Wednesday, January 20, 2010

ಸಾಯಿ ಮಹಾ ಭಕ್ತ - ಶ್ರೀ ನರಸಿಂಹ ಸ್ವಾಮೀಜಿ (೧೮೭೪ ರಿಂದ ೧೯೫೬)  - ಕೃಪೆ - ಸಾಯಿಅಮೃತಧಾರಾ.ಕಾಂ



ಶ್ರೀ ನರಸಿಂಹ ಸ್ವಾಮೀಜಿಯವರು ೨೧ನೇ ಆಗಸ್ಟ್ ೧೮೭೪ ರಂದು ತಮಿಳುನಾಡಿನ ಭಾವಾನಿಯಲ್ಲಿ ಜನಿಸಿದರು. ಇವರ ತಂದೆ ಶ್ರೀ ವೆಂಕಟಗಿರಿ ಅಯ್ಯರ್ ಮತ್ತು ಇವರ ತಾಯಿ ಶ್ರೀಮತಿ ಅಂಗಾಚಿ ಅಮ್ಮಾಳ್.

ಶ್ರೀ ನರಸಿಂಹ ಸ್ವಾಮೀಜಿಯವರು ತಮ್ಮ ಸೇಲಂನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ೧೯೦೦ ರಲ್ಲಿ ಮದರಾಸಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಸೇಲಂ ನಗರಸಭೆಯ ಅಧ್ಯಕ್ಷರಾದರು. ಮದ್ರಾಸ್ ವಿಧಾನಸಭೆಯ ಸದಸ್ಯರಾದರು. ಒಳ್ಳೆಯ ಹೆಸರು, ಕೀರ್ತಿ ಹಾಗೂ ಹಣವನ್ನು ಗಳಿಸಿದರು.

ಕಾಲಾನಂತರದಲ್ಲಿ ನರಸಿಂಹ ಅಯ್ಯರ್ ರವರು ಶ್ರೀಮತಿ ಸೀತಾಲಕ್ಷ್ಮಿಯವರನ್ನು ವಿವಾಹವಾಗಿ ೨ ಗಂಡು ಮಕ್ಕಳು ಹಾಗೂ ೩ ಹೆಣ್ಣು ಮಕ್ಕಳನ್ನು ಪಡೆದರು.

೧೯೨೧ ರಲ್ಲಿ ಇವರ ಕುಟುಂಬದಲ್ಲಿ ಒಂದು ದೊಡ್ಡ ಬಿರುಗಾಳಿಯೇ ಎದ್ದಿತು. ಇವರ ಇಬ್ಬರು ಮಕ್ಕಳು ಅಕಾಲ ಮರಣಕ್ಕೆ ತುತ್ತಾದರು. ಇದರಿಂದ ನರಸಿಂಹ ಅಯ್ಯರ್ ತುಂಬಾ ಧ್ರುತಿಗೆಟ್ಟರು. ಇವರು ತಮ್ಮ ಕಾನೂನು ವೃತ್ತಿಗೆ ಹಾಗೂ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು. ಇದು ಇವರ ಜೀವನದಲ್ಲಿ ಭಾರಿ ಬದಲಾವಣೆಯನ್ನೇ ತಂದಿತೆಂದು ಹೇಳಬಹುದು. ತಮ್ಮ ಮನೆಯ ಎಲ್ಲ ಜವಾಬ್ಧಾರಿಗಳನ್ನು ಮುಗಿಸಿ ೧೯೨೫ ರಲ್ಲಿ ತಮ್ಮ ಲೌಕಿಕ ಜೀವನಕ್ಕೆ ವಿದಾಯ ಹೇಳಿದರು.

೧೯೨೫ ರಲ್ಲಿ ನರಸಿಂಹ ಅಯ್ಯರ್ ರವರು ಶ್ರೀ ರಮಣ ಮಹರ್ಷಿಗಳ ಜೊತೆಗೂಡಿದರು. ರಮಣ ಮಹರ್ಷಿಗಳ ಆದೇಶದಂತೆ ಒಂದು ಗುಹೆಯಲ್ಲಿ ೩ ವರ್ಷಗಳ ಕಾಲ ತಪಸ್ಸನ್ನಾಚರಿಸಿದರು. ಇದರಿಂದ ಅವರ ಅಂತಚಕ್ಷುಗಳು ತೆರೆದವು.  ರಮಣ ಮಹರ್ಷಿಗಳ ಭಕ್ತರೆಲ್ಲರಿಂದ ಮಾಹಿತಿ ಸಂಗ್ರಹಿಸಿ ರಮಣ ಮಹರ್ಷಿಗಳ ಜೀವನ ಚರಿತ್ರೆಯನ್ನು ಬರೆದರು.

೧೯೨೮ ರಲ್ಲಿ ರಮಣ ಮಹರ್ಷಿಗಳ ಜೀವನ ಚರಿತ್ರೆಯನ್ನು ಹಿಡಿದುಕೊಂಡು ಅವರ ಬಳಿಗೆ ಹೋದರು. ಆದರೆ ಅವರ ಮನಸ್ಸಿಗೆ ಶಾಂತಿ, ಸಮಾಧಾನ ದೊರೆಯಲಿಲ್ಲ. ರಮಣ ಮಹರ್ಷಿಗಳು "ನಾನು ನಿನ್ನ ಗುರುವಲ್ಲ. ನೀನು ಪಶ್ಚಿಮ ದಿಕ್ಕಿನಲ್ಲಿ ಹೊರಟು ನಿನ್ನ ಗುರುವನ್ನು ಹುಡುಕಿಕೋ" ಎಂದು ಹೇಳಿದರು.

ಅಲ್ಲಿಂದ ಹೊರಟು ನರಸಿಂಹ ಅಯ್ಯರ್ ರವರು ಹುಬ್ಬಳ್ಳಿಗೆ ಬಂದು ಅಲ್ಲಿ ಸಿದ್ದಾರೂಢ ಮಠದಲ್ಲಿ ಸ್ವಾಮೀಜಿಯವರಿಂದ ಸಂಸ್ಕೃತವನ್ನು ೬ ತಿಂಗಳ ಕಾಲ ಕಲಿತರು. ಅಲ್ಲಿಂದ ಪಂಡರಾಪುರಕ್ಕೆ ತೆರಳಿ ಅಲ್ಲಿ ೧೮ ತಿಂಗಳ ಕಾಲ ಇದ್ದು ಭಜನೆಯನ್ನು ಕಲಿತರು. ಹುಬ್ಬಳ್ಳಿಯಿಂದ ಖೆಡೆಗಾವ್ ಗೆ ತೆರಳಿ ಅಲ್ಲಿ ನಾರಾಯಣ ಮಹಾರಾಜ್ ರನ್ನು ಭೇಟಿ ಮಾಡಿದರು. ಅವರು ನರಸಿಂಹ ಅಯ್ಯರ್ ರವರಿಗೆ ಮೆಹರ್ ಬಾಬಾ ಬಳಿ ಹೋಗಲು ಹೇಳಿದರು. ಆದರೆ, ಮೆಹರ್ ಬಾಬಾರವರು ಜೀವನ ಪೂರ್ತಿ ಮೌನವ್ರತ ಕೈಗೊಂಡಿದ್ದರು. ಮೆಹರ್ ಬಾಬಾರವರು ಇವರನ್ನು ತಮ್ಮ ಗುರುಗಳಾದ ಸಾಕೂರಿ ಆಶ್ರಮದ ಉಪಾಸಿನಿ ಬಾಬಾರವರ ಬಳಿಗೆ ಕಳುಹಿಸಿದರು. ಇಷ್ಟೆಲ್ಲಾ ಆಗುವ ಹೊತ್ತಿಗೆ ೧೯೩೩ ವರ್ಷಕ್ಕೆ ಕಾಲಿಟ್ಟಿತ್ತು. ಆದರು ನರಸಿಂಹ ಅಯ್ಯರ್ ರವರಿಗೆ ಮನಶ್ಯಾಂತಿಯಾಗಲಿ ಅಥವಾ ಅವರು ಹುಡುಕುತ್ತಿದ್ದ ಗುರುವಾಗಲಿ ದೊರೆಯಲಿಲ್ಲ.

ನರಸಿಂಹ ಅಯ್ಯರ್ ರವರು ಉಪಾಸಿನಿ ಮಹಾರಾಜ್ ರವರನ್ನು ಭೇಟಿ ಮಾಡಿದುದು ಅವರ ಜೀವನದಲ್ಲಿ ಮಹತ್ತರ ಘಟ್ಟವಾಗಿ ಪರಿಣಮಿಸಿತು. ೩೦ ತಿಂಗಳ ಕಾಲ ಉಪಾಸಿನಿಯವರ ಬಳಿ ಇದ್ದರು. ಆದರೂ ಮನಶ್ಯಾಂತಿಯಾಗಲಿ ಅಥವಾ ಅವರು ಹುಡುಕುತ್ತಿದ್ದ ಗುರುವಾಗಲಿ ದೊರೆಯಲಿಲ್ಲ. ಆಗ ಒಂದು ಧೃಡ ನಿರ್ಧಾರ ಕೈಗೊಂಡು ೨೯ನೆ ಆಗಸ್ಟ್ ೧೯೩೬ ರ "ಶ್ರಾವಣ ಪೂರ್ಣಿಮೆ" ಯಂದು ಉಪಾಸಿನಿ ಮಹಾರಾಜ್ ರ ಆಶ್ರಮವನ್ನು ಬಿಟ್ಟು ಮದ್ರಾಸ್ ಗೆ ತೆರಳಿ ತಮ್ಮ ಮಗನ ಬಳಿ ಇರಲು ನಿರ್ಧರಿಸಿದರು. ಹಾಗೆ ನಿರ್ಧರಿಸಿ ಸಾಕೂರಿ ಆಶ್ರಮ ಬಿಟ್ಟು ತೆರಳುತ್ತಿರುವಾಗ ಒಬ್ಬ ವೃದ್ದರು ಇವರನ್ನು ಶಿರಡಿಗೆ ತೆರಳಿ ಸಾಯಿಬಾಬಾರವರ ಸಮಾಧಿಯನ್ನು ಸಂದರ್ಶಿಸಲು ಹೇಳಿದರು. ಅವರ ಸಲಹೆಯಂತೆ ನರಸಿಂಹ ಅಯ್ಯರ್ ರವರು ಸಾಯಿಬಾಬಾ ಸಮಾಧಿಯ ಬಳಿ ಸುಮಾರು ೧೧.೦೦ ಘಂಟೆಗೆ ತೆರಳಿದರು. ಅಲ್ಲಿ ಸಾಯಿಬಾಬಾರವರು ಸಮಾಧಿಯಿಂದಲೇ ನರಸಿಂಹ ಅಯ್ಯರ್ ರವರ ಬಳಿ ಮಾತನಾಡಿದರೆಂದು ತಿಳಿದುಬಂದಿದೆ. ಸಾಯಿಬಾಬಾರವರು ನರಸಿಂಹ ಸ್ವಾಮೀಜಿಯವರಲ್ಲಿ ಅಂತರಂಗದಲ್ಲಿ ತಮ್ಮ ದಿವ್ಯವಾಣಿಯಿಂದ ಬೆಳಕನ್ನು ಚೆಲ್ಲಿ ಒಂದು ಹೊಸ ಮಾರ್ಪಾಡನ್ನೇ ಮಾಡಿದರು. ಕೋಣೆಗೆ ಶಿರಡಿಯಲ್ಲಿ ಸಾಯಿಬಾಬಾರವರಲ್ಲಿ ನರಸಿಂಹ ಸ್ವಾಮೀಜಿಯವರು ತಮ್ಮ ಸದ್ಗುರುಗಳನ್ನು ಕಂಡುಕೊಂಡರು. ೧೯೩೯ ರಲ್ಲಿ ಶಿರಡಿಯಿಂದ ಮದ್ರಾಸ್ ಗೆ ವಾಪಸ್ ಬಂದು ಆಲ್ ಇಂಡಿಯಾ ಸಾಯಿ ಸಮಾಜ್ (ಅಖಿಲ ಭಾರತ ಸಾಯಿ ಸಮಾಜ) ಎಂಬ ಸಂಸ್ಥೆಯನ್ನು ಮದ್ರಾಸ್ ನ ಮೈಲಾಪುರ್ ನಲ್ಲಿ ಸ್ಥಾಪಿಸಿದರು. ಅಲ್ಲಿಂದ ಮುಂದೆ ಹಗಲು ರಾತ್ರಿ ಸಾಯಿ ಪ್ರಚಾರವನ್ನು ದೇಶದ ಉದ್ದಗಲಕ್ಕೂ ಕೈಗೊಂಡು ಸಾಯಿಬಾಬಾರವರ ಹೆಸರನ್ನು ಇಡೀ ಭಾರತದ ತುಂಬಾ ಹರಡಿದರು. ಈ ದಿನ ನಮಗೆ ಸಾಯಿಬಾಬಾರವರ ಹೆಸರೇನಾದರೂ ತಿಳಿದಿದ್ದರೆ ಅದು ನರಸಿಂಹ ಸ್ವಾಮೀಜಿಯವರ ಪರಿಶ್ರಮದಿಂದ ಎಂದೇ ಹೇಳಬೇಕಾಗುತ್ತದೆ. ಹೀಗೆ ೨೦ ವರ್ಷಗಳ ಕಾಲ ಸಾಯಿ ಪ್ರಚಾರವನ್ನು ನರಸಿಂಹ ಸ್ವಾಮೀಜಿಯವರು ಮಾಡಿದ್ದೇ ಅಲ್ಲದೆ ಸಾಯಿಬಾಬಾರವರ ಬಗ್ಗೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ, ಸಾಯಿ ಸಹಸ್ರನಾಮ ವನ್ನು ಕೂಡ ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಶ್ರೀ ನರಸಿಂಹ ಸ್ವಾಮೀಜಿಯವರು ೧೯ನೇ ಅಕ್ಟೋಬರ್ ೧೯೫೬ ರಂದು ಮಹಾಸಮಾಧಿ ಹೊಂದಿದರು. ಆದರೆ ಈಗಲೂ ತಮ್ಮ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಶ್ರೀ ನರಸಿಂಹ ಸ್ವಾಮೀಜಿಯವರ ಪುಸ್ತಕಗಳನ್ನು ಸಾಯಿ ಭಕ್ತರು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಕೆಳಕಂಡ ಜೋಡಣೆಯನ್ನು ಕ್ಲಿಕ್ ಮಾಡಿ:

http://www.saileelas.org/books.htm

No comments:

Post a Comment