಗಳೂರಿಗೆ ಶಿವಮ್ಮ ತಾಯಿಯವರೊಂದಿಗೆ ಬಂದು ಸಂಸಾರ ಹೂಡಿದರು. ಮಗ ಮತ್ತು ಸೊಸೆ ಕೊಯಮತ್ತೂರಿನಲ್ಲೇ ವಾಸ ಮುಂದುವರೆಸಿದರು. ಬೆಂಗಳೂರಿಗೆ ಬಂದ 2 ವರ್ಷಗಳ ನಂತರ ಶಿವಮ್ಮ ತಾಯಿಯವರು ತಮ್ಮ ತೌರುಮನೆಗೆ ಹೋಗಿ 15 ದಿನಗಳಿದ್ದು ವಾಪಸಾದರು. ಆ ಕಾಲಕ್ಕೆ ಮಿಲ್ ನವರು ಸುಬ್ಬಯ್ಯನವರಿಗೆ ಚಾಮರಾಜಪೇಟೆಯಲ್ಲಿ ಒಂದು ಸೈಟ್ ನ್ನು ಕೊಟ್ಟರು. ಆ ಸೈಟ್ ನಲ್ಲಿ ಅವರು ಸ್ವಂತ ಮನೆಯನ್ನು ಕಟ್ಟಿಸಿದರು. ಆ ಮನೆ ಈಗಲೂ ಇದೆ.

ಆಗ ತಮ್ಮ ಮನೆಯ ಪಕ್ಕದಲ್ಲಿದ್ದ ವೈಶ್ಯ ಜನಾಂಗದ ಶ್ರೀಮತಿ ರಾಮಕ್ಕ ಎಂಬುವರು ತಾವು ಪಾರಾಯಣ ಮಾಡುತ್ತಿದ್ದ "ಸಟೀಕಾ ಜ್ಞಾನಸಿಂಧು" ಪಾರಾಯಣವನ್ನು ಕೆಲವು ಶಿವಮ್ಮ ತಾಯಿಯವರನ್ನು ಆಹ್ವಾನಿಸಿದರು. ಶಿವಮ್ಮ ತಾಯಿಯವರು ಅವರ ಮನೆಗೆ ಹೋದರು. ಅಲ್ಲಿ ಬ್ರಾಹ್ಮಣರಾದ ಶ್ರೀಮತಿ.ಅಲಮೇಲಮ್ಮ, ಶ್ರೀಮತಿ.ಪದ್ಮಮ್ಮ ಮತ್ತು ಲಿಂಗಾಯಿತ ಜನಾಂಗದ ಶ್ರೀಮತಿ ಶಿವಮ್ಮ ಎಂಬುವರೂ ಸೇರಿದ್ದರು.  ಕ್ರಮೇಣ ಪ್ರತಿನಿತ್ಯ ರಾಮಕ್ಕನವರ ಮನೆಯಲ್ಲಿ ಸಂಜೆಯ ವೇಳೆ ಜ್ಞಾನಸಿಂಧು ಪುಣ್ಯ ಗ್ರಂಥದ ಪಾರಾಯಣ ನಡೆಯಹತ್ತಿತು. ಒಮ್ಮೆ ಪಾರಾಯಣ ಭಾಗಕ್ಕೆ ಅರ್ಥವನ್ನು ವಿವರಿಸುವ ಸಂದರ್ಭ ಶಿವಮ್ಮ ತಾಯಿಯವರಿಗೆ ಒದಗಿಬಂದಿತು. ಆಗ ಶಿವಮ್ಮ ತಾಯಿಯವರು ಯಾವುದೇ ಅಡೆತಡೆಗಳಿಲ್ಲದೆ ಜ್ಞಾನಸಿಂಧುವಿಗೆ ಅರ್ಥವನ್ನು ಬಹಳ ಸೊಗಸಾಗಿ ವಿವರಿಸಿದರು. ಆ ವಿವರಣೆಯನ್ನು ಕೇಳಿ ಅಲ್ಲಿ ನರೆದಿದ್ದ ಎಲ್ಲರಿಗೂ ಬಹಳ ಆಶ್ಚರ್ಯವಾಯಿತು. ಆಗ ರಾಮಕ್ಕನವರು "ನಿಮಗೆ ಯಾವುದಾದರೂ ಗುರುವಿನಿಂದ ದೀಕ್ಷೆ ಆಗಿದೆಯೇ?" ಎಂದು ಕೇಳಿದರು. ಆಗ ಶಿವಮ್ಮ ತಾಯಿಯವರು ಯಾರಿಂದಲೂ ತಮಗೆ ದೀಕ್ಷೆ ಆಗಿಲ್ಲವೆಂದರು. ರಾಮಕ್ಕನವರು ಅದನ್ನು ಅಲ್ಲಗಳೆದು "ಇಲ್ಲ, ನಿಮಗೆ ಯಾರಿಂದಲಾದರೂ ಉಪದೇಶ, ದೀಕ್ಷೆ ಆಗಿರಲೇಬೇಕು" ಎಂದರು. ಶಿವಮ್ಮ ತಾಯಿಯವರು ಅದನ್ನು ಸಂಪೂರ್ಣವಾಗಿ ನಿರಾಕರಿಸಿದರು. ಆಗ ರಾಮಕ್ಕನವರು "ಯಾರಿಂದಲೂ ಉಪದೇಶ ಅಥವಾ ದೀಕ್ಷೆ ಆಗದೆ ಜ್ಞಾನಸಿಂಧುವಿನಂತಹ ಗ್ರಂಥಕ್ಕೆ ವಿವರಣೆ ನೀಡಬಾರದು, ಅರ್ಥ ಹೇಳಬಾರದು" ಎಂದು ಹೇಳಿದರು. ಆಗ ಶಿವಮ್ಮ ತಾಯಿಯವರು "ಹಾಗಾದರೆ ಯಾರಾದರೂ ಅಂತಹ ಗುರುಗಲಿದ್ದರೆ ನಾನು ಖಂಡಿತ ದೀಕ್ಷೆ ತೆಗೆದುಕೊಳ್ಳುತ್ತೇನೆ. ಆದರೆ ಗುರುಗಳು ಹೆಂಗಸರಾಗಿರಬೇಕು" ಎಂದು ಹೇಳಿದರು.

ಆಗ ಅವರಿಗೆ ತಮಗೆ ಶಿರಡಿ ಸಾಯಿಬಾಬಾರವರಂತಹ ಸಂತ ಸದ್ಗುರುವಿನಿಂದ ಉಪದೇಶ ದೀಕ್ಷೆ ಕೊಡಲ್ಪಟ್ಟಿದೆ ಎಂದು ನೆನಪಾಗಲೇ ಇಲ್ಲ. ಹೀಗಿರುವಾಗ ಶಿವಮ್ಮ ತಾಯಿಯವರ ಮನೆಯ ಪಕ್ಕದಲ್ಲಿದ್ದ ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾದ ಮೊದಲಿಯಾರ್ ಕುಟುಂಬದವರು ಇವರನ್ನು ಶಿರಡಿ ಸಾಯಿಬಾಬಾರವರ ಪೂಜೆಗೆ ಒಂದು ಗುರುವಾರ ಆಹ್ವಾನಿಸಿದರು. ಅವರ ಮನೆಯಲ್ಲಿದ್ದ ಶಿರಡಿ ಸಾಯಿಬಾಬಾರವರ ಫೋಟೋ ನೋಡಿ ಶಿವಮ್ಮ ತಾಯಿ ಆಕರ್ಷಿತರಾದರು. ಪೂಜೆ ಮುಗಿದ ನಂತರ ಯಾವ ಸಂಕೋಚವೂ ಇಲ್ಲದೆ ಆ ಮನೆಯವರ ಹತ್ತಿರ ಆ ಫೋಟೋ ತಮಗೆ ಬೇಕೆಂದು ಬೇಡಿಕೆ ಇಟ್ಟರು. ಆ ಮೊದಲಿಯಾರ್ ಕುಟುಂಬದವರು ಸಂತೋಷದಿಂದ ಶಿರಡಿ ಸಾಯಿಬಾಬಾರವರ ಫೋಟೋವನ್ನು ಶಿವಮ್ಮ ತಾಯಿಯವರಿಗೆ ಕೊಟ್ಟರು. ಮನೆಯಲ್ಲಿ ಆ ಫೋಟೋವನ್ನಿಟ್ಟು ಶಿವಮ್ಮ ತಾಯಿ ಪೂಜಿಸಲು ಪ್ರಾರಂಭಿಸಿದರು.  ಆಗಲೂ ಕೂಡ ಅವರಿಗೆ ತಮಗೆ ಆದ ಸಾಯಿಯವರ ಉಪದೇಶದ ನೆನಪಾಗಲಿಲ್ಲ.

ಉಪದೇಶ, ದೀಕ್ಷೆ ಕೊಡುವ ಗುರುವಿಗಾಗಿ ರಾಮಕ್ಕ ಎಷ್ಟು ದಿನ ಹುಡುಕಿದರೂ ಅಂತಹವರಾರೂ ಸಿಗಲಿಲ್ಲ. ಶಿವಮ್ಮ ತಾಯಿಯವರು ಒಂದೇ ಸಮನೇ ಒತ್ತಾಯ ಮಾಡುತ್ತಿದ್ದರು. ಒಂದು ದಿನ 15 ವರ್ಷದ ಸುಂದರವಾದ ಬಾಲಕನೊಬ್ಬ ಶಿವಮ್ಮ ತಾಯಿಯವರ ಮನೆಯ ಮುಂದೆ ಬಂದು ನಿಂತುಕೊಂಡು "ಶಿವಮ್ಮ ತಾಯಿಯವರ ಮನೆ ಇದೇನಾ" ಎಂದು ಕೇಳಿದನು. ಶಿವಮ್ಮನವರು ಹೊರಗಡೆ ಬಂದು ತಾವೇ ಶಿವಮ್ಮ ತಾಯಿ ಎಂದು ಹೇಳಿಕೊಂಡರು. ಆಗ ಆ ಬಾಲಕ ಕಡಪದ ರಾಜಯೋಗಿ ಸಚ್ಚಿದಾನಂದ ಯೋಗಿಶ್ವರರು ತಮಿಳಿನಲ್ಲಿ ರಚಿಸಿದ್ದ "ಜನನ ಮರಣ" ಮತ್ತು "ಪಾರಿಜಾತ" ಎಂಬ ಎರಡು ಪುಸ್ತಕಗಳನ್ನು ಶಿವಮ್ಮನವರ ಕೈಗೆ ಕೊಟ್ಟು "ಇವು ನಿಮಗೆ ಯೋಗ್ಯವಾದವು. ನಮ್ಮಂತ ಹುಡುಗರಿಗೆ ಏಕೆ?" ಎಂದು ಹೇಳಿ ಆ ಪುಸ್ತಕಗಳನ್ನು ಇವರ ಕೈಗೆ ಕೊಟ್ಟು ಏನನ್ನು ಕೂಡ ತಿನ್ನದೇ ಹಾಗೆಯೇ ಹೊರಟು ಹೋದವನು ಮತ್ತೆ ಕಾಣಲೇ ಇಲ್ಲ. ಹಾಗಾದರೆ ಬಂದವರು ಸಾಯಿಬಾಬಾರವರೇ?

ಶಿವಮ್ಮ ತಾಯಿಯವರು ಆ ಪುಸ್ತಕಗಳನ್ನು ತೆಗೆದುಕೊಂಡು ದೇವರ ಗೂಡಿನಲ್ಲಿಟ್ಟು ಪುನಃ ಮರೆತುಬಿಟ್ಟರು. ಮುಂದೆ ಒಂದು ದಿನ ಕನಸಿನಲ್ಲಿ ಒಬ್ಬ ಮುದುಕ (ಸಾಯಿಬಾಬಾರವರು) ಅವರ ಕನಸಿನಲ್ಲಿ ಬಂದು "ಜನನ ಮರಣ" ಪುಸ್ತಕ ತೆರೆದು ನೋಡು ಎಂದು ಹೇಳಿದನು.ಬೆಳಿಗ್ಗೆ ಎದ್ದು ಶಿವಮ್ಮನವರು ನಿತ್ಯಕರ್ಮಗಳನ್ನೆಲ್ಲ ಮುಗಿಸಿ ಪೂಜೆ ಮಾಡಿ ಆ ಪುಸ್ತಕವನ್ನು ತೆರೆದು ನೋಡಿದರು. ಆಗ ಅದರಲ್ಲಿ ಈ ಹಿಂದಿ ಸದ್ಗುರು ಶಿರಡಿ ಸಾಯಿಬಾಬಾರವರು ಸ್ವಹಸ್ತದಿಂದ ಬರೆದುಕೊಟ್ಟಿದ್ದ ಗಾಯತ್ರಿ ಮಂತ್ರದ ಚೀಟಿ ಇತ್ತು. ಆ ಚೀಟಿಯನ್ನು ನೋಡಿದ ಕೂಡಲೇ ಶಿವಮ್ಮನವರಿಗೆ ಈ ಹಿಂದೆ ನಡೆದಿದ್ದೆಲ್ಲ ಜ್ಞಾಪಕಕ್ಕೆ ಬಂದಿತು. ಕನಸಿನಲ್ಲಿ ಬಂದಿದ್ದ ಮುದುಕ ಮತ್ತು ಈ ಹಿಂದೆ ತಮನ್ನು ಗುರುತಿಸಿ ಉಪದೇಶ ನೀಡಿದ ಗುರುಗಳು ಒಬ್ಬರೇ ಎಂದು ಅವರಿಗೆ ಅರಿವಾಯಿತು. ಆಗ ಶಿವಮ್ಮನವರಿಗೆ ಅತೀವ ಆನಂದವಾಯಿತು. ಕೂಡಲೇ ಶಿವಮ್ಮ ರಾಮಕ್ಕನವರ ಮನೆಗೆ ಹೋಗಿ ನಡೆದದ್ದನ್ನೆಲ್ಲ ವಿವರಿಸಿ ಹೇಳಿದರು. ರಾಮಕ್ಕನವರು ಕೂಡ ಹರ್ಷಭರಿತರಾಗಿ "ನೀನೇ ಪುಣ್ಯವಂತೆ ತಾಯಿ. ಒಳ್ಳೆಯ ಸದ್ಗುರುವಿನಿಂದಲೇ ನಿನಗೆ ಉಪದೇಶವಾಗಿದೆ. ಇನ್ಯಾವ ಗುರುವಿನಿಂದಲೂ ನಿನಗೆ ಉಪದೇಶದ ಅಗತ್ಯವಿಲ್ಲ" ಎಂದು ತಿಳಿಸಿದರು.

 ಮನೆಗೆ ಬಂದ ಶಿವಮ್ಮ ತಾಯಿಯವರು ಶಿರಡಿ ಸಾಯಿಬಾಬಾರವರ ಈ ಲೀಲೆಯನ್ನು ಕಂಡು ಪುಳಕಿತರಾದರು. ಕಳುವಾದ ಟ್ರಂಕ್ ನಲ್ಲಿದ್ದ ಈ ಚೀಟಿ ಜನನ ಮರಣ ಪುಸ್ತಕದಲ್ಲಿ ಬಂದಿದ್ದು ಹೇಗೆ? ಆ ಪುಸ್ತಕ ತಂದುಕೊಟ್ಟ ಹುಡುಗ ಯಾರು? ಸಾಯಿಬಾಬಾರವರು ತಾವಿದ್ದ ಊರಿಗೆ ಬಂದು ತಮಗೆ ಉಪದೇಶ ನೀಡಲು ಕಾರಣವೇನು? ಪುನಃ ಬಾಬಾರವರೇ ಮುದುಕನ ರೂಪದಲ್ಲಿ ಕನಸಿನಲ್ಲಿ ಬಂದು ತಮಗೆ ಮರೆತಿದ್ದನ್ನು ಜ್ಞಾಪಕ ಮಾಡಲು ಕಾರಣವೇನು? ಎಂದು ಇಡೀ ದಿವಸ ಚಿಂತಿಸಿದರು. ಇದೆಲ್ಲವೂ ಸಾಯಿಬಾಬಾರವರ ಪವಾಡವಲ್ಲದೆ ಮತ್ತಿನ್ನೇನು? ಈ ಘಟನೆಯಿಂದ ಸಾಯಿಬಾಬಾರವರು ತಮ್ಮಿಂದ ಏನನ್ನೋ ಅಪೇಕ್ಷಿಸುತ್ತಿದ್ದಾರೆ ಎಂದು ಮನಗಂಡರು.

 ಆ ದಿನ ರಾತ್ರಿ ಶಿವಮ್ಮ ತಾಯಿಯವರು ಧ್ಯಾನಕ್ಕೆಕುಳಿತು ಮಂತ್ರವನ್ನು ಪಠಣ ಮಾಡಬೇಕೆಂದುಕೊಂಡು ಸಾಯಿಬಾಬಾರವರ ಫೋಟೋಕ್ಕೆ ಎದುರಾಗಿ ಕುಳಿತಿದ್ದಾಗ ಪುನಃ ಸಾಯಿಬಾಬಾರವರು ಕಾಣಿಸಿಕೊಂಡು "ಹರಿ ಇರುವುದು ಯಾವ ದಿಕ್ಕಿಗೆ. ಉತ್ತರ ದಿಕ್ಕಿಗೆ ತಿರುಗಿ ಕುಳಿತುಕೋ" ಎಂದು ಹೇಳಿ ಶಿವಮ್ಮನವರ ಭುಜವನ್ನು ಹಿಡಿದು ಉತ್ತರ ದಿಕ್ಕಿಗೆ ತಿರುಗಿಸಿ ಮಾಯವಾದರು.

ಆ ಗುರುವಾರದ ಪವಿತ್ರ ದಿನದಿಂದಲೇ ಶಿವಮ್ಮ ತಾಯಿಯವರು ತಮ್ಮ ಮನೆಯಲ್ಲೂ ಪ್ರತಿ ಗುರುವಾರ ಶಿರಡಿ ಸಾಯಿಬಾಬಾರವರ ಪೂಜೆಯನ್ನು ಮಾಡಲು ಶುರು ಮಾಡಿದರು. ಸಾಯಿಬಾಬಾರವರು ತೋರಿದ ದಾರಿಯಲ್ಲಿ ನಡೆಯುತ್ತಾ ತಮ್ಮ ತಪೋಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಸಾಯಿಯವರು ಕೂಡ ಇವರಿಗೆ ಮಾರ್ಗದರ್ಶನ ಮಾಡುತ್ತಾ ಹೋದರು. ಸಾಯಿಬಾಬಾರವರ ಕೃಪೆ ತಮ್ಮ ಮೇಲೆ ಇರುವುದನ್ನು ಮನಗಂಡ ಶಿವಮ್ಮ ತಾಯಿಯವರು ತಮ್ಮ ಗುರುವಿಗೆ ಸಂಪೂರ್ಣ ಶರಣಾಗತರಾದರು. ನಿತ್ಯ ತಮ್ಮ ಮನೆಯಲ್ಲಿ ತಮ್ಮ ಪತಿಯೊಡನೆ ಏನೇ ಜಗಳ, ತೊಂದರೆಗಳಾದರೂ ಎಲ್ಲವನ್ನು ಬಾಬಾರವರ ಫೋಟೋದ ಮುಂದೆ ಕುಳಿತು ನಿವೇದಿಸಿಕೊಳ್ಳುತ್ತಿದ್ದರು. ಬಾಬಾರವರು ಏನು ಉತ್ತರ ಕೊಟ್ಟರೆ ಅದರ ಪ್ರಕಾರ ನಡೆಯುತ್ತಿದ್ದರು. ಭಕ್ತರು ಬಂದು ತಮ್ಮ ಕಷ್ಟಗಳನ್ನು ಇವರ ಬಳಿ ಹೇಳಿಕೊಳ್ಳುತ್ತಿದ್ದರು. ಆಗ ಸಾಯಿಬಾಬಾರವರು ಅಪ್ಪಣೆ ಕೊಟ್ಟರೆ ಮಾತ್ರ ಬಾಬಾರವರೇ ಸ್ವತಃ ತಮಗೆ ತಿಳಿಸಿದ್ದನ್ನು ಅವರಿಗೆ ಹೇಳುತ್ತಿದ್ದರು. ಬಾಬಾರವರು ಒಮ್ಮೆ ಇಂಗ್ಲೀಷ್ ನಲ್ಲಿ "ನೋ" ಎಂದು ಹೇಳಿದ್ದನ್ನು ಶಿವಮ್ಮ ತಾಯಿಯವರು ಪ್ರಶ್ನೆಯನ್ನು ಕೇಳಿದ ಭಕ್ತರಿಗೆ ಹಾಗೆಯೇ ಹೇಳಿ ತಮಗೆ ಅದರ ಅರ್ಥ ಗೊತ್ತಿರುವುದಿಲ್ಲ ಅಂದು ಅದರ ಅರ್ಥವನ್ನು ಆ ಭಕ್ತರಿಂದಲೇ ಕೇಳಿ ತಿಳಿದುಕೊಂಡರು.

ಪ್ರತಿ ಗುರುವಾರ ಮನೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಸಾಯಿಬಾಬಾರವರ ಪೂಜೆಯನ್ನು ಮಾಡುತ್ತಿದ್ದರು. ಪೂಜೆಗೆ ಅಕ್ಕಪಕ್ಕದ ಮನೆಯವರನ್ನು, ಸಾಧು ಸಂತರನ್ನು ಕೂಡ ಆಹ್ವಾನಿಸುತ್ತಿದ್ದರು. ಪೂಜೆಯ ನಂತರ ಪ್ರಸಾದವಾಗಿ ಪಾನಕ, ಕೋಸಂಬರಿ, ರಸಾಯನ ಮಾಡುತ್ತಿದ್ದರು. ಸಾಧು ಸಂತರಿಗೆ ಊಟವನ್ನು ಹಾಕುತ್ತಿದ್ದರು. ಈ ಕಾರ್ಯದಲ್ಲಿ ಇವರ ಪತಿ ಸುಬ್ಬಯ್ಯನವರು ಕೂಡ ಸಹಕರಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಶಿವಮ್ಮ ತಾಯಿಯವರಿಗೆ ಶಿರಡಿಗೆ ಹೋಗಿ ಸಾಯಿಯವರ ದರ್ಶನ ಪಡೆಯಬೇಕೆಂಬ ಬಯಕೆ ಶುರುವಾಯಿತು. ಆದರೆ, ಅವರ ಗಂಡನ ಅನುಮತಿಯಿಲ್ಲದೆ ಹೋಗುವ ಹಾಗಿರಲಿಲ್ಲ. ಅವರ ಗಂಡನಿಗೆ ಈ ವಿಷಯವನ್ನು ತಿಳಿಸಿದರು. ಅವರ ಗಂಡನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಆಗ ಸುಬ್ಬಯ್ಯನವರು "ಶಿರಡಿಯಲ್ಲಿ ಏನಿದೆ, ಅಲ್ಲಿ ಹೋಗಿ ನೋಡುವುದು ಏನು ಇಲ್ಲ. ಏನು ಬೇಡ" ಎಂದು ಹೇಳಲು, ಶಿವಮ್ಮ ತಾಯಿಯವರು ಮತ್ತೆ ಮತ್ತೆ ಬಲವಂತ ಮಾಡಲಾಗಿ "ನಿನ್ನ ಗುರುವು ನಮ್ಮ ಮನೆಯಲ್ಲಿರುವ ಏಳು ಹಲ್ಲಿನ ಆ ಮುದಿ ಹಸುವನ್ನು ಮಾರಾಟ ಮಾಡಿಸಿದರೆ, ಅದರಿಂದ ಬಂದ ಹಣದಲ್ಲೇ ಶಿರಡಿಗೆ ಹೋಗಿ ಬರೋಣ" ಎಂದರು. "ಹಸು ಮಾರಾಟವಾಗದೆ ಹೋದರೆ ಆ ನಿನ್ನ ಗುರುವಿನ ಫೋಟೋವನ್ನು ತೆಗೆದುಕೊಂಡು ಹೋಗಿ ಕೆಂಪಾಂಬುಧಿ ಕೆರೆಯಲ್ಲಿ ಹಾಕುತ್ತೇನೆ" ಎಂದು ಕಠಿಣವಾಗಿ ನುಡಿದರು. ಸಾಯಿಬಾಬಾರವರ ಫೋಟೋದ ಮುಂದೆ ಶಿವಮ್ಮ ತಾಯಿಯವರು ಆ ಹಸುವನ್ನು ಮಾರಾಟ ಮಾಡಿಸಿಕೊಟ್ಟು ತಮ್ಮನ್ನು ಶಿರಡಿಗೆ ಕರೆಸಿಕೊಳ್ಳುವಂತೆ ಸಾಯಿಯವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದರು. ಅವರು ಕೇಳಿಕೊಂಡ 3 ದಿನದಲ್ಲಿ ಆ ಹಸುವು ಮಾರಾಟವಾಯಿತು. ಈ ಪವಾಡ ಜರುಗಿದ್ದರಿಂದ ಶಿವಮ್ಮ ತಾಯಿಯವರ ಗಂಡನು ಅವರನ್ನು ಶಿರಡಿಗೆ ಕರೆದುಕೊಂಡು ಹೋಗಲು ಒಪ್ಪಿದರು. ಶಿರಡಿಗೆ ಹೋಗಲು ಸಿದ್ದತೆ ಮಾಡಿಕೊಡು ಒಂದು ಶುಭದಿನ ಶಿರಡಿಗೆ ಇವರು, ಇವರ ಪತಿ ಮತ್ತು ಇವರ ಮನೆಯ ಕೆಲಸ ಮಾಡುತ್ತಿದ್ದ ತಿಮ್ಮಕ್ಕ, ಈ 3 ಜನ ರೈಲಿನಲ್ಲಿ ಶಿರಡಿಗೆ ಹೊರಟರು. ದಾರಿಯಲ್ಲಿ ಒಬ್ಬ ಮುದುಕನ ವೇಷದಲ್ಲಿ ಸಾಯಿಬಾಬಾರವರು ಬಂದು ಎಲೆ ಅಡಿಕೆ ಮತ್ತು ಸುಣ್ಣವನ್ನು ತಿಮ್ಮಕ್ಕನವರಿಗೆ ನೀಡಿ ಬೋಗಿಯಲ್ಲಿದ್ದ ಎಲ್ಲರಿಗೂ ದರ್ಶನ ನೀಡಿ ಕೂಡಲೇ ಅದೃಶ್ಯರಾಗಿದ್ದನ್ನು ಅಲ್ಲಿದ್ದವರೆಲ್ಲ ನೋಡಿದರು. ಶಿರಡಿಗೆ ಬಂದು ಶಿವಮ್ಮ ತಾಯಿಯವರು ಸಾಯಿಬಾಬಾರವರು ತಿರುಗಾಡಿದ, ಕುಳಿತುಕೊಳ್ಳುತ್ತಿದ್ದ ಜಾಗದಲ್ಲೆಲ್ಲ ಓಡಾಡಿ ಆನಂದದಿಂದ ಪುಳಕಿತರಾದರು. ಅಲ್ಲಿಗೆ ಬಂದಿದ್ದ ಭಕ್ತರಿಂದ ಸಾಯಿಬಾಬಾರವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಂಡರು. ಸಾಯಿಯವರು ಇರುತ್ತಿದ್ದ ದ್ವಾರಕಾಮಾಯಿ, ಚಾವಡಿ,ಧುನಿ, ನಂದಾದೀಪ, ಬೇವಿನ ಮರ, ಮಹಾಳಸಪತಿಯವರ ಮನೆಯಲ್ಲಿದ್ದ ಬಾಬಾರವರ ವಿಗ್ರಹ ಮತ್ತು ಪೂಜೆಯ ಸಲಕರಣೆಗಳು, ಲಕ್ಷ್ಮಿಭಾಯಿಯವರಿಗೆ ಸಾಯಿಯವರು ನವವಿಧ ಭಕ್ತಿಯ ಕುರುಹಾಗಿ ನೀಡಿದ 9 ನಾಣ್ಯಗಳು ಎಲ್ಲವನ್ನು ನೋಡಿದರು. ಲಕ್ಷ್ಮೀ ಭಾಯಿಯವರನ್ನು ಕಂಡು ಅವರಿಗೆ ನಮಸ್ಕರಿಸಿ ಅವರಿಂದ ಅನುಗ್ರಹ ಪಡೆದುಕೊಂಡರು. ಅಲ್ಲಿಯೂ ಸಾಯಿಬಾಬಾರವರು ಅನೇಕ ಪವಾಡಗಳನ್ನು ಶಿವಮ್ಮ ತಾಯಿಯವರಿಗೆ ತೋರಿಸಿದರು.

ಶಿರಡಿಯಿಂದ ಹಿಂತಿರುಗಿದ ಮೇಲೆ ಶಿವಮ್ಮ ತಾಯಿಯವರು ಇನ್ನು ಹೆಚ್ಚು ಭಕ್ತಿಯಿಂದ ಪೂಜೆ, ಭಜನೆ, ಧ್ಯಾನ, ಸಾಧು ಸಂತರ ಸೇವೆ, ಅನ್ನದಾನ ಮಾಡಲು ಪ್ರಾರಂಭಿಸಿದರು. ಎಲ್ಲೆಲ್ಲಿ ಗುರು ಪೂಜೆಗಳು ನಡೆದರೂ ಅಲ್ಲಿಗೆ ಹೋಗಿ ಬರುತ್ತಿದ್ದರು. ಅನೇಕ ಸಾಧು ಸಂತರನ್ನು ತಮ್ಮ ಮನೆಗೆ ಆಹ್ವಾನಿಸಿ ಆತಿಥ್ಯ ನೀಡುತ್ತಿದ್ದರು. ಸಾಯಿಯವರು ತಮಗೆ ನೀಡಿದ ಮಾರ್ಗದರ್ಶನದಂತೆ ತಮ್ಮ ಬಳಿ ಬಂದ ಭಕ್ತರ ಕಷ್ಟಗಳನ್ನು ನಿವಾರಿಸುತ್ತಿದ್ದರು. ಅನೇಕ ಭಕ್ತರ ಖಾಯಿಲೆಗಳನ್ನು ಸಾಯಿಬಾಬಾರವರು ನೀಡಿದ ಮಾರ್ಗದರ್ಶನದಂತೆ ಉತ್ತರಿಸಿ ಆ ಭಕ್ತರ ಖಾಯಿಲೆಯನ್ನು ಗುಣಪಡಿಸಿದರು. ಒಂದು ಏಕಾದಶಿ ದಿವಸ ಶಿವಮ್ಮ ತಾಯಿಯವರು ತುಳಸಿ ಪೂಜೆಯನ್ನು ಮಾಡುತ್ತಿದ್ದಾಗ ಒಂದು ಬಟ್ಟೆಯ ಗಂಟು ಇವರ ಹತ್ತಿರ ಬಿದ್ದಿತು. ಆ ಗಂಟನ್ನು ಬಿಚ್ಚಿ ನೋಡಲಾಗಿ ಅದರಲ್ಲಿ ಎರಡು ಸಣ್ಣ ಬೆಳ್ಳಿಯ ಪಾದುಕೆಗಳಿದ್ದವು. ಆ ಬಟ್ಟೆಯು ಪವಿತ್ರ ಭಗವಾದ್ವಜವಾಗಿತ್ತು. ಅಂದಿನಿಂದ ಆ ಪಾದುಕೆಗಳನ್ನು ಪೂಜಗೃಹದಲ್ಲಿ ಇಟ್ಟು ಪೂಜಿಸಲು ಆರಂಭಿಸಿದರು.

ಈ ನಡುವೆ ಮದರಾಸು ಸರ್ಕಾರದಲ್ಲಿ ಪೋಲಿಸ್ ಇಲಾಖೆಯಲ್ಲಿದ್ದ ಇವರ ಮಗ ಮಣಿರಾಜ್ ಒಂದು ಗಂಡು ಮಗುವಾದ ನಂತರ ಅಕಾಲ ಮರಣ ಹೊಂದಿದರು. ಅದನ್ನು ಕಂಡ ಇವರ ಸೊಸೆ ಕೂಡ ವಿಷವನ್ನು ಸೇವಿಸಿ ಮಣಿರಾಜ್ ಎದೆಯ ಮೇಲೆ ತಮ್ಮ ತಲೆಯಿಟ್ಟು ಪ್ರಾಣಬಿಟ್ಟರು. ಮಗುವನ್ನು ಮಣಿರಾಜ್ ಅತ್ತೆ ಮಾವ ನೋಡಿಕೊಳ್ಳುವುದಾಗಿ ಹೇಳಿ ತೆಗೆದುಕೊಂಡು ಹೋದರು. ಮಗ ಸೊಸೆಯರ ಎಲ್ಲಾ ಕರ್ಮಗಳನ್ನು ಮಾಡಿ ಮುಗಿಸಿದ ಮೇಲೆ ಶಿವಮ್ಮ ತಾಯಿಯವರಿಗೆ ಗೃಹತ್ಯಾಗ ಮಾಡಿ ಕಾಶಿಗೆ ಹೊಗಿಬರಬೇಕೆಂದು ಅನ್ನಿಸಿ ತಮ್ಮ ಪತಿಗೆ ಈ ವಿಷಯವನ್ನು ತಿಳಿಸಿದರು. ಅವರ ಪತಿ "ನೀನು ಬೇಕಾದರೆ ಹೋಗು. ನಾನು ಬರುವುದಿಲ್ಲ. ಆದರೆ ನೀನು ಹೋಗುವುದಾದರೆ ನನಗೆ ಇನ್ನೊಂದು ಮದುವೆ ಮಾಡಿ ಹೋಗು" ಎಂದರು. ಆಗ ಅವರ ವಯಸ್ಸು 68 ವರ್ಷ. ಶಿವಮ್ಮ ತಾಯಿಯವರು ಮತ್ತೊಮ್ಮೆ ಗಂಡನನ್ನು ಕೇಳಿ ಆ ವಿಚಾರವನ್ನು ಧೃಡಪಡಿಸಿಕೊಂಡರು. ನಂತರ 1 ತಿಂಗಳಿನಲ್ಲಿ ಹೆಣ್ಣನ್ನು ಹುಡುಕಿ ತನ್ನ ಗಂಡನಿಗೆ ಇನ್ನೊಂದು ವಿವಾಹ ಮಾಡಿದರು. ಈ ವಿಷಯದಲ್ಲೂ ಕೂಡ ಸಾಯಿಬಾಬಾರವರನ್ನು ಕೇಳಿ ಅವರ ಒಪ್ಪಿಗೆಯ ನಂತರವೇ ಶಿವಮ್ಮ ತಾಯಿ ಗೃಹತ್ಯಾಗದ ತೀರ್ಮಾನ ತೆಗೆದುಕೊಂಡರು. ಒಂದು ದಿನ ಪತಿಯ ಜೊತೆಯಲ್ಲಿ ಊಟ ಮಾಡುತ್ತಿದ್ದಾಗ ಶಿವಮ್ಮ ತಾಯಿಯವರು ನಾನು ಕಾಶಿಗೆ ಹೋಗಬಹುದೇ ಎಂದು ಕೇಳಿದಾಗ ಸುಬ್ಬಯ್ಯನವರು ಆಗಬಹುದು ಎಂದರು. ತಾಯಿಯವರಿಗೆ ಅನುಮಾನ ಬಂದು ಪುನಃ ಪ್ರಶ್ನಿಸಿದಾಗ "ಈ ಅನ್ನದ ಸತ್ಯವಾಗಿಯು ಹೋಗಬಹುದು" ಎಂದು ಹೇಳಿದರು. ಆಗ ಶಿವಮ್ಮ ತಾಯಿಯವರಿಗೆ ಆ ಮನೆಯ ಋಣ ಮುಗಿದಿದೆ ಎಂದು ಅರಿವಾಯಿತು. ಅಂದು ಪತಿಯ ಜೊತೆಯಲ್ಲೇ ಊಟ ಮಾಡಿ ಅವರಿಗೆ ಆದರಣೆಯಿಂದ ಎಲೆ ಅಡಿಕೆಯನ್ನು ಮಾಡಿಸಿಕೊಟ್ಟು ತಾವು ಜೊತೆಯಲ್ಲಿ ಹಾಕಿಕೊಂಡರು. ಅಂದು ಗುರುವಾರದ ದಿನ. ಆ ದಿನ ಸಂಜೆಯಾದ ಮೇಲೆ ಪಕ್ಕದ ಮನೆಯವರು ಕೊಟ್ಟು ತಾನು ಪೂಜಿಸುತ್ತಿದ್ದ ಸಾಯಿಬಾಬಾರವರ ಫೋಟೋವನ್ನು ಮತ್ತು ಸಾಯಿಯವರೇ ಸ್ವತಃ ಅನುಗ್ರಹಿಸಿದ ಬೆಳ್ಳಿಯ ಪಾದುಕೆಗಳನ್ನು ತೆಗೆದುಕೊಂಡು ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೊರಟರು. ಬೇರೆ ಯಾವ ವಸ್ತುವನ್ನಾಗಲಿ, ಹಣವನ್ನಾಗಲಿ ತೆಗೆದುಕೊಳ್ಳದೆ ಮನೆಯನ್ನು ತ್ಯಜಿಸಿದರು. 

ಆನಂತರ ಶಿವಮ್ಮ ತಾಯಿಯವರು ಬೆಂಗಳೂರು ದಕ್ಷಿಣ ಭಾಗದಲ್ಲಿನ ರೂಪೇನ ಅಗ್ರಹಾರದ ಎನ್.ಜಿ.ಅರ್.ಬಡಾವಣೆಯಲ್ಲಿರುವ ಶ್ರೀ.ಸದ್ಗುರು ಶಿರಡಿ ಸಾಯಿಬಾಬಾ ಮಠ ಎಂಬಲ್ಲಿಗೆ ಬಂದರು.  ಈ ಮಠವು ಮಡಿವಾಳದಿಂದ ಹೊಸೂರಿಗೆ ಹೋಗುವ ಮಾರ್ಗದಲ್ಲಿ ಬಲಭಾಗದಲ್ಲಿ  ಬರುತ್ತದೆ. 
ದೇವಾಲಯದ ರಾಜಗೋಪುರ 

ದೇವಾಲಯದ ನಾಮಫಲಕ

ಈ ದೇವಾಲಯದ ಪ್ರಾಂಗಣದಲ್ಲಿ 3 ದೇವಾಲಯಗಳನ್ನು ಶಿವಮ್ಮ ತಾಯಿಯವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ.

ದೇವಾಲಯದ ಪ್ರಾಂಗಣದಲ್ಲಿ ಸಿಗುವ ಮೊದಲನೇ ದೇವಾಲಯವನ್ನು 20ನೇ  ಮೇ 1970 ರಂದು ಸಾಯಿ ಮಹಾಭಕ್ತೆಯಾದ ಶ್ರೀಮತಿ.ಶಿವಮ್ಮ ತಾಯಿಯವರು ಅವರ ಭಕ್ತರ ಸಹಕಾರದೊಂದಿಗೆ ಉದ್ಘಾಟಿಸಿದರು.  ಈ ದೇವಾಲಯದ ಭೂಮಿಯನ್ನು ದಿವಂಗತ ನಾರಾಯಣ ರೆಡ್ಡಿಯವರು ದಾನವಾಗಿ ನೀಡಿದ್ದಾರೆ. ಈ ದೇವಾಲಯದ ಪ್ರವೇಶ ದ್ವಾರದಲ್ಲಿ ಶಿರಡಿಯಲ್ಲಿ ಇರುವಂತೆ ನಂದಿಯ ವಿಗ್ರಹವಿದೆ. ನಂದಿಯ ವಿಗ್ರಹದ ಬಲಭಾಗಕ್ಕೆ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಶಿರಡಿ ಸಾಯಿಬಾಬಾ, ಗಣಪತಿ ಮತ್ತು ಸುಬ್ರಮಣ್ಯ ದೇವರುಗಳ ವಿಗ್ರಹವಿದೆ. ಸಾಯಿಬಾಬಾರವರ ವಿಗ್ರಹದ ಕೆಳಭಾಗಕ್ಕೆ ಸರಿಯಾಗಿ ನೆಲಮಾಳಿಗೆಯಲ್ಲಿ ಶಿವಮ್ಮ ತಾಯಿಯವರ ಸಮಾಧಿಯನ್ನು ನಿರ್ಮಿಸಲಾಗಿದೆ. 

ದೇವಾಲಯದ ಹೊರನೋಟ 

ನಂದಿಯ ವಿಗ್ರಹ 

ನವಗ್ರಹಗಳು

ಗರ್ಭಗುಡಿಯಲ್ಲಿರುವ ಕಪ್ಪು ಶಿಲೆಯ ಗಣಪತಿ, ಸಾಯಿಬಾಬಾ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳು 

ಶಿವಮ್ಮ ತಾಯಿಯವರ ಸಮಾಧಿ 

ದೇವಾಲಯದ ಪ್ರಾಂಗಣದಲ್ಲಿ ಸಿಗುವ ಎರಡನೇ ದೇವಾಲಯವು ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು ನಿರ್ಮಾಣದ ವರ್ಷದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಈ ಮಂದಿರವನ್ನು ಕೂಡ ಶಿವಮ್ಮ ತಾಯಿಯವರು ಭಕ್ತರ ಸಹಕಾರದೊಂದಿಗೆ ಉದ್ಘಾಟಿಸಿರುತ್ತಾರೆ. ಈ ದೇವಾಲಯದ ಮುಂಭಾಗದಲ್ಲಿ ತುಳಸಿ ಬೃಂದಾವನವಿದೆ. ದೇವಾಲಯದ ದ್ವಾರದಲ್ಲಿ ಶಿವಮ್ಮ ತಾಯಿಯವರು ಕುಳಿತುಕೊಳ್ಳುತ್ತಿದ್ದ ಜಗುಲಿಯಿದೆ. ದೇವಾಲಯದ ಒಳಗಡೆ ಎಡಭಾಗದಲ್ಲಿ ಶಿವಮ್ಮ ತಾಯಿಯವರು ಸದಾಕಾಲ ಇರುತ್ತಿದ್ದ ಹಾಗೂ ಮಲಗಿಕೊಳ್ಳುತ್ತಿದ್ದ ಜಾಗದಲ್ಲಿ ಶಿವಮ್ಮ ತಾಯಿಯವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಈ ಸ್ಥಳದಲ್ಲಿ ಶಿವಮ್ಮ ತಾಯಿಯವರು 9 ವರ್ಷಗಳ ಕಾಲ ತಪಸ್ಸು ಮಾಡಿರುವರೆಂದು ಹೇಳಲಾಗುತ್ತದೆ. ಈ ಮಂದಿರದ ಗರ್ಭಗುಡಿಯಲ್ಲಿ ನಾಗಸಾಯಿಯ ಬೆಳ್ಳಿಯ ವಿಗ್ರಹವಿದೆ.
ತುಳಸಿ ಬೃಂದಾವನ 

ಶಿವಮ್ಮ ತಾಯಿ ಕುಳಿತುಕೊಳ್ಳುತ್ತಿದ್ದ ಜಗುಲಿ


ಶಿವಮ್ಮ ತಾಯಿಯವರು ತಂಗಿದ್ದ ಮತ್ತು ಮಲಗಿಕೊಳ್ಳುತ್ತಿದ್ದ ಸ್ಥಳದಲ್ಲಿರುವ ಅವರ ವಿಗ್ರಹ

ಗರ್ಭಗುಡಿಯಲ್ಲಿರುವ ಬೆಳ್ಳಿಯ ನಾಗಸಾಯಿಯ ವಿಗ್ರಹ

ದೇವಾಲಯದ ಪ್ರಾಂಗಣದಲ್ಲಿ ಸಿಗುವ 3ನೇ ಮಂದಿರವೇ ದ್ವಾರಕಾಮಾಯಿ. ಈ ಪವಿತ್ರ ಸ್ಥಳವನ್ನು 10 ನೇ ಫೆಬ್ರವರಿ 1989 ರಂದು ಸ್ವತಃ ಶಿವಮ್ಮ ತಾಯಿಯವರೇ ಉದ್ಘಾಟನೆ ಮಾಡಿರುತ್ತಾರೆ. ಈ ಸ್ಥಳದಲ್ಲಿ ಪ್ರಪಂಚದಲ್ಲಿ ಎಲ್ಲೂ ಕೂಡ ಕಾಣಸಿಗದ ಸಾಯಿಬಾಬಾರವರ "ಅಮೃತ ಶಿಲೆಯ ಭಿಕ್ಷಾಟನ ವಿಗ್ರಹ" ವನ್ನು ಸ್ಥಾಪಿಸಲಾಗಿದೆ. ಶಿವಮ್ಮ ತಾಯಿಯವರು 1918 ನೇ ಇಸವಿಯಲ್ಲಿ ಸಾಯಿಬಾಬಾರವರು ಜೀವಂತರಾಗಿದ್ದಾಗ ಅವರನ್ನು ಭೇಟಿ ಮಾಡುವ ಸೌಭಾಗ್ಯವನ್ನು ಪಡೆದಿದ್ದ ಸಾಯಿ ಮಹಾಭಕ್ತೆ. ಉದ್ಘಾಟನಾ ಭಾಷಣವನ್ನು ಚಿನ್ಮಯ ಮಿಶನ್ ನ ಸ್ವಾಮಿ ಬ್ರಹ್ಮಾನಂದ ರವರು ಮತ್ತು ದ್ವಾರಕಾ ಬದರಿಕಾಶ್ರಮದ ಸ್ವಾಮಿ ವಿದ್ಯಾ ನಾರಾಯಣ ತೀರ್ಥರವರು ಮಾಡಿದರು. ಸಾಯಿ ಆಧ್ಯಾತ್ಮಿಕ ಕೇಂದ್ರದ ಶ್ರೀ.ಆರ್.ಶೇಷಾದ್ರಿಯವರು ಮತ್ತು ಶ್ರೀ.ಪಿ.ಎಸ್.ನಾರಾಯಣ ರಾವ್ ರವರು ನೆರೆದಿದ್ದ ಸಾಯಿಭಕ್ತರನ್ನು ಉದ್ದೇಶಿಸಿ ಈ ಮಂದಿರದ ವಿಶೇಷತೆಯ ಬಗ್ಗೆ ನುಡಿದರು. ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಹರಿಹರನ್ ರವರಿಂದ ಸುಶ್ರಾವ್ಯವಾದ ಭಜನ ಕಾರ್ಯಕ್ರಮ ನಡೆಯಿತು. ದ್ವಾರಕಾಮಾಯಿಯಲ್ಲಿ ಅಮೃತಶಿಲೆಯ ಭಿಕ್ಷಾಟನ ವಿಗ್ರಹವಲ್ಲದೇ ಮರದ ಪಲ್ಲಕ್ಕಿ, ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟ, ಸಾಯಿಬಾಬಾ ಮತ್ತು ಉಪಾಸಿನಿ ಬಾಬಾರವರ ತೈಲ ಚಿತ್ರಗಳು ಕಂಡುಬರುತ್ತವೆ. 

ದ್ವಾರಕಾಮಾಯಿಯ ಹೊರನೋಟ 

ಶಿವಮ್ಮ ತಾಯಿಯವರು ಭಿಕ್ಷಾಟನೆ ವಿಗ್ರಹದ ಪ್ರತಿಷ್ಟಾಪನೆ ನೆರವೇರಿಸುತ್ತಿರುವುದು

ಪ್ರಪಂಚದ ಏಕೈಕ ಭಿಕ್ಷಾಟನೆ ವಿಗ್ರಹದ ಮನೋಹರ ನೋಟ 

 ಸಾಯಿಬಾಬಾರವರ ಮರದ ಪಲ್ಲಕ್ಕಿ 

ದ್ವಾರಕಾಮಾಯಿ ಸಾಯಿಬಾಬಾನ ಆಳೆತ್ತರದ ಭಾವಚಿತ್ರ 

ಶಿವಮ್ಮ ತಾಯಿ, ಸಾಯಿಬಾಬಾ ಮತ್ತು ಉಪಾಸಿನಿ ಬಾಬಾರವರ ತೈಲಚಿತ್ರಗಳು 

ದೇವಾಲಯದ ಕಾರ್ಯಚಟುವಟಿಕೆಗಳು: 

ಆರತಿಯ ಸಮಯ 
ಆರತಿ
ಸಮಯ
ಕಾಕಡ ಆರತಿ
6:30 am
ಮಧ್ಯಾನ್ಹ ಆರತಿ
12:00 pm
ಧೂಪಾರತಿ
6.15 pm
ಶೇಜಾರತಿ
8:00 pm


ವಿಶೇಷ ಉತ್ಸವದ ದಿನಗಳು: 

೧. ಶಿವರಾತ್ರಿ
೨. ಶ್ರೀರಾಮನವಮಿ
೩. ಶಿವಮ್ಮ ತಾಯಿಯವರ ಹುಟ್ಟಿದ ದಿನ ಪ್ರತಿ ವರ್ಷದ 29ನೇ ಮೇ
೪. ಶಿವಮ್ಮ ತಾಯಿಯವರ ಸಮಾಧಿ ದಿವಸ ಪ್ರತಿ ವರ್ಷದ 11ನೇ ಜುಲೈ
೫. ಗುರುಪೂರ್ಣಿಮೆ
೬. ವಿಜಯದಶಮಿ
೭ ಪ್ರತಿ ವರ್ಷದ ಕಾರ್ತೀಕ ಮಾಸದ ಹುಣ್ಣಿಮೆಯ ದಿನ ಲಕ್ಷದೀಪೋತ್ಸವ

ಸಾಮಾಜಿಕ ಕಾರ್ಯ ಚಟುವಟಿಕೆಗಳು:

೧. ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಶಿವಮ್ಮ ತಾಯಿಯವರು ಆರಂಭಿಸಿದ್ದು ಈಗ ರಾಜ್ಯ ಸರ್ಕಾರದ ಅನುದಾನದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಶಾಲೆಯ ಹೊರನೋಟ 

೨. ಶ್ರೀಮತಿ ಮುನಿಯಮ್ಮ ತಾಯಿ ವೃದ್ಧಾಶ್ರಮವನ್ನು ಈ ದೇವಾಲಯದ ವತಿಯಿಂದ ನಡೆಸಲಾಗುತ್ತಿದ್ದು 14 ಮಂದಿ ವಯೋವೃದ್ದರಿಗೆ ಉಚಿತ ಊಟ ವಸತಿಯೊಂದಿಗೆ ಆಶ್ರಯ ಕಲ್ಪಿಸಲಾಗಿದೆ.

ವೃದ್ದಾಶ್ರಮದ ಹೊರನೋಟ 

೩. ಪ್ರತಿ ಗುರುವಾರದಂದು ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

೪. ಪ್ರತಿ ವಿಶೇಷ ಹಬ್ಬದ ಮತ್ತು ಉತ್ಸವದ ದಿನಗಳಂದು ಅನ್ನದಾನ ಕಾರ್ಯಕ್ರಮವಿರುತ್ತದೆ.

ದೇವಾಲಯದ ಸಂಪರ್ಕದ ವಿವರಗಳು: 

ವಿಳಾಸ: 

ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಠ
ಎನ್.ಜಿ.ಆರ್.ಬಡಾವಣೆ, ರೂಪೇನ ಅಗ್ರಹಾರ
ಹೊಸೂರು ಮುಖ್ಯ ರಸ್ತೆಯ ಪಕ್ಕ
ಮಡಿವಾಳ ಅಂಚೆ, ಬೆಂಗಳೂರು-560 068.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀಮತಿ ಶಾರದಮ್ಮ (ದಿವಂಗತ ನಾರಾಯಣ ರೆಡ್ಡಿಯವರ ಧರ್ಮಪತ್ನಿ) / ಶ್ರೀ ಗೋಪಾಲ ರೆಡ್ಡಿ / ಶ್ರೀಮತಿ ಕಮಲಮ್ಮ / ಶ್ರೀ.ಸಂಪಂಗಿ (ರಾಮು) / ಶ್ರೀ.ವೆಂಕಟರಾಜು

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

080 - 25732522 / 080 - 22226465 / 9880133408 / 9945531187

ಈ ಮೇಲ್ ವಿಳಾಸ: 

venkataraju71@gmail.com
 
ಮಾರ್ಗಸೂಚಿ: 

ರೂಪೇನ ಅಗ್ರಹಾರದ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಈ ದೇವಾಲಯ ಸಿಗುತ್ತದೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ

ಬಾಲಾಜಿ ವಸಂತ್ ತಾಲೀಮ್ (ಬಿ.ವಿ.ತಾಲೀಮ್ - ಶಿರಡಿ ಸಾಯಿಬಾಬಾ ವಿಗ್ರಹ ಕೆತ್ತಿದ ಶಿಲ್ಪಿ)  - ಕೃಪೆ - ಸಾಯಿಅಮೃತಧಾರಾ.ಕಾಂ



ಬಿ.ವಿ.ತಾಲೀಮ್ ರವರು ಸಹಸ್ರಾರು ಭಕ್ತರು ಶಿರಡಿಯ ಸಮಾಧಿ ಮಂದಿರದಲ್ಲಿ ದರ್ಶನ ಪಡೆಯುತ್ತಿರುವ ಸಾಯಿಬಾಬಾ ವಿಗ್ರಹವನ್ನು ಕೆತ್ತಿದ ಶಿಲ್ಪಿ. ಆಗ ಶಿರಡಿಯ ಮಾರುಕಟ್ಟೆಯಲ್ಲಿದ್ದ ಸಾಯಿಬಾಬಾರವರ ಭಾವಚಿತ್ರಗಳಿಂದ ಅವರ ವಿಗ್ರಹ ಕೆತ್ತುವುದು ಕಷ್ಟವಾಗಿತ್ತು. ಏಕೆಂದರೆ ಮುಖವನ್ನು ಭಾವಚಿತ್ರಗಳನ್ನು ನೋಡಿ ಕೆತ್ತುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.  ಒಂದೊಂದು ಭಾವಚಿತ್ರಗಳಲ್ಲಿ ಸಾಯಿಬಾಬಾರವರು ಒಂದೊಂದು ರೀತಿ ಕಂಡು ಬರುತ್ತಿದ್ದರು. ಇದರಿಂದ ಬಿ.ವಿ.ತಾಲೀಮ್ ರವರಿಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಆದ್ದರಿಂದ ಬಿ.ವಿ.ತಾಲೀಮ್ ರವರು ಸಾಯಿಬಾಬಾರವರನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಅನೇಕ ಪುಸ್ತಕಗಳಲ್ಲಿ ಸಾಯಿಬಾಬಾರವರು ಬಿ.ವಿ.ತಾಲೀಮ್ ರವರ ಕನಸಿನಲ್ಲಿ ದಿವ್ಯ ದರ್ಶನ ನೀಡಿ ಅವರಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಲಾಗಿದೆ. ಆದರೆ, ಬಿ.ವಿ.ತಾಲೀಮ್ ರವರ ಮೊಮ್ಮಗನ ಪ್ರಕಾರ ಸಾಯಿಬಾಬಾರವರು ಒಂದು ದಿನ ಬೆಳಗಿನ ಸಮಯದಲ್ಲಿ ದಿವ್ಯ ಜ್ಯೋತಿಯ ಹಾಗೆ ದರ್ಶನ ನೀಡಿದರು ಮತ್ತು ಆ ಬೆಳಕಿನಲ್ಲಿ ಸಾಯಿಬಾಬಾರವರ ವದನವು ಬಹಳ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಸಾಯಿಬಾಬಾರವರ ದಯೆಯಿಂದ ಮತ್ತು ಮಾರ್ಗದರ್ಶನದಿಂದ ವಿಗ್ರಹದ ಮುಖವನ್ನು ಕೆತ್ತುವುದು ಬಹಳ ಸುಲಭವಾಯಿತು ಎಂದು ತಿಳಿದು ಬರುತ್ತದೆ.  ಅಷ್ಟೇ ಅಲ್ಲದೆ, ಸಾಯಿಬಾಬಾರವರು ತಾಲೀಮ್ ರವರಿಗೆ "ನೀನು ನನ್ನ ವಿಗ್ರಹ ಕೆತ್ತನೆಯ ಕೆಲಸವನ್ನು ಬೇಗನೆ ಮಾಡಿ ಮುಗಿಸು ಮತ್ತು ಮುಂದೆ ನೀನು ಬೇರೆ ಯಾವ ವಿಗ್ರಹವನ್ನು ಕೆತ್ತುವುದಿಲ್ಲ" ಎಂದು ತಿಳಿಸಿದರೆಂದು ಹೇಳಲಾಗಿದೆ. ಬಾಬಾರವರ ಮಾತುಗಳು ಅಕ್ಷರಶಃ ನಿಜವಾಯಿತು.


 

ಸಾಯಿಬಾಬಾರವರ ಸುಂದರ ವಿಗ್ರಹವನ್ನು ಇಟಾಲಿಯನ್ ಮಾರ್ಬಲ್ ನಿಂದ ಕೆತ್ತಲಾಗಿದೆ. ಇದರ ವೀಡಿಯೋ ನೋಡಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:



ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಸಾಯಿ ಮಹಾ ಭಕ್ತ - ಶ್ರೀ ನರಸಿಂಹ ಸ್ವಾಮೀಜಿ (೧೮೭೪ ರಿಂದ ೧೯೫೬)  - ಕೃಪೆ - ಸಾಯಿಅಮೃತಧಾರಾ.ಕಾಂ



ಶ್ರೀ ನರಸಿಂಹ ಸ್ವಾಮೀಜಿಯವರು ೨೧ನೇ ಆಗಸ್ಟ್ ೧೮೭೪ ರಂದು ತಮಿಳುನಾಡಿನ ಭಾವಾನಿಯಲ್ಲಿ ಜನಿಸಿದರು. ಇವರ ತಂದೆ ಶ್ರೀ ವೆಂಕಟಗಿರಿ ಅಯ್ಯರ್ ಮತ್ತು ಇವರ ತಾಯಿ ಶ್ರೀಮತಿ ಅಂಗಾಚಿ ಅಮ್ಮಾಳ್.

ಶ್ರೀ ನರಸಿಂಹ ಸ್ವಾಮೀಜಿಯವರು ತಮ್ಮ ಸೇಲಂನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ೧೯೦೦ ರಲ್ಲಿ ಮದರಾಸಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಸೇಲಂ ನಗರಸಭೆಯ ಅಧ್ಯಕ್ಷರಾದರು. ಮದ್ರಾಸ್ ವಿಧಾನಸಭೆಯ ಸದಸ್ಯರಾದರು. ಒಳ್ಳೆಯ ಹೆಸರು, ಕೀರ್ತಿ ಹಾಗೂ ಹಣವನ್ನು ಗಳಿಸಿದರು.

ಕಾಲಾನಂತರದಲ್ಲಿ ನರಸಿಂಹ ಅಯ್ಯರ್ ರವರು ಶ್ರೀಮತಿ ಸೀತಾಲಕ್ಷ್ಮಿಯವರನ್ನು ವಿವಾಹವಾಗಿ ೨ ಗಂಡು ಮಕ್ಕಳು ಹಾಗೂ ೩ ಹೆಣ್ಣು ಮಕ್ಕಳನ್ನು ಪಡೆದರು.

೧೯೨೧ ರಲ್ಲಿ ಇವರ ಕುಟುಂಬದಲ್ಲಿ ಒಂದು ದೊಡ್ಡ ಬಿರುಗಾಳಿಯೇ ಎದ್ದಿತು. ಇವರ ಇಬ್ಬರು ಮಕ್ಕಳು ಅಕಾಲ ಮರಣಕ್ಕೆ ತುತ್ತಾದರು. ಇದರಿಂದ ನರಸಿಂಹ ಅಯ್ಯರ್ ತುಂಬಾ ಧ್ರುತಿಗೆಟ್ಟರು. ಇವರು ತಮ್ಮ ಕಾನೂನು ವೃತ್ತಿಗೆ ಹಾಗೂ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು. ಇದು ಇವರ ಜೀವನದಲ್ಲಿ ಭಾರಿ ಬದಲಾವಣೆಯನ್ನೇ ತಂದಿತೆಂದು ಹೇಳಬಹುದು. ತಮ್ಮ ಮನೆಯ ಎಲ್ಲ ಜವಾಬ್ಧಾರಿಗಳನ್ನು ಮುಗಿಸಿ ೧೯೨೫ ರಲ್ಲಿ ತಮ್ಮ ಲೌಕಿಕ ಜೀವನಕ್ಕೆ ವಿದಾಯ ಹೇಳಿದರು.

೧೯೨೫ ರಲ್ಲಿ ನರಸಿಂಹ ಅಯ್ಯರ್ ರವರು ಶ್ರೀ ರಮಣ ಮಹರ್ಷಿಗಳ ಜೊತೆಗೂಡಿದರು. ರಮಣ ಮಹರ್ಷಿಗಳ ಆದೇಶದಂತೆ ಒಂದು ಗುಹೆಯಲ್ಲಿ ೩ ವರ್ಷಗಳ ಕಾಲ ತಪಸ್ಸನ್ನಾಚರಿಸಿದರು. ಇದರಿಂದ ಅವರ ಅಂತಚಕ್ಷುಗಳು ತೆರೆದವು.  ರಮಣ ಮಹರ್ಷಿಗಳ ಭಕ್ತರೆಲ್ಲರಿಂದ ಮಾಹಿತಿ ಸಂಗ್ರಹಿಸಿ ರಮಣ ಮಹರ್ಷಿಗಳ ಜೀವನ ಚರಿತ್ರೆಯನ್ನು ಬರೆದರು.

೧೯೨೮ ರಲ್ಲಿ ರಮಣ ಮಹರ್ಷಿಗಳ ಜೀವನ ಚರಿತ್ರೆಯನ್ನು ಹಿಡಿದುಕೊಂಡು ಅವರ ಬಳಿಗೆ ಹೋದರು. ಆದರೆ ಅವರ ಮನಸ್ಸಿಗೆ ಶಾಂತಿ, ಸಮಾಧಾನ ದೊರೆಯಲಿಲ್ಲ. ರಮಣ ಮಹರ್ಷಿಗಳು "ನಾನು ನಿನ್ನ ಗುರುವಲ್ಲ. ನೀನು ಪಶ್ಚಿಮ ದಿಕ್ಕಿನಲ್ಲಿ ಹೊರಟು ನಿನ್ನ ಗುರುವನ್ನು ಹುಡುಕಿಕೋ" ಎಂದು ಹೇಳಿದರು.

ಅಲ್ಲಿಂದ ಹೊರಟು ನರಸಿಂಹ ಅಯ್ಯರ್ ರವರು ಹುಬ್ಬಳ್ಳಿಗೆ ಬಂದು ಅಲ್ಲಿ ಸಿದ್ದಾರೂಢ ಮಠದಲ್ಲಿ ಸ್ವಾಮೀಜಿಯವರಿಂದ ಸಂಸ್ಕೃತವನ್ನು ೬ ತಿಂಗಳ ಕಾಲ ಕಲಿತರು. ಅಲ್ಲಿಂದ ಪಂಡರಾಪುರಕ್ಕೆ ತೆರಳಿ ಅಲ್ಲಿ ೧೮ ತಿಂಗಳ ಕಾಲ ಇದ್ದು ಭಜನೆಯನ್ನು ಕಲಿತರು. ಹುಬ್ಬಳ್ಳಿಯಿಂದ ಖೆಡೆಗಾವ್ ಗೆ ತೆರಳಿ ಅಲ್ಲಿ ನಾರಾಯಣ ಮಹಾರಾಜ್ ರನ್ನು ಭೇಟಿ ಮಾಡಿದರು. ಅವರು ನರಸಿಂಹ ಅಯ್ಯರ್ ರವರಿಗೆ ಮೆಹರ್ ಬಾಬಾ ಬಳಿ ಹೋಗಲು ಹೇಳಿದರು. ಆದರೆ, ಮೆಹರ್ ಬಾಬಾರವರು ಜೀವನ ಪೂರ್ತಿ ಮೌನವ್ರತ ಕೈಗೊಂಡಿದ್ದರು. ಮೆಹರ್ ಬಾಬಾರವರು ಇವರನ್ನು ತಮ್ಮ ಗುರುಗಳಾದ ಸಾಕೂರಿ ಆಶ್ರಮದ ಉಪಾಸಿನಿ ಬಾಬಾರವರ ಬಳಿಗೆ ಕಳುಹಿಸಿದರು. ಇಷ್ಟೆಲ್ಲಾ ಆಗುವ ಹೊತ್ತಿಗೆ ೧೯೩೩ ವರ್ಷಕ್ಕೆ ಕಾಲಿಟ್ಟಿತ್ತು. ಆದರು ನರಸಿಂಹ ಅಯ್ಯರ್ ರವರಿಗೆ ಮನಶ್ಯಾಂತಿಯಾಗಲಿ ಅಥವಾ ಅವರು ಹುಡುಕುತ್ತಿದ್ದ ಗುರುವಾಗಲಿ ದೊರೆಯಲಿಲ್ಲ.

ನರಸಿಂಹ ಅಯ್ಯರ್ ರವರು ಉಪಾಸಿನಿ ಮಹಾರಾಜ್ ರವರನ್ನು ಭೇಟಿ ಮಾಡಿದುದು ಅವರ ಜೀವನದಲ್ಲಿ ಮಹತ್ತರ ಘಟ್ಟವಾಗಿ ಪರಿಣಮಿಸಿತು. ೩೦ ತಿಂಗಳ ಕಾಲ ಉಪಾಸಿನಿಯವರ ಬಳಿ ಇದ್ದರು. ಆದರೂ ಮನಶ್ಯಾಂತಿಯಾಗಲಿ ಅಥವಾ ಅವರು ಹುಡುಕುತ್ತಿದ್ದ ಗುರುವಾಗಲಿ ದೊರೆಯಲಿಲ್ಲ. ಆಗ ಒಂದು ಧೃಡ ನಿರ್ಧಾರ ಕೈಗೊಂಡು ೨೯ನೆ ಆಗಸ್ಟ್ ೧೯೩೬ ರ "ಶ್ರಾವಣ ಪೂರ್ಣಿಮೆ" ಯಂದು ಉಪಾಸಿನಿ ಮಹಾರಾಜ್ ರ ಆಶ್ರಮವನ್ನು ಬಿಟ್ಟು ಮದ್ರಾಸ್ ಗೆ ತೆರಳಿ ತಮ್ಮ ಮಗನ ಬಳಿ ಇರಲು ನಿರ್ಧರಿಸಿದರು. ಹಾಗೆ ನಿರ್ಧರಿಸಿ ಸಾಕೂರಿ ಆಶ್ರಮ ಬಿಟ್ಟು ತೆರಳುತ್ತಿರುವಾಗ ಒಬ್ಬ ವೃದ್ದರು ಇವರನ್ನು ಶಿರಡಿಗೆ ತೆರಳಿ ಸಾಯಿಬಾಬಾರವರ ಸಮಾಧಿಯನ್ನು ಸಂದರ್ಶಿಸಲು ಹೇಳಿದರು. ಅವರ ಸಲಹೆಯಂತೆ ನರಸಿಂಹ ಅಯ್ಯರ್ ರವರು ಸಾಯಿಬಾಬಾ ಸಮಾಧಿಯ ಬಳಿ ಸುಮಾರು ೧೧.೦೦ ಘಂಟೆಗೆ ತೆರಳಿದರು. ಅಲ್ಲಿ ಸಾಯಿಬಾಬಾರವರು ಸಮಾಧಿಯಿಂದಲೇ ನರಸಿಂಹ ಅಯ್ಯರ್ ರವರ ಬಳಿ ಮಾತನಾಡಿದರೆಂದು ತಿಳಿದುಬಂದಿದೆ. ಸಾಯಿಬಾಬಾರವರು ನರಸಿಂಹ ಸ್ವಾಮೀಜಿಯವರಲ್ಲಿ ಅಂತರಂಗದಲ್ಲಿ ತಮ್ಮ ದಿವ್ಯವಾಣಿಯಿಂದ ಬೆಳಕನ್ನು ಚೆಲ್ಲಿ ಒಂದು ಹೊಸ ಮಾರ್ಪಾಡನ್ನೇ ಮಾಡಿದರು. ಕೋಣೆಗೆ ಶಿರಡಿಯಲ್ಲಿ ಸಾಯಿಬಾಬಾರವರಲ್ಲಿ ನರಸಿಂಹ ಸ್ವಾಮೀಜಿಯವರು ತಮ್ಮ ಸದ್ಗುರುಗಳನ್ನು ಕಂಡುಕೊಂಡರು. ೧೯೩೯ ರಲ್ಲಿ ಶಿರಡಿಯಿಂದ ಮದ್ರಾಸ್ ಗೆ ವಾಪಸ್ ಬಂದು ಆಲ್ ಇಂಡಿಯಾ ಸಾಯಿ ಸಮಾಜ್ (ಅಖಿಲ ಭಾರತ ಸಾಯಿ ಸಮಾಜ) ಎಂಬ ಸಂಸ್ಥೆಯನ್ನು ಮದ್ರಾಸ್ ನ ಮೈಲಾಪುರ್ ನಲ್ಲಿ ಸ್ಥಾಪಿಸಿದರು. ಅಲ್ಲಿಂದ ಮುಂದೆ ಹಗಲು ರಾತ್ರಿ ಸಾಯಿ ಪ್ರಚಾರವನ್ನು ದೇಶದ ಉದ್ದಗಲಕ್ಕೂ ಕೈಗೊಂಡು ಸಾಯಿಬಾಬಾರವರ ಹೆಸರನ್ನು ಇಡೀ ಭಾರತದ ತುಂಬಾ ಹರಡಿದರು. ಈ ದಿನ ನಮಗೆ ಸಾಯಿಬಾಬಾರವರ ಹೆಸರೇನಾದರೂ ತಿಳಿದಿದ್ದರೆ ಅದು ನರಸಿಂಹ ಸ್ವಾಮೀಜಿಯವರ ಪರಿಶ್ರಮದಿಂದ ಎಂದೇ ಹೇಳಬೇಕಾಗುತ್ತದೆ. ಹೀಗೆ ೨೦ ವರ್ಷಗಳ ಕಾಲ ಸಾಯಿ ಪ್ರಚಾರವನ್ನು ನರಸಿಂಹ ಸ್ವಾಮೀಜಿಯವರು ಮಾಡಿದ್ದೇ ಅಲ್ಲದೆ ಸಾಯಿಬಾಬಾರವರ ಬಗ್ಗೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ, ಸಾಯಿ ಸಹಸ್ರನಾಮ ವನ್ನು ಕೂಡ ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಶ್ರೀ ನರಸಿಂಹ ಸ್ವಾಮೀಜಿಯವರು ೧೯ನೇ ಅಕ್ಟೋಬರ್ ೧೯೫೬ ರಂದು ಮಹಾಸಮಾಧಿ ಹೊಂದಿದರು. ಆದರೆ ಈಗಲೂ ತಮ್ಮ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಶ್ರೀ ನರಸಿಂಹ ಸ್ವಾಮೀಜಿಯವರ ಪುಸ್ತಕಗಳನ್ನು ಸಾಯಿ ಭಕ್ತರು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಕೆಳಕಂಡ ಜೋಡಣೆಯನ್ನು ಕ್ಲಿಕ್ ಮಾಡಿ:

http://www.saileelas.org/books.htm

Tuesday, January 19, 2010

ಸಾಯಿ ಮಹಾ ಭಕ್ತ - ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿ (೧೫-೦೪-೧೯೦೬ ಇಂದ ೧೪.೦೧.೧೯೮೦) - ಕೃಪೆ - ಸಾಯಿಅಮೃತಧಾರಾ.ಕಾಂ


ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರು ತಮಿಳುನಾಡಿನ ತಿರುಚಿ ಜಿಲ್ಲೆಯ ಕುಳಿತಲೈ ತಾಲ್ಲೂಕಿನ ಪೊಯ್ಯಮನಿ ಎಂಬ ಗ್ರಾಮದಲ್ಲಿ ೧೫.೦೪.೧೯೦೬ ರಲ್ಲಿ ಜನಿಸಿದರು. ಶ್ರೀ.ಪುಡುಕ್ಕುಡಿ ಡಿ ವೆಂಕಟರಾಮ ಅಯ್ಯರ್ ಹಾಗೂ ಶ್ರೀಮತಿ.ಲಕ್ಷ್ಮೀ ಅಮ್ಮಾಳ್ ರವರ ೫ನೇ ಮಗನಾಗಿ ಇವರು ಜನಿಸಿದರು. ಚಿಕ್ಕಂದಿನಿಂದಲೇ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ದೈವಿಕ ಶಕ್ತಿಯನ್ನು ಹೊಂದಿದ್ದರು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ನಿಸರ್ಗ ಪ್ರೇಮಿಯಾಗಿದ್ದರಿಂದ ಅದು ಅವರ ಆಧ್ಯಾತ್ಮಿಕ ಬೆಳವಣಿಗೆಗೆ ಇನ್ನು ಹೆಚ್ಚು ಸಹಕಾರಿಯಾಯಿತು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಭಾರತದಾದ್ಯಂತ ಸಾಧು ಸಂತರನ್ನು ಭೇಟಿಯಾಗುತ್ತಿದ್ದರು, ದೇಗುಲಗಳ ದರ್ಶನ ಮಾಡುತ್ತಿದ್ದರು, ಧರ್ಮ, ಅಧ್ಯಾತ್ಮಿಕ ಮತ್ತು ಸಂತರ ಬಗ್ಗೆ ಬರೆದ ಮಹಾನ್ ಗ್ರಂಥಗಳನ್ನು ಓದುತ್ತಿದ್ದರು.

ಕಂಚಿ ಶೃಂಗೇರಿ ಪೀಠ ಹಾಗೂ ಕಂಚಿ ಜಗದ್ಗುರುಗಳು ಶ್ರೀ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸಹೋದರನ ಜೊತೆಯಲ್ಲಿ ಪುಣೆಯಲ್ಲಿದ್ದಾಗ ಒಂದು ಗುಹೆಯಲ್ಲಿ ೪೮ ದಿನಗಳ ಕಾಲ ವಾಸ ಮಾಡುತ್ತಿದ್ದು ೪೬ನೇ ದಿವಸ ಇವರಿಗೆ ದತ್ತಾತ್ರೇಯ ದರ್ಶನನೀಡಿ ಲೋಕ ಕಲ್ಯಾಣ ಕಾರ್ಯ ಮಾಡುವಂತೆ ಪ್ರೇರೇಪಣೆ ನೀಡಿದರೆಂದು ತಿಳಿದುಬಂದಿದೆ.           

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಸದಾಕಾಲ ಬಹಳ ಚುರುಕಾಗಿ ಮತ್ತು ಉತ್ಸಾಹದಿಂದ ಓಡಾಡುತ್ತಿದ್ದರು ಮತ್ತು ಬಹಳ ಪರಿಪೂರ್ಣ ಜೀವನವನ್ನು ನಡೆಸಿದರು. ಇವರು ದೇಶದ ಉದ್ದಗಲಕ್ಕೂ ಸಂಚರಿಸಿ ಶಿರಡಿ ಸಾಯಿಬಾಬಾರವರ ಹಾಗೂ ಅವರ ತತ್ವವನ್ನು ಪ್ರಚಾರ ಮಾಡಿದರು. ಇವರು ದಿನದ ೨೪ ಘಂಟೆಗಳೂ ಸಾಯಿಬಾಬಾರವರೊಡನೆ ಏಕತಾನತೆಯಿಂದ ಇದ್ದರು ಹಾಗೂ ಅವರ ಕಾರ್ಯಗಳೆಲ್ಲವೂ ಅವರಿಂದ ಪ್ರೇರೇಪಿತವಾಗಿದ್ದವು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರ ಭಕ್ತರೆಲ್ಲರಿಗೂ ಸ್ವಾಮೀಜಿಯವರು ಆಧ್ಯಾತ್ಮಿಕವಾಗಿ ಹಾಗೂ ಪ್ರಾಪಂಚಿಕವಾಗಿ ಅನುಗ್ರಹಿಸಿದ್ದಾರೆ. ಇವರ ಅನುಗ್ರಹ ಪಡೆಯದವರೇ ಇಲ್ಲವೆಂದು ನಾವು ಹೇಳಬಹುದು. ತಮ್ಮ ಸಮಾಧಿಯ ನಂತರವೂ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಮ್ಮ ಭಕ್ತರನ್ನು ಅನುಗ್ರಹಿಸುತ್ತಲೇ ಇದ್ದಾರೆ. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಮ್ಮ ಮರಣದ ದಿನವನ್ನು ಮೊದಲೇ ನಿಗದಿ ಮಾಡಿಕೊಂಡಿದ್ದಂತೆ ತೋರುತ್ತದೆ. ಏಕೆಂದರೆ, ಅವರು ಉತ್ತರಾಯಣಕ್ಕಾಗಿ ಕಾಯುತ್ತಿದ್ದರು. ೧೪ನೇ ಜನವರಿ ೧೯೮೦ ರಂದು ತಮ್ಮ ದೇಹತ್ಯಾಗ ಮಾಡಿ ಸಾಯಿಬಾಬಾರವರೊಡನೆ ಲೀನವಾದರು. ತಮ್ಮ ಭಕ್ತರೊಡನೆ ವಿಷ್ಣು ಸಹಸ್ರನಾಮ ಹಾಗೂ ಓಂ ನಮೋ ನಾರಾಯಣಾಯ ಮಂತ್ರಗಳನ್ನು ಪಠನ ಮಾಡುತ್ತಾ ತಮ್ಮ ಕೊನೆಯ ಘಳಿಗೆಯವರೆಗೂ ಎಚ್ಚರವಾಗಿದ್ದು ಸುಮಾರು ರಾತ್ರಿ ೧೦.೪೦ ರ ವೇಳೆಗೆ ಇಹಲೋಕವನ್ನು ತ್ಯಜಿಸಿದರು. ಮಾರನೆಯ ದಿನ ಅವರ ಅಂತ್ಯ ಸಂಸ್ಕಾರವನ್ನು ವೇದಘೋಷಗಳ ನಡುವೆ ಅತ್ಯಂತ ಶ್ರದ್ದೆಯಿಂದ ಭಕ್ತರೆಲ್ಲ ಸೇರಿ ನಡೆಸಿಕೊಟ್ಟರು.

ಈಗಲೂ ಅವರ ಭಕ್ತರಿಗೆ ಆಗಾಗ್ಗೆ ಸ್ವಪ್ನದಲ್ಲಿ ದರ್ಶನ ನೀಡುತ್ತ, ಅವರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತ ಇದ್ದರೆಂದು ಸ್ವತಃ ಅವರ ಭಕ್ತರೆ ಹೇಳುತ್ತಾರೆ. ಅವರ ಭಕ್ತರ ಮನೆಯಲ್ಲಿನ ಅವರ ಚಿತ್ರಪಟದಿಂದ ಮಾರ್ಗದರ್ಶನ ನೀಡುವಂತೆ ಕಾಣುವ ಅವರ ಕೈಗಳು ಮತ್ತು ಅತ್ಯಂತ ಪ್ರೀತಿಯನ್ನು ಸೂಸುವ ಅವರ ಕಣ್ಣುಗಳನ್ನು ನೋಡಿದಾಗ ಶಿರಡಿ ಸಾಯಿಬಾಬಾರವರ " ನಾನು ಇಲ್ಲಿರುವಾಗ ನಿಮಗೇಕೆ ಭಯ" ಎಂಬ ಉಕ್ತಿ ನೆನಪಿಗೆ ಬರುತ್ತದೆ.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಿರುವಣ್ಣಾಮಲೈ ಗೆ ತೆರಳಿ ಶ್ರೀ ರಾಮನ ಮಹರ್ಷಿಗಳನ್ನು ಮತ್ತು ಶ್ರೀ ಶೇಷಾದ್ರಿ ಸ್ವಾಮಿಗಳನ್ನು ಭೇಟಿ ಮಾಡಿದ್ದರು. ಶ್ರೀ ಶೇಷಾದ್ರಿ ಸ್ವಾಮಿಗಳು ಇವರಿಗೆ ಮೂರು ಕಲ್ಲುಗಳನ್ನು ಕೊಟ್ಟು ಅದನ್ನು ತಿನ್ನಲು ಹೇಳಿದರು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಅದನ್ನು "ಸತ್ವ, ರಾಜಸ ಹಾಗೂ ತಾಮಸ" ಎಂಬ ಮೂರು ಗುಣಗಳೆಂದು ಅರ್ಥೈಸಿದ್ದೆ ಅಲ್ಲದೆ ನಾವುಗಳು ಗುಣಾತೀತರಾಗಲು ಪ್ರಯತ್ನಿಸಬೇಕು ಎಂದು ಹೇಳುತ್ತಾರೆ.

೧೯೨೭ ರಲ್ಲಿ ಇವರು ಊಟಿಯ ಬಳಿಯಿರುವ ಖೇಡ್ ಗಾವ್ ನ ಶ್ರೀ ನಾರಾಯಣ ಮಹಾರಾಜರನ್ನು ಭೇಟಿ ಮಾಡಿ ಅವರಿಂದ ದತ್ತ ಮಂತ್ರದ ಉಪದೇಶವನ್ನು ಪಡೆದರು. ಅದೇ ವರ್ಷದಲ್ಲಿ ತಮ್ಮ ತಾಯಿಯ ಸಂಬಂಧಿಯಾದ ಪಾರ್ವತಿ ಎಂಬುವರನ್ನು ಮನೆಯವರ ಒತ್ತಾಯದ ಮೇರೆಗೆ ವಿವಾಹವಾದರು. ಆದರೆ ಕಮಲದ ಮೇಲಿನ ನೀರಿನಂತೆ ಯಾವುದೇ ಉತ್ಸಾಹವಿಲ್ಲದೆ ಜೀವನ ನಡೆಸಿದರು. ಅನೇಕ ವರ್ಷಗಳ ಸಂಸಾರದ ನಂತರ ಸನ್ಯಾಸವನ್ನು ಸ್ವೀಕರಿಸಿದರು ಮತ್ತು ಅವರ ಮನೆಯವರಿಗೆಲ್ಲ ದೊಡ್ಡ ಆಘಾತವನ್ನೇ ನೀಡಿದರು. ಅವರ ಧರ್ಮಪತ್ನಿಯವರು ಒಂಟಿ ಜೀವನ ನಡೆಸಿ ಪುನಃ ಸ್ವಾಮೀಜಿಯವರನ್ನು ಭೇಟಿ ಮಾಡದೆ ೧೯೭೯ರಲ್ಲಿ ಮರಣ ಹೊಂದಿದರು.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ೧೯೪೩-೪೪ ರಲ್ಲಿ ತಮ್ಮ ಗುರುವನ್ನು ಶ್ರೀ ನರಸಿಂಹ ಸ್ವಾಮೀಜಿಯವರಲ್ಲಿ ಕಂಡು ಅವರ ಶಿಷ್ಯರಾದರು ಮತ್ತು ತಮ್ಮ ಗುರುಗಳಿಗೆ ಸಂಪೂರ್ಣ ಶರಣಾಗತರಾಗಿ ಅವರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.

೧೯೫೨ ರಲ್ಲಿ ಗುರುಗಳು ಶ್ರೀ ರಾಧಾಕೃಷ್ಣ ಸ್ವಾಮೀಜಿಯವರನ್ನು ಸಾಯಿ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಕಳುಹಿಸಿದರು. ೧೯೫೩ ರಲ್ಲಿ ಶ್ರೀ ನರಸಿಂಹ ಸ್ವಾಮೀಜಿಯವರು ಇವರಿಗೆ "ಸಾಯಿಪಾದಾನಂದ" ಎಂದು ಬಿರುದು ನೀಡಿ ಗೌರವಿಸಿದರು. ೧೯.೧೦.೧೯೫೬ ರ ಹುಣ್ಣಿಮೆಯ ದಿವಸ ಶ್ರೀ ನರಸಿಂಹ ಸ್ವಾಮೀಜಿಯವರು ಸಮಾಧಿ ಹೊಂದಿದರು. ಅದಕ್ಕೆ ಸ್ವಲ್ಪ ಸಮಯದ ಮುಂಚೆ ತಮ್ಮ ಎಲ್ಲ ಆಧ್ಯಾತ್ಮಿಕ ಶಕ್ತಿಗಳನ್ನು ತಮ್ಮ ಪ್ರಿಯ ಶಿಷ್ಯರಾದ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರಿಗೆ ಧಾರೆಯೆರೆದರು.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಮ್ಮ ಸತತ ಪರಿಶ್ರಮದಿಂದ ಸಾಯಿ ಆಧ್ಯಾತ್ಮಿಕ ಕೇಂದ್ರವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿ ೧೭ ನೇ ಜೂನ್ ೧೯೬೫ ರಂದು ಪ್ರಾರಂಭಿಸಿದರು.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ೪ ಪ್ರಮುಖ ಸೂತ್ರಗಳನ್ನು ತಮ್ಮ ಭಕ್ತರಿಗೆ ಉಪದೇಶಿಸಿದ್ದರೆ. ಅವು ಯಾವುವೆಂದರೆ  ೧. ಪ್ರೀತಿ ೨. ಗುರುವಿನಲ್ಲಿ ಭಕ್ತಿ ೩. ದೇವರಲ್ಲಿ ಭಕ್ತಿ ೪. ಸತ್ಸಂಗ.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಒಂದು ಸುಂದರವಾದ ವಿಶ್ವ ಶಾಂತಿ ಪ್ರಾರ್ಥನೆಯನ್ನು ಭಕ್ತರಿಗೆ ಹೇಳಿಕೊಟ್ಟಿದ್ದಾರೆ. ಅದು ಈ ಕೆಳಕಂಡಂತೆ ಇದೆ:

ದುಷ್ಟರು ಶಿಷ್ಟರಾಗಲಿ
ಶಿಷ್ಟರು ಶಾಂತಿಯನ್ನು ಪಡೆಯಲಿ
ಶಾಂತರಾದವರು ಎಲ್ಲ ಬಂಧಗಳಿಂದ ಮುಕ್ತರಾಗಲಿ
ಬಂಧಮುಕ್ತರಾದವರು ಇತರರನ್ನು ಉದ್ದರಿಸಲಿ
ಎಲ್ಲರು ಸಂತೋಷವಾಗಿರಲಿ
ಎಲ್ಲರು ಆರೋಗ್ಯವಂತರಾಗಿರಲಿ
ಎಲ್ಲರು ಅದೃಷ್ಟವಂತರಾಗಿರಲಿ
ಯಾರೂ ಕಷ್ಟಕ್ಕೆ ಒಳಗಾಗದಿರಲಿ
ಎಲ್ಲರ ತೊಂದರೆಗಳು ಪರಿಹಾರವಾಗಲಿ
ಎಲ್ಲರಿಗೂ ಒಳ್ಳೆಯ ಅದೃಷ್ಟವು ಪ್ರಾಪ್ತವಾಗಲಿ
ಎಲ್ಲರಿಗೂ ತಮ್ಮ ಆಶಯಗಳು ಫಲಿಸಲಿ
ಎಲ್ಲರೂ ಎಲ್ಲೆಡೆಯಲ್ಲೂ ಹರ್ಷವಾಗಿರಲಿ